Tuesday, 12 November 2019

ಸಹೃದಯಿ ಕನ್ನಡಿಗ




   ವಿಭಾ ಎಂಬಿಎ ಓದಿ ಬೆಂಗಳೂರಿನಲ್ಲಿ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಉದ್ಯೋಗ ಪಡೆದುಕೊಂಡಳು.ತನ್ನ ಕಂಪೆನಿಗೆ ಹತ್ತಿರದಲ್ಲೇ ಒಂದು ಪಿಜಿ ವಿಚಾರಿಸಿಕೊಂಡು ಉಳಕೊಳ್ಳುವ ವ್ಯವಸ್ಥೆ ಮಾಡಿಕೊಂಡಳು.ಉದ್ಯೋಗಕ್ಕೆ ಸೇರುವ ಮುನ್ನವೇ ಅಮ್ಮ ತಲೆಗೆ ಒಂದಿಷ್ಟು ಅವಳ ಮಾಮೂಲಿನ ಹಿತವಚನ ತುಂಬಿಸಿದ್ದಳು..
"ಮಗಳೇ...ಎಲ್ಲಿಯೇ ಉದ್ಯೋಗ ಮಾಡುತ್ತಿದ್ದರೂ,ಉನ್ನತ ಸ್ಥಾನವನ್ನು ಏರಿದರೂ ನಮ್ಮ ಸಂಸ್ಕಾರಗಳನ್ನು,ನಾಡುನುಡಿಯ ಸೊಗಡನ್ನು ಮರೆತುಬಿಡಬೇಡ. ಹಬ್ಬಹರಿದಿನಗಳಲ್ಲಿ ಒಂದು ತುಂಡು ಮೈಸೂರು/ಮಂಗಳೂರು ಮಲ್ಲಿಗೆ ನಿನ್ನ ಮುಡಿಯಲ್ಲಿರಲಿ.ಹಣೆಯ ಮೇಲೆ ಚೂರಾದರೂ ಕುಂಕುಮವಿರಲಿ.ಕೈಗಳಲ್ಲಿ ಎರಡಾದರೂ ಗಾಜಿನ ಬಳೆಯಿರಲಿ.ವ್ಯಾವಹಾರಿಕವಾಗಿ ಆಂಗ್ಲಭಾಷೆ ಅಗತ್ಯವಾದರೂ ಉಳಿದ ಸಮಯದಲ್ಲಿ ಕನ್ನಡವೇ ನಿನ್ನ ಆದ್ಯತೆಯಾಗಲಿ...ನಮ್ಮ ಸಂಪ್ರದಾಯಗಳು,,ಅಡುಗೆ,ಉಡುಗೆ ತೊಡುಗೆಗಳು ನಮಗೆ ಹೆಮ್ಮೆ.."ಎಂಬುದು ಅಮ್ಮನ ಉವಾಚವಾಗಿತ್ತು.

..ಅಪ್ಪ ಮಾತ್ರ "ನಿನ್ನ ಕಾಲ ಮೇಲೆ ನೀನು ನಿಂತುಕೊಂಡರೆ ನನಗೆ ಹೆಮ್ಮೆ.. ಉದ್ಯೋಗದಲ್ಲಿ ಎತ್ತರಕ್ಕೆ ಬೆಳೆಯಬೇಕು.ಜೀವನ ಉದ್ಯೋಗ ಎರಡನ್ನೂ ನಿಭಾಯಿಸಲು ನನ್ನ ಮಗಳು ಶಕ್ತಳಾಗಬೇಕು.." ಎಂದು ಹೇಳಿದರು.

    ಬೆಂಗಳೂರಿಗೆ ಬಂದ ಮೊದಮೊದಲು ಆಕೆಗೆ ಬಹಳ ಕಷ್ಟವಾಗಿತ್ತು.ಗೆಳತಿಯರು ಎಲ್ಲರೂ ಇಂಗ್ಲಿಷ್, ಮಲೆಯಾಳಂ, ತೆಲುಗು, ತಮಿಳು ಭಾಷೆಯಲ್ಲಿ ಮಾತನಾಡುತ್ತಿದ್ದರು.ಕನ್ನಡಿಗರಾದ ಕೆಲವು ಜನ ಇದ್ದರೂ ಉಳಿದವರ ಮಧ್ಯೆ ಅವರು ಅಲ್ಪಸಂಖ್ಯಾತರಾಗಿದ್ದರು..ವಿಭಾ ಚಿಕ್ಕಂದಿನಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತವಳು.ಮನೆಯಲ್ಲೂ ಕನ್ನಡ ಮಾತನಾಡುವ ಸಂಪ್ರದಾಯದವರು.ಹೀಗಾಗಿ ಆಕೆಗೆ ಕನ್ನಡ ನೀರು ಕುಡಿದಂತೆ ಸಲೀಸು ಹಾಗೂ ಮಾತೃಭಾಷೆ ಎಂಬ ಮಮಕಾರ,ಅಭಿಮಾನ..


ವಿಭಾ ಕಛೇರಿಯಲ್ಲಿ ಹಾಗೂ ಪಿಜಿಯಲ್ಲಿ ಕನ್ನಡವನ್ನೇ ಮಾತನಾಡತೊಡಗಿದಳು. ಆರಂಭದಲ್ಲಿ ಎಲ್ಲರೂ ಮೂಗುಮುರಿದರೂ ಕ್ರಮೇಣ ಕನ್ನಡಿಗರೆಲ್ಲ ಧೈರ್ಯದಿಂದ ಕನ್ನಡ ಮಾತನಾಡುತ್ತಾ ಗೆಳತಿಯರಿಗೂ ಕಲಿಸಲಾರಂಭಿಸಿದರು . ಒಂದು ದಿನ ಪಿಜಿಯಲ್ಲಿ ಎಲ್ಲ ಗೆಳತಿಯರೂ ಒಮ್ಮಿಂದೊಮ್ಮೆಲೇ ಹಲ್ಲಿ...ಹಲ್ಲೀ... ಎಂದು ಕೂಗಾಡತೊಡಗಿದರು.ಬೊಬ್ಬೆಕೇಳಿ ಹೊರಗಡೆ ಬಾಯ್ ಫ್ರೆಂಡ್ ಜೊತೆ ಚ್ಯಾಟಿಂಗ್ ನಲ್ಲಿ ಮಗ್ನಳಾಗಿದ್ದ ಮಲೆಯಾಳಿ ಗೆಳತಿ ಸಜಿದಾ ಓಡಿ ಬಂದಳು..ಏನೂ ಅರ್ಥವಾಗದೆ
ವಿಭಾಳತ್ತ ತಿರುಗಿ ಕೇಳಿದಳು.."ಓ.. ಅಲ್ಲಿ... ಮತ್ತೆ...ಪಲ್ಲಿ...ಟು ಉಂಟು.... ಇದು ಯಾವ ಅಲ್ಲಿ... "ಎಂದು ಕೇಳಿದಳು.

ಅವಳ ಮಾತಿಗೆ ಎಲ್ಲರೂ ಗೊಳ್ಳೆಂದು ನಕ್ಕರು.ವಿಭಾ ಬ್ಯಾಗ್ ನ ಮೇಲೆ ಹಾರುತ್ತಿದ್ದ ಹಲ್ಲಿಯನ್ನು ತೋರಿಸಿ ಇದೇ ಹಲ್ಲಿ ಎಂದಳು..ಪಲ್ಲಿ ಪಲ್ಲಿ...ಎನ್ನುತ್ತಾ ನಲ್ಲನಲ್ಲಿ ಮಾತನಾಡಲು ತೆರಳುತ್ತಿದ್ದ ಸಜಿದಾಳನ್ನು ತಡೆದು ನಿಲ್ಲಿಸಿ..ಹಲ್ಲಿ ಎಂದು ಸರಿಯಾಗಿ ಉಚ್ಛರಿಸಲು ಹೇಳಿಕೊಟ್ಟಳು..

ಇನ್ನೊಮ್ಮೆ ಕನ್ನಡತಿ ಗೆಳತಿಯೊಬ್ಬಳು ಏನೋ ಒಂದು ರೀಲ್ ಹೊಡೆದು ಇದು ಅರ್ಥ ಸತ್ಯ.. ಅರ್ಥ ಸುಳ್ಳು ಎನ್ನುತ್ತಿದ್ದಳು.. ಅವಳನ್ನು ತಿದ್ದಿ ಅರ್ಧ ಸತ್ಯ ಅರ್ಧ ಸುಳ್ಳು ಎಂದು ತಿಳಿಹೇಳಿದಳು..

ಪ್ರತಿಬಾರಿ ಕರೆ ಮಾಡಿದಾಗಲೂ "ಹೇನಾಗ್ಬೇಕಿತ್ತು ವಿಭಾ"ಎನ್ನುತ್ತಿದ್ದ ಜ್ಯೋತಿ,"ಮಾರುಕಟ್ಟೆಯಿಂದ ಹಕ್ಕಿ ಎಷ್ಟು ತರಲಿ..?" ಎಂದು ಕೇಳುತ್ತಿದ್ದ ಸುಧಾ...ಇವರ ನಾಲಿಗೆಯನ್ನು ಸಾಣೆಹಿಡಿದು ಏನಾಗ್ಬೇಕಿತ್ತು,ಅಕ್ಕಿ ಎಂದು ಹೇಳಿಸಿದ ಕೀರ್ತಿ ವಿಭಾಳದ್ದು..

ಇನ್ನೊಮ್ಮೆ ಸಿನಿಮಾ ನಟಿಯರ ಬಟ್ಟೆಯ ಬಗ್ಗೆ ಮಾತನಾಡುವಾಗ ಸುಚಿತ್ರಾ "ಸಿನಿಮಾ ನಟಿಯರ ವೇಶ್ಯೆಭೂಷಣ ಚೆನ್ನಾಗಿದೆ "ಎಂದಿದ್ದಳು..ಕನ್ನಡಿಗ ಗೆಳತಿಯರೆಲ್ಲ ಘೊಳ್ಳೆಂದು ನಕ್ಕಾಗ ಸುಚಿತ್ರ ಸಣ್ಣಮುಖ ಹೊತ್ತು ಹೊರನಡೆದಿದ್ದಳು..ಮತ್ತೊಮ್ಮೆ ಸುಚಿತ್ರ ಮಾತ್ರ ಸಿಕ್ಕಾಗ "ವೇಶ್ಯೆಭೂಷಣ ಮತ್ತು ವೇಷಭೂಷಣಕ್ಕೆ" ಇರುವ ವ್ಯತ್ಯಾಸವನ್ನು ಹೇಳಿ ಮೃದುವಾಗಿ ತಿದ್ದಿದಳು.ಹೀಗೆ ವಿಭಾ ಪಿಜಿಯ ಕನ್ನಡದ ಕುವರಿ ಎಂದು ಖ್ಯಾತಿ ಪಡೆದಳು.


ಎರಡು ವರ್ಷ ಕಳೆಯುತ್ತಿದ್ದಂತೆ ವಿಭಾಳಿಗೆ ಮದುವೆಯಾಯಿತು.ಪಿಜಿ ಬಿಟ್ಟು ಗಂಡನ ಮನೆ ಸೇರಿದ್ದಾಯಿತು.ಒಂದು ವರ್ಷದಲ್ಲಿ ಪುಟ್ಟ ಕಂದನೂ ಬಂದ.ಎರಡು ವರ್ಷ ಮಗುವಿನ ಕಡೆ ಗಮನಕೊಡಲೆಂದು ಉದ್ಯೋಗವನ್ನು ತೊರೆದಳು.ಮಗನಿಗೆ ಕನ್ನಡದ ಜೋಗುಳದ ಪದಗಳ ಲಾಲಿ ‌ಹಾಡಿ ನಿದ್ದೆಮಾಡಿಸುತ್ತಿದ್ದಳು.ನಂತರ ಪುನಃ ಉದ್ಯೋಗಕ್ಕೆ ಸೇರಿದಳು.ಮನೆಗೆ ಸಹಾಯಕಿಯನ್ನು ನೇಮಿಸಿದರು.


 ಮಗ ಅಮನ್ ಗೆ ಐದು ವರ್ಷ ಆಯ್ತು.ಆಗ ಪತಿ ವಿಜಯ್ ಗೆ ವಿಯೇಟ್ನಾಂಗೆ ಕೆಲಸದ ನಿಮಿತ್ತ ತೆರಳಬೇಕಾಯಿತು.. ಐದು ವರ್ಷಗಳ ಕಾಲ ಅಲ್ಲಿರಬೇಕಾದ ಒಪ್ಪಂದವಿದ್ದ ಕಾರಣ ವಿಭಾ ಕೆಲಸಕ್ಕೆ ವಿದಾಯ ಹೇಳಿ ಪತಿ ಮಗನ ಜೊತೆ ಅಲ್ಲಿಗೆ ತೆರಳಿದಳು.ಹೋಗಿ ಒಂದು ವರ್ಷದಲ್ಲಿ ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡ ಬಳಿಕ ವಿಭಾಗೆ ಉದ್ಯೋಗ ಮುಂದುವರಿಸುವ ಮನಸ್ಸಾಯಿತು.ಮನೆಯಿಂದ ಎರಡು ಕಿಲೋಮೀಟರ್ ದೂರದಲ್ಲಿ ಒಂದು ಕಂಪೆನಿಯಲ್ಲಿ ಉದ್ಯೋಗ ದೊರೆಯಿತು.


ದಿನವೂ ಮಗನನ್ನು ಶಾಲೆಗೆ ಬಿಟ್ಟು ಅದೇ ದಾರಿಯಲ್ಲಿ ಮುಂದೆ ಸಾಗಿ ತನ್ನ ಕಛೇರಿಗೆ ತೆರಳುತ್ತಿದ್ದಳು.ಸಂಜೆ ಅಮನ್ ನೆರೆಯ ಪಂಜಾಬಿ ಕುಟಂಬದ ಹುಡುಗನೊಂದಿಗೆ ಶಾಲಾವಾಹನದಲ್ಲಿ ಮನೆಗೆ ಬರುತ್ತಿದ್ದ.ವಿಭಾ ಆರು ಗಂಟೆಗೆ ಮನೆಸೇರುತ್ತಿದ್ದಳು..

ಅಂದು ಅವಳಿಗೆ ಕಛೇರಿಯಲ್ಲಿ ತುಂಬಾ ಕೆಲಸದ ಒತ್ತಡ ಇತ್ತು.ಮನೆಗೆ ಹೊರಡುವುದು ತಡವಾಯಿತು.ಅಮನ್ ಅರ್ಧಗಂಟೆಗೊಮ್ಮೆ "ಅಮ್ಮಾ.. ಎಷ್ಟೊತ್ತಿಗೆ ಬರುತ್ತೀಯಾ" ಎಂದು ಕರೆಮಾಡಿ ಕೇಳುತ್ತಲೇ ಇದ್ದ.ಪತಿ ವಿಜಯ್ ಬರುವುದು ತಡರಾತ್ರಿ.. ಆದ್ದರಿಂದ ಬೇಗನೆ ಹೋಗಬೇಕೆಂದು ಕಛೇರಿಯ ಕ್ಯಾಬ್ ಗೆ ಕಾದರೆ ಇನ್ನೂ ಅರ್ಧ ಗಂಟೆ ತಡವಾಗುತ್ತದೆ ಎಂದು ನಡೆಯುತ್ತಾ ಹೊರಟಳು.


  ರಾತ್ರಿ ಎಂಟು ಗಂಟೆಯಾಗಿತ್ತು.ಅವಳು ನಡೆಯುವ ರಸ್ತೆ ಜನಸಂದಣಿ ಇಲ್ಲದ ರಸ್ತೆ.ಇಂದು ಎಲ್ಲಾ ಅಂಗಡಿಗಳೂ ಮುಚ್ಚಿದ್ದವು.ವೇಗವಾಗಿ ಹೆಜ್ಜೆಹಾಕುತ್ತಿದ್ದಳು.ಮುಂದಿನಿಂದ ಇಬ್ಬರು ಇಪ್ಪತ್ತರ ಹರೆಯದ ತರುಣರು ಬರುವುದು ಕಾಣಿಸಿತು.ತನ್ನಂತೆಯೇ ದಾರಿಹೋಕರು ಇರಬೇಕೆಂದು ಭಾವಿಸಿ ತನ್ನಪಾಡಿಗೆ ನಡೆದಳು.ಎದುರುಸಿಕ್ಕ ಯುವಕರು ಸ್ವಲ್ಪ ದೂರ ಹೋದ ನಂತರ ಮತ್ತೆ ಹಿಂದಿರುಗಿ ಅವಳನ್ನೇ ಹಿಂಬಾಲಿಸತೊಡಗಿದರು. ವಿಭಾ ಗಡಗಡ ನಡುಗುತ್ತಾ ಕಾಲು ವೇಗವಾಗಿ ಮುಂದಿಡುತ್ತಿದ್ದಳು.

ಮತ್ತಷ್ಟು ಹತ್ತಿರಕ್ಕೆ ಬಂದರು.ಅವರ ನೋಟವೋ ಅವಳನ್ನೇ ತಿಂದುಹಾಕುವಂತಿತ್ತು..ಓಡತೊಡಗಿದಳು..ಒಬ್ಬರೂ ಮನುಷ್ಯರು ಕಾಣಿಸುತ್ತಿಲ್ಲವಲ್ಲ ಎಂದು ಕೊರಗಿ ... ಹೃದಯದ ಬಡಿತ ಜೋರಾಯಿತು..

ಮುಂದಿನ ತಿರುವಿನಲ್ಲಿ ಯಾರೋ ಒಬ್ಬ ಮಧ್ಯವಯಸ್ಕ ಗಂಡಸು ಫೋನ್ ಸಂಭಾಷಣೆ ಯಲ್ಲಿ ನಿರತನಾಗಿದ್ದನು..ವಿಭಾಳಿಗೆ ಸ್ವಲ್ಪವೇ ಧೈರ್ಯ ಬಂತು.. ಹಿಂದಿರುಗಿ ನೋಡಿದಾಗ ಇನ್ನು ಮುನ್ನುಗ್ಗಿ ಬರುತ್ತಿರುವ ಯುವಕರಿಗೂ ತನಗೂ ಹತ್ತೇ ಅಡಿ ಅಂತರವಿರುವುದು ...ಉಸಿರು ಎಳೆಯಲೂ ಕಷ್ಟಪಡುತ್ತಿದ್ದಳು ..


ಮಧ್ಯವಯಸ್ಕ ವ್ಯಕ್ತಿಯನ್ನು "ಸರ್.." ಎಂದು ಕೂಗಿಕೊಂಡಳು..ಆ ವ್ಯಕ್ತಿ ಕನ್ನಡದಲ್ಲಿ ಸಂಭಾಷಣೆ ಮಾಡುತ್ತಿದ್ದುದನ್ನು ಕೇಳಿಸಿಕೊಂಡ ವಿಭಾ ಒಮ್ಮೆಲೇ "ಅಣ್ಣಾ ಕಾಪಾಡಿ" ಎಂದು ಬೊಬ್ಬಿರಿದಳು.. ಅನಿರೀಕ್ಷಿತವಾಗಿ ಬಂದ ಕನ್ನಡದ ಹೆಣ್ಣಿನ ಆರ್ತ ಧ್ವನಿಯನ್ನು ಅರಸಿ ಹಿಂದಿರುಗಿದ ವ್ಯಕ್ತಿಗೆ ಪರಿಸ್ಥಿತಿ ಅರಿವಾಯಿತು.ಗಾಬರಿಗೊಂಡಿದ್ದ ವಿಭಾಳನ್ನು ನೋಡಿ" ಹೆದರಬೇಡ ತಂಗಿ.. ನಾನಿದ್ದೇನೆ "ಎಂದ..

ವಿಭಾ ಅವನ ಬೆನ್ನ ಹಿಂದೆ ಹೆದರಿ ನಡುಗುತ್ತಿದ್ದ ಶರೀರವನ್ನು ಅಡಗಿಸುತ್ತಾ ಏದುಸಿರನ್ನು ತಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಳು.. ತರುಣರತ್ತ ತೀಕ್ಷ್ಣ ನೋಟ ಬೀರಿ ಮೀಸೆತಿರುವಿದ ಕನ್ನಡಿಗ ...ತರುಣರ ಕಾಲುಗಳು ನಿಧಾನಿಸಿದವು..ಅವರು ಹತ್ತಿರ ಬರುತ್ತಿದ್ದಂತೆ ಕನ್ನಡಿಗ ತೋಳೇರಿಸಿ  ನಿಂತಿದ್ದ .. ತರುಣರು ಮುಂದಡಿಯಿಡಲು ಹೆದರಿದರು..ಕವಲು ದಾರಿಯಲ್ಲಿ ತೆರಳಿದರು...


ಅವರು ತೆರಳಿದರೂ ವಿಭಾಳಿಗೆ ಹೆದರಿ ಇಳಿಯುತ್ತಿದ್ದ ಬೆವರು ಮಾತ್ರ ನಿಲ್ಲಲಿಲ್ಲ.. ಅವಳನ್ನು ಸಂತೈಸುತ್ತಾ "ತಂಗೀ  ರಾತ್ರಿ ಹೊತ್ತು ನಡೆದಾಡಲು ಇದು ಪ್ರಶಸ್ತವಾದ ಜಾಗವಲ್ಲ.. ಎಲ್ಲಿಗೆ ಹೋಗುತ್ತಿರುವೆ ಹೇಳು..ನಾನೇ ವಾಹನ ಮಾಡಿ ಅಲ್ಲಿಗೆ ತಲಪಿಸುತ್ತೇನೆ "ಎಂದಾತನ ಕಣ್ಣುಗಳಲ್ಲಿ ಒಡಹುಟ್ಟಿದ ಸೋದರನ ಪ್ರೀತಿ,ರಕ್ಷಣೆಯ ಗುಣವನ್ನು ಕಂಡಳು.ಹೆಣ್ಣನ್ನು ಗೌರವಿಸುವ ಕನ್ನಡದ ಮಣ್ಣಿನ ಗುಣವನ್ನು ಅರಿತಳು..ತನ್ನ ವಿವರವನ್ನು ಹೇಳಿಕೊಂಡ ವಿಭಾಳನ್ನು ಟ್ಯಾಕ್ಸಿ ಬಾಡಿಗೆಗೆ ಮಾಡಿ ಮನೆಯವರೆಗೆ ತಲುಪಿಸಿ ಸ್ವಲ್ಪವೇ ಮುಂದಿರುವ ತನ್ನ ಮನೆಗೆ ತೆರಳಿದನು ಭರತ್..

ಮನೆಗೆ ಬಂದ ವಿಭಾ... ಅಮ್ಮನನ್ನು ಕಾದುಕುಳಿತು ನಿದ್ರೆಗೆ ಶರಣಾದ ಮಗ ಅಮನ್ ನನ್ನು ತಬ್ಬಿಕೊಂಡು ಅತ್ತೇಬಿಟ್ಟಳು. ಎಚ್ಚರಗೊಂಡ ಅಮನ್ ಅಳುತ್ತಿರುವ ಅಮ್ಮನನ್ನು ಕಂಡು "ಏನಾಯ್ತು ಅಮ್ಮಾ.. "ಎಂದು ಕೇಳಿದ... ಮಗನಲ್ಲಿ ನಡೆದ ಘಟನೆ ವಿವರಿಸಿದಳು.ಗಂಡನಿಗೂ ಫೋನ್ ಮಾಡಿ ತಿಳಿಸಿದಳು..ಭರತ್ ಆ ಹೊತ್ತಿಗೆ  ಸಿಗದಿದ್ದರೆ ತನ್ನ ಗತಿ ಏನಾಗುತ್ತಿತ್ತೋ ಏನೋ ನೆನೆದು ಗದ್ಗದಿತಳಾದಳು...


 ಮುಂದಿನ ಭಾನುವಾರ ವಿಭಾ, ವಿಜಯ್, ಅಮನ್ ಮೂವರೂ ಭರತ್ ನ ಮನೆಗೆ ತೆರಳಿ ಕೃತಜ್ಞತೆಗಳನ್ನು ತಿಳಿಸಿ ಸಣ್ಣ ಉಡುಗೊರೆಯನ್ನು ಕೊಟ್ಟರು.ಉಡುಗೊರೆಯನ್ನು ನಿರಾಕರಿಸಿದ ಭರತ್ ..."ನನ್ನ ಕರ್ತವ್ಯವೆಂದು ಮಾಡಿದ್ದೇನೆ.. ಇದಕ್ಕೆ ಉಡುಗೊರೆಯನ್ನು ನಿರೀಕ್ಷಿಸಲಾರೆ..ಬಾಲ್ಯದಲ್ಲೇ ತಂದೆತಾಯಿಯನ್ನು ಕಳೆದುಕೊಂಡ ನಾನು ಇಂದಿನಿಂದ ನನಗೊಬ್ಬ ತಂಗಿ ಇದ್ದಾಳೆ ಎಂದುಕೊಳ್ಳುತ್ತೇನೆ .." ಎಂದವನ ಕಣ್ಣಂಚಲ್ಲಿ ನೀರುಜಿನುಗಿತ್ತು..ಒಬ್ಬ ಸಹೃದಯೀ ಕನ್ನಡಿಗನ ಅಂತರಂಗದ ನುಡಿಗಳನ್ನು ಕೇಳಿದ ಕುಟುಂಬ ಭಾವುಕವಾದ ಕ್ಷಣವದು.

ಅಂದಿನಿಂದ ಪ್ರತೀ ರಕ್ಷಾಬಂಧನದ ದಿನ ಅಣ್ಣ ಭರತ್ ನ ಮನೆಗೆ ತೆರಳಿ ರಕ್ಷೆಯನ್ನು ಕಟ್ಟಿ ಅವನಿಂದ ಸಿಹಿತಿನಿಸು ಪಡೆಯಲು ವಿಭಾ ಮರೆಯುವುದಿಲ್ಲ..ಪ್ರತೀ ಹಬ್ಬಹರಿದಿನದಲ್ಲೂ ಅಣ್ಣತಂಗಿಯರ ಕುಟುಂಬ ಒಟ್ಟುಸೇರುತ್ತದೆ.
ಕನ್ನಡ ರಾಜ್ಯೋತ್ಸವವನ್ನು 'ವಿಭಾರತ್ 'ಎನ್ನುವ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಿ ಆಚರಿಸುತ್ತಾರೆ.. ಸುತ್ತಮುತ್ತಲಿನ ಅನಿವಾಸಿ ಕನ್ನಡಿಗರನ್ನೆಲ್ಲ ಒಂದೇ ವೇದಿಕೆಯಲ್ಲಿ ಒಗ್ಗೂಡಿಸುತ್ತಾರೆ ...



✍️... ಅನಿತಾ ಜಿ.ಕೆ.ಭಟ್.
13-11-2019.



No comments:

Post a Comment