Tuesday, 11 February 2020

ಜೀವನ ಮೈತ್ರಿ-ಭಾಗ ೧೫




         ಮಹೇಶ್ ಕಾಲೇಜಿಗೆ ಹೋದೊಡನೆ ತನ್ನ ಸೀನಿಯರ್ ಫ್ರೆಂಡ್ ಒಬ್ಬನನ್ನು ಭೇಟಿಯಾಗಲು ತೆರಳಿದನು...ಅವನ ತರಗತಿಗೆ ತೆರಳಿದಾಗ ಎರಡು ದಿನದಿಂದ ಗೈರುಹಾಜರಾಗಿದ್ದ ವಿಷಯ ತಿಳಿಯಿತು..ಆದ್ದರಿಂದ ಅವನ ಗೆಳೆಯರ ಬಳಿ ವಿಚಾರಿಸಿ ಫೋನ್ ನಂಬರ್ ಪಡಕೊಂಡನು.. ಮೊಬೈಲ್ ಗೆ ಕರೆಮಾಡಿದರೆ ಕರೆಸ್ವೀಕರಿಸಲಿಲ್ಲ... ಲ್ಯಾಂಡ್ ಲೈನ್ ಗೆ ಕರೆಮಾಡಿದನು...

ಅತ್ತಕಡೆಯಿಂದ "ಹಲೋ....ಯಾರು ಮಾತನಾಡುವುದು..."ಎಂದಾಗ

"ನಾನು ... ರಾಮಪ್ರಸಾದ್ ನ ಗೆಳೆಯ ಮಹೇಶ್ ಮಾತನಾಡುತ್ತಿರುವುದು..."

"ಏನಾಗಬೇಕಿತ್ತು..."

"ಸ್ವಲ್ಪ ರಾಮಪ್ರಸಾದ್ ನಲ್ಲಿ ಮಾತನಾಡುವುದಿತ್ತು .... ಅವನಿಗೆ ಕೊಡಬಹುದಾ..."

"ಹೂಂ... ಕೆಮ್ಮು ಅಂತ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾನೆ... ಆದರೂ ಕೊಡುವೆ..."ಎಂದು ಅವನ ಕೈಗೆ ಫೋನಿತ್ತವರು ಬಹುಶಃ ಅವನ ತಂದೆಯಿರಬೇಕು..

ರಾಮಪ್ರಸಾದ್ ನಲ್ಲಿ "... ಮಾತನಾಡಲು ಒಂದು ಗೌಪ್ಯ ವಿಷಯವಿದೆ...ನಿನ್ನ ಮೊಬೈಲ್ ಗೆ ಕರೆಮಾಡಿದೆ.."ಎಂದ ಮಹೇಶ್..

"... ಮಹೇಶ್... ಇಲ್ಲಿ ನೆಟ್ವರ್ಕ್ ಇಲ್ಲ... ಮೇಲೆ ಗುಡ್ಡದಲ್ಲಿ ಇದೆ.. ನಾನು ಕಾಲೇಜಿಗೆ ಹೋಗುವಾಗ ಬರುವಾಗ ಬೇಕಾದರೆ ಮಾತ್ರ ಮೊಬೈಲ್ ಬಳಸುವುದು..ಉಳಿದಂತೆ ಲ್ಯಾಂಡ್ ಲೈನ್ ಬಳಕೆ..."ಎಂದ ರಾಮಪ್ರಸಾದ್..

"ನಿನಗೆ ಒಮ್ಮೆ ಮೊಬೈಲ್ ತೆಗೆದುಕೊಂಡು ಗುಡ್ಡಕ್ಕೆ ಹೋಗಲು ಸಾಧ್ಯವಾ..."

"ಮನೆಯವರು ಏನಾದರೂ ಅಪಾರ್ಥ ಮಾಡಿಕೊಂಡಾರು .... ನಾಳೆ ಕಾಲೇಜಿಗೆ ಬರುತ್ತೇನೆ..ಅಲ್ಲೇ ಹೇಳೋ..."

"ತುಂಬಾ ಅರ್ಜೆಂಟ್ ಇದೆ..ಇವತ್ತೇ ಆಗಬೇಕು..."

"ಸರಿ... ಹಾಗಿದ್ದರೆ ಮೊಬೈಲಿನೊಂದಿಗೆ ಗುಡ್ಡವೇರುತ್ತೇನೆ..."ಎಂದ ರಾಮಪ್ರಸಾದ್..

ಫೋನಿಟ್ಟ ರಾಮಪ್ರಸಾದ್ ನಲ್ಲಿ ಗೆಳೆಯನ ಬಗ್ಗೆ ವಿಚಾರಿಸಿಕೊಂಡ ಮನೆಯವರು..
ಸಂಕ್ಷಿಪ್ತವಾಗಿ ತಿಳಿಸಿದ ರಾಮಪ್ರಸಾದ್..

"ಅಪ್ಪ.. ಮನೆಯಲ್ಲಿ ಕುಳಿತು ಬೇಸರವಾಗುತ್ತಿದೆ.. ನಾಲ್ಕು ಹೆಜ್ಜೆ ನಡೆದು ಬರುವೆ..."ಎಂದು ಹೊರಟು ಗುಡ್ಡವೇರಿದ ರಾಂ....

             ಮಹೇಶ್ ಮೊದಲ ಅವಧಿಗೆ ಬಂಕ್ ಮಾಡಿ ತನ್ನ ಕಾರ್ಯಕ್ಕೆ ಇಳಿದಿದ್ದ..ರಾಂ ನ ಕರೆಬಂದಾಗ... ಅವನಲ್ಲಿ ಮಾತನಾಡಿ ನಿನ್ನೆ ಮನೆಗೆ ಬಂದ ಹುಡುಗನ ಬಗ್ಗೆ ತಿಳಿದುಕೊಂಡ ಮಹೇಶ್...ಬಹಳ ಕಷ್ಟಪಟ್ಟು ಹೆಣೆದಿದ್ದ ಯೋಜನೆ ಕಾರ್ಯರೂಪಕ್ಕೆ ಬರಬಹುದಾ ಎಂಬ ಆತಂಕ ಅವನಲ್ಲಿತ್ತು... ಆದರೆ ಅವನಂದುಕೊಂಡದ್ದಕ್ಕಿಂತ ಹಾದಿ ಸುಗಮವಾಗಿ ಗೋಚರಿಸಿತು...


           ರಾಮಪ್ರಸಾದ್ ನ ಮನೆಯೂ ಬಾರಂತಡ್ಕ ಎಂದು ಹಿಂದೊಮ್ಮೆ ಹೇಳಿದ್ದ ನೆನಪಿನಲ್ಲಿ ಮಹೇಶ್ ತಂತ್ರ ಹೆಣೆದಿದ್ದ.. ನೆನಪು ಸರಿಯಾಗಿತ್ತು...ಅವನ ಮುಂದಿನ ನಡೆಗೆ ಬೇಕಾದಷ್ಟು ವಿವರಗಳು ಲಭ್ಯವಾದವು... ಮೈತ್ರಿಯನ್ನು ನೋಡಲು ಬಂದ ಯುವಕ ಕೇಶವ... ಇಂಜಿನಿಯರಿಂಗ್ ಅಂದರೆ ಬಿಇ ಮಾಡಿದ್ದಲ್ಲ... ಡಿಪ್ಲೋಮಾ ಇಂಜಿನಿಯರಿಂಗ್ ಓದಿದ್ದು..ಅದೂ ಪಿಯುಸಿಯಲ್ಲಿ ಡುಮ್ಕಿ ಹೊಡೆದು..ನಂತರ ಡಿಪ್ಲೋಮಾ ಒಮ್ಮೆಲೇ ಕಂಪ್ಲೀಟ್ ಆಗಿರಲಿಲ್ಲ... ಕೋರ್ಸ್ ಮುಗಿದು ಎರಡು ವರ್ಷ ಮನೆಯಲ್ಲಿದ್ದು ಕೊನೆಗೆ ಹೇಗೋ ಮುಗಿಸಿದ...ಯಾವುದೋ ಕೆಲಸ ಅಂತ ಬೆಂಗಳೂರಿನಲ್ಲಿ ಇದ್ದ..ಸಂಬಳ ಸರಿಯಾಗಿ ಜೀವನಕ್ಕೂ ಸಾಲುವಷ್ಟು ಇರಲಿಲ್ಲವಂತೆ... ಮನೆಯಲ್ಲಿ ಬೇಕಾದಂತೆ ಉಂಡುತಿಂದು ಮಾಡುತ್ತಾ ಗುಂಡಣ್ಣನಂತಿದ್ದವ ಬೆಂಗಳೂರು ಸೇರಿ ಸಣಕಲು ಆಗಿದ್ದನಂತೆ.. ಜೊತೆಗೆ ಆರೋಗ್ಯವೂ ಹದೆಗೆಡುತ್ತಿದ್ದುದರಿಂದ ಮನೆಯವರು ವಾಪಾಸು ಕರೆಸಿದರಂತೆ.. ಎಂದು ಮನೆಯವರು ಹೇಳುತ್ತಿದ್ದರಂತೆ..


     ಉರಮೇಲೆ ಬೇರೆಯೇ ಸುದ್ದಿ ಹರಿದಾಡುತ್ತಿದೆಯಂತೆ..
 ಅಲ್ಲಿ ಯುವತಿ ಯಾರನ್ನೋ ಪರಿಚಯವಾಗಿದೆಯಂತೆ...ಮನೆಯವರಿಗೆ ಅದು ಇಷ್ಟವಾಗದೆ ಕೆಲವು ಸಾವಿರ ದುಡ್ಡನ್ನು ಅವಳ ಕೈಗಿತ್ತು ಕೇಶವನನ್ನು ಅವನಪ್ಪ ಊರಿಗೆ ಕರೆದುಕೊಂಡು ಬಂದರಂತೆ..ಇಲ್ಲಿಗೂ ಬಂದು ಯುವತಿಯ ಕಡೆಯವರು ಒಮ್ಮೆ ಗಲಾಟೆಮಾಡಿದ್ದರು.. ಮತ್ತೆ  ದುಡ್ಡು ಕೊಟ್ಟು ಬಾಯಿಮುಚ್ಚಿಸಿ ಕಳುಹಿಸಿದರಂತೆ...ಈಗ ಸಭ್ಯನಂತೆ ಬದುಕುತ್ತಿದ್ದಾನೆ...

         ಮಹೇಶ್ ಕೇಶವನ ಮನೆಯವರು ಜಾತಕವನ್ನು ಯಾವ ಜೋಯಿಸರಲ್ಲಿ ಪರಿಶೀಲನೆಗೆ ಕೊಡುವುದು ಎಂಬ ವಿವರವನ್ನು ಕೇಳಿಕೊಂಡನು..

          ಆ ಜೋಯಿಸರ ಮನೆಯ ವಿಳಾಸ ಮಹೇಶ್ ಗೆ ತಿಳಿದಿತ್ತು...ತನ್ನ ಸೋದರಮಾವನ ಜೊತೆಗೆ ಮೊದಲೊಮ್ಮೆ ಆ ಮನೆಗೆ ಹೋಗಿದ್ದ ಮಹೇಶ್...ಆದ್ದರಿಂದ ಈಗ ಸಮಯ ವ್ಯರ್ಥ ಮಾಡದೆ ಮುಂದುವರಿಯಬೇಕೆಂದು ...
ಇಂದಿಡೀ ತರಗತಿಗೆ ಗೈರುಹಾಜರಾಗುವ  ಯೋಚನೆ ಮಾಡಿ ಜೋಯಿಸರ ಮನೆಯತ್ತ ಬೈಕ್ ಓಡಿಸಿದ...

                         *****


         ಕಾಲೇಜಿಗೆ ತಲುಪುತ್ತಿದ್ದಂತೆ ಕಿಶನ್ ಗೆ ಮೈತ್ರಿ ಕರೆಮಾಡಿದಳು..ಆ ಹೊತ್ತಿಗೆ ಕಿಶನ್ ತನ್ನ ಬಾಸ್ ನ ಛೇಂಬರ್ ನಲ್ಲಿದ್ದ.. ಮೈತ್ರಿ ಗೆ ನಿರಾಸೆಯಾಯಿತು.. ತರಗತಿಗೆ ತೆರಳಿದಳು.. ಕುಳಿತು ಪಾಠಪ್ರವಚನ ಕೇಳುತಿರುವ ಭಂಗಿಯಲ್ಲಿದ್ದರೂ ಮನಸ್ಸು ಎಲ್ಲೆಲ್ಲೋ ಅಡ್ಡಾಡುತ್ತಾ ಕಳೆದುಹೋಗಿತ್ತು... ಕಿಶನ್ ಹಾಗೂ ಕೇಶವ್ ಇಬ್ಬರನ್ನು ತಕ್ಕಡಿಯಲ್ಲಿ ಅಳೆದು ತೂಗಿ ನೋಡಲಾರಂಭಿಸಿತ್ತು ಅವಳ ಮನಸು...


       ಕಛೇರಿಯಲ್ಲಿ ಕಿಶನ್ ಕೂಡ ಬಾಸ್ ಛೇಂಬರಿಂದ
ಹೊರಬಂದಾಗ ಮೈತ್ರಿ ಯ ಮಿಸ್ಡ್ ಕಾಲ್ ನೋಡಿ ತಾನೇ ಕರೆಮಾಡಿದ.. ಅವಳು ತರಗತಿಗೆ ತೆರಳಲಾಗಿತ್ತು.. ಮೊಬೈಲ್ ಸೈಲೆಂಟಾಗಿತ್ತು..

           ಮಧ್ಯಾಹ್ನದ  ಬಿಡುವಿನ ವೇಳೆಯಲ್ಲಿ ಕಿಶನ್ ಕರೆಮಾಡಿದ..ಕರೆಸ್ವೀಕರಿಸಿದ ಮೈತ್ರಿ ಏಕಾಂತತೆಗೆ ಧಕ್ಕೆಬಾರದಂತೆ ಗೆಳತಿಯ ಜೊತೆಗೆ ಸೆಮಿನಾರ್ ಹಾಲ್ ನ ಪಕ್ಕದಲ್ಲಿ ನಿಂತು ಮಾತನಾಡಿದಳು.. ಗೆಳತಿ ಸುನಿಧಿ ಅವಳ ಮದುವೆಯಾಗುವ ಯುವಕನಲ್ಲಿ ಸರಸ ಸಂಭಾಷಣೆಯಲ್ಲಿ ನಿರತಳಾಗಿದ್ದಳು..

"ಹಾಯ್... ಮುದ್ದು ಗೊಂಬೆ.."

"ಬರೀ..ಬಾಯಿ ಮಾತೇ ಆಗಿಹೋಯ್ತು ನಿಂದು.."

"ಮತ್ತೇನೇ..ನಿನ್ನಪ್ಪ ಇನ್ನೂ ಕನ್ಯಾದಾನ ಮಾಡಿಲ್ಲವಲ್ಲ.."

"ಹಾಂ.. ನೀವು ಹೀಗೆ ಹೆಬ್ಬಾವಿನ ತರಹ ಆಲಸಿಯಾಗಿದ್ದರೆ ಕನ್ಯಾದಾನ ಮಾಡ್ತಾರೆ ನಿಮಗಲ್ಲ ಬೇರೆಯವರಿಗೆ..."

(ನಗುತ್ತಾ)..".ಮುದ್ಗೊಂಬೆ..... "ಎಂದು ಕೀಟಲೆ ಮಾಡಿದನು...
"ನಾನೀಗ ಮುದ್ಗೊಂಬೆ ಅಲ್ಲ ಕಣೋ..ಪರಿಸ್ಥಿತಿಯ ಕೈಗೊಂಬೆ..."

"ಯಾಕಮ್ಮಾ..ಅಂತಹ ಆತಂಕ.."

"ಮತ್ತೇನು...ಇನ್ನೊಂದು ವಾರದೊಳಗೆ ಮೊನ್ನೆ ಬಂದವರು ಹೂಂ... ಅಂದ್ರೆ...."

"ನಿಲ್ಸು.. ಮೈತ್ರಿ...ಅದಕ್ಕೂ ಮೊದ್ಲು ನಾನೊಂದು ಸಿಹಿಸುದ್ದಿ ಹೇಳ್ಬೇಕು..ನಮ್ಮಿಬ್ರ ಬಾಂಧವ್ಯದ ಬಗ್ಗೆ..."

"ಹೇಳೋ ಸುಕುಮಾರ ಬೇಗ...ಇದನ್ನೇ ಕೇಳೋದಕ್ಕೆ ಕಾಯ್ತಾ ಇದೀನಿ.."

"ಅದೂ..ಏನಂದ್ರೆ.."

"ಅದೂ ಇಲ್ಲ..ಇದೂ ಇಲ್ಲ..ನೀ ಹೀಗೆ ಸತಾಯಿಸ್ತಾ ಇದ್ರೆ.. ನೀನು ಸಿಹಿಸುದ್ದಿ ಮುಟ್ಟಿಸುವಷ್ಟರಲ್ಲಿ ನಾನು ಯಾರೋ ಕೀಲಿಕೊಟ್ಟಂತೆ ನಡೆವ ಕೀಲಿಗೊಂಬೆಯಾಗೋಗ್ತೀನಿ ಅಷ್ಟೇ ಕಿಶನ್..."

"ಹಾಗೆಲ್ಲ ಆಗೋ ಚಾನ್ಸೇ ಇಲ್ಲ...ನಿನ್ನ ಅಪ್ಪನನ್ನು ನಾನು ಒಪ್ಪಿಸ್ತೀನಿ.."

"ನಿಂಗೆ ಎಷ್ಟು ಹೇಳಿದ್ರು ಅರ್ಥ ಆಗಲ್ಲ ಕಿಶನ್...ಅಪ್ಪ ನನಗಾಗಿ ಬೇರೆ ಯುವಕನನ್ನು ಹುಡುಕ್ತಾ ಇದ್ದಾರೆ..."

"ಶೀಘ್ರದಲ್ಲೇ ಇನ್ನೊಂದು ಪಾರ್ಟಿನೂ ಹುಡುಗಿಯನ್ನು ನೋಡೋಕೆ ಬರುತ್ತೆ ...."

"ಏನಂದೆ......"

"...ಅದೇ..."

"ಅಂದ್ರೆ..."

"ಏನೆಂದು ಅರ್ಥ ಆಗಿಲ್ವಾ ಈಗ ನಿಂಗೆ.."

"ನಂಬೋಕಾಗ್ತಿಲ್ಲ ನಿನ್ನ ಮಾತನ್ನ..."

"ಇನ್ನು ಕೆಲವೇ ದಿನದಲ್ಲಿ ನಾನು ಶಾಸ್ತ್ರೀನಿವಾಸಕ್ಕೆ ಕನ್ಯಾರ್ಥಿಯಾಗಿ ಬರಲಿದ್ದೇನೆ..."

"ಹೌದಾ.."ಎಂದ ಮೈತ್ರಿಯ ಕಣ್ಣುಗಳಲ್ಲಿ ಮಿಂಚೊಂದು ಮೂಡಿತು..ನಡುವು ಹಿತವಾಗಿ ಕಂಪಿಸಿತು..


ಆನಂದದ ಅಲೆಯಲ್ಲಿ ಮುಳುಗೇಳುತ್ತಾ ಬಾಯ್ ಹೇಳಿ  ತರಗತಿಗೆ ಗೆಳತಿಯ ಜೊತೆ ತೆರಳಿದಳು..


                     *****

             ಕಿಶನ್ ಸೋಮವಾರ ಬೆಳಗ್ಗೆ ಮನೆಗೆ ಕರೆಮಾಡಿದ್ದ..ಮನೆಯಲ್ಲಿ ಮುಂದಿನ ವರ್ಷ ಮದುವೆ ಮಾಡೋಣ ಎಂದು ನಿರ್ಧರಿಸಿದ್ದರು..ಆದರೂ ತನ್ನ ಪ್ರೇಮವನ್ನು ಅಮ್ಮನಲ್ಲಿ ಅರುಹಿದನು. ನಾನೇನೂ ಬೇಡವೆಂದು ಹೇಳಲಾರೆ..ನಿನ್ನನ್ನೇ ಮನಸಾರೆ ಹಚ್ಚಿಕೊಂಡ ಯುವತಿಯನ್ನು ನೋಯಿಸಬಾರದು..ಆದರೂ ಅಪ್ಪನ ಮಾತು ಕೂಡಾ ಮುಖ್ಯ ...ಅಪ್ಪ ಕಾರ್ಯಕ್ರಮವೊಂದಕ್ಕೆ ತೆರಳಿದ್ದಾರೆ.. ಸಂಜೆ ಬಂದಾಗ ಕರೆ ಮಾಡಿ ಮಾತನಾಡು..ಎಂದ ಅಮ್ಮ...


            ಕಿಶನ್ ನ ಪೂರ್ತಿ ಹೆಸರು ಕಿಶನ್ ಶಂಕರ ಶರ್ಮ..ಕರಾವಳಿಯ ವೈದಿಕ ಕುಟುಂಬವೊಂದರ ಕುಡಿ.. ಕುಟುಂಬದ ಮೂಲಮನೆ ಜಾಜಿಮೂಲೆ ಮನೆ... ಕೆಲವು ಜನ ಮಾತ್ರ ಈಗ ವೈದಿಕ, ಪೌರೋಹಿತ್ಯ ದಲ್ಲಿ ತೊಡಗಿಸಿಕೊಂಡವರು..ಇತರರು ಕೃಷಿ , ಉದ್ಯೋಗ ಎಂದು ಬದುಕಿಗೊಂದು ಅನ್ಯಮಾರ್ಗವನ್ನು ಅನುಸರಿಸಿಕೊಂಡಿದ್ದಾರೆ ... ಕಿಶನ್ ಶರ್ಮನ ಅಜ್ಜ ಶಂಕರನಾರಾಯಣ ಶರ್ಮರು ಜಾಜಿಮೂಲೆ ಮನೆಯಿಂದ ಆಸ್ತಿಯಲ್ಲಿ ಪಾಲು ಪಡೆದು ಅದನ್ನು ತನ್ನ ಕುಟುಂಬದವರಿಗೆ ಮಾರಿ ಬಂದ ಹಣದಲ್ಲಿ ಮಾರೂರಿನಲ್ಲಿ ಒಂದು ಕೃಷಿ ಭೂಮಿ ಖರೀದಿಸಿ ಕೃಷಿಯಿಂದಲೇ ಜೀವನ ಸಾಗಿಸಿದರು..ಇಬ್ಬರು ಹೆಣ್ಣುಮಕ್ಕಳು ಒಂದು ಗಂಡು ಮಗು ಆದಾಗ ಶಂಕರನಾರಾಯಣ ಶರ್ಮರ ಮಡದಿ ಅಸೌಖ್ಯದಿಂದ ತೀರಿಕೊಂಡರು..ನಂತರ ತನಗಿಂತ ಇಪ್ಪತ್ತು ವರ್ಷ ಎಳೆಯ ತಂದೆತಾಯಿಯಿಲ್ಲದ ಬಡ ಕನ್ಯೆಯನ್ನು ವರಿಸಿದರು...ಎಳೆಯ ವಯಸ್ಸು.. ಜವಾಬ್ದಾರಿ ಅಧಿಕ..ತಾನೂ ಬಸುರಿಯಾಗಿ ಮಕ್ಕಳನ್ನು ಹೆರುತ್ತಾ ಗಂಡನ ಮೊದಲ ಪತ್ನಿಯ ಮಕ್ಕಳನ್ನು ಸಲಹಿದಳು.. ವಿಪರೀತ ಭೇದಭಾವವಲ್ಲದಿದ್ದರೂ ಅಲ್ಪಸ್ವಲ್ಪ ತನ್ನ ಮಕ್ಕಳ ಬಗ್ಗೇ ಒಲವು ತೋರಿಸುತ್ತಿದ್ದಳು...ಮೊದಲ ಪತ್ನಿಯ ಗಂಡುಮಗ ಗಣೇಶ ಶರ್ಮ...ಚಿಕ್ಕಮ್ಮನ ನಡತೆ ಹಿಡಿಸದಿದ್ದ ಗಣೇಶನಿಗೆ ಮನೆಯಿಂದ ಹೊರಹೋಗುವ ಬಯಕೆ ಬಹಳ..ಅಕ್ಕಂದಿರ ಮದುವೆಯಾಗುತ್ತಿದ್ದಂತೆ ತಾನೂ ಮದುವೆಯಾಗುವುದಾಗಿ ತಂದೆಗೆ ತಿಳಿಸಿದ್ದ...
"ಇನ್ನೂ ಇಪ್ಪತ್ತೆರಡು ವಯಸ್ಸು ಆಗಿಲ್ಲ.. ಏನು ಅವಸರ.." ಎಂದರೂ ಕೇಳದ ಗಣೇಶ ಶರ್ಮನಿಗೆ ಅವನ ಸೋದರ ಮಾವನೇ ಹೆಣ್ಣುಕೊಡಲು ಮುಂದಾಗಿದ್ದ..ತನ್ನ ಅಕ್ಕನ ಮರಣಾನಂತರ ಸಂಬಂಧ ವೃದ್ಧಿಸಿದಂತೆ ಆಯಿತು ಎಂದು...

         ಹೀಗೆ ಸೋದರ ಸಂಬಂಧದಲ್ಲಿ ಮಮತಾಳನ್ನು ಮದುವೆಯಾಗಿ  ಪಕ್ಕದೂರಿನಲ್ಲಿ ಕುಂಪೆ ಎಂಬಲ್ಲಿ ಅಪ್ಪ ತೆಗೆದುಕೊಟ್ಟ ಕೃಷಿ ಭೂಮಿಯಲ್ಲಿ ಕೃಷಿ ಮಾಡುತ್ತಾ ಬಾಳಿದ ಇವರಿಗೆ ಮೂವರು ಮಕ್ಕಳು.. ಮೊದಲನೆಯವನು ಕಿಶನ್ ಮತ್ತಿಬ್ಬರು ಹೆಣ್ಣುಮಕ್ಕಳು..ದೊಡ್ಡವಳಿಗೆ ಎರಡು ವರ್ಷದ ಹಿಂದೆ ಮದುವೆಯಾಗಿದ್ದು ಸಣ್ಣವಳಿಗೆ ಎರಡು ತಿಂಗಳ ಹಿಂದಷ್ಟೇ ವಿವಾಹವಾಗಿತ್ತು..ಅದೇ ಕಾರಣಕ್ಕೆ ಕಿಶನ್ ನ ವಿವಾಹ ಮುಂದಿನ ವರ್ಷ ಮಾಡುವುದೆಂದು ನಿರ್ಧರಿಸಿದ್ದರು..

    ಮುಂದುವರಿಯುವುದು..


✍️... ಅನಿತಾ ಜಿ.ಕೆ.ಭಟ್.
12-02-2020.


   


2 comments:

  1. ಮುಂದಿನ ಭಾಗ ಬೇಗ ಬೇಗ ಬರಲಿ... 😊

    ReplyDelete
  2. ಹಾಗೇ ಆಗಲಿ.. ಧನ್ಯವಾದಗಳು 💐🙏

    ReplyDelete