ಬರ್ತ್ ಡೇ ದಿನದ ಚೂಡಿದಾರ್ ಧರಿಸಿ ಕೈಯಲ್ಲಿ ಜ್ಯೂಸ್ ಹಿಡಿದು ಮೆಲ್ಲನೆ ಚಾವಡಿಗೆ ಕಾಲಿಟ್ಟಳು ಮೈತ್ರಿ.ಅಮ್ಮ ಹಿಂದಿನಿಂದ ಜೊತೆಯಾದರು.ಮಹೇಶ್ ಮೊದಲೇ ಚಾವಡಿಯ ಒಂದು ಮೂಲೆಯಲ್ಲಿ ಏನೂ ಅರಿಯದವನಂತೆ ನಿಂತಿದ್ದ..ಅವನದು ಚೇಷ್ಟೆ..ಅಕ್ಕನ ಮುಖಭಾವವನ್ನು ಗಮನಿಸಿ ಮತ್ತೆ ಗೋಳು ಹೊಯ್ದುಕೊಳ್ಳುವ ಪ್ಲಾನ್..ಮೈತ್ರಿಗೆ ಒಮ್ಮೆಲೇ ಎದೆಬಡಿತ ಜೋರಾಗಿತ್ತು.ಕಣ್ಣುಗಳು ಆ ನೋಟವನ್ನು ಎದುರಿಸಲು ಸೋತವು.ಆ ನೋಟದ ಭಾವವು ಮೈಯೊಳಗೆ ಕಂಪನದ ಅಲೆಯೆಬ್ಬಿಸಿದವು.ಮುಂಗುರುಳು ತಾನು ಹಣೆಯ ಮೇಲೆ ನಾಟ್ಯವಾಡುತ್ತಿತ್ತು.. ಕೆನ್ನೆ ಕೆಂಪೇರಿ ನಸುನಗೆಯು ಅಲಂಕರಿಸಿತು. ಎದುರೇ ಕುಳಿತಿರುವ ನಾಲ್ಕು ವರ್ಷಗಳ ಪ್ರೇಮಪೂಜಾರಿ.. ಆದರೆ ಗಂಟಲೊಣಗಿತ್ತು ಪಸೆ ಆರಿ..ಮುದ್ಗೊಂಬೆ ಮುದ್ಗೊಂಬೆ ಎಂದು ಬಾಯ್ತುಂಬಾ ಕರೆಯಬೇಕೆಂದು ಸಂದೇಶದಲ್ಲಿ ಬರೆಯುತ್ತಿದ್ದವನು ಕಂಠದಿಂದ ಸ್ವರ ಹೊರಡದೆ ಸ್ತಂಭೀಭೂತನಾಗಿದ್ದ.. ಇದೇ ಡ್ರೆಸ್ ನಲ್ಲಿನ ಅವಳ ಫೊಟೋ ನೋಡುತ್ತಾ ಅದೆಷ್ಟು ತಾಸುಗಳನ್ನು ಅವಳನ್ನು ಆರಾಧಿಸುತ್ತಾ ಕಳೆದಿದ್ದನೋ ಏನೋ.. ಅದೆಷ್ಟು ಹಾಯ್ಕುಗಳು .. ಚುಟುಕುಗಳು ...ಹುಟ್ಟಿಕೊಂಡು ಪ್ರೇಮಬಂಧವನ್ನು ಬಿಗಿಗೊಳಿಸಿದ್ದುವೋ ಏನೋ.. ಆದರೆ ಈಗ ಅದೇ ಚೆಲುವಿನ ಅರಗಿಣಿ ಕಣ್ಣ ಮುಂದೆ ಇದ್ದರೂ ಮೌನವೇ ಆವರಿಸಿದೆ.ಮೌನದ ಭಾವವನ್ನು ಓದುವ ಸೌಭಾಗ್ಯ ಇಬ್ಬರದಾಗಿದೆ.. ಮೌನವೇ ಈಗ ಹೃದಯಕ್ಕೆ ಆಪ್ತವಾಗಿದೆ..ಅವಳ ಒಂದೊಂದು ಹೆಜ್ಜೆಯ ಸದ್ದಿಗೂ ಅವನ ಹೃದಯ ತಾಳಹಾಕುತ್ತಿತ್ತು.
ಶರಬತ್ತು ನೀಡಲು ಬಂದ ಮೈತ್ರಿ ಒಂದು ಕ್ಷಣ ನಿಧಾನಿಸಿದಳು.ಯಾರಿಗೆ ಕೊಡಲಿ..ಹಿರಿಯರಿಗೋ ಅಲ್ಲ ಪ್ರೇಮಗೀತೆಯ ಗೀಚಿದ ಕವಿಪುಂಗವನಿಗೋ...ಅಪ್ಪ ಕಣ್ಣಲ್ಲೇ ಹುಡುಗನ ಕಡೆಗೆ ತೋರಿಸಿದರು. ಮೈತ್ರಿ ನಡುಗುತ್ತಿದ್ದ ಕೈಗಳಿಂದ ಮೆಲ್ಲನೆ ಗ್ಲಾಸ್ ಎತ್ತಿ ಅವನೆಡೆಗೆ ಚಾಚಿದಳು.ಅವನೂ ತುಸು ನಿಧಾನಿಸಿ ಅವಳ ಮುಖಭಾವವ ಓದುತ್ತಾ ಕೈ ಮುಂದೆ ಮಾಡಿದನು.ಅವಳ ಕೈಬೆರಳುಗಳ ತುತ್ತ ತುದಿಗೆ ಅವನ ಬೆರಳುಗಳ ಸ್ಪರ್ಶ ರೋಮಾಂಚನ ತಂದಿತು.ಕೂಡಲೇ ಸಾವರಿಸಿಕೊಂಡ ಅವನ ನಾಲಿಗೆ ಅಭ್ಯಾಸ ಬಲದಿಂದ ಸಾರಿ ಕೇಳಲು ಹೊರಟರೂ ಊಹೂಂ.. ಅದು ಸಾಧ್ಯವಾಗಲಿಲ್ಲ.ಲೋಟದಲ್ಲಿದ್ದ ಶರಬತ್ತು ಕುಡಿಯಲೂ ನಿಧಾನಿಸುತ್ತಿದ್ದವನಿಗೆ ಇನ್ನಷ್ಟು ಹೊತ್ತು ಮುದ್ದಿನ ಅರಗಿಣಿಯನ್ನು ಕಾಯಿಸಿ ಕಣ್ತುಂಬಿಸಿಕೊಳ್ಳುವ ತವಕ.ಭಾಸ್ಕರ ರಾಯರು ಗಣೇಶ ಶರ್ಮ ಇಬ್ಬರೂ ಶರಬತ್ತಿನ ಲೋಟವನ್ನು ಮೈತ್ರಿಯ ಕೈಗಿತ್ತರು.ಕಿಶನ್ ನೆಡೆಗೆ ಗಣೇಶ ಶರ್ಮರ ನೋಟ ...ಆಗಲಿಲ್ಲವೇನೋ ಇನ್ನು ನೋಡುತ್ತಾ ಮೈಮರೆಯದಿರು... ಎಂಬಂತಿತ್ತು.. ಬೇಗನೆ ಖಾಲಿ ಮಾಡಿ ತಾನೂ ಲೋಟವ ಕೊಟ್ಟ..ಛೇ..!! ಇಷ್ಟು ಬೇಗ ಕೊಟ್ಟೆನೇ..ಇನ್ನೂ ನಿಧಾನಿಸಿದ್ದರೆ ..
..ಎಂಬ ಭಾವ ಅವನನು ಕಾಡಿತ್ತು..
ನಂತರ ಭಾಸ್ಕರ ಶಾಸ್ತ್ರಿಗಳು ಒಮ್ಮೆ ಒಳಗೆ ತೆರಳಿದರು.. ಮಡದಿಯಲ್ಲಿ ತಿಂಡಿ ಏನು ತಯಾರು ಮಾಡುವೆ ಎಂದು ವಿಚಾರಿಸಿ ಬಂದರು..ಅರ್ಧ ಗಂಟೆಯಲ್ಲಿ ತಯಾರಿಗಲಿ ಎಂದು ಹೇಳಿ ಹೊರಗೆ ತೆರಳಿದರು.ಮಹೇಶ್ ಕಿಶನ್ ನಲ್ಲಿ ಸಂಭಾಷಣೆಯಲ್ಲಿ ನಿರತನಾಗಿದ್ದ.ಭಾಸ್ಕರ ಶಾಸ್ತ್ರಿಗಳು ಇಬ್ಬರನ್ನೂ ಕರೆದುಕೊಂಡು ಹೋಗಿ ಮನೆತೋರಿಸಿದರು.ವಿಶಾಲವಾದ ಅಡುಗೆ ಕೋಣೆಯನ್ನು ತೋರಿಸುತ್ತಿದ್ದಾಗ ಕಿಶನ್ ನ ಗಮನ ಮೈತ್ರಿಯ ಮೇಲೆಯೇ ಇತ್ತು.ಇದನ್ನರಿತ ಅವಳು ನಾಚಿ ತಲೆತಗ್ಗಿಸಿ ನಿಂತಿದ್ದಳು.ಹತ್ತಿರವೇ ನಿಂತಿದ್ದರೂ ಹೃದಯದ ತುಂಬ ಮಧುರ ಭಾವನೆಗಳು ಭೋರ್ಗರೆಯುತಿದ್ದರೂ ಎಲ್ಲವೂ ಮೌನದಲ್ಲೇ ಹುದುಗಿಕುಳಿತಿತ್ತು..ಆ ಮೌನವನ್ನು ಆಸ್ವಾದಿಸಿದ ಕಿಶನ್..
ಹಳೆಯ ಕಾಲದ ದನದ ಕೊಟ್ಟಿಗೆ,ಇತರ ಪರಿಕರಗಳಾದ ಒನಕೆ,ಬೀಸುವ ಕಲ್ಲು, ದೊಡ್ಡ ಸಣ್ಣ ಮಡಕೆಗಳು... ಹೀಗೆ ಹಲವಾರು ಸಲಕರಣೆಗಳನ್ನು ಅಚ್ಚುಕಟ್ಟಾಗಿ ಇರಿಸಿದ್ದನ್ನು ಕಂಡು ಗಣೇಶ ಶರ್ಮ ಆಶ್ಚರ್ಯ ಚಕಿತರಾದರು.ಅಂಗಳದಲ್ಲಿದ್ದ ಅಡಿಕೆ ...ಶಾಸ್ತ್ರಿಗಳು ಅನುಕೂಲಸ್ಥರು ಎಂದು ಸಾರಿಹೇಳುತ್ತಿತ್ತು.ಎಲ್ಲವನ್ನೂ ನೋಡಿ ಚಾವಡಿಯಲ್ಲಿ ಬಂದು ಆಸೀನರಾದರು.. ಮಹೇಶ್ ನನ್ನು ಒಳಗೆ ಕಳುಹಿಸಿದರು ಭಾಸ್ಕರ ಶಾಸ್ತ್ರಿಗಳು.. ಮಹೇಶ್ ತಿಂಡಿಗೆ ಪಂಕ್ತಿ ಹಾಕಿ "ಅಕ್ಕಾ.. ಸ್ವೀಟ್ ಮೈಸೂರು ಪಾಕ್ ನಿನ್ನೆ ಮಾಡಿದ್ದು ಉಂಟಲ್ಲ.. ಅದನ್ನು ಇವತ್ತು ನೀನೇ ಬಡಿಸಬೇಕು ನಿನ್ನ ಗರ್ಲ್ ಫ್ರೆಂಡ್ ಇಶಾಗೆ.."ಎಂದು ಅಕ್ಕನ ಕಿವಿಯಲ್ಲುಸುರಿದ ..ಅವಳ ಮುಖ ಕೆಂಪೇರಿತು..ಅಮ್ಮ.. "ಏನು ಮಹೇಶ್ ಈಗಲೂ ತರಲೆ ನಿನ್ನದು.. ಹೊರಗೆ ಯಾರಿದ್ದಾರೆ ನೆನಪಿದೆ ತಾನೇ.."ಎಂದು ಮಗನನ್ನು ಗದರಿಸಿದರು..
ಎಲ್ಲರಿಗೂ ಗ್ಲಾಸ್ ಇಟ್ಟ.."ಇದೆಲ್ಲ ನಾನಲ್ಲ ನೀನು ಮಾಡಬೇಕು ಅಕ್ಕಾ..." ಎಂದಾಗ ಅಮ್ಮ .."ಅವಳು ಇನ್ನು ಮದುವೆಯಾದ ಮೇಲೆ ಎಲ್ಲಾ ಮಾಡುತ್ತಾಳೆ..ಇವತ್ತೊಂದಿನ ನೀನು ಮಾಡು..ನಿನಗೂ ಅಭ್ಯಾಸ ಆಗಲಿ..ನಿನ್ನಪ್ಪನಂತೆ ಅಗತ್ಯಬಿದ್ದಾಗಲೂ ಅಡುಗೆಮನೆ ಕಡೆ ತಲೆಹಾಕದಿದ್ದರೆ ಎಷ್ಟ ಕಷ್ಟವಾಗುತ್ತದೆ ಗೊತ್ತಾ.."ಎಂದಾಗ ಸುಮ್ಮನಾದ...
"ಅಕ್ಕಾ.. ನೀನು ಮೈಸೂರು ಪಾಕ್ ಹಿಡಿದು ರೆಡಿಯಾಗು..ನಿನ್ನ ಇಶಾಳನ್ನು ಈಗ ಕರ್ಕೊಂಡು ಬರ್ತೀನಿ..."ಎಂದು ಅಕ್ಕನ ಕಿವಿಯಲ್ಲಿ ಅಮ್ಮನಿಗೆ ಕೇಳಿಸದಂತೆ ಉಸುರಿ ಹೊರನಡೆದ...
ಮಗ ಎಲ್ಲ ತಯಾರಾಗಿದೆ ಎಂದಾಗ ಭಾಸ್ಕರ ಶಾಸ್ತ್ರಿಗಳು ನೆಂಟರನ್ನು ಒಳಗೆ ಕರೆದೊಯ್ದರು.ಉಪ್ಪಿಟ್ಟು ಅವಲಕ್ಕಿ ಕಾಫಿ ಎಲ್ಲವನ್ನೂ ಮಂಗಳಮ್ಮ ಮಹೇಶ್ ಬಡಿಸಿದರು.. ಮೈಸೂರು ಪಾಕ್ ಹಿಡಿದು ನಿಧಾನವಾಗಿ ಪಂಕ್ತಿಗೆ ಅಡಿಯಿಟ್ಟಳು ಮೈತ್ರಿ.ನಯನಾಜೂಕಿನ ಮುದ್ದು ಕುವರಿ ಎಂದು ಸಾರುತ್ತಿತ್ತು ಅವಳ ಹಂಸನಡಿಗೆ.ಗಣೇಶ ಶರ್ಮಾ ಪಂಕ್ತಿಯಲ್ಲಿ ಮೊದಲಿಗೆ ಇದ್ದವರು.ಅವರಿಗೆ ಒಂದು ಪುಟ್ಟ ತುಂಡು ಮೈಸೂರು ಪಾಕ್ ಬಡಿಸಹೊರಟಳು.."ಇನ್ನೂ ಸಣ್ಣದು ಸಾಕಮ್ಮಾ ನನಗೆ "ಎಂದರು..ಮತ್ತೆ ಹುಡುಕಿ ಮತ್ತೂ ಸಣ್ಣ ತುಂಡನ್ನು ಬಡಿಸಿ ಕಿಶನ್ ನ ಮುಂದೆ ನಿಂತಿದ್ದಳು.ಆಚೆ ಕಡೆಯಿಂದ ತಮ್ಮನ ನೋಟವು ನನ್ನತ್ತವೇ ಇದೆ ಎಂದೂ ಗೊತ್ತಿತ್ತು..ಎದುರಿರುವ ಕಿಶನ್ ನ ನೋಟವನ್ನೂ ಕಣ್ತುಂಬಿಕೊಳ್ಳಬೇಕಾಗಿತ್ತು... ದೊಡ್ಡ ತುಂಡನ್ನು ತೆಗೆದುಕೊಂಡು ಬಡಿಸಿದಳು.. ಕಿಶನ್ ನಸುನಕ್ಕ... ಅವಳ ಕೆನ್ನೆ ರಂಗೇರಿತು..ಇನ್ನೊಂದು ಬದಿಗೆ ಕುಳಿತಿದ್ದ ಅಪ್ಪನ ಸರದಿ ಈಗ . ಎಂದಿನಂತೆ ಗಂಭೀರವಾದ ಮುಖಚರ್ಯೆ.. ಬಡಿಸಲು ಬಾಗುತ್ತಿದ್ದಂತೆ ನನಗೆ ಬೇಡ ಎಂದು ಬಿಟ್ಟರು..ಆದರೂ ಕೇಳದ ಮಗಳು ಚಿಕ್ಕ ತುಂಡನ್ನು ಅಪ್ಪನಿಗೆ ಬಡಿಸಿಯೇ ಬಂದಳು.. ಗಣೇಶ ಶರ್ಮ ಮನದಲ್ಲೇ ಆಡ್ಡಿಯಿಲ್ಲ ಭಾವೀ ಸೊಸೆ ಎಂದುಕೊಂಡರು.. ಇನ್ನೊಮ್ಮೆ ಎಲ್ಲವನ್ನೂ ವಿಚಾರಣೆ ಮಾಡಿ ಬಡಿಸುವ ಸಂಪ್ರದಾಯ.ಮೈಸೂರು ಪಾಕ್ ವಿಚಾರಿಸುವ ಸರದಿ ಬಂತು.. ಗಣೇಶ ಶರ್ಮ ಮೈತ್ರಿ ಬರುತ್ತಿದ್ದಂತೆ ಕೈಗಳನ್ನು ಬಾಳೆಲೆಗೆ ಅಡ್ಡ ಹಿಡಿದು "ಬೇಡಮ್ಮಾ.. " ಎಂದರು.. ಕಿಶನ್ ಗೆ ಒಂದು ತುಂಡು ಬಡಿಸಹೊರಟಳು.."ಬೇಡ" ಎಂದ..ಪಕ್ಕದಲ್ಲಿ ನಿಂತಿದ್ದ ತಮ್ಮ "ಒಂದು ತುಂಡು ತಿನ್ನಬಹುದು" ಎಂದು ಶಿಫಾರಸ್ಸು ಮಾಡಿದ.. ಮೈತ್ರಿ ಬಿಡುವಳೇ.. ಪುನಃ ದೊಡ್ಡ ತುಂಡನ್ನು ಹುಡುಕಿ ಬಡಿಸಿಯೇಬಿಟ್ಟಳು..ನನ್ನಿಂದ ತಿನ್ನಲು ಸಾಧ್ಯವಿಲ್ಲ ಎನ್ನವಂತಿತ್ತು ಅವನ ಮುಖಭಾವ.. ಪಕ್ಕದಲ್ಲಿ ಕುಳಿತಿದ್ದ ಅವನಪ್ಪ .."ಮೊದಲ ಬಾರಿ ಬಂದಾಗ ಬಡಿಸಿದ ಸಿಹಿ ಬಾಳೆಲೆಯಲ್ಲಿ ಬಿಡುವಂತಿಲ್ಲ.."ಎಂದು ಕಿಶನ್ ನ ಕಿವಿಯಲ್ಲಿ ಉಸುರಿದರು..ಸರಿ ಕಷ್ಟವಾದರೂ ಮುದ್ಗೊಂಬೆ ಬಡಿಸಿದ್ದೆಂದು ಇಷ್ಟಪಟ್ಟೇ ತಿಂದು ಮುಗಿಸಿದ..!!! ಅಮ್ಮ ತಮ್ಮ ತಾವು ಬಡಿಸಿದ್ದೆಲ್ಲವನ್ನೂ ಪುನಃ ಬೇಕಾ ಎಂದು ವಿಚಾರಿಸಿದರು..
ಕಾಫಿ ಕುಡಿದು ಹೊರಗಡೆ ಹೋದರು ನೆಂಟರು.ಗಣೇಶಶರ್ಮ ಭಾಸ್ಕರ ಶಾಸ್ತ್ರಿಗಳಲ್ಲಿ "ಮಗಳ ಜಾತಕ ಕೊಡುತ್ತೀರಾ ??"ಎಂದು ತಾವಾಗಿಯೇ ಮುಂದೆ ಬಂದು ಕೇಳಿದರು.. "ಕೆಲವು ದಿನಗಳ ಹಿಂದೆಯಷ್ಟೇ ಒಂದು ಕಡೆ ಜಾತಕ ಕೊಟ್ಟಿದ್ದೇವೆ..ಅವರ ಉತ್ತರ ಇನ್ನೂ ಬಂದಿಲ್ಲ..ಒಂದು ಕಡೆ ಜಾತಕ ಕೊಟ್ಟು ಉತ್ತರ ಬಾರದೇ ಇನ್ನೊಂದು ಕಡೆ ಜಾತಕ ನಮ್ಮ ಮನೆತನದ ಸಂಪ್ರದಾಯದಲ್ಲಿ ಕೊಡುವುದಿಲ್ಲ....ಯಾವುದಕ್ಕೂ ಅವರ ಉತ್ತರ ಬರುವ ತನಕ ಕಾಯೋಣ.. "ಎಂದರು ಭಾಸ್ಕರ ಶಾಸ್ತ್ರಿಗಳು..
ಮಹೇಶ್ "..ಅಪ್ಪಾ ..."ಎಂದು ಕರೆದ..
ಈಗ ಬಂದೆ ಎನ್ನುತ್ತಾ ಒಳಬಂದರು ಭಾಸ್ಕರ ಶಾಸ್ತ್ರಿಗಳು.
ಮಂಗಳಮ್ಮ ಪತಿಯ ಮಾತಿನಿಂದ ಸಿಟ್ಟಿಗೆದ್ದಿದ್ದರು.ಎಂಥಾ ತಂದೆ ?? ಎಂಥಾ ಪತಿ?? ಇವರು..ಮೊನ್ನೆ ಕೇಶವ್ ಬಂದಿದ್ದಾಗ ಮಗಳಿಗೆ ಎಳ್ಳಷ್ಟೂ ಮನಸ್ಸಿಲ್ಲದಿದ್ದರೂ ಅಪ್ಪ ಮಗ ಇಬ್ಬರೂ ಮಾತನಾಡಿ ಜಾತಕ ಕೊಟ್ಟೇ ಬಿಟ್ಟಿದ್ದರು..ಅದೂ ಹಳ್ಳಿಮೂಲೆಯಲ್ಲಿದ್ದ ಕೃಷಿಕ ಯುವಕನಿಗೆ..ಈಗ ಮೈತ್ರಿಯೂ ಹುಡುಗನನ್ನು ಇಷ್ಟಪಟ್ಟಿದ್ದಾಳೆ ಎಂದು ಅವಳ ಮುಖಭಾವವೇ ಹೇಳುತ್ತಿದೆ..ಅವರ ಮಾತೂ ಅದೇ ಧಾಟಿಯಲ್ಲಿ ಇತ್ತು..ಆದರೂ ಇಲ್ಲಸಲ್ಲದ ಸಾಬೂಬು..ಥೂ..!! ಯಾಕೀತರ ಹೆಣ್ಣುಮಕ್ಕಳ ಹೊಟ್ಟೆಯುರಿಸ್ತಾರೆ...ಮದುವೆಯಾಗುವ ಹೆಣ್ಣಿಗೂ ನನಗೆ ಈ ತರಹದ ಹುಡುಗ ಬೇಕು,ಹಾಗಿರಬೇಕು , ಹೀಗಿರಬೇಕು....ಅನ್ನುವ ಆಸೆ ಆಕಾಂಕ್ಷೆಗಳು ಇರೋದಿಲ್ವೇ...???ಯಾಕೆ ಹೆಣ್ಣಿನ ಭಾವನೆಗಳನ್ನು ಅರ್ಥಮಾಡಿಕೊಳ್ಳಲ್ಲ ..??? ಅವುಗಳಿಗೆ ಬೆಲೆಕೊಡಲ್ಲ...
ಭಾಸ್ಕರ ಶಾಸ್ತ್ರಿಗಳು ಮಡದಿಯ ಮುಖ ನೋಡಿದರು.ಸಿಟ್ಟಿನಿಂದ ಕುದಿಯುತ್ತಿತ್ತು...ಅದನ್ನರಿತ ರಾಯರು ಶಾಂತವಾಗಿ "ಏನಾಯ್ತೀಗ...?"ಎಂದು ಕೇಳಿದರು..
"ಹುಡುಗ ಒಳ್ಳೆಯವನಂತೆ ಕಾಣುತ್ತಿದ್ದಾನೆ .ಮೈತ್ರಿಗೂ ಹಿಡಿಸಿದ್ದಾನೆ..ಜಾತಕ ಕೊಡ್ತೀರೋ ಇಲ್ವೋ..?"
"ಹಾಗಲ್ಲ..ಮಂಗಳಾ.."
"ರೀ.. ನಾನು ನಿಮ್ಮಲ್ಲಿ ಎಂದೂ ಎದುರಾಡಿದವಳು ಅಲ್ಲ..ಆದರೂ ಹೀಗೆ ನೋಯಿಸಿದರೆ ಸುಮ್ಮನಿರಲು ನನ್ನಿಂದ ಸಾಧ್ಯವಿಲ್ಲ.. ಜಾತಕ ಕೊಡ್ತೀರೋ ಇಲ್ವೋ..ಹುಡುಗನ ಬಗ್ಗೆ ನಂತರ ಸಾವಕಾಶವಾಗಿ ನೆಂಟರಿಷ್ಟರಲ್ಲಿ ವಿಚಾರಿಸಿಕೊಳ್ಳೋಣ.."
ಮಡದಿಯ ಹಠದ ಮುಂದೆ ಭಾಸ್ಕರ ಶಾಸ್ತ್ರಿಗಳು ಸೋಲಬೇಕಾಯಿತು.. "ಸಂಪ್ರದಾಯ ಒಪ್ಪುವುದಿಲ್ಲ ಕಣೇ.."
"ಸಂಪ್ರದಾಯಗಳೆಲ್ಲ ಬರೀ ಹೆಣ್ಣಿಗೆ ಮಾತ್ರ ಸೀಮಿತವಾ..ಅದು ಗಂಡುಮಕ್ಕಳಿಗಿಲ್ವಾ ... ಒಂದೇ ದಿನ ನಾಲ್ಕು ಹೆಣ್ಣುಮಕ್ಕಳ ಮನೆಗೆ ಹೆಣ್ಣುನೋಡುವ ಶಾಸ್ತ್ರಕ್ಕೆ ತೆರಳಿ ಉಪ್ಪಿಟ್ಟು, ಅವಲಕ್ಕಿ ಕ್ಷೀರ ಹೊಡೆದವರು ನೀವಲ್ಲವಾ.???.ಆಗ ಒಬ್ಬ ಹುಡುಗಿಯನ್ನು ನೋಡಿ ಸಂಬಂಧ ಬೇಡವೆಂದಾದರೆ ಮಾತ್ರ ಇನ್ನೊಂದು ಹುಡುಗಿಯನ್ನು ನೋಡಬೇಕು ಎಂಬ ಶಾಸ್ತ್ರ ಇತ್ತಾ.???. ಅನುಸರಿಸಿದ್ದೀರಾ ..???." ಎಂದ ಮಂಗಳಮ್ಮನ ಕಟುಮಾತಿಗೆ ನಿರುತ್ತರರಾದರು ಭಾಸ್ಕರ ಶಾಸ್ತ್ರಿಗಳು.ಮಂಗಳಮ್ಮ ವರುಷಗಳಿಂದ ತನ್ನೊಳಗೆ ಕುದಿಯುತ್ತಿದ್ದ ಬೇಗುದಿಯನ್ನು ಮಗಳಿಗೋಸ್ಕರ ಹೊರಹಾಕಿದ್ದರು..ತನ್ನೊಳಗೇ ನೋವು ಇಟ್ಟುಕೊಂಡು ಕೊರಗಿದರೆ ಇಂತಹ ಅವಕಾಶ ಮತ್ತೆ ಮಗಳ ಬಾಳಿನಲ್ಲಿ ಬರಬಹುದೋ ಇಲ್ಲವೋ ಯಾರಿಗೆ ಗೊತ್ತು.. ಎಂಬುದು ಮಂಗಳಮ್ಮನ ಕರುಳಿನ ಕೂಗಾಗಿತ್ತು..
ಮರುಮಾತನಾಡದ ಭಾಸ್ಕರ ಶಾಸ್ತ್ರಿಗಳು ಮರದ ಕಪಾಟಿನಲ್ಲಿದ್ದ ಮಗಳ ಜಾತಕದ ಕಾಪಿ ತೆಗೆದು ಗಣೇಶ ಶರ್ಮರ ಕೈಗಿತ್ತರು.ಕಿಶನ್ ಗೆ ಮೈತ್ರಿ ಒಳಗೆ ತಂದೆಯನ್ನು ಕರೆದು ಏನಾದರೂ ಹೇಳಿರಬಹುದೇ ಎಂಬ ಸಂಶಯ ಮೂಡಿತು.ಒಮ್ಮೆ ಜಾತಕ ಈಗ ಕೊಡಲಾರೆ ಅಂದವರು ಸೀದಾ ಕೈಯೆತ್ತಿ ಕೊಟ್ಟಿದ್ದರು.. ಸ್ವಲ್ಪ ಹೊತ್ತು ಮಾತನಾಡಿ "ನಾವಿನ್ನು ಹೊರಡುತ್ತೇವೆ.." ಎಂದರು ಗಣೇಶ್ ಶರ್ಮ.. ಕಿಶನ್ ಗೆ ಮೈತ್ರಿಯಲ್ಲಿ ಮಾತನಾಡುವ ತವಕ.ಚಾವಡಿಯ ಪಕ್ಕದಲ್ಲಿ ನಿಂತಿದ್ದ ಮಹೇಶ್ ನ ಸಮೀಪ ಬಂದು .."ಅಕ್ಕ ಒಳಗಿದ್ದಾಳಾ.." ಎಂದು ಕೇಳಿದನು ಕಿಶನ್.
"ಹೌದು ಒಳಗಿದ್ದಾಳೆ..
ಬನ್ನಿ .."ಎಂದು ಒಳಗೆ ಕರೆದೊಯ್ದನು.
ಕಿಶನ್ ನನ್ನು ಕಾಣುತ್ತಲೇ ಅವಳ ಹೃದಯ ಗರಿಬಿಚ್ಚಿದ ನವಿಲಿನಂತೆ ಕುಣಿಯಲಾರಂಭಿಸಿತು.ಮನಸು ಒಲವಿನ ರಾಗವನ್ನು ಗುನುಗಿತು..ಮೈಯ ರೋಮಕೂಪಗಳೆಲ್ಲ ನಿಮಿರಿನಿಂತವು.. ಕಿಶನ್ ನಲ್ಲಿ ಮಾತನಾಡಬೇಕೆಂದು ಮುಂದಾದರೆ ಗಂಟಲಿನಿಂದ ಶಬ್ದಗಳು ಹೊರಗಡಿಯಿಡಲೇಯಿಲ್ಲ.. ಕಿಶನ್ ತನ್ನ ಕಣ್ಣಲ್ಲೇ ಮಾತನಾಡಿಸಿದ..ಅವನ ಕಣ್ಣ ಭಾಷೆಯನ್ನು ಓದಿದ ಮೈತ್ರಿ ಸಾವಿರ ಪ್ರೇಮಪತ್ರದ ಸಾರವನ್ನು ಕಂಡಳು..ಆ ಪ್ರೇಮವನ್ನು ಒಳಗೆಳೆದುಕೊಳ್ಳಲು ಅವಳ ಕಣ್ಣಂಚಿನ ಕಾಡಿಗೆಗೂ ಕಾತರವಿತ್ತು..ಅವನ ಮೀಸೆಯಡಿಯ ನಗುವು ಅವಳ ಗುಳಿಕೆನ್ನೆಯ ಮೇಲೆ ರಂಗುಮೂಡಿಸಿತು.
"..ಮೈತ್ರಿ... ನಾವಿನ್ನು ಹೋಗಿಬರಲೇ." ಎಂದ.
"ಹೂಂ .."ಎಂದಳು ನಾಚುತ್ತಾ ಮೈತ್ರಿ..
"ಬಾಯ್ ..."ಎಂದು ನಸುನಕ್ಕ... ಅವನ ನಗೆಯನ್ನು ಅವಳ ಕಣ್ಣಕ್ಯಾಮೆರಾ ಸೇವ್ ಮಾಡಿತ್ತು..
ಹೊರಗೆ ಬಂದು ನಿಂತ ಕಿಶನ್ ನನ್ನು ಕಂಡಾಗ. .".ಸರಿ ನಾವಿನ್ನು ಹೋಗಿಬರಲೇ .."ಎಂದು ಗಣೇಶ ಶರ್ಮ ಭಾಸ್ಕರ ಶಾಸ್ತ್ರಿಗಳಲ್ಲಿ ಹೇಳಿ ಚಾವಡಿಯಿಂದ ಅಂಗಳಕ್ಕೆ ಇಳಿಯುತ್ತಿದ್ದಂತೆ ಕಾರು ಮನೆಯ ಮುಂದೆ ಬಂದು ನಿಂತಿತು.ಶ್ಯಾಮಶಾಸ್ತ್ರಿಗಳು,ಮಹಾಲಕ್ಷ್ಮಿ ಅಮ್ಮ, ಶಂಕರನ ಕುಟುಂಬ ಕಾರಿನಿಂದಿಳಿದರು.. ಶ್ಯಾಮ ಶಾಸ್ತ್ರಿಗಳು ಬಂದವರ ಪರಿಚಯವನ್ನು ಮಗನಲ್ಲಿ ಕೇಳಿತಿಳಿದರು.. ಉಭಯಕುಶಲೋಪರಿಯ ನಂತರ ಕಾರು ಏರಿದರು ಅಪ್ಪ ಮಗ..ಕಾರು ಸ್ಟಾರ್ಟ್ ಮಾಡಿದ ಕಿಶನ್..
ಮೈತ್ರಿ ಗೆ ಕಿಶನ್ ಗೆ ಬಾಯ್ ಹೇಳುವ ಆಸೆ.ಆದರೆ ಅಷ್ಟರಲ್ಲಿ ಎಲ್ಲರೂ ಬಂದೇಬಿಟ್ಟಿದ್ದರು.ಎಲ್ಲರ ಮುಂದೆ ಅವಳು ನಾಚುವ ಕನ್ನಿಕೆ.ಏನು ಮಾಡುವುದೆಂದು ಯೋಚಿಸಿ ಸೀದಾ ದನದ ಕೊಟ್ಟಿಗೆಯ ಹಿಂಭಾಗದಲ್ಲಿ ಬಂದುನಿಂತಳು.ಕಿಶನ್ ಗೇಟು ಹಾಕಲು ಕಾರು ನಿಲ್ಲಿಸುತ್ತಿದ್ದಂತೆ ಮೆಲ್ಲನೆ ಕೈಬೀಸಿ "....ಬಾಯ್..." ಎಂದಳು... ಇದನ್ನು ನಿರೀಕ್ಷಿಸಿದ್ದ ಕಿಶನ್ ಗೆ ಅವಳ ಕೈ ಕಂಡಿತು..ತಾನೂ ಬಾಯ್ ಮಾಡಿ ಫ್ಲೈಯಿಂಗ್ ಕಿಸ್ ಕೊಟ್ಟ..
ಕಾರು ಚಲಾಯಿಸುತ್ತಿದ್ದಂತೆ ಅಪ್ಪ.."ಅಲ್ಲ ಕಿಶನ್ ಅವರೆಲ್ಲರ ಎದುರು ಬಹಳ ಸಭ್ಯನಂತಿದ್ದೆ..ಈಗ ಹೀಗೆಲ್ಲ ತುಂಟತನ"ಎಂದು ಛೇಡಿಸಿದರು.."ಅಪ್ಪಾ.. ಅವರೆದುರು ಹೀಗೆಲ್ಲ ನಡೆದುಕೊಂಡರೆ ಹೆಣ್ಣು ಕೋಡಬೇಕಲ್ಲ..ಸಂಪ್ರದಾಯಸ್ಥ ಮನೆತನ.."
"ಅಂತೂ ನಿನಗೆ ಚೆನ್ನಾಗಿ ನಾಟಕ ಮಾಡಲು ಬರುತ್ತೆ. ಎಂದು ತಿಳಿಯಿತು... ಒಟ್ಟಿನಲ್ಲಿ ನಿನ್ನ ಆಯ್ಕೆ ನಾನು ಮೆಚ್ಚಿಕೊಂಡಿದ್ದೇನೆ.. ಅವರು ಮದುವೆ ಮಾಡಿ ಕೊಡುವ ಮನಸ್ಸು ಮಾಡಿದರೆ ಸಾಕು.."
"ಅಪ್ಪಾ..ನನ್ನ ಪ್ರೀತಿಯನ್ನು ನಾನು ಕೈಬಿಡುವ ಪ್ರಶ್ನೆಯೇ ಇಲ್ಲ ..ಹೇಗಾದರೂ ಮಾಡಿ ಅವರನ್ನು ಒಪ್ಪಿಸಿ ಮದುವೆಯಾಗುತ್ತೇನೆ.."
"ಮಗ ಇದುವೇ ನಿಜವಾದ ಪ್ರೀತಿ..ಪ್ರೀತಿಸಿ ಕೈಕೊಡುವುದು ಹೊಣೆಗೇಡಿತನ.."
"ಅಪ್ಪಾ ನನಗೆ ನಿಮ್ಮ ಬದುಕು ಆದರ್ಶ.. ಅಮ್ಮನನ್ನು ಇಷ್ಟಪಟ್ಟು ಮದುವೆಯಾಗಿ ಕಷ್ಟವಿದ್ದರೂ ನೋಯಿಸದೆ ಬದುಕು ಕೊಟ್ಟಿದ್ದೀರಲ್ಲ ..ನಿಮ್ಮಿಂದ ಬಹಳ ಕಲಿತಿದ್ದೇನೆ..ಇನ್ನೂ ಕಲಿಯುವುದಿದೆ.."
"ಹೌದು ಮಗ.ಹೆಣ್ಣುಮಕ್ಕಳ ಮನಸರಿತು ಬದುಕಿದರೆ ಬಾಳು ಬಂಗಾರ.."
"ಹಾಗೆಯೇ ನಾನು ಮೈತ್ರಿಯನ್ನು ನೋಡಿಕೊಳ್ಳುವೆ ಅಪ್ಪಾ.."
ಹೀಗೆ ಮಾತನಾಡುತ್ತಾ ಮನೆಯತ್ತ ಸಾಗಿದರು ಗಣೇಶ ಶರ್ಮ ಮತ್ತು ಕಿಶನ್..
ಶಾಸ್ತ್ರೀನಿವಾಸದಲ್ಲಿ ಮೈತ್ರಿಯ ವಿಚಾರಣೆ ಆರಂಭಿಸಿದ್ದರು ಭಾಸ್ಕರ ರಾಯರು..
ಮುಂದುವರಿಯುವುದು...
✍️ ಅನಿತಾ ಜಿ.ಕೆ.ಭಟ್.
21-02-2020.
ಮುಂದೆ....???
ReplyDeleteಕುತೂಹಲ ಮುಂದುವರಿದಿದೆ...
ReplyDelete💐🙏