ವಾರವಿಡೀ ಮೈತ್ರಿಯ ಅಸಡ್ಡೆಯ ನಡೆಯಿಂದ ಕಿಶನ್ ತುಂಬಾನೇ ಬೇಜಾರಾಗಿ ಶನಿವಾರ ಮೊಬೈಲ್ ಸಂದೇಶದ ಮೇಲೆ ಕಣ್ಣಾಡಿಸಲೂ ಮನಸ್ಸಿಲ್ಲದೆ ಎಫ್ ಎಂ ರೇಡಿಯೋ ಕೇಳುತ್ತ ತನ್ನ ಕೆಲಸಗಳತ್ತ ಗಮನಹರಿಸಿ ರಾತ್ರಿ ಬೇಗನೆ ಮಲಗಿದ್ದ... ಕೂಡಲೇ ನಿದ್ರಾದೇವಿ ಹಿತವಾಗಿ ಅಪ್ಪಿದ್ದಳು.. ಬೆಳಿಗ್ಗೆ ಎಚ್ಚರಾಗುವ ಮುನ್ನವೇ ರೂಂ ಮೇಟ್ ಸುಂದರ ಕರೆದಿದ್ದ..."ಕಿಶನ್.. ನಾವು ಕೆಲವು ಜನ ಫ್ರೆಂಡ್ಸ್ ವಿಹಾರ ಹೋಗುತ್ತಿದ್ದೇವೆ..ನೀನೂ ಬರ್ತೀಯಾ...?"
ಸುಂದರ್ ನ ಮಾತನ್ನು ಕೇಳಿದಾಗ ಕಿಶನ್ ಗೂ ಅದೇ ಒಳ್ಳೆಯದು ಅನಿಸಿತು.. ಮನಸ್ಸು ಬದಲಾವಣೆ ಬಯಸಿತ್ತು..
"ಯಾವ ಕಡೆ ಹೋಗ್ತಿದೀರಿ..."ಎಂದು ಕೇಳಿದ ಕಿಶನ್..
"ಮೇಕೆದಾಟು... ಕಡೆಗೆ ಹೋಗೋ ಪ್ಲಾನ್... ಜೊತೆಗೆ ಚುಂಚಿ ಫಾಲ್ಸ್ ಕೂಡ ಚೆನ್ನಾಗಿರುತ್ತದಂತೆ..ಸಮಯ ಸಿಕ್ಕರೆ ಅಲ್ಲಿಗೂ ಹೋಗಿ ಇವತ್ತೇ ವಾಪಾಸಾಗುವುದು..."
"ಗುಡ್.. ಐಡಿಯಾ.. ಸುಂದರ್..ಹಾಗಿದ್ರೆ ನಾನೂ ಬರ್ತೀನಿ..."ಎನ್ನುತ್ತಾ ತಡಮಾಡದೆ ಎದ್ದು ಅರ್ಧಗಂಟೆಯಲ್ಲಿ ಫ್ರೆಶ್ ಆಗಿ ಹೊರಟು ನಿಂತಿದ್ದ...
ಎಲ್ಲರೂ ಜೊತೆಯಾಗಿ ಸೇರಿ ಎರಡು ವಾಹನದಲ್ಲಿ ಮೇಕೆದಾಟು ಕಡೆಗೆ ಪ್ರಯಾಣ ಬೆಳೆಸಿದರು.. ಮಾರ್ಗ ಮಧ್ಯದಲ್ಲಿ ತಿಂಡಿ ಮುಗಿಸಿ ಮುಂದೆ ಪ್ರಯಾಣಿಸಿದರು..ಸುಂದರ ದೃಶ್ಯಗಳನ್ನು ಕಣ್ತುಂಬಿಸಿಕೊಳ್ಳುತ್ತಾ ಗಳೆಯರ ಬಳಗ ಮೇಕೆದಾಟು ಸಂಗಮವನ್ನು ತಲುಪಿತು...ಕಾವೇರಿ ಮತ್ತು ಅರ್ಕಾವತಿಯ ಸಂಗಮವನ್ನು ಕಣ್ತುಂಬಿಸಿಕೊಂಡು ಮೇಕೆದಾಟು ವೀಕ್ಷಣೆಗೆ ತೆರಳಿದರು.. ವಿಶಾಲವಾಗಿ ಹರಿಯುತ್ತಿದ್ದ ನದಿ ಬಹಳ ಕಿರಿದಾಗಿ ಹರಿಯುತ್ತಿದ್ದು ಮೇಕೆ ಒಂದು ದಂಡದಿಂದ ಇನ್ನೊಂದಕ್ಕೆ ಹಾರುವಷ್ಟು ಕಿರಿದಾಗುತ್ತದೆ..ಅದೇ ಕಾರಣಕ್ಕೆ ಮೇಕೆದಾಟು ಎಂಬ ಹೆಸರು ಬಂದಿದೆ..ಈ ಕೌತುಕವನ್ನು ಗೆಳೆಯರೆಲ್ಲರೂ ಆಸ್ವಾದಿಸಿ..ನಂತರ ಚುಂಚಿ ಫಾಲ್ಸ್ ಗೂ ತೆರಳಿ ರಾತ್ರಿ ಬೆಂಗಳೂರಿಗೆ ವಾಪಾಸಾದರು...
ಪ್ರಾಕೃತಿಕ ಸೌಂದರ್ಯ ವನ್ನು ಸವಿದ ಕಿಶನ್ ನ ಮನಸ್ಸು ಪ್ರಶಾಂತವಾಗಿತ್ತು.. ಆಯಾಸದಿಂದ ಕಿಶನ್ ಬೇಗನೇ ಮಲಗಿಕೊಂಡನು.. ಬೆಳಿಗ್ಗೆ ಬೇಗೆದ್ದು ತಿಂಡಿ ರೆಡಿ ಮಾಡಿ ತಿಂದು ಆಫೀಸಿಗೆ ಹೊರಟನು.. ಆಫೀಸಿಗೆ ತಲುಪಿ ಒಮ್ಮೆ ಮೊಬೈಲ್ ಮೇಲೆ ಕಣ್ಣಾಡಿಸಿದನು.. ಮೈತ್ರಿಯ ಸಂದೇಶವನ್ನು ಓದಿದ ಮೇಲೆ ಪ್ರಶಾಂತವಾಗಿದ್ದ ಮನಸ್ಸು ಪ್ರಕ್ಷಬ್ಧವಾಯಿತು.
ಸುತ್ತಲೂ ಸಹೋದ್ಯೋಗಿಗಳಿದ್ದಾರೆ . ಉಕ್ಕಿಬರುವ ಕಣ್ಣಹನಿಯನ್ನು ತಡೆಯಲು ಸಾಧ್ಯವಾಗುತ್ತಿಲ್ಲ..ಒಮ್ಮೆ ಎದ್ದು ವಾಶ್ ರೂಂ ಗೆ ಹೋಗಿ ಬಂದ ಕಿಶನ್..ತಲೆಯೊಳಗೆ ಮಂಥನ ಶುರುವಾಗಿತ್ತು..ನನ್ನ ಮುದ್ದುಗೊಂಬೆಯನ್ನು ನಾನೆಷ್ಟು ತಪ್ಪಾಗಿ ಅರ್ಥೈಸಿ ಕೊಂಡಿದ್ದೆ...ಪಾಪ...!!! ಎಷ್ಟು ನೊಂದುಕೊಂಡಳೋ ಏನೋ... ನಾನು ಹೀಗೆ ದಿನದೂಡುತ್ತಾ ಕುಳಿತರೆ ಅವಳು ಯಾರದೋ ಹೃದಯದರಮನೆಗೆ ರಾಣಿಯಾಗುತ್ತಾಳೆ.. ಇದರಲ್ಲಿ ಸಂಶಯವಿಲ್ಲ.. ನಾನು ಈ ವಾರವೇ ನಮ್ಮೂರಿಗೆ ತೆರಳಿ ತಂದೆತಾಯಿಯಲ್ಲಿ ನಮ್ಮ ಪ್ರೀತಿಯ ವಿಚಾರ ತಿಳಿಸಲೇ ಬೇಕು.. ಅಲ್ಲಿವರೆಗೆ ನನ್ನ ಅವಳ ಪ್ರೇಮಸಂಬಂಧ ಇರುವುದೋ...ಅಲ್ಲ ಮಧ್ಯೆ ನಿನ್ನೆ ಬಂದ ವಿವಾಹ ಸಂಬಂಧ ಕುದುರುವುದೋ... ಇವತ್ತೇ ರಜೆ ಹಾಕಿ ಊರಿಗೆ ಹೊರಡಲೇ.... ಎಂದು ಏನೇನೋ ಯೋಚಿಸುತ್ತಿದ್ದವನಿಗೆ ಒಮ್ಮೆ ಮೈತ್ರಿಗೆ ಕರೆಮಾಡಿ ಮಾತಾಡೋಣ ಎಂದು ಅನಿಸಿತು..ಕರೆಮಾಡಿದನು..
*******
ಬೆಳಿಗ್ಗೆ ಅನ್ಯಮಸ್ಕತೆಯಿಂದಲೇ ಎದ್ದಿದ್ದ ಮೈತ್ರಿಗೆ ಜೋರಾಗಿ ತಲೆನೋಯುತ್ತಿತ್ತು.. ತಿಂಡಿಗೆ ಬಾ ಎಂಬ ಅಮ್ಮನ ಕರೆಗೆ "ನನಗೆ ಹಸಿವಿಲ್ಲ ..ಏನೂ ಬೇಡಮ್ಮ "...ಎನ್ನುತ್ತಾ ಹೊರಟಿದ್ದಳು.. ಯಾವತ್ತೂ ಅಕ್ಕ ಹೋಗಿ ಅರ್ಧಗಂಟೆಯ ನಂತರ ಕಾಲೇಜಿಗೆ ಹೊರಡುತ್ತಿದ್ದ ಮಹೇಶ್ ಅಂದು ಅಕ್ಕ ಹೊರಡುವ ಸಮಯಕ್ಕೆ ಹೊರಟು ಅಕ್ಕನನ್ನು ಬೈಕ್ ನಲ್ಲಿ ಕೂರಿಸಿಕೊಂಡು ಹೊರಟಿದ್ದ... ದಿನವೂ ಅಕ್ಕತಮ್ಮನ ಮಧ್ಯೆ ಕಿತ್ತಾಟವಿದ್ದದ್ದೇ..ಅದನ್ನೇ ನೋಡುತ್ತಾ ಇದ್ದ ಮನೆಯವರು ಇಂದು ದಿಢೀರನೆ ಬದಲಾದ ಅಕ್ಕತಮ್ಮನ ಬಾಂಧವ್ಯವನ್ನು ಕಂಡು ಮೂಗಿನ ಮೇಲೆ ಬೆರಳಿಟ್ಟುಕೊಂಡರು.. ಭಾಸ್ಕರ ಶಾಸ್ತ್ರಿಗಳು ಚಾವಡಿಯಲ್ಲಿ ನಿಂತು ಮಕ್ಕಳು ಅಂಗಳದ ತುದಿಯನ್ನು ದಾಟಿ ಕಣ್ಣಂಚಿನಿಂದ ಮರೆಯಾಗುವವರೆಗೂ ದಿಟ್ಟಿಸಿದರು... ಅದನ್ನು ಗಮನಿಸಿದ ಮಂಗಳಮ್ಮ ಗಂಡನಲ್ಲಿ.."ಏನು ಹಾಗೆ ಮಕ್ಕಳನ್ನೇ ನೋಡುತ್ತಾ ನಿಂತುಬಿಟ್ಟಿರಿ."....ಎಂದು ಕೇಳಿದರು...
"ಯಾವಾಗಲೂ ಉತ್ತರ ದಕ್ಷಿಣ ಅನ್ನುವಂತಿದ್ದವರು ಇಂದು ಒಗ್ಗಟ್ಟಿನಿಂದ ಕಾಲೇಜಿಗೆ ಹೊರಟಿದ್ದಾರೆ...ಹಾಗೇ ನೋಡುತ್ತಾ ನಿಂತಿದ್ದೆ.."
"ಮಕ್ಕಳು ಒಗ್ಗಟ್ಟಾಗಿದ್ದರೂ ಉರಿ ನಿಮಗೆ...ಪಾಪ ಮಗಳನ್ನು ಎಷ್ಟು ಗೋಳುಹೊಯ್ಕೊಂಡಿರಿ ನಿನ್ನೆ...ನನಗೆ ಕರುಳು ಚುರುಕ್ ಎಂದಿತ್ತು... ಇವತ್ತು ಮಕ್ಕಳ ಮೇಲಿರುವ ಪ್ರೀತಿ ನಿನ್ನೆ ಎಲ್ಲಿ ಹೋಗಿತ್ತಪ್ಪ..." ಸರಿಯಾದ ಸಮಯವನ್ನೇ ಹುಡುಕಿ ಮಂಗಳಮ್ಮ ಗಂಡನ ನಡೆಯನ್ನು ಆಕ್ಷೇಪಿಸಿದರು..
"ನೀನು ಅದೆಲ್ಲ ಹೇಳೋದಕ್ಕೆ ಬರಬೇಡ..ನಿನ್ನ ಕೆಲಸ ನೋಡು ಸಾಕು.."ಎಂದು ಪತ್ನಿಯ ಬಾಯಿ ಮುಚ್ಚಿಸಿದರು..
ಅದನ್ನರಿತ ಅಜ್ಜಿ ಮಹಾಲಕ್ಷ್ಮಿ ಅಮ್ಮ ತಮ್ಮ ಪಾರಾಯಣವನ್ನು ಮುಗಿಸಿ ದೇವರ ಕೋಣೆಯಿಂದ ಹೊರಬರುತ್ತಿದ್ದವರು " ನೋಡು ಭಾಸ್ಕರ ...ಈಗ ಮೊದಲಿನ ಕಾಲವಲ್ಲ...ನಮ್ಮ ಕಾಲದಲ್ಲಿ ಮನೆಯವರು ತೋರಿಸಿದ ಗಂಡಿಗೆ ಹೂಮಾಲೆಹಾಕುತ್ತಿದ್ದ ಹೆಣ್ಣುಮಕ್ಕಳು ಕತ್ತುಬಾಗಿಸಿ ಮಾಂಗಲ್ಯಧಾರಣೆ ಮಾಡಿಸಿಕೊಳ್ಳುತ್ತಿದ್ದರು ..ಕಷ್ಟವೋ ಸುಖವೋ ಬಂದದ್ದನ್ನು ಸ್ವೀಕರಿಸಿ ಬಾಳುತ್ತಿದ್ದರು..ಆಯ್ಕೆಯಿರಲಿಲ್ಲ...ಈಗ ಅಂತಹಾ ಕಾಲವಲ್ಲ...ಹೆಣ್ಮಕ್ಕಳ ಆಸೆಗಳನ್ನೂ ಅರಿತು ಮದುವೆಮಾಡುವ ಕಾಲ...ಗಂಡನ ಮನೆಯಲ್ಲಿ ಸರಿಹೋಗಿಲ್ಲ ಎಂದರೆ ಡೈವೋರ್ಸ್ ಕೊಟ್ಟು ಸ್ವಂತ ಕಾಲಮೇಲೆ ನಿಂತು ಜೀವನ ಮಾಡುವಷ್ಟು ಛಾತಿ ಈಗಿನ ಹೆಣ್ಮಕ್ಕಳಿಗಿದೆ ..
ಅಂತಹುದರಲ್ಲಿ ನೀನು ನಿನ್ನದೇ ಹಠ ನಡೆಯಬೇಕೆಂದರೆ ಸರಿಯಲ್ಲ... ಮದುವೆಯ ವಿಚಾರದಲ್ಲಿ ಮೈತ್ರಿಯ ಮಾತನ್ನೂ ಕೇಳಬೇಕೆಂಬುದು ನನ್ನ ಆಸೆ.."ಎಂದು ಮಗನಿಗೆ ಹೇಳಿದರು...
"ಅದೆಲ್ಲ ನಿನಗೆ ತಿಳಿಯದು ಅಮ್ಮಾ...ಮಕ್ಕಳ ಆಲೋಚನೆ ಕೆಲವೊಮ್ಮೆ ತುಂಬಾ ಬಾಲಿಶವಾಗಿ ಇರುತ್ತದೆ.. ನಾವು ಜೀವನದಲ್ಲಿ ಅನುಭವಸ್ಥರು... ಒಂದು ನಿರ್ಧಾರಕ್ಕೆ ಬಂದರೆ ಮಗಳನ್ನು ಪರಿಗಣಿಸಿಯೇ ತೆಗೆದುಕೊಂಡ ನಿರ್ಧಾರವಾಗಿರುತ್ತದೆ..."ಎಂದ ಭಾಸ್ಕರ ರಾಯರು..
"ಯಾವುದಕ್ಕೂ ಈಗಲೇ ತಲೆಕೆಡಿಸಿಕೊಳ್ಳುವುದುಬೇಡ ...ಜಾತಕ ಹೊಂದಾಣಿಕೆ ಹೇಗಿರುತ್ತದೋ ಏನೋ..ಯಾರಿಗೆ ಗೊತ್ತು..ಅವರ ಕಡೆಯಿಂದ ಉತ್ತರ ಬಂದ ನಂತರ ನಿರ್ಧರಿಸೋಣ .."
ಎಂದು ಶ್ಯಾಮ ಶಾಸ್ತ್ರಿಗಳು ಉತ್ತರಿಸಿ ತಿಂಡಿ ತಿನ್ನಲು ಹೊರಟರು..ಮಂಗಳಮ್ಮ ತಿಂಡಿ ಬಿಡಿಸುತ್ತಾ ...ಛೇ...!! ನನ್ನದೇ ತಪ್ಪು.. ಆವತ್ತು ಮದುವೆಯಲ್ಲಿ ಆ ಹೆಂಗಸು ಮಗಳ ಬಗ್ಗೆ ಕೇಳಿದಾಗಲೇ "ಈಗ ಮದುವೆ ಆಲೋಚನೆ ಇಲ್ಲ.."ಎಂದು ಹೇಳಿದ್ದರೆ ಅಡ್ಡಿಯಿರಲಿಲ್ಲ...ನಾನಿರುವುದು ಹಳ್ಳಿಯಲ್ಲಾದರೂ ಹಳ್ಳಿಯ ಕೃಷಿಯ ಬವಣೆಯನ್ನು ಕಂಡು ಮಗಳು ಪಟ್ಟಣದಲ್ಲಿ ಹಾಯಾಗಿರಲಿ ಎಂದು ನನ್ನ ಒಳಮನಸ್ಸು ಹೇಳುತ್ತಿದೆ.. ಪತಿಗೆ ಅದೆಲ್ಲ ಹೇಳಿದರೂ ವ್ಯರ್ಥ... ಅರ್ಥವಾಗಲಾರದು ...ಎಂದೆಲ್ಲ ಯೋಚಿಸುತ್ತಿದ್ದರು..
"ಮಂಗಳಾ... ಕಾಫಿಗೆ ಸಕ್ಕರೆ ಹಾಕಿಲ್ಲವಾ..."ಎಂದಾಗ ಮಂಗಳಮ್ಮ ವಾಸ್ತವಕ್ಕೆ ಬಂದರು... ತಲೆಯಲ್ಲಿ ಏನೇನೋ ಯೋಚಿಸುತ್ತಾ ಕಾಫಿ ಮಾಡಿದರೆ ಹೀಗೇ ಆಗೋದು ಅಂತ ಅಂದುಕೊಂಡು ಸಕ್ಕರೆ ಹಾಕಿ ಕಾಫಿ ಚೆನ್ನಾಗಿ ಹೊಡೆದು ಮೇಲೆ ನೊರೆ ತೇಲುವಂತೆ ಮಾಡಿ ಮಾವನ ಕೈಗಿತ್ತರು..
ತಮ್ಮ ಮಹೇಶ ಅಕ್ಕನನ್ನು ಜೋಪಾನವಾಗಿ ಕರೆದುಕೊಂಡು ಬಸ್ ಸ್ಟ್ಯಾಂಡ್ ತಲುಪಿದ..ಮೊದಲೆಲ್ಲ ಕೀಟಲೆ ಕಿಟ್ಟಪ್ಪನಾಗಿದ್ದ ತಮ್ಮ ಒಂದೇ ದಿನದಲ್ಲಿ ಬದಲಾದ್ದನ್ನು ಮೈತ್ರಿಗೆ ಅರಗಿಸಿಕೊಳ್ಳಲಿಗಲಿಲ್ಲ...ತುಂಟ ಹುಡುಗನಲ್ಲೂ ಒಂದು ಪ್ರಬುದ್ಧ ವ್ಯಕ್ತಿತ್ವ ಇರುತ್ತದೆ ..ಅದು ಜೀವನದ ಅನುಭವವಾದಂತೆ ತೆರೆದುಕೊಳ್ಳುತ್ತದೆ.. ಜವಾಬ್ದಾರಿ ಎಲ್ಲವನ್ನೂ ಕಲಿಸುತ್ತದೆ.. ಜವಾಬ್ದಾರಿ ಹೆಗಲಮೇಲೇರಿದಾಗ ಹುಡುಗಾಟಿಕೆ ದೂರಸರಿಯುತ್ತದೆ .
ಬೈಕ್ ಪಕ್ಕದಲ್ಲಿ ನಿಲ್ಲಿಸಿ ಅಕ್ಕನ ಬಳಿ ನಿಂತು ಕೊಂಡ ಮಹೇಶ್ ಅಕ್ಕನಲ್ಲಿ"ಅಕ್ಕಾ.. ನೀನು ಏನೂ ಯೋಚನೆ ಮಾಡಬೇಡ..ನಾನು ಅದನ್ನೆಲ್ಲಾ ಬಗೆಹರಿಸುತ್ತೇನೆ..ಆದರೂ ಒಂದು ಪ್ರಶ್ನೆ ಅಕ್ಕಾ.. ನೀನು ಯಾರನ್ನಾದರೂ ಲವ್ ಮಾಡ್ತಾ ಇದ್ದೀಯಾ.."
ತಮ್ಮನಿಂದ ಬಂದ ಪ್ರಶ್ನೆಗೆ "ತಮ್ಮಾ..ನನಗೆ ನನ್ನದೇ ಆದ ಕನಸುಗಳಿವೆ..ನನ್ನ ಕನಸುಗಳನ್ನು ನಾನು ತುಂಬಾ ಪ್ರೀತಿಸುತ್ತೇನೆ..ಹಾಗೂ ಅದರಲ್ಲಿ ಯಶಸ್ಸು ಸಾಧಿಸಬೇಕೆಂದು ಆ ಕಡೆಗೆ ಗಮನಹರಿಸುತ್ತಿದ್ದೇನೆ ..."ಎಂದು ಒಗಟಾಗಿ ಉತ್ತರಿಸಿದಳು ಮೈತ್ರಿ.. ಅಷ್ಟರಲ್ಲಿ ಕಾಲೇಜ್ ಬಸ್ ಬಂತು .. ತಮ್ಮನಿಗೆ ಬಾಯ್ ಮಾಡಿ ಬಸ್ ಏರಿದಳು ಮೈತ್ರಿ..
ಆಸನ ಹಿಡಿದು ಕುಳಿತುಕೊಂಡಳು ಮೈತ್ರಿ..ಆಗ ಮೊಬೈಲ್ ಕರೆಬಂದಿತು..ಬಹಳ ಕುತೂಹಲದಿಂದ ನೋಡಿದಳು.. ಆಹಾ..!! ನಾನು ಎರಡು ದಿನಗಳಿಂದ ಹಾತೊರೆಯುತ್ತಿದ್ದ ಒಲವಿನ ಕರೆ..ಮಾತನಾಡಬೇಕೆಂದು ಕರೆ ಸ್ವೀಕರಿಸಬೇಕೆಂದು ಒಮ್ಮೆ ಪಕ್ಕದಲ್ಲಿ ಕುಳಿತವಳ ಮುಖ ನೋಡಿದಳು..ಓಹೋ.. ಇವಳು...ಇಲ್ಲೇ ಯಾಕಿದ್ದಾಳಪ್ಪಾ..ನನ್ನ ದುರಾದೃಷ್ಟ..ಇವಳು ನನ್ನಪ್ಪನ ಫೇವರಿಟ್ ಸ್ಟೂಡೆಂಟ್..ಮತ್ತೆಲ್ಲಿಯಾದರೂ ಅಪ್ಪನಿಗೆ ಸಿಕ್ಕಾಗ ವರದಿ ಮಾಡಿದರೆ...ಏನು ಮಾಡಲಿ.. ಹಿಂದೆ ಹೋಗಿ ರಿಸೀವ್ ಮಾಡಲೇ..ಎಂದುಕೊಂಡರೂ ಕರೆ ಸ್ವೀಕರಿಸಿದಳು..ಅತ್ತ ಕಡೆಯಿಂದ ತೂರಿಬಂದ ಕಿಶನ್ ನ ಮಾತು ಅವಳ ಕಿವಿಗೆ ತಂಪೆರೆಯಿತು..ಹೃದಯದಲ್ಲಿ ನವಿಲ ನರ್ತನ ಆರಂಭವಾಯಿತು..
ಪಕ್ಕದ ಹುಡುಗಿ ಕಿವಿಕೊಡುತ್ತಿದ್ದಾಳೆ ಎಂಬ ಗುಮಾನಿ ಬಲವಾಯಿತು.. ಕಾಲೇಜಿಗೆ ಹೋದ ನಂತರ ಮಾತನಾಡುತ್ತೇನೆ.. ಸ್ವಲ್ಪ ವಾಯ್ಸ್ ಡಿಸ್ಟರ್ಬೆನ್ಸ್ ಇದೆ..ಎಂದು ಹೇಳಿ ಕರೆ ಕಟ್ ಮಾಡಿದಳು...
ಕಾಲೇಜಿಗೆ ತಲುಪಿದ ಮಹೇಶ್ ಅಕ್ಕನ ಮದುವೆ ತಪ್ಪಿಸಲು ಹೆಣೆದ ಚಿಂತನೆಯಲ್ಲಿ ಇದ್ದ ಸೀನಿಯರ್ ಗೆಳೆಯನ ಭೇಟಿ ಮಾಡಲು ತೆರಳಿದನು...
ಮುಂದುವರಿಯುವುದು....
✍️... ಅನಿತಾ ಜಿ.ಕೆ.ಭಟ್.
11-02-2020.
👌👌👌
ReplyDeleteಥ್ಯಾಂಕ್ಯೂ 💐🙏
ReplyDelete