Thursday, 13 February 2020

ಒಲವಿನ ಬಲೆ





    ಅಭಿನಯ ಕಾಲೇಜಿಗೆ ಹೋಗುವ ಧಾವಂತದಲ್ಲಿ ವೇಗವಾಗಿ ಸ್ಕೂಟಿ ಓಡಿಸುತ್ತಿದ್ದಳು.ಸಿಗ್ನಲ್ ಬಿದ್ದಿತ್ತು.ವಾಹನಗಳು ಸಾಲುಗಟ್ಟಿ ನಿಂತಿದ್ದವು.ಜಾಗವಿದ್ದೆಡೆ ಸ್ಕೂಟಿ ತೂರಿಸುತ್ತಾ ಮುಂದೆ ಮುಂದೆ ಸಾಗಿದಳು.ಮಧ್ಯೆಮಧ್ಯೆ ಕಾಲು ನೆಲಕ್ಕೂರುತ್ತಾ  ಸಾಗುವುದರಲ್ಲಿ ಅವಳಿಗೇನೋ ಖುಷಿ.. ಮುಂದೆ ಚಲಿಸುತ್ತಿದ್ದಾಗ ಬಿದ್ದು ಬಿಟ್ಟಳು..ಪಕ್ಕದ ಗಾಡಿಯವ ಗಾಡಿಯಿಂದಿಳಿದು ಬಂದು ಅವಳ ಕೈ ಹಿಡಿದು ಎತ್ತಿದ.
"ಏನ್ರೀ.. ನೀವು... ಹೆಣ್ಮಕ್ಕಳು ಸಿಕ್ಕರೆ ಮೈಮುಟ್ಟೋಕೆ ಕಾಯ್ತಾ ಇರ್ತೀರಾ.."ಎಬ್ಬಿಸಿದವನನ್ನು ರೇಗಿದಳು ಅಭಿನಯ..
"ಸಾರಿ ಮೇಡಂ.".ಎಂದ ಆತ..

"ನೀವ್ಯಾಕ್ರಿ..ಸಾರಿ ಕೇಳೋದು..ನಿಮ್ಮ ಗಾಡಿನ ಓವರ್ ಟೇಕ್ ಮಾಡುತ್ತಾ ಬಂದವರು ಅವರು..ತಾಟಿಸಿದ್ರು.ಬಿದ್ದುಬಿಟ್ಟರು .ಸಹಾಯಕ್ಕೆ ಅಂತ ಹೋದ ನಿಮ್ಮನ್ನೇ ಹೇಗಂತಾರೆ ನೋಡಿ.."

"ಮನುಷ್ಯತ್ವ ಅನ್ನೋದೇ ಇಲ್ಲ ಆಯಮ್ಮನಿಗೆ.."

"ನಿಮ್ಮ ಗಾಡಿ ರಿಪೇರಿಗೆ ದುಡ್ಡು ಕೇಳ್ರೀ.."

"ಆಯಮ್ಮನಿಗೆ ಸರಿ ಮಂಗಳಾರತಿ ಮಾಡ್ರಿ .."
ಎಂದೆಲ್ಲ ಹತ್ತಿರದಲ್ಲಿದ್ದ ವಾಹನದ ಚಾಲಕರು ಹೇಳುತ್ತಿದ್ದರೂ ಶರತ್ ಸುಮ್ಮನೆ ನಿಂತಿದ್ದ..ಅಭಿನಯ ತಾನು ಮೈಯನ್ನು ಸವರುತ್ತಾ ಕೆಸರನ್ನು ಒರೆಸಿದಳು.ಗಾಡಿಯನ್ನು ಮೇಲೆತ್ತಿದಳು..

"ಯಾಕೆ ನನ್ನ ಗಾಡಿಗೆ ತಾಗಿಸಿದ್ರಿ..? ಶರತ್ ಜೊತೆಗೆ ಜಗಳಕ್ಕಿಳಿದಳು.."

"ಸಾರಿ..ಅಂದ್ನಲ್ಲ..ಆಗ್ಲೇ.." ಅಂದಾಗ ತನ್ನ ಸಣ್ಣತನಕ್ಕೆ ತಾನೇ ಮರುಕಪಟ್ಟಳು ಅಭಿನಯ.ತನ್ನ ಸ್ಕೂಟಿ ಅವನ ಬೈಕಿಗೆ ತಾಗಿದರೂ ಅವನೇ ಸಾರಿ ಕೇಳಿ ಸುಮ್ಮನಾದ ಮಹಾತ್ಮ...ಎಂದುಕೊಳ್ಳುತ್ತಿರುವಾಗಲೇ ಸಿಗ್ನಲ್ ಓಪನ್ ಆಯಿತು.. ಗಾಡಿ ಸ್ಟಾರ್ಟ್ ಮಾಡಿ ರೊಯ್ಯನೆ ಸಾಗಿದಳು ಅಭಿ.. "ಎಂತಹಾ ಘಾಟಿ ಹೆಣ್ಣುಮಗಳು.. ಬೈಕಿಗೆ ತಾಗಿಸಿ ಕ್ಷಮಿಸಿ ಅನ್ನೋಕೂ ನಾಲಿಗೆ ಮುಂದೆ ಬರಲ್ಲ".. ಎಂದು ಸತ್ತಲಿದ್ದವರು ಹೇಳಿದರೂ ಶರತ್ ಕೇಳಿ ಸುಮ್ಮನಾದ..

 
     ಒಂದು ದಿನ ಸಂಜೆ ಕಾಲೇಜಿನಿಂದ ಮನೆಗೆ ಸ್ಕೂಟಿಯಲ್ಲಿ ಬರುತ್ತಿದ್ದಳು ಅಭಿ.ಇದ್ದಕ್ಕಿದ್ದಂತೆ ಸ್ಕೂಟಿ ಕೆಟ್ಟಿತು.ನಡುರಸ್ತೆಯಲ್ಲಿ ಹಾಳಾದ ಗಾಡಿಯನ್ನು ತಳ್ಳಿ ಬದಿಗೆ ನಿಲ್ಲಿಸಿದವಳಿಗೆ ಗ್ಯಾರೇಜ್ ಮೋಹನ್ ಗೆ ಹೇಳೋಣವೆಂದು ಮೊಬೈಲ್ ವ್ಯಾನಿಟಿ ಬ್ಯಾಗ್ ನಿಂದ ತೆಗೆದಾಗ ಚಾರ್ಜ್ ಕೂಡ ಖಾಲಿಯಾಗಿತ್ತು.ಏನು ಮಾಡೋದು ಎಂದು ಆಲೋಚಿಸುತ್ತಾ ನಿಂತವಳಿಗೆ ಕಂಡದ್ದು ..ಅವನೇ.. ಬಿಳಿ ಶರ್ಟ್ .. ಬ್ಲ್ಯಾಕ್ ಪ್ಯಾಂಟ್ ಧರಿಸಿ ನಡೆದುಕೊಂಡು ಬರುತ್ತಿದ್ದವನು.. ಏನೆಂದು ಕರೆಯಲಿ.. ಬಿಗುಮಾನ ಬಿಡುತ್ತಿಲ್ಲ..ಹತ್ತಿರ ಬಂದ.. ಮುಂದೆ ಹೋಗಿಯೇಬಿಟ್ಟ..ಅಯ್ಯೋ ನಾನು ನೋಡುತ್ತಾ ನಿಂತುಬಿಟ್ಟೆನೇ..ಎಂದು ನಾಲ್ಕು ಹೆಜ್ಜೆ ಅವನ ಹಿಂದೆ ಓಡಿ  "ಸರ್.. " ಎಂದು ಕರೆದಳು..
ಹಿಂದಿರುಗಿದ..

"ಏನಾಗ್ಬೇಕಿತ್ತು ಮೇಡಂ.."

"ಸಾರ್ ಅದು ಗಾಡಿ ಕೆಟ್ಟೋಗಿದೆ.. ಸ್ವಲ್ಪ..."

"ನೋಡೋಣ.. " ಎಂದು ಬಂದವನಿಗೆ ಎಲ್ಲೋ ನೋಡಿದ್ದೇನಲ್ಲ..ಯಾರಿವರು..? ಎಂದು ಎಷ್ಟು ತಲೆಕೆರೆದುಕೊಂಡರೂ ನೆನಪಾಗಲೇಯಿಲ್ಲ..ಸ್ಕೂಟಿಯನ್ನು ರಿಪೇರಿ ಮಾಡಲು ಸಾಧ್ಯವಾಗದೆ.. "ಮೇಡಂ ನಂಗೆ ಗೊತ್ತಿರುವ ಮೆಕ್ಯಾನಿಕ್ ಗೆ ಹೇಳ್ತೀನಿ..ನಿಮಗೇನೂ ಅಭ್ಯಂತರವಿಲ್ಲ ಎಂದಾದರೆ ನಿಮ್ಮನ್ನು ಮನೆಗೆ ನಾನೇ ಡ್ರಾಪ್ ಮಾಡುವೆ.." ಎಂದಾಗ ಬೇರೆ ದಾರಿ ಕಾಣದ ಅಭಿನಯ " ಓಕೆ ಸಾರ್.." ಎಂದಳು..

       ಬೈಕ್  ಮೆಲ್ಲನೆ ಜಾಗರೂಕತೆಯಿಂದ ಓಡಿಸುತ್ತಿದ್ದ.ಹಂಪ್ ಬಂದಾಗಲಂತೂ ಬಲು ನಿಧಾನವಾಗಿ ಚಲಾಯಿಸುವ ಅವನ ಪ್ರವೃತ್ತಿ ಇಷ್ಟವಾಯಿತು ಅವಳಿಗೆ.ಒಂಥರಾ ಗಂಭೀರವಾದ ನಡೆ.ಅಹಂ ಇಲ್ಲ.ಮಾತಿನಲ್ಲಿ ಪ್ರಶಾಂತತೆ . ಮನೆಮುಂದೆ ಗಾಡಿ ನಿಲ್ಲಿಸಿದ.ಇಳಿದ ಅವಳು ಮನೆಗೆ ತೆರಳುವ ಗಡಿಬಿಡಿಯಲ್ಲಿ ಥ್ಯಾಂಕ್ಸ್ ಹೇಳುವುದನ್ನೂ ಮರೆತಳು.

      ಮನೆಗೆ ತಲುಪಿದವಳ ಮನದೊಳಗೆ ಅವನದೇ ರೂಪ ಕಣ್ಣಿಗೆ ಅಚ್ಚೊತ್ತಿ ನಿಂತಿತ್ತು.ಆತನ ಹೆಸರೇನೆಂದೂ ವಿಚಾರಿಸಿಕೊಳ್ಳದ ನಾನೆಷ್ಟು ದಡ್ಡಿ..ನಾನೇ ಅಂದು ಅವನ ಗಾಡಿಗೆ ಸ್ಕೂಟಿ ತಾಗಿಸಿ ಬೈದು ಅವನಿಂದಲೇ ಸಾರಿ ಕೇಳಿಸಿದ್ದೆ..ಛೇ..ಸಣ್ಣ ವಿಷಯಕ್ಕೂ ಜಗಳ ತೆಗೆಯುವ ನನಗೆ ಅವನ ಮೌನವೇ ಸೋಜಿಗದ ಸಂಗತಿಯಾಗಿತ್ತು.ಇರಲಿ..ಗಾಡಿ ರಿಪೇರಿ ಆಗಿ ಸಿಗಲಿ.. ಆಮೇಲೆ ವಿಚಾರಿಸಿಕೊಳ್ಳುತ್ತೇನೆ..
ಎಂದು ಊಟಮಾಡಿ ಮಲಗಿದವಳಿಗೆ ಅವನದೇ ಕನವರಿಕೆ..


     ಮರುದಿನ ಗಾಡಿ ತಂದುಕೊಟ್ಟ ಮೆಕ್ಯಾನಿಕ್ ನಲ್ಲಿ ಅವನ ಬಗ್ಗೆ ವಿಚಾರಿಸಿಕೊಂಡಳು.."...ನಮಗೆ ಅವರು ಯಾರೆಂದು ತಿಳಿದಿಲ್ಲ.ಕರೆ ಬಂದಾಗ ಅಟೆಂಡ್ ಮಾಡುವುದು ನಮ್ಮ ಡ್ಯೂಟಿ..." ಎಂದ..
"ಹೋಗ್ಲಿ.. ಬಿಡಿ..ಕರೆ ಬಂದ ನಂಬರ್ ಹೇಳಿ.." ಎಂದಾಗ
"ಅಕ್ಕಾ ..ಹತ್ತಾರು ಕರೆಗಳು ಬರ್ತಿವೆ..ಯಾವ ನಂಬರಿಂದ ಬಂದಿದೆ ನಿಮ್ಮ ಗಾಡಿಯ ಕಂಪ್ಲೇಂಟ್ ಅಂತ ಹೇಗೆ ಹೇಳಲಿ .."

"ಅದು.. ನೋಡು.. ಸರಿಯಾಗಿ ಸಂಜೆ ಐದೂವರೆ ಗಂಟೆ ಗೆ ಬಂದ ಕರೆ ನೋಡಿ.."ಎಂದಾಗ
"ಯಾಕೆ ಮೇಡಂ..ನಿಮಗೇನಾದ್ರೂ ಅವರಲ್ಲಿ ಹೇಳುವುದಿತ್ತಾ.." ಎಂದು ಕೇಳಿ ಫೋನ್ ನಂಬರ್ ಹೇಳಿದ..


   ಫೋನ್ ನಂಬರ್ ಸಿಕ್ಕಿತು.ಕರೆಮಾಡಿ ಏನು ಮಾತನಾಡಲಿ..?? ಅದು ಅವನ ದೂರವಾಣಿ ಸಂಖ್ಯೆ ಅಲ್ಲದಿದ್ದರೆ ಏನು ಮಾಡಲಿ..? ಎಂಬೆಲ್ಲ ಗೊಂದಲಗಳೇ ತಲೆಯ ತುಂಬಾ..ಆದರೂ ಒಮ್ಮೆ ಪ್ರಯತ್ನಿಸಿ ನೋಡುತ್ತೇನೆ ಎಂದುಕೊಂಡು ಕರೆ ಮಾಡಿಯೇಬಿಟ್ಟಳು..ಅತ್ತ ಕಡೆಯಿಂದ ಬರುವ ಧ್ವನಿಯನ್ನು ಮೊದಲು ಆಲಿಸಬೇಕು ಎಂದು ನಿಶ್ಚಯಿಸಿದಳು.

ಅತ್ತ ಕಡೆಯಿಂದ : "ಹಲೋ..."
ಎಂಬ ಧ್ವನಿ ಬಂದಾಗ ಇದು ಅವನ ದನಿಯೇ ಎಂದು ಖಚಿತಪಡಿಸಿಕೊಂಡಳು..

"ನಾನು ಅಭಿ.."
"ಏನಾಗ್ಬೇಕಿತ್ತು ಮೇಡಂ.."
"ಅದೂ.. ನಾನು ನಿನ್ನೆ ನಿಮಗೆ ಥ್ಯಾಂಕ್ಸ್ ಹೇಳುವುದನ್ನೇ ಮರೆತಿದ್ದೆ... ತುಂಬಾ ಉಪಕಾರವಾಯ್ತು ನಿಮ್ಮಿಂದ..."
"ಅದಕೆಲ್ಲ ಥ್ಯಾಂಕ್ಸ್ ಯಾಕೆ..? ನನ್ನ ಕೈಲಾದ್ದು ಮಾಡಿದ್ದೇನೆ.."
"ಅದೇ ನಿಮ್ಮ ದೊಡ್ಡ ಗುಣ.. ಸ್ಕೂಟಿ ಮೆಕ್ಯಾನಿಕ್ ಈಗಷ್ಟೇ ಕೊಟ್ಟು ಹೋದ..."
"ಓಕೆ.. ಮೇಡಂ..."
"ಸರಿ.. ಬಾಯ್.."ಎಂದು ಫೋನಿಟ್ಟಳು.ಅವನೊಡನೆ ಮಾತನಾಡಿದ್ದನ್ನು ರೆಕಾರ್ಡ್ ಮಾಡಿಟ್ಟಿದ್ದಳು..ಅವನ ದನಿ ಕೇಳುತ್ತಲೇ ಅವಳ ಎದೆಯೊಳಗೆ ಭಾವಗಳ ಮೇಳ.ಹೇಳದೆ ದಿಬ್ಬಣ ಹೊರಟ ರಂಗಿನ ಕನಸುಗಳ ಚಿತ್ತಾರ.. ಇದೇಕೆ ಹೀಗೆ ಎಂದು ತನ್ನನ್ನೇ ಕೇಳುತ್ತಿದ್ದಾಳೆ..ತಾನು ಪ್ರೀತಿಸುತ್ತಿದ್ದೇನಾ..ಇಲ್ಲ ಇಲ್ಲ.. ಪ್ರೀತಿ ಅಂದರೇನೆಂದೇ ನನಗೆ ತಿಳಿಯದು..ಎನ್ನುತ್ತಿದ್ದವಳ ಮೊಗದಲ್ಲಿ ಆಗ ತಾನೇ ಅರೆಬಿರಿಯಲಾರಂಭಿಸಿದ ಗುಲಾಬಿ ಮೊಗ್ಗಿನಂತಹ ಕೋಮಲತೆ..ಅದೇ ಲಾಸ್ಯ..ದಿನಕರನ ಕಿರಣಕ್ಕೆ ನಾಚಿ ಕರಗುವ ಹಿಮದ ಬಿಂದುವಿನಂತೆ ಅವಳು ಅವನ ನೆನಪಿನಲ್ಲಿ ಕರಗಿದಳು..

    ಅಭಿನಯ ಸಿರಿವಂತರ ಒಬ್ಬಳೇ ಮಗಳು.ಅಪ್ಪ ಅನಂತರಾಯರು ಬಿಸ್ನೆಸ್ ಮ್ಯಾನ್..ಅಮ್ಮ ಅನುಪಮ  ಬಹುರಾಷ್ಟ್ರೀಯ ಕಂಪೆನಿಯ ಉದ್ಯೋಗಿ.ಕೈತುಂಬಾ ಸಂಪಾದನೆ ಇರುವ ಕುಟುಂಬ.ಮಗಳನ್ನೂ ಅದೇ ಮಟ್ಟದಲ್ಲಿ ಸಾಕಿದ್ದರು.ಚಿಕ್ಕಂದಿನಲ್ಲಿ ಅಭಿಯನ್ನು ನೋಡಿಕೊಳ್ಳಲು ಆಯಾ ಇದ್ದರು.ಅಪ್ಪ ಅಮ್ಮ ಉದ್ಯೋಗದಿಂದ ಸುಸ್ತಾಗಿ ಬರುತ್ತಿದ್ದರು.. ಮಾತನಾಡುತ್ತಾ ಅವರ ಸಮೀಪಕ್ಕೆ ಹೋದರೆ "ನಿನಗೆ ಬೇಕಾದ್ದೆಲ್ಲ ಆಯಾ ಕೊಡುತ್ತಾಳೆ.ಸುಮ್ಮನೆ ಕಿರಿಕಿರಿ ಮಾಡಬೇಡ.." ಎಂಬ ಅಸಹನೆ ಇಬ್ಬರಿಗೂ..ಬಾಲ್ಯದಲ್ಲಿ ಮನೆಯ ಬಾಲ್ಕನಿಯಲ್ಲಿ ನಿಂತು ಬೀದಿಯಲ್ಲಿ ಆಡುತ್ತಿದ್ದ ಮಕ್ಕಳನ್ನು ನೋಡಿ ನನಗೂ ಆಡಲು ಬಿಟ್ಟರೆ ಎಷ್ಟು ಖುಷಿಯಿತ್ತು...ನನಗೂ ಅವರಂತೆ ಒಬ್ಬ ತಮ್ಮ ತಂಗಿ ಇದ್ದರೆ ದಿನವಿಡೀ ಆಡಬಹುದಿತ್ತು ...ಎಂದೆಲ್ಲ ಯೋಚಿಸುತ್ತಾ ಕಣ್ಣೀರಾಗುತ್ತಿದ್ದಳು.ಅಪ್ಪ ಅಮ್ಮನಲ್ಲಿ ಹೇಳಿದರೆ  "ನಿನ್ನನ್ನು ಒಬ್ಬಳನ್ನು ಸಾಕುವುದೇ ಕಷ್ಟ.. ಇನ್ನು ಇನ್ನೊಂದು ಮಗು ಯಾಕೆ..?"ಎಂಬ ಉತ್ತರ ಖಾಯಂ...ಸದಾ ಸಿಡುಕುವ ಅಪ್ಪ ಅಮ್ಮನಿಂದಾಗಿ ಅಭಿಗೆ ಸರಿಯಾದ ಪ್ರೀತಿಯ ಸ್ಪರ್ಶವೇ ಸಿಗಲಿಲ್ಲ.ಅದೇ ಗುಣವನ್ನು ಮೈಗೂಡಿಸಿಕೊಂಡು ಬೆಳೆದವಳು ಗೆಳತಿಯರೊಂದಿಗೂ ಒರಟಾಗಿ ನಡೆದುಕೊಳ್ಳುತ್ತಿದ್ದಳು.ಸದಾ ಒಬ್ಬಂಟಿಯಾಗಿ ಇರುತ್ತಿದ್ದಳು ಅಭಿ..ಆದರೆ ತನ್ನದೇ ತಪ್ಪಿದ್ದರೂ ತಾನು ಅವನನ್ನು ಬೈದಾಗ ಕೋಪಿಸಿಕೊಳ್ಳದ ಶರತ್ ಮಾತ್ರ ಅವಳಲ್ಲಿ ಅದೇನೋ ಹೊಸಕಂಪನವನ್ನು ಉಂಟುಮಾಡಿದ್ದ.. ಏನಾದರೊಂದು ನೆಪವೊಡ್ಡಿ ಶರತ್ ನೊಡನೆ ದಿನವೂ ಸಂಭಾಷಣೆ ಸಾಗುತ್ತಿತ್ತು.ಅವನೂ ಅಷ್ಟೇ.ಪ್ರಶಾಂತವಾದ ದನಿ..ತುಂಟತನವಿಲ್ಲ.. ಗಂಭೀರವಾಗಿ ಪ್ರತಿಕ್ರಿಯಿಸುತ್ತಿದ್ದ.ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ ಅಭಿಯ ಪ್ರೇಮ ಅವನೆಡೆಗೆ..ಅವನ ಬಳಿ ಹೇಗೆ ಹೇಳಿಕೊಳ್ಳಲಿ.ಅವನಿಗೆ ನನ್ನ ಬಗ್ಗೆ  ಯಾವ ಭಾವನೆಯಿರಬಹುದು ಎಂದೆಲ್ಲ ಯೋಚಿಸುತ್ತಿದ್ದಳು..ಒಂದು ವೇಳೆ ಅವನು ನಾನು ನಿನ್ನನ್ನು ಪ್ರೀತಿಸುತ್ತಿಲ್ಲ ಎಂದರೆ ನನ್ನ ಎದೆಯೊಡೆದೇ ಹೋದೀತು..ಅವನು ಒಪ್ಪಿ ಅಪ್ಪ ಅಮ್ಮ ತಿರಸ್ಕರಿಸಿದರೆ... ಹೇಗೆ ಬಾಳಲಿ..ಅವನ ಹೆಸರು, ವಿದ್ಯಾಭ್ಯಾಸ ,ಉದ್ಯೋಗ, ಕುಟುಂಬದ ಹಿನ್ನೆಲೆ ಯಾವುದೂ ತಿಳಿಯದೆ  ಹೃದಯದಲ್ಲಿ ಗೂಡುಕಟ್ಟಿದ ಪ್ರೇಮ ಮುಂದುವರಿದೀತೇ..?ಎಂಬ ಸಂಶಯ ಅವಳನ್ನು ಕಾಡುತ್ತಿತ್ತು.ಇಲ್ಲ ಇನ್ನು ತಡೆಯಲು ಸಾಧ್ಯವಾಗುತ್ತಿಲ್ಲ.ಅವನನ್ನು ಎದುರು ನಿಲ್ಲಿಸಿ ಕೇಳಲೇಬೇಕು..ಎಂದು ಪಾರ್ಕ್ ಗೆ ಬರಹೇಳಿದಳು.

   ಅವಳ ಮಾತಿಗೆ ಒಪ್ಪಿದ ಶರತ್ ಪಾರ್ಕ್ ಗೆ ಬಂದ .ಅಭಿ ಕಾಣುತ್ತಲೇ ಇಲ್ಲ.. ಸುಮಾರು ಒಂದು ಗಂಟೆ ಕಾದ..ನಂತರ ಕರೆಮಾಡಿದ.."ಈಗ ಬಂದೆ "..ಎಂದು ಹೇಳಿ ಶರತ್ ಏನು ಮಾಡುತ್ತಾನೆಂದು ದೂರದಲ್ಲೇ ನಿಂತು ಗಮನಿಸುತ್ತಿದ್ದ ಅಭಿ ಸ್ವಲ್ಪ ಹೊತ್ತಿನಲ್ಲೇ ಹಾಜರಾದಳು..ಅಷ್ಟು ಹೊತ್ತು ಕಾಯಿಸಿದರೂ ಅಸಹನೆ ತೋರಿಸದ ಅವನ ಬಗ್ಗೆ ಅವಳಲ್ಲಿ ಗೌರವದ ಭಾವನೆ ಮೂಡಿತು..

"ಏನು ಇಲ್ಲಿವರೆಗೂ ಬರಹೇಳಿದ್ದು.."

"ಏನಿಲ್ಲ..ಅದು..."

"ಅದೇನದು.. ಹೇಳಿ.."

"ಅಲ್ಲ.. ನೇರವಾಗಿ ಹೇಳಿ ಅಂದರೆ ನಾನು ಹೇಗೆ ಹೇಳಲಿ..ನನ್ನ ಬಗ್ಗೆ ನಿಮಗೇನನಿಸುತ್ತೆ..?"

"ಒಳ್ಳೆಯ ಫ್ರೆಂಡ್..ವಿದ್ಯಾವಂತೆ.. ಒಳ್ಳೆಯ ಹುಡುಗಿ..ಅಪ್ಪ ಅಮ್ಮನ ಮುದ್ದಿನಮಗಳು... ಹೀಗೇ.."

"ಅಷ್ಟೇನಾ.. ನಾನು ಇನ್ನೂ ಏನೇನೋ ನಿರೀಕ್ಷಿಸಿದ್ದೆ.."

"ಅದನ್ನು ನೀವೇ ಹೇಳ್ಕೊಂಬಿಡಿ.." ಎಂದು ನಸುನಕ್ಕನು..ಅವನ ನಗುವಿನ ಮೋಡಿಗೆ ಅವಳು ಬೆರಗಾದಳು..ಅದೆಂತಹ ಕಾಂತೀಯತೆ..!!


"ಅದೂ..ಏನಂದ್ರೆ.. ನಾನು ಒಬ್ಬರನ್ನು ಬಹಳವೇ ಹಚ್ಕೊಂಡಿದೀನಿ...ಪ್ರೀತಿಸ್ತಿದೀನೋ ಏನೋ ನಂಗೇ ತಿಳೀತಾ ಇಲ್ಲ.."

"ಅವ್ರನ್ನೇ ಕೇಳ್ಬಿಡಿ ಡೈರೆಕ್ಟಾಗಿ.."

"ಅದೇ ನಿಮ್ಮನ್ನೇ ಕೇಳ್ತಾ ಇದೀನಿ.."

"ನನ್ನನ್ನಾ..ಹ್ಹ ಹ್ಹ ಹ್ಹಾ...ಈ ಅಬ್ಬೇಪಾರಿ ಹುಡುಗನನ್ನಾ.."

"ಹೌದು ಮತ್ತೆ.."

"ನಿಮ್ಮ ಅಪ್ಪ ಅಮ್ಮ ನಿಮ್ಮನ್ನು ಎಷ್ಟೊಂದು ಮುದ್ದಿನಿಂದ ಬೆಳೆಸಿದ್ದಾರೆ..ಅವರ ಕನಸುಗಳನ್ನು ನನಸು ಮಾಡಬೇಕಾದವರು ನೀವು.. ಅದನ್ನು ಬಿಟ್ಟು ನನ್ನಂತಹ ಬಡವನ ಹಿಂದೆ ಬಿದ್ರೆ..ಹೇಗೆ??"

"ನನ್ನ ಅಪ್ಪ ಅಮ್ಮ ನನ್ನನ್ನು ಪ್ರೀತಿಯೇ ಮಾಡಲ್ಲ..ಪ್ರೀತಿಯಿಂದ ಒಂದು ಮಾತೂ ಆಡಲ್ಲ.."


"ಅವರಿಗೆ ನಿಮ್ಮ ಮೇಲೆ ಬೆಟ್ಟದಷ್ಟು ಮಮಕಾರ ಇರುತ್ತೆ.ಹೇಳ್ಕೊಳ್ಳಲ್ಲ ಅಷ್ಟೇ.."

"ಇಲ್ಲ..ಇಲ್ಲವೇ ಇಲ್ಲ... ಅವರಿಗೆ ನಾನೊಂದು ಜೀವದ ಬೊಂಬೆಯಂತೆ.. ಹೊತ್ತು ಹೊತ್ತಿಗೆ ಆಹಾರ, ಬಟ್ಟೆಬರೆ , ವಿದ್ಯಾಭ್ಯಾಸ ಇಷ್ಟು ಕೊಟ್ರೆ ಸಾಕು ಅಂದ್ಕೊಂಡಿದಾರೆ.."


"ಅದನ್ನೆಲ್ಲಾ ಮಗಳೆಂಬ ವಾತ್ಸಲ್ಯದಿಂದಲೇ ಕೊಡಿಸುತ್ತಿದ್ದಾರೆ.ಔದ್ಯೋಗಿಕ ಒತ್ತಡದಿಂದ ಸ್ವಲ್ಪ ಮಾತು ಕಡಿಮೆಯಾದರೂ ಮಮತೆ ಬತ್ತಲ್ಲ ಮೇಡಂ.."

"ಸದಾ ನಿಮ್ಮ ಜೊತೆ ಮಾತಾಡ್ತಾ ಇರೋದು ನನಗಿಷ್ಟ.. ಜೀವನಪೂರ್ತಿ ನಿಮ್ಮ ಜೊತೆ ಇರ್ಬೇಕು ಅನ್ಸುತ್ತೆ.."

"ಸಾರಿ ಮೇಡಂ.. ನಾನು ನಿಮ್ಮನ್ನು ಪ್ರೀತಿಸ್ತಾ ಇಲ್ಲ.. ನೀವು ತಪ್ಪು ತಿಳ್ಕೊಂಡಿದ್ದೀರಿ... ನಾನಿನ್ನು ಬರ್ತೀನಿ.. ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ.." ಎಂದವನೇ ಸರಸರನೆ ಹೊರಟನು..


    ಅವನು ಹೊರಟ ದಾರಿಯನ್ನೇ ನೋಡುತ್ತಾ ಕುಸಿದು ನೆಲದಲ್ಲಿ ಕುಳಿತಳು ಅಭಿ.." ನಾನು ತಪ್ಪು ತಿಳಿದುಕೊಂಡಿದ್ದೆ.. ಇವನಿಗೆ ನನ್ನಲ್ಲಿ ಎಳ್ಳಷ್ಟೂ ಪ್ರೀತಿಯಿಲ್ಲ..ಈ ಭೂಮಿ ಮೇಲೆ ನನ್ನನ್ನು ಯಾರೂ ಪ್ರೀತಿಸಲ್ಲ.. ನಾನು ಯಾರಿಗೂ ಬೇಡವಾದವಳು.". ಎನ್ನುತ್ತಾ ಮುಖಕ್ಕೆ ತನ್ನೆರಡು ಕೈಗಳನ್ನು ಅಡ್ಡವಾಗಿ ಹಿಡಿದು ಬಿಕ್ಕುತ್ತಿದ್ದಳು..

    ಹತ್ತು ಹೆಜ್ಜೆ ಮುಂದೆ ಸಾಗಿದ ಶರತ್ ಹಿಂದಿರುಗಿ ಬಂದ.."ಅಭಿ....." ಎಂದವನೇ..ಅವಳನ್ನ ತನ್ನೆಡೆಗೆ ಸೆಳೆದು ಬಿಗಿದಪ್ಪಿದ.. "ಹೇಯ್..ಅಭಿ.." ಎನ್ನುತ್ತಾ ಹಣೆಗೊಂದು ಪ್ರೇಮಮುದ್ರೆಯನ್ನೊತ್ತಿ ಕಣ್ಣಲ್ಲಿ ಕಣ್ಣಿಟ್ಟು ಕೇಳಿದ..."ಕೆಲವೇ ದಿನಗಳಲ್ಲಿ ಪರಿಚಯವಾದ ನಾನು ನಿಮ್ಮನ್ನು  ಮನದ ತುಂಬಾ ಆರಾಧಿಸಿದರೂ ಒಂದು ದಿನವೂ ಹೇಳಿಕೊಂಡಿಲ್ಲ.. ನಾನು ಪ್ರೀತಿಸಿಲ್ಲ ಎಂದು ಹೇಳಿ ಬಿಟ್ಟು ಹೋದರೆ ಇಷ್ಟು ದುಃಖಪಡುತ್ತೀರಾ .. ಹಾಗಾದರೆ ನವಮಾಸ ನಿಮ್ಮನ್ನು ಹೊತ್ತು..ನೋವುಂಡು ಹೆತ್ತು .. ಇಪ್ಪತ್ತೆರಡು ವರ್ಷ ಸಾಕಿ ಸಲಹಿದ ಅಪ್ಪ ಅಮ್ಮ ನಿಮ್ಮ ಮೇಲೆ ಎಷ್ಟು ಆಸೆ ಇಟ್ಟುಕೊಂಡಿರುತ್ತಾರೆ..ಅವರು ಪ್ರೀತಿಸಿಯೇ ಇಲ್ಲವೆನ್ನುತ್ತಾ ಅವರನ್ನು ಬಿಟ್ಟು ನನ್ನ ಬಳಿ ಬಂದರೆ ಅವರೆಷ್ಟು ದುಃಖಪಟ್ಟಾರು..ಒಮ್ಮೆ ಯೋಚಿಸಿ ನೋಡಿ.."

"ಹೌದು.. ಶರತ್..ನಂಗೆ ನನ್ನ ಅಪ್ಪ ಅಮ್ಮನ ಪ್ರೀತಿಯ ಅಂತರಾಳ ಎಷ್ಟಿರಬಹುದು ಎಂದು ಈಗ ತಿಳಿಯಿತು...ಹಾಗೇ ನನ್ನ ಶರತ್ ನ ಹೃದಯದ ವೀಣೆಯೂ ನನ್ನ ಭಾವದೊಂದಿಗೆ ಮೀಟುತ್ತಿದೆ ಅಂತಾನೂ ತಿಳಿಯಿತು..."

"ಅಭೀ.."ಎನ್ನುತ್ತಾ  ನಗುತ್ತಿದ್ದ.. ಅವನ ಎದೆಗೆ ಒರಗಿದಳು ಅಭಿನಯ..

"ಶರತ್...ಬಹಳ ದಿನದಿಂದ ನನ್ನನ್ನು ಕೊರೆಯುತ್ತಿದ್ದ ನೋವಿಗೆ ಸುಲಭವಾಗಿ ಮುಲಾಮು ಹಚ್ಚಿದ್ರಿ.. ಶರತ್ ಪ್ರೀತಿ.. ಅಪ್ಪ ಅಮ್ಮನ ಪ್ರೀತಿ ಉಳಿಸ್ಕೊಂಡು ಮುಂದುವರೀತೀನಿ.."

" ಅಭೀ...ಅಪ್ಪ ಅಮ್ಮನ ಪ್ರೀತಿ ಮೊದಲು.. ಆಮೇಲೆ ಅವರು ಒಪ್ಪಿದ್ರೆ ನಮ್ಮ ಪ್ರೀತಿ ,ವಿವಾಹ, ಮಕ್ಕಳು ,ಮೊಮ್ಮಕ್ಕಳು ಎಲ್ಲಾ.."

ಅಭಿಯ ಕೆನ್ನೆ ನಾಚಿ ರಂಗೇರಿತ್ತು.. ಶರತ್ ಅವಳನ್ನು ನೋಡುತ್ತಾ ಮೈಮರೆತ..

"ಅವರನ್ನು ಒಪ್ಪಿಸ್ತೀನಿ... ಅದು ನನ್ನ ಜವಾಬ್ದಾರಿ.."ಎಂದಳು ಅಭಿನಯ..

ಇಬ್ಬರೂ ಹರಟುತ್ತಾ ಪಾರ್ಕಿನಿಂದ ಹೊರಬಂದರು..ಅಭಿನಯ ಹಾಗೂ ಶರತ್ ಇಬ್ಬರೂ ತಮ್ಮತಮ್ಮ ಮನೆಗೆ ತೆರಳಿದರು..


   ಮನೆಗೆ ತೆರಳಿದ ಅಭಿನಯಾಳ ಆಲೋಚನಾ ಶೈಲಿಯಲ್ಲಿ ಬದಲಾವಣೆಯಾಗಿತ್ತು..ರಾತ್ರಿ ಮಲಗುವ ಮುನ್ನ ಅಪ್ಪನಿಗೆ ಅನ್ನ ,ಸಾಂಬಾರು ಬಿಸಿ ಮಾಡಿ ಡೈನಿಂಗ್ ಟೇಬಲ್ ಮೇಲೆ ಇಟ್ಟು ಮಲಗಿದಳು..ಹನ್ನೊಂದು ಗಂಟೆಯ ನಂತರ ಮನೆಗೆ ಬಂದ  ಅನಂತ ರಾಯರು ಬಿಸಿಯಾದ ಆಹಾರ ಡೈನಿಂಗ್ ಟೇಬಲ್ ಮೇಲೆ ಕಂಡು 'ಮಗಳು ಈಗಷ್ಟೇ ಊಟ ಮಾಡಿ ಮಲಗಿರಬೇಕು' ಎಂದು ಬಿಸಿಯಾದ ಊಟ ಉಂಡು ಮಲಗಿದರು.ಅಮ್ಮ ನೈಟ್ ಶಿಫ್ಟ್ ಮುಗಿಸಿ ಬೆಳಿಗ್ಗೆ ಮನೆ ತಲುಪುತ್ತಿದ್ದಂತೆ ಮನೆಯೊಳಗಿನಿಂದ ತುಪ್ಪದ ಘಮ ಮೂಗಿಗೆ ಬಡಿದು 'ಮನೆಕೆಲಸದ ಸಹಾಯಕಿ ಬೇಗ ಬಂದು ಅಡುಗೆ ಆರಂಭಿಸಿದಳೇ'..ಎಂಬ ಸಂಶಯ ಮೂಡಿತು..ಅಭಿನಯ ಅಪ್ಪ ಅಮ್ಮನಿಗೆ ತನಗೆ  ದೋಸೆ ಮಾಡಿಟ್ಟಿದ್ದಳು..
"ಮಗಳೇ ನೀನು ಏಕೆ ಮಾಡಲು ಹೋದೆ ನಾನೇ ಮಾಡುತ್ತಿದ್ದೆ.."

"ಇರಲಿ ಬಿಡಮ್ಮಾ ದಿನಾ ನೀನೇ ಮಾಡುತ್ತೀಯಾ.. ಇವತ್ತು ನನಗೂ ರಜೆ..ನಾನೂ ಸಹಾಯ ಮಾಡುವೆ.". ಎಂದಳು ಅಭಿ..ಮೂವರೂ ಒಟ್ಟಾಗಿ ಕುಳಿತು ದೋಸೆ ಸವಿಯುವ ಅವಕಾಶ ಬಹಳ ದಿನಗಳ ನಂತರ ದೊರಕಿತ್ತು..ಅಪ್ಪ ಅಮ್ಮನ ಮಾತಿನಲ್ಲಿ ಪ್ರೀತಿ ಇಂದು ಕಂಡಿತು..


ಮಗಳಲ್ಲಿನ ಬದಲಾವಣೆ ಅನಂತರಾಯರಿಗೂ ಅನುಪಮಾಗೂ ಬಹಳ ಖುಷಿ ತಂದಿತು.ಕಾಲೇಜಿನ ಸಮಯಕ್ಕಿಂತ ಅರ್ಧ ಗಂಟೆ ಮೊದಲು ಎದ್ದು ಗಡಿಬಿಡಿಯಲ್ಲಿ ಅಮ್ಮ ಕೊಟ್ಟ ತಿಂಡಿಯನ್ನು ಹಾಗಿಲ್ಲ ಹೀಗಿಲ್ಲ ಎಂದು ಕೊರತೆ ಹೇಳುತ್ತಿದ್ದ ಅಭಿ ಎಲ್ಲಿ.. ಈಗಿನ ಅಭಿ ಎಲ್ಲಿ..
ಅಪ್ಪ ಅಮ್ಮ ಮಗಳನ್ನು ಕರೆದು "ಈ ಬದಲಾವಣೆಯಿಂದ ನಮಗೆ ಹೆಮ್ಮೆಯೆನಿಸಿದೆ ಮಗಳೇ.. ಹೌದು..ಈ ಅಭ್ಯಾಸಗಳನ್ನು ಯಾವ ಶಿಬಿರದಲ್ಲಿ ಕಲಿತೆ ಮಗಳೇ..ಕಳೆದ ವರ್ಷ ಬೇಸಿಗೆಯಲ್ಲಿ ಎಲ್ಲಿಗೋ ಹಳ್ಳಿಗೆ ಕ್ಯಾಂಪ್ ಹೋಗಿದ್ದೆ ಅಲ್ವಾ.. ಅಲ್ಲಿ ಕಲಿತಿರಬೇಕು.."

"ಇಲ್ಲಮ್ಮಾ... ನನ್ನಲ್ಲಿ ಬದಲಾವಣೆಗೆ ಕಾರಣವಾದ ವ್ಯಕ್ತಿಯನ್ನು ನಾನು ನಿಮಗೆ ಪರಿಚಯಿಸುತ್ತೇನೆ.‌ಆದರೆ ಒಂದು ಕಂಡೀಷನ್.."

"ಏನದು..."

"ನಮ್ಮಾಸೆಗೆ ತಣ್ಣೀರೆರಚಬಾರದು.."

"ನಿನ್ನ ಆಸೆಗೆ ಸಾಧ್ಯವಾದಷ್ಟು ಬೆಂಬಲ ನೀಡಿದವರಲ್ಲವೇ ನಾವು..ನಿನ್ನ ಮನದಾಸೆ ಸರಿಯಿದ್ದರೆ ನಮ್ಮ ಪ್ರೋತ್ಸಾಹ ಎಂದಿಗೂ ಇದೆ ಮಗಳೇ.."ಎಂದ ತಂದೆತಾಯಿಯ ಮಾತನ್ನು ಕೇಳಿದ ಅಭಿ ಶರತ್ ನ್ನು ಮನೆಗೆ ಕರೆಸಿಕೊಂಡಳು..

ಶರತ್ ನನ್ನು ಗೇಟಿನವರೆಗೂ ಹೋಗಿ ಒಳಗೆ ಕರೆದುಕೊಂಡು ಬಂದಳು ಅಭಿ..
"ಅಪ್ಪ ಅಮ್ಮ..ಇವರೇ ಶರತ್ ಅಂತ.."

"ನೈಸ್ ಟು ಮೀಟ್ ಯು ಶರತ್.."ಎಂದು ಕೈಕುಲುಕಿದರು ಅನಂತರಾಯರು.

"ಹೇಗೆ ಬದಲಾಯಿಸಿದಿರಿ ನಮ್ಮ ಮಗಳನ್ನು..ನಮಗಂತೂ ಅವಳಿಗೆ ಬುದ್ಧಿ ಹೇಳೋದು ಕಷ್ಟವಾಗಿತ್ತು.ಏನು ಹೇಳಿದ್ರೂ ಒರಟಾದ ಉತ್ತರ.."

"ನಾನೇನೂ ಮಾಡಿಲ್ಲ...ಸರ್.."ಎನ್ನುತ್ತಾ ಗಂಭೀರವಾಗಿ ನುಡಿದ..

"ಶರತ್..ನಮಗಿರುವವಳು ಒಬ್ಬಳೇ ಮಗಳು..ಅವಳಿಗೇನೂ ಕೊರತೆ ಬಾರದಂತೆ ಸಾಕಿದ್ದೇವೆ..ಆದರೂ ಅವಳಿಗೆ ತೃಪ್ತಿ,ಸಮಾಧಾನ ಎಂಬುದೇ ಇರಲಿಲ್ಲ.. ಇತ್ತೀಚೆಗೆ ಮಾತ್ರ ತುಂಬಾನೇ ಬದಲಾಗಿದ್ದಾಳೆ.ಕಾರಣ ಕೇಳಿದಾಗ ನೀವೆಂದು ಗೊತ್ತಾಯ್ತು.. ನಿಮ್ಮಿಂದ  ಬಹಳ ಉಪಾರವಾಯಿತು..ನಿಮಗೆ ನಾನೇನು ಉಡುಗೊರೆ ಕೊಡಲಿ.."

"ಸರ್..ದೊಡ್ಡ ಮಾತು ನಿಮ್ಮದು..ನಾನೇನೂ ಪ್ರತ್ಯುಪಕಾರ ನಿರೀಕ್ಷಿಸಿಲ್ಲ.."

"ನೀವು ಹೂಂ.. ಅನ್ನುವುದಾದರೆ ನನ್ನ ಕಂಪೆನಿಗೆ ಮ್ಯಾನೇಜರ್ ಆಗಿ ಸೇರಿಸಿಕೊಳ್ತೀನಿ.."

"ನಾನು ತುಂಬಾ ಓದಿದವನಲ್ಲ ಸರ್.. ಬಡತನದಲ್ಲಿ ನಮ್ಮಪ್ಪ ಡಿಪ್ಲೊಮಾ ಓದಿಸಿದ್ದೇ ಹೆಚ್ಚು.."

" ಓಹೋ.. ಡಿಪ್ಲೋಮಾ ಪದವಿ ಓದಿದ್ದೀರಾ..ಹಾಗಿದ್ದರೆ ನಮ್ಮ ಕಂಪೆನಿ ಮ್ಯಾನೇಜರ್ ಕೆಲಸ ನಿಮಗೆ ಸರಿಯಾದ್ದೇ..ಯಾವಾಗ ಬೇಕೋ ಆಗ ಬಂದು ಜಾಯಿನ್ ಆಗಬಹುದು.. ಆದಷ್ಟು ಬೇಗ ಬನ್ನಿ.. ಮಿಸ್ಟರ್ ಶರತ್.."

"ಸರಿ..ಸರ್.."ಎಂದು ಹೇಳಿ ಹೊರಟು ನಿಂತವನನ್ನು ಅಭಿ ತಡೆದಳು.."ಊಟ ಮಾಡಿ ಹೋಗಬಹುದು.. "ಎಂದಳು.. ಸಂಕೋಚದಿಂದಲೇ ನಿರಾಕರಿಸಿದವನನ್ನು ಅನುಪಮಾ ಕೂಡ ಒತ್ತಾಯ ಮಾಡಿ ನಿಲ್ಲಿಸಿಕೊಂಡರು..ಬೇಗ ಬೇಗ ಅಡುಗೆ ಮಾಡಲು ಆಭಿ ಸಹಾಯ ಮಾಡಿದಳು."ಶರತ್ ಗೆ ಅದಿಷ್ಟ..ಇದಿಷ್ಟ "ಎಂದು ಮಗಳು ಹೇಳುತ್ತಿದ್ದರೆ ಅಮ್ಮ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಳು.. ಸ್ನಾನಮಾಡಿ ಕೆಂಪು ಚೂಡಿದಾರ್ ಧರಿಸಿ ಬಂದ ಅಭಿಯನ್ನು ಶರತ್ ನೋಡಿದಾಗ ಅವಳ ಕೆನ್ನೆ ರಂಗೇರಿದ್ದು ಕಂಡು ಅಮ್ಮನಿಗೆ ಎಲ್ಲವೂ ಅರ್ಥವಾಗಿತ್ತು..


  ಶರತ್,ಅನಂತರಾಯರು ಊಟಕ್ಕೆ ಕುಳಿತರು.. "ನೀನೂ ಕುಳಿತುಕೋ ಅಭಿ" ಎಂದರೂ ಕುಳಿತುಕೊಳ್ಳದೆ ಶರತ್ ಗೆ ಬಡಿಸುವುದರಲ್ಲಿ ಆಸಕ್ತಿವಹಿಸಿದ ಮಗಳನ್ನು ಅಮ್ಮ ಅನುಪಮ ತಡೆಯಲಿಲ್ಲ..ಊಟವಾದ ಮೇಲೆ "ಅಭಿ ನೀನು ಶರತ್ ಗೆ ನಮ್ಮ ಟೆರೇಸ್ ಗಾರ್ಡನ್ ತೋರಿಸಿ ಬಾ...."ಎಂದು ಇಬ್ಬರನ್ನೂ ಜೊತೆಗೆ ಕಳುಹಿಸಿದರು ಅನುಪಮ..

ಅವರು ಅತ್ತ ಹೋಗುತ್ತಿದ್ದಂತೆ ಪತಿಯನ್ನು ಕರೆದು "ರೀ..ನೀವೇನಾದರೂ ಗಮನಿಸಿದ್ದೀರಾ..?"

"ಇಲ್ಲ..ಅನು..ಏನದು..?"

"ಅಭಿ ಶರತ್ ಒಬ್ಬರನ್ನೊಬ್ಬರು ಇಷ್ಟಪಟ್ಟಿದ್ದಾರೆ ಅನಿಸುತ್ತದೆ.."

"ಹೌದಾ.. ನನಗಿಂತ ನೀನೇ ಸೂಕ್ಷ್ಮ ಕಣೇ.."

"ಹೌದು... ಏನ್ಮಾಡೋದು..?"

"ಸ್ವಲ್ಪ ದಿನ ನಮ್ಮ ಕಂಪೆನಿಯಲ್ಲಿ ಕೆಲಸ ಮಾಡಿದಾಗ ಅವನ ಗುಣ ನಡತೆ ನಮಗೆ ಅರಿವಾಗುವುದು.ಆಮೇಲೆ ನಿರ್ಧಾರ ಮಾಡೋಣ..."

ಇಬ್ಬರೂ ನಗುತ್ತಾ ಕೆಳಗಿಳಿದು ಬಂದರು..ಅಭಿಯ ಮುಖದಲ್ಲಿ ಕಳೆತುಂಬಿತ್ತು.

"ಏನು ಅಭಿ ..ಭಾರೀ ನಗು .."ಎಂಬ ಅಪ್ಪನ ಗಂಭೀರವಾದ ದನಿಗೆ ಹೆದರಿದಳು ಅಭಿ..
"ಏನಿಲ್ಲ.. ಅಪ್ಪಾ.."

"ಶರತ್.. ನಿಮ್ಮನ್ನು ಕಂಪೆನಿಯ ಮ್ಯಾನೇಜರ್ ಮಾಡಿದ್ದೇನೆಂದು ನೀವು  ಅಭಿ ಯೊಂದಿಗೆ ಇಷ್ಟು ಸಲುಗೆಯಿಂದಿರುವುದು ನಮಗೆ ಸರಿ ಕಾಣುವುದಿಲ್ಲ.." ಎಂದರು

"ಸಾರಿ..ಸರ್.. ನಾನು ಈಗಿರುವ ಕಂಪನಿ ಬಿಟ್ಟು ಬರುವ ಯೋಚನೆ ಸಧ್ಯಕ್ಕಿಲ್ಲ.."

"ಹೌದಾ..ಸರಿ.. ಹಾಗಾದರೆ ಇನ್ನು ಮುಂದೆ ನಮ್ಮ ಮನೆ ಬಾಗಿಲಿಗೆ ಬರುವುದೂ..."

ಎನ್ನುತ್ತಿದ್ದಂತೆ ಹೊರಡಲನುವಾದ ಸ್ವಾಭಿಮಾನಿ ಶರತ್..

"ಅಪ್ಪಾ ಏನನ್ನುತ್ತಿದ್ದೀರಿ..????"

"ಹೌದಮ್ಮಾ..ಅಭಿ..ನಮ್ಮ ಮನೆ ಬಾಗಿಲಿಗೆ ಬರುವುದೂ ,ನಿನ್ನ ಜೊತೆ ಖುಷಿಯಿಂದ ಹರಟುವುದು ,ನಿನ್ನ ಕೈಯಡಿಗೆ ರುಚಿ ನೋಡುವುದು ಮುಂದುವರಿಯಲಿ..ನಿಮ್ಮಿಬ್ಬರ ಪ್ರೀತಿಗೆ ಜೈ... ಆದಷ್ಟು ಬೇಗ ಅವನ ಹೆತ್ತವರನ್ನು ಭೇಟಿಯಾಗಿ ನಿಮ್ಮಿಬ್ಬರನ್ನು ಆಶೀರ್ವದಿಸುತ್ತೇವೆ.."


ಎಂದ ಅಪ್ಪನ ಮಾತನ್ನು ಕೇಳಿದ ಅಭಿ ಓಡಿಹೋಗಿ ಶರತ್ ನ ಕೈ ಹಿಡಿದು ನಿಲ್ಲಿಸಿದಳು....ಅಪ್ಪ ಅಮ್ಮನಿಗೆ ನನ್ನ ಮೇಲಿರುವ ಪ್ರೀತಿಯನ್ನು ನನಗೆ ಅರ್ಥೈಸಿದ ನೀನು..ನಮ್ಮಿಬ್ಬರ ಪ್ರೇಮವನ್ನರಿತ ಅಪ್ಪ ಅಮ್ಮ... ಎಷ್ಟು ಅರ್ಥಪೂರ್ಣ   ಬಾಂಧವ್ಯ ಅಲ್ವಾ... ಎಂದಾಗ ಅವನು ತನ್ನರಸಿಯಾಗುವವಳತ್ತ ತುಂಟನೋಟವನ್ನು ಬೀರಿದರೆ..ಅಭಿ ಅವನ ಒಲವಿನ ಬಲೆಯಲ್ಲಿ ಬಂಧಿಯಾದಳು.. ರವಿಯು ಮೋಡದೆಡೆಯಲ್ಲಿ ಮರೆಮಾಚಿನಿಂದ.


✍️... ಅನಿತಾ ಜಿ.ಕೆ.ಭಟ್.
14-02-2020.


ನಮಸ್ತೇ....

      ಹೆಚ್ಚಿನ ಓದಿಗಾಗಿ ಬರಹದ ಕೆಳಗಡೆ ಇರುವ'Home'ಮತ್ತು > ಸಂಕೇತಗಳನ್ನು ಬಳಸಿಕೊಳ್ಳಬಹುದು...ಬರಹದ ಮೇಲ್ಭಾಗದಲ್ಲಿ ಲಿಂಕ್ ನ ಪಕ್ಕದಲ್ಲಿ ಮೂರು ಡಾಟ್ ಮತ್ತು ಲೈನ್ ಇರುವಲ್ಲಿ ಕ್ಲಿಕ್ ಮಾಡಿ ಶೇರ್ ಆಪ್ಷನ್ ಸೆಲೆಕ್ಟ್ ಮಾಡಿ ವಾಟ್ಸಪ್ ಫೇಸ್ಬುಕ್ ಮೆಸೇಂಜರ್ ಮೈಲ್..ಮೂಲಕ ಶೇರ್ ಮಾಡಬಹುದು...💐🙏






2 comments: