Tuesday, 12 November 2019

ನೋವೆಲ್ಲ ನಲಿವಾಯಿತು



        ಅಂದು ಪ್ರಗತಿ ದೇವರ ಮುಂದೆ ಐದು ನಿಮಿಷ ಪ್ರಾರ್ಥನೆ,ಧ್ಯಾನ ಮಾಡಿ ಹಣೆಯ ಮೇಲೆ ಕುಂಕುಮ ಧರಿಸಿದಳು.ದಿನನಿತ್ಯವೂ ಅಮ್ಮನ ಉಪದೇಶ ಪಾಲಿಸದೆ ಇರುವ ಪ್ರಗತಿ ಪರೀಕ್ಷಾ ದಿನವಂತೂ ಅಮ್ಮನ ಮಾತು ಮೀರುವವಳಲ್ಲ..ಅಪ್ಪಟ ದೈವಭಕ್ತೆ..ಚಿತ್ತರಂಜನ ರಾಯರು ದೇವರ ಪೂಜೆ ಮಾಡಿ ಚಾವಡಿಯಲ್ಲಿ ಪೇಪರ್ ಓದುತ್ತಾ ಕುಳಿತಿದ್ದರು.ದೇವರಮುಡಿಯಲ್ಲಿ ಗುಲಾಬಿ, ಮಲ್ಲಿಗೆ, ಸೇವಂತಿಗೆ, ಸಂಪಿಗೆ ಹೂಗಳು ಅಲಂಕರಿಸಿದ್ದವು.ಒಂದು ಕೆಂಪು ಗುಲಾಬಿ ಹೂವನ್ನು ತನ್ನ ಮುಡಿಗಿರಿಸಿ ಹೊರಬಂದಳು.ಒಮ್ಮೆ ತಿರುಗಿ ಕನ್ನಡಿಯಲ್ಲಿ ನೋಡಿದಳು.ತನ್ನ ಸೌಂದರ್ಯ,ಉದ್ದದ ಜಡೆಗೆ ತಾನೇ ಮಾರುಹೋದಳು.

    ತಿಂಡಿ ತಿಂದು ಅಪ್ಪ ಅಮ್ಮ ಇಬ್ಬರಿಗೂ ಬಾಯ್ ಮಾಡಿ ಹೊರಟಳು."ಮಗಳೇ ಆಲ್ ದ ಬೆಸ್ಟ್" ಎಂದರು ಅಪ್ಪ.. "ಇವತ್ತು ಬಯಲಾಜಿ ಎಕ್ಸಾಂ ಇರೋದು.ಚೆನ್ನಾಗಿ ಯೋಚನೆ ಮಾಡಿ ಉತ್ತರಿಸು.. ಉತ್ತಮ ಅಂಕಗಳು ದೊರೆಯಬೇಕು.ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲ "ಎಂದರು ಅಮ್ಮ ಸವಿತಾ.
"ಮಗಳೇ...ಬಯಾಲಜಿಯಲ್ಲಿ ನೂರಕ್ಕೆ ನೂರು ಅಂಕ ಪಡೆಯಬೇಕು...ನನ್ನ ಮುದ್ದು ಮಗಳು..."ಎಂದರು ಚಿತ್ತರಂಜನ ರಾಯರು.


      ಮಗಳು ಕಾಲೇಜಿಗೆ ಹೊರಡುತ್ತಿದ್ದಂತೆ ರಾಯರು ಮಡದಿಯಲ್ಲಿ "ಪ್ರಗತಿಗೆ ಫಿಸಿಕ್ಸ್ ಕೆಮಿಸ್ಟ್ರಿ ಬಯಾಲಜಿಯಲ್ಲಿ ಒಳ್ಳೆಯ ಅಂಕ ಬಂದರೆ ನಮ್ಮ ಅದೃಷ್ಟ..ಒಳ್ಳೆಯ ಮೆಡಿಕಲ್ ಕಾಲೇಜಿನಲ್ಲಿ ಸೀಟು ಸಿಗಬಹುದು..ಇಲ್ಲವೆಂದಾದರೆ ಪೇಮೆಂಟ್ ಸೀಟಿಗೆ ಎಷ್ಟು ದುಡ್ಡು ಸುರಿಯಬೇಕಾಗಬಹುದೋ ಏನೋ.. ಒಟ್ಟಿನಲ್ಲಿ ಪ್ರಗತಿಗೆ ಮೆಡಿಕಲ್ ಸೀಟು ಸಿಕ್ಕ ಮೇಲೆಯೇ ನನಗೆ ಸರಿಯಾಗಿ ನಿದ್ದೆ ಬಂದೀತು.".ಎಂದರು..

        ಪ್ರತಿಯಾಗಿ ಸವಿತಾ.. "ಹೌದು ರೀ...ಇದ್ದ ಒಬ್ಬಳೇ ಮಗಳನ್ನು ಮೆಡಿಕಲ್ ಓದಿಸಿದರೆ ನನಗೂ ಹೆಮ್ಮೆಯ ವಿಷಯ... ಎಲ್ಲದಕ್ಕೂ ದೇವರ ದಯೆ,ಆಕೆಯ ಪರಿಶ್ರಮ ಎರಡೂ ಮುಖ್ಯ... "ಎಂದು ಹೇಳಿ ಅಡುಗೆಮನೆ ಕಡೆಗೆ ನಡೆದರು.

      ರಾಯರು ತಿಂಡಿ ತಿಂದು ಎಂದಿನಂತೆ ತಮ್ಮ ಕ್ಲಿನಿಕ್ ಗೆ ಹೊರಟರು.ಸವಿತಾ ಎಂದಿನಂತೆ ಫ್ಲಾಸ್ಕ್ ನಲ್ಲಿ ಎರಡು ಲೋಟ ಕೊತ್ತಂಬರಿ ಜೀರಿಗೆ ಕಷಾಯ ತುಂಬಿಸಿ, ಒಂದೆರಡು ತಮ್ಮ ತೋಟದಲ್ಲಿ ಬೆಳೆದ ಕದಳಿ ಬಾಳೇಹಣ್ಣನ್ನು ಪ್ಲಾಸ್ಟಿಕ್ ಕವರಿನಲ್ಲಿ ತುಂಬಿಸಿ ಕಾರಿನ ಹಿಂಬದಿಯ ಸೀಟಿನಲ್ಲಿ ಇಟ್ಟರು.ರಾಯರು ಕಾರು ಚಾಲನೆ ಮಾಡುತ್ತಿದ್ದಂತೆ ಅವರ ಪ್ರೀತಿಯ ನಾಯಿ ಟಾಮಿ ಕುಂಯ್ ಕುಂಯ್ ಮಾಡಿತು.. ಯಾವತ್ತೂ ರಾಯರು ಹೊರಡುವಾಗ ಅದು ಬಾಯ್ ಮಾಡುವ ಶೈಲಿ ಹಾಗೇನೇ...

        ಚಿತ್ತರಂಜನ ರಾಯರು ಅಲೋಪತಿ ವೈದ್ಯರು.ತಮ್ಮೂರಿನಲ್ಲಿಯೇ ಕ್ಲಿನಿಕ್ ಹಾಕಿ ಜನಸೇವೆ ಮಾಡುತ್ತಿದ್ದಾರೆ.ಅವರ ಏಕೈಕ ಪುತ್ರಿ ಪ್ರಗತಿ ಈಗ ಸೆಕೆಂಡ್ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದಾಳೆ.ಮಗಳುಕೂಡ ವೈದ್ಯಕೀಯ ಕ್ಷೇತ್ರದಲ್ಲಿ ಮುನ್ನಡೆಯಬೇಕೆಂದು ದಂಪತಿಯ ಆಸೆ.ಅದಕ್ಕೆಂದೇ ಮಗಳನ್ನು ನಗರದ ಪ್ರತಿಷ್ಠಿತ ಕೋಚಿಂಗ್ ಕ್ಲಾಸ್ ಗೆ ಕೂಡ ಸೇರಿಸಿದ್ದರು.ಪ್ರಗತಿ ಸಂಗೀತ, ಭರತನಾಟ್ಯ , ಡ್ರಾಯಿಂಗ್, ಪೈಂಟಿಂಗ್ ಎಲ್ಲದರಲ್ಲೂ ಎತ್ತಿದ ಕೈ.


        ಚಿತ್ತರಂಜನ ರಾಯರು ಬಂದ ರೋಗಿಗಳನ್ನೆಲ್ಲ ಮುತುವರ್ಜಿಯಿಂದ ಪರೀಕ್ಷೆ ಮಾಡಿ ಔಷಧೋಪಚಾರ ನೀಡುತ್ತಿದ್ದರು.ದುಡ್ಡಿಗಾಗಿಯೇ ವೃತ್ತಿ ಎಂದು ತಿಳಿಯದೆ ಸೇವಾಮನೋಭಾವವನ್ನು ಬೆಳೆಸಿಕೊಂಡಿದ್ದರು.ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿ  ಸತ್ಯನಾರಾಯಣ ಆಯುರ್ವೇದ ವೈದ್ಯರ ಚಿಕಿತ್ಸಾಲಯವಿದೆ. ಇಂದು ಕ್ಲಿನಿಕ್ ಸ್ವಲ್ಪ ಬಿಡುವಿದ್ದುದರಿಂದ ಮನೆಗೆ ಸಾಮಾನು ಖರೀದಿಸಲೆಂದು ಇತ್ತ ಕಡೆ ಬಂದವರು ಚಿತ್ತರಂಜನ್ ರಾಯರನ್ನು ಕಂಡರು.ಅಪರೂಪದಲ್ಲಿ ಬಿಡುವು ದೊರೆತ ಇಬ್ಬರು ವೈದ್ಯರು ಮಾತಿಗಿಳಿದರು.

          ಸತ್ಯನಾರಾಯಣರ ದೊಡ್ಡ ಮಗ ಬೆಂಗಳೂರಿನಲ್ಲಿ ಮೆಡಿಕಲ್ ಎಂಡಿ ಓದುತ್ತಿದ್ದಾನೆ.. ಎರಡನೆಯವನು ಮೊದಲ ವರ್ಷ ಮೆಡಿಕಲ್ ಓದುತ್ತಿದ್ದಾನೆ.ಇಬ್ಬರು ಮಕ್ಕಳ ವಿದ್ಯಾಭ್ಯಾಸ ಮುಗಿದರೆ ನಮ್ಮ ದೊಡ್ಡ ಜವಾಬ್ದಾರಿ ಮುಗಿದಂತೆ ಎಂದು ಹೇಳತೊಡಗಿದರು ಡಾಕ್ಟರ್ ಸತ್ಯನಾರಾಯಣರು..ಚಿತ್ತರಂಜನ ರಾಯರು ತಮ್ಮ ಮಗಳು ಪಿಯುಸಿ ಓದುತ್ತಿದ್ದು ಒಳ್ಳೆಯ ಅಂಕ ಸಿಕ್ಕರೆ ಮೆಡಿಕಲ್ ಓದಿಸಬೇಕೆಂದಿದ್ದೇನೆ ಎಂದು ಪ್ರಗತಿಯ ಬಗ್ಗೆ ಹೇಳಿಕೊಂಡರು..

       ಅಷ್ಟರಲ್ಲಿ ಪೇಷೆಂಟ್ ಬಂದರು.ಡಾಕ್ಟರ್ ಸತ್ಯನಾರಾಯಣ ರಾಯರು ಹೊರಟರು.ನಂತರ ಮಧ್ಯಾಹ್ನ ಊಟಕ್ಕೆ ತೆರಳಿದ ಚಿತ್ತರಂಜನ್ ರಾಯರ ತಲೆಯೊಳಗೆ ಅದೇ ಸಂಗತಿ ಕೊರೆಯುತ್ತಿತ್ತು..ಪ್ರಗತಿಯನ್ನೂ ಮೆಡಿಕಲ್ ಕೋರ್ಸಿಗೆ ಸೇರಿಸಬೇಕು... ಎಂಬುದಾಗಿ...

        ಸಂಜೆ ಮನೆಗೆ ಬಂದ ಪ್ರಗತಿಯಲ್ಲಿ ಪರೀಕ್ಷೆ ಹೇಗಿತ್ತೆಂದು ಸವಿತಾ ವಿಚಾರಿಸಿಕೊಂಡಳು."ಸುಲಭವಿತ್ತು "ಎಂದು ಚುಟುಕಾಗಿ ಹೇಳಿ ಮುಂದಿನ ಮ್ಯಾತ್ಸ್ ಪರೀಕ್ಷೆಯ ತಯಾರಿಗಾಗಿ ಕೋಣೆಗೆ ತೆರಳಿದಳು.ಮನೆಯಲ್ಲಿ ಅಪ್ಪ ಅಮ್ಮ ಇಬ್ಬರೂ ಮೆಡಿಕಲ್ ಕೋರ್ಸಿನ ಬಗ್ಗೆ ತುಂಬಾ ಆಸಕ್ತರಾಗಿರುವುದು ಪ್ರಗತಿಗೆ ನುಂಗಲಾರದ ತುತ್ತಾಗಿತ್ತು..ಅವಳ ಗೆಳತಿಯರೆಲ್ಲ ಇಂಜಿನಿಯರಿಂಗ್ ಓದುವ ಆಲೋಚನೆಯಲ್ಲಿದ್ದರು.ಅವಳಿಗೂ ಅದೇ ಒಳ್ಳೆಯದು ಅನಿಸಿತ್ತು..

        ಪರೀಕ್ಷೆ ಮುಗಿದು ನೀಟ್ ಕೋಚಿಂಗ್ ಗೆ ತೆರಳಿದಳು.ತನಗೆ ಪಿಸಿಯಂ ಮಾತ್ರ ಇಷ್ಟವಾಗಿದ್ದರೂ ಪೋಷಕರ ಒತ್ತಾಯಕ್ಕೆ ಬಯಾಲಜಿಯನ್ನೂ ಓದಿ ಅಧ್ಯಯನ ನಡೆಸುತ್ತಿದ್ದಳು.

        ಸವಿತಾ ಮಗಳಿಗೆ ಮೆಡಿಕಲ್ ಸೀಟು ಸಿಗಲೆಂದ ನಂಬಿದ ದೇವರಿಗೆ ಹರಕೆ ಹೊತ್ತಿದ್ದಳು.ಅಪ್ಪ ಮಗಳ ಓದಿನ ಮೇಲೆ ನಿಗಾ ಇಟ್ಟಿದ್ದರು.. ದಿನವಿಡೀ ಓದುವುದು ಪ್ರಗತಿಗೆ ಬೇಸರ ತರಿಸಿತ್ತು..ಇನ್ನು ಮೆಡಿಕಲ್ ಗೆ ಸೇರಿದರಂತೂ ನಾನು ಪುಸ್ತಕದ ಹುಳವಾಗಬೇಕಾದೀತು ಎಂದು ಆತಂಕಪಡುತ್ತಿದ್ದಳು .


        ನೀಟ್ ಪರೀಕ್ಷೆಗೆ ಹಾಜರಾದಳು.ಪರೀಕ್ಷೆ ಮುಗಿಯುತ್ತಿದ್ದಂತೆ ಒಮ್ಮೆ ತಲೆಮೇಲಿನ ಹೊರೆಕೆಳಗಿಟ್ಟಷ್ಟು ಹಿತವಾಯಿತು .
ತನ್ನಿಷ್ಟದ ನಾಯಿಬೆಕ್ಕುಗಳೊಂದಿಗೆ,ಹೂದೋಟದ ಹಸಿರ ಸಿರಿಯೊಂದಿಗೆ ,ಅಂಬಾ ಎನ್ನುತ್ತಿದ್ದ ದನ... ಕಪಿಲೆ ಕರು ಕೆಂಪಿಯೊಂದಿಗೆ ಸಮಯ ಕಳೆಯಲು ತುಂಬಾ ದಿನಗಳ ನಂತರ ಅವಳಿಗೆ ಸಾಧ್ಯವಾಗಿತ್ತು...ಅಜ್ಜನ ಮನೆಗೆ ಅತ್ತೆ ಮನೆಗೆ ಹೋಗಲು ಅವಳು ತಯಾರಿರಲಿಲ್ಲ.. ಏಕೆಂದರೆ ಅಲ್ಲಿರುವ ಮಕ್ಕಳಿಗೆಲ್ಲ ಆಗಲೇ ಬೇಸಿಗೆ ರಜೆ ಮುಗಿದು ಶಾಲೆ ಆರಂಭವಾಗಿತ್ತು...


         ಪಿಯು ಬೋರ್ಡ್ ಫಲಿತಾಂಶ ಹೊರಬಿದ್ದಿತು.. ಪ್ರಗತಿಗೆ 99.91% ಫಲಿತಾಂಶ ಪಿಸಿಯಂಬಿ ಯಲ್ಲಿ ಬಂದಿತ್ತು...ಕುಟುಂಬದ ಸಂತೋಷಕ್ಕೆ ಪಾರವೇ ಇರಲಿಲ್ಲ.ನೀಟ್ ಫಲಿತಾಂಶ ಬರುವುದನ್ನೇ ಕಾಯುತ್ತಿದ್ದರು.ಎಲ್ಲವೂ ಪ್ರಗತಿಗೆ ಹಿತವಾಗಿತ್ತು... ಆದರೆ ತನ್ನ ಇಷ್ಟವೇನೆಂದೇ ತಂದೆತಾಯಿ ಒಮ್ಮೆಯೂ ಕೇಳುತ್ತಿಲ್ಲವಲ್ಲ ಎಂಬುದು ಅವಳಿಗೆ ಬೇಸರದ ಸಂಗತಿಯಾಗಿತ್ತು...


           ನೀಟ್ ಫಲಿತಾಂಶ ಪ್ರಕಟ ವಾಯಿತು.ಇಂಜಿನಿಯರಿಂಗ್ ನಲ್ಲಿ ಹಾಗೂ ಮೆಡಿಕಲ್ ನಲ್ಲಿ ಒಳ್ಳೆಯ ರ್ಯಾಂಕ್ ಪಡೆದಿದ್ದಳು.ಅಪ್ಪ ಅಮ್ಮ ಸಂಭ್ರಮಿಸಿದರು.. ಪೇಪರ್ ನಲ್ಲಿ,ಎಲ್ಲಾಕಡೆ ಮಗಳ ಭಾವಚಿತ್ರ, ಅಂಕಗಳನ್ನು ಪ್ರಕಟಿಸಿ ಹೆಮ್ಮೆಪಟ್ಟುಕೊಂಡರು.ಪ್ರಗತಿಯಲ್ಲಿ ಒಂದು ಮಾತೂ ಕೇಳದೆ  ಮೆಡಿಕಲ್ ಓದುವುದೆಂದು ನಿರ್ಧರಿಸಿದರು...


           ಪ್ರಗತಿಗೆ ಅತೀವ ದುಃಖವಾಯಿತು.ಮನನೊಂದು ಒಂದು ದಿನ ತನಗೆ ಇಂಜಿನಿಯರಿಂಗ್ ಇಷ್ಟವೆಂದು ಅಮ್ಮ ಅಪ್ಪ ನಲ್ಲಿ ಹೇಳಿ ಅತ್ತಳು..ಅವಳ ಕಣ್ಣೀರನ್ನು ಒರೆಸಿ ಇಬ್ಬರೂ... ಮೆಡಿಕಲ್ ಓದಿದರೆ ಇರುವ ಅನುಕೂಲ,ಗೌರವ,ತಂದೆಯ ವೃತ್ತಿಯಲ್ಲೇ ಮಗಳೂ ಸಾಗಿದರೆ ಕುಟುಂಬಕ್ಕೂ ಹೆಮ್ಮೆ ಎಂಬುದಾಗಿ ಆಕೆಗೆ ತಿಳಿಸಿಹೇಳಿದರು.ಒಪ್ಪಲೇಬೇಕಾದ ಅನಿವಾರ್ಯತೆ ಎದುರಾಯಿತು ಪ್ರಗತಿಗೆ..


           ಕೆಲವೇ ದಿನಗಳಲ್ಲಿ ಪ್ರತಿಷ್ಠಿತ ಮೆಡಿಕಲ್ ಕಾಲೇಜಿಗೆ ಸೇರಿಸಿದರು.ಹಾಸ್ಟೆಲ್ ನಲ್ಲಿ ಉಳಕೊಳ್ಳಲು ವ್ಯವಸ್ಥೆ ಮಾಡಿದರು.ಖರ್ಚಿಗೆ ಬೇಕಾದಷ್ಟು ಹಣವನ್ನೂ ನೀಡುತ್ತಿದ್ದರು.ತರಗತಿ ಆರಂಭವಾಯಿತು.ಪ್ರಗತಿಗೆ ತುಂಬಾ ಬೋರಿಂಗ್ ಅನಿಸಿತು..ತನಗೆ ಇದು ಇಷ್ಟವಿಲ್ಲ ... ತುಂಬಾ ಕಷ್ಟ ಎಂದು ಮನಸ್ಸು ಯೋಚಿಸತೊಡಗಿತು..

         ಮೊದಲ ಇಂಟರ್ನಲ್ ಪರೀಕ್ಷೆಯ ಸಮಯದಲ್ಲಿ ಇದ್ದಕ್ಕಿದ್ದಂತೆ ಕೈನಡುಕ ಆರಂಭವಾಯಿತು.. ಪರೀಕ್ಷೆಯ ದಿನ ವಿಪರೀತ ತಲೆನೋವು ಕಾಡಿತು.. ಪರಿಣಾಮವಾಗಿ ಅಂಕಗಳು ಬಹಳ ಕಡಿಮೆಯಾದವು..ಹೆತ್ತವರ ಅಸಮಾಧಾನಕ್ಕೆ ಕಾರಣವಾಯಿತು.ಇದ್ದಕ್ಕಿದ್ದಂತೇ ಆರಂಭವಾದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದರು.ಸ್ವತಃ ವೈದ್ಯರಾದ ಚಿತ್ತರಂಜನ ರಾಯರಿಗೆ ಸಮಸ್ಯೆ ಏನೆಂದು ಅರಿಯಲಿಲ್ಲ.. ತಜ್ಞವೈದ್ಯರ ಸಲಹೆ ಪಡೆದುಕೊಂಡರು..


           ಮೊದಲ ವರ್ಷದ ಅಂತಿಮ ಪರೀಕ್ಷೆಯ ಸಮಯ.ಮಗಳ ಆರೋಗ್ಯದ ದೃಷ್ಟಿಯಿಂದ ಹಾಸ್ಟೆಲ್ ಬಿಡಿಸಿ..ಮನೆಮಾಡಿಕೊಂಡು ಸವಿತಾ ಎರಡುತಿಂಗಳ ಮಟ್ಟಿಗೆ ತಾವೇ ಮಗಳ ಜೊತೆಗೆ ಇದ್ದು ನೋಡಿಕೊಂಡರು..ಆರೋಗ್ಯವಾಗಿದ್ದ ಪ್ರಗತಿಗೆ ಇದ್ದಕ್ಕಿದ್ದಂತೆ ಪರೀಕ್ಷೆಯ ಹಾಲ್ ಸಮೀಪಿಸುತ್ತಿದ್ದಂತೆ ಕೈ ಕಂಪಿಸಲು ಆರಂಭವಾಯಿತು.ತಲೆನೋವೂ ಬಾಧಿಸತೊಡಗಿತು..ಓದಿದ್ದೆಲ್ಲವೂ ಮರೆತುಹೋದಂತೆ ಅನಿಸಿತು.. ತನಗೆ ಸಾಧ್ಯವಿದ್ದಷ್ಟು ಬರೆದು ಹೊರಬಂದಳು.

         ಹೆತ್ತವರಿಗೆ ಆತಂಕ..ಭವಿಷ್ಯದ ಚಿಂತೆ.. ಕೂಡಲೇ ಅದೇ ಕಾಲೇಜಿನ ಖ್ಯಾತ ತಜ್ಞವೈದ್ಯರ ಬಳಿ ತಪಾಸಣೆ ನಡೆಸಿದರು.ಅವರಿಗೆ ಯಾವ ತೊಂದರೆಯೂ ಕಾಣಿಸಿರಲಿಲ್ಲ.. ಸ್ವಲ್ಪ ವಿಟಮಿನ್, ಕ್ಯಾಲ್ಸಿಯಂ ಮಾತ್ರೆಗಳನ್ನು ಕೊಟ್ಟು ಕಳುಹಿಸಿದರು.

         ಆದರೆ ಪ್ರಗತಿಗೆ ದಿನದಿಂದ ದಿನಕ್ಕೆ ಪರೀಕ್ಷೆ ಬರೆಯಲು ಅಡ್ಡಿಯಾಯಿತು..ಕಷ್ಟದಿಂದ ಪರೀಕ್ಷೆ ಪೂರೈಸಿದಳು.ಚಿತ್ತರಂಜನ ರಾಯರು ಬೆಂಗಳೂರಿನ ಹೆಸರಾಂತ ವೈದ್ಯರ ಬಳಿಗೆ ಮಗಳನ್ನು ಚಿಕಿತ್ಸೆಗೆ ಕರೆದೊಯ್ದರು.ಅವರು ಬಲು ಅಪರೂಪದ ಖಾಯಿಲೆ..ಲಕ್ಷದಲ್ಲಿ ಒಬ್ಬರಿಗೆ ಬರುವಂತಹದ್ದು.ದುರಾದೃಷ್ಟವಶಾತ್ ನಿಮ್ಮ ಮಗಳಿಗೆ ಬಂದಿದೆ ಎಂದಾಗ ಆಶಾಗೋಪುರವೇ ಕಳಚಿಬಿದ್ದಂತಾಯಿತು.ಚಿಕಿತ್ಸೆ ಆರಂಭಿಸಿದರು.ನಿತ್ಯವೂ ಔಷಧಿಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ ಎಂದರು.

         ಪರೀಕ್ಷೆ ಫಲಿತಾಂಶ ಬಂತು.ಹೆಚ್ಚಿನ ವಿಷಯಗಳಲ್ಲಿ ಪ್ರಗತಿ ಅನುತ್ತೀರ್ಣಳಾಗಿದ್ದಳು.ಮುಂದಿನ ವರ್ಷ ಮುಂದುವರಿಸಬೇಕಾದರೆ ಕನಿಷ್ಟ ಕೆಲವು ವಿಷಯಗಳಲ್ಲಿ ಉತ್ತೀರ್ಣಳಾಗಬೇಕಿತ್ತು ..ತೀವ್ರವಾಗುತ್ತಿತ್ತು
ಅನಾರೋಗ್ಯ..ಕಾಲುಗಳೂ ನಡುಗಲಾರಂಭಿಸಿದವು..

         ಆರೈಕೆ ಮಾಡುತ್ತಿದ್ದರೂ ಶರೀರದ ಒಂದೊಂದೇ ಅಂಗಕ್ಕೂ ವ್ಯಾಪಿಸುತ್ತಿತ್ತು ..ಸಧ್ಯದ ಪರಿಸ್ಥಿತಿಯಲ್ಲಿ ಮೆಡಿಕಲ್ ಓದಲು ಸಾಧ್ಯವಿಲ್ಲವೆಂದು ಬಾಡಿಗೆಮನೆ ಖಾಲಿ ಮಾಡಿ ಊರಿಗೆ ಬಂದರು.ಚಿತ್ತರಂಜನ ರಾಯರಿಗೆ ಹಾಗೂ ಸವಿತಾಗೆ ಮಗಳ ಭವಿಷ್ಯದ ಚಿಂತೆಯಾಯಿತು.ಹಲವರ ಚುಚ್ಚುನುಡಿಗಳು,ಪ್ರಶ್ನೆಗಳು..ಎದುರಿಸಲು ಕಷ್ಟವಾಯಿತು..
ಮೆಡಿಕಲ್ ಓದದಿದ್ದರೆ ಬೇಡ..ಸರಿಯಾಗಿ ನಡೆದಾಡಿ ಆರೋಗ್ಯವಾಗಿದ್ದರೆ ಸಾಕು ಎನ್ನುವಂತಹ ದಯನೀಯ ಸ್ಥಿತಿ ಅವರದಾಗಿತ್ತು.


          ಒಂದು ದಿನ ನೆಂಟರ ಮನೆಯ ಸಮಾರಂಭಕ್ಕೆ ತೆರಳಿದಾಗ ಚಿತ್ತರಂಜನರ ಹಳೆಯ ದೋಸ್ತಿಯೊಬ್ಬರು ಮಾತಿಗೆ ಸಿಕ್ಕರು.ಅವರ ಬಳಿ ತಮ್ಮ ಕಷ್ಟಹೇಳಿಕೊಂಡಾಗ ಅವರು ನನ್ನ ಪರಿಚಯದಲ್ಲಿ ಒಬ್ಬರು ನಿವೃತ್ತ ಅಧ್ಯಾಪಕರಿದ್ದಾರೆ .ಅವರ ಮಗ ಆಯುರ್ವೇದ ಎಂಡಿ ಓದಿ ಸರ್ಕಾರಿ ವೈದ್ಯರು.ಅಧ್ಯಾಪಕರು ಸಮಾಜ ಸೇವೆಯೆಂದು ತೊಂದರೆಯಲ್ಲಿರುವ ಜನರಿಗೆ  ಆಪ್ತಸಲಹೆ ನೀಡುವುದು,ವಾತದ ಖಾಯಿಲೆ ಇರುವವರಿಗೆ ಮಗನ ಸಹಕಾರದಿಂದ ತೈಲ ತಯಾರಿಸಿ ಮಸಾಜ್ ಮಾಡುವುದು,ಸಣ್ಣಪುಟ್ಟ ಚಟಗಳನ್ನು ಬಿಡಿಸುವುದು... ಇತ್ಯಾದಿ ಮಾಡುತ್ತಾರೆ.ಅವರಲ್ಲಿಗೆ ಕರೆದೊಯ್ದು ನೋಡಿ ಎಂದರು.ಚಿತ್ತರಂಜನ ರಾಯರು ತಡಮಾಡದೆ ವಿವರ ಸಂಗ್ರಹಿಸಿದರು.

         ಅದೇ ಭಾನುವಾರವೇ ಅವರಲ್ಲಿಗೆ ಮಗಳೊಂದಿಗೆ ತೆರಳಿದರು.ನಿವೃತ್ತ ಅಧ್ಯಾಪಕ ಶೇಖರ ಉಪಾಧ್ಯಾಯರು ಮೊದಲು ಸಮಸ್ಯೆಯನ್ನು ಆಲಿಸಿದರು.ವೈದ್ಯ ಮಗನೂ ಜೊತೆಗಿದ್ದು ಆಕೆಯ ಚಿಕಿತ್ಸೆಯ ವಿವರ, ಮೆಡಿಕಲ್ ರಿಪೋರ್ಟ್ ಗಳನ್ನು ಪರಿಶೀಲಿಸಿದರು.ನಂತರ ತಂದೆತಾಯಿಯನ್ನು ಹೊರಗೆ ಕಳುಹಿಸಿ ಪ್ರಗತಿಯಲ್ಲಿ ಸ್ವಲ್ಪ ಮಾತನಾಡುವುದಿದೆ ಎಂದು ಹೇಳಿ ತಮ್ಮ ನಿವೃತ್ತ ಶಿಕ್ಷಕಿ ಪತ್ನಿಯನ್ನೂ ಜತೆಗೂಡಿಸಿಕೊಂಡರು.


          ಪ್ರಗತಿಯೊಂದಿಗೆ ಶಿಕ್ಷಕ ದಂಪತಿ ಒಂದೂವರೆ ಗಂಟೆಗಳ ಕಾಲ ಆತ್ಮೀಯವಾಗಿ ಮಾತನಾಡಿದರು.ನಂತರ ಚಿತ್ತರಂಜನ ರಾಯರನ್ನೂ ಅವರ ಪತ್ನಿಯನ್ನೂ ಕರೆದು "ನಿಮಗೆ ಆರೋಗ್ಯವಂತ ಮಗಳು ಬೇಕೋ ಅಲ್ಲ ಖಾಯಿಲೆ ಬಿದ್ದ ವೈದ್ಯೆ ಮಗಳು ಬೇಕೋ" ಎಂದು ಕೇಳಿದರು.ಇಬ್ಬರ ಮುಖವೂ ಸಣ್ಣದಾಯಿತು.ತಮ್ಮ ತಪ್ಪಿನ ಅರಿವಾಯಿತು."ನಮಗೆ ಆರೋಗ್ಯವಂತ ಮಗಳು ಬೇಕು" ಎಂದರು..

          "ಆಕೆಗೆ ಇಂಜಿನಿಯರಿಂಗ್ ಅಥವಾ ಎಂಬಿಎ ಓದಲು ಆಸಕ್ತಿ... ನಿಮಗೆ ಆಕೆ ವೈದ್ಯೆಯೇ ಆಗಬೇಕು.ಆಕೆಗೆ ಹಲವಾರು ವರ್ಷಗಳ ದೀರ್ಘವಾದ ಓದು ಬೇಡ ಎಂಬ ಮನಸ್ಸು..ಬೇಗ ಸೆಟ್ಲ್ ಆಗಬೇಕು ಎಂಬ ಇಂಗಿತ.ನಿಮಗೆ ಎಂಬಿಬಿಎಸ್,ಎಂಡಿ ಎಂದು ಏಳೆಂಟು ವರ್ಷಗಳ ಕಾಲ ಓದಿಸಿ ಮಗಳು ಸರ್ಜನ್/ಫಿಸೀಶಿಯನ್ ಎಂದು ಬೀಗುವ ಹಂಬಲ..."

         "ಈ ಅತಿಯಾದ ಒತ್ತಡ ತಾಳಲಾರದೆ ಆರಂಭವಾದ ತಳಮಳ ಖಾಯಿಲೆಯ ರೂಪದಲ್ಲಿ ಕಾಡುತ್ತಿದೆ.. ಅವಳಿಗೆ ಇಷ್ಟವಾದ ಕ್ಷೇತ್ರದಲ್ಲಿ ಮುಂದುವರಿಯಲು ಅವಳಿಗೆ ಅವಕಾಶ ನೀಡಿ..ಮಗಳು ಆರೋಗ್ಯವಾಗಿ ಆನಂದಿಂದ ತನ್ನ ಜೀವನದಲ್ಲಿ ಮುಂದುವರಿಯುವುದನ್ನು ಕಂಡು ಖುಷಿಪಡಿ.."ಎಂಬುದು ಶೇಖರ ಉಪಾಧ್ಯಾಯರ ಖಡಕ್ ಎಚ್ಚರಿಕೆಯ ಮಾತು..


          "ಹಾಗೆಯೇ ಆಗಲಿ.". ಎಂದು ಒಪ್ಪಿಕೊಂಡ ದಂಪತಿ... ಮನೆಗೆ  ಮರಳಿದರು.. ಪ್ರಗತಿಗೆ ಅವಳಿಷ್ಟದಂತೆ ಇರಲು ಈಗ ಯಾವುದೇ ಅಭ್ಯಂತರವಿರಲಿಲ್ಲ ..ಅಂಬಾಕಾರಗೈಯುವ ಕರುವಿನೊಂದಿಗೆ ಮೈ ನೇವರಿಸುತ್ತಾ ಹಣೆಯ ಸವರುತ್ತಾ ಛಂಗನೆ ನೆಗೆದರೆ ಖುಷಿಪಡುತ್ತಾ ... ಮನೆಯ ಸುತ್ತಲಿರುವ ಹಸಿರಸಿರಿಯ ನಡುವೆ ವಿಹರಿಸತೊಡಗಿದಳು.

          ಸುಮ್ಮನೆ ಕಾಲ ಕಳೆಯುವ ಬದಲು ಸಂಗೀತ ಕೇಳುತ್ತಿದ್ದಳು ಪ್ರಗತಿ.ತರಗತಿಗೆ ತೆರಳಲು  ಸಾಧ್ಯವಾಗದಿದ್ದುದರಿಂದ ಗುರುಗಳನ್ನು ಮನೆಗೆ ಬರಲು ಕೋರಿದರು.ಆಕೆಯ ಸಂಗೀತ ಶಿಕ್ಷಕಿ ವಿದುಷಿ ಶ್ಯಾಮಲಾ ಪಟವರ್ಧನ್ .."ನನಗೆ ಮನೆಪಾಠ ಹೇಳಿಕೊಡಲು ಸಾಧ್ಯವಿಲ್ಲ.ನನ್ನ ಶಿಷ್ಯ ಅಭಿನವ ಶೇಷಕೃಷ್ಣನನ್ನು ಕಳುಹಿಸಿ ಕೊಡುತ್ತೇನೆ ಎಂದರು.ಅಭಿನವ ಶೇಷಕೃಷ್ಣ ವಾರಕ್ಕೆರಡು ಬಾರಿ ಬಂದು ಆಕೆಗೆ ಸೀನಿಯರ್ ಸಂಗೀತ ಪಾಠ ಹೇಳಿಕೊಡುತ್ತಿದ್ದ.

          ಬಿ.ಕಾಂ.ಪದವಿ ಓದುತ್ತಿದ್ದ ಅಭಿನವ ಬಹಳ ಬಡ ಕುಟುಂಬದ ಹಿನ್ನೆಲೆಯವನು.ಸಿಕ್ಕ ಹಣವನ್ನು ಕಾಲೇಜು ಶುಲ್ಕವನ್ನು ಕಟ್ಟಲು ಬಳಸುತ್ತಿದ್ದ.ಹಾಡುಗಾರಿಕೆ, ವಯಲಿನ್ ನಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡು ವಿದ್ಯಾಭ್ಯಾಸಕ್ಕೆ ತಕ್ಕಷ್ಟು ಹಣವನ್ನು ತಾನೇ ಹೊಂದಿಸಿಕೊಳ್ಳುತ್ತಿದ್ದ .

           ಅವನ ನಡೆನುಡಿಗೆ ಮಾರುಹೋದಳು ಪ್ರಗತಿ.ಬಹಳ ಸೌಮ್ಯ ಸ್ವಭಾವದ ಮಿತಭಾಷಿ .ತನ್ನ ಕೆಲಸವಾಯಿತು ತಾನಾಯಿತು ಎಂಬಂತಿರುವವನು. ಅವನು ಧರಿಸುವ ಅಂಗಿಗಳು ಹಳತಾಗಿ ಕಲೆಯಾಗಿ ಕಾಲರ್ ಹರಿದಿರುವುದನ್ನು ಗಮನಿಸಿ ತನ್ನಲ್ಲಿ ಇದ್ದ ಹಣಕೊಟ್ಟು ಹೊಸ ಅಂಗಿ ಕೊಂಡುಕೊಳ್ಳುವಂತೆ ಸೂಚಿಸಿದಳು.ಆದರೆ ಅವನು ಸ್ವಾಭಿಮಾನಿ..ನಿರಾಕರಿಸಿದನು..ಅವಳೂ ಒತ್ತಾಯಮಾಡದೆ ಅವನ ನಿಲುವನ್ನು ಗೌರವಿಸಿದಳು..

        ಪ್ರಗತಿ ಅವನ ಪ್ರತಿಯೊಂದು ನಡೆನುಡಿಗೂ ಮನಸೋತಿದ್ದಳು.ಅವನಿಗೆ ಜವಾಬ್ದಾರಿ ಇತ್ತು.ಓದಿ ತನ್ನ ಕಾಲ ಮೇಲೆ ತಾನು ನಿಂತುಕೊಳ್ಳುವುದು ಮುಖ್ಯವಾಗಿತ್ತು.ಮನಸ್ಸು ಏಕೋ ಹಿಡಿತ ತಪ್ಪುತ್ತಿದೆ ಎಂದು ಅರಿತನು.ಮನಸ್ಸನ್ನು ಅವಳ ಕಡೆ ವಾಲದಂತೆ ಬಿಗಿಹಿಡಿದನು.


          ಅಭಿನವ್ ಬರುವ ದಿನ ಪ್ರಗತಿಯ ಮುಖದಲ್ಲಿ ಮಂದಹಾಸವಿರುವುದನ್ನು ಸವಿತಾ ಗಮನಿಸಿದರು.ಒಂದು ದಿನ ಅಂಗಿಯ ಕೈಯ ಗುಬ್ಬಿ(ಗುಂಡಿ) ಹೋಗಿತ್ತು.ಅವನ್ನುಕಂಡ ಪ್ರಗತಿ ತನ್ನ ಕೈ ನಡಗುತ್ತಿದ್ದರೂ ಅವನ ಅಂಗಿಯ ಕೈಗೆ ಗುಬ್ಬಿಹೊಲಿಯಲು ಪ್ರಯತ್ನಿಸಿದಳು.ಏನು ಆಶ್ಚರ್ಯ....!!! ಅವಳ ಕೈಗಳು ನಡುಗಲೇ ಇಲ್ಲ..ಅಭಿನವ ತನ್ನ ಎಂದಿನ ಗಂಭೀರವಾದ ಶೈಲಿಯಲ್ಲಿ ಕುಳಿತು ಕೈಮುಂದೆ ಹಿಡಿದಿದ್ದ...ಗುಂಡಿ ಹೊಲಿದು ಆದಾಗ ಅಭಿನವನ ಮುಖದಲ್ಲಿ ಪ್ರಸನ್ನತೆಯ ಮುಗುಳುನಗೆಯನ್ನು ಕಂಡು ಪುಳಕಿತಳಾದವಳು ಪ್ರಗತಿ..


            ಅಂದಿನಿಂದ ಅವಳಲ್ಲೇನೋ ಹೊಸ ಹುರುಪು.. ನಡುಕ ಕಡಿಮೆಯಾಗುತ್ತಾ ಬಂತು.ಸಂಗೀತಾಭ್ಯಾಸ ಮುಂದುವರಿದು ಸೀನಿಯರ್ ಪರೀಕ್ಷೆ ತೇರ್ಗಡೆಯಾದಳು.. ಮುಂದಿನ ಶೈಕ್ಷಣಿಕ ವರ್ಷದಿಂದ ಬಿಎಸ್ಸೀಗೆ ಸೇರುವ ಆಸಕ್ತಿ ವ್ಯಕ್ತಪಡಿಸಿದಳು.ಕಾಲೇಜಿಗೆ ಸೇರಿಸಿದರು. ಆರೋಗ್ಯದಲ್ಲಿ ಚೇತರಿಕೆಯಾಗುತ್ತಿತ್ತು . ವಾರಕ್ಕೊಮ್ಮೆ ಭಾನುವಾರ ಸಂಗೀತ ತರಗತಿ ನಡೆಯುತ್ತಿತ್ತು.ಮೊದಲ ವರ್ಷದ ಪದವಿಯನ್ನು ಪೂರ್ಣಗೊಳಿಸಿದಳು.ಆಗ ಅಭಿನವ ಪದವಿ ಪೂರ್ಣಗೊಳಿಸಿ ಎಂಬಿಎ ಓದಲು ಬೆಂಗಳೂರಿಗೆ ತೆರಳಿದರು.ಆದ್ದರಿಂದ ಸಂಗೀತ ಶಿಕ್ಷಣ ಅಲ್ಲಿಗೆ ಮೊಟಕುಗೊಂಡಿತು.ಕೆಲವು ಸಮಯ ಅಭಿನವನ ಅಗಲಿಕೆ ಅವಳಿಗೆ ಬೇಸರತರಿಸಿದರೂ ಕ್ರಮೇಣವಾಗಿ ಓದಿನ ಕಡೆಗೆ ಗಮನಕೊಟ್ಟಳು.

           ಬಿಎಸ್ಸಿ ಪದವಿಯನ್ನು ಪೂರ್ಣಗೊಳಿಸಿದ ಪ್ರಗತಿ ಎಂಬಿಎ ಓದಲು ತೆರಳಿದಳು.ಉತ್ತಮ ಅಂಕಪಡೆದು ಮೊದಲ ರ್ಯಾಂಕ್ ಪಡೆದು ಪದಕ ಗಳಿಸಿದಳು.ಆಕೆಗೆ ಬೆಂಗಳೂರಿನ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಉದ್ಯೋಗ ದೊರೆಯಿತು.

            ಮಗಳ ಆಸೆಗಳಿಗೆ ಬೆಂಬಲ ನೀಡುತ್ತಿದ್ದ ಚಿತ್ತರಂಜನ ರಾಯರು ಮತ್ತು ಸವಿತಾ ಮಗಳ ಜೊತೆ ಬೆಂಗಳೂರಿಗೆ ಬಂದು ಅವಳಿಗೆ ಉಳಕೊಳ್ಳಲು ಬಾಡಿಗೆಮನೆ ಮಾಡಿಕೊಟ್ಟರು.ಆಫೀಸಿನಿಂದ ಐದು ನಿಮಿಷ ನಡೆದರೆ ಮನೆ..ಬಹಳ ಅನುಕೂಲವಾಗಿ ದೊರೆಯಿತು..

           ಅವಳ ಮನೆಯ ಪಕ್ಕದಲ್ಲಿ ರಜಾದಿನಗಳಲ್ಲಿ ಸೊಗಸಾಗಿ ಶಾಸ್ತ್ರೀಯ ಸಂಗೀತ ಹಾಡುಗಾರಿಕೆ, ವಯೋಲಿನ್ ನುಡಿಸುವುದು ಆಗಾಗ ಕೇಳಿಬರುತ್ತಿತ್ತು.ಅದನ್ನು ಕೇಳಿ ತಾನೂ ಹಾಡಲು ಮತ್ತೆ ಆರಂಭಿಸಿದ್ದಳು..


           ಆಫೀಸಿನ ಪರಿಸರ ಆಕೆಗೆ ಹಿಡಿಸಿತು.ಕೆಲಸ ಬೇಗಬೇಗನೆ ಕಲಿತಳು.ಒಂದು ದಿನ ಅವಳ ಎಡವಟ್ಟಿನಿಂದಾಗಿ ಒಂದು ಲಕ್ಷ ರೂಪಾಯಿ ಕಂಪೆನಿಗೆ ನಷ್ಟವಾಯಿತು.ಟೀಂ ಲೀಡರ್  ಲಿಂಗರಾಜುವಿನ ಕಡೆಯಿಂದ
ಸರಿಯಾಗಿ ಮಂಗಳಾರತಿ ಆಯಿತು.ಪ್ರಗತಿ ಮೊದಲ ಬಾರಿಗೆ ಎಲ್ಲರೆದುರು ಅವಮಾನ ಅನುಭವಿಸಿದಳು.ಕುಗ್ಗಿಹೋದಳು ... ತಾನು ಕೆಲಸ ಬಿಡುತ್ತೇನೆ ಎಂದು ದುಡುಕಿನ ನಿರ್ಧಾರಕ್ಕೆ ಬಂದಳು.

          ರಾಜೀನಾಮೆ ಪತ್ರವನ್ನು ಹಿಡಿದು ಭಾರವಾದ ಹೆಜ್ಜೆಹಾಕುತ್ತಾ ಟೀಂ ಲೀಡರ್ ನ ಛೇಂಬರ್ ಗೆ ನಡೆದಳು.. "ಎಕ್ಸ್ ಕ್ಯೂಸ್ ಮಿ ಸರ್.". ಎನ್ನುತ್ತಾ ಒಳಬಂದಳು.ಪ್ರಗತಿ ವಿಷಯ ತಿಳಿಸಿದಳು .
"ನಿನ್ನಿಂದಾದ ನಷ್ಟ.. ಮೂರು ತಿಂಗಳ ಸಂಬಳ ಕಟ್ಟಿ ರಾಜೀನಾಮೆ ಪತ್ರ ನೀಡು.."ಎಂದರು ..ಧಿಮಾಕಿನಿಂದ..

         ಯಾರಲ್ಲೋ ಫೋನಲ್ಲಿ ಮಾತನಾಡುತ್ತಿದ್ದ ಅವರು..."ಸರ್..ಅವಳೇ.. ನಿನ್ನೆ ಐವತ್ತು ಸಾವಿರ ನಷ್ಟವಾಗುವಂತೆ ಮಾಡಿದವಳು ರಾಜೀನಾಮೆ ನೀಡಲು ಬಂದಿದ್ದಾಳೆ... ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗದಿದ್ದರೂ ಇದಕ್ಕೇನೂ ಕಡಿಮೆಯಿಲ್ಲ.."ಎನ್ನುತ್ತಿದ್ದುದು ಕೇಳಿ ಅವಳ ಆತ್ಮವಿಶ್ವಾಸ ಪಾತಾಳಕ್ಕೆ ಇಳಿಯಿತು..

ಅತ್ತಕಡೆಯಿಂದ ಏನೋ ಧ್ವನಿ ಕೇಳುತ್ತಿತ್ತು.. "ಯಸ್ ಸರ್.. "ಎಂದು ಹೇಳುತ್ತಿದ್ದ ಲಿಂಗರಾಜು..ಫೋನಿಟ್ಟು ...

"ನೋಡಿ..ನಮ್ಮ  ಬಾಸ್ ನಿಮ್ಮನ್ನು ಕರೆಯುತ್ತಿದ್ದಾರೆ...ಹೋಗಿ..ನಿಮ್ಮ ಗ್ರಹಚಾರ ಸರಿಯಾಗಿ ಬಿಡಿಸುತ್ತಾರೆ... ಬೇಗ ಹೋಗಿ"ಎಂದು ದಬಾಯಿಸಿದರು ಲಿಂಗರಾಜು..

ಪ್ರಗತಿ ಮೂಕವಾದಳು... ಕಣ್ಣೀರುಹರಿಯಿತು.. ಆದರೂ ಹೋಗಿ ಕ್ಷಮೆ ಕೇಳಿ ರಾಜೀನಾಮೆ ಪತ್ರ ಕೊಟ್ಟು ಬರುತ್ತೇನೆ ಎಂದುಕೊಂಡು ಅವರ ಛೇಂಬರ್ ಕಡೆಗೆ ಹೆಜ್ಜೆ ಹಾಕಿದಳು..

ಯಾರಲ್ಲೋ ಫೋನಲ್ಲಿ ಮಾತನಾಡುತ್ತಿದ್ದ ಬಾಸ್ ಪ್ರಗತಿ ಬಂದುದು ಅರಿವಾಗುತ್ತಲೇ ..."ಯಸ್.. ಮೇಡಂ..ಕಮ್ ಇನ್.."ಎಂದು ತಾವೇ ಕರೆದರು..
ಇದನ್ನು ನಿರೀಕ್ಷಿಸದ ಪ್ರಗತಿ ಒಳಗೆ ನಡೆದಳು.


         ಎದುರಿಗೆ ನಿಂತವರನ್ನು ನೋಡಿ ಒಂದರೆಗಳಿಗೆ  ಕಲ್ಲಾಗಿಬಿಟ್ಟಳು..ಇದು ನಿಜವೋ ಸುಳ್ಳೋ ಅರಿಯದಾದಳು... ಬಾಸ್ ತಾನು ಕುರ್ಚಿ ಯಿಂದೆದ್ದು ಪ್ರಗತಿಯ ಬಳಿ ಬಂದು "ನೈಸ್ ಟು ಮೀಟ್ ಯು ಪ್ರಗತಿ " ಹೇಳುತ್ತಾ ಕೈಕುಲುಕಿದ..ಪ್ರಗತಿಯ ಕಣ್ಣಂಚಲ್ಲಿ ಆನಂದಭಾಷ್ಪ ಚಿಮ್ಮಿತು.. ಮುಂದೆ ಹಿಡಿದಿದ್ದ ರಾಜೀನಾಮೆ ಪತ್ರ ತನ್ನಿಂತಾನೇ ಹಿಂದೆ ಹೋಯಿತು...

"ನೀವು...ಅಭಿನವ..."ಎಂದು ಕೇಳುವ ಮೊದಲೇ "ನಾನು ಅಭಿನವ್.."ಎನ್ನುತ್ತಾ ನಸುನಗುತ್ತಿದ್ದ ..
ಬನ್ನಿ ಕುಳಿತುಕೊಳ್ಳಿ ಎಂದು ತಾನು ಕುಳಿತುಕೊಂಡು ತನ್ನ ಮುಂದಿನ ಕುರ್ಚಿಯತ್ತ ಬೆರಳು ತೋರಿದ..

          ಆಕೆಯೊಂದಿಗೆ ಐದು ನಿಮಿಷ ಹರಟಿದ ಅಭಿನವ್ ಅವಳ ಆತಂಕವನ್ನು ಅರಿತುಕೊಂಡನು..ಆಕೆ ಮಾಡುತ್ತಿದ್ದ ಪ್ರಾಜೆಕ್ಟ್ ನ ಮೇಲೆ  ಒಮ್ಮೆ ಕಣ್ಣಾಡಿಸಿದನು.. ಅವನಿಗೆ ಪ್ರಗತಿಯಿಂದಾದ ತಪ್ಪು ಕಾಣಿಸಲಿಲ್ಲ.ಬದಲಾಗಿ ಆ ತಪ್ಪು  ಟೀಂ ಲೀಡರ್ ಲಿಂಗರಾಜುವಿನಿಂದ ಆಗಿತ್ತು..ತನ್ನಿಂದಾದ ತಪ್ಪನ್ನು ಹೊಸ ಸ್ಟಾಫ್ ಪ್ರಗತಿಯ ಮೇಲೆ ಹೇರಿದ್ದು ಮೇಲ್ನೋಟಕ್ಕೆ ತಿಳಿಯಿತು.ನಂತರ ಕೂಲಂಕಷವಾಗಿ ಪರಿಶೀಲಿಸಿ ಲಿಂಗರಾಜುವಿಗೆ ಖಡಕ್ ಎಚ್ಚರಿಕೆ ನೀಡಿದರು..

          ಪ್ರಗತಿಯನ್ನು ಸಮಾಧಾನಿಸಿ ಅವಳು ಉಳಕೊಳ್ಳುವ ಜಾಗವನ್ನು ವಿಚಾರಿಸಿಕೊಂಡನು..ಅಭಿನವನ ಪಕ್ಕದ ಮನೆಯಲ್ಲೇ ಅವಳಿದ್ದಳು.."ಛೇ..!!!ಹತ್ತಿರದಲ್ಲೇ ಇದ್ದರೂ ನಿಮ್ಮನ್ನು ಗಮನಿಸಿಲ್ಲ.."
"ಸಂಗೀತ ವಯಲಿನ್ ಧ್ವನಿ ಕೇಳಿದರೂ ನೀವೆಂದು ಗುರುತಿಸಲಾಗಲಿಲ್ಲ "ಎಂದಳು ಪ್ರಗತಿ..


         ಈ ಕಂಪೆನಿಯಲ್ಲಿ ಮೂರುವರ್ಷ ದ ಕೆಳಗೆ ಸಾಮಾನ್ಯ ನೌಕರನಾಗಿ ಸೇರಿದ ಅಭಿನವ್ ತನ್ನ ಬುದ್ಧಿವಂತಿಕೆ,ಕಾರ್ಯವೈಖರಿಯಿಂದ ಉನ್ನತ ಸ್ಥಾನಕ್ಕೇರಿದ.ಆರು ತಿಂಗಳ ಹಿಂದೆ ಕಂಪೆನಿ ಮುಳುಗುವ ಹಂತಕ್ಕೆ ಬಂದಾಗ ಅದರ ಮಾಲಿಕ ಅಭಿನವ್ ಗೆ ಮಾರಿದ..ನಂತರ ತನ್ನ ಸ್ವಂತ ಶ್ರಮದಿಂದ ಕಂಪೆನಿ ಮತ್ತೆ ಮೈಕೊಡವಿಕೊಂಡು ಎದ್ದುನಿಲ್ಲುವಂತೆ ಮಾಡಿದನು ಅಭಿನವ್ ಶೇಷಕೃಷ್ಣ..


ಕೆಲವೇ ದಿನದಲ್ಲಿ ಅಭಿನವ್ ಪ್ರಗತಿಯಲ್ಲಿ ಪ್ರೇಮನಿವೇದನೆ ಮಾಡಿದ..

ಪ್ರಗತಿಯ ಮೈಯಲ್ಲಿ ಮಿಂಚಿನ ಸಂಚಾರವಾದ ಅನುಭವ... ತಾನು ವರುಷಗಳಿಂದ ಹೊಸೆದ ಕನಸು.... ಕನಸು ಕೊಚ್ಚಿಹೋಯಿತೆಂದು ಕಣ್ಣೀರಿಟ್ಟ ಮನಸು... ಪುನಃ ರೆಕ್ಕೆ ಬಿಚ್ಚಿ ಕುಣಿಯತೊಡಗಿತು...

ಅವನ ನೋಟವನ್ನು ಎದುರಿಸದಾದಳು ಕೋಮಲೆ...ಅವಳ ಉತ್ತರವ ಅರಿತನು ಅವಳ ಕಣ್ಣಂಚಿನ ಭಾವದಲೇ..ತುಟಿಯಲಿ ಬಿರಿದು ಸರಿಯುತ್ತಿರುವ ನಸುನಗೆಯಲೇ...

ಅವನೆದೆಯ ಮೇಲಿನ ರೋಮಕೂಪಗಳೆಡೆಯಲ್ಲಿ ಕಣ್ಮುಚ್ಚಿ ನಿದ್ರಿಸುವ ತವಕ ಅವಳಿಗೆ..ಅವಳ ಸುಶ್ರಾವ್ಯ ಕಂಠದಲಿ ಪ್ರಣಯಗೀತೆ ಆಲಿಸುವ ಆತುರ ಅವನಿಗೆ...

ಹೊರಗಿನಿಂದ ಸುಂಯ್ ಎಂದು ತಂಗಾಳಿ ಬೀಸಿಬೀಸಿ ಸಾಗಿತು..ಅವಳ ಮುಂಗುರುಳು ಅವನತ್ತ ವಾಲಿತು...ಅವನೆದೆಯ ಬಡಿತ ಪ್ರಗತಿಯ ಹೆಸರ ಕೂಗಿತ್ತು...ಪ್ರತಿ ಉಸಿರಿನಲೂ ಪ್ರೀತಿಯ ಕಂಪಿತ್ತು...

       ಜೀವಕೋಶಗಳೆಲ್ಲ ಕುಣಿಕುಣಿದು ಅಭಿನವನ ಆಮಂತ್ರಿಸಿದವು...ಆಕಾಶದತ್ತ ಮುಖಮಾಡಿದ ಅಭಿನವನ ಆಲಂಗಿಸಲೇ ಎಂದಿತ್ತು ಅವಳ ಕೆಣಕುವ ಮನ...ಮನದೊಳಗೆ ಪ್ರೇಮದ ತರಂಗಗಳ ಎಬ್ಬಿಸಿ ಕೋಲಾಹಲವನ್ನುಂಟು ಮಾಡಿದ ತುಂಟಿಯ ಬಿಡುವೆನೇ... ಈಗಲೇ ಮೆದುವಾಗಿ ಕೈಯ ಅದುಮಿಬಿಡಲೇ... ಇಷ್ಟು ವರ್ಷ ಕಾಯಿಸಿದ್ದಕ್ಕೆ ಗಲ್ಲ ಹಿಂಡಿ ಕ್ಷಮಿಸಿಬಿಡು ಎನ್ನಲೇ.... ಎಂದು ಕೂಗಿಹೇಳಿತು ಅವನ ಹೃದಯ..


       ಕೆಲವರುಷಗಳ ಮೊದಲೇ ಅವನಿಗೆ ಸೋತಿದ್ದ ಪ್ರಗತಿ ನಾಚಿ ನೀರಾಗಿ ಒಪ್ಪಿಗೆಯಿತ್ತಳು..ಎರಡೂ ಕೈಗಳ ಮುಂದೊಡ್ಡಿದ್ದ ಅಭಿನವ್... ಆಯ್ಕೆ ನಿನ್ನದು ಎನ್ನುವಂತೆ.... ಇನ್ನೇಕೆ ತಡ...ಮನವೊಂದಾದಮೇಲೆ...ಒಬ್ಬರನ್ನೊಬ್ಬರು ಅರಿತಮೇಲೆ...ನಾವೊಂದಾಗಿ ಬಾಳಬೇಕೆಂಬುದೇ ಆ ವಿಧಿಯ ಲೀಲೆ.. ಎಂದುಕೊಂಡು ಅವನ ಚಾಚಿದ ಬಾಹುಗಳೊಳಗೆ ಪ್ರಗತಿ ಪರವಶವಾಗಿ ನಿಂತಳು..ಬಾಹುಬಂಧನದಲ್ಲಿ ಉಸಿರಿಗುಸಿರು ಬೆರೆತು ಹೃದಯದ ಬಡಿತ ಒಂದೇ ಧಾಟಿಯಲ್ಲಿ ಜುಗಲ್ಬಂದಿಯಾಡುತಿತ್ತು...ಮನಸಿಗೆ ಹಿತವಾಗಿದ್ದ ಸಂಗೀತ  ಪ್ರೇಮರಾಗದಲ್ಲಿ... ಒಲವೆಂಬ ಶ್ರುತಿಯೊಂದಿಗೆ ...ಕಾಯುವಿಕೆಯ ತಪವೆಂಬ ತಾಳದಲ್ಲಿ... ಇಂಪಾಗಿ ರಸಧಾರೆಯ ಸುರಿಸಿತು...


ಹೃದಯ ವೀಣೆಯ ತಂತಿ ಮೀಟಿದ ಮೇಲೆ ರಾಗ ಹೊರಹೊಮ್ಮಲು ಕಾಯಬೇಕೇ... ಜವಾಬ್ದಾರಿಯುತ ಪ್ರೇಮಸಂಬಂಧಕ್ಕೆ ಮುಚ್ಚುಮರೆಯೇಕೆ...


ಪ್ರಗತಿ, ಅಭಿನವ್ ಇಬ್ಬರೂ ಮನೆಯಲ್ಲಿ ತಿಳಿಸಿದರು.. ಅಭಿನವ್ ನಮ್ಮ ಮನೆಯವರಿಂದ ತಕರಾರು ಬರಲಾರದು ಎಂದು ದೃಢವಾಗಿ ನಂಬಿದ್ದ..ಹಾಗೆಯೇ ಆಯಿತು.ಹೇಳಿದ ಕೂಡಲೇ ಖುಷಿಯಿಂದ ಸಮ್ಮತಿಸಿದರು.
ಪ್ರಗತಿಯ ಮನೆಯವರೂ ತಮ್ಮ ಒಬ್ಬಳೇ ಮಗಳನ್ನು ಅಭಿನವ್ ಚೆನ್ನಾಗಿ ನೋಡಿಕೊಳ್ಳುವನೆಂಬ ಭರವಸೆಯಿಂದ ಒಪ್ಪಿಗೆ ಕೊಟ್ಟರು.


ಪ್ರಗತಿ ಅಭಿನವ್ ಮದುವೆ ವಿಜೃಂಭಣೆಯಿಂದ ನೆರವೇರಿತು.ಕಂಪೆನಿಯ ನೌಕರರೆಲ್ಲ ಮನೆಮದುವೆಯೆಂಬಂತೆ ಭಾಗವಹಿಸಿದರು..

ಅಭಿನವ್ ಪ್ರಗತಿ ಜೊತೆಯಾಗಿ ಕಂಪೆನಿ ನಡೆಸುತ್ತಿದ್ದಾರೆ..ಲಿಂಗರಾಜು ಪ್ರಗತಿಯ ಕೈಕೆಳಗೆ ದುಡಿಯುತ್ತಿದ್ದಾನೆ..

ಪ್ರಗತಿ ವೈದ್ಯೆಯಾಗದಿದ್ದರೂ ಸ್ವಂತ ಕಂಪೆನಿಯೊಂದನ್ನು ನಡೆಸುತ್ತಾ ಸಾವಿರಾರು ಜನರಿಗೆ ಉದ್ಯೋಗಕೊಟ್ಟದ್ದನ್ನು ಕಂಡು ಚಿತ್ತರಂಜನ ರಾಯರು ಮತ್ತು ಸವಿತಾ ತಮ್ಮ ನೋವನ್ನು ಮರೆತರು..

ನೋವೆಲ್ಲ ನಲಿವಾಯಿತು...
ನಲಿವಿಂದ ಮನೆಯೇ ಬೃಂದಾವನವಾಯಿತು....


✍️... ಅನಿತಾ ಜಿ.ಕೆ.ಭಟ್.
13-11-2019.


ಪ್ರತಿಲಿಪಿ ಕನ್ನಡದ ಶ್ರವಣ ಕಥಾನಕ ಸಂಚಯನ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದೆ.





No comments:

Post a Comment