Wednesday, 27 November 2019

ಮರುಜನ್ಮ

                 



             ಅಂದು ಆಫೀಸಿನಲ್ಲಿ ಕೆಲಸಮಾಡಿ ದಣಿದಿದ್ದಳು ಸರಳಾ.ತನ್ನ ಮನೆಕಡೆಗೆ ಹೋಗುವ ಏಕೈಕ ಬಸ್ ಸಿಗಬೇಕಾದರೆ ವೇಗವಾಗಿ ನಡೆಯಬೇಕಿತ್ತು.ಬಸ್ ಬರಲು ಐದು ನಿಮಿಷ ಇತ್ತು.ವೇಗವಾಗಿ ನಡೆದರೆ ಅಷ್ಟು ಹೊತ್ತು ಸರಿಯಾಗಿ ಬೇಕು.ಸಮಯ ನಿಲ್ಲುವುದಿಲ್ಲ.ಎನ್ನುತ್ತಾ ನೋಯುತ್ತಿದ್ದ ಕಾಲುಗಳನ್ನು ಎಳೆಯತೊಡಗಿದಳು.ಅವಳು ಬಸ್ ಸ್ಟ್ಯಾಂಡ್ ಗೆ ಬರುವುದೂ ಬಸ್ ಬರುವುದೂ ಸರಿಯಾಯಿತು.ಸ್ವಲ್ಪ ತಡವಾದರೆ ಎರಡೆರಡು ಬಸ್ ಹಿಡಿದು ಮನೆತಲುಪುವಾಗ ರಾತ್ರಿಯಾಗುತ್ತಿತ್ತು.

           ಬಸ್ ಹತ್ತಿದವಳು ಮೊದಲು ನೋಡಿದ್ದು ಸೀಟು ಇದೆಯಾ ಎಂದು.ಅಬ್ಬಾ...ಅವಳ ಅದೃಷ್ಟ ಚೆನ್ನಾಗಿತ್ತು.ಒಂದೇ ಒಂದು ಸೀಟು ಇತ್ತು.ಬಸ್ ಹತ್ತಿದಾಗ ಸಿಗುವ ಆಸನಗಳ ಸಾಲಿನಲ್ಲಿ ಇದ್ದ ಸೀಟು ಕಂಡು ಅವಳಿಗೆ ಜೀವಬಂದಂತಾಯ್ತು.ಪಕ್ಕದಲ್ಲಿ ಯುವಕನಿದ್ದ.ಮೊಬೈಲ್ ನೋಡುವುದರಲ್ಲಿ ಮಗ್ನನಾಗಿದ್ದ.ಕುಳಿತುಕೊಂಡಾಗ ಅವಳ ಅರಿವಿಲ್ಲದೇ ನಿಟ್ಟುಸಿರೊಂದು ಹೊರಬಿದ್ದಿತು.ತನ್ನ ದೇಹದ ಭಾರವನ್ನೆಲ್ಲ ಆಸನದ ಮೇಲೆ ಇಳಿಬಿಟ್ಟಂತೆ ಕುಳಿತಳು.

              ಬಸ್ ಮುಂದಿನ ತಿರುವಿನಲ್ಲಿ ನಿಂತಿತು.ಶಾರದಾ ವಿದ್ಯಾಮಂದಿರದ ಕೆಲವು ವಿದ್ಯಾರ್ಥಿಗಳು ಬಸ್ ಗೆ ಹತ್ತಿಕೊಂಡರು.ಅವಳ ಪಕ್ಕದಲ್ಲಿ ಒಬ್ಬ ಏಳೆಂಟು ವರ್ಷ ಪ್ರಾಯದ ಬಾಲಕ ಬಂದು ನಿಂತ.ಅವನ ಹೆಗಲ ಮೇಲೆ ಅವನ ಸಾಮರ್ಥ್ಯಕ್ಕಿಂತ ಅಧಿಕ ಭಾರವಾದ ಬ್ಯಾಗ್ ಇತ್ತು.ಕೈಯಲ್ಲೊಂದು ಬುತ್ತಿಯ ಚೀಲ.ಆಗಾಗ ಬ್ರೇಕ್ ಅದುಮುತ್ತಿದ್ದ ಚಾಲಕ.ಅವನು ಮುಗ್ಗರಿಸಿ ಬೀಳುವಂತಾಗುತ್ತಿದ್ದ . ತೋಳುಗಳನ್ನು ಆಗಾಗ ಸವರುತ್ತಿದ್ದ.ಅವನ ಮುಖಭಾವ ತೋಳುಗಳು ನೋಯುತ್ತಿವೆಯೆಂದು ಹೇಳಿದಂತೆ ಭಾಸವಾಯಿತು ಸರಳಾಗೆ."ಬ್ಯಾಗ್ ಇಲ್ಲಿ ಕೊಡು" ಎಂದಳು.ನಕ್ಕ .. ಬೇಗನೆ ತೆಗೆದು ಅವಳ ತೊಡೆಯ ಮೇಲಿರಿಸಿದ.ಶರೀರ ಹಗುರಾಗಿ ಸ್ವಲ್ಪ ತುಂಟತನ ಶುರುಮಾಡಿದ್ದ.ಸನಿಹದಲ್ಲಿ ನಿಂತಿದ್ದ ಅವನ ಅಕ್ಕನಿರಬಹುದೇನೋ .. ಅವಳಿಗೆ ಮೆಲ್ಲನೆ ಕಾಟಕೊಟ್ಟು ನಗುತ್ತಿದ್ದ.

             ಆ ತುಂಟನಲ್ಲಿ ಆಕರ್ಷಣೆ ಇತ್ತು.ಸರಳಾ ಬಾ ಕುಳಿತುಕೋ ಎಂದು ಇಬ್ಬರ ನಡುವೆ ಅವನನ್ನು ಕುಳ್ಳಿರಿಸಿದಳು.ಸರಳಾಳಿಗೆ ಅವನನ್ನು ಮಾತನಾಡಿಸುವ ಬಯಕೆ.ಮಾತನಾಡಿದಾಗ ನಾಚಿ ತಲೆತಗ್ಗಿಸುತ್ತಿದ್ದ .ಮರುಕ್ಷಣ ಅಕ್ಕನತ್ತ ಓರೆನೋಟ ಬೀರುತ್ತಿದ್ದ.ಸರಳಾಗೆ ಅವನ ಮುದ್ದು ಮುಖ ಕಂಡು ಒಮ್ಮೆ ಇವನನ್ನು ಮನಸಾರೆ ಮುದ್ದಿಸಬೇಕೆಂಬ ಹಂಬಲ.ಯಾರಾದರೂ ಏನಾದರೂ ಅಂದುಕೊಂಡರೆ..ಎಂಬ ಸಂಕೋಚ..ತಿರುವುಗಳಲ್ಲಿ ಬಾಲಕ ಆಸನದಿಂದ ಬೀಳುವಂತಾದಾಗ ಮೆತ್ತಗೆ ತನ್ನ ತೋಳುಗಳಿಂದ ಅವನನ್ನು ಪುನಃ ಸರಿಯಾಗಿ ಕುಳ್ಳಿರಿಸಿ ಸಮಾಧಾನಪಟ್ಟುಕೊಳ್ಳುತ್ತಿದ್ದಳು ಸರಳಾ..


           ಭರತ್ ನಗರ ಬಸ್ ನಿಲ್ದಾಣ ಬಂತು.ಹುಡುಗ ಮೆಲ್ಲನೆ ಎದ್ದು ಬ್ಯಾಗ್ ಹೆಗಲಮೇಲೇರಿಸಿದ.ಸರಳಾಳತ್ತ ಓರೆನೋಟದಿಂದ ಮುಗುಳುನಕ್ಕು ಅಕ್ಕನ ಕೈಹಿಡಿದು ಮುಂದೆ ಸಾಗಿದ.ಸರಳಾಳಿಗೆ ಇಷ್ಟು ಬೇಗ ಅವನು ಇಳಿಯುವ ಸ್ಟಾಪ್ ಯಾಕದರೂ ಬಂತೋ.. ಇನ್ನೂ ಸ್ವಲ್ಪ ಹೊತ್ತು ತನ್ನ ಸನಿಹವೇ ಇರಬೇಕಿತ್ತು ಅನಿಸಿತು.. ಕಂಡಕ್ಟರ್ ಸೀಟಿ ಊದಿದನು.ಬಸ್ ನಿಂತಿತು.ಮಕ್ಕಳು ಇಳಿದರು.ಸರಳಾ ಕುಳಿತಲ್ಲಿಂದಲೇ ಮಗುವಿನತ್ತ ದೃಷ್ಟಿ ಹರಿಸಿದಳು.ಹುಡುಗನ ಮುಗ್ಧವಾದ ಮುಖವನ್ನು ಕಂಡು ನಿಟ್ಟುಸಿರು ಬಿಟ್ಟಳು.ಕಂಡಕ್ಟರ್ ರೈಟ್ ಹೇಳಿದ್ದೇ ತಡ... ಜೋರಾಗಿ ಚೀರುವ ಶಬ್ದ ಕೇಳಿಸಿತು.ಏನಾಯಿತು .. ಎಂದು ನೋಡುವಷ್ಟರಲ್ಲಿ....

             ಸರಳಾ ಒಂದುಕ್ಷಣ ಯೋಚಿಸದೆ ಬಸ್ಸಿನಿಂದಿಳಿದು ಓಡಿದಳು.ಬಾಲಕನ ಮೇಲೆ ಬೈಕೊಂದು ಹರಿದು ಹೋಗಿತ್ತು.ರಕ್ತದ ಮಡುವಿನಲ್ಲಿದ್ದ ಬಾಲಕನನ್ನು ಎತ್ತಿಕೊಂಡು ಸ್ಥಳೀಯರ ಸಹಕಾರದಿಂದ ಆಸ್ಪತ್ರೆಗೆ ಸಾಗಿಸಲು ಮುಂದಾದಳು.ಆತನ ಜೊತೆಗಿದ್ದ ಹುಡುಗಿಯೂ ಜೊತೆಗಿದ್ದಳು.ನಗುತ್ತಿದ್ದ ಮಗು ಕ್ಷಣದಲ್ಲೇ ಪ್ರಜ್ಞೆಯನ್ನು ಕಳೆದುಕೊಂಡಿತ್ತು.ಮಗುವನ್ನು ತನ್ನ ತೊಡೆಯಮೇಲೆ ಮಲಗಿಸಿಕೊಂಡ ಸರಳಾಳ ಪ್ರಾರ್ಥನೆ..ದೇವರೇ..ನೀನು ಕ್ರೂರಿಯಾಗದಿರು..ಈ ಪುಟ್ಟನ ಜೀವವನ್ನು ಹೊತ್ತೊಯ್ಯದಿರು...ಎಂಬುದಾಗಿತ್ತು.

            ಈ ವಾಹನ ಚಾಲಕರು ಯಾಕಿಷ್ಟು ಅಸಡ್ಡೆಯಿಂದ ವಾಹನ ಚಾಲನೆ ಮಾಡುತ್ತಾರೋ ...ಅವಸರ...ಬಸ್ಸಿನಿಂದ ಇಳಿದು ಜನ ಮಾರ್ಗ ದಾಟುವಷ್ಟು ಸಮಯ ಕಾಯುವ ತಾಳ್ಮೆ ಬೈಕಿನ ಚಾಲಕನಿಗೆ ಬೇಡವೇ...ಛೇ..!! ಬೇಜವಾಬ್ದಾರಿ...

            ನೆನಪಿನ ಸುಳಿಯಲ್ಲಿ ಕಳೆದುಹೋದಳು ಸರಳಾ.. ಅಂದು ಸಂಜೆ ಇದೇ ಹೊತ್ತಿನಲ್ಲಿ ನಾನು ಆಫೀಸಿನಿಂದ ಹೊರಟು ಮನೆಗೆ ಬರುತ್ತಿದ್ದೆ.ಹಿಂದಿನಿಂದ ವೇಗವಾಗಿ ಬಂದ ಬೈಕ್ ಗುದ್ದಿಬಿಟ್ಟಿತು.ಎಚ್ಚರವಾದಾಗ ಆಸ್ಪತ್ರೆಯಲ್ಲಿದ್ದೆ.ನನ್ನ ಜೀವವೇನೋ ಉಳಿದಿತ್ತು.. ಆದರೆ ಹೊಟ್ಟೆಯೊಳಗಿದ್ದ ಏಳು ತಿಂಗಳ ಕಂದ ಈ ಲೋಕಕ್ಕೆ ಕಾಲಿಡುವ ಮುನ್ನವೇ ಕಣ್ಣುಮುಚ್ಚಿದ್ದ.ಅಪಘಾತ ನಡೆಯದಿದ್ದರೆ ನನಗೂ ಈಗ ಇದೇ ವಯಸ್ಸಿನ ಮಗು ಇರುತ್ತಿತ್ತು...ಛೇ..!! ಹಾಳು ನೆನಪು..ಕಣ್ಣೀರೊರೆಸಿಕೊಂಡಳು...ಈ ಮಗುವನ್ನು ಉಳಿಸಿಕೊಳ್ಳಬೇಕು... ನಾವು ನೊಂದುಕೊಂಡಂತೆ ಈ ಮಗುವಿನ ಹೆತ್ತವರು ನೋವನುಭಾವಿಸಬಾರದು... ಎಂದು ಅಂದುಕೊಳ್ಳುತ್ತಲೇ ಸುರಕ್ಷಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ತಲುಪಿದರು.

            ವೈದ್ಯರು ತುರ್ತು ಚಿಕಿತ್ಸೆ ಕೈಗೊಂಡರು.ಸರಳಾ ಹಿಂದೆ ಮುಂದೆ ನೋಡದೆ ಖರ್ಚಿಗೆ ಬೇಕಾದ ಹಣವನ್ನು ಪಾವತಿಸಿ ವೈದ್ಯರಲ್ಲಿ ದೈನ್ಯವಾಗಿ ಮಗುವಿನ ಪ್ರಾಣವನ್ನು ಉಳಿಸಿಕೊಡುವಂತೆ ಬೇಡಿಕೊಂಡಳು..ಪಕ್ಕದಲ್ಲಿದ್ದ ಹುಡುಗನ ಅಕ್ಕ ದಿಶಾ ಹೆದರಿ ಅತ್ತೂ ಅತ್ತೂ  ಇಳಿದುಹೋಗಿದ್ದಳು.ಅಪ್ಪ ಅಮ್ಮ ಆತಂಕದಿಂದ ಆಸ್ಪತ್ರೆಗೆ ದೌಡಾಯಿಸಿದರು.ಬಂದವರೇ ಮಗಳಲ್ಲಿ ಮಗನ ಬಗ್ಗೆ ಕೇಳತೊಡಗಿದರು.. ಅವಳು ಏನು ಹೇಳಲಾಗದೆ ಕಣ್ಣೀರುಸುರಿಸಿದಳು.ಪಕ್ಕದಲ್ಲಿದ್ದ ಸರಳಾಳ ಕಡೆಗೆ ಕೈತೋರಿಸಿ ಈ ಆಂಟಿಯೇ ತಮ್ಮನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದು.. ಎಂದು ಗದ್ಗದಿತಳಾದಳು..ಸರಳಾಳ ಬಳಿ ಬಂದ ಮಗುವಿನ ತಾಯಿ ಅವಳ ಕೈಯನ್ನು ಹಿಡಿದು ಉಕ್ಕಿಬರುತ್ತಿರುವ ಕಣ್ಣೀರು ಒರೆಸಿ ಮಗನನ್ನು ವಿಚಾರಿಸಿಕೊಂಡಳು... ವೈದ್ಯರು ಚಿಕಿತ್ಸೆ ಕೊಡುತ್ತಿದ್ದಾರೆ..ಆ ದೇವರ ಮೇಲೆ ಭರವಸೆ ಇಡೋಣ ಎಂದಷ್ಟೇ ಚುಟುಕಾಗಿ ಉತ್ತರಿಸಿ ಅವಳನ್ನು ಸಂತೈಸಿದಳು ಸರಳಾ...

          ಏಳು ಗಂಟೆಯಾದರೂ ಸೊಸೆ ಸರಳಾ ಬಾರದ್ದನ್ನು ಕಂಡು ಅತ್ತೆ ಚೆನ್ನಮ್ಮ ಮಗನಿಗೆ ಕರೆಮಾಡಿ ವಿಷಯ ತಿಳಿಸಿದರು.ದಿನೇಶ್ ಕೂಡಲೇ ಮಡದಿಗೆ ಕರೆಮಾಡಿದ.. ಆಸ್ಪತ್ರೆ ಯಲ್ಲಿರುವ ಸುದ್ದಿ ತಿಳಿದು "ನೀನು ಅಲ್ಲೇ ಇರು..ನಾನೇ ಬರುತ್ತೇನೆ.. "ಎಂದು ಹೇಳಿದನು.. ಸ್ವಲ್ಪ ಹೊತ್ತಿನಲ್ಲಿ ಬಂದ ದಿನೇಶ್ ಗೆ ಸರಳಾಳ ರಕ್ತಸಿಕ್ತ ಬಟ್ಟೆಯನ್ನು ಕಂಡು ಕರುಳುಹಿಂಡಿದಂತಾಯಿತು... ಮಗು  ದಿವಿನ್ ಅಪಾಯದಿಂದ ಪಾರಾಗಿ ಬರಲಿ ಎಂಬುದೇ ಅವನ ಆಶಯವಾಗಿತ್ತು..ದಿವಿನ್ ನ ತಂದೆ  ದಿನಕರನಲ್ಲಿ "ಏನಾದರೂ ಸಹಾಯ ಬೇಕಿದ್ದರೆ ಹೇಳಿ" ಎಂದು ಹೇಳಿ ಮಡದಿಯನ್ನು ಕರೆದುಕೊಂಡು ಹೊರಟನು..ಸರಳಾಗೆ ದಿವಿನ್ ನ ತಾಯಿ ವಸುಧಾಳನ್ನು ಬಿಟ್ಟುಬರುವಾಗ ತನ್ನ ಬಂಧುವನ್ನು ಬಿಟ್ಟುಹೋಗುತ್ತಿದ್ದೇನೋ ಎಂಬ ಭಾವ.

            ಮನೆಗೆ ಬಂದ ಸರಳಾಳಿಗೆ ಕುಳಿತರೂ ನಿಂತರೂ ದಿವಿನ್ ನ ನೆನಪೇ.ಆಘಾತದಿಂದ ಹೊರಬರಲು ಕಷ್ಟವಾಯಿತು.ಉದ್ಯೋಗಕ್ಕೆ ಹೋಗಲಾರದೆ ಚಡಪಡಿಸಿದಳು.ದಿನಕ್ಕೊಮ್ಮೆ ಆಸ್ಪತ್ರೆಗೆ ತೆರಳಿ ದಿವಿನ್ ನ ಆರೋಗ್ಯ ವಿಚಾರಿಸಿ ಮನೆಗೆ ಮರಳಿ ಮಂಕಾಗಿಬಿಡುತ್ತಿದ್ದಳು.ದಿವಿನ್ ನ ತಂದೆ ತಾಯಿಗೆ ಮಗನ ಚಿಕಿತ್ಸೆಗೆ ಆರ್ಥಿಕ ಸಹಾಯವನ್ನು ಮಾಡಿದಳು.ಇದನ್ನು ತಿಳಿದ ಅತ್ತೆ ಚೆನ್ನಮ್ಮ ..." ಗುರುತು ಪರಿಚಯವಿಲ್ಲದ ಯಾರಿಗೋ ಏಕೆ ಸಾವಿರಗಟ್ಟಲೆ ದುಡ್ಡು ಕೊಡುತ್ತಿರುವೆ ...ಅದನ್ನೇ ಉಳಿತಾಯ ಮಾಡಿದರೆ ಮುಂದೆ ಮಾಳಿಗೆ ಮನೆ ಕಟ್ಟಲು ಅನುಕೂಲ..."
ಅತ್ತೆ.."ನಮಗೆ ಮಕ್ಕಳಿಲ್ಲ..ಇದೇ ರೀತಿ ಅಪಘಾತ ನಮ್ಮ ಕರುಳಕುಡಿಯನ್ನು ಬಲಿತೆಗೆದುಕೊಂಡಿದೆ .ನಂತರ ಲಕ್ಷಗಟ್ಟಲೆ ಹಣ ವೈದ್ಯರು,ಜ್ಯೋತಿಷ್ಯರು, ವೈದಿಕರು,ಹೋಮಹವನ ಎಂದು ಸುರಿದಾಯಿತು..ಆದರೂ ಫಲ ಸಿಕ್ಕಿಲ್ಲ..ಇನ್ನೂ ಹೊಸವೈದ್ಯರನ್ನು ಸಂಪರ್ಕಿಸುವ ಪ್ರಯತ್ನ ನಿಂತಿಲ್ಲ..ಇಲ್ಲದ ಮಗುವಿಗಾಗಿ ಹಂಬಲಿಸುವ ಬದಲು ಭೂಮಿಮೇಲಿರುವ ಮಗುವನ್ನು ಉಳಿಸುಕೊಳ್ಳಲು ಆ ಪೋಷಕರಿಗೆ ನೆರವಾದರೆ ತಪ್ಪೇನು..."ಎಂದು ಕೇಳಿದಳು..ಸೊಸೆಯ ಮಾತಿಗೆ ಮರುಮಾತನಾಡದ ಚೆನ್ನಮ್ಮ..."ನಿನಗೆ ಹೇಗೆ ಬೇಕೋ ಹಾಗೆ.. ನನ್ನಿಂದ ಅಭ್ಯಂತರವಿಲ್ಲ...ನನಗನಿಸಿದ್ದು ಹೇಳಿದ್ದೇನೆ.. ನಿರ್ಧಾರ ನಿನಗೆ ಬಿಟ್ಟದ್ದು.."ಎಂದರು..


           ಸರಳಾ ಆಫೀಸಿಗೆ ಹೋಗುವುದು ನಿಲ್ಲಿಸಿದಳು.ದಿವಿನ್ ನನ್ನು ನೆನೆದು ಮಾನಸಿಕವಾಗಿ ಕುಗ್ಗಿದಳು.ದಿನೇಶ್ .."ಯಾಕೆ ಸರಳಾ..ಅಷ್ಟು ಹಚ್ಚಿಕೊಳ್ಳುತ್ತೀ... ಇದರಿಂದ ನಿನ್ನ ಆರೋಗ್ಯ ಹಾಳಾಗುತ್ತದೆ.. ಹೊತ್ತು ಹೊತ್ತಿಗೆ ಊಟ ಮಾಡಿ, ಆಫೀಸಿಗೆ ಹೋಗುತ್ತಾ ನಿತ್ಯದ ಕೆಲಸಗಳಲ್ಲಿ ತೊಡಗು.ಆಗ ಮನಸು ಹಗುರಾಗುವುದು.."

           "ಅಯ್ಯೋ.. ಏನು ಹೇಳ್ತೀರಿ.. ನಾನು ಚಿಂತೆ ಮಾಡ್ತಿಲ್ಲ....ಖುಷಿಯಾಗಿದ್ದೇನೆ .."ಎಂದು ನಕ್ಕರೂ ಅದರ ಹಿಂದೆ ನೋವಿನ ಛಾಯೆಯಿರುವುದು ದಿನೇಶನ ಗಮನಕ್ಕೆ ಬರದಿರುವುದೇ... ಮಡದಿಯನ್ನು ಅರ್ಥಮಾಡಿಕೊಂಡ ಪತಿ ದಿನೇಶ್..ಸರಳಾಳ ಮಗುವಿನ ಪ್ರೇಮವನ್ನು ಕಂಡ ದಿನೇಶ್ ತನ್ನ ಸಹೋದ್ಯೋಗಿಗಳಲ್ಲಿ ಅವಳ ಸ್ಥಿತಿಯನ್ನು ಹೇಳಿ ಮಗುವನ್ನು ದತ್ತು ತೆಗೆದುಕೊಂಡರೆ ಹೇಗೆ ಎಂದು ಚರ್ಚಿಸಿದನು.ಕೆಲವರು ಅದೇ ಒಳ್ಳೆಯದು ಎಂದರೆ ಇನ್ನು ಕೆಲವರು ದತ್ತು ಪ್ರಕ್ರಿಯೆಯ ಋಣಾತ್ಮಕ ಅಂಶಗಳನ್ನು ಎತ್ತಿಹೇಳಿದ್ದರು.. ಅಂತೂ ದಿನೇಶ ಗೊಂದಲದ ಗೂಡಾದ.


              ಇಲ್ಲ..ನನ್ನ ಸರಳಾ ಹೀಗಾಗಲು ಬಿಡಬಾರದು.. ಅವಳನ್ನು ಇಂತಹ ಸಂದರ್ಭದಲ್ಲಿ ಪ್ರೀತಿ ಕಾಳಜಿಯಿಂದ ನೋಡಿಕೊಳ್ಳಬೇಕು.. ನಾನು ಕೂಡ ಇತ್ತೀಚೆಗೆ ಆಫೀಸ್ ಕೆಲಸದಲ್ಲಿ ಒತ್ತಡದಲ್ಲಿ ಸಿಲುಕಿರುವುದರಿಂದ ಅವಳ ಕಡೆಗೆ ಗಮನ ಕೊಡುವುದೂ ಕಡಿಮೆಯಾಗಿದೆ..ಪಾಪ..!! ಅವಳಾದರೂ ನೋವನ್ನು ಇನ್ನಾರಬಳಿ ಹಂಚಿಕೊಳ್ಳುವುದು...ನಾನೇ ಈಗ ಅವಳಿಗೆ ಪುಟ್ಟ ಮಗು..ಅವಳೇ ನನಗೆ ಮಗಳು, ತಾಯಿ, ಪ್ರೇಯಸಿ ಎಲ್ಲವೂ ...ಯಸ್... ಅವಳನ್ನು ಖುಷಿಪಡಿಸಲೇ ಬೇಕು... ಅವಳು ನಾನು ಇಬ್ಬರೇ ಸುಂದರ ಪ್ರಕೃತಿಯ ಮಡಿಲಲ್ಲಿ ಮತ್ತೆ ನಲಿದಾಡಬೇಕು...ಯಸ್ ಶುವರ್..ಈಗಲೇ ನಿರ್ಧಾರ ಮಾಡಿಯಾಯ್ತು..ಎಂದುಕೊಂಡವನೇ ಆಫೀಸಿಗೆ ಒಂದು ವಾರ ರಜೆ ಹಾಕಿ ಮನೆಗೆ ತೆರಳಿದ..


           ಮೊದಲೆಲ್ಲ ನಗುನಗುತ್ತಾ ಸ್ವಾಗತಿಸುತ್ತಿದ್ದ ಸರಳಾ ಈಗ ಪತಿ ಬಂದದ್ದು ತಿಳಿದರೂ ಹೊರಗೆ ಬರುವುದಿಲ್ಲ..ಅವನೇ ನಗುನಗುತ್ತಾ ಒಳಬಂದ.ಚೆನ್ನಮ್ಮ ಮಗನ ಮುಖದಲ್ಲಿನ ಮಂದಹಾಸವನ್ನು ಗಮನಿಸಿದನು.ಸೀದಾ ಒಳಗೆ ತೆರಳಿ ರೂಮಿನಲ್ಲಿದ್ದ ಸರಳಾಳನ್ನು ತನ್ನ ತೋಳಲ್ಲಿ ಬಳಸಿದ.. "ಏನು ಈಗ.."
"ನಿನಗೆ ಸರ್ಪ್ರೈಸ್ ಕೊಡೋಣ ಅಂತ"
"ಏನಿರುತ್ತೆ ಅಂತಾದ್ದು.. ಪಾರ್ಟಿಗೆ ಹೋಗೋಣ ಅಂತಾನೋ...ಹೋಟೇಲಿಗೆ ಹೋಗೋಣ ಅಂತಾನೋ ಹೇಳುವುದು ಬಿಟ್ಟು..."
"ಈಗಲೇ ಡ್ರೆಸ್ ಪ್ಯಾಕ್ ಮಾಡಿ ಹೊರಡು... ಒಂದು ವಾರ ಪ್ರವಾಸ ಹೋಗಿ ಬರೋಣ.."
"ಹೌದಾ..ದಿನೀ... ಏನು... ಸುಮ್ನೆ ತಮಾಷೆ ಮಾಡ್ತಿಲ್ಲ ತಾನೇ...."
"ಇಲ್ಲ.. ಮಹಾತಾಯಿ..ನೋಡು.. ಬುಕ್ ಮಾಡಿದೀನಿ ಎರಡು ಸೀಟು.. "ಎನ್ನುತ್ತಾ ಮೊಬೈಲ್ ತೋರಿಸಿದ..

           ಖುಷಿ ಖುಷಿಯಿಂದ ಹೊರಟರು ಇಬ್ಬರೂ..ಚೆನ್ನಮ್ಮ ಹೋಗಿಬನ್ನಿ ಮಕ್ಕಳಾ... ಎಂದು ಹರಸಿ ಕಳುಹಿಸಿದಳು..ಸರಳಾ ಹೀಗಾದರೂ ಖುಷಿಯಾಗಿದ್ದರೆ ಸಾಕು... ಇತ್ತೀಚೆಗೆ ತೀರಾ ಮಗುವಿನ ಬಗ್ಗೆ ಚಿಂತೆ ಮಾಡುತ್ತಿದ್ದಾಳೆ..ಎಂದು ಮನದಲ್ಲೇ ಅಂದುಕೊಳ್ಳುತ್ತಾ ಮಗಸೊಸೆಯ ಅನುರೂಪ ಜೋಡಿಯನ್ನು ಕಂಡು ಒಂದು ಮಗು ಇವರ ಮಡಿಲಿನಲ್ಲಿ ಅರಳಿದರೆ ಎಷ್ಟು ಚಂದ...!! ಆ ದೇವರು ಯಾವಾಗ ಕರುಣೆ ತೋರುತ್ತಾನೋ...ಎಂದುಕೊಂಡರು..


          ಆಸ್ಪತ್ರೆಯಲ್ಲಿ ದಿವಿನ್ ಗೆ ಚಿಕಿತ್ಸೆ ನಡೆಯುತ್ತಿತ್ತು.ದಿನಕರ ವಸುಧಾ ಆರ್ಥಿಕವಾಗಿ ಮಾನಸಿಕವಾಗಿ ಕುಸಿದುಹೋದರು.ವೈದ್ಯರೂ ತಮ್ಮಾಂದಾದಷ್ಟು ಕಡಿಮೆ ಖರ್ಚಿನಲ್ಲಿ ಆಪರೇಶನ್ ಗಳನ್ನು ಮಾಡಿದರೂ ಮಗು ಚೇತರಿಸಿಕೊಂಡಿರಲಿಲ್ಲ ..ವಸುಧಾಗಂತೂ ಸಾಂತ್ವನ ಹೇಳುವವರು ಯಾರೂ ಇರಲಿಲ್ಲ.
ಪ್ರೀತಿಸಿ ದಿನಕರನನ್ನು ಮದುವೆಯಾದವಳು.ಅಲ್ಲಿಂದ ತವರ ಬಾಂಧವ್ಯ ಕಡಿದೇ ಹೋಗಿತ್ತು.ದಿನವೂ ಆಸ್ಪತ್ರೆಗೆ ಬರುತ್ತಿದ್ದ ಸರಳಾ ಅವಳಿಗೆ ಅಕ್ಕನಂತೆ ಕಂಡಿದ್ದಳು.ಸರಳಾಳಿಗೂ ಹಾಗೇನೇ ..ತಂದೆ ಬಾಲ್ಯದಲ್ಲೇ ಕಳೆದುಕೊಂಡಿದ್ದು ಅಮ್ಮ ತವರ ಮನೆಯಲ್ಲಿ ಆಶ್ರಯ ಪಡೆದಿದ್ದಳು.ಸರಳಾಳ ಮದುವೆಗೂ ಮುನ್ನವೇ ಅಸುನೀಗಿದ್ದಳು..ಮದುವೆಯಾದ ನಂತರ ಸರಳಾಗೆ ಅತ್ತೆ,ಗಂಡ,ಸಹೋದ್ಯೋಗಿಗಳೇ ಬಂಧುಗಳು..ಅಪರೂಪಕ್ಕೊಮ್ಮೆ ಅಜ್ಜಿ ಮನೆಗೆ ಹೋದರೂ ಅಲ್ಲಿ ಪ್ರೀತಿಮಾಡಿಕೊಳ್ಳುವವರು ಯಾರೂ ಇರಲಿಲ್ಲ.. ಹಾಗಾಗಿ ವಸುಧಾ ಸರಳಾಳ ಮೈತ್ರಿ  ಗಾಢವಾಗಿ ಬೆಸೆಯಿತು..ಪ್ರವಾಸದಲ್ಲಿದ್ದರೂ ಸರಳಾ ದಿನಕ್ಕೊಮ್ಮೆ ಕರೆ ಮಾಡಿ ವಿಚಾರಿಸುತ್ತಿದ್ದಳು..

          ಸರಳಾ ದಿನೇಶ್ ಹತ್ತು ವರ್ಷ ಹಿಂದಕ್ಕೆ ಮರಳಿದರು.ಹಾಡುಹಳೆಯದಾದರೇನು ಭಾವ ನವನವೀನ ಎನ್ನುತ್ತಾ ದಿನೇಶ್ ಸರಳಾಳನ್ನು ತೋಳ್ತೆಕ್ಕೆಯಲ್ಲಿ ಬಂಧಿಸಿದನು.ಸರಳಾಳ ಮಡಿಲಲ್ಲಿ ತಲೆಯಿಟ್ಟು ಮಲಗುವ ಮಗುವಾದನು.ಇಬ್ಬರ ಬಾಂಧವ್ಯಕ್ಕೆ ತಡೆಗೋಡೆಯಿರದೆ ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸಿದರು..ಸುಂದರ ಸ್ಥಳಗಳನ್ನು ಕಣ್ತುಂಬಿಸಿಕೊಳ್ಳುತ್ತಾ ದಾಂಪತ್ಯದ ಸರಸಮಯ ಕ್ಷಣಗಳನ್ನು ಅನುಭವಿಸಿದರು.ಒಂದು ವಾರ ಸರಿದದ್ದೇ ತಿಳಿಯಲಿಲ್ಲ.


           ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದಿವಿನ್ ನ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿಲ್ಲ. ವೈದ್ಯರು ಆಸ್ಪತ್ರೆಯಿಂದ ಬಿಡುಗಡೆ ಮಾಡಬಹುದು ಎಂದು ತಿಳಿಸಿದರು.ಸಾಲಮಾಡಿ ಹಣಹೊಂದಿಸಿ ಆಸ್ಪತ್ರೆ ಶುಲ್ಕ ಪಾವತಿಸಿ ದಿವಿನ್ ನನ್ನು ಮನೆಗೆ ಕರೆತರಲಾಯಿತು.ವಸುಧಾ ಉದ್ಯೋಗ ಬಿಟ್ಟರೆ ಕಷ್ಟ.ಉದ್ಯೋಗಕ್ಕೆ ತೆರಳಿದರೆ ಮಗನ ಆರೈಕೆ ಮಾಡುವವರಿಲ್ಲ.ಅಂತೂ ಗಟ್ಟಿ ಮನಸ್ಸು ಮಾಡಿ ಉದ್ಯೋಗವನ್ನು ತೊರೆದು ಮಗನ ಸೇವೆಗೆ ನಿಂತಳು. ಯಾರಲ್ಲೋ ಕಲಿತುಕೊಂಡು ಆಕ್ಯುಪ್ರೆಷರ್, ಮುದ್ರೆಗಳನ್ನು ಮಗನಮೇಲೆ ಪ್ರಯೋಗ ಮಾಡಿದಳು.ಏನು ಮಾಡಿದರೂ ಫಲ ಮಾತ್ರ ಶೂನ್ಯ.


         ವೈದ್ಯರು ದಿವಿನ್ ನ ಮೇಲೆ ಭರವಸೆ ಕಳೆದುಕೊಂಡದ್ದನ್ನು ತಿಳಿದ ಸರಳಾ ಬಹಳ ಕುಗ್ಗಿದಳು.ನೋವಿನಿಂದ ಆಹಾರ ಸೇರುತ್ತಿರಲಿಲ್ಲ.ಪ್ರವಾಸದಿಂದ ಉಲ್ಲಾಸವಾದ ಮನಸ್ಸು ಮುದುಡಲಾರಂಭಿಸುವ ಮುನ್ನ ಮಡದಿಯನ್ನು ಉದ್ಯೋಗಕ್ಕೆ ತೆರಳುವಂತೆ ಮಾಡಬೇಕು.ನಾಲ್ಕುಜನರ ಒಡನಾಟ ಖಿನ್ನತೆಯನ್ನು ಕಡಿಮೆ ಮಾಡುತ್ತದೆ ಎಂದು ದಿನೇಶ್ ನ ಲೆಕ್ಕಾಚಾರ."ನಾಳೆ ಆಫೀಸಿಗೆ ಜೊತೆಗೆ ಹೋಗೋಣ.ಬೆಳಗ್ಗೆ ಬೇಗನೆ ತಯಾರಾಗು "ಎಂದು ದಿನೇಶ್ ರಾತ್ರಿಯೇ ಹೇಳಿದ್ದ.ಬೆಳಗ್ಗೆ ಬೇಗನೆದ್ದ ಸರಳಾ ಒಂದೇ ಸಮನೆ ವಾಂತಿ ಮಾಡಲು ಆರಂಭಿಸಿದ್ದಳು. ಆಯಾಸಗೊಂಡಳು . ಚಿಕಿತ್ಸೆಗೆ ಕರೆದುಕೊಂಡು ಹೋದ ದಿನೇಶನಿಗೊಂದು ಅಚ್ಚರಿ ಕಾದಿತ್ತು.. ವೈದ್ಯರು ಪರೀಕ್ಷಿಸಿ ಬಂದು "..ಭಯಪಡಬೇಕಾಗಿಲ್ಲ.. ನೀವು ತಂದೆಯಾಗುತ್ತಿದ್ದೀರಾ..." ಎಂದಾಗ ದಿನೇಶ ಸರಳಾರ ಮುಖ ಸಂತಸದಿಂದ ಅರಳಿತ್ತು.. ವೈದ್ಯರು ವಿಶ್ರಾಂತಿ ಪಡೆಯಲು ಸೂಚಿಸಿ ಪೌಷ್ಟಿಕಾಂಶಗಳ ಮಾತ್ರೆಗಳನ್ನು ಬರೆದುಕೊಟ್ಟರು.ಸುದ್ದಿ ತಿಳಿದ ಚೆನ್ನಮ್ಮ ಸೊಸೆಯನ್ನು ಮಹಾರಾಣಿಯಂತೆ ನೋಡಿಕೊಳ್ಳಬೇಕು..ಮುದ್ದಾದ ಮಗು ಬಾಯ್ತುಂಬಾ ಅಜ್ಜೀ, ಅಮ್ಮಾ, ಅಪ್ಪಾ.. ಅನ್ನುತ್ತಾ ಮನೆತುಂಬಾ ಓಡಾಡಬೇಕಾದರೆ ಈಗ ನನ್ನ ಆರೈಕೆ, ಕಾಳಜಿ ಸೊಸೆಗೆ ಅಗತ್ಯ... ಎಂದುಕೊಂಡು ಸರಳಾಳನ್ನು ಜೋಪಾನವಾಗಿ ನೋಡಿಕೊಂಡರು..


           ಸಿಹಿಸುದ್ದಿ ತಿಳಿದ ವಸುಧಾ ದಿನವೂ ತಪ್ಪದೇ ಸರಳಾಗೆ ಕರೆಮಾಡುವುದು..ಸಲಹೆ ನೀಡುವುದು ...ಸರಳಾ ದಿವಿನ್ ಆರೋಗ್ಯ ವಿಚಾರಿಸುವುದು ದಿನಚರಿಯಾಯಿತು.. ವಸುಧಾ ಸರಳಾ ಅಕ್ಕತಂಗಿಯರಂತೆ ಹತ್ತಿರವಾದರು..

            ಒಂದು ದಿನ ಮಲಗಿದ್ದ ವಸುಧಾಳಿಗೆ ರಾತ್ರಿ ಹನ್ನೆರಡು ಗಂಟೆಯ ಹೊತ್ತಿಗೆ ದಿವಿನ್...."ಅಮ್ಮಾ..... ಅಮ್ಮಾ..."ಎಂದು ಕರೆದಂತಾಯಿತು... ಪಕ್ಕನೆ ಎಚ್ಚರವಾಗಿ ಸುತ್ತಲೂ ನೋಡಿದಳು...ದಿವಿನ್ ಮಾತನಾಡಲು ಹೇಗೆ ಸಾಧ್ಯ.. ಎದ್ದು ಮಂಚದಲ್ಲಿ ಮಲಗಿದ್ದ ದಿವಿನ್ ನನ್ನು ನೋಡಿದಳು.ಎಂದಿನಂತೆಯೇ ಈ ಜಗದ ಅರಿವಿಲ್ಲದೆ ಮಲಗಿದ್ದ..." ನನಗೆ ಕನಸು..." ಎಂದುಕೊಂಡು ಹೊದ್ದು ಮಲಗಿದಳು.ಮುಂಜಾನೆಯ ಹೊತ್ತು ..."ಅಮ್ಮಾ.. ಅಮ್ಮಾ... ನನ್ನನ್ನು ಎತ್ತಿಕೋ..."ಎಂದು ಅಳುತ್ತಾ ಎರಡು ಕೈಗಳನ್ನು ಮುಂದೆ ಹಿಡಿದು ನಿಂತಿದ್ದ ಪೋರ ದಿವಿನ್.. ಒಮ್ಮೆಲೆ ಗಾಬರಿಯಾದಳು...ರೀ..ರೀ... ಎಂದು ದಿನಕರನನ್ನು ಎಬ್ಬಿಸಿದಳು.ಮಗನತ್ತ ದೃಷ್ಟಿ ಹರಿಸಿದರು..ಮೂಗಿನತ್ತ ಕೈಹಿಡಿದರು.ಆಗಲೇ ಬಾರದ ಲೋಕಕ್ಕೆ ತೆರಳಿದ್ದ ದಿವಿನ್...ವಸುಧಾ ಕನಸನ್ನು ನೆನೆದು ...ಮಗನ ಅಗಲುವಿಕೆಯಿಂದ ದಿಗ್ಭ್ರಾಂತಳಾದಳು.


             ಮುಂದಿನ ಸಂಸ್ಕಾರದ ತಯಾರಿ ನಡೆಯುತ್ತಿತ್ತು.ವಸುಧಾಳ ಫೋನ್ ಗೆ ಕರೆಬಂತು.ಸರಳಾಳ ಫೋನ್ ಕರೆಯಾದ್ದರಿಂದ ಮಗನನ್ನು ಬದುಕಿಸಲು ಶಕ್ತಿಮೀರಿ ಪ್ರಯತ್ನಪಟ್ಟವಳಿಗೆ ನಾನು ಸುದ್ದಿ ತಿಳಿಸಬೇಕು ಎಂದು ಕೆರೆಯನ್ನು ಸ್ವೀಕರಿಸಿದಳು ವಸುಧಾ ....ಅತ್ತ ಕಡೆಯಿಂದ ಸರಳಾಳ ಪತಿ ದಿನೇಶ್ ಮಾತನಾಡುತ್ತಿದ್ದರು..."ಸರಳಾ ಮುಂಜಾನೆ  ಗಂಡು ಮಗುವಿಗೆ ಜನ್ಮವಿತ್ತಿದ್ದಾಳೆ .. ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.."
ವಸುಧಾ ತನ್ನ ನೋವನ್ನು ಮರೆತು ..."ಆಗಲಿ..ಚೆನ್ನಾಗಿರಲಿ ನಿಮ್ಮ ಕುಟುಂಬ.."ಎನ್ನುತ್ತಾ ಕುಸಿದಳು..ಅತ್ತ ಕಡೆಯಿಂದ "ದಿವಿನ್ ನನ್ನು ವಿಚಾರಿಸಿಕೊಂಡಿದ್ದಾಳೆ ಸರಳಾ.."ಎಂಬ ಮಾತು ತೇಲಿ ಬಂತು.. ಒಂದು ಕ್ಷಣ ಸಾವರಿಸಿಕೊಂಡ ವಸುಧಾ ..."ಚೆನ್ನಾಗಿದ್ದಾನೆ..."ಎಂದು ಉತ್ತರಿಸಿ ಫೋನಿಟ್ಟಳು..

        ಹೌದು... ನಾನು ಹೇಳಿದ್ದು ಸತ್ಯ..ನನ್ನ ಮಗ ದಿವಿನ್ ಸರಳಾಳ ಹೊಟ್ಟೆಯಿಂದ ಜನ್ಮತಳೆದು ಭೂಮಿಗೆ ಬಂದಿದ್ದಾನೆ.. ಅಮ್ಮಾ.. ನನ್ನನ್ನು ಎತ್ತಿಕೋ... ಎಂದು ಮುಂಜಾನೆ ಕೂಗಿಕೊಂಡದ್ದು ಅವನೇ..ಅವನೇ...
ಎನ್ನುತ್ತಾ ನೆಲಕ್ಕುರುಳಿದ ಅಮ್ಮನನ್ನು  ಮಗಳು ದಿಶಾ ಸಂತೈಸುವ ದೃಶ್ಯ ಮನಕಲುತ್ತಿತ್ತು...


  ದಿನಗಳುರುಳಿದವು.. ವಸುಧಾ ಸರಳಾಳಿಗೆ ದಿವಿನ್ ನ  ಮರಣದ ವಾರ್ತೆಯನ್ನು ತಿಳಿಸಿದಳು.ಮಡಿಲಲ್ಲಾಡುವ ಮುದ್ದು ಮಗು ಸರಳಾಳ ನೋವನ್ನು ಮರೆಸಿತು..ಮಗುವೇ ಅವಳ ಪ್ರಪಂಚ ಈಗ.ಒಂದು ದಿನ ವಸುಧಾ ಮಗುವನ್ನು ನೋಡಲು ಆಗಮಿಸಿದಳು..ಸರಳಾಳ ಮಗು ವಸುಧಾಳ ಮಗ ದಿವಿನ್  ಮಗುವಾಗಿದ್ದಾಗ ಇದ್ದಂತೇ ಇತ್ತು.. ಎತ್ತಿ ಮುದ್ದಾಡಿ ಆನಂದಿಸಿದಳು.. ಅವಳು ಹೊರಡುತ್ತಿದ್ದಂತೆ ಜೋರಾಗಿ ಅತ್ತ ಸರಳಾಳ ಮಗ ಸಂಹಿತ್...

    ಸಂಹಿತ್ ಗೆ ಆರುವರ್ಷ ವಯಸ್ಸು.ಶಾಲೆಗೆ ಹೋಗಲಾರಂಭಿಸಿದ.ಸರಳಾ ಅವನನ್ನು ಶಾಲೆಗೆ ಕರೆದೊಯ್ಯುವುದು, ಮನೆಗೆ ಕರೆದುಕೊಂಡು ಬರುವುದು ಮಾಡುತ್ತಿದ್ದಳು.. ಒಂದು ದಿನ ಮನೆಗೆ ಮರಳುವಾಗ ವಸುಧಾ ಆಂಟಿಯ ಮನೆಗೆ ಹೋಗೋಣ ಎಂದು ಹಠ ಹಿಡಿದ..ಅವನ ಹಠಕ್ಕೆ ಮಣಿದು ಕರೆದುಕೊಂಡು ಹೋದಳು ಸರಳಾ... ವಸುಧಾ ತೀವ್ರ ಜ್ವರದಿಂದ ಬಳಲುತ್ತಿದ್ದಳು.. ತಾವೇ ಚಿಕಿತ್ಸೆ ಕೊಡಿಸೋಣ ಎಂದು ಸಂಹಿತ್.. ವೈದ್ಯರಲ್ಲಿ ಕರೆದೊಯ್ದು ಚಿಕಿತ್ಸೆ ಕೊಡಿಸಿ ವಾಪಾಸಾದರು..ದಿನಕರ,ವಸುಧಾ,ದಿಶಾಗೆ ಏನಾದರೂ ಹೆಚ್ಚು ಕಡಿಮೆ ಆದರೂ ಸಂಹಿತ್ ಗೆ ತಿಳಿಯುತ್ತಿತ್ತು..ಸರಳಾಗೆ ಹಾಗೂ ದಿನೇಶ್ ಗೆ ಇದು ಅಚ್ಚರಿಯ ವಿಷಯವಾಗಿತ್ತು... ದಿನಗಳೆದಂತೆ ಎರಡೂ ಮನೆಗೂ ಮಗನಂತಾದ ದಿವಿನ್...ಸರಳಾ ವಸುಧಾಳಲ್ಲಿ ಅಚ್ಚರಿಯನ್ನು ವ್ಯಕ್ತಡಿಸಿದಾಗ ವಸುಧಾ ದಿವಿನ್ ನ  ಮರಣದ ದಿನ ತನಗೆ ಬಿದ್ದಂತಹ  ಕನಸನ್ನು ಹೇಳಿಕೊಂಡಳು...

    ದಿವಿನ್ ನ ಆತ್ಮ ಸರಳಾಳ ಗರ್ಭದಲ್ಲಿ ಮರುಜನ್ಮತಳೆದು ವಸುಧಾ ಹಾಗೂ ಸರಳಾ ಇಬ್ಬರ ಕುಟುಂಬಕ್ಕೂ ಮಗನಾಗಿ ಸಂಹಿತ್ ಎಂಬ ಹೆಸರಿನಲ್ಲಿ ಕರ್ತವ್ಯ ಕಾಳಜಿಮೆರೆಯಿತು ...


✍️... ಅನಿತಾ ಜಿ.ಕೆ.ಭಟ್.
27-11-2019.



ಸ್ವಚ್ಛತಾ ಅಭಿಯಾನ



ಸ್ವಚ್ಛವಾಗಿಡಬೇಕು ಪರಿಸರವ
ಎಲ್ಲೆಂದರಲ್ಲಿ ಎಸೆಯದಿರಿ ಕಸವ
ಮಾಡಿ ಪ್ಲಾಸ್ಟಿಕ್ ಬಳಕೆ ಮಿತವ
ಪ್ರಕೃತಿಗೆ ಉಣಿಸದಿರಿ ವಿಷವ...

ತ್ಯಾಜ್ಯ ಸೇರದಿರಲಿ ಜಲಚರ ಉದರ
ಸೊಳ್ಳೆಕೇಂದ್ರ ಕೊಳಚೆ ನೀರು ಗಟಾರ
ಅಗತ್ಯವಾಗಿಬೇಕು ಶುದ್ಧ ಗಾಳಿ ನೀರು
ಬೆಳೆಸೋಣ ಸುತ್ತಮುತ್ತ ಹಚ್ಚಹಸಿರು...

ದಿನದಿನವು ಕ್ಷಣಕ್ಷಣವು ಸ್ವಚ್ಛತೆ
ಇದ್ದಾಗ ಭೂಮಿತಾಯಿಗು ಧನ್ಯತೆ
ಬಿಡು ಮನುಜ ನಿನ್ನ ಸ್ವಾರ್ಥತೆ
ಕಲುಷಿತವಾಗದಿರಲಿ ಭೂಮಾತೆ ....

ಮನೆಗೊಂದು ಗಿಡನೆಟ್ಟು
ಪ್ರತಿಕಸವ ಬುಟ್ಟಿಯಲಿಟ್ಟು
ಮಿತಬಳಕೆಯಿರಲಿ ಇಂಟರ್ನೆಟ್ಟು
ಮಹಡಿಮೇಲಣ ನೀರನಿಂಗಿಸಿಟ್ಟು...

ಸ್ವಚ್ಛತಾ ಅಭಿಯಾನದ ಕೆರೆಗೆ ಓಗೊಟ್ಟು
ಹಿಡಿಯಿರಿ ಕೈಯಲಿ ಪೊರಕೆಕಟ್ಟು
ಮತಭೇದ ಅಂತಸ್ತು ಎಲ್ಲ ಬದಿಗಿಟ್ಟು
ಬನ್ನಿ ಎಲ್ಲರೂ ಸ್ವಚ್ಛಭಾರತ ಸಂಕಲ್ಪತೊಟ್ಟು..

✍️... ಅನಿತಾ ಜಿ.ಕೆ.ಭಟ್.
27-11-2019.




Tuesday, 26 November 2019

ತುಂಬು ಸಂಸಾರ




ಬಾಂದಳದಿ ಚುಕ್ಕಿ ಚಿತ್ತಾರ
ಆಳುವ ಸೂರ್ಯ ಚಂದಿರ
ಮಾಸಕೊಮ್ಮೆ ಅಮಾವಾಸ್ಯೆ ತಿಮಿರ
ಚಂದವೋ ಚಂದ ತುಂಬು ಸಂಸಾರ||

ಲವಣಮಿಶ್ರಿತ ಶರಧಿ ಸಾಗರ
ಜಲಚರ ಮುತ್ತುಗಳ ಆಗರ
ಜೊಳ್ಳುಕಸ ಅಲೆಗಳಲಿ ಸೇರಿತೀರ
ಚಂದವೋ ಚಂದ ತುಂಬು ಸಂಸಾರ||

ಖಗಮೃಗ ಧರೆಯುಟ್ಟು ಹಸಿರ
ಜೀವದಾಯಿ ಸಕಲ ಚರಾಚರ
ಜೀವಸರಪಳಿ ಕೌತುಕದ ಆಹಾರ
ಚಂದವೋ ಚಂದ ತುಂಬು ಸಂಸಾರ||


✍️... ಅನಿತಾ ಜಿ.ಕೆ.ಭಟ್.
26_11_2019.

Sunday, 24 November 2019

ಹಸಿರ ಸಿರಿ

ಪರಿಮಳ ಸೂಸುವವಳು ಸುಗಂಧಿ
ಸುವರ್ಣಗಡ್ಡೆಯ ಹೂ ಬಲು ದುರ್ಗಂಧಿ
ಇವಳು ಗುಲಾಬಿವರ್ಣದ ರತ್ನಗಂಧಿ ...

                         🌹🌹

ಮನಸಾಗಲಿ ಹಗುರ
ಸ್ಫಟಿಕದಂತೆ ತಿಳಿನೀರ ಸರೋವರ
 ನುಡಿ ಚೆನ್ನ ಮೃದು ಮಧುರ 
ಸುಂದರ ಚಿತ್ರ ನನ್ನಂಗಳದ ಜರ್ಬೇರ
ಮಳೆಸಿಂಚನದಿ ಪುಟಿದೆದ್ದ ರಕ್ತಚಂದಿರ
                     🌹🌹🌹




ಯಾರೆಷ್ಟೇ ಉರಿ ಉರಿ ಅನ್ನಿ
ನನಗಿಲ್ಲ ಬಿಸಿಲ ಚಿಂತೆ....
ನಾನು ಸೊಬಗಿನ ಖನಿ
ನಗುತ ಅರಳಿ ನಿಂತೆ...
ನನಗೆ ಶುಭೋದಯವೆನ್ನಿ
ನಾ ಸೂಸುವ ಘಮದಂತೆ....

ತೆರಳದಿರಿ ಬೆನ್ನುಹಾಕಿ
ಪಕ್ಕದವಳು ಮುಖತಿರುವಿದಂತೆ....


✍️... ಅನಿತಾ ಜಿ.ಕೆ.ಭಟ್.
25-11-2019.

ಒಲವಿನಾ ಸುಮವೇ...


ಹೊನ್ನೀರ ಹನಿ ಹನಿ
ತೊಯ್ದು ತಂಪಾದ ಅವನಿ
ಹೂವಿಗೆ ಎಸಳು ಕಣ್ಮಣಿ
ಹೊತ್ತು ನಿಂತಿದೆ ಕೆಂಪು ಮಣಿ...

                       🌹🌹


ಮರೆಯಲಿ ನಿಂದವಳೆ
ಅರಳಿ ರವಿಯ ಕರೆದವಳೆ
ಪರಿಮಳ ಹರಡಿದವಳೆ
ಸುರುಳಿಯೆಂಬ ಚಿನಕುರಳಿ
ಸುಗಂಧಿಯೆಂಬ ಹೆಸರಿನವಳು
ಶುಭೋದಯ ಹೇಳಲು ಬಂದವಳೆ...

                  🌹🌹



ಅಂದದಲಿ ಸೆಳೆಯುವಳು ಸೇವಂತಿ
ಗುಲಾಬಿಯು ಹೂಗಳಲ್ಲೇ ಅಂದಗಾತಿ
ಮಲ್ಲಿಗೆಯೇ ...ಘಮ್ಮೆಂದು ಪಸರಿಸುತಿ
ಹೆಸರು ಹೇಳುವೆನು ಮಧುಮಾಲತಿ.....


                  🌹🌹



ನಗುವೊಂದು ಮಾಗುವ ಮುನ್ನ
ಮಗದೊಂದು ಅರಳಿರೆ ಚೆನ್ನ...
ಜಗದೊಳಗೆ ಹಲವು ಬಗೆ
ಮಗುವ ನಗೆ ಹೂವ ನಗೆ ಹಿತವೆನಗೆ...

ನನ್ನಂಗಳದ ನಗುವ ಜರ್ಬೇರ
ಕಣ್ಸೆಳೆವ ನೋಟ ಸುಂದರ....

                 🌹🌹


ಮೊದಲ ಮಳೆಯ ಸ್ಪರ್ಶ
ಹೂವು ಹಸಿರು ಹರ್ಷ...

ಕಣ್ಣಿಗೆ ಕಂಡ ನೋಟವು ಚೊಕ್ಕ
ಇಂದಿನ ಚಿತ್ರವು ಬಿಳಿಯ ಎಕ್ಕ...

ಕರೆಯುವರಂತೆ  ಇದನು ಶ್ವೇತಾರ್ಕ
ಶಿವನಿಗೆ ಅರ್ಪಿಸಿ ಸಿದ್ಧಿಸಲಿ ಸಕಲಕಾರ್ಯ...


✍️... ಅನಿತಾ ಜಿ.ಕೆ.ಭಟ್
25-11-2019.

ನನ್ನ ತೋಟದ ಸೊಬಗು



ಪನ್ನೀರ ಗುಲಾಬಿಗೆ
ಹೊನ್ನೀರ ಸ್ನಾನ
ಕಂಡಿತ್ತು ಮುತ್ತು
ನಾ ಸೆರೆಹಿಡಿದ ಹೊತ್ತು...

              🌹🌹



ಸುರಿಯುತಿರುವ ಮಳೆಗೆ
ನಾನೀಗ ಪೂರ್ತಿ ಒದ್ದೆ
ನನಗೆ ಖುಷಿಯು ಒಳಗೊಳಗೆ
ಕೊಯ್ಯಲು ಬಂದವರು ಚಂಡಿಮುದ್ದೆ...

ಗಿಡವು ಹಸಿರಾಗಿ ಮೈತುಂಬಿದೆ
ಎಳೆಬದನೆಕಾಯಿ ಹೊಳೆಯುತಿದೆ
ನಾಲಿಗೆಯು ಏಕೋ ಜೊಲ್ಲು ಸುರಿಸುತಿದೆ
ಪೋಡಿ,ಎಣ್ಣೆಗಾಯಿ ನೆನಪಾಗಿಬಿಟ್ಟಿದೆ...

                      🌹🌹



ಭಾರ ತಾಳಲಾಗದ ಹೂವೇ
ನಾನು ನಿನಗೆ ಹೆಗಲಾಗುವೇ...
ಕ್ಷಣಿಕದ ಚೆಲುವಿನ ಬಾಳಲಿ
ನನ್ನ ಅಳಿಲಸೇವೆ ಇರಲಿ...

ನಿನ್ನ ಚೆಲುವಿಕೆಗೆ ಸೋಲುವ ಜನ
ಆಗ ನೋಡುವರು ಒಮ್ಮೆ ನನ್ನ
ಹಸಿರಾಗಿಹ ನನಗೂ ಬಂತು ಬೆಲೆ
ಕ್ಷಣಿಕವಾಗಿ ಜನಮನಗೆದ್ದ ಎಲೆ...


                   🌹🌹




ಬೆನ್ನಿಗೆ ಬೆನ್ನು ಹಾಕಿ ನಿಂತವರೇ
ಅಹಂ ಏಕೆ ನಿಮ್ಮಿಬ್ಬರೊಳಗೆ ....

ಇಂದು ಅರಳುವ ಸಮಯ
ದಿನಗಳುರುಳುತ ಅಳಿವು ನಿಶ್ಚಯ....

ಹರಡಿದ ಪರಿಮಳದ ನೆನಪು ಶಾಶ್ವತ
ಅಂದವು ಕುಂದುವುದು  ವಿಧಿಲಿಖಿತ....

                  🌹🌹


ನಾನೇ ಸುಂದರಿಯೆಂದು ಜಂಭದಲಿ ಬೀಗುವಳು ಕಿಸ್ಕಾರ...
ಪ್ರೀತಿಯಲಿ ಭಕ್ತಿಯಲಿ ದೇವಿಗೆ ಆಗುವಳು ಹಾರ...
ಹೂವಿನ ಅಬ್ಬರಕೆ ಗೆಲ್ಲಬಾಗುತಲಿ ತಾಳುವಳು ಭಾರ...

✍️ ಅನಿತಾ ಜಿ.ಕೆ.ಭಟ್.
25-11-2019.

ಮಗುವಿನ ಬಯಕೆ


       


ನನಗೀಗ ಆಡಲು ಹೋಗಬೇಕಮ್ಮ
ಕೈಕಾಲು ಮೈಯೆಲ್ಲ ಕೆಸರೆಂದು ಹೇಳಬೇಡಮ್ಮ..||

ಓದು ಬರಹವು
ಶಾಲಾ ದಿನಗಳಲಿ
ಮಣ್ಣಾಟ ನೀರಾಟ
ರಜೆಯ ಹರುಷದಲಿ...||

ಸೈಕಲ್ ಹತ್ತಿ
ಊರೆಲ್ಲ ಸುತ್ತಿ
ಬಿದ್ದವರ ಹಿಡಿದೆತ್ತಿ
ಆಡಬೇಕೆನಗೆ..ಏನಂತಿ..??

ಕಲ್ಲು ಮುಳ್ಳೆನದೆ
ಚೆಂಡನ್ನು ಎಸೆದು
ಸಿಗದಿರೆ ಹುಡುಕುವುದು
ಆಗ ನಾ ನಿನ್ನ ಕರೆಯುವುದು..||

ಪುಸ್ತಕದ ಪುಟಗಳೆಲ್ಲ
ರಾಕೆಟ್ ಆಗಿಹುದಲ್ಲ
ಅಮ್ಮಾ ನೀನೊಮ್ಮೆ ನೋಡಬಾರೆ
ನಮ್ಮೊಡನೆ ನೀನೂ ಆಡಬಾರೆ...||

ಗೇರು ಮರದ ಮೇಲೇರಿ
ಮರಕೋತಿಯಾಡಿ
ಮಾವಿನ ಮರದಡಿ
ಕಲ್ಲೆಸೆವ ಪರಿ ನೋಡಿ..||

ಗುಬ್ಬಚ್ಚಿ ಗೂಡೊಂದು
ಆ ಮರದ ಮೇಲಿದೆ
ಅಷ್ಟುದ್ದ ಹಾವೊಂದು
ಈ ಬಿಲವ ಹೊಕ್ಕಿದೆ...||

ಮುದ್ದಾದ ಬಿಳಿ ಮೊಲವು
ನನ ಕಂಡು ಓಡಿದೆ
ಮುಂಗುಸಿಯು ಆಗಾಗ
ನಿಂದು ದುರುಗುಟ್ಟಿ ನೋಡಿದೆ.||

ತೆಂಗಿನ ಮರದಲ್ಲೊಂದು
ಪುಟಾಣಿ ಅಳಿಲಿದೆ
ಖುಷಿಯಿಂದ ಅತ್ತಿಂದಿತ್ತ
ಕುಣಿಯುತ್ತ ಸಾಗಿದೆ...||

ಮಂಗಗಳ ಸಂಸಾರ
ನನ್ನನಣಕಿಸಿದೆ
ಕಲ್ಲೆಸೆಯ ಹೋದರೆ
ಬೊಂಡ ನನ್ನತ್ತೆಸೆದಿದೆ ...||

ಇದನೆಲ್ಲ ನಾ ನೋಡಿ ಸಂಭ್ರಮಿಸಬೇಕು...
ಅಮ್ಮಾ..ನನ್ನೊಡನೆ ನೀನೂ ಮಗುವಾಗಬೇಕು...||

 🚴🚵🤾🤹🏎️🤸🤼🏍️🏌️🏂⛹️🏋️🏇⛷️


✍️... ಅನಿತಾ ಜಿ.ಕೆ.ಭಟ್.
25-11-2019.

ಚಿಣ್ಣರ ಆಟ


               


ಹಳ್ಳಿಯ ಸೊಗಡಲಿ
ಬೆಳೆದಿಹ ಚಿಣ್ಣರು
ಆಟಕೆ ಪರಿವೆ ಇಲ್ಲಿಲ್ಲ...||

ಮಳೆಯೋ ಬಿಸಿಲೋ
ಕೆರೆಯೋ ತೊರೆಯೋ
ಆಟದ ಕೂಟವು ನಿಲ್ಲಲ್ಲ...||

ಹಸುರಿನ ಮರೆಯಲಿ
ಕೆಸರಿನ ಓಕುಳಿ
ಸುರಿಯುವ ಮೂಗಿಗೂ ಭಯವಿಲ್ಲ...||

ಮೈಯಲಿ ಬೆವರು
ಅಂಗಿಗೆ ಕೆಸರು
ಆದರೆ ಬಯ್ಯೋರು ಯಾರಿಲ್ಲ...||

ಅಪ್ಪನು ಹೊಲದಿ
ಅಮ್ಮನು ಗೃಹದಿ
ಲಗಾಮು ಹಾಕುವರಾರಿಲ್ಲ...||

ನೆರೆಕರೆ ಚಿಣ್ಣರು ಜೊತೆಯಲಿ
ಸೇರಿ ಆಡಿದ ದಿನಗಳ
ಮರೆಯುವಿರೇನು ...?

ನೆನಪಿನ ಪುಟದಿ
ಬರೆದಿಹ ಭಾವವ
ಮೆಲುಕು ಹಾಕಲು ಸಿಹಿಜೇನು...||

ಆಗ:
       
 ಹಮ್ಮಿಲ್ಲ ಬಿಮ್ಮಿಲ್ಲ
   ಸಂತೋಷಕ್ಕೆ ಎಣೆಯಿಲ್ಲ...
  ಸಿಕ್ಕಿದ್ದೇ ಮೃಷ್ಟಾನ್ನ
   ಜೊತೆಯಲಿ ಉಂಡರೆ ಸವಿಯೆಲ್ಲ....       

ಈಗ:
         
ಕೆರೆಯಿಲ್ಲ ..ತೊರೆಯಲಿ ನೀರೇ ಇಲ್ಲ
ಆಟಕೆ ಆಟಿಕೆಗಳೇ ಸಾಲುತಿಲ್ಲ...
 ರುಚಿಯಡುಗೆಯೂ ಸೇರುತಿಲ್ಲ
 ಜಂಕ್ ಫುಡ್ ಉದರ ಸೇರಿದ್ದು ಲೆಕ್ಕವಿಲ್ಲ..                 

ಮಕ್ಕಳು ರಜೆಯಲಿ ಬೆಳೆಯಲಿ
ಪ್ರಕೃತಿಯ ಮಡಿಲಲಿ
ಮಗುವಿನ ಮನದಲಿ
ಸಂಭ್ರಮ ಮೂಡಲಿ....||
                   
                   🏹🏂🏌️⛹️🏋️

✍️... ಅನಿತಾ ಜಿ.ಕೆ.ಭಟ್.
25-11-2019.

ಪ್ರಕೃತಿಯ ಪಾಠ



ನೋಡಿ ಹೇಗಿದೆ ನಾನಿಂತ ಸ್ಟೈಲು
ಮುಖದಲ್ಲಿ ಇರಬೇಕು ಹೀಗೇನೆ ಸ್ಮೈಲು||

ಕೆರೆಯ ಬದಿಯಲಿ ನಿಂತಿರೋ ಪುಟ್ಟ ಪೋರಿ
ಹಸಿರ ಸಿರಿಯ ನಡುವೆ ತುಂಬಿದ ಝರಿ||

ತುಂಬಿ ಬಂದಿಹ ಸಲಿಲವೇ ಅಂದ
ನಸುನಗುತ ನಿಂದಿರುವ ನಾ ಅದಕಿಂತ ಚಂದ||

ಕಂಡಿರುವೆ ನೀರಲ್ಲಿ ಮೀನು ಕಪ್ಪೆ ಏಡಿ 🐟🦀
ಬಂದಿರುವೆ ತೋಟಕೆ ಅಪ್ಪನ ಜೊತೆಗೂಡಿ||

ಪುಟಾಣಿ ಕಪ್ಪೆ ನನಕಂಡು ಹಾರಿತು 🐸
ದೊಡ್ಡ ಕಪ್ಪೆ ಸಂಗೀತವ ಹಾಡಿತು 🐸

ಪುಟ್ಟ ಹಾವೊಂದು ಸರ್ರನೆ ಸಾಗಿತು 🐍
ಮರಿಮೀನು ಅತ್ತಿತ್ತ ಬಳುಕುತ್ತ ಸಾಗಿತು 🦈

ಅಲ್ಲೊಂದು ಜೇಡ ಬಲೆಯ ಹೆಣೆದಿತ್ತು 🕷️🕸️
ನೊಣವೊಂದು ಅದರೊಳಗೆ ಸಿಕ್ಕಿಬಿದ್ದಿತ್ತು 🐝

ಬಣ್ಣಬಣ್ಣದ ಚಿಟ್ಟೆ ನನ್ನ ಸೆಳೆದಿತ್ತು 🦋
ಇರುವೆಯು ಸರತಿಸಾಲಿನಲಿ ಸಾಗಿತ್ತು 🐜

ಅಡಿಕೆ ತೋಟದೊಳಗೆ ನಾ ಕಲಿತೆ ಪಾಠ
ಒಗ್ಗಟ್ಟಿನ ಜೀವನದಿ ಬಾಳು ರಸದೂಟ ||


✍️... ಅನಿತಾ ಜಿ.ಕೆ.ಭಟ್.
25-11-2019

ಶಾಲಾ ವಾರ್ಷಿಕೋತ್ಸವದ ಸುದಿನ



ಕಾತರ ನಯನದಿ ಸುಳಿಮಿಂಚು
ತುಸುನಗುವ ತುಟಿಯಂಚು
ಅರಿತಿದೆ ಕ್ಯಾಮರಾದ ಹೊಂಚು
ಸೆರೆಹಿಡಿದಿಹರು ಭಾವವ ಇಂಚಿಂಚು....

ವೇದಿಕೆಯಲಿ ಗೆಳೆಯ ಗೆಳತಿಯರ
ಸಂಗೀತ ನೃತ್ಯ ಗಾಯನ ಯಕ್ಷಗಾನ
ತರಳೆಯರ ಸರದಿಗೆ ಆತುರ
ಸೂರೆಗೊಳಿಸಬೇಕು ಜನಪದ ನರ್ತನ....

ಅಮ್ಮನಂತೆಯೇ ಸೀರೆಯುಟ್ಟು
ಅಪ್ಪನಂತೆಯೇ ಝರಿಪೇಟತೊಟ್ಟು
ಅಜ್ಜನಂತೆ ಮೈಗೆ ಕಂಬಳಿ ಇಳಿಬಿಟ್ಟು
ಹಣೆಯನಡುವೆ ಶೋಭಿಸುವ ಬೊಟ್ಟು....

ಅಜ್ಜಿತೊಡುತಿದ್ದ ಕಾಸಿನ ಸರ
ಜತನದಿ ಪೋಣಿಸಿದ ಮುತ್ತಿನಹಾರ
ವದನದಿ ಹೊಳೆವ ವಿಶ್ವಾಸದ ಘಮಲು
ಹರಿಸೆ ಗ್ರಾಮ್ಯ ಸೊಗಡಿನ ಹೊನಲು....

ಶಾಲಾ ವಾರ್ಷಿಕೋತ್ಸವದ ಸುದಿನ
ಬನ್ನಿರೆಲ್ಲರು ಆನಂದಿಸಿ ನಮ್ಮ ಪ್ರದರ್ಶನ
ನಮ್ಮ ನಾಡಿನ ಸಂಸ್ಕೃತಿಯ ಪರಿಚಯ
ಸರ್ವರಿಗೂ ಉಣಬಡಿಸುವ ಸದಾಶಯ...


✍️... ಅನಿತಾ ಜಿ.ಕೆ.ಭಟ್.
25-11-2019.

ಒಡಹುಟ್ಟು ಮುದ್ದು ಜೋಡಿ




ಜೊತೆಯಾಗಿ ನಡೆದು
ಹಿತವಾಗಿ ನುಡಿದು
ನಡೆದಿಹರು ಉಟ್ಟುಮಡಿ
 ಒಡಹುಟ್ಟು ಮುದ್ದುಜೋಡಿ...

ಮೆಲ್ಲ ಮೆಲ್ಲನೆ ಇಡುತಹೆಜ್ಜೆ
ಮೌನವಿರದು ಸವಿಮಾತು
ಬಿಳಿತುಂಡು ಬಟ್ಟೆಯ ಲಜ್ಜೆ
ಕಾಲಲ್ಲಿ ಘಲ್ಲೆನುವ ಗೆಜ್ಜೆ...

ಮನೆಯ ಪಕ್ಕದಿ ಹರಿವ ಹಳ್ಳ
 ನಿತ್ಯ ಈಜು ಸ್ನಾನದ ಕೊಳ್ಳ
ಅಮ್ಮ ಬರುವಳು ಬಟ್ಟೆಯೊಗೆದು
ಅಕ್ಕರೆಯಲಿ ಸಾಗಿಹರು ಕೈಯಹಿಡಿದು...

ಒಂದು ಕೈಯಲಿ ಒದ್ದೆ ಅಂಗಿ
ಇನ್ನೊಂದು ಆಸರೆ ಮುದ್ದು ತಂಗಿ
ಆಗಸದಿ ರವಿ ಮೋಡದ ಮರೆ
ನಿಂತು ಸೋಜಿಗದಿ ವೀಕ್ಷಿಸುತಿರೆ...

ಕಲ್ಲು ಮುಳ್ಳಿನ ದಾರಿಯಾದರೇನು
ಗೆಲ್ಲುವೆವು ಬಾಂಧವ್ಯವ ಭದ್ರಗೊಳಿಸಿ
ಬೆಲ್ಲದ ಸವಿಸಂಗ ನಮ್ಮೀರ್ವರೊಳಗೆ
ಒಲ್ಲದು ಮುನಿಸು ಬರಲು ನಮ್ಮಬಳಿಗೆ...

ಹಳ್ಳಿಗಾಡಿನ ಹಸಿರ ಸೊಬಗು
ಬಳ್ಳಿಯಾಗಿದೆ ಕಾಳಜಿಯ ಸೆರಗು
ಕನಸು ಕಂಗಳು ಚೆಲ್ಲುತಿಹ ಬೆರಗು
ಎಂದೆಂದು ಬಾಳಲಿ ತುಂಬಿರಲಿ ಮೆರುಗು...

                         👫🤼

✍️... ಅನಿತಾ ಜಿ.ಕೆ.ಭಟ್.
25-11-2019.




ಮಗು ಶಾಲೆಗೆ ಹೊರಟಾಗ




ಅಮ್ಮಾ ನಾನು ಶಾಲೆಗೆ ಹೋಗುವೆ
ಬಣ್ಣದ ಪುಸ್ತಕ ಬ್ಯಾಗು ಛತ್ರಿಯ ಹಿಡಿವೆ
ಸಮವಸ್ತ್ರವ ತೊಟ್ಟು ಬೂಟನು ಸುರಿದು
ಶಾಲೆಗೆ ನಡೆವೆನು ನಿನ್ನ ಕೈಬೆರಳ ಹಿಡಿದು||

ತರಗತಿಯೊಳಗೆ ಕುಳಿತಿಹ ಚಿಣ್ಣಗೆ
ಮರೆತೇ ಹೋಯಿತು ಮುಗುಳುನಗೆ
ಅಮ್ಮಾ ನೀ ಕಾಯಲೇ ಬೇಕು ಹೊರಗೆ
ಅಕ್ಷರಲೋಕಕೆ ತೆರೆದಿಹ ಕಂದ ಒಳಗೆ||

ಅಮ್ಮನು ಮನೆಗೆ ಹೇಳದೆ ತೆರಳಿ
ಒಪ್ಪ ಓರಣ ಕಾರ್ಯದಿ ತೊಡಗಿ
ಅಮ್ಮಾಹಾಲುಹಣ್ಣು ಎನ್ನುತ ಕೂಗಿ
ಸೆರಗೆಳೆವ ಪುಟ್ಟನ ನೆನಪು ಮರಳಿ||

ಬೀಕೋ ಎನುತಿದೆ ಖಾಲಿಮನೆವಠಾರ
ಅಂತರ್ಯದಿ ಅಳುತಿದೆ ತಾಯ್ಮನವು
ಗೋಡೆಬರಹ ಚೆಲ್ಲಿದಆಟಿಕೆ ಉಣ್ಣದಹಠವು
ತಂಟೆಮಲ್ಲನೆಂದು ಗದರಿದ ಬೇಸರ||

ಬೇಗನೆ ಹೆಜ್ಜೆ ಹಾಕುತ ಶಾಲೆಯ ಕಡೆಗೆ
ಗಂಟೆಯು ಹೊಡೆಯುವ ಮೊದಲೇ ಕಾದು
ನಿಂದಳು ಅಮ್ಮ ಪುಟಾಣಿಯ ಬರುವಿಕೆಗೆ
ತಾಯಿಯ ಸೇರಿದ ಕಂದ ಸಾಲಲಿ ಬಂದು||

ನನ್ನ ಮುದ್ದಿನ ಶಿಕ್ಷಕಿ ಚಾಕಲೇಟ್ ನೀಡಿ
ಆಯಾ ಬಂದು ಪ್ರೀತೀಲಿ ಮಾತಾಡಿ
ನಮ್ಮನೆಲ್ಲ ಹಾಡನು ಹಾಡಿಸಿ ಕುಣಿಸಿ
ಬಳಪವ ಹಿಡಿದು ಬರೆದು ಓದಿಸಿ||

ಗೆಳೆಯರ ಬಳಗವು ಖುಷಿಯೆನಗೆ
ನನ್ನಯ ಶಾಲೆಗೆ ದಿನವೂ ಬರುವೆ
ಅಕ್ಷರ ಕಲಿತು ಜಾಣ ಮಗುವಾಗಿ
ಶಾಲೆಗೂ ನಿಮಗೂ ಕೀರ್ತಿಯ ತರುವೆ||

✍️... ಅನಿತಾ ಜಿ.ಕೆ.ಭಟ್.
25-11-2019.

ಕಪಿಯ ಚೇಷ್ಟೆ




ನಗರದ ನಡುವಿನ ಒಂಟಿಮರದಲಿ
ಕುಳಿತಿಹನೊಬ್ಬ ಕಪಿರಾಯ
ಛಂಗನೆ ನೆಗೆಯುತ ವೇಗದಿ ಸಾಗಲು
 ಹುಡುಕಿದನೊಂದು ಉಪಾಯ...

ಕೆಲಸಕೆ ತೆರಳಿದ ರಂಗೇಗೌಡ
ನೆರಳಲ್ಲಿರಿಸಿದ ಗಾಡಿ
ಸಮಯವ ಸಾಧಿಸಿ ಜಿಗಿಯುತ
ವಾಹನ ಹತ್ತಿದ ನೋಡಿ...

ಕೊರಳನು ಕೊಂಕಿಸಿ ಕನ್ನಡಿಯಲ್ಲಿ
ನೋಡಿದ ತನ್ನಯ ರೂಪ
ತನ್ನಯ ಗೆಳೆಯನು ಇಲ್ಲಿಯೇ
ಇರುವ ಎಂದುಕೊಂಡನು ಪಾಪ....

ಗಾಡಿಯ ಏರಿ ಮೆಲ್ಲನೆ ಚಾಲನೆ
ಮಾಡಲು ನೋಡಿದನು
ಠೀವಿಯಲಿ ಸೀಟನ್ನೇರಿ ತುಳಿಯಲು
ಕಾಲು ಚೂರೇ ಚೂರು ಇನ್ನು...

ಎಟುಕೋದಿಲ್ಲ ಕೆಳಗಿಳಿದು
ಒದೆಯುವೆ ಎಂದುಕೊಂಡಂತೆ
ಮೆಟ್ಟೀಮೆಟ್ಟೀ ಸೋತುಹೋದ
ಕಾಲುನೋವು  ಬಂದೀತಂತೆ....

ರಂಗೇಗೌಡನು ಬಂದೇಬಿಟ್ಟನು
ಬೇಗನೆ ಗಾಡಿಯ ಬಳಿಗೆ
ಕಪಿಯ ಕುಚೇಷ್ಟೆ ಕೀಯನು ಕಸಿದು
ಪರಾರಿಯಾಯ್ತು ಗೆಲ್ಲಿಗೆ...

ಒಲ್ಲದು ಕಪಿಯು ಕೀಯನು
ಕೊಡಲು ಗೌಡಗೆ   ಮಾತ್ರ
ರಂಗೇಗೌಡನು ಮಾಡಿದ ಸಂತೇಲಿ
ಬಾಳೇಹಣ್ಣನು ಕೊಳ್ಳುವ ತಂತ್ರ....

ಹಣ್ಣನು ಕಂಡ ಹಸಿದ ಕೋತಿ
ಸರಸರ ಬಂತು ಹಿಗ್ಗಿ
ಕೀಯನು ನೀಡಿ ಹಣ್ಣನುತಿಂದು
 ಉದರವು ತುಂಬಿ ತೇಗಿ....

ಕುಳಿತಿತು ಮರದಲಿ ಹೋಗಿ
ನಲಿಯಿತು ಹಸಿವೆಯು ನೀಗಿ...


✍️... ಅನಿತಾ ಜಿ.ಕೆ.ಭಟ್
25-11-2019

ಜೋಕಾಲಿ ಆಡೋಣ ಬಾ ಅಳಿಲೇ

                     

ಮಗು:
ಪೊಟರೆಲಿ ಅವಿತಿರೋ ಅಳಿಲಣ್ಣ
ನನಗೂ ಜೊತೆಯಲಿ ಬರುವಾಸೆ
ಬಾಲವನೆತ್ತಿ ಮರವನು ಸುತ್ತಿ
ಛಂಗನೆ ನೆಗೆವ ಅಳಿಲಣ್ಣಾ||

ಅಳಿಲು:
ಹಕ್ಕಿಗೆ ಇಡುವರು ಆಹಾರ
ನನಗಿದುವೇ ಬಲು ರುಚಿಕರ
ಹಾರುವೆ ನಾನು ಬಲುದೂರ
ತಣಿಯಿತು ಈಗ ನನ್ನುದರ||

ಮಗು:
ನಾನೂ ನೀನೂ ಜೊತೆಯಾಗಿ
ಜೋಕಾಲಿ ಆಡುವ ಬಾ ಇಣಚಿ
ನಿನ್ನನು ಕೂರಿಸಿ ನಾನೇ ನೂಕಿ
ದಿನವಿಡೀ ನಲಿಯೋಣ ಕೇಕೇ ಹಾಕಿ||

ಅಳಿಲು:
ನಾನೇ ತುಂಟ ನೀನಾದರೆ ಬಂಟ
ಮುಗಿಯದು ನಮ್ಮ ಪುಂಡಾಟ
ಸಿಕ್ಕಿದ ಆಹಾರ ನಾನೇ ಮುಗಿಸಿ
ಹೆದರಿಸಿ ಹಕ್ಕಿಗಳ ಆಚೆಗೆ ಓಡಿಸಿ||

ಮಗು:
ಖುಷಿಖುಷಿಯಾಗಿ ಬದುಕಲು ಕಲಿಸು
ಸಮತೋಲನದ ನೀತಿಯ ತಿಳಿಸು
ನಿನ್ನಯ ಜಾಣ್ಮೆ ನನಗೂ ಬರಲಿ
ಬದುಕುವ ಛಲವು ನನ್ನಲಿ ತುಂಬಲಿ||

ಅಳಿಲು:
ಸ್ವಚ್ಛಂದದ ಬದುಕೇ ನನಗಿದು ಹರುಷ
ನಾಳಿನ ಚಿಂತೆ ಇಲ್ಲವು ನಿಮಿಷ
ಮೂರು ನಾಮದ ರಾಮನ ಬಂಟ
ರಾಮನಾಮದಿ ದೂರವು ಸಂಕಟ||


                  🐿️ 🐿️

✍️... ಅನಿತಾ ಜಿ.ಕೆ.ಭಟ್.
25-11-2019.



ಹುಟ್ಟು ಹಬ್ಬದ ಸಂಭ್ರಮ



ಬೊಚ್ಚು ಬಾಯಗಲಿಸಿ
ನಕ್ಕಳು ಮುದ್ದು
ಸುಂದರಿ
ಎಂದೂ ಹೀಗೆ ಸಂತಸದಲಿ
ನಗುತಲಿರು ನಮ್ಮ
ಬಂಗಾರಿ...

ಕಾರಿರುಳ ಸರಿಸಿ ನೀನು
ಬೆಳಕು ಬೀರುವ
ದೀಪವು
ಕಾಡುತಿದೆ ನೋಡಿದಷ್ಟು
ಕಪಟವಿರದ ಮುಗ್ಧತೆಯ
ಪ್ರತಿರೂಪವು...

ನಗೆಯ ಸೆಳೆತದಲ್ಲಿ
ನೂರು ತಾರೆಯ
ಮಿನುಗಿದೆ
ತಾಯ ಮಡಿಲಿನಲಿ
ಪದಕೆ ಸಿಗದ
ಸುಖವಿದೆ...

ಪುಟ್ಟ ಪುಟ್ಟ ಕೈಗಳಿಂದು
ಜೋಡಿಯಾಗಿ
ನಿಂದಿವೆ
ಹಿರಿಮನಸಿನ ಹಾರೈಕೆಯ
ಧನ್ಯತೆಯಲಿ
ಮಿಂದಿವೆ..

✍️... ಅನಿತಾ ಜಿ.ಕೆ.ಭಟ್.
25-11_2019.

ಮಗುವಿನ ಕೋರಿಕೆ



ಕಲ್ಲಾಗಿ ನಿಂತಿರುವ ಕರಿಯ ಆನೆ
ನಿಜ ಆನೆ ಕಂಡರೆ ಹೆದರುವೆನು ನಾನೆ
ದೇವಾಲಯದೊಳು ಕೈಮುಗಿದು ದೇವಗೆ
ಬೇಗನೆ ಬರುವೆನಾ ನಿನ್ನ ಬಳಿಗೆ||

ನಾನಿನ್ನು ತೆರಳುವೆ ಖುಷಿಯಿಂದ ಶಾಲೆಗೆ
ನಿನಗಿಲ್ಲಿಯೇ ನಿಲುವ ಶಿಕ್ಷೆ ಏಕೆ..?
ಆಟ ಪಾಠದಲಿ ನನ್ನ ಜಯಭೇರಿಗೆ
ನೀನೂ ಸಲಿಸುವೆಯಾ ದೇವನಿಗೆ ಕೋರಿಕೆ..?

ನಾ ಕೊಡುವೆ ನಿನಗೊಂದು ಸಿಹಿಮುತ್ತು
ಸ್ನೇಹ ಸಂಬಂಧದ ಕಾಣಿಕೆಯಿದು ಗೊತ್ತಾ..?
ಗಣಪಗೆ ನೀ ಕೊಟ್ಟಿರುವೆ ನಿನ್ನ ಶಿರವ
ಗುಣನಿಧಿಯೆ ನೀ ಕೊಡು ನನಗೆ ವರವ||

ನಾರಿಕೇಳವ ನಾ ನಿನಗೆ ಅರ್ಪಿಸುವೆ
ನನ್ನೊಡನೆ ಆಟಕೆ ನೀ ಬರುವೆಯಾ..?
ದಪ್ಪನೆಯ ಕಾಲುಗಳ ಬಳಿಯಲಿ
ಸುತ್ತಿ ಆಡುವಾ ಆಸೆ ಮನದಲಿ||

ಬರುವ ಭಕ್ತರಿಗೆ ನೀನು ಸ್ವಾಗತವ
ಕೋರುವೆ ತೋರದೆ ಭೇದಭಾವ
ಒಳಗಿರುವ ಪೂಜಾರಿ  ಕಾಣಿಕೆಯು
 ಸಿಗದೆ ಕೊಡಲಾರ ನನಗೆ ಅಪ್ಪ ಕಜ್ಜಾಯ||

ಹಣೆಕತ್ತಿನ ಚಿನ್ನದ ಅಲಂಕಾರ ಬಲು ಸೊಗಸು
ಅದಮುಟ್ಟಿ ನೋಡಿದರೆ ನೀ ತೋರೆ ಮುನಿಸು
ಬಿಳಿಕೋರೆದಂತ ಹೆಗಲಮೇಲಿನಪಟ್ಟೆ
ನೋಡಿ ನಾನೂ ಕೂಡ ಆಸೆಪಟ್ಟೆ||

ಕಾಯುತಿಹಳಲ್ಲಿ ನನ್ನ ಮಾತೆ
ನಿನ್ನ ನೋಡುತ ನಾನು ಮೈಮರೆತೆ
ದೇವನಲಿ ಬೇಡುವೆ ನಿನಗೂ ಕೊಡುಜೀವ
ಇದುವೇ ಪುಟ್ಟ ಮಗುವಿನ ಮನದಭಾವ||

                       

✍️... ಅನಿತಾ ಜಿ.ಕೆ.ಭಟ್.
25-11-2019.
ಚಿತ್ರ ಕೃಪೆ: ಕನ್ನಡ ಕಥಾಗುಚ್ಛ.


ಬಿಳುಪಿನ ಹಲ್ಲು



ವಾಣಿಯು ದಿನವೂ
 ತರುವಳು ದುಡ್ಡು
ಅಪ್ಪನು ಕೊಡುವ
ಹತ್ತರ ಗರಿಗರಿ ನೋಟು... ಗರಿಗರಿ ನೋಟು||

ಶಾಲೆಯ ಪಕ್ಕದ
ಅಂಗಡಿ ಮುಂದೆ
ಗುಂಪಲಿ ನುಗ್ಗಿ
ಬಿಸ್ಕತ್ ಮಿಠಾಯಿ ತರುವಳು ಹಿಗ್ಗಿ...ತರುವಳು ಹಿಗ್ಗಿ||

ವೀಣಾಳು ವಾಣಿಯು
ಜೊತೆಯಲಿ ನಡೆಯೆ
ವೀಣಾಳ ಬಾಯಲಿ ನೀರು
ವಾಣಿಯು ಕೊಡಳು ಚೂರೂ...ಕೊಡಳು ಚೂರೂ||

ಅಮ್ಮನ ಬಳಿಯಲಿ
ವೀಣಾಳು ಅಳಲು
ಅಮ್ಮನು ಕಣ್ಣಲೆ ಗದರಿ
ವೀಣಾ ಹೋದಳು ಹೆದರಿ... ಹೋದಳು ಹೆದರಿ||

ಒಂದಿನ ಶಾಲೆಗೆ
ಬಂದರು ವೈದ್ಯರು
ವೀಣಾಳ ಬಾಯೊಳ ನೋಡಿದರು
ಚಂದದ ಹಲ್ಲನು ಹೊಗಳಿದರು...ಹಲ್ಲನು ಹೊಗಳಿದರು||

ಬಂದಿತು ವಾಣಿಯ ಸರದಿ
ಬಾಯಿಯ ಒಡೆದಳು ಆತುರದಿ
ಬಿಳುಪಿನ ಹಲ್ಲು ಇಲ್ಲವೇ ಇಲ್ಲ
ಕಪ್ಪಿನ ಹಲ್ಲು ಹುಳುಕೇ ಎಲ್ಲ...ಹುಳುಕೇ ಎಲ್ಲ||

ವೀಣಾಗೆ ದೊರಕಿತು ಚಪ್ಪಾಳೆ
ಬಿಳುಪಿನ ಹಲ್ಲಿಗೆ ಬಹುಮಾನ
ವಾಣಿಯ ಮೊಗದಲಿ ಇಲ್ಲ ಕಳೆ
ಕೆಡುಕಿನ ಹಲ್ಲೆಂದು ಅವಮಾನ... ಕೆಡುಕಿನ ಹಲ್ಲೆಂದು ಅವಮಾನ||

✍️... ಅನಿತಾ ಜಿ.ಕೆ.ಭಟ್.
24-11-2019.

Friday, 15 November 2019

ಕಲಿತ ಪಾಠ (ಮಕ್ಕಳ ಕಥೆ)






          ಒಂದು ಕಾಡಿನ ಪಕ್ಕದಲ್ಲಿ ವಿಜಯಪುರ ಎಂಬ ಊರಿನಲ್ಲಿ ರಾಮಣ್ಣನ ಮನೆಯಿತ್ತು.ರಾಮಣ್ಣ ತನ್ನ ಮಡದಿ ಸೋಮಕ್ಕ ಮಕ್ಕಳಾದ ಲೀಲಾ ಮತ್ತು ಮಾಲಾರ ಜೊತೆಗೆ ವಾಸಿಸುತ್ತಿದ್ದನು.ರಾಮಣ್ಣ ಉತ್ತಮ ಕೃಷಿಕನಾಗಿದ್ದನು.ತನ್ನ ತೋಟದಲ್ಲಿ ತೆಂಗು, ಬಾಳೆ, ಅನಾನಸು, ಮಾವು, ಸೀಬೇಕಾಯಿ, ಚಕ್ಕೋತ ಬೆಳೆದು ಮಾರಾಟ ಮಾಡುತ್ತಿದ್ದನು.ಅದರಿಂದ ಬಂದ ಹಣದಿಂದ ಕುಟುಂಬವನ್ನು ಸಲಹುತ್ತಿದ್ದನು . ಮನೆಗೆ ಬೇಕಾದ ಸೌಲಭ್ಯಗಳನ್ನು ಮಾಡಿಸುತ್ತಿದ್ದನು.


          ಒಂದು ದಿನ ಊರಿನ ಜಾತ್ರೆಯಿದ್ದಿತು.ಜಾತ್ರೆಗೆ ರಾಮಣ್ಣ ಮಡದಿ ಮಕ್ಕಳೊಂದಿಗೆ ತೆರಳಿದ್ದ.ಮಕ್ಕಳಿಗೆ ಬೇಕಾದ ಆಟಿಕೆಗಳನ್ನು,ಬಳೆ, ಶೇಂಗಾ ಚಿಕ್ಕಿ ಎಲ್ಲವನ್ನೂ ರಾಮಣ್ಣ ತೆಗೆದುಕೊಟ್ಟಿದ್ದನು.ಅಷ್ಟರಲ್ಲಿ ರಾಮಣ್ಣನ ಬಾಲ್ಯಸ್ನೇಹಿತ ಪರಮೇಶ ಬಂದರು.ಪರಮೇಶ ಈಗ ವಿದೇಶದಲ್ಲಿ ಒಳ್ಳೆಯ ನೌಕರಿಯಲ್ಲಿದ್ದರು.ಸ್ವಲ್ಪ ದಿನಕ್ಕೆ ಊರಿಗೆ ಬಂದಿದ್ದರು.ಇಬ್ಬರೂ ಸ್ವಲ್ಪ ಹೊತ್ತು ಹರಟೆಹೊಡೆದರು.ಲೀಲಾ ಮತ್ತು ಮಾಲಾರನ್ನು ಹತ್ತಿರಕ್ಕೆ ಕರೆದ ಪರಮೇಶ ಚೆನ್ನಾಗಿ ಓದಿ ಜಾಣೆಯರಾಗಬೇಕು ಎಂದು ಕಿವಿಮಾತು ಹೇಳಿದರು.ಇಬ್ಬರಿಗೂ ತನ್ನ ಕೈಚೀಲದಿಂದ ಎರಡೆರಡು ವಿದೇಶೀ ಚಾಕಲೇಟುಗಳನ್ನು ನೀಡಿದರು.


         ಲೀಲಾಗೆ ಚಾಕಲೇಟೆಂದರೆ ತುಂಬಾ ಇಷ್ಟ.ಕೈಯಲ್ಲಿ ಹಿಡಿದುಕೊಂಡು ಕೂರುವ ಜಾಯಮಾನ ಅವಳದಲ್ಲ.ಚಾಕಲೇಟ್ ಸಿಪ್ಪೆ ಸುಲಿದು ಬಾಯಿಗಿಟ್ಟಳು.ಆಹಾ ..ಎಂಥಾ ಸವಿರುಚಿ ಎಂದು ಹೊಗಳಿದಳು.ಈ ಪರಮೇಶ ಮಾಮ ಆಗಾಗ ಹೀಗೆ ಸಿಕ್ಕರೆ ಎಷ್ಟು ಚಂದ.ವಿದೇಶೀ ಚಾಕಲೇಟ ಸವಿಯಬಹುದು ಎಂಬುದು ಅವಳ ಲೆಕ್ಕಾಚಾರವಾಗಿತ್ತು.


          ಮಾಲಾ ತನಗೆ ಕೊಟ್ಟ ಚಾಕಲೇಟ್ ನ್ನು ತಿನ್ನದೆ ಕೈಯಲ್ಲಿ ಹಿಡಿದೇ ಇದ್ದಳು.ಲೀಲಾ ತಿಂದು ಗುಣಗಾನ ಮಾಡುವುದನ್ನು ಕೇಳಿ ತಾನೂ ಏನೋ ಯೋಚನೆಯಲ್ಲಿ ಮುಳುಗಿದಳು.ಪರಮೇಶ ಮಾಮ ತುಂಬಾ ಓದಿರಬೇಕು.ಅದಕ್ಕೆ ಅವರು ವಿದೇಶದಲ್ಲಿ ನೌಕರಿ ಪಡೆದಿದ್ದಾರೆ.ಕೈತುಂಬಾ ಸಂಬಳ ಸಿಗುತ್ತಿರಬಹುದು.ಆದ್ದರಿಂದಲೇ ಎಲ್ಲರಿಗೂ ಚಾಕಲೇಟ್ ಕೊಡುತ್ತಿದ್ದಾರೆ.ತಾನೂ ಕೂಡ ಚೆನ್ನಾಗಿ ಕಲಿತು ಒಳ್ಳೆಯ ಉದ್ಯೋಗವನ್ನು ಗಿಟ್ಟಿಸಿಕೊಳ್ಳಬೇಕೆಂಬ ಹಂಬಲ ಅವಳಲ್ಲಿ ಮೂಡಿತು.


         ಜಾತ್ರೆಯಿಂದ ಹೊರಟು ಮನೆಗೆ ತಲುಪಿತು ರಾಮಪ್ಪನ ಕುಟುಂಬ.ಮಾಲಾಳ ಕೈಯಲ್ಲಿದ್ದ ಚಾಕಲೇಟ್ ನೀರಾಗಿದ್ದರಿಂದ ಆಕೆ ಅದನ್ನು ಶೀತಲೀಕರಣ ಯಂತ್ರದಲ್ಲಿ ಇರಿಸಿದಳು. ಎರಡು ಗಂಟೆಯ ಬಳಿಕ ಲೀಲಾ ತಿನ್ನಲು ಏನಾದರೂ ಇದೆಯೇ ಎಂದು ನೋಡಲು ಫ್ರಿಡ್ಜ್ ಬಾಗಿಲು ತೆರೆದಳು.ಅಲ್ಲಿ ಚಾಕಲೇಟ್ ಗಳು ಕಂಡವು.ಮೊದಲೇ ತನ್ನ ಕೈಯಲ್ಲಿದ್ದ ಚಾಕಲೇಟ್ ತಿಂದಿದ್ದ ಲೀಲಾಗೆ ಅದರ ರುಚಿ ನೆನಪಾಗಿ ನಾಲಿಗೆಯಲ್ಲಿ ನೀರೂರಿತು.ಆಹಾ ... ಎಷ್ಟು ರುಚಿಕರವಾದ ಸ್ವಾದಿಷ್ಟವಾದ ಚಾಕಲೇಟ್ ಗಳು.ನಾನು ಈ ಮೊದಲು ತಿನ್ನುತ್ತಿದ್ದ ದೇಶೀಯ ಚಾಕಲೇಟ್ ನಂತೆ ಅಲ್ಲ.ಇದು ಮಾಲಾಳದ್ದು ಆಗಿರಬೇಕು.. ನಾನು ತಿಂದರೆ ಆಕೆಗೆ ಗೊತ್ತಾಗಲಾರದು...ಎಂದುಕೊಂಡು ಮೆಲ್ಲಗೆ ಕೋಣೆಯಿಂದ ಹೊರಗೆ ಇಣುಕಿದಳು.ಮಾಲಾ ಓದಿನಲ್ಲಿ ನಿರತಳಾಗಿದ್ದಳು.ಅಮ್ಮ ಸೋಮಕ್ಕ ದನದ ಕೊಟ್ಟಿಗೆಯಲ್ಲಿ ದನದ ಹಾಲು ಹಿಂಡುವುದರಲ್ಲಿ ನಿರತಳಾಗಿದ್ದಳು.ಇದೇ ಸರಿಯಾದ ಸಮಯ ಎಂದು ಮೆಲ್ಲನೆ ಚಾಕಲೇಟ್ ತೆಗೆದುಕೊಂಡು ಮನೆಯ ಅಟ್ಟಕ್ಕೆ ತೆರಳಿದಳು.ಬಾಯಿ ಚಪ್ಪರಿಸಿ ತಿಂದಳು.ಯಾರಿಗೂ ಹೇಳದೆ ತಿಂದದ್ದು ಅವಳಿಗೆ ಬಹಳ ಮಜಾ ಕೊಟ್ಟಿತು..


         ನಂತರ ಮನೆಯಿಂದ ಹೊರಗೆ ಓಡಿ ಆಟದಲ್ಲಿ ತಲ್ಲೀನಳಾದಳು.ಚೆಂಡಿನಲ್ಲಿ ಆಟವಾಡುತ್ತಿದ್ದಾಗ ಅಂಗಳದ ಬದಿಯಲ್ಲಿ ಇರುವೆಯ ಸಾಲೊಂದನ್ನು ಕಂಡಳು.ಆಟವಾಡುತ್ತಿದ್ದಾಗ ಚೆಂಡು ಅವುಗಳು ಮೇಲೆ ಬಿದ್ದಿತು..ಇರುವೆಗಳ ಸರತಿಯ ಸಾಲು ಚಲ್ಲಾಪಿಲ್ಲಿಯಾಯಿತು.ದೊಡ್ಡ ಇರುವೆ ಲೀಲಾಳ ಕಾಲಿಗೆ ಕಡಿಯಿತು..ಉರಿ.. ಉರಿ.. ಎಂದು ಕಾಲನ್ನು ಉಜ್ಜಿಕೊಂಡಳು .. ತಾನು ಆಡುವಾಗ ಅವುಗಳಿಗೆ ತೊಂದರೆ ಕೊಟ್ಟದ್ದು ತಪ್ಪು ಎನಿಸಿತು ಅವಳಿಗೆ.ಸೀದಾ ಮನೆಯ ಒಳಗೆ ಓಡಿದಳು.ಒಂದು ಚಮಚ ಸಕ್ಕರೆ ತಂದಳು.ಅಂಗಳದ ಬದಿಯಲ್ಲಿ ಹಾಕಿದಳು.ಸಣ್ಣ ಇರುವೆಯೊಂದು ಅಲ್ಲಿಗೆ ಬಂದು ಸಕ್ಕರೆಯ ಇರುವಿಕೆಯನ್ನು ಪತ್ತೆ ಹಚ್ಚಿತು.ತಾನು ತಿನ್ನದೆ ಹೋಯಿತು.ಲೀಲಾಗೆ ಆಶ್ಚರ್ಯ ವಾಯಿತು.ರುಚಿಕರ ಆಹಾರ ಸಿಕ್ಕರೂ ತಿನ್ನದೇ ಹೋಯಿತಲ್ಲ.. ಎಂದು.


        ಹೋದ ಇರುವೆ ತನ್ನ ಮೂತಿಯಲ್ಲಿ ಎಲ್ಲ ಇರುವೆಗಳಿಗೂ ಸುದ್ದಿ ಮುಟ್ಟಿಸಿತು.ತನ್ನ ಬಳಗದ ಇರುವೆಗಳನ್ನು ಒಟ್ಟು ಸೇರಿಸಿ ಕರೆದುಕೊಂಡು ಬಂದಿತು.ಎಲ್ಲವೂ ಒಟ್ಟಾಗಿ ಸಕ್ಕರೆಯನ್ನು ತಿನ್ನದೆ ತಮ್ಮ ಮನೆಯತ್ತ ಒಯ್ಯತೊಡಗಿದವು..ಚದುರಿದ್ದ ಸಾಲು ಪುನಃ ರೂಪಿಸಿ ಎಲ್ಲ ಇರುವೆಗಳೂ ವೇಗವಾಗಿ ತಮ್ಮ ಮನೆಗೆ ಆಹಾರ ಕೊಂಡೊಯ್ದವು.ಇದನ್ನು ಕಂಡ ಲೀಲಾಳ ಮುಖ ಸಣ್ಣದಾಯಿತು.

         ಪುಟ್ಟ ಇರುವೆ ಸಕ್ಕರೆಯನ್ನು ಕಂಡು ಅಕ್ಕರೆಯಿಂದ ತನ್ನ ಬಳಗವನ್ನು ಕರೆಯಿತು.ನಾನು ಮಾತ್ರ ರುಚಿಕರ ಚಾಕಲೇಟ್ ಪರಮೇಶ ಮಾಮ ಕೊಟ್ಟಾಗ ಯಾರಿಗೂ ಕೊಡದೆ ತಿಂದೆ.. ಶೀತಲೀಕರಣ ಯಂತ್ರದಲ್ಲಿ ಕಂಡಾಗ ಮಾಲಾಳದು ಎಂದು ತಿಳಿದಿದ್ದರೂ ಯಾರಿಗೂ ಗೊತ್ತಾಗದಂತೆ ಒಬ್ಬಳೇ ಸವಿದೆ..ಪುಟ್ಟ ಇರುವೆಗಳು ನನಗೆ ಪಾಠ ಕಲಿಸಿದವು.. ಆಹಾರವನ್ನು ಹಂಚಿ ತಿನ್ನಬೇಕು ..ಎಲ್ಲರೂ ಕೂಡಿ ಉಣ್ಣಬೇಕು ಎಂದು..

        ಮಾಲಾ ಓದುತ್ತಿದ್ದಲ್ಲಿಗೆ ಬಂದ ಲೀಲಾ "ನೀನು ಶೀತಲೀಕರಣ ಯಂತ್ರದಲ್ಲಿ ಇಟ್ಟಿದ್ದ ಚಾಕಲೇಟ್ ನಾನೇ ನಿನಗೆ ಹೇಳದೆ ಸವಿದೆ.. ಕ್ಷಮಿಸಿಬಿಡು ಮಾಲಾ.." ಎಂದಳು.

       "ಇರಲಿ ಬಿಡು ಲೀಲಾ..ನನಗೆ ಚಾಕಲೇಟ್ ನಲ್ಲಿ ತುಂಬಾ ಆಸೆಯಿರಲಿಲ್ಲ.ಪರಮೇಶ ಮಾಮನಂತೆ ನಾನೂ ಕೂಡ ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗ ಪಡೆಯಬೇಕೆಂಬ ಹಂಬಲ.. ಆದ್ದರಿಂದ ಬಂದ ಕೂಡಲೇ ಓದಲು ಕುಳಿತೆ.ಓದಿ ಬರೆದು ಜಾಣೆಯಾಗಿ ಉದ್ಯೋಗ ದೊರೆತರೆ ಮತ್ತೆ ಬೇಕಾದಂತಹ ಚಾಕಲೇಟ್ , ಬಟ್ಟೆಬರೆ, ಪುಸ್ತಕ ಎಲ್ಲವನ್ನೂ ಕೊಳ್ಳಬಹುದು.."

"ಹೂಂ.. "ಎನ್ನುತ್ತಾ

      ಲೀಲಾ ಸೀದಾ ಅಮ್ಮನಲ್ಲಿ ಹೋಗಿ ಹೇಳಿದಳು."ಅಮ್ಮಾ ... ನಾನು ಮಾಲಾಳ ಚಾಕಲೇಟ್ ಕೂಡಾ ಗುಳುಂ ಮಾಡಿದೆ.. ತಪ್ಪಾಯ್ತು..ಕ್ಷಮಿಸಮ್ಮಾ.."

      "ಆಯ್ತು ಮಗಳೇ..ನಿನ್ನ ತಪ್ಪು ನಿನಗೆ ಅರಿವಾಯ್ತಲ್ಲ... ಪ್ರಾಮಾಣಿಕವಾಗಿ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳುವುದು ದೊಡ್ಡಗುಣ.ಇನ್ನೆಂದೂ ಅಂತಹ ಕೆಲಸ ಮಾಡದೆ ಚೆನ್ನಾಗಿ ಓದಿ ಬರೆದು ಮಾಡಿ ನೀನೂ ಪರಮೇಶ ಮಾಮನಂತೆ ದೊಡ್ಡ ಉದ್ಯೋಗ ಪಡೆಯಬೇಕು.."

       "ಹೌದಮ್ಮ..ನಾನೂ ಜಾಣೆಯಾಗಬೇಕು.ಆಡುತ್ತಾ ಕಾಲಕಳೆಯದೆ ಓದಿ ಜಾಣೆಯಾಗುತ್ತೇನೆ.." ಎನ್ನುತ್ತಾ ಓದಲು ತೆರಳಿದಳು.


      ತೋಟದಿಂದ ಬಂದ ರಾಮಣ್ಣನಿಗೆ ಸೋಮಕ್ಕ ನಡೆದ ಘಟನೆಯನ್ನು ವಿವರಿಸಿದಳು.ಲೀಲಾ ತನ್ನ ತಪ್ಪನ್ನು ಅರಿತು ತಿದ್ದಿಕೊಂಡದ್ದನ್ನು ಕಂಡ ರಾಮಪ್ಪನಿಗೂ ಸಂತಸವಾಯಿತು..


✍️... ಅನಿತಾ ಜಿ.ಕೆ.ಭಟ್.
16-11-2019.


Tuesday, 12 November 2019

ಸಹೃದಯಿ ಕನ್ನಡಿಗ




   ವಿಭಾ ಎಂಬಿಎ ಓದಿ ಬೆಂಗಳೂರಿನಲ್ಲಿ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಉದ್ಯೋಗ ಪಡೆದುಕೊಂಡಳು.ತನ್ನ ಕಂಪೆನಿಗೆ ಹತ್ತಿರದಲ್ಲೇ ಒಂದು ಪಿಜಿ ವಿಚಾರಿಸಿಕೊಂಡು ಉಳಕೊಳ್ಳುವ ವ್ಯವಸ್ಥೆ ಮಾಡಿಕೊಂಡಳು.ಉದ್ಯೋಗಕ್ಕೆ ಸೇರುವ ಮುನ್ನವೇ ಅಮ್ಮ ತಲೆಗೆ ಒಂದಿಷ್ಟು ಅವಳ ಮಾಮೂಲಿನ ಹಿತವಚನ ತುಂಬಿಸಿದ್ದಳು..
"ಮಗಳೇ...ಎಲ್ಲಿಯೇ ಉದ್ಯೋಗ ಮಾಡುತ್ತಿದ್ದರೂ,ಉನ್ನತ ಸ್ಥಾನವನ್ನು ಏರಿದರೂ ನಮ್ಮ ಸಂಸ್ಕಾರಗಳನ್ನು,ನಾಡುನುಡಿಯ ಸೊಗಡನ್ನು ಮರೆತುಬಿಡಬೇಡ. ಹಬ್ಬಹರಿದಿನಗಳಲ್ಲಿ ಒಂದು ತುಂಡು ಮೈಸೂರು/ಮಂಗಳೂರು ಮಲ್ಲಿಗೆ ನಿನ್ನ ಮುಡಿಯಲ್ಲಿರಲಿ.ಹಣೆಯ ಮೇಲೆ ಚೂರಾದರೂ ಕುಂಕುಮವಿರಲಿ.ಕೈಗಳಲ್ಲಿ ಎರಡಾದರೂ ಗಾಜಿನ ಬಳೆಯಿರಲಿ.ವ್ಯಾವಹಾರಿಕವಾಗಿ ಆಂಗ್ಲಭಾಷೆ ಅಗತ್ಯವಾದರೂ ಉಳಿದ ಸಮಯದಲ್ಲಿ ಕನ್ನಡವೇ ನಿನ್ನ ಆದ್ಯತೆಯಾಗಲಿ...ನಮ್ಮ ಸಂಪ್ರದಾಯಗಳು,,ಅಡುಗೆ,ಉಡುಗೆ ತೊಡುಗೆಗಳು ನಮಗೆ ಹೆಮ್ಮೆ.."ಎಂಬುದು ಅಮ್ಮನ ಉವಾಚವಾಗಿತ್ತು.

..ಅಪ್ಪ ಮಾತ್ರ "ನಿನ್ನ ಕಾಲ ಮೇಲೆ ನೀನು ನಿಂತುಕೊಂಡರೆ ನನಗೆ ಹೆಮ್ಮೆ.. ಉದ್ಯೋಗದಲ್ಲಿ ಎತ್ತರಕ್ಕೆ ಬೆಳೆಯಬೇಕು.ಜೀವನ ಉದ್ಯೋಗ ಎರಡನ್ನೂ ನಿಭಾಯಿಸಲು ನನ್ನ ಮಗಳು ಶಕ್ತಳಾಗಬೇಕು.." ಎಂದು ಹೇಳಿದರು.

    ಬೆಂಗಳೂರಿಗೆ ಬಂದ ಮೊದಮೊದಲು ಆಕೆಗೆ ಬಹಳ ಕಷ್ಟವಾಗಿತ್ತು.ಗೆಳತಿಯರು ಎಲ್ಲರೂ ಇಂಗ್ಲಿಷ್, ಮಲೆಯಾಳಂ, ತೆಲುಗು, ತಮಿಳು ಭಾಷೆಯಲ್ಲಿ ಮಾತನಾಡುತ್ತಿದ್ದರು.ಕನ್ನಡಿಗರಾದ ಕೆಲವು ಜನ ಇದ್ದರೂ ಉಳಿದವರ ಮಧ್ಯೆ ಅವರು ಅಲ್ಪಸಂಖ್ಯಾತರಾಗಿದ್ದರು..ವಿಭಾ ಚಿಕ್ಕಂದಿನಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತವಳು.ಮನೆಯಲ್ಲೂ ಕನ್ನಡ ಮಾತನಾಡುವ ಸಂಪ್ರದಾಯದವರು.ಹೀಗಾಗಿ ಆಕೆಗೆ ಕನ್ನಡ ನೀರು ಕುಡಿದಂತೆ ಸಲೀಸು ಹಾಗೂ ಮಾತೃಭಾಷೆ ಎಂಬ ಮಮಕಾರ,ಅಭಿಮಾನ..


ವಿಭಾ ಕಛೇರಿಯಲ್ಲಿ ಹಾಗೂ ಪಿಜಿಯಲ್ಲಿ ಕನ್ನಡವನ್ನೇ ಮಾತನಾಡತೊಡಗಿದಳು. ಆರಂಭದಲ್ಲಿ ಎಲ್ಲರೂ ಮೂಗುಮುರಿದರೂ ಕ್ರಮೇಣ ಕನ್ನಡಿಗರೆಲ್ಲ ಧೈರ್ಯದಿಂದ ಕನ್ನಡ ಮಾತನಾಡುತ್ತಾ ಗೆಳತಿಯರಿಗೂ ಕಲಿಸಲಾರಂಭಿಸಿದರು . ಒಂದು ದಿನ ಪಿಜಿಯಲ್ಲಿ ಎಲ್ಲ ಗೆಳತಿಯರೂ ಒಮ್ಮಿಂದೊಮ್ಮೆಲೇ ಹಲ್ಲಿ...ಹಲ್ಲೀ... ಎಂದು ಕೂಗಾಡತೊಡಗಿದರು.ಬೊಬ್ಬೆಕೇಳಿ ಹೊರಗಡೆ ಬಾಯ್ ಫ್ರೆಂಡ್ ಜೊತೆ ಚ್ಯಾಟಿಂಗ್ ನಲ್ಲಿ ಮಗ್ನಳಾಗಿದ್ದ ಮಲೆಯಾಳಿ ಗೆಳತಿ ಸಜಿದಾ ಓಡಿ ಬಂದಳು..ಏನೂ ಅರ್ಥವಾಗದೆ
ವಿಭಾಳತ್ತ ತಿರುಗಿ ಕೇಳಿದಳು.."ಓ.. ಅಲ್ಲಿ... ಮತ್ತೆ...ಪಲ್ಲಿ...ಟು ಉಂಟು.... ಇದು ಯಾವ ಅಲ್ಲಿ... "ಎಂದು ಕೇಳಿದಳು.

ಅವಳ ಮಾತಿಗೆ ಎಲ್ಲರೂ ಗೊಳ್ಳೆಂದು ನಕ್ಕರು.ವಿಭಾ ಬ್ಯಾಗ್ ನ ಮೇಲೆ ಹಾರುತ್ತಿದ್ದ ಹಲ್ಲಿಯನ್ನು ತೋರಿಸಿ ಇದೇ ಹಲ್ಲಿ ಎಂದಳು..ಪಲ್ಲಿ ಪಲ್ಲಿ...ಎನ್ನುತ್ತಾ ನಲ್ಲನಲ್ಲಿ ಮಾತನಾಡಲು ತೆರಳುತ್ತಿದ್ದ ಸಜಿದಾಳನ್ನು ತಡೆದು ನಿಲ್ಲಿಸಿ..ಹಲ್ಲಿ ಎಂದು ಸರಿಯಾಗಿ ಉಚ್ಛರಿಸಲು ಹೇಳಿಕೊಟ್ಟಳು..

ಇನ್ನೊಮ್ಮೆ ಕನ್ನಡತಿ ಗೆಳತಿಯೊಬ್ಬಳು ಏನೋ ಒಂದು ರೀಲ್ ಹೊಡೆದು ಇದು ಅರ್ಥ ಸತ್ಯ.. ಅರ್ಥ ಸುಳ್ಳು ಎನ್ನುತ್ತಿದ್ದಳು.. ಅವಳನ್ನು ತಿದ್ದಿ ಅರ್ಧ ಸತ್ಯ ಅರ್ಧ ಸುಳ್ಳು ಎಂದು ತಿಳಿಹೇಳಿದಳು..

ಪ್ರತಿಬಾರಿ ಕರೆ ಮಾಡಿದಾಗಲೂ "ಹೇನಾಗ್ಬೇಕಿತ್ತು ವಿಭಾ"ಎನ್ನುತ್ತಿದ್ದ ಜ್ಯೋತಿ,"ಮಾರುಕಟ್ಟೆಯಿಂದ ಹಕ್ಕಿ ಎಷ್ಟು ತರಲಿ..?" ಎಂದು ಕೇಳುತ್ತಿದ್ದ ಸುಧಾ...ಇವರ ನಾಲಿಗೆಯನ್ನು ಸಾಣೆಹಿಡಿದು ಏನಾಗ್ಬೇಕಿತ್ತು,ಅಕ್ಕಿ ಎಂದು ಹೇಳಿಸಿದ ಕೀರ್ತಿ ವಿಭಾಳದ್ದು..

ಇನ್ನೊಮ್ಮೆ ಸಿನಿಮಾ ನಟಿಯರ ಬಟ್ಟೆಯ ಬಗ್ಗೆ ಮಾತನಾಡುವಾಗ ಸುಚಿತ್ರಾ "ಸಿನಿಮಾ ನಟಿಯರ ವೇಶ್ಯೆಭೂಷಣ ಚೆನ್ನಾಗಿದೆ "ಎಂದಿದ್ದಳು..ಕನ್ನಡಿಗ ಗೆಳತಿಯರೆಲ್ಲ ಘೊಳ್ಳೆಂದು ನಕ್ಕಾಗ ಸುಚಿತ್ರ ಸಣ್ಣಮುಖ ಹೊತ್ತು ಹೊರನಡೆದಿದ್ದಳು..ಮತ್ತೊಮ್ಮೆ ಸುಚಿತ್ರ ಮಾತ್ರ ಸಿಕ್ಕಾಗ "ವೇಶ್ಯೆಭೂಷಣ ಮತ್ತು ವೇಷಭೂಷಣಕ್ಕೆ" ಇರುವ ವ್ಯತ್ಯಾಸವನ್ನು ಹೇಳಿ ಮೃದುವಾಗಿ ತಿದ್ದಿದಳು.ಹೀಗೆ ವಿಭಾ ಪಿಜಿಯ ಕನ್ನಡದ ಕುವರಿ ಎಂದು ಖ್ಯಾತಿ ಪಡೆದಳು.


ಎರಡು ವರ್ಷ ಕಳೆಯುತ್ತಿದ್ದಂತೆ ವಿಭಾಳಿಗೆ ಮದುವೆಯಾಯಿತು.ಪಿಜಿ ಬಿಟ್ಟು ಗಂಡನ ಮನೆ ಸೇರಿದ್ದಾಯಿತು.ಒಂದು ವರ್ಷದಲ್ಲಿ ಪುಟ್ಟ ಕಂದನೂ ಬಂದ.ಎರಡು ವರ್ಷ ಮಗುವಿನ ಕಡೆ ಗಮನಕೊಡಲೆಂದು ಉದ್ಯೋಗವನ್ನು ತೊರೆದಳು.ಮಗನಿಗೆ ಕನ್ನಡದ ಜೋಗುಳದ ಪದಗಳ ಲಾಲಿ ‌ಹಾಡಿ ನಿದ್ದೆಮಾಡಿಸುತ್ತಿದ್ದಳು.ನಂತರ ಪುನಃ ಉದ್ಯೋಗಕ್ಕೆ ಸೇರಿದಳು.ಮನೆಗೆ ಸಹಾಯಕಿಯನ್ನು ನೇಮಿಸಿದರು.


 ಮಗ ಅಮನ್ ಗೆ ಐದು ವರ್ಷ ಆಯ್ತು.ಆಗ ಪತಿ ವಿಜಯ್ ಗೆ ವಿಯೇಟ್ನಾಂಗೆ ಕೆಲಸದ ನಿಮಿತ್ತ ತೆರಳಬೇಕಾಯಿತು.. ಐದು ವರ್ಷಗಳ ಕಾಲ ಅಲ್ಲಿರಬೇಕಾದ ಒಪ್ಪಂದವಿದ್ದ ಕಾರಣ ವಿಭಾ ಕೆಲಸಕ್ಕೆ ವಿದಾಯ ಹೇಳಿ ಪತಿ ಮಗನ ಜೊತೆ ಅಲ್ಲಿಗೆ ತೆರಳಿದಳು.ಹೋಗಿ ಒಂದು ವರ್ಷದಲ್ಲಿ ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡ ಬಳಿಕ ವಿಭಾಗೆ ಉದ್ಯೋಗ ಮುಂದುವರಿಸುವ ಮನಸ್ಸಾಯಿತು.ಮನೆಯಿಂದ ಎರಡು ಕಿಲೋಮೀಟರ್ ದೂರದಲ್ಲಿ ಒಂದು ಕಂಪೆನಿಯಲ್ಲಿ ಉದ್ಯೋಗ ದೊರೆಯಿತು.


ದಿನವೂ ಮಗನನ್ನು ಶಾಲೆಗೆ ಬಿಟ್ಟು ಅದೇ ದಾರಿಯಲ್ಲಿ ಮುಂದೆ ಸಾಗಿ ತನ್ನ ಕಛೇರಿಗೆ ತೆರಳುತ್ತಿದ್ದಳು.ಸಂಜೆ ಅಮನ್ ನೆರೆಯ ಪಂಜಾಬಿ ಕುಟಂಬದ ಹುಡುಗನೊಂದಿಗೆ ಶಾಲಾವಾಹನದಲ್ಲಿ ಮನೆಗೆ ಬರುತ್ತಿದ್ದ.ವಿಭಾ ಆರು ಗಂಟೆಗೆ ಮನೆಸೇರುತ್ತಿದ್ದಳು..

ಅಂದು ಅವಳಿಗೆ ಕಛೇರಿಯಲ್ಲಿ ತುಂಬಾ ಕೆಲಸದ ಒತ್ತಡ ಇತ್ತು.ಮನೆಗೆ ಹೊರಡುವುದು ತಡವಾಯಿತು.ಅಮನ್ ಅರ್ಧಗಂಟೆಗೊಮ್ಮೆ "ಅಮ್ಮಾ.. ಎಷ್ಟೊತ್ತಿಗೆ ಬರುತ್ತೀಯಾ" ಎಂದು ಕರೆಮಾಡಿ ಕೇಳುತ್ತಲೇ ಇದ್ದ.ಪತಿ ವಿಜಯ್ ಬರುವುದು ತಡರಾತ್ರಿ.. ಆದ್ದರಿಂದ ಬೇಗನೆ ಹೋಗಬೇಕೆಂದು ಕಛೇರಿಯ ಕ್ಯಾಬ್ ಗೆ ಕಾದರೆ ಇನ್ನೂ ಅರ್ಧ ಗಂಟೆ ತಡವಾಗುತ್ತದೆ ಎಂದು ನಡೆಯುತ್ತಾ ಹೊರಟಳು.


  ರಾತ್ರಿ ಎಂಟು ಗಂಟೆಯಾಗಿತ್ತು.ಅವಳು ನಡೆಯುವ ರಸ್ತೆ ಜನಸಂದಣಿ ಇಲ್ಲದ ರಸ್ತೆ.ಇಂದು ಎಲ್ಲಾ ಅಂಗಡಿಗಳೂ ಮುಚ್ಚಿದ್ದವು.ವೇಗವಾಗಿ ಹೆಜ್ಜೆಹಾಕುತ್ತಿದ್ದಳು.ಮುಂದಿನಿಂದ ಇಬ್ಬರು ಇಪ್ಪತ್ತರ ಹರೆಯದ ತರುಣರು ಬರುವುದು ಕಾಣಿಸಿತು.ತನ್ನಂತೆಯೇ ದಾರಿಹೋಕರು ಇರಬೇಕೆಂದು ಭಾವಿಸಿ ತನ್ನಪಾಡಿಗೆ ನಡೆದಳು.ಎದುರುಸಿಕ್ಕ ಯುವಕರು ಸ್ವಲ್ಪ ದೂರ ಹೋದ ನಂತರ ಮತ್ತೆ ಹಿಂದಿರುಗಿ ಅವಳನ್ನೇ ಹಿಂಬಾಲಿಸತೊಡಗಿದರು. ವಿಭಾ ಗಡಗಡ ನಡುಗುತ್ತಾ ಕಾಲು ವೇಗವಾಗಿ ಮುಂದಿಡುತ್ತಿದ್ದಳು.

ಮತ್ತಷ್ಟು ಹತ್ತಿರಕ್ಕೆ ಬಂದರು.ಅವರ ನೋಟವೋ ಅವಳನ್ನೇ ತಿಂದುಹಾಕುವಂತಿತ್ತು..ಓಡತೊಡಗಿದಳು..ಒಬ್ಬರೂ ಮನುಷ್ಯರು ಕಾಣಿಸುತ್ತಿಲ್ಲವಲ್ಲ ಎಂದು ಕೊರಗಿ ... ಹೃದಯದ ಬಡಿತ ಜೋರಾಯಿತು..

ಮುಂದಿನ ತಿರುವಿನಲ್ಲಿ ಯಾರೋ ಒಬ್ಬ ಮಧ್ಯವಯಸ್ಕ ಗಂಡಸು ಫೋನ್ ಸಂಭಾಷಣೆ ಯಲ್ಲಿ ನಿರತನಾಗಿದ್ದನು..ವಿಭಾಳಿಗೆ ಸ್ವಲ್ಪವೇ ಧೈರ್ಯ ಬಂತು.. ಹಿಂದಿರುಗಿ ನೋಡಿದಾಗ ಇನ್ನು ಮುನ್ನುಗ್ಗಿ ಬರುತ್ತಿರುವ ಯುವಕರಿಗೂ ತನಗೂ ಹತ್ತೇ ಅಡಿ ಅಂತರವಿರುವುದು ...ಉಸಿರು ಎಳೆಯಲೂ ಕಷ್ಟಪಡುತ್ತಿದ್ದಳು ..


ಮಧ್ಯವಯಸ್ಕ ವ್ಯಕ್ತಿಯನ್ನು "ಸರ್.." ಎಂದು ಕೂಗಿಕೊಂಡಳು..ಆ ವ್ಯಕ್ತಿ ಕನ್ನಡದಲ್ಲಿ ಸಂಭಾಷಣೆ ಮಾಡುತ್ತಿದ್ದುದನ್ನು ಕೇಳಿಸಿಕೊಂಡ ವಿಭಾ ಒಮ್ಮೆಲೇ "ಅಣ್ಣಾ ಕಾಪಾಡಿ" ಎಂದು ಬೊಬ್ಬಿರಿದಳು.. ಅನಿರೀಕ್ಷಿತವಾಗಿ ಬಂದ ಕನ್ನಡದ ಹೆಣ್ಣಿನ ಆರ್ತ ಧ್ವನಿಯನ್ನು ಅರಸಿ ಹಿಂದಿರುಗಿದ ವ್ಯಕ್ತಿಗೆ ಪರಿಸ್ಥಿತಿ ಅರಿವಾಯಿತು.ಗಾಬರಿಗೊಂಡಿದ್ದ ವಿಭಾಳನ್ನು ನೋಡಿ" ಹೆದರಬೇಡ ತಂಗಿ.. ನಾನಿದ್ದೇನೆ "ಎಂದ..

ವಿಭಾ ಅವನ ಬೆನ್ನ ಹಿಂದೆ ಹೆದರಿ ನಡುಗುತ್ತಿದ್ದ ಶರೀರವನ್ನು ಅಡಗಿಸುತ್ತಾ ಏದುಸಿರನ್ನು ತಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಳು.. ತರುಣರತ್ತ ತೀಕ್ಷ್ಣ ನೋಟ ಬೀರಿ ಮೀಸೆತಿರುವಿದ ಕನ್ನಡಿಗ ...ತರುಣರ ಕಾಲುಗಳು ನಿಧಾನಿಸಿದವು..ಅವರು ಹತ್ತಿರ ಬರುತ್ತಿದ್ದಂತೆ ಕನ್ನಡಿಗ ತೋಳೇರಿಸಿ  ನಿಂತಿದ್ದ .. ತರುಣರು ಮುಂದಡಿಯಿಡಲು ಹೆದರಿದರು..ಕವಲು ದಾರಿಯಲ್ಲಿ ತೆರಳಿದರು...


ಅವರು ತೆರಳಿದರೂ ವಿಭಾಳಿಗೆ ಹೆದರಿ ಇಳಿಯುತ್ತಿದ್ದ ಬೆವರು ಮಾತ್ರ ನಿಲ್ಲಲಿಲ್ಲ.. ಅವಳನ್ನು ಸಂತೈಸುತ್ತಾ "ತಂಗೀ  ರಾತ್ರಿ ಹೊತ್ತು ನಡೆದಾಡಲು ಇದು ಪ್ರಶಸ್ತವಾದ ಜಾಗವಲ್ಲ.. ಎಲ್ಲಿಗೆ ಹೋಗುತ್ತಿರುವೆ ಹೇಳು..ನಾನೇ ವಾಹನ ಮಾಡಿ ಅಲ್ಲಿಗೆ ತಲಪಿಸುತ್ತೇನೆ "ಎಂದಾತನ ಕಣ್ಣುಗಳಲ್ಲಿ ಒಡಹುಟ್ಟಿದ ಸೋದರನ ಪ್ರೀತಿ,ರಕ್ಷಣೆಯ ಗುಣವನ್ನು ಕಂಡಳು.ಹೆಣ್ಣನ್ನು ಗೌರವಿಸುವ ಕನ್ನಡದ ಮಣ್ಣಿನ ಗುಣವನ್ನು ಅರಿತಳು..ತನ್ನ ವಿವರವನ್ನು ಹೇಳಿಕೊಂಡ ವಿಭಾಳನ್ನು ಟ್ಯಾಕ್ಸಿ ಬಾಡಿಗೆಗೆ ಮಾಡಿ ಮನೆಯವರೆಗೆ ತಲುಪಿಸಿ ಸ್ವಲ್ಪವೇ ಮುಂದಿರುವ ತನ್ನ ಮನೆಗೆ ತೆರಳಿದನು ಭರತ್..

ಮನೆಗೆ ಬಂದ ವಿಭಾ... ಅಮ್ಮನನ್ನು ಕಾದುಕುಳಿತು ನಿದ್ರೆಗೆ ಶರಣಾದ ಮಗ ಅಮನ್ ನನ್ನು ತಬ್ಬಿಕೊಂಡು ಅತ್ತೇಬಿಟ್ಟಳು. ಎಚ್ಚರಗೊಂಡ ಅಮನ್ ಅಳುತ್ತಿರುವ ಅಮ್ಮನನ್ನು ಕಂಡು "ಏನಾಯ್ತು ಅಮ್ಮಾ.. "ಎಂದು ಕೇಳಿದ... ಮಗನಲ್ಲಿ ನಡೆದ ಘಟನೆ ವಿವರಿಸಿದಳು.ಗಂಡನಿಗೂ ಫೋನ್ ಮಾಡಿ ತಿಳಿಸಿದಳು..ಭರತ್ ಆ ಹೊತ್ತಿಗೆ  ಸಿಗದಿದ್ದರೆ ತನ್ನ ಗತಿ ಏನಾಗುತ್ತಿತ್ತೋ ಏನೋ ನೆನೆದು ಗದ್ಗದಿತಳಾದಳು...


 ಮುಂದಿನ ಭಾನುವಾರ ವಿಭಾ, ವಿಜಯ್, ಅಮನ್ ಮೂವರೂ ಭರತ್ ನ ಮನೆಗೆ ತೆರಳಿ ಕೃತಜ್ಞತೆಗಳನ್ನು ತಿಳಿಸಿ ಸಣ್ಣ ಉಡುಗೊರೆಯನ್ನು ಕೊಟ್ಟರು.ಉಡುಗೊರೆಯನ್ನು ನಿರಾಕರಿಸಿದ ಭರತ್ ..."ನನ್ನ ಕರ್ತವ್ಯವೆಂದು ಮಾಡಿದ್ದೇನೆ.. ಇದಕ್ಕೆ ಉಡುಗೊರೆಯನ್ನು ನಿರೀಕ್ಷಿಸಲಾರೆ..ಬಾಲ್ಯದಲ್ಲೇ ತಂದೆತಾಯಿಯನ್ನು ಕಳೆದುಕೊಂಡ ನಾನು ಇಂದಿನಿಂದ ನನಗೊಬ್ಬ ತಂಗಿ ಇದ್ದಾಳೆ ಎಂದುಕೊಳ್ಳುತ್ತೇನೆ .." ಎಂದವನ ಕಣ್ಣಂಚಲ್ಲಿ ನೀರುಜಿನುಗಿತ್ತು..ಒಬ್ಬ ಸಹೃದಯೀ ಕನ್ನಡಿಗನ ಅಂತರಂಗದ ನುಡಿಗಳನ್ನು ಕೇಳಿದ ಕುಟುಂಬ ಭಾವುಕವಾದ ಕ್ಷಣವದು.

ಅಂದಿನಿಂದ ಪ್ರತೀ ರಕ್ಷಾಬಂಧನದ ದಿನ ಅಣ್ಣ ಭರತ್ ನ ಮನೆಗೆ ತೆರಳಿ ರಕ್ಷೆಯನ್ನು ಕಟ್ಟಿ ಅವನಿಂದ ಸಿಹಿತಿನಿಸು ಪಡೆಯಲು ವಿಭಾ ಮರೆಯುವುದಿಲ್ಲ..ಪ್ರತೀ ಹಬ್ಬಹರಿದಿನದಲ್ಲೂ ಅಣ್ಣತಂಗಿಯರ ಕುಟುಂಬ ಒಟ್ಟುಸೇರುತ್ತದೆ.
ಕನ್ನಡ ರಾಜ್ಯೋತ್ಸವವನ್ನು 'ವಿಭಾರತ್ 'ಎನ್ನುವ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಿ ಆಚರಿಸುತ್ತಾರೆ.. ಸುತ್ತಮುತ್ತಲಿನ ಅನಿವಾಸಿ ಕನ್ನಡಿಗರನ್ನೆಲ್ಲ ಒಂದೇ ವೇದಿಕೆಯಲ್ಲಿ ಒಗ್ಗೂಡಿಸುತ್ತಾರೆ ...



✍️... ಅನಿತಾ ಜಿ.ಕೆ.ಭಟ್.
13-11-2019.



ಬದುಕಲು ಕಲಿಸಿದ ವೃದ್ಧಾಶ್ರಮ






            ಸುಶೀಲ ಹುಟ್ಟುವ ಮೊದಲೇ ತಂದೆಯನ್ನು ಕಳೆದುಕೊಂಡವಳು.ಅಜ್ಜನ ಮನೆಯೇ ಅವಳಿಗೂ ತಾಯಿಗೂ ಮನೆಯಾಗಿತ್ತು.ಅಜ್ಜಿ, ಅಜ್ಜ ,ಮಾವಂದಿರು ,ಚಿಕ್ಕಮ್ಮಂದಿರ ಜೊತೆಗೆ ಆಡಿ ಬೆಳೆದವಳು ಸುಶೀಲ.ಯಾವುದೇ ಕೊರತೆಯಾಗದಂತೆ ಮಗುವನ್ನು ಸಾಕಿ ಸಲಹಿದರು ಮನೆಯವರು.ಸುಶೀಲಳಿಗೆ ಹತ್ತು ವರ್ಷ ತುಂಬುತ್ತಿದ್ದಂತೆ ತಾಯಿಯೂ ಅಸುನೀಗಿದರು.ಈಗ ಸುಶೀಲಳಿಗೆ ತಾನು ಒಬ್ಬಂಟಿಯೆಂದು ಅನಿಸತೊಡಗಿತು.

            ಚಿಕ್ಕಮ್ಮಂದಿರೂ ಮದುವೆಯಾಗಿ ಗಂಡನ ಮನೆ ಸೇರಿದ್ದರು.ಹೊಸದಾಗಿ ಮೂವರು ಅತ್ತೆಯಂದಿರು ಮನೆಬೆಳಗಿದ್ದರು.ಅಜ್ಜ ಅಜ್ಜಿ ವಯಸ್ಸಾಗುತ್ತಿದ್ದಂತೆ ಮನೆಯ ವ್ಯವಹಾರವನ್ನೆಲ್ಲ  ದೊಡ್ಡ ಮಗನಿಗೆ ವಹಿಸಿದರು.ದೊಡ್ಡಮಾವನ ಪತ್ನಿ ವಿಶಾಲಾಕ್ಷಿ ಒಳ್ಳೆಯವಳು.ಆದರೆ ಬಾಯಿ ಸ್ವಲ್ಪ ಜೋರು.. ಉಳಿದಿಬ್ಬರು ಮಾವಂದಿರು ಉದ್ಯೋಗದಲ್ಲಿದ್ದು ಪಟ್ಟಣದಲ್ಲಿ ಮನೆಮಾಡಿಕೊಂಡರು. ಅನಾರೋಗ್ಯದಿಂದ ಅಜ್ಜ  ಅಸುನೀಗಿದರು.

            ಸುಶೀಲ ಹತ್ತನೇ ತರಗತಿ ಓದು ಮುಗಿದಾಗ ವಿಧ್ಯಾಭ್ಯಾಸ ಮೊಟಕುಗೊಳಿಸಿದರು.ಅತ್ತೆಗೆ ಮನೆಗೆಲಸದಲ್ಲಿ ಸಹಾಯ ಮಾಡುತ್ತಿದ್ದಳು.ವಿಶಾಲತ್ತೆಗೆ ಒಬ್ಬನೇ ತಮ್ಮ.ಅವನು ಶಿವು...ಆಗಾಗ ಮನೆಗೆ ಬರುತ್ತಿದ್ದ.ಎಲ್ಲರೊಂದಿಗೆ ಬೆರೆವಂತೆ ಅವನೊಂದಿಗೂ ವ್ಯವಹರಿಸುತಿದ್ದವಳು ಸುಶೀಲ.ಒಮ್ಮೆ ಅಕ್ಕನ ಮನೆಗೆ ಬಂದರೆ ಒಂದುವಾರ ಉಳಿದುಕೊಳ್ಳುತ್ತಿದ್ದ . ಹೊಲಗದ್ದೆಗಳ ಕೆಲಸದ ಉಸ್ತುವಾರಿಗೆ ಸಹಕರಿಸುತ್ತಿದ್ದ.

            ವಿಶಾಲತ್ತೆ ಆ ದಿನ ಜ್ವರವೆಂದು ಕೆಲಸದಾಳುಗಳಿಗೆ ಮಧ್ಯಾಹ್ನ ಬುತ್ತಿ ಕೊಂಡೊಯ್ಯಲು ಸುಶೀಲಳಲ್ಲಿ ಹೇಳಿದಳು."ಹೂಂ.."ಎಂದು ಸುಶೀಲ ಬುತ್ತಿ ತೆಗೆದುಕೊಂಡು ಹೊರಟಿದ್ದಳು.ದಾರಿಯಲ್ಲಿ ಸೀಬೆಮರದಲ್ಲಿ ತುಂಬಾ ಕಾಯಿಗಳು ಕಂಡವು.ಕೀಳಲೆಂದು ಪ್ರಯತ್ನ ಪಟ್ಟಳು ಸುಶೀಲ.ಅಷ್ಟರಲ್ಲಿ ಅವಳನ್ನು ಯಾರೋ ಬಲವಾಗಿ ಹಿಡಿದಂತಾಯಿತು . ಒಮ್ಮೆಗೆ ಕೊಸರಿಕೊಂಡು ಹಿಂದಿರುಗಿ ನೋಡಿದಾಗ ಶಿವು..ಬೊಬ್ಬೆ ಹೊಡೆಯಲು ನೋಡಿದಳು.. ಬಾಯಿಗೆ ಗಟ್ಟಿ ಕೈ ಅಡ್ಡ ಹಿಡಿದ.ಬಲವಂತವಾಗಿ ಪಕ್ಕದ ಗಿಡಗಂಟಿಗಳ ಮಧ್ಯೆ ಕರೆದೊಯ್ದ.. ಏನು ಮಾಡುತ್ತಿದ್ದಾನೆಂದು ಅರಿವಾಗದ ಸುಶೀಲ ಬಿಡಿಸಿಕೊಳ್ಳಲು ಮಾಡಿದ ಯತ್ನಗಳೆಲ್ಲವೂ ವಿಫಲವಾಗಿದ್ದವು.ಅವನ ಕಾಮದ ತೃಷೆಗೆ ಅವಳು ಬಲಿಯಾದಳು.ಸಿಟ್ಟು,ಅಳು ಒಮ್ಮೆಲೇ ಬಂದರೂ ತಡೆದುಕೊಂಡಳು.

            "ಬುತ್ತಿ ನಾನೇ ಕೊಂಡೊಯ್ಯುವೆ.. ನೀನು ಮನೆಕಡೆ ನಡಿ..ಯಾರಿಗಾದ್ರೂ ಬಾಯ್ಬಿಟ್ಟೆಯೋ .. ಹುಷಾರು....ಜೀವ ಸಮೇತ ಭೂಮಿಮೇಲೆ ಉಳಿಸಲಾರೆ.." ಎಂದು ಧಮಕಿ ಹಾಕಿದ್ದ.. ಹೆದರಿ ಬಿಟ್ಟಳು ಸುಶೀಲ.

               ಸೂಕ್ತ ಸಮಯಕ್ಕೆ ಪುನಃ ಹೊಂಚು ಹಾಕುತ್ತಿದ್ದ ಶಿವು..ಒಂದು ದಿನ ಮನೆಯವರೆಲ್ಲ ಜಾತ್ರೆಗೆ ತೆರಳಿದ್ದರು.ಸುಶೀಲ ಹಾಗೂ ಅಜ್ಜಿ ಮನೆಕಾವಲಿಗೆಂದು ಮನೆಯಲ್ಲೇ ಉಳಿದುಕೊಂಡಿದ್ದರು..ಅದನ್ನರಿತ ಶಿವು ತಾನೂ ಜಾತ್ರೆಗೆ ಹೋದ ನಾಟಕ ಮಾಡಿ ಅರ್ಧದಲ್ಲೇ ವಾಪಾಸಾಗಿ  ಮನೆಯ ಹೊರಗೆ ಪಾತ್ರೆತೊಳೆಯುತ್ತಿದ್ದ ಸುಶೀಲೆಯನ್ನು ಹಿತ್ತಿಲಿಗೆ ಬಲವಂತವಾಗಿ ಕರೆದೊಯ್ದು ತೃಷೆ ತೀರಿಸಿಕೊಂಡ.ಮುಂದೊಂದು ದಿನ ದನಮೇಯಿಸಲು ಹೋದಾಗ... ಹೀಗೆ ಮೊದಲಿಗೆ ಅವನ ಬಲಾತ್ಕಾರ ಕ್ರಮೇಣ  ಅವಳಿಗೂ ಹಿತವಾಗಿತ್ತು.. ಅವನನ್ನು ಮನಸಾರೆ ಪತಿಯೆಂದು ನಡೆದುಕೊಂಡಳು..ಅವನೂ ನಿನ್ನನ್ನೇ ಮದುವೆಯಾಗುವುದಾಗಿ ನಂಬಿಸಿದ...



               ಒಂದೂವರೆ ತಿಂಗಳಾದರೂ ಇನ್ನೂ ಮುಟ್ಟಾಗದ ಸುಶೀಲಳನ್ನು ಕಂಡು ವಿಶಾಲತ್ತೆಗೆ ಅನುಮಾನ ಬಂದಿತು.ಸಾಕ್ಷಿಯೆಂಬಂತೆ ಹಿಂದಿನ ದಿನ ಬಚ್ಚಲಿನಲ್ಲಿ ವಾಂತಿ ಮಾಡಿದಂತೆ ವಾಸನೆ ಬರುತ್ತಿದ್ದುದನ್ನು ಗಮನಿಸಿದ್ದಳು.ಸುಶೀಲಳನ್ನು ಹಿಡಿದು ನಿಲ್ಲಿಸಿ ಕೇಳಿದಳು. ಬಾಯ್ಬಿಡಲಿಲ್ಲ . ಗಂಡ,ಅತ್ತೆಯ ಎದುರೇ ನಾಲ್ಕು ಬಾರಿಸಿದಳು.ಎಲ್ಲರೂ ಸೇರಿ ಸುಶೀಲಳ ಮೇಲೆ ಮುಗಿಬಿದ್ದರು."ಯಾವನವನು ಹೇಳು.. ಅವನನ್ನು ಝಾಡಿಸಿ ಒದೀತೀನಿ ಅಂದ ಮಾವ..."

              ಅಬಾರ್ಷನ್ ಮಾಡಿಸಲು ಆಸ್ಪತ್ರೆಗೆ ಕರೆದೊಯ್ದರು.ವೈದ್ಯರೂ ಕೆನ್ನೆಗೆರಡು ಬಾರಿಸಿದರು.ಕೊನೆಗೆ ತನ್ನ ತಪ್ಪಿಲ್ಲವೆಂದು..ನಡೆದ ಘಟನೆಯನ್ನು ವಿವರಿಸಿದಳು.ವೈದ್ಯರು ವಿಶಾಲತ್ತೆಯನ್ನು ಕರೆದು..." ಏನ್ರೀ... ನಿಮಗೆ ಸ್ವಲ್ಪವಾದ್ರು ಜ್ಞಾನ ಬೇಡ್ವಾ... ವಯಸ್ಸಿಗೆ ಬಂದ ಹೆಣ್ಣುಮಕ್ಕಳಿರುವ ಮನೆಯಲ್ಲಿ ಉಂಡಾಡಿ ಗಂಡುಮಕ್ಕಳನ್ನು ಇರಿಸಿಕೊಳ್ಳಬಾರದು ಅಂತ...ನಿಮ್ಮ ತಮ್ಮನನ್ನು ಯಾಕೆ ಅನಾವಶ್ಯಕವಾಗಿ ಇರಿಸಿಕೊಂಡಿದ್ದೀರಿ ... ಅವನಿಂದಾಗಿ ಅಮಾಯಕ ಹೆಣ್ಣುಮಗಳು ನೋವು ಅನುಭವಿಸುವಂತಾಯಿತು"... ಎಂದು ತರಾಟೆಗೆ ತೆಗೆದುಕೊಂಡರು.ವಿಶಾಲಾಕ್ಷಿ ತಲೆತಗ್ಗಿಸಿ ನಿಲ್ಲಬೇಕಾಯಿತು.


             ಮನೆಗೆ ಬಂದವರೇ ಸುಶೀಲಳನ್ನು ಹಿಗ್ಗಾಮುಗ್ಗಾ ಥಳಿಸಿ.."ಏನೇ ವೈದ್ಯರ ಮುಂದೆ ನನ್ನ ಅವಮಾನ ಮಾಡ್ತೀಯಾ...ನೀನೇ ಅವನ ತಲೆ ಹಾಳು ಮಾಡಿ ...ಅವನ ಹೆಸರು ಹೇಳ್ತೀಯಾ..ನೋಡ್ತಿರು ನಿಂಗೆ ಒಂದು ಗತಿ ಕಾಣಿಸ್ತೀನಿ ...ನನ್ನನ್ನೇ ಅವಮಾನಿಸುವಷ್ಟು ಬೆಳೆದುಬಿಟ್ಟಿದೀಯಾ...". ಎಂದು ಅಬಾರ್ಷನ್ ಆದ ಹೆಣ್ಣುಮಗಳು ವಿಶ್ರಾಂತಿ ಬೇಕು ಎಂಬುದನ್ನು ಗಮನಿಸದೆ ಬಾಸುಂಡೆ ಬರುವಂತೆ ಹೊಡೆದಿದ್ದರು..

              ಸುಶೀಲ ಮೌನವಾಗಿ ರೋದಿಸುತ್ತಿದ್ದಳು.. ಕೆಲವೇ ದಿನಗಳಲ್ಲಿ ವಿಶಾಲತ್ತೆ ತನಗೆ ಪರಿಚಯವಿರುವ ಮದುವೆ ಬ್ರೋಕರ್ ಒಬ್ಬರನ್ನು ಕರೆದು ಸುಶೀಲಳಿಗೆ ಮದುವೆ ಸಂಬಂಧ ಕುದುರಿಸಲು ಹೇಳಿದರು. ಅವನು ದೂರದ ಊರಿನ ರೈತ ಮಹದೇವನ ಮಗ ರಾಮಭದ್ರನನ್ನು ಕರೆತಂದನು.ಎರಡನೇ ಸಂಬಂಧ.ಒಬ್ಬಳು ಮಗಳಿದ್ದಾಳೆ.ಸ್ವಂತ ಜಮೀನಿದೆ.. ದುಡಿದು ಜೀವನ ಮಾಡುವ ಕುಟುಂಬ.ಎಲ್ಲರಿಗೂ ಒಪ್ಪಿಗೆಯಾಗಿ ಮದುವೆಯೂ ನಡೆದುಹೋಯಿತು.ಒಬ್ಬ ಮೈದುನ, ನಾಲ್ಕು ಜನ ಅತ್ತಿಗೆಯಂದಿರಿರುವ ಸಂಸಾರಕ್ಕೆ ಕಾಲಿಟ್ಟಳು.


               ತಂದೆಯ ಪ್ರೀತಿಯನ್ನು ಕಾಣದ ಸುಶೀಲಳಿಗೆ ತಂದೆಯ ಸ್ಥಾನವನ್ನು ತುಂಬಿದವರು ಮಾವ ಮಹದೇವ.. ಸೊಸೆಯನ್ನು ಅಕ್ಕರೆಯಿಂದ ಕಂಡು ಮಮತೆಯ ಬಾಳನ್ನು ಕಟ್ಟಿಕೊಟ್ಟವರು.ಗಂಡ ರಾಮಭದ್ರನೂ ಕೂಡ ಮಡದಿಯನ್ನು ಬಲು ಜೋಪಾನವಾಗಿ ಸಲಹುತ್ತಿದ್ದನು.ಹೇಳುವಷ್ಟು ಧನಿಕರಲ್ಲದಿದ್ದರೂ
ಪ್ರೀತಿಯಲ್ಲಿ ಶ್ರೀಮಂತಿಕೆಯಿತ್ತು .ಅತ್ತೆ ಗಂಗಮ್ಮ ಸ್ವಲ್ಪ ಬಾಯಿ ಜೋರಿನ ಹೆಂಗಸಾದರೂ ಹೃದಯವಂತೆ.ಸುಶೀಲ ಕೂಡ ಮನೆಯ ಪರಿಸರಕ್ಕೆ ಬಲುಬೇಗನೆ ಹೊಂದಿಕೊಂಡಳು. ತಬ್ಬಲಿ ಮಗಳು ಸಹನಾಳಿಗೆ ತಾಯಿಯ ಸ್ಥಾನವನ್ನು ತುಂಬಿ ಪ್ರೀತಿಗೆ ಕೊರತೆಯಾಗದಂತೆ ನೋಡಿಕೊಂಡಳು.


                ವರುಷದೊಳಗೆ ಮುದ್ದಾದ ಗಂಡುಮಗುವಿಗೆ ಜನ್ಮವಿತ್ತಳು.ತಾಯಿಯಿಲ್ಲದ ಸುಶೀಲಳ ಬಾಣಂತನವನ್ನು  ಅತ್ತೆ ಗಂಗಮ್ಮನೇ  ಮುಂದೆ ನಿಂತು ಮಾಡಿದರು.ಮಗು ಸಚಿನ್ ನ ಲಾಲನೆಪಾಲನೆಯಲ್ಲಿ ಎಲ್ಲರೂ ಆನಂದದಿಂದ ಬದುಕುತ್ತಿದ್ದರು.. ಅಷ್ಟರಲ್ಲಿ ಇನ್ನೊಂದು ಸಿಹಿಸುದ್ದಿ ಹೊರಬಿತ್ತು.ಎರಡನೆ ಬಾರಿ ಗರ್ಭಿಣಿಯಾದಳು ಸುಶೀಲ.ಮುದ್ದಾದ ಹೆಣ್ಣುಮಗುವಿಗೆ ಜನ್ಮನೀಡಿದಳು.ಸಾಧನ ದಿನದಿಂದ ದಿನಕ್ಕೆ ಬೆಳೆಯತೊಡಗಿದಳು... ಸುಶೀಲಳ ಮದುವೆಯಾದ ನಂತರ ಒಮ್ಮೆಯೂ ಅಜ್ಜನ ಮನೆಯ ಕಡೆಯಿಂದ ಯಾವುದೇ ಕರೆ ಬಂದಿರಲಿಲ್ಲ.ಹೆಣ್ಣುಮಗುವಿನ ತಾಯಿಯಾಗಿ ಸ್ವಲ್ಪ ಸಮಯದಲ್ಲಿ ದೀಪಾವಳಿಯ ಹಬ್ಬಕ್ಕೆ ಕರೆದರು.ಸುಶೀಲಳನ್ನು ಹಾಗೂ ಮಕ್ಕಳನ್ನು ರಾಮಭದ್ರ ಪ್ರೀತಿಯಿಂದ ಅಜ್ಜನ ಮನೆಗೆ ಕರೆದೊಯ್ದು ತಾನೂ ಎರಡು ದಿನ ಅವರ ಜೊತೆ ಉಳಿದುಕೊಂಡನು.

               ವಿಶಾಲತ್ತೆ ಮಾವ ಎಲ್ಲರೂ ಪ್ರೀತಿಯಿಂದ ಮಾತನಾಡಿಸಿದರು.ವಿಶಾಲತ್ತೆಗೆ ಸುಶೀಲಳ ಸುಂದರ ಸಂಸಾರ ಕಂಡು ಹೊಟ್ಟೆಯುರಿಯಿತು.ಹಾಳಾಗಿಹೋಗಲಿ ಎಂದು ಎರಡನೇ ಸಂಬಂಧಕ್ಕೆ ಇಪ್ಪತ್ತು ವರುಷಗಳ ಅಂತರವಿರುವ ವರನಿಗೆ ಮದುವೆಮಾಡಿ ಕೊಟ್ಟರೆ ಇವಳು ಅದರಲ್ಲೂ ಸಂತಸದಿಂದ ಬದುಕುತ್ತಾಳಲ್ಲ ... ಆದರೆ ನಮ್ಮ ಶಿವು...ಛೇ..!! ಅವನಿಗೆ ಮದುವೆಯಾಗಿ ಮೂರೇ ತಿಂಗಳಲ್ಲಿ ಹೆಂಡತಿಯ ಮಾತಿಗೆ ಮರುಳಾಗಿ ನನ್ನ ಜೊತೆ ಸಂಬಂಧವನ್ನೇ ಕಡಿದುಕೊಂಡ..ಈಗ ತವರು ಬರೀ ನೆನಪು ಮಾತ್ರ... ಇವಳಿಗೆ ಅಬಾರ್ಷನ್ ಮಾಡಿಸದೆ ಇವಳನ್ನೇ ಶಿವುಗೆ ಮದುವೆ ಮಾಡಬೇಕಾಗಿತ್ತು..ಥೂ..ಹಾಳಾದ ಬುರುಡೆಗೆ ಅಷ್ಟೂ ಹೊಳೀಲಿಲ್ವೇ..ತವರಿಗೆ ವರದಕ್ಷಿಣೆ ಜಾಸ್ತಿ ಸಿಗಲಿ ಎಂದು ಶ್ರೀಮಂತರ ಮನೆ ಹುಡುಗಿಯನ್ನು ಮದುವೆ ಮಾಡಿಸಿದೆ...ಶಿವುನ ಹೆಂಡತಿ ಬಂಜೆ...ಹೆರುವ ಅಂದಾಜು ಕಾಣ್ತಿಲ್ಲ... ಅವ್ಳು ಚೆನ್ನಾಗಿ ಬತ್ತಿ ಇಟ್ಟಳು.. ಇವಳು ಎಲ್ಲಿದ್ರೂ ಮೆರೀತಾಳೆ...ಎಂದು ಕೈಹಿಸುಕಿಕೊಂಡಳು..


               ಸುಶೀಲ ಮಾವಂದಿರು,ಅತ್ತೆಯಂದಿರು ಚಿಕ್ಕಮ್ಮಂದಿರು,ಚಿಕ್ಕಪ್ಪಂದಿರೆಲ್ಲರನ್ನೂ ಭೇಟಿಯಾಗಿ ಮಾತನಾಡಿಸಿದ ಖುಷಿಯಲ್ಲಿ ಮನೆಗೆ ಮರಳಿದರು.ಸುಂದರ ಸಂಸಾರಕ್ಕೆ ಯಾರ ಕೆಟ್ಟ ದೃಷ್ಟಿ ತಾಗಿತೋ ಏನೋ.. ಕೆಲವೇ ದಿನಗಳಲ್ಲಿ ಮನೆಯ ಯಜಮಾನ ಹೃದಯಾಘಾತದಿಂದ ನಿಧನರಾದರು.. ಮಾವ ಮಹದೇವಪ್ಪನ  ಅಗಲುವಿಕೆ ಕುಟುಂಬಕ್ಕೆ ಆಘಾತವನ್ನುಂಟುಮಾಡಿತು.ಸುಶೀಲಳಿಗೆ ತನ್ನ ತಂದೆಯಂತೆ ಕಾಣುತ್ತಿದ್ದ ಜೀವ ಎದ್ದುಹೋದಂತೆ ಹೋದಾಗ ಆದ ದುಃಖ ಅಷ್ಟಿಷ್ಟಲ್ಲ..

              ಮುಂದೆ ಅತ್ತೆ ಗಂಗಮ್ಮ ಕಟುವಾಗುತ್ತಾ..ಹೋದರು..ಸಣ್ಣಪುಟ್ಟದಕ್ಕೂ ಸುಶೀಲಳ ಮೇಲೆಯೇ ರೇಗುತ್ತಿದ್ದರು.ಸುಶೀಲ ಮಾತ್ರ ಎದುರುತ್ತರ ಕೊಡದೆ ತನ್ನ ಕರ್ತವ್ಯವನ್ನು ಪಾಲಿಸುತ್ತಾ ಬಂದಳು..ಗಂಡನ ಪ್ರೀತಿಯ ಆಸರೆಯಲ್ಲಿ ನೋವನೆಲ್ಲ ಮರೆಯುತ್ತಿದ್ದಳು.ಮಕ್ಕಳು ಅಜ್ಜಿಯ ಬಳಿಹೋಗಲು ಹೆದರುತ್ತಿದ್ದರು.ಅಮ್ಮನನ್ನು ಯಾವಾಗಲೂ ಗದರುತ್ತಿದ್ದ ಅಜ್ಜಿಯ ಮೇಲೆ ಮಕ್ಕಳಿಗೆ ತಿರಸ್ಕಾರ ಭಾವ ಅವರಿಗರಿವಿಲ್ಲದೆಯೇ ಮೂಡತೊಡಗಿತು..


            ಬಾಳಿನಲ್ಲಿ ಎದುರಾಗುವ ನೋವಿನ ಬಿರುಗಾಳಿಗೆ ಅಂಜದೆ ಪ್ರೀತಿಯ ದೀಪ ಬೆಳಗಬೇಕು.ಸೂರ್ಯನ ಬೆಳಕು ತೀಕ್ಷ್ಣ ಎಂದು ಕಣ್ಮುಚ್ಚಿ ಕುಳಿತರೆ ಇರುಳಿನ ನಕ್ಷತ್ರಗಳ ಆಗಮನ ಅರಿವಿಗೆ ಬಂದೀತೇ..? ಚಂದಿರನ ಸಹನೆಯ ತಂಪಾದ ಬೆಳದಿಂಗಳನ್ನು ಕಾಣಲು ಸಾಧ್ಯವೇ...?
ಸುಶೀಲ ಕಷ್ಟಗಳನ್ನು ಇಷ್ಟಪಟ್ಟು ಮೆಟ್ಟಿನಡೆವ ಸಂಕಲ್ಪ ಮಾಡಿಕೊಂಡಳು.

           ಗಂಗಮ್ಮನ ಎರಡನೇ ಅಳಿಯ ಅಪಘಾತವೊಂದರಲ್ಲಿ ತೀರಿಕೊಂಡರು.ಗಂಡನ ರಿಕ್ಷಾ ಚಾಲನೆಯಿಂದ ಬರುತ್ತಿದ್ದ ಆದಾಯದಿಂದ ಜೀವನ ಮಾಡುತ್ತಿದ್ದ ಶಕ್ಕುವಿನ ಕುಟುಂಬ ಅನಾಥವಾದಾಗ ಸುಶೀಲ ರಾಮಭದ್ರ ಇಬ್ಬರೂ ತಾವು ಜೊತೆಗಿದ್ದೇವೆ ಎಂದು ಧೈರ್ಯ ತುಂಬಿ ಶಕ್ಕುವನ್ನು ತವರಿಗೆ ಕರೆದು  .. ಸ್ವಲ್ಪ ಭೂಮಿಕೊಟ್ಟು ಮನೆಕಟ್ಟಿ ಕೊಟ್ಟರು.ಉಪಕಾರದ ನೆನಪು ಕೆಲವೇ ದಿನ ಉಳಿದದ್ದು.ನಂತರ ತಾಯಿಯೊಂದಿಗೆ ಸೇರಿ ಅಣ್ಣನ ಬದುಕಿಗೇ ಮಾರಿಯಾಗತೊಡಗಿದಳು ಶಕ್ಕು..

             ವರುಷಗಳು ಉರುಳಿದವು.ಶಕ್ಕುವಿನ ದೊಡ್ಡ ಮಗ ಐಟಿಐ ಕಲಿತು ಪಟ್ಟಣದಲ್ಲಿ ಒಂದುಸಣ್ಣ ಕೆಲಸ ಹಿಡಿದ.ಅವನಿಗೆ ಅಣ್ಣನ ಮೊದಲ ಮಗಳು ಸಹನಾಳನ್ನು ಮದುವೆ ಮಾಡಬೇಕು ಎಂಬ ಹಂಬಲ ಶಕ್ಕುಗೆ..ಸಹನಾಳ ಅಮ್ಮನ ಬಂಗಾರ ಎಲ್ಲವೂ ನಮಗೇ ಸಿಗಬಹುದೆಂಬ ಲೆಕ್ಕಾಚಾರ.ಶಕ್ಕುವಿನ ಬುದ್ಧಿ ಅರಿವಿದ್ದ ರಾಮಭದ್ರ ಸುಶೀಲರಿಗೆ ಇಷ್ಟವಿರಲಿಲ್ಲ.ಸಹನಾಳ ಬಗ್ಗೆ ಇಲ್ಲಸಲ್ಲದ್ದು  ಹೇಳಿ ಅವಳಿಗೆ ಬರುತಿದ್ದ ಸಂಬಂಧಗಳನ್ನು ಶಕ್ಕು ತಪ್ಪಿಸುತ್ತಿದ್ದಳು.

            ಆದರೆ ದೇವರು ಕೈಬಿಡಲಿಲ್ಲ..ಸಹನಾಳಿಗೆ ಸರಕಾರಿ ನೌಕರ ವರನೇ ದೊರೆತು ಸಂಭ್ರಮದಿಂದ ಮದುವೆ ಮಾಡಿದರು.ಎರಡು ಹೆರಿಗೆ ಬಾಣಂತನವೂ ಸುಶೀಲಳೇ ತಾಯಿಯ ಮಮತೆತೋರಿ ಯಾವುದೇ ತೊಂದರೆಯಾಗದಂತೆ ಮಾಡಿಕಳುಹಿಸಿದಳು.

               ಸಚಿನ್ ಕಲಿಯುವುದರಲ್ಲಿ ಜಾಣನಾಗಿದ್ದುದರಿಂದ ಇಂಜಿನಿಯರಿಂಗ್ ಓದಿದ.ಒಳ್ಳೆಯ ಕೆಲಸವೂ ಸಿಕ್ಕಿತು.ಸಾಧನ ಶಿಕ್ಷಕಿಯಾದಳು..ಮನೆ ಬಹಳ ಹಳತಾಗಿತ್ತು.ಈಗಲೋ ಮತ್ತೆಯೋ ಬೀಳುವಂತಿತ್ತು.. ಸಚಿನ್ "ಅಪ್ಪಾ ನನ್ನ ಕಂಪೆನಿಯಿಂದ ಹೋಮ್ ಲೋನ್ ಸಿಗುತ್ತದೆ..ಮನೆಕಟ್ಟೋಣ" ಎಂದ.ರಾಮಭದ್ರ ಸುಶೀಲ ಒಪ್ಪಿಕೊಂಡರು.ಮನೆಯ ಕೆಲಸ ಆರಂಭವಾಯಿತು..ಶಕ್ಕು ಸಣ್ಣಪುಟ್ಟ ಕಳ್ಳತನ ಮಾಡಿ ತೊಂದರೆ ಕೊಡುತ್ತಿದ್ದಳು..ಸಿಮೆಂಟಿನ ಗೋಣಿ,ಕಬ್ಬಿಣದ ಸರಳು ಇವನ್ನೆಲ್ಲ ರಾತ್ರಿ ಮನೆಗೆ ಸಾಗಿಸುತ್ತಿದ್ದುದು ಅವರ ಅರಿವಿಗೆ ಬಂತು..ಆದರೂ ಜಗಳಕ್ಕಿಳಿಯುವವರಲ್ಲ ರಾಮಭದ್ರ..

              ಹತ್ತು ತಿಂಗಳಲ್ಲಿ  'ನಂದನ ವನ' ಒಂದಸ್ತಿನ ಮನೆ ಗೃಹಪ್ರವೇಶಕ್ಕೆ ಸಜ್ಜಾಯಿತು.ಬಂಧುಮಿತ್ರರೆಲ್ಲ ಬಂದು ಗೃಹಪ್ರವೇಶವನ್ನು ಚಂದಗಾಣಿಸಿಕೊಟ್ಟರು.ಸುಶೀಲಳ ಅಜ್ಜನ ಮನೆಕಡೆಯ ನೆಂಟರೆಲ್ಲರೂ ಬಂದಿದ್ದರು.
ವಿಶಾಲತ್ತೆ ಕುಟುಂಬ ಸಮೇತ ಸುಶೀಲಳ ಹೊಸಮನೆಯನ್ನು ನೋಡಲೇಬೇಕೆಂಬ ಕುತೂಹಲದಿಂದ ಬಂದಿದ್ದರು..ಸುಶೀಲಳ ಮದುವೆಯ ನಂತರ ಮೊದಲ ಬಾರಿಗೆ ಬಂದರು.ತಾರಸಿಯ ವಿಶಾಲವಾದ ಮನೆ, ಅಗಲವಾದ ಹಾಲ್,ದೊಡ್ಡ ದೊಡ್ಡ ಹಲಸಿನ ಮರದ ಕಿಟಕಿಗಳು,ಶೋಕೇಸ್,ಝಗಮಗಿಸುವ ಅಲಂಕಾರಿಕ ಬಲ್ಬ್ ಗಳು, ಸುಂದರವಾದ ದೇವರಕೋಣೆ, ಸುಂದರವಾದ ಕೆತ್ತನೆಯುಳ್ಳ ಬಾಗಿಲುಗಳು,ರೂಮುಗಳಲ್ಲಿ ಅಟಾಚ್ಡ್ ವಾಶ್ ರೂಂ ಗಳು,ಮಾಡ್ಯುಲಾರ್ ಕಿಚನ್  ....ಅಂತೂ ಎಲ್ಲವನ್ನೂ ನೋಡಿದ ವಿಶಾಲತ್ತೆ ಸುಶೀಲಳ ಅದೃಷ್ಟವನ್ನು ಕಂಡು ಹಲುಬಿದಳು.. ಅಯ್ಯೋ...ನನ್ನಿಂದ ಎಂತಹಾ ಕೆಲಸ ಆಗಿ ಹೋಯ್ತು.... ಇಷ್ಟು ಅದೃಷ್ಟವಂತೆ ಮಹಾಲಕ್ಷ್ಮಿಯನ್ನು ಮನೆಯಿಂದ ಒದ್ದು  ಎರಡನೇ ಸಂಬಂಧದ ಬಡವ ವರನಿಗೆ ಗಂಟುಹಾಕುವ ಬದಲು ನನ್ನ ತಮ್ಮನಿಗೆ ಮದುವೆ ಮಾಡುತ್ತಿದ್ದರೆ......
ನನಗೂ ವರುಷಕ್ಕೆರಡು ಬಾರಿ ತವರಿಗೆ ಹೋಗಿ ಅರಮನೆಯಂತಹ ಮನೆಯಲ್ಲಿ ಮೆರೆಯಬಹುದಿತ್ತು..ನನ್ನ ತವರು ಹಾಗೇ ಹೀಗೇ.. ಎಂದು ಎಲ್ಲರೆದುರು ಹೇಳಿಕೊಳ್ಳಬಹುದಿತ್ತು ... ಶ್ರೀಮಂತರ ಮನೆ ಹುಡುಗಿ ಹುಡುಕಿ ಮದುವೆ ಮಾಡಿದರೂ ಒಂದು ಸಂತಾನವಿಲ್ಲ... ನಾನು ಬದುಕಿದ್ದೇನೋ ಸತ್ತಿದ್ದೇನೋ ನೋಡಬೇಕೆಂದಿಲ್ಲ ....ಸುಶೀಲ ಅವಳ ಅತ್ತಿಗೆಯಂದಿರನ್ನು ಎಷ್ಟು ಚೆನ್ನಾಗಿ ವಿಚಾರಿಸಿಕೊಳ್ಳುತ್ತಿದ್ದಾಳೆ ... ಎಲ್ಲರಿಗೂ ಗೃಹಪ್ರವೇಶಕ್ಕೆ ಅಂದದ ಝರಿ ಸೀರೆ ಕೂಡ ಕೊಟ್ಟಿದ್ದಾಳೆ....ಛೇ...!! ನಂಗೆ ಆ ದೇವ್ರು ಒಳ್ಳೇ ಬುದ್ಧಿ ಕೊಡ್ಬಾರ್ದಿತ್ತಾ....




         ಮನೆ ತಂದ ಸೌಭಾಗ್ಯವೋ ಏನೋ ಒಂದು ತಿಂಗಳಲ್ಲೇ ಸಚಿನ್ ,ಸಾಧನ ಇಬ್ಬರಿಗೂ ಕಂಕಣಭಾಗ್ಯ ಕೂಡಿಬಂತು.ಸಾಧನ ವೈದ್ಯರ ಪತ್ನಿಯಾದಳು.. ಸಚಿನ್ ನ ಪತ್ನಿ ಇಂಜಿನಿಯರ್..ಉದ್ಯೋಗದಲ್ಲಿದ್ದಳು..

           ಗಂಗಮ್ಮಳ ಗೊಣಗುವಿಕೆ ಜೋರಾಗಿತ್ತು..ಇತ್ತ ಸುಶೀಲ ಕೂಡ ವಯಸ್ಸಾಗುತ್ತಿದ್ದಂತೆ ತಿಂಗಳಲ್ಲಿ ಐದು ದಿನ ಅತೀವ ರಕ್ತಸ್ರಾವದಿಂದ ಕಂಗಾಲಾಗುತ್ತಿದ್ದಳು.ಆಗಲೂ ಗಂಗಮ್ಮ ಒಂದು ಚೂರೂ ಸಹಾಯಕ್ಕೆ ಬಾರದೆ ವಟವಟ ಆಡುತ್ತಿದ್ದರು.ಹೊತ್ತು ಹೊತ್ತಿಗೆ ಸುಶೀಲ ಕಾಫಿ ದಿನಕ್ಕೆ ಐದು ಬಾರಿ .. ತಿಂಡಿ,ಊಟ,ಔಷಧ ಎಲ್ಲವೂ ತನ್ನ ಕೈಯ ಬಳಿ ತಂದಿಡಬೇಕು.ಇಲ್ಲದಿದ್ದರೆ ಕಿವಿಗೆ ಹತ್ತಿಯಿಟ್ಟುಕೊಂಡು ಓಡಾಡಬೇಕು..ಅಷ್ಟೂ ಬೈಗುಳ ತಪ್ಪಿದ್ದಲ್ಲ...

             ಒಂದು ದಿನ ಸಚಿನ್ ಪತ್ನಿ ಚಿನ್ಮಯಾಳನ್ನು ಹೀಗೆ ಕೂಗಾಡಿದರು.ಅವಳು ಅತ್ತು ಕೋಣೆ ಸೇರಿದಳು.ವಿಷಯ ತಿಳಿದ ಸಚಿನ್ ಅಜ್ಜಿಯನ್ನು ತರಾಟೆಗೆ ತೆಗೆದುಕೊಂಡ.ಅಪ್ಪ ಅಮ್ಮ ಇಬ್ಬರೂ ಹಿರಿಯರಿಗೆ ಹಾಗೆಲ್ಲ ಅನ್ನಬಾರದು ಕಣೋ ಎಂದು ಸಮಾಧಾನಿಸಲು ಪ್ರಯತ್ನಿಸಿದರು."ನೀವು ಸುಮ್ಮನಿರುವುದಕ್ಕೇ ನಿಮ್ಮ ಮೇಲೆ ವೃಥಾ ರೇಗಾಡುವುದು..ನನ್ನ ಪತ್ನಿಯ ತಂಟೆಗೆ ಬಂದರೆ ಸುಮ್ಮನೆ ಬಿಡಲಾರೆ.." ಎಂದು ಧಮ್ಕಿ ಹಾಕಿದ..ಅವನ ರೌದ್ರಾವತಾರ ಕಂಡು ಗಂಗಮ್ಮ ಬಾಯಿಗೆ ಬೀಗಜಡಿದರು.

            ಸಾಧನಾ,ಚಿನ್ಮಯಾ ಇಬ್ಬರೂ ಸಿಹಿಸುದ್ದಿಯನ್ನು ನೀಡಿದರು.ಸಾಧನಾಳ ಬಾಣಂತನ ತವರಲ್ಲೇ ಆಗಬೇಕು ಶಾಸ್ತ್ರ ಪ್ರಕಾರ.ಚಿನ್ಮಯಾಳ ತಾಯಿ ಅನಾರೋಗ್ಯ ಪೀಡಿತೆಯಾದ್ದರಿಂದ ಅವಳದೂ ಬಾಣಂತನ ಸುಶೀಲಳ ಹೆಗಲಮೇಲಿತ್ತು... ಪದೇಪದೇ ರಕ್ತಸ್ರಾವದಿಂದ ಸುಶೀಲಳ ಆರೋಗ್ಯವೂ ಕುಂದಿತ್ತು..ಬಾಣಂತನದ ಸಮಯದಲ್ಲಿ ಗಂಗಮ್ಮಳಿಗೆ ಸಮಯಕ್ಕೆ ಸರಿಯಾಗಿ ಎಲ್ಲವನ್ನೂ ಮಾಡಿಕೊಡುವುದೇ ಅವರಿಗೀಗ ದೊಡ್ಡ ಚಿಂತೆಯಾಗಿತ್ತು ..

           ಪಟ್ಟಣದಲ್ಲಿದ್ದ ತಮ್ಮ ವೀರಭದ್ರನಲ್ಲಿ ಆರುತಿಂಗಳ ಮಟ್ಟಿಗೆ ಅಮ್ಮನನ್ನು ನೋಡಿಕೊಳ್ಳಬಹುದೇ ಎಂದು ಕೇಳಿದನು ರಾಮಭದ್ರ..ಏನೋ ಸಾಬೂಬು ಹೇಳಿದ.ಪಕ್ಕದಲ್ಲಿರುವ ತಂಗಿ ಶಕ್ಕುವಿನಲ್ಲಿ ಕೇಳಿದರೆ ಆಕೆಯೂ ಮನೆಗೆ ಬೀಗ ಜಡಿದು ಪಟ್ಟಣದಲ್ಲಿರುವ ಮಗನ ರೂಮು ಸೇರಿದಳು.ಇನ್ನುಳಿದ ತಂಗಿಯರಲ್ಲಿ ಕೇಳಿದರೂ ಒಬ್ಬೊಬ್ಬರದು ಒಂದೊಂದು ನೆಪ..ಇರಲಿ..ನಾವೇ ಒಬ್ಬಳು ಕೆಲಸದಾಕೆ ಇಡೋಣವೆಂದರೆ ಆಕೆಯ ಬಾಯಿ ಗೊತ್ತಿರುವ ಸುತ್ತಲಿನ ಎಲ್ಲರೂ ನಿರಾಕರಿಸಿದರು.ನರ್ಸ್ ಮಾಡೋಣ ಎಂದು ವಿಚಾರಿಸಿದರು.ತಿಂಗಳಿಗೆ ಹದಿನೈದು ಸಾವಿರ ರೂಪಾಯಿ ಚಾರ್ಜ್ ಕೇಳಿ ಅಷ್ಟೊಂದು ಕೊಡಲು ಈಗ ಸಾಧ್ಯವಿಲ್ಲ ಎಂದು ಸುಮ್ಮನಾದರು..ಸಾಧನಳ ಸೀಮಂತದ ಶಾಸ್ತ್ರ ಮುಗಿದು ತವರಿಗೆ ಆಗಮಿಸಿದಳು.ಸಾಧನಳ ಹೆರಿಗೆ ಡೇಟ್ ಆಗಿ ಮೂರು ತಿಂಗಳಿಗೆ  ಚಿನ್ಮಯ ಳಿಗೆ ಡೇಟ್ ಇತ್ತು..ಈಗ ಎಲ್ಲರು ತನ್ನನ್ನು ಕಡೆಗಣಿಸುತ್ತಿದ್ದಾರೆ ಎಂದು ಅರಿತ ಗಂಗಮ್ಮಳ ಹಾರಾಟ ತಾರಕಕ್ಕೇರಿತ್ತು.ಸುಶೀಲ ಅನಾರೋಗ್ಯ,ಅತ್ತೆಯ ಕೂಗಾಟ,ಆರೈಕೆಯಿಂದ ಪಾತಾಳಕ್ಕಿಳಿದಿದ್ದಳು .ಅಡುಗೆಯಲ್ಲಿ ರುಚಿ ಸ್ವಲ್ಪ ಹೆಚ್ಚು ಕಡಿಮೆ ಆದರೂ ಬೊಬ್ಬೆ ತಪ್ಪಿದ್ದಲ್ಲ ‌.


            ಸಾಧನಳ ಸೀಮಂತಕ್ಕೆ ಬಂದಿದ್ದ ವೀರಭದ್ರ ತಾಯಿಯ ರೌದ್ರಾವತಾರ ನೋಡಿ,ಅಣ್ಣ ಅತ್ತಿಗೆಯ ಬಗ್ಗೆ ಕರುಣೆಯುಕ್ಕಿ ಆರುತಿಂಗಳ ಮಟ್ಟಿಗೆ ನಾನು ನೋಡಿಕೊಳ್ಳುತ್ತೇನೆ ಎಂಬ ಭರವಸೆಯಿತ್ತ.ಸಾಧನಳಿಗೆ ಒಂಭತ್ತು ತಿಂಗಳಾದಾಗ ವೀರಭದ್ರ ಬಂದು ಅಮ್ಮನನ್ನು ತನ್ನ ಮನೆಗೆ ಕರೆದೊಯ್ದ.ಹಲವಾರು ವರುಷಗಳ ನಂತರ ಮಗನ ಮನೆಗೆ ಬಂದ ಸಂತಸ ಗಂಗಮ್ಮನಿಗೆ . ಸೊಸೆ ಮಗ ಮೊಮ್ಮಕ್ಕಳೊಂದಿಗೆ ಖುಷಿಯಾಗಿದ್ದರು.ಆಗಾಗ ಸುಶೀಲಳನ್ನು ದೂರುತ್ತಿದ್ದರು.ಆಗ ವೀರಭದ್ರನ ಮಡದಿ ಸುಮಿತ್ರಾ" ಅಕ್ಕಾ ತುಂಬಾ ಒಳ್ಳೆಯವರು"...ಎಂದು ಆಕೆಯ ಗುಣಗಾನ ಮಾಡುತ್ತಿದ್ದಳು.ಒಂದುತಿಂಗಳು ಎಲ್ಲವೂ ಸುಸೂತ್ರವಾಗಿ ನಡೆಯಿತು.ನಂತರ ಪುನಃ  ರೇಗಾಟ ಆರಂಭವಾಯಿತು.ತೀರಾ ಅತಿರೇಕಕ್ಕೆ ತಲುಪಿದಾಗ ಇನ್ನು ಸ್ವಲ್ಪ ಸಮಯ ವೃದ್ಧಾಶ್ರಮ ದಲ್ಲಿರಲಿ ಎಂದು  ಅದೇ ಪಟ್ಟಣದಲ್ಲಿರುವ ವೃದ್ಧಾಶ್ರಮಕ್ಕೆ ಸೇರಿಸಿದ..ವೀರಭದ್ರನಿಗೂ ಸುಮಿತ್ರಾಳಿಗೂ ಇದು ಇಷ್ಟವೇ ಇರಲಿಲ್ಲ.ಆದರೆ ತಾಯಿಯದೂ ತಪ್ಪಿದೆ.ಅನಗತ್ಯ ಮಗಸೊಸೆಯ ಮೇಲೆ ರೇಗಿದರೆ ನೋವಾಗುತ್ತದೆ ಎಂಬುದು ಅವರಿಗೆ ಅರಿವಾಗಲಿ ಎಂದು ಸೇರಿಸಿದರು.ಬರುವಾಗ ಇಬ್ಬರ ಕಂಗಳೂ ಒದ್ದೆಯಾದುವು.ಸುಶೀಲಕ್ಕ ಇಷ್ಟು ವರ್ಷ ಹೇಗೆ ತಡೆದುಕೊಂಡಳೋ ಎಂದು ಸುಮಿತ್ರಾ ಗದ್ಗದಿತಳಾದಳು..


              ವೃದ್ಧಾಶ್ರಮ ಸೇರಿದ ಮೇಲೆ ಮೊದಲ ಊಟ.ಗಂಗಮ್ಮ ಬಾಯಿಗೆ ಒಂದು ತುತ್ತು ಹಾಕಿದಾಗಲೇ ವಾಂತಿ ಬರುವಂತಾಯಿತು. ಊಟ ಬಡಿಸುತ್ತಿದ್ದ ಆಯಾಳ ಮೇಲೆ ರೇಗಾಡಿದರು ಗಂಗಮ್ಮ.. "ನಾನು ತಿನ್ನಲಾರೆ.." ಎಂದು ಬಟ್ಟಲು ತೊಳೆಯುವ ಜಾಗದಲ್ಲಿ ಚೆಲ್ಲಿ ನಡೆದರು.ಕೂಡಲೇ ಆಶ್ರಮದ ಮೇಲ್ವಿಚಾರಕಿ  ಭಾರತಿ ಮೇಡಂಗೆ ದೂರು ಹೋಯಿತು.ಅವರು ಬರಲು ಹೇಳಿದರು.
ಗಂಗಮ್ಮ  ತನ್ನ ಎಂದಿನ ರೌದ್ರಾವತಾರ ತಳೆದರು.ಭಾರತಿ ಮೇಡಂ ತಾಳ್ಮೆಯಿಂದ ತಿಳಿಹೇಳಿ ಇಲ್ಲಿನ ನಿಯಮಾವಳಿಗಳನ್ನು ತಿಳಿಸಿದರು.ಇನ್ನೆಂದೂ ಈ ರೀತಿ ನಡೆದುಕೊಳ್ಳಬಾರದೆಂದು ಎಚ್ಚರಿಸಿದರು.

           ಭಾರತಿ ಮೇಡಂ ಸಮಾಧಾನದಿಂದ ಮಾತನಾಡಿದ್ದು ಕಂಡು ಗಂಗಮ್ಮ ಇವರು ಸುಶೀಲಳಂತೆ...ಪಾಪ..ನನ್ನನ್ನು ಏನೂ ಮಾಡಲಾರರು ಎಂದುತಿಳಿದರು .ಮರುದಿನ ಬೆಳಿಗ್ಗೆ ಚಪಾತಿ ಮಾಡಿದ್ದರು.ನಾರು ಚಪಾತಿ.ಗಟ್ಟಿಯಾಗಿತ್ತು .ಎರಡೇ ನೀಡಿದ್ದರು.ಗಂಗಮ್ಮ ರೇಗಿದರು...ಅದನ್ನರಿತ ಮೇಡಂ ಈ ರೀತಿ ಒಬ್ಬರು ನಿಯಮ ಉಲ್ಲಂಘಿಸಿದರೆ ಎಲ್ಲರೂ ಅದನ್ನೇ ಅನುಸರೀಸುತ್ತಾರೆ.ಈಗಲೇ ಹದ್ದುಬಸ್ತಿನಲ್ಲಿಡಬೇಕು ಎಂದು ಗಂಗಮ್ಮಳನ್ನು ಕರೆದರು. ಆಕೆಯನ್ನು ಏನೊಂದೂ ವಿಚಾರಿಸುವ ಗೊಡವೆಗೇ ಹೋಗದೆ ..ಇಲ್ಲಿ ಬನ್ನಿ ಎಂದು ಪಕ್ಕದ ಕೋಣೆಗೆ ಕರೆದೊಯ್ದರು. ಹೊರಗಿನಿಂದ ಚಿಲಕ ಹಾಕಿದರು.ಗಂಗಮ್ಮ ಕೂಗಿಕೊಂಡರೂ ತೆರೆಯಲೇ ಇಲ್ಲ.

             ಕತ್ತಲೆಯ ಕೋಣೆ.ಮಸುಕಾದ ಬೆಳಕು ಬೆಳಗಿನ ಹೊತ್ತು ಬರುತಿದೆ.. ಫ್ಯಾನ್ ಇಲ್ಲ.. ಒಂದು ಟಾಯ್ಲೆಟ್ ಇದೆ... ಬಿಟ್ಟರೆ ಬೇರೇನೂ ಇರಲಿಲ್ಲ.. ಬೆಳಿಗ್ಗೆ ಸಂಜೆ ಆಯಾ ನೀರು ತಂದಿತ್ತು ಪುನಃ ಬಾಗಿಲೆಳೆದುಕೊಳ್ಳುತ್ತಿದ್ದರು..ಗಂಗಮ್ಮನ ಶರೀರಕ್ಕೆ ನಿತ್ರಾಣ ಆವರಿಸಿತು.ಬರೀನೆಲದ ಮೇಲೆ ಮಲಗಿ ಕಣ್ಣೀರುಸುರಿಸುತ್ತಿದ್ದರು. ಹೊತ್ತು ಹೊತ್ತಿಗೆ ಬಿಸಿ ಬಿಸಿ ಕಾಫಿ ಕೊಡುತ್ತಿದ್ದ ಸುಶೀಲಳ ನೆನಪಾಯಿತು.ಮನೆಯ ರುಚಿಯಡುಗೆಯಲ್ಲೂ ಕಲ್ಲು ಹುಡುಕುತ್ತಿದ್ದ ತನ್ನ ಬುದ್ಧಿಯನ್ನು ತಾನೇ ಹಳಿದುಕೊಂಡರು.

          ಮಾರನೇ ದಿನ ಒಂದು ಚಪಾತಿ ಒಂದು ಸೌಟು ಗೊಜ್ಜು ಕೊಟ್ಟು ಆಯಾ ನಡೆದಿದ್ದಳು.. ಇಡೀ ದಿನ ಮತ್ತೇನೂ ಇರಲಿಲ್ಲ. ಸ್ನಾನ ಮಾಡಿ ಬಟ್ಟೆ ಬದಲಿಯಿಸೋಣ ಎಂದರೆ ಬಟ್ಟೆ ಬೇರೆ ಕೋಣೆಯಲ್ಲಿದೆ..ಹೀಗೆ ಒಂದು ವಾರವಾದಾಗ ಭಾರತಿ ಮೇಡಂ ಬಂದರು."ಏನು ಗಂಗಮ್ಮ ಇನ್ನಾದರೂ ಹೊಂದಾಣಿಕೆ ಮಾಡಿಕೊಳ್ಳುತ್ತೀಯೋ ಇಲ್ಲವೋ ಎಂದರು."..ಇಳಿದು ಹೋದ ಗಂಗಮ್ಮ ಕ್ಷೀಣ ಧ್ವನಿಯಿಂದ "ಹೂಂ.."ಎಂದರು..

         ಗಂಗಮ್ಮನ ದೇಹದ ಕಸುವು ಕ್ಷೀಣಿಸಿತು.ಒಬ್ಬೊಬ್ಬರಿಗೂ ಒಂದೊಂದು ಕೆಲಸ ಹಂಚುತ್ತಿದ್ದರು.ಗಂಗಮ್ಮನಿಗೆ ಕಾಲೊರಸುವ ಬಟ್ಟೆ ಮಾಡಲು ನಿಯೋಜಿಸಿದರು.ಬೆಳಗಿನಿಂದ ಸಂಜೆಯವರೆಗೆ ಅದೇ ಕೆಲಸ.ಕೂತೂ ಕೂತೂ ಬೆನ್ನು, ಸೊಂಟ ನೋವು ಬರುತ್ತಿತ್ತು.ಅತಿಯಾದ ಅನಾರೋಗ್ಯ ಇದ್ದರೆ ಮಾತ್ರ ವಿನಾಯಿತಿ.. ಮನೆಗೆ ಸುಶೀಲ ಬಂದ ನಂತರ ಕೆಲಸ ಮಾಡುವುದನ್ನು ಬಿಟ್ಟು ರೇಗಾಟ ಮಾತ್ರ ಮಾಡುತ್ತಿದ್ದ ಗಂಗಮ್ಮನಿಗೆ  ನಿಧಾನವಾಗಿ ಎಲ್ಲಾ ಅಭ್ಯಾಸವಾಯಿತು.ಕೆಲಸ ಮಾಡುತ್ತಾ ಮನೆಯ ವಿಷಯ ಮಾತಾಡುವುದಾಗಲಿ...ದೂರುವುದಾಗಲೀ ಮಾಡಬಾರದೆಂಬ ನಿಯಮವಿತ್ತು.ಪಾಲಿಸದಿದ್ದರೆ ಕಠಿಣ ಶಿಕ್ಷೆಯಿತ್ತು . ಒಮ್ಮೆ ಶಿಕ್ಷೆ ಅನುಭವಿಸಿದ ಗಂಗಮ್ಮ ಈಗ ಬಹಳ ವಿಧೇಯಳಾಗಿದ್ದಳು.

          ಒಂದು ದಿನ ಡಾ|| ವಿಜಯಾ ಅವರಿಂದ ವೃದ್ಧಾಶ್ರಮದಲ್ಲಿ  ವ್ಯಕ್ತಿತ್ವ ವಿಕಸನ ಶಿಬಿರ ಆಯೋಜಿಸಲಾಗಿತ್ತು. ಹೇಳುವ ಅಂಶಗಳನ್ನು ಗಂಗಮ್ಮ ಕಿವಿಗೊಟ್ಟು ಕೇಳುತ್ತಿದ್ದರು.ತಾವು ಮಾಡುತ್ತಿದ್ದ ತಪ್ಪುಗಳೆಲ್ಲ ಈಗ ಅರಿವಾಗಿತ್ತು.ತಮ್ಮನ್ನು ತಾವೇ ತಿದ್ದಿಕೊಳ್ಳುವ ಪ್ರಯತ್ನ ಮಾಡಿದರು.ಎಲ್ಲರನ್ನೂ ದ್ವೇಷಿಸುವ ಬದಲು ಪ್ರೀತಿಸಲು ಆರಂಭಿಸಿದರು.ದಿನದಲ್ಲಿ ಆಗಾಗ ಸುಶೀಲ,ರಾಮಭದ್ರ ನನ್ನ ಕುಟುಂಬದ ಸದಸ್ಯರು ಎಷ್ಟು ಒಳ್ಳೆಯವರು ಎಂದು ಭಾವಿಸುತ್ತಿದ್ದರು.ಒಳ್ಳೆಯ ಸಂತಸದ ಘಟನೆಗಳ ಮೆಲುಕುಹಾಕತೊಡಗಿದರು..


           ಮತ್ತೊಂದು ತಿಂಗಳು ಯೋಗರತ್ನ ರಾಧಾಕೃಷ್ಣ ಅವರು ಬಂದು ಯೋಗಾಸನ, ಯೋಗಮುದ್ರೆಗಳ  ಬಗ್ಗೆ ಮಾಹಿತಿ ನೀಡಿದರು.ಗಂಗಮ್ಮ ಬಹಳ ಆಸಕ್ತಿಯಿಂದ ಕೇಳಿ ಪುಸ್ತಕದಲ್ಲಿ ನೋಟ್ ಮಾಡಿಕೊಂಡು ದಿನವೂ ಅನುಸರಿಸತೊಡಗಿದರು . ಆರೋಗ್ಯದಲ್ಲಿ ಸುಧಾರಣೆ ಕಂಡರು.ಚಿಂತನಾ ಶೈಲಿಯೂ ಬದಲಾಯಿತು.


           ಮುಂದಿನ ತಿಂಗಳ ಚಟುವಟಿಕೆ ನಾಟಕ ತಂಡ ನಾಟಕವೊಂದನ್ನು ಹೇಳಿಕೊಟ್ಟು ಸಮಾರಂಭವೊಂದರಲ್ಲಿ ಪ್ರದರ್ಶನ ಮಾಡಲು ಅವಕಾಶ ನೀಡಿತ್ತು.ಗಂಗಮ್ಮನಿಗೆ ಸೊಸೆಯ ಪಾತ್ರವನ್ನು ನೀಡಲು ಭಾರತಿ ಮೇಡಂ ಸೂಚಿಸಿದರು.ಖಡಕ್ ಅತ್ತೆಯ ಪಾತ್ರದಲ್ಲಿ ಹಿರಿಯಮಹಿಳೆಯಿದ್ದರು. ಸೊಸೆಯು ಅತ್ತೆಯ ರೇಗುವಿಕೆಯಿಂದ ಅಳುವ ಸನ್ನಿವೇಶ ಬಂದಾಗ ಗಂಗಮ್ಮನಿಗೆ ತನ್ನ ಸೊಸೆ ಸುಶೀಲಳನ್ನು ನೆನೆದು ಸಹಜವಾಗಿ ಅಳುವೇ ಬರುತ್ತಿತ್ತು.ತಾನೆಷ್ಟು ಕಾಟಕೊಟ್ಟಿದ್ದೆ ಎಂದು ಮರುಗುತ್ತಲೇ ಅಳುತ್ತಿದ್ದರು.

            ಹೀಗೇ ತಿಂಗಳಿಗೊಂದು ವಿಶಿಷ್ಟ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ದಿನವೂ ಬೆಳಗಿನಿಂದ ಸಂಜೆಯ ತನಕ ಕಾಲೊರೆಸುವ ಬಟ್ಟೆ ಹೆಣೆಯುತ್ತಾ ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಂಡು ಬದುಕುತ್ತಿದ್ದರು.


             ಮನೆಯಲ್ಲಿ ಚಿನ್ಮಯಳ ಸೀಮಂತವಾಗಿ ಕೆಲವೇ ದಿನಗಳಲ್ಲಿ ಸಾಧನ ಮುದ್ದಾದ ಮಗುವಿಗೆ ಜನ್ಮನೀಡಿದಳು.ಸುಶೀಲ ಬಾಣಂತನ ಮಾಡಿದಳು.ಅತ್ತೆಯ ರೇಗಾಟ ಇಲ್ಲದ್ದರಿಂದ ಮನೆಯ ವಾತಾವರಣ ಶಾಂತವಾಗಿತ್ತು.ಸುಶೀಲಳ ಮುಟ್ಟಿನ ಸಮಯದ ಅನಾರೋಗ್ಯದ ಸಂದರ್ಭದಲ್ಲಿ ನೆರೆಮನೆಯ ಸುಂದರಮ್ಮ ನೆರವಾದರು..ಆಕೆ ಗಂಗಮ್ಮನವರು ಇದ್ದರಂತೂ ನಾನು ಬರುತ್ತಿರಲಿಲ್ಲ ಎಂದು ಆಗಾಗ ಹೇಳುತ್ತಿದ್ದುದು ಅವರ ಕುಖ್ಯಾತಿಯನ್ನು ಸಾರಿಹೇಳುತ್ತಿತ್ತು.ಮಗುವಿಗೆ ಮೂರು ತಿಂಗಳಾಗುತ್ತಿದ್ದಂತೆ ಸಾಧನಾಳನ್ನು ಗಂಡನ ಮನೆಗೆ ಕಳುಹಿಸಿಕೊಟ್ಟರು.

              ಇನ್ನು ಸುಶೀಲಳ ಗಮನ ಸೊಸೆ ಚಿನ್ಮಯಳ ಮೇಲಿತ್ತು.ಚಿನ್ಮಯಾ ಆಗಲೇ ಹೆರಿಗೆರಜೆಯನ್ನು ಪಡೆದುಕೊಂಡಿದ್ದಳು.ಅವಳೂ ಒಂದುಶುಭದಿನ ಮುದ್ದಾದ ಮಗುವಿಗೆ ಜನ್ಮವಿತ್ತಳು.ಅನಾರೋಗ್ಯ ಪೀಡಿತೆ ಅಮ್ಮ ಹಾಗೂ ಅತ್ತೆ ಸುಶೀಲ ಇಬ್ಬರೂ ಜೊತೆಯಾಗಿ ನಂದನವನ ಮನೆಯಲ್ಲೇ ಬಾಣಂತನ ಮುಗಿಸಿದರು..ಮುದ್ದುಮಗುವಿನ ಆಗಮನದಿಂದ ಮನೆಯು ಕಳೆಗಟ್ಟಿತ್ತು.ಮೂರುತಿಂಗಳ ಬಳಿಕ ಒಂದು ತಿಂಗಳು ತವರಿನಲ್ಲಿದ್ದು ಬಂದಳು ಚಿನ್ಮಯಾ..

             ಇಬ್ಬರ ಬಾಣಂತನವೂ ಮುಗಿಯಿತು.. ಸುಶೀಲಾ ಗಂಡನಲ್ಲಿ "ರೀ.. ಇನ್ನು ಅತ್ತೆಯನ್ನು ಕರೆದುಕೊಂಡು ಬನ್ನಿ.. ಅವರಿಗೆ ಬೇಕಾದಂತೆ ಮಾಡಿಕೊಡುತ್ತಾ ಮಗುವನ್ನೂ ನೋಡಿಕೊಳ್ಳಬಲ್ಲೆ ..ಚಿನ್ಮಯಾ ಕೆಲಸಕ್ಕೆ ಹೋದರೂ ಕೂಡ ನಿಭಾಯಿಸಬಲ್ಲೆ...ಪಾಪ..ಹಿರಿಜೀವ ಪಟ್ಟಣದಲ್ಲಿ ಎಷ್ಟು ಕಷ್ಟ ಅನುಭವಿಸಿತೋ ಎನೋ... ಒಮ್ಮೆಯೂ ಮಾತನಾಡಿಸಲೂಆಗಿಲ್ಲ ..". ಎಂದಳು..

             ವೀರಭದ್ರನಿಗೆ ಕರೆಮಾಡಿದರು ರಾಮಭದ್ರ.ಅವನು ಅದೂ..ಇದೂ.. ಎಂದು ರಾಗ ಎಳೆದಾಗ ವಿಷಯ ಏನೋ ಬೇರೆ ಇದೆ ಎಂದು ಅರಿವಾಯಿತು.ಸರಿಯಾಗಿ ವಿಚಾರಿಸಿಕೊಂಡಾಗ ತಿಳಿಯಿತು ಅಮ್ಮ ವೃದ್ಧಾಶ್ರಮದಲ್ಲಿದ್ದಾರೆಂದು.ರಾಮಭದ್ರ ಸುಶೀಲ ಇಬ್ಬರೂ ನೊಂದುಕೊಂಡರು...ಛೇ... ಎಂತಹ ಅಚಾತುರ್ಯ ನಡೆದುಹೋಯಿತು.ಮಗನ ಮನೆಯಲ್ಲಿ ಆರಾಮವಾಗಿ ಇದ್ದಾರೆ ಎಂದು ನಾವು ತಿಳಿದರೆ... ಅವರು ವೃದ್ಧಾಶ್ರಮಕ್ಕೆ ಸೇರಿಸಿದ್ದಾರೆ.ಬಾಣಂತನದ ಹೆಸರಿನಲ್ಲಿ ಹಿರಿಯರನ್ನು ಮನೆಯಿಂದ ಹೊರದಬ್ಬಿದ  ಪಾಪಕಾರ್ಯ ನಮ್ಮಾಂದಾಯಿತಲ್ಲ...ಎಂದು ಅದೇ ದಿನ ರಾಮಭದ್ರ ತಮ್ಮನ ಮನೆಗೆ ಹೊರಟರು.ತಮ್ಮನ ಮನೆತಲುಪಿ ಅಮ್ಮನ ವಿಚಾರ ತಿಳಿದುಕೊಂಡರು.

             ಇಲ್ಲಿ ಅವರು ನಡೆದುಕೊಳ್ಳುತ್ತಿದ್ದ ವಿಚಿತ್ರ ವರ್ತನೆಯನ್ನು ತಿಳಿಹೇಳಿದ ವೀರಭದ್ರ.. ಹಾಗೆಂದು ವೃದ್ಧಾಶ್ರಮಕ್ಕೆ ಸೇರಿಸುವ ಬದಲು ನನಗೆ ಹೇಳಿದ್ದರೆ ಬಂದು ಕರೆದೊಯ್ಯುತ್ತಿದ್ದೆ ಎಂದ ಅಣ್ಣ.
ವೀರಭದ್ರ.. "ಅಣ್ಣಾ.. ವೃದ್ಧಾಶ್ರಮ ಎಂದರೆ ಹಿರಿಯರ ಮನೋವಿಕಾಸಕ್ಕೆ ಅನುಕೂಲ ತಾಣ.ಹಲವಾರು ವರ್ಷಗಳಿಂದ ಸಣ್ಣಪುಟ್ಟ ವಿಷಯಗಳಿಗೂ ರೇಗುತ್ತಿದ್ದ ತಾಯಿ ಅದನ್ನೇ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ.ಅದು ತಪ್ಪು ಎಂದು ಅವರಿಗೆ ತೋರುತ್ತಿಲ್ಲ.ವೃದ್ಧಾಶ್ರಮವೆಂದರೆ ಶಾಲೆಯಂತೆ.ಹಿರಿಯರ ತಪ್ಪನ್ನು ತಿದ್ದಿ ವ್ಯಕ್ತಿತ್ವ ವಿಕಸನಕ್ಕೆ ಅನುವುಮಾಡಿಕೊಡುತ್ತದೆ.ಅಮ್ಮ ಈಗ ತುಂಬಾ ಬದಲಾಗಿದ್ದಾರೆ.ಮನಸ್ಸು ಹಿಡಿತದಲ್ಲಿದೆ.ಪ್ರೀತಿಯಿಂದ ಬಹಳ ಶಾಂತವಾಗಿ ಮಾತನಾಡುತ್ತಿದ್ದಾರೆ.ಮೊದಲಿನಂತೆ ಮಾತಿನಲ್ಲಿ ಮೂದಲಿಕೆ,ತಪ್ಪನ್ನೇ ಹುಡುಕಿ ಎತ್ತಿ ಆಡಿ ಚುಚ್ಚುವಿಕೆ ಇಲ್ಲ. ಸುಶ್ರಾವ್ಯವಾಗಿ ದೇವರ ಭಜನೆಗಳನ್ನು ಹಾಡುತ್ತಿದ್ದಾರೆ.. ನಾವು ಪ್ರತೀ ತಿಂಗಳು ಒಂದು ಭಾನುವಾರ ಹೋಗಿ ಅವರ ಜೊತೆ ಬೆಳಗಿನಿಂದ ಸಂಜೆಯವರೆಗೆ ಇದ್ದು ಬರುತ್ತೇವೆ."

             ಆದರೂ ರಾಮಭದ್ರನ ಮನಸ್ಸು ಅಮ್ಮನನ್ನು ವೃದ್ಧಾಶ್ರಮದಲ್ಲಿ ಬಿಡಲು ಒಪ್ಪಲಿಲ್ಲ.ತಮ್ಮನೊಂದಿಗೆ ಆಶ್ರಮಕ್ಕೆ ತೆರಳಿದ.ಅಮ್ಮ ಕಾಲೊರೆಸು ತಯಾರಿಯಲ್ಲಿ ಮಗ್ನರಾಗಿದ್ದರು. ಆಯಾ ಗಂಗಮ್ಮನನ್ನು ಕರೆದರು.ಹೊರಗೆ ಬಂದ ಗಂಗಮ್ಮ ಮಗನನ್ನು ಪ್ರೀತಿಯಿಂದ ಮಾತನಾಡಿಸಿದರು. ಮಕ್ಕಳ ಹೆರಿಗೆ ಬಾಣಂತನದ ಬಗ್ಗೆ ವಿಚಾರಿಸಿಕೊಂಡರು.ಮಾತಿನಲ್ಲಿ ಇರುವ ಶಾಂತತೆಯನ್ನು ರಾಮಭದ್ರ ಗಮನಿಸಿದನು.ಮನೆಗೆ ಕರೆದೊಯ್ಯಲು ಬಂದಿದ್ದೇನೆ ಎಂದ ಮಗನಲ್ಲಿ."ಇಲ್ಲ ನಾನು ಬರುವುದಿಲ್ಲ.ಇಲ್ಲಿಯೇ ಇರುತ್ತೇನೆ..ಈ ಪರಿಸರ ನನಗೆ ಹಿಡಿಸಿದೆ "ಎಂದರು.ಮೇಲ್ವಿಚಾರಕಿಯಲ್ಲಿ ಮಾತನಾಡಿದರು.. ಮನೆಗೆ ಹೋಗುವುದು ಅವರ ಇಷ್ಟ.ನಮ್ಮದೇನೂ ಅಭ್ಯಂತರವಿಲ್ಲ.ಎಂದರು.ಆದರೆ ಗಂಗಮ್ಮ ಮಾತ್ರ ಬರುವ ಆಸಕ್ತಿ ತೋರಲಿಲ್ಲ.ಅಣ್ಣ ತಮ್ಮ ಇಬ್ಬರೂ ಹಾಗೇ ಮರಳಿದರು .


             ಅತ್ತೆ ಬಾರದ್ದನ್ನು ಕಂಡು ಸುಶೀಲ ನೊಂದುಕೊಂಡಳು.ಇದನ್ನರಿತ ಚಿನ್ಮಯ ಅತ್ತೆ.. "ನಾನು ಉದ್ಯೋಗಕ್ಕೆ ಪುನಃ ಸೇರದೆ ಮಗುವನ್ನು ನೋಡಿಕೊಳ್ಳುತ್ತೇನೆ .ಮಗು ದೊಡ್ಡದಾದ ಮೇಲೆ ಉದ್ಯೋಗಕ್ಕೆ ಹೋಗುತ್ತೇನೆ.ನಿಮಗೆ ಅಜ್ಜಿಯನ್ನು ನೋಡಿಕೊಳ್ಳಲು ಆಗ ಅನುಕೂಲ" ಎಂದು ಹೇಳಿದಳು.ಎಲ್ಲ ವಿಷಯವನ್ನೂ ಮನೆಯವರೊಂದಿಗೆ ಹಂಚಿಕೊಂಡ ರಾಮಭದ್ರ.ಎಲ್ಲರೂ ಸೇರಿ ಒಂದು ನಿರ್ಧಾರಕ್ಕೆ ಬಂದರು.ಮುಂದಿನ ಭಾನುವಾರ ಎಲ್ಲರೂ ವೃದ್ಧಾಶ್ರಮಕ್ಕೆ ತೆರಳಿ ಅಜ್ಜಿಯನ್ನು ಮನವೊಲಿಸಿ ಕರೆದುಕೊಂಡು ಬರೋಣ ಎಂದು.. ಸಾಧನಾ ಅವಳ ಗಂಡ ಪುಟ್ಟ ಮಗು, ಸಹನಾಳ ಕುಟುಂಬ ಹಾಗೂ ಮನೆಯವರೆಲ್ಲರೂ ಜೊತೆಯಾಗಿ ವೃದ್ಧಾಶ್ರಮಕ್ಕೆ ಹೊರಟರು.


           ಆ ಭಾನುವಾರ ವೃದ್ಧಾಶ್ರಮದ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ಆಯೋಜಿಸಿ ದ್ದರು.ಅಲ್ಲಿಗೆ ಹೋಗಿ ಕಾರಿನಿಂದ ಇಳಿಯುತ್ತಿದ್ದಂತೆ ವೇದಿಕೆಯಲ್ಲಿ ಕುಳಿತು ಧ್ವನಿವರ್ಧಕದಲ್ಲಿ ಸುಶ್ರಾವ್ಯವಾಗಿ ಹಾಡುತ್ತಿದ್ದ ಅತ್ತೆಯನ್ನು ಕಂಡು ಸುಶೀಲ ತನ್ನ ಕಣ್ಣನ್ನೇ ನಂಬದಾದಳು.ಸಚಿನ್ ಚಿನ್ಮಯಾ ಮಗುವನ್ನು ಎತ್ತಿಕೊಂಡು ನಿಂತಲ್ಲೇ ಬೆರಗಾದರು.ಸಾಧನಾ ಸಹನಾ ಅಜ್ಜಿ ಎಷ್ಟು ಇಂಪಾಗಿ ಹಾಡುತ್ತಿದ್ದಾರೆ ಎಂದು ಮೆಚ್ಚಿಕೊಂಡರು.


           ಕಾರ್ಯಕ್ರಮ ಮುಗಿದ ಬಳಿಕ ಭಾರತಿ ಮೇಡಂ ಅವರಲ್ಲಿ ರಾಮಭದ್ರ ಮಾತನಾಡಿ ನಾವೆಲ್ಲರೂ ಜತೆಯಾಗಿ ಬಂದಿದ್ದೇವೆ.ಅಮ್ಮನನ್ನು ಮನೆಗೆ ಕರೆದೊಯ್ಯುತ್ತಿದ್ದೇವೆ..ಇಷ್ಟು ಸಮಯ ನೋಡಿಕೊಂಡು ಅವರಲ್ಲಿ ಧನಾತ್ಮಕ ಬದಲಾವಣೆಗೆ ಕಾರಣರಾದ ನಿಮಗೆ ಧನ್ಯವಾದಗಳು ಮೇಡಂ ಎಂದು ಕೈಮುಗಿದರು..


          "ಇದರಲ್ಲಿ ನಮ್ಮದೇನಿಲ್ಲ...ಇಲ್ಲಿ ಕೆಲವು ಶಿಸ್ತಿನ ನಿಯಮಗಳಿವೆ.ಪಾಲಿಸಲೇಬೇಕು .
ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ .ಇದರಿಂದ ಹಿರಿಯರಲ್ಲಿರುವ ಏಕತಾನತೆ ಮರೆಯಾಗಿ ಚೈತನ್ಯ ಮೂಡುತ್ತದೆ. ಅವನ್ನೆಲ್ಲಾ ಪಾಲಿಸಿದ ನಿಮ್ಮ ತಾಯಿಯವರಲ್ಲಿ ಸಹಜವಾಗಿಯೇ ಬದಲಾವಣೆಗಳಾಗಿವೆ...ಅವರು ಒಪ್ಪಿದರೆ ಕರೆದೊಯ್ಯಿರಿ.."ಎಂದರು..

          ತನ್ನ ಕುಟುಂಬದ ಸದಸ್ಯರನ್ನೆಲ್ಲ ಜೊತೆಯಾಗಿ ನೋಡಿದ ಗಂಗಮ್ಮನಿಗೆ ಸಂತಸವಾಯಿತು.ಪುಟ್ಟ ಕಂದಮ್ಮಗಳನ್ನು ಎತ್ತಿ ಮುದ್ದಾಡಿದರು.ತನ್ನ ಗಳತಿಯರಿಗೆಲ್ಲ ಪರಿಚಯ ಮಾಡಿಕೊಟ್ಟರು.ಮನೆಗೆ ಬರಲು ನಿರಾಕರಿಸಿದರು.ಕೊನೆಗೆ ಭಾರತಿ ಮೇಡಂ..."ನಿಮ್ಮ ಕುಟುಂಬ ನಿಮ್ಮನ್ನು ಇಷ್ಟು ಪ್ರೀತಿಸುತ್ತಿದೆ.ಹೆಮ್ಮೆಪಟ್ಟುಕೊಳ್ಳಿ .ಅವರ ಮನಸ್ಸನ್ನು ನೋಯಿಸದೆ ಹೊರಡಿ.ಇಲ್ಲಿ ಕಲಿತ ಜೀವನ ಮೌಲ್ಯಗಳನ್ನು ಮರೆಯದೆ ಬದುಕಿನಲ್ಲಿ ಅಳವಡಿಸಿಕೊಳ್ಳಿ.."ಎಂದಾಗ ಒಲ್ಲದ ಮನಸ್ಸಿನಿಂದಲೇ ಗೆಳತಿಯರಿಗೆಲ್ಲ ಬಾಯ್ ಮಾಡಿ ಹೊರಟರು..ಗೆಳತಿಯರ ಕಣ್ಣು ತೇವವಾಗಿತ್ತು.. ಭಾರತಿ ಮೇಡಂ.."ಆಗಾಗ ಬರುತ್ತಿರಿ "ಎಂದರು.ಧಾರಾಕಾರವಾಗಿ ಸುರಿಯುತ್ತಿರುವ ಕಣ್ಣೀರನ್ನು ಒರೆಸಿಕೊಂಡು ವೃದ್ಧಾಶ್ರಮದ ನೋಟ ಕಣ್ಣ ದೃಷ್ಟಿಯಿಂದ ಸರಿಯುವವರೆಗೂ ಎವೆಯಿಕ್ಕದೇ ನೋಡುತ್ತಿದ್ದರು ಗಂಗಮ್ಮ.

        ಮನೆಗೆ ಬಂದ ಗಂಗಮ್ಮ ಸಂಪೂರ್ಣ ಬದಲಾಗಿದ್ದರು.ನಾಲ್ಕೂವರೆ ಗಂಟೆಗೆ ಎದ್ದು ಮಿಂದು ಯೋಗಾಸನ ,ಧ್ಯಾನ ,ಪ್ರಾಣಾಯಾಮ, ಮುದ್ರೆಗಳನ್ನು ಮಾಡುತ್ತಿದ್ದರು.ನಂತರ ಮನೆಯ ಎಲ್ಲ ಕೆಲಸಕಾರ್ಯಗಳಲ್ಲಿ ಸುಶೀಲಳಿಗೆ ನೆರವಾಗುತ್ತಿದ್ದರು.ಮಗುವಿಗೆ ಭಕ್ತಿಗೀತೆಗಳನ್ನು ಹೇಳಿ ಮಲಗಿಸುತ್ತಿದ್ದರು .ಮನೆಯ ಪರಿಸರ ಶಾಂತವಾಗಿತ್ತು..ಪ್ರೀತಿ ತುಂಬಿತ್ತು.ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುತ್ತಿದ್ದರು.

          ಚಿನ್ಮಯ ಅತ್ತೆಯ ಬಳಿ ಬಂದು.."ಅತ್ತೆ ಈಗ ಅಜ್ಜಿ ಬದಲಾಗಿದ್ದಾರೆ..ನಿಮಗೂ ನನಗೂ ಸಹಾಯ ಮಾಡುತ್ತಿದ್ದಾರೆ.. ನೀವು ಮಗುವನ್ನು ನೋಡಿಕೊಳ್ಳುತ್ತೀರಾದರೆ ನಾನು ಉದ್ಯೋಗಕ್ಕೆ ತೆರಳುತ್ತೇನೆ.. "ಸುಶೀಲಾ ಒಪ್ಪಿಗೆಕೊಟ್ಟರು.ಎಲ್ಲರ ಬಳಿ ಚರ್ಚಿಸಿ ಚಿನ್ಮಯ ಉದ್ಯೋಗಕ್ಕೆ ಮತ್ತೆ ಸೇರುವ ನಿರ್ಧಾರ ಮಾಡಿದಳು.

        ಅಂದು ಬೆಳಿಗ್ಗೆ ಬೇಗನೆ ಕೆಲಸ ಕಾರ್ಯಗಳನ್ನು ಮಾಡಿ ಮಗುವನ್ನು ಅತ್ತೆಯ ಕೈಯಲ್ಲಿ ಕೊಟ್ಟು ಎಲ್ಲರ ಆಶೀರ್ವಾದ ಪಡೆದು ಮನೆಯಿಂದ ಹೊರಟು ಗೇಟುತೆಗೆದಳು ಚಿನ್ಮಯ.ಸಚಿನ್ ಬೈಕ್ ಸ್ಟಾರ್ಟ್ ಮಾಡಿ ಹೊರಗೆ ನಿಲ್ಲಿಸಿದ . ಗೇಟು ಹಾಕುತ್ತಿದ್ದ ಚಿನ್ಮಯಾಳಿಗೆ "ನಂದನ ವನ" ಹೆಸರು ಗೇಟಿನಲ್ಲಿ ರಾರಾಜಿಸುತ್ತಿರುವುದು ಕಂಡಿತು .. ನಸುನಕ್ಕು ...ಹೌದು..ನಮ್ಮ ಮನೆಯೀಗ ನಿಜವಾಗಿಯೂ ನಂದನವನವೇ ಎಂದುಕೊಳ್ಳುತ್ತಾ ಬೈಕೇರಿ ಕುಳಿತಳು...


    ಜೀವನದುದ್ದಕ್ಕೂ ಕಷ್ಟಗಳನ್ನು ಅವಮಾನಗಳನ್ನು ಸಹಿಸಿ ತನ್ನೊಳಗೆ ಹುದುಗಿಸಿ ತನ್ನ ಕುಟುಂಬಕ್ಕೆ ಒಲವನ್ನೇ ಧಾರೆಯೆರೆದ ಮಾತೆ ಸುಶೀಲಾಳ ಬಾಳಿನಲ್ಲಿ ಶಾಂತಿ,ಸಮಾಧಾನ ನೆಲೆಸಿತು...


✍️... ಅನಿತಾ ಜಿ.ಕೆ.ಭಟ್.
13-11-2019

ಪ್ರತಿಲಿಪಿ ಕನ್ನಡದ ಶ್ರವಣ 'ಕಥಾನಕ ಸಂಚಯನ'ಸ್ಪರ್ಧೆಯಲ್ಲಿ ಬಹುಮಾನ ಪಡೆದಿದೆ.



ಹಸಿವಿನಲ್ಲಿ ಅರಳಿದ ಪ್ರತಿಭೆ






            ನನಗೆ ಇನ್ನೂ ಚೆನ್ನಾಗಿ ನೆನಪಿದೆ.ಬೆಳಗ್ಗೆ ಬೇಗ ಎದ್ದು ಅಪ್ಪನೊಡನೆ ಹೊರಟಿದ್ದೆ.ತೊಳೆದು ಮಡಚಿ ಪೆಟ್ಟಿಗೆಯಲ್ಲಿ ಇಟ್ಟಿದ್ದ  ಒಂದು ಸಣ್ಣ ಫ್ರಾಕ್ ಧರಿಸಿದ್ದೆ.ಬಹಳ ಬಿಗಿಯುತ್ತಿತ್ತು.  ಅಪ್ಪನಲ್ಲಿ ಅಂಗಿ ಸಣ್ಣದಾಗುತ್ತದೆ ಬೇರೆ ತರಬೇಕು ಎಂದಿದ್ದರು ಅಮ್ಮ..ತಲೆಯಾಡಿಸಿದ್ದರು ಅಪ್ಪ.ಶೇವ್ ಮಾಡದೆ ಕುರುಚಲಾಗಿ ಬೆಳೆದ ಗಡ್ಡ ಅಪ್ಪನದು.. ಹೇರ್ ಕಟ್ಟಿಂಗ್ ಯಾವಾಗಲೋ ನೆನಪಾದಾಗ ಮಾಡುತ್ತಿದ್ದರು.ಬಾಯ್ತುಂಬಾ ಎಲೆ ಅಡಿಕೆ ಮೆಲ್ಲುತ್ತಿದ್ದರು.ಬರಿಗಾಲಲ್ಲೇ ನಡೆಯುತ್ತಿದ್ದರು.


          ದೊಡ್ಡದಾದ ವಸ್ತ್ರದ ಚೀಲದೊಳಗೆ ಒಂದು ಸ್ಲೇಟು ,ಒಂದು ಕಡ್ಡಿ ಮಾತ್ರವೇ ನನ್ನಲ್ಲಿ ಇದ್ದಿತು.
ನನ್ನನ್ನು ಸರಕಾರಿ ಶಾಲೆಗೆ ಸೇರಿಸಿದ ಅಪ್ಪ ನನಗೆ ಚೆನ್ನಾಗಿ ಓದಬೇಕು ಎಂದು ಹೇಳಿ ತೆರಳಿದ್ದರು.ಅಪ್ಪ ತೆರಳಿದ ದಾರಿಯನ್ನೇ ಎಷ್ಟೋ ಹೊತ್ತು ನೋಡುತ್ತಾ ಕಣ್ಣೀರು ಸುರಿಸುತ್ತಾ ನಿಂತಿದ್ದೆ.ನನ್ನ ತರಗತಿಯ ಬೇರೆ ವಿದ್ಯಾರ್ಥಿಗಳ ಜೊತೆ ಅವರಮ್ಮ ಬಂದಿದ್ದರು.ಅಳುವ ಮಕ್ಕಳನ್ನು ತಲೆನೇವರಿಸಿ ಸಮಾಧಾನಪಡಿಸಿ ತೆರಳುತ್ತಿದ್ದರು.ನನಗೂ ನನ್ನಮ್ಮ ಬಂದಿದ್ದರೆ ಚೆನ್ನಾಗಿತ್ತು ಎಂದು ಅನಿಸಿತ್ತು.ಆದರೂ ಅವರು ಬರಲು ಸಾಧ್ಯವಾಗದ ಸ್ಥಿತಿಯಲ್ಲಿ ಇದ್ದಾರೆ ಎಂಬುದನ್ನು ಅರಿತಿದ್ದೆ.

  ಎಲ್ಲರಿಗೂ ಬಣ್ಣಬಣ್ಣದ ಸೊಗಸಾದ ಬ್ಯಾಗ್ ಗಳು,ಬೆಳ್ಳಗಿನ ಕಾಗದದಲ್ಲಿ ಸುಂದರವಾಗಿ ಚಿತ್ರವನ್ನು ಮುದ್ರಿಸಿದ ಪುಸ್ತಕಗಳಿದ್ದವು .ನನ್ನ ಬಳಿ ಅವು ಯಾವುವೂ ಇರಲಿಲ್ಲ.ಬೆಂಚಿನ ಒಂದು ಮೂಲೆಯಲ್ಲಿ ಮುದುಡಿ ಕುಳಿತಿದ್ದೆ.ಅಧ್ಯಾಪಕರು ಹೇಳುತ್ತಿದ್ದ ಪ್ರತಿಮಾತೂ ನನ್ನ ತಲೆಯೊಳಗೆ ಭದ್ರವಾಗಿ ಕುಳಿತಿತ್ತು.ಮಧ್ಯಾಹ್ನ ಎಲ್ಲರೂ ಬುತ್ತಿ ಉಣ್ಣುತ್ತಿದ್ದರು.ನಮ್ಮ ಮನೆಯಲ್ಲಿ ಬುತ್ತಿ ಪಾತ್ರವೇ ಇರಲಿಲ್ಲ.ನಾನು ದಿನವೂ ಒಂದು ಮೈಲು ನಡೆದು ಮಳೆ, ಚಳಿ, ಬಿಸಿಲು ಎನ್ನದೇ ಮಧ್ಯಾಹ್ನ ಮನೆಗೆ ಬಂದು ಉಪ್ಪು ಗಂಜಿ... ಇದ್ದರೆ ಉಪ್ಪಿನಕಾಯಿ ಇಲ್ಲದಿದ್ದರೆ ಇಲ್ಲ... ಉಂಡು ತೆರಳುತ್ತಿದ್ದೆ..ಪುಟ್ಟ ಪಾದಗಳು ನಡೆದು ,ಓಡಿ ನೋಯುತ್ತಿದ್ದವು.ಮೆಲ್ಲನೆ ನಡೆದರೆ ನಾನು ಶಾಲೆ ತಲಪುವ ವೇಳೆ ಶಾಲೆಯ ಗಂಟೆ ಬಾರಿಸುತ್ತಿತ್ತು.


ಹೀಗೆ ನನ್ನ ಶಾಲಾಜೀವನ ನಡೆಯುತ್ತಿದ್ದಂತೆ ಒಂದು ದಿನ ಮಧ್ಯಾಹ್ನ ಮನೆಗೆ ಓಡೋಡಿ ಬರುತ್ತಿದ್ದಾಗ  ಗಾಜಿನ ಚೂರು ಕಾಲನ್ನು ಹೊಕ್ಕಿತು.ಕಾಲು ಮೋಟಿಸಿಕೊಂಡು ಮನೆಗೆ ಬಂದು ಊಟಮಾಡಿ ಹೇಗೋ ಮತ್ತೆ ಶಾಲೆಗೆ ಹೋದೆ.ಅಮ್ಮ ರಜೆ ಮಾಡೆಂದರೂ ಕೇಳಲಿಲ್ಲ.ಮಾರನೆಯ ದಿನದಿಂದ ಗಾಯ ಉಲ್ಬಣವಾಗಿ ನೋವು ತಲೆಗೇರಿತ್ತು.ಚಿಕಿತ್ಸೆ ಕೊಡಿಸಲು ಅಪ್ಪ ಮನೆಯಲ್ಲಿಲ್ಲ.ನನ್ನ ಅಪ್ಪ ಅಡುಗೆಭಟ್ಟರಾಗಿದ್ದರು.ಒಮ್ಮೆ ಮನೆಯಿಂದ ಹೊರಟರೆ ಬರುವುದು ಎರಡು ಮೂರು ದಿನವಾಗುತ್ತಿತ್ತು .ಕಾರ್ಯಕ್ರಮಗಳ ಸೀಸನ್ ಇದ್ದಾಗ ಒಂದು ವಾರ ಹತ್ತು ದಿನ ಆಗುವುದೂ ಇತ್ತು.ಅಮ್ಮನಿಗೆ ವಾತದ ಖಾಯಿಲೆ.ಮನೆಯೊಳಗೆ ನಡೆದಾಡಲೂ ಕಷ್ಟಪಡುತ್ತಿದ್ದರು .ನನ್ನನ್ನು ಚಿಕಿತ್ಸೆಗೆ ಕರೆದೊಯ್ಯಲು ಯಾರೂ ಇರಲಿಲ್ಲ.

ನಾಲ್ಕು ದಿನದವರೆಗೆ ಜೀವಹಿಂಡುತ್ತಿದ್ದ ನೋವನ್ನು ಸಹಿಸಿಕೊಂಡು ಕುಳಿತಿದ್ದೆ.ಆ ದಿನ ಅಪ್ಪ ಬರುವಾಗ ರಾತ್ರಿ ಒಂಭತ್ತು ಗಂಟೆಯಾಗಿತ್ತು.ಬಂದವರು ನನ್ನ ಕಾಲನ್ನು ನೋಡಿ ಬೇಸರಗೊಂಡು ನಡೆಯಲಾಗದ ನನ್ನನ್ನು ಎತ್ತಿಕೊಂಡು ಡಾಕ್ಟರ್ ಪ್ರಸಾದ ಮಾವನ ಮನೆಗೆ ಹೋದರು.. ಇಷ್ಟು ಜೋರಾಗುವವರೆಗೆ ಏಕೆ ಸುಮ್ಮನೆ ಕುಳಿತಿರಿ..? ಎಂದು ತಂದೆಗೇ ಜೋರು ಮಾಡಿದ ವೈದ್ಯರು ಚಿಕಿತ್ಸೆ ನೀಡಿದಾಗ ಸ್ವಲ್ಪ ನೋವು ವಾಸಿಯಾಯಿತು.ಪೂರ್ತಿ ವಾಸಿಯಾಗಲು ಒಂದು ತಿಂಗಳೇ ಬೇಕಾಯಿತು.ನಂತರವೇ ಶಾಲೆಗೆ ತೆರಳಿದೆ.

ಅಕ್ಷರ ಕಲಿಯಲು ತೆರಳುತ್ತಿದ್ದ ನನ್ನ ಪುಟ್ಟ ಪಾದಗಳಿಗೆ ರಕ್ಷಣೆ ಬೇಕಾಗಿತ್ತು.ಗೆಳತಿಯರ ಬಳಿ ಅಂದ ಚಂದದ ಚಪ್ಪಲಿಗಳಿದ್ದವು .ನಾನೂ ಅಪ್ಪನಲ್ಲಿ ಕೇಳಿದೆ.. ಅಪ್ಪಾ.. ನನಗೊಂದು ಜೊತೆ ಚಪ್ಪಲಿ ತರುತ್ತೀರಾ.. ಎಂದು ..ಅಪ್ಪ ಮೌನಿಯಾಗಿದ್ದರು.ಅಡುಗೆಗೆ ತೆರಳಿದ ಅಪ್ಪ ಇಂದು ಬರುತ್ತಾರಾ ನಾಳೆ ಬರುತ್ತಾರಾ ಎಂದು ಕಾಯುತ್ತಿದ್ದೆ.ಒಂದು ದಿನ ಬಂದರು.ಚಪ್ಪಲಿ ಇದೆಯಾ ಎಂದು ಮೊದಲು ನೋಡಿದೆ.ಇರಲಿಲ್ಲ ಕಣ್ತುಂಬಿ ಬಂತು.ತಡೆದುಕೊಂಡೆ .ನನಗಾಗ ಹವಾಯಿ ಚಪ್ಪಲಿ ತಂದರೂ ಸಾಕಾಗಿತ್ತು.ಖುಷಿಪಡುತ್ತಿದ್ದೆ...ಮನೆಯ ಕಷ್ಟದ ಪರಿಸ್ಥಿತಿ ನನಗೆ ಅರಿವಾಗಿತ್ತು..ಅಮ್ಮನ ಖಾಯಿಲೆ,ಸೋರುತ್ತಿದ್ದ ಪುಟ್ಟ ಗುಡಿಸಲಿನಂತಿದ್ದ ಮಣ್ಣಿನ ಗೋಡೆಯ ಮುಳಿಯ ಮಾಡಿನ ಮನೆ.


ಮನೆಯಲ್ಲಿ ರಾತ್ರಿ ಮಲಗುವ ಮುನ್ನ ಅಮ್ಮ  ಕುಚ್ಚಿಲಕ್ಕಿಯನ್ನು ಅನ್ನಮಾಡಲು   ಅಲ್ಯೂಮಿನಿಯಂ  ಪಾತ್ರೆಯಲ್ಲಿ ಒಲೆಯ ಮೇಲಿಟ್ಟು ಬೆಂಕಿಹಾಕುತ್ತಿದ್ದಳು.ಬೆಳಗ್ಗೆ ಗಂಜಿ ಬೆಂದಿರುತ್ತಿತ್ತು.ಅದಕ್ಕಿಷ್ಟು ಉಪ್ಪು ಸೇರಿಸಿ ಉಣ್ಣುತ್ತಿದ್ದೆವು.ಒಮ್ಮೊಮ್ಮೆ ಅಪ್ಪ ಅಡುಗೆಗೆ ತೆರಳಿದಲ್ಲಿ ಉಳಿದಿದ್ದ ಉಪ್ಪಿನಕಾಯಿ ತಂದರೆ ಅದು ಮುಗಿಯುವ ತನಕ ನಮಗೆ  ಮೃಷ್ಟಾನ್ನ ಭೋಜನವ ಸವಿದಂತೆ ಭಾಸವಾಗುತ್ತಿತ್ತು.


ಒಂದು ದಿನ ನಿತ್ರಾಣವೆಂದು ಮಧ್ಯಾಹ್ನ ಮನೆಗೆ ಬರಲು ಉದಾಸೀನ ಮಾಡಿದ್ದೆ.ಟೀಚರ್ ಗೊತ್ತಾದರೆ ಗದರಿಸುವರೆಂದು ಶಾಲೆಯ ಹಿಂಬದಿ ಕುಳಿತಿದ್ದೆ ಎಲ್ಲರದೂ ಊಟ ಆಗಲಿ ಎಂದು... ಆದರೆ ಇಂದಿರಾ ಟೀಚರ್ ಗೆ ಸುದ್ದಿ ಗೊತ್ತಾಯಿತು.. ಮಕ್ಕಳು ಉಪವಾಸ ಇರಬಾರದು.. ಎಂದು ಅವರ ಬುತ್ತಿಯಲ್ಲಿದ್ದ ದೋಸೆಯನ್ನು ಚೂರು ಸಾಂಬಾರ್ ಅನ್ನೂ ನೀಡಿದ್ದರು.. ಆಹಾ...!!ತುಪ್ಪ ಸವರಿದ ಉದ್ದಿನ ದೋಸೆಯ ರುಚಿಗೆ ಮಾರುಹೋಗಿದ್ದೆ..ಇನ್ನು ನಾಲ್ಕು ಕೊಟ್ಟರೂ ತಿನ್ನುತ್ತಿದ್ದೆ ಎನ್ನುವಷ್ಟು ಹಸಿವೆ ,ಆಸೆ ಇತ್ತು.. ಹೀಗೆ ಆಗಾಗ ಟೀಚರ್ ನನಗೆ ಆಹಾರ ಕೊಡುತ್ತಿದ್ದರು...


ಅಪ್ಪ ಕೆಲವು ಮನೆಗಳಿಗೆ ತಿಥಿಅಡುಗೆಗೆ ಹೋದರೆ ತಿಥಿಗೆ ಮಾಡಿದ ಸುಕ್ರುಂಡೆ,ಒಡೆಸುಟ್ಟವು ಕಜ್ಜಾಯಗಳನ್ನು ಮನೆಗೆ ಕೊಡುತ್ತಿದ್ದರು.ಪೂಜೆಯಿದ್ದರೆ ಜಿಲೇಬಿ,ಲಾಡು ನಾಲ್ಕು ಕಟ್ಟಿಕೊಡುತ್ತಿದ್ದರು . ಒಂದು ಸಲ ಮದುವೆ ಮನೆಯಿಂದ ಹತ್ತು ಹೋಳಿಗೆ ತಂದಿದ್ದರು .. ನಾನೂ ತಮ್ಮಾ ಎರಡು ದಿನ ತಿಂದಿದ್ದೆವು.ಮಾರನೆ ದಿನವೂ ಹೋಳಿಗೆ ಬೇಕೆಂದು ಹಠ ಹಿಡಿದಾಗ ಅಮ್ಮ ಗದರಿದ್ದರು...ಆ ಅಡಿಗೆ ಕಿಟ್ಟಣ್ಣ ಹೋಳಿಗೆ ಕಟ್ಟಿ ಜೋಳಿಗೆಗೆ ತುಂಬಿಸಿದ್ದ... ಹೇಳಿ ಎಲ್ಲರಿಂದಲೂ ಹೇಳಿಸಿಕೊಂಡರೆ ಏನು ಚಂದ ಎಂದು..ಸಮ್ಮನಾಗಿದ್ದೆ..ಪಾಪ.. ಅಪ್ಪನಿಗೆ ಹೋಳಿಗೆ ಮಾಡುವಾಗ ಮನೆಯಲ್ಲಿರುವ ಹಸಿದಿರುವ ಪುಟ್ಟ ಮಕ್ಕಳ ನೆನಪಾಗಿದ್ದಿರಬೇಕು ..ಅದಕ್ಕೇ  ಕೆಲವು ಹೋಳಿಗೆ ಮಕ್ಕಳಿಗಾಯಿತೆಂದು ಎತ್ತಿಕೊಂಡು ಬಂದಿರಬೇಕು..ಮಕ್ಕಳ ಮೇಲಿರುವ ಅಪ್ಪನ  ಮಮಕಾರ ಅಂದು ನನಗೆ ಅರಿವಾಗಿತ್ತು..


ಆಗ ನಾನು ಐದನೇ ತರಗತಿಯಲ್ಲಿದ್ದೆ.ಆರೋಗ್ಯವಿಲ್ಲದ ಅಮ್ಮನಿಗೆ ಎಲ್ಲದರಲ್ಲೂ ಸಹಾಯ ಮಾಡುತ್ತಿದ್ದೆ.ಒಂದು ಭಾನುವಾರ ಇಂದು ತಿಂಡಿಯೇ ಬೇಕೆಂದು ಹಠ ಹಿಡಿದೆ..ನಾನೇ ಮಾಡುವೆ ನೀನು ಹೇಳಿಕೊಡು ಎಂದಿದ್ದೆ..ಅಮ್ಮ ಬೆಳ್ತಿಗೆ ನೀರಿಗೆ ಹಾಕಿ ನೆನೆಸಿಟ್ಟಿದ್ದರು .ಎಷ್ಟೋ ಸಮಯದಿಂದ ಉಪಯೋಗಿಸದ ರುಬ್ಬುವ ಕಲ್ಲು ಧೂಳಿನಿಂದ ತುಂಬಿತ್ತು.ಅಮ್ಮಹೇಳಿದಂತೆ ಶುಚಿಗೊಳಿಸಿ ಅಕ್ಕಿ ಕಡೆದೆ... ಹಿಟ್ಟು ಕಷ್ಟಪಟ್ಟು ತೆಗೆದೆ.. ಅಮ್ಮ ದೋಸೆ ಮಾಡಿದಳು.ತೆಂಗಿನಕಾಯಿಯೊಂದನ್ನು ಹೇಗೇಗೋ ಕಷ್ಟದಿಂದ ಸುಲಿದೆ...ಒಡೆದೆ... ಎರಡು ತುಂಡಾಗುವ ಬದಲು ನಾಲ್ಕು ಹೋಳಾಯಿತು..ಕೆರಮಣೆಯಲ್ಲಿ ಕೆರೆದೆ... ಅದಕ್ಕೊಂದಿಷ್ಟು ಬೆಲ್ಲವನ್ನು ಸೇರಿಸಿ ಬೆಲ್ಲಕಾಯಿಸುಳಿ ಮಾಡಿದೆ..ಅಮ್ಮ ದೋಸೆಯೆರೆದು ಬಟ್ಟಲಿಗೆ ಬಡಿಸುತ್ತಿದ್ದಂತೆಯೇ ನಾನೂ ತಮ್ಮನೂ ಬೆಲ್ಲಸುಳಿಯೊಂದಿಗೆ ಗಬಗಬನೆ ತಿಂದು ಮುಗಿಸುತ್ತಿದ್ದೆವು.. ಇಬ್ಬರೂ ಹೊಟ್ಟೆ ತುಂಬಾ ತಿಂದು ತೇಗಿದ್ದನ್ನು ಕಂಡಾಗ ಅಮ್ಮನ ಕಣ್ಣಂಚಿನಲ್ಲಿ ನೀರು ಜಿನುಗಿತ್ತು.ಹರಿದು  ನೇತಾಡುತ್ತಿದ್ದ ತನ್ನ ಸೀರೆಯಂಚಿನಿಂದ ಕಣ್ಣೀರನ್ನು ಒರೆಸಿಕೊಂಡಳು..


ನಾನು ಆರನೆಯ ತರಗತಿಯಲ್ಲಿ ಓದುತ್ತಿದ್ದಾಗ ನಮ್ಮೂರಿನ ಖಾಸಗಿ ಪ್ರೌಢಶಾಲೆಯಲ್ಲಿ ಶಾರದೋತ್ಸವ ಇರುವ ವಿಷಯ ಮನೆಸಮೀಪದಲ್ಲಿರುವ ಗೆಳತಿ ಹೇಳಿದ್ದಳು.ನನಗೂ ಹೋಗಬೇಕೆಂಬ ಆಸೆ.ಅಮ್ಮನಲ್ಲಿ ಕೇಳಿದರೆ ಒಪ್ಪಲಿಲ್ಲ.ನಮಗೆ ಕರೆಯೋಲೆ ಬರದೆ ಹೋಗುವುದು ಬೇಡ..ಮತ್ತೆ ಜೊತೆಗೆ ನನಗೂ ಬರಲಾಗುವುದಿಲ್ಲ ಎಂದಿದ್ದರು..ನಮ್ಮಲ್ಲಿಗೆ ವಂತಿಗೆ ಸಂಗ್ರಹಿಸಿ ಕರೆಯೋಲೆಗಳನ್ನು ಹಂಚುವವರು ಯಾರೂ ಬರುತ್ತಿರಲಿಲ್ಲ.ಏಕೆಂದರೆ ದೇಣಿಗೆ ಕೊಡುವಷ್ಟು ಸಿರಿವಂತರು ನಾವಾಗಿರಲಿಲ್ಲ..ಆದರೂ ಹಠಹಿಡಿದು ಅಮ್ಮನನ್ನು ಒಪ್ಪಿಸಿ ಗೆಳತಿಯ ಕುಟುಂಬದೊಂದಿಗೆ ತೆರಳಿದ್ದೆ.

ಅಲ್ಲಿ ಶಾರದಾದೇವಿಗೆ ನಮಸ್ಕಾರ ಮಾಡಿ ಹೊರಗೆ ಬಂದಾಗ ಧ್ವನಿವರ್ಧಕದಲ್ಲಿ ಉದ್ಘೋಷಣೆ ಮಾಡುತ್ತಿದ್ದರು. ದುಂಡಕ್ಷರ ಸ್ಪರ್ಧೆ ಪ್ರಾಥಮಿಕ ಶಾಲಾ ಮಕ್ಕಳಿಗೆ ಸೇರುವವರು ಬನ್ನಿ ಎಂದು..ನನಗೂ ಹೋಗುವ ಆಸೆ.ಗೆಳತಿಯೊಂದಿಗೆ ತೆರಳಿ ಹೆಸರು ಕೊಟ್ಟೆ.ಎಲ್ಲರ ಬಳಿ ಪೆನ್ನು , ಅಡಿಯಲ್ಲಿ ಇಟ್ಟುಕೊಳ್ಳಲು ಕಾರ್ಡ್ ಬೋರ್ಡ್ ಇತ್ತು..ನನ್ನಲ್ಲಿ ಗೆಳತಿಯಲ್ಲಿ ಏನೂ ಇರಲಿಲ್ಲ.ಸಂಘಟಕರೇ ಒಂದು ನೀಲಿ ಷಾಯಿಯ ರೆನೋಲ್ಡ್ಸ್
ಪೆನ್ನು ಕೊಟ್ಟರು.ಬರೀ ಡೆಸ್ಕ್ ನ ಮೇಲೆ ಕಾಗದವನ್ನಿಟ್ಟು ಹೇಳುವುದನ್ನು ಶ್ರದ್ಧೆಯಿಂದ ಕೇಳಿ ಬರೆದು ಬಂದೆ..ರಾತ್ರಿಯ ಸಭಾ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ಎಂದಿದ್ದರು..ಬಹುಮಾನ ವಿಜೇತರ ಹೆಸರನ್ನು ಘೋಷಿಸುವ ಮೊದಲೇ ಮನೆಗೆ ಬರಬೇಕಾದ ಅಗತ್ಯವಿತ್ತು ಗೆಳತಿಯ ಮನೆಯವರಿಗೆ.ಮನೆಗೆ ಮರಳಿದೆವು.

ರಾತ್ರಿ ಸಭಾ ಕಾರ್ಯಕ್ರಮ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಯಕ್ಷಗಾನ ಬಯಲಾಟ ಎಲ್ಲ ಇದ್ದವು.ನನಗೆ ಹೋಗುವ ಬಯಕೆ..ನನಗೆ ಬಹುಮಾನ ಇದ್ದರೆ ಎಂದು ಸಣ್ಣ ನಿರೀಕ್ಷೆ.ಅಮ್ಮನ ಒಪ್ಪಿಗೆ ಪಡೆದು ನೆರೆಹೊರೆಯವರಲ್ಲಿ ಯಾರಾದರೂ ಹೋಗುವವರಿದ್ದಾರಾ ಎಂದು ವಿಚಾರಿಸಿದೆ.ನನ್ನ ಅದೃಷ್ಟ ಚೆನ್ನಾಗಿತ್ತು.ಇನ್ನೊಂದು ಮನೆಯ ಹೆಂಗಸರು ಜೊತೆಯಾದರು.ಹೋಗಿ ಕುಳಿತವಳಿಗೆ ಬಹುಮಾನ ವಿತರಣೆ ಯಾವಾಗ ಆರಂಭವಾಗುವುದೋ..ನನ್ನ ಹೆಸರು ಇರಬಹುದೋ ಎಂಬ ಕಾತರ...ಬಹುಮಾನ ವಿತರಣಾ ಸಮಾರಂಭ ಆರಂಭವಾಗಿ ದುಂಡಕ್ಷರ ಸ್ಪರ್ಧೆ ಪ್ರಥಮ ಬಹುಮಾನ ಪ್ರತಿಭಾ ಉಪಾಧ್ಯಾಯ ಅಂದಾಗ ವೇದಿಕೆಗೆ ನಗುನಗುತ್ತಾ ಓಡಿಕೊಂಡೇ ಹೋಗಿದ್ದೆ...ಕಣ್ಣುಗಳಲ್ಲಿ ಹೊಳಪಿತ್ತು..ಕಷ್ಟದ ಬದುಕಿಗೆ ಮೊದಲ ಗೆಲುವು ರೋಮಾಂಚನಗೊಳ್ಳುವಂತೆ ಮಾಡಿತ್ತು.ಬಹುಮಾನ ಸ್ವೀಕರಿಸಿ ಬಹುಮಾನ ನೀಡಿದ ಸಭಾಧ್ಯಕ್ಷರ ಕಾಲಿಗೆ ಬಾಗಿ ನಮಸ್ಕರಿಸಿ ವೇದಿಕೆಯ ಕೆಳಗಿಳಿದು ಬಂದೆ.ಮೊದಲು ಅಭಿನಂದನಾ ಪತ್ರವನ್ನು ಓದಿ ಕಣ್ಣಿಗೊತ್ತಿಕೊಂಡೆ . ಕವರ್ ನಲ್ಲಿ ಪುಟ್ಟ ಲೋಟ ಇರುವಂತೆ ತೋರಿತು.ಮನೆಗೆ ತೆರಳಿ ಅಮ್ಮನೆದುರೇ ಬಿಚ್ಚುವುದೆಂದು ಹಾಗೇ ಇಟ್ಟಿದ್ದೆ.


ಮಳೆಬರುವ ಸೂಚನೆಯಿತ್ತು.ಜೊತೆಗಿದ್ದವರು ಹೊರಡೋಣ ಎಂದಾಗ ಹೊರಟು ಮನೆಗೆ ತೆರಳಿದೆ..ಅಮ್ಮನ ಮುಂದೆ ಹಿಡಿದಾಗ ಅಮ್ಮನಿಗೇನು ಆನಂದ ಅಂತೀರಿ... ಇದುವರೆಗೆ ನಾನವಳ ಮುಖದಲ್ಲಿ ಅಷ್ಟು ಸಂತಸ ಎಂದೂ ಕಂಡಿರಲಿಲ್ಲ.. ಖುಷಿಯಿಂದ ನನ್ನ ತಬ್ಬಿ ಹಿಡಿದು ಹೀಗೇ ಬೆಳೆಯುತಿರು ಮಗಳೇ ಎಂದಿದ್ದಳು..ಬೆಳಗೆದ್ದವನೇ ತಮ್ಮ ಅಕ್ಕಾ..ಈ ಲೋಟದಲ್ಲಿ ನನಗೆ ಜಾಯಿ ಕುಡಿಯಬೇಕು ಅಂದಿದ್ದ..ಆದರೆ ನಮ್ಮ ಮನೆಯಲ್ಲಿ ಹಾಲು ಎಲ್ಲಿತ್ತು..ದನಸಾಕಲು ಅಮ್ಮನಿಗೆ ಸಾಧ್ಯವಿಲ್ಲ..ಅಪ್ಪ ಸಮಾರಂಭಗಳಲ್ಲಿ ಅಡುಗೆಮಾಡಿ ಎಲ್ಲರ ಹಸಿವೆ ತಣಿಸಿ ಸಿಕ್ಕ ದುಡ್ಡಲ್ಲಿ ನಮ್ಮ ಜೀವನ.. ಮನೆಯಲ್ಲಿ ಇದ್ದುದು ನಾಲ್ಕೇ ನಾಲ್ಕು ನಜ್ಜುಗುಜ್ಜಾದ ಲೋಟ.ಈ ಲೋಟ ಕಂಡು ನಮಗೆ ಹಾಲು ಕುಡಿಯುವ ಆಸೆಯಾಗಿದ್ದು ಸುಮ್ಮನೆ ಅಲ್ಲ..

ಅಪ್ಪ ಬಂದವರು ಲೋಟವನ್ನು ನೋಡಿ ಈ ಲೋಟದಲ್ಲಿ ಕುಡಿಯಲು ಪಕ್ಕದ ಕೃಷ್ಣ ಶಾಸ್ತ್ರಿಗಳ ಮನೆಯಿಂದ ದಿನವೂ ಒಂದು ಕುಡ್ತೆ ಹಾಲು ತಾ ಮಗಳೇ ಎಂದು ಹೇಳಿದ್ದರು..ಅಂದಿನಿಂದ ದಿನವೂ ಹಾಲು ಕುಡಿದವರು ನಾವು.ಒಂದುಕುಡ್ತೆ ಹಾಲಿಗೆ ಅಷ್ಟೇ ನೀರು ಸೇರಿಸಿ ಅಮ್ಮ ಕಾಯಿಸುವುದು..ಮೊದಲು ತಮ್ಮ ಕುಡಿದ ನಂತರ ಲೋಟವನ್ನು ತೊಳೆದು ನಾನು ಹಾಲು ಕುಡಿಯುತ್ತಿದ್ದೆ...

ಮುಂದೆ ಅದೇ ಖಾಸಗಿ ಪ್ರೌಢಶಾಲೆಗೆ ಎಂಟನೇ ತರಗತಿಗೆ ಸೇರಿದೆ.ಬಡತನ ವಿದ್ಯೆಗೆ ಅಡ್ಡಿ ಬರಲಿಲ್ಲ..ಮನೆಯ ಕೆಲಸಗಳನ್ನು ಮಾಡಿ ಶಾಲೆಗೆ ತೆರಳುತ್ತಿದ್ದ ನಾನು ಪ್ರೌಢಶಾಲೆಯಲ್ಲಿ ಮೊದಲಿಗಳಾಗಿ ಉತ್ತೀರ್ಣಳಾಗಿದ್ದೆ..ದತ್ತಿ ಪ್ರಶಸ್ತಿಗಳೆಲ್ಲ ಸೇರಿ ಒಂದೂವರೆ ಸಾವಿರ ರೂಪಾಯಿಗಳು ಬಹುಮಾನವಾಗಿ ದೊರೆತಾಗ ನಾನು ಆನಂದದ ಅಲೆಯಲ್ಲಿ ತೇಲಿದ್ದೆ.ನನ್ನ ಮುಂದಿನ ವಿದ್ಯಾಭ್ಯಾಸಕ್ಕೆ ದುಡ್ಡಿನ ಅವಶ್ಯಕತೆ ಇತ್ತು.ಆದರೆ ಯಾರಲ್ಲೂ ಕೈಯೊಡ್ಡಲಿಲ್ಲ.ಡಾಕ್ಟರ್ ಪ್ರಸಾದ್ ಮಾವನ ಮನೆಯಲ್ಲಿ ಅಡಿಕೆ ಸುಲಿದು ದುಡ್ಡು ಸಂಪಾದನೆ ಮಾಡಿ ಶಾಲೆಯ ಶುಲ್ಕ ಕಟ್ಟಲು ಅಪ್ಪನ ಕೈಗಿತ್ತೆ..


ಪಿಯುಸಿ ವಿಜ್ಞಾನದ ವಿದ್ಯಾರ್ಥಿನಿಯಾದೆ .. ಒಂದು ದಿನ ಗೆಳತಿ ಸುಮಾ ಗೆಳೆಯ ಗೆಳತಿಯರಿಗೆ ಇಂದು ನಾನು ಪಾರ್ಟಿ ಕೊಡುತ್ತೇನೆ..ಬಾರೇ.. ನೀನೂ ಪ್ರತಿಭಾ.. ಅಂದಿದ್ದಳು.ಅವಳಪ್ಪ ಶಿಕ್ಷಣ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದರು..ಆಮ್ಮನೂ ಸರಕಾರಿ ಶಾಲಾ ಶಿಕ್ಷಕಿ... ಅವಳಿಗೆ ಹಿಂದುಳಿದ ವರ್ಗದ ಅಡಿಯಲ್ಲಿ ವಿದ್ಯಾರ್ಥಿ ವೇತನ ಬಂದಿತ್ತು.. ಅದನ್ನು ಪಾರ್ಟಿ ಕೊಟ್ಟು ಖರ್ಚು ಮಾಡುವ ಯೋಚನೆ ಅವಳದು...ವಿದ್ಯಾರ್ಜನೆಗೆ ಆಕೆಗೆ ಸ್ಕಾಲರ್ ಶಿಪ್ ದುಡ್ಡು ಬೇಕಾಗಿರಲಿಲ್ಲ...ಸರಕಾರ ಬಡವರ ವಿದ್ಯಾಭ್ಯಾಸಕ್ಕೆ ಕೊಡುವ ಹಣವನ್ನು ಈ ರೀತಿ ಪೋಲು ಮಾಡುವುದು ನನಗೆ ಸರಿಕಾಣಲಿಲ್ಲ.ನಾನು ಪಾರ್ಟಿಗೆ ಹೋಗದೆ ಸೀದಾ ಪ್ರಸಾದ್ ಮಾವನ ಮನೆಗೆ ಬಂದೆ ಅಡಿಕೆ ಸುಲಿಯಲು..ಸಂಜೆಯ ವೇಳೆ ಮನೆಯೊಡತಿ ಕೊಟ್ಟ ಬೆಳಿಗ್ಗೆ ಎರೆದಿಟ್ಟ ಎರಡು ತೆಳ್ಳವು ದೋಸೆ (ನೀರ್ದೋಸೆ) ಒಂದು ಕಪ್ ಬಿಸಿಬಿಸಿ ಚಹಾ ಒಂದು ಸೌಟು ಸಾಂಬಾರ್ ... ಮತ್ತೆ  ಸ್ವಲ್ಪ ಕೈ ಖರ್ಚಿಗೆ ದುಡ್ಡು ಇಷ್ಟು ದೊರೆಯಿತು.ರಾತ್ರಿಯಾಗುವ ಮುನ್ನ ಅಡಕೆಸುಲಿದು ನೋಯುತ್ತಿದ್ದ ಕೈಗಳನ್ನು ಸವರಿಕೊಂಡು ಮನೆಯತ್ತ ಹೆಜ್ಜೆಹಾಕಿದೆ..ಯಾರಿಗೋ ಅಗತ್ಯವಿರುವ ವಿದ್ಯಾರ್ಥಿ ವೇತನ ಇನ್ನಾರಿಗೋ ಮೋಜು ಮಸ್ತಿ ಗೆ ಬಳಕೆಯಾಗುತ್ತಿದೆ.. ನಾನು ಬ್ರಾಹ್ಮಣ ಎಂಬ ಹಣೆಪಟ್ಟಿ ಹೊತ್ತುಕೊಂಡು ಹುಟ್ಟಿದವಳು ...ಆರ್ಥಿಕ ಸ್ಥಿತಿ ವಿದ್ಯಾರ್ಥಿ ವೇತನಕ್ಕೆ ಮಾನದಂಡವಲ್ಲ.. ಎಂಬ ನೋವು ಕಾಡುತ್ತಿತ್ತು..

ಹೀಗೆ ಕಷ್ಟಪಟ್ಟು ಓದಿ ನಾನು ಬಿಎಸ್ಸೀ, ಬಿಎಡ್ ಫೂರ್ಣಗೊಳಿಸಿದೆ...ಸರಕಾರಿ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಗೆ ಬರೆದೆ..ಮೊದಲ ಪ್ರಯತ್ನದಲ್ಲೇ ಯಶಸ್ಸು ಸಾಧಿಸಿದೆ.ಪ್ರೌಢಶಾಲೆಯೊಂದರಲ್ಲಿ ಶಿಕ್ಷಕಿಯಾದೆ .. ಒಂದು ದಿನ ನಮ್ಮ ಮನೆಗೆ ನನ್ನ ಶಾಲೆಯ ಮುಖ್ಯೋಪಾಧ್ಯಾಯರು ಪ್ರಭಾಕರ ಸರ್ ಬಂದರು.ಆ ದಿನ ತಂದೆಯೂ ಅನಾರೋಗ್ಯ ಕೆಮ್ಮು ದಮ್ಮು ಎಂದು ಮನೆಯಲ್ಲಿದ್ದರು ... ತಮ್ಮೊಂದಿಗೆ ಬಂದ ತಮ್ಮ ಮಗನನ್ನು ಪರಿಚಯಿಸಿದರು.ಬ್ಯಾಂಕ್ ನಲ್ಲಿ ಆಫೀಸರ್ ಆಗಿದ್ದಾನೆ ಎಂದರು.ಅಪ್ಪನ ಬಳಿ ಬಂದು ...ನಿಮ್ಮ ಮಗಳು ಪ್ರತಿಭಾಳ ಚುರುಕುತನ, ಕೆಲಸದಲ್ಲಿ ಶ್ರದ್ಧೆ, ಅಚ್ಚುಕಟ್ಟುತನ ನನಗೆ ಬಹಳ ಹಿಡಿಸಿದೆ.ನೀವು ಒಪ್ಪುವುದಾದರೆ ಅವಳನ್ನೇ ಮಗನಿಗೆ  ತಂದುಕೊಳ್ಳಬೇಕೆಂದಿದ್ದೇನೆ.. ಎಂದು ಹೇಳಿದರು.

ಬೇಡವೆನ್ನಲು ಮನೆಯವರಿಗೆ ಯಾವ ಕಾರಣವೂ ಇರಲಿಲ್ಲ.ನನ್ನ ಬಳಿ ತಂದೆತಾಯಿ ಕೇಳಿದಾಗ ತಲೆತಗ್ಗಿಸಿ ನಿಮ್ಮಿಷ್ಟ ಎಂದಿದ್ದೆ..ನಿಜ ಹೇಳಬೇಕೆಂದರೆ ರಾಜ್ ನನಗೆ ಮೊದಲ ನೋಟದಲ್ಲೇ ಇಷ್ಟವಾಗಿದ್ದರು.. ಆದರೆ.. ಹೇಳಲು  ನಾಚಿಕೆಯಾಗಿತ್ತು...ಆಗ ನನಗೆ... ಮದುವೆ ನನ್ನ ತಂದೆತಾಯಿಗೆ ಯಾವುದೇ ಹೊರೆಯಾಗದಂತೆ ನಡೆಯಿತು..ಮಾವ ಬಹಳ ಸರಳವಾಗಿ ಮದುವೆ ಮಾಡಿಕೊಡಿ ಸಾಕು ಎಂದಿದ್ದರು...ಮದುವೆಯ ನಂತರ ನನಗೆ ನನ್ನವರಿದ್ದ ಕಡೆಗೆ ಟ್ರಾನ್ಸ್ಫರ್ ಮಾಡಲು ಮಾವನೇ ಓಡಾಡಿದ್ದರು.

ಪಟ್ಟಣದಲ್ಲಿ ಮನೆ ಮಾಡಿಕೊಂಡೆವು.. ಅನಾರೋಗ್ಯದಿಂದ ಬಳಲುತ್ತಿದ್ದ ಅಮ್ಮನನ್ನು ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿ ಈಗ ಆರೋಗ್ಯ ಸುಧಾರಿಸಿದೆ.. ರಾತ್ರಿ ಸರಿಯಾಗಿ ನಿದ್ದೆಯಿಲ್ಲದೆ  ಒಲೆಯ ಬುಡದಲ್ಲಿ ಕೆಲಸಮಾಡುತ್ತಿದ್ದ ಅಪ್ಪನಿಗೆ ಕೆಮ್ಮು ದಮ್ಮು ಕಾಡುತ್ತಿತ್ತು.ತಜ್ಞರ ಚಿಕಿತ್ಸೆ ದಿನವೂ ಇನ್ಹೇಲರ್ ಬಳಕೆ ಅಪ್ಪನ ಆರೋಗ್ಯವನ್ನು ನಿಯಂತ್ರಣಕ್ಕೆ ತಂದಿತು.. ತಮ್ಮನನ್ನು ಇಂಜಿನಿಯರಿಂಗ್ ಓದಿಸುತ್ತಿದ್ದೇನೆ..ಅಪ್ಪ ಅಮ್ಮನಿಗೆ ಪೌಷ್ಟಿಕ ಆಹಾರ... ಅನಾರೋಗ್ಯಕ್ಕೆ ಔಷಧ.... ಕಣ್ತುಂಬಾ ನಿದ್ದೆ...ನೆಮ್ಮದಿಯ ಜೀವನ ಸಾಧ್ಯವಾಗಿಸಿದ್ದು ನನ್ನ ಅಕ್ಷರದ ಒಲವು ...


ಅಪ್ಪ ಅಮ್ಮನ ಮಡಿಲಲ್ಲಿ ನನ್ನ ಇಬ್ಬರು ಪುಟ್ಟ ಮಕ್ಕಳನ್ನು ಬಿಟ್ಟು ನಾನೂ ಪತಿಯೂ ಉದ್ಯೋಗಕ್ಕೆ ತೆರಳುತ್ತೇವೆ.ನಮ್ಮನ್ನು ಸಾಕಲು ಕಷ್ಟಪಟ್ಟ ಅಮ್ಮ ಇಂದು ಆರೋಗ್ಯದಿಂದ ಇದ್ದು ಮೊಮ್ಮಕ್ಕಳ ಲಾಲನೆ ಪಾಲನೆ ಮಾಡುತ್ತಿದ್ದಾಳೆ. ಅತ್ತೆ ಮಾವನನ್ನೂ ಅಷ್ಟೇ ಪ್ರೀತಿಯಿಂದ ಕಾಣುತ್ತೇನೆ..

ನನ್ನ ಸುದ್ದಿ ಹೇಳುತ್ತಾ ಸಮಯ ಹೋದದ್ದೇ ತಿಳಿಯಲಿಲ್ಲ...ನನಗೀಗ ಶಾಲೆಗೆ ತಡವಾಗುತ್ತಿದೆ..
ನನ್ನ ರಾಜ್  ಬೈಕ್ ಸ್ಟಾರ್ಟ್ ಮಾಡಿ ನನಗಾಗಿ ಕಾಯುತ್ತಿದ್ದಾರೆ...ಹೋಗಿ ಬರಲೇ... ಬಾಯ್...



                             ಇಂತೀ ಛಲಗಾತಿ
                                  ಪ್ರತಿಭಾ ರಾಜ್.

✍️... ಅನಿತಾ ಜಿ.ಕೆ.ಭಟ್.
13-11-2019.

ಕಥಾ ಅರಮನೆಯ 'ಅನ್ನ ಆಹಾರ 'ಥೀಂ ನಲ್ಲಿ ಪ್ರಥಮ ಬಹುಮಾನ ಗಳಿಸಿದ ಬರಹ.

ಪ್ರತಿಲಿಪಿ ಕನ್ನಡದ ' ಶ್ರವಣ ಕಥಾನಕ ಸಂಚಯನ' ಸ್ಪರ್ಧೆಯಲ್ಲಿ ಬಹುಮಾನ ಪಡೆದಿದೆ.