Saturday, 7 March 2020

ಕರುಳಿನ ಕೂಗು







        ಶಾಂತಾ ದೈನ್ಯತೆಯಿಂದ ಗಂಡ ರಾಜುವಿನ ಮುಖವನ್ನು ದಿಟ್ಟಿಸಿದಳು.ಅವಳ ನೋಟಕ್ಕೆ ನೋಟವನ್ನು ಬೆರೆಸಲು ಇಷ್ಟಪಡದ ರಾಜು ಮುಖ ಪಕ್ಕಕ್ಕೆ ತಿರುಗಿಸಿದ."ರೀ..."ಎಂದು ಮೆಲುದನಿಯಲ್ಲಿ ಉಸುರಿದಳು..ಇವಳ ಈ ದನಿ ನನ್ನ ಗಟ್ಟಿ ನಿರ್ಧಾರವನ್ನು ಕರಗಿಸುವಂತಿದೆಯಲ್ಲಾ..ಇಲ್ಲಾ ನಾನು ಕರಗಲ್ಲ..ಕರಗಬಾರದು..ಆಕೆಯತ್ತ ಹೊರಳಲನುವಾಗಿದ್ದ ಮನಸ್ಸನ್ನು ಬಿಗಿಹಿಡಿದನು.
ನರ್ಸ್ ಬಂದು "ಪಕ್ಕಕ್ಕೆ ತಿರುಗಿ ಮಲಗಿ ಅಮ್ಮಾ.." ಎಂದಳು.ಮೆಲ್ಲನೆ ಹೊಟ್ಟೆಯ ಮೇಲೆ ಕೈಯಿಟ್ಟು ಎಡಕ್ಕೆ ವಾಲಿ ಮಲಗಿದಳು ಶಾಂತಾ.ಹೊಟ್ಟೆಯನ್ನು ನಿಧಾನವಾಗಿ ಸವರುತ್ತಿದ್ದ ಅವಳಿಗೆ ಕೈತೆಗೆಯಲು ಮನಸ್ಸೇ ಬರಲಿಲ್ಲ.
"ಕೈ ತೆಗೀರಿ .."ಎಂದಳು ನರ್ಸ್ ಒರಟಾಗಿ ..ಇವಳೂ ತಾಯಿಯ ಉದರದಿಂದಲೇ ಬಂದವಳಲ್ಲವೇ..? ತಾನೂ ತಾಯಿಯಾಗಿರಬಹುದು.ಆದರೂ ಒಬ್ಬ ತಾಯಿಯ ಹೃದಯ ಇವಳಿಗೇಕೆ ಅರ್ಥವಾಗದು.. ಅವರಿಗೆ ಕೇವಲ ವೃತ್ತಿ..ನನಗೆ ಇದು ನನ್ನ ಪ್ರೀತಿ..ನನ್ನ ಒಲವು..ಯೋಚಿಸುತ್ತಿದ್ದವಳ ಕಣ್ಣಿನಿಂದ ಹನಿಗಳು ಪಟಪಟನೆ ಬೆಡ್ ನ ಮೇಲೆ ಉದುರಿದವು..

  "ನೋಡಿ ಅಮ್ಮಾ.. ನೀವು ಹೀಗೆ ಅತ್ತರೆ ನಮಗೂ ಕಷ್ಟ ನಿಮಗೂ ಆಯಾಸ.." ಎಂದ ನರ್ಸ್ನ ಮಾತಿಗೆ ತಿರುಗಿ ಮಡದಿಯ ಮುಖ ದಿಟ್ಟಿಸಿ ನೋಡಿದ ರಾಜು..
ಅಸಹಾಯಕತೆಯಿಂದ ..ಆರ್ದ್ರವಾಗಿ  ಆಕೆ ಬೇಡಿಕೊಳ್ಳುವ ನೋಟವನ್ನು ಸಹಿಸದೆ ಮತ್ತೆ ಹಿಂದಕ್ಕೆ ತಿರುಗಿ ನಿಂತ..
"ಸರ್.. ಇನ್ನು ಡಾಕ್ಟರ್ ಬರ್ತಾರೆ.. ನೀವು ಹೊರಗಡೆ ಹೋಗಿ..".ಎಂದ ಸಿಸ್ಟರ್..

       ಹೊಸ ನರ್ಸ್ ಒಂದು ಟ್ರೇಯೊಂದಿಗೆ ಬಂದವಳು ಅದರಿಂದ ಸಿರಿಂಜ್ ಹೊರತೆಗೆದಳು..ಪುಟ್ಟ ಬಾಟಲಿಯಲ್ಲಿದ್ದ ಮದ್ದನ್ನು ಸಿರಿಂಜ್ ನ ಒಳಗಿಳಿಸಿ ಪ್ರಮಾಣವನ್ನು ಮಿತಿಗೊಳಿಸಿದಳು.."ಈಗ ಒಂದು ಸಣ್ಣ ಇಂಜೆಕ್ಷನ್ ಕೊಡುವೆ ಏನೂ ಹೆದರಿಕೊಳ್ಳಬೇಡಿ..ಕೈ ಕಾಲು ಅಲ್ಲಾಡಿಸಬೇಡಿ" ಎಂದು ಇಂಜೆಕ್ಷನ್ ನೀಡಿದಳು.ಇಂಜೆಕ್ಷನ್ ನೋವು ಆಕೆಗೆ ಅರಿವಾಗಲಿಲ್ಲ.ಅದಕ್ಕಿಂತ ಹೆಚ್ಚಾಗಿ ಕರುಳಿನ ಕೂಗು ಮನಸ್ಸನ್ನು ಕಾಡುತ್ತಿತ್ತು.

        ಛೇ.. ನಾನಿವತ್ತು ಬರಲೇಬಾರದಿತ್ತು.. ಅದೆಷ್ಟು ಪ್ರೀತಿಯಿಂದ ಪುಸಲಾಯಿಸಿದ್ದ ಪತಿರಾಯ.ಅವನ ಪ್ರೇಮದ ಪರಿಗೆ ನಾನು ಪೂರ್ತಿ ಸೋತಿದ್ದೆ..ಬಹಳ ಅಪರೂಪದಲ್ಲಿ ತವರೂರ ಜಾತ್ರೆಗೆ ಪತಿ ಕರೆದೊಯ್ಯುವೆನೆಂದರೆ ನಾನಲ್ಲ...ಯಾವ ಹೆಣ್ಣುಮಗಳಾದರೂ ಹೊರಡದಿರಲು ಸಾಧ್ಯವೇ..?.ಇಬ್ಬರೇ ಹೊರಟಾಗ ಅತ್ತೆ ನಾನೂ ಬರುವೆ ಎಂದು ಹೊರಟಾಗಲೂ ನನಗೆ ಅನುಮಾನ ಕಾಡಲಿಲ್ಲ..ಪಾಪ ವಯಸ್ಸಾದ ಜೀವ.. ಮನೆಯಲ್ಲಿ ಉದಾಸೀನವಾಗುತ್ತಿರಬಹುದು.ದೇವರ ಜಾತ್ರೆಯಲ್ಲವೇ ಬರಲಿ.. ಎಂದು ಮನದುಂಬಿ ನೀವೂ ಬನ್ನಿ ಅತ್ತೆ ಅಂದಿದ್ದೆ.. ಆದರೆ ... ಇವರೇನು ಮಾಡುತ್ತಿದ್ದಾರೆ... ಇಂತಹಾ ಪಾಪಿಗಳನ್ನು ದೇವರು ಮೆಚ್ಚಿಯಾನೇ..? ಎಂದು ಯೋಚಿಸುತ್ತಿದ್ದವಳ ಕಣ್ಣಿನಿಂದ ಧಾರಾಕಾರವಾಗಿ ನೀರು ಹರಿಯತೊಡಗಿತು.

        ಅಷ್ಟರಲ್ಲಿ ವೈದ್ಯರು ಬಂದರು."ಏನಮ್ಮಾ ... ನೀನು ಎಷ್ಟನೇ ಬಾರಿ ಗರ್ಭಿಣಿ..?"
ಅಳುಕುತ್ತಾ ತೊದಲುತ್ತಾ "ಮೂರನೇದು ಸರ್.."ಎಂದಳು..
"ಇದುವರೆಗಿಂದು ಗಂಡೋ ಹೆಣ್ಣೋ..?"
"ಎರಡೂ ಹೆಣ್ಣು ಸರ್..."
"ಇದೂ ಹೆಣ್ಣೇ.."
"ನಿಮ್ಮ ದಮ್ಮಯ್ಯ ಅಂತೀನಿ ಸರ್..ಹೆಣ್ಣಾದ್ರೂ ಸಾಕ್ಕೋತೀನಿ...ತೆಗೀಬೇಡಿ ಸರ್... ಕೈಮುಗೀತೀನಿ.."

"ನರ್ಸ್ ..ಆಕೆಯ ಗಂಡನನ್ನು ಕರೆಯಿರಿ.."

ರಾಜುವಿನ ಜೊತೆ ಆತನ ತಾಯಿ ನಂಜಮ್ಮನೂ ಬಂದು" ಏನು ತೊಂದ್ರೆ ಮಾಡ್ತಾಳೆ ನನ್ನ್ ಸೊಸೆ" ಎಂದು ದುರುಗುಟ್ಟುತ್ತಾ ನೋಡಿದಳು.

"ರಾಜು ನಿನ್ನ ಹೆಂಡ್ತಿ ಅಬಾರ್ಷನ್ ಬೇಡ ಅಂತಿದಾಳೆ.."
"ಏನಂತಾಳೆ ಆಕಿ..ಬೇಡಂತಾಳೋ..  ಅಲ್ಲಿ ಎರಡು ಹೆಣ್ಣುಮಕ್ಕಳನ್ನು ಹುಟ್ಸಿಹಾಕಿದಾಳೆ ಸಾಲ್ದೇನೂ..ಮೂರನೇದೂ ಹೆಣ್ಣು ಬೇಕಂತೇನೂ " ಎಂದು ಶಾಂತಳ ಬಳಿಗೆ ಬಂದವಳೇ "ಏಯ್ ಸಾಂತಾ ತೆಪ್ಪಗೆ ಒಪ್ಕೋ.. ಇಲ್ಲಾಂದ್ರೆ ನನ್ನ್ ಆಸ್ತೀಲೀ ಒಂದು ಇಂಚೂ ಕೊಡಂಗಿಲ್ಲ ನೋಡು..."  ಎಂದು ಬೆದರಿಸಿದಳು.ಶಾಂತಾಳ ಕಣ್ಣೀರೇ ಉತ್ತರವಾಗಿತ್ತು..
"ಡಾಕ್ಟ್ರೇ.. ನೀವು ಮಾಡಿ ನಿಮ್ಕೆಲ್ಸ..ಅವ್ಳೇನಾದ್ರೂ ಗುರುಂ ಅಂದ್ರೆ ನನ್ನ ಕೂಗಿ..." ಎಂದು ಹೇಳಿ ಶಾಂತಾಳ ಕಡೆ ತಿರುಗಿ
"ಹೂಂ.. ಸಾಂತಾ .."ಎನ್ನುತ್ತಾ ಬೆರಳೆತ್ತಿ ಕಣ್ಣೋಟದಲ್ಲೇ ಗದರಿಸಿ ತೆರಳಿದಳು ಅತ್ತೆ ನಂಜಮ್ಮ.

        ವೈದ್ಯರು ತಮ್ಮ ಕಾರ್ಯ ಮುಂದುವರಿಸಿದರು.ಶಾಂತಾಳ ಚೀರಾಟ ಯಾರಿಗೂ ಕೇಳಿಸಲೇ ಇಲ್ಲ..ತನ್ನುದರದ ಮೇಲೆ ಕೈಯಿಟ್ಟು ..'ಕಂದಾ ಮುಂದಿನ ಜನುಮದಲ್ಲಾದರೂ ನಿನ್ನ ತಾಯಿಯಾಗುವ ಭಾಗ್ಯ ನನಗೆ ಸಿಗುತ್ತೋ ಏನು..ಈ ಪಾಪಿಗಳು ನಿನ್ನ ಉಳಿಸಲ್ಲ..ನಿನ್ನ  ಉಳಿಸುವ ಶಕ್ತಿ ನನಗಿಲ್ಲ ಕಂದಾ..ಈ ಅಸಹಾಯಕ ತಾಯಿಯನ್ನು ಕ್ಷಮಿಸಿಬಿಡು ಕಂದಾ..' ಎಂದು ಮನದಲ್ಲೇ ಅಂದುಕೊಂಡು ಬಿಕ್ಕಿಬಿಕ್ಕಿ ಅಳುತಿದ್ದಳು..


    ಗಂಟೆಗಳ ಹೊತ್ತು ಶಾಂತಾಳ ನರಳಾಟ ಮುಂದುವರಿಯಿತು.ಉಸಿರುನಿಲ್ಲಿಸಿ ಹೊರತೆಗೆದ ಭ್ರೂಣವನ್ನು ಹೊರತೆಗೆದರು .ಬಿಳಿಬಟ್ಟೆಯಲ್ಲಿ ಸುತ್ತಿ ಕಸದಬುಟ್ಟಿಗೆ ಎಸೆದರು.. ಶಾಂತಾ "ನನಗೊಮ್ಮೆ ನೋಡಬೇಕು" ಎಂದು  ಕೋರಿದಳು.."ನೋಡೋದಕ್ಕೇನಿದೆ..?" ಎಂದು ವೈದ್ಯರು ಮತ್ತು ನರ್ಸ್ ಅಪಹಾಸ್ಯ ಮಾಡಿ ನಕ್ಕರು..

 

       "ಎಲ್ಲಾ ಕ್ಲೀನ್ ಆಯ್ತು..." ಎಂದು ಲೇಬರ್ ವಾರ್ಡ್ ನಿಂದ ಹೊರಬಂದು ರಾಜುವಿನಲ್ಲಿ ವೈದ್ಯರು ಹೇಳಿದರು..
ನರ್ಸ್ ಶಾಂತಾಳನ್ನು ವಾರ್ಡ್ ಗೆ ಕರೆದೊಯ್ಯಲು ರಾಜುವನ್ನು ಬರಹೇಳಿದಳು.ಒಳಗೆ ಬಂದ ರಾಜು ಭ್ರೂಣವನ್ನು ನೋಡಬೇಕೆಂದ.. ತೋರಿಸಲು ಸಾಧ್ಯವಿಲ್ಲ ಎಂದರು..

        ಶಾಂತಾಗೆ ಸುಮ್ಮನೇ ಇರಲು ಮನಸ್ಸು ತಡೆಯದೇ "ರೀ..ಅಲ್ಲೇ ಹಿಂದೆ ಇರುವ ಕಸದಬುಟ್ಟಿಯಲ್ಲಿದೆ ನೋಡಿ" ಎಂದಳು ಮೆಲ್ಲನೆ..
ರಾಜು ಕಸದಬುಟ್ಟಿಗೆ ಬಾಗಿದ.ಬಟ್ಟೆಯಲ್ಲಿ ಸುತ್ತಿದ್ದ ರಕ್ತಸಿಕ್ತ ಭ್ರೂಣವನ್ನು ಹೊರತೆಗೆದ.. ಒಮ್ಮೆಲೇ ಚೀರಿದ..." ಏನಾಯ್ತು.."ಎಂದಳು ಶಾಂತಾ ಗಾಬರಿಯಿಂದ..ಗಂಡನ ಕೈಯಲ್ಲಿದ್ದ ಭ್ರೂಣವನ್ನು ಕಂಡ ಶಾಂತಾ ಮೂರ್ಛೆ ತಪ್ಪಿದಳು..
ರಾಜು "ನರ್ಸ್.. ನರ್ಸ್ "ಎಂದು ಕೂಗಿದರೂ ಯಾರೂ ಸುಳಿಯಲಿಲ್ಲ..ನಂಜಮ್ಮನಿಗೆ ತಿಳಿಯಿತು..ಆಕೆ ಕೂಗಾಡಿದಳು.. ಅದೇನು ಪ್ರೀತಿ ಇತ್ತು ಅನ್ನುವಂತೆ " ನನ್ನ ಮೊಮ್ಮಗನನ್ನು ಏಕೆ ಕೊಂದಿರಿ " ಅಂತ ಗೋಳಾಡಿದಳು.. ಗದ್ದಲವೆಬ್ಬಿಸಿದಳು..

         ಆಸ್ಪತ್ರೆಯ ಮುಂದೆ ಜನ ಜಮಾಯಿಸುವ ಮುನ್ನ ವೈದ್ಯರಿಗೆ ಇವರನ್ನು ಸಮಾಧಾನಪಡಿಸಿ ಸಾಗಹಾಕಬೇಕಿತ್ತು.." ... ಸ್ಕ್ಯಾನಿಂಗ್ ತಂತ್ರಜ್ಞರ ಸಣ್ಣ ಎಡವಟ್ಟಿನಿಂದಾಗಿ ಗಂಡು ಮಗು ಹೆಣ್ಣು ಮಗವೆಂದು ರಿಪೋರ್ಟ್ ಬಂದಿತ್ತು..ನಮ್ಮ ಕೈಯಲ್ಲೇನೂ ಇಲ್ಲ.. .."ಎಂದು ಹೇಳಿ ಪಡೆದಿದ್ದ ಶುಲ್ಕವನ್ನು ಹಿಂದಿರುಗಿಸಿ ಮತ್ತೂ ಸ್ವಲ್ಪ ಹಣ ನಂಜಮ್ಮನ ಕೈಗಿತ್ತು ಈ ಪ್ರಕರಣವನ್ನು ಇಲ್ಲಿಯೇ ಮುಗಿಸೋಣ ಎಂದರು..

        ಪ್ರಜ್ಞೆ ಬಂದ ಶಾಂತಾ ಶೂನ್ಯವನ್ನು ದಿಟ್ಟಿಸುತ್ತಿದ್ದಳು.

#ಭ್ರೂಣಲಿಂಗ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಶಿಕ್ಷಾರ್ಹ ಅಪರಾಧ.#


        ಭ್ರೂಣ ಲಿಂಗ ಪತ್ತೆ ನಿಷೇಧ ಕಾನೂನು ಬಂದು ಇಪ್ಪತ್ತೈದು ವರ್ಷಗಳಾದರೂ ತೀರಾ ಇತ್ತೀಚಿನವರೆಗೂ   ಕಾಲ್ಪನಿಕ ಕಥೆಯಲ್ಲಿ ಬಿಂಬಿತವಾಗಿರುವ 'ಪುನಃ ಹೆಣ್ಣಾದರೆ ಕೊಲ್ಲಿ;
ಗಂಡಾದರೆ ಏಕೆ ಕೊಂದಿರಿ..?' ಎಂಬ  ಮನೋಭಾವ ನಮ್ಮ ಸಮಾಜದಲ್ಲಿ ಸಾಮಾನ್ಯವಾಗಿತ್ತು.ಈಗ ಕಾನೂನಿನ ತಿದ್ದುಪಡಿಯಾಗಿ ಕಠಿಣ ಜೈಲುಶಿಕ್ಷೆಯ ಭಯದಿಂದ ಸ್ವಲ್ಪ ಮಟ್ಟಿಗೆ ಈ ಪಾಪ ಕೃತ್ಯ ಕಡಿಮೆಯಾಗುತ್ತಿದೆಯೆಂದು ಹೇಳಬಹುದು.



      ಗಂಡುಮಗು ಅಂದರೆ  ಇನ್ ಕಮಿಂಗ್ ; ಹೆಣ್ಣು ಮಗು ಅಂದರೆ ಔಟ್ ಗೋಯಿಂಗ್ ಎಂದು ಸ್ನೇಹಿತರೊಬ್ಬರು ಹಾಸ್ಯಕ್ಕಾಗಿ ಹೇಳುತ್ತಿದ್ದ ಮಾತು ಅಕ್ಷರಶಃ ಜನರ ಮನದಲ್ಲಿ ಮನೆಮಾಡಿರುವ ಸಂಗತಿ.ಜನರಲ್ಲಿ ಹೆಣ್ಣುಮಕ್ಕಳ ಬಗ್ಗೆ ಗೌರವವನ್ನು ಮೂಡಿಸಬೇಕಾಗಿರುವುದು‌ ವಿದ್ಯಾವಂತರ,ಪ್ರಜ್ಞಾವಂತರ ಕರ್ತವ್ಯ.ಹೆಣ್ಣು ಮಗುವನ್ನು ಗೌರವದಿಂದ ಕುಟುಂಬಕ್ಕೆ ಬರಮಾಡಿಕೊಳ್ಳೋಣ ... ಆಕೆಯನ್ನು ಪ್ರೀತಿಯಿಂದ ಸಾಕಿ ಸಲಹಿ ವಿದ್ಯಾಭ್ಯಾಸ ನೀಡೋಣ.ಹೆಣ್ಣು ಕುಟುಂಬದ ಕಣ್ಣು ಮಾತ್ರವಲ್ಲ ಸಮಾಜದ ಕಣ್ಣು.

     


✍️... ಅನಿತಾ ಜಿ.ಕೆ.ಭಟ್.
07-03-2020.

Momspresso Kannadaದ #ಸಮಾನತೆಗಾಗಿ ನಾವೆಲ್ಲರೂ #ಸರಣಿಯ ಮೂರನೇ ಬರಹ..


2 comments: