Sunday, 9 February 2020

ಜೀವನ ಮೈತ್ರಿ ಭಾಗ-೧೩








              ಹೆಣ್ಮಕ್ಕಳು ಒಳಗೆ ಹೋಗಿ ಮೈತ್ರಿಯನ್ನು ಮಾತನಾಡಿಸಿ ಬಂದರು.ಅವರು ಹುಡುಗನ ತಾಯಿ ಮತ್ತು ಸೋದರತ್ತೆ ಆಗಿದ್ದರು.. ಹುಡುಗನ ತಾಯಿ "ಹಳ್ಳಿ ಇಷ್ಟವಿದೆಯಾ,ಮನೆಕೆಲಸ ಬರುತ್ತಾ, ಉದ್ಯೋಗಕ್ಕೆ ಹೋಗದೆ ಮನೆಯಲ್ಲೇ ಇರುವುದು ಇಷ್ಟವಿದೆಯಾ, ಹಾಡಲು,ರಂಗೋಲಿ ಹಾಕಲು ಬರುತ್ತಿದೆಯಾ ...."ಎಂದೆಲ್ಲ ಇಂಟರ್ವ್ಯೂ ಮಾಡಿ ಮುಗಿಸಿದರು.. ಭಾಸ್ಕರ ಶಾಸ್ತ್ರಿಗಳು ಹುಡುಗನನ್ನು ಮಾತಿಗೆಳೆದರು.ವಿದ್ಯಾಭ್ಯಾಸ ,ಮಾಡಿದ ಉದ್ಯೋಗ , ಕೃಷಿಯಲ್ಲಿನ ಆಸಕ್ತಿ ಎಲ್ಲವನ್ನೂ ವಿಚಾರಿಸಿಕೊಂಡರು.ನಂತರ ಎಲ್ಲರನ್ನೂ ಉಪಾಹಾರಕ್ಕೆ ಒಳಗೆ ಆಹ್ವಾನಿಸಿದರು.ಮಹೇಶ ಎಲ್ಲರಿಗೂ ಪಂಕ್ತಿಹಾಕಿ ಲೋಟ,ಬಾಳೆಲೆಯಿಟ್ಟು ಪೂರ್ಣ ತಯಾರಿ ಮಾಡಿದ್ದ..ಮಂಗಳಮ್ಮ,ಮಹಾಲಕ್ಷ್ಮಿ ಅಮ್ಮ ಕಾಫಿ, ಚಹಾ ಮಾಡಿ ತಂದಿಟ್ಟರು.ಅವಲಕ್ಕಿ ಮಹೇಶ್ ಬಡಿಸಿದರೆ ಉಪ್ಪಿಟ್ಟು ಮಂಗಳಮ್ಮ ಬಡಿಸಿ, ಚಹಾ ಕೊಟ್ಟರು.ಮಹೇಶ  ಕಾಫಿ ಕೊಟ್ಟನು.ಕ್ಷೀರ ಬಡಿಸಲು ಮೈತ್ರಿಯನ್ನು ಕರೆದರು ಭಾಸ್ಕರ ಶಾಸ್ತ್ರಿಗಳು.ಮಂಗಳಮ್ಮ ಮಾತ್ರ "ನಾನೇ ಬಡಿಸುತ್ತೇನೆ "ಎಂದು ಬಡಿಸಿದರು..ಹುಡುಗನಿಗೆ ಸ್ವಲ್ಪ ನಿರಾಸೆಯಾದುದು ಮುಖಭಾವದಲ್ಲಿ ಎದ್ದು ಕಾಣುತ್ತಿತ್ತು.


     ಉಪಾಹಾರವಾದ ನಂತರ ಎಲ್ಲರಿಗೂ ವಿಶಾಲವಾದ ಹಳೆಯ ಕಾಲದ ಮನೆಯನ್ನು ತೋರಿಸಿದರು ಭಾಸ್ಕರ ಶಾಸ್ತ್ರಿಗಳು.ಬಹಳ ಹಳೆಯದಾದ ಮನೆಯನ್ನು ಈಗಲೂ ಸುಸ್ಥಿತಿಯಲ್ಲಿಟ್ಟುಕೊಂಡಿರುವುದು ಅದ್ಭುತವೇ ಸರಿ ಎಂದು ಕೊಂಡಾಡಿದರು.ಮನೆ,ದನದ ಕೊಟ್ಟಿಗೆ ಎಲ್ಲವನ್ನೂ ಸುತ್ತುಹಾಕಿ ನೆಂಟರೆಲ್ಲ ಮೆಚ್ಚುಗೆ ವ್ಯಕ್ತಪಡಿಸಿ ಚಾವಡಿಯಲ್ಲಿ ಬಂದು ಕುಳಿತರು.ಭಾಸ್ಕರ ಶಾಸ್ತ್ರಿಗಳು ತಂದೆಯನ್ನು ಒಳಗೆ ಕರೆದು ಕಿವಿಯಲ್ಲಿ ಗುಸುಗುಸು ಮಾತನಾಡಿ ಮರದ ಕಪಾಟಿನತ್ತ ನಡೆದರು.ಅಲ್ಲಿಂದ ಕಾಗದವೊಂದನ್ನು ತೆಗೆದುಕೊಂಡು ಹೊರಗೆ ಹೋದರು.


    ಹುಡುಗನ ತಂದೆಯ ಕೈಯಲ್ಲಿ ಅದನ್ನು ಕೊಟ್ಟು.."ಇದು ಮಗಳು ಮೈತ್ರಿಯ ಜಾತಕ..ಜೋಯಿಸರಲ್ಲಿ ತೋರಿಸಿ ತಮ್ಮ ಮಗನ ಜಾತಕಕ್ಕೆ ಹೊಂದುವುದೇ ಎಂದು ಪರಿಶೀಲಿಸಿ ಉತ್ತರ ತಿಳಿಸಿ..." ಎಂದರು..ಒಳಗೆ ರೂಮಿನಲ್ಲಿ ಕುಳಿತು ಕೇಳಿಸಿಕೊಂಡ ಮೈತ್ರಿ ಕುಳಿತಲ್ಲೇ ಕುಸಿದಳು..ಇಲ್ಲಾ ಇಲ್ಲಿಗೆ ನನ್ನ ಕಥೆ ಮುಗಿಯಿತು...ಅಮ್ಮ ಹೇಳಿದ್ದೇನು....ಅಪ್ಪ ಮಾಡಿದ್ದೇನು....ನನ್ನ ಪರವಾಗಿ ಯಾರೂ ಇಲ್ಲವಲ್ಲ.. ಕಿಶನ್ ಕೂಡಾ ಪ್ರತಿಕ್ರಿಯಿಸುತ್ತಿಲ್ಲ ...ಅಪ್ಪನ ಮಾತಿಗೆ ಅಜ್ಜನೂ ಸಮ್ಮತಿಸಿದರೇ...ಅವರಿಗಾದರೂ ನನ್ನ ನೋವು ಅರ್ಥವಾಗಬಾರದೇ ...ಅಪ್ಪನ ಮೇಲೆ ಕೋಪವುಕ್ಕಿ ಬಂತು ಮೈತ್ರಿಗೆ...ಎಲ್ಲದರಲ್ಲೂ ಅವರಂದಂತೆಯೇ ಆಗಬೇಕು...ಓದು ,ಬಟ್ಟೆಬರೆ,ಸಂಸ್ಕಾರ, ಖರ್ಚುವೆಚ್ಚ ಎಲ್ಲದರಲ್ಲೂ ತನ್ನದೇ ಹಿಡಿತ ಸಾಧಿಸಿದ್ದನ್ನಾದರೂ ಸರಿ ಎಂದು ಒಪ್ಪಿಕೊಳ್ಳುತ್ತೇನೆ.. ಆದರೆ... ಆದರೆ....ಇದು ನನ್ನ ಬದುಕು...ನನ್ನ ಬಾಳು... ಮದುವೆಯಾಗಿ ಸಂಸಾರ ಮಾಡಬೇಕಾದವಳು ನಾನು...ಅವರಲ್ಲವಲ್ಲ.... ನನ್ನನ್ನು ಒಂದು ಮಾತೂ ಕೇಳದೆ..ನನ್ನ ಅಭಿಪ್ರಾಯ ಏನೆಂದೇ ತಿಳಿದುಕೊಳ್ಳದೇ ...ಜಾತಕ ಕೊಟ್ಟುಬಿಟ್ಟದ್ದು ಸರಿಯಲ್ಲ... ನಾನಿದನ್ನು ವಿರೋಧಿಸುತ್ತೇನೆ.....ಬಿಕ್ಕಿ ಬಿಕ್ಕಿ ಅಳುತ್ತಿದ್ದಳು ಮೈತ್ರಿ..

    ನಾನು ಹೇಗೆ ವಿರೋಧಿಸಲಿ...ವಿರೋಧಿಸಿ  ನನ್ನ ಕಾಲಲ್ಲೇ ನಿಲ್ಲಲು ನನಗಿನ್ನೂ ವಿದ್ಯಾಭ್ಯಾಸವೇ ಮುಗಿದಿಲ್ಲ.. ಸ್ವಂತ ಸಂಪಾದನೆ ಇಲ್ಲ...ನಾಲ್ಕೇಟು ಹೊಡೆದರೆ ಸಹಿಸಿಕೊಳ್ಳುವ ಛಾತಿ ಮೊದಲೇಯಿಲ್ಲ...ನಾನೇನುಮಾಡಲಿ....

ಒಂದು ಸಾರಿ ಕಿಶನ್ ಗೆ ಫೋನು ಮಾಡುತ್ತೇನೆ ಎಂದು ಕರೆ ಮಾಡಿದಳು.. ಅವನು ರಿಸೀವ್ ಮಾಡಲಿಲ್ಲ..

       ಬಂದ ನೆಂಟರು ನಗುನಗುತ್ತಾ ಮಾತನಾಡಿಕೊಂಡು ಹೊರಟದ್ದು ಮೈತ್ರಿ ಯ ಅರಿವಿಗೆ ಬಂತು.. ಜೀಪ್ ಸ್ಟಾರ್ಟ್ ಆಗಿ ಹೊರಟಿತು.. ಮೈತ್ರಿ ಅತ್ತು ಕೆಂಪಾದ ಕಣ್ಣುಗಳನ್ನು ಒರೆಸಿಕೊಂಡು ರೂಮಿನಿಂದ ಹೊರಬಂದಳು.ಅಪ್ಪ ಅಂಗಳದ ಒಂದು ಬದಿಯ ತುದಿಯಲ್ಲಿದ್ದ ಗೇಟುಹಾಕಿ ಬರಲು ತೆರಳಿದರು.ಮೈತ್ರಿ ಹಳೆಯ  ಚಪ್ಪಲಿಯನ್ನು ಕಾಲಿಗೆ ಸುರಿದುಕೊಂಡು ಇನ್ನೊಂದು ಬದಿಯಿಂದ ಬಿರಬಿರನೆ ನಡೆದೇಬಿಟ್ಟಳು.. ಚಾವಡಿಯಲ್ಲಿ ನಿಂತಿದ್ದ ಮಹೇಶ್ ಅಕ್ಕನ ನಡೆಯನ್ನು ಗಮನಿಸಿದ.ಸ್ವಲ್ಪ ಹೊತ್ತು ಸುಮ್ಮನಿದ್ದ ಮಹೇಶ್ ಸುಮ್ಮನಿರುವುದು ತಪ್ಪು...ಅಕ್ಕ ಬಹಳ ನೊಂದಿದ್ದಾಳೆ..ಈ ಕ್ಷಣದಲ್ಲಿ ಅವಳ ಮನಸ್ಸು ಯಾವ ನಿರ್ಧಾರ ಕೈಗೊಳ್ಳಬಹುದೆಂದು ಊಹಿಸಲು ಸಾಧ್ಯವಿಲ್ಲ.. ನಾನು ಹಿಂಬಾಲಿಸಲೇ ಬೇಕು.. ಎಂದು ತಾನು ತಡಮಾಡದೇ ಬರಿಗಾಲಲ್ಲೇ ಹಿಂಬಾಲಿಸಿದ..ಅಕ್ಕ ಮೇಲಿನ ತೋಟದತ್ತ ಹೆಜ್ಜೆ ಹಾಕಿದ್ದಳು..ಅಲ್ಲಿ ನೋಡಿದಾಗ ಅವಳನ್ನು ಕಾಣಿಸಲಿಲ್ಲ..ಕೆಳಗಿನ ತೋಟದಲ್ಲಿ ಇರಬಹುದು ಎಂದು ಹೋದ.. ಊಹೂಂ..ಅಲ್ಲಿಯೂ ಅವಳ  ಸದ್ದು ಕೇಳುತ್ತಿಲ್ಲ...ಅಲ್ಲಿಂದ ಮುಂದೆ ಇರುವುದು ಬೈಲ ತೋಟ...ಬೈಲತೋಟದ ಹಾದಿಯಲ್ಲಿ ತೆರಳಿದ...ಅಲ್ಲಿ ಮೂರು ಕವಲುಗಳಿವೆ..ಒಂದು ತೋಟದೊಳಗೆ ಹೋಗಲು ಇನ್ನೊಂದು ತೋಟದಂಚಿಂದ ಬೈಲ ಕೆಳಗಿನ ಮನೆಗಳಿಗೆ ಹೋಗುವ ಕಾಲುಹಾದಿ,ಮತ್ತೊಂದು ಪಡುಗುಡ್ಡೆಯ ಕಡೆಗೆ ಹೋಗುವ ಹಾದಿ.ಮೊದಲೆರಡು ಹಾದಿಗಳು ಎಲ್ಲರೂ ಬಳಸುವ ಹಾದಿ.. ಸರಾಗವಾಗಿ ಹೋಗುವಂತಿದೆ.ಮೂರನೆಯ ಪಡುಗುಡ್ಡೆಯ ಹಾದಿ ಯಲ್ಲಿ ಹುಲ್ಲುಸೊಪ್ಪಿನ ಬಲ್ಲೆಮುಸುಕಿದೆ.. ವರುಷಕ್ಕೊಮ್ಮೆ ಪಡುಗುಡ್ಡೆಯಲ್ಲಿ ಗೇರುಬೀಜ ಸಿಗುವ ಸಮಯದಲ್ಲಿ ದಾರಿಯನ್ನು ಸ್ವಚ್ಛಗೊಳಿಸಿ ಬಳಸುತ್ತಾರೆ..ಪಡುಗುಡ್ಡೆಯ ಬುಡದಲ್ಲಿ ಒಂದು ಎಕರೆಯಷ್ಟು ವಿಶಾಲವಾದ ಕೆರೆಯಿದೆ.ವರುಷವಿಡೀ ನೀರಿರುವ ಕೆರೆಯದು..ಪಡುಗುಡ್ಡೆಯಲ್ಲಿ ಇಂಗಿದ ಮಳೆಯನೀರೆಲ್ಲ ಒರತೆಯಾಗಿ ಹರಿದು ವರುಷವಿಡೀ ನೀರುಬತ್ತದ ಕೆರೆ..

ಮಹೇಶನಿಗೆ ಅಕ್ಕ ಯಾವ ದಾರಿಯಲ್ಲಿ ಹೋಗಿರಬಹುದೆಂಬ ಕಲ್ಪನೆಯಿರಲಿಲ್ಲ..ಆದರೂ ಕೆರೆಯಕಡೆಗೆ ಅಕ್ಕ ಹೋಗಿರಬಹುದೇ ಎಂಬ ಗುಮಾನಿಯಿಂದ ಆ ಕಡೆಗೆ ನಡೆದ..ತುಂಬಿರುವ ಹುಲ್ಲುಪೊದೆಗಳ ಮಧ್ಯದಲ್ಲಿ ಜಾಗಮಾಡಿಕೊಂಡು ಸಾಗಿದ ‌.ಸಾಗುತ್ತಿದ್ದಂತೆ ಯಾರೋ ಸಾಗಿಹೋದಂತೆ ಹುಲ್ಲು ಪಕ್ಕಕ್ಕೆ ಸರಿದುಕೊಂಡಿರುವ ಸೂಚನೆ ಕಂಡಿತು..ಬರಿಗಾಲಿಗೆ ಚುಚ್ಚುತಿರುವ ಮುಳ್ಳುಗಳು ..ರಕ್ತ ಸೋರಲಾರಂಭಿಸಿದರೂ ನಿಧಾನಿಸದೆ ವೇಗವಾಗಿ ಹೆಜ್ಜೆ ಹಾಕಿದ...ದೂರದಲ್ಲಿ  ಅಕ್ಕ ಉಟ್ಟಿರುವ ಮಾಸಲು ಬಣ್ಣದ ಸೀರೆಯ ಸೆರಗು ಕಂಡಂತಾಯಿತು.. "ಅಕ್ಕಾ.. ಅಕ್ಕಾ..ನಿಂತುಕೋ.. "ಎಂದು ಕರೆಯುತ್ತಾ ಓಡತೊಡಗಿದ.ಆ ಧ್ವನಿಯನ್ನು ಆಲಿಸದೆ ಬಿರಬಿರನೆ ಸಾಗುತ್ತಿದ್ದಳು ಮೈತ್ರಿ.. ಇನ್ನು ಹತ್ತು ಹೆಜ್ಜೆ ಸಾಗಿದರೆ ತುಂಬಿಕೊಂಡಿರುವ 'ಪಡುಕೆರೆ'..ನನ್ನ ಆಸೆಗಳು ನನ್ನೊಂದಿಗೆ ಕೊನೆಯಾಗಲಿ...ಎಂದುಕೊಂಡು ಕಾಲುಮುಂದಿಕ್ಕುತ್ತಿದ್ದಳು...ಮೈತ್ರಿ.. ಏದುಸಿರು ಬಿಡುತ್ತಾ ಓಡಿಬರುತ್ತಿದ್ದನು ಮಹೇಶ್...


     ಮೈತ್ರಿ ಪಡುಕೆರೆಯ ಮೆಟ್ಟಿಲಲ್ಲಿ ನಿಂತು ಒಮ್ಮೆ ಕಿಶನ್ ನನ್ನು ನೆನಪಿಸಿಕೊಂಡು , ಮಗದೊಮ್ಮೆ ಹೆತ್ತ ತಾಯಿಯ ನೆನಪಿಸಿಕೊಂಡು ಮೆಟ್ಟಿಲಿಳಿಯಲಾರಂಭಿಸಿದಳು..ಹಿಂದಿನಿಂದ ಬಂದ ಮಹೇಶ ಅಕ್ಕನ ಕೈ ಹಿಡಿದೆಳೆದ... ಅಕ್ಕಾ... ಎನ್ನುತ್ತಾ ಅವಳು ಮೆಟ್ಟಿಲಿಳಿಯದಂತೆ ಅವಳೆದುರು ಬಂದು ನಿಂತ...ಕೆಂಪಾದ ಕಂಗಳಿಂದ ಸುರಿಯುತ್ತಿರುವ ನೀರನ್ನು ಒರೆಸಿ ಅಕ್ಕನ ಮೊಗವನ್ನು ತನ್ನ ಬೊಗಸೆಯಲ್ಲಿ ಹಿಡಿದು..."ಅಕ್ಕಾ.. ಏನು ಮಾಡಲು ಹೊರಟಿದ್ದೀಯಾ... ಎಷ್ಟು ಕರೆದರೂ ಕೇಳಿಸಿಕೊಳ್ಳದೆ ...ಬಾ ಮೇಲೆ ಹೋಗೋಣ.."
"ನೀನ್ಯಾಕೆ ಬಂದೆ ಇಲ್ಲಿಗೆ..ಇಲ್ಲಿಯೂ ನಿನ್ನ ಕೀಟಲೆ ಬೇಕಾ.. ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಡು.."

      "ಅಕ್ಕಾ...ನಿನಗೇನು ಬಯಕೆಯಿದೆ..ನನ್ನಲ್ಲಿ ಹೇಳು.. ನಾನು..ನಿನ್ನ ತಮ್ಮ..ಈ ಮಹೇಶನಲ್ಲಿ ನಂಬಿಕೆಯಿಟ್ಟು ಹೇಳು..ನಿನ್ನಾಸೆಯನ್ನು ನಾನು ನೆರವೇರಿಸುತ್ತೇನೆ ..ಅದು ಬಿಟ್ಟು ಇಂತಹಾ ಕೆಲಸ..ಬೇಡ ಅಕ್ಕಾ..."ಎನ್ನುತ್ತಾ ತನ್ನ ಬೊಗಸೆಯಲ್ಲಿದ್ದ ಅಕ್ಕನ ಕೆನ್ನೆಯನ್ನು ಪ್ರೀತಿಯಿಂದ ಸವರಿದ ..ಕಣ್ಣೀರನ್ನು ..ತನ್ನ ಕೈಗಳಿಂದ ಒರೆಸಿದ...ಅಕ್ಕನ ಮುಖವನ್ನು ತನ್ನೆದೆಗೆ ಆನಿಸಿ ಹಣೆಯ ಮೇಲೊಂದು ಮುತ್ತನಿಟ್ಟು ..."ಅಕ್ಕಾ... ಈ ತಮ್ಮನನ್ನು ಬಿಟ್ಟು ಹೋಗಲು ಮನಸಾದರೂ ಹೇಗೆ ಬಂತಕ್ಕಾ..ಈ ಮದುವೆ ನಿನಗೆ ಇಷ್ಟವಿಲ್ಲ ತಾನೇ..
ನಾನೇ ಈ ಸಂಬಂಧ ತಪ್ಪಿಸುತ್ತೇನೆ ..ಆದರೆ ಇನ್ನೆಂದೂ ಹೀಗೆ ಮಾಡಲ್ಲ ಅಂತ ಭಾಷೆ ಕೊಡಬೇಕು.."ಎಂದ ತಮ್ಮನ ಪ್ರೇಮಭರಿತ ನುಡಿಗಳಿಗೆ ಸೋತ ಮೈತ್ರಿ ಯ ಕಣ್ಣುಗಳಿಂದ ಇಳಿದ ಅಶ್ರುಧಾರೆ ತಮ್ಮನ ಎದೆಯನ್ನು ತೋಯಿಸಿತು..ನನ್ನಕ್ಕ  ಸಾಧು ಸ್ವಭಾವದವಳಾದರೂ ಎಲ್ಲದಕ್ಕೂ ಅಳುವವಳಲ್ಲ...ಗಹನವಾದ ವಿಚಾರವಿದ್ದರೆ ಮಾತ್ರ ಇಂತಹ ನಿರ್ಧಾರಕ್ಕೆ ಬಂದಾಳಷ್ಟೇ...ಅವಳ ಮನಸ್ಸನ್ನರಿತು ನಾನೊಬ್ಬನಾದರೂ ನಡೆಯಬೇಕು.. ಎಂದುಕೊಳ್ಳುತ್ತಾ..." ಅಕ್ಕಾ..ನನಗೆ ಭಾಷೆ ಕೊಡು..ಎಂದು ಕೈಯನ್ನು ಮುಂದಕ್ಕೆ ಚಾಚಿದನು...ನಿರ್ವಾಹವಿಲ್ಲದೆ ಮೈತ್ರಿ ತಮ್ಮನಿಗೆ ಭಾಷೆಯಿತ್ತಳು...

         ಅಕ್ಕನನ್ನು ಕರೆದುಕೊಂಡು ಮೆಟ್ಟಿಲೇರಿದ ಮಹೇಶ್...ಕೆರೆದಂಡೆಯ ಮೇಲೆ ಕುಳಿತು ಅಕ್ಕನಲ್ಲಿ ಮದುವೆ ಇಷ್ಟವಿಲ್ಲದುದಕ್ಕೆ ಕಾರಣ ಕೇಳಿದರೆ ಅಕ್ಕ ಮಾತ್ರ ಮೌನಿ...ತಮ್ಮ ಇನ್ನೂ ಸಣ್ಣ ವಯಸ್ಸಿನವ...ಹುಡುಗು ಬುದ್ಧಿ... ಇವನಲ್ಲಿ ಹೇಗೆ ನನ್ನ ಪ್ರೇಮದ ವಿಚಾರ ಹೇಳಿಕೊಳ್ಳಲಿ...ಹೇಳಿದರೆ ಮನೆಯವರಲ್ಲಿ ತಿಳಿಸಲೂ ಬಹುದು..ಸುಮ್ಮನಿರುವುದೇ ವಾಸಿ..ಎಂದು ಆಲೋಚಿಸುತ್ತಿದ್ದಾಗ..."ಅಕ್ಕಾ..ನೀನೇನೂ ಯೋಚನೆ ಮಾಡಬೇಡ... ಈ ಮದುವೆಯನ್ನು ಮುರಿಯುವ ಕೆಲಸ ನನ್ನದು..."ಎಂದು ಭರವಸೆ ನೀಡಿ ಅಕ್ಕನನ್ನು ಮನೆಯತ್ತ ಕರೆದುಕೊಂಡು ಬಂದನು..


      ಅಕ್ಕ ತಮ್ಮ ಇಬ್ಬರೂ ಕಾಣದಿದ್ದುದನ್ನು ಗಮನಿಸಿ ಮನೆಯವರು ಗಾಬರಿಯಾಗಿದ್ದರು.. ಚಾವಡಿಯಲ್ಲಿದ್ದ ಅಪ್ಪ ಪ್ರಶ್ನೆ ಕೇಳುವ ಮುನ್ನವೇ "ವಾಕ್ ಹೋಗಿ ಬಂದೆವು.."ಎಂದು ಗಂಭೀರವಾಗಿ ನುಡಿದ ಮಹೇಶ್... ಮೈತ್ರಿ ರೂಮಿಗೆ ಸೇರಿಕೊಂಡಳು.. ಮಹೇಶ್ ಮದುವೆ ತಪ್ಪಿಸುವ ಕುರಿತು ಚಿಂತನೆ ನಡೆಸುತ್ತಿದ್ದನು..


 ಮುಂದುವರಿಯುವುದು...

✍️... ಅನಿತಾ ಜಿ.ಕೆ.ಭಟ್.
10-02-2020.


2 comments: