Saturday, 7 March 2020

ಗೆದ್ದು ಬಂದವಳು





          ಸದಾಶಿವ ರಾಯರು ಊರಿಗೇ ಹಿರಿಯ ವಿದ್ವಾಂಸರು.ಎಳೆಯ ಪ್ರಾಯದಲ್ಲಿ ದೂರದ ಕುಂಭಕೋಣಂಗೆ ತೆರಳಿ ಶಾಸ್ತ್ರಾಭ್ಯಾಸ ಮಾಡಿದವರು.ಅವರದು ಪ್ರಚಂಡ ಪಾಂಡಿತ್ಯ.. ಹಿರಿಯರಿಂದ ಬಂದ ಜಮೀನಿನ ಉಸ್ತುವಾರಿ ನೋಡಿಕೊಂಡು ಜೊತೆ ಜೊತೆಗೆ ಆಸಕ್ತರಿಗೆ ತಮ್ಮ ಪಾಂಡಿತ್ಯವನ್ನು ಪಸರಿಸುತ್ತಿದ್ದರು.
ಇವರದು ಕೂಡು ಕುಟುಂಬ.ಐದು ಜನ ಗಂಡುಮಕ್ಕಳು. ಅವರ ಸಂಸಾರದಲ್ಲಿ ಎಲ್ಲರೂ ಖುಷಿಯಿಂದ ಹಂಚಿ ಉಣ್ಣುತ್ತಿದ್ದರು .. ಮೊಮ್ಮಕ್ಕಳಲ್ಲಿ ಇಬ್ಬರು ಮಾತ್ರ ಗಂಡುಮಕ್ಕಳು.. ಉಳಿದವರೆಲ್ಲ ಹೆಣ್ಣುಮಕ್ಕಳು.. ಸದಾಶಿವ ರಾಯರ ಹಿರಿಯ ಮಗ ಈಶ್ವರಣ್ಣ..ಈಶ್ವರಣ್ಣನ ಮಗಳು ದೇವಿ ಮನೆಯ ಹಿರೀ ಮೊಮ್ಮಗಳು..





           ಸದಾಶಿವ ರಾಯರಿಗೆ ಹೆಣ್ಮಕ್ಕಳನ್ನು ಕಂಡರಾಗದು..ದೇವಿ ಮತ್ತೆ ಆಕೆಯ ತಂಗಿಯರು ಮನೆಯ ಚಾವಡಿಯಲ್ಲಿ ತಲೆಬಾಚುವುದು ಕಂಡರಂತೂ..."ಹೀಗೆಲ್ಲ ಚಾವಡಿಯಲ್ಲಿ ತಲೆ ಬಾಚೋದು ಕಂಡ್ರೆ ಯಾವ ಗಂಡ್ಸು ನಿಮ್ಮನ್ನು ಮದುವೆಯಾದಾನು ?"ಎಂದು ಗದರುತ್ತಾ ತಮಗೆ ಆಸರೆಯಾದ ಊರುಗೋಲಲ್ಲೇ ಹೊಡೆಯಲು ಬರುತ್ತಿದ್ದರು.





           ಒಂದಿನ ಮನೆ ಕೆಲಸದಾಕೆ ರಜೆಹಾಕಿದ್ದಾಗ, ತಾಯಂದಿರಿಗೆ ಸಹಾಯ ಮಾಡೋಕೆ ದೇವಿ ಮತ್ತೆ ತಂಗೀರು ಉದಾಸಿನ ತೋರಿಸಿದರು...
"ನೀವು ಹೆಣ್ಮಕ್ಕಳು ಕಸ ಮುಸುರೆ ಕೆಲ್ಸಕ್ಕೆ ಆಗದಿದ್ದರೆ ಮತ್ಯಾಕಿರೋದು..?..ಯಾವನು ಮದುವೆಯಾಗ್ತಾನೆ ನಿಮ್ಮನ್ನ..?"ಎಂದು ಮನೆಯೇ ಅಲ್ಲಾಡುವಂತೆ ಹರಿಹಾಯ್ದಿದ್ದರು ಸದಾಶಿವ ರಾಯರು..





          ಅದೇ ರಾಯರು ಇಬ್ಬರು ಗಂಡು ಮೊಮ್ಮಕ್ಕಳು ಉಂಡಾಡಿಗಳಂತೆ ತಿರುಗಿದರೂ ತುಟಿ ಪಿಟಿಕ್ ಅಂದವರಲ್ಲ. ದೇವಿ ಮತ್ತೆ ತಂಗೀರು ಶಾಲಾ ಸ್ಪರ್ಧೆಗಳಲ್ಲಿ ಡಜನ್ಗಟ್ಟಲೆ ಬಹುಮಾನ ಪಡೆದರೂ..ದೇವಿಯ ತಮ್ಮಂದಿರಿಗೆ ಸಿಗುತ್ತಿದ್ದುದು ಒಂದೋ ಎರಡೋ ಅಷ್ಟೇ..





           ಏನೇ ಆದ್ರೂ ರಾಯರಿಗೆ ದಿನಕ್ಕೊಮ್ಮೆ ಆದರೂ ಹೆಣ್ಮಕ್ಕಳನ್ನು ಗದರಿ.. ನಿಮ್ಮನ್ನು ಯಾರು ಮದುವೆಯಾಗ್ತಾರೆ ಎಂದು ಹಂಗಿಸದಿದ್ದರೆ ನಿದ್ರೆ ಕಣ್ಣಿಗೆ ಹತ್ತದು.. ದೇವಿಗೆ 'ಅಜ್ಜ ಯಾಕೆ ನಮಗೆ ಹೀಗನ್ನೋದು..? ತಮ್ಮಂದಿರಿಗೆ ಯಾಕೆ ಗದರೋದಿಲ್ಲ..?'ಅನ್ನುವ ಪ್ರಶ್ನೆ ಕಾಡಿತ್ತು.. ಅಮ್ಮನನ್ನು ಕೇಳಿದರೆ.."ಸುಮ್ಮನಿರು ಅಜ್ಜ ಕೇಳಿಸಿಕೊಂಡಾರು " ಎಂಬ ಉತ್ತರವಷ್ಟೇ ಸಿಗುತ್ತಿತ್ತು..





         ಈಶ್ವರಣ್ಣನಿಗೆ ಹೆಣ್ಮಕ್ಕಳನ್ನು ಸಂಗೀತ ಭರತನಾಟ್ಯ ತರಗತಿಗೆ ಕಳಿಸಬೇಕೆಂಬ ಆಸೆಯಿತ್ತು..ಎಲ್ಲ ವಿಚಾರಿಸಿ ಬಂದಿದ್ದರು..ತಂದೆಗೂ ಒಂದು ವಿಷಯ ತಿಳಿಸೋಣ ಎಂದು ಮೆಲ್ಲಗೆ ಪ್ರಸ್ತಾಪಿಸಿದರು... ಸದಾಶಿವ ರಾಯರು ಮೊದಲೇ ಪಿತ್ಥದ ಮನುಷ್ಯ..ವಿಷಯ ತಿಳಿಯುತ್ತಲೇ ನಖಶಿಖಾಂತ ಉರಿದು ಅಬ್ಬರಿಸಿದ್ದರು ..ಈಶ್ವರಣ್ಣ ಸಮಾಧಾನದಿಂದ ತಿಳಿಹೇಳಿದರೂ ಒಪ್ಪದೇ ಹೇಳಿದ್ದು ಪುನಃ ಅದೇ ಮಾತು.." ಸಂಗೀತ, ಭರತನಾಟ್ಯ ಎಂದು ಊರೆಲ್ಲ ಸುತ್ತಿದ ಹೆಣ್ಮಕ್ಕಳನ್ನು ಯಾರು ಮದುವೆಯಾಗುತ್ತಾರೆ.?.."




         ಇದೆಲ್ಲ ಚಿಕ್ಕಂದಿನಿಂದಲೇ ಕೇಳಿ ಬೆಳೆಯುತ್ತಿದ್ದ ದೇವಿಯ ಮನಸ್ಸಲ್ಲಿ ಹಲವಾರು ಪ್ರಶ್ನೆಗಳು..
ಹೆಣ್ಮಕ್ಕಳು ಮದುವೆಯಾಗೋಕೆ,ಮುಸುರೆ ತಿಕ್ಕೋಕೆ,ಮನೆನಿಭಾಯಿಸೋದಕ್ಕೆ ಮಾತ್ರ ಸೀಮಿತರೇ... ? ತಾನು ಏನಾದರೂ ಸಾಧಿಸಿ ಈ ಅಜ್ಜನಿಗೆ ತೋರಿಸಬೇಕು ಎಂಬ ಕನಸು ಹುಟ್ಟಿಕೊಂಡಿತು..ವೈದ್ಯೆ ಆಗಬೇಕೆಂಬ ಕನಸು ಕಂಡಳು.





           ಆದರೆ ಆ ಸಮಯದಲ್ಲಿ ಸದಾಶಿವ ರಾಯರು ಅಂದುಕೊಂಡಂತೆ ಸಮಾಜ ಇರಲಿಲ್ಲ.. ಹೆಣ್ಣುಮಕ್ಕಳ ಬಗ್ಗೆ ಸಮಾಜದಲ್ಲಿ ಸಾಕಷ್ಟು ಗೌರವ ಮೂಡಲು ಆರಂಭವಾಗಿತ್ತು.. ಮದುವೆಯ ವಯಸ್ಸಿನ ಹೆಣ್ಣುಮಕ್ಕಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್ ಎನ್ನುವಂತಹ ಪರಿಸ್ಥಿತಿ ಶುರುವಾಗಿತ್ತು.. ಪಿಯುಸಿ ಪೂರೈಸಿದ ದೇವಿ ಅಮ್ಮನ ಪಡಿಯಚ್ಚಿನಂತೆ ಹಾಲುಗೆನ್ನೆಯ ನೀಳ ಜಡೆಯ ಸಂಪಿಗೆ ನಾಸಿಕದ ಚೆಲುವೆಯಾಗಿದ್ದಳು .ಅಮ್ಮನ ಜತೆ ಎಲ್ಲೇ ಕಾರ್ಯಕ್ರಮಕ್ಕೆ ಹೋದರೂ ಇವಳು ನಿನ್ನ ಮಗಳೇನೆ? ಮದುವೆ ಅಂದಾಜು ಇದೆಯಾ?ಎಂದೇ ಕೇಳುತ್ತಿದ್ದರು..ದೇವಿಗಂತೂ ರೋಸಿಹೋಗಿತ್ತು..ಅಜ್ಜನಾದರೋ ಮಾತುಮಾತಿಗೆ ಯಾರು ಮದುವೆಯಾಗ್ತಾರೆ ಅನ್ನೋದು..ಕಂಡವರೆಲ್ಲ ಮಗಳನ್ನು ಕೊಡ್ತೀರಾ ಅನ್ನೋದು.."ಏನು ಪ್ರಪಂಚವಪ್ಪ..?"ಅಂದುಕೊಳ್ಳುತ್ತಿದ್ದಳು..






       ದೇವಿ ವೈದ್ಯಕೀಯ ಶಿಕ್ಷಣದ ಕನಸು ಈಡೇರುವ ಲಕ್ಷಣಗಳು ಕಾಣುತ್ತಿತ್ತು.. ಒಳ್ಳೆಯ ಫಲಿತಾಂಶ ದೊರೆಯಿತು.. ಆದರೆ ಅಜ್ಜ ಮಾತ್ರ ತನ್ನ ಧೋರಣೆ ಬದಲಿಸಲಿಲ್ಲ...
"ಗಂಡುಮಕ್ಕಳಿಗೆ ಮಾತ್ರ ಉನ್ನತ ವ್ಯಾಸಂಗ ಸಾಕು.. ದೇವಿಗೆ ಮದುವೆ ಮಾಡಿ ಬಿಡೋಣ..ಹೇಗೂ ಸಂಬಂಧಗಳು ಬರುವಂತೆ ಕಾಣುತಿದೆ..ಬೇಗ ಮದುವೆ ಮುಗಿಸಿದರೆ ಮತ್ತೆ ತಂಗಿಯರ ವಿವಾಹಕ್ಕೂ ಅನುಕೂಲ..ವಿದ್ಯಾಭ್ಯಾಸಕ್ಕೆ ಮಾಡುವ ಖರ್ಚಿನಲ್ಲಿ ಇಬ್ಬರು ಮೊಮ್ಮಕ್ಕಳ ಮದುವೆಮಾಡಬಹುದು... ಜವಾಬ್ದಾರಿಯೂ ಕಡಿಮೆಯಾಗುತ್ತದೆ.. ದೂರದೂರಿಗೆ ವ್ಯಾಸಂಗಕ್ಕೆ ಕಳಿಸುವ ಬದಲು ವಿವಾಹಮಾಡಿ ಗಂಡನ ಜೊತೆ ಕಳಿಸೋಣ.."
ಎಂದು ಖಡಕ್ಕಾಗಿ ನುಡಿದರು..






       ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತೆ ಆಯ್ತು ದೇವಿಗೆ..ತನ್ನ ಕನಸನ್ನೆಲ್ಲ ನುಚ್ಚುನೂರು ಮಾಡಹೊರಟ ಅಜ್ಜನನ್ನು ಶಪಿಸುವುದು ಬಿಟ್ಟು ಬೇರೆ ದಾರಿಯಿರಲಿಲ್ಲ ಆಕೆಗೆ..



       ತನ್ನ ಕೋಣೆಯೊಳಗೆ ಅಳುತ್ತ ಕುಳಿತಿದ್ದ ದೇವಿಯನ್ನು ಅಪ್ಪ ಬಂದು ಸಂತೈಸಿದ.. "ಅಳಬೇಡ ಮಗಳೇ..ಅಜ್ಜನ ವಿರುದ್ಧ ನಿಂತಾದರೂ ನಿನ್ನ ಕನಸನ್ನು ಈಡೇರಿಸುತ್ತೇನೆ .. ನನಗೆ ಮಗಳನ್ನು ಸಮಾಜದಲ್ಲಿ ಒಳ್ಳೆಯ ಸ್ಥಾನದಲ್ಲಿ ನೋಡುವ ಆಸೆಯಿದೆ.. ಸ್ವಾವಲಂಬಿಯಾಗಿ ತಲೆಯೆತ್ತಿ ನನ್ನ ದೇವಿ ನಿಲ್ಲಬೇಕು.. ಬದುಕನ್ನು ಗೆಲ್ಲಬೇಕು..." ಎನ್ನುತ್ತಾ ತಲೆ ನೇವರಿಸಿದರು...





        ದೇವಿಗೆ ಧೈರ್ಯ 50-50 ಬಂತಷ್ಟೇ.. ಏಕೆಂದರೆ ಅಪ್ಪ ಯಾವತ್ತೂ ಅಜ್ಜನಿಗೆ ಎದುರಾಡಿದವರಲ್ಲ..ಈಶ್ವರಣ್ಣ ತನ್ನ ತಮ್ಮಂದಿರನ್ನೆಲ್ಲ ಒಟ್ಟುಗೂಡಿಸಿ ಮಾತನಾಡಿದ.. ಈಗ ನಾವೆಲ್ಲ ಒಂದಾಗಿ ಮಗಳ ಉನ್ನತ ವ್ಯಾಸಂಗವನ್ನು ಸಮರ್ಥಿಸಿಕೊಳ್ಳದಿದ್ದರೆ ಮುಂದೊಂದು ದಿನ ಮನೆಯ ಎಲ್ಲಾ ಹೆಣ್ಮಕ್ಕಳಿಗೂ ಅದೇ ಗತಿ ಬರಬಹುದೆಂದು ಅರುಹಿದ... ಈಶ್ವರಣ್ಣನಿಗೆ ಬೆಂಬಲಕ್ಕೆ ಮನೆಯವರೆಲ್ಲ ಒಗ್ಗಟ್ಟಾಗಿ ನಿಂದರು..




         ಸದಾಶಿವ ರಾಯರಿಗೆ ವಿಷಯ ಮನದಟ್ಟು ಮಾಡಲು ಪ್ರಯತ್ನಿಸಿದರು.. ಈಗಿನ ಕಾಲದಲ್ಲಿ ಹೆಣ್ಮಕ್ಕಳಿಗೆ ಶಿಕ್ಷಣದ ಅವಶ್ಯಕತೆ ಇದೆ ಎಂದು ವಿವರಿಸಿದರು..ತನ್ನ ಎಂದಿನ ಚಾಳಿ ಬಿಡದ ರಾಯರು ಬೊಬ್ಬಿರಿಯಲು ಶುರುವಿಟ್ಟರು.. ಎಲ್ಲರಿಗೂ ಬೈಗುಳದ ಸುರಿಮಳೆ.. ರಾಯರು ಏನೇ ಅಂದರೂ ಈ ಸಲ ಮಾತ್ರ ಯಾರೂ ಬಾಯ್ಮುಚ್ಚಲೇ ಇಲ್ಲ..ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.. ಎಲ್ಲರೂ ತನ್ನ ವಿರುದ್ಧ ತಿರುಗಿಬಿದ್ದದ್ದನ್ನು ಕಂಡ ರಾಯರು ಒಳಗೊಳಗೇ ತಬ್ಬಿಬ್ಬಾದರೂ ಹೊರಗೆ ತೋರಿಸದೆ ಅಬ್ಬರಿಸಿದರು..





           ತಂದೆಯ ವಿರೋಧದ ನಡುವೆಯೇ..
ಈಶ್ವರಣ್ಣ ತನ್ನ ಮಗಳ ವೈದ್ಯಕೀಯ ಶಿಕ್ಷಣಕ್ಕೆ ಬೇಕಾದ ಅನುಕೂಲಗಳನ್ನು ಕಲ್ಪಿಸಿ ಕಾಲೇಜಿಗೆ ಸೇರಿಸಿದರು.ಹೊರಡುವ ಸಮಯ..ಶುಭ ಕಾರ್ಯಗಳಿಗೆ ತೆರಳುವಾಗ
ಹಿರಿಯರಿಗೆ ನಮಸ್ಕರಿಸುವುದು ಕುಟುಂಬದ ಪದ್ಧತಿ.ಅಂತೆಯೇ ಅಜ್ಜನಿಗೆ ನಮಸ್ಕರಿಸಲು ಅಜ್ಜ ಕುಳಿತಿದ್ದ ಈಸಿಚ್ಯಾರ್ ಬಳಿ ತೆರಳಿದಳು ದೇವಿ.. "ಅಜ್ಜ.. ನಾನು ವೈದ್ಯಕೀಯ ವ್ಯಾಸಂಗಕ್ಕೆ ತೆರಳುತ್ತಿದ್ದೇನೆ.ಮನೆಗೆ ಒಳ್ಳೆಯ ಹೆಸರು ತರುತ್ತೇನೆ."ಎಂದು ಹೇಳಿ ನಮಸ್ಕರಿಸುತ್ತಿದ್ದಂತೆ ಕುಪಿತಗೊಂಡ ಅಜ್ಜ ಕುಳಿತಲ್ಲಿಂದ ಎದ್ದು ತಮ್ಮ ಊರುಗೋಲನ್ನು ಜೋರಾಗಿ ಟಕಟಕ ಶಬ್ದ ಮಾಡುತ್ತಾ ಹಿಂದಿರುಗಿಯೂ ನೋಡದೆ ನಡೆದೇ ಬಿಟ್ಟರು.. ದೇವಿಗೆ ದುಃಖ ಉಮ್ಮಳಿಸಿ ಬಂತು.ಮಂಜಾದ ಕಣ್ಣಿಗೆ ಅಜ್ಜನ ಕೋಲು ಮಾತ್ರ ಕಾಣುತ್ತಿತ್ತು..ಕರ್ಣಗಳಿಗೆ ಹೊಕ್ಕ ಟಕಟಕ ಶಬ್ದ ಹೃದಯವನ್ನು ಘಾಸಿಗೊಳಿಸಿತು.





"ಓ ಅಜ್ಜಾ...ನೀನಿಷ್ಟು ನಿಷ್ಕರುಣಿಯೇ?
ಮನಸಾರೆ ಹರಸೆಯಾ ಮನೆ ತರುಣಿಯ..?
.
ತಮ್ಮಂದಿರ ಪುಂಡಾಟಗಳಿಗೆಲ್ಲ ಪುರಸ್ಕಾರ
ತಂಗಿಯರಿಗೂ ನನಗೂ ಕೊನೆಗೂ ತಿರಸ್ಕಾರ
.
ಏಕೀ ಗಂಡು ಹೆಣ್ಣೆಂಬ ತಾರತಮ್ಯ?
ಸಾಧಿಸುವ ಛಲವಿದೆ ನಮ್ಮಲಿ ಅದಮ್ಯ.."

ಎಂದು ಮನದಲ್ಲೇ ಮರುಗಿದಳು ದೇವಿ...ದುಃಖಿಸುತ್ತಿರುವ ಮಗಳನ್ನು ತಾಯಿ ಸಮಾಧಾನಿಸಿದಳು."ನೋಡು ಮಗಳೇ..ಅಜ್ಜನ ಮಾತಿಗೆ ವಿರುದ್ಧವಾಗಿ ನಿನ್ನನ್ನು ವ್ಯಾಸಂಗಕ್ಕೆ ಕಳುಹಿಸುತ್ತಿದ್ದೇವೆ.ಶ್ರದ್ಧೆಯಿಂದ ಅಭ್ಯಾಸ ಮಾಡು.. ಮನೆಗೆ ಕೀರ್ತಿ ತಾ.. ಲವ್ವು_ಗಿವ್ವು ,ರ್ಯಾಗಿಂಗ್ ಅಂತೇನಾದ್ರೂ ಕಿತಾಪತಿ ಮಾಡ್ಬೇಡ ಜೋಕೆ.. ಹಾಗೇನಾದ್ರೂ ಮಾಡಿದ್ರೆ ಮತ್ತೆ ನಿನ್ನ ತಂಗಿಯರಿಗೆ ಉನ್ನತ ಶಿಕ್ಷಣ ಮರೀಚಿಕೆಯಾದೀತು "ಎಂದು ಮಗಳಿಗೆ ಬುದ್ಧಿ ಹೇಳಿ ತಾನೂ ಹನಿಗಣ್ಣಾಗಿ ಸೆರಗಿನ ತುದಿಯಿಂದ ಕಣ್ಣೊರೆಸಿಕೊಂಡಳು.ಚಿಕ್ಕಪ್ಪಂದಿರು ಚಿಕ್ಕಮ್ಮಂದಿರು ತಮ್ಮ ತಂಗಿಯರು ಪ್ರೀತಿಯಿಂದ ಕಳುಹಿಸಿ ಕೊಟ್ಟರು.





       ಈಶ್ವರಣ್ಣ ಮಗಳನ್ನು ಕಾಲೇಜಿಗೆ ಕರೆದೊಯ್ದು ಹಾಸ್ಟೆಲ್ ವ್ಯವಸ್ಥೆ ಎಲ್ಲ ಮಾಡಿಕೊಟ್ಟರು.ಹಿಂದಿರುಗುವಾಗ ತನ್ನದೂ ಒಂದಷ್ಟು ಬುದ್ಧಿಮಾತು ಮಗಳ ತಲೆಯೊಳಗೆ ತುರುಕಿಸಿದರು.. ದೇವಿಗೆ ತನ್ನಪ್ಪನ ಬಗ್ಗೆ ಹೆಮ್ಮೆಯೆನಿಸಿತು .. ಹೆಣ್ಣುಮಕ್ಕಳ ಓದಿಗೆ ಬೆಂಬಲಕೊಡುವ ಈ ಅಪ್ಪನೇ ನನ್ನ ಏಳೇಳು ಜನ್ಮಕೂ ಅಪ್ಪನಾಗಿ ದೊರೆಯಬೇಕು ಎಂದುಕೊಂಡವಳಿಗೆ ದುಃಖ ಉಮ್ಮಳಿಸಿ ಬಂತು.



          ದೇವಿ ಶ್ರದ್ಧೆಯಿಂದ ಅಭ್ಯಾಸ ಮಾಡುತ್ತಿದ್ದಳು.ಸಹಪಾಠಿಗಳಿಗೆ ಉತ್ತಮ ಗೆಳತಿಯೂ, ಓದಿಗೆ ಸ್ಫೂರ್ತಿಯೂ ಆದಳು.ಪ್ರತೀ ಪರೀಕ್ಷೆಯಲ್ಲೂ ಮೇಲುಗೈ ಸಾಧಿಸುತ್ತಾ ಬಂದಳು.ಆಕೆಯ ಸಾಧನೆ ಅಪ್ಪ ಅಮ್ಮ ಇಬ್ಬರಿಗೂ ಹೆಮ್ಮೆಯೆನಿಸಿತ್ತು.ನೋಡುನೋಡುತ್ತಿದ್ದಂತೆ ನಾಲ್ಕು ವರ್ಷಗಳು ಕಳೆದವು..ಅಂತಿಮ ಪರೀಕ್ಷೆ ಸಮೀಪಿಸುತ್ತಿತ್ತು.. ದೇವಿ ಶ್ರದ್ಧೆಯಿಂದ, ಗೆದ್ದೇ ಗೆಲ್ಲಬೇಕು ಎಂಬ ಅಚಲ ನಿರ್ಧಾರದಿಂದ ಕಠಿಣ ಅಭ್ಯಾಸದಲ್ಲಿ ತೊಡಗಿದಳು.




         ಯಶಸ್ವಿಯಾಗಿ ಪರೀಕ್ಷೆಗಳನ್ನೆಲ್ಲಾ ಪೂರೈಸಿ ನಿರುಮ್ಮಳವಾಗಿ ಕುಳಿತಳು ದೇವಿ.. ಕೆಲವು ದಿನಗಳನ್ನು ಕುಟುಂಬದ ಸದಸ್ಯರ ಜೊತೆ ಕಳೆಯಲು ಮನೆಗೆ ಬಂದಳು.. ಮನೆಯಲ್ಲಿ ಅಜ್ಜನ ಆರೋಗ್ಯ ಗಂಭೀರ ಸ್ಥಿತಿಗೆ ತಲುಪಿತ್ತು.ದೇವಿಯೇ ಮುಂದೆ ನಿಂತು ಅಜ್ಜನಿಗೆ ಔಷಧ ಕೊಡುವುದು, ಇಂಜೆಕ್ಷನ್ ಚುಚ್ಚುವುದು, ಬಿಪಿ, ಶುಗರ್ ಲೆವೆಲ್ ಪರೀಕ್ಷೆ ಮಾಡುತ್ತಿದ್ದಳು.. ಆದರೆ ರಾಯರು ಅದು ಯಾವುದೂ ಅರಿವಿಗೆ ಬಾರದ ಸ್ಥಿತಿಯಲ್ಲಿದ್ದರು.






       ದೇವಿ ಪುನಃ ಕಾಲೇಜಿನತ್ತ ಮುಖಮಾಡಿದಳು ಇಂಟರ್ನಶಿಪ್ ಗಾಗಿ.ಕೆಲವು ದಿನದಲ್ಲಿ ಆಕೆಯ ಫಲಿತಾಂಶ ಪ್ರಕಟವಾಯಿತು.ದೇವಿ ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನಿಯಾಗಿದ್ದಳು .ದೇವಿಗೀಗ ಸ್ವರ್ಗಕ್ಕೆ ಮೂರೇ ಗೇಣು ಅನ್ನುವಷ್ಟು ಸಂತಸ.. ವಿಷಯವಾರು ಏಳು ಚಿನ್ನದ ಪದಕವನ್ನು ಗಳಿಸಿದ್ದಳು.ತನ್ನ ಸಹಪಾಠಿಗಳಿಗೆ ಸ್ನೇಹಿತರಿಗೆ ಸಿಹಿ ಹಂಚಿ ಸಂಭ್ರಮಪಟ್ಟಳು..





        ಈಶ್ವರಣ್ಣ ದಂಪತಿಯಂತೂ ಹೆಮ್ಮೆಯಿಂದ ಬೀಗಿದರು.ತಾವೇ ಖುದ್ದಾಗಿ ಕಾಲೇಜಿಗೆ ತೆರಳಿ ಮಗಳಿಗೆ ಸಿಹಿ ತಿನಿಸಿದರು.ಮನೆಮಂದಿಗೂ ಸಂಭ್ರಮ ಮುಗಿಲುಮುಟ್ಟಿದೆ.ತಂಗಿಯರಂತೂ ಅಕ್ಕ ಫಸ್ಟ್ ರ್ಯಾಂಕ್ ಪಡೆದಿದ್ದಾರೆ ಎಂದು ತಮ್ಮ ಶಾಲೆಗಿಡೀ ಸಾರಿದ್ದರು.





        ಸದಾಶಿವ ರಾಯರು ಕೇವಲ ದ್ರವಾಹಾರ ಮಾತ್ರ ಸೇವಿಸುತ್ತಿದ್ದರು.ಮನೆಯವರೆಲ್ಲರೂ ಕಾಳಜಿಯಿಂದ ಆರೈಕೆ ಮಾಡುತ್ತಿದ್ದರು.ಮಾತನ್ನು ಕೇಳಿಸಿಕೊಳ್ಳುವ, ಅರ್ಥೈಸಿಕೊಂಡು ಹೂಂಗುಟ್ಟುವ ಸಾಮರ್ಥ್ಯ ಮತ್ತೆ  ಮರಳಿತ್ತು.






      ಘಟಿಕೋತ್ಸವದಲ್ಲಿ ತಾನು ಚಿನ್ನದ ಪದಕ ಪಡೆಯುವಾಗ ಅಪ್ಪ ಅಮ್ಮ ಇಬ್ಬರೂ ನನ್ನ ಜೊತೆಯಿರಬೇಕು ಎಂದು ದೇವಿ ಒತ್ತಾಯಿಸಿದ್ದಳು.ತಂದೆಯ ಅನಾರೋಗ್ಯ ಪರಿಸ್ಥಿತಿಯಲ್ಲಿ ಅವರನ್ನು ಬಿಟ್ಟು ಹೇಗೆ ತೆರಳಲಿ ಎಂಬ ಯೋಚನೆ ಈಶ್ವರಣ್ಣನಿಗೆ.ಮಗಳ ಜೊತೆ ಘಟಿಕೋತ್ಸವದಲ್ಲಿ ಪಾಲ್ಗೊಳ್ಳುವ ಆಸೆ ಮತ್ತೊಂದೆಡೆ."ತಂದೆಯ ಜವಾಬ್ದಾರಿ ನಾವು ನಿಭಾಯಿಸುತ್ತೇವೆ.ನೀವು ಹೋಗಿ ಬನ್ನಿ.."ಎಂದ ತಮ್ಮಂದಿರ ಮಾತಿಗೆ ಒಪ್ಪಿ ಈಶ್ವರಣ್ಣ ದಂಪತಿ ಘಟಿಕೋತ್ಸವಕ್ಕೆ ತೆರಳಿದರು.





      ಏಳು ಚಿನ್ನದ 🏅 ಪದಕದೊಂದಿಗೆ ರ್ಯಾಂಕ್ ಗಳಿಸಿದ ಮಗಳ ಸನ್ಮಾನ ಕಂಡು ಅವರ್ಣನೀಯ ಆನಂದ ಅನುಭವಿಸಿದರು..ಪತ್ರಿಕೆಯವರು ..ಪದಕಪಡೆದ ಮಗಳೊಂದಿಗೆ ನಿಂತ ತಂದೆತಾಯಿಯ ಫೊಟೋ ತೆಗೆಸಿಕೊಂಡರು.ಸಂದರ್ಶನ ಮಾಡಿದರು.ಜೀವನದ ರಸಮಯ ಕ್ಷಣವನ್ನು ಅನುಭವಿಸಿದರು.. ನರನಾಡಿಗಳಲ್ಲಿ ಸಂತಸವುಕ್ಕಿ ಹರಿದಾಡಿತು..





         ಮಗಳೊಂದಿಗೆ ಮನೆಗೆ ತೆರಳಲು ಅಣಿಯಾದರು.ಈಶ್ವರಣ್ಣ  ತಮ್ಮ ತಂದೆಗೆ ಮಗಳ ಸಾಧನೆ,ಘಟಿಕೋತ್ಸವದ ಸಂತಸದ ಕ್ಷಣವನ್ನು ಹಂಚಿಕೊಳ್ಳಬೇಕು ಎಂದುಕೊಂಡು ಹೊರಟರು..





        ಬೆಳಗಿನ ಜಾವ ಮೂವರೂ ಊರು ತಲಪಿದರು..ಮನೆ ತಲುಪುತ್ತಿದ್ದಂತೆ ಬೆಳಕು ಗೋಚರಿಸಿತು...ಜನ ಅತ್ತಿಂದಿತ್ತ ಓಡಾಡುತ್ತಿದ್ದುದನ್ನು ಕಂಡು ಏನೋ ಎಡವಟ್ಟಾಗಿದೆ ಎಂದು ಈಶ್ವರಣ್ಣನಿಗೆ ಮನವರಿಕೆಯಾಗಿದೆ.

.
.
ಸದಾಶಿವ ರಾಯರು ಪರಲೋಕ ಯಾತ್ರೆ ಹೊರಟಿದ್ದರು...
.
.
.
ಈಶ್ವರಣ್ಣನಿಗೆ ತಂದೆಯನ್ನು ಕಳೆದುಕೊಂಡ ದುಃಖ ಒಂದು ಕಡೆಯಾದರೆ ಇನ್ನೊಂದು ಕಡೆ ತನ್ನ ಮಗಳ ಸಾಧನೆಯನ್ನು,ಗೆದ್ದ 🏅 ಪದಕಗಳನ್ನು ತೋರಿಸಲಾಗಲಿಲ್ಲವಲ್ಲ ಎಂಬ ಬೇಸರ ಇನ್ನೊಂದು ಕಡೆ.. ತಂದೆಯ ಅಂತಿಮ ವಿಧಿವಿಧಾನಗಳಿಗೆ ತಯಾರಾದರು ಈಶ್ವರಣ್ಣ.






       ದೇವಿ ಅಜ್ಜನಿಗೆ ತಾನು ಸಾಧನೆ ಮಾಡಿ ತೋರಿಸಬೇಕು ಎಂಬ ಬಯಕೆ ಹೊತ್ತಿದ್ದಳು.ಅಜ್ಜನ ಅಗಲುವಿಕೆಯಿಂದ ಕಂಗಾಲಾದಳು.ಬೊಬ್ಬಿರಿಯುತ್ತಿದ್ದ ಅಜ್ಜ ಶಾಂತವಾಗಿ ಮಲಗಿದ್ದರು... ಶಾಶ್ವತವಾಗಿ..
ಅಜ್ಜನ ಬಳಿ ತೆರಳಿ ಬಾಯಿಗೆ ತುಳಸಿ ತೀರ್ಥ ಅರ್ಪಿಸಿ ಸಾಷ್ಟಾಂಗ ನಮಸ್ಕರಿಸಿದಳು .

"ಓ ನನ್ನ ಪ್ರೀತಿಯ ಅಜ್ಜ...
.
ಇಷ್ಟು ಬೇಗ ಹೊರಟೆ ಯಾಕೆ ಹೇಳು ?
.
ಅಜ್ಜನ ಆತ್ಮವೇ ಸ್ವಲ್ಪ ತಾಳು..
.
ಮೊಮ್ಮಗಳ ಸಾಧನೆ ಈಗಲಾದರೂ ಕೇಳು..
.
ನಾ ಪಡೆದೆ ಬಂಗಾರದ ಪದಕ ಏಳು..
.
ರ್ಯಾಂಕ್ ಪಡೆದಳೀ ಮೊಮ್ಮಗಳು..
.
ಜೀವನದುದ್ದಕೂ ಹೆಣ್ಣೆಂಬ ತಿರಸ್ಕಾರದ ನುಡಿಗಳು..
.
ಮುಂದಿನ ಜನ್ಮದಲ್ಲಾದರೂ ಸ್ತ್ರೀ ಯರ ಗೌರವಿಸಿ ಬಾಳು...
.
ಸರಿ.. ಸರಿ..ವೇಳೆಯಾಯಿತು..ನೀನಿನ್ನು ತೆರಳು.."
.
ಎಂದು ಮನದಲ್ಲೇ ಅಂದುಕೊಳ್ಳುತ್ತಾ ಬಿಕ್ಕಳಿಸಿ ಬಿಕ್ಕಳಿಸಿ ಅಳತೊಡಗಿದಳು ದೇವಿ..

ಕೊನೆಗೂ ತನ್ನ ಸಾಧನೆಯನ್ನು ಅಜ್ಜನಿಗೆ ತೋರಿಸಲಾಗಿಲ್ಲ ಎಂಬ ಕೊರಗು ದೇವಿಗೆ ಉಳಿದುಬಿಟ್ಟಿತು.


           ಇದು ಕೇವಲ ಕಾಲ್ಪನಿಕ ಕಥೆಯಾದರೂ ಒಂದೆರಡು ದಶಕಗಳ ಹಿಂದೆ ಬಹಳಷ್ಟು ಹೆಣ್ಣುಮಕ್ಕಳು ಇಂತಹಾ ವೇದನೆಯನ್ನು ಅನುಭವಿಸಿದ್ದಾರೆ.ಆದರೆ ಇಂದು ಪರಿಸ್ಥಿತಿ ಬದಲಾಗಿದೆ.ಬದಲಾಗುತ್ತಿದೆ.ಈಗ ಮೆಡಿಕಲ್ ಇಂಜಿನಿಯರಿಂಗ್ , ಬಿಸ್ನೆಸ್ ಮ್ಯಾನೇಜ್ಮೆಂಟ್,ಪ್ಯಾರಾ ಮೆಡಿಕಲ್ ಕೋರ್ಸ್ ಗಳಿಗೆ ಸೇರುತ್ತಿರುವ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಾಗಿದೆ.ವಿದ್ಯಾವಂತ ಕುಟುಂಬದ ಹೆಣ್ಣುಮಕ್ಕಳಿಗೆ ಮಾತ್ರ ದೊರೆಯುತ್ತಿದ್ದ ಉನ್ನತ ಶಿಕ್ಷಣ ಇಂದು ಬಡ,ಮಧ್ಯಮ ವರ್ಗದ ವರಿಗೂ ದೊರೆಯಲಾರಂಭಿಸಿದೆ.ಆರ್ಥಿಕ ಅಡಚಣೆ ಇರುವವರಿಗೆ ಸಾಲ ಸೌಲಭ್ಯ, ಸ್ಕಾಲರ್ ಶಿಪ್ ಗಳು ಸರಕಾರ ಹಾಗೂ ಸರಕಾರೇತರ ಸಂಸ್ಥೆಗಳಿಂದ ದೊರೆಯುತ್ತಿದೆ.ಆದರೂ ಎಲ್ಲಾ ಹೆಣ್ಣುಮಕ್ಕಳಿಗೂ ಅವರವರ ಪ್ರತಿಭೆಗೆ ತಕ್ಕಂತೆ ಶಿಕ್ಷಣ ದೊರೆಯುತ್ತಿಲ್ಲ.ಮಗನ ವಿದ್ಯಾಭ್ಯಾಸಕ್ಕೆ ಒತ್ತುಕೊಡುವಷ್ಟು ಮಗಳ ಓದಿಗೆ ಮನ್ನಣೆಯಿಲ್ಲ.


     ಹೆಣ್ಣು ವಿದ್ಯೆ ಕಲಿತು ಉದ್ಯೋಗಕ್ಕೆ ತೆರಳದಿದ್ದರೆ .. ಅಷ್ಟು ಖರ್ಚು ಮಾಡಿ ಏನು ಪ್ರಯೋಜನ..? ಎಂದೂ ಲೆಕ್ಕಹಾಕುವವರಿದ್ದಾರೆ.ಸುಶಿಕ್ಷಿತ ಹೆಣ್ಣು ತನ್ನ ಕುಟುಂಬವನ್ನು ಚೆನ್ನಾಗಿ ಮುನ್ನಡೆಸುತ್ತಾ ತನ್ನ ಜ್ಞಾನವನ್ನು ತನ್ನ ಮಕ್ಕಳಿಗೆ ,ಸಮಾಜಕ್ಕೆ ಹಂಚಬಲ್ಲಳು.ಜೀವನದ ಯಾವುದೇ ಹಂತದಲ್ಲೂ ಕಷ್ಟವೆನಿಸಿದಾಗ ಕುಟುಂಬದ ಜವಾಬ್ದಾರಿಗೆ ಹೆಗಲು ಕೊಡಬಲ್ಲೆ ಎಂಬ ಧೈರ್ಯವನ್ನು ಶಿಕ್ಷಣ ಆಕೆಗೆ ನೀಡುತ್ತದೆ.ಆದ್ದರಿಂದ ಮಗಳನ್ನು ಓದಿಸಿದರೆ ದಂಡ...!! ಎಂಬ ಹಗುರ ಯೋಚನೆ ಬೇಡ.


         ಹತ್ತನೇ ತರಗತಿ, ಪಿಯುಸಿ ಫಲಿತಾಂಶ ಬಂದಾಗ ಮುಂಚೂಣಿಯಲ್ಲಿದ್ದ ಬಾಲಕಿಯರು ಮತ್ತೆ ಮೇಲುಗೈ ಸಾಧಿಸಲು ಎಲ್ಲರಿಗೂ ಶಿಕ್ಷಣ ಮುಂದುವರಿಸಲು  ಕುಟುಂಬದ ಪ್ರೋತ್ಸಾಹ ಸಿಗದಿರುವುದೇ ಮೊದಲ ಕಾರಣ.ಹೆಣ್ಣುಮಕ್ಕಳನ್ನು ದೂರದೂರಿನಲ್ಲಿ ವ್ಯಾಸಂಗಕ್ಕೆ ಕಳುಹಿಸಲು ಪೋಷಕರ ಅಂಜಿಕೆ, ಏನಾದರೂ ಎಡವಟ್ಟು ಮಾಡಿಕೊಂಡರೆ ಎಂಬ ಅತಿಯಾದ ಆತಂಕವೂ ಕಾರಣವಾಗಿರಬಹುದು.ಪೋಷಕರ ನಿರ್ಧಾರಕ್ಕೆ ಒಪ್ಪಿ ಒಮ್ಮತವಿಲ್ಲದಿದ್ದರೂ ತಾಳಿಗೆ ಕೊರಳೊಡ್ಡುವವರು ಹಲವರು.'ನಮಗೂ ವಯಸ್ಸಾಯಿತು.ಹೆಣ್ಣುಮಕ್ಕಳ ಜವಾಬ್ದಾರಿ ಬೇಗ ಮುಗಿಸಿದರೆ.. ಮತ್ತೆ ಚಿಂತೆಯಿಲ್ಲ'ಎಂಬ ಮಾತು ಆಗಾಗ ಕೇಳಿಬರುತ್ತಿದೆ.



   ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪೋಷಕರು ಒತ್ತು ನೀಡಬೇಕು.ದೇಶದ ಅರ್ಧದಷ್ಟಿರುವ ಮಹಿಳೆಯರು ನಿರುದ್ಯೋಗಿಗಳು ಎಂದು ಪರಿಗಣಿಸುವಂತಾಗುವುದು ಬೇಡ.ಹೆಣ್ಣುಮಗುವಿಗೆ ಶಿಕ್ಷಣದ ಹಕ್ಕಿದೆ.ಬಾಲಕಿಯರನ್ನು ಓದಿಸೋಣ.ಸುಶಿಕ್ಷಿತ ಸಮಾಜವನ್ನು ಕಟ್ಟೋಣ.ದೇಶವನ್ನು ಪ್ರಗತಿಪಥದತ್ತ ಕೊಂಡೊಯ್ಯೋಣ.


✍️... ಅನಿತಾ ಜಿ.ಕೆ.ಭಟ್.
07-03-2020.

                     Momspresso Kannada ದ #ಸಮಾನತೆಗಾಗಿ ನಾವೆಲ್ಲರೂ#ಸರಣಿಯ 4ನೇ ಬರಹ..

2 comments: