Tuesday, 24 March 2020

ಚೈತ್ರದ ಸಂಭ್ರಮ



     


#ಚೈತ್ರದ_ಸಂಭ್ರಮ


ಹಳೆಯ ಭಾವದ ಕದವ
ಮೆಲ್ಲಮೆಲ್ಲನೆ ಸರಿಸಿ
ಚೈತ್ರ ತರುತಿದೆ ಶುಭವ
ಎಲ್ಲನೋವನು ಮರೆಸಿ....||೧||

ಇಬ್ಬನಿಯ ಚಳಿಯಲಿ
ಮುದುಡಿದ ತರುಲತೆಗೆ
ಹೆಬ್ಬಯಕೆ ತೋರುತಲಿ
ಆದರಿಸಿದೆ ವಸಂತನೊಸಗೆ...||೨||

ಆಗಸವು ಮೋಡಗಳು
ಮರೆಯಾಗಿ ಶುಭ್ರತಾನು
ರವಿಯ ಕೆಣಕುವ ಕಿರಣಕೆ
ಭೂರಮೆಯು ನಾಚಿತಾನು...||೩||

ಬೇಗನೆ ಹಸಿರು ಸೀರೆಯನುಟ್ಟು
ನಲಿದಿಹಳು ಧರಣಿದೇವಿ
ಹೂ ಹಣ್ಣು ತುಂಬಿ ಫಲಬಿಟ್ಟು
ಕೆಡುಕನು ಒಳಿತಲಿ ಸುಡುವರವಿ||೪||


ಮಾಮರದ ತುಂಬೆಲ್ಲ ಹಸಿರು
ಮರೆಮಾಚಿ ಸರಿದಿದೆ
ನಸುಗೆಂಪು ತಂಬೆಲರು
ಸೊಂಪಾಗಿ ಚಿಗುರಿದೆ...||೫||

ಕುಕಿಲವು ಹರುಷದಿ
ಮೈಮರೆತು  ಚಿಗುರ ಮೆದ್ದು
ಶಶಿಯು ತೆರಳಲನುವಾದ
ನಿಶೆಯ ಸರಸದಿ ಗೆದ್ದು...||೬||

ಉದಯರಾಗವ ಕುಕಿಲ
ಮನದಣಿಯೆ ಹಾಡಿದೆ
ಹೊಸರಾಗ ಹೊಸಭಾವ
ಭುವಿಬಾನನು ತಣಿಸಿದೆ...||೭||

ಪಂಚಮದ ಇಂಚರದಿ
ನವಗಾನ ಕೇಳಿಸಲಿ
ಪರಪಂಚದ ಜೀವಸಂಚಿಯಲಿ
ನವಚೈತನ್ಯ ಉಕ್ಕಲಿ...||೮||

ತಾಳಲಯವು ಶ್ರುತಿಸೇರಲಿ
ಹಳೆ ಅನುಭವದ ತಿರುಳಿನಲಿ
ಹೊಸಹೆಜ್ಜೆ ಹೊಸ ಕನಸು
ಹಳೆ ಸಿಹಿಕಹಿಯ ನೆರಳಿನಲಿ...||೯||


✍️... ಅನಿತಾ ಜಿ.ಕೆ.ಭಟ್.
25-03-2020.

ಎಲ್ಲರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳು 💐

ಸೌಹಾರ್ದ ಬಳಗದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕವನ..





2 comments:

  1. ವರ್ಣನೆ ಚೆನ್ನಾಗಿದೆ..
    Congratulations...

    ReplyDelete
  2. ಧನ್ಯವಾದಗಳು 💐🙏

    ReplyDelete