ರಾತ್ರಿ ಹತ್ತು ಗಂಟೆಯಾದರೂ ಶಂಕರನ ಕುಟುಂಬ ಆಗಮಿಸದಿದ್ದಾಗ ಶ್ಯಾಮಶಾಸ್ತ್ರಿಗಳು ಮಗ ಭಾಸ್ಕರನಲ್ಲಿ ಒಮ್ಮೆ ಶಂಕರನಿಗೆ ಕರೆ ಮಾಡು ಎಂದು ಆದೇಶಿಸಿದರು..ಅದರಂತೆ ಕರೆ ಮಾಡಿದಾಗ ಇನ್ನೂ ಒಂದು ಗಂಟೆ ಬೇಕು.. ರಸ್ತೆ ತುಂಬಾ ಹದಗೆಟ್ಟಿದೆ ಎಂಬ ಮಾಹಿತಿ ದೊರೆತಿತು..ಮಂಗಳಮ್ಮ "...ಮಾವ.. ನೀವು ಊಟ ಮಾಡಿ ಮಲಗಿ.. ಎಲ್ಲರೂ ಬಂದಾಗ ಎಬ್ಬಿಸುತ್ತೇವೆ ..."ಎಂದರು..ಆದರೂ ಒಪ್ಪದ ಶಾಸ್ತ್ರಿಗಳು ಮಗನ ಕುಟುಂಬದ ಜೊತೆಗೆ ಊಟಮಾಡುವುದಾಗಿ ಹಠ ಹಿಡಿದು ಕುಳಿತರು.. ಅಜ್ಜನಿಗೆ ಸಮಯ ಕಳೆಯಲು ಯಕ್ಷಗಾನದ ಡಿವಿಡಿ ಯನ್ನು ಹಾಕಿಕೊಟ್ಟ ಮಹೇಶ್..
ಮೈತ್ರಿ ಮನೆಯವರೆಲ್ಲರೂ ತಮ್ಮತಮ್ಮ ಕೆಲಸಕಾರ್ಯಗಳಲ್ಲಿ ಮುಳುಗಿ ಹೋಗಿರುವುದರಿಂದ ಮೈತ್ರಿ ಮೊಬೈಲ್ ಆನ್ ಮಾಡಿದಳು..ಆಗ ಕಿಶನ್ ನ ಸಂದೇಶ ಬಂದಿರುವುದು ತಿಳಿಯಿತು.ಆದರೆ ಸಂದೇಶವನ್ನು ಯಾರೋ ಓದಿರುವುದು ಅವಳಿಗೆ ಖಾತ್ರಿಯಾಯಿತು..ಎಲ್ಲಾದರೂ ಅಪ್ಪ ಪುನಃ ಪರೀಕ್ಷಿಸಲು ಮೊಬೈಲ್ ತೆಗೆದುಕೊಂಡರೇ...ಛೇ ಛೇ... ಇರಲಾರದು... ಅಪ್ಪ ಕದ್ದುಮುಚ್ಚಿ ಕೆಲಸ ಮಾಡಲಾರರು..ಅಪ್ಪ ನೋಡಿದ್ದರೆ ಬೈಗುಳದ ಸುರಿಮಳೆಯೇ ಆಗುತ್ತಿತ್ತು..
ಮತ್ತೆ ತಮ್ಮ.. ಊಹೂಂ.. ಅವನು ನನ್ನ ಬಗ್ಗೆ ಬಹಳ ಕಾಳಜಿ ಪ್ರೀತಿಯುಳ್ಳವನು.. ಮೊನ್ನೆಯಷ್ಟೇ ನಾನು ದುಡುಕಿ ನಿರ್ಧಾರ ಕೈಗೊಂಡಾಗ ಬಂದು ಸಂತೈಸಿದವನು.. ಮದುವೆ ನಿಲ್ಲುವಂತೆ ಮಾಡುತ್ತೇನೆ ಎಂದು ಮಾತುಕೊಟ್ಟವನು.. ಅವನು ಹಾಗೆ ಮಾಡಲಾರ.. ಮತ್ತೆ ಯಾರು ನೋಡಿರಬಹುದು..
ಅಮ್ಮ ಎಲ್ಲಾದರೂ ರೂಮಿನೊಳಗೆ ಬಂದಾಗ ನೋಡಿರಬಹುದೇ ...ಚಿಕ್ಕಪ್ಪನ ಕುಟುಂಬ ಬಂದಾಗ ಬಳಸಲು ಬೇಕೆಂದು ಬೆಡ್ ಶೀಟ್ ತೆಗೆದುಕೊಂಡು ಹೋಗಲೂ ಬಂದಿದ್ದರು.. ನಾನು ಹೊರಗಡೆ ಇದ್ದೆ..ಅಮ್ಮನದೇ ಕೆಲಸವಿರಬೇಕು...ಅಮ್ಮ ಏನಾದರೂ ಅಪ್ಪನ ಕಿವಿಯೂದಿದರೆ ಕಾರ್ಯಕೆಟ್ಟೀತು..
ದೇವ್ರೇ..ನಾನೇನು ಮಾಡಲಿ... ಎಂದು ತಲೆಕೆಡಿಸಿಕೊಂಡಳು ಮೈತ್ರಿ.
******
ಬಾರಂತಡ್ಕದ ಕೇಶವ್ ನ ತಂದೆ ಬಂಗಾರಣ್ಣ ಕೂಸಿನ ಜಾತಕವನ್ನು ತೆಗೆದುಕೊಂಡು ಜೋಯಿಸರ ಬಳಿಗೆ ತೆರಳಿದರು...ಮುಖ ಖುಷಿಯಿಂದ ಅರಳಿತ್ತು..ಗಮನಿಸಿದರು ಪುರುಷೋತ್ತಮ ಜೋಯಿಸರು..
"ಏನು...ಬಂಗಾರಣ್ಣ..ಬಹಳ ಲವಲವಿಕೆಯಿಂದ ಬಂದಿದ್ದೀರಿ..."
"ಅದೇ.. ಒಂದು ಒಳ್ಳೆಯ ಕೆಲಸಕ್ಕೆ ಬಂದೆ.."
"ಹಾಗೆ...ಗೊತ್ತಾಯ್ತು ಬಿಡಿ.."
"ಏನು ಗೊತ್ತಾಯ್ತು ಜೋಯಿಸರೇ..."
"ಮಗನಿಗೆ ಎಲ್ಲಿಯಾದರೂ ಸಂಬಂಧ ಬಂದಿರಬಹುದು.."
"ನೀವು.. ಹೇಳಿದ್ದು ನೂರಕ್ಕೆ ನೂರು ಸತ್ಯ ಮಾರಾಯ್ರೆ...ಒಳ್ಳೆ ಜೋಯಿಸರು..ಬಾಯಿ ತೆಗೆದು ಹೇಳಿದ್ದೆಲ್ಲ ಸತ್ಯವಾಗಿರುತ್ತದೆ... ಅದಕ್ಕೇ ನಾನು ನಿಮ್ಮಲ್ಲಿಗೇ ಜಾತಕ ತೋರಿಸಲು ಬರುವುದು.."
"..ಹ್ಹ ಹ್ಹ ಹ್ಹಾ...ಕಲಿತ ಶಾಸ್ತ್ರಗಳನ್ನು ಮರೆಯದೆ ಕುಂಡಲಿ ನೋಡುವುದು,ಭವಿಷ್ಯ ಹೇಳುವುದು ನನ್ನ ಕಾಯಕ...ಸರಿ ಜಾತಕ ಕೊಡಿ.."
ಜಾತಕ ಕೊಟ್ಟರು ಬಂಗಾರಣ್ಣ.. ಕುಂಡಲಿಯನ್ನು ನೋಡಿ ಏನೋ ಲೆಕ್ಕ ಹಾಕತೊಡಗಿದರು .. ಮನದೊಳಗೆ ಬೇರೆಯೇ ಲೆಕ್ಕ ಹಾಕತೊಡಗಿದರು..ಕೂಟಾವಳಿ ನೋಡಿದಾಗ ಸುಮಾರು ಹೊಂದಾಣಿಕೆ ಇದೆ..ಆದರೂ ಒಪ್ಪಿಕೊಂಡಿದ್ದ ಮಾತನ್ನು ನಡೆಸಿಕೊಡದಿದ್ದರೆ ಚಂದವಿಲ್ಲ.. ಏನು ತೊಂದರೆಯನ್ನು ಹೇಳೋಣ ಎಂದು ತಲೆಕೆರೆದುಕೊಂಡರು..
"ನೋಡಿ..ಬಂಗಾರಣ್ಣ ಜಾತಕ ಸುಮಾರಾಗಿ ಕೂಡಿಬರುತ್ತದೆ.. ಆದರೆ ಇನ್ನು ನಾಲ್ಕು ವರುಷದಲ್ಲಿ ಇವಳ ಜಾತಕದಲ್ಲಿ ಹರಣಗಂಡ ಯೋಗವಿದೆ..ಇದರ ಪರಿಣಾಮವಾಗಿ ನಿಮ್ಮ ಮಗನಿಗೆ ಆಪತ್ತು ನಿಶ್ಚಿತ.. ಅದು ಯಾವ ಮಟ್ಟಕ್ಕಾದರು ತಲುಪಬಹುದು..ಜೀವಕ್ಕೇ ಎರವಾಗಲೂ ಬಹುದು.. ಆದುದರಿಂದ ಸ್ವಲ್ಪ ಆಲೋಚನೆ ಮಾಡಬೇಕಾಗುತ್ತದೆ.. ಬೇರೆಯವರಿಗಾದರೆ ಯಸ್ ಎಂದು ಹೇಳುತ್ತಿದ್ದೆ.. ಆದರೆ ನೀವು ಬಹಳ ಆತ್ಮೀಯರು.ಯಾವಾಗಲೂ ಮುಖ ನೋಡಬೇಕಾಗುತ್ತದೆ..ನಿಮ್ಮಿಂದ ಹೇಗೆ ಮುಚ್ಚಿಡಲಿ..ನಿಮ್ಮ ಮಗನ ಭವಿಷ್ಯದ ದೃಷ್ಟಿಯಿಂದ ಈ ಸಂಬಂಧ ಬೇಡ..ಅವನಿಗೇನು ತುಂಬಾ ವಯಸ್ಸಾಗಿಲ್ಲ.. ವಿದ್ಯಾವಂತ..ಒಳ್ಳೆಯ ಕಾಲ್ಗುಣದ ಕನ್ಯೆ ಸಿಗುವುದರಲ್ಲಿ ಸಂಶಯವಿಲ್ಲ.."
ಎಂದು ಪುರುಷೋತ್ತಮ ಜೋಯಿಸರು ನುಡಿದಾಗ ಬಂಗಾರಣ್ಣನ ಮುಖದಲ್ಲಿ ನಿರಾಸೆಯ ಎಳೆಯೊಂದು ಮೂಡಿ ಮರೆಯಾಯಿತು...
"ಜೋಯಿಸರೇ...ಅದಕ್ಕೇನಾದರೂ ಪರಿಹಾರ ಮಾಡಿ ಮದುವೆ ಮಾಡಲು ಸಾಧ್ಯವಾ.."
"ಬಂಗಾರಣ್ಣ...ಪರಿಹಾರ ಎಲ್ಲದಕ್ಕೂ ಇದೆ.. ಪುರೋಹಿತರಿಗೆ ದಕ್ಷಿಣೆ ಕೊಟ್ಟರೆ ಶಾಂತಿ ಹೋಮ ಮಾಡುತ್ತಾರೆ.ಆದರೆ ಗಂಡಾಂತರ ಬಲವಾಗಿ ಇದ್ದರೆ ಅದು ಯಾವುದರಿಂದಲೂ ಬರುವ ಅಪಾಯವನ್ನು ತಪ್ಪಿಸಲು ಸಾಧ್ಯವಿಲ್ಲ.. ಮತ್ತೆ ನಾನೇನೂ ಹೇಳಲಾರೆ..ನಿಮ್ಮಿಷ್ಟ..ನನ್ನ ಪ್ರಕಾರ ಈ ಹುಡುಗಿ ಬೇಡ.."
"ನೀವು ಹೇಳುವುದು ಸರಿ ಜೋಯಿಸರೇ..ಎಷ್ಟೋ ಕಡೆ ನಾನೂ ನೋಡಿದ್ದೇನೆ.. ಶಾಂತಿ ಹೋಮ ಮಾಡಿಸಿದರೂ ಅಪಾಯಗಳು ಆಗಿವೆ.."
"ಹೌದು..ಅಂತಹ ಉದಾಹರಣೆಗಳಿವೆ.."
"ಸರಿ..ಜೋಯಿಸರೆ..ಇನ್ಯಾವುದಾದರೂ ಜಾತಕ ಬಂದರೆ ತರುತ್ತೇನೆ.."
"ಹಾಗೇ ಮಾಡಿ ಬಂಗಾರಣ್ಣ..."
ಎನ್ನುತ್ತಾ ಬೀಳ್ಕೊಟ್ಟರು ಪುರುಷೋತ್ತಮ ಜೋಯಿಸರು..
ಬಂಗಾರಣ್ಣ ಮನೆತಲುಪಿ ಮನೆಯವರಲ್ಲಿ ಸಣ್ಣ ಮುಖ ಮಾಡಿಕೊಂಡು ಸುದ್ದಿ ಹೇಳಿದ..."ನಂಗೆ ಭಾರೀ ಆಸೆಯಿತ್ತು.. ಶಾಸ್ತ್ರಿಗಳ ಕುಟುಂಬದ ಹುಡುಗಿ ಸೊಸೆಯಾಗಿ ಬಂದರೆ ಬಹಳ ಹೆಮ್ಮೆ ಎಂದು ..ಎಲ್ಲ ನೀರ ಮೇಲೆ ಹೋಮ ಮಾಡಿದಂತಾಯಿತು.."
"ಹೌದು..ರೀ..ನಾನೂ ಬಹಳ ಕನಸು ಕಂಡಿದ್ದೆ...ಕೈತೊಳೆದು ಮುಟ್ಟಬೇಕು ಅಷ್ಟು ಚೆಂದದ ಬೆಣ್ಣೆಬಣ್ಣದ ಕೂಸು.. ಎಷ್ಟು ನಯವಿನಯ.. ಇಂಜಿನಿಯರಿಂಗ್ ಓದಿದರೂ ಗತ್ತಿಲ್ಲ..ಹಿರಿಯರಿಗೆ ತಲೆಬಗ್ಗಿಸಿ ನಡೆವ ಕೂಸು.."
"ಏನು ಮಾಡೋದು ಸುಮ..ನಮ್ಮ ಮಗನಿಗೆ ಯೋಗವಿಲ್ಲ.."
"ರೀ.. ಕೇಶವ್ ನ ಬಗ್ಗೆ ನನ್ನ ತವರಿನಲ್ಲಿ ತಮ್ಮ ತಂಗಿ ಅತ್ತಿಗೆಯರು ಏನೇನೋ ಅಂದಾಗ ಎಷ್ಟು ಅವಮಾನವಾಗಿತ್ತು ನನಗೆ...ಇಂತಹ ಒಳ್ಳೆ ಮನೆತನದ ಮುದ್ದಾದ ಸೊಸೆ ಸಿಕ್ಕಿದ್ದಾಳೆ ಎಂದು ಅವರೆಲ್ಲರ ಎದುರು ಬೀಗಬೇಕು ಅಂದುಕೊಂಡಿದ್ದೆ.."
"ಅಪ್ಪ.. ಅಮ್ಮ.. ಒಂದ್ನಿಮಿಷ ನಿಲ್ಲಿಸ್ತೀರಾ..."ಎಂದ ಕೇಶವ್..
"ಏನಪ್ಪಾ..ನಿನ್ನ ಅಭಿಪ್ರಾಯ.."ಎಂದು ಕೇಳಿದರು ಅವನ ತಂದೆ ಬಂಗಾರಣ್ಣ..
"ನಾವು ಯಾಕೆ ಇನ್ನೊಬ್ಬ ಜೋಯಿಸರಲ್ಲಿ ಜಾತಕ ತೋರಿಸಬಾರದು.. ಸೆಕೆಂಡ್ ಒಪೀನಿಯನ್ ಪಡೆಯುವುದು ತಪ್ಪಲ್ಲ ಅಲ್ಲವಾ.."
"ಹೌದು... ನೀನು ಹೇಳಿದ್ದೂ ಸರೀನೇ..ಆದರೆ ಪುರುಷೋತ್ತಮ ಜೋಯಿಸರು ನಾವು ಹಲವಾರು ವರ್ಷಗಳಿಂದ ಕುಂಡಲಿ ತೋರಿಸುತ್ತಿದ್ದ ನಂಬಿಗಸ್ಥ ಜೋತಿಷಿಗಳು..ನಮಗೆ ಸುಳ್ಳು ಹೇಳಲಾರರು.."
"ಹಾಗಲ್ಲ ಅಪ್ಪ...ಒಬ್ಬ ಜೋತಿಷಿಯ ಆಲೋಚನೆಗೂ ಇನ್ನೊಬ್ಬ ಜೋತಿಷಿಯ ಸಲಹೆಗೂ ವ್ಯತ್ಯಾಸ ಇರುತ್ತದೆ ಅಲ್ವಾ.."
"ರೀ... ಕೇಶವ್ ಗೂ ಹುಡುಗಿ ಹಿಡಿಸಿಬಿಟ್ಟಿದ್ದಾಳೆ ಅಂತಾಯ್ತು.. ಅವನಿಗೆ ಈ ಸಂಬಂಧ ಬಿಡೋದಕ್ಕೆ ಮನಸಿಲ್ಲ ನೋಡಿ..."ಎಂದು ತಾಯಿ ಸುಮಾ ಮಗನತ್ತ ನೋಡಿ ನಗುತ್ತಾ ಛೇಡಿಸಿದರು..
"ಹ್ಹ ಹ್ಹ ಹ್ಹಾ..ಹೌದೇನೋ..."
"ಇಲ್ಲ ಅಪ್ಪಾ..ಹಾಗೇನಿಲ್ಲ..."ಎಂದನು ನಗುತ್ತಾ.. ಆದರೆ ಒಳಗೊಳಗೇ ಅವಳ ಸೌಂದರ್ಯವನ್ನು, ಮುಗ್ಧತೆಯನ್ನು ಆರಾಧಿಸಲು ಆರಂಭಿಸಿದ್ದ... ಮಾಜಿ ಲವರ್ ಸಿಂಧ್ಯಾ ಜೊತೆಗೆ ಹೋಲಿಸಿ.. ಮೈತ್ರಿಯನ್ನು ಮದುವೆಯಾಗುವ ಭಾಗ್ಯವಂತ ನಾನು ಎಂದುಕೊಂಡು ಕನ್ನಡಿ ನೋಡುತ್ತಾ ಬೀಗುತ್ತಿದ್ದ..ಸಿಂಧ್ಯಾಗೆ ತನ್ನ ಮತ್ತು ಮೈತ್ರಿಯ ಮುದ್ದಾದ ಜೋಡಿಯ ಫೋಟೋ ಕಳುಹಿಸಿ ಹೊಟ್ಟೆ ಉರಿಸಬೇಕು ಎಂದು ಕೊಂಡಿದ್ದ..ಈಗ ಎಲ್ಲವೂ ತಲೆಕೆಳಗಾದಂತಾಯಿತು..
"ಸರಿ.. ಹಾಗಾದರೆ ಯಾವುದಕ್ಕೂ ಮುಂದಿನ ವಾರ ಬಾಳೆಮಲೆ ಜೋಯಿಸರಲ್ಲಿ ಜಾತಕ ತೋರಿಸಲು ಹೋಗೋಣ.. ಕೇಶವ್ ನೀನೂ ಬಾ ಜೊತೆಗೆ..."ಎಂದರು...
ಬಂಗಾರಣ್ಣ ತನ್ನ ಕೆಲಸಕ್ಕೆ ತೆರಳಿದರು.. ಮನದಲ್ಲಿ ಮಗ ಬೆಂಗಳೂರಿನಲ್ಲಿ ಯುವತಿಯೊಬ್ಬಳ ಪ್ರೇಮಪಾಶಕ್ಕೆ ಸಿಲುಕಿದ್ದು.. ಮತ್ತೆ ಹೇಗೋ ಗೊತ್ತಾಗಿ ಆ ಸುಳಿಯಿಂದ ಮಗನನ್ನು ಪಾರು ಮಾಡಿ ಕರೆದುಕೊಂಡು ಬಂದದ್ದು.. ಊರಲ್ಲಿ ಎಲ್ಲರೂ ತಲೆಗೊಂದರಂತೆ ಆಡಿದ್ದು , ಕೆಲವರು ಈಗಲೂ ಮುಖಕ್ಕೆ ಹೊಡೆದಂತೆ ಅದೇ ಸುದ್ದಿಯನ್ನು ಕೆಣಕುತ್ತಿರುವುದು ಎಲ್ಲವನ್ನೂ ನೆನೆದು ದುಃಖಿತರಾದರು.. ಸೌಂದರ್ಯದ ಖನಿ, ಗೌರವಾನ್ವಿತ ಮನೆತನದ ಕುವರಿ ನಮ್ಮ ಮನೆ ಸೊಸೆಯಾದರೆ ಎಲ್ಲವೂ ಸರಿಹೋದೀತು ಅಂದುಕೊಂಡಿದ್ದೆ..ನಾನೆಣಿಸಿದಂತೆ ಯಾವುದೂ ನಡೆಯುವುದಿಲ್ಲ..ರಾಮಾ..ರಾಮಾ..ಎಂದುಸುರಿದರು..
ಪುರುಷೋತ್ತಮ ಜೋಯಿಸರು ಬಂಗಾರಣ್ಣನನ್ನು ಸುಳ್ಳು ಹೇಳಿ ಸಾಗಹಾಕಿದ್ದೇನೋ ನಿಜ.. ಆದರೆ ಸಣ್ಣದಾಗಿ ಅಪರಾಧಿ ಭಾವ ಅವರನ್ನೂ ಕಾಡುತ್ತಿತ್ತು..ವರ್ಷಗಳಿಂದ ನನ್ನಲ್ಲಿಗೆ ಪಾರ್ಟಿ ಗೆ ಸುಳ್ಳು ಹೇಳಬೇಕಾಯಿತಲ್ಲ ಎಂದು..ಅದೂ ಒಳ್ಳೆಯ ಉದ್ದೇಶದಿಂದ..ಬಂಗಾರಣ್ಣ ದುಡ್ಡಿನ ಮದದಿಂದ ಮೆರೆವ ಮನುಷ್ಯ.ಮಗನೂ ಅದೇ ಮದದಿಂದಲೇ ಹಾಳಾಗಿದ್ದು.. ಶಾಸ್ತ್ರಿ ಮನೆತನ ಸಂಸ್ಕೃತಿ ಸಂಪ್ರದಾಯ ಪಾಲಿಸುವ ಮನೆತನ.ಶಾಸ್ತ್ರಿಗಳಿಗೆ ಸರಿಯಾದ ಅಳಿಯನಲ್ಲ ಕೇಶವ್...ನನ್ನ ಮಗಳಿಗೂ ಇಂತಹ ಅನ್ಯಾಯ ಆಗಬಾರದಲ್ಲ ..ಆದ್ದರಿಂದ ಒಂದೇ ಒಂದು ಸುಳ್ಳು ಹೇಳಿದೆ...ಕ್ಷಮಿಸಮ್ಮ ತಾಯೇ ಆದಿಮಾಯೇ.. ಎನ್ನುತ್ತಾ ತನ್ನ ಕುಲದೇವತೆಯನ್ನು ಸ್ಮರಿಸಿದರು..
*****
ರಾತ್ರಿ ಹನ್ನೊಂದು ಗಂಟೆಯ ಸುಮಾರಿಗೆ ಶಂಕರ,ಅವನ ಮಡದಿ ಗಾಯತ್ರಿ ಸಂಜನಾ ವಂದನಾ ಆಗಮಿಸಿದರು.. ಶ್ಯಾಮ ಶಾಸ್ತ್ರಿಗಳು ಕಾರಿನ ಬುಡದಲ್ಲೇ ಬಂದು ಮಗನ ಕುಶಲ ವಿಚಾರಿಸಿದರು.. ಭಾಸ್ಕರ ಶಾಸ್ತ್ರಿಗಳು ತಮ್ಮನಲ್ಲಿ ಪ್ರಯಾಣದ ಸಮಾಚಾರ ಮಾತನಾಡುತ್ತಾ
ತಮ್ಮನ ಕಾರಿನಿಂದ ಲಗೇಜ್ ತೆಗೆದು ಒಳಗಿಡಲು ಸಹಾಯ ಮಾಡಿದರು.. ಮಹಾಲಕ್ಷ್ಮಿ ಅಮ್ಮ ಚಾವಡಿಗೆ ಬರುತ್ತಲೇ ಮಗ ಶಂಕರ ಓಡೋಡಿ ಬಂದು ಅಬ್ಬೆಯನ್ನು ತಬ್ಬಿಹಿಡಿದು ಕಣ್ಣಾಲಿಗಳನ್ನು ತುಂಬಿಸಿಕೊಂಡನು..ನಂತರ ಕಾಲು ಮುಟ್ಟಿ ನಮಸ್ಕರಿಸಿದನು...ಗಾಯತ್ರಿಯೂ ಮಾವ ಅತ್ತೆಯನ್ನು ವಿಚಾರಿಸಿಕೊಂಡು ಕಾಲಿಗೆರಗಿದಳು.. ಸಂಜನಾ ವಂದನಾ ಮೈತ್ರಿಯ ಜೊತೆ ಸೇರಿಕೊಂಡು ಕೈ ಕೈ ಹಿಡಿದುಕೊಂಡು ಒಳಗೆ ಕಾಲಿಟ್ಟರು.
ಮಂಗಳಮ್ಮ ಎಲ್ಲರೊಂದಿಗೆ ನಗುನಗುತ್ತಾ...ಮಾತನಾಡಿ..ಕಾಲು ತೊಳೆಯಲು ನೀರು ಕೊಟ್ಟು..
ಎಲ್ಲರಿಗೂ ಕುಡಿಯಲು ಬಿಸಿನೀರು ಬೆಲ್ಲ ನೀಡಿದರು..
ಶಂಕರ ಅತ್ತಿಗೆ ಇಂದಿಗೂ ಸಂಪ್ರದಾಯ ಪಾಲಿಸುವ ಪರಿಗೆ ಅಚ್ಚರಿಪಟ್ಟನು.ಮನೆಯಿಡೀ ಕಲರವ ಕೇಳಿಸುತ್ತಿತ್ತು..ಅಪ್ಪ ಮಗ ಚಾವಡಿಯಲ್ಲಿ ಕುಳಿತು ಬಾಯ್ತುಂಬಾ ಹರಟಿದರು.. ಕೋಣೆಯೊಳಗೆ ಸಂಜನಾ ವಂದನಾರ ಕಿಲಕಿಲ ನಗು ಕೇಳಿಸುತ್ತಿತ್ತು...
ಶಂಕರ ಬರುವಾಗ ಎಲ್ಲರಿಗೂ ಅವರವರ ಇಷ್ಟದ್ದನ್ನು ಕೇಳಿ ತಂದಿದ್ದ .. ಅಮ್ಮನಿಗೆ ತಂದ ಮೈಸೂರು ಸಿಲ್ಕ್ ಸೀರೆ ತುಂಬಾ ಇಷ್ಟವಾಯಿತು ಮಹಾಲಕ್ಷ್ಮಿ ಅಮ್ಮನಿಗೆ.. "ಇದು ಮೈತ್ರಿ ಗೆ ಆಯಿತು.. ನಿಶ್ಚಿತಾರ್ಥ ಕ್ಕೆ ಉಡಲು ಯೋಗ್ಯವಾಗಿದೆ.." ಎಂದಾಗ ಶಂಕರ.."ಆಗ ಬೇರೆ ಸೀರೆ ಕೊಳ್ಳೋಣ.. ಇದು ನಿನಗಾಯಿತು.." ಎಂದ..
ಶ್ಯಾಮ ಶಾಸ್ತ್ರಿಗಳಿಗೆ ಸ್ವೆಟರ್ ತಂದಿದ್ದನ್ನು ಮುಟ್ಟಿ ಮುಟ್ಟಿ ನೋಡಿ ನುಣುಪಾಗಿದೆ ಎಂದರು.. ಎಲ್ಲರನ್ನೂ ಪ್ರೀತಿಯಿಂದ ಊಟಕ್ಕೆ ಕರೆದರು ಮಂಗಳಮ್ಮ..ಊಟ ಮಾಡಿ ಮಲಗುವಾಗ ಸಂಜನಾ ವಂದನಾ.. ನಾವು ಅಕ್ಕನ ರೂಮಿನಲ್ಲಿ ಅಕ್ಕನ ಜೊತೆ ಮಲಗೋದು ಎಂದು ಹೇಳುತ್ತಾ... ಮೂವರಿಗೆ ಇಕ್ಕಟ್ಟಾದರೂ ಹತ್ತಿರ ಒಬ್ಬರಿಗೊಬ್ಬರು ತಾಗಿಕೊಂಡು ಮಲಗಿಕೊಂಡರು.. ತಡರಾತ್ರಿಯವರೆಗೂ ಹರಟೆ ಹೊಡೆಯುತ್ತಾ ಬೆಳಗಿನ ಜಾವ ನಿದ್ರೆಗೆ ಜಾರಿದರು..
ಬೆಳಿಗ್ಗೆ ಬೇಗ ಏಳದ ಅಕ್ಕನನ್ನು ಮಹೇಶ್ ಕರೆದು ಎಬ್ಬಿಸಿದ.. ಇವತ್ತು ಕಾಲೇಜು ಇದೆ ಎಂದು ನೆನಪಿಸಿದ..ಇನ್ನು ಅರ್ಧ ಗಂಟೆ ಇರುವುದು ಎಂದಾಗ ಮೈತ್ರಿ ಗಡಿಬಿಡಿಯಲ್ಲಿ ಎದ್ದು ಗಂಟೆ ನೋಡಿದರೆ ಇನ್ನೂ ಒಂದೂಕಾಲು ಗಂಟೆ ಇತ್ತು ಕಾಲೇಜು ಬಸ್ ಬರೋದಕ್ಕೆ..
ಬೇಗಬೇಗನೆ ಫ್ರೆಶ್ ಆಗಿ ತಿಂಡಿ ತಿಂದು ತಂಗಿಯರಿಗೆ ಬಾಯ್ ಮಾಡಿ ಹೊರಟಳು.. ಇಂದು ಮಹೇಶ್ ಕೂಡ ಬೇಗನೆ ರೆಡಿಯಾಗಿ ನಿಂತು ಅಕ್ಕನನ್ನು ಬೈಕ್ ನಲ್ಲಿ ಕರೆದೊಯ್ದ.
ಬಸ್ ಸ್ಟ್ಯಾಂಡ್ ಬಳಿ ಅಕ್ಕನನ್ನು ಇಳಿಸಿದ.."ಅಕ್ಕಾ... ನಾನೊಂದು ಪ್ರಶ್ನೆ ಕೇಳುತ್ತೇನೆ ..ನಿಜ ಉತ್ತರ ಹೇಳಬೇಕು.."ಎಂದ..
ಮೈತ್ರಿ ಒಳಗೊಳಗೇ ಹೆದರುತ್ತಾ ಹೊರಗೆ ತೋರಗೊಡದೆ.."ಏನದು..ಕೇಳು"ಎಂದಳು..
"ಅಕ್ಕಾ..ಇಶಾ..ಅಂದರೆ ಹುಡುಗಿಯಾ...ಅಲ್ಲಾ..
"
"ಇಶಾ.. ಅಂದ್ರೆ ಹುಡುಗಿಯ ಹೆಸರೂ ತಾನೇ.. ಅದಕ್ಕೆ ಯಾಕೆ ಅನುಮಾನ.."
"ಅಲ್ಲಾ..ನಂಗೇನೋ ಅನುಮಾನ.. ಇಶಾ ಅಂದರೆ ನಿನ್ನ ಬಾಯ್ಫ್ರೆಂಡ್... ಇರಬಹುದು ಅಂತ.."
"ಏಯ್.. ಸುಮ್ನೆ ಹೋಗೋ..ಏನೇನೋ ತಮಾಷೆ ಮಾಡಬೇಡ..."
"ಸತ್ಯ ಹೇಳು... ಅಕ್ಕಾ.. ಇಲ್ಲಾಂದ್ರೆ ಮತ್ತೆ ನಿನ್ನ ಕೇಶವ್ ನ ಮದುವೆ ಫಿಕ್ಸ್ ಆಗುತ್ತೆ..."
"ನನ್ನ ಸತಾಯಿಸಬೇಡ ಕಣೋ.. ಕೇಶವ್ ಗೂ ಇಶಾ ಅನ್ನೋ ಫ್ರೆಂಡ್ ಗೂ ಏಕೆ ಸಂಬಂಧ ಹೆಣೆಯುತ್ತೀಯಾ ..
ತಮ್ಮ..ನನಗೆ ಕೇಶವ್ ಹಳ್ಳಿಯುವಕ,ಉದ್ಯೋಗವಿಲ್ಲ ,ಅಪ್ಪ ಅಮ್ಮ ಕೊಟ್ಟರೆ ದುಡ್ಡು,ಇಲ್ಲದಿದ್ರೆ ಇಲ್ಲ..ಹೀಗೆಲ್ಲ ಹಲವಾರು ಕಾರಣಗಳಿಗೆ ಇಷ್ಟವಿಲ್ಲ.."
"ಆದ್ರೂ ನಂಗೆ ಡೌಟ್.."
"ನಿಂಗೆ ಹಾಗೇನೇ ಯಾವಾಗ್ಲೂ.."
"ಅಕ್ಕಾ..ಮತ್ತೆ ಯಾಕೆ ಇಶಾ ನಿನ್ನೆ ನಮ್ಮ ಮದುವೆಗೆ ಅಪ್ಪ ಅಮ್ಮ ಒಪ್ಪಿದ್ರು ... ಅಂತ ಮೆಸೇಜ್ ಕಳಿಸಿದ್ದು.."ಎಂದು ತಮ್ಮ ಮಹೇಶನ ಬಾಯಿಯಿಂದ ಕೇಳಿದಾಗ ....ನಿನ್ನೆ ಸಂದೇಶ ಓದಿದ್ದು ಮಹೇಶನೇ ಎಂದು ಖಾತ್ರಿಯಾಯಿತು.ಮೈತ್ರಿಗೆ..ಒಮ್ಮೆಲೇ ಬೆವರಿದಳು.. ಗುಟ್ಟು ರಟ್ಟಾಯ್ತು... ಎಂದೆನಿಸಿತು...
ಮುಂದುವರಿಯುವುದು....
✍️... ಅನಿತಾ ಜಿ.ಕೆ.ಭಟ್.
14-02-2020.
ನಮಸ್ತೇ....
ಹೆಚ್ಚಿನ ಓದಿಗಾಗಿ ಬರಹದ ಕೆಳಗಡೆ ಇರುವ'Home'ಮತ್ತು > ಸಂಕೇತಗಳನ್ನು ಬಳಸಿಕೊಳ್ಳಬಹುದು..ಬರಹದ ಮೇಲ್ಭಾಗದಲ್ಲಿ ಲಿಂಕ್ ನ ಪಕ್ಕದಲ್ಲಿ ಮೂರು ಡಾಟ್ ಮತ್ತು ಲೈನ್ ಇರುವಲ್ಲಿ ಕ್ಲಿಕ್ ಮಾಡಿ ಶೇರ್ ಆಪ್ಷನ್ ಸೆಲೆಕ್ಟ್ ಮಾಡಿ ವಾಟ್ಸಪ್ ,ಫೇಸ್ಬುಕ್,ಮೆಸೇಂಜರ್...ಇತ್ಯಾದಿಗಳ ಮೂಲಕ ಶೇರ್ ಮಾಡಬಹುದು...💐🙏
👏👏
ReplyDeleteಧನ್ಯವಾದಗಳು..💐🙏
ReplyDelete