ರಾತ್ರಿ 'ಶಾಸ್ತ್ರಿನಿವಾಸ'ವಿಶೇಷವಾಗಿ ಕಳೆಗಟ್ಟಿತ್ತು.ತಡರಾತ್ರಿಯವರೆಗೂ ಹರಟೆ ನಗು ಮುಂದುವರಿದಿತ್ತು.ಹಿರಿಯರೆಲ್ಲ ಸೇರಿ ಹಳ್ಳಿಯ ಸಂಗತಿಗಳು ಮತ್ತು ಪೇಟೆಯ ಸಂಗತಿಗಳನ್ನು ಪರಸ್ಪರ ಹಂಚಿಕೊಂಡರು.ಮಕ್ಕಳೆಲ್ಲ ತಮ್ಮ ಶಾಲೆ ,ಕಾಲೇಜು,ಸಹಪಾಠಿಗಳ ವಿಚಾರವಾಗಿ ಹರಟೆಹೊಡೆದರು.ಶಂಕರ ಶಾಸ್ತ್ರಿಗಳ ಕುಟುಂಬ ಬೆಂಗಳೂರಿಗೆ ತೆರಳಲು ಎರಡೇ ದಿನಗಳು ಬಾಕಿಯಿದ್ದವು.ಹನ್ನೆರಡು ಗಂಟೆ ಹಳೆಯ ಗೋಡೆ ಗಡಿಯಾರದಲ್ಲಿ ಢೈಯ್...ಢೈಯ್... ಎಂದು ಹೊಡೆದಾಗ "...ಇನ್ನು ಸಾಕು ಮಲಗೋಣ.."ಎಂದಾಗಲೇ ಒಬ್ಬೊಬ್ಬರಾಗಿ ಎದ್ದು ಮಲಗಲು ಹೊರಟರು.
ಬೆಳಿಗ್ಗೆ ಶಂಕರ ಶಾಸ್ತ್ರಿಗಳ ಕುಟುಂಬ ನೆಂಟರ ಮನೆಗೆ ಮದುವೆಯ ಸಂಭ್ರಮದಲ್ಲಿ ಪಾಲ್ಗೊಳ್ಳಲು ತೆರಳುವುದು ನಿಗದಿಯಾಗಿತ್ತು.ಬನ್ನಿ ಎಲ್ಲರೂ ಜೊತೆಯಾಗಿ ಹೋಗೋಣ ಎಂದು ಶಂಕರ ಒತ್ತಾಯ ಮಾಡಿದರು.ಭಾಸ್ಕರ ರಾಯರು "ನಾವೆಲ್ಲ ಆಗಾಗ ಹೋಗುತ್ತಿರುತ್ತೇವೆ.ನೀವು ಹೋಗಿ ಬನ್ನಿ" ಎಂದು ಹೇಳಿದರು.ಶ್ಯಾಮಶಾಸ್ತ್ರಿಗಳು, ಮಹಾಲಕ್ಷ್ಮಿ ಅಮ್ಮ ತಾವು ಮಗನೊಂದಿಗೆ ಹೊರಟರು.ಮನೆಯಲ್ಲಿ ಅಪರೂಪಕ್ಕೆ ಭಾಸ್ಕರ ಶಾಸ್ತ್ರಿಗಳು ಪತ್ನಿ ಮಕ್ಕಳು ಉಳಿದಿದ್ದರು.. ಭಾಸ್ಕರ ಶಾಸ್ತ್ರಿಗಳು ಮಂಗಳಮ್ಮನಲ್ಲಿ ಮಾತನಾಡುತ್ತಾ ಮನೆಯಲ್ಲೇ ಕಾಲಕಳೆದರು.ತೋಟದ ಕೆಲಸಕ್ಕೆ ಬಂದಿದ್ದ ಸೇಸಪ್ಪನಿಗೆ ಮನೆಯಿಂದಲೇ ಕೆಲಸ ಹೇಳಿ ತಾವು ಮಡದಿ ಮಕ್ಕಳೊಂದಿಗೆ ಕಳೆದರು.. ಯಾವತ್ತೂ ಶಿಸ್ತಿನಿಂದ ಇರುತ್ತಿದ್ದ ಅಪ್ಪ ಇಂದು ಸಮಾಧಾನದಿಂದ ಇದ್ದುದು ಮಕ್ಕಳಿಗೂ ಸಂತಸ ತಂದಿತ್ತು..
ಸುನಿಧಿಯ ಕರೆ ಬಂದಿತ್ತು."ನಿಮ್ಮ ಮನೆಯ ಸಮೀಪವೇ ಬರೋದಿದೆ.ಮೈತ್ರಿ ಮನೇಲಿದೀಯಾ.." ಎಂದು ಕೇಳಿದಾಗ "ಹೌದು ಕಣೇ ಮನೇಲಿ ಇದೀವಿ.. ಬನ್ನಿ" ಎಂದಳು.. ಹತ್ತು ಗಂಟೆಗೆ ಸುನಿಧಿ ತನ್ನ ತಂದೆ ತಾಯಿ ತಂಗಿಯೊಂದಿಗೆ ಶಾಸ್ತ್ರಿನಿವಾಸಕ್ಕೆ ಬಂದಿಳಿದಳು.."ಮದುವೆಯ ಕರೆಯೋಲೆ ಹಂಚುತ್ತಾ ..ಈ ಊರಿಗೆ ಬಂದಾಗ ಮೈತ್ರಿಯ ಮನೆಯೂ ಇದೇ ಬದಿ ಅಲ್ವಾ.. ಮನೆಗೆ ಬಂದೇ ಕರೆಯೋಣ ಅಂತ..ಬಂದ್ವಿ"ಎಂದಾಗ
"ಒಳ್ಳೇದಾಯ್ತು ಬಂದಿದ್ದು " ಎಂದು ಎಲ್ಲರೂ ಪ್ರೀತಿಯಿಂದ ಉಪಚರಿಸಿದರು..ಮೈತ್ರಿಯ ಹಳೆಮನೆಯನ್ನು ನೋಡಿ ಅಚ್ಚರಿಪಟ್ಟರು.ಸುನಿಧಿಯ ತಂಗಿ ದನದ ಕೊಟ್ಟಿಗೆಯಲ್ಲಿ ಛಂಗನೆ ನೆಗೆಯುತ್ತಿದ್ದ ಪುಟ್ಟ ಕರುವನ್ನು ಕಂಡು ಖುಷಿ ಪಟ್ಟಳು.ಅವಳು ಬೈಹುಲ್ಲು ಕೊಡಲು ನೋಡಿದಾಗ ತಿನ್ನದೆ ಮತ್ತಷ್ಟು ನೆಗೆಯಿತು.. ಸಂತೋಷಪಟ್ಟು ಕರುನೆಗೆಯುವುದನ್ನು ವಿಡಿಯೋ ಮಾಡಿಕೊಂಡಳು.
ಮಾತಿನ ಮಧ್ಯೆ ಮೈತ್ರಿ ಯ ಮದುವೆ ವಿಚಾರ ಕೂಡಾ ಬಂತು.. "ಕೇಶವ್ ಅನ್ನುವ ಹುಡುಗನಿಗೆ ಜಾತಕ ಕೊಟ್ಟಿದ್ದೇವೆ" ಎಂದಾಗ ಸುನಿಧಿ ಸ್ವಲ್ಪ ಗಲಿಬಿಲಿಗೊಂಡಳು.ಹಾಂ..ಕೇಶವ್..ಕಿಶನ್..
ಕಿಶನ್ ಅಂದದ್ದೇ ನನಗೆ ಕೇಶವ್ ಎಂದು ಕೇಳಿಸಿರಬಹುದಾ..ಅಲ್ಲಲ್ಲ ಅಂಕಲ್ ಹೇಳಿದ್ದು ಕೇಶವ್ ಅಂತಾನೇ..ಮೈತ್ರಿ ಕಿಶನ್ ನ ಲವ್ ಮಾಡಿದ್ದು ಗೊತ್ತು..ಮನೆಯವರಿಗೆ ಹೇಳಿರಲಿಲ್ಲವಾ .. ಅಥವಾ ನನ್ನಂತೆ ಬ್ರೇಕಪ್ ಮಾಡಿಕೊಂಡು ಬೇರೆ ಮದುವೆಗೆ ಒಪ್ಪಿಕೊಂಡಳಾ..ಒಂದೂ ಅರ್ಥವಾಗುತ್ತಿಲ್ಲ.. ಅಂಕಲ್ ನ ಕೇಳುವುದು ಬೇಡ.. ನಾಳೆ ಮೈತ್ರಿ ಕಾಲೇಜಲ್ಲಿ ಸಿಗುತ್ತಾಳಲ್ಲ ..ಆಗ ಕೇಳೋಣ...
ಸುನಿಧಿಯ ಅಮ್ಮನೂ ಮೈತ್ರಿಯ ಅಮ್ಮನೂ ಮದುವೆಯ ಸೀರೆ , ಅಲಂಕಾರದ ಬಗ್ಗೆ ಮಾತನಾಡಿಕೊಂಡರು.."ಮಗಳ ಅಲಂಕಾರಕ್ಕೆಂದು ಮೊದಲೇ ಒಬ್ಬ ಮದುಮಗಳ ಸಿಂಗರಿಸುವುದರಲ್ಲಿ ಅನುಭವಸ್ಥೆ ಬ್ಯೂಟಿಷಿಯನ್ ನ ಗೊತ್ತು ಮಾಡಿದ್ದೇವೆ.ಹೆಚ್ಚಿಲ್ಲ ಎಲ್ಲಾ ಸೇರಿ ಐವತ್ತು ಸಾವಿರ ಆಗಬಹುದು ಎಂದಿದ್ದಾರೆ.. ಇಪ್ಪತ್ತೈದು ಸಾವಿರ ಈಗಲೇ ನೀಡಿದ್ದೇವೆ " ಅಂದಾಗ ಹೌಹಾರಿದರು ಮಂಗಳಮ್ಮ.."ನಮ್ಮ ಮನೆಯಲ್ಲಿ ಸಂಬಂಧಿಕರಲ್ಲಿ ಯಾರಾದರೂ ತಿಳಿದವರು ಅಲಂಕಾರ ಮಾಡುವ ಪದ್ಧತಿ ಎಂದರು.".....
"ಹೌದೇ.. ಸುಲಭ ಆಯ್ತು.. ಖರ್ಚು ಕಡಿಮೆ"..ವರದಕ್ಷಿಣೆ ವಿಚಾರವೂ ಬಂತು.. ಮೂವತ್ತು ಲಕ್ಷ ವರದಕ್ಷಿಣೆ ಅಂತೆ ಇಂಜಿನಿಯರ್ ವರನಿಗೆ.. "ಅಬ್ಬಾ.. " ಎಂದರು ಮಂಗಳಮ್ಮ..
"ಮದುವೆ ಈಗ ಬೇಡ ಎಂದು ಹೇಳುತ್ತಿದ್ದ ಮಗಳು ಮದುವೆಗೆ ಒಪ್ಪಿದ್ದೇ ನಮಗೆ ಸಂತಸದ ವಿಚಾರ " ಎಂದ ಸುನಿಧಿಯ ತಾಯಿ..
"ಮದುವೆಗೆ ಎಲ್ಲರೂ ಬರಲೇಬೇಕು ಎಂದು ಆಮಂತ್ರಣ ನೀಡಿದರು"..ಸುನಿಧಿಯ ತಂದೆ.. "ಆಯ್ತು..ಬರೋಣ" ಎಂದು ಒಪ್ಪಿದ ಭಾಸ್ಕರ ಶಾಸ್ತ್ರಿಗಳ ಕುಟುಂಬ.. ಹೋಗುವಾಗ ಸುನಿಧಿಗೆ ಕುಂಕುಮ ಕೊಟ್ಟರು ಮಂಗಳಮ್ಮ..ಮನೆಯಂಗಳದ ಬದಿಯಲ್ಲಿದ್ದ ಗುಲಾಬಿಯ ಗಿಡಗಳ ಸಾಲಿನ ಮೇಲೆ ಕಣ್ಣು ಬಿತ್ತು ಸುನಿಧಿಯ ತಂಗಿಗೆ.."ಹೂ ಬೇಕಾ" ಎಂದರು ಮಂಗಳಮ್ಮ.. "ಹೂಂ ಆಂಟಿ " ಎಂದು ಚಂದದ ಕೆಂಗುಲಾಬಿ ಹೂವನ್ನು ಕೊಯ್ದಳು.. ಎಲ್ಲರೂ ಹೊರಟರು...
ಮಂಗಳಮ್ಮ..."ರೀ.. ಇವತ್ತು ಬರೀ ಅನ್ನ ಸಾರು ಸಾಕಾ.. ದಿನಾ ತುಂಬಾ ಅಡುಗೆ ಮಾಡಿ ನನಗೂ ಸಾಕಾಗಿದೆ..ಇವತ್ತೊಂದು ದಿನ ರೆಸ್ಟ್ ಕೊಡಿ.."
ಅಂದಾಗ "ಸರಿ... ಸಿಂಪಲ್ ಊಟ... ಆಮೇಲೆ ಒಂಚೂರು ನಿದ್ದೆ... ಇಷ್ಟಿದ್ದರೆ ನಂಗೆ ಸಂಡೇ ಗಮ್ಮತ್ತು..."ಎಂದರು.
ಭಾಸ್ಕರ ರಾಯರು ಅಡುಗೆ ಮನೆಯಲ್ಲಿ "ಮಂಗಳಾ.. ಮಂಗಳಾ.." ಅನ್ನುತ್ತಾ ಹರಟುತ್ತಿದ್ದರು.. ಊಟಕ್ಕೆ ತಯಾರು ಮಾಡಲು ತಾವೂ ಸಹಕರಿಸಿದರು.. "ಮೊಸರು ಫ್ರಿಡ್ಜ್ ನಲ್ಲಿ ಇದೆ.ಸ್ವಲ್ಪ ಹೊರಗಿಡ್ತೀರಾ"..ಎಂದ ಮಡದಿಯ ಮಾತನ್ನು ಕೇಳಿದ ರಾಯರು ಉಪಕಾರ ಮಾಡಲು ಹೊರಟರು.ಫ್ರಿಡ್ಜ್ ಬಾಗಿಲು ತೆರೆದು ಮೊಸರು ಹೊರತೆಗೆಯಬೇಕೆಂದು ಹೊರಟವರು ಎದುರು ಗ್ಲಾಸ್ ನಲ್ಲಿಟ್ಟಿದ್ದ ಕೆನೆಯನ್ನು ಬೀಳಿಸಿಬಿಟ್ಟರು.."ಅಲ್ಲಾರೀ.. ನೀವು ಉಪಕಾರ ಮಾಡೋದಾ..ಉಪದ್ರ ಕೊಡೋದಾ.."
"ಉಪಕಾರ ಮಾಡೋಣ ಅಂತಲೇ ಹೊರಟೆ.."
"ಗಂಡಸರು ಅಡುಗೆಮನೆಗೆ ಬಂದರೆ ಹೀಗೇನೇ..ಉಪಕಾರ ಅಂತ ಐದು ನಿಮಿಷ ಕೆಲಸ ಮಾಡಿದರೆ ಮತ್ತೆ ಅಡುಗೆಮನೆ ಯಥಾಸ್ಥಿತಿ ಗೆ ತರೋದಕ್ಕೆ ಕಾಲುಗಂಟೆ ಬೇಕು ನಮಗೆ.."
"ಸುತ್ತ ಮುತ್ತ ಯಾರೂ ಇಲ್ಲ..ನಾನೂ ನೀನೂ ಇಲ್ಲಿ ಎಲ್ಲ...ಅಂತ ಹೇಳ್ಕೊಂಡು ಮಡದಿಗೆ ಸಹಾಯ ಮಾಡೋದೂ ತಪ್ಪಾ...ಹೇಳು... ಅಪರೂಪದಲ್ಲಿ ಅಪರೂಪ..."
"ಅಲ್ಲಪ್ಪಾ..ತಪ್ಪಲ್ಲ..ಎಲ್ಲಾ ನಂದೇ ತಪ್ಪು.. ಕೆನೆ ಹಿಂದೆ ಇಡದೆ ಮುಂದೆ ಇಟ್ಟದ್ದು ನನ್ನದೇ ತಪ್ಪು..."
"ಇರ್ಲಿ ಬಿಡು..ನಂಗೆ ಕ್ಲೀನ್ ಮಾಡಲೂ ಬರುತ್ತೆ..ನೋಡ್ತಾಯಿರು..."
ಎನ್ನುತ್ತಾ ರಾಯರು ಒಂದು ಬಟ್ಟೆಯ ತುಂಡು ತಂದು ಎಲ್ಲವನ್ನೂ ಸ್ವಚ್ಛಗೊಳಿಸತೊಡಗಿದರು.."ರೀ.. ಬಿಡಿ ನಾನೇ ಮಾಡ್ತೀನಿ.."ಎಂದು ಮಂಗಳಾ ರಾಯರ ಕೈಯಿಂದ ಬಟ್ಟೆ ತೆಗೆದುಕೊಂಡು ಸ್ವಚ್ಛಗೊಳಿಸಿದರು..
"ನಿನ್ನಷ್ಟು ಅಚ್ಚುಕಟ್ಟಾಗಿ ಕೆಲಸ ನಿಭಾಯಿಸಲು ನನಗೆ ಬರುವುದಿಲ್ಲ ಕಣೇ..."ಎಂದ ರಾಯರ ನೋಟ ಮಡದಿಯನ್ನು ಕೆಣಕುವಂತಿತ್ತು..
"ನೀವು ಹೋಗಿ ಮಾರಾಯ್ರೆ...ಊಟಕ್ಕಾಗುವಾಗ ಕರೀತೀನಿ..."ಎಂದರೂ ಕದಲದ ರಾಯರು ಇಂದು ಪಕ್ಕಾ ಅಮ್ಮಾವ್ರ ಗಂಡನಂತಿದ್ದರು..
"ನನ್ನನ್ನೇ ಬೈತೀಯಾ ಕಣೇ..."ಎಂದು ಹತ್ತಿರ ಬಂದ ರಾಯರು ಮಡದಿಯ ಕಣ್ಣಲ್ಲಿ ಕಣ್ಣಿಟ್ಟು ಕೇಳಿದರೆ ಮಂಗಳಾರ ಕೆನ್ನೆ ರಂಗೇರಿತ್ತು..ತನ್ನ ಕೆಲಸದಲ್ಲಿ ಮುಳುಗಿದಂತೆ ನಟಿಸಿದರೆ..ಹಿಂದಿನಿಂದ ರಾಯರ ತೋಳುಗಳು
ಮಡದಿಯ ಸೊಂಟವನ್ನು ಬಳಸಿದ್ದವು..
"ಹೊತ್ತು ಗೊತ್ತು ಇಲ್ವೇನ್ರಿ.. ನಿಮಗೆ..." ಎಂದು ಮಡದಿ ಅಂದರೆ
" ಛಾನ್ಸ್ ಸಿಕ್ಕಿದರೆ ನಾನು ಬಿಡುವವನೇ ಅಲ್ಲ.."
"ಥೂ.. ಹೋಗಿ ನೀವು ..ಮದುವೆ ವಯಸ್ಸಿಗೆ ಬಂದ ಮಗಳಿದ್ದಾಳೆ ಅನ್ನುವ ಪರಿಜ್ಞಾನ ಬೇಡವೇನ್ರಿ..."
ಎಂದಾಗ ಇರು.. ಹೇಗಿದ್ರೂ ನಿಂಗೆ ತಪ್ಪಿಸ್ಕೊಳ್ಳೋಕೆ ಆಗಲ್ಲ.. ಎಂದು ಮನದಲ್ಲೇ ಅಂದುಕೊಳ್ಳುತ್ತಾ ಊಟಕ್ಕೆ ಎಲೆಯಿಟ್ಟರು..
ಗಂಡ ಮಕ್ಕಳೊಂದಿಗೆ ಮಂಗಳಮ್ಮನೂ ಅಪರೂಪಕ್ಕೆ ಊಟಕ್ಕೆ ಕುಳಿತರು... ಎಂದಿನಿಂದ ಇಂದು ನಾಲ್ವರಲ್ಲೂ ಸಮಾಧಾನವಿತ್ತು.. ಮನಸ್ಸು ಪ್ರಶಾಂತವಾಗಿತ್ತು..ಅಪ್ಪ ಅಮ್ಮ ಇಬ್ಬರು ಮಕ್ಕಳು .. ಸುಂದರ ಕುಟುಂಬ..ಒಬ್ಬೊರನ್ನೊಬ್ಬರು ಅರ್ಥಮಾಡಿಕೊಂಡು ಯಾವತ್ತೂ ಬದುಕಿದರೆ ಎಷ್ಟು ಚೆನ್ನ..!!ಎಂದುಕೊಂಡರು ಮಂಗಳಮ್ಮ..
ಮಧ್ಯಾಹ್ನ ಊಟ ಮಾಡಿ ಎಲ್ಲರೂ ನಿದ್ದೆ ಮಾಡಿದ್ದರೆ ಮಹೇಶ್ ಮಾತ್ರ ಮೊಬೈಲ್ ಹಿಡಿದು ಕೂತಿದ್ದ.ಮೈತ್ರಿ ನಿನ್ನೆ ರಾತ್ರಿ ನಿದ್ದೆಗೆಟ್ಟು ಇವತ್ತು ಚೆನ್ನಾಗಿ ನಿದ್ದೆಗೆ ಜಾರಿದ್ದಳು..ಮಂಗಳಮ್ಮನಿಗಂತೂ ಹತ್ತು ದಿನದಿಂದ ಶಂಕರನ ಕುಟುಂಬ ಬರುವುದೆಂದು ಕೆಲಸದ ಮೇಲೆ ಕೆಲಸ.ಬಿಡುವಿಲ್ಲ . ಇವತ್ತು ಚೆನ್ನಾಗಿ ನಿದ್ದೆ ಮಾಡಬೇಕು .. ಸಂಜೆ ಎಲ್ಲರೂ ಬರುವುದರೊಳಗೆ ಎಂದು ಎರಡು ಗಂಟೆಗೆ ರೂಮು ಸೇರಿದ್ದರು.
ಸುಮಾರು ಮೂರು ಗಂಟೆಯ ಹೊತ್ತು.ಮನೆಯ ಅಂಗಳದ ತುದಿಯಲ್ಲಿದ್ದ ಗೇಟುತೆರೆದ ಸದ್ದಾಯಿತು.ಈ ಹೊತ್ತಲ್ಲಿ ಯಾರಿರಬಹುದು.ಎಂದು ಮಹೇಶ್ ಚಾವಡಿಯಿಂದ ಹೊರಗಿಣುಕಿದ.ಮನೆಯ ಮುಂದೆ ಕಾರು ಬಂದು ನಿಂತಿತು.ಇಬ್ಬರು ಇಳಿದು ಮನೆಯತ್ತ ಬಂದರು.ಅಪರಿಚಿತ ಮುಖ.ಇದುವರೆಗೆ ಎಲ್ಲೂ ಕಂಡ ನೆನಪಂತೂ ಇಲ್ಲ..ದಾರಿತಪ್ಪಿ ಬಂದಿರಬಹುದೇ??..ಎಂಬ ಯೋಚನೆ ಮಹೇಶನದು..
ಬಂದವರು:ಭಾಸ್ಕರ ಶಾಸ್ತ್ರಿಗಳ ಮನೆಯಲ್ವಾ..
ಮಹೇಶ:ಹೌದು
ಬಂದವರು:ಶಾಸ್ತ್ರಿಗಳು ಇದ್ದಾರಾ..
ಮಹೇಶ್:ಇದ್ದಾರೆ .. ಅಪ್ಪನನ್ನು ಕರೆಯುತ್ತೇನೆ.. ನೀವು ಕುಳಿತು ಕೊಳ್ಳಿ.. ಬಾಯಾರಿಕೆ ಏನಾದರೂ ಬೇಕಾ..
ಬಂದವರು:ಬೇಡ..
ಮಹೇಶ್ ಅಪ್ಪನಿಗೆ ಸುದ್ದಿ ಮುಟ್ಟಿಸಿದಾಗ ಅವರು ಯಾರೋ ಬಂದದ್ದು ತಿಳಿದು ಫ್ರೆಶ್ ಆಗಿ ಬರಲು ತೆರಳಿದ್ದರು.. ಮಹೇಶ್ ನೀರು ತಂದು ಟೀಪಾಯಿ ಮೇಲೆ ಇಟ್ಟ..
ಭಾಸ್ಕರ ಶಾಸ್ತ್ರಿಗಳು ಚಾವಡಿಗೆ ಬಂದು ಅತಿಥಿಗಳನ್ನು ಮಾತನಾಡಿಸಿದರು.ಬಂದವರು ತಮ್ಮ ಪರಿಚಯ ಮಾಡಿಕೊಂಡರು.ಇವರು ಬಂದ ಉದ್ದೇಶ ಏನಿರಬಹುದು ಎಂದು ಯೋಚಿಸಿದರು ಭಾಸ್ಕರ ಶಾಸ್ತ್ರಿಗಳು..
ಗಣೇಶ ಶರ್ಮ : ಇವನು ನನ್ನ ಮಗ ಕಿಶನ್..
ಭಾಸ್ಕರ:ಹೌದಾ.. ಏನು ಮಾಡ್ತಾ ಇದ್ದಾನೆ..
ಗಣೇಶ:ಬೆಂಗಳೂರಲ್ಲಿ ಇನ್ಫೋಸಿಸ್ ನಲ್ಲಿ ಉದ್ಯೋಗದಲ್ಲಿದ್ದಾನೆ.ಇಂಜಿನಿಯರಿಂಗ್ ಮಂಗಳೂರಲ್ಲೇ ಓದಿರೋದು..
ಭಾಸ್ಕರ:ಓಹೋ..ಒಳ್ಳೆದಾಯ್ತು..
ಗಣೇಶ:ನಿಮ್ಮ ಮಗಳು ಮೈತ್ರಿ ಯ ಬಗ್ಗೆ ವಿಚಾರಿಸೋಣ ಅಂತ ಬಂದಿದ್ದೇವೆ..
ಭಾಸ್ಕರ:ಓಹೋ..ಹಾಗಾ..
ಗಣೇಶ:ಹೌದು .. ಮಗನಿಗೆ ಹೆಣ್ಣು ಹುಡುಕಲು ಆರಂಭಿಸಿದ್ದೇವೆ..
ಭಾಸ್ಕರ:ಸರಿ..ಇಲ್ಲಿಗೆಂದೇ ಬಂದಿರುವಿರೋ.. ಅಲ್ಲಾ..
ಈ ಕಡೆ ಬಂದಿದ್ದಾಗ ಯಾರಾದರೂ ಹೇಳಿ ತಿಳಿಯಿತೋ..
ಗಣೇಶ:ನಿಮ್ಮಲ್ಲಿಗೆಂದೇ ಬಂದಿದ್ದೇವೆ..ನಮ್ಮ ಮಗ ಕಿಶನ್ ..ಮೈತ್ರಿಯ ಪರಿಚಯ ಇದೆ ಅನ್ನುತ್ತಿದ್ದ.. ಆದ್ದರಿಂದ ಪರಿಚಯದ ಹುಡುಗಿಯನ್ನೇ ಕೇಳೋಣ ಮೊದಲು ಎನ್ನುವುದು ನಮ್ಮ ಆಲೋಚನೆ...
ಭಾಸ್ಕರ:ಹಾಂ.... ಕಿಶನ್ ನಿನಗೆ ಮೈತ್ರಿ ಹೇಗೆ ಪರಿಚಯ..????
ಕಿಶನ್ ಇಂತಹ ಪ್ರಶ್ನೆ ಬರಬಹುದೆಂದು ನಿರೀಕ್ಷೆಯಲ್ಲಿದ್ದ...
ಮಹೇಶ್ ಇವರ ಮಾತುಕತೆಯನ್ನು ಕೇಳಿಸಿಕೊಳ್ಳುತ್ತಿದ್ದ..ಅವನ ಅನುಮಾನ ನಿಜವಾಯಿತು.ಆದರೂ 'ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು' ಎಂಬ ಗಾದೆಮಾತಿದೆ..ನೋಡೇ ಬಿಡೋಣ ಎಂದು ಸೀದಾ ಅಕ್ಕನ ಕೋಣೆಗೆ ಲಗ್ಗೆಯಿಟ್ಟ.. ಅವಳು ಗಮ್ಮತ್ತು ನಿದ್ದೆಯಲ್ಲಿದ್ದಳು.. ಮೆಲ್ಲನೆ ಅವಳ ಫೋನ್ ತೆಗೆದುಕೊಂಡು ಇಶಾ ಅನ್ನುವ ನಂಬರ್ ಗೆ ಕರೆ ಮಾಡಿದ.ಹೊರಗೆ ಕುಳಿತ ಕಿಶನ್ ನ ಮೊಬೈಲ್ "ಮತ್ತೆ ಮತ್ತೆ ಬರಬೇಕು ಹುಚ್ಚು ಸಂದೇಶ.. ಕದ್ದುಮುಚ್ಚಿ ಓದೋಕೆ ಹೆಚ್ಚೇ ಸಂತೋಷ.."ಎಂದು ಮೆದುವಾಗಿ ಹಾಡಿತು... ಅಲ್ಲಿಗೆ ಇಶಾ ಅಂದರೆ ಹುಡುಗ..ಅಕ್ಕನ ಬಾಯ್ ಫ್ರೆಂಡ್ ಅನ್ನೋದು ಪಕ್ಕಾ..
ಕೀಟಲೆ ಮಹೇಶ್ ಸುಮ್ಮನಿರುವನೇ....???
ಬಂದಳೋ ಬಂದಳು
ಗೆಳತಿ ಇಶಾ ಬಂದಳು...
ಇಶಾಳಿಗೆ ಕರೆಮಾಡಲು
ಕಿಶನ್ ಹಲೋ ಎಂದನು...
ಬಂದಳೋ ಬಂದಳು
ಗೆಳತಿ ಇಶಾ ಬಂದಳು... ಎಂದು ಅಕ್ಕನ ಕಿವಿಯಲ್ಲಿ ಒದರಿದ.ಒಮ್ಮೆಲೇ ಬೆಚ್ಚಿಬಿದ್ದ ಅಕ್ಕನನ್ನು "ಅಪ್ಪ ಕಿಶನ್ ಗೆ ಹಿಗ್ಗಾಮುಗ್ಗಾ ಬೈದಿದ್ದಾರೆ"...ಎಂದ.".ಹೌದೇನೋ.."ಎಂದ ಮೈತ್ರಿಯ ಮುಖ ಕಪ್ಪಿಟ್ಟಿತ್ತು..
ಅಯ್ಯೋ ..ಪಾಪ ಅಕ್ಕಾ ಎಂದು ಕೊಂಡು.. "ಇಲ್ಲಾ ಅಕ್ಕಾ" ಎಂದ..
ಮೈತ್ರಿ ಬೇಗನೆ ಹೋಗಿ ಫ್ರೆಶ್ ಆಗಲು ಹೋಗಬೇಕಾದ್ದು ಚಾವಡಿಯಿಂದಲೇ ..ಅಲ್ಲೇ ಕಿಶನ್,ಅವನ ತಂದೆ ,ತನ್ನ ತಂದೆ ಕುಳಿತದ್ದು ನೋಡಿ ಹೊರಗೆ ಬರಲು ಆಗದೆ ಚಡಪಡಿಸಿದಳು ಮೈತ್ರಿ..
ಮಂಗಳಮ್ಮ ಆಗಲೇ ಎದ್ದು ಬಂದು ನೆಂಟರನ್ನು ಮಾತನಾಡಿಸಿ ಒಳಗೆ ಹೋದರು..ಮಗಳ ಪರಿಚಯದ ಹುಡುಗನ ಬಗ್ಗೆ ಒಳ್ಳೆಯ ಭಾವನೆ ಮೂಡಿತ್ತು ಮಂಗಳಮ್ಮನಿಗೆ.. ಮೈತ್ರಿ ಮೆಲ್ಲನೆ ರೂಮಿನಿಂದ ಹೊರಬಂದು ಒಳಗೆ ಹೋಗುವ ಧಾವಂತದಲ್ಲಿ ಕಿಶನ್ ನೆಡೆಗೆ ಒಂದು ನೋಟ ಬಿಸಾಕಿದಳು.. ಅದಕ್ಕೆ ಪ್ರತಿಯಾಗಿ ಸಿಕ್ಕ ಅವನ ತುಂಟತನದ ನೋಟ ಅವಳ ಮೈಯಲ್ಲಿ ಮಿಂಚಿನ ಸಂಚಾರಕ್ಕೆ ಕಾರಣವಾಯಿತು..
ಫ್ರೆಶ್ ಆಗಿ ಬಂದವಳೇ ಅಮ್ಮನೊಡನೆ ಜ್ಯೂಸ್ ತಯಾರಿಗೆ ಸಹಕರಿಸಿದಳು."ಜ್ಯೂಸ್ ಕೊಡಲು ನೀನೂ ಬರಬೇಕು " ಎಂದ ಮಂಗಳಮ್ಮ..
"ಬರುತ್ತೇನೆ.." ಎಂದಳು ಮೈತ್ರಿ..
ಅಂದು ಕೇಶವನ ಕಡೆಯವರು ಬಂದಾಗ ಮುಖ ಊದಿಸಿದವಳು ಇಂದು ನಾನು ರೆಡಿ ಅಂದಾಗ ಮಂಗಳಮ್ಮನಿಗೆ ಮಗಳ ಪ್ರೇಮಪ್ರಕರಣ ಅರಿವಾಗಲು ಕಷ್ಟವಾಗಲಿಲ್ಲ..
"ಹೀಗೇ ನಿತ್ಯವೂ ಮನೆಯಲ್ಲಿ ಹಾಕುವ ಕುರ್ತಾ ಧರಿಸಿ ಹೋಗೋದಾ ಜ್ಯೂಸ್ ಹಿಡಿದು..ಹೋಗು ಒಳ್ಳೆ ಬಟ್ಟೆ ಹಾಕಿ ಬಾ.."ಎಂದ ಮಂಗಳಮ್ಮ.. "ಇದು ಸಾಕಮ್ಮ..ಬಟ್ಟೆ ಹಾಕ್ಕೊಳ್ಳೋಕೆ ಮತ್ತೆ ಚಾವಡಿ ಕಡೆಗೆ ಹೋಗಬೇಕಲ್ಲ.."ಎಂದ ಮೈತ್ರಿಗೆ ಅಮ್ಮನೇ ಚೂಡಿದಾರ್ ತಂದಿತ್ತಳು..
ಬರ್ತ್ ಡೇ ದಿನದ ಚೂಡಿದಾರ್ ಧರಿಸಿ ಕೈಯಲ್ಲಿ ಜ್ಯೂಸ್ ಹಿಡಿದು .....
ಮುಂದುವರಿಯುವುದು...
✍️... ಅನಿತಾ ಜಿ.ಕೆ.ಭಟ್.
20-02-2020.
ನಮಸ್ತೇ...
ಹೆಚ್ಚಿನ ಓದಿಗಾಗಿ ಬರಹದ ಕೆಳಗಡೆ ಇರುವ'Home'ಮತ್ತು> ಸಂಕೇತಗಳನ್ನು ಬಳಸಿಕೊಳ್ಳಬಹುದು.
View web version ಎಂದಿರುವಲ್ಲಿ ಕ್ಲಿಕ್ ಮಾಡಿ follow ಎಂದಿರುವಲ್ಲಿ ಕ್ಲಿಕ್ ಮಾಡಿ ಫಾಲೋ ಮಾಡಬಹುದು.. ಧನ್ಯವಾದಗಳು 💐🙏..
👌🏻👌🏻
ReplyDelete💐🙏 ಧನ್ಯವಾದಗಳು
ReplyDelete