ಸುಶೀಲ ಹುಟ್ಟುವ ಮೊದಲೇ ತಂದೆಯನ್ನು ಕಳೆದುಕೊಂಡವಳು.ಅಜ್ಜನ ಮನೆಯೇ ಅವಳಿಗೂ ತಾಯಿಗೂ ಮನೆಯಾಗಿತ್ತು.ಅಜ್ಜಿ, ಅಜ್ಜ ,ಮಾವಂದಿರು ,ಚಿಕ್ಕಮ್ಮಂದಿರ ಜೊತೆಗೆ ಆಡಿ ಬೆಳೆದವಳು ಸುಶೀಲ.ಯಾವುದೇ ಕೊರತೆಯಾಗದಂತೆ ಮಗುವನ್ನು ಸಾಕಿ ಸಲಹಿದರು ಮನೆಯವರು.ಸುಶೀಲಳಿಗೆ ಹತ್ತು ವರ್ಷ ತುಂಬುತ್ತಿದ್ದಂತೆ ತಾಯಿಯೂ ಅಸುನೀಗಿದರು.ಈಗ ಸುಶೀಲಳಿಗೆ ತಾನು ಒಬ್ಬಂಟಿಯೆಂದು ಅನಿಸತೊಡಗಿತು.
ಚಿಕ್ಕಮ್ಮಂದಿರೂ ಮದುವೆಯಾಗಿ ಗಂಡನ ಮನೆ ಸೇರಿದ್ದರು.ಹೊಸದಾಗಿ ಮೂವರು ಅತ್ತೆಯಂದಿರು ಮನೆಬೆಳಗಿದ್ದರು.ಅಜ್ಜ ಅಜ್ಜಿ ವಯಸ್ಸಾಗುತ್ತಿದ್ದಂತೆ ಮನೆಯ ವ್ಯವಹಾರವನ್ನೆಲ್ಲ ದೊಡ್ಡ ಮಗನಿಗೆ ವಹಿಸಿದರು.ದೊಡ್ಡಮಾವನ ಪತ್ನಿ ವಿಶಾಲಾಕ್ಷಿ ಒಳ್ಳೆಯವಳು.ಆದರೆ ಬಾಯಿ ಸ್ವಲ್ಪ ಜೋರು.. ಉಳಿದಿಬ್ಬರು ಮಾವಂದಿರು ಉದ್ಯೋಗದಲ್ಲಿದ್ದು ಪಟ್ಟಣದಲ್ಲಿ ಮನೆಮಾಡಿಕೊಂಡರು. ಅನಾರೋಗ್ಯದಿಂದ ಅಜ್ಜ ಅಸುನೀಗಿದರು.
ಸುಶೀಲ ಹತ್ತನೇ ತರಗತಿ ಓದು ಮುಗಿದಾಗ ವಿಧ್ಯಾಭ್ಯಾಸ ಮೊಟಕುಗೊಳಿಸಿದರು.ಅತ್ತೆಗೆ ಮನೆಗೆಲಸದಲ್ಲಿ ಸಹಾಯ ಮಾಡುತ್ತಿದ್ದಳು.ವಿಶಾಲತ್ತೆಗೆ ಒಬ್ಬನೇ ತಮ್ಮ.ಅವನು ಶಿವು...ಆಗಾಗ ಮನೆಗೆ ಬರುತ್ತಿದ್ದ.ಎಲ್ಲರೊಂದಿಗೆ ಬೆರೆವಂತೆ ಅವನೊಂದಿಗೂ ವ್ಯವಹರಿಸುತಿದ್ದವಳು ಸುಶೀಲ.ಒಮ್ಮೆ ಅಕ್ಕನ ಮನೆಗೆ ಬಂದರೆ ಒಂದುವಾರ ಉಳಿದುಕೊಳ್ಳುತ್ತಿದ್ದ . ಹೊಲಗದ್ದೆಗಳ ಕೆಲಸದ ಉಸ್ತುವಾರಿಗೆ ಸಹಕರಿಸುತ್ತಿದ್ದ.
ವಿಶಾಲತ್ತೆ ಆ ದಿನ ಜ್ವರವೆಂದು ಕೆಲಸದಾಳುಗಳಿಗೆ ಮಧ್ಯಾಹ್ನ ಬುತ್ತಿ ಕೊಂಡೊಯ್ಯಲು ಸುಶೀಲಳಲ್ಲಿ ಹೇಳಿದಳು."ಹೂಂ.."ಎಂದು ಸುಶೀಲ ಬುತ್ತಿ ತೆಗೆದುಕೊಂಡು ಹೊರಟಿದ್ದಳು.ದಾರಿಯಲ್ಲಿ ಸೀಬೆಮರದಲ್ಲಿ ತುಂಬಾ ಕಾಯಿಗಳು ಕಂಡವು.ಕೀಳಲೆಂದು ಪ್ರಯತ್ನ ಪಟ್ಟಳು ಸುಶೀಲ.ಅಷ್ಟರಲ್ಲಿ ಅವಳನ್ನು ಯಾರೋ ಬಲವಾಗಿ ಹಿಡಿದಂತಾಯಿತು . ಒಮ್ಮೆಗೆ ಕೊಸರಿಕೊಂಡು ಹಿಂದಿರುಗಿ ನೋಡಿದಾಗ ಶಿವು..ಬೊಬ್ಬೆ ಹೊಡೆಯಲು ನೋಡಿದಳು.. ಬಾಯಿಗೆ ಗಟ್ಟಿ ಕೈ ಅಡ್ಡ ಹಿಡಿದ.ಬಲವಂತವಾಗಿ ಪಕ್ಕದ ಗಿಡಗಂಟಿಗಳ ಮಧ್ಯೆ ಕರೆದೊಯ್ದ.. ಏನು ಮಾಡುತ್ತಿದ್ದಾನೆಂದು ಅರಿವಾಗದ ಸುಶೀಲ ಬಿಡಿಸಿಕೊಳ್ಳಲು ಮಾಡಿದ ಯತ್ನಗಳೆಲ್ಲವೂ ವಿಫಲವಾಗಿದ್ದವು.ಅವನ ಕಾಮದ ತೃಷೆಗೆ ಅವಳು ಬಲಿಯಾದಳು.ಸಿಟ್ಟು,ಅಳು ಒಮ್ಮೆಲೇ ಬಂದರೂ ತಡೆದುಕೊಂಡಳು.
"ಬುತ್ತಿ ನಾನೇ ಕೊಂಡೊಯ್ಯುವೆ.. ನೀನು ಮನೆಕಡೆ ನಡಿ..ಯಾರಿಗಾದ್ರೂ ಬಾಯ್ಬಿಟ್ಟೆಯೋ .. ಹುಷಾರು....ಜೀವ ಸಮೇತ ಭೂಮಿಮೇಲೆ ಉಳಿಸಲಾರೆ.." ಎಂದು ಧಮಕಿ ಹಾಕಿದ್ದ.. ಹೆದರಿ ಬಿಟ್ಟಳು ಸುಶೀಲ.
ಸೂಕ್ತ ಸಮಯಕ್ಕೆ ಪುನಃ ಹೊಂಚು ಹಾಕುತ್ತಿದ್ದ ಶಿವು..ಒಂದು ದಿನ ಮನೆಯವರೆಲ್ಲ ಜಾತ್ರೆಗೆ ತೆರಳಿದ್ದರು.ಸುಶೀಲ ಹಾಗೂ ಅಜ್ಜಿ ಮನೆಕಾವಲಿಗೆಂದು ಮನೆಯಲ್ಲೇ ಉಳಿದುಕೊಂಡಿದ್ದರು..ಅದನ್ನರಿತ ಶಿವು ತಾನೂ ಜಾತ್ರೆಗೆ ಹೋದ ನಾಟಕ ಮಾಡಿ ಅರ್ಧದಲ್ಲೇ ವಾಪಾಸಾಗಿ ಮನೆಯ ಹೊರಗೆ ಪಾತ್ರೆತೊಳೆಯುತ್ತಿದ್ದ ಸುಶೀಲೆಯನ್ನು ಹಿತ್ತಿಲಿಗೆ ಬಲವಂತವಾಗಿ ಕರೆದೊಯ್ದು ತೃಷೆ ತೀರಿಸಿಕೊಂಡ.ಮುಂದೊಂದು ದಿನ ದನಮೇಯಿಸಲು ಹೋದಾಗ... ಹೀಗೆ ಮೊದಲಿಗೆ ಅವನ ಬಲಾತ್ಕಾರ ಕ್ರಮೇಣ ಅವಳಿಗೂ ಹಿತವಾಗಿತ್ತು.. ಅವನನ್ನು ಮನಸಾರೆ ಪತಿಯೆಂದು ನಡೆದುಕೊಂಡಳು..ಅವನೂ ನಿನ್ನನ್ನೇ ಮದುವೆಯಾಗುವುದಾಗಿ ನಂಬಿಸಿದ...
ಒಂದೂವರೆ ತಿಂಗಳಾದರೂ ಇನ್ನೂ ಮುಟ್ಟಾಗದ ಸುಶೀಲಳನ್ನು ಕಂಡು ವಿಶಾಲತ್ತೆಗೆ ಅನುಮಾನ ಬಂದಿತು.ಸಾಕ್ಷಿಯೆಂಬಂತೆ ಹಿಂದಿನ ದಿನ ಬಚ್ಚಲಿನಲ್ಲಿ ವಾಂತಿ ಮಾಡಿದಂತೆ ವಾಸನೆ ಬರುತ್ತಿದ್ದುದನ್ನು ಗಮನಿಸಿದ್ದಳು.ಸುಶೀಲಳನ್ನು ಹಿಡಿದು ನಿಲ್ಲಿಸಿ ಕೇಳಿದಳು. ಬಾಯ್ಬಿಡಲಿಲ್ಲ . ಗಂಡ,ಅತ್ತೆಯ ಎದುರೇ ನಾಲ್ಕು ಬಾರಿಸಿದಳು.ಎಲ್ಲರೂ ಸೇರಿ ಸುಶೀಲಳ ಮೇಲೆ ಮುಗಿಬಿದ್ದರು."ಯಾವನವನು ಹೇಳು.. ಅವನನ್ನು ಝಾಡಿಸಿ ಒದೀತೀನಿ ಅಂದ ಮಾವ..."
ಅಬಾರ್ಷನ್ ಮಾಡಿಸಲು ಆಸ್ಪತ್ರೆಗೆ ಕರೆದೊಯ್ದರು.ವೈದ್ಯರೂ ಕೆನ್ನೆಗೆರಡು ಬಾರಿಸಿದರು.ಕೊನೆಗೆ ತನ್ನ ತಪ್ಪಿಲ್ಲವೆಂದು..ನಡೆದ ಘಟನೆಯನ್ನು ವಿವರಿಸಿದಳು.ವೈದ್ಯರು ವಿಶಾಲತ್ತೆಯನ್ನು ಕರೆದು..." ಏನ್ರೀ... ನಿಮಗೆ ಸ್ವಲ್ಪವಾದ್ರು ಜ್ಞಾನ ಬೇಡ್ವಾ... ವಯಸ್ಸಿಗೆ ಬಂದ ಹೆಣ್ಣುಮಕ್ಕಳಿರುವ ಮನೆಯಲ್ಲಿ ಉಂಡಾಡಿ ಗಂಡುಮಕ್ಕಳನ್ನು ಇರಿಸಿಕೊಳ್ಳಬಾರದು ಅಂತ...ನಿಮ್ಮ ತಮ್ಮನನ್ನು ಯಾಕೆ ಅನಾವಶ್ಯಕವಾಗಿ ಇರಿಸಿಕೊಂಡಿದ್ದೀರಿ ... ಅವನಿಂದಾಗಿ ಅಮಾಯಕ ಹೆಣ್ಣುಮಗಳು ನೋವು ಅನುಭವಿಸುವಂತಾಯಿತು"... ಎಂದು ತರಾಟೆಗೆ ತೆಗೆದುಕೊಂಡರು.ವಿಶಾಲಾಕ್ಷಿ ತಲೆತಗ್ಗಿಸಿ ನಿಲ್ಲಬೇಕಾಯಿತು.
ಮನೆಗೆ ಬಂದವರೇ ಸುಶೀಲಳನ್ನು ಹಿಗ್ಗಾಮುಗ್ಗಾ ಥಳಿಸಿ.."ಏನೇ ವೈದ್ಯರ ಮುಂದೆ ನನ್ನ ಅವಮಾನ ಮಾಡ್ತೀಯಾ...ನೀನೇ ಅವನ ತಲೆ ಹಾಳು ಮಾಡಿ ...ಅವನ ಹೆಸರು ಹೇಳ್ತೀಯಾ..ನೋಡ್ತಿರು ನಿಂಗೆ ಒಂದು ಗತಿ ಕಾಣಿಸ್ತೀನಿ ...ನನ್ನನ್ನೇ ಅವಮಾನಿಸುವಷ್ಟು ಬೆಳೆದುಬಿಟ್ಟಿದೀಯಾ...". ಎಂದು ಅಬಾರ್ಷನ್ ಆದ ಹೆಣ್ಣುಮಗಳು ವಿಶ್ರಾಂತಿ ಬೇಕು ಎಂಬುದನ್ನು ಗಮನಿಸದೆ ಬಾಸುಂಡೆ ಬರುವಂತೆ ಹೊಡೆದಿದ್ದರು..
ಸುಶೀಲ ಮೌನವಾಗಿ ರೋದಿಸುತ್ತಿದ್ದಳು.. ಕೆಲವೇ ದಿನಗಳಲ್ಲಿ ವಿಶಾಲತ್ತೆ ತನಗೆ ಪರಿಚಯವಿರುವ ಮದುವೆ ಬ್ರೋಕರ್ ಒಬ್ಬರನ್ನು ಕರೆದು ಸುಶೀಲಳಿಗೆ ಮದುವೆ ಸಂಬಂಧ ಕುದುರಿಸಲು ಹೇಳಿದರು. ಅವನು ದೂರದ ಊರಿನ ರೈತ ಮಹದೇವನ ಮಗ ರಾಮಭದ್ರನನ್ನು ಕರೆತಂದನು.ಎರಡನೇ ಸಂಬಂಧ.ಒಬ್ಬಳು ಮಗಳಿದ್ದಾಳೆ.ಸ್ವಂತ ಜಮೀನಿದೆ.. ದುಡಿದು ಜೀವನ ಮಾಡುವ ಕುಟುಂಬ.ಎಲ್ಲರಿಗೂ ಒಪ್ಪಿಗೆಯಾಗಿ ಮದುವೆಯೂ ನಡೆದುಹೋಯಿತು.ಒಬ್ಬ ಮೈದುನ, ನಾಲ್ಕು ಜನ ಅತ್ತಿಗೆಯಂದಿರಿರುವ ಸಂಸಾರಕ್ಕೆ ಕಾಲಿಟ್ಟಳು.
ತಂದೆಯ ಪ್ರೀತಿಯನ್ನು ಕಾಣದ ಸುಶೀಲಳಿಗೆ ತಂದೆಯ ಸ್ಥಾನವನ್ನು ತುಂಬಿದವರು ಮಾವ ಮಹದೇವ.. ಸೊಸೆಯನ್ನು ಅಕ್ಕರೆಯಿಂದ ಕಂಡು ಮಮತೆಯ ಬಾಳನ್ನು ಕಟ್ಟಿಕೊಟ್ಟವರು.ಗಂಡ ರಾಮಭದ್ರನೂ ಕೂಡ ಮಡದಿಯನ್ನು ಬಲು ಜೋಪಾನವಾಗಿ ಸಲಹುತ್ತಿದ್ದನು.ಹೇಳುವಷ್ಟು ಧನಿಕರಲ್ಲದಿದ್ದರೂ
ಪ್ರೀತಿಯಲ್ಲಿ ಶ್ರೀಮಂತಿಕೆಯಿತ್ತು .ಅತ್ತೆ ಗಂಗಮ್ಮ ಸ್ವಲ್ಪ ಬಾಯಿ ಜೋರಿನ ಹೆಂಗಸಾದರೂ ಹೃದಯವಂತೆ.ಸುಶೀಲ ಕೂಡ ಮನೆಯ ಪರಿಸರಕ್ಕೆ ಬಲುಬೇಗನೆ ಹೊಂದಿಕೊಂಡಳು. ತಬ್ಬಲಿ ಮಗಳು ಸಹನಾಳಿಗೆ ತಾಯಿಯ ಸ್ಥಾನವನ್ನು ತುಂಬಿ ಪ್ರೀತಿಗೆ ಕೊರತೆಯಾಗದಂತೆ ನೋಡಿಕೊಂಡಳು.
ವರುಷದೊಳಗೆ ಮುದ್ದಾದ ಗಂಡುಮಗುವಿಗೆ ಜನ್ಮವಿತ್ತಳು.ತಾಯಿಯಿಲ್ಲದ ಸುಶೀಲಳ ಬಾಣಂತನವನ್ನು ಅತ್ತೆ ಗಂಗಮ್ಮನೇ ಮುಂದೆ ನಿಂತು ಮಾಡಿದರು.ಮಗು ಸಚಿನ್ ನ ಲಾಲನೆಪಾಲನೆಯಲ್ಲಿ ಎಲ್ಲರೂ ಆನಂದದಿಂದ ಬದುಕುತ್ತಿದ್ದರು.. ಅಷ್ಟರಲ್ಲಿ ಇನ್ನೊಂದು ಸಿಹಿಸುದ್ದಿ ಹೊರಬಿತ್ತು.ಎರಡನೆ ಬಾರಿ ಗರ್ಭಿಣಿಯಾದಳು ಸುಶೀಲ.ಮುದ್ದಾದ ಹೆಣ್ಣುಮಗುವಿಗೆ ಜನ್ಮನೀಡಿದಳು.ಸಾಧನ ದಿನದಿಂದ ದಿನಕ್ಕೆ ಬೆಳೆಯತೊಡಗಿದಳು... ಸುಶೀಲಳ ಮದುವೆಯಾದ ನಂತರ ಒಮ್ಮೆಯೂ ಅಜ್ಜನ ಮನೆಯ ಕಡೆಯಿಂದ ಯಾವುದೇ ಕರೆ ಬಂದಿರಲಿಲ್ಲ.ಹೆಣ್ಣುಮಗುವಿನ ತಾಯಿಯಾಗಿ ಸ್ವಲ್ಪ ಸಮಯದಲ್ಲಿ ದೀಪಾವಳಿಯ ಹಬ್ಬಕ್ಕೆ ಕರೆದರು.ಸುಶೀಲಳನ್ನು ಹಾಗೂ ಮಕ್ಕಳನ್ನು ರಾಮಭದ್ರ ಪ್ರೀತಿಯಿಂದ ಅಜ್ಜನ ಮನೆಗೆ ಕರೆದೊಯ್ದು ತಾನೂ ಎರಡು ದಿನ ಅವರ ಜೊತೆ ಉಳಿದುಕೊಂಡನು.
ವಿಶಾಲತ್ತೆ ಮಾವ ಎಲ್ಲರೂ ಪ್ರೀತಿಯಿಂದ ಮಾತನಾಡಿಸಿದರು.ವಿಶಾಲತ್ತೆಗೆ ಸುಶೀಲಳ ಸುಂದರ ಸಂಸಾರ ಕಂಡು ಹೊಟ್ಟೆಯುರಿಯಿತು.ಹಾಳಾಗಿಹೋಗಲಿ ಎಂದು ಎರಡನೇ ಸಂಬಂಧಕ್ಕೆ ಇಪ್ಪತ್ತು ವರುಷಗಳ ಅಂತರವಿರುವ ವರನಿಗೆ ಮದುವೆಮಾಡಿ ಕೊಟ್ಟರೆ ಇವಳು ಅದರಲ್ಲೂ ಸಂತಸದಿಂದ ಬದುಕುತ್ತಾಳಲ್ಲ ... ಆದರೆ ನಮ್ಮ ಶಿವು...ಛೇ..!! ಅವನಿಗೆ ಮದುವೆಯಾಗಿ ಮೂರೇ ತಿಂಗಳಲ್ಲಿ ಹೆಂಡತಿಯ ಮಾತಿಗೆ ಮರುಳಾಗಿ ನನ್ನ ಜೊತೆ ಸಂಬಂಧವನ್ನೇ ಕಡಿದುಕೊಂಡ..ಈಗ ತವರು ಬರೀ ನೆನಪು ಮಾತ್ರ... ಇವಳಿಗೆ ಅಬಾರ್ಷನ್ ಮಾಡಿಸದೆ ಇವಳನ್ನೇ ಶಿವುಗೆ ಮದುವೆ ಮಾಡಬೇಕಾಗಿತ್ತು..ಥೂ..ಹಾಳಾದ ಬುರುಡೆಗೆ ಅಷ್ಟೂ ಹೊಳೀಲಿಲ್ವೇ..ತವರಿಗೆ ವರದಕ್ಷಿಣೆ ಜಾಸ್ತಿ ಸಿಗಲಿ ಎಂದು ಶ್ರೀಮಂತರ ಮನೆ ಹುಡುಗಿಯನ್ನು ಮದುವೆ ಮಾಡಿಸಿದೆ...ಶಿವುನ ಹೆಂಡತಿ ಬಂಜೆ...ಹೆರುವ ಅಂದಾಜು ಕಾಣ್ತಿಲ್ಲ... ಅವ್ಳು ಚೆನ್ನಾಗಿ ಬತ್ತಿ ಇಟ್ಟಳು.. ಇವಳು ಎಲ್ಲಿದ್ರೂ ಮೆರೀತಾಳೆ...ಎಂದು ಕೈಹಿಸುಕಿಕೊಂಡಳು..
ಸುಶೀಲ ಮಾವಂದಿರು,ಅತ್ತೆಯಂದಿರು ಚಿಕ್ಕಮ್ಮಂದಿರು,ಚಿಕ್ಕಪ್ಪಂದಿರೆಲ್ಲರನ್ನೂ ಭೇಟಿಯಾಗಿ ಮಾತನಾಡಿಸಿದ ಖುಷಿಯಲ್ಲಿ ಮನೆಗೆ ಮರಳಿದರು.ಸುಂದರ ಸಂಸಾರಕ್ಕೆ ಯಾರ ಕೆಟ್ಟ ದೃಷ್ಟಿ ತಾಗಿತೋ ಏನೋ.. ಕೆಲವೇ ದಿನಗಳಲ್ಲಿ ಮನೆಯ ಯಜಮಾನ ಹೃದಯಾಘಾತದಿಂದ ನಿಧನರಾದರು.. ಮಾವ ಮಹದೇವಪ್ಪನ ಅಗಲುವಿಕೆ ಕುಟುಂಬಕ್ಕೆ ಆಘಾತವನ್ನುಂಟುಮಾಡಿತು.ಸುಶೀಲಳಿಗೆ ತನ್ನ ತಂದೆಯಂತೆ ಕಾಣುತ್ತಿದ್ದ ಜೀವ ಎದ್ದುಹೋದಂತೆ ಹೋದಾಗ ಆದ ದುಃಖ ಅಷ್ಟಿಷ್ಟಲ್ಲ..
ಮುಂದೆ ಅತ್ತೆ ಗಂಗಮ್ಮ ಕಟುವಾಗುತ್ತಾ..ಹೋದರು..ಸಣ್ಣಪುಟ್ಟದಕ್ಕೂ ಸುಶೀಲಳ ಮೇಲೆಯೇ ರೇಗುತ್ತಿದ್ದರು.ಸುಶೀಲ ಮಾತ್ರ ಎದುರುತ್ತರ ಕೊಡದೆ ತನ್ನ ಕರ್ತವ್ಯವನ್ನು ಪಾಲಿಸುತ್ತಾ ಬಂದಳು..ಗಂಡನ ಪ್ರೀತಿಯ ಆಸರೆಯಲ್ಲಿ ನೋವನೆಲ್ಲ ಮರೆಯುತ್ತಿದ್ದಳು.ಮಕ್ಕಳು ಅಜ್ಜಿಯ ಬಳಿಹೋಗಲು ಹೆದರುತ್ತಿದ್ದರು.ಅಮ್ಮನನ್ನು ಯಾವಾಗಲೂ ಗದರುತ್ತಿದ್ದ ಅಜ್ಜಿಯ ಮೇಲೆ ಮಕ್ಕಳಿಗೆ ತಿರಸ್ಕಾರ ಭಾವ ಅವರಿಗರಿವಿಲ್ಲದೆಯೇ ಮೂಡತೊಡಗಿತು..
ಬಾಳಿನಲ್ಲಿ ಎದುರಾಗುವ ನೋವಿನ ಬಿರುಗಾಳಿಗೆ ಅಂಜದೆ ಪ್ರೀತಿಯ ದೀಪ ಬೆಳಗಬೇಕು.ಸೂರ್ಯನ ಬೆಳಕು ತೀಕ್ಷ್ಣ ಎಂದು ಕಣ್ಮುಚ್ಚಿ ಕುಳಿತರೆ ಇರುಳಿನ ನಕ್ಷತ್ರಗಳ ಆಗಮನ ಅರಿವಿಗೆ ಬಂದೀತೇ..? ಚಂದಿರನ ಸಹನೆಯ ತಂಪಾದ ಬೆಳದಿಂಗಳನ್ನು ಕಾಣಲು ಸಾಧ್ಯವೇ...?
ಸುಶೀಲ ಕಷ್ಟಗಳನ್ನು ಇಷ್ಟಪಟ್ಟು ಮೆಟ್ಟಿನಡೆವ ಸಂಕಲ್ಪ ಮಾಡಿಕೊಂಡಳು.
ಗಂಗಮ್ಮನ ಎರಡನೇ ಅಳಿಯ ಅಪಘಾತವೊಂದರಲ್ಲಿ ತೀರಿಕೊಂಡರು.ಗಂಡನ ರಿಕ್ಷಾ ಚಾಲನೆಯಿಂದ ಬರುತ್ತಿದ್ದ ಆದಾಯದಿಂದ ಜೀವನ ಮಾಡುತ್ತಿದ್ದ ಶಕ್ಕುವಿನ ಕುಟುಂಬ ಅನಾಥವಾದಾಗ ಸುಶೀಲ ರಾಮಭದ್ರ ಇಬ್ಬರೂ ತಾವು ಜೊತೆಗಿದ್ದೇವೆ ಎಂದು ಧೈರ್ಯ ತುಂಬಿ ಶಕ್ಕುವನ್ನು ತವರಿಗೆ ಕರೆದು .. ಸ್ವಲ್ಪ ಭೂಮಿಕೊಟ್ಟು ಮನೆಕಟ್ಟಿ ಕೊಟ್ಟರು.ಉಪಕಾರದ ನೆನಪು ಕೆಲವೇ ದಿನ ಉಳಿದದ್ದು.ನಂತರ ತಾಯಿಯೊಂದಿಗೆ ಸೇರಿ ಅಣ್ಣನ ಬದುಕಿಗೇ ಮಾರಿಯಾಗತೊಡಗಿದಳು ಶಕ್ಕು..
ವರುಷಗಳು ಉರುಳಿದವು.ಶಕ್ಕುವಿನ ದೊಡ್ಡ ಮಗ ಐಟಿಐ ಕಲಿತು ಪಟ್ಟಣದಲ್ಲಿ ಒಂದುಸಣ್ಣ ಕೆಲಸ ಹಿಡಿದ.ಅವನಿಗೆ ಅಣ್ಣನ ಮೊದಲ ಮಗಳು ಸಹನಾಳನ್ನು ಮದುವೆ ಮಾಡಬೇಕು ಎಂಬ ಹಂಬಲ ಶಕ್ಕುಗೆ..ಸಹನಾಳ ಅಮ್ಮನ ಬಂಗಾರ ಎಲ್ಲವೂ ನಮಗೇ ಸಿಗಬಹುದೆಂಬ ಲೆಕ್ಕಾಚಾರ.ಶಕ್ಕುವಿನ ಬುದ್ಧಿ ಅರಿವಿದ್ದ ರಾಮಭದ್ರ ಸುಶೀಲರಿಗೆ ಇಷ್ಟವಿರಲಿಲ್ಲ.ಸಹನಾಳ ಬಗ್ಗೆ ಇಲ್ಲಸಲ್ಲದ್ದು ಹೇಳಿ ಅವಳಿಗೆ ಬರುತಿದ್ದ ಸಂಬಂಧಗಳನ್ನು ಶಕ್ಕು ತಪ್ಪಿಸುತ್ತಿದ್ದಳು.
ಆದರೆ ದೇವರು ಕೈಬಿಡಲಿಲ್ಲ..ಸಹನಾಳಿಗೆ ಸರಕಾರಿ ನೌಕರ ವರನೇ ದೊರೆತು ಸಂಭ್ರಮದಿಂದ ಮದುವೆ ಮಾಡಿದರು.ಎರಡು ಹೆರಿಗೆ ಬಾಣಂತನವೂ ಸುಶೀಲಳೇ ತಾಯಿಯ ಮಮತೆತೋರಿ ಯಾವುದೇ ತೊಂದರೆಯಾಗದಂತೆ ಮಾಡಿಕಳುಹಿಸಿದಳು.
ಸಚಿನ್ ಕಲಿಯುವುದರಲ್ಲಿ ಜಾಣನಾಗಿದ್ದುದರಿಂದ ಇಂಜಿನಿಯರಿಂಗ್ ಓದಿದ.ಒಳ್ಳೆಯ ಕೆಲಸವೂ ಸಿಕ್ಕಿತು.ಸಾಧನ ಶಿಕ್ಷಕಿಯಾದಳು..ಮನೆ ಬಹಳ ಹಳತಾಗಿತ್ತು.ಈಗಲೋ ಮತ್ತೆಯೋ ಬೀಳುವಂತಿತ್ತು.. ಸಚಿನ್ "ಅಪ್ಪಾ ನನ್ನ ಕಂಪೆನಿಯಿಂದ ಹೋಮ್ ಲೋನ್ ಸಿಗುತ್ತದೆ..ಮನೆಕಟ್ಟೋಣ" ಎಂದ.ರಾಮಭದ್ರ ಸುಶೀಲ ಒಪ್ಪಿಕೊಂಡರು.ಮನೆಯ ಕೆಲಸ ಆರಂಭವಾಯಿತು..ಶಕ್ಕು ಸಣ್ಣಪುಟ್ಟ ಕಳ್ಳತನ ಮಾಡಿ ತೊಂದರೆ ಕೊಡುತ್ತಿದ್ದಳು..ಸಿಮೆಂಟಿನ ಗೋಣಿ,ಕಬ್ಬಿಣದ ಸರಳು ಇವನ್ನೆಲ್ಲ ರಾತ್ರಿ ಮನೆಗೆ ಸಾಗಿಸುತ್ತಿದ್ದುದು ಅವರ ಅರಿವಿಗೆ ಬಂತು..ಆದರೂ ಜಗಳಕ್ಕಿಳಿಯುವವರಲ್ಲ ರಾಮಭದ್ರ..
ಹತ್ತು ತಿಂಗಳಲ್ಲಿ 'ನಂದನ ವನ' ಒಂದಸ್ತಿನ ಮನೆ ಗೃಹಪ್ರವೇಶಕ್ಕೆ ಸಜ್ಜಾಯಿತು.ಬಂಧುಮಿತ್ರರೆಲ್ಲ ಬಂದು ಗೃಹಪ್ರವೇಶವನ್ನು ಚಂದಗಾಣಿಸಿಕೊಟ್ಟರು.ಸುಶೀಲಳ ಅಜ್ಜನ ಮನೆಕಡೆಯ ನೆಂಟರೆಲ್ಲರೂ ಬಂದಿದ್ದರು.
ವಿಶಾಲತ್ತೆ ಕುಟುಂಬ ಸಮೇತ ಸುಶೀಲಳ ಹೊಸಮನೆಯನ್ನು ನೋಡಲೇಬೇಕೆಂಬ ಕುತೂಹಲದಿಂದ ಬಂದಿದ್ದರು..ಸುಶೀಲಳ ಮದುವೆಯ ನಂತರ ಮೊದಲ ಬಾರಿಗೆ ಬಂದರು.ತಾರಸಿಯ ವಿಶಾಲವಾದ ಮನೆ, ಅಗಲವಾದ ಹಾಲ್,ದೊಡ್ಡ ದೊಡ್ಡ ಹಲಸಿನ ಮರದ ಕಿಟಕಿಗಳು,ಶೋಕೇಸ್,ಝಗಮಗಿಸುವ ಅಲಂಕಾರಿಕ ಬಲ್ಬ್ ಗಳು, ಸುಂದರವಾದ ದೇವರಕೋಣೆ, ಸುಂದರವಾದ ಕೆತ್ತನೆಯುಳ್ಳ ಬಾಗಿಲುಗಳು,ರೂಮುಗಳಲ್ಲಿ ಅಟಾಚ್ಡ್ ವಾಶ್ ರೂಂ ಗಳು,ಮಾಡ್ಯುಲಾರ್ ಕಿಚನ್ ....ಅಂತೂ ಎಲ್ಲವನ್ನೂ ನೋಡಿದ ವಿಶಾಲತ್ತೆ ಸುಶೀಲಳ ಅದೃಷ್ಟವನ್ನು ಕಂಡು ಹಲುಬಿದಳು.. ಅಯ್ಯೋ...ನನ್ನಿಂದ ಎಂತಹಾ ಕೆಲಸ ಆಗಿ ಹೋಯ್ತು.... ಇಷ್ಟು ಅದೃಷ್ಟವಂತೆ ಮಹಾಲಕ್ಷ್ಮಿಯನ್ನು ಮನೆಯಿಂದ ಒದ್ದು ಎರಡನೇ ಸಂಬಂಧದ ಬಡವ ವರನಿಗೆ ಗಂಟುಹಾಕುವ ಬದಲು ನನ್ನ ತಮ್ಮನಿಗೆ ಮದುವೆ ಮಾಡುತ್ತಿದ್ದರೆ......
ನನಗೂ ವರುಷಕ್ಕೆರಡು ಬಾರಿ ತವರಿಗೆ ಹೋಗಿ ಅರಮನೆಯಂತಹ ಮನೆಯಲ್ಲಿ ಮೆರೆಯಬಹುದಿತ್ತು..ನನ್ನ ತವರು ಹಾಗೇ ಹೀಗೇ.. ಎಂದು ಎಲ್ಲರೆದುರು ಹೇಳಿಕೊಳ್ಳಬಹುದಿತ್ತು ... ಶ್ರೀಮಂತರ ಮನೆ ಹುಡುಗಿ ಹುಡುಕಿ ಮದುವೆ ಮಾಡಿದರೂ ಒಂದು ಸಂತಾನವಿಲ್ಲ... ನಾನು ಬದುಕಿದ್ದೇನೋ ಸತ್ತಿದ್ದೇನೋ ನೋಡಬೇಕೆಂದಿಲ್ಲ ....ಸುಶೀಲ ಅವಳ ಅತ್ತಿಗೆಯಂದಿರನ್ನು ಎಷ್ಟು ಚೆನ್ನಾಗಿ ವಿಚಾರಿಸಿಕೊಳ್ಳುತ್ತಿದ್ದಾಳೆ ... ಎಲ್ಲರಿಗೂ ಗೃಹಪ್ರವೇಶಕ್ಕೆ ಅಂದದ ಝರಿ ಸೀರೆ ಕೂಡ ಕೊಟ್ಟಿದ್ದಾಳೆ....ಛೇ...!! ನಂಗೆ ಆ ದೇವ್ರು ಒಳ್ಳೇ ಬುದ್ಧಿ ಕೊಡ್ಬಾರ್ದಿತ್ತಾ....
ಮನೆ ತಂದ ಸೌಭಾಗ್ಯವೋ ಏನೋ ಒಂದು ತಿಂಗಳಲ್ಲೇ ಸಚಿನ್ ,ಸಾಧನ ಇಬ್ಬರಿಗೂ ಕಂಕಣಭಾಗ್ಯ ಕೂಡಿಬಂತು.ಸಾಧನ ವೈದ್ಯರ ಪತ್ನಿಯಾದಳು.. ಸಚಿನ್ ನ ಪತ್ನಿ ಇಂಜಿನಿಯರ್..ಉದ್ಯೋಗದಲ್ಲಿದ್ದಳು..
ಗಂಗಮ್ಮಳ ಗೊಣಗುವಿಕೆ ಜೋರಾಗಿತ್ತು..ಇತ್ತ ಸುಶೀಲ ಕೂಡ ವಯಸ್ಸಾಗುತ್ತಿದ್ದಂತೆ ತಿಂಗಳಲ್ಲಿ ಐದು ದಿನ ಅತೀವ ರಕ್ತಸ್ರಾವದಿಂದ ಕಂಗಾಲಾಗುತ್ತಿದ್ದಳು.ಆಗಲೂ ಗಂಗಮ್ಮ ಒಂದು ಚೂರೂ ಸಹಾಯಕ್ಕೆ ಬಾರದೆ ವಟವಟ ಆಡುತ್ತಿದ್ದರು.ಹೊತ್ತು ಹೊತ್ತಿಗೆ ಸುಶೀಲ ಕಾಫಿ ದಿನಕ್ಕೆ ಐದು ಬಾರಿ .. ತಿಂಡಿ,ಊಟ,ಔಷಧ ಎಲ್ಲವೂ ತನ್ನ ಕೈಯ ಬಳಿ ತಂದಿಡಬೇಕು.ಇಲ್ಲದಿದ್ದರೆ ಕಿವಿಗೆ ಹತ್ತಿಯಿಟ್ಟುಕೊಂಡು ಓಡಾಡಬೇಕು..ಅಷ್ಟೂ ಬೈಗುಳ ತಪ್ಪಿದ್ದಲ್ಲ...
ಒಂದು ದಿನ ಸಚಿನ್ ಪತ್ನಿ ಚಿನ್ಮಯಾಳನ್ನು ಹೀಗೆ ಕೂಗಾಡಿದರು.ಅವಳು ಅತ್ತು ಕೋಣೆ ಸೇರಿದಳು.ವಿಷಯ ತಿಳಿದ ಸಚಿನ್ ಅಜ್ಜಿಯನ್ನು ತರಾಟೆಗೆ ತೆಗೆದುಕೊಂಡ.ಅಪ್ಪ ಅಮ್ಮ ಇಬ್ಬರೂ ಹಿರಿಯರಿಗೆ ಹಾಗೆಲ್ಲ ಅನ್ನಬಾರದು ಕಣೋ ಎಂದು ಸಮಾಧಾನಿಸಲು ಪ್ರಯತ್ನಿಸಿದರು."ನೀವು ಸುಮ್ಮನಿರುವುದಕ್ಕೇ ನಿಮ್ಮ ಮೇಲೆ ವೃಥಾ ರೇಗಾಡುವುದು..ನನ್ನ ಪತ್ನಿಯ ತಂಟೆಗೆ ಬಂದರೆ ಸುಮ್ಮನೆ ಬಿಡಲಾರೆ.." ಎಂದು ಧಮ್ಕಿ ಹಾಕಿದ..ಅವನ ರೌದ್ರಾವತಾರ ಕಂಡು ಗಂಗಮ್ಮ ಬಾಯಿಗೆ ಬೀಗಜಡಿದರು.
ಸಾಧನಾ,ಚಿನ್ಮಯಾ ಇಬ್ಬರೂ ಸಿಹಿಸುದ್ದಿಯನ್ನು ನೀಡಿದರು.ಸಾಧನಾಳ ಬಾಣಂತನ ತವರಲ್ಲೇ ಆಗಬೇಕು ಶಾಸ್ತ್ರ ಪ್ರಕಾರ.ಚಿನ್ಮಯಾಳ ತಾಯಿ ಅನಾರೋಗ್ಯ ಪೀಡಿತೆಯಾದ್ದರಿಂದ ಅವಳದೂ ಬಾಣಂತನ ಸುಶೀಲಳ ಹೆಗಲಮೇಲಿತ್ತು... ಪದೇಪದೇ ರಕ್ತಸ್ರಾವದಿಂದ ಸುಶೀಲಳ ಆರೋಗ್ಯವೂ ಕುಂದಿತ್ತು..ಬಾಣಂತನದ ಸಮಯದಲ್ಲಿ ಗಂಗಮ್ಮಳಿಗೆ ಸಮಯಕ್ಕೆ ಸರಿಯಾಗಿ ಎಲ್ಲವನ್ನೂ ಮಾಡಿಕೊಡುವುದೇ ಅವರಿಗೀಗ ದೊಡ್ಡ ಚಿಂತೆಯಾಗಿತ್ತು ..
ಪಟ್ಟಣದಲ್ಲಿದ್ದ ತಮ್ಮ ವೀರಭದ್ರನಲ್ಲಿ ಆರುತಿಂಗಳ ಮಟ್ಟಿಗೆ ಅಮ್ಮನನ್ನು ನೋಡಿಕೊಳ್ಳಬಹುದೇ ಎಂದು ಕೇಳಿದನು ರಾಮಭದ್ರ..ಏನೋ ಸಾಬೂಬು ಹೇಳಿದ.ಪಕ್ಕದಲ್ಲಿರುವ ತಂಗಿ ಶಕ್ಕುವಿನಲ್ಲಿ ಕೇಳಿದರೆ ಆಕೆಯೂ ಮನೆಗೆ ಬೀಗ ಜಡಿದು ಪಟ್ಟಣದಲ್ಲಿರುವ ಮಗನ ರೂಮು ಸೇರಿದಳು.ಇನ್ನುಳಿದ ತಂಗಿಯರಲ್ಲಿ ಕೇಳಿದರೂ ಒಬ್ಬೊಬ್ಬರದು ಒಂದೊಂದು ನೆಪ..ಇರಲಿ..ನಾವೇ ಒಬ್ಬಳು ಕೆಲಸದಾಕೆ ಇಡೋಣವೆಂದರೆ ಆಕೆಯ ಬಾಯಿ ಗೊತ್ತಿರುವ ಸುತ್ತಲಿನ ಎಲ್ಲರೂ ನಿರಾಕರಿಸಿದರು.ನರ್ಸ್ ಮಾಡೋಣ ಎಂದು ವಿಚಾರಿಸಿದರು.ತಿಂಗಳಿಗೆ ಹದಿನೈದು ಸಾವಿರ ರೂಪಾಯಿ ಚಾರ್ಜ್ ಕೇಳಿ ಅಷ್ಟೊಂದು ಕೊಡಲು ಈಗ ಸಾಧ್ಯವಿಲ್ಲ ಎಂದು ಸುಮ್ಮನಾದರು..ಸಾಧನಳ ಸೀಮಂತದ ಶಾಸ್ತ್ರ ಮುಗಿದು ತವರಿಗೆ ಆಗಮಿಸಿದಳು.ಸಾಧನಳ ಹೆರಿಗೆ ಡೇಟ್ ಆಗಿ ಮೂರು ತಿಂಗಳಿಗೆ ಚಿನ್ಮಯ ಳಿಗೆ ಡೇಟ್ ಇತ್ತು..ಈಗ ಎಲ್ಲರು ತನ್ನನ್ನು ಕಡೆಗಣಿಸುತ್ತಿದ್ದಾರೆ ಎಂದು ಅರಿತ ಗಂಗಮ್ಮಳ ಹಾರಾಟ ತಾರಕಕ್ಕೇರಿತ್ತು.ಸುಶೀಲ ಅನಾರೋಗ್ಯ,ಅತ್ತೆಯ ಕೂಗಾಟ,ಆರೈಕೆಯಿಂದ ಪಾತಾಳಕ್ಕಿಳಿದಿದ್ದಳು .ಅಡುಗೆಯಲ್ಲಿ ರುಚಿ ಸ್ವಲ್ಪ ಹೆಚ್ಚು ಕಡಿಮೆ ಆದರೂ ಬೊಬ್ಬೆ ತಪ್ಪಿದ್ದಲ್ಲ .
ಸಾಧನಳ ಸೀಮಂತಕ್ಕೆ ಬಂದಿದ್ದ ವೀರಭದ್ರ ತಾಯಿಯ ರೌದ್ರಾವತಾರ ನೋಡಿ,ಅಣ್ಣ ಅತ್ತಿಗೆಯ ಬಗ್ಗೆ ಕರುಣೆಯುಕ್ಕಿ ಆರುತಿಂಗಳ ಮಟ್ಟಿಗೆ ನಾನು ನೋಡಿಕೊಳ್ಳುತ್ತೇನೆ ಎಂಬ ಭರವಸೆಯಿತ್ತ.ಸಾಧನಳಿಗೆ ಒಂಭತ್ತು ತಿಂಗಳಾದಾಗ ವೀರಭದ್ರ ಬಂದು ಅಮ್ಮನನ್ನು ತನ್ನ ಮನೆಗೆ ಕರೆದೊಯ್ದ.ಹಲವಾರು ವರುಷಗಳ ನಂತರ ಮಗನ ಮನೆಗೆ ಬಂದ ಸಂತಸ ಗಂಗಮ್ಮನಿಗೆ . ಸೊಸೆ ಮಗ ಮೊಮ್ಮಕ್ಕಳೊಂದಿಗೆ ಖುಷಿಯಾಗಿದ್ದರು.ಆಗಾಗ ಸುಶೀಲಳನ್ನು ದೂರುತ್ತಿದ್ದರು.ಆಗ ವೀರಭದ್ರನ ಮಡದಿ ಸುಮಿತ್ರಾ" ಅಕ್ಕಾ ತುಂಬಾ ಒಳ್ಳೆಯವರು"...ಎಂದು ಆಕೆಯ ಗುಣಗಾನ ಮಾಡುತ್ತಿದ್ದಳು.ಒಂದುತಿಂಗಳು ಎಲ್ಲವೂ ಸುಸೂತ್ರವಾಗಿ ನಡೆಯಿತು.ನಂತರ ಪುನಃ ರೇಗಾಟ ಆರಂಭವಾಯಿತು.ತೀರಾ ಅತಿರೇಕಕ್ಕೆ ತಲುಪಿದಾಗ ಇನ್ನು ಸ್ವಲ್ಪ ಸಮಯ ವೃದ್ಧಾಶ್ರಮ ದಲ್ಲಿರಲಿ ಎಂದು ಅದೇ ಪಟ್ಟಣದಲ್ಲಿರುವ ವೃದ್ಧಾಶ್ರಮಕ್ಕೆ ಸೇರಿಸಿದ..ವೀರಭದ್ರನಿಗೂ ಸುಮಿತ್ರಾಳಿಗೂ ಇದು ಇಷ್ಟವೇ ಇರಲಿಲ್ಲ.ಆದರೆ ತಾಯಿಯದೂ ತಪ್ಪಿದೆ.ಅನಗತ್ಯ ಮಗಸೊಸೆಯ ಮೇಲೆ ರೇಗಿದರೆ ನೋವಾಗುತ್ತದೆ ಎಂಬುದು ಅವರಿಗೆ ಅರಿವಾಗಲಿ ಎಂದು ಸೇರಿಸಿದರು.ಬರುವಾಗ ಇಬ್ಬರ ಕಂಗಳೂ ಒದ್ದೆಯಾದುವು.ಸುಶೀಲಕ್ಕ ಇಷ್ಟು ವರ್ಷ ಹೇಗೆ ತಡೆದುಕೊಂಡಳೋ ಎಂದು ಸುಮಿತ್ರಾ ಗದ್ಗದಿತಳಾದಳು..
ವೃದ್ಧಾಶ್ರಮ ಸೇರಿದ ಮೇಲೆ ಮೊದಲ ಊಟ.ಗಂಗಮ್ಮ ಬಾಯಿಗೆ ಒಂದು ತುತ್ತು ಹಾಕಿದಾಗಲೇ ವಾಂತಿ ಬರುವಂತಾಯಿತು. ಊಟ ಬಡಿಸುತ್ತಿದ್ದ ಆಯಾಳ ಮೇಲೆ ರೇಗಾಡಿದರು ಗಂಗಮ್ಮ.. "ನಾನು ತಿನ್ನಲಾರೆ.." ಎಂದು ಬಟ್ಟಲು ತೊಳೆಯುವ ಜಾಗದಲ್ಲಿ ಚೆಲ್ಲಿ ನಡೆದರು.ಕೂಡಲೇ ಆಶ್ರಮದ ಮೇಲ್ವಿಚಾರಕಿ ಭಾರತಿ ಮೇಡಂಗೆ ದೂರು ಹೋಯಿತು.ಅವರು ಬರಲು ಹೇಳಿದರು.
ಗಂಗಮ್ಮ ತನ್ನ ಎಂದಿನ ರೌದ್ರಾವತಾರ ತಳೆದರು.ಭಾರತಿ ಮೇಡಂ ತಾಳ್ಮೆಯಿಂದ ತಿಳಿಹೇಳಿ ಇಲ್ಲಿನ ನಿಯಮಾವಳಿಗಳನ್ನು ತಿಳಿಸಿದರು.ಇನ್ನೆಂದೂ ಈ ರೀತಿ ನಡೆದುಕೊಳ್ಳಬಾರದೆಂದು ಎಚ್ಚರಿಸಿದರು.
ಭಾರತಿ ಮೇಡಂ ಸಮಾಧಾನದಿಂದ ಮಾತನಾಡಿದ್ದು ಕಂಡು ಗಂಗಮ್ಮ ಇವರು ಸುಶೀಲಳಂತೆ...ಪಾಪ..ನನ್ನನ್ನು ಏನೂ ಮಾಡಲಾರರು ಎಂದುತಿಳಿದರು .ಮರುದಿನ ಬೆಳಿಗ್ಗೆ ಚಪಾತಿ ಮಾಡಿದ್ದರು.ನಾರು ಚಪಾತಿ.ಗಟ್ಟಿಯಾಗಿತ್ತು .ಎರಡೇ ನೀಡಿದ್ದರು.ಗಂಗಮ್ಮ ರೇಗಿದರು...ಅದನ್ನರಿತ ಮೇಡಂ ಈ ರೀತಿ ಒಬ್ಬರು ನಿಯಮ ಉಲ್ಲಂಘಿಸಿದರೆ ಎಲ್ಲರೂ ಅದನ್ನೇ ಅನುಸರೀಸುತ್ತಾರೆ.ಈಗಲೇ ಹದ್ದುಬಸ್ತಿನಲ್ಲಿಡಬೇಕು ಎಂದು ಗಂಗಮ್ಮಳನ್ನು ಕರೆದರು. ಆಕೆಯನ್ನು ಏನೊಂದೂ ವಿಚಾರಿಸುವ ಗೊಡವೆಗೇ ಹೋಗದೆ ..ಇಲ್ಲಿ ಬನ್ನಿ ಎಂದು ಪಕ್ಕದ ಕೋಣೆಗೆ ಕರೆದೊಯ್ದರು. ಹೊರಗಿನಿಂದ ಚಿಲಕ ಹಾಕಿದರು.ಗಂಗಮ್ಮ ಕೂಗಿಕೊಂಡರೂ ತೆರೆಯಲೇ ಇಲ್ಲ.
ಕತ್ತಲೆಯ ಕೋಣೆ.ಮಸುಕಾದ ಬೆಳಕು ಬೆಳಗಿನ ಹೊತ್ತು ಬರುತಿದೆ.. ಫ್ಯಾನ್ ಇಲ್ಲ.. ಒಂದು ಟಾಯ್ಲೆಟ್ ಇದೆ... ಬಿಟ್ಟರೆ ಬೇರೇನೂ ಇರಲಿಲ್ಲ.. ಬೆಳಿಗ್ಗೆ ಸಂಜೆ ಆಯಾ ನೀರು ತಂದಿತ್ತು ಪುನಃ ಬಾಗಿಲೆಳೆದುಕೊಳ್ಳುತ್ತಿದ್ದರು..ಗಂಗಮ್ಮನ ಶರೀರಕ್ಕೆ ನಿತ್ರಾಣ ಆವರಿಸಿತು.ಬರೀನೆಲದ ಮೇಲೆ ಮಲಗಿ ಕಣ್ಣೀರುಸುರಿಸುತ್ತಿದ್ದರು. ಹೊತ್ತು ಹೊತ್ತಿಗೆ ಬಿಸಿ ಬಿಸಿ ಕಾಫಿ ಕೊಡುತ್ತಿದ್ದ ಸುಶೀಲಳ ನೆನಪಾಯಿತು.ಮನೆಯ ರುಚಿಯಡುಗೆಯಲ್ಲೂ ಕಲ್ಲು ಹುಡುಕುತ್ತಿದ್ದ ತನ್ನ ಬುದ್ಧಿಯನ್ನು ತಾನೇ ಹಳಿದುಕೊಂಡರು.
ಮಾರನೇ ದಿನ ಒಂದು ಚಪಾತಿ ಒಂದು ಸೌಟು ಗೊಜ್ಜು ಕೊಟ್ಟು ಆಯಾ ನಡೆದಿದ್ದಳು.. ಇಡೀ ದಿನ ಮತ್ತೇನೂ ಇರಲಿಲ್ಲ. ಸ್ನಾನ ಮಾಡಿ ಬಟ್ಟೆ ಬದಲಿಯಿಸೋಣ ಎಂದರೆ ಬಟ್ಟೆ ಬೇರೆ ಕೋಣೆಯಲ್ಲಿದೆ..ಹೀಗೆ ಒಂದು ವಾರವಾದಾಗ ಭಾರತಿ ಮೇಡಂ ಬಂದರು."ಏನು ಗಂಗಮ್ಮ ಇನ್ನಾದರೂ ಹೊಂದಾಣಿಕೆ ಮಾಡಿಕೊಳ್ಳುತ್ತೀಯೋ ಇಲ್ಲವೋ ಎಂದರು."..ಇಳಿದು ಹೋದ ಗಂಗಮ್ಮ ಕ್ಷೀಣ ಧ್ವನಿಯಿಂದ "ಹೂಂ.."ಎಂದರು..
ಗಂಗಮ್ಮನ ದೇಹದ ಕಸುವು ಕ್ಷೀಣಿಸಿತು.ಒಬ್ಬೊಬ್ಬರಿಗೂ ಒಂದೊಂದು ಕೆಲಸ ಹಂಚುತ್ತಿದ್ದರು.ಗಂಗಮ್ಮನಿಗೆ ಕಾಲೊರಸುವ ಬಟ್ಟೆ ಮಾಡಲು ನಿಯೋಜಿಸಿದರು.ಬೆಳಗಿನಿಂದ ಸಂಜೆಯವರೆಗೆ ಅದೇ ಕೆಲಸ.ಕೂತೂ ಕೂತೂ ಬೆನ್ನು, ಸೊಂಟ ನೋವು ಬರುತ್ತಿತ್ತು.ಅತಿಯಾದ ಅನಾರೋಗ್ಯ ಇದ್ದರೆ ಮಾತ್ರ ವಿನಾಯಿತಿ.. ಮನೆಗೆ ಸುಶೀಲ ಬಂದ ನಂತರ ಕೆಲಸ ಮಾಡುವುದನ್ನು ಬಿಟ್ಟು ರೇಗಾಟ ಮಾತ್ರ ಮಾಡುತ್ತಿದ್ದ ಗಂಗಮ್ಮನಿಗೆ ನಿಧಾನವಾಗಿ ಎಲ್ಲಾ ಅಭ್ಯಾಸವಾಯಿತು.ಕೆಲಸ ಮಾಡುತ್ತಾ ಮನೆಯ ವಿಷಯ ಮಾತಾಡುವುದಾಗಲಿ...ದೂರುವುದಾಗಲೀ ಮಾಡಬಾರದೆಂಬ ನಿಯಮವಿತ್ತು.ಪಾಲಿಸದಿದ್ದರೆ ಕಠಿಣ ಶಿಕ್ಷೆಯಿತ್ತು . ಒಮ್ಮೆ ಶಿಕ್ಷೆ ಅನುಭವಿಸಿದ ಗಂಗಮ್ಮ ಈಗ ಬಹಳ ವಿಧೇಯಳಾಗಿದ್ದಳು.
ಒಂದು ದಿನ ಡಾ|| ವಿಜಯಾ ಅವರಿಂದ ವೃದ್ಧಾಶ್ರಮದಲ್ಲಿ ವ್ಯಕ್ತಿತ್ವ ವಿಕಸನ ಶಿಬಿರ ಆಯೋಜಿಸಲಾಗಿತ್ತು. ಹೇಳುವ ಅಂಶಗಳನ್ನು ಗಂಗಮ್ಮ ಕಿವಿಗೊಟ್ಟು ಕೇಳುತ್ತಿದ್ದರು.ತಾವು ಮಾಡುತ್ತಿದ್ದ ತಪ್ಪುಗಳೆಲ್ಲ ಈಗ ಅರಿವಾಗಿತ್ತು.ತಮ್ಮನ್ನು ತಾವೇ ತಿದ್ದಿಕೊಳ್ಳುವ ಪ್ರಯತ್ನ ಮಾಡಿದರು.ಎಲ್ಲರನ್ನೂ ದ್ವೇಷಿಸುವ ಬದಲು ಪ್ರೀತಿಸಲು ಆರಂಭಿಸಿದರು.ದಿನದಲ್ಲಿ ಆಗಾಗ ಸುಶೀಲ,ರಾಮಭದ್ರ ನನ್ನ ಕುಟುಂಬದ ಸದಸ್ಯರು ಎಷ್ಟು ಒಳ್ಳೆಯವರು ಎಂದು ಭಾವಿಸುತ್ತಿದ್ದರು.ಒಳ್ಳೆಯ ಸಂತಸದ ಘಟನೆಗಳ ಮೆಲುಕುಹಾಕತೊಡಗಿದರು..
ಮತ್ತೊಂದು ತಿಂಗಳು ಯೋಗರತ್ನ ರಾಧಾಕೃಷ್ಣ ಅವರು ಬಂದು ಯೋಗಾಸನ, ಯೋಗಮುದ್ರೆಗಳ ಬಗ್ಗೆ ಮಾಹಿತಿ ನೀಡಿದರು.ಗಂಗಮ್ಮ ಬಹಳ ಆಸಕ್ತಿಯಿಂದ ಕೇಳಿ ಪುಸ್ತಕದಲ್ಲಿ ನೋಟ್ ಮಾಡಿಕೊಂಡು ದಿನವೂ ಅನುಸರಿಸತೊಡಗಿದರು . ಆರೋಗ್ಯದಲ್ಲಿ ಸುಧಾರಣೆ ಕಂಡರು.ಚಿಂತನಾ ಶೈಲಿಯೂ ಬದಲಾಯಿತು.
ಮುಂದಿನ ತಿಂಗಳ ಚಟುವಟಿಕೆ ನಾಟಕ ತಂಡ ನಾಟಕವೊಂದನ್ನು ಹೇಳಿಕೊಟ್ಟು ಸಮಾರಂಭವೊಂದರಲ್ಲಿ ಪ್ರದರ್ಶನ ಮಾಡಲು ಅವಕಾಶ ನೀಡಿತ್ತು.ಗಂಗಮ್ಮನಿಗೆ ಸೊಸೆಯ ಪಾತ್ರವನ್ನು ನೀಡಲು ಭಾರತಿ ಮೇಡಂ ಸೂಚಿಸಿದರು.ಖಡಕ್ ಅತ್ತೆಯ ಪಾತ್ರದಲ್ಲಿ ಹಿರಿಯಮಹಿಳೆಯಿದ್ದರು. ಸೊಸೆಯು ಅತ್ತೆಯ ರೇಗುವಿಕೆಯಿಂದ ಅಳುವ ಸನ್ನಿವೇಶ ಬಂದಾಗ ಗಂಗಮ್ಮನಿಗೆ ತನ್ನ ಸೊಸೆ ಸುಶೀಲಳನ್ನು ನೆನೆದು ಸಹಜವಾಗಿ ಅಳುವೇ ಬರುತ್ತಿತ್ತು.ತಾನೆಷ್ಟು ಕಾಟಕೊಟ್ಟಿದ್ದೆ ಎಂದು ಮರುಗುತ್ತಲೇ ಅಳುತ್ತಿದ್ದರು.
ಹೀಗೇ ತಿಂಗಳಿಗೊಂದು ವಿಶಿಷ್ಟ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ದಿನವೂ ಬೆಳಗಿನಿಂದ ಸಂಜೆಯ ತನಕ ಕಾಲೊರೆಸುವ ಬಟ್ಟೆ ಹೆಣೆಯುತ್ತಾ ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಂಡು ಬದುಕುತ್ತಿದ್ದರು.
ಮನೆಯಲ್ಲಿ ಚಿನ್ಮಯಳ ಸೀಮಂತವಾಗಿ ಕೆಲವೇ ದಿನಗಳಲ್ಲಿ ಸಾಧನ ಮುದ್ದಾದ ಮಗುವಿಗೆ ಜನ್ಮನೀಡಿದಳು.ಸುಶೀಲ ಬಾಣಂತನ ಮಾಡಿದಳು.ಅತ್ತೆಯ ರೇಗಾಟ ಇಲ್ಲದ್ದರಿಂದ ಮನೆಯ ವಾತಾವರಣ ಶಾಂತವಾಗಿತ್ತು.ಸುಶೀಲಳ ಮುಟ್ಟಿನ ಸಮಯದ ಅನಾರೋಗ್ಯದ ಸಂದರ್ಭದಲ್ಲಿ ನೆರೆಮನೆಯ ಸುಂದರಮ್ಮ ನೆರವಾದರು..ಆಕೆ ಗಂಗಮ್ಮನವರು ಇದ್ದರಂತೂ ನಾನು ಬರುತ್ತಿರಲಿಲ್ಲ ಎಂದು ಆಗಾಗ ಹೇಳುತ್ತಿದ್ದುದು ಅವರ ಕುಖ್ಯಾತಿಯನ್ನು ಸಾರಿಹೇಳುತ್ತಿತ್ತು.ಮಗುವಿಗೆ ಮೂರು ತಿಂಗಳಾಗುತ್ತಿದ್ದಂತೆ ಸಾಧನಾಳನ್ನು ಗಂಡನ ಮನೆಗೆ ಕಳುಹಿಸಿಕೊಟ್ಟರು.
ಇನ್ನು ಸುಶೀಲಳ ಗಮನ ಸೊಸೆ ಚಿನ್ಮಯಳ ಮೇಲಿತ್ತು.ಚಿನ್ಮಯಾ ಆಗಲೇ ಹೆರಿಗೆರಜೆಯನ್ನು ಪಡೆದುಕೊಂಡಿದ್ದಳು.ಅವಳೂ ಒಂದುಶುಭದಿನ ಮುದ್ದಾದ ಮಗುವಿಗೆ ಜನ್ಮವಿತ್ತಳು.ಅನಾರೋಗ್ಯ ಪೀಡಿತೆ ಅಮ್ಮ ಹಾಗೂ ಅತ್ತೆ ಸುಶೀಲ ಇಬ್ಬರೂ ಜೊತೆಯಾಗಿ ನಂದನವನ ಮನೆಯಲ್ಲೇ ಬಾಣಂತನ ಮುಗಿಸಿದರು..ಮುದ್ದುಮಗುವಿನ ಆಗಮನದಿಂದ ಮನೆಯು ಕಳೆಗಟ್ಟಿತ್ತು.ಮೂರುತಿಂಗಳ ಬಳಿಕ ಒಂದು ತಿಂಗಳು ತವರಿನಲ್ಲಿದ್ದು ಬಂದಳು ಚಿನ್ಮಯಾ..
ಇಬ್ಬರ ಬಾಣಂತನವೂ ಮುಗಿಯಿತು.. ಸುಶೀಲಾ ಗಂಡನಲ್ಲಿ "ರೀ.. ಇನ್ನು ಅತ್ತೆಯನ್ನು ಕರೆದುಕೊಂಡು ಬನ್ನಿ.. ಅವರಿಗೆ ಬೇಕಾದಂತೆ ಮಾಡಿಕೊಡುತ್ತಾ ಮಗುವನ್ನೂ ನೋಡಿಕೊಳ್ಳಬಲ್ಲೆ ..ಚಿನ್ಮಯಾ ಕೆಲಸಕ್ಕೆ ಹೋದರೂ ಕೂಡ ನಿಭಾಯಿಸಬಲ್ಲೆ...ಪಾಪ..ಹಿರಿಜೀವ ಪಟ್ಟಣದಲ್ಲಿ ಎಷ್ಟು ಕಷ್ಟ ಅನುಭವಿಸಿತೋ ಎನೋ... ಒಮ್ಮೆಯೂ ಮಾತನಾಡಿಸಲೂಆಗಿಲ್ಲ ..". ಎಂದಳು..
ವೀರಭದ್ರನಿಗೆ ಕರೆಮಾಡಿದರು ರಾಮಭದ್ರ.ಅವನು ಅದೂ..ಇದೂ.. ಎಂದು ರಾಗ ಎಳೆದಾಗ ವಿಷಯ ಏನೋ ಬೇರೆ ಇದೆ ಎಂದು ಅರಿವಾಯಿತು.ಸರಿಯಾಗಿ ವಿಚಾರಿಸಿಕೊಂಡಾಗ ತಿಳಿಯಿತು ಅಮ್ಮ ವೃದ್ಧಾಶ್ರಮದಲ್ಲಿದ್ದಾರೆಂದು.ರಾಮಭದ್ರ ಸುಶೀಲ ಇಬ್ಬರೂ ನೊಂದುಕೊಂಡರು...ಛೇ... ಎಂತಹ ಅಚಾತುರ್ಯ ನಡೆದುಹೋಯಿತು.ಮಗನ ಮನೆಯಲ್ಲಿ ಆರಾಮವಾಗಿ ಇದ್ದಾರೆ ಎಂದು ನಾವು ತಿಳಿದರೆ... ಅವರು ವೃದ್ಧಾಶ್ರಮಕ್ಕೆ ಸೇರಿಸಿದ್ದಾರೆ.ಬಾಣಂತನದ ಹೆಸರಿನಲ್ಲಿ ಹಿರಿಯರನ್ನು ಮನೆಯಿಂದ ಹೊರದಬ್ಬಿದ ಪಾಪಕಾರ್ಯ ನಮ್ಮಾಂದಾಯಿತಲ್ಲ...ಎಂದು ಅದೇ ದಿನ ರಾಮಭದ್ರ ತಮ್ಮನ ಮನೆಗೆ ಹೊರಟರು.ತಮ್ಮನ ಮನೆತಲುಪಿ ಅಮ್ಮನ ವಿಚಾರ ತಿಳಿದುಕೊಂಡರು.
ಇಲ್ಲಿ ಅವರು ನಡೆದುಕೊಳ್ಳುತ್ತಿದ್ದ ವಿಚಿತ್ರ ವರ್ತನೆಯನ್ನು ತಿಳಿಹೇಳಿದ ವೀರಭದ್ರ.. ಹಾಗೆಂದು ವೃದ್ಧಾಶ್ರಮಕ್ಕೆ ಸೇರಿಸುವ ಬದಲು ನನಗೆ ಹೇಳಿದ್ದರೆ ಬಂದು ಕರೆದೊಯ್ಯುತ್ತಿದ್ದೆ ಎಂದ ಅಣ್ಣ.
ವೀರಭದ್ರ.. "ಅಣ್ಣಾ.. ವೃದ್ಧಾಶ್ರಮ ಎಂದರೆ ಹಿರಿಯರ ಮನೋವಿಕಾಸಕ್ಕೆ ಅನುಕೂಲ ತಾಣ.ಹಲವಾರು ವರ್ಷಗಳಿಂದ ಸಣ್ಣಪುಟ್ಟ ವಿಷಯಗಳಿಗೂ ರೇಗುತ್ತಿದ್ದ ತಾಯಿ ಅದನ್ನೇ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ.ಅದು ತಪ್ಪು ಎಂದು ಅವರಿಗೆ ತೋರುತ್ತಿಲ್ಲ.ವೃದ್ಧಾಶ್ರಮವೆಂದರೆ ಶಾಲೆಯಂತೆ.ಹಿರಿಯರ ತಪ್ಪನ್ನು ತಿದ್ದಿ ವ್ಯಕ್ತಿತ್ವ ವಿಕಸನಕ್ಕೆ ಅನುವುಮಾಡಿಕೊಡುತ್ತದೆ.ಅಮ್ಮ ಈಗ ತುಂಬಾ ಬದಲಾಗಿದ್ದಾರೆ.ಮನಸ್ಸು ಹಿಡಿತದಲ್ಲಿದೆ.ಪ್ರೀತಿಯಿಂದ ಬಹಳ ಶಾಂತವಾಗಿ ಮಾತನಾಡುತ್ತಿದ್ದಾರೆ.ಮೊದಲಿನಂತೆ ಮಾತಿನಲ್ಲಿ ಮೂದಲಿಕೆ,ತಪ್ಪನ್ನೇ ಹುಡುಕಿ ಎತ್ತಿ ಆಡಿ ಚುಚ್ಚುವಿಕೆ ಇಲ್ಲ. ಸುಶ್ರಾವ್ಯವಾಗಿ ದೇವರ ಭಜನೆಗಳನ್ನು ಹಾಡುತ್ತಿದ್ದಾರೆ.. ನಾವು ಪ್ರತೀ ತಿಂಗಳು ಒಂದು ಭಾನುವಾರ ಹೋಗಿ ಅವರ ಜೊತೆ ಬೆಳಗಿನಿಂದ ಸಂಜೆಯವರೆಗೆ ಇದ್ದು ಬರುತ್ತೇವೆ."
ಆದರೂ ರಾಮಭದ್ರನ ಮನಸ್ಸು ಅಮ್ಮನನ್ನು ವೃದ್ಧಾಶ್ರಮದಲ್ಲಿ ಬಿಡಲು ಒಪ್ಪಲಿಲ್ಲ.ತಮ್ಮನೊಂದಿಗೆ ಆಶ್ರಮಕ್ಕೆ ತೆರಳಿದ.ಅಮ್ಮ ಕಾಲೊರೆಸು ತಯಾರಿಯಲ್ಲಿ ಮಗ್ನರಾಗಿದ್ದರು. ಆಯಾ ಗಂಗಮ್ಮನನ್ನು ಕರೆದರು.ಹೊರಗೆ ಬಂದ ಗಂಗಮ್ಮ ಮಗನನ್ನು ಪ್ರೀತಿಯಿಂದ ಮಾತನಾಡಿಸಿದರು. ಮಕ್ಕಳ ಹೆರಿಗೆ ಬಾಣಂತನದ ಬಗ್ಗೆ ವಿಚಾರಿಸಿಕೊಂಡರು.ಮಾತಿನಲ್ಲಿ ಇರುವ ಶಾಂತತೆಯನ್ನು ರಾಮಭದ್ರ ಗಮನಿಸಿದನು.ಮನೆಗೆ ಕರೆದೊಯ್ಯಲು ಬಂದಿದ್ದೇನೆ ಎಂದ ಮಗನಲ್ಲಿ."ಇಲ್ಲ ನಾನು ಬರುವುದಿಲ್ಲ.ಇಲ್ಲಿಯೇ ಇರುತ್ತೇನೆ..ಈ ಪರಿಸರ ನನಗೆ ಹಿಡಿಸಿದೆ "ಎಂದರು.ಮೇಲ್ವಿಚಾರಕಿಯಲ್ಲಿ ಮಾತನಾಡಿದರು.. ಮನೆಗೆ ಹೋಗುವುದು ಅವರ ಇಷ್ಟ.ನಮ್ಮದೇನೂ ಅಭ್ಯಂತರವಿಲ್ಲ.ಎಂದರು.ಆದರೆ ಗಂಗಮ್ಮ ಮಾತ್ರ ಬರುವ ಆಸಕ್ತಿ ತೋರಲಿಲ್ಲ.ಅಣ್ಣ ತಮ್ಮ ಇಬ್ಬರೂ ಹಾಗೇ ಮರಳಿದರು .
ಅತ್ತೆ ಬಾರದ್ದನ್ನು ಕಂಡು ಸುಶೀಲ ನೊಂದುಕೊಂಡಳು.ಇದನ್ನರಿತ ಚಿನ್ಮಯ ಅತ್ತೆ.. "ನಾನು ಉದ್ಯೋಗಕ್ಕೆ ಪುನಃ ಸೇರದೆ ಮಗುವನ್ನು ನೋಡಿಕೊಳ್ಳುತ್ತೇನೆ .ಮಗು ದೊಡ್ಡದಾದ ಮೇಲೆ ಉದ್ಯೋಗಕ್ಕೆ ಹೋಗುತ್ತೇನೆ.ನಿಮಗೆ ಅಜ್ಜಿಯನ್ನು ನೋಡಿಕೊಳ್ಳಲು ಆಗ ಅನುಕೂಲ" ಎಂದು ಹೇಳಿದಳು.ಎಲ್ಲ ವಿಷಯವನ್ನೂ ಮನೆಯವರೊಂದಿಗೆ ಹಂಚಿಕೊಂಡ ರಾಮಭದ್ರ.ಎಲ್ಲರೂ ಸೇರಿ ಒಂದು ನಿರ್ಧಾರಕ್ಕೆ ಬಂದರು.ಮುಂದಿನ ಭಾನುವಾರ ಎಲ್ಲರೂ ವೃದ್ಧಾಶ್ರಮಕ್ಕೆ ತೆರಳಿ ಅಜ್ಜಿಯನ್ನು ಮನವೊಲಿಸಿ ಕರೆದುಕೊಂಡು ಬರೋಣ ಎಂದು.. ಸಾಧನಾ ಅವಳ ಗಂಡ ಪುಟ್ಟ ಮಗು, ಸಹನಾಳ ಕುಟುಂಬ ಹಾಗೂ ಮನೆಯವರೆಲ್ಲರೂ ಜೊತೆಯಾಗಿ ವೃದ್ಧಾಶ್ರಮಕ್ಕೆ ಹೊರಟರು.
ಆ ಭಾನುವಾರ ವೃದ್ಧಾಶ್ರಮದ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ಆಯೋಜಿಸಿ ದ್ದರು.ಅಲ್ಲಿಗೆ ಹೋಗಿ ಕಾರಿನಿಂದ ಇಳಿಯುತ್ತಿದ್ದಂತೆ ವೇದಿಕೆಯಲ್ಲಿ ಕುಳಿತು ಧ್ವನಿವರ್ಧಕದಲ್ಲಿ ಸುಶ್ರಾವ್ಯವಾಗಿ ಹಾಡುತ್ತಿದ್ದ ಅತ್ತೆಯನ್ನು ಕಂಡು ಸುಶೀಲ ತನ್ನ ಕಣ್ಣನ್ನೇ ನಂಬದಾದಳು.ಸಚಿನ್ ಚಿನ್ಮಯಾ ಮಗುವನ್ನು ಎತ್ತಿಕೊಂಡು ನಿಂತಲ್ಲೇ ಬೆರಗಾದರು.ಸಾಧನಾ ಸಹನಾ ಅಜ್ಜಿ ಎಷ್ಟು ಇಂಪಾಗಿ ಹಾಡುತ್ತಿದ್ದಾರೆ ಎಂದು ಮೆಚ್ಚಿಕೊಂಡರು.
ಕಾರ್ಯಕ್ರಮ ಮುಗಿದ ಬಳಿಕ ಭಾರತಿ ಮೇಡಂ ಅವರಲ್ಲಿ ರಾಮಭದ್ರ ಮಾತನಾಡಿ ನಾವೆಲ್ಲರೂ ಜತೆಯಾಗಿ ಬಂದಿದ್ದೇವೆ.ಅಮ್ಮನನ್ನು ಮನೆಗೆ ಕರೆದೊಯ್ಯುತ್ತಿದ್ದೇವೆ..ಇಷ್ಟು ಸಮಯ ನೋಡಿಕೊಂಡು ಅವರಲ್ಲಿ ಧನಾತ್ಮಕ ಬದಲಾವಣೆಗೆ ಕಾರಣರಾದ ನಿಮಗೆ ಧನ್ಯವಾದಗಳು ಮೇಡಂ ಎಂದು ಕೈಮುಗಿದರು..
"ಇದರಲ್ಲಿ ನಮ್ಮದೇನಿಲ್ಲ...ಇಲ್ಲಿ ಕೆಲವು ಶಿಸ್ತಿನ ನಿಯಮಗಳಿವೆ.ಪಾಲಿಸಲೇಬೇಕು .
ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ .ಇದರಿಂದ ಹಿರಿಯರಲ್ಲಿರುವ ಏಕತಾನತೆ ಮರೆಯಾಗಿ ಚೈತನ್ಯ ಮೂಡುತ್ತದೆ. ಅವನ್ನೆಲ್ಲಾ ಪಾಲಿಸಿದ ನಿಮ್ಮ ತಾಯಿಯವರಲ್ಲಿ ಸಹಜವಾಗಿಯೇ ಬದಲಾವಣೆಗಳಾಗಿವೆ...ಅವರು ಒಪ್ಪಿದರೆ ಕರೆದೊಯ್ಯಿರಿ.."ಎಂದರು..
ತನ್ನ ಕುಟುಂಬದ ಸದಸ್ಯರನ್ನೆಲ್ಲ ಜೊತೆಯಾಗಿ ನೋಡಿದ ಗಂಗಮ್ಮನಿಗೆ ಸಂತಸವಾಯಿತು.ಪುಟ್ಟ ಕಂದಮ್ಮಗಳನ್ನು ಎತ್ತಿ ಮುದ್ದಾಡಿದರು.ತನ್ನ ಗಳತಿಯರಿಗೆಲ್ಲ ಪರಿಚಯ ಮಾಡಿಕೊಟ್ಟರು.ಮನೆಗೆ ಬರಲು ನಿರಾಕರಿಸಿದರು.ಕೊನೆಗೆ ಭಾರತಿ ಮೇಡಂ..."ನಿಮ್ಮ ಕುಟುಂಬ ನಿಮ್ಮನ್ನು ಇಷ್ಟು ಪ್ರೀತಿಸುತ್ತಿದೆ.ಹೆಮ್ಮೆಪಟ್ಟುಕೊಳ್ಳಿ .ಅವರ ಮನಸ್ಸನ್ನು ನೋಯಿಸದೆ ಹೊರಡಿ.ಇಲ್ಲಿ ಕಲಿತ ಜೀವನ ಮೌಲ್ಯಗಳನ್ನು ಮರೆಯದೆ ಬದುಕಿನಲ್ಲಿ ಅಳವಡಿಸಿಕೊಳ್ಳಿ.."ಎಂದಾಗ ಒಲ್ಲದ ಮನಸ್ಸಿನಿಂದಲೇ ಗೆಳತಿಯರಿಗೆಲ್ಲ ಬಾಯ್ ಮಾಡಿ ಹೊರಟರು..ಗೆಳತಿಯರ ಕಣ್ಣು ತೇವವಾಗಿತ್ತು.. ಭಾರತಿ ಮೇಡಂ.."ಆಗಾಗ ಬರುತ್ತಿರಿ "ಎಂದರು.ಧಾರಾಕಾರವಾಗಿ ಸುರಿಯುತ್ತಿರುವ ಕಣ್ಣೀರನ್ನು ಒರೆಸಿಕೊಂಡು ವೃದ್ಧಾಶ್ರಮದ ನೋಟ ಕಣ್ಣ ದೃಷ್ಟಿಯಿಂದ ಸರಿಯುವವರೆಗೂ ಎವೆಯಿಕ್ಕದೇ ನೋಡುತ್ತಿದ್ದರು ಗಂಗಮ್ಮ.
ಮನೆಗೆ ಬಂದ ಗಂಗಮ್ಮ ಸಂಪೂರ್ಣ ಬದಲಾಗಿದ್ದರು.ನಾಲ್ಕೂವರೆ ಗಂಟೆಗೆ ಎದ್ದು ಮಿಂದು ಯೋಗಾಸನ ,ಧ್ಯಾನ ,ಪ್ರಾಣಾಯಾಮ, ಮುದ್ರೆಗಳನ್ನು ಮಾಡುತ್ತಿದ್ದರು.ನಂತರ ಮನೆಯ ಎಲ್ಲ ಕೆಲಸಕಾರ್ಯಗಳಲ್ಲಿ ಸುಶೀಲಳಿಗೆ ನೆರವಾಗುತ್ತಿದ್ದರು.ಮಗುವಿಗೆ ಭಕ್ತಿಗೀತೆಗಳನ್ನು ಹೇಳಿ ಮಲಗಿಸುತ್ತಿದ್ದರು .ಮನೆಯ ಪರಿಸರ ಶಾಂತವಾಗಿತ್ತು..ಪ್ರೀತಿ ತುಂಬಿತ್ತು.ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುತ್ತಿದ್ದರು.
ಚಿನ್ಮಯ ಅತ್ತೆಯ ಬಳಿ ಬಂದು.."ಅತ್ತೆ ಈಗ ಅಜ್ಜಿ ಬದಲಾಗಿದ್ದಾರೆ..ನಿಮಗೂ ನನಗೂ ಸಹಾಯ ಮಾಡುತ್ತಿದ್ದಾರೆ.. ನೀವು ಮಗುವನ್ನು ನೋಡಿಕೊಳ್ಳುತ್ತೀರಾದರೆ ನಾನು ಉದ್ಯೋಗಕ್ಕೆ ತೆರಳುತ್ತೇನೆ.. "ಸುಶೀಲಾ ಒಪ್ಪಿಗೆಕೊಟ್ಟರು.ಎಲ್ಲರ ಬಳಿ ಚರ್ಚಿಸಿ ಚಿನ್ಮಯ ಉದ್ಯೋಗಕ್ಕೆ ಮತ್ತೆ ಸೇರುವ ನಿರ್ಧಾರ ಮಾಡಿದಳು.
ಅಂದು ಬೆಳಿಗ್ಗೆ ಬೇಗನೆ ಕೆಲಸ ಕಾರ್ಯಗಳನ್ನು ಮಾಡಿ ಮಗುವನ್ನು ಅತ್ತೆಯ ಕೈಯಲ್ಲಿ ಕೊಟ್ಟು ಎಲ್ಲರ ಆಶೀರ್ವಾದ ಪಡೆದು ಮನೆಯಿಂದ ಹೊರಟು ಗೇಟುತೆಗೆದಳು ಚಿನ್ಮಯ.ಸಚಿನ್ ಬೈಕ್ ಸ್ಟಾರ್ಟ್ ಮಾಡಿ ಹೊರಗೆ ನಿಲ್ಲಿಸಿದ . ಗೇಟು ಹಾಕುತ್ತಿದ್ದ ಚಿನ್ಮಯಾಳಿಗೆ "ನಂದನ ವನ" ಹೆಸರು ಗೇಟಿನಲ್ಲಿ ರಾರಾಜಿಸುತ್ತಿರುವುದು ಕಂಡಿತು .. ನಸುನಕ್ಕು ...ಹೌದು..ನಮ್ಮ ಮನೆಯೀಗ ನಿಜವಾಗಿಯೂ ನಂದನವನವೇ ಎಂದುಕೊಳ್ಳುತ್ತಾ ಬೈಕೇರಿ ಕುಳಿತಳು...
ಜೀವನದುದ್ದಕ್ಕೂ ಕಷ್ಟಗಳನ್ನು ಅವಮಾನಗಳನ್ನು ಸಹಿಸಿ ತನ್ನೊಳಗೆ ಹುದುಗಿಸಿ ತನ್ನ ಕುಟುಂಬಕ್ಕೆ ಒಲವನ್ನೇ ಧಾರೆಯೆರೆದ ಮಾತೆ ಸುಶೀಲಾಳ ಬಾಳಿನಲ್ಲಿ ಶಾಂತಿ,ಸಮಾಧಾನ ನೆಲೆಸಿತು...
✍️... ಅನಿತಾ ಜಿ.ಕೆ.ಭಟ್.
13-11-2019
ಪ್ರತಿಲಿಪಿ ಕನ್ನಡದ ಶ್ರವಣ 'ಕಥಾನಕ ಸಂಚಯನ'ಸ್ಪರ್ಧೆಯಲ್ಲಿ ಬಹುಮಾನ ಪಡೆದಿದೆ.
👌🏻👌🏻👌🏻
ReplyDeleteಥ್ಯಾಂಕ್ಯೂ 💐🙏
ReplyDelete