ನನಗೆ ಇನ್ನೂ ಚೆನ್ನಾಗಿ ನೆನಪಿದೆ.ಬೆಳಗ್ಗೆ ಬೇಗ ಎದ್ದು ಅಪ್ಪನೊಡನೆ ಹೊರಟಿದ್ದೆ.ತೊಳೆದು ಮಡಚಿ ಪೆಟ್ಟಿಗೆಯಲ್ಲಿ ಇಟ್ಟಿದ್ದ ಒಂದು ಸಣ್ಣ ಫ್ರಾಕ್ ಧರಿಸಿದ್ದೆ.ಬಹಳ ಬಿಗಿಯುತ್ತಿತ್ತು. ಅಪ್ಪನಲ್ಲಿ ಅಂಗಿ ಸಣ್ಣದಾಗುತ್ತದೆ ಬೇರೆ ತರಬೇಕು ಎಂದಿದ್ದರು ಅಮ್ಮ..ತಲೆಯಾಡಿಸಿದ್ದರು ಅಪ್ಪ.ಶೇವ್ ಮಾಡದೆ ಕುರುಚಲಾಗಿ ಬೆಳೆದ ಗಡ್ಡ ಅಪ್ಪನದು.. ಹೇರ್ ಕಟ್ಟಿಂಗ್ ಯಾವಾಗಲೋ ನೆನಪಾದಾಗ ಮಾಡುತ್ತಿದ್ದರು.ಬಾಯ್ತುಂಬಾ ಎಲೆ ಅಡಿಕೆ ಮೆಲ್ಲುತ್ತಿದ್ದರು.ಬರಿಗಾಲಲ್ಲೇ ನಡೆಯುತ್ತಿದ್ದರು.
ದೊಡ್ಡದಾದ ವಸ್ತ್ರದ ಚೀಲದೊಳಗೆ ಒಂದು ಸ್ಲೇಟು ,ಒಂದು ಕಡ್ಡಿ ಮಾತ್ರವೇ ನನ್ನಲ್ಲಿ ಇದ್ದಿತು.
ನನ್ನನ್ನು ಸರಕಾರಿ ಶಾಲೆಗೆ ಸೇರಿಸಿದ ಅಪ್ಪ ನನಗೆ ಚೆನ್ನಾಗಿ ಓದಬೇಕು ಎಂದು ಹೇಳಿ ತೆರಳಿದ್ದರು.ಅಪ್ಪ ತೆರಳಿದ ದಾರಿಯನ್ನೇ ಎಷ್ಟೋ ಹೊತ್ತು ನೋಡುತ್ತಾ ಕಣ್ಣೀರು ಸುರಿಸುತ್ತಾ ನಿಂತಿದ್ದೆ.ನನ್ನ ತರಗತಿಯ ಬೇರೆ ವಿದ್ಯಾರ್ಥಿಗಳ ಜೊತೆ ಅವರಮ್ಮ ಬಂದಿದ್ದರು.ಅಳುವ ಮಕ್ಕಳನ್ನು ತಲೆನೇವರಿಸಿ ಸಮಾಧಾನಪಡಿಸಿ ತೆರಳುತ್ತಿದ್ದರು.ನನಗೂ ನನ್ನಮ್ಮ ಬಂದಿದ್ದರೆ ಚೆನ್ನಾಗಿತ್ತು ಎಂದು ಅನಿಸಿತ್ತು.ಆದರೂ ಅವರು ಬರಲು ಸಾಧ್ಯವಾಗದ ಸ್ಥಿತಿಯಲ್ಲಿ ಇದ್ದಾರೆ ಎಂಬುದನ್ನು ಅರಿತಿದ್ದೆ.
ಎಲ್ಲರಿಗೂ ಬಣ್ಣಬಣ್ಣದ ಸೊಗಸಾದ ಬ್ಯಾಗ್ ಗಳು,ಬೆಳ್ಳಗಿನ ಕಾಗದದಲ್ಲಿ ಸುಂದರವಾಗಿ ಚಿತ್ರವನ್ನು ಮುದ್ರಿಸಿದ ಪುಸ್ತಕಗಳಿದ್ದವು .ನನ್ನ ಬಳಿ ಅವು ಯಾವುವೂ ಇರಲಿಲ್ಲ.ಬೆಂಚಿನ ಒಂದು ಮೂಲೆಯಲ್ಲಿ ಮುದುಡಿ ಕುಳಿತಿದ್ದೆ.ಅಧ್ಯಾಪಕರು ಹೇಳುತ್ತಿದ್ದ ಪ್ರತಿಮಾತೂ ನನ್ನ ತಲೆಯೊಳಗೆ ಭದ್ರವಾಗಿ ಕುಳಿತಿತ್ತು.ಮಧ್ಯಾಹ್ನ ಎಲ್ಲರೂ ಬುತ್ತಿ ಉಣ್ಣುತ್ತಿದ್ದರು.ನಮ್ಮ ಮನೆಯಲ್ಲಿ ಬುತ್ತಿ ಪಾತ್ರವೇ ಇರಲಿಲ್ಲ.ನಾನು ದಿನವೂ ಒಂದು ಮೈಲು ನಡೆದು ಮಳೆ, ಚಳಿ, ಬಿಸಿಲು ಎನ್ನದೇ ಮಧ್ಯಾಹ್ನ ಮನೆಗೆ ಬಂದು ಉಪ್ಪು ಗಂಜಿ... ಇದ್ದರೆ ಉಪ್ಪಿನಕಾಯಿ ಇಲ್ಲದಿದ್ದರೆ ಇಲ್ಲ... ಉಂಡು ತೆರಳುತ್ತಿದ್ದೆ..ಪುಟ್ಟ ಪಾದಗಳು ನಡೆದು ,ಓಡಿ ನೋಯುತ್ತಿದ್ದವು.ಮೆಲ್ಲನೆ ನಡೆದರೆ ನಾನು ಶಾಲೆ ತಲಪುವ ವೇಳೆ ಶಾಲೆಯ ಗಂಟೆ ಬಾರಿಸುತ್ತಿತ್ತು.
ಹೀಗೆ ನನ್ನ ಶಾಲಾಜೀವನ ನಡೆಯುತ್ತಿದ್ದಂತೆ ಒಂದು ದಿನ ಮಧ್ಯಾಹ್ನ ಮನೆಗೆ ಓಡೋಡಿ ಬರುತ್ತಿದ್ದಾಗ ಗಾಜಿನ ಚೂರು ಕಾಲನ್ನು ಹೊಕ್ಕಿತು.ಕಾಲು ಮೋಟಿಸಿಕೊಂಡು ಮನೆಗೆ ಬಂದು ಊಟಮಾಡಿ ಹೇಗೋ ಮತ್ತೆ ಶಾಲೆಗೆ ಹೋದೆ.ಅಮ್ಮ ರಜೆ ಮಾಡೆಂದರೂ ಕೇಳಲಿಲ್ಲ.ಮಾರನೆಯ ದಿನದಿಂದ ಗಾಯ ಉಲ್ಬಣವಾಗಿ ನೋವು ತಲೆಗೇರಿತ್ತು.ಚಿಕಿತ್ಸೆ ಕೊಡಿಸಲು ಅಪ್ಪ ಮನೆಯಲ್ಲಿಲ್ಲ.ನನ್ನ ಅಪ್ಪ ಅಡುಗೆಭಟ್ಟರಾಗಿದ್ದರು.ಒಮ್ಮೆ ಮನೆಯಿಂದ ಹೊರಟರೆ ಬರುವುದು ಎರಡು ಮೂರು ದಿನವಾಗುತ್ತಿತ್ತು .ಕಾರ್ಯಕ್ರಮಗಳ ಸೀಸನ್ ಇದ್ದಾಗ ಒಂದು ವಾರ ಹತ್ತು ದಿನ ಆಗುವುದೂ ಇತ್ತು.ಅಮ್ಮನಿಗೆ ವಾತದ ಖಾಯಿಲೆ.ಮನೆಯೊಳಗೆ ನಡೆದಾಡಲೂ ಕಷ್ಟಪಡುತ್ತಿದ್ದರು .ನನ್ನನ್ನು ಚಿಕಿತ್ಸೆಗೆ ಕರೆದೊಯ್ಯಲು ಯಾರೂ ಇರಲಿಲ್ಲ.
ನಾಲ್ಕು ದಿನದವರೆಗೆ ಜೀವಹಿಂಡುತ್ತಿದ್ದ ನೋವನ್ನು ಸಹಿಸಿಕೊಂಡು ಕುಳಿತಿದ್ದೆ.ಆ ದಿನ ಅಪ್ಪ ಬರುವಾಗ ರಾತ್ರಿ ಒಂಭತ್ತು ಗಂಟೆಯಾಗಿತ್ತು.ಬಂದವರು ನನ್ನ ಕಾಲನ್ನು ನೋಡಿ ಬೇಸರಗೊಂಡು ನಡೆಯಲಾಗದ ನನ್ನನ್ನು ಎತ್ತಿಕೊಂಡು ಡಾಕ್ಟರ್ ಪ್ರಸಾದ ಮಾವನ ಮನೆಗೆ ಹೋದರು.. ಇಷ್ಟು ಜೋರಾಗುವವರೆಗೆ ಏಕೆ ಸುಮ್ಮನೆ ಕುಳಿತಿರಿ..? ಎಂದು ತಂದೆಗೇ ಜೋರು ಮಾಡಿದ ವೈದ್ಯರು ಚಿಕಿತ್ಸೆ ನೀಡಿದಾಗ ಸ್ವಲ್ಪ ನೋವು ವಾಸಿಯಾಯಿತು.ಪೂರ್ತಿ ವಾಸಿಯಾಗಲು ಒಂದು ತಿಂಗಳೇ ಬೇಕಾಯಿತು.ನಂತರವೇ ಶಾಲೆಗೆ ತೆರಳಿದೆ.
ಅಕ್ಷರ ಕಲಿಯಲು ತೆರಳುತ್ತಿದ್ದ ನನ್ನ ಪುಟ್ಟ ಪಾದಗಳಿಗೆ ರಕ್ಷಣೆ ಬೇಕಾಗಿತ್ತು.ಗೆಳತಿಯರ ಬಳಿ ಅಂದ ಚಂದದ ಚಪ್ಪಲಿಗಳಿದ್ದವು .ನಾನೂ ಅಪ್ಪನಲ್ಲಿ ಕೇಳಿದೆ.. ಅಪ್ಪಾ.. ನನಗೊಂದು ಜೊತೆ ಚಪ್ಪಲಿ ತರುತ್ತೀರಾ.. ಎಂದು ..ಅಪ್ಪ ಮೌನಿಯಾಗಿದ್ದರು.ಅಡುಗೆಗೆ ತೆರಳಿದ ಅಪ್ಪ ಇಂದು ಬರುತ್ತಾರಾ ನಾಳೆ ಬರುತ್ತಾರಾ ಎಂದು ಕಾಯುತ್ತಿದ್ದೆ.ಒಂದು ದಿನ ಬಂದರು.ಚಪ್ಪಲಿ ಇದೆಯಾ ಎಂದು ಮೊದಲು ನೋಡಿದೆ.ಇರಲಿಲ್ಲ ಕಣ್ತುಂಬಿ ಬಂತು.ತಡೆದುಕೊಂಡೆ .ನನಗಾಗ ಹವಾಯಿ ಚಪ್ಪಲಿ ತಂದರೂ ಸಾಕಾಗಿತ್ತು.ಖುಷಿಪಡುತ್ತಿದ್ದೆ...ಮನೆಯ ಕಷ್ಟದ ಪರಿಸ್ಥಿತಿ ನನಗೆ ಅರಿವಾಗಿತ್ತು..ಅಮ್ಮನ ಖಾಯಿಲೆ,ಸೋರುತ್ತಿದ್ದ ಪುಟ್ಟ ಗುಡಿಸಲಿನಂತಿದ್ದ ಮಣ್ಣಿನ ಗೋಡೆಯ ಮುಳಿಯ ಮಾಡಿನ ಮನೆ.
ಮನೆಯಲ್ಲಿ ರಾತ್ರಿ ಮಲಗುವ ಮುನ್ನ ಅಮ್ಮ ಕುಚ್ಚಿಲಕ್ಕಿಯನ್ನು ಅನ್ನಮಾಡಲು ಅಲ್ಯೂಮಿನಿಯಂ ಪಾತ್ರೆಯಲ್ಲಿ ಒಲೆಯ ಮೇಲಿಟ್ಟು ಬೆಂಕಿಹಾಕುತ್ತಿದ್ದಳು.ಬೆಳಗ್ಗೆ ಗಂಜಿ ಬೆಂದಿರುತ್ತಿತ್ತು.ಅದಕ್ಕಿಷ್ಟು ಉಪ್ಪು ಸೇರಿಸಿ ಉಣ್ಣುತ್ತಿದ್ದೆವು.ಒಮ್ಮೊಮ್ಮೆ ಅಪ್ಪ ಅಡುಗೆಗೆ ತೆರಳಿದಲ್ಲಿ ಉಳಿದಿದ್ದ ಉಪ್ಪಿನಕಾಯಿ ತಂದರೆ ಅದು ಮುಗಿಯುವ ತನಕ ನಮಗೆ ಮೃಷ್ಟಾನ್ನ ಭೋಜನವ ಸವಿದಂತೆ ಭಾಸವಾಗುತ್ತಿತ್ತು.
ಒಂದು ದಿನ ನಿತ್ರಾಣವೆಂದು ಮಧ್ಯಾಹ್ನ ಮನೆಗೆ ಬರಲು ಉದಾಸೀನ ಮಾಡಿದ್ದೆ.ಟೀಚರ್ ಗೊತ್ತಾದರೆ ಗದರಿಸುವರೆಂದು ಶಾಲೆಯ ಹಿಂಬದಿ ಕುಳಿತಿದ್ದೆ ಎಲ್ಲರದೂ ಊಟ ಆಗಲಿ ಎಂದು... ಆದರೆ ಇಂದಿರಾ ಟೀಚರ್ ಗೆ ಸುದ್ದಿ ಗೊತ್ತಾಯಿತು.. ಮಕ್ಕಳು ಉಪವಾಸ ಇರಬಾರದು.. ಎಂದು ಅವರ ಬುತ್ತಿಯಲ್ಲಿದ್ದ ದೋಸೆಯನ್ನು ಚೂರು ಸಾಂಬಾರ್ ಅನ್ನೂ ನೀಡಿದ್ದರು.. ಆಹಾ...!!ತುಪ್ಪ ಸವರಿದ ಉದ್ದಿನ ದೋಸೆಯ ರುಚಿಗೆ ಮಾರುಹೋಗಿದ್ದೆ..ಇನ್ನು ನಾಲ್ಕು ಕೊಟ್ಟರೂ ತಿನ್ನುತ್ತಿದ್ದೆ ಎನ್ನುವಷ್ಟು ಹಸಿವೆ ,ಆಸೆ ಇತ್ತು.. ಹೀಗೆ ಆಗಾಗ ಟೀಚರ್ ನನಗೆ ಆಹಾರ ಕೊಡುತ್ತಿದ್ದರು...
ಅಪ್ಪ ಕೆಲವು ಮನೆಗಳಿಗೆ ತಿಥಿಅಡುಗೆಗೆ ಹೋದರೆ ತಿಥಿಗೆ ಮಾಡಿದ ಸುಕ್ರುಂಡೆ,ಒಡೆಸುಟ್ಟವು ಕಜ್ಜಾಯಗಳನ್ನು ಮನೆಗೆ ಕೊಡುತ್ತಿದ್ದರು.ಪೂಜೆಯಿದ್ದರೆ ಜಿಲೇಬಿ,ಲಾಡು ನಾಲ್ಕು ಕಟ್ಟಿಕೊಡುತ್ತಿದ್ದರು . ಒಂದು ಸಲ ಮದುವೆ ಮನೆಯಿಂದ ಹತ್ತು ಹೋಳಿಗೆ ತಂದಿದ್ದರು .. ನಾನೂ ತಮ್ಮಾ ಎರಡು ದಿನ ತಿಂದಿದ್ದೆವು.ಮಾರನೆ ದಿನವೂ ಹೋಳಿಗೆ ಬೇಕೆಂದು ಹಠ ಹಿಡಿದಾಗ ಅಮ್ಮ ಗದರಿದ್ದರು...ಆ ಅಡಿಗೆ ಕಿಟ್ಟಣ್ಣ ಹೋಳಿಗೆ ಕಟ್ಟಿ ಜೋಳಿಗೆಗೆ ತುಂಬಿಸಿದ್ದ... ಹೇಳಿ ಎಲ್ಲರಿಂದಲೂ ಹೇಳಿಸಿಕೊಂಡರೆ ಏನು ಚಂದ ಎಂದು..ಸಮ್ಮನಾಗಿದ್ದೆ..ಪಾಪ.. ಅಪ್ಪನಿಗೆ ಹೋಳಿಗೆ ಮಾಡುವಾಗ ಮನೆಯಲ್ಲಿರುವ ಹಸಿದಿರುವ ಪುಟ್ಟ ಮಕ್ಕಳ ನೆನಪಾಗಿದ್ದಿರಬೇಕು ..ಅದಕ್ಕೇ ಕೆಲವು ಹೋಳಿಗೆ ಮಕ್ಕಳಿಗಾಯಿತೆಂದು ಎತ್ತಿಕೊಂಡು ಬಂದಿರಬೇಕು..ಮಕ್ಕಳ ಮೇಲಿರುವ ಅಪ್ಪನ ಮಮಕಾರ ಅಂದು ನನಗೆ ಅರಿವಾಗಿತ್ತು..
ಆಗ ನಾನು ಐದನೇ ತರಗತಿಯಲ್ಲಿದ್ದೆ.ಆರೋಗ್ಯವಿಲ್ಲದ ಅಮ್ಮನಿಗೆ ಎಲ್ಲದರಲ್ಲೂ ಸಹಾಯ ಮಾಡುತ್ತಿದ್ದೆ.ಒಂದು ಭಾನುವಾರ ಇಂದು ತಿಂಡಿಯೇ ಬೇಕೆಂದು ಹಠ ಹಿಡಿದೆ..ನಾನೇ ಮಾಡುವೆ ನೀನು ಹೇಳಿಕೊಡು ಎಂದಿದ್ದೆ..ಅಮ್ಮ ಬೆಳ್ತಿಗೆ ನೀರಿಗೆ ಹಾಕಿ ನೆನೆಸಿಟ್ಟಿದ್ದರು .ಎಷ್ಟೋ ಸಮಯದಿಂದ ಉಪಯೋಗಿಸದ ರುಬ್ಬುವ ಕಲ್ಲು ಧೂಳಿನಿಂದ ತುಂಬಿತ್ತು.ಅಮ್ಮಹೇಳಿದಂತೆ ಶುಚಿಗೊಳಿಸಿ ಅಕ್ಕಿ ಕಡೆದೆ... ಹಿಟ್ಟು ಕಷ್ಟಪಟ್ಟು ತೆಗೆದೆ.. ಅಮ್ಮ ದೋಸೆ ಮಾಡಿದಳು.ತೆಂಗಿನಕಾಯಿಯೊಂದನ್ನು ಹೇಗೇಗೋ ಕಷ್ಟದಿಂದ ಸುಲಿದೆ...ಒಡೆದೆ... ಎರಡು ತುಂಡಾಗುವ ಬದಲು ನಾಲ್ಕು ಹೋಳಾಯಿತು..ಕೆರಮಣೆಯಲ್ಲಿ ಕೆರೆದೆ... ಅದಕ್ಕೊಂದಿಷ್ಟು ಬೆಲ್ಲವನ್ನು ಸೇರಿಸಿ ಬೆಲ್ಲಕಾಯಿಸುಳಿ ಮಾಡಿದೆ..ಅಮ್ಮ ದೋಸೆಯೆರೆದು ಬಟ್ಟಲಿಗೆ ಬಡಿಸುತ್ತಿದ್ದಂತೆಯೇ ನಾನೂ ತಮ್ಮನೂ ಬೆಲ್ಲಸುಳಿಯೊಂದಿಗೆ ಗಬಗಬನೆ ತಿಂದು ಮುಗಿಸುತ್ತಿದ್ದೆವು.. ಇಬ್ಬರೂ ಹೊಟ್ಟೆ ತುಂಬಾ ತಿಂದು ತೇಗಿದ್ದನ್ನು ಕಂಡಾಗ ಅಮ್ಮನ ಕಣ್ಣಂಚಿನಲ್ಲಿ ನೀರು ಜಿನುಗಿತ್ತು.ಹರಿದು ನೇತಾಡುತ್ತಿದ್ದ ತನ್ನ ಸೀರೆಯಂಚಿನಿಂದ ಕಣ್ಣೀರನ್ನು ಒರೆಸಿಕೊಂಡಳು..
ನಾನು ಆರನೆಯ ತರಗತಿಯಲ್ಲಿ ಓದುತ್ತಿದ್ದಾಗ ನಮ್ಮೂರಿನ ಖಾಸಗಿ ಪ್ರೌಢಶಾಲೆಯಲ್ಲಿ ಶಾರದೋತ್ಸವ ಇರುವ ವಿಷಯ ಮನೆಸಮೀಪದಲ್ಲಿರುವ ಗೆಳತಿ ಹೇಳಿದ್ದಳು.ನನಗೂ ಹೋಗಬೇಕೆಂಬ ಆಸೆ.ಅಮ್ಮನಲ್ಲಿ ಕೇಳಿದರೆ ಒಪ್ಪಲಿಲ್ಲ.ನಮಗೆ ಕರೆಯೋಲೆ ಬರದೆ ಹೋಗುವುದು ಬೇಡ..ಮತ್ತೆ ಜೊತೆಗೆ ನನಗೂ ಬರಲಾಗುವುದಿಲ್ಲ ಎಂದಿದ್ದರು..ನಮ್ಮಲ್ಲಿಗೆ ವಂತಿಗೆ ಸಂಗ್ರಹಿಸಿ ಕರೆಯೋಲೆಗಳನ್ನು ಹಂಚುವವರು ಯಾರೂ ಬರುತ್ತಿರಲಿಲ್ಲ.ಏಕೆಂದರೆ ದೇಣಿಗೆ ಕೊಡುವಷ್ಟು ಸಿರಿವಂತರು ನಾವಾಗಿರಲಿಲ್ಲ..ಆದರೂ ಹಠಹಿಡಿದು ಅಮ್ಮನನ್ನು ಒಪ್ಪಿಸಿ ಗೆಳತಿಯ ಕುಟುಂಬದೊಂದಿಗೆ ತೆರಳಿದ್ದೆ.
ಅಲ್ಲಿ ಶಾರದಾದೇವಿಗೆ ನಮಸ್ಕಾರ ಮಾಡಿ ಹೊರಗೆ ಬಂದಾಗ ಧ್ವನಿವರ್ಧಕದಲ್ಲಿ ಉದ್ಘೋಷಣೆ ಮಾಡುತ್ತಿದ್ದರು. ದುಂಡಕ್ಷರ ಸ್ಪರ್ಧೆ ಪ್ರಾಥಮಿಕ ಶಾಲಾ ಮಕ್ಕಳಿಗೆ ಸೇರುವವರು ಬನ್ನಿ ಎಂದು..ನನಗೂ ಹೋಗುವ ಆಸೆ.ಗೆಳತಿಯೊಂದಿಗೆ ತೆರಳಿ ಹೆಸರು ಕೊಟ್ಟೆ.ಎಲ್ಲರ ಬಳಿ ಪೆನ್ನು , ಅಡಿಯಲ್ಲಿ ಇಟ್ಟುಕೊಳ್ಳಲು ಕಾರ್ಡ್ ಬೋರ್ಡ್ ಇತ್ತು..ನನ್ನಲ್ಲಿ ಗೆಳತಿಯಲ್ಲಿ ಏನೂ ಇರಲಿಲ್ಲ.ಸಂಘಟಕರೇ ಒಂದು ನೀಲಿ ಷಾಯಿಯ ರೆನೋಲ್ಡ್ಸ್
ಪೆನ್ನು ಕೊಟ್ಟರು.ಬರೀ ಡೆಸ್ಕ್ ನ ಮೇಲೆ ಕಾಗದವನ್ನಿಟ್ಟು ಹೇಳುವುದನ್ನು ಶ್ರದ್ಧೆಯಿಂದ ಕೇಳಿ ಬರೆದು ಬಂದೆ..ರಾತ್ರಿಯ ಸಭಾ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ಎಂದಿದ್ದರು..ಬಹುಮಾನ ವಿಜೇತರ ಹೆಸರನ್ನು ಘೋಷಿಸುವ ಮೊದಲೇ ಮನೆಗೆ ಬರಬೇಕಾದ ಅಗತ್ಯವಿತ್ತು ಗೆಳತಿಯ ಮನೆಯವರಿಗೆ.ಮನೆಗೆ ಮರಳಿದೆವು.
ರಾತ್ರಿ ಸಭಾ ಕಾರ್ಯಕ್ರಮ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಯಕ್ಷಗಾನ ಬಯಲಾಟ ಎಲ್ಲ ಇದ್ದವು.ನನಗೆ ಹೋಗುವ ಬಯಕೆ..ನನಗೆ ಬಹುಮಾನ ಇದ್ದರೆ ಎಂದು ಸಣ್ಣ ನಿರೀಕ್ಷೆ.ಅಮ್ಮನ ಒಪ್ಪಿಗೆ ಪಡೆದು ನೆರೆಹೊರೆಯವರಲ್ಲಿ ಯಾರಾದರೂ ಹೋಗುವವರಿದ್ದಾರಾ ಎಂದು ವಿಚಾರಿಸಿದೆ.ನನ್ನ ಅದೃಷ್ಟ ಚೆನ್ನಾಗಿತ್ತು.ಇನ್ನೊಂದು ಮನೆಯ ಹೆಂಗಸರು ಜೊತೆಯಾದರು.ಹೋಗಿ ಕುಳಿತವಳಿಗೆ ಬಹುಮಾನ ವಿತರಣೆ ಯಾವಾಗ ಆರಂಭವಾಗುವುದೋ..ನನ್ನ ಹೆಸರು ಇರಬಹುದೋ ಎಂಬ ಕಾತರ...ಬಹುಮಾನ ವಿತರಣಾ ಸಮಾರಂಭ ಆರಂಭವಾಗಿ ದುಂಡಕ್ಷರ ಸ್ಪರ್ಧೆ ಪ್ರಥಮ ಬಹುಮಾನ ಪ್ರತಿಭಾ ಉಪಾಧ್ಯಾಯ ಅಂದಾಗ ವೇದಿಕೆಗೆ ನಗುನಗುತ್ತಾ ಓಡಿಕೊಂಡೇ ಹೋಗಿದ್ದೆ...ಕಣ್ಣುಗಳಲ್ಲಿ ಹೊಳಪಿತ್ತು..ಕಷ್ಟದ ಬದುಕಿಗೆ ಮೊದಲ ಗೆಲುವು ರೋಮಾಂಚನಗೊಳ್ಳುವಂತೆ ಮಾಡಿತ್ತು.ಬಹುಮಾನ ಸ್ವೀಕರಿಸಿ ಬಹುಮಾನ ನೀಡಿದ ಸಭಾಧ್ಯಕ್ಷರ ಕಾಲಿಗೆ ಬಾಗಿ ನಮಸ್ಕರಿಸಿ ವೇದಿಕೆಯ ಕೆಳಗಿಳಿದು ಬಂದೆ.ಮೊದಲು ಅಭಿನಂದನಾ ಪತ್ರವನ್ನು ಓದಿ ಕಣ್ಣಿಗೊತ್ತಿಕೊಂಡೆ . ಕವರ್ ನಲ್ಲಿ ಪುಟ್ಟ ಲೋಟ ಇರುವಂತೆ ತೋರಿತು.ಮನೆಗೆ ತೆರಳಿ ಅಮ್ಮನೆದುರೇ ಬಿಚ್ಚುವುದೆಂದು ಹಾಗೇ ಇಟ್ಟಿದ್ದೆ.
ಮಳೆಬರುವ ಸೂಚನೆಯಿತ್ತು.ಜೊತೆಗಿದ್ದವರು ಹೊರಡೋಣ ಎಂದಾಗ ಹೊರಟು ಮನೆಗೆ ತೆರಳಿದೆ..ಅಮ್ಮನ ಮುಂದೆ ಹಿಡಿದಾಗ ಅಮ್ಮನಿಗೇನು ಆನಂದ ಅಂತೀರಿ... ಇದುವರೆಗೆ ನಾನವಳ ಮುಖದಲ್ಲಿ ಅಷ್ಟು ಸಂತಸ ಎಂದೂ ಕಂಡಿರಲಿಲ್ಲ.. ಖುಷಿಯಿಂದ ನನ್ನ ತಬ್ಬಿ ಹಿಡಿದು ಹೀಗೇ ಬೆಳೆಯುತಿರು ಮಗಳೇ ಎಂದಿದ್ದಳು..ಬೆಳಗೆದ್ದವನೇ ತಮ್ಮ ಅಕ್ಕಾ..ಈ ಲೋಟದಲ್ಲಿ ನನಗೆ ಜಾಯಿ ಕುಡಿಯಬೇಕು ಅಂದಿದ್ದ..ಆದರೆ ನಮ್ಮ ಮನೆಯಲ್ಲಿ ಹಾಲು ಎಲ್ಲಿತ್ತು..ದನಸಾಕಲು ಅಮ್ಮನಿಗೆ ಸಾಧ್ಯವಿಲ್ಲ..ಅಪ್ಪ ಸಮಾರಂಭಗಳಲ್ಲಿ ಅಡುಗೆಮಾಡಿ ಎಲ್ಲರ ಹಸಿವೆ ತಣಿಸಿ ಸಿಕ್ಕ ದುಡ್ಡಲ್ಲಿ ನಮ್ಮ ಜೀವನ.. ಮನೆಯಲ್ಲಿ ಇದ್ದುದು ನಾಲ್ಕೇ ನಾಲ್ಕು ನಜ್ಜುಗುಜ್ಜಾದ ಲೋಟ.ಈ ಲೋಟ ಕಂಡು ನಮಗೆ ಹಾಲು ಕುಡಿಯುವ ಆಸೆಯಾಗಿದ್ದು ಸುಮ್ಮನೆ ಅಲ್ಲ..
ಅಪ್ಪ ಬಂದವರು ಲೋಟವನ್ನು ನೋಡಿ ಈ ಲೋಟದಲ್ಲಿ ಕುಡಿಯಲು ಪಕ್ಕದ ಕೃಷ್ಣ ಶಾಸ್ತ್ರಿಗಳ ಮನೆಯಿಂದ ದಿನವೂ ಒಂದು ಕುಡ್ತೆ ಹಾಲು ತಾ ಮಗಳೇ ಎಂದು ಹೇಳಿದ್ದರು..ಅಂದಿನಿಂದ ದಿನವೂ ಹಾಲು ಕುಡಿದವರು ನಾವು.ಒಂದುಕುಡ್ತೆ ಹಾಲಿಗೆ ಅಷ್ಟೇ ನೀರು ಸೇರಿಸಿ ಅಮ್ಮ ಕಾಯಿಸುವುದು..ಮೊದಲು ತಮ್ಮ ಕುಡಿದ ನಂತರ ಲೋಟವನ್ನು ತೊಳೆದು ನಾನು ಹಾಲು ಕುಡಿಯುತ್ತಿದ್ದೆ...
ಮುಂದೆ ಅದೇ ಖಾಸಗಿ ಪ್ರೌಢಶಾಲೆಗೆ ಎಂಟನೇ ತರಗತಿಗೆ ಸೇರಿದೆ.ಬಡತನ ವಿದ್ಯೆಗೆ ಅಡ್ಡಿ ಬರಲಿಲ್ಲ..ಮನೆಯ ಕೆಲಸಗಳನ್ನು ಮಾಡಿ ಶಾಲೆಗೆ ತೆರಳುತ್ತಿದ್ದ ನಾನು ಪ್ರೌಢಶಾಲೆಯಲ್ಲಿ ಮೊದಲಿಗಳಾಗಿ ಉತ್ತೀರ್ಣಳಾಗಿದ್ದೆ..ದತ್ತಿ ಪ್ರಶಸ್ತಿಗಳೆಲ್ಲ ಸೇರಿ ಒಂದೂವರೆ ಸಾವಿರ ರೂಪಾಯಿಗಳು ಬಹುಮಾನವಾಗಿ ದೊರೆತಾಗ ನಾನು ಆನಂದದ ಅಲೆಯಲ್ಲಿ ತೇಲಿದ್ದೆ.ನನ್ನ ಮುಂದಿನ ವಿದ್ಯಾಭ್ಯಾಸಕ್ಕೆ ದುಡ್ಡಿನ ಅವಶ್ಯಕತೆ ಇತ್ತು.ಆದರೆ ಯಾರಲ್ಲೂ ಕೈಯೊಡ್ಡಲಿಲ್ಲ.ಡಾಕ್ಟರ್ ಪ್ರಸಾದ್ ಮಾವನ ಮನೆಯಲ್ಲಿ ಅಡಿಕೆ ಸುಲಿದು ದುಡ್ಡು ಸಂಪಾದನೆ ಮಾಡಿ ಶಾಲೆಯ ಶುಲ್ಕ ಕಟ್ಟಲು ಅಪ್ಪನ ಕೈಗಿತ್ತೆ..
ಪಿಯುಸಿ ವಿಜ್ಞಾನದ ವಿದ್ಯಾರ್ಥಿನಿಯಾದೆ .. ಒಂದು ದಿನ ಗೆಳತಿ ಸುಮಾ ಗೆಳೆಯ ಗೆಳತಿಯರಿಗೆ ಇಂದು ನಾನು ಪಾರ್ಟಿ ಕೊಡುತ್ತೇನೆ..ಬಾರೇ.. ನೀನೂ ಪ್ರತಿಭಾ.. ಅಂದಿದ್ದಳು.ಅವಳಪ್ಪ ಶಿಕ್ಷಣ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದರು..ಆಮ್ಮನೂ ಸರಕಾರಿ ಶಾಲಾ ಶಿಕ್ಷಕಿ... ಅವಳಿಗೆ ಹಿಂದುಳಿದ ವರ್ಗದ ಅಡಿಯಲ್ಲಿ ವಿದ್ಯಾರ್ಥಿ ವೇತನ ಬಂದಿತ್ತು.. ಅದನ್ನು ಪಾರ್ಟಿ ಕೊಟ್ಟು ಖರ್ಚು ಮಾಡುವ ಯೋಚನೆ ಅವಳದು...ವಿದ್ಯಾರ್ಜನೆಗೆ ಆಕೆಗೆ ಸ್ಕಾಲರ್ ಶಿಪ್ ದುಡ್ಡು ಬೇಕಾಗಿರಲಿಲ್ಲ...ಸರಕಾರ ಬಡವರ ವಿದ್ಯಾಭ್ಯಾಸಕ್ಕೆ ಕೊಡುವ ಹಣವನ್ನು ಈ ರೀತಿ ಪೋಲು ಮಾಡುವುದು ನನಗೆ ಸರಿಕಾಣಲಿಲ್ಲ.ನಾನು ಪಾರ್ಟಿಗೆ ಹೋಗದೆ ಸೀದಾ ಪ್ರಸಾದ್ ಮಾವನ ಮನೆಗೆ ಬಂದೆ ಅಡಿಕೆ ಸುಲಿಯಲು..ಸಂಜೆಯ ವೇಳೆ ಮನೆಯೊಡತಿ ಕೊಟ್ಟ ಬೆಳಿಗ್ಗೆ ಎರೆದಿಟ್ಟ ಎರಡು ತೆಳ್ಳವು ದೋಸೆ (ನೀರ್ದೋಸೆ) ಒಂದು ಕಪ್ ಬಿಸಿಬಿಸಿ ಚಹಾ ಒಂದು ಸೌಟು ಸಾಂಬಾರ್ ... ಮತ್ತೆ ಸ್ವಲ್ಪ ಕೈ ಖರ್ಚಿಗೆ ದುಡ್ಡು ಇಷ್ಟು ದೊರೆಯಿತು.ರಾತ್ರಿಯಾಗುವ ಮುನ್ನ ಅಡಕೆಸುಲಿದು ನೋಯುತ್ತಿದ್ದ ಕೈಗಳನ್ನು ಸವರಿಕೊಂಡು ಮನೆಯತ್ತ ಹೆಜ್ಜೆಹಾಕಿದೆ..ಯಾರಿಗೋ ಅಗತ್ಯವಿರುವ ವಿದ್ಯಾರ್ಥಿ ವೇತನ ಇನ್ನಾರಿಗೋ ಮೋಜು ಮಸ್ತಿ ಗೆ ಬಳಕೆಯಾಗುತ್ತಿದೆ.. ನಾನು ಬ್ರಾಹ್ಮಣ ಎಂಬ ಹಣೆಪಟ್ಟಿ ಹೊತ್ತುಕೊಂಡು ಹುಟ್ಟಿದವಳು ...ಆರ್ಥಿಕ ಸ್ಥಿತಿ ವಿದ್ಯಾರ್ಥಿ ವೇತನಕ್ಕೆ ಮಾನದಂಡವಲ್ಲ.. ಎಂಬ ನೋವು ಕಾಡುತ್ತಿತ್ತು..
ಹೀಗೆ ಕಷ್ಟಪಟ್ಟು ಓದಿ ನಾನು ಬಿಎಸ್ಸೀ, ಬಿಎಡ್ ಫೂರ್ಣಗೊಳಿಸಿದೆ...ಸರಕಾರಿ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಗೆ ಬರೆದೆ..ಮೊದಲ ಪ್ರಯತ್ನದಲ್ಲೇ ಯಶಸ್ಸು ಸಾಧಿಸಿದೆ.ಪ್ರೌಢಶಾಲೆಯೊಂದರಲ್ಲಿ ಶಿಕ್ಷಕಿಯಾದೆ .. ಒಂದು ದಿನ ನಮ್ಮ ಮನೆಗೆ ನನ್ನ ಶಾಲೆಯ ಮುಖ್ಯೋಪಾಧ್ಯಾಯರು ಪ್ರಭಾಕರ ಸರ್ ಬಂದರು.ಆ ದಿನ ತಂದೆಯೂ ಅನಾರೋಗ್ಯ ಕೆಮ್ಮು ದಮ್ಮು ಎಂದು ಮನೆಯಲ್ಲಿದ್ದರು ... ತಮ್ಮೊಂದಿಗೆ ಬಂದ ತಮ್ಮ ಮಗನನ್ನು ಪರಿಚಯಿಸಿದರು.ಬ್ಯಾಂಕ್ ನಲ್ಲಿ ಆಫೀಸರ್ ಆಗಿದ್ದಾನೆ ಎಂದರು.ಅಪ್ಪನ ಬಳಿ ಬಂದು ...ನಿಮ್ಮ ಮಗಳು ಪ್ರತಿಭಾಳ ಚುರುಕುತನ, ಕೆಲಸದಲ್ಲಿ ಶ್ರದ್ಧೆ, ಅಚ್ಚುಕಟ್ಟುತನ ನನಗೆ ಬಹಳ ಹಿಡಿಸಿದೆ.ನೀವು ಒಪ್ಪುವುದಾದರೆ ಅವಳನ್ನೇ ಮಗನಿಗೆ ತಂದುಕೊಳ್ಳಬೇಕೆಂದಿದ್ದೇನೆ.. ಎಂದು ಹೇಳಿದರು.
ಬೇಡವೆನ್ನಲು ಮನೆಯವರಿಗೆ ಯಾವ ಕಾರಣವೂ ಇರಲಿಲ್ಲ.ನನ್ನ ಬಳಿ ತಂದೆತಾಯಿ ಕೇಳಿದಾಗ ತಲೆತಗ್ಗಿಸಿ ನಿಮ್ಮಿಷ್ಟ ಎಂದಿದ್ದೆ..ನಿಜ ಹೇಳಬೇಕೆಂದರೆ ರಾಜ್ ನನಗೆ ಮೊದಲ ನೋಟದಲ್ಲೇ ಇಷ್ಟವಾಗಿದ್ದರು.. ಆದರೆ.. ಹೇಳಲು ನಾಚಿಕೆಯಾಗಿತ್ತು...ಆಗ ನನಗೆ... ಮದುವೆ ನನ್ನ ತಂದೆತಾಯಿಗೆ ಯಾವುದೇ ಹೊರೆಯಾಗದಂತೆ ನಡೆಯಿತು..ಮಾವ ಬಹಳ ಸರಳವಾಗಿ ಮದುವೆ ಮಾಡಿಕೊಡಿ ಸಾಕು ಎಂದಿದ್ದರು...ಮದುವೆಯ ನಂತರ ನನಗೆ ನನ್ನವರಿದ್ದ ಕಡೆಗೆ ಟ್ರಾನ್ಸ್ಫರ್ ಮಾಡಲು ಮಾವನೇ ಓಡಾಡಿದ್ದರು.
ಪಟ್ಟಣದಲ್ಲಿ ಮನೆ ಮಾಡಿಕೊಂಡೆವು.. ಅನಾರೋಗ್ಯದಿಂದ ಬಳಲುತ್ತಿದ್ದ ಅಮ್ಮನನ್ನು ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿ ಈಗ ಆರೋಗ್ಯ ಸುಧಾರಿಸಿದೆ.. ರಾತ್ರಿ ಸರಿಯಾಗಿ ನಿದ್ದೆಯಿಲ್ಲದೆ ಒಲೆಯ ಬುಡದಲ್ಲಿ ಕೆಲಸಮಾಡುತ್ತಿದ್ದ ಅಪ್ಪನಿಗೆ ಕೆಮ್ಮು ದಮ್ಮು ಕಾಡುತ್ತಿತ್ತು.ತಜ್ಞರ ಚಿಕಿತ್ಸೆ ದಿನವೂ ಇನ್ಹೇಲರ್ ಬಳಕೆ ಅಪ್ಪನ ಆರೋಗ್ಯವನ್ನು ನಿಯಂತ್ರಣಕ್ಕೆ ತಂದಿತು.. ತಮ್ಮನನ್ನು ಇಂಜಿನಿಯರಿಂಗ್ ಓದಿಸುತ್ತಿದ್ದೇನೆ..ಅಪ್ಪ ಅಮ್ಮನಿಗೆ ಪೌಷ್ಟಿಕ ಆಹಾರ... ಅನಾರೋಗ್ಯಕ್ಕೆ ಔಷಧ.... ಕಣ್ತುಂಬಾ ನಿದ್ದೆ...ನೆಮ್ಮದಿಯ ಜೀವನ ಸಾಧ್ಯವಾಗಿಸಿದ್ದು ನನ್ನ ಅಕ್ಷರದ ಒಲವು ...
ಅಪ್ಪ ಅಮ್ಮನ ಮಡಿಲಲ್ಲಿ ನನ್ನ ಇಬ್ಬರು ಪುಟ್ಟ ಮಕ್ಕಳನ್ನು ಬಿಟ್ಟು ನಾನೂ ಪತಿಯೂ ಉದ್ಯೋಗಕ್ಕೆ ತೆರಳುತ್ತೇವೆ.ನಮ್ಮನ್ನು ಸಾಕಲು ಕಷ್ಟಪಟ್ಟ ಅಮ್ಮ ಇಂದು ಆರೋಗ್ಯದಿಂದ ಇದ್ದು ಮೊಮ್ಮಕ್ಕಳ ಲಾಲನೆ ಪಾಲನೆ ಮಾಡುತ್ತಿದ್ದಾಳೆ. ಅತ್ತೆ ಮಾವನನ್ನೂ ಅಷ್ಟೇ ಪ್ರೀತಿಯಿಂದ ಕಾಣುತ್ತೇನೆ..
ನನ್ನ ಸುದ್ದಿ ಹೇಳುತ್ತಾ ಸಮಯ ಹೋದದ್ದೇ ತಿಳಿಯಲಿಲ್ಲ...ನನಗೀಗ ಶಾಲೆಗೆ ತಡವಾಗುತ್ತಿದೆ..
ನನ್ನ ರಾಜ್ ಬೈಕ್ ಸ್ಟಾರ್ಟ್ ಮಾಡಿ ನನಗಾಗಿ ಕಾಯುತ್ತಿದ್ದಾರೆ...ಹೋಗಿ ಬರಲೇ... ಬಾಯ್...
ಇಂತೀ ಛಲಗಾತಿ
ಪ್ರತಿಭಾ ರಾಜ್.
✍️... ಅನಿತಾ ಜಿ.ಕೆ.ಭಟ್.
13-11-2019.
ಕಥಾ ಅರಮನೆಯ 'ಅನ್ನ ಆಹಾರ 'ಥೀಂ ನಲ್ಲಿ ಪ್ರಥಮ ಬಹುಮಾನ ಗಳಿಸಿದ ಬರಹ.
ಪ್ರತಿಲಿಪಿ ಕನ್ನಡದ ' ಶ್ರವಣ ಕಥಾನಕ ಸಂಚಯನ' ಸ್ಪರ್ಧೆಯಲ್ಲಿ ಬಹುಮಾನ ಪಡೆದಿದೆ.
No comments:
Post a Comment