'ಸಂತಸ' ಮನೆಯಲ್ಲಿ ಸಂಭ್ರಮ ಸಡಗರ ಮನೆಮಾಡಿತ್ತು .ಒಬ್ಬಳೇ ಮಗಳು ನಿಶಿತಾಳ ಮದುವೆ ತಯಾರಿ ಭರ್ಜರಿಯಾಗಿ ನಡೆಯುತ್ತಿತ್ತು.ಇನ್ನು ಹದಿನೈದೇ ದಿನಗಳಿರುವುದು ಎಂದು ರಮೇಶ್ ಆಗಬೇಕಾದ ಕೆಲಸಗಳನ್ನು ಪಟ್ಟಿಮಾಡಿಕೊಂಡು ಒಂದೊಂದರತ್ತ ಗಮನ ಹರಿಸುತ್ತಿದ್ದರು.
ರಮೇಶ ಉಮಾ ದಂಪತಿಯ ಒಬ್ಬಳೇ ಮಗಳು ನಿಶಿತಾ.ಮಗಳಿಗೆ ಯಾವುದರಲ್ಲೂ ಕೊರತೆಯಾಗದಂತೆ ಮುದ್ದಿನಿಂದ ಸಾಕಿದ್ದರು.ಅವಳು ಅದು ಬೇಕು ಎನ್ನುವ ಹೊತ್ತಿಗೆ ಅದು ಅವಳ ಕೈಸೇರುತ್ತಿತ್ತು ...ಅಷ್ಟು ಅತಿಮುದ್ದಿನಿಂದ ಸಾಕಿದ ಮಗಳು ನಿಶಿತಾ.ಅವಳು ಬಯಸಿದಂತೆ ಇಂಜಿನಿಯರಿಂಗ್ ಓದುತ್ತಿದ್ದಾಳೆ.ಮುಂದಿನ ವರ್ಷ ಕೋರ್ಸ್ ಮುಗಿಯುತ್ತದೆ.
ತಮ್ಮ ನೆಂಟರ ಮನೆಯ ಕಾರ್ಯಕ್ರಮಕ್ಕೆ ಹೋಗಿದ್ದಾಗ ನಿಶಿತಾಗೆ ಪರಿಚಯವಾದವ ಸಾಫ್ಟವೇರ್ ಇಂಜಿನಿಯರ್ ಧನುಷ್.ಒಂದೇ ವಾರದಲ್ಲಿ ಅವನ ತಂದೆ ತಾಯಿ ಮದುವೆಯ ಪ್ರಸ್ತಾಪವನ್ನು ಮಾಡಿದರು.ನಿಶಿತಾ ಧನುಷ್ ಪರಸ್ಪರ ಇಷ್ಟಪಟ್ಟರೆ ನಮ್ಮದೇನೂ ಅಭ್ಯಂತರವಿಲ್ಲ ಎಂದು ರಮೇಶ್ ಉಮಾ ಒಪ್ಪಿಗೆಯನ್ನಿತ್ತರು .ಎರಡೂ ಕುಟುಂಬಗಳು ಕೂಡ ಗೌರವಾನ್ವಿತ ಕುಟುಂಬಗಳು.ರಮೇಶ್ ಅವರು ಖ್ಯಾತ ಬಿಸ್ನೆಸ್ಮನ್ ಆಗಿದ್ದರು.ಧನುಷ್ ತಂದೆ ಖ್ಯಾತ ವಕೀಲರು.
ನಿಶ್ಚಿತಾರ್ಥವು ಬಲು ಅದ್ದೂರಿಯಾಗಿ ನಗರದ ಪ್ರತಿಷ್ಠಿತ ಹೋಟೆಲ್ ಒಂದರಲ್ಲಿ ನಡೆಯಿತು.ರಮೇಶ ದಂಪತಿಗೆ ತಮ್ಮ ಒಬ್ಬಳೇ ಮಗಳ ನಿಶ್ಚಿತಾರ್ಥ ಮದುವೆ ಎಷ್ಟು ವೈಭವೋಪೇತವಾಗಿ ಮಾಡಿದರೂ ಕಡಿಮೆಯಾಯಿತು ಎಂಬ ಭಾವ.ನಿಶ್ಚಿತಾರ್ಥಕ್ಕೆ ಕಡಿಮೆಯೆಂದರೂ ಐದಾರು ಲಕ್ಷ ಖರ್ಚು ಮಾಡಿರಬಹುದು.ಇದನ್ನು ಕಂಡ ರಮೇಶರ ವೃದ್ಧ ತಂದೆ ತಾಯಿ ಮಗನಿಗೆ ..."ಹಣವನ್ನು ನೀರಿನಂತೆ ಖರ್ಚು ಮಾಡುವುದು ಒಳ್ಳೆದಲ್ಲ.ಇಂದಿಗೂ ಬಡವರು ಅಶನ ,ವಸನ ,ಅಕ್ಷರಕ್ಕಾಗಿ ಕಷ್ಟಪಡುತ್ತಿದ್ದಾರೆ . ಮಿತಿಮೀರಿ ಖರ್ಚು ಮಾಡುವ ಬದಲು ಸಮಾಜದ ದುರ್ಬಲರಿಗೆ ದಾನ ಮಾಡಿದರೆ ಹಲವಾರು ನರಳುವ ಕುಟುಂಬಗಳು ಅರಳುವುವು ..."ಎಂದು ಸಲಹೆಯಿತ್ತರು.ಅದನ್ನು ಕಿವಿಗೆ ಹಾಕಿಕೊಳ್ಳದೆ ..."ನಾವು ದುಡಿದು ಸಂಪಾದಿಸಿದ ಹಣವನ್ನು ನಮಗೆ ಬೇಕಾದಂತೆ ಬಳಸುತ್ತೇವೆ"... ಎಂದು ದುಂದುವೆಚ್ಚವನ್ನು ಮಾಡುತ್ತಾ ಸಾಗಿದರು.
ಮದುವೆಗೆ ದಕ್ಷಿಣ ಭಾರತದ ಖ್ಯಾತ ತಿಂಡಿ ತಿನಿಸುಗಳನ್ನು ಮಾಡಲು ಬಾಣಸಿಗರನ್ನು ಗೊತ್ತು ಮಾಡಿದ್ದರು.ನಾಲ್ಕು ಜನ ಫೊಟೋಗ್ರಾಫರ್ ವಿಡಿಯೋಗ್ರಾಫರ್ ಗಳನ್ನು ನಿಗದಿಮಾಡಲಾಗಿತ್ತು.ನಿಶಿತಾಳ ಡ್ರೆಸ್, ಮೇಕಪ್ ಗೆ ಸಿನಿತಾರೆಯರ ಮೇಕಪ್ ಮಾಡುವವರಿಗೆ ಗುತ್ತಿಗೆ ನೀಡಲಾಗಿತ್ತು.ಸಾಂಪ್ರದಾಯಿಕ ಕಾರ್ಯಕ್ರಮ ಜೊತೆಗೆ ಇಂದಿನ ಕಾಲಘಟ್ಟಕ್ಕನುಗುಣವಾದ ಸಂತೋಷಕೂಟಗಳು ಏರ್ಪಾಡಾಗಿದ್ದವು.ಈ ಅದ್ದೂರಿಯ ವಿವಾಹ ಸಮಾರಂಭವನ್ನು ವೀಕ್ಷಿಸಲು ನೆಂಟರಿಷ್ಟರು ಬಂಧುಮಿತ್ರರು ಕಾತರರಾಗಿದ್ದರು.
ಆ ಶುಭ ದಿನ ಬಂದೇಬಿಟ್ಟಿತು.ರಮೇಶ್ ಉಮಾ ದಂಪತಿ ಬಹಳ ಸಂತಸದಿಂದ ಅಭ್ಯಾಗತರನ್ನು ಉಪಚರಿಸುತ್ತಾ ಕಾರ್ಯಕ್ರಮದಲ್ಲಿ ಭಾಗಿಯಾದರು. ನಿಶಿತಾಳ ಮದುವೆಯು ಸುಸೂತ್ರವಾಗಿ ನೆರವೇರಿತು.ಮಗಳನ್ನು ಧಾರೆಯೆರೆದು ಕೊಡುವಾಗ ದಂಪತಿಯ ಕಣ್ಣು ತುಂಬಿ ಬಂದಿತ್ತು.
ಮಗಳು ಗಂಡನ ಮನೆಗೆ ತೆರಳಿದರೆ 'ಸಂತಸ' ಮನೆ ನಿಶ್ಶಬ್ದವಾಯಿತು.ತಂದೆತಾಯಿಗೆ ಮಗಳು ನಕ್ಕಂತೆ,ಆಗಾಗ ಕರೆಯುತ್ತಿದ್ದಂತೆ ಭಾಸವಾಗಿ ಹೃದಯ ಭಾರವಾಗುತ್ತಿತ್ತು .ಧನುಷ್ ನೊಂದಿಗೆ ಹನಿಮೂನ್ ಗೆ ತೆರಳಿ ಜೀವನದ ರಸನಿಮಿಷಗಳನ್ನು ಕಳೆಯುತ್ತಿದ್ದ ನಿಶಿತಾ ದಿನಕ್ಕೆರಡು ಬಾರಿ ತಂದೆತಾಯಿಯ ಬಳಿ ಮಾತನಾಡಲು ಮರೆಯುತ್ತಿರಲಿಲ್ಲ.ಹನಿಮೂನ್ ಮುಗಿಸಿ ಬಂದರು ನವದಂಪತಿ . ಧನುಷ್ ಆಫೀಸಿಗೆ ಹೋಗಲು ಆರಂಭಿಸಿದ.ನಿಶಿತಾ ಗಂಡನ ಮನೆಯಿಂದಲೇ ಕಾಲೇಜಿಗೆ ಹೋಗಲಾರಂಭಿಸಿದಳು..
ನಿಶಿತಾಳ ಮೊಗದಲ್ಲಿ ನವವಧುವಿನ ಕಳೆಯಿತ್ತು.ಫ್ರೆಂಡ್ಸ್ ಆಗಾಗ ಕಾಲೆಳೆದು ಅವಳ ಮೊಗ ನಾಚಿ ಕೆಂಪಾದಾಗ ಆನಂದಿಸುತ್ತಿದ್ದರು.ಆ ದಿನಗಳು ಅವಳಿಗೆ ಸ್ವರ್ಗದಲ್ಲಿದ್ದ ಅನುಭವವನ್ನು ನೀಡುತ್ತಿದ್ದವು.ಗಂಡ,ಅತ್ತೆ, ಮಾವ ಎಲ್ಲರೂ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು.
ಬದುಕು ನಿಂತ ನೀರಲ್ಲ.ಬದಲಾವಣೆ ಈ ಜಗದ ನಿಯಮ.ಜೀವನದಲ್ಲಿ ಕಷ್ಟಸುಖಗಳು ಚಕ್ರದಂತೆ ಸುತ್ತುತ್ತಾ ಇರುತ್ತವೆ.ಇಂದು ಚಕ್ರದಲ್ಲಿ ಸುಖದ ಭಾಗ ಮೇಲಿದ್ದರೆ ನಾಳೆ ಅದು ಕೆಳಗಿಳಿಯಲೇ ಬೇಕು.ಕಷ್ಟದ ಭಾಗ ಮೇಲೆ ಬಂದಾಗ ಅನುಭವಿಸಲೇ ಬೇಕು.ಹಿರಿಯರ ಪಾಪ ಪುಣ್ಯದ ಫಲ ನಮ್ಮ ಜೀವನದ ಪ್ರತಿ ಹೆಜ್ಜೆಯಲ್ಲೂ ನಮ್ಮ ಜೊತೆಯಿರುತ್ತದೆ.
ಆ ದಿನ ನಿಶಿತಾ ತರಗತಿಯಲ್ಲಿ ಪ್ರವಚನ ಕೇಳುವುದರಲ್ಲಿ ತಲ್ಲೀನಳಾಗಿದ್ದಳು.ಆಕೆಗೆ ಕೂಡಲೇ ಆಫೀಸಿಗೆ ಹೊರಟುಬರಬೇಕಾಗಿ ಕರೆಬರುತ್ತದೆ . ಅಲ್ಲಿ ಪತಿ ಕಣ್ತುಂಬಿ ನಿಂದು "ಮನೆಗೆ ಹೋಗೋಣ ಬಾ" ಎನ್ನುತ್ತಿದ್ದಾರೆ."..ಏನಾಯಿತು"... ಎಂದು ಪ್ರಶ್ನಿಸಿದರೆ ...."ತಂದೆಗೆ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದೆ "...ಎಂಬ ಉತ್ತರ ನೀಡಿದರು."..ಸರಿ".. ಎಂದು ತವರ ಅಂಗಳಕ್ಕೆ ಬಂದಿಳಿದವಳಿಗೆ ಪರಿಸ್ಥಿತಿಯ ಅರಿವಾಗಿ ನಿಜವನ್ನು ಅರಗಿಸಿಕೊಳ್ಳಲು ಸಾಧ್ಯವಾಗದೆ ಆಗಾಗ ಪ್ರಜ್ಞೆ ಕಳೆದುಕೊಳ್ಳುತ್ತಿದ್ದಳು.ಆಕೆಯ ಪ್ರೀತಿಯ ಅಪ್ಪ ಇನ್ನೆಂದೂ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದರು.
ಹೃದಯಾಘಾತದಿಂದ ರಮೇಶ್ ಮೃತರಾಗಿದ್ದರು.'ಸಂತಸ 'ಮನೆ ಯಜಮಾನನನ್ನು ಕಳೆದುಕೊಂಡು ಬೀಕೋ ಎನ್ನುತ್ತಿತ್ತು.ತಾಯಿಯನ್ನು ಸಂತೈಸಬೇಕಾದ , ನಾನಿದ್ದೇನೆ ಎಂದು ಧೈರ್ಯತುಂಬಬೇಕಾದ ಜವಾಬ್ದಾರಿ ನಿಶಿತಾಳ ಮೇಲಿದ್ದಿತು.ತಂದೆಯ ಸದ್ಗತಿ ಕಾರ್ಯಗಳೆಲ್ಲ ಮುಗಿದು ನೆಂಟರೆಲ್ಲರೂ ತೆರಳಿದರೆ.. ನಿಶಿತಾಗೆ ಅಮ್ಮನನ್ನು ಬಿಟ್ಟು ಹೋಗಲು ಮನಸ್ಸಾಗಲಿಲ್ಲ.ಕೆಲವು ದಿನ ಇಲ್ಲೇ ಉಳಿಯುವ ಚಿಂತನೆ ಅವಳದ್ದು . ಧನುಷ್ ಒಪ್ಪಿದ.
ಎರಡು ದಿನದಲ್ಲಿ ಎರಡು ಜನ ಮನೆಗೆ ಬಂದರು."ರಮೇಶ್ ನಮ್ಮಿಂದ ಎರಡು ಲಕ್ಷ ಸಾಲ ಪಡೆದಿದ್ದಾನೆ . ಯಾವಾಗ ವಾಪಾಸು ಕೊಡುತ್ತೀರಿ... ಒಂದು ತಿಂಗಳಲ್ಲಿ ವಾಪಸ್ ಕೊಡುವುದಾಗಿ ಹೇಳಿದ್ದ.. ಯಾವಾಗ ಕೊಡ್ತೀರಿ.. ಏಯ್..."
'ಕೊಡೋಣ.. ಸ್ವಲ್ಪ ನಿಧಾನವಾಗಿ...ನನ್ನ ವಿದ್ಯಾಭ್ಯಾಸ ಮುಗಿಯಲಿ.."ಎಂದ ನಿಶಿತಾ..
"ಯಾಕೆ..ಅಪ್ಪ..ಇಲ್ಲ ಅಂದ ಮೇಲೆ ಇವಳ ಕುತ್ತಿಗೆಯಲ್ಲಿ ಇಷ್ಟುದ್ದ ಕರಿಮಣಿಸರ ಅಗತ್ಯವೇ..ಅದನ್ನೇ ಮಾರಿ ಹಣ ಸಂದಾಯ ಮಾಡಿ.."
"ದಯಮಾಡಿ ಕೆಲವು ತಿಂಗಳು ಕಾಯಿರಿ.. ನಾನು ದುಡಿದು ಸಾಲ ತೀರಿಸುತ್ತೇನೆ..."ಎಂದು ನಿಶಿತಾ ಪರಿಪರಿಯಾಗಿ ಕೇಳಿಕೊಂಡ ಮೇಲೆ ತೆರಳಿದರು.. ಹೀಗೇ ಒಬ್ಬೊಬ್ಬರಾಗಿ ಬರತೊಡಗಿದರು.ತಂದೆ ಇಷ್ಟು ಸಾಲ ಮಾಡಿದ್ದಾರಾ ..ಅಲ್ಲ ಸುಮ್ಮನೆ ಬರುತ್ತಿದ್ದಾರಾ ಎಂದು ನಿಶಿತಾಗೆ ಆಶ್ಚರ್ಯವಾಯಿತು.ಹಲವು ಮೂಲಗಳಿಂದ ತಂದೆ ಮಾಡಿದ ಸಾಲವನ್ನು
ಪಟ್ಟಿಮಾಡಿದ ನಿಶಿತಾಗೆ ದುಡ್ಡಿನ ಬೆಲೆ ಅರಿವಾಯಿತು.ಸಾಲಮಾಡಿ ತುಪ್ಪ ತಿಂದು ಮೈಗೇರಿದ ಕೊಬ್ಬು ಇಳಿಯುವ ಕಾಲ ಈಗ ಸನ್ನಿಹಿತವಾಗಿದೆ ಎಂದು ತಮ್ಮ ಜೀವನಶೈಲಿಯನ್ನು ತಾನೇ ಬೈದುಕೊಂಡಳು.
ತಂದೆಯ ವ್ಯವಹಾರವು ನೆಲಕಚ್ಚದಂತೆ ಮುಂದುವರಿಸಬೇಕಾಗಿತ್ತು. ನಿಶಿತಾಗೆ ತಾನು ಓದು ಮುಂದುವರಿಸಬೇಕಾ ಅಲ್ಲ ತಂದೆಯ ಉದ್ಯಮಕ್ಕೆ ಹೆಗಲು ಕೋಡಬೇಕಾ ಎಂಬ ಸಂದಿಗ್ಧತೆ ಎದುರಾಯಿತು.. ನಿಶಿತಾಳ ಮನೆಯವರು ಅವಳಲ್ಲಿ ಓದು ಮುಂದುವರಿಸಲು ಹೇಳಿ ಅವಳಿಗೆ ಬೆಂಬಲವಾಗಿ ನಿಂತರು.
ಉಮಾ ತನ್ನ ಆಘಾತವನ್ನು ಸಹಿಸಿಕೊಂಡು ಗಂಡನ ಉದ್ಯಮವನ್ನು ಕೈಗೆತ್ತಿಕೊಂಡರು.ಇದುವರೆಗೆ ಗಂಡನ ವ್ಯವಹಾರದಲ್ಲಿ ತಲೆಹಾಕದಿದ್ದ ಉಮಾಗೆ ಇದು ಸವಾಲಾಗಿತ್ತು ..ಉದ್ಯಮ ಕುಂಟುತ್ತಾ ಸಾಗಿತ್ತು.ಮಗಳ ಮದುವೆಯ ಸಾಲ,ಉದ್ಯಮದ ಸಾಲ ಮತ್ತು ಬರಬೇಕಾಗಿದ್ದ ಹಣ ಬರದಿರುವುದು,ಮನೆಕಟ್ಟಿದ ಸಾಲ ಇವೆಲ್ಲ ಒಟ್ಟು ಸೇರಿ ದೊಡ್ಡ ಮೊತ್ತದ ಹೊರೆಯೇ ತಲೆಯ ಮೇಲಿತ್ತು.. ಸಾಲಗಾರರು ಮನೆಬಾಗಿಲ ಮುಂದೆ ಬಂದು ನಿತ್ಯವೂ ಧಮ್ಕಿ ಹಾಕಿ ಹೋಗುವ ದೃಶ್ಯ ಸಾಮಾನ್ಯವಾಗಿತ್ತು.ಕೆಲವರಂತೂ ಮನೆಯನ್ನು ಮಾರಿ ದುಡ್ಡು ಕೊಡಿ ಎಂದು ಕೇಳಲು ಆರಂಭಿಸಿದರು.
ಇಂಜಿನಿಯರಿಂಗ್ ಮುಗಿದ ನಿಶಿತಾಳಿಗೆ ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ಉದ್ಯೋಗ ದೊರೆಯಿತು.ಅದೇ ಸಮಯದಲ್ಲಿ ಆಕೆ ಗರ್ಭಿಣಿಯಾದ ಸಿಹಿಸುದ್ದಿ ಹೊರಬಿದ್ದಿತು.ಅಲ್ಪಮಟ್ಟಿನ ಸುಸ್ತು ಅವಳನ್ನು ಕಾಡುತ್ತಿತ್ತು..ಅದನ್ನು ಕಡೆಗಣಿಸಿ ಅವಳು ಟ್ರೈನಿಂಗ್ ಗೆ ತೆರಳಿದಳು.ಆರು ತಿಂಗಳ ಟ್ರೈನಿಂಗ್ ಮುಗಿಸಿ ಉದ್ಯೋಗಕ್ಕೆ ಆಯ್ಕೆಯಾದಳು.. ಆದರೆ ಆಗಲೇ ಏಳು ತಿಂಗಳಾದ್ದರಿಂದ ಮನೆಯವರು ಆಕೆಯ ಆರೋಗ್ಯದ ದೃಷ್ಟಿಯಿಂದ ಒಪ್ಪಲಿಲ್ಲ..
ಆಕೆಗೆ ನಿರಾಸೆಯಾಯಿತು.ಆಕೆಯ ಮನಸ್ಸಲ್ಲಿ ಇದ್ದದ್ದು ಗುರಿಯೆಂದರೆ..."ನನ್ನ ಅಪ್ಪನ ಸಾಲ ತೀರಿಸಬೇಕು.'ಸಂತಸ'ಮನೆ ಹರಾಜಾಗುವುದನ್ನು ತಡೆಯಬೇಕು.. ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು.." ಎಂಬುದಾಗಿ.. ಕೆಲವು ತಿಂಗಳ ಬಳಿಕ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದಳು.ತನ್ನ ಅಪ್ಪನೇ ಮಗುವಿನ ರೂಪದಲ್ಲಿ ಬಂದಿದ್ದಾರೆ ಅನಿಸಿತು ಅವಳಿಗೆ.ಮಗು ನಿಧೀಶ್ ಗೆ ಆರು ತಿಂಗಳು ತುಂಬುತ್ತಿದ್ದಂತೆ ಉದ್ಯೋಗ ಹುಡುಕುವ ಪ್ರಯತ್ನ ಮಾಡಿದಳು.ತನ್ನ ಗೆಳತಿಯ ಸಹಾಯದಿಂದ ಒಂದು ಸಣ್ಣ ಉದ್ಯೋಗ ದೊರೆತಿತು.ಗಂಡನ ಮನೆಯಲ್ಲಿ ಪುಟ್ಟ ಮಗುವನ್ನು ಬಿಟ್ಟು ಉದ್ಯೋಗಕ್ಕೆ ತೆರಳಲು ಒಪ್ಪದಿದ್ದರೂ ಅವರನ್ನೆಲ್ಲ ಒಪ್ಪಿಸಿ ತನ್ನ ತವರು ಮನೆ ಅಪ್ಪನ ಕನಸಿನ ಮನೆಯ ಅಳಿವು ಉಳಿವಿನ ಪ್ರಶ್ನೆ ಎಂದು ಹೇಳಿ ಒಪ್ಪಿಸಿದಳು.ಉಮಾ ..."ನನಗೋಸ್ಕರ ಏಕಿಷ್ಟು ಕಷ್ಟಪಡುವೆ ಮಗಳೇ...ಹೇಗೂ ಅಪ್ಪ ಹೋದರು.. ನಾನು ಕಷ್ಟವಾದರೆ ಈ ಭೂಮಿ, ಮನೆ ಮಾರಿ ಸಾಲ ತೀರಿಸಿ ಆಶ್ರಮದಲ್ಲಿರುತ್ತೇನೆ .."ಎಂದರು..
'ಸಂತಸ' ಮನೆ ಮಾರುವಂತಾಗಬಾರದು ಎಂದು ಶತಪ್ರಯತ್ನ ಮಾಡತೊಡಗಿದಳು ನಿಶಿತಾ.. ಮಗುವನ್ನು ತಾಯಿಮನೆಯಲ್ಲಿ ಆಯಾ ಗಂಗಮ್ಮನ ಜೊತೆ ಬಿಟ್ಟು ಅಲ್ಲಿಂದಲೇ ಉದ್ಯೋಗಕ್ಕೆ ಹೋಗತೊಡಗಿದಳು.ಉಮಾ ಗಂಡನ ಬಿಸ್ನೆಸ್ ನ್ನು ಹೇಗೋ ನಿಭಾಯಿಸಿಕೊಂಡು ಹೋಗುತ್ತಿದ್ದಳು.ಈಗ ಒಂದೊಂದು ಪೈಸೆಯ ಬೆಲೆಯೂ ಅವರಿಗೆ ಅರಿವಾಗಿತ್ತು.ಅನಗತ್ಯ ದುಂದುವೆಚ್ಚ ಮಾಡದೆ ಪೈಸೆಗೆ ಪೈಸೆ ಕೂಡಿಟ್ಟು ಪ್ರತೀ ತಿಂಗಳು ಸಾಲವನ್ನು ಬಡ್ಡಿ ಸಮೇತ ತೀರಿಸುತ್ತಿದ್ದರು ..
ನಿಧಾನವಾಗಿ ನಿಶಿತಾಳ ಅತ್ತೆ ಮಾವನಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿತು.ಸೊಸೆಯ ದುಡಿಮೆಯೆಲ್ಲ ತವರು ಸೇರುವುದನ್ನು ಆಕ್ಷೇಪಿಸತೊಡಗಿದರು . ಧನುಷ್ ನಿಶಿತಾಳ ಪರವಾಗಿದ್ದರೂ ಹೆಚ್ಚಾಗಿ ನಿಶಿತಾ ಮತ್ತು ನಿಧೀಶ್ ತವರಲ್ಲಿರುವುದು ಅವರ ನಡುವೆ ಅಂತರ ಬೆಳೆಯಿತು.ನಿಶಿತಾಗೆ ಉದ್ಯೋಗ,ಮಗು,ಸಾಲಗಾರರ ಕಾಟ ಇವುಗಳ ನಡುವೆ ಗಂಡನಿಗೆ ಸಮಯ ಕೊಡಲು ಕಷ್ಟವಾಯಿತು.
ಮಗುವಿಗೆ ಎರಡು ವರ್ಷಗಳಾದಾಗ ಉಮಾ ಮಗಳನ್ನು ಗಂಡನ ಮನೆಗೆ ಹೋಗಲು ಹೇಳಿದಳು.ಅಳಿಯ ಮಗಳ ಮಧ್ಯೆ ಸಣ್ಣ ಭಿನ್ನಾಭಿಪ್ರಾಯ ದೊಡ್ಡದಾಗಿ ಬೆಳೆಯುವ ಮೊದಲೇ ಆರಿಸಬೇಕು ಎಂಬುದು ಅವಳ ಚಿಂತನೆಯಾಗಿತ್ತು .ಗಂಡನ ಮನೆಯಿಂದ ಉದ್ಯೋಗಕ್ಕೆ ಹೋಗಲಾರಂಭಿಸಿದಳು ನಿಶಿತಾ. ಒಂದು ದಿನ ಅತ್ತೆ ಮಾವ ಸೊಸೆಯ ಮಧ್ಯೆ ಬಿಕ್ಕಟ್ಟು ಉಂಟಾಯಿತು. "ತವರಿಗಾಗಿಯೇ ದುಡಿಯುವುದಾದರೆ ಅಲ್ಲೇ ಇರು..ಇಲ್ಲಿರಬೇಕಾರೆ ನಿನ್ನ ಸಂಪಾದನೆಯ ಮೊತ್ತವೂ ಇಲ್ಲಿಗೇ ಬರಬೇಕು" ಎಂಬುದು ಅವರ ವಾದವಾಗಿತ್ತು..ಧನುಷ್ ಇದನ್ನು ತಣ್ಣಗಾಗಿಸುವ ಬದಲು ಅವನದೂ ಅದೇ ಅಭಿಪ್ರಾಯವಾಗಿತ್ತು.ಮನವೊಲಿಸಲು ಪ್ರಯತ್ನಿಸಿ ವಿಫಲಳಾದಳು.ಒಂದು ವರುಷ ದೈಹಿಕವಾಗಿ ಮಾನಸಿಕವಾಗಿ ಹಿಂಸೆಯನ್ನು ಅನುಭವಿಸಿದ ನಿಶಿತಾ ತವರು ಸೇರಿದಳು.
ಆಕೆಗೆ ಒಳ್ಳೆಯ ಕಂಪೆನಿಯಲ್ಲಿ ಕೆಲಸ ದೊರೆಯಿತು.ಶ್ರಮವಹಿಸಿ ದುಡಿದು ಹಣವನ್ನು ಅನಾವಶ್ಯಕವಾಗಿ ಪೋಲು ಮಾಡದೆ ಪಕ್ಕಾ ಲೆಕ್ಕವಿಟ್ಟು ಮುಂದುವರಿದು ಮನೆಯ ಸಾಲ ತೀರಿಸಿದಳು.ಬೆಳಗಿನಿಂದ ಸಂಜೆ ಆರೂವರೆ ವರೆಗೆ ಆಫೀಸಿನ ಕೆಲಸ ಮನೆಗೆ ಬಂದು ಮಗನ ಶಾಲೆಯ ಹೋಂ ವರ್ಕ್, ಉದ್ಯಮದ ಲೆಕ್ಕಪತ್ರಗಳ ಪರಿಶೀಲನೆ ನಡೆಸುತ್ತಿದ್ದಳು.ಶನಿವಾರ ಭಾನುವಾರ ಮಗ,ಅಮ್ಮನೊಂದಿಗೆ .. ಅಪ್ಪನ ಉದ್ಯಮ ..ಅಮ್ಮ ಈಗ ನಡೆಸುತ್ತಿರುವ ಉದ್ಯಮ...ತನ್ನ ಕನಸುಗಳ ಸಾಕಾರಗೊಳಿಸಲು ನೆರವಾದ ಉದ್ಯಮದ ಜವಾಬ್ದಾರಿ ಹೊರುತ್ತಿದ್ದಳು .. ಕೆಲಸಗಾರರನ್ನು ಮಾತನಾಡಿಸಿ ವಿವರಗಳನ್ನು ಪಡೆದುಕೊಳ್ಳುತ್ತಿದ್ದಳು.ಎಲ್ಲರ ಕಷ್ಟ ಸುಖ ವಿಚಾರಿಸುತ್ತಿದ್ದಳು.ಇದನ್ನು ಕಂಡ ಕೆಲಸಗಾರರು ನಿಶಿತಾಳಲ್ಲಿ ರಮೇಶ್ ಸರ್ ಅವರ ಗುಣವನ್ನೇ ಕಾಣುತ್ತಿದ್ದರು.
ವ್ಯವಹಾರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡ ನಿಶಿತಾ ವೈಯಕ್ತಿಕ ಜೀವನದ ನೋವನ್ನು ಮರೆತಳು.ಅವಳಿಗೆ ಒಂದು ದಿನ ಅನಿರೀಕ್ಷಿತವಾಗಿ ಬಂದ ಪತ್ರವೊಂದು ಅವಳಿಗೆ ಆಘಾತವನ್ನು ಉಂಟು ಮಾಡಿತು.ಅದೇ ಧನುಷ್ ಕಳುಹಿಸಿದ ಡೈವೋರ್ಸ್ ಪತ್ರ.. ನಿಶಿತಾ ಅದನ್ನು ತಣ್ಣಗೆ ಬದಿಗೆ ಇರಿಸಿದಳು.. ಅವಳಿಗೆ ಧನುಷ್ ಜೊತೆಗೆ ಮುನಿಸಿರಲಿಲ್ಲ.. ಆದರೆ ಜೀವನದ ಜವಾಬ್ದಾರಿಗಳು ಆಕೆ ಕಠಿಣವಾಗುವಂತೆ ಮಾಡಿದ್ದವು.ಆತನಿಂದ ಡೈವೋರ್ಸ್ ಪಡೆದು ಒಂದಿಷ್ಟು ಹಣದಲ್ಲಿ ಪಾಲನ್ನು ಪಡೆಯಲು ಅವಳ ಮನಸ್ಸು ಒಪ್ಪಲಿಲ್ಲ.. ಒಂದು ದಿನ ಧನುಷ್ ಮತ್ತೆ ನನ್ನ ಬಳಿ ಬರುತ್ತಾರೆ ಎಂಬ ನಂಬಿಕೆಯಿತ್ತು.. ತಾಯಿ ಉಮಾ ರೋಸಿಹೋಗಿದ್ದರು.. ದುಂದುವೆಚ್ಚವನ್ನು ಮಾಡದೆ ಇತಿಮಿತಿಯನ್ನು ಅರಿತು ನಡೆದಿದ್ದರೆ ಈ ಬವಣೆ ಇರುತ್ತಿರಲಿಲ್ಲ ಎಂದು ಅವರಿಗೆ ಅನಿಸಿದ್ದಿದೆ..ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಎಂದು ತಮಗೆ ತಾವೇ ಸಮಾಧಾನ ಮಾಡಿಕೊಳ್ಳುತ್ತಿದ್ದರು.
ನಿಧೀಶ್ ಗೆ ಈಗ ಆರು ವರ್ಷ.ತನ್ನ ಶಾಲೆಯ ಸಹಪಾಠಿಗಳಿಗೆಲ್ಲ ಅಪ್ಪನೊಂದಿಗೆ ಬರುವುದನ್ನು ಕಂಡು ತನಗೂ ಅಪ್ಪ ಬೇಕು ಎಂದು ಹೇಳಲು ಆರಂಭಿಸಿದ್ದ.ಅಮ್ಮನಲ್ಲಿ ಆಗಾಗ ಪ್ರಶ್ನಿಸುತ್ತಿದ್ದ.ನಂತರ ಅಮ್ಮಮ್ಮನಲ್ಲಿ ಕೇಳಿ ತಿಳಿದುಕೊಳ್ಳುತ್ತಿದ್ದ .. ಒಂದು ದಿನ ಶಾಲೆಯಲ್ಲಿ ಮಕ್ಕಳೇ ದೇವರಿಗೆ ಒಂದು ಪತ್ರ ಬರೆಯಿರಿ ಎಂದಿದ್ದರು ಅವನ ಶಿಕ್ಷಕಿ..
ನಿಧೀಶ್ ಹೀಗೆ ಬರೆದಿದ್ದ..
ದೇವ್ರೇ...
ಹೇಗಾದ್ರೂ ಮಾಡಿ ನನ್ನ ಅಪ್ಪ ನನ್ನ ಬಳಿ ಬರುವಂತೆ ಮಾಡು...ಮತ್ತೆ ಅಮ್ಮ ನಾನು ಅಪ್ಪ ಒಟ್ಟಿಗೇ ಬದುಕುವಂತೆ ಮಾಡು..ನಿನಗೆಲ್ಲಾ ತಿಳಿಯುತ್ತದಂತೆ.. ಆದರೆ ನನಗೆ ನನ್ನಪ್ಪ ಬೇಕೆಂದು ನಿನಗೆ ತಿಳೀಯೋದಿಲ್ವಾ...
ಅಲ್ಲಾ. ..ನಮ್ಮಜ್ಜಿ ಅಜ್ಜ ಅಮ್ಮನ ಸಂಬಳದ ದುಡ್ಡೆಲ್ಲ ಕೊಡ್ಬೇಕು ಅಂತ ಕೇಳ್ತಾರಂತೆ...ಅಜ್ಜ ದಿನಾ ಕೋರ್ಟ್ ಗೆ ಹೋಗಿ ದುಡೀತಾರಲ್ವಾ..ಅಪ್ಪನೂ ಸಾಫ್ಟವೇರ್ ಇಂಜನಿಯರ್ ಆಗಿ ತುಂಬಾ ದುಡ್ಡು ಗಳಿಸ್ತಾರಂತೆ...ಅದು ಸಾಕಾಗಲ್ವಾ...ಅದರಲ್ಲೇ ಅವರು ತೃಪ್ತಿ ಪಟ್ಟುಕೊಳ್ಳುವಂತೆ ಮಾಡು ಪ್ಲೀಸ್...
ನನ್ನಪ್ಪ ನನ್ನೊಂದಿಗೆ ಆಡ್ತಾ ಇದ್ರು... ಈಗ ಅವ್ರಿಗೆ ಆಡೋ ಆಸೆ ಆಗುವಂತೆ ಮಾಡು ದೇವ್ರೇ.. ಅಜ್ಜಅಜ್ಜಿ ದಿನಾ ನಮ್ಮಮ್ಮನ್ನ ಗೋಳುಹೊಯ್ಕೊಳ್ತಾ ಇದ್ರು...ಅಳಿಸ್ತಾ ಇದ್ರು... ಅವ್ರಿಗೆ ಒಳ್ಳೆ ಬುದ್ಧಿ ಕೊಟ್ಟು ನಮ್ಮಮ್ಮನನ್ನು ಚೆನ್ನಾಗಿ ನೋಡ್ಕೊಳ್ಳುವಂತೆ ಮಾಡು ದೇವ್ರೇ...
ಅಮ್ಮಮ್ಮನನ್ನು ಒಬ್ಬರನ್ನೇ ಬಿಟ್ಟು ಹೋಗ್ತೇನಂತ ಅಂದುಕೊಂಡ್ಯಾ..ದೇವ್ರೇ...ಇಲ್ಲಪ್ಪ..ಅವರ್ಜೊತೆ ನನ್ನನ್ನು ನೋಡಿಕೊಳ್ತಾ ಇದ್ದ ಗಂಗಮ್ಮನನ್ನು ಇರೋಕೆ ಹೇಳಿ ಅಪ್ಪನ ಮನೆಗೆ ಹೋಗ್ತೀನಿ..ಹಾಗೇ ವಾರಕ್ಕೊಮ್ಮೆ ಬಂದು ಅವ್ರನ್ನು ಮಾತಾಡ್ಸಿ ಹೋಗ್ತೀನಿ...ಅವ್ರಿಗೂ ನಾನಂದ್ರೆ ತುಂಬಾ ಇಷ್ಟ..
ನಾನು,ನಮ್ಮಮ್ಮ ,ನಮ್ಮಪ್ಪ,ಅಜ್ಜ ,ಅಜ್ಜಿ ಜೊತೆಯಾಗಿರುವಂತೆ ಮಾಡಿದ್ರೆ ನಿಂಗೆ ಐಸ್ಕ್ರೀಮ್, ಕೇಕ್, ಅಮ್ಮಮ್ಮ ಮಾಡೋ ಉಂಡೆ ,ಕಡುಬು ಎಲ್ಲ ಕೊಡ್ತೀನಿ...ನಾನ್ಹೇಳಿದ್ದು ಮರೀಬೇಡ ದೇವ್ರೇ.. ಪ್ಲೀಸ್...
_ ನಿಧೀಶ್.
ಇದನ್ನು ಓದಿದ ಶಿಕ್ಷಕಿ ಭಾವುಕರಾದರು..ಅವನ ತಂದೆಯ ಮಾಹಿತಿ ಕಲೆಹಾಕಿ ಅವರಿಗೆ ಈ ಪತ್ರವನ್ನು ತಲುಪಿಸಿದರು..
ಅದೇ ದಿನ ಸಂಜೆ ಮನೆಗೆ ಬಂದ ಧನುಷ್ ಕಾಲಿಂಗ್ ಬೆಲ್ ಒತ್ತಿದ .ಅಮ್ಮ ಬಾಗಿಲು ತೆಗೆಯಲಿಲ್ಲ.ಮನೆಯೊಳಗೆ ಲೈಟ್ ಕಾಣಲಿಲ್ಲ.ಅಮ್ಮ ಹೇಳದೆ ಸಾಮಾನ್ಯವಾಗಿ ಎಲ್ಲೂ ಹೋಗುತ್ತಿರಲಿಲ್ಲ..ನೆರೆಹೊರೆಯವರಲ್ಲಿ ವಿಚಾರಿಸಿದಾಗ ಹೊರಗೆ ಹೋದದ್ದು ಅರಿವಾಗಲಿಲ್ಲ ಎಂಬ ಉತ್ತರ ದೊರೆತಿತು.ಹಿಂದಿನ ಬಾಗಿಲು ಒಡೆದು ಒಳಗೆ ಬಂದ ಧನುಷ್.ಅಮ್ಮ ಅಡುಗೆ ಮನೆಯಲ್ಲಿ ಪ್ರಜ್ಞೆಯಿಲ್ಲದೆ ಬಿದ್ದಿದ್ದರು.ಕೂಡಲೇ ಆಸ್ಪತ್ರೆಗೆ ದಾಖಲಿಸಿದ.
ನಿಶಿತಾ ಉಮಾ ಇಬ್ಬರೂ ಕಷ್ಟಪಟ್ಟು ಸಾಲವನ್ನು ತೀರಿಸಿದರು.ಸಂತಸದ ಮನೆಯಲ್ಲಿ ಸಾಲ ವಸೂಲಾತಿಗಾಗಿ ಜನ ಬರುವುದು ನಿಂತಿತು.ನಿಶಿತಾ ತನ್ನ ಗುರಿ ತಲಪಿದಳು.ಉಮಾ ತಾನು ನಂಬಿದ ದೈವಕ್ಕೆ ಸೇವೆಯನ್ನು ಸಲ್ಲಿಸಿ..ತನ್ನ ಮಗಳ ಬಾಳು ಸರಿಮಾಡುವ ಹೊಣೆಯೂ ನಿನ್ನದೇ ಎಂದು ಬೇಡಿಕೊಂಡಳು..
ಧನುಷ್ ನ ತಾಯಿಗೆ ಬ್ರೈನ್ ಹೆಮರೇಜ್ ಆಗಿದ್ದು ಪರಿಸ್ಥಿತಿ ಚಿಂತಾಜನಕವಾಗಿತ್ತು.ವೈದ್ಯರು ಕೆಲವು ದಿನಗಳ ಪ್ರಯತ್ನದ ಬಳಿಕ ಕೈಚೆಲ್ಲಿ ಕುಳಿತರು.ನೋಡಬೇಕಾದವರೆಲ್ಲ ದರ್ಶನ ಪಡೆಯಬಹುದು ಎಂದರು..
ಧನುಷ್ ಗೆ ತನ್ನ ತಾಯಿಯ ಪ್ರೀತಿ, ವಾತ್ಸಲ್ಯವನ್ನು ಕಳೆದುಕೊಳ್ಳುತ್ತೇನೆ ಎಂದು ಅರಿವಾಗುತ್ತಲೇ.. ಕಿಸೆಯಲ್ಲಿದ್ದ ಮಗ ಬರೆದ ಪತ್ರವೂ ನೆನಪಿಗೆ ಬಂತು.."ಈಗ ಬಂದೆ ಅಪ್ಪಾ.." ಎಂದು ತಂದೆಯಲ್ಲಿ ಹೇಳಿ ಆಸ್ಪತ್ರೆಯಿಂದ ಹೊರಟ ಧನುಷ್ ಬಂದು ತಲುಪಿದ್ದು 'ಸಂತಸ' ಮನೆಯ ಅಂಗಳಕ್ಕೆ..
ನಿಶಿತಾಳ ಮಾತೃ ವಾತ್ಸಲ್ಯ ,ತಂದೆ ಅಗಲಿದ ತವರಿನ ಜವಾಬ್ದಾರಿಯ ಹಿಂದಿನ ನೋವು, ಕಾಳಜಿ ಎರಡೂ ಈಗ ಅವನಿಗೆ ಅರ್ಥವಾಗಿತ್ತು.
ನಿಧೀಶ್ ನನ್ನು ಶಾಲೆಗೆ ಹೊರಡಿಸಿ,ತಾನೂ ಆಫೀಸಿಗೆ ಹೊರಟು ನಿಶಿತಾ ಮನೆಯಿಂದ ಹೊರಗಡಿಯಿಟ್ಟಿದ್ದಳು.ಇದ್ದಕ್ಕಿದ್ದಂತೆ ಧನುಷ್ ನನ್ನು ಕಂಡು ಆಶ್ಚರ್ಯವಾಯಿತು..
ಒಂದು ಕೈಯಲ್ಲಿ ಮಗನನ್ನು ಬಾಚಿ ತಬ್ಬಿ ಎತ್ತಿಕೊಂಡ ಧನುಷ್ ಇನ್ನೊಂದು ಕೈಯಲ್ಲಿ ಮಡದಿಯನ್ನು ಆಲಂಗಿಸಿ ಎದೆಗವಚಿಕೊಂಡನು..
ನಿಧೀಶ್ ತನ್ನ ಪುಟ್ಟ ಕೈಗಳಲ್ಲಿ ಅಪ್ಪನ ಮುಖವನ್ನೆತ್ತಿ ಸಿಹಿಮುತ್ತನಿತ್ತನು.ನಿಶಿತಾಳ ಆನಂದಭಾಷ್ಪ ಧನುಷ್ ನ ಎದೆಹರವನ್ನು ತೋಯಿಸಿತು...ಅವಳೆರಡು ತೋಳುಗಳು ಪತಿ ಮಗನನ್ನು ಗಾಢವಾಗಿ ಬಂಧಿಸಿದವು.
ಅನಿರೀಕ್ಷಿತವಾಗಿ ನಡೆದ ಮಗಳ ಕುಟುಂಬದ ಸಮಾಗಮದಿಂದ ತಾಯಿ ಉಮಾಳ ಕಣ್ಣಾಲಿಗಳು ತುಂಬಿಕೊಂಡವು.ಮಗಳ ಕುಟುಂಬ ಸದಾ ಸಂತಸದಿಂದ ಬಾಳುವಂತಾಗಲಿ ಎಂದು ಹರಸಿದರು..
✍️... ಅನಿತಾ ಜಿ.ಕೆ.ಭಟ್.
13-11-2019.
No comments:
Post a Comment