Tuesday, 10 March 2020

ನಾವು ನಮಗಾಗಿ ಬದಲಾಗಬೇಕು...ಬದಲಾಗೋಣವೇ...



            ಯಾವುದೇ ಸಮುದಾಯ ಬಲಿಷ್ಠವಾಗಬೇಕಾದರೆ ಮುಖ್ಯವಾಗಿ ಬೇಕಾಗುವುದು ಒಗ್ಗಟ್ಟು.ಎಲ್ಲರೂ ಒಟ್ಟಾಗಿದ್ದರೆ ಇತರರಿಗೆ ಆ ಭದ್ರ ಕೋಟೆಯನ್ನು ಭೇದಿಸಲು ಕಷ್ಟಸಾಧ್ಯ.ಒಬ್ಬರ ನೋವಿಗೆ ಇನ್ನೊಬ್ಬರು ಮಿಡಿಯುತ್ತಾ , ಸಹಾಯಹಸ್ತ ಚಾಚುವ ಗುಣಹೊಂದಿದ್ದರೆ ಅದು ಉತ್ತಮ ಸಮುದಾಯವೆಂದು ಪರಿಗಣಿಸಬಹುದು.ನಮ್ಮ ಮಹಿಳಾ ಸಮುದಾಯದಲ್ಲಿ ಇಂತಹ ಏಕತಾ ಮನೋಭಾವವನ್ನು ಮೂಡಿಸಲು ಪ್ರಯತ್ನಿಸೋಣ.ಸ್ನೇಹಬಾಂಧವ್ಯವನ್ನು ವೃದ್ಧಿಸಿ ದ್ವೇಷ ,ಅಸೂಯೆಗಳನ್ನು ಹತೊಟಿಯಲ್ಲಿಟ್ಟುಕೊಳ್ಳುವ ಪ್ರಯತ್ನ ಮಾಡಬೇಕು.

            ಮಹಿಳಾಸಮುದಾಯದ ಅಭಿವೃದ್ಧಿಗೆ ಹೊಗಳಿಕೆಯಷ್ಟೇ ಸಾಕೇ ? ಅತಿಯಾದರೆ ಅಮೃತವೂ ವಿಷವಂತೆ.ಹೊಗಳಿಕೆಯ ಜೊತೆಗೆ ಟೀಕೆಗಳೂ ಇರಲಿ . ನಾವು ಬೆಳೆಯಬೇಕಾದರೆ ಟೀಕೆಗಳನ್ನು ಸಮಾನ ಮನಸ್ಥಿತಿಯಿಂದ ಸ್ವೀಕರಿಸಬೇಕು.ಟೀಕೆಗಳೇ.. ಸಾಧಿಸಲೇ ಬೇಕು ,ಗುರಿತಲುಪಲೇ ಬೇಕು ಎಂಬ ಕೆಚ್ಚನ್ನು ಮೂಡಿಸುವುದು.ನಮ್ಮ ದೌರ್ಬಲ್ಯಗಳನ್ನು ಒಪ್ಪಿಕೊಂಡು ತಿದ್ದಿಕೊಳ್ಳುವತ್ತ ಗಮನಹರಿಸಬೇಕು.ನಾವು ಆಗಾಗ ನಮ್ಮ ಗುಣನಡತೆ ಚಿಂತನಾಶೈಲಿಯನ್ನು ಒರೆಹಚ್ಚುತ್ತಿರಬೇಕು.ತಪ್ಪೆಂದು ಕಂಡಾಗ ಆಗಿಂದಾಗ್ಗೆ ಬದಲಾಯಿಸಿಕೊಳ್ಳಬೇಕು.

ಮಹಿಳೆಯರ ದೌರ್ಬಲ್ಯಗಳು ಮತ್ತು ಮಹಿಳೆಯರಲ್ಲಿ ಆಗಬೇಕಾದ ಬದಲಾವಣೆಗಳು:-

1.ಅಸೂಯೆ-ಅಸೂಯೆ ಎಂಬುದು ಮಹಿಳೆಯರಲ್ಲಿರುವ ಅತಿಪ್ರಮುಖ ದೌರ್ಬಲ್ಯ.ಹೆಣ್ಣೊಬ್ಬಳು ತನಗಿಂತ ರೂಪವತಿಯಾಗಿದ್ದರೆ,ಬುದ್ಧಿವಂತೆ ಯಾಗಿದ್ದರೆ,ಶ್ರೀಮಂತೆಯಾಗಿದ್ದರೆ ಹೊಟ್ಟೆಕಿಚ್ಚು.ತನ್ನ ಮಕ್ಕಳಿಗಿಂತ ಇತರರ ಮಕ್ಕಳು ಚುರುಕು ಇದ್ದಲ್ಲಿ,ತನ್ನ ಪತಿಗಿಂತ ಗೆಳತಿಯ ಪತಿ ಉತ್ತಮ ಸ್ಥಾನದಲ್ಲಿದ್ದಲ್ಲಿ ಮತ್ಸರ ಪಟ್ಟುಕೊಂಡು ಇಲ್ಲಸಲ್ಲದ ಅಪಪ್ರಚಾರದಲ್ಲಿ ತೊಡಗುವುದು.ಇಂತಹ ಸಣ್ಣತನವನ್ನು ಬಿಟ್ಟು ಇತರರು ಖುಷಿಯಾಗಿರುವುದನ್ನು ನೋಡಿ ಸಂತಸಪಟ್ಟುಕೊಳ್ಳೋಣ.ಪ್ರತಿಯೊಂದರಲ್ಲೂ ನಮ್ಮನ್ನು ಇತರರಿಗೆ ಹೋಲಿಸಿಕೊಳ್ಳುವ ಅಭ್ಯಾಸವನ್ನು ಬಿಡೋಣ.

2.ದ್ವೇಷ-ಯಾವುದೋ ಹಳೆಯ ಅವಮಾನದ ಘಟನೆಯನ್ನು ನೆನಪಿಸಿಕೊಂಡು ಇಂದೂ ಕೂಡ ದ್ವೇಷ ಭಾವನೆ ಮುಂದುವರಿಸುವುದು ಹಿತವಲ್ಲ.ಇಂದು ನಾವು ಇತರರಲ್ಲಿ ದ್ವೇಷಕಾರಿದರೆ ಮುಂದೆ ನಮ್ಮ ಮಕ್ಕಳು ನಮಗೂ ಅದನ್ನೇ ಮಾಡಿಯಾರು.ದ್ವೇಷ ಸಾಧನೆಗಿಂತ ಕ್ಷಮಾಗುಣಕ್ಕೆ ಹೆಚ್ಚು ಮಹತ್ವ ನೀಡಿದರೆ ಮನಸ್ಸಿಗೂ ನೆಮ್ಮದಿ.ವ್ಯಕ್ತಿಗಳ ಅಥವಾ ಕುಟುಂಬಗಳ ಮಧ್ಯೆ ಬಾಂಧವ್ಯವೂ ವೃದ್ಧಿಸುತ್ತದೆ.

3.ಇನ್ನು ಕೆಲವು ಹೆಣ್ಣುಮಕ್ಕಳಿಗಂತೂ ತಮ್ಮ ಮನೆ ಕೆಲಸ ,ವಿಷಯ ,ವಹಿವಾಟಿಗಿಂತ ನೆರೆಮನೆಯಲ್ಲೇನಾಗುತ್ತಿದೆ ? ಎಂಬುದರ ಬಗ್ಗೆಯೇ ಗಮನ.ಪರಿಣಾಮವಾಗಿ ನಮ್ಮ ಕುಟುಂಬದ ಬೆಳವಣಿಗೆ ಕುಂಠಿತವಾಗುತ್ತದೆ.ನೆಮ್ಮದಿ ಇಲ್ಲದಂತಾಗುತ್ತದೆ.ಇವತ್ತು ಅವರ ಮನೆಗೆ ಅದು ತಂದಿದ್ದಾರೆ..ನಾಳೆ ನಮ್ಮನೆಗೂ ತನ್ನಿ.ಇಲ್ಲಾಂದ್ರೆ ನಮ್ಮ ಅಂತಸ್ತು ಕಡಿಮೆಯಾಗುತ್ತದೆ.ಆ ಮನೆ ಮಹಿಳೆಗೆ ಚಿನ್ನದ ಬಳೆ ಮಾಡಿಸಿದ್ರು.ನಂಗೇನಾದ್ರೂ ಕೊಡಿಸಿದ್ರಾ ನೀವು.ಎಂಬ ಕ್ಯಾತೆ...ಪತಿಯಲ್ಲಿ!! ಇದನ್ನು ಬಿಟ್ಟು ನಮ್ಮಲ್ಲಿ ಏನಿದೆಯೋ ಅದರಲ್ಲಿ ಸಂತೃಪ್ತಿ ಪಟ್ಟುಕೊಂಡು ಬದುಕಬೇಕು.

4.ನಮ್ಮ ಕುಟುಂಬದ ಆರ್ಥಿಕ ವ್ಯವಸ್ಥೆ ಹೇಗಿದೆ ಎಂಬುದು ಹೆಚ್ಚಿನ ಮಹಿಳೆಯರಿಗೆ ತಿಳಿದಿರುವುದೇ ಇಲ್ಲ.ತಿಳಿಯುವ ಪ್ರಯತ್ನ ಮಾಡುವುದಿಲ್ಲ ಅಥವಾ ಕೇಳಿದರೂ ಮನೆಯೊಳಗಿರುವವಳಿಗೆ ಅದೆಲ್ಲ ಯಾಕೆ ? ಎಂಬ ತಾತ್ಸಾರದ ನುಡಿಗಳನ್ನೂ ಕೇಳಿರಬಹುದು.ಮಹಿಳೆಯರು ವ್ಯವಹಾರ ಮಾಡಲು ತಿಳಿದಿರಲೇ ಬೇಕು.ಬ್ಯಾಂಕ್ ವ್ಯವಹಾರ,ಸರಕಾರಿ ಕಛೇರಿ ಗಳ ಕೆಲಸಗಳನ್ನು ,ಮನೆಗೆ ಬೇಕಾದ ಸಾಮಗ್ರಿಗಳನ್ನು ಕೊಳ್ಳಲು ಕಲಿತುಕೊಳ್ಳಬೇಕು.ಒಬ್ಬರೇ ದುಡಿದು ಖರ್ಚು ವೆಚ್ಚಗಳನ್ನು ನಿಭಾಯಿಸಲು ಕಷ್ಟವಾಗುವುದಾದರೆ ನಿಮ್ಮದೇ ಆದ ಪುಟ್ಟ ಉದ್ಯೋಗವನ್ನು ಆರಂಭಿಸಿ.ನಿಮ್ಮ ಹವ್ಯಾಸವನ್ನೇ ಉದ್ಯೋಗವನ್ನಾಗಿ ಪರಿವರ್ತಿಸಬಹುದು.ಹಲವು ಮಹಿಳೆಯರು ಈ ಹಾದಿಯಲ್ಲಿ ಯಶಸ್ಸು ಗಳಿಸಿದ್ದಾರೆ.

5.ಅತಿಯಾಗಿ ನಮ್ಮನ್ನು ನಾವೇ ಹೊಗಳಿಕೊಳ್ಳುವ ಗುಣ ಅಪಾಯಕಾರಿ.ಇದು ಇತರರು ನಮ್ಮ ಮೇಲೆ ಅಸೂಯೆಪಟ್ಟುಕೊಳ್ಳುವಂತೆ ಮಾಡಬಹುದು.

6.ಅತಿ ನಯವಿನಯದ ಮಾತುಗಳಿಗೆ ಮರುಳಾಗುವುದು ಇನ್ನೊಂದು ಪ್ರಮುಖ ದೌರ್ಬಲ್ಯ.ಇದರಿಂದ ಗೃಹಿಣಿಯರು ಒಬ್ಬರೇ ಇದ್ದಂತಹ ಸಂದರ್ಭದಲ್ಲಿ ಕಳ್ಳರಿಗೆ,ಮೋಸಗಾರರಿಗೆ ತಮ್ಮ ಬೇಳೆಬೇಯಿಸಿಕೊಳ್ಳಲು ಸುಲಭ.ಬೆಣ್ಣೆಮಾತಿಗೆ ಸೋಲದಿರಿ.

7.ನಮಗೊಂದು ಪರರಿಗೊಂದು ಎಂಬ ಚಿಂತನೆ.ಇಂತಹಾ ಚಿಂತನೆ ಕೌಟುಂಬಿಕ ಬಾಂಧವ್ಯ ಕ್ಕೆ ಮಾರಿ.ನಮ್ಮಂತೆಯೇ ಪರರನ್ನು ಕಾಣೋಣ.

8.ಹಿಂದಿನ ಕಾಲದಿಂದಲೇ ಬಂದಂತಹ ಕೆಟ್ಟ ನುಡಿಗಳನ್ನು ಪುನರಾವರ್ತಿಸುವುದು ಒಳ್ಳೆಯದಲ್ಲ.ಉದಾ:-ಕೊಟ್ಟ ಹೆಣ್ಣು ಕುಲದಿಂದ ಹೊರಕ್ಕೆ, ಗಂಡಸರು ಕಣ್ಣೀರು ಹಾಕಬಾರದು, ಹೆಣ್ಣು ದನಿಯೆತ್ತಿ ಮಾತನಾಡಬಾರದು ,ಹೆತ್ತರೇ ಹೆಣ್ಣಿನ ಜನುಮ ಪಾವನ, ವಿಧವೆಯನ್ನು ಕಂಡರೆ ಅಪಶಕುನ,ವಿದುರನನ್ನು ಕಂಡರೆ ಶುಭಶಕುನ..ಇತ್ಯಾದಿಗಳು.ಇವನ್ನು ಖಂಡಿತಾ ನಾವು ಮುಂದುವರಿಸುವುದು ಬೇಡ.ಕಾಲಕ್ಕೆ ತಕ್ಕಂತೆ ನಡೆಯಲ್ಲಿ ಮಾತ್ರವಲ್ಲ ನಮ್ಮ ನುಡಿಯಲ್ಲೂ ಬದಲಾವಣೆಯಾಗಲಿ.ನಮ್ಮ ಕುಟುಂಬದ ಗಂಡುಮಕ್ಕಳಿಗೆ ಹೆಣ್ಣನ್ನೂ, ಆಕೆಯ ಭಾವನೆಗಳನ್ನು, ಆಕೆಯ ಪರಿಶ್ರಮವನ್ನು ಗೌರವಿಸುವ ಸಂಸ್ಕಾರವನ್ನು ಬಾಲ್ಯದಿಂದಲೇ ಕಲಿಸೋಣ.

9.ಉದ್ಯೋಗಸ್ಥ ಮಹಿಳೆಯ ಗೃಹಕೃತ್ಯದ ಬಗ್ಗೆ ಹೀಯಾಳಿಸುವುದು.ಇದೂ ಒಂದು ಬಲುಕೆಟ್ಟ ಬುದ್ಧಿ.ಒಬ್ಬ ಹೆಣ್ಣು ಸ್ವಾವಲಂಬಿಯಾದರೆ ಸಾಕು ಆಕೆಯ ಮೇಲೆ ಮಕ್ಕಳನ್ನು ನೋಡಿಕೊಳ್ಳುತ್ತಿಲ್ಲ, ಗಂಡನಿಗೆ ಬೆಲೆಕೊಡುತ್ತಿಲ್ಲ, ಮನೆಯನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳುತ್ತಿಲ್ಲ ಎಂಬೆಲ್ಲ ಆರೋಪಗಳು.ಉದ್ಯೋಗದ ಸ್ಥಳದಲ್ಲಿ ಇರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಮನೆಗೆ ಬರುವ ಹೆಣ್ಣು ಮನೆಯನ್ನೂ 100% ನಿಭಾಯಿಸಬೇಕೆಂದರೆ ಸಾಧ್ಯನಾ ..? ಆಕೆಯೇನು 24 ತಾಸೂ ದುಡಿಯಬೇಕೇ..? ಇಂತಹ ವಿಷಯಗಳಲ್ಲಿ ಇತರ ಹೆಣ್ಣುಮಕ್ಕಳು ತಪ್ಪು ಹುಡುಕಿ ಕುಹಕವಾಡುವುದನ್ನು ನಿಲ್ಲಿಸಬೇಕು.ಯಾರಾದರೂ ಚುಚ್ಚಿ ಮಾತನಾಡುತ್ತಿದ್ದರೆ ಅದನ್ನು ಮನಸ್ಸಿಗೆ ಹಚ್ಚಿಕೊಳ್ಳದೆ ..ಉದ್ಯೋಗದಿಂದಾಗಿ ಇತರರ ಗಮನ ನನ್ನ ಮೇಲಿದೆ ಎಂದು ತನ್ನನ್ನು ತಾನು ಸಮಾಧಾನಪಡಿಸಿಕೊಂಡು ಉದ್ಯೋಗಸ್ಥೆ ಮುಂದುವರಿಯಬೇಕು.

10.ನಮ್ಮ ನೆರೆಹೊರೆಯಲ್ಲಿ ಅಥವಾ ಸಂಬಂಧಿಕರಲ್ಲಿನ ಗಂಡಿಗೆ ಮದುವೆಯಾದರೆ ಸಾಕು ಸೊಸೆ ಮನೆಕೆಲಸ ಮಾಡುತ್ತಾಳಾ,ಅಡುಗೆ ಮಾಡಲು ಬರುತ್ತದೆಯೇ, ತವರಿಗೆ ಆಗಾಗ ಫೋನ್ ಮಾಡ್ತಾಳಾ,ತವರಿಂದ ಏನೆಲ್ಲ ಉಡುಗೊರೆ ಕೊಟ್ಟಿದ್ದಾರೆ ಎಂಬೆಲ್ಲ ಅತಿ ಕುತೂಹಲದ ಪ್ರಶ್ನೆ ಗಳನ್ನು ಕೇಳಿ ತಿಳಿದುಕೊಳ್ಳುವ ಚಟ ಹಲವು ಹೆಣ್ಣುಮಕ್ಕಳಿಗಿದೆ.ದಯವಿಟ್ಟು ಇಂತಹಾ ಸಣ್ಣತನವನ್ನು ಇಂದೇ ನಿಲ್ಲಿಸಿ.ಯಾರೂ ಕೂಡಾ ಹುಟ್ಟಿನಿಂದಲೇ ಕೆಲಸ ಕಲಿತಿಲ್ಲ.ಗಂಡನಮನೆಗೆ ಕಾಲಿಡುವಾಗಲೇ ಎಲ್ಲದರಲ್ಲೂ ಪಳಗಿರುವುದಿಲ್ಲ.ನವವಧೂವರರು ಖುಷಿಯಿಂದ ಬದುಕಲು ಬಿಡಿ.

11.ಯಾರಾದರೂ ಮಹಿಳೆ ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಯಾಶೀಲವಾಗಿದ್ದರೆ ಅವರ ಬಗ್ಗೆ ಇಲ್ಲಸಲ್ಲದ್ದು ಪ್ರಚಾರ ಮಾಡುವುದು ಒಂದು ದೊಡ್ಡ ಚಾಳಿ.ಸಾಮಾಜಿಕ ಜಾಲತಾಣದಲ್ಲಿ ಒಳ್ಳೆಯದು ಕೆಟ್ಟದ್ದು ಎರಡೂ ಇದೆ .ಎಚ್ಚರಿಕೆಯಿಂದ ಹೆಜ್ಜೆ ಮುಂದೆ ಇಡಬೇಕು.ಇಡುತ್ತಾರೆ.ಆದರೆ ಅವರನ್ನು ನಿಕೃಷ್ಟವಾಗಿ ಕಾಣುವ ದೃಷ್ಟಿಕೋನ ಬದಲಾಗಬೇಕು.ತಪ್ಪು ಹೆಜ್ಜೆ ಇಡುತ್ತಿದ್ದರೆ ಪ್ರೀತಿಯಿಂದ ತಿಳಿಹೇಳಿ.

11.ಹೆಣ್ಣು ಪ್ರೀತಿ ,ಪ್ರೇಮದ ಭಾವನಾತ್ಮಕ ಬಲೆಗೆ ಬಹಳ ಬೇಗನೆ ಸಿಲುಕುತ್ತಾಳೆ.ಬಹಳ ಎಚ್ಚರವಹಿಸಬೇಕು.ಭವಿಷ್ಯದ ಚಿಂತನೆಯಿರಲಿ.ಕಾಲೇಜು ಹಂತದಲ್ಲಿ, ಉದ್ಯೋಗದ ಸ್ಥಳದಲ್ಲಿ ಉಂಟಾಗುವ ಸ್ನೇಹವನ್ನು ಗಂಭೀರವಾಗಿ ಆಲೋಚಿಸಿಯೇ ಮುಂದುವರಿಸಿ. ಸ್ನೇಹ ಪ್ರೇಮವಾಗಿ ಬದಲಾಗಬಹುದು. ವಿವಾಹವೆಂಬುದು ಎರಡು ದೇಹಗಳ, ಆತ್ಮಗಳ ಮಿಲನ ಮಾತ್ರವಲ್ಲ ಎರಡು ಕುಟುಂಬಗಳ ,ಎರಡು ವಿಭಿನ್ನ ಸಂಪ್ರದಾಯಗಳ ಸಮ್ಮಿಲನ.ಹೊಂದಾಣಿಕೆ ಸುಲಭವೇನಲ್ಲ.ಪ್ರೇಮವಿವಾಹವಾಗುವುದಿದ್ದರೆ ವಿದ್ಯಾಭ್ಯಾಸ ಮುಂದುವರಿದ ನಂತರ ವಿವಾಹವಾಗಿ.ವಿದ್ಯೆ ನಿಮ್ಮ ರಕ್ಷಕ ,ಆಪದ್ಭಾಂಧವ ಎಂಬುದು ನೆನಪಿರಲಿ.

12.ವಿವಾಹ ವಿಚ್ಛೇದನಕ್ಕೆ ಒಳಪಟ್ಟ ಹೆಣ್ಣಿನ ಬಗ್ಗೆ ಕುತೂಹಲದಿಂದ ಪ್ರಶ್ನಿಸಬೇಡಿ.ಬದಲಾಗಿ ಆ ಹೆಣ್ಣಿನ ಸ್ಥಾನದಲ್ಲೊಮ್ಮೆ ನಿಂತು ಆಕೆಯ ನೋವನ್ನು ಅರ್ಥಮಾಡಿಕೊಳ್ಳಿ. ಆಕೆಗೆ ಸಹಾನುಭೂತಿ ಬೇಡ.ಆಕೆಯ ಬಗ್ಗೆ ಅಂತೆಕಂತೆಗಳನ್ನು ಹಬ್ಬಿಸುವುದು ಬೇಡ. ಸಾಧ್ಯವಾದರೆ ಆಕೆಗೆ ಮತ್ತೆ ಜೀವನ ರೂಪಿಸಿಕೊಳ್ಳಲು ಉದ್ಯೋಗ ಕೊಡಿಸುವ ಪ್ರಯತ್ನ ಮಾಡಿ.ಇಲ್ಲದಿದ್ದರೆ ಸುಮ್ಮನಿರಿ.ನೊಂದ ಹೆಣ್ಣನ್ನು ಚುಚ್ಚಿಮಾತನಾಡಿ ಘಾಸಿಗೊಳಿಸದಿರಿ.

13.ಮದುವೆಯಾಗಿ ಮನೆಗೆ ಕಾಲಿಟ್ಟ ಸೊಸೆಯನ್ನು ಮಗಳೆಂದು ಬಗೆಯಿರಿ.ಸಣ್ಣಪುಟ್ಟ ತಪ್ಪುಗಳನ್ನು ವೈಭವೀಕರಿಸದಿರಿ.ತಮ್ಮಿಷ್ಟದಂತೆಯೇ ಇರಬೇಕೆಂದು ಕಡ್ಡಾಯ ಮಾಡದಿರಿ.ಆಕೆಯ ಇಷ್ಟಗಳಿಗೆ ಭಾವನೆಗಳಿಗೆ ಬೆಲೆ ಕೊಡಿ.ಆಗ ಆಕೆಯೂ ನಿಮ್ಮನ್ನು ತಾಯಿಯಂತೆ ಕಾಣಬಲ್ಲಳು.ವೃದ್ಧಾಪ್ಯದಲ್ಲಿ ನಿಮ್ಮ ಜೊತೆಗೆ ಮಗಳಂತೆಯೇ ಇರುವಳು.

      ನೀರು ನಿಂತಲ್ಲೇ ನಿಂತರೆ ತಳದಲ್ಲಿ ಪಾಚಿಕಟ್ಟುತ್ತದೆ.ನೀರು ಕಲಕಲನೆ ಹರಿಯುತ್ತಿದ್ದರೆ ಸ್ವಚ್ಛವಾಗಿರುತ್ತದೆ.ಗಿಡದ ಬೇರುಗಳು, ಮೀನುಗಳು ನೀರನ್ನು ಶುದ್ಧಗೊಳಿಸುತ್ತವೆ.ಹೆಣ್ಣುಮಕ್ಕಳ ಚಿಂತನೆಗಳೂ ಹಾಗೆಯೇ.ಹಿಂದಿನದನ್ನೇ ಜಪಿಸುತ್ತಿದ್ದರೆ ಅದು ಮಲಿನಗೊಳ್ಳುತ್ತದೆ. ದಿನಕಳೆದಂತೆ ಹೊಸ ಚಿಂತನೆಗಳು ಹರಿದು ಬರಬೇಕು.ಉದಾತ್ತ ಯೋಚನೆಗಳಿಗೆ ನಾವು ತೆರೆದುಕೊಳ್ಳಬೇಕು.ಮಹಿಳಾ ಸಮುದಾಯದ ಹಿತದೃಷ್ಟಿಯಿಂದ ನಮ್ಮೆಲ್ಲಾ ಕೆಟ್ಟ ಅಭ್ಯಾಸಗಳನ್ನು ಬಿಟ್ಟು ನಮಗಾಗಿ ನಾವು ಬದಲಾಗೋಣ.

       ಪುರುಷ ಸಮಾಜವನ್ನು ನಿರ್ಮಿಸಿದವರು ಹೆಣ್ಣುಮಕ್ಕಳೇ ಅಲ್ಲವೇ..? ಅವರಲ್ಲಿ ಸಮಾನತೆಗಾಗಿ ಕೈಯೊಡ್ಡುವ ಬದಲು ನಮ್ಮ ಮನೆಯಲ್ಲಿರುವ ನಮ್ಮ ಗಂಡುಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ಕೊಟ್ಟು  ಸಮಾಜದಲ್ಲಿ ಹೆಣ್ಣು ಮಕ್ಕಳಿಗೂ ಮುಂದೆ ಒಳ್ಳೆಯ ಸ್ಥಾನಮಾನ ದೊರಕುವಂತೆ ಮಾಡೋಣ.ಹೆಣ್ಣುಮಕ್ಕಳ ಪ್ರತಿಭೆಗೆ, ಸಾಮರ್ಥ್ಯಕ್ಕೆ ಮನ್ನಣೆ ದೊರೆಯುವಂತೆ ಮಾಡುವುದು ನಮ್ಮೆಲ್ಲರ ಹೊಣೆ.

✍️... ಅನಿತಾ ಜಿ.ಕೆ.ಭಟ್.

10-03-2020.
momspresso Kannada #ಸಮಾನತೆಗಾಗಿ ನಾವೆಲ್ಲರೂ#ಸರಣಿಯ ಆರನೇ ಬರಹ.

2 comments:

  1. ತುಂಬಾ ಚೆನ್ನಾಗಿ ಬರೆದಿದ್ದೀರಿ.. ಪ್ರತಿಯೊಬ್ಬರೂ ಬದಲಾಗಲು ಪ್ರಯತ್ನಿಸಬೇಕು.. ಒಳ್ಳೆಯ ಸಲಹೆ

    ReplyDelete
  2. ಧನ್ಯವಾದಗಳು 💐🙏

    ReplyDelete