Tuesday, 18 February 2020

ಜೀವನ ಮೈತ್ರಿ-ಭಾಗ ೨೧(21)




ಭಾಸ್ಕರ: ಶಶಿ ಅಕ್ಕಾ ನೀನು ಹೇಳಿದ್ದೆಲ್ಲ ಸರಿ.. ಒಂದನ್ನು ಬಿಟ್ಟು..

ಶಶಿ:ಯಾವುದದು ಒಂದು...????

ಭಾಸ್ಕರ:ಸೋದರ ಸಂಬಂಧದಿಂದಲೇ ಮೊದಲು ಹೆಣ್ಣು ಕೇಳುವ ಸಂಪ್ರದಾಯ..

ಶಶಿ:ಅದು ತಪ್ಪು ಹೇಗಾಗುತ್ತದೆ ತಮ್ಮ...ಕೇಳದಿದ್ದರೇ ನಾವು ಕೇಳಲೇಯಿಲ್ಲ ಎಂದು ನಿಮ್ಮಿಂದ ಮಾತು ಕೇಳಬೇಕಾಗಿ ಬಂದೀತು..

ಭಾಸ್ಕರ:ಅದೆಲ್ಲ ಪರಸ್ಪರ ಅಸಮಾಧಾನದ ವಿಷಯಗಳು..ಅದನ್ನೆಲ್ಲ ಬದಿಗಿಟ್ಟು ವೈಜ್ಞಾನಿಕ ಮನೋಭಾವದಿಂದ ಈ ಸಂಬಂಧ ಸರಿಯಲ್ಲ..

ಶಶಿ: ಏನೋ ಸಂಪ್ರದಾಯದಂತೆ ನಾನು ಹೆಣ್ಣು ಕೇಳಿದೆನಪ್ಪ.. ನೀನು ಏನೇನೋ ಹೇಳಿದರೆ ನನಗೆ ಹೇಗೆ ತಿಳಿಯುತ್ತೆ..

ಭಾಸ್ಕರ: ನೋಡಿ ..ಈಗ ಎಲ್ಲರೂ ಕೇಳಿ..ನಮ್ಮ ಮೈತ್ರಿಗೆ ಮಾತ್ರವಲ್ಲ ಸಂಜನಾ, ವಂದನಾ, ಮಹೇಶ್ ... ಅಥವಾ ಯಾರಿಗೇ ಆದರೂ ಸೋದರ ಸಂಬಂಧದಲ್ಲಿ ಮದುವೆ ಮಾಡುವುದು ಉಚಿತವಲ್ಲ..ತಂಗಿಯ/ಅಕ್ಕನ ಮಗಳನ್ನು ಸೋದರಮಾವ ತಾನೇ ಮದುವೆಯಾಗುವುದು ಅಥವಾ ಪರಸ್ಪರ ಅಣ್ಣ, ತಂಗಿ ,ತಮ್ಮ ...ಇವರ ಮಗ /ಮಗಳ ವಿವಾಹಬಂಧನ ಏರ್ಪಡಿಸುವುದು ... ಇವು ಪರಂಪರೆಯಲ್ಲಿ ಬಂದರೂ ವೈಜ್ಞಾನಿಕವಾಗಿ ಆರೋಗ್ಯಕರವಲ್ಲ ಎಂದು ತಿಳಿದುಬಂದಿದೆ..

ಶಶಿ: ನಮ್ಮ ಮನೇಲಿ ಭಾವ ಮದುವೆಯಾಗಿರುವುದು ಸೋದರತ್ತೆಯ ಮಗಳನ್ನೇ..ಏನೂ ತೊಂದರೆಯಾಗಿಲ್ಲವಲ್ಲ ..ಚೆನ್ನಾಗಿ ಒಬ್ಬರಿಗೊಬ್ಬರು ಪರಸ್ಪರ ಅರ್ಥಮಾಡಿಕೊಂಡು ಬದುಕುತ್ತಿದ್ದಾರೆ..

ಭಾಸ್ಕರ:ಇಂತಹ ಸಂಕೀರ್ಣ ವಿಷಯದಲ್ಲಿ ಅಂತಹ ಸಮರ್ಥನೆ ನನಗೆ ಇಷ್ಟವಿಲ್ಲ.ಸೋದರ ಸಂಬಂಧದಲ್ಲಿ ಮದುವೆಯಾದ ಪ್ರತೀ ಜೋಡಿಯೂ ತಮ್ಮ ಸಂತಾನದಲ್ಲಿ ತೊಂದರೆ ಅನುಭವಿಸಬೇಕೆಂದಿಲ್ಲ.ಆರೋಗ್ಯವಂತ ಮಕ್ಕಳು ಜನಿಸಿದ್ದಾರೆ ಎಂದ ಮಾತ್ರಕ್ಕೆ ತಾಪತ್ರಯ ಮುಗಿಯಿತು ಎಂದರ್ಥವಲ್ಲ..ಮುಂದಿನ ಒಂದೆರಡು ತಲೆಮಾರುಗಳು ಕೂಡ  ವಂಶವಾಹಿಯ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳಿವೆ..

ಶ್ಯಾಮ ಶಾಸ್ತ್ರಿಗಳು:ಹಾಗೇನೂ ನಿಖರವಾಗಿ ಹೇಳಲು ಸಾಧ್ಯವಿಲ್ಲ ಭಾಸ್ಕರ..

ಭಾಸ್ಕರ: ಹೌದು ಅಪ್ಪಾ.. ನಿಖರವಾಗಿ ನಿರೂಪಿಸಲು ಸಾಧ್ಯವಿಲ್ಲದಿದ್ದರೂ ನಾವೇ ಕೈಯಾರೆ ಮಕ್ಕಳ ಬಾಳನ್ನು ಹಾಳುಮಾಡಬಾರದು.. ನಾವು ಬಾಳು ಬೆಳಗುವಂತೆ ಮಾಡಬೇಕಾದವರು..

ಶಂಕರ: ಹೌದು ಅಣ್ಣ ಹೇಳಿದ್ದು ನಿಜ..ಒಂದೇ ವಂಶವಾಹಿ ಪರಸ್ಪರ ಸೇರಿದಾಗ ವಂಶವಾಹಿ ದುರ್ಬಲವಾಗಿ ..ಅಂತಹ ದಂಪತಿಗಳ ಶೇ.6 ರಷ್ಟು ಮಕ್ಕಳಲ್ಲಿ ನ್ಯೂನತೆಗಳು ಕಂಡುಬರಬಹುದು.ಆದ್ದರಿಂದ ಈಗೀಗ ವೈದ್ಯರು ಅಂತಹ ಮದುವೆಗಳ ವಿರುದ್ಧ ಜನಜಾಗೃತಿ ಮೂಡಿಸುತ್ತಿದ್ದಾರೆ..

ಭಾಸ್ಕರ: ಅಕ್ಕಾ... ನಾನು ಹೀಗೆ ಹೇಳಿರುವುದು ನಮ್ಮ ಮಕ್ಕಳ ಒಳಿತಿಗಾಗಿ..ನನಗೆ ನಿನ್ನ ಮಗ ಬೇರೆಯಲ್ಲ , ಮೈತ್ರಿ ಬೇರೆಯಲ್ಲ.. ಇಬ್ಬರೂ ಸುಖವಾಗಿ ಸಂಸಾರ ಮಾಡಬೇಕು..ನಮ್ಮ ನಿರ್ಧಾರದಿಂದ ಅವರ ಬದುಕು ಕತ್ತಲಾಗಬಾರದು..ಮುರಲಿಗೆ ಒಳ್ಳೆ ಕಡೆ ಸಂಬಂಧ ಕೂಡಿ ಬರಬಹುದು.. ಸೋದರಮಾವನಾಗಿ ನಾನೂ ಮುಂದೆ ನಿಂತು ಕನ್ಯಾ ಅನ್ವೇಷಣೆಯಲ್ಲಿ ತೊಡಗುತ್ತೇನೆ .. ಮೈತ್ರಿಗೆ ರಕ್ತಸಂಬಂಧ ,ಒಂದೇ ಗೋತ್ರ ಬಿಟ್ಟು ಬೇರೆ ವರನನ್ನು ಹುಡುಕೋಣ.. ಇದು ನನ್ನ ನಿರ್ಧಾರವೆಂದಾಗದೆ ನಮ್ಮೆಲ್ಲರ ನಿರ್ಧಾರವಾಗಲಿ ..ಏನು ಹೇಳ್ತೀ...??

ಎಂದು ಮಡದಿಯ ಕಡೆಗೆ ಮುಖ ತಿರುಗಿಸಿದರು.

ಮಂಗಳಾ: ಹೌದು...ನನ್ನ ಭಾವನೆಯೂ ಅದೇ ಆಗಿತ್ತು..

ಎಂದು ಹೇಳಿ ತನ್ನ ಹಣೆಯಲ್ಲಿ ಮುತ್ತುಗಟ್ಟಿ ಜಿನುಗುತ್ತಿದ್ದ ಬೆವರ ಹನಿಗಳನ್ನು ಸೀರೆಯ ಸೆರಗಿನಂಚಿನಿಂದ ಒರೆಸಿಕೊಂಡು ನಿಟ್ಟುಸಿರು ಬಿಟ್ಟಳು..

ಶಶಿ ಮುಖ ಸಣ್ಣದು ಮಾಡಿಕೊಂಡು ಒಳಗೆ ನಡೆದಾಗ ಮಹಾಲಕ್ಷ್ಮಿ ಅಮ್ಮ "ಮುರಲಿಗೆ ಒಳ್ಳೆ ಸಂಬಂಧ ಸಿಗಬಹುದು.ಯೋಚನೆ ಮಾಡಬೇಡ ಶಶಿ.."ಎಂದು ಸಮಾಧಾನ ಮಾಡಿದರು.


   ಗಾಯತ್ರಿ ಮಂಗಳಾ ಇಬ್ಬರೂ ಅಡುಗೆ ಕೋಣೆಗೆ ತೆರಳಿ ಸಂಜೆಯ ಕಾಫಿ ತಯಾರಿಸುತ್ತಿದ್ದರು.ಪಕ್ಕದಲ್ಲಿ ಯಾರೂ ಇಲ್ಲದಾಗ ಮೆಲ್ಲನೆ ಗಾಯತ್ರಿ ಹೊಡಿ ಅಕ್ಕಾ ಕೈ ಎಂದು ಅಕ್ಕ ತಂಗಿ ನಾವು ಜಯಿಸಿದೆವು ಎಂದು ಪರಸ್ಪರ ಕೈ ಹೊಡೆದುಕೊಂಡರು.." ಗಾಯತ್ರಿ ನೀನು ಇವತ್ತು ನನ್ನ ಜೊತೆ ಇದ್ದದ್ದು ನನಗೆ ಆನೆಬಲ ತಂದು ಕೊಟ್ಟಿತು ಕಣೇ.. ಇಲ್ಲದಿದ್ದರೆ ನಂಗೆ ಅಳುವೇ ಬಂದು ಬಿಡ್ತಿತ್ತು.."

"ಅಕ್ಕಾ..ಅಂತಹ ವಿಷಯ ಬಂದಾಗ ಅಳು ಬಂದರೂ ಅಳಬಾರದು.. ಗಟ್ಟಿಯಾಗಿ ನಿರ್ಧಾರ ಮಾಡಿ ನಮ್ಮ ಮಕ್ಕಳ ಪರವಾಗಿ ನಿಲ್ಲಬೇಕು.."
ಎಂದಾಗ
"ಅದಕ್ಕೆಲ್ಲ ನೀನೇ ಸರಿ ಕಣೇ.. ಪೇಟೆಯಲ್ಲಿ ಬೆಳೆದು ಅಲ್ಲೇ ವಾಸಿಸುತ್ತಿರುವ ನಿನಗೆ ಧೈರ್ಯ ವಿದೆ..ಹಿರಿಯರೆದುರು ತಗ್ಗಿಬಗ್ಗಿ ಬೆಳೆದು ಮದುವೆಯಾಗಿ ಅದೇ ವಾತಾವರಣ ಸಿಕ್ಕ ನನಗೆ ಧೈರ್ಯ ,ಸ್ವಾತಂತ್ರ್ಯ ಎಲ್ಲಿದೆ ?? ಹೇಳು.."


ಅಷ್ಟರಲ್ಲಿ ಅತ್ತೆ ಬಂದದ್ದನ್ನು ಅರಿತು ಮಾತು ಕಾಫಿಯತ್ತ ಹೊರಳಿತು."ಕಾಫಿ ಆಯ್ತಾ ಮಂಗಳಾ..ಮಾವ ಕಾಯ್ತಾ ಇದ್ದಾರೆ.. ತಡವಾಯಿತು.."

"ಮಾತುಕತೆ ಮುಗಿಸಿ ಕಾಫಿ ಮಾಡುವುದೆಂದು ನಿರ್ಧರಿಸಿದ್ದೆವು ಅತ್ತೇ.. ನಮಗೂ ನಮ್ಮ ಮಕ್ಕಳ ಭವಿಷ್ಯದ ಯೋಚನೆ ಇರುತ್ತದಲ್ವಾ.."ಎಂದು ಗಾಯತ್ರಿ ಅಂದಾಗ

ಅಬ್ಬಾ ಇವಳಾ..ಎದುರು ಮಾತು ಆಡ್ತಾಳೆ.. ಬಂದು ನಾಲ್ಕೇ ದಿನಕ್ಕೆ..ಮಂಗಳಾ ಆದರೆ ಸೌಮ್ಯ ಸ್ವಭಾವದ ಸೊಸೆ.. ಎಂದು ತನ್ನಲ್ಲೇ ಹೇಳಿಕೊಂಡರು..

ಎಲ್ಲರೂ ಕಾಫಿ ಹೀರುತ್ತಿದ್ದಾಗ ಎಂದಿನಂತೆ ಲವಲವಿಕೆ ಇರಲಿಲ್ಲ.ಬಿಗುಮಾನ ಎಲ್ಲರ ಮುಖದಲ್ಲೂ ಎದ್ದುಕಾಣುತ್ತಿತ್ತು.. ಭಾಸ್ಕರ ಶಾಸ್ತ್ರಿಗಳು ಮಾತ್ರ ಏನೂ ಆಗಲಿಲ್ಲ ಎಂಬಂತಿದ್ದರು..

ಕಾಫಿ ಕುಡಿದು ಶಶಿ ತನ್ನ ಬಟ್ಟೆಗಳನ್ನು ಬ್ಯಾಗ್ ಗೆ ತುಂಬಿಸಹೊರಟಾಗ "ಏನು ಶಶಿ ಇವತ್ತೇ ಹೊರಡುವ ಆಲೋಚನೆ ಏಕೆ..?? ಎರಡು ದಿನ ಇದ್ದು ಹೋಗು..ಹೇಗೂ ಶಂಕರ ನೀನು ಬರುವುದೇ ಅಪರೂಪ.."ಎಂದು ಮಹಾಲಕ್ಷ್ಮಿ ಅಮ್ಮ ಮಗಳಲ್ಲಿ ಹೇಳಿದರು..


"ಇಲ್ಲ ಅಬ್ಬೆ.. ಎರಡು ದಿನ ನಿಂತದ್ದೇ ಹೆಚ್ಚು..ಮನೆಯಲ್ಲೂ ಕೆಲಸಕಾರ್ಯಗಳ ಒತ್ತಡ..ಇನ್ನೊಮ್ಮೆ ಬರುತ್ತೇವೆ "ಎಂದು  ಹೇಳಿ ವೆಂಕಟ್ ನೊಂದಿಗೆ ಹೊರಟರು..


ಕಾರು ಸ್ಟಾರ್ಟ್ ಆಗುವಷ್ಟರಲ್ಲಿ ಪಡುಗುಡ್ಡಕ್ಕೆ ತೆರಳಿದ್ದ ಮಕ್ಕಳ ಗ್ಯಾಂಗ್ ಪ್ರತ್ಯಕ್ಷವಾಯಿತು..ಮಹೇಶನ ಕೈಯಲ್ಲಿ ಗೇರುಬೀಜ ತುಂಬಿದ ಚೀಲವಿತ್ತು.. ಮೈತ್ರಿ ಕೊಕ್ಕೆ ಹಿಡಿದುಕೊಂಡಿದ್ದಳು.. ಸಂಜನಾ ತನಗೆ ಕ್ರಾಫ್ಟ್ ಮಾಡಲೆಂದು ಮರದ ಬಣ್ಣದ ಚಿಗುರು, ವಿಶೇಷವೆನಿಸಿದ ಕಾಡು ಹೂಗಳನ್ನು ತಂದಿದ್ದಳು.. ವಂದನಾ ನೇರಳೆ ಹಣ್ಣಿನ ಗೊಂಚಲು ಹಿಡಿದು ಬಂದಿದ್ದಳು.. ಶಶಿಗೆ ಅವರ ಮುಖ ನೋಡುವುದೂ ಬೇಡ ಎಂಬಷ್ಟು ಅವಮಾನವಾದಂತೆ ಆಗಿತ್ತು..ಆದರೂ ಅಪರೂಪದ ನೇರಳೆ ಹಣ್ಣನ್ನು ಕಂಡಾಗ ವಂದನಾಳನ್ನು ಕರೆದು ಎರಡು ಹಣ್ಣು ಕೇಳಿ ಬಾಯಿಗೆ ಹಾಕಿಕೊಂಡರು..ಎಲ್ಲರತ್ತ ಕೈಬೀಸಿ ಕಾರಿನಲ್ಲಿ ಕುಳಿತರು.. ಮಹಾಲಕ್ಷ್ಮಿ ಅಮ್ಮ ಮಾತನಾಡುತ್ತಾ ನಿಂತಾಗ "ಅಜ್ಜೀ.. ಫೋನಲ್ಲಿ ಮಾತನಾಡಬಹುದು ಇನ್ನು "ಎಂದು ವೆಂಕಟ್ ಹೇಳಿದಾಗ
ಶ್ಯಾಮ ಶಾಸ್ತ್ರಿಗಳು "ಹಾಗೇ ಕಣೋ ತಾಯಿಕರುಳು.. ಮಕ್ಕಳು ಹೋಗುವರೆಂದರೆ ಸಹಿಸೋದಿಲ್ಲ.."ಎಂದಾಗ ಎಲ್ಲರೂ ಹೌದೌದೆಂದರು..


    "ಮನೆ ಭಣಗುಟ್ಟುತ್ತಿದೆ ಇಂದು" ಎಂಬುದು ಮಹಾಲಕ್ಷ್ಮಿ ಅಮ್ಮನ ಮಾತು.. ಗಾಯತ್ರಿ ಮಂಗಳಾ ಸ್ವಲ್ಪ ರಿಲ್ಯಾಕ್ಸ್ ಆದಂತಿದ್ದರು.ಮಕ್ಕಳೆಲ್ಲ ಜೊತೆ ಸೇರಿ ಪದ್ಯಬಂಡಿ ಆಡುತ್ತಿದ್ದರು.. ಸಂಜನಾ,ವಂದನಾ ಸಿನಿಮಾ ಹಾಡುಗಳನ್ನು ಚೆನ್ನಾಗಿ ಹಾಡುತ್ತಿದ್ದರು.. ಮಹೇಶ್ ಮೈತ್ರಿ ಎಲ್ಲದರಲ್ಲೂ ದನಿಗೂಡಿಸುತ್ತಿದ್ದರು..ಅತ್ಯುತ್ಸಾಹದಿಂದ ಸಾಗುತ್ತಿದ್ದಾಗ ಗಾಯತ್ರಿ ಮಂಗಳಮ್ಮನೂ ಜೊತೆಯಾದರು...ನಾನೂ ಬರುವೆ ಎಂದು ಶಂಕರ ಸೇರಿದಾಗ ಭಾಸ್ಕರ ಶಾಸ್ತ್ರಿಗಳು ಒಂದೆರಡು ಯಕ್ಷಗಾನದ ಪದ ಹಾಡಿಯೇ ಬಿಟ್ಟರು..


ಅಜ್ಜ ಅಜ್ಜಿ ಎಲ್ಲವನ್ನೂ ಆಸ್ವಾದಿಸುತ್ತಾ ಕುಳಿತಿದ್ದರು..ಅಜ್ಜನ ಸಂಧ್ಯಾವಂದನೆ,ಪೂಜೆಯ ಸಮಯ ಇವತ್ತು ಸ್ವಲ್ಪ ಮುಂದೆ ಹೋಯಿತು.. ಅಜ್ಜಿಗೆ ಸ್ತೋತ್ರ ಪಾರಾಯಣಕ್ಕಿಂತ  ಮೊಮ್ಮಕ್ಕಳ ಅಂತ್ಯಾಕ್ಷರಿ ಖುಷಿಕೊಟ್ಟಿತು..ಹಳೆಯ ಸಿನಿಮಾ ಹಾಡುಗಳು ಜಾನಪದ ಹಾಡುಗಳೆಲ್ಲ ಮತ್ತೆ ನೆನಪಾಗಿ ಯಾರು ಕೂಡ ಸೋಲುವ ಮಾತೇ ಬರಲಿಲ್ಲ.."ಮುಗಿಯುವ ಅಂದಾಜು ಇಲ್ಲವೇ" ಎಂದು ಅಜ್ಜ ಕೇಳಿದಾಗ ಯಾರೂ ಉತ್ತರಿಸಲಿಲ್ಲ.. ಭಾಸ್ಕರ ಶಾಸ್ತ್ರಿಗಳು "ಸಾಕುಮಾಡೋಣ ಇನ್ನು..ಮಕ್ಕಳ ಜೊತೆ ಸೇರಿ ನಾವೂ ಮಕ್ಕಳಾದೆವು "ಎನ್ನುತ್ತಾ ಎದ್ದರು..

ಹಿರಿಯರು ಒಬ್ಬೊರಾಗಿ ಸ್ನಾನ ಸಂಧ್ಯಾವಂದನೆ ಎಂದು ಹೊರಟರು..ನಮ್ಮದು ಸ್ನಾನ ಆಯ್ತು.. ಇನ್ನು ನೀವು ಹೊರಡಿ ಮಕ್ಕಳೇ ಅಂದಾಗ ಮುಗಿಸಲು ಮನಸ್ಸಿಲ್ಲದಿದ್ದರೂ ಮುಗಿಸಬೇಕಾಯಿತು..

ಮೈತ್ರಿ ತುಂಬಾ ದಿನಗಳ ನಂತರ ಇಷ್ಟು ಉತ್ಸಾಹದಿಂದಿದ್ದಳು ..ನಿಜ ಹೇಳಬೇಕೆಂದರೆ ಅವಳಿಗೆ ಕಿಶನ್ ಮರೆತೇ ಹೋಗಿದ್ದ..ಅವನ ಸಂದೇಶಗಳ ಬಂದೂ ಬಂದು ಮೊಬೈಲ್ ತುಂಬುತ್ತಿತ್ತು.. ಇವಳಿಗೆ ಅದರ ಗೊಡವೆಯೇ ಇರಲಿಲ್ಲ..

                  ****

ಕಿಶನ್ ನ ಮನೆಯಲ್ಲಿ ತಂಗಿಯಂದಿರು ಅವರ ಕುಟುಂಬದೊಂದಿಗೆ ಆಗಮಿಸಿದ್ದರು.ಕಿಶನ್ ತುಂಬಾ ದಿನಗಳ ನಂತರ ಊರಿಗೆ ಬಂದಿದ್ದರಿಂದ ಎಲ್ಲರಿಗೂ ಮಾತನಾಡಿಸುವ ತವಕ..ಅಮ್ಮ ಮಮತ ಮಗನಿಗೆ ಇಷ್ಟವೆಂದು ಮಾವಿನ ಹಣ್ಣಿನ ಸಾಸಿವೆ, ಹಲಸಿನ ಕಾಯಿ ಪಲ್ಯ, ಹೆಸರುಬೇಳೆ ಪಾಯಸ ವಿಶೇಷವಾಗಿ ಮಾಡಿದ್ದರು.ಊಟ ಮುಗಿದ ಮೇಲೆ ಎಲ್ಲರೂ ಕಿಶನ್ ನ ಸುತ್ತುವರಿದರು.. ಕಿಶನ್ ನೀನು ಪ್ರೀತಿಸಿದ ಹುಡುಗಿಯ ಫೊಟೋ ತೋರಿಸು ಎಂದರು ಅಪ್ಪ..

ಕಿಶನ್: ಫೊಟೋ ಇಲ್ಲಪ್ಪ..ನಾಳೆ ಹೋಗ್ತೀವಲ್ಲ ಅಲ್ಲೇ ನೋಡೋಣ..

ತಂಗಿ ಮೇದಿನಿ: ನಾವು ಬರಲ್ಲ ಕಣೋ..ನಮಗೆ ಇಲ್ಲೇ ಅವಳ ಫೊಟೋ ತೋರ್ಸು..

ಕಿಶನ್ ಯೋಚಿಸುತ್ತಿದ್ದ.. ಇವರಿಗೆ ನನ್ನ ಮೊಬೈಲ್ ಹಿಡಿದು ತೋರಿಸಿದರೆ ಒಂದಲ್ಲ ಎಲ್ಲ ಫೊಟೋ ನೋಡಿ ಅದೇನೆಲ್ಲ ಕಾಮೆಂಟ್ ಕೇಳಬೇಕೋ ಏನೋ ಎಂದು ಸಂಕೋಚ ಪಟ್ಟುಕೊಂಡನು..

ಅಮ್ಮ:ಮಗನೇ ಮೊದಲು ನೀನು ಪ್ರಪೋಸ್ ಮಾಡಿದ್ದೋ..ಅವಳೋ..

ಕಿಶನ್ ಮೀಸೆಯಡಿ ನಗುವುದು ಬಿಟ್ಟು ಬೇರೇನೂ ಹೇಳುತ್ತಿಲ್ಲ..ಅಲ್ಲ..ಇದನ್ನೆಲ್ಲ ಇವರಲ್ಲಿ ಹೇಗಪ್ಪಾ ಹೇಳೋದು...ಎಂಬ ಸಂಕೋಚ ಅವನಿಗೆ..

ತಂಗಿ ಚಾಂದಿನಿಯ ಪತಿ : ಭಾವ ... ನೀವು ಎಲ್ಲರೆದುರು ರೋಸ್ ಕೊಟ್ಟಿದೀರೋ ಹುಡುಗಿಗೆ ..ಅಲ್ಲ ಕದ್ದುಮುಚ್ಚಿ ಕೊಟ್ರೋ...

ಕಿಶನ್: ನೀವು ಚಾಂದಿನಿಗೆ ಹೇಗೆ ಕೊಟ್ರಿ.. ಅದನ್ನು ಮೊದ್ಲು ಹೇಳಿ..

ಚಾಂದಿನಿ : ನಮ್ದು ಅರೇಂಜ್ಡ್ ಮ್ಯಾರೇಜ್ ಕಣೋ..
ಕಿಶನ್: ನಂಗೂ ಗೊತ್ತು ..ಯಾರದ್ದೋ ಮದುವೇಲಿ...

ಚಾಂದಿನಿ ಪತಿ :ನಮ್ದೆಲ್ಲ ಹಳೇ ಕಥೆ ಭಾವ..ಈಗೇನಿದ್ರೂ ಹೊಸ ಜಮಾನಾ..ನೀವೆಲ್ಲೆಲ್ಲ ಜೊತೆ ಸುತ್ತಾಡಿದ್ರಿ ...

ಕಿಶನ್: ಎಲ್ಲೂ ಜೊತೆಗೆ ಹೋಗಿಲ್ಲ ಭಾವ.. ನನ್ನನ್ನು ನಂಬಿ ಪ್ಲೀಸ್..

ಮೇದಿನಿ: ಇದು ಮಾತ್ರ ಸುಳ್ಳು....

ಕಿಶನ್:ಹೌದೇ..

ಅಮ್ಮ;ಇರ್ಲಿ ಬಿಡು..ಈಗ ನಿನ್ನ ಜೊತೆ ಮದುವೆ ಮಾಡಿಕೊಡೋದಕ್ಕೆ ಅವರ ಅಪ್ಪ ಅಮ್ಮ ಒಪ್ತಾರಾ..ಹೇಳು..

ಕಿಶನ್:ಗೊತ್ತಿಲ್ಲಮ್ಮಾ..ಅದೇ ನಾಳೆ ಗೊತ್ತಾಗುತ್ತದೆ...

ಅಪ್ಪ:‌ಬೇರೆಲ್ಲೂ ಅವಳ ಜಾತಕ ಕೊಟ್ಟಿಲ್ಲ ತಾನೇ..ಎಲ್ಲೋ ಬೇರೆ  ಮೊದಲೇ ಕೊಟ್ರೆ ನಾವು ಕೇಳೋದು ತಪ್ಪು..

ಕಿಶನ್ : ಇತ್ತೀಚೆಗೆ ತುಂಬಾ ಡಲ್ ಆಗಿದಾಳೆ.ಬೇರೆ ಹುಡುಕ್ತಾ ಇದ್ದಾರೆ ಅಂತ..ಬೇಗ ಮನೆ ಕಡೆ ಬನ್ನಿ..ಅಂತಿದ್ದಳು..

ಮೇದಿನಿಯ ಪತಿ:ಓಹೋ..ಭಾವಿಪತಿಯನ್ನು ಈಗಲೇ ಹೆದರಿಸಿ ಬೇಗ ಬರೋ ಹಾಗೆ ಮಾಡಿದಾಳೆ...ಭಾವ ...ಬೆಣ್ಣೆ ಮಾತಿಗೆ ಕರಗೋದ್ರಿ...

ಅಂದಾಗ ಎಲ್ಲರೂ ಗೊಳ್ಳೆಂದು ನಕ್ಕರು.. ಕಿಶನ್ ಮಾತ್ರ ಮೈತ್ರಿಯನ್ನೇ ನೆನಪಿಸಿಕೊಳ್ಳುತ್ತಿದ್ದ ...


   ಕಿಶನ್ ರೂಮಿನ ಒಳಗೆ ಹೋಗಿ ತನ್ನ ಮೊಬೈಲ್ ನಿಂದ ಒಂದು ಫೊಟೋ ಆಯ್ದು ಅಮ್ಮನ ಮೊಬೈಲ್ ಗೆ ಕಳುಹಿಸಿದ..ಮತ್ತೆ ತನ್ನ ಮೊಬೈಲ್ ಸೀಕ್ರೆಟ್ ಲಾಕ್ ಹಾಕಿಬಿಟ್ಟ..

ಅಮ್ಮನ ಮೊಬೈಲಿನಲ್ಲಿದ್ದ ಫೊಟೋ ಎಲ್ಲರಿಗೂ ತೋರಿಸಿದ.."ಭಾವ ನಿಮ್ಮ ಸೆಲೆಕ್ಷನ್ ಸೂಪರ್" ಎಂದು ಭಾವಂದಿರು ಹೊಗಳಿದ್ದೇ ಹೊಗಳಿದ್ದು..
"ಅತ್ತಿಗೆ ಎಷ್ಟು ಕಲರ್ ಇದ್ದಾರೆ "ಎಂದು ತಂಗಿಯರಿಬ್ಬರೂ ಬೆರಗುಗಣ್ಣಿನಿಂದ ನೋಡುತ್ತಿದ್ದರು.. ಮಮತಾ "ಸೊಸೆಯಾಗುವವಳು ಲಕ್ಷಣವಾಗಿ ಇದ್ದಾಳೆ ಮಗ..ನಮ್ಮ ಮನೆಗೆ  ಹೊಂದಿಕೊಳ್ಳುವಂತಹ ಹುಡುಗಿಯಂತೆ ಕಾಣುತ್ತಿದ್ದಾಳೆ.. ನಿನಗೆ ತಕ್ಕಂತಿದ್ದಾಳೆ.."ಎಂದಾಗ ಕಿಶನ್ ನ ಮುಖ ಅರಳಿತ್ತು..

ಅಪ್ಪ ನೋಡಿದರು.. ಅಪ್ಪಾ ಏನು ಹೇಳ್ತಾರೆ ಕಾಯ್ತಾ ಇದ್ದ ಕಿಶನ್.. ಅಪ್ಪಾ ಏನೂ ಹೇಳಲೇಯಿಲ್ಲ.. "ಯಾಕಪ್ಪಾ ಏನೂ ಹೇಳ್ತಾ ಇಲ್ಲ "ಅಂತ ಕೇಳಿದ ಕಿಶನ್..

"ಹೇಗೆ ಹೇಳೋಕಾಗುತ್ತೆ ಮಗ" ಎಂದರು..

"ಎಲ್ಲರೂ ಹೇಳಿದಂಗೆ ನೀವೂ ಅನಿಸಿದ್ದನ್ನು ಹೇಳಿ"

ಎಂದಾಗ ನಸುನಗುತ್ತಾ ಮಡದಿಯತ್ತ ನೋಡಿದರು..

"ಏನ್ರೀ ನನ್ನನ್ನು ಹಾಗೆ ನೋಡ್ತಾ ಇದೀರಾ.."

"ಏನಿಲ್ಲ ಕಣೇ.."

"ಅಪ್ಪಾ ಹೇಳೀಪ್ಪಾ.." ಎಲ್ಲರೂ ದನಿಗೂಡಿಸಿದರು..

"ನಂಗೆ ನನ್ನ ಹೆಂಡ್ತಿಯ ಮುಂದೆ ಬೇರೆ ಹೆಣ್ಮಕ್ಕಳನ್ನು ಹೊಗಳೋ ಅಭ್ಯಾಸ ಇಲ್ಲ ಮಕ್ಕಳೇ.."

ಅಂದಾಗ ಎಲ್ಲರೂ ಜೋರಾಗಿ ನಕ್ಕರು.."ಅಪ್ಪ ಈಗಲೂ ಅಮ್ಮನ ಎಷ್ಟೊಂದು ಪ್ರಿತಿಸ್ತಿದಾರೆ .. ಈಗಲೂ ಅಮ್ಮನೇ ಹೀರೋಯಿನ್ ಅಪ್ಪನಿಗೆ" ಎಂದು ಕಿಶನ್ ಹೇಳಿದಾಗ ಅಮ್ಮನ ಮುಖ ನಾಚಿ ಕೆಂಬಣ್ಣಕ್ಕೆ ತಿರುಗಿತ್ತು.. "ಅಜ್ಜಿ ಆಗಿದೀನಿ ಇನ್ನೂ ಏನೋ ನಿಮ್ದೆಲ್ಲಾ.."ಎಂದರೆ

"ನಿಂಗೆ ವಯಸ್ಸಾಯ್ತಾ..ನೋ..ನೋ..ನೀನಿನ್ನೂ ಹದಿನೆಂಟರ ಚೆಲುವೆ .."ಎಂದು ಅಪ್ಪ ಅಂದಾಗ

ಎಲ್ಲರಿಗೂ ಅಪ್ಪ ಅಮ್ಮನ ಜೀವನ ಪ್ರೀತಿ ಇಷ್ಟವಾಯಿತು.. ಕಿಶನ್ ಮೈತ್ರಿಯನ್ನು ಅದೇ ಸ್ಥಾನದಲ್ಲಿ ಕಲ್ಪಿಸಿಕೊಂಡು ಕನಸು ಕಾಣತೊಡಗಿದನು...



ಮುಂದುವರಿಯುವುದು...

✍️... ಅನಿತಾ ಜಿ.ಕೆ.ಭಟ್.
19-02-2020.







2 comments: