"ಅಮ್ಮಾ.. ಎಷ್ಟು ಸಲ ಹೇಳಲಿ.. ಹೇಳಿ ಹೇಳಿ ನನಗೆ ಸಾಕಾಗಿಹೋಗಿದೆ .ನನ್ನ ಮಾತು ಯಾರಿಗೂ ಅರ್ಥವೇ ಆಗುವುದಿಲ್ಲ.. ನನಗೂ ಕನಸುಗಳಿವೆ..ನನ್ನ ಕನಸುಗಳನ್ನೇಕೆ ನುಚ್ಚು ನೂರು ಮಾಡುವಿರಿ..?"ಎಂದು ಸಮಾಧಾನ ಪಡಿಸಲು ಬಂದ ಅಮ್ಮನಲ್ಲಿ ಗೋಳುಹೊಯ್ದುಕೊಂಡಳು ನಿಧಿ..
"ನೋಡು... ಎಲ್ಲವೂ ಆಗಬೇಕಾದ ವಯಸ್ಸಿನಲ್ಲಿ ಆದರೆ ಚಂದ.ಯಾವತ್ತೋ ಮಾಡಬೇಕಾದ್ದನ್ನು ಇನ್ಯಾವತ್ತೋ ಮಾಡಿದರೆ ನಾಲ್ಕು ಜನ ನಮ್ಮನ್ನೇ ಆಡಿಕೊಳ್ಳುವರು.. ಅಷ್ಟಕ್ಕೂ ಈಗ ನಿನಗೇನು ಅನ್ಯಾಯ ಮಾಡಿಲ್ಲವಲ್ಲಾ..."
"ಅಲ್ಲಮ್ಮ.. ಅದು...ಹಾಗಲ್ಲ.."
"ಹಾಗೂ ಅಲ್ಲ..ಹೀಗೂ ಅಲ್ಲ..ಎಲ್ಲ ನಿನ್ನ ಒಳ್ಳೆಯದಕ್ಕೆ..ಬೇಗ ಮುಖತೊಳ್ಕೊಂಡು ತಿಂಡಿ ತಿನ್ನಲು ಬಾ"ಎಂದು ಹೇಳಿ ಅಡುಗೆ ಮನೆಯತ್ತ ಧಾವಿಸಿದರು ರಾಜಮ್ಮ..
ಒಲ್ಲದ ಮನಸ್ಸಿನಿಂದಲೇ ತಿಂಡಿ ತಿನ್ನಲು ತೆರಳಿದಳು.ಕಾಟಾಚಾರಕ್ಕೆ ಬಟ್ಟಲಿಗೆ ಕೈ ಹಾಕುತ್ತಿದ್ದರೂ ಮನಸ್ಸು ಬೇರೇನನ್ನೋ ಲೆಕ್ಕಹಾಕುತ್ತಿತ್ತು ... ಅಷ್ಟರಲ್ಲಿ ರಾಜಮ್ಮ"ಇವತ್ತು ಪಟ್ಟಣಕ್ಕೆ ಹೋಗೋದಿದೆ.ಬಟ್ಟೆ, ಸೀರೆ ಕೊಳ್ಳುವುದಿದೆ ...ನೀನೂ ಬರಬೇಕು... ತಿಂಡಿ ತಿಂದು ಹೊರಡು..."
"ಯಾಕಮ್ಮಾ.. ನನಗೆ ಸೀರೆ..ಇರುವ ಚೂಡಿದಾರಗಳೇ ಸಾಕು.."
"ನೋಡು..ಹಾಗೆಲ್ಲ ಹಠ ಮಾಡಬಾರದು.. ನೀನೂ ಬರ್ತೀಯಾ..ಅಷ್ಟೇ..''
ಒಲ್ಲದ ಮನಸ್ಸಿನಿಂದ ಹೊರಟಳು ನಿಧಿ..ಅವಳಿಗೊಪ್ಪುವ ಸೀರೆಗಳನ್ನು,ಇತರ ಬಟ್ಟೆಗಳನ್ನು ಖರೀದಿಸಿದರು.. ಸೀರೆ ಅಂಗಡಿಯ ಸೇಲ್ಸ್ ಗರ್ಲ್ "ಈ ಮದುಮಗಳಿಗೆ ಯಾವ ಸೀರೆಯಾದರೂ ಒಪ್ಪುತ್ತೆ..ಒಳ್ಳೆ ರಾಜಕುಮಾರಿ ಹಾಗೆ ಕಾಣ್ತಾಳೆ"ಎಂದು ಛೇಡಿಸಿದಾಗ ನಿಧಿಯ ಮುಖದಲ್ಲಿ ನಗು ಕಾಣಲಿಲ್ಲ.ವ್ಯಥೆಯೇ ತುಂಬಿತ್ತು.
ರಾಜಮ್ಮ ಮತ್ತು ರಾಮರಾಯರು ಮಗಳ ನಿಶ್ಚಿತಾರ್ಥಕ್ಕೆ ಎಲ್ಲಾ ತಯಾರಿ ಮಾಡಿಕೊಂಡರು.ಬಂಧುಬಳಗವನ್ನು ಆಹ್ವಾನಿಸಿದರು.ನಿಧಿಯ ಚಡಪಡಿಕೆ ಮಾತ್ರ ಕಡಿಮೆಯಾಗಲೇ ಇಲ್ಲ.ಆಕೆ ತಾನಿನ್ನೂ ತನ್ನ ಗೆಳತಿಯರಂತೆ ಓದಬೇಕು, ಉದ್ಯೋಗಕ್ಕೆ ತೆರಳಬೇಕು ಎಂಬೆಲ್ಲ ಕನಸುಗಳನ್ನು ಮರೆಯಲು ಸಾಧ್ಯವಾಗಿಲ್ಲ.ನಿಧಿ ತನ್ನ ಗೆಳತಿಯರಿಗೆ ನಿಶ್ಚಿತಾರ್ಥದ ಬಗ್ಗೆ ಹೇಳಲೇ ಇಲ್ಲ.ತಾಯಿ "ಅವರನ್ನು ಕರಿಯೇ .." ಎಂದು ಹೇಳಿದ್ದಕ್ಕೆ ಸುಮ್ಮನೆ ಹೂಂಗುಟ್ಟಿ ಬಿಟ್ಟಳು.
ಮಗಳ ನಡತೆಯನ್ನು ಅರಿತ ರಾಜಮ್ಮ ಆಕೆಯ ನೆಚ್ಚಿನ ಕೆಲವು ಗೆಳತಿಯರಿಗೆ ತಾವೇ ಪ್ರೀತಿಯಿಂದ ಆಮಂತ್ರಿಸಿದರು.. ನಿಧಿಗೆ ಯಾಕಾದರೂ ಈ ಮದುವೆ ಮಾಡುತ್ತಾರೋ ಅನಿಸಲು ಶುರುವಾಯಿತು.ನಿಶ್ಚಿತಾರ್ಥದ ದಿನ ಬಂದೇ ಬಿಟ್ಟಿತು.ಎಲ್ಲರೂ ಲಗುಬಗೆಯಿಂದ ಓಡಾಡುತ್ತಿದ್ದರು ನೆಂಟರಿಷ್ಟರು ನಿಧಿಯನ್ನು ಚೇಷ್ಟೆ ಮಾಡುತ್ತಿದ್ದರು.. ಆಕೆ ಮುಖ ಊದಿಸುತ್ತಿದ್ದುದು ಕಂಡು ಇವಳಿಗೆ ಮದುವೆಗೆ ಮನಸ್ಸಿಲ್ಲ ಎಂಬುದು ನೆಂಟರಿಗೆ ತಿಳಿದುಬಿಟ್ಟಿತು.ಒಂದಿಬ್ಬರು ಆಕೆಯ ಪರವಾಗಿ ಮಾತನಾಡಿದ್ದೂ ಆಯಿತು."ನೋಡಿ ನಮ್ಮ ಮಗಳಿಗೆ ಯಾವಾಗ ಏನು ಮಾಡಬೇಕು ಎಂದು ನಮಗೆ ಗೊತ್ತು.. ಸುಮ್ಮನೆ ಏನೋ ಹೇಳಿ ಕಾರ್ಯ ಕೆಡಿಸಬೇಡಿ.."ಎಂದು ಗರಂ ಆದರು ರಾಜಮ್ಮ..
ಎಂಟು ಗಂಟೆಗೆ ನಿಧಿಯ ಗೆಳತಿಯರು ಬಂದರು.ನಿಧಿಗೆ ಉಸಿರು ಬಂದಂತಾಯಿತು.ಎಲ್ಲರೂ ಸೇರಿ ನಿಧಿಗೆ ಸೀರೆ ಉಡಿಸಿ ಅಲಂಕಾರ ಮಾಡಿದರು.
"ರಾಜಕುಮಾರನೇ ನಿನಗೆ ದೊರೆತಿದ್ದಾನೆ ಕಣೇ .. ಮತ್ಯಾಕೆ ಮುಖ ಊದಿಸ್ತೀಯಾ.."
"ಎಷ್ಟು ರೂಪವಂತ..ನಿನ್ನ ಅದೃಷ್ಟ ಕಣೇ.."
"ಬಂಗಲೆ ಕಾರು ಎಲ್ಲ ಇದೆಯಂತೆ ನೀನು ಓದಿ ಕೆಲಸಮಾಡಿ ದುಡ್ಡು ತರುವುದು ಬೇಡವಂತೆ. ಮಹಾರಾಣಿಯ ತರಹ ನೋಡ್ಕೋತಾರಂತೆ"
ಎಂದೆಲ್ಲ ಗೆಳತಿಯರು ಹೇಳಿದಾಗ ಸ್ವಲ್ಪ ಮನಸು ಹಗುರ ಮಾಡಿಕೊಂಡಳು ನಿಧಿ.
ವರನ ಕಡೆಯವರು ಬಂದೇ ಬಿಟ್ಟರು.ನಿಧಿಯ ಗೆಳತಿಯರಂತೂ ವರನನ್ನು ನೋಡಿ" ಏನೇ ನಿನ್ನ ಗೋಳು.ಇನ್ನಾದರೂ ನಗುವುದು ಕಲಿ.ಆತನ ಕಣ್ಣುಗಳು ನಿನ್ನನ್ನೇ ಹಡುಕುತ್ತಿವೆ ಕಣೇ.."
"ಲವ್ಲೀ ಬಾಯ್.."
ಎಂದೆಲ್ಲ ಛೇಡಿಸಿ ಆಕೆಯನ್ನು ರೂಮಿನಿಂದ ಹೊರಗೆ ಕರೆತರುವಲ್ಲಿ ಯಶಸ್ವಿಯಾದರು.
ಉಪಚಾರ,ಕಾರ್ಯಕ್ರಮಗಳು ಮುಂದುವರಿದು ವರನ ಕಡೆಯವರು ಆಕೆಗೆ ಉಡುಗೊರೆ ಕೊಡಲು ಮುಂದಾದರು.ಭಾವೀ ಅತ್ತೆ ಸುನಂದಮ್ಮ ಸೊಸೆಗೆ ಝರತಾರಿ ಹಸಿರು ಸೀರೆ ಕೊಟ್ಟು ಹರಸಿದರೆ, ಶ್ರೀಕಂಠಯ್ಯನವರು ಚಿನ್ನದ ನೆಕ್ಲೇಸ್ ಸೊಸೆಗಿತ್ತು ಆಶೀರ್ವದಿಸಿದರು.ಮದುಮಗ ಕಾರ್ತಿಕ್ ವಜ್ರದುಂಗುರ ಹಿಡಿದು ತಯಾರಾಗಿದ್ದ.ನಿಧಿಯು ಬೇಕೋ ಬೇಡವೋ ಎನ್ನುವಂತೆ ಕೈಬೆರಳು ಮುಂದೆ ನೀಡಿದಳು.ಕಾರ್ತಿಕ್ ಉಂಗುರ ತೊಡಿಸುತ್ತಿದ್ದರೆ ನಿಧಿಯ ತುಟಿಯಲ್ಲಿ ನಗುವೇ ಕಾಣದೆ ಬೇಸರಿಸಿದ..
ಕಾರ್ಯಕ್ರಮ ಮುಗಿದು ಹೊರಡುವ ಮುನ್ನ ಕಾರ್ತಿಕ್ ನಿಧಿಯಲ್ಲಿ ಮಾತನಾಡಲು ಬಯಸಿದನು.ನಿಧಿ ಮಾತ್ರ ಮಾತನಾಡಲು ತೆರಳಲೇ ಇಲ್ಲ..ನಿರಾಕರಿಸಿದಳು.ಕಾರ್ತಿಕ್ ಪೆಚ್ಚು ಮೋರೆ ಹಾಕಿಕೊಂಡು ಹೊರಟ ತನ್ನವರೊಂದಿಗೆ.
ನಿಧಿ ಯಾಕೆ ಹೀಗೆ ಮಾಡುತ್ತಿದ್ದಾಳೆ ಎಂದೇ ಕಾರ್ತಿಕನಿಗೆ ಚಿಂತೆಯಾಯಿತು.ಮಗನ ಮನಸ್ಸನ್ನು ಅರಿತ ತಾಯಿ ಸುನಂದಮ್ಮ"ಮದುವೆಗೆ ಮೊದಲು ಹಾಗಿದ್ದ ಹೆಣ್ಣುಮಗಳು ಮದುವೆಯ ನಂತರ ಚೆನ್ನಾಗಿ ಹೊಂದಿಕೊಂಡು ಹೋಗುತ್ತಾಳೆ..ನಯವಿನಯ ಇರುತ್ತದೆ.ಮದುವೆಗೆ ಮೊದಲೇ ಚೆಲ್ಲು ಚೆಲ್ಲಾಗಿರುವ ಹುಡುಗಿಯರು ಮದುವೆಯ ನಂತರ ಸಂಸಾರಕ್ಕೆ ಹೊಂದಿಕೊಳ್ಳುವುದು ಕಡಿಮೆ..ನೀನೇನೂ ಚಿಂತೆ ಮಾಡಬೇಡ.. ನಿಧಿ ಒಳ್ಳೆಯ ಸೊಸೆಯಾಗಿ ಮನೆ ಬೆಳಗ್ತಾಳೆ"ಎಂದು ಹೇಳಿದಾಗ ತುಸು ನಿರಾಳವಾದನು.
ತನ್ನ ಗೆಳೆಯರೆಲ್ಲ ಮದುವೆ ಬಗ್ಗೆ ನಾನಾ ಬಗೆಯಲ್ಲಿ ಹಾಸ್ಯ ಚಟಾಕಿ ಹಾರಿಸುತ್ತಿದ್ದರೆ ಕಾರ್ತಿಕ್ ಒಳಗೊಳಗೇ ನಿಧಿಯ ವರ್ತನೆಗೆ ಬೇಸರಪಟ್ಟುಕೊಳ್ಳುತ್ತಿದ್ದ.
ಇತ್ತ ನಿಧಿಯ ತಂದೆ ತಾಯಿ ಬಂಧುಗಳನ್ನು ಆಹ್ವಾನಿಸಲು ತೆರಳಿದ್ದರು.ನಿಧಿಯನ್ನು ಕರೆದರೂ ಆಕೆ ತೆರಳಲಿಲ್ಲ.ಏಕೋ ವಿಪರೀತ ಅತ್ತುಕೊಂಡು ದೇವರ ಕೋಣೆಯಲ್ಲಿ ನಿಂತಳು.
ದೇವರೇ..
ನಾ ಮಾಡಿದ ತಪ್ಪಾದರೂ ಏನು
ಹೆಣ್ಣೊಬ್ಬಳು ಕನಸು ಕಾಣಬಾರದೇನು...
ಉನ್ನತ ವ್ಯಾಸಂಗ ನನಗಿನ್ನು ಮರೀಚಿಕೆ
ತಾಳಿಕಟ್ಟಿಸಿ ಹರಕೆಯ ಕುರಿಯಾಗುವಾಕೆ...
ಒಮ್ಮೆ ಕಣ್ಣು ತೆರೆದು ದಯಪಾಲಿಸು ದೇವ
ನೀಡೆನಗೆ ವಿದ್ಯೆ ಉದ್ಯೋಗದಾ ವರವ...
ಎನ್ನುತ್ತಾ ಕಣ್ಣೀರು ಒರೆಸಿಕೊಂಡಳು.ಅಷ್ಟರಲ್ಲಿ ಮನೆಗೆಲಸದ ಸಹಾಯಕಿ ನಿಂಗವ್ವ ಹೊರಗಿನಿಂದ ನಿಧಿಯವ್ವಾ ಎಂದು ಕೂಗಿ ಕರೆದದ್ದು ಕೇಳಿಸಿ ಹೊರ ನಡೆದಳು ನಿಧಿ.
ನೋಡನೋಡುತ್ತಿದ್ದಂತೆ ಮದುವೆಯ ದಿನ ಬಂದೇ ಬಿಟ್ಟಿತು.ಮದುಮಗಳು ಸರ್ವಾಲಂಕಾರ ಭೂಷಿತೆಯಾಗಿ ನಿಂತಿದ್ದಾಳೆ ಒಂದನ್ನು ಹೊರತುಪಡಿಸಿ.. ಅದುವೇ 'ನಗು'..ನಗುವೆಂಬ ಆಭರಣ ಆಕೆಯ ಮುಖದಿಂದ ಕಣ್ಮರೆಯಾಗಿತ್ತು.
ಮದುವೆಯ ಮಂಟಪದಲ್ಲಿ ನಿಧಿ ನಿಂತಿದ್ದಾಳೆ.ಕಾರ್ತಿಕ್ ಅಂತಃಪಟದ ಆಚೆಗೆ ನಿಂತು ಇವಳನ್ನು ಜೋಪಾನವಾಗಿ ನೋಡಿಕೊಳ್ಳುವ ಜವಾಬ್ದಾರಿ ಇನ್ನು ಮುಂದೆ ನನ್ನದು ಎಂದುಕೊಳ್ಳುತ್ತಿದ್ದಂತೆ ಪಟ ಸರಿಯಿತು.ನಿಧಿ ಹೂಮಾಲೆಯನ್ನು ವರನಿಗೆ ಹಾಕಲು ನೋಡುತ್ತಿದ್ದಂತೆ ಆಕೆಗೆ ಕಷ್ಟವಾಗದಂತೆ ಕೊರಳು ಬಾಗಿಸಿದ.. ಹೂಮಾಲೆ ಅವನ ಕೊರಳನ್ನು ಅಲಂಕರಿಸಿತು.ನಿಧಿಗೆ ಹೂಮಾಲೆ ಹಾಕಿದ ವರನ ನಯನಗಳು ಅವಳ ಕಣ್ಣಂಚಿನಿಂದ ಜಿನುಗುತ್ತಿದ್ದ ಹನಿಗೆ ಕರಗುವ ಸೂಚನೆಯಿತ್ತವು.
'ಮಾಂಗಲ್ಯಂ ತಂತುನಾನೇನ' ಎಂಬ ಮಂತ್ರಘೋಷದೊಂದಿಗೆ ಮಾಂಗಲ್ಯ ಧಾರಣೆ ನೆರವೇರಿತು.ಇಬ್ಬರೂ ಜೊತೆಯಾಗಿ ಸಪ್ತಪದಿ ತುಳಿದರು..ಕಾಲುಂಗುರ ತೊಡಿಸಲು ಅತ್ತೆಯನ್ನು ಪುರೋಹಿತರು ಕರೆದರು.ಆಗಮಿಸಿದ ಸುನಂದಮ್ಮ " ನೀನು ನಮ್ಮ ಮನೆ ಬೆಳಗುವ ದೀಪ..ನಿನಗೆ ನಾನು ತೊಡಿಸುವ ಕಾಲುಂಗುರ ನಿಮ್ಮ ದಾಂಪತ್ಯದ ಕೀಲಿಕೈ..ಅತ್ತೆಸೊಸೆಯ ಹೊಸ ಬಾಂಧವ್ಯಕ್ಕೆ ನಾವು ಮುನ್ನುಡಿ ಬರೆಯೋಣ..ನವಪರ್ವ ನಮ್ಮಿಂದ ನಳನಳಿಸಲಿ..."ಎನ್ನುತ್ತಾ ಸೊಸೆಯೆಂಬ ಮಗಳಿಗೆ ಕಾಲುಂಗುರವನ್ನು ತೊಡಿಸಿದರು.
ಆರತಕ್ಷತೆ ಕಾರ್ಯಕ್ರಮಗಳೆಲ್ಲ ಮುಗಿದು ನಿಧಿ ಕಾರ್ತಿಕ್ ನ ಮುದ್ದಿನ ಮಡದಿಯಾದಳು. ಜೋಡಿ ಹನಿಮೂನ್ ಗೆ ಊಟಿಗೆ ತೆರಳಿದರು..ಸಂತಸದ ಅಲೆಯಲ್ಲಿ ತೇಲಿಹೋದರು..ಕಾರ್ತಿಕನ ಬಾಳಿನಲ್ಲಿ ಅಮೂಲ್ಯ ನಿಧಿಯಾದಳು..ಇಬ್ಬರ ದುಗುಡ ಮರೆತು ತುಂಟತನವೇ ತುಂಬಿಹೋಗಿತ್ತು.. ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳಲು ಕಷ್ಟವಾಗಲಿಲ್ಲ.. ನಿಧಿ ಕ್ಷಣವೂ ಕಾರ್ತಿಕನ ಬಿಟ್ಟಿರುತ್ತಿರಲಿಲ್ಲ .. ಪಿಸುಮಾತು,ಕಿಲಕಿಲ ನಗುವಿನಲ್ಲಿ ಹೊಸ ಹುಮ್ಮಸ್ಸು ಬಂದುಬಿಟ್ಟಿತು.
ನಿಧಿ ತನ್ನ ಆಸೆಯನ್ನು ಹೇಳಿಕೊಳ್ಳುವ ಅವಕಾಶ ಕೊಟ್ಟ ಕಾರ್ತಿಕ್.. ಆಕೆ ಮನದಾಸೆಯನ್ನು ಹೇಳುತ್ತಾ ಕಣ್ಣೀರಾಗಿ ಎಲ್ಲಿ ಕಾರ್ತಿ ಬೇಸರಪಟ್ಟುಕೊಳ್ಳುತ್ತಾನೋ ಎಂದುಕೊಂಡಳು.. ಆಕೆಯನ್ನು ತನ್ನೆದೆಗೆ ತಬ್ಬಿದ ಕಾರ್ತಿ"ಇಷ್ಟಕ್ಕೆ ನೀನು ಅವತ್ತು ಅಷ್ಟು ಗಂಭೀರವಾಗಿ ಇದ್ದೆಯಾ..ಆವತ್ತೇ ಹೇಳಿದ್ದರೆ ನಾನು ಹೂಂ ಅನ್ನುತ್ತಿದ್ದೆ... ಮದುವೆಗೆ ಮುಂಚೆ ಬಕೆಟ್ ಗಟ್ಟಲೆ ಕಣ್ಣೀರು ಸುರಿಸಿ ವೇಸ್ಟ್ ಮಾಡುವ ಅಗತ್ಯವೇ ಇರಲಿಲ್ಲ."ಎಂದಾಗ ನಿಧಿ ಗಂಡನ ಮುಂಗುರುಳು ಸವರಿ"ನನಗೇನು ಗೊತ್ತು ನೀವು ಒಪ್ಪಿಗೆ ಕೊಡುತ್ತೀರೆಂದು"ಎನ್ನುತ್ತಾ ಲಲ್ಲೆಗೆರೆದಳು.
ಹನಿಮೂನ್ ಮುಗಿಸಿಕೊಂಡು ಮನೆಗೆ ಮರಳಿದರು.ಸುನಂದಮ್ಮ, ಶ್ರೀಕಂಠಯ್ಯನವರು ನಗುನಗುತ್ತಾ ಮಗಸೊಸೆಯನ್ನು ಬರಮಾಡಿಕೊಂಡರು.ಎಲ್ಲರಿಗೂ ಸುನಂದಮ್ಮ ಪ್ರೀತಿಯಿಂದ ಊಟ ಬಡಿಸಿದರು.ನಿಧಿ ಸಹಾಯಕ್ಕೆ ನಿಂತಾಗ " ಬೇಡಮ್ಮ ನೀನು ಊಟಮಾಡು.ಪ್ರಯಾಣಮಾಡಿ ಸುಸ್ತಾಗಿರ್ತೀಯಾ "..ಎಂದರು.
ಊಟ ಮಾಡಿ ಮಲಗಿದ ನಿಧಿಗೆ ನಿದ್ದೆಗೆ ಜಾರಿದ್ದೇ ತಿಳಿಯಲಿಲ್ಲ.. ಬೆಳಿಗ್ಗೆ ಅಲರಾಂ ಟ್ರಿಣ್ ಎಂದಾಗಲೇ ಎಚ್ಚರವಾದ್ದು..ಅಮ್ಮ ಹೇಳಿದ್ದು ನೆನಪಾಯಿತು ನಿಧಿಗೆ "ತಾಯಿಮನೆಯಂತೆ ಗಂಡನ ಮನೆಯಲ್ಲಿ ಸುಮ್ಮನಿರುವುದಲ್ಲ.ಅತ್ತೆಯೊಡನೆ ಕೆಲಸಕ್ಕೆ ಸಹಕರಿಸಬೇಕೆಂದು.".ಮುಖತೊಳೆದು ಅಡುಗೆ ಮನೆ ಕಡೆ ತೆರಳಿದರು.ಅಲ್ಲಿ ಆಗಲೇ ಅತ್ತೆ ಕೆಲಸ ಆರಂಭಿಸಿದ್ದರು."ನಾನೇ ಮಾಡ್ತೀನಿ ಬಿಡಮ್ಮ..ನಿಂದಿನ್ನೂ ಸಣ್ಣ ವಯಸ್ಸು.. ಸ್ವಲ್ಪ ಆರಾಮಾಗಿರು.. ಮುಂದೆ ನೀನೇ ಕಲಿತುಕೊಳ್ತೀಯಾ ..."ಎಂದರು ಅತ್ತೆ..
ಇನ್ನೇನು ಮಾಡಲಿ ಎಂದು ಹಾಲ್ ನ ಕಡೆ ಹೆಜ್ಜೆಹಾಕಿದಳು.ಅಲ್ಲಿದ್ದ ಮಾವ ನಿಧಿಯನ್ನು ಕಂಡೊಡನೆ "ನಿಧಿ..ಹೇಗಿದ್ದೀಯಮ್ಮ..."
"ಚೆನ್ನಾಗಿಯೇ ಇದ್ದೀನಿ"ಎಂದು ತುಸು ತಲೆತಗ್ಗಿಸಿ ನುಡಿದಳು.
"ನೋಡಮ್ಮ... ನೀನು ಇವತ್ತು ಬೇಗ ಸ್ನಾನ ಮುಗಿಸಿ ಹೊರಡು.."
"...ಸರಿ..."
"ಅಂದಹಾಗೆ ನಿಂಗೆ ಯಾವ ಕೋರ್ಸ್ ಮಾಡಬೇಕಾದ್ದು ಹೇಳು"
ನಿಧಿಯ ಕಿವಿ ನಿಮಿರಿ ನೆಟ್ಟಗಾಯ್ತು..."ಅದೂ.."
"ಅದೂ..ಇದೂ..ಎಲ್ಲ ಬೇಡಮ್ಮಾ.. ಧೈರ್ಯವಾಗಿ ಹೇಳು.. ಇವತ್ತು ನಿನ್ನನ್ನು ಕಾಲೇಜಿಗೆ ಸೇರಿಸ್ತೀವಿ ..ನನ್ನ ಗೆಳೆಯ ಕಾಲೇಜು ಪ್ರಿನ್ಸಿಪಾಲ್..ಎಲ್ಲ ಮಾತಾಡಿ ಆಗಿದೆ.. ಸರ್ಟಿಫಿಕೇಟ್ ತೆಗೆದುಕೊಂಡು ಸೊಸೆಯನ್ನು ಕರೆದುಕೊಂಡು ಬನ್ನಿ.. ಎಂದಿದ್ದಾರೆ"ಎಂಬ ಮಾವನವರ ನುಡಿ ಕೇಳಿದ ನಿಧಿ ತನ್ನ ಕಿವಿಯನ್ನೇ ನಂಬದಾದಳು.. ಅಷ್ಟರಲ್ಲಿ ಅತ್ತೆ
"ಹೌದಮ್ಮ ನಿಧಿ..ನನ್ನತ್ತೆ ನನ್ನಾಸೆಗೆ ತಣ್ಣೀರೆರಚಿದ್ದರು . ಆದರೆ ನಾನು ಅಂತಹ ಅತ್ತೆ ಆಗಬಾರದು ಎಂದು ಅಂದೇ ಸಂಕಲ್ಪ ಮಾಡಿದ್ದೆ..ನಿನ್ನ ಕನಸನ್ನು ನನಸು ಮಾಡಲು ನಾನು ಬೆಂಬಲ ನೀಡ್ತೀನಮ್ಮಾ .."ಎಂದಾಗ ಹಿಂದಿರುಗಿ ತನ್ನ ಬೆಡ್ ರೂಂ ಕಡೆಗೆ ನೋಡಿದರೆ ತುಂಟತನದಿಂದ ನಗುತ್ತಾ ನಿಂತಿದ್ದ ಕಾರ್ತಿಕ್.. ಇದು ಇವನದೇ ಕೆಲಸ ಎಂದು ತಿಳಿದು... ಓಡಿಹೋಗಿ ಅವನೆದೆಗೆ ಮುಖವಿಟ್ಟಳು ನಿಧಿ..
ಮನದೊಳಗೆ ಜಗನ್ಮಾತೆಯಲ್ಲಿ " ಎಲ್ಲಾ ಹೆಣ್ಣುಮಕ್ಕಳಿಗೂ ಇಂತಹಾ ಗಂಡ ,ಅತ್ತೆ, ಮಾವನನ್ನು ದಯಪಾಲಿಸು ತಾಯೇ..."ಎಂದು ಬೇಡಿಕೊಂಡಳು.
🙏
✍️... ಅನಿತಾ ಜಿ.ಕೆ.ಭಟ್.
05-02-2020.
ಚಿತ್ರ ಕೃಪೆ ಅಂತರ್ಜಾಲ ಮತ್ತು momspresso Kannada.
Momspresso Kannada, Pratilipi Kannada,ಕಥಾ ಅರಮನೆಯಲ್ಲಿ ಪ್ರಕಟಿಸಿದ ಬರಹ..
👌👌😊
ReplyDelete💐🙏
ReplyDelete