Monday, 24 February 2020

ಜೀವನ ಮೈತ್ರಿ-ಭಾಗ ೨೬(26)




   ಕಿಶನ್ ನ ಕಣ್ಣುಗಳಲ್ಲಿ ಮೈತ್ರಿಯ ಕನವರಿಕೆಯೇ ತುಂಬಿತ್ತು.ಬೆಂಗಳೂರಿಗೆ ತೆರಳಲು ಬೇಗಬೇಗ ತಯಾರಾಗುತ್ತಿದ್ದವನ ಮನದೊಳಗೆ ಅವಳದೇ ಭಾವನೆಗಳ ತೊಯ್ದಾಟ.ಅಮ್ಮ ಕುಚ್ಚಿಲಕ್ಕಿ ಅನ್ನ, ಚಟ್ನಿ, ಸಾಂಬಾರ್ ಎಲ್ಲ ಬಡಿಸಿದರೂ ಇನ್ನೂ ಊಟ ಆರಂಭಿಸದ ಮಗನನ್ನು ಕಂಡು "ಮಗನೇ ಬೇಗ ಉಣ್ಣು..ತಡವಾಗುತ್ತೆ ಅಂದೆ.. ಮತ್ತೆ ಬಸ್ಸು ತಪ್ಪಿದರೆ ಕಷ್ಟ..ಬಸ್ಸಲ್ಲಿ ಕುಳಿತು ಬೇಕಾದರೆ ಮೈತ್ರಿಯನ್ನು ಧ್ಯಾನಿಸು.."ಎಂದಾಗ ಹಾಂ.. ಎನ್ನುತ್ತಾ ವಾಸ್ತವಕ್ಕೆ ಬಂದ ಕಿಶನ್.. ಬೇಗನೆ ಊಟ ಮಾಡಿ ಹೊರಟು ನಿಂತಾಗ ಅಮ್ಮ "ಹೋಗಿ ಬಾ ಮಗನೇ.." ಎಂದು ಮನದುಂಬಿ ಹರಸಿದರು..ತಂಗಿಯಂದಿರೂ ಅಣ್ಣನನ್ನು ಬೀಳ್ಕೊಟ್ಟರು..ಭಾವಂದಿರಿಬ್ಬರು ಅಪ್ಪ ಕಿಶನ್ ಎಲ್ಲರೂ ಜೊತೆಯಾಗಿ ಕಾರಿನಲ್ಲಿ ತೆರಳಿದರು..ಬಸ್ ಹತ್ತುವ ಜಾಗದಲ್ಲಿ ಕಾರು ನಿಲ್ಲಿಸಿ ಮಾತನಾಡುತ್ತಾ ..ಮದುವೆಯ ವಿಚಾರವನ್ನು ಚರ್ಚಿಸಿದರು.



   ಸ್ವಲ್ಪ ಹೊತ್ತಿನಲ್ಲಿ ಬಸ್ ಬಂತು.. ಕಿಶನ್ ಬಸ್ ಏರಿ ಬಾಯ್ ಮಾಡಿದ.ಮೂವರೂ ಮನೆಕಡೆ ಬಂದರು.ಮನೆಗೆ ಬಂದಾಗ ಮಡದಿಯ ಮುಖ ನೋಡಿದ ಗಣೇಶ ಶರ್ಮ ಮಗನನ್ನು ಬೀಳ್ಕೊಟ್ಟ ನೋವಿನ ಎಳೆಯನ್ನು ಆಕೆಯ ಮೊಗದಲ್ಲಿ ಕಂಡರು.ಎಷ್ಟಾದರೂ ತಾಯಿ ಹೃದಯ ಅಲ್ಲವೇ.. ಮಕ್ಕಳನ್ನು ಕಳುಹಿಸಿಕೊಟ್ಟಾಗ ಭಾರವಾಗುವುದು ಸಹಜ ಎಂದು ತಾವೇ ಮಾತಿಗೆಳೆದರು.. ಇಬ್ಬರೂ ಜೊತೆಯಾಗಿ ಹರಟುತ್ತಾ ಕುಳಿತರೆ ಹೊತ್ತು ಹೋದದ್ದೇ ತಿಳಿಯಲಿಲ್ಲ..ಅಳಿಯ ಮಗಳಂದಿರು ಆಗಲೇ ರೂಮು ಸೇರಿ ನಿದ್ರೆಗೆ ಜಾರಿದ್ದರು .


    ಬೆಳಿಗ್ಗೆ ಮಗಳಂದಿರು ತಮ್ಮ ಗಂಡಂದಿರ ಜೊತೆಗೆ ಹೊರಟು ನಿಂತಿದ್ದರು..ಹತ್ತಿರದ ಊರಿನಲ್ಲೇ ವಾಸವಿದ್ದ ಇಬ್ಬರೂ ಕೂಡ ಆಗಾಗ ಬಂದು ಹೋಗುತ್ತೇವೆ ಎಂದು ಅಮ್ಮನನ್ನು ಸಮಾಧಾನಿಸಿ ಅಪ್ಪನ ಮನೆಯಿಂದ ಗಂಡನ ಮನೆಗೆ ತೆರಳಿದರು..

    ಮಮತಾ ಗಣೇಶ ಶರ್ಮ ಇಬ್ಬರೇ ಇರುವ ಮನೆ ಈಗ ಬೀಕೋ ಎನ್ನುತ್ತಿತ್ತು."ರೀ..ಮಗಳಂದಿರ ಮದುವೆಯಾಗಿ ಜೀವನ ಸುಗಮವಾಗಿ ಸಾಗುತ್ತಿದೆ.ಈಗ ನನಗೆ ಕಿಶನ್ ದೇ ಚಿಂತೆ.. ಏನಾಗುತ್ತೋ ಏನೋ.. ಜಾತಕ ಹೊಂದಾಣಿಕೆ ಆಗಬಹುದೇ.. ಅವರು ಕೂಸುಕೊಡಲು ಒಪ್ಪಿಯಾರೇ..ಅವರ ಅಂತಸ್ತಿಗೆ ನಾವು ತಕ್ಕವರಂತೂ ಅಲ್ಲ..ಮಗ ಅವಳನ್ನು ಬಹಳವೇ ಹಚ್ಚಿಕೊಂಡು ಬಿಟ್ಟಿದ್ದಾನೆ.."


"ಮಮತಾ .. ನೀನೇನು ಯೋಚನೆ ಮಾಡದಿರು.ಆದಷ್ಟು ಬೇಗ ಜೋಯಿಸರಲ್ಲಿ ವಿಚಾರಿಸಿ ಬರುತ್ತೇನೆ..ನಮ್ಮ ಯಾವಾಗಿನ ಜೋಯಿಸರು ಇದ್ದಾರಲ್ಲ..ಬಾಳೆಮಲೆ ಜೋಯಿಸರು...ಅವರಲ್ಲೇ ತೋರಿಸೋಣ..."


"ರೀ.. ನೀವು ತಡಮಾಡುವುದು ಒಳ್ಳೆಯದಲ್ಲ..  ಮೈತ್ರಿಯನ್ನು ನೋಡಲು ಬೇರೆ ಯಾರೋ ಬಂದಿದ್ದಾರಂತೆ ಎಂದು ನನ್ನಲ್ಲಿ ಕಿಶನ್ ಹೇಳಿದ್ದ.. ಆದ್ದರಿಂದ ನಾವು ಬೇಗನೆ ಜೋಯಿಸರನ್ನು ಕಾಣುವುದು ಒಳಿತು.."

"ಆಗಲಿ ಮಮತಾ.. ಬುಧವಾರ ಹೋಗಿಬರುವೆ.."

"ಬುಧವಾರ ಏಕೆ..ಇವತ್ತೇ ಹೋಗಿ ಬನ್ನಿ..ಆಗದೇ.."

"ಹಾಗಂತೀಯಾ....?"

"ಹೌದು ರೀ..ನಂಗ್ಯಾಕೋ ಮನಸ್ಸು ಇವತ್ತೇ ಜಾತಕ ತೋರಿಸಿ ಬರಬೇಕು ಎನ್ನುತ್ತಿದೆ.."

"ಸರಿ .."ಎಂದು ಒಪ್ಪಿದರು ಗಣೇಶ ಶರ್ಮ..


ಬೇಗ ಮನೆಯ ನಿತ್ಯದ ಅವರ ಕೆಲಸಗಳನ್ನು ಮುಗಿಸಿಕೊಂಡು ಹೊರಡುವಾಗ ಗಂಟೆ ಒಂಭತ್ತು ಭರ್ತಿಯಾಗಿತ್ತು. ಗಣೇಶ್ ಶರ್ಮರ ಕಾರು ಬಾಳೆಮಲೆ ಜೋಯಿಸರ ಮನೆ ಕಡೆಗೆ ಚಲಿಸಿತು.


                       *****

ಬಾರಂತಡ್ಕದ ಕೇಶವ್ ಮತ್ತು ಬಂಗಾರಣ್ಣ ಸೋಮವಾರ ಬಾಳೆಮಲೆ ಜೋಯಿಸರಲ್ಲಿಗೆ ಮೈತ್ರಿಯ ಮತ್ತು ಕೇಶವ್ ನ ಜಾತಕ ತೆಗೆದುಕೊಂಡು ಹೊರಡುವವರಿದ್ದರು..ಬಂಗಾರಣ್ಣನಿಗೆ ಮೈತ್ರಿಯನ್ನು ಸೊಸೆಯಾಗಿ ಮಾಡಿಕೊಳ್ಳಬೇಕೆಂಬ ಆಸಕ್ತಿ ಬಲವಾಗಿತ್ತು.ಹಾಗಾಗಿ ಎರಡನೇ ಬಾರಿ ಜಾತಕ ತೋರಿಸಲು ಮುಂದಾಗಿದ್ದರು.

ಹೊರಡುವಾಗಲೇ ಮಡದಿ ಸುಮಾ "ರೀ.. ಒಳ್ಳೆಯ ಸಮಯ ನೋಡಿ ಹೊರಡಿ.. "ಎಂದರು..

"ಏನೇ ಇದೆಲ್ಲ ನಿನ್ನ ಹೊಸ ವರಸೆಗಳು..."
ಎಂದ ಬಂಗಾರಣ್ಣ..

"ಹೌದು ರೀ..ಟಿವಿ ಜ್ಯೋತಿಷಿಗಳು ಹೇಳಿದ್ದಾರೆ ಒಳ್ಳೆಯ ಕೆಲಸಕ್ಕೆ ಹೋಗುವಾಗ ರಾಹುಕಾಲ ಗುಳಿಗಕಾಲದಲ್ಲಿ ಹೋಗಬಾರದಂತೆ.."

"ಓಹೋ.. ಹಾಗೇ..ಈಗ ಯಾವ ಕಾಲವೋ ಏನೋ..."ಎಂದ ಬಂಗಾರಣ್ಣ.

"ನಾನು ನೋಡಿ ಹೇಳ್ತೀನಿ ರೀ..ಇರಿ ಸ್ವಲ್ಪ..."

"ಅಯ್ಯೋ..ಈಗ ಅದೇ ರಾಹುಕಾಲ.. ಸ್ವಲ್ಪ ಒಂದೇ ಒಂದು ಗಂಟೆ ನಂತರ ತೆರಳಿ.."

"ಅಮ್ಮಾ.. ನೀನಿನ್ನೂ ಯಾವ ಕಾಲದಲ್ಲಿ ಇದ್ದೀ.."ಅಂದ ಕೇಶವ್..

"ಈಗಿನ ಕಾಲಕ್ಕೂ ಆಗುತ್ತಂತೆ ಮಗಾ.."

"ಅದೆಲ್ಲ ಪುರಾಣ ನನಗೆ ಗೊತ್ತಿಲ್ಲ.. ಮಧ್ಯಾಹ್ನ ಆಗುವುದರೊಳಗೆ ಜೋಯಿಸರಲ್ಲಿ ಹೋಗಿ ಬರಬೇಕು.ಆಮೇಲೆ ನನಗೆ ಕ್ರಿಕೆಟ್ ಮ್ಯಾಚ್ ನೋಡಲು ಇದೆ.. ಫ್ರೆಂಡ್ ಜೊತೆ ಬೆಟ್ಟಿಂಗ್ ಬೇರೆ ಕಟ್ಟಿದೀನಿ.."ಎಂದ ಕೇಶವ್.

"ಅಮ್ಮ ಹೇಳಿದ್ದು ಸ್ವಲ್ಪ ಕೇಳೋ ಮಗಾ.."

"ಅದೆಲ್ಲ ಆಗಲ್ಲ.. ಈಗ ಹೊರಡುವುದಾದರೆ ನಾನು ಬರ್ತೀನಿ ...ಇಲ್ಲಾಂದ್ರೆ ಇಲ್ಲ.."

"ನೀನೋ ನಿನ್ನ ಹಠವೋ..ಆಯ್ತಪ್ಪಾ.. ಕೇಶವ್..ನಿನ್ನ ಹಠದಂತೆಯೇ ಆಗಲಿ..ನಡಿ.." ಎಂದು ಮನೆಯಿಂದ ಹೊರಟರು...


                   ****

ಶಾಸ್ತ್ರಿ ನಿವಾಸದಲ್ಲಿ ಸ್ವಲ್ಪ ಬಿಗುವಿನ ವಾತಾವರಣವೇ ಬೆಳಿಗ್ಗೆ ಮುಂದುವರಿದಿತ್ತು.. ಮೈತ್ರಿ, ಮಹೇಶ್ ಇಬ್ಬರೂ ಕಾಲೇಜಿಗೆ ಎಂದಿನಂತೆ ಹೊರಟರು.ಮೈತ್ರಿ ಬಸ್ ಸ್ಟ್ಯಾಂಡ್ ತಲುಪುತ್ತಿದ್ದಂತೆ ಕಿಶನ್ ಗೆ ಕರೆ ಮಾಡಿ ಮಾತನಾಡತೊಡಗಿದಳು.. ಕಿಶನ್ ಬೆಳಿಗ್ಗೆ ತಲುಪಿ ಫ್ರೆಶ್ ಆಗಿ ಆಫೀಸಿಗೆ ಹೊರಡಲು ಸಿದ್ಧತೆ ಮಾಡುತ್ತಿದ್ದ.ಕರೆ ಬಂದದ್ದು ಬಹಳ ಸಂತೋಷವಾಯಿತು ಕಿಶನ್ ಗೆ..

"ಹಾಯ್..ಮುದ್ಗೊಂಬೆ..."

"ಏನು.. ರಾಯರು ಎಷ್ಟು ಹೊತ್ತಿಗೆ ತಲುಪಿದ್ರಿ.."

"ಈಗ ತಲುಪಿ ಫ್ರೆಶ್ ಆಗಿ ಮೈತ್ರಿ ಮಹಿಮೆ ಸ್ತೋತ್ರ ಪಠಣ ಮಾಡ್ತಿದ್ದೆ.."

"ಅದ್ಯಾವುದು ಹೊಸ ಸ್ತೋತ್ರ.."

"ಹೂಂ..ಅದೇ.."

"ಅಂದ್ರೆ..ಹೊಸ ಹಾಯ್ಕು, ಚುಟುಕು.. ಏನಾದ್ರೂ ಗುನುಗುತ್ತಿದ್ದೀರಾ.."

"ನಿನ್ನದೇ ನೆನಪಿನ ಅಲೆಯಲ್ಲಿ ತೇಲ್ತಾ ಮೈತ್ರಿ... ಮೈತ್ರಿ..ಅಂತಿದ್ದೆ..."

"ಫುಲ್ ರೋಮ್ಯಾಂಟಿಕ್ ಮೂಡ್..ಹಾಗಿದ್ರೆ.."

"ಹೌದು..ನೀನು ಕರೆ ಮಾಡಿದ್ರೆ ಹಾಗೇ ತಾನೇ...ಏನಂದ್ರು ಈ ಪ್ರೇಮಭಿಕ್ಷುವನ್ನು.."

"ಏನಾದ್ರೂ ಅಂದುಕೊಳ್ಳಿ ನಂಗೇನು.."

"ಏನಾದ್ರೂ ಗದರಿದ್ರಾ..ಭಾವೀ ಮಾವ ..."

"ಅದೆಲ್ಲ ಇದ್ದಿದ್ದೇ ಮಾಮೂಲಿ..ನಿಮ್ಮಲ್ಲೇನಂದ್ರು.."

"ಹೇಳ್ತೀನಿ..ಅದ್ಕೂ ಮೊದ್ಲು ನೀನು ಹೇಳು.. ಮಾಷ್ಟ್ರು ಏನಂದ್ರು..."

"ಪುರಾಣ ,ಪ್ರವಚನ ,ಸಹಸ್ರನಾಮಾರ್ಚನೆ ಎಲ್ಲ ಆಗಿದೆ..."

"ಮದುವೆ ಮಾಡಿಕೊಟ್ಟಾರು ತಾನೇ.."

"ಯಾರಿಗೊತ್ತು..ಯಾವಾಗ ಏನು ನಿರ್ಧಾರ ತಗೋತಾರೆ ಅಂತ.."

"ಹಾಗೆಲ್ಲ..ಹೇಳ್ಬೇಡ್ವೆ..ಮುದ್ಗೊಂಬೆ...  "

"ನಿಮ್ಮಪ್ಪ ಏನಂದ್ರು.."

"ನಮ್ಮಪ್ಪ ಫುಲ್ ಖುಷಿಯಾಗಿ ಒಪ್ಪಿದರು..ಜಾತಕ ಆದಷ್ಟು ಬೇಗ ತೋರಿಸಿ ಬರ್ತೇನೆ ಅಂದಿದ್ದಾರೆ..ನೋಡೋಣ.."


"ನಮ್ಮಪ್ಪ ಕೆಲವು ವಿಷಯಗಳಲ್ಲಿ ಹೀಗೇನೇ.ಅವರದ್ದೇ ಹಠ ಅವರಿಗೆ..ಈ ವಿಷಯದಲ್ಲಿ ನಾನೂ ಸ್ವಲ್ಪ ಹಠ ಮಾಡಿದ್ರೆ ಹೇಗೆ ಅಂತ ಯೋಚಿಸ್ತಿದೀನಿ.."

"ಅತ್ತೆ ಒಪ್ಪಿದ್ದಾರಾ..ಈ ಅಳಿಯನನ್ನ.."

"ಓಹೋ..ಅಮ್ಮ .."

"ಏನು ಹೇಳು... ಬೇಗ.."

"ಹೇಳಲ್ಲ ಬೇಡ.."

"ಪ್ಲೀಸ್..ಹೇಳೇ ಮುದ್ಗೊಂಬೆ...ಎಲ್ಲರೆದುರು ಅಂತೂ ಮಾತಾಡಿಲ್ಲ..ಈಗ್ಲಾದ್ರೂ ಮನಸು ಬಿಚ್ಚಿ ಮಾತಾಡೇ..."

"ಅಮ್ಮ....ನಿಮ್ಮನ್ನ...ಓಹೋ ನನ್ನ ಬಸ್ ಬಂತು.. ಬಾಯ್..."

ಕರೆ ಕಟ್ ಮಾಡಿದಳು ಮೈತ್ರಿ.. ಕಿಶನ್ ಗೆ ನಿರಾಸೆಯಾಯಿತು..ಅತ್ತೆ ತನ್ನ ಬಗ್ಗೆ ಏನು ಹೇಳಿದ್ದಾರೆ ಅಂತ ಬೇಗ ಹೇಳದೆ ಕಾಡಿಸ್ತಾಳೆ ಹುಡ್ಗೀ....ಈ ಹುಡುಗೀರೆಲ್ಲ ಹೀಗೇನಾ..ಕಾಡಿಸಿ ಪೀಡಿಸಿ ಖುಷಿಪಡೋದಾ...

     ಕಿಶನ್ ಸ್ವಲ್ಪ ಬೇಸರಗೊಂಡು ಹೊರಟ.. ಆಗಲೇ ನಗರದಲ್ಲಿ ಟ್ರಾಫಿಕ್ ಜಾಮ್ ಆಗಿತ್ತು..ಹೇಗೋ  ಬೈಕ್ ತೆಗೆದುಕೊಂಡು ಹೋದ... ಆಫೀಸಿಗೆ ತಲುಪಿದಾಗ ಸುಸ್ತಾಗಿ ಬಿಟ್ಟಿದ್ದ.ಸೀದಾ ತನ್ನ ಚೇಂಬರ್ ನಲ್ಲಿ ಹೋಗಿ ಕುಳಿತು ಮೊಬೈಲ್ ಮೇಲೆ ಕಣ್ಣಾಡಿಸಿದ.. ಮೈತ್ರಿ ಸಂದೇಶ ಕಳುಹಿಸಿದ್ದಳು..

"ನನ್ನಮ್ಮನಿಗೆ ನನ್ನ ಆಯ್ಕೆ ಇಷ್ಟವಾಗಿದೆ.."

ಕಿಶನ್ ಗೆ ಎದ್ದು ಕುಣಿಯುವಷ್ಟು ಸಂತಸವಾಗಿತ್ತು..

                      ****

ಬಾರಂತಡ್ಕ ಕೇಶವ್ ಮತ್ತು ಬಂಗಾರಣ್ಣ ಜೋಯಿಸರಲ್ಲಿಗೆ ತಲುಪಲು ಸ್ವಲ್ಪವೇ ಹೊತ್ತು ಇತ್ತು..


    ಮುಂದುವರಿಯುವುದು...

✍️... ಅನಿತಾ ಜಿ.ಕೆ.ಭಟ್.
25-02-2020.








     

2 comments: