Saturday, 30 May 2020

ಪ್ರತಿಭೆ


ಪ್ರತಿಭೆ

        ಉಷಾ ಗಂಡನಿಗಿಷ್ಟವಾದ ಅಡುಗೆಯನ್ನು ಮಾಡಿ ಊಟದ ಮೇಜಿನ ಮೇಲೆ ಮುಚ್ಚಿಟ್ಟು ಗಂಡ ಬರುವುದಕ್ಕೂ ಮುನ್ನ ಸ್ನಾನ ಮಾಡಿ ಬರುತ್ತೇನೆಂದು ಬಚ್ಚಲುಮನೆಗೆ ಧಾವಿಸಿದಳು.ಪ್ರಶಾಂತ್ ಎಂದಿಗಿಂತ ಹತ್ತು ನಿಮಿಷ ಬೇಗವೇ ಆಫೀಸಿನಿಂದ ಹೊರಟು ಮನೆಗೆ ಬಂದ. ಬೈಕ್ ನಿಲ್ಲಿಸಿದಾಗ" ಹಾಡು ಹಳೆಯದಾದರೇನು ಭಾವ ನವನವೀನ..ಎದೆಯ ಭಾವ ಹೊಮ್ಮುವುದಕೆ..."ಎಂದು ಸುಶ್ರಾವ್ಯವಾಗಿ ಹಾಡುವ ದನಿಯೊಂದು ಗಾಳಿಯಲ್ಲಿ ಅಲೆಅಲೆಯಾಗಿ ತೇಲಿಬಂದಾಗ ಸ್ವಲ್ಪ ನಿಧಾನಿಸಿದ.ಹಾಡು ನಿಂತಾಗ ಕರೆಗಂಟೆ ಅದುಮಿದ.ಉಷಾಳ ಒದ್ದೆಯಾಗಿದ್ದ ಕೂದಲುಗಳು,ಹಿತವಾದ ಸೋಪಿನ ಪರಿಮಳ ಅವನಿಗೆಲ್ಲವನ್ನು ಅರ್ಥಮಾಡಿಸಿತು.ಆಶ್ಚರ್ಯವೂ ಆಯಿತು.. ಇಷ್ಟು ವರ್ಷದಿಂದ ನಾನಿವಳ ಕಂಠಸಿರಿಯಲ್ಲಿ ಹಾಡನ್ನು ಆಲಿಸಲಿಲ್ಲವಲ್ಲಾ ಎಂದು ತನ್ನನ್ನೇ ಬೈದುಕೊಂಡು ಒಳಗೆ ಬಂದ.


        ಪ್ರಶಾಂತ್ ಬ್ಯಾಂಕ್ ಉದ್ಯೋಗಿ.ಆಗಾಗ ಟ್ರಾನ್ಸ್ ಫರ್ ಆಗುತ್ತಿತ್ತು.ಮನೆಯಲ್ಲಿ ತಂದೆ ತಾಯಿ ತಮ್ಮ ತಂಗಿ ಇದ್ದರು.ಅಪ್ಪ ಪುಟ್ಟ ಹೋಟೇಲೊಂದನ್ನು ಇಟ್ಟಿದ್ದರು.ಅದರಿಂದ ಬಂದ ಆದಾಯದಲ್ಲಿ ಕುಟುಂಬ ಜೀವಿಸುತ್ತಿತ್ತು.ಮಗನ ಸಂಪಾದನೆ ಆರಂಭವಾದಾಗ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಾ ಬಂತು.ತಂದೆಯೂ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.ಮಗನಿಗೆ ಬೇಗ ಮದುವೆ ಮಾಡೋಣ ಎಂದು ಕನ್ಯಾನ್ವೇಷಣೆಯಲ್ಲಿ ತೊಡಗಿದರು.


  ನೆಂಟರೊಬ್ಬರು ಕುದುರಿಸಿದ ಸಂಬಂಧ ಹೊಂದಾಣಿಕೆಯಾಗಿ ಉಷಾ ಪ್ರಶಾಂತನ ಮಡದಿಯಾದಳು.ಪಟ್ಟಣದಲ್ಲಿ ಮನೆ ಮಾಡಿಕೊಂಡರೆ ಖರ್ಚು ಹೆಚ್ಚು.ಉಳಿತಾಯ ಕಡಿಮೆ.ಹಳ್ಳಿಯಿಂದಲೇ ಹೋಗಿ ಬಂದು ಮಾಡಿದರೆ ಅನುಕೂಲ ಎಂದು ದಿನವೂ ಮೂವತ್ತು ಕಿಲೋಮೀಟರ್ ಬಸ್ ಪ್ರಯಾಣ ಮಾಡಿ ಆಫೀಸಿಗೆ ತೆರಳುತ್ತಿದ್ದ.

         ಬರಬರುತ್ತಾ ತಂದೆಯ ಆರೋಗ್ಯ ಬಿಗಡಾಯಿಸಿತು.ಒಂದು ವರ್ಷದಲ್ಲಿ ಅಪ್ಪ ತೀರಿಕೊಂಡರು.ಮನೆಯ ಜವಾಬ್ದಾರಿ ಪ್ರಶಾಂತನ ಹೆಗಲ ಮೇಲೆ ಬಿತ್ತು.ಉಷಾ ಇಬ್ಬರು ಗಂಡು ಮಕ್ಕಳ ತಾಯಿಯಾದಳು.ಪ್ರಶಾಂತ್ ತಂಗಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ , ಒಳ್ಳೆಯ ಕುಲದ ವರನನ್ನು ಹುಡುಕಿ ಮದುವೆ ನಿಶ್ಚಯ ಮಾಡಿದ.ಆದರೆ ತಂಗಿ ಸ್ವಲ್ಪ ಕಪ್ಪು ಬಣ್ಣದವಳು.ಆದ್ದರಿಂದ ವರನ ಕಡೆಯವರ ವರದಕ್ಷಿಣೆಯ ಪಟ್ಟಿಯೂ ಉದ್ದವಾಗಿತ್ತು.ಅಮ್ಮ "ಏನಾದ್ರೂ ಮಾಡು ಪ್ರಶಾಂತ್..ತಂಗಿಯ ಮದುವೆಯ ಭಾರ ನಿನ್ನದೇ.. "ಎಂದರು.ಸಾಲ ಮಾಡಿ ಮದುವೆ ಮಾಡಿದ.

        ಆ ವರ್ಷವೇ ಅವನಿಗೆ ಬೆಂಗಳೂರಿಗೆ ಮುಂಬಡ್ತಿಯೊಂದಿಗೆ ವರ್ಗಾವಣೆ ಆಯಿತು.ಮಡದಿ ಮಕ್ಕಳನ್ನು ಕರೆದುಕೊಂಡು ಬಂದರೆ ಸಾಲ ತೀರಿಸಲು ಸಾಧ್ಯವಿಲ್ಲ ಎಂದು ಅವರನ್ನು ಊರಿನಲ್ಲಿಯೇ ಬಿಟ್ಟು ತಾನು ಪುಟ್ಟ ರೂಮ್ ಹಿಡಿದು ವಾಸಿಸತೊಡಗಿದ. ತಿಂಗಳಿಗೊಮ್ಮೆ ಊರಿಗೆ ಹೋಗುತ್ತಿದ್ದ.


    ತಮ್ಮನಿಗೆ ಬಿ ಫಾರ್ಮ್ ಓದಿಸಿದ.ಮನೆಯ ಹತ್ತಿರದ ಪಟ್ಟಣದಲ್ಲಿ ಅವನಿಗೊಂದು ಮೆಡಿಕಲ್ ಶಾಪ್ ತೆರೆದುಕೊಟ್ಟ.ನಿಧಾನವಾಗಿ ತಮ್ಮನ ಉದ್ಯೋಗವೂ ಒಳ್ಳೆಯ ಆದಾಯ ಗಳಿಸಲಾರಂಭಿಸಿತು.. "ಇವನಿಗೆ ಮದುವೆ ಮಾಡಿದ ಮೇಲೆ ನಿನ್ನ ಪತ್ನಿ ಮಕ್ಕಳ ಜೊತೆ ಉದ್ಯೋಗ ಸ್ಥಳದಲ್ಲಿ ವಾಸಮಾಡು ಪ್ರಶಾಂತ್" ಎನ್ನುತ್ತಿದ್ದರು ಅಮ್ಮ.ತಮ್ಮನಿಗೆ ವಿವಾಹ ಮಾಡಿ ಕಳೆದ ತಿಂಗಳು ತನ್ನ ಕುಟುಂಬವನ್ನು , ಎರಡು ವರ್ಷಗಳ ಹಿಂದೆ ವರ್ಗಾವಣೆ ಆಗಿದ್ದ ಬೆಳಗಾವಿಗೆ ಕರೆತಂದ.



  ಅವನಿಗಿಷ್ಟದ ಪಾಯಸ ,ರಸಂ ಸಿದ್ಧಪಡಿಸಿದ್ದಳು ಉಷಾ.ಪ್ರೀತಿಯಿಂದಲೇ ಬಡಿಸಿದಳು.ಊಟ ಮಾಡಿ ಹೊರಟ ಪತಿಯಲ್ಲಿ "ರೀ.. ಇವತ್ತು ನಮ್ಮ ವಿವಾಹ ವಾರ್ಷಿಕೋತ್ಸವ ಮರೆತಿಲ್ಲ ತಾನೇ.. ಸಂಜೆ ಮನೆಗೆ ಬೇಗ ಬನ್ನಿ.. ಹತ್ತಿರದಲ್ಲಿರುವ ದೇವಸ್ಥಾನಕ್ಕೆ ಹೋಗೋಣ.." ಎಂದಳು..ಅವಳ ಮೊಗದಲ್ಲಿ ಸಂಭ್ರಮ ಇತ್ತು.ಇದೇ ಮೊದಲ ಬಾರಿಗೆ ವಿವಾಹ ವಾರ್ಷಿಕೋತ್ಸವದ ದಿನ ಇಬ್ಬರೂ ಜೊತೆಯಲ್ಲಿ ಇದ್ದಿದ್ದು.


".ಸರಿ..ಸಂಜೆ ಹೊರಟುನಿಲ್ಲು" ಎಂದು ಹೇಳಿಹೊರಟರು. ಅದರಂತೆ ಸಂಜೆ ಬೇಗನೆ ಬಂದು ಝರಿಯಂಚಿನ ಸೀರೆಯುಟ್ಟು ಕಾಯುತ್ತಿದ್ದ ಉಷಾ ಹಾಗೂ  ಅಪ್ಪ ತಂದಿದ್ದ ಹೊಸ  ಪ್ಯಾಂಟ್, ಶರ್ಟ್ ಧರಿಸಿದ್ದ ಮಕ್ಕಳನ್ನು ಕರೆದೊಯ್ದ....ಒಂದು ಮನೆಯ ಮುಂದೆ ಕಾರು ನಿಲ್ಲಿಸಿದ.ಮನೆಯ ಗೇಟಿನ ಮುಂದೆ
"ಸ್ವರಾಂಜಲಿ ಸಂಗೀತಶಾಲೆ "ಎಂದು ಫಲಕ ನೇತಾಡುವುದನ್ನು ಕಂಡು"ರೀ.. ಎಲ್ಲಿಗೆ ಕರೆದುಕೊಂಡು ಬಂದಿದ್ದೀರಿ.."ಎಂದ ಉಷಾಳಿಗೆ "ಇದು ವಿವಾಹ ದಶವಾರ್ಷಿಕೋತ್ಸವಕ್ಕೆ ನಿನಗೆ ನನ್ನ ಉಡುಗೊರೆ" ಎಂದಾಗ ಅವಳ ಮೊಗದಲ್ಲಿ ಮಂದಹಾಸ ಮೂಡಿತ್ತು.ಪ್ರಶಾಂತನಿಗೆ ತನ್ನ ಮಡದಿಯ ಪ್ರತಿಭೆಯನ್ನು ಪ್ರೋತ್ಸಾಹಿಸಿದ ಹೆಮ್ಮೆಯಿತ್ತು.


   ಅಮ್ಮನೊಂದಿಗೆ ಮಕ್ಕಳನ್ನೂ ಸಂಗೀತ ಶಾಲೆಗೆ ಸೇರಿಸಿದಾಗ ಬಲು ಸಂತಸಗೊಂಡಳು ಉಷಾ.ನಂತರ ದೇವಸ್ಥಾನ ಕ್ಕೆ ತೆರಳಿ ದೇವರಿಗೆ ಕೈಮುಗಿದು "ನನಗೆ ಹೀಗೆ ನಗುನಗುತ್ತಾ ಸದಾ ಪತಿಯೊಂದಿಗೆ ಬದುಕಲು ಆವಕಾಶ ಕೊಡು"ಎಂದು ಉಷಾ ಬೇಡಿಕೊಂಡಳು.ಅವಳ ವಿರಹದ,ಕಷ್ಟದ ದಿನಗಳು ಕಳೆದು ಬಾಳಿನಲ್ಲಿ ಸುಖದ ಬೆಳಕು ಗೋಚರಿಸಿತು...ಹತ್ತು  ವರುಷ ಕಾದ ಅವಳ ತಾಳ್ಮೆಯನ್ನು ಮೆಚ್ಚಿದ ಪ್ರಶಾಂತ "ಮುಂದೆಂದೂ ಇವಳ ತಾಳ್ಮೆಯನ್ನು ಪರೀಕ್ಷಿಸಬೇಡ ದೇವಾ "ಎಂದು ಶಿರಬಾಗಿದ..



✍️... ಅನಿತಾ ಜಿ.ಕೆ.ಭಟ್.
31-05-2020.


ತೀರದಲ್ಲಿ ತೀರಿಸಿದ ಬಯಕೆ





" ಸಂಜೆ ಕಡಲತೀರಕ್ಕೆ ಹೋಗೋಣ ಸೋನಿ. ಬರ್ತೀಯ ತಾನೆ.."

"ಖಂಡಿತ ಬರ್ತೀನಿ ರಾಮು ಅಣ್ಣಯ್ಯ.. ನೀನು ಹೇಳಿದ ಮೇಲೆ ಇಲ್ಲ ಅಂತೀನಾ.."

ಎನ್ನುತ್ತಾ ಚಿಗರೆ ಮರಿಯಂತೆ ಮನೆಗೆ ಓಡಿದಳು ಸೋನಿ.

ರಾಮು ಅಣ್ಣಯ್ಯ ವಾರದ ಹಿಂದೆ ತನ್ನ ಹುಟ್ಟುಹಬ್ಬದ ದಿನ ಕೊಟ್ಟಂತಹ ತೋಳಿಲ್ಲದ ಕೆಂಪು ಬಣ್ಣದ ಸಲ್ವಾರ್ ಧರಿಸಿ ಸಂಜೆ ಹೊರಟುನಿಂತಳು.. ಕನ್ನಡಿಯ ಮುಂದೆ ಆ ದಿರಿಸಿನಲ್ಲಿ ತಾನು ಸುಂದರಿಯಾಗಿ ಕಾಣಿಸುತ್ತೇನಾ ಎಂದು ಮತ್ತೆ ಮತ್ತೆ ದಿಟ್ಟಿಸಿಕೊಂಡಳು.ತನ್ನ ಕಣ್ಣು ದೃಷ್ಟಿ ಆದೀತು ಎಂದು ದೃಷ್ಟಿಯನ್ನು ತೆಗೆದುಕೊಂಡಳು. ಮುಖದ ಮೇಲೆ ತುಂಟತನ ಮಾಡಲೆಂದೇ ಉದಯಿಸಿದ ಒಂದೇ ಒಂದು ಮೊಡವೆ ಆತಂಕವನ್ನು ಮೂಡಿಸಿತು."ನಿನಗೆ ಏನೋ ನನ್ನ ಮೇಲೆ ದ್ವೇಷವೇ.. ನನ್ನನ್ನು ಸುಂದರಿಯಂತೆ ಕಾಣಬಾರದೆಂದು  ಮುಖದ ಮೇಲೆ ಮೂಡಿಬಂದು ಅಣಕಿಸುತ್ತಿರುವೆ" ಎಂದು ಮೊಡವೆಯನ್ನು ಪ್ರಶ್ನಿಸಿದಳು.

ಸಂಜೆ ರಾಮು ಅಣ್ಣಯ್ಯ ಬಂದೊಡನೆ "ಅಪ್ಪ ನಾನು ಕಡಲ ತೀರಕ್ಕೆ ಹೋಗಿ ಬರುವೆ .ಅಣ್ಣಯ್ಯ ನೊಂದಿಗೆ" ಎಂದಳು ಅಪ್ಪನಲ್ಲಿ. ರಾಮು ಅಂದವಾದ ಮಿರಮಿರ ಮಿನುಗುವ  ನುಣುಪಾದ ಬಾಟಲಿಯನ್ನು ಅಪ್ಪ ದಿವಾಕರನಿಗೆ ಕೊಟ್ಟಾಗ ಅವನ ಸಂತಸಕ್ಕೆ ಪಾರವೇ ಇರಲಿಲ್ಲ. "ಎಷ್ಟು ಒಳ್ಳೆಯವ ರಾಮು ನೀನು.ನಿನ್ನ ಉಪಕಾರವನ್ನು ಮರೆಯಲಾರೆ.." ಎಂದು ಹೇಳುತ್ತಿದ್ದಂತೆ ರಾಮುವಿನ ಕಣ್ಣಲ್ಲಿ ಮಿಂಚಿನ ಸಂಚಾರವಾಯಿತು. ಸೋನಿಯ ಕೈ ಹಿಡಿದು ತನ್ನ ಕಾರಿನಲ್ಲಿ ಕೂರಿಸಿಕೊಂಡ.ಹಿಂದೆ ಕುಳಿತ ಸೋನಿಯನ್ನು ಸ್ವಲ್ಪ ದೂರ ಹೋದಾಗ" ಯಾಕಮ್ಮ ಹಿಂದೆ ಕುಳಿತೆ.ಮುಂದೆ ಬಾ.. ಮಾತನಾಡುತ್ತಾ ಹೋಗೋಣ" ಎಂದ ರಾಮು.. ಮುಂದೆ ಬಂದು ರಾಮು ಡ್ರೈವಿಂಗ್ ಮಾಡುತ್ತಿದ್ದಾಗ ಅರಳು ಹುರಿದಂತೆ ಮಾತನಾಡುತ್ತಲೇ ಇದ್ದಳು ಸೋನಿ. ರಾಮುಗೆ ಅವಳ ಮಾತನ್ನು ಕೇಳುತ್ತಲೇ ಇರಬೇಕು ಎಂಬ ಬಯಕೆ .ಅವಳು ಒಂದು ಕ್ಷಣ ಮೌನವಾದರೂ ಮತ್ತೇನಾದರೂ ಪ್ರಶ್ನಿಸಿ ಮಾತಿಗೆ ಎಳೆಯುತ್ತಿದ್ದ.


ಸೋನಿ ದಿವಾಕರ ಮತ್ತು ಶಾರದಮ್ಮನ ಮಗಳು. ಏಕಮಾತ್ರ ಪುತ್ರಿ. ದಿವಾಕರ ಅಲ್ಲಿ ಇಲ್ಲಿ ಕೂಲಿನಾಲಿ ಮಾಡಿ ಸ್ವಲ್ಪ ಸಂಪಾದನೆ ಮಾಡುತ್ತಿದ್ದರೂ ಅದು ಸಂಜೆ ಮದ್ಯಪಾನಕ್ಕೆ ಸರಿಹೋಗುತ್ತಿತ್ತು. ತಾಯಿ ಶಾರದಮ್ಮ ಬಟ್ಟೆ ಅಂಗಡಿಯಲ್ಲಿ ಸೇಲ್ಸ್ ಗರ್ಲ್ ಆಗಿ ದುಡಿಯುತ್ತಿದ್ದರು. ಶಾರದಮ್ಮನ ದುಡಿಮೆಯಿಂದಲೇ ಕುಟುಂಬದ ಜೀವನ ಸಾಗುತ್ತಿತ್ತು. ಶಾರದಮ್ಮನಿಗೆ ಮಗಳನ್ನು ವಿದ್ಯಾವಂತಳನ್ನಾಗಿ ಮಾಡಿ ಉನ್ನತ ಸ್ಥಾನದಲ್ಲಿ ನೋಡಬೇಕೆಂಬ ಬಯಕೆ. ಹತ್ತಿರದಲ್ಲಿರುವ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಬಹಳ ಕಷ್ಟದಿಂದ ಶುಲ್ಕವನ್ನು ಭರಿಸಿ ಕಳುಹಿಸುತ್ತಿದ್ದಳು.ಒಂಭತ್ತನೇ ತರಗತಿಯಲ್ಲಿ ಓದುತ್ತಿದ್ದಳು ಸೋನಿ.


ಸಂಜೆ ಶಾರದಮ್ಮ ಮನೆಗೆ ಹಿಂತಿರುಗಿದಾಗ ಮಗಳನ್ನು ಕಾಣದೆ ಗಂಡನಲ್ಲಿ ಪ್ರಶ್ನಿಸಿದಾಗ" ಆಕೆ ರಾಮುವಿನೊಟ್ಟಿಗೆ ಕಡಲತೀರಕ್ಕೆ ತೆರಳಿದ್ದಾಳೆ.. ಇನ್ನೀಗ ಬರಬಹುದು..ಯಾಕೆ ಚಿಂತೆ..?" ಎನ್ನುತ್ತಾ ರಾಮು ಕೊಟ್ಟ ಬಾಟಲಿಯಿಂದ ಬಗ್ಗಿಸಿ ಮದ್ಯ ಹೀರುತ್ತಿದ್ದ .."ತಗೋ ನಿನಗೂ.." ಎಂದು ಕೊಟ್ಟಾಗ "ನನಗೆ ಬೇಡ "ಎಂದು ಬಿರುಸಿನ ಉತ್ತರವನ್ನು ನೀಡಿದರು ಶಾರದಮ್ಮ. ಆಕೆಯ ಮನಸ್ಸು ಮಗಳ ಬಗ್ಗೆ ಚಿಂತಿಸುತ್ತಿದ್ದು ಎಂದಿಗಿಂತ ಹೆಚ್ಚಾಗಿ ಹೃದಯ ಬಡಿದುಕೊಳ್ಳುತ್ತಿತ್ತು. ದೀಪ ಹಚ್ಚುವ ವೇಳೆಗೂ ಬಾಗಿಲಿನವರೆಗೆ ಹೋಗಿ ಬಂದು ಮಗಳು ಬಂದಳೇ ಎಂದು    ನೋಡಿ ವಾಪಾಸಾದರು.ದೇವರದೀಪ ಹಚ್ಚಿ ನನ್ನ ಮಗಳನ್ನ ಸುರಕ್ಷಿತವಾಗಿ ಮನೆಗೆ ಬರುವಂತೆ ಮಾಡು,ಒಳ್ಳೆಯ ವಿದ್ಯೆ ಗಳಿಸಿ ಸಮಾಜದಲ್ಲಿ ಗೌರವದಿಂದ ಬದುಕುವಂತೆ ಮಾಡು "ಎಂದು ಸೆರಗೊಡ್ಡಿ  ಬೇಡಿಕೊಂಡಳು. ಬಿಸಿಬಿಸಿ ಗಂಜಿ ಸಿದ್ಧಪಡಿಸಿ ಮಗಳಿಗಾಗಿ ಕಾಯುತ್ತಲೇ ಇದ್ದಳು.

ಅವಳ ಆತಂಕ ಮುಗಿಲುಮುಟ್ಟಿತ್ತು .. ರಾತ್ರಿ ಗಂಟೆ 9:30 ಆದರೂ ಮಗಳನ್ನು ಕಾಣಲೇ ಇಲ್ಲ. ಆಗ ಮನೆಯ ಮುಂದೆ ಕಾರೊಂದು ಬಂದು ನಿಂತಿತು. ಅದರಿಂದ ಮಗಳು ಇಳಿದು ಬಂದಳು. ಕಾರು ವಾಪಸ್ ಆಯ್ತು.ಮಗಳನ್ನು "ಎಲ್ಲಿಗೆ ಹೋದೆ? ಯಾಕೆ ಇಷ್ಟೊಂದು ತಡ ?"ಎಂದು ಶಾರದಮ್ಮ ಪ್ರಶ್ನಿಸುತ್ತಿದ್ದರೆ ಗಂಡ ದಿವಾಕರ "ಯಾಕೆ ಮಗಳ ಮೇಲೆ ಅಷ್ಟೊಂದು ಸಂಶಯ ..? ರಾಮು ಸಹೋದರನಂತೆ. ಆಕೆಯನ್ನು ಜೋಪಾನವಾಗಿ ಕರೆದೊಯ್ದು ವಾಪಸ್ ಕರೆತಂದು ಬಿಟ್ಟಿದ್ದಾನೆ". ಎಂದರೂ ತಾಯಿಯ ಹೃದಯ ಮಾತ್ರ ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲೇ ಇಲ್ಲ.


"  ಬಾ ಊಟ ಮಾಡು "ಎಂದು ಮಗಳನ್ನು ಕರೆದಾಗ "ನನಗೆ ಹಸಿವಿಲ್ಲ "ಎಂದು ಬಟ್ಟೆ ಬದಲಾಯಿಸಿ ಮಲಗಿಕೊಂಡಳು ಸೋನಿ.
ದಿವಾಕರನಿಗೆ ಗಂಜಿಯುಣ್ಣಲು ಜಾಗವಿಲ್ಲದಷ್ಟು ಮದ್ಯ ಉದರ ಸೇರಿತ್ತು.ಮನಸ್ಸಿಲ್ಲದ ಮನಸ್ಸಿನಿಂದ ಶಾರದಮ್ಮ ಗಂಜಿ ಉಂಡು ಮಲಗಿಕೊಂಡಳು.  ಬೆಳಗ್ಗೆ ಪಾಠವನ್ನು ಒಮ್ಮೆ ಓದಿ ನಂತರ ಶಾಲೆಗೆ ಹೊರಡಲು  ಮಗಳನ್ನು ಬೇಗ ಏಳು  ಎಂದು ಎಬ್ಬಿಸುತ್ತಾರೆ ಶಾರದಮ್ಮ.ಆಕೆ ಎಂದಿನಂತೆ ಏಳದೆ  ಬಹಳ ಉದಾಸೀನ ಪಟ್ಟಳು. ಮಗಳ ಬಟ್ಟೆಯನ್ನು ಒಗೆಯಲು ಹೊರಟ ಶಾರದಮ್ಮನಿಗೆ ಅದರಲ್ಲಿದ್ದ ಸೆಂಟಿನ ಪರಿಮಳ ಸ್ವಲ್ಪ ಕಸಿವಿಸಿ ಅನಿಸಿತು. ಬಟ್ಟೆಯ ಮೇಲೆ ಅಲ್ಲಲ್ಲಿ ಹರಡಿದ್ದ  ಕೂದಲುಗಳು ಅನುಮಾನ ಮೂಡಿಸಿದವು. ಆಕೆ ತೊಟ್ಟಿದ್ದ ಲೆಗ್ಗಿಂಗ್ಸ್ ಒಗೆಯಲು ತೆಗೆದುಕೊಳ್ಳುತ್ತಿದ್ದಂತೆಯೇ ಎಲ್ಲವೂ ಅರ್ಥವಾಗಿತ್ತು ..ಮಲಗಿದ್ದ ಮಗಳ ಕತ್ತು ಹಿಡಿದು ಎಬ್ಬಿಸಿ ಕೆನ್ನೆಗೆರಡು ಬಾರಿಸಿಯೇ ಬಿಟ್ಟಳು."ಎಂಥಾ.. ಕೆಲಸ ಮಾಡಿ ಬಂದಿದ್ದೀಯಾ..?"ಎಂದು ಗುಡುಗಿದರು.. "ನಾನೇನು ಮಾಡಿಲ್ಲ" ಅಂತ ಮುಗ್ಧವಾಗಿ ನಟಿಸಿದಳು ಸೋನಿ.ಶಾರದಮ್ಮ  ದುರ್ಗಿ ಅವತಾರವನ್ನು  ತಾಳಿದರು..ಇದನ್ನು ಸಹಿಸದ ಪತಿರಾಯ  " ನನ್ನ ಮಗಳನ್ನು ಏಕೆ ಹೊಡೆಯುತ್ತೀಯಾ?" ಎಂದು ಶಾರದಮ್ಮನ ಮೇಲೆ ಕೈಮಾಡಿದ.ಕುಡಿದು ಕುಡಿದು ನರಪೇತಲನಂತಾಗಿದ್ದ  ಗಂಡನನ್ನು ಪಕ್ಕಕ್ಕೆ ಸರಿಸಿ  "ಏನೇ...ಮಳ್ಳಿ..ಹೇಳ್ತೀಯಾ..ಅಲ್ಲ ಬಾಯಿ ಬಿಡಿಸಲೋ.."ಅಂತ ಇನ್ನೂ ಜೋರಾಗಿ ಅಬ್ಬರಿಸುತ್ತಾ ನಾಲ್ಕೇಟು ಹೊಡೆದರು.ಅಮ್ಮನ ಅಷ್ಟು ಸಿಟ್ಟಿನ ಮುಖ ಎಂದೂ ನೋಡದ ಸೋನಿ ತಲೆತಗ್ಗಿಸಿ ಅಮ್ಮನ ಮುಂದೆ ನಿಂತಳು.


********

ರಾಮು ಸೋನಿಯನ್ನು ಕರೆದೊಯ್ದು, ಸಂಜೆಯ ಸೂರ್ಯಾಸ್ತವನ್ನು ನೋಡುತ್ತಾ  ಕಡಲ ತೀರದಲ್ಲಿ ಆವಳೊಂದಿಗೆ ಸುತ್ತಾಡಿದ. ಸೋನಿಗೆ ಅಣ್ಣ, ತಮ್ಮ ,ತಂಗಿಯರು ಇಲ್ಲದ್ದರಿಂದ ಆಕೆಗೆ ರಾಮುವಿನಲ್ಲಿ ಅಣ್ಣನೆಂಬ ಮಮಕಾರ ಬಹಳವಿತ್ತು ..ಚಿಕ್ಕಂದಿನಿಂದಲೇ  ನೆರೆಹೊರೆಯಲ್ಲಿ ವಾಸಿಸುತ್ತಿದ್ದವರು..  ಸೋನಿಯ ಕೈಯನ್ನು ಮೆದುವಾಗಿ ಹಿಡಿದು ಮೈಗೆ ಮೈ ತಾಗಿಸಿ ಸಾಗುತ್ತಿದ್ದ. ಆಗಾಗ ಕೈ ಅದುಮುತ್ತಿದ್ದಾಗ 'ಇಂತಹ ಸಹೋದರ ನನಗೆ ಇಲ್ಲವಲ್ಲ... ಇಷ್ಟು ಪ್ರೀತಿಸುವ ಸ್ವಂತ ಸಹೋದರ ಇದ್ದಿದ್ದರೆ ಒಳ್ಳೆಯದಿತ್ತು.. 'ಎಂದು ಬೇಸರಿಸಿದಳು. ಕಲ್ಲು ಬೆಂಚಿನ ಮೇಲೆ ಕುಳಿತು ರಾಮು ತನ್ನ ಹೆಗಲ ಮೇಲೆ ಕೈಯ್ಯಿರಿಸಿ ತೋಳಿನ ಮೇಲೆ ಬೆರಳಾಡಿಸುತ್ತಿದ್ದರೆ ಅವಳಿಗೆ ಎಲ್ಲಿಲ್ಲದ ಖುಷಿಯಾಗಿತ್ತು .ಅವನಿಗೆ ಮತ್ತೂ ಅಂಟಿಕೊಳ್ಳುತ್ತ  ಕುಳಿತಳು. ಅವಳ ಪಟಪಟ ಮಾತು ಸಾಗುತ್ತಲೇ ಇತ್ತು. ಅವನ ನೋಟ ಅವಳ ದಿರಿಸಿನ ಕತ್ತಿನ ಒಳಗೆ  ಇಣುಕಿತ್ತು.ಹದಿಹರೆಯದ ಸೋನಿಗೆ ಅದೆಲ್ಲ ಗಮನಕ್ಕೆ ಬರಲಿಲ್ಲ..ಬಂದರೂ ಅಣ್ಣಯ್ಯನೆಂಬ ಮಮಕಾರ ..ಕದ್ದು ನೋಡುತ್ತಿದ್ದಾಗ ಅವಳ ಹರೆಯದ ಅಂಗಸೌಷ್ಟವ ಅವನ ಕಣ್ಣುಗಳಿಗೆ ಮೃಷ್ಟಾನ್ನ ಭೋಜನವನ್ನು ಒದಗಿಸಿತು. ಮನದಲ್ಲಿ ಬೇರೂರಿದ್ದ ಬಯಕೆ ಹೆಮ್ಮರವಾಗಿ ಕಾಡತೊಡಗಿತ್ತು. ಮುಸ್ಸಂಜೆ ಆವರಿಸುತ್ತಿದ್ದಂತೆ ಸೂರ್ಯ ಪಡುಗಡಲಲ್ಲಿ ಮರೆಯಾದ.   ಕಡಲಿನ ತೆರೆಗಳನ್ನು ಆಸ್ವಾದಿಸುತ್ತಾ ಜೊತೆಯಾಗಿ  ಸಂಚರಿಸುತ್ತಿದ್ದ ಸೋನಿ "ಅಣ್ಣಯ್ಯ ಹಸಿವಾಗುತ್ತಿದೆ. ಚರುಮುರಿ ತಿನ್ನೋಣ "ಎಂದಳು.
"ಪಕ್ಕದಲ್ಲಿ  ರೆಸ್ಟೋರೆಂಟ್ ಇದೆ .ಅಲ್ಲಿ ಹೊಟ್ಟೆತುಂಬಾ ಮಸಾಲೆ ದೋಸೆ ಕೊಡಿಸುತ್ತೇನೆ" ಎಂದ. "ಸರಿ .."ಎಂದು ಇಬ್ಬರೂ ಕಾರಿನಲ್ಲಿ ರೆಸ್ಟೋರೆಂಟಿಗೆ ತೆರಳಿದರು. ಆಕೆಗೆ ಹೊಟ್ಟೆತುಂಬಾ ಮಸಾಲೆದೋಸೆ ಐಸ್ಕ್ರೀಮ್ ತಿನ್ನಿಸಿದ ರಾಮು. ಅವಳ ಮುಖದಲ್ಲಿನ ಮಂದಹಾಸ ಕಂಡು ಅವನ ಬಯಕೆಯ ಮತ್ತು ಏರಿತ್ತು. ಅಲ್ಲಿ ಲಾಡ್ಜಿನಲ್ಲಿ ರೂಮ್ ಬುಕ್ ಮಾಡಿಕೊಂಡು. "ಸ್ವಲ್ಪ ಹೊತ್ತು ಆರಾಮವಾಗಿ ಮಾತನಾಡಿ ನಿಧಾನವಾಗಿ ಮನೆಗೆ ಹೋಗೋಣ" ಎಂಬ ಅಣ್ಣಯ್ಯನ ಮಾತಿನಲ್ಲಿ ನಂಬಿಕೆ ಇರಿಸಿದಳು ಸೋನಿ.. ತನ್ನ ಬೆರಳುಗಳಲ್ಲಿ ರಾಮುವ ಬೆರಳುಗಳನ್ನು ಬಂಧಿಸಿ ಮಾಳಿಗೆಯಲ್ಲಿದ್ದ ರೂಮಿನತ್ತ ತೆರಳಿದಳು.


ರೂಮಿನಲ್ಲಿ ಕುಳಿತರೆ ಸಾಗರದ ಅಲೆಗಳು ಚಂದಿರನ ಬೆಳದಿಂಗಳಿನಲ್ಲಿ ಸುಂದರವಾಗಿ ಕಾಣಿಸುತ್ತಿದ್ದವು ..ಜೋರಾಗಿ ಗಾಳಿ ಬೀಸುತ್ತಿತ್ತು. ರಾಮು ಅವಳ ಹೆಗಲ ಮೇಲೆ ತಲೆಯಿಟ್ಟು ಸಮುದ್ರವನ್ನು ದಿಟ್ಟಿಸುತ್ತಿದ್ದ. ನಿಧಾನವಾಗಿ ಅವನ ಕೈಗಳು ಅವಳನ್ನು ಸುತ್ತುವರಿಯತೊಡಗಿದವು. ಅವಳಿಗೂ ಬೇಡವೆನುವ ಮನಸ್ಸಾಗಲಿಲ್ಲ. ಮೆಲ್ಲನೆ ಅವನ ತುಟಿಗಳು ಅವಳತ್ತ ಸರಿದು ಮೆದುವಾದ ಕೈಗಳಿಗೆ ಸಿಹಿಮುತ್ತು ಇತ್ತಾಗ ಮೊದಲ ಸಿಹಿ ಮುತ್ತಿಗೆ  ಪುಳಕಿತಳಾದಳು. ಆತ ಮುಂದುವರಿದ.  ಅವಳ ಬೆಂಬಲ ಅವನಿಗೆ ಧೈರ್ಯ ತುಂಬಿತು. ಅದುವರೆಗೆ ಅಣ್ಣಯ್ಯ ಎನಿಸಿಕೊಂಡಿದ್ದ ರಾಮು ಕೆಲವೇ ನಿಮಿಷಗಳಲ್ಲಿ ಪ್ರಿಯಕರನಾಗಿ ಬಿಟ್ಟಿದ್ದ. ತಾನು ನೋಡಿದ ಸಿನಿಮಾ ಡೈಲಾಗ್ ಗಳಂತೆ "ಐ ಲವ್ ಯು ರಾಮು "ಎಂದು ಬಿಗಿಯಾಗಿ ತಬ್ಬಿಕೊಂಡಳು.ಮುಂದೇನಾಗಬಹುದೆಂಬ ಯಾವ ಅರಿವೂ ಇಲ್ಲದ ಅವಳಿಗೆ ಆ ಕ್ಷಣ ಸುಖಮಯವಾಗಿತ್ತು ಅಷ್ಟೇ. ರಾಮು ಕಡಲತೀರದಲ್ಲಿ ತನ್ನ ಬಯಕೆಯನ್ನು ತೀರಿಸಿಕೊಂಡ."ಈ ತರಹ ನಡೆದುಕೊಂಡಿದ್ದನ್ನು ಯಾರಲ್ಲೂ ಹೇಳಬೇಡ ..ನಿನಗೆ ಬೇಕಾದ್ದನ್ನೆಲ್ಲ ಕೊಡಿಸುವೆ.."ಎಂದು ಆಕೆಯಿಂದ ಮಾತು ತೆಗೆದುಕೊಂಡು ಆಕೆಯನ್ನು ಮನೆಗೆ ಕರೆದೊಯ್ದು ಬಿಟ್ಟ.


ಮರುದಿನ ಶಾಲೆಗೆ ಹೊರಟಿದ್ದ ಸೋನಿಗೆ ಮೈ ಭಾರವೆನಿಸಿತು.  ಮನಸ್ಸು ರಾಮುವಿನಲ್ಲಿ ನೆಟ್ಟಿತ್ತು. ಶಾಲೆಗೆ ತೆರಳದೆ ದಾರಿಯಲ್ಲಿ ಸಿಕ್ಕ ರಾಮುವಿನ ಜೊತೆಗೆ ತೆರಳಿದಳು.ಶಾರದಮ್ಮ ಮನೆಗೆ ಹಿಂದಿರುಗುತ್ತಿರುವಾಗ ಮಗಳು ಎಂದಿನಂತೆ ಪುಸ್ತಕವನ್ನು ಅಲ್ಲಲ್ಲಿ ಎಸೆಯದಿರುವುದು ,ತನ್ನ ಮಗಳಿಗೆ ಬೈದು ಬುದ್ಧಿ ಹೇಳಿದ್ದರ ಪರಿಣಾಮ ಎಂದುಕೊಂಡಳು. ಬಟ್ಟೆಯನ್ನು ಅವಳೇ ಒಗೆಯಲು ಆರಂಭಿಸಿದ್ದು ಒಳ್ಳೆಯ ಬೆಳವಣಿಗೆ ಎಂದುಕೊಂಡಳು..ಮಗಳು ತಿದ್ದಿಕೊಂಡು ಒಳ್ಳೆಯ ದಾರಿಯಲ್ಲಿ ನಡೆಯುತ್ತಿದ್ದಾಳೆ ಎಂದುಕೊಂಡಳು.


ಒಂದು ದಿನ ಶಾಲೆಯಿಂದ ಆಕೆಗೆ ಕರೆ ಬಂತು. ನಿಮ್ಮ ಮಗಳು ಒಂದು ತಿಂಗಳಿನಿಂದ ಶಾಲೆಗೆ ಹಾಜರಾಗುತ್ತಿಲ್ಲ ಎಂದು.ಆಶ್ಚರ್ಯದಿಂದ ಶಾಲೆಗೆ ಹೋಗಿ ವಿಚಾರಿಸಿದಾಗ ಅವಳಿಗೆ ಆಘಾತ ಕಾದಿತ್ತು . ತಾನು ಮೊದಲು ಅಂದುಕೊಂಡಿದ್ದೇ ನಿಜವಾಗಿತ್ತು. ಗಂಡನಲ್ಲಿ ಹೇಳಿದರೆ ಅವನು ರಾಮುವಿನ ಕಡೆಗೆ. ಮನೆಗೆ ಬರುತ್ತಿದ್ದ ಬೆಲೆಬಾಳುವ ಮದ್ಯದ ಹಿಂದಿನಗುಟ್ಟು ಅವಳಿಗೀಗ ತಿಳಿಯಿತು. ಇಂತಹ ಅಪ್ಪ ಇದ್ದರೆ ಮಕ್ಕಳ ಬಾಳು ಮೂರಾಬಟ್ಟೆ ಆಗುವುದರಲ್ಲಿ ಸಂಶಯವಿಲ್ಲ ಎಂದು ನೊಂದುಕೊಂಡಳು.

ಶಾರದಮ್ಮನಿಗೆ ಮಗಳ ಮೇಲೆ ಇರಿಸಿದ ಕನಸುಗಳೆಲ್ಲ ಒಮ್ಮೆಲೆ ಬುಡಮೇಲಾದ ಅನುಭವ. ಮಗಳನ್ನು ಮುದ್ದಿನಿಂದ ಬೆಳೆಸಿದ ಕೈಯ ನೋಡಿ ತಾನೇ ಜರೆದುಕೊಂಡಳು. ಅರಳುತ್ತಿರುವ ಹೂವನ್ನು ಯಾರು ಕೀಳದಂತೆ ಬೇಲಿ ಹಾಕಿ ಕಾಪಾಡಲು ನಮ್ಮಿಂದ ಸಾಧ್ಯವೇ..? ತಾನು ಹೊರಗೆ ದುಡಿದರೆ ಅಷ್ಟೇ ಕುಟುಂಬ ಗಂಜಿ ಉಣ್ಣುವುದು. ಮನೆಯಲ್ಲಿ ಕುಳಿತರೆ ಹೊಟ್ಟೆತುಂಬಲು ಸಾಧ್ಯವಿಲ್ಲ. ಗಂಡನೆನಿಸಿಕೊಂಡವನಿಗೆ ಜವಾಬ್ದಾರಿಯ ಅರಿವೇ ಇಲ್ಲ.ಎಂದು ರೋದಿಸುತ್ತಿದ್ದ ಹೆತ್ತೊಡಲ ಸಂಕಟ ಅವಳಿಗೇ ಗೊತ್ತು. ಮಗಳಿಗೆ ಬುದ್ಧಿ ಹೇಳಿ ಶಾಲೆಗೆ ಕರೆದೊಯ್ದು ಬಿಡಲಾರಂಭಿಸಿದಳು..ಸೋನಿಯನ್ನು ಶಾಲೆಯ ಮುಂದಿನ ಗೇಟಿನವರೆಗೆ ಬಿಟ್ಟು ಮಗಳು ಮಹಡಿ ಏರಿ ತನ್ನ ತರಗತಿ ಕೊಠಡಿಗೆ ತೆರಳುವುದನ್ನು ನೋಡಿದ ಮೇಲೆಯೇ ಅಮ್ಮ ಉದ್ಯೋಗಕ್ಕೆ ತೆರಳುವುದು .ಅಮ್ಮ ಹೋಗುವುದು ಕಾಣುತ್ತಲೇ ಕೆಳಗಿಳಿದು ಶಾಲೆಯ ಹಿಂದಿನ ಗೇಟಿನಿಂದ ಹೊರಗೆ ಹೋಗುತ್ತಿದ್ದಳು ಸೋನಿ. ಅಲ್ಲಿ ರಾಮು ಅವಳಿಗಾಗಿ ಕಾಯುತಿದ್ದ. ನಂತರದ ದಿನಗಳಲ್ಲಿ ಅವನ ಸ್ನೇಹಿತರೂ ಸೇರಿಕೊಂಡರು. ಅವಳಿಗೆ ಬೇಕು ಬೇಕಾದ್ದನ್ನೆಲ್ಲ ಕೊಡಿಸುತ್ತಿದ್ದರು.ಎಲ್ಲರ ಹಸಿವೆ ನೀಗಿಸುವ ಆಹಾರವಾದಳು ಎಳೆಯ ಕೋಮಲೆ ಸೋನಿ..ದಿವಾಕರ ತನಗೆ ದಿನವೂ ಉಚಿತವಾಗಿ ಸಿಗುತ್ತಿದ್ದ ಮದ್ಯಪಾನದ ಭಾಗ್ಯವನ್ನು ಕಂಡು ಹಿರಿಹಿರಿ ಹಿಗ್ಗಿದ.ಮಗಳ ಬದುಕಿನ ಚಿಂತೆ ಅವನಿಗಿರಲಿಲ್ಲ.


ಪುನಃ ಶಾಲೆಯಿಂದ ಶಾರದಮ್ಮನಿಗೆ ಕರೆಬಂದಾಗ ಆತಂಕದಿಂದಲೇ ಶಾಲೆಯೆಡೆಗೆ ಓಡಿಬಂದಳು. ಆಕೆ ಮಗಳು ಈಗಲೂ ಶಾಲೆಗೆ ಬರುತ್ತಿಲ್ಲ ಎಂದು  ಕೇಳಿದ ಮೇಲೆ ಆಕೆಯ ಕಣ್ತುಂಬಿ ಬಂದಿತ್ತು. ಶಾಲೆಯ ಗೇಟಿನವರೆಗೆ ಕರೆದುಕೊಂಡು ಬಂದು ಬಿಟ್ಟರೂ ಹೀಗೆ ಮಾಡುತ್ತಿದ್ದಾಳಲ್ಲ ಎಂದು ಕರುಳು ಚುರುಕ್ ಅಂದಿತು.. ಮನೆಯ ಪರಿಸ್ಥಿತಿಯನ್ನು  ಮುಖ್ಯಶಿಕ್ಷಕಿಯ ಮುಂದೆ ಹೇಳಿಕೊಂಡು ಕಣ್ಣೀರುಗರೆದಳು.  ದುಡಿದು ಉಳಿತಾಯ ಮಾಡಿ ಮಗಳನ್ನು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದಿಸುತ್ತಿದ್ದೇನೆ ..ಚೆನ್ನಾಗಿ ಓದಿ ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿ ನೋಡಬೇಕೆಂಬ ನನ್ನ ಬಯಕೆಗೆ ಕೊಳ್ಳಿ ಇಟ್ಟಳು. ಅವಳ ಬದುಕನ್ನು ನುಚ್ಚುನೂರು ಮಾಡಿಕೊಂಡಳು. ಬುದ್ಧಿ ಹೇಳಲು ಹೊರಟರೆ ನೀನು ಯಾಕೆ ಬಡತನದಲ್ಲೂ ನನ್ನನ್ನು ಹೆತ್ತೆ ..ಎಂದು ಎದುರುತ್ತರ ನೀಡುತ್ತಾಳೆ..ಇಂತಹ ಮಕ್ಕಳು   ಯಾರ ಹೊಟ್ಟೆಯಲ್ಲೂ ಹುಟ್ಟುವುದೇ ಬೇಡ ಎಂದು ಅತ್ತು ಕರೆಯುತ್ತಿದ್ದರೆ...
ಶಿಕ್ಷಕಿಯರೆಲ್ಲರೂ ಕಣ್ಣೀರು ಸುರಿಸುತ್ತಿದ್ದರು. ಆಫೀಸಿನ ಗೋಡೆಗಳು ಕೂಡಾ ಆಕೆಯ ನೋವಿಗೆ ಸ್ಪಂದಿಸುತ್ತಿದ್ದವೋ ಎನ್ನುವಂತೆ ಭಾಸವಾಗಿತ್ತು.


ದಿನ ಕಳೆಯುತ್ತಿದ್ದಂತೆ ಮೈಕೈ ತುಂಬಿಕೊಂಡ ಮಗಳನ್ನು ಕಂಡು ಆಕೆಗೆ ಅನುಮಾನ ಮೂಡಿತು. ಬುದ್ಧಿ ಹೇಳಿ ವೈದ್ಯರಲ್ಲಿ ಕರೆದೊಯ್ಯಬೇಕು ಎನ್ನುತ್ತಿದ್ದವಳ ಮೇಲೆ ದಿವಾಕರ " ನಿನಗೇಕೆ ಮಗಳ ಮೇಲೆ ಸದಾ ಸಂಶಯ...?" ಎಂದು ಗದರುತ್ತಿದ್ದ. ಮನೆಯಿಂದ ಹೊರಗಡಿಯಿಟ್ಟರೆ 'ಇವರ ಮಗಳು ಹಾಗಂತೆ ಹೀಗಂತೆ 'ಎಂಬ ಚುಚ್ಚುಮಾತು ಅವಳ ಕಿವಿಗೆ ಪಾಶದಂತೆ ಭಾಸವಾಗುತ್ತಿತ್ತು. ಮಗಳ ಬಗ್ಗೆ ಎಷ್ಟೊಂದು ಕಾಳಜಿ ವಹಿಸಿದರೂ ಮಗಳು ತಪ್ಪಿನಡೆದರೆ ,ಎಳೆಯ ಬಾಲೆಯ ದೇಹವನ್ನು ಹರಿದು ಮುಕ್ಕುವ  ಯುವಕರ ಕಾಮಾಂಧತೆಯನ್ನು ಆಡುವ ಬದಲು, ಸಂಕಟಪಡುತ್ತಿರುವ ಹೆತ್ತೊಡಲನ್ನು ಜನ ಮತ್ತೆ ಮತ್ತೆ ತಮ್ಮ ಮಾತಿನಿಂದ ಚುಚ್ಚುತ್ತಿದ್ದಾಗ "ಬೇಡ... ಇಂತಹ ತಾಯ್ತನ ಯಾರಿಗೂ ಬೇಡ" ಎಂದು ಮಾತೃ ಹೃದಯ ಗೋಳಿಡುತ್ತಿತ್ತು....


✍️... ಅನಿತಾ ಜಿ.ಕೆ.ಭಟ್.
29-05-2020.

ಪ್ರತಿಲಿಪಿ ಕನ್ನಡ ದೈನಿಕ ವಿಷಯ:-ಕಡಲ ತೀರದಲ್ಲಿ ವಿಹರಿಸೋಣ ಬಾ...



ಸಾಂದರ್ಭಿಕ ಚಿತ್ರ ಅಂತರ್ಜಾಲ ಕೃಪೆ.

ಇಂದಿರೇಶನ ಪ್ರಿಯವಧು




ಚಂದದ ಮೊಗದ ಕನ್ಯೆಯವಳು
ಅಂದದಿಂದಲಿ ಝರಿ ಸೀರೆಯುಟ್ಟು
ಇಂದಿರೇಶನ ಪ್ರಿಯವಧುವಾಗಲು
ಬಂದು ಮಂಟಪದಿ ನಿಂದಿಹಳು||೧||


ಮುಡಿಯ ತುಂಬಾ ಮಲ್ಲೆಹೂವು
ಕಾಡಿಗೆಯು ತೀಡಿದ ಕುಡಿಹುಬ್ಬು
ಜಡೆಯು ನೀಳ ಬಂಗಾರ ಧರಿಸಿ
ಹಿಡಿದು ಕರದಲಿ ಪುಷ್ಪಮಾಲೆ||೨||


ಮಂಗಳವಾದ್ಯ ಮೊಳಗುತಿರಲು
ಕಂಗಳಲ್ಲಿ ತುಂಬಿ ನೂರು ಕನಸು
ಅಂಗೀರಸ ಗೋತ್ರದ ಅಂದಗಾತಿ
ಅಂಗನೆಯಾದಳು ಇಂದಿರೇಶನಿಗೆ||೩||


ಮುದ್ದು ಕೂಸವಳು ತವರುಮನೆಗೆ
ಒದ್ದುಸೇರ ಗೃಹಲಕ್ಷ್ಮಿಯಾದಳು ಈಶಗೆ
ಇದ್ದು ಚೆಂದದಿ ಬಾಳಿ ನೂರು ವರುಷ
ಬಂಧುಮಿತ್ರರು ಬಂದು ಹರಸಿದರು||೪||

ಮನದ ಮರೆಯಲಿ ದುಗುಡ ತುಂಬಿ
ಕನಸ ತೇರಲಿ ವಯಸು ಸಂಭ್ರಮಿಸಿ
ಅನವರತ ಪತಿಯ ನೆರಳಾಗಿ ನಡೆವಳು
ತನುಮನದಿ ಕುಲದ ಏಳ್ಗೆ ಬಯಸುವಳು||೫||


✍️... ಅನಿತಾ ಜಿ.ಕೆ.ಭಟ್.
30-05-2020.

ಸಾಂದರ್ಭಿಕ ಚಿತ್ರ :- ಅಂತರ್ಜಾಲ ಕೃಪೆ

Pratilipi Kannada ದೈನಿಕ ವಿಷಯ:- ಮಂಗಳ ವಾದ್ಯ ಮೊಳಗುತಿರಲು...

Friday, 29 May 2020

ಜೀವನ ಮೈತ್ರಿ ಭಾಗ ೮೩(83)



ಜೀವನ ಮೈತ್ರಿ ಭಾಗ ೮೩



         ಕಿಶನ್ ಮೈತ್ರಿ ಜೊತೆಜೊತೆಗೆ ದಿನವಿಡೀ ಕಳೆದರು.ಮನೆಯ ತುಂಬಾ ಮುದ್ದಾದ ಜೋಡಿಯ ಕಿಲಕಿಲ ನಗು ತುಂಬಿತ್ತು.ತುಂಟಾಟ ಹಿರಿಯ ಜೀವಗಳಿಗೂ ಹಿತವಾಗುವಂತಿತ್ತು . ಅತ್ತೆ ಮೈತ್ರಿಯ ಮೇಲೆ ಯಾವುದೇ ಕೆಲಸದ ಹೊರೆಯನ್ನು ಹೊರಿಸಲಿಲ್ಲ.ಮದುವೆಯಾಗಿ ಕೆಲವು ದಿನವಾದರೂ ಹಾಯಾಗಿರಲಿ.ಆಮೇಲೆ ಕೆಲಸ ಕಾರ್ಯಗಳು ಮಾಡುವುದು ಹೇಗೂ ಹೆಣ್ಣುಮಕ್ಕಳ ಪಾಲಿಗೆ ತಪ್ಪುವುದಿಲ್ಲ..ಎಂಬ ಭಾವನೆ ಅವರದಾಗಿತ್ತು.


    ಸೂರ್ಯನ ಬಿಸಿಲು ತಗ್ಗುತ್ತಲೇ ಅಂಗಳದಲ್ಲಿ ಒಣಹಾಕಿದ್ದ ಬಟ್ಟೆಗಳನ್ನು ತಂದಳು ಮೈತ್ರಿ.ಕಿಶನ್ ಮಡಚಿಡಲು ತಾನೂ ಸಹಕರಿಸಿದ.ನಂತರ ಇಬ್ಬರೂ ತೋಟ ಗುಡ್ಡ ಸುತ್ತಲು ತೆರಳಿದರು.ಸ್ವಲ್ಪ ಹೊತ್ತಿನಲ್ಲಿ ನೆರೆಮನೆಗಳಿಗೆ ಕೆಲಸಕ್ಕೆ ಹೋಗುತ್ತಿದ್ದ ಲಚ್ಚಿಮಿ "ಅಕ್ಕಾ... " ಎಂದು ಕರೆಯುತ್ತಾ ಅಂಗಳದ ತುದಿಯಲ್ಲಿ ನಿಂತಳು.ಮಮತಾ ಹೊರಬಂದದ್ದು ಕಂಡು ಹಿಂದಿನ ಬಾಗಿಲ ಬಳಿ ಬಂದಳು.

"ಅಕ್ಕಾ..ಆರಾಮವಾ..?"

"ಹೂಂ.."

"ನಿಮಗೇನು ಆರಾಮವಿಲ್ಲದೇ ಅಲ್ವಾ.. ಒಳ್ಳೆ ಶ್ರೀಮಂತರ ಮನೆ ಸೊಸೆ ಬಂದಿದ್ದಾಳೆ.."

ಮಮತಾ ಮಾತನಾಡಲಿಲ್ಲ.

"ಇವತ್ತು ಅಡಿಕೆ ಹೆಕ್ಕುವ ಕೆಲಸ ಇತ್ತು.ಹೆಕ್ಕಿ ಹೆಕ್ಕಿ ಸೊಂಟ ನೋವಾಯಿತು.. ಅಬ್ಬಾ.." ಎಂದು ಜಗಲಿಯಲ್ಲಿ ಕೂಳಿತುಕೊಂಡು "ಅಕ್ಕಾ.. ಚಹಾ ಇದ್ದರೆ ಸ್ವಲ್ಪ ಕೊಡಿ.. " ಎಂದು ಕೇಳಿದಳು.

ಮಾಡಿದ ಚಹಾವಿತ್ತು.ಮಮತಮ್ಮ ನೀಡಿದರು.
ಚಹಾ ಕುಡಿಯುತ್ತಾ
"ಆಚೆ ಮನೆ ರತ್ನಕ್ಕಾ ನಾಳೆ ನಿಮ್ಮಲ್ಲಿಂದ ಮದುವೆಗೆ ಹೋಗುವುದಿದ್ದರೆ ತಾನೂ ಬರುತ್ತೇನೆಂದು ಹೇಳಲು ನನ್ನಲ್ಲಿ ಹೇಳಿದ್ದರು."

ಮಮತಾಗೆ ಸ್ವಲ್ಪ ಸಂಶಯ ಬಂತು.ಇದುವರೆಗೆ ಹೀಗೇನಾದರೂ ಹೇಳುವುದಿದ್ದರೆ ರತ್ನಕ್ಕಾ ಫೋನ್ ಮಾಡುತ್ತಿದ್ದರು.ಇವತ್ತೇನು ಹೀಗೆ..?

ಮಮತಕ್ಕ ಏನೂ ಹೇಳದೆ ಇದ್ದಾಗ
"ನಿಮ್ಮ ಸೊಸೆ ಇವತ್ತೇನು ಕೆಲಸ ಮಾಡಿದಳು..ಕೆಲಸ ಬರುತ್ತದಾ.. ಬೆಳಿಗ್ಗೆಯೇ ಬಟ್ಟೆ ಬಡಿಯುವುದು ಕೇಳುತ್ತಿತ್ತು.."

ಎಂದು ರಾಗ ಎಳೆದಾಗ ಮಮತಾಗೆ ಇವಳ ಚಾಡಿಬುದ್ಧಿಯ ಅರಿವಾಯಿತು.ಇಲ್ಲಿಂದ ನವವಧುವಿನ ಸುದ್ದಿ ಸಂಗ್ರಹಿಸಿ ತಾನು ಹೋಗುವ ಮನೆಗಳಿಗೆಲ್ಲಾ ಬಿತ್ತುವ ಲಚ್ಚಿಮಿಯ ಬುದ್ಧಿ,ಅತಿ ಕುತೂಹಲಿ ರತ್ನಕ್ಕನ ಬುದ್ಧಿ ಎರಡೂ ಅರ್ಥವಾಗಿ ಸೀದಾ ಒಳಗೆ ಹೋಗಿ ಮದುವೆಯ ಹಣಕಾಸಿನ ಲೆಕ್ಕಾಚಾರವನ್ನು ನೋಡುತ್ತಿದ್ದ ಪತಿಯಲ್ಲಿ ಸಣ್ಣದನಿಯಲ್ಲಿ ಹೇಳಿದರು.ಮಾಡುತ್ತಿದ್ದ ಕೆಲಸವನ್ನು ಅರ್ಧದಲ್ಲಿಯೇ ಬಿಟ್ಟು ಹೊರಬಂದ ಗಣೇಶ ಶರ್ಮ

"ನೋಡು ಲಚ್ಚಿಮಿ... ಮದುವೆಗೆ ಹೋಗಲು ಇದೆಯೇ ಇಲ್ಲವೇ ಎಂದು ತಿಳಿಯಲು ಫೋನ್ ಮಾಡಿ ವಿಚಾರಿಸಬಹುದು.ನೀನು ಬಂದು ಕೇಳಿ ಅವರಿಗೆ ಸುದ್ದಿ ತಿಳಿಸಬೇಕಾದ್ದಿಲ್ಲ.ಈ ನೆಪದಲ್ಲಿ ಮನೆಬಾಗಿಲಿಗೆ ಬಂದು ಮನೆ ಸೊಸೆಯ ವಿಚಾರಗಳನ್ನು ಕೆದಕುವುದು ,ಆ ವಿಚಾರಗಳಿಗೆ ರಂಗು ತುಂಬಿ ಊರಿಡೀ ಹಬ್ಬಿಸುವುದು ಬೇಡ.ಇದೇ ಮೊದಲು ಇದೇ ಕೊನೆ.. ಇನ್ನು ಇಂತಹಾ ಕೆಲಸಕ್ಕೆ ಕೈ ಹಾಕಬೇಡ.."ಎಂದು ನೇರವಾಗಿ ಎಚ್ಚರಿಸಿದರು.

       ಲಚ್ಚಿಮಿಯ ಮುಖ ಚಿಕ್ಕದಾಯಿತು."ಇಲ್ಲಪ್ಪಾ ನಾನು ಅಂತಹ ಕೆಲಸ ಯಾಕೆ ಮಾಡುತ್ತೇನೆ.. ಅವರು ಕೇಳಲು ಹೇಳಿದ್ದಕ್ಕೆ ಬಂದದ್ದಷ್ಟೇ.." ಎಂದು ಹೇಳಿ ಚಹಾ ಕುಡಿದ ಲೋಟ ತೊಳೆದಿಟ್ಟು ಹೊರಟಳು.ದಾರಿಯಲ್ಲಿ 'ಛೇ..ನನ್ನ ಕೆಲಸ ಕೈಗೂಡಲೇ ಇಲ್ಲ.ಹೊಸ ಮದುಮಗಳ ಬಗ್ಗೆ ಎಲ್ಲಾ ತಿಳಿದುಕೊಂಡು ನಾನು ಕೆಲಸಕ್ಕೆ ಹೋಗುವ ಮನೆಗಳಿಗೆಲ್ಲ ಮೊದಲು ನಾನೇ ಸುದ್ದಿ ವರದಿ ಮಾಡಬೇಕೆಂದಿದ್ದೆ.. ಎಲ್ಲಾ ಹಾಳಾಯಿತು..ಛೇ... ' ಎಂದು ಕೈ ಕೈ ಹಿಸುಕಿಕೊಂಡಳು ದಾರಿ ನಡೆಯುತ್ತಿದ್ದಾಗ ಎದುರಿನಿಂದ ಬರುತ್ತಿದ್ದವರನ್ನು ಕಂಡು ಸರಿದು ನಿಂತಳು.ಕಣ್ಣು ಅವಳ ಮೇಲೆಯೇ ನೆಟ್ಟು ಅಳೆಯುತ್ತಿತ್ತು.

   ಹತ್ತಿರ ಬಂದಾಗ ಕಿಲಕಿಲ ನಕ್ಕು"  ಕಿಶನಣ್ಣಾ ಆರಾಮವಾ.. ಎಷ್ಟು ಸಮಯವಾಯಿತು ಕಂಡು" ಎಂದು ನಯವಾಗಿ ರಾಗ ಎಳೆದಳು.

"ಹೋ..ಲಚ್ಚಿಮಿ "

"ಹೌದು.. ಅಣ್ಣಾ.. ಮತ್ತೆ ಹೇಗಿದ್ದೀರಿ..ನಿಮ್ಮ ಮದುಮಗಳನ್ನು ನನಗೆ ಪರಿಚಯ ಮಾಡಲೇಯಿಲ್ಲ.."

ಮೈತ್ರಿಯ ಬಳಿ ಈಕೆ ನೆರೆಮನೆಯ ಕೆಲಸದಾಕೆ ಎಂದು ಪರಿಚಯಿಸಿದ ಕಿಶನ್.ಮೈತ್ರಿ ನಕ್ಕಳು.

"ಎಲ್ಲಿ ಅಮ್ಮ ನಿಮ್ಮ ತವರು ಮನೆ ..?"ಎಂದು ಮೈತ್ರಿಯನ್ನು ಮಾತಿಗೆಳೆದಳು.ಮೈತ್ರಿ ಉತ್ತರ ಹೇಳಿದಂತೆ ಹತ್ತಾರು ಪ್ರಶ್ನೆಗಳನ್ನು ಎಸೆದು ಉತ್ತರ ಪಡೆದುಕೊಂಡಳು.ಹಿರಿಹಿರಿ ಹಿಗ್ಗಿ ಇಂದಿಗೆ ಇಷ್ಟು ನ್ಯೂಸ್ ಸಾಕು ಎಂದುಕೊಂಡು "ನಾನಿನ್ನು ಬರುತ್ತೇನೆ" ಎಂದು ಹೊರಟಳು.ಕಿಶನ್ ಮೈತ್ರಿ ಮನೆಯತ್ತ ಸಾಗಿದರು.

        ಲಚ್ಚಿಮಿ ತಾನು ಸಂಗ್ರಹಿಸಿದ ಸುದ್ದಿಗಳಿಗೆ ಹೇಗೆ ಮಸಾಲೆ ಬೆರೆಸುವುದು ಎಂದು ಯೋಚಿಸುತ್ತಾ ದಾರಿ ನಡೆದು ಮನೆ ಸೇರಿದಳು.ಲಚ್ಚಿಮಿ ಎಂದರೆ ಊರಿಗೇ ಒಂಥರಾ ಬಿಬಿಸಿ ನ್ಯೂಸ್ ಇದ್ದಂತೆ.ಆಚೆಮನೆ ಹೊಸ ಸೊಸೆಯ ವಿಷಯ ಈಚೆ ಮನೆಗೆ..ಈಚೆ ಮನೆಯ ಸೊಸೆಯ ಸುದ್ದಿ ಆಚೆಮನೆಗೆ ... ನಡುನಡುವೆ ಹೊಸ ಸೀರೆ ತಂದದ್ದು ,ಆಚೆ ಮನೆ ಮಾಣಿಗೆ ಯಾರದೋ ದೂರದೂರಿನ ಕೂಸಿನ ಜಾತಕ ಬಂದದ್ದು..ಇನ್ಯಾರೋ ಓಡಿ ಹೋದದ್ದು...ಇಂತಹ ಸುದ್ದಿಗಳನ್ನೆಲ್ಲ ರವಾನಿಸುವುದು ಕೆಲಸದೊಂದಿಗೆ ಅವಳಿಗೆ ಉಮೇದಿನ ಸಹಕೆಲಸ.ಶಾಲೆಗಳಲ್ಲಿ ಪಠ್ಯದೊಂದಿಗೆ ಸಹಪಠ್ಯ ಚಟುವಟಿಕೆ ಇದ್ದಹಾಗೇ.. ಮೈತ್ರಿ ತನಗರಿವಿಲ್ಲದೇ ಇವಳ ನಾಲಿಗೆಯ ಸುಳಿಗೆ ಸಿಲುಕಿದಳು.


ಮನೆಗೆ ಬಂದಾಗ ಮಮತಮ್ಮ ಬಿಸಿ ಬಿಸಿ ಕಾಫಿ ಮಾಡಿ ಕೊಟ್ಟರು."ನಾನೇ ಮಾಡ್ತಿದ್ದೆ ಅತ್ತೆ" ಎಂದಳು ಮೈತ್ರಿ..
"ಸ್ವಲ್ಪ ದಿನ ನನ್ನ ಕೈರುಚಿ ನೋಡಮ್ಮ.. ಆಮೇಲೆ ಅಡಿಗೆ ಮಾಡುವದು ಹೇಗೂ ಇದ್ದೇ ಇದೆ..ಕಲಿತುಕೊಂಡರಾಯಿತು."ಎಂದರು ಅತ್ತೆ.

         ಕಿಶನ್ ಮೈತ್ರಿ ಇಬ್ಬರೂ ಕಾಫಿ ಕುಡಿದು ಚಾವಡಿಗೆ ತೆರಳಿ ಹರಟುತ್ತಿದ್ದರು.ಅಪ್ಪ ಒಳಗೆ ಬಂದು "ಮಗ ಸ್ನಾನಕ್ಕೆ ನೀರು ಬಿಸಿಯಾಗಿದೆ" ಎಂದಾಗ ಮಡದಿಯತ್ತ ತಿರುಗಿದ ಕಿಶನ್ "ನೀನು ಹೋಗು" ಎಂದ.ಮೈತ್ರಿ ಸ್ನಾನಕ್ಕೆ ತೆರಳಿದಳು.ಕಿಶನ್ ಅಡುಗೆ ಮನೆಗೆ ತೆರಳಿ ಅಮ್ಮನಲ್ಲಿ ಲಚ್ಚಿಮಿ ಸಿಕ್ಕಿದ್ದು, ಮಾತಾಡಿದ್ದು ಎಲ್ಲ ಹೇಳಿದ.ಮಮತಮ್ಮ ಕೇಳಿ ನಿಟ್ಟುಸಿರು ಬಿಟ್ಟು ಮನೆಗೆ ಅವಳು ಬಂದದ್ದು ಅಪ್ಪ ಎಚ್ಚರಿಸಿದ್ದು ಎಲ್ಲವನ್ನೂ ಅರುಹಿ ಇಂತಹಾ ಮನೆಹಾಳಿಗಳ ಬಗ್ಗೆ ಆರಂಭದಲ್ಲೇ ಎಚ್ಚೆತ್ತುಕೊಳ್ಳಬೇಕು.ಮೈತ್ರಿಗೂ ಹೇಳು ಎಂದರು ಮಮತಮ್ಮ.


    ಕಿಶನ್ ರೂಮಿನತ್ತ ಸಾಗಿದ.. ಯೋಚನೆಗಳು ಅವನನ್ನು ಕಾಡತೊಡಗಿದವು.ಮದುವೆಯಾಗಿದ್ದು ಆಯಿತು ಇನ್ನು ಅವಳನ್ನು ಜೋಪಾನವಾಗಿ ಇಂತಹ ಎಲುಬಿಲ್ಲದ ನಾಲಿಗೆಯವರಿಗೆ ಆಡಲು ಸಿಗದಂತೆ ಕಾಪಾಡಿಕೊಂಡು ಬರುವುದೇ ಸವಾಲು ಎಂದು ಯೋಚಿಸುತ್ತಿದ್ದವ ಹಿಂದಿನಿಂದ ಮೈತ್ರಿ ಬಂದು ಬಳಸಿದಾಗ ವಾಸ್ತವಕ್ಕೆ ಬಂದ.

"ಏನು..ರಾಯರು ಯೋಚನೆಯಲ್ಲಿ ಸಿಲುಕಿರುವಂತಿದೆ.."

"ಏನಿಲ್ಲ.."

"ನನ್ನಿಂದ ಮುಚ್ಚಿಡಲು ಸಾಧ್ಯವಿಲ್ಲ.. "ಎನ್ನುತ್ತಾ ಕಚಗುಳಿಯಿಟ್ಟಳು ಮೈತ್ರಿ.

"ಯಾವಾಗ ಬೆಂಗಳೂರಿಗೆ ಹೋಗೋದೂಂತ ಯೋಚನೆ ಮಾಡ್ತಾ ಇದ್ದೆ.ಇನ್ನು ಒಂದು ವಾರಕ್ಕೆ ರಜೆ ಮುಗಿಯುತ್ತೆ."

"ನೀವು ಯಾವಾಗ ಹೇಳ್ತೀರೋ ಆವಾಗ ಬರಲು ನಾನು ರೆಡಿ "ಎಂದಳು ತನ್ನ ಕಣ್ಣುಗಳನ್ನು ಅಗಲಿಸುತ್ತಾ...

ಆಕೆಯ ಹೆಗಲಮೇಲೆ ಕೈಯಿಟ್ಟು ತನ್ನತ್ತ ಸೆಳೆದು ಆದಷ್ಟು ಬೇಗ ಹೋಗೋಣ.. ಎನ್ನುತ್ತಾ ಕಣ್ಣುಮಿಟುಕಿಸಿದ...




        ಮರುದಿನ ಐದನೇ ದಿನದ ಸ್ನಾನ ಮುಗಿಸಿ  ಮನೆಗೆ ತೆರಳುವ ತವಕದಲ್ಲಿದ್ದಳು ಮೈತ್ರಿ.ಮೊತ್ತ ಮೊದಲ ಬಾರಿಗೆ ಲಚ್ಚಿಮಿಯ ಬಾಯಲ್ಲಿ ತವರುಮನೆ ಎಂಬ ಪದವನ್ನು ಕೇಳಿ ಅವಳ ಮನ ಚೂರು ಭಾರವಾಗಿತ್ತು.ಅದಿನ್ನೂ ನನ್ನ ಮನೆಯೇ ಎಂದು ಸಾರಿ ಹೇಳಿತ್ತು ಹೃದಯ.ತವರೆಂದು ಒಪ್ಪಿಕೊಳ್ಳಲೇ ಇಲ್ಲ ಅವಳ ಮನಸು..

       ಅಮ್ಮನ ಫೋನ್ ಯಾವಾಗ ಬರುತ್ತದೋ ಎಂಬ ಕಾತರ ಅವಳಲ್ಲಿತ್ತು.ಅವಳು ಯೋಚಿಸುತ್ತಿದ್ದಂತೆಯೇ ಅಮ್ಮನ ಕರೆ ಬಂದಿತು."ನಾಳೆ ನವವಧೂವರರ ಸಮ್ಮಾನಕ್ಕೆ ಏರ್ಪಾಡು ನಡೆಯುತ್ತಿದೆ..ಮಗಳೇ..ಅಳಿಯಂದಿರನ್ನು, ಅತ್ತೆ ಮಾವನನ್ನು ಕರೆದುಕೊಂಡು ಬೇಗ ಬಾ."
ಎಂದರು ಅಮ್ಮ..ಉತ್ಸಾಹದಿಂದ ಹೂಂಗುಟ್ಟಿದಳು ಮೈತ್ರಿ..


"ಮತ್ತೆ ನಾಲ್ಕು ದಿನ ಅಲ್ಲಿಯೇ ನಿಲ್ಲುವೆ ಎನ್ನಬೇಡ ಮುದ್ಗೊಂಬೆ ಪ್ಲೀಸ್...ಮೊನ್ನೆಯೇ ನನ್ನ ಹೃದಯ ಪೀಸ್ ಪೀಸ್ ಆಗಿತ್ತು.. ಇನ್ನು ಪುನಃ ನನ್ನಿಂದ ತಡೆದುಕೊಳ್ಳಲು ಸಾಧ್ಯವಿಲ್ಲ."
ಎಂದು ಗೋಗರೆದ ಕಿಶನ್.

"ಇಲ್ಲ.. ನಾಲ್ಕು ದಿನ ಇದ್ದೇ ಬರುವುದು" ಎಂದು ತಾನೂ ಅಣಕಿಸಿದಳು ಮೈತ್ರಿ..

"ಅಮ್ಮಾವ್ರ ಮನದೊಳಗೇನಿದೆ ಎಂದು ನಂಗೆ ತಿಳಿಯುತ್ತದೆ.. " ಎಂದಾಗ ಪತಿಯ  ಪ್ರೀತಿಗೆ ಸೋತು ಶರಣಾಗಿದ್ದಳು ಮುದ್ಗೊಂಬೆ.

     ಮರುದಿನ ಬೇಗ ಎದ್ದು ಸ್ನಾನ ಮುಗಿಸಿ ಬಂದ ಮೈತ್ರಿ....ದೇವರಿಗೆ ದೀಪ ಹಚ್ಚಿ ಬಾವಿಯಿಂದ ನೀರು ಸೇದಿ ತಂದು ಹೊಸ್ತಿಲ ಗಂಗೆಗೆ ಹೂವಿಟ್ಟು,ಗಿಂಡಿಯಲ್ಲಿ ನೀರಿಟ್ಟು, ದೇವರಮುಂದೆ ಊದಿನ ಕಡ್ಡಿ ಹಚ್ಚಿ ಭಕ್ತಿಯಿಂದ ಪ್ರಾರ್ಥಿಸಿದಳು ಮೈತ್ರಿ.ಮನೆಯಿಡೀ  ಉದುಬತ್ತಿ ಪರಿಮಳ ಹರಡುತ್ತಿದ್ದಂತೆಯೇ ನಿದ್ರೆಯಿಂದ. ಎಚ್ಚರಗೊಂಡಿದ್ದ ಕಿಶನ್.. ಅವನ ತುಂಟ ಕಣ್ಣುಗಳಿಗೆ ಮೈತ್ರಿಯು ಬಲು ಸುಂದರವಾಗಿ ಕಾಣುತ್ತಿದ್ದಳು. ರೂಮಿಗೆ ಬಂದ ಮೈತ್ರಿಯನ್ನು ಕಣ್ಸನ್ನೆಯಲ್ಲೇ ಹತ್ತಿರ ಬರುವಂತೆ ಸೂಚಿಸಿದ. "ಇಲ್ಲ ...ಇವತ್ತು ಬರಲ್ಲ.. ನೀವು ಬೇಗ ಎದ್ದು ಹೊರಡಿ...ಇವತ್ತು ಮನೆಗೆ ಹೋಗಬೇಕು.." ಎನ್ನುತ್ತಾ ಆತುರಾತುರವಾಗಿ ನಡೆದಳು ಮೈತ್ರಿ. ಅವಳ ತವರಿನ ಕಾತರಕ್ಕೆ ನಿರಾಸೆಗೊಳಿಸದೆ ಕಿಶನ್ ಬೇಗನೆ ಫ್ರೆಶ್ ಆಗಿ ಬಂದ. ಅಮ್ಮ  ಮಾಡಿದ ತಿಂಡಿಯನ್ನು ಎಲ್ಲರೂ ಸವಿದು  ಶಾಸ್ತ್ರೀ ನಿವಾಸಕ್ಕೆ ಹೊರಟರು.

ಮುಂದುವರಿಯುವುದು...


✍️...ಅನಿತಾ ಜಿ.ಕೆ.ಭಟ್ಟ.
29-05-2020.

ಹೆಚ್ಚಿನ ಓದಿಗಾಗಿ..
ಬರಹದ ಕೆಳಗಡೆ ಇರುವ Home,view web version,> .... ಇವುಗಳನ್ನು ಬಳಸಿಕೊಳ್ಳಬಹುದು...



Wednesday, 27 May 2020

ಜೀವನ ಮೈತ್ರಿ ೮೨(82)



ಜೀವನ ಮೈತ್ರಿ ಭಾಗ ೮೨



        ಶಾಸ್ತ್ರೀ ನಿವಾಸದಲ್ಲಿ ಮೈತ್ರಿ ಇಲ್ಲದೆ ಕಳೆಯೇ ಇರಲಿಲ್ಲ. ಮಹೇಶನಿಗೆ ಅಕ್ಕನಿಲ್ಲದೆ ಹೊತ್ತು ಹೋಗುತ್ತಿರಲಿಲ್ಲ. ಸದಾ ಅಕ್ಕನ ನೆನಪೇ ಸುಳಿಯುತ್ತಿತ್ತು.ಮಂಗಳಮ್ಮನಿಗೆ  ಬೆಳ್ಳಂಬೆಳಗ್ಗೆ ತಿಂಡಿ ಮಾಡುತ್ತಿರುವಾಗ ಮಗಳನ್ನು "ತಿಂಡಿ  ತಿನ್ನಲು ಬಾ " ಎಂದು ಕರೆದು ಹೋಗುತ್ತಿತ್ತು. ಅಜ್ಜ ಏನೂ ತೋರಿಸಿಕೊಳ್ಳಲು ಹೋಗದೇ ಇದ್ದರೂ  ಒಂದು ವಿಧದ ಶೂನ್ಯ ಅವರನ್ನು ಆವರಿಸಿತ್ತು. ಅಜ್ಜಿ ಮಹಾಲಕ್ಷ್ಮಿ ಅಮ್ಮನಿಗೆ ಶಶಿಯದೇ ಯೋಚನೆಯಾಗಿತ್ತು 'ಯಾಕೆ ಹೀಗೆ ಮಾಡಿದಳು ?'ಎಂದು.


         ಮೈತ್ರಿ ದಿನಕ್ಕೆ ಮೂರು ಬಾರಿ ಅಮ್ಮನಿಗೆ ಫೋನ್ ಮಾಡುತ್ತಿದ್ದಳು. ಮಾತನಾಡಲು ವಿಷಯವಿಲ್ಲದೆಯಿದ್ದರೂ ಅಮ್ಮನ ದನಿ ಕೇಳಿದರೆ ಸಮಾಧಾನ  ಅವಳಿಗೆ.. ಮಹೇಶನೂ ಅಷ್ಟೇ.. ಆಗಾಗ ಅಕ್ಕನಿಗೆ ಕರೆ ಮಾಡುತ್ತಿದ್ದ.


                     ********


         ಮೈತ್ರಿಯ ಮೂರು ದಿನದ ಕ್ವಾರೈಂಟೈನ್  ಮುಕ್ತಾಯದ ಹಂತದಲ್ಲಿತ್ತು. ಬೆಳಗ್ಗೆ 4:00 ಗಂಟೆಯ ಸಮಯಕ್ಕೆ ಗಣೇಶ ಶರ್ಮನಿಗೆ ಎಚ್ಚರವಾಯಿತು. ಇನ್ನು ಸುಮ್ಮನೆ ಮಲಗುವುದಕ್ಕೆ ನಾನು ಎದ್ದು ಬಚ್ಚಲ ಒಲೆಗೆ ಬೆಂಕಿ ಹಾಕುತ್ತೇನೆ ಎಂದು ಹೊರಟರು. ಸೊಸೆ ಇವತ್ತು ಸ್ನಾನ ಮಾಡುವುದು.. ಬೇಗ ಸ್ನಾನಮಾಡಿ ಬರಲಿ . ಮಗ ಸೊಸೆಯ ವಿರಹವನ್ನು ನೋಡಲಾಗುವುದಿಲ್ಲ. ಎಂದುಕೊಂಡು ಬಚ್ಚಲುಮನೆಯ ಕಡೆಗೆ ಚಿಮಣಿಯ ದೀಪವೊಂದನ್ನು ಹಿಡಿದುಕೊಂಡು ಹೊರಟರು.


         ಮಮತಾಗೆ ಎಚ್ಚರವಾಯಿತು. ನಾನು ಇನ್ನು ಸಮ್ಮನೆ ಮಲಗಿಕೊಂಡು ಕಣ್ಣುಮುಚ್ಚುವುದಕ್ಕೆ ಎದ್ದು ಮೈತ್ರಿಗೆ ಸ್ನಾನಕ್ಕೆ ಬೇಕಾದ್ದನ್ನು ರೆಡಿ ಮಾಡುತ್ತೇನೆ ಎಂದು ಹೊರಟರು.  ಮೈತ್ರಿಗೆ ಬಾತ್ ಟವಲ್ ,ಹಾಕುವ ಡ್ರೆಸ್  ಎಲ್ಲವನ್ನು ಸಂಗ್ರಹಿಸಿ ಬಚ್ಚಲು ಮನೆಯಲ್ಲಿ ಮರದ ರೀಪಿನಲ್ಲಿ ನೇತು ಹಾಕಿದರು.ಹಿಂದಿನ ದಿನ ಒಕ್ಕಿ ತಂದಿದ್ದ ಅರಶಿನದ ಗಡ್ಡೆಯ ತುಂಡೊಂದನ್ನು ಬಚ್ಚಲು ಮನೆಯ ಹಂಡೆಗೆ ಬದಿಯಲ್ಲಿ ಇಟ್ಟು ಬಂದರು..


          ತಂದೆ ತಾಯಿ ಇಬ್ಬರೂ ಎದ್ದು ಇಷ್ಟೆಲ್ಲ ಮಾಡುತ್ತಿದ್ದಾಗ ಕಿಶನ್ ಗೂ ಎಚ್ಚರವಾಯಿತು. ರಾತ್ರಿ ನಿದ್ದೆ ಹಿಡಿಯುವುದಕ್ಕೆ ಬಹಳ ತಡವಾಗಿತ್ತು. ಹೀಗೆ ಎಚ್ಚರವಾದಾಗ ಮುದ್ಗೊಂಬೆ ಇಂದು ಸ್ನಾನ ಮಾಡಿ ಬರುವ ದಿನ ಎಂದು ಪಕ್ಕನೆ ಹೊಳೆಯಿತು. ಸೀದಾ ಮುದ್ಗೊಂಬೆಗೆ ಸಂದೇಶ ರವಾನಿಸಿದ. ಮೇಲಿಂದ ಮೇಲೆ ಸಂದೇಶ ಬಂದಾಗ ಆಕೆಗೆ ಎಚ್ಚರವಾಯಿತು. ಐದೂವರೆಗೆ ಎದ್ದು ಮೆಲ್ಲನೆ ಸ್ನಾನಕ್ಕೆ ಹೊರಟರು. ಹಾಸಿದ ಬಟ್ಟೆಯನ್ನೆಲ್ಲ ತೆಗೆದು ಮಡಚಿ ತನ್ನ ಜೊತೆಗೆ ಒಯ್ದಳು.ಕೋಣೆಯನ್ನು ಸೆಗಣಿನೀರಿನಿಂದ ಒರೆಸಿದಳು.ತಾನು ಬಳಸಿದ ತಟ್ಟೆ ಲೋಟಗಳನ್ನು ತೊಳೆದು  ಕವಚಿಟ್ಟಳು.ಅತ್ತೆ ತೆಗೆದಿರಿಸಿದ್ದ ದೊಡ್ಡ ಬಕೆಟ್ ನಲ್ಲಿ ಬಟ್ಟೆಯನ್ನು ನೀರಿನಲ್ಲಿ ಅದ್ದಿದಳು. ಇದನ್ನೆಲ್ಲಾ ತಾನಿನ್ನು ಒಗೆಯಬೇಕಲ್ಲ ಎಂದು ಒಗೆಯಲು ಸನ್ನದ್ಧಳಾದಳು.


       ಅಂಗಳದ ಬದಿಯಲ್ಲಿ ಶೀಟ್ ಹಾಕಿ ಹಾಸು ಕಲ್ಲೊಂದನ್ನು ನೆಟ್ಟಿದ್ದಾರೆ .ಅದರಲ್ಲಿ ಬಟ್ಟೆ ಒಗೆಯಬೇಕಿತ್ತು. ತವರಲ್ಲಾದರೆ ವಾಷಿಂಗ್ ಮೆಷಿನ್ ಇತ್ತು. ಅದಕ್ಕೆ ಹಾಕಿಬಿಟ್ಟರೆ ನಡೆಯುತ್ತಿತ್ತು.ಅಲ್ಲದೆ ಕೆಲಸದಾಕೆ ಸರಸು ಕೂಡ ಚೆನ್ನಾಗಿ ಒಗೆದು ಕೊಡುತ್ತಿದ್ದಳು. ಈಗ ತನ್ನ ಕೆಲಸವನ್ನು ತಾನೇ ಮಾಡಬೇಕಾದ ಅನಿವಾರ್ಯತೆ ಮೈತ್ರಿಗೆ. ಬೆಡ್ ಶೀಟ್ ಎತ್ತಿ ಒಗೆಯಲು ಹೊರಟಳು. ತಲೆಯಲ್ಲಿ ನಾನಾತರಹದ ಆಲೋಚನೆ. ಹದಾಮಟ್ಟಿಗೆ ಒಗೆದರೆ ಸಾಕೇ.. ಅಲ್ಲ ಸರಸು ಒಗೆಯುವಂತೆ  ಕಲ್ಲಿಗೆ ಪಟಪಟ  ಬಡೀಬೇಕೇ...ಬಡಿದಿಲ್ಲವಾದರೆ ಒಗೆದದ್ದು ಸರಿಯಾಗಿಲ್ಲ ಎಂದು ಹೇಳಿದರೆ ಕಷ್ಟ. ಎಂದು ಒಂದೊಂದೇ ಬೆಡ್ಶೀಟ್ ತೆಗೆದು ಕಲ್ಲಿಗೆ ಹೊಡೆಯಲಾರಂಬಿಸಿದರು.


          ಇತ್ತ ಮಲಗಿದ್ದ ಕಿಶನ್ ಗೆ ನಿದ್ದೆಯೂ ಬರದೆ ಏಳುವ ಮನಸ್ಸು ಇಲ್ಲದೆ ಚಡಪಡಿಸುತ್ತಿದ್ದ.. ಒಮ್ಮೆ ಎದ್ದರೆ ಮತ್ತೆ  ಮೈತ್ರಿ ಸಿಗುವುದು ರಾತ್ರಿ. ಇದರಿಂದ ಪುನಃ ಕಣ್ಮುಚ್ಚಿದ ನಾಟಕವಾಡುತಿದ್ದ. ಅತ್ತ ಅವಳು ಬಟ್ಟೆಯೊಗೆಯುವುದು ಜೋರಾಗಿ ಕೇಳಿದರೆ ಇಲ್ಲಿ ಇವನ ಹೃದಯ ಅವಳಿಗಾಗಿ ಬಡಿದುಕೊಳ್ಳುತ್ತಿತ್ತು.'ಸಾಕಮ್ಮ ತಾಯಿ ಬಟ್ಟೆ ಬಡಿದದ್ದು 'ಎಂದು ಗೋಗರೆದು ಕೊಳ್ಳೋಣ ಎಂದೆನಿಸಿತ್ತು... ಫೋನ್ ರೂಮಿನಲ್ಲಿ ಬಿಟ್ಟು ಹೋಗಿದ್ದಾಳೆ.. ಏನು ಮಾಡೋಣ ದೇವರು ಬೇಗಬರುವಂತೆ ಬುದ್ದಿ ಕೊಡಲಿ ಎಂದು ಆ ದೇವರಿಗೆ ಕೈಮುಗಿದ..


      ಮೈತ್ರಿ ತಾನು ಅಮ್ಮ ಹೇಳಿದ ಮಾತನ್ನು ನೆನಪಿಸಿಕೊಂಡಳು. ಗಂಡನ ಮನೆಯಲ್ಲಿ ಯಾವುದೇ ಕೆಲಸವಾದರೂ ಅಚ್ಚುಕಟ್ಟಾಗಿ ಮಾಡಬೇಕು. ಅರ್ಧಂಬರ್ಧ ಮಾಡುವುದಲ್ಲ.ಹಾಗೆಯೇ  ಬಟ್ಟೆಯೊಗೆಯುವ ಕಾರ್ಯವನ್ನು ಅಚ್ಚುಕಟ್ಟಾಗಿ ಮುಗಿಸಿ ಹೇಗೋ ಕಷ್ಟಪಟ್ಟು ಬಟ್ಟೆಯನ್ನು ಅಂಗಳದಲ್ಲಿ ಒಂದು ತೆಂಗಿನ ಮರದಿಂದ ಇನ್ನೊಂದು ಮರಕ್ಕೆ ಕಟ್ಟಿಹಾಕಿದ್ದ ಸರಿಗೆಯಲ್ಲಿ ನೇತು ಹಾಕಿ ಬಚ್ಚಲು ಮನೆಗೆ ನಡೆದಳು.ಬಟ್ಟೆ ಒಣಗಲು ಹಾಕಿದ್ದನ್ನು ಕಂಡು ಅತ್ತೆ ಬಚ್ಚಲು ಮನೆಗೆ ಬಂದು ಹಂಡೆಯಿಂದ ಒಂದು ಬಕೆಟ್ ನೀರು ಮೈತ್ರಿಯ ತಲೆಗೆ ಸುರಿದರು. ಅಲ್ಲಿಗೆ ಅವಳು ಅರ್ಧ ಶುದ್ಧವಾದಂತೆ.ಹಂಡೆಯ ನೀರು ಮುಟ್ಟಬಹುದು ಎಂದರ್ಥ.ಅರಸಿನ ತುಂಡನ್ನು ತೋರಿಸಿ ಇದನ್ನು ಚೆನ್ನಾಗಿ ಅರೆದು ನೀರಿಗೆ ಹಾಕಿ ಸ್ನಾನ ಮಾಡು ಎಂದರು.


        ಕಿಶನ್ ಕಾದು ಕಾದು ಸುಸ್ತಾಗಿ ಕಣ್ಣೀರು ತುಂಬಿಕೊಂಡಿದ್ದ. ಮುದ್ಗೊಂಬೆ ಇನ್ನೂ ಬಂದಿಲ್ಲವೇ ... ನನ್ನ ಕಷ್ಟ ಅವಳಿಗೆ ಅರ್ಥ ಆಗಲ್ಲ.. ಎಂದೆಲ್ಲಾ ಯೋಚಿಸುತ್ತಾ ಮೊಬೈಲಲ್ಲಿ ಇದ್ದ ಅವಳ ಫೋಟೋಗಳನ್ನು ನೋಡಿ ..
ಕಣ್ಣು ಮುಚ್ಚಿಕೊಂಡ ಮಲಗಿದ.

       ಮೈತ್ರಿ ತಲೆಗೆ ಸ್ನಾನ ಮುಗಿಸಿ ಬಂದು ಅತ್ತೆ ಹೇಳಿದ ಶಾಸ್ತ್ರದಂತೆ ಬಾವಿಯಿಂದ ಒಂದು ಕೊಡಪಾನ ನೀರು ಎಳೆದು ..ಅದರಿಂದ ಒಂದು  ಗಿಂಡಿ ನೀರು ತಂದು ಹೊಸ್ತಿಲ ಮೇಲೆ ಇಟ್ಟಳು.ಬರುವ ಹಾದಿಯಲ್ಲೇ ಇನ್ನೂ ಮೊಗ್ಗಾಗಿದ್ದು ಹಾಲು ಬಿಳಿ ಬಣ್ಣದ ದಾಸವಾಳವನ್ನು ಕೊಯ್ದು ತಂದಿದ್ದಳು.ಅದನ್ನು  ಹೊಸ್ತಿಲ ದೇವಿಗಿಟ್ಟು ಭಕ್ತಿಯಿಂದ ಅತ್ತೆ ಹೇಳಿಕೊಟ್ಟಂತೆ ನಮಸ್ಕರಿಸಿದಳು.


          ಏನೋ ಮೈ ಮೇಲೆ ಹರಿದಂತಾಗ  ಕಣ್ಣು ತೆರೆದು ನೋಡಿದರೆ ತನ್ನರಸಿ ಸ್ನಾನ ಮಾಡಿ ಬಂದು ತನ್ನ ಬಳಿಯಲ್ಲಿ ಕುಳಿತು ಮುಖವನ್ನೇ ದಿಟ್ಟಿಸಿ ಕೀಟಲೆ ಮಾಡುತ್ತಿದ್ದಾಳೆ.ಕಿಶನ್ ನ ಸಂತೋಷಕ್ಕೆ ಪಾರವೇ ಇರಲಿಲ್ಲ... ತಲೆಗೆ ಸ್ನಾನ ಮಾಡಿ ನೀರಿಳಿಯುತ್ತಿದ್ದ ಒದ್ದೆ ತಲೆಕೂದಲು, ಪರಿಮಳ ಸೂಸುತ್ತಿದ್ದ ಅವಳ ಮೈ , ಕಡೆದು ಮಾಡಿದಂತಿದ್ದ ಮುಖದಲ್ಲಿ ರಾರಾಜಿಸುತ್ತಿದ್ದ ಸಿಂಧೂರ,ಸಂಭ್ರಮ ತುಂಬಿದ್ದ ಅವಳ ನಯನಗಳು, ಕಚಗುಳಿಯನ್ನು ಬಯಸುವಂತಿದ್ದ  ಗುಳಿಬಿದ್ದ ಕೆನ್ನೆ ಅವನನ್ನು ಹುರಿದುಂಬಿಸಿತ್ತು. ಮೂರು ದಿನದ ತನ್ನ ವಿರಹ ..ನಾಲ್ಕು ವರ್ಷದ ವಿರಹಕ್ಕಿಂತಲೂ ಜೋರಾಗಿತ್ತು ಎನ್ನುತ್ತಾ ಮನಸಾರೆ ಮಡದಿಯನ್ನು ತಬ್ಬಿ ಪ್ರೀತಿಯ ಸಿಹಿಯನುಣಿಸಿದ..


      ದಾಂಪತ್ಯವೆಂಬುದು ಒಂದು ಸುಂದರ ಅನುಬಂಧ.ಎಲ್ಲೋ ಹುಟ್ಟಿ ಬೆಳೆದ ಎರಡು ಜೀವಗಳು ನಾವು ಒಂದೇ ಎಂದು ಬೆರೆತು ಬದುಕುವ , ಮೌನದಲ್ಲೇ ಎಲ್ಲವನ್ನೂ ಅರಿತುಕೊಳ್ಳುವ ಶೃಂಗಾರ ಕಾವ್ಯ.ನನಗೆ ನೀನು ಸ್ಫೂರ್ತಿ.. ನಿನಗೆ ನನ್ನ ಹೆಗಲಿನಾಸರೆ ಎನ್ನುತ್ತಾ ಬದುಕಿನ ಏಳುಬೀಳುಗಳಲ್ಲಿ ಕೊಂಡಿಕಳಚದೆ ಮುಂದೆ ಸಾಗುವುದೇ ಸರಸಮಯ ಜೀವನಬಂಡಿ . ಇಲ್ಲಿ ಯಾರೂ ಹೆಚ್ಚಲ್ಲ..ಕಡಿಮೆಯೂ ಅಲ್ಲ.ಸರಿಸಮಾನವಾದ ಜವಾಬ್ದಾರಿಯನ್ನು ಹಂಚಿಕೊಳ್ಳುತ್ತಾ ಮುಂದೆ ಸಾಗಿದರೆ ದಾಂಪತ್ಯವೆಂಬುದು ಬಂಧನವಲ್ಲ.ಜೀವನದ ಮುನ್ನಡೆಗೆ ಸಾಧನ.


    ಮಮತಾ ಗಣೇಶ ಶರ್ಮ ಇಬ್ಬರೂ ತಮ್ಮ ತಿಂಡಿ ಕಾಫಿ ಮುಗಿಸಿದರು.ಮಗ ಸೊಸೆ ಇನ್ನೂ ಎದ್ದಿಲ್ಲದಿದ್ದರೂ ಆ ಮುದ್ದು ಜೋಡಿಯನ್ನು ಕರೆಯುವ ಪ್ರಯತ್ನ ಮಾಡಲಿಲ್ಲ.ಅವರ ಖುಷಿಗೆ ಅತಿಯಾದ ಶಿಸ್ತಿನ ಬೇಲಿಹಾಕದೆ ತಮ್ಮ ಪಾಡಿಗೆ ತಾವು ಇರಬೇಕೆಂದು ಬಯಸಿದರು.



                  *******


   ಶಾಸ್ತ್ರಿ ನಿವಾಸದಲ್ಲಿದ್ದ ಶಂಕರ ಶಾಸ್ತ್ರಿಗಳ ಕುಟುಂಬ ಬೆಂಗಳೂರಿಗೆ ಪ್ರಯಾಣ ಬೆಳೆಸಿತು.ಮಂಗಳಮ್ಮ ಉಪ್ಪಿನಕಾಯಿ,ಸೆಂಡಿಗೆ,ಮಾಂಬಳ , ತರಕಾರಿ ಗಳನ್ನು ತುಂಬಿಸಿಕೊಟ್ಟರು. ಅವರಿಗೆ ಕೊಂಡೊಯ್ಯಲೆಂದೇ ಹಲಸಿನ ಕಾಯಿಯ ಚಿಪ್ಸ್ ತಯಾರಿಸಿದ್ದರು..,ನೀರು ಮಾವಿನ ಕಾಯಿ ಹಾಕಿದ್ದರು.ಎಲ್ಲವನ್ನೂ ಕಾರಿನಲ್ಲಿ ತುಂಬಿಸಿದಾಗ ಕಾರು ತುಂಬು ಗರ್ಭಿಣಿಯಂತಾಗಿತ್ತು.


       ಮನೆಯವರಿಗೆಲ್ಲ ಕೈಬೀಸಿ ಹೊರಡುತ್ತಿದ್ದಂತೆ ಮೈತ್ರಿಯಿದ್ದಿದ್ದರೆ ಈಗ ಬಾಯ್ತುಂಬಾ ಹರಟಿ ಬಾಯ್ ಬಾಯ್ ಮಾಡುತ್ತಿದ್ದಳು ಎಂದು ನೆನಪು ಮಾಡಿಕೊಂಡು ಕಣ್ತುಂಬಿಕೊಂಡರು ಗಾಯತ್ರಿ.ನನಗೂ ಇನ್ನು ಸ್ವಲ್ಪ ಸಮಯದಲ್ಲಿ ಹೀಗೆ ಮಗಳನ್ನು ಗಂಡನ ಮನೆಗೆ ಕಳುಹಿಸಬೇಕಾಗುತ್ತದೆ ಎಂದು ಸಣ್ಣ ಸಂಕಟವನ್ನು ಅನುಭವಿಸಿದರು.


   ದಾರಿ ಮಧ್ಯದಲ್ಲಿ ಮದುವೆಯ ಸಡಗರ ಸಂಪ್ರದಾಯಗಳದ್ದೇ ಮಾತುಕತೆ ನಡೆಯುತ್ತಿತ್ತು.ಸಂಜನಾ ವಂದನಾ ಹಲವಾರು ವೈದಿಕ ಕಾರ್ಯಕ್ರಮಗಳು ,ಆಚರಣೆಗಳ ಮಹತ್ವವನ್ನು ತಂದೆತಾಯಿಯಿಂದ ತಿಳಿದುಕೊಂಡರು.ಮುಟ್ಟಿನ ಸಮಯದಲ್ಲಿ ಮುಟ್ಟಬಾರದು ಏಕೆ ಎನ್ನುವುದು ಸಂಜನಾಳನ್ನು ಬಹಳ ಕಾಡಿದ ಪ್ರಶ್ನೆಯಾಗಿತ್ತು.ಅಮ್ಮ ಅಪ್ಪನ ಮುಂದಿಟ್ಟಳು.


      ಮುಟ್ಟಿನ ಸಮಯದಲ್ಲಿ ಹೆಣ್ಣಿನ ಶರೀರದಲ್ಲಿ ಹಾರ್ಮೋನುಗಳ ವ್ಯತ್ಯಾಸವಾಗುತ್ತದೆ.ಶುಚಿತ್ವದ ಕಡೆಗೂ ಆಕೆ ಗಮನಕೊಡಬೇಕಾಗುವುದು.
 ದಣಿವೂ ಇರುವುದರಿಂದ ಆಕೆಗೆ ವಿಶ್ರಾಂತಿಯ ಅಗತ್ಯವಿದೆ.ಸುಮ್ಮನೆ ಹೆಣ್ಣುಮಕ್ಕಳಿಗೆ ವಿಶ್ರಾಂತಿ ಸಿಗಲು ಸಾಧ್ಯವೇ... ಅದಕ್ಕೋಸ್ಕರ ಏನೂ ಮುಟ್ಟಬಾರದು, ಮಾಡಬಾರದು ಎಂದು ಶಾಸ್ತ್ರವನ್ನಿಟ್ಟಿದ್ದಾರೆ ಹಿರಿಯರು. ಆದರೆ ಇಂದು ಮಾತ್ರ ಆ ಉದ್ದೇಶ ಎಷ್ಟರಮಟ್ಟಿಗೆ ಸಮರ್ಪಕವಾಗಿ ಪಾಲನೆಯಾಗುತ್ತಿದೆ ಎಂದು ಹೇಳಲು ಸಾಧ್ಯವಿಲ್ಲ.ಕೆಲವು ಮನೆಗಳಲ್ಲಿ ಮನೆಯ ಒಳಗಿನ ಕೆಲಸಗಳಿಗೆ ನಿವೃತ್ತಿ ನೀಡಿ ಗಂಡ ಅಡುಗೆಯ ಜವಾಬ್ದಾರಿ ಹೊತ್ತು ...ತೋಟದ ಕೆಲಸ ನೀನು ಮಾಡು , ಅಡಿಕೆ ಹೆಕ್ಕು, ದನಗಳಿಗೆ ಹುಲ್ಲು ಸೊಪ್ಪು ಮಾಡು ಎಂದು ಹೇಳುವುದಿದೆ.ಹೀಗಾದಾಗ ಮೂಲ ಉದ್ದೇಶ ಪಾಲನೆಯಾಗದೆ ಬರೀ ಮೂಢನಂಬಿಕೆ ಎಂದು ಕರೆಸಿಕೊಳ್ಳುತ್ತದೆ.ಇನ್ನು ಕೆಲವೆಡೆಗಳಲ್ಲಿ ಅಡುಗೆ ಮನೆಯಲ್ಲಿ ಆಹಾರ ತಯಾರಿಸುವವರಿಲ್ಲದೆ ಪೌಷ್ಟಿಕಾಂಶದ ಕೊರತೆಯನ್ನೂ ಹೆಣ್ಣು ಮಕ್ಕಳು ಅನುಭವಿಸುತ್ತಾರೆ.ಏಕೆಂದರೆ ಇಂತಹಾ ಸಂದರ್ಭದಲ್ಲಿ ಆಕೆಗೆ ಪುಷ್ಟಿದಾಯಕ ಆಹಾರ ಬೇಕು.ಒಟ್ಟಿನಲ್ಲಿ ಹೆಣ್ಣುಮಕ್ಕಳ ಅನುಕೂಲ ಕ್ಕಾಗಿ ಮಾಡಿದ ಕಟ್ಟುಪಾಡು ಇಂದು ಮೂಲ ತತ್ವವನ್ನು ಮರೆತು ,ಮಾನವೀಯತೆಯ ಒರತೆಯಿಲ್ಲದೆ ಬರೀ ಶಾಸ್ತ್ರವಾಗಿ ಉಳಿದಿರುವುದು ವಿಪರ್ಯಾಸವೇ ಸರಿ.


ಮುಂದುವರಿಯುವುದು..

✍️... ಅನಿತಾ ಜಿ.ಕೆ.ಭಟ್.
27-05-2020.

ಹೆಚ್ಚಿನ ಓದಿಗಾಗಿ...

      ಬರಹದ ಕೆಳಗಡೆ ಇರುವ Home, view web version,> ಸಂಕೇತಗಳನ್ನು ಬಳಸಿಕೊಳ್ಳಬಹುದು....

Tuesday, 26 May 2020

ಆರೋಗ್ಯಕ್ಕಾಗಿ ಸರಳ ಸಲಹೆಗಳು







  







ಆರೋಗ್ಯಕ್ಕಾಗಿ ಕೆಲವು ಸರಳ ಸಲಹೆಗಳು




           ಇಂದು ನಾವು ದೈನಂದಿನ ಚಟುವಟಿಕೆಗಳಲ್ಲಿ ಒತ್ತಡವನ್ನು ಅನುಭವಿಸುತ್ತಾ ನಮ್ಮ ಆರೋಗ್ಯಕ್ಕೆ ಅಗತ್ಯವಿರುವ ನಿಯಮಗಳನ್ನು ಪಾಲಿಸುವುದನ್ನು ಮರೆಯುತ್ತೇವೆ.ಪರಿಸರ ಮಾಲಿನ್ಯ ,ವಾಯುಮಾಲಿನ್ಯ, ಅತಿಯಾದ ಜಂಕ್ ಫುಡ್ ಗಳು, ಅತಿಯಾದ ಟಿವಿ ಮೊಬೈಲ್, ಕಂಪ್ಯೂಟರ್  ಬಳಕೆ..ಇತ್ಯಾದಿಗಳು ನಮ್ಮ ಆರೋಗ್ಯವನ್ನು ಏರುಪೇರುಮಾಡುತ್ತವೆ.ಅದಕ್ಕಾಗಿ ಕೆಲವೊಂದು ಸುಲಭ ಸರಳವಾದ ಸಲಹೆಗಳು..


ಬಾಯಿ ಹುಣ್ಣು:-



      ಕೆಲವರಿಗೆ ಬಾಯಲ್ಲಿ ಆಗಾಗ ಬಾಯಿಹುಣ್ಣು ಕಾಣಿಸಿಕೊಳ್ಳುತ್ತದೆ.ಹೋಟೇಲ್ ಆಹಾರ ಬಳಕೆ ಅನಿವಾರ್ಯವಾಗಿರುವವರಿಗೆ  ಈ ಸಮಸ್ಯೆ ಕಾಣಿಸಿಕೊಳ್ಳುವುದು ಹೆಚ್ಚು.ಅತಿಯಾದ ಮಸಾಲೆ ಭರಿತ ಆಹಾರಗಳನ್ನು ಸೇವಿಸಿದಾಗ ಈ ತೊಂದರೆ ಮತ್ತಷ್ಟು ಉಲ್ಬಣಗೊಳ್ಳುತ್ತದೆ.ಸ್ವಲ್ಪ ಖಾರ ತಾಗಿದರೂ ಸಾಕು ಸಹಿಸಲಸಾಧ್ಯ ನೋವು ಕಾಡುತ್ತದೆ.

      ಒಮ್ಮೊಮ್ಮೆ ಒಂದೆರಡು ಇದ್ದರೆ ಇನ್ನು ಕೆಲವೊಮ್ಮೆ ಐದಾರು.. ಅಬ್ಬಬ್ಬಾ..ನೋವು ಸಹಿಸಿಕೊಳ್ಳುವುದು ಎಷ್ಟು ಕಷ್ಟ.ಆಹಾರ ಸೇವಿಸುವುದು ಯಾತನೆ.ಇದಕ್ಕೆ ಪರಿಹಾರ ಇಲ್ಲಿದೆ.ಮಾಡಿ ನೋಡಿ.

      ಎರಡು ಪೇರಳೆ /ಸೀಬೆ ಎಲೆಯ ಕುಡಿಗಳನ್ನು ತೆಗೆದುಕೊಂಡು ನೀರಿನಲ್ಲಿ ತೊಳೆದು ಸ್ವಚ್ಛಗೊಳಿಸಿ.ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ, ಈ ಕುಡಿಗಳನ್ನು ಚೆನ್ನಾಗಿ ಜಗಿದು ನಿಧಾನವಾಗಿ ರಸವನ್ನು ನುಂಗಬೇಕು.ಹುಣ್ಣುಗಳು ತುಂಬಾ ಇದ್ದರೆ ಮೂರು ಬಾರಿ ಪುನರಾವರ್ತನೆ ಮಾಡಬಹುದು.ಪೇರಳೆಕುಡಿಯಲ್ಲಿ ನೋವು ನಿವಾರಕ ಮತ್ತು ಬ್ಯಾಕ್ಟೀರಿಯಾ ನಿವಾರಕಗಳು ಇರುವುದರಿಂದ ಬೇಗನೆ ಬಾಯಿಹುಣ್ಣು ಗುಣವಾಗುವುದು.ಇದು ನಮ್ಮಲ್ಲಿ ಪರಂಪರೆಯಿಂದಲೂ ಬಳಸಿಕೊಂಡು ಬಂದಂತಹ ಸುಲಭ,ಸರಳ ಮನೆಮದ್ದು.


      ಬಸಳೆಯ ಎಳೆಯ ಕುಡಿಗಳನ್ನು ಕೊಯ್ಧು ಸ್ವಚ್ಛಗೊಳಿಸಿ ಬಾಯಲ್ಲಿಟ್ಟುಕೊಂಡು ಚೆನ್ನಾಗಿ ಜಗಿದು ನಿಧಾನವಾಗಿ ನುಂಗಬೇಕು.ಇದು ಕೂಡ ಪರಿಣಾಮಕಾರಿ ವಿಧಾನ..


     ಒಂದು ಚಮಚ ಜೀರಿಗೆ ಪುಡಿಯನ್ನು ರಾತ್ರಿ ಮಲಗುವ ಮುನ್ನ ಬಾಯಿಗೆ ಹಾಕಿಕೊಂಡು ನೀರು ಕುಡಿದರೆ ಬಾಯಿ ಹುಣ್ಣು ಶಮನವಾಗುವುದು..




ಕೇಶರಕ್ಷಣೆಗೆ ಸರಳ ಉಪಾಯಗಳು :-





      ಸೊಂಪಾದ ಕೂದಲನ್ನು ಕಂಡಾಗ ಎಲ್ಲರ ಕಣ್ಣೂ ಅತ್ತ ನೆಟ್ಟು ವಾವ್ ..ಎನ್ನುವ ಉದ್ಗಾರವೊಂದು ಮನದೊಳಗೆ ಮೂಡದಿರದು.ಆಂತಹ ಕೇಶರಾಶಿಯನ್ನು ಬೆಳೆಸಿಕೊಳ್ಳುವುದು ಮತ್ತು ಇದ್ದುದನ್ನು ಉಳಿಸಿಕೊಳ್ಳುವುದು ಇಂದು ಸವಾಲಿನ ಸಂಗತಿಯೇ ಸರಿ.


      ಮಿರಿಮಿರಿ ಮಿಂಚುವ ಕೂದಲು ಯಾರಿಗೆ ಇಷ್ಟವಿಲ್ಲ ಹೇಳಿ.ಪುಟಾಣಿ ಮಕ್ಕಳಿಂದ ಹಿಡಿದು ವೃದ್ಧರ ವರೆಗೆ  ಎಲ್ಲರಿಗೂ ಇಷ್ಟ.ಆದರೆ ಕೂದಲನ್ನು ಕಾಪಾಡಿಕೊಳ್ಳುವುದು ಅಷ್ಟೇ ಕಷ್ಟ.ಕೂದಲು ಉದುರುವುದು, ತಲೆಹೊಟ್ಟು,ಸೀಳು ಕೂದಲು,
ನರೆಗೂದಲು ಇತ್ಯಾದಿ ತೊಂದರೆ ಹಲವರನ್ನು ಕಾಡುತ್ತದೆ.ಇವುಗಳಿಗೆ ಪರಿಹಾರೋಪಾಯಗಳನ್ನು ನೋಡೋಣ.


1.ಭೃಂಗರಾಜ( ಅಂದರೆ ಗರುಗ) ಮತ್ತು ದಾಸವಾಳದ ಎಲೆಗಳನ್ನು ರುಬ್ಬಿ ತಲೆಗೆ ಹಚ್ಚಿ ಅರ್ಧ ಅಥವಾ ಒಂದು ಗಂಟೆ ಬಿಟ್ಟು ತೊಳೆಯಿರಿ.


2.ಮದುರಂಗಿ, ಲೋಳೆಸರ (ಅಲೊವೆರಾ), ದಾಸವಾಳದ ಎಲೆಗಳನ್ನು ಪೇಸ್ಟ್ ಮಾಡಿ ಕೂದಲಿನ ಬುಡಕ್ಕೆ ಹಚ್ಚಿ, ಒಂದು ಗಂಟೆ ಬಿಟ್ಟು ತೊಳೆಯಿರಿ.


3.ಬಸಳೆಸೊಪ್ಪು ಮತ್ತು ಬ್ರಾಹ್ಮೀ ಎಲೆಗಳನ್ನು ಅರೆದು ಕೂದಲಿನ ಬುಡಕ್ಕೆ ಹಚ್ಚಬೇಕು.ಇದರಿಂದ ಕೂದಲು ಉದುರುವುದು ಕಡಿಮೆಯಾಗಿ ಚೆನ್ನಾಗಿ ಕೂದಲು ಬೆಳೆಯುತ್ತದೆ ಮತ್ತು ಕಣ್ಣಿಗೂ ತಂಪು.


4.ಬ್ರಾಹ್ಮೀ,ಗರುಗ, ದಾಸವಾಳದ ಸೊಪ್ಪು, ಲೋಳೆಸರ, ಬಸಳೆ ಸೊಪ್ಪು,ಮದುರಂಗಿ, ನೆಲ್ಲಿಕಾಯಿ ಇವುಗಳ ಪೇಸ್ಟ್ ನ್ನು ಎಣ್ಣೆಯ ಜೊತೆಗೆ ಕಾಯಿಸಿ ಸೋಸಿ ಸ್ವಲ್ಪ ಮೆಂತೆ ಕಾಳು ಹಾಕಿ ಬಾಟಲಿಯಲ್ಲಿ ಇರಿಸಿಕೊಳ್ಳುವುದು. ಇದು ಉತ್ತಮ ನಿತ್ಯೋಪಯೋಗಿ ಕೇಶತೈಲ.


   ಇದಲ್ಲದೇ ತಲೆಗೆ ಸ್ನಾನ ಮಾಡುವಾಗ ಮಿತವಾಗಿ ಸಾಬೂನು ಬಳಸಿ.ಕಡಲೆಹಿಟ್ಟನ್ನು ಸಹ ಬಳಸಬಹುದು.. ಸ್ನಾನದ ನಂತರ ಕೂದಲನ್ನು ಸರಿಯಾಗಿ ಒಣಗುವಂತೆ ನೋಡಿಕೊಳ್ಳಿ.
ಮೇಲೆ ತಿಳಿಸಿದ ಯಾವುದೇ ಪೇಸ್ಟನ್ನು ತಲೆಗೆ ಹಚ್ಚಿದರೂ ಸ್ನಾನ ಮಾಡುವಾಗ ಅವು ಕಿವಿಗಳಿಗೆ ಹೋಗದಂತೆ ಜಾಗ್ರತೆ ವಹಿಸಬೇಕು.(ಸೋಂಕು ತಗುಲುವ ಸಾಧ್ಯತೆ ಇದೆ.) ಸೊಂಪಾದ ಕೇಶ ಹೆಚ್ಚಿಸುವುದು ಆತ್ಮವಿಶ್ವಾಸ.ಮತ್ಯಾಕೆ ತಡ.. ಈ ಸಂಡೇ ನಿಮ್ಮ ಮಂಡೆಯನ್ನು ಥಂಡಾ ಥಂಡಾ ಮಾಡಿಕೊಳ್ಳಿ.

                ಕೇಶ ತೈಲ



      ದಟ್ಟವಾದ ಕಪ್ಪನೆಯ ಕೇಶರಾಶಿಯನ್ನು ಉಳಿಸಿಕೊಳ್ಳಲು ಬಯಸುವವರು ಮನೆಯಲ್ಲಿ ತಯಾರಿಸುವ ಕೇಶತೈಲಗಳಿಗೆ ಮೊರೆ ಹೋಗಬಹುದು.ಜಾಹೀರಾತುಗಳಲ್ಲಿ ಕಂಡ ಶ್ಯಾಂಪೂ, ಕೇಶ ತೈಲ ಗಳನ್ನು ಬಳಸಿ ಸುಸ್ತಾದವರಿಗೆ ಹಿತ್ತಲಿನಲ್ಲಿ ಬೆಳೆಯುವ ಔಷಧೀಯ ಗಿಡಮೂಲಿಕೆ ಗಳಿಂದ ನಿತ್ಯೋಪಯೋಗಿ ಕೇಶತೈಲ ತಯಾರಿಸುವ ವಿಧಾನವನ್ನು ತಿಳಿಸುತ್ತಿದ್ದೇನೆ.


ಬಳಸುವ ಗಿಡಮೂಲಿಕೆಗಳು:_



*ಭೃಂಗರಾಜ/ಗರುಗ_Eclipta prostrata
*ಲೋಳೆಸರ_Aloevera
*ಮದುರಂಗಿ_Lawsonia intermis
*ಬ್ರಾಹ್ಮೀ_Centella asiatica
*ನೆಲ್ಲಿ/ಕಿರು ನೆಲ್ಲಿ_Phyllanthus emblica/Phyllanthus niruri
*ದಾಸವಾಳದ ಪತ್ರೆ_hibiscus
*ಹಾಡೇ ಸೊಪ್ಪು_Cyclea peltata
*ಕರಿಬೇವು_Curry leaves
*ಜಾಜಿ ಮಲ್ಲಿಗೆ ಪತ್ರೆ_Jasminum grandiflora
*ಬಸಳೆ ಸೊಪ್ಪು_spinach
ಇವುಗಳಲ್ಲಿ ಎಲ್ಲವೂ ನಿಮಗೆ ಲಭ್ಯವಾಗದಿರಬಹುದು. ಆದರೆ ಯಾವುದೆಲ್ಲ ದೊರಕುವುದೋ ಅದನ್ನು ಬಳಸಿಕೊಂಡು ಕೇಶತೈಲವನ್ನು ತಯಾರಿಸಿಕೊಳ್ಳಿ..
ಈ ಗಿಡಮೂಲಿಕೆ ಗಳನ್ನು ಬೆಳಗಿನ ಹೊತ್ತಿನಲ್ಲಿ ಕೊಯ್ದು ಚೆನ್ನಾಗಿ ತೊಳೆದುಕೊಳ್ಳಬೇಕು.
ಇವುಗಳನ್ನು ಮಿಕ್ಸಿಯಲ್ಲಿ ನುಣ್ಣಗೆ ಗಟ್ಟಿ ರುಬ್ಬಿ
ಎಣ್ಣೆಯಲ್ಲಿ ಕುದಿಸಿ.ಸಾಮಾನ್ಯ ಒಂದು ಕಪ್ ರುಬ್ಬಿದ ಮಿಶ್ರಣಕ್ಕೆ ಎರಡು ಕಪ್ ಎಣ್ಣೆ ಬಳಸಬಹುದು..( ನಾವು ಕರಾವಳಿಯಲ್ಲಿ ಬಳಸುವುದು ತೆಂಗಿನೆಣ್ಣೆ.ಅವರವರ ಊರಿನಲ್ಲಿ ತಲೆಕೂದಲಿಗೆ ಯಾವ ತೈಲ ಹಚ್ಚಿಕೊಳ್ಳುತ್ತಾರೋ ಅದನ್ನೇ ಬಳಸಬಹುದು.)
ಕುದಿದು ನೀರಿನ ಅಂಶ ಆವಿಯಾಗಬೇಕು.. ಸ್ವಲ್ಪ ಸಮಯ ಬೇಕಾಗುತ್ತದೆ..ಆಗ ಕುದಿಯುವ ಶಬ್ದ ನಿಲ್ಲುವುದು... ಇದನ್ನು ತೇವಾಂಶವಿಲ್ಲದ ಪಾತ್ರೆಗೆ ಸೋಸಿ.ತಣ್ಣಗಾದ ನಂತರ ಬಾಟಲಿಯಲ್ಲಿ ಹಾಕಿಟ್ಟು ಪ್ರತಿನಿತ್ಯ ಕೂದಲಿಗೆ ಬಳಸಬಹುದು.
ಸಮಸ್ಯೆಗಳಾದ ತಲೆಹೊಟ್ಟು, ಕೂದಲುದುರುವಿಕೆ, ಕಣ್ಣುರಿ, ನಿದ್ರಾಹೀನತೆ ನಿವಾರಿಸುತ್ತದೆ.
ಮಾಡಿ ಬಳಸಿ ನೋಡಿ.
                  
ಸುಂದರ ಮೊಗಕೆ
ಕೇಶವೆ ಭೂಷಣ
ತಲೆಯ ಸಮಸ್ಯೆಗೆ
ಚಿಂತಿಸದಿರಿ ಕ್ಷಣ||


ಹಿತ್ತಲ ಪತ್ರೆಯ
ನುಣ್ಣಗೆ ಅರೆದು
ಎಣ್ಣೆಲಿ ಕರಿದು
ತಣ್ಣನೆ ಶಿರಕೆ
ಬಣ್ಣವು ಕೇಶಕೆ||


ಮೆರುಗಿನ ಕೇಶದಿ
ಮೆರೆಯಿರಿ ನೀವು
ಮರೆಯದೆ ಮೆತ್ತಿರಿ
ಶಿರದಲಿ ತೈಲವ||
                   ‌
    ಕೇಶಾರೋಗ್ಯಕ್ಕಾಗಲೀ ಬಾಯಿಯ ಆರೋಗ್ಯಕ್ಕಾಗಲೀ ಇವಿಷ್ಟು ಮಾತ್ರ ಸಾಕಾಗಲಾರದು.. ಸಮಯಕ್ಕೆ ಸರಿಯಾಗಿ ಪೌಷ್ಟಿಕಾಂಶ ಇರುವ ಊಟ- ಸೇವನೆ, ಕಣ್ತುಂಬ ನಿದ್ರೆ ಕೂಡ ಅವಶ್ಯಕ.ಮಾನಸಿಕ ನೆಮ್ಮದಿ, ಅತಿಯಾಗಿ ಒತ್ತಡದಲ್ಲಿ ಸಿಲುಕಿರುವುದು ಮುಖ್ಯ.ಕೆಲವು ಔಷಧಗಳ ಅಡ್ಡಪರಿಣಾಮದಿಂದಾಗಿ ಕೂಡಾ ಕೂದಲುದುರಬಹುದು.ಅದನ್ನು ಪತ್ತೆ ಹಚ್ಚಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕು.










✍️...ಅನಿತಾ ಜಿ.ಕೆ.ಭಟ್
26-05-2020.



ಒಂದು ಮೈಲಿಗಲ್ಲಿನ ಕಥೆ






🛤️ಮೈಲುಗಲ್ಲಿನ ಕಥೆ 🛣️

ನನ್ನನಿಲ್ಲಿ ನಿಲಿಸಿಹರು
ಎಪ್ಪತ್ತರ ದಶಕದಲ್ಲಿ
ಪುಟ್ಟ ಮಕ್ಕಳು ದಾರಿಹೋಕರು
ಕೂತು ದಣಿವಾರಿಸಿಕೊಂಡಿಹರಿಲ್ಲಿ....



ಮಳೆಚಳಿಬಿಸಿಲೆಂಬ ಭೇದವಿರದೆ
ಮಾರ್ಗದರ್ಶನ ಮಾಡುತಿರುವೆ
ಸುತ್ತ ಹಬ್ಬಿದ ಹಸಿರ ಸೆರಗಿದೆ
ಸ್ವಚ್ಛ ಮಂದಾನಿಲ ಸೂಸುತಿವೆ....


ಈ ಪಥದಿ ಸಾಗಿದ ಜೀವಿಗಳೆಲ್ಲ
ಸಾಗಿ ಗುರಿಯನು ಮುಟ್ಟಿವೆ
ನನ್ನ ನೆನಪಿನ ಪುಟಗಳೆಲ್ಲ
ಯಶದ ಭಾಷ್ಯವ ಬರೆದಿವೆ....


ಚಿಣ್ಣರಿಂದು ಮುದುಕರಾಗಿ
ಕಣ್ಣಸಾಧನ ತೊಟ್ಟು ನನ್ನ ಕಂಡರೂ
ನಾನು ಮಾತ್ರ ಯುವಕನಾಗಿ
ಮಿಂಚುತಿರುವೆ , ಒಂದು ಮತ್ತೆ ಬರೆದರೂ....


ಬಾಳ ರಹದಾರಿಯ ಮೆಲುಕು
ಹಾಕಿ ಒಂದು ಕ್ಷಣವಿಲ್ಲಿ ನಿಲ್ಲಿರಿ
ಹಳೆಯ ಸವಿನೆನಪ ಚಿಲಕ
ತೆಗೆದು ನನ್ನ ಮೈಯನೊಮ್ಮೆ ತಡವಿರಿ...


✍️... ಅನಿತಾ ಜಿ.ಕೆ.ಭಟ್.
11-05-2020.





ಸಾಧನೆಗೆ ವಯಸ್ಸಿಗಿಂತ ಮನಸ್ಸು ಮುಖ್ಯ

         
  ಬೇಬಿಹಾಲ್ದೆರ್ ಎಲ್ಲರಂತೆ ತಾನೂ ವಿದ್ಯೆ ಕಲಿಯಬೇಕೆಂದು ಕನಸು ಕಂಡವಳು.ಅವಳ ಕುಡುಕ ತಂದೆ ಆಕೆಗೆ ಹನ್ನೆರಡನೇ ವಯಸ್ಸಿನಲ್ಲಿ ಮದುವೆ ಮಾಡಿದರು. ‌ಹದಿನೈದು ವಯಸ್ಸಾಗುತ್ತಿದಂತೆ ಮೂರುಮಕ್ಕಳ ತಾಯಿಯಾದವಳಿಗೆ ಕುಡುಕ ಗಂಡನ ಉಪಟಳ ತಡೆಯದೆ ಕಸಮುಸುರೆಯೇ ಆಸರೆಯಾಯಿತು.

           ಶ್ರೀಮಂತರ ಮನೆಯಲ್ಲಿ ಕಸಗುಡಿಸುವಾಗ ಸಿಕ್ಕ ಪುಸ್ತಕಗಳನ್ನು ಓದುತ್ತಾ ಮೈಮರೆಯುತ್ತಿದ್ದಳು.ಪ್ರಸಿದ್ಧ ಕತೆಗಾರ ಮುನ್ಶಿ ಪ್ರೇಮಚಂದ ರಮೊಮ್ಮಗ ಪ್ರಭೋಧ್ ಕುಮಾರ್ ಅವರಲ್ಲಿ ಮನೆಕೆಲಸ ಮಾಡುತ್ತಿದ್ದಾಗ ಇವಳ ಓದುವ ಆಸಕ್ತಿಗೆ ಅವರು ಬೆಂಬಲವಿತ್ತು ಬೆಂಗಾಲಿ ಪುಸ್ತಕಗಳನ್ನು ತಂದುಕೊಡುತ್ತಿದ್ದರು.

ಪ್ರಾಥಮಿಕ ಹಂತದಲ್ಲೇ ಶಾಲೆಬಿಟ್ಟು ಇಪ್ಪತ್ತು ವರ್ಷಗಳ ನಂತರ
ನಿವೃತ್ತ ಪ್ರೊಫೆಸರ್ ಆದ ಪ್ರಬೋಧ್ ಅವರ ಪ್ರೋತ್ಸಾಹದಿಂದ ತನ್ನದೇ ಕಥೆಯ ಪುಸ್ತಕವೊಂದನ್ನು ಬರೆದಳು.ಪ್ರಬೋಧ್ ಕುಮಾರ್ ತಿದ್ದಿ ವ್ಯಾಕರಣ,ಭಾಷಾಶುದ್ಧತೆಗೆ ಅಗತ್ಯ ಸಲಹೆನೀಡಿದರು.ಅವಳ ಪುಸ್ತಕ Aalo Aandhari  ಬೆಸ್ಟ್ ಸೆಲ್ಲರ್ ಪಟ್ಟಿಗೆ ಸೇರಿತು.ಅವಳ ಪುಸ್ತಕಗಳು ಜಗತ್ತಿನ ಪ್ರಮುಖ ಇಪ್ಪತ್ತನಾಲ್ಕು ಭಾಷೆಗಳಿಗೆ ಭಾಷಾಂತರಗೊಂಡವು.ವಿವಿಧ ದೇಶಗಳ ಸಾಹಿತ್ಯ ಗೋಷ್ಠಿಗಳಲ್ಲಿ ಭಾಗವಹಿಸುವ ಅವಕಾಶ ದೊರಕಿತು.ಆಸಕ್ತಿ,ಕಠಿಣ ಪರಿಶ್ರಮವಿದ್ದರೆ ಸಾಧನೆಗೆ ವಯಸ್ಸು ತೊಡಕಲ್ಲ ಎಂಬುದನ್ನು ನಿರೂಪಿಸಿದರು.

✍️...ಅನಿತಾ ಜಿ.ಕೆ.ಭಟ್.
14-05-2020.

Momspresso Kannada 100 ಪದದ ಕಥೆ.. ಸಾಧನೆಗೆ ವಯಸ್ಸಿಗಿಂತ ಮನಸ್ಸು ಮುಖ್ಯ..

ವಸುಂಧರೆಯ ಮೊರೆ


   

🌲 ವಸುಂಧರೆಯ ಮೊರೆ 🌲

ಸುಡು ಸುಡು ಬೇಸಿಗೆ
ತಡೆಯಲಾಗದ ಧಗೆ
ಭಾನು ವರುಣ ಏಕಿಷ್ಟು ಹಗೆ?
ಕೇಳದೇ ಭುವಿ ಹಸಿರ ಬೇಗೆ? ||1||

ಇಡುತಿಹಳು ಮೊರೆ
ಬಾಯಾರಿ ವಸುಂಧರೆ
ಒಡಲ ಬೆಂಕಿಯ ತಣಿಸಿ
ಹಸಿರ ದೇವಿಯ ಮೆರೆಸಿ ||2||

ತರು ಬೇರ ಧರೆಯೊಳಗಿಳಿಸಿ
ಅರಸುವುದು ನೀರಸೆಲೆಯ
ಮಣ್ಣದೋ ಬಿರಿಬಿರಿದು
ರಚಿಸಿಹುದು ನಕ್ಷೆಯ
ಅಕ್ಷಿತೆರೆದು ವೀಕ್ಷಿಸಿರಿ
ವಾಯು ಬೆಳ್ಮುಗಿಲು ವರುಣರಾಯ||3||


ದೂರ ತೀರದ ದೃಷ್ಟಿ
ಹಚ್ಚ ಹಸಿರಿನ ಸೃಷ್ಟಿ
ತಂಪು ತುಂತುರು ವೃಷ್ಟಿ
ಭುವಿಯೊಡಲು ಸಂತುಷ್ಟಿ||4||


ಮಳೆಗೆ ಇಳೆ ಕಳೆಯಾಗಿ
ಕೆಳಗಿಳಿದು ಅಂತರ್ಜಲವಾಗಿ
ಸಂಪದ್ಭರಿತ ನೆಲೆಯಾಗಿ
ಭರವಸೆಯ ಬೆಳಕಾಗಿ
ಜೀವಸಂಕುಲಕೆ ಶ್ರೀರಕ್ಷೆಯಾಗಲಿ ||5||


                  🌲🌳


✍️ .. ಅನಿತಾ ಜಿ.ಕೆ.ಭಟ್
11-05-2020.





ಗದ್ದೆಯ ಸೊಬಗು



🌴 ಗದ್ದೆಯ ಸೊಬಗು🌴
ನಯನವರಳಿಸಿ ನಭವ ದಿಟ್ಟಿಸಲು
ಕಾರ್ಮೋಡಗಳ ಚಿತ್ರ ಸಾಲು ಸಾಲು
ಹಸಿರಕರೆಗೆ ಮೋಡ ಪನ್ನೀರ ಸುರಿಸಲು
ಭೂದೇವಿಯ ಮಡಿಲಿಗೆ ಹರುಷ ಹೊನಲು||1||


ಗುಡುಗು ಸಿಡಿಲ ಆರ್ಭಟಕೆ
ಮೋಡದ ಮರೆಯಲಿ ರವಿಯ ಇರುವಿಕೆ
ಭುವಿಯು ಬೇರನು ತಬ್ಬಿದೆ ಮರದ ಅಂದಕೆ
ರೈತ ಹೊರಟಿಹನಂತೆ ಹೊಲವ ಉಳಲಿಕೆ ||2||


ಜೋಡಿ ಎತ್ತು ಹೊಲವನುತ್ತು
ಬಿತ್ತುವನು ಗದ್ದೆಯಲಿ ಭತ್ತ
ಕೊಡುವನು ರೈತ ನಮಗೆ ತುತ್ತು
ಬೆಟ್ಟ ಗುಡ್ಡಗಳು ಸುತ್ತಮುತ್ತ ||3||


ಹಸಿರು ಪೈರು ಪ್ರಕೃತಿಯ ಐಸಿರಿ
ಸುತ್ತಿದೆ ಪಚ್ಚೆ ಮರಗಳ ವನಸಿರಿ
ಗದ್ದೆ ಬದುವಿನ ಕಾಲುದಾರಿ
ರೈತ ನಡೆವನು ಇಲ್ಲಿ ಪಾದವೂರಿ ||4||


ಇದು ಕೊನೆಯಿರದ ರಹದಾರಿ
ನೋಡಿ ನೇಗಿಲಯೋಗಿಯ ಶ್ರಮದ ಪರಿ
ಆಧುನಿಕತೆ ಸೋಕಿಲ್ಲ;ತೆರಳಿಲ್ಲ ಹೊಲವ ಮಾರಿ
ಬೆವರ ಸುರಿಸುವ ರೈತ ನಮಗೆಲ್ಲ ಮಾದರಿ ||5||


ತನ್ನ ಕುಂಚದಿ ಹಸಿರ ಚಿತ್ರ ಬರೆದಿಹ ರೈತ ಕಲಾವಿದ
ಹಸಿರ ಬೆಳೆಸಿ ನಾಡ ಉಳಿಸಿದ ಕೃಷಿಯ ಕೋವಿದ
ಬದುವಿನಲ್ಲಿ ನಡೆದು ನಡೆದು ತನ್ನ ಜೀವನ ಸವೆಸಿದ||6||


  🌴🌲🌴🌲🌴🌲🌴🌴


✍️...ಅನಿತ ಜಿ.ಕೆ.ಭಟ್.
11-05-2020.



Monday, 25 May 2020

ಪಪ್ಪಾಯ ಬಾತ್


           
        

      ಪಪ್ಪಾಯ ಬಾತ್
 
      ಪಪ್ಪಾಯ ಹಣ್ಣಿನಲ್ಲಿ ಯಥೇಚ್ಛವಾಗಿ ಆಂಟಿ ಆಕ್ಸಿಡೆಂಟ್ ಗಳಿವೆ.ದೇಹಕ್ಕೆ ರೋಗರುಜಿನಗಳು ಮುತ್ತಿಕೊಳ್ಳುವುದನ್ನು ಇವು ತಡೆಯುತ್ತವೆ.ಆಗಾಗ ಪಪ್ಪಾಯ ಹಣ್ಣನ್ನು ಸೇವಿಸುತ್ತಿದ್ದರೆ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.ವಿಟಮಿನ್ ಎ ಮತ್ತು ವಿಟಮಿನ್ ಸಿ ಅಂಶಗಳು ಹೇರಳವಾಗಿವೆ.ಹಣ್ಣನ್ನು ಹಸಿಯಾಗಿಯೇ ತಿಂದರೆ ರುಚಿ ಹಾಗೂ ಆರೋಗ್ಯಕರ.ನಿತ್ಯದ ಅಡುಗೆಯಲ್ಲೂ ಬಳಸಬಹುದು.ಸಿಹಿ ತಿಂಡಿಯೂ ತಯಾರಿಸಬಹುದು.ಪಪ್ಪಾಯ ಬಾತ್ ಮಾಡುವುದು ಹೇಗೆ ನೋಡೋಣ.


ಬೇಕಾಗುವ ಸಾಮಗ್ರಿಗಳು:-

ಎರಡೂವರೆ ಕಪ್ ಪಪ್ಪಾಯಿ ಹಣ್ಣಿನ ತುಂಡುಗಳು, ಒಂದು ಕಪ್ ರವೆ/ಸಜ್ಜಿಗೆ, ಒಂದು ಕಪ್ ತೆಂಗಿನ ತುರಿ, ಕಪ್ ಸಕ್ಕರೆ,ಅರ್ಧ ಕಪ್ ತುಪ್ಪ.ಏಲಕ್ಕಿ ಪುಡಿ, ಗೋಡಂಬಿ ,ದ್ರಾಕ್ಷಿ, ಬಾದಾಮಿ.

ಮಾಡುವ ವಿಧಾನ:-

     ಪಪ್ಪಾಯಿ ಹಣ್ಣಿನ ತುಂಡುಗಳು ಮತ್ತು ಹಸಿ ತೆಂಗಿನಕಾಯಿ ತುರಿಯನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ರವೆಯನ್ನು ಹುರಿದು ಕೊಂಡು ಎರಡು ಕಪ್ ನೀರು ಹಾಕಿ ಬೇಯಿಸಿ.ನಂತರ ರುಬ್ಬಿದ ಮಿಶ್ರಣವನ್ನು ,ಸಕ್ಕರೆಯನ್ನೂ ಹಾಕಿ ತಿರುವಿ.ಆಗಾಗ ಮೇಲಿಂದ ತುಪ್ಪ ಹಾಕಿಕೊಳ್ಳಿ.ಪಾಕ ತಳ ಬಿಟ್ಟು ಬರುವಾಗ ಏಲಕ್ಕಿ ಪುಡಿ ಬೆರೆಸಿ.ತುಪ್ಪ ಸವರಿದ ತಟ್ಟೆಗೆ ಹಾಕಿ.ಗೋಡಂಬಿ ,ದ್ರಾಕ್ಷಿ ,ಬಾದಾಮಿಯಿಂದ ಅಲಂಕರಿಸಿದರೆ ಪಪ್ಪಾಯ ಬಾತ್ ಸವಿಯಲು ಸಿದ್ಧ.

✍️... ಅನಿತಾ ಜಿ.ಕೆ.ಭಟ್.
23-05-2020.

ಜೀವನ ಮೈತ್ರಿ ಭಾಗ ೮೧(81)





ಜೀವನ ಮೈತ್ರಿ ಭಾಗ ೮೧



         ಗಾಯತ್ರಿ ರೂಮ್ ಗೆ ತೆರಳಿದವಳು ಚೂಡಿದಾರ್ ಧರಿಸಿ ಹೊರ ಬಂದಳು. ಶಂಕರ ಶಾಸ್ತ್ರಿಗಳು ಕಣ್ಣಲ್ಲಿ ಮಡದಿಗೆ" ಇಂತಹ ಕೆಲಸ ಬೇಡ " ಎಂದು ಸೂಚಿಸಿದರು. ಆದರೆ ಅವಳು ಸಾಕಷ್ಟು ಯೋಚನೆ ಮಾಡಿ ಈ ನಿರ್ಧಾರಕ್ಕೆ ಬಂದ ಕಾರಣ ಹಿಂದೆ ಮುಂದೆ ನೋಡಲಿಲ್ಲ. ಗಂಡನಲ್ಲಿ  ಕಾರಿನ ಕೀ ಕೇಳಿದಳು. ಏನೂ ಮಾತನಾಡಲಿಲ್ಲ ಶಂಕರ ಶಾಸ್ತ್ರಿಗಳು. ಗಂಡನ ಅಸಡ್ಡೆಗೆ ಸೊಪ್ಪುಹಾಕದೇ ತಾನೇ ಕೀ ತೆಗೆದುಕೊಂಡು ವ್ಯಾನಿಟಿ ಬ್ಯಾಗ್ ಹಾಕಿಕೊಂಡು ಮನೆಯಿಂದ ಹೊರಗೆ ಅಡಿಯಿಟ್ಟಳು.


          ಅಷ್ಟರಲ್ಲಿ ತಾಯಿ ಅತ್ತಿಗೆಯಂದಿರು ಒತ್ತಾಯ ಮಾಡಿದ್ದಕ್ಕಾಗಿ ತವರಿನಲ್ಲಿ ಒಂದು ದಿನ ಕುಳಿತಿದ್ದ ಸಾವಿತ್ರಿ "ನಾನು ಕೂಡ ನಿಮ್ಮ ಜೊತೆ ಬರುತ್ತೇನೆ. ನೀವು ಹೋಗುವ ದಾರಿಯಲ್ಲಿ ನನ್ನನ್ನು ಇಳಿಸಿ ಬಿಡಿ,ಅಲ್ಲಿಂದ ಬಸ್ಸಿನಲ್ಲಿ ತೆರಳುತ್ತೇನೆ" ಎಂದರು.. ಗಾಯತ್ರಿ ಸ್ವಲ್ಪ ಕಾದು ನಿಂದಳು. ಮಹಾಲಕ್ಷ್ಮಿ ಅಮ್ಮ "ನೀನು ಯಾಕೆ ಅವಳ ಜೊತೆ ಹೋಗುವುದು .?"ಎಂದು ಸಾವಿತ್ರಿಯಲ್ಲಿ ಖಾರವಾಗಿ ಗಾಯತ್ರಿಗೆ ಕೇಳದಂತೆ ನುಡಿದರು. ಆದರೆ ಸಾವಿತ್ರಿಗೆ ಅನಿವಾರ್ಯವಾಗಿತ್ತು ..ಆಗಲೇ ಗಂಡನ ಕರೆ ಬಂದಾಗಿತ್ತು... "ಯಾಕೆ ತವರಿನಿಂದ ಬಂದಿಲ್ಲ..?  " ಎಂದು.


          ಹೊರಗೆ ಕಾರು ಮೇಲಿಂದ ಮೇಲೆ ಒರೆಸುತ್ತಾ ನಿಂತಿದ್ದ ಗಾಯತ್ರಿ  ಭಾವನಲ್ಲಿ... "ನಾನು ಹೋಗಿ ಸಂಜನಾಳನ್ನು  ಕರೆದುಕೊಂಡು ಬರುತ್ತೇನೆ.. "ಎಂದು ಹೇಳಿದಳು. ಭಾಸ್ಕರ ಶಾಸ್ತ್ರಿಗಳು ಮಾತನಾಡಲಿಲ್ಲ.ಸುಮ್ಮನಿದ್ದು ಆಕೆಯ ಮಾತುಗಳನ್ನು ಕೇಳಿಸಿಕೊಂಡು ತಮ್ಮ ಕೆಲಸದತ್ತ  ಹೊರಳಿದರು.

       ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯ ಹೆಚ್ಚು ಕೊಟ್ಟರೆ ಹೀಗೆ ಆಗುವುದು. ಸಮಯ ಸಂದರ್ಭಕ್ಕೆ ತಕ್ಕಂತೆ ವಿವೇಚನೆ ಅವರಿಗಿಲ್ಲ. ಈ ರೀತಿಯ ನಡೆಯಿಂದ ಬೀಗರ ಮುಂದೆ ನಮಗೆ ಮುಜುಗರವಾಗುವುದು. ಅದನ್ನೆಲ್ಲಾ ಆಕೆಗೆ ಹೇಳಿದರೆ ಅರ್ಥವಾಗದು. ಹೇಳಬೇಕಾಗಿದ್ದ ತಮ್ಮನೂ ಬಾಯಿ ಮುಚ್ಚಿ ಕುಳಿತಿದ್ದಾನೆ. ಇನ್ನು ನಾನು ಒಂದು ಮಾತು ಹೆಚ್ಚು ಹೇಳಿದರೆ ಭಾವ  ಜಗಳ ಮಾಡಿದರು ಎಂದಾಗುತ್ತದೆ... ಪಟ್ಟಣದ ಪದ್ಧತಿಯೇ ಬೇರೆ .ಹಳ್ಳಿಯ ಸಂಸ್ಕಾರ ಅವರಿಗೆ ಹೇಗೆ  ಅರ್ಥವಾಗುವುದು...?.. ಎಂದು ಭಾಸ್ಕರ ಶಾಸ್ತ್ರಿಗಳು ಯೋಚನಾಲಹರಿಯಲ್ಲಿ  ಮುಳುಗಿದರು..


           ಮಡದಿ ಅಂಗಳದಿಂದ ಹೊರಡುತ್ತಿದ್ದಂತೆಯೇ ಚಾವಡಿಯಲ್ಲಿ ನಿಂತು ನೋಡಿದರು ಶಂಕರ ಶಾಸ್ತ್ರಿಗಳು..
ನನಗೆ ಅಮ್ಮ, ಅಣ್ಣನ ಮುಂದೆ ಎದುರು ಮಾತನಾಡುವ ಧೈರ್ಯವಿಲ್ಲ. ಬೇಕಾಗಿಯೂ ಇಲ್ಲ. ಆದರೆ ಗಾಯತ್ರಿ ಮಾತ್ರ ಹಾಗಲ್ಲ.. ಅವಳಿಗೆ ಸರಿ ಎಂದು ಕಂಡದ್ದನ್ನು ಸರಿಯೆಂದೇ ಒಪ್ಪಿಕೊಳ್ಳುತ್ತಾಳೆ.. ಸರಿಯಲ್ಲ ಎಂದಾದರೆ ಯಾವ ವಾದ-ವಿವಾದಕ್ಕೆ ಬೇಕಾದರೂ ಸಿದ್ಧ.ಅವಳಿಗೆ ನಾನು ಕೊಡಿಸಿದ ವಿದ್ಯಾಭ್ಯಾಸ, ಸ್ವಾತಂತ್ರ್ಯ, ವಾಹನ ಚಾಲನಾ ತರಬೇತಿ ಇಂದು ಅವಳನ್ನು ಮಗಳ ಪರವಾಗಿ ನಿಂತು ಅವಳನ್ನು ವಾಪಾಸು ಕರೆಸುವಂತೆ ಮಾಡಿದೆ.. ಭೇಷ್ ಗಾಯತ್ರಿ.. ನಿನ್ನಂತಹ ಮಡದಿಯನ್ನು ಪಡೆದ ನಾನೇ ಧನ್ಯ...!! ನಾನು ಕೊಟ್ಟ ಸ್ವಾತಂತ್ರ್ಯವನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸುತ್ತಿರುವೆ... ಎಂದು ತನ್ನ ಮಡದಿಯನ್ನು ನೋಡಿ ಹೆಮ್ಮೆ ಪಟ್ಟುಕೊಂಡರು ಶಂಕರ ಶಾಸ್ತ್ರಿಗಳು.


           ಶಂಕರ ಶಾಸ್ತ್ರಿ ಮತ್ತು ಭಾಸ್ಕರ ಶಾಸ್ತ್ರಿ ಇಬ್ಬರೂ ಒಡಹುಟ್ಟಿದವರಾದರೂ ಅವರ ಆಲೋಚನಾ ಶೈಲಿ ವಿಭಿನ್ನ. ಅದಕ್ಕೆ ಅವರು ಈಗ ವಾಸಿಸುತ್ತಿರುವ ವಾತಾವರಣವು ಕಾರಣವಾಗಿರಬಹುದು. ಏನೇ ಆಗಿದ್ದರೂ ಕೂಡ ಶಂಕರ ಶಾಸ್ತ್ರಿಯ ಗುಣದಿಂದಾಗಿ ಅವರ ಕುಟುಂಬಕ್ಕೆ ಈ ಸನ್ನಿವೇಶದಲ್ಲಿ ಅನುಕೂಲವಾಗಿದ್ದಂತೂ ಸತ್ಯ. ಭಾಸ್ಕರ ಶಾಸ್ತ್ರಿಗಳ ನಡೆಯಿಂದಾಗಿ ಮಂಗಳಮ್ಮ ಮಗಳ ಜೊತೆ ಅವಳ ಗಂಡನ ಮನೆಯಲ್ಲಿ ಮೊದಲ ದಿನ ಕೂಡ ನಿಲ್ಲಲಾಗಲಿಲ್ಲ ಎಂಬುದು ಕೂಡಾ ಅಷ್ಟೇ ಕಟು ಸತ್ಯ.


         ದಾರಿಯ ಮಧ್ಯದಲ್ಲಿ ಸಾವಿತ್ರಿಯನ್ನು ಇಳಿಸಿ ಮುಂದೆ ಹೋದರು ಗಾಯತ್ರಿ. ಮೈತ್ರಿಯ ಮನೆಯಂಗಳದಲ್ಲಿ ಕಾರ್ ನಿಲ್ಲುತ್ತಿದ್ದಂತೆಯೇ ಸಂಜನಾ ಓಡಿಬಂದಳು.. ಅಮ್ಮ ಯಾವುದೇ ಫೋನ್ ಕರೆಮಾಡದೆ ಬಂದದ್ದು ಅವಳಿಗೆ ವಿಶೇಷ ಅನ್ನಿಸಿತು.ಊರಿಗೆ ಬಂದಾಗ ಅಮ್ಮ ಡ್ರೈವಿಂಗ್ ಮಾಡುವುದು ಬಹಳ ಕಡಿಮೆ.ಏಕೆಂದರೆ ಶಾಸ್ತ್ರೀ ನಿವಾಸದಲ್ಲಿ ಅಜ್ಜ-ಅಜ್ಜಿ ,ದೊಡ್ಡಪ್ಪ ಏನಾದರೂ ಹೇಳಬಹುದು ಎಂದು ಅಪ್ಪನಿಗೆ ಆತಂಕ. ಆದ್ದರಿಂದಲೇ ಇಲ್ಲಿ ಡ್ರೈವಿಂಗ್ ಮಾಡುವುದು ಬೇಡ , ಬೆಂಗಳೂರಲ್ಲಿ ಮಾತ್ರ ಸಾಕು ಎಂದು ಅಮ್ಮನಿಗೆ ಸದಾ ಹೇಳುತ್ತಿದ್ದರು ಅಪ್ಪ. ಆದರೆ ಇಂದು ಮಾತ್ರ ಅಮ್ಮನೇ ಬಂದದ್ದು ಅವಳಿಗೆ ಬಹಳ ಖುಷಿಯಾಗಿತ್ತು.

           ಚಿಕ್ಕಮ್ಮನನ್ನು ಕಾಣುತ್ತಲೇ ಮೈತ್ರಿಯ ಮುಖ ಸಂತೋಷದಿಂದ ಅರಳಿತು. ಮಮತಾ ನಗುನಗುತ್ತಲೇ ಚಾವಡಿಗೆ ಬಂದು ಬಾಯಾರಿಕೆ ಕೊಟ್ಟು ಉಪಚರಿಸಿದರು. ಮಾತನಾಡುತ್ತಾ ಗಾಯತ್ರಿಯಲ್ಲಿ ... "ಇಲ್ಲಿ ಮುಟ್ಟಾದರೆ ಪ್ರತ್ಯೇಕವಾಗಿ ಕೂಡುವ ಸಂಪ್ರದಾಯ ನಾವು ಪಾಲಿಸುತ್ತಿಲ್ಲ..ಆದರೆ ಮೈತ್ರಿಗೆ ಇದು ಮೊದಲ ಸಲವಾಗಿದ್ದರಿಂದ ..ಇನ್ನೂ ದಿಂಡಿನ ಹೋಮದ ಕಾರ್ಯಕ್ರಮವಾಗಿಲ್ಲವಾದ್ದರಿಂದ ಮಾತ್ರ ಈ ಬಾರಿ ಆಚರಣೆ ಮಾಡುವಂತೆ ಹೇಳಿದೆ .. ಆದರೂ ಅವಳಿಗೆ ಒಬ್ಬಳಿಗೆ ಉದಾಸಿನವಾಗುವುದು ಬೇಡ ಎಂದು ಸಂಜನಾ ಳನ್ನು ಕೂಡ ಅದೇ ರೂಮಿನಲ್ಲಿ ಮಲಗುವಂತೆ ಹೇಳಿದೆ.."ಎಂದಾಗ ಗಾಯತ್ರಿಗೆ ಅವರ ಸಹೃದಯತೆ ಮೆಚ್ಚುಗೆಯಾಯಿತು. ಇವರಾದರೂ ನಮ್ಮ ಮನೆಯವರಂತೆ ಸಂಪ್ರದಾಯ ಸಂಪ್ರದಾಯ ಎಂದು ಬೊಬ್ಬಿಡುವವರಲ್ಲ. ಸಂದರ್ಭವನ್ನು ಅರ್ಥೈಸಿಕೊಳ್ಳುತ್ತಾರೆ. ಮೈತ್ರಿಗೆ ಒಳ್ಳೆಯ ಅತ್ತೆಯೇ ಸಿಕ್ಕಿದ್ದಾರೆ.. ನನ್ನತ್ತೆಯಂತಲ್ಲ..!!! ಎಂದು ಸಮಾಧಾನದ ನಿಟ್ಟುಸಿರುಬಿಟ್ಟರು ಗಾಯತ್ರಿ.



          ಚಿಕ್ಕಮ್ಮ ತಂಗಿಯನ್ನು ಕರೆದುಕೊಂಡು ಹೊರಡುತ್ತಿದ್ದಂತೆಯೇ  ಮೈತ್ರಿಯ ಮುಖ ಬಾಡಿತು." ನಾವೆಲ್ಲ ಇದ್ದೇವೆ ನಿನಗೆ "ಎಂದು ಮಮತಾ ಸೊಸೆಗೆ  ಹೇಳಿದರು.. ಗಾಯತ್ರಿ ಅಳಿಯನಲ್ಲಿ "ಅವಳಿಗೆ ಬೇಜಾರು ಆಗದಂತೆ ನೋಡಿಕೋ.." ಎಂದು ಹೇಳಿ ನಸುನಕ್ಕರು..ಅವನು ನಗುನಗುತ್ತಲೇ "ಆಯ್ತು ಅತ್ತೆ.. ಹಾಗೆ ಮಾಡುತ್ತೇನೆ ..ಅವಳಿಗೆ ಒಂದು ಚೂರೂ ನೋವಾಗದಂತೆ ನೋಡಿಕೊಳ್ಳುತ್ತೇನೆ" ಎಂದು ಹೇಳಿದ ಕಿಶನ್.ಅವನಿಗೆ ಬೇಕಾಗಿದ್ದು ಕೂಡ ಅದುವೇ.. ಸಂಜನಾ ಜೊತೆಯಲ್ಲಿದ್ದರೆ ಮುದ್ಗೊಂಬೆಯಲ್ಲಿ ಮಾತನಾಡಲು ಇರಿಸುಮುರಿಸು ಆಗುತ್ತಿತ್ತು.. ಇನ್ನು ಭಯವಿಲ್ಲ ಎಂದು .. ಖುಷಿಯಾದ.

        ಸಂಜನಾಳನ್ನು ಕರೆದುಕೊಂಡರು ಗಾಯತ್ರಿ ಶಾಸ್ತ್ರಿ ನಿವಾಸಕ್ಕೆ ಬಂದರು. ಮಾವ ಶ್ಯಾಮಶಾಸ್ತ್ರಿಗಳ ಮುಖ ಊದಿಕೊಂಡಿತ್ತು.  ಅತ್ತೆ,ಭಾವ ಮುಖ ಗಂಟಿಕ್ಕಿಕೊಂಡಿದ್ದರು.. ಸಂಜನಾಗೆ ಅಜ್ಜ ಅಜ್ಜಿಯ ಮುಖದಲ್ಲಿ ಆದ ಬದಲಾವಣೆ ಸೂಕ್ಷ್ಮವಾಗಿ ಅರಿವಿಗೆ ಬಂತು.ಅಮ್ಮ ಅವಳಿಗೆ ಮೊದಲೇ ಸೂಚಿಸಿದ್ದರು "ನಿನ್ನನ್ನು ವಾಪಸು ಕರೆತರುವುದು ಅವರಿಗೆ ಇಷ್ಟವಿರಲಿಲ್ಲ .ಅದರಿಂದಾಗಿ  ಪರಿಸ್ಥಿತಿ, ಪ್ರತಿಕ್ರಿಯೆ ಹೇಗಿರುವುದೋ ಗೊತ್ತಿಲ್ಲ. ಸ್ವಲ್ಪ ಜಾಗ್ರತೆಯಿಂದ ಇರು " ಎಂದು.ಅಮ್ಮನ ಎಚ್ಚರಿಕೆಯಿಂದ ಸಂಜನಾ ರೂಮಿನಲ್ಲಿ ತಂಗಿಯೊಂದಿಗೆ ಹೆಚ್ಚು ಕಾಲಕಳೆದಳು.


        ಗಾಯತ್ರಿ ಅಡಿಗೆ ಮನೆಗೆ ತೆರಳಿ ಅಕ್ಕನಿಗೆ ಅಡುಗೆಯಲ್ಲಿ ಸಹಾಯ ಮಾಡುತ್ತಾ ಮೈತ್ರಿಯ ಮನೆ ವಿಷಯಗಳನ್ನೆಲ್ಲ ಹೇಳುತ್ತಿದ್ದಳು .."ನಿನ್ನ ಮಗಳಿಗೆ ಒಳ್ಳೆಯ ಅತ್ತೆ ಸಿಕ್ಕಿದ್ದಾರೆ "ಎಂದು ಹೇಳಿದಾಗ ಮಂಗಳಮ್ಮನಿಗೆ ಸಂತೃಪ್ತಿಯಿಂದ ಗಂಟಲುಬ್ಬಿ ಬಂತು.."ಏನೇ ಹೇಳು ಗಾಯತ್ರಿ... ನೀನು ಮಾತ್ರ ಧೈರ್ಯವಂತೆ ..ನಿನ್ನಷ್ಟು ಧೈರ್ಯ ನನಗೆ ಇದ್ದಿದ್ದರೆ ಕಥೆಯೇ ಬೇರೆಯಾಗುತ್ತಿತ್ತು.." ಎಂದು ತನ್ನ ಮನದೊಳಗಿನ ಸಂಕಟವನ್ನು ತಂಗಿಯೊಡನೆ ಹಂಚಿಕೊಂಡರು.

          **********


        ಸಾವಿತ್ರಿ ಮನೆಗೆ ಬರುತ್ತಿದ್ದಂತೆ ಆಕೆಯ ಗಂಡ ಕ್ರೋಧದಿಂದ ಉರಿಯುತ್ತಿದ್ದರು.

"ಎರಡು ದಿನ ಕಾರ್ಯಕ್ರಮಕ್ಕೆ ಹೋಗಿ ಬರುತ್ತೇನೆ ಎಂದು ಹೋದವಳು ಮೂರನೇ ದಿನವೂ ಅಲ್ಲಿ ಕುಳಿತದ್ದು ಏಕೆ ..?"ಎಂದು ಅಬ್ಬರಿಸಿದರು.

ಸಾವಿತ್ರಿ ನಾಲಿಗೆ  ಹೊರಳಲಿಲ್ಲ..

ತನ್ನ ಚಾಳಿಯನ್ನು ಮುಂದುವರಿಸುತ್ತಾ.. ಅತ್ತೆಯನ್ನು ಮಾವನನ್ನು ..ಎಲ್ಲರನ್ನು ನಿಂದಿಸತೊಡಗಿದರು.

ಸಾವಿತ್ರಿಗೆ ಅಳುವೇ ಬಂದಿತ್ತು. ಯಾವತ್ತೋ ಒಮ್ಮೆ ತವರಿಗೆ ಹೋಗುವುದು.. ಪ್ರತಿಸಾರಿಯೂ ಅಮ್ಮ ಅಸಡ್ಡೆಯನ್ನು ಮಾಡುತ್ತಿದ್ದರು... ಈ ಸಾರಿ ಮಾತ್ರ ಸ್ವಲ್ಪ ಬದಲಾಗಿದ್ದರು.. ಸಾವಿತ್ರಿ ಸಾವಿತ್ರಿ ಎನ್ನುತ್ತಾ ಪ್ರೀತಿಯಿಂದ ಮಾತನಾಡಿ ಸುವಂತೆ ತೋರಿತ್ತು. ಇನ್ನೊಂದು ದಿನ ಇದ್ದು ಹೋಗು.. ಎಂದ ಅಮ್ಮ ,ಅತ್ತಿಗೆಯರ ಮಾತನ್ನು ಕೇಳಿದ್ದು ತಪ್ಪೇ ..? ಎಂದು ಯೋಚಿಸುತ್ತಾ ಇಂತಹ ಸಂಕಟ ಯಾವತ್ತು ಕೊನೆಯಾಗುತ್ತೋ..? ಎಂದು ಕಣ್ಣೀರೊರೆಸಿಕೊಂಡು ತನ್ನ ಕೆಲಸದತ್ತ ಸಾಗಿದಳು.


          ****

       ಮೈತ್ರಿಯ ಮನೆಯಲ್ಲಿ ಈಗ ಮೌನ ಆವರಿಸಿದಂತೆ ಆಗಿತ್ತು. ಅವಳಿಗೆ ತಂಗಿ ಸಂಜನಾ ಬಿಟ್ಟುಹೋದಾಗ ಖಾಲಿತನ ಬಂದಿತ್ತು. ಆ ಜಾಗವನ್ನು ತುಂಬಿಸಲು ಕಿಶನ್ ನಿಂದ ಸಾಧ್ಯವಾಗಲಿಲ್ಲ. ಆಗಾಗ ಬಂದು ಕಿಶನ್ ಮಾತನಾಡುತ್ತಿದ್ದರೂ ಮೈತ್ರಿ ಮಾತ್ರ ಮೌನಕ್ಕೆ ಜಾರಿದಂತೆ ತೋರುತ್ತಿತ್ತು. ಅತ್ತೆ ಮಮತಾ ಸೊಸೆಗೆ ಬೇಕಾದ ಎಲ್ಲವನ್ನೂ ತಂದು ಕೋಣೆಯ ಬಳಿ ನೀಡುತ್ತಿದ್ದರು.. ಮಾವ ಉದಾಸಿನವಾಗದಂತೆ ಒಂದಷ್ಟು ಕಾದಂಬರಿ ಹಳೆಯ ದಿನಗಳನ್ನು ತಂದುಕೊಟ್ಟರು...


       ರಾತ್ರಿ ಮಲಗಿದ ಮೇಲಂತೂ ಕಿಶನ್ ಗೆ ಮದುವೆಯ ಮೊದಲಿನದೇ ಪರಿಸ್ಥಿತಿ.ಮುದ್ಗೊಂಬೆಯನ್ನು ನೆನೆಯುತ್ತಾ ಸಂದೇಶವನ್ನು ರವಾನಿಸುವುದು, ಹಾಯ್ಕು ಚುಟುಕುಗಳನ್ನು ಬರೆದು ಖುಷಿ ಪಡುವುದು.. ಇರ್ಲಿ..ಇನ್ನೆರಡೇ ದಿನ.. ಆಮೇಲೆ ನಮ್ಮಿಬ್ಬರ ಪ್ರೀತಿಗೆ ಬ್ರೇಕೇ ಇಲ್ಲ.. ಎಂದು ಮನದಲ್ಲೇ ಕನಸುಕಾಣುತ್ತಿದ್ದ..




ಮುಂದುವರಿಯುವುದು..


✍️...ಅನಿತಾ ಜಿ.ಕೆ. ಭಟ್.
25-05-2020.

ಹೆಚ್ಚಿನ ಓದಿಗಾಗಿ...
ಬರಹದ ಕೆಳಗಡೆ ಇರುವHome,view web version,>ಸೌಲಭ್ಯಗಳನ್ನು ಬಳಸಿಕೊಳ್ಳಬಹುದು...

Friday, 22 May 2020

ಗುಜ್ಜೆ, ಎಳೆಹಲಸಿನ ಕಾಯಿಯ ಪಕೋಡ, ಮಂಚೂರಿ ,ಪಲ್ಯ ,ಸಾಂಬಾರ್




    ಬೇಸಿಗೆ ಬಂದರೆ ಸಾಕು ಹಲಸಿನ ಕಾಯಿಯು ನಮ್ಮ ಅಡುಗೆಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಳ್ಳುತ್ತದೆ.ಎಳೆ ಹಲಸಿನ ಕಾಯಿಯಿಂದ ಹಿಡಿದು ಹಣ್ಣಿನವರೆಗೂ ನಾನಾ ಪಾಕ ವೈವಿಧ್ಯಗಳನ್ನು ತಯಾರು ಮಾಡಬಹುದು.ಬಲಿತ ಹಲಸಿನ ಕಾಯಿ ಮತ್ತು ಹಣ್ಣಿಗಿಂತ ಎಳೆಯ ಹಲಸಿನ ಕಾಯಿ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು ಎನ್ನುತ್ತಾರೆ ಹಿರಿಯರು.ಕಾರಣ ಇದರಲ್ಲಿ ವಾಯುವಿನ ಅಂಶ ಕಡಿಮೆಯಿದ್ದು ಕನರು/ಒಗರು ರುಚಿಯನ್ನು ಹೊಂದಿರುತ್ತದೆ.ಗುಜ್ಜೆಯಿಂದ ಮಾಡುವ ನಾಲ್ಕು ಸವಿಪಾಕಗಳನ್ನು ತಿಳಿಯೋಣ.

          ಗುಜ್ಜೆ/ಎಳೆಹಲಸಿನ ಕಾಯಿ ಪಲ್ಯ

   ಗುಜ್ಜೆಯಿಂದ ತಯಾರಿಸಬಹುದಾದ ರುಚಿಕರವಾದ ಪಲ್ಯವನ್ನು ಹೇಗೆ ಮಾಡುವುದು ಎಂದು ನೋಡೋಣ..

ಬೇಕಾದ ಸಾಮಗ್ರಿಗಳು:-

ಎರಡು ಕಪ್ ಹಲಸಿನ ಹೋಳುಗಳು
ನೆನೆಸಿದ ಕಡಲೆಕಾಳು
ಕಾಲು ಕಪ್ ತೆಂಗಿನ ತುರಿ
ಮೆಣಸಿನ ಪುಡಿ -2 ಚಮಚ
ಅರಿಶಿನ ಪುಡಿ-1ಚಮಚ
ಉಪ್ಪು-2 ಚಮಚ
ಬೆಲ್ಲ-2 ಚಮಚ
ನೀರು
ಒಗ್ಗರಣೆಯ ಸಾಮಗ್ರಿಗಳು


ಮಾಡುವ ವಿಧಾನ:-

       ಕಡಲೆ ಕಾಳನ್ನು ಏಳೆಂಟು ಗಂಟೆಗಳ ಕಾಲ ನೆನೆಸಿಟ್ಟುಕೊಳ್ಳಬೇಕು.ಕುಕ್ಕರಿನಲ್ಲಿ ಮೂರು ಸೀಟಿ ಕೂಗಿಸಿ.ಗುಜ್ಜೆಯನ್ನು ತುಂಡುಗಳಾಗಿ ಮಾಡಿ ನೀರಿನಲ್ಲಿ ಹಾಕಿಡಿ.ಸ್ವಲ್ಪ ಹೊತ್ತಿನ ಬಳಿಕ ಕುಕ್ಕರಿನಲ್ಲಿ ಸ್ವಲ್ಪ ನೀರು ಹಾಕಿ ಮೂರು ಸೀಟಿ ಕೂಗಿಸಿ.ಪ್ರೆಶರ್ ಹೋದ ಬಳಿಕ ಗುಜ್ಜೆಯ ತುಂಡುಗಳನ್ನು ಪುಡಿಮಾಡಿಕೊಳ್ಳಿ.

        ಬಾಣಲೆಗೆ ತೆಂಗಿನೆಣ್ಣೆ ಹಾಕಿ ಅದರಲ್ಲಿ ಹುಡಿ ಮಾಡಿದ ಗುಜ್ಜೆ,ಬೇಯಿಸಿದ ಕಡಲೆಕಾಳು, ಮೆಣಸಿನ ಪುಡಿ,ಅರಶಿನ ಪುಡಿ, ಉಪ್ಪು,ಬೆಲ್ಲ, ಸ್ವಲ್ಪ ನೀರು ಹಾಕಿ ಬೇಯಿಸಿ.ಕೊನೆಯಲ್ಲಿ ತೆಂಗಿನಕಾಯಿ ತುರಿ ಹಾಕಿ ಮಗುಚಿ ಕೆಳಗಿಳಿಸಿ.


       ನಂತರ  ಒಗ್ಗರಣೆಗೆ ಎಣ್ಣೆ ಧಾರಾಳವಾಗಿ ಬಳಸಿ.ಉಳಿದ ಪಲ್ಯಗಳಿಗಿಂತ ಇದಕ್ಕೆ ಎಣ್ಣೆ ಜಾಸ್ತಿ ಇದ್ದರೇ ರುಚಿ.ಸಾಸಿವೆ, ಉದ್ದಿನಬೇಳೆ,ಕೆಂಪುಮೆಣಸಿನ ಕಾಯಿ ಹಾಕಿ ಒಗ್ಗರಣೆ ಚಟಪಟ ಸಿಡಿಸಿ ,ಬಾಣಲೆಯಲ್ಲಿರುವ ಪಲ್ಯದ ಮಧ್ಯದಲ್ಲಿ ಸ್ವಲ್ಪ ಗುಂಡಿಮಾಡಿ ಕರಿಬೇವಿನ ಸೊಪ್ಪು ಹಾಕಿ.. ಒಗ್ಗರಣೆಯನ್ನು ಹಾಕಿರಿ.ಅದರ ಮೇಲೆ ಪಲ್ಯವನ್ನು ಮುಚ್ಚಿ.ಬಾಣಲೆಗೆ ಮುಚ್ಚಳ ಮುಚ್ಚಿ ಹತ್ತು ನಿಮಿಷ ಹಾಗೇ ಬಿಡಿ.ನಂತರ ಎಲ್ಲವನ್ನೂ ಮಿಶ್ರಮಾಡಿ ..ಬಿಸಿ ಬಿಸಿ ಅನ್ನದ ಜೊತೆ ಸೇವಿಸಿ...ಸೂಪರಾಗಿರುತ್ತೆ..👌👌👌👌😋😋😋😋

ಗುಜ್ಜೆ/ಎಳೆಯ ಹಲಸಿನ ಕಾಯಿ ಮಂಚೂರಿ



    ಹೋಟೇಲಿನ ವೈವಿಧ್ಯಮಯ ತಿಂಡಿಗಳಿಗೆ ಬಾಯಲ್ಲಿ ನೀರೂರಿಸದವರಿಲ್ಲ.ಗರಂ ಗರಂ ಆಗಿರುವ ತಿನಿಸುಗಳು ಮತ್ತೆ ಮತ್ತೆ ತಿನ್ನಬೇಕೆಂಬ ಆಸೆಯನ್ನು ಹುಟ್ಟಿಸುತ್ತವೆ.ಅಂತಹದೇ ರುಚಿಯನ್ನು ಮನೆಯಲ್ಲಿ ಮಾಡಬಹುದಾ..? ಮನೆಯ ಸ್ವಚ್ಛ,ಶುದ್ಧವಾದ , ರಾಸಾಯನಿಕ ರಹಿತ ತರಕಾರಿಗಳಿಂದ ಮಾಡಿದರೆ ರುಚಿ ಮತ್ತು ಗುಣಮಟ್ಟದಲ್ಲಿ ಹೋಟೇಲ್ ಗಿಂತ ಒಂದು ಸ್ತರ ಮೇಲೆಯೇ ನಿಲ್ಲುತ್ತದೆ.


      ಖಾರಖಾರವಾದ ಗೋಬಿ ಮಂಚೂರಿ ನೆನಪಾದರೆ ಆಹಾ..!! ಅದರ ರುಚಿ.. ಇನ್ನೊಮ್ಮೆ ಸವಿಯೋಣ ಎನ್ನುತ್ತದೆ.ಗೋಬಿ ಇಲ್ಲವೆಂದು ತಲೆಕೆಡಿಸಿಕೊಳ್ಳಬೇಕಾಗಿಲ್ಲ.   ಗುಜ್ಜೆ/ಎಳೆಯ ಹಲಸಿನ ಕಾಯಿಯಿಂದಲೇ ತಯಾರು ಮಾಡಿ ತಿನ್ನಬಹುದು.ಬನ್ನಿ..ಹಾಗಾದರೆ ಸರಳವಾಗಿ ಗುಜ್ಜೆ ಮಂಚೂರಿ ಹೇಗೆ ಮಾಡುವುದು ನೋಡೋಣ..


ಬೇಕಾಗುವ ಸಾಮಗ್ರಿಗಳು..

1.ಎಳೆಯ ಗುಜ್ಜೆಯ ತುಂಡುಗಳು ಎರಡು ಕಪ್
2.ಕಡಲೆ ಹಿಟ್ಟು 4 ಚಮಚ
3.ಕಾರ್ನ್ ಫ್ಲೋರ್-3 ಚಮಚ
4.ಮೈದಾ-3 ಚಮಚ
5.ಮೆಣಸಿನ ಪುಡಿ-1ಚಮಚ
6.ಉಪ್ಪು-1ಚಮಚ
7.ಶುಂಠಿಯ ಚಿಕ್ಕ ತುಂಡುಗಳು-1ಚಮಚ
8.ಬೆಳ್ಳುಳ್ಳಿ ಎಸಳು-5
9.ಟೊಮೆಟೊ -ಎರಡು
10.ನೀರುಳ್ಳಿ -ಎರಡು
11.ಕೊತ್ತಂಬರಿ ಸೊಪ್ಪು
12.ನಿಂಬೆಹುಳಿ ರಸ
13.ಬೆಲ್ಲದ ಪುಡಿ-1ಚಮಚ
14.ಜೀರಿಗೆ
15.ಎಣ್ಣೆ
16.ಹಸಿಮೆಣಸು 4


ಮಾಡುವ ವಿಧಾನ...


ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮಾಡಿಟ್ಟುಕೊಳ್ಳಿ.ಟೊಮೊಟೊ, ನೀರುಳ್ಳಿ, ಹಸಿಮೆಣಸು, ಕೊತ್ತಂಬರಿ ಸೊಪ್ಪನ್ನು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ.
ಹಲಸಿನ ಕಾಯಿಯ ತುಂಡುಗಳನ್ನು ಹದವಾಗಿ ಬೇಯಿಸಿಕೊಳ್ಳಿ(ಕುಕ್ಕರಿನಲ್ಲಿ ಹಬೆಯಲ್ಲಿ ನೀರು ಹಾಕದೆಯೂ ಬೇಯಿಸಿಕೊಳ್ಳಬಹುದು).ಅದಕ್ಕೆ ಕಡ್ಲೆ ಹಿಟ್ಟು, ಮೈದಾ, ಕಾರ್ನ್ ಫ್ಲೋರ್, ಉಪ್ಪು,ಮೆಣಸಿನ ಹುಡಿ ,ಶುಂಠಿ ಬೆಳ್ಳುಳ್ಳಿ ಪೇಸ್ಟ್ ( ಅರ್ಧಾಂಶ)ಹಾಕಿ ನೀರು ಸ್ವಲ್ಪ ಹಾಕಿ ಕಲಸಿಕೊಳ್ಳಿ.ಹಿಟ್ಟು ಗಟ್ಟಿಯಾಗಿರಲಿ.


      ಎಣ್ಣೆ ಕಾಯಲು ಇಟ್ಟು  ಕಾದಾಗ ಹಿಟ್ಟನ್ನು ಸ್ವಲ್ಪವೇ ಎಣ್ಣೆಗೆ ಬಿಡಿ.ಆದಾಗ ತೆಗೆದಿಡಿ.ನಂತರ ಇನ್ನೊಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ನಂತರ ಜೀರಿಗೆ,ಕತ್ತರಿಸಿದ ಹಸಿಮೆಣಸು,ಉಳಿದ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಟೊಮೆಟೊ, ನೀರುಳ್ಳಿ,ಬೆಲ್ಲ , ಉಪ್ಪು ಒಂದೊಂದಾಗಿ ಹುರಿಯುತ್ತಾ ಹಾಕಿಕೊಳ್ಳಿ.ನಂತರ ಎಣ್ಣೆಯಲ್ಲಿ ಬೇಯಿಸಿ ತೆಗೆದಿಟ್ಟ ಗುಜ್ಜೆಯನ್ನು ಹಾಕಿ ತಿರುವಿ.ಸ್ಟವ್ ಆರಿಸಿ ನಿಂಬೆರಸ ಸೇರಿಸಿ.ಮೇಲಿನಿಂದ ಕೊತ್ತಂಬರಿ ಸೊಪ್ಪು ಉದುರಿಸಿ ಬಿಸಿ ಬಿಸಿಯಾಗಿ ಸರ್ವ್ ಮಾಡಿ..


   ಬಹಳ ಸುಲಭ ಸರಳವಾಗಿ ಮಾಡಬಹುದಾದ ಗುಜ್ಜೆ ಮಂಚೂರಿ ನೀವೂ ಕೂಡ ಮಾಡಲು ಪ್ರಯತ್ನಿಸಿ..ಹೇಗೆ ಬಂತು ಎಂದು ತಪ್ಪದೆ ತಿಳಿಸಿ..





     ಎಳೆಹಲಸಿನ ಕಾಯಿ/ಗುಜ್ಜೆ ಪಕೋಡ



     ಸಂಜೆ ಹೊತ್ತು ಏನಾದರೂ ಬಿಸಿ ಬಿಸಿಯಾಗಿ ಎಣ್ಣೆತಿಂಡಿ ಮಾಡಿಕೊಟ್ಟರೆ ... ಆಹಾ..ಮನೆಮಂದಿಯೆಲ್ಲ ಬಹಳ ಇಷ್ಟಪಟ್ಟು  ಬಾಯಿಚಪ್ಪರಿಸಿಕೊಳ್ಳುತ್ತಾರೆ.ಒಂದೇ ತೆರನಾದ ತಿಂಡಿಗಳು ಬೋರ್ ಹೊಡೆಸುತ್ತವೆ.ಅದಕ್ಕಾಗಿ ವಿಶೇಷವಾಗಿ ಏನಾದರೂ ಪ್ರಯತ್ನ ಮಾಡ್ತಾನೇ ಇರಬೇಕಾಗುತ್ತದೆ.ಗುಜ್ಜೆ ಪಕೋಡ  ಮಾಡಲು ಪ್ರಯತ್ನಿಸಿದೆ.ಚೆನ್ನಾಗಿ ಬಂದಿದೆ.ಮಾಡುವ ವಿಧಾನವನ್ನು ನೀವೂ ನೋಡಿ ..ಮನೆಯಲ್ಲೇ ಗರಿಗರಿಯಾದ ಪಕೋಡ ತಯಾರಿಸಿ.


ಬೇಕಾಗುವ ಸಾಮಗ್ರಿಗಳು:-

ಗುಜ್ಜೆ ಎಳೆಹಲಸಿನ ಕಾಯಿ ಎರಡು ಕಪ್
ಈರುಳ್ಳಿ ಒಂದು ಕಪ್
ಕಡ್ಲೆ ಹಿಟ್ಟು ಒಂದು ಕಪ್
ಅಕ್ಕಿಹಿಟ್ಟು ಅರ್ಧ ಕಪ್
ಸಣ್ಣಗೆ ಹೆಚ್ಚಿದ ಕರಿಬೇವು
ಅರಿಶಿನ ಪುಡಿ
ಮೆಣಸಿನ ಪುಡಿ
ಉಪ್ಪು
ಎಣ್ಣೆ

ಮಾಡುವ ವಿಧಾನ:-

ಗುಜ್ಜೆಯನ್ನು ಬೇಯಿಸಿ ಪುಡಿಮಾಡಿಟ್ಟುಕೊಳ್ಳಿ.ಅದಕ್ಕೆ ಈರುಳ್ಳಿ, ಕಡ್ಲೆಹಿಟ್ಟು, ಅಕ್ಕಿಹಿಟ್ಟು,ಕರಿಬೇವು,ಅರಿಶಿನ ಪುಡಿ, ಮೆಣಸಿನ ಪುಡಿ, ಉಪ್ಪು ಹಾಕಿ ಬೆರೆಸಿ.ಸ್ವಲ್ಪ ನೀರು ಸೇರಿಸಿ.ಹಿಟ್ಟು ಗಟ್ಟಿಯಾಗಿ ಕಲಸಿಕೊಳ್ಳಿ.ಬಾಣಲೆಯಲ್ಲಿ ಎಣ್ಣೆ ಕಾಯಲಿಟ್ಟು,ಕಾದ ಎಣ್ಣೆಯಲ್ಲಿ ಸಣ್ಣ ಸಣ್ಣದಾಗಿ ಹಿಟ್ಟನ್ನು ಬಿಡಿ.ಕಾದಾಗ ತೆಗೆದರೆ ಬಿಸಿ ಬಿಸಿಯಾದ ಪಕೋಡ ಸವಿಯಲು ಸಿದ್ಧ.ಗುಜ್ಜೆ ಬಳಸಿದ್ದೇವೆ ಎಂದು ಹೇಳಿದರೆ ಮಾತ್ರ ತಿಳಿದೀತಷ್ಟೇ...ಟೇಸ್ಟೀ.. ಆಗಿರುತ್ತೆ..




       ಗುಜ್ಜೆ ಸಾಂಬಾರ್/ಕೊದಿಲು

ಬೇಕಾಗುವ ಸಾಮಗ್ರಿಗಳು:-
ಒಂದು ದೊಡ್ಡ ಕಪ್ ಗುಜ್ಜೆ ಯು ಹೋಳು,ಅರ್ಧ ಕಪ್ ಕಡಲೆಕಾಳು,ಎರಡು ಕಪ್ ತೆಂಗಿನಕಾಯಿ ತುರಿ, ಎರಡು ಚಮಚ ಕೊತ್ತಂಬರಿ, ಒಂದೂವರೆ ಚಮಚ ಉದ್ದಿನ ಬೇಳೆ,ಕಾಲು ಚಮಚ ಮೆಂತೆ, ಸ್ವಲ್ಪ ಇಂಗು ಎಂಟು ಕೆಂಪು ಮೆಣಸು,ಅರಶಿನ ಪುಡಿ,ರುಚಿಗೆ ತಕ್ಕಷ್ಟು ಉಪ್ಪು ,ಬೆಲ್ಲ ,ಒಗ್ಗರಣೆಯ ಸಾಮಗ್ರಿಗಳು.

ಮಾಡುವ ವಿಧಾನ:-
ಕಡಲೆಕಾಳುಗಳನ್ನು ಎಂಟು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಕುಕ್ಕರಿನಲ್ಲಿ ಗುಜ್ಜೆಯ ತುಂಡುಗಳೊಂದಿಗೆ ಮೂರು ಕೂಗು ಬರಿಸಿ.ಮಸಾಲೆಗೆ  ಒಂದು ಬಾಣಲೆಯಲ್ಲಿ ಕೊತ್ತಂಬರಿ, ಉದ್ದಿನಬೇಳೆ, ಮೆಂತೆ, ಇಂಗು,ಕೆಂಪು ಮೆಣಸು ಹಾಕಿ ಚೆನ್ನಾಗಿ ಪರಿಮಳ ಬರುವಷ್ಟು ಹುರಿದುಕೊಂಡು ತೆಂಗಿನಕಾಯಿ ತುರಿ ಯೊಂದಿಗೆ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ.ಬೇಯಿಸಿದ ಹೋಳುಗಳಿಗೆ ರುಚಿಗೆ ತಕ್ಕಷ್ಟು ಉಪ್ಪು,ಬೆಲ್ಲ,ಅರಶಿನ ಪುಡಿ ಸೇರಿಸಿ ಚೆನ್ನಾಗಿ ಕುದಿಸಿ.ನಂತರ ರುಬ್ಬಿದ ಮಸಾಲೆ ಮಿಶ್ರಣವನ್ನು ಸೇರಿಸಿ.ಸಾಂಬಾರಿಗೆ ಬೇಕಾದಷ್ಟು ನೀರು ಸೇರಿಸಿ, ಕುದಿಸಿ,ಒಗ್ಗರಣೆ ಕೊಡಿ.ಬಿಸಿ ಬಿಸಿ ಅನ್ನದ ಜೊತೆ ಮನೆಮಂದಿಗೆ ಬಡಿಸಿ.ದೋಸೆ, ಚಪಾತಿ, ಇಡ್ಲಿಯ ಜೊತೆಗೂ ಸವಿಯಬಹುದು..

     ಆಯಾಯಾ ಕಾಲಕ್ಕೆ ಪ್ರಕೃತಿಯ ಮಡಿಲಲ್ಲಿ ಬೆಳೆಯುವ ಫಲವನ್ನು ಸೇವಿಸಿ ಹಿರಿಯರು ಆರೋಗ್ಯವಂತರಾಗಿ ಜೀವಿಸಿದ್ದರು.ಅದರಂತೆ ಇಂದೂ ಕೂಡ ಸ್ಥಳೀಯವಾಗಿ ದೊರಕುವ ಆಹಾರ ವೈವಿಧ್ಯಗಳನ್ನು ಸವಿಯುವ ಆಸಕ್ತಿ ತೋರಬೇಕು.ಕಲಬೆರಕೆ,ವಿಷಾಂಶಗಳನ್ನು ಹೊಂದಿಲ್ಲದ ಹಲಸಿನಕಾಯಿ ಪೌಷ್ಟಿಕಾಂಶಗಳ ಆಗರ.ಹಿತಮಿತವಾಗಿ ಬಳಸಿದಲ್ಲಿ ದೇಹಾರೋಗ್ಯದ ದೃಷ್ಟಿಯಿಂದ ಹಿತಕರ.


✍️... ಅನಿತಾ ಜಿ.ಕೆ.ಭಟ್.
23-05-2020.


Thursday, 21 May 2020

ಜೀವನ ಮೈತ್ರಿ ಭಾಗ ೮೦




ಜೀವನ ಮೈತ್ರಿ ಭಾಗ ೮೦


        ತಡರಾತ್ರಿ ಸಂಜನಾಗೆ ಬಾತ್ ರೂಮ್ ಗೆ ಹೋಗಬೇಕೆನಿಸಿತು.ಇಲ್ಲಿ ಬಾಗಿಲು ತೆಗೆದು ಹೊರ ಹೋಗಬೇಕಾಗಿತ್ತು.ಒಬ್ಬಳೇ ಹೋಗಲು ಭಯವಾಗಿ ಅತ್ತೆಯನ್ನು ಕರೆದಳು.ದಿನವಿಡೀ ಓಡಾಡಿ ಆಯಾಸಗೊಂಡಿದ್ದ ಮಮತಾ ಗಾಢನಿದ್ರೆಗೆ ಜಾರಿದ್ದರು.ಅವರಿಗೆ ಎಚ್ಚರವಾಗಲಿಲ್ಲ.ಅವಳಿಗೀಗ ಏನು ಮಾಡಲಿ ಎಂಬ ಸಂದಿಗ್ಧತೆ.ಟಾರ್ಚ್ ಹಿಡಿದು ಹೋಗಲೇ..ಬೇಡ ..ಹಾವೇನಾದರೂ ಇದ್ದರೆ..
ಭೂತಪ್ರೇತ ಇದ್ದರೆ.ರಾತ್ರಿಹೊತ್ತು ಅಂತಹವುಗಳೆಲ್ಲ ಸಂಚರಿಸುತ್ತವೆಂದು ಅಜ್ಜಿ ಹೇಳಿದ್ದ ನೆನಪು.ಯಾಕಾದರೂ ಇಲ್ಲಿ ಉಳಕೊಂಡೆನೋ ಅನಿಸಿತು.ಅಷ್ಟರಲ್ಲಿ ಯಾರದೋ ಕಾಲ್ಗೆಜ್ಜೆ ಸಪ್ಪಳ ಕೇಳಿಸಿ ಇನ್ನಷ್ಟು ಬೆಚ್ಚಿಬಿದ್ದಳು.ಚಾಪೆಯ ಮೇಲೆ ಮುದುಡಿ ಹೊದಿಕೆಯೆಳೆದುಕೊಂಡಳು.
ಯಾರೋ ಮಾತನಾಡಿದಂತೆ ಅತ್ತಿತ್ತ ಸಂಚರಿಸಿದಂತೆ ಕಂಡಾಗ ಮೆಲ್ಲನೆ ಹೊದಿಕೆ ಸರಿಸಿ ನೋಡಿದಳು.ಅಕ್ಕಭಾವ ಹೊರಗಡೆ ಹೋಗಿದ್ದರು.ಸ್ವಲ್ಪ ಧೈರ್ಯ ಬಂತು ಅವಳಿಗೆ.ಹೇಗೂ ಅಕ್ಕ ಭಾವ ಇದ್ದಾರೆ ಈಗ ಹೋಗುವುದಕ್ಕೆ ಭಯವಿಲ್ಲ ಎಂದು ಎದ್ದು ಹೊರಗೆ ಹೋದಳು.ಇದ್ದದ್ದು ಒಂದೇ ಬಾತ್ ರೂಮ್.


        ಬಾತ್ ರೂಮ್ ಹೊರಗೆ ಕಾದಳು.ಅವಳಿಗೂ ಆಶ್ಚರ್ಯ.ಅಕ್ಕ ಭಾವ ಇಬ್ಬರು ಬಂದಿದ್ದರು. ಈಗ ಒಬ್ಬರೂ ಕಾಣ್ತಾಯಿಲ್ವೇ..ಹಾಂ ನನ್ನಕಣ್ಣು ಸುಳ್ಳು ಹೇಳ್ತಾಯಿದೆಯೇ.. ಎಂದು ಯೋಚಿಸುತ್ತಿದ್ದಾಗಲೇ ಬಾತ್ರೂಂ ಬಾಗಿಲು ಗರ್ರ ಎಂದು ತೆರೆಯಿತು.ಅಕ್ಕ ಭಾವ ಇಬ್ಬರೂ ಹೊರಗೆ ಬಂದರು.ಅವಳಿಗೆ ನಗುಬಂದರೂ ತೋರಿಸಿಕೊಳ್ಳುವಂತಿರಲಿಲ್ಲ...!! ಮೈತ್ರಿಗೆ ಈ ಹೊತ್ತಿನಲ್ಲಿ ತಂಗಿಯೆದುರು ಹೀಗೆ ಕಾಣಿಸಿಕೊಂಡಾಗ ಬಹಳ ಸಂಕೋಚವೆನಿಸಿ..ತಂಗಿಯ ಮುಖವೇ ನೋಡದೆ ಸೀದಾ ಪತಿಯ ಕೈಹಿಡಿದು ಹೊರಟೇಬಿಟ್ಟಳು.ಸಂಜನಾಗೆ ಬಹಳ ನೋವಾಯಿತು.ಜೊತೆಗೆ ಆಶ್ಚರ್ಯ ಕೂಡ..ಅಕ್ಕ ರಾತ್ರಿ ಮಲಗುವ ವೇಳೆ ಚೂಡಿದಾರ್ ಧರಿಸಿದ್ದನ್ನು ಕಂಡಿದ್ದಳು.ಈಗ ನೋಡಿದರೆ ಅಕ್ಕ ನೈಟಿ ಹಾಕ್ಕೊಂಡಿದ್ದಾಳೆ.. ರಾತ್ರಿ ಡ್ರೆಸ್ ಬದಲಾಯಿಸಿದ್ದೇಕೆ..ಅದೂ ನಾನು ಇದುವರೆಗೂ ಅಕ್ಕ ನೈಟಿ ಹಾಕಿದ್ದು ಕಂಡೇಯಿಲ್ಲ.. ಇದ್ದಕ್ಕಿದ್ದಂತೆ ಹೀಗೆ ಕಾಣಿಸಿದ್ದು ಸತ್ಯನಾ.. ಯಾಕೆ ನನ್ನಲ್ಲಿ ಮಾತನಾಡಲೇಯಿಲ್ಲ..ತನ್ನ ಕೆಲಸ ಮುಗಿಸಿಕೊಂಡು ಬಂದು ನಿದಿರೆಗೆ ಜಾರಬೇಕೆಂದರೂ ಮನಸಿನಲ್ಲಿ ಇದುವೇ ಕೊರೆಯುತ್ತಿತ್ತು..


     ಅತ್ತ ಮೈತ್ರಿ ತಾನು ಅನಿರೀಕ್ಷಿತವಾಗಿ ತಂಗಿಯನ್ನು ಕಂಡು ತಬ್ಬಿಬ್ಬಾದ್ದನ್ನು ನೆನಪಿಸಿಕೊಂಡು ಹೊರಳಾಡುತ್ತಿದ್ದಳು..ತಂಗಿ ಏನೆಂದುಕೊಂಡಳೋ ಏನೋ..

"ಏಕೆ ಮುದ್ಗೊಂಬೆ ನಿದ್ದೆಯೇ ಬರ್ತಿಲ್ವಾ.."

"ರೀ.. ನಂಗೆ ತಂಗಿಯೆದುರು ನಾಚಿಕೆಯಾಗಿತ್ತು ಗೊತ್ತಾ.. ಅವಳೇನು ಅಂದುಕೊಳ್ತಾಳೋ ಏನೋ.. ನಾನು ನೀವು ಒಟ್ಟಿಗೆ ಬಾತ್ ರೂಮ್ ಗೆ ಹೋದ್ದು, ನಾನು ನೈಟಿಯಲ್ಲಿದ್ದಿದ್ದು .."

"ಆಕೆಯೂ ಅರ್ಥ ಮಾಡಿಕೊಳ್ಳುತ್ತಾಳೆ ಬಿಡು.." ಎಂದು ಸಮಾಧಾನಿಸಿದ ... ಪತಿಯ ಮುದ್ದಿನಲ್ಲಿ ಮನದ ದುಗುಡವೆಲ್ಲ ದೂರವಾಗಿ ಹಾಯಾಗಿ ನಿದ್ರಿಸಿದಳು.

     ಬೆಳಿಗ್ಗೆ ಸಂಜನಾ ಏಳುವ ಹೊತ್ತಿಗೆ ಅಕ್ಕ ಎದ್ದಿದ್ದಳು.ರಾತ್ರಿ ಮಲಗುವಾಗ ತೊಟ್ಟ ಚೂಡಿದಾರ್ ಅನ್ನೇ ತೊಟ್ಟಿದ್ದುದು ಮತ್ತೂ ಸಂಶಯಕ್ಕೆ ಕಾರಣವಾಯಿತು.
'ಅಲ್ಲ ನಾನು ನಿನ್ನೆ ರಾತ್ರಿ ನೋಡಿದ್ದು ಸುಳ್ಳಾ..?'ಎಂದು ತನ್ನನ್ನು ತಾನೇ ಪ್ರಶ್ನಿಸಿಕೊಂಡಳು.


ಬೆಳಗ್ಗೆ ಕಿಶನ್ ಎದ್ದು ಬಂದಾಗ ಹತ್ತಿರಬಂದ ಮೈತ್ರಿ "ರೀ .. ಮುಟ್ಟು" ಎಂದಳು. ಈಗ ಕಿಶನ್ ಮುಟ್ಟದೇ ದೂರ ನಿಂತ.ಸ್ವಲ್ಪ ಆಲೋಚಿಸಿ
"ಇಲ್ಲ ...ಇಲ್ಲಿ ಮುಟ್ಟಬಹುದು.. " ಎಂದನು ಕಿಶನ್..

"ಯಾವುದಕ್ಕೂ ಅತ್ತೆಯನ್ನೊಮ್ಮೆ ಕೇಳಿ ಬರುತ್ತೇನೆ" ಎಂದಳು.

"ಬೇಡ ಮುದ್ಗೊಂಬೆ.. ಪ್ಲೀಸ್... ಮತ್ತೆ ನಿನ್ನನ್ನು ಮೂರು ದಿನ ಬಿಟ್ಟಿರಲು ನನ್ನಿಂದ ಸಾಧ್ಯವಿಲ್ಲ...ಹೇಳ್ಬೇಡ ಕಣೇ.."

"ಅಮ್ಮನಲ್ಲಿ ಹೇಳಿದ್ದಕ್ಕೆ ಅಮ್ಮ ಅತ್ತೆ ಹೇಳಿದಂತೆ ಮಾಡು ಅಂದರು.."

"ಛೇ..!! ನೀನಾಗಲೇ ಅತ್ತೆಗೂ ಹೇಳಿಬಿಟ್ಯಾ..?"
ಕಿಶನ್ ಮುಖ ಚಿಕ್ಕದು ಮಾಡಿ ಕುಳಿತ..ಅಮ್ಮ 'ಅದೆಲ್ಲ ಶಾಸ್ತ್ರ ಇಲ್ಲಿ ಇಲ್ಲ ' ಅಂದರೆ ಸಾಕು ಎಂದು ಮನಸಾರೆ ದೇವರಿಗೆ ಕೈಮುಗಿದ..

ಅಮ್ಮನಲ್ಲಿ ಕೇಳಲು ಹೋದವಳು ಬರುವ ಸೂಚನೆಯಿಲ್ಲದೆ ಕಾದು ಸುಸ್ತಾದ.ಹುಡುಕಿಕೊಂಡು ಒಳಗೆ ಹೊರಟವನಿಗೆ ಅಮ್ಮ ಆಕೆಗೆಂದು ಒಳಗಿನ ಕೋಣೆಯನ್ನು ನೀಡಲು ಅಲ್ಲಿದ್ದ ವಸ್ತುಗಳನ್ನು ಒಂದೊಂದೇ ಹೊರಗಿಡುತ್ತಿದ್ದರು.ಮನದಲ್ಲಿ 'ಯಾಕೆ ಇದೆಲ್ಲ... ಅವಳು ನನ್ನ ಜೊತೆ ಇದ್ದರೇನು ಇವರಿಗೆಲ್ಲ..'ಅನಿಸಿದ್ದರೂ ತೋರ್ಪಡಿಸದೇ ತಾನೂ ಸಹಕರಿಸಿದ.

"ಮಗ.. ಮೈತ್ರಿ ಮೊದಲ ಬಾರಿಗೆ ನಮ್ಮ ಮನೆಯಲ್ಲಿ ಮುಟ್ಟಾಗಿದ್ದಾಳೆ.ದಿಂಡಿನ ಹೋಮ ಮಾಡುವುದಿದೆ.ಆದ್ದರಿಂದ ಈ ಬಾರಿ ಶಾಸ್ತ್ರದಂತೆ ಮೂರು ದಿನ ಇಲ್ಲಿರಲಿ.ಮುಂದೆ ಆಚರಿಸದಿದ್ದರೂ ಅಡ್ಡಿಯಿಲ್ಲ.."ಎಂದಾಗ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಯಿತು ಕಿಶನ್ ಗೆ."ಹೂಂ .."ಎಂದು ಸುಮ್ಮನಾದ.

ಮೈತ್ರಿಗೆ ಮೂರುದಿನದ ಕ್ವಾರೆಂಟೈನ್ ಗೆ ರೂಂ ಸಿದ್ಧವಾಯಿತು.ಕಿಶನ್ ನ ಹೃದಯ ವಿಲವಿಲನೆ ಒದ್ದಾಡುತ್ತಿತ್ತು.ಸಂಜನಾ ಈಗ ಅಕ್ಕನಿಗೆ ಸಪ್ಲಯರ್..!! ಮೊದಲು ಹೊಟ್ಟೆನೋವಿಗೆ ಜೀರಿಗೆ ಕಷಾಯದಿಂದ ಆರಂಭವಾಯಿತು ಸಂಜನಾಳ ಡ್ಯೂಟಿ.ಆಮೇಲೆ ತಿಂಡಿ ಕಾಫಿ.. ಎಲ್ಲವನ್ನೂ ಅಲ್ಲಿಗೊಯ್ದು ಕೊಟ್ಟು ಬರುತ್ತಿದ್ದಳು.ಮೈತ್ರಿ ಸೇವಿಸಿ ಬಟ್ಟಲು ಲೋಟ ತೊಳೆದಿಟ್ಟು ಆ ರೂಮಲ್ಲೇ  ಕವಚಿ ಹಾಕಿ..ತಿಂದ ಜಾಗವನ್ನು ಸೆಗಣಿ ನೀರಿನಿಂದ ಕೈಯಲ್ಲಿ ಸ್ವಚ್ಛಗೊಳಿಸಬೇಕಾಗಿತ್ತು.ಇದನ್ನೆಲ್ಲ ನೋಡಿಯೇ ಗೊತ್ತಿಲ್ಲದ ಸಂಜನಾಳಿಗೆ ವಿಚಿತ್ರವೆನಿಸಿತು. ಇಂತಹ ಪದ್ಧತಿ ನಮ್ಮ ಮನೆ ಶಾಸ್ತ್ರಿ ನಿವಾಸದಲ್ಲಿ ಇದೆ ಎಂದು ಯಾವತ್ತೋ ಅಮ್ಮ ಹೇಳಿದ್ದನ್ನು ನೆನಪು ಮಾಡಿಕೊಂಡಳು.ಅದಕ್ಕಾಗಿ ಊರಿಗೆ ಬರುವಾಗ ಆ ಸಮಯವನ್ನು ತಪ್ಪಿಸಿಯೇ ಬರುತ್ತಿದ್ದುದು  ಇಂತಹ ಮುಜುಗರವನ್ನು ತಪ್ಪಿಸಲೆಂದು ತಿಳಿಯಿತು.

         ತಿಂಡಿ ತಿಂದ ಬಳಿಕ ಅಕ್ಕ ರೂಮಿನ ಆ ಮೂಲೆಯಲ್ಲಿ ಮುದುಡಿಕೊಂಡು ಕುಳಿತರೆ ಭಾವ ಬಾಗಿಲ ದಾರಂದಕ್ಕೆ ಒರಗಿಕೊಂಡು ಅದೇನೋ ಮಾತನಾಡುತ್ತಾ ನಗುತ್ತಾ ಇದ್ದರೆ ಸಂಜನಾ ಪರಕೀಯಳಾಗಿಬಿಡುತ್ತಿದ್ದಳು.ಅತ್ತ ಸುಳಿಯಲೂ ಮನಸ್ಸಾಗದೆ ಏನು ಮಾಡಲಿ ಹೊತ್ತು ಹೋಗದು ಎಂದು ಚಡಪಡಿಸುತ್ತಿದ್ದಳು.ಇದನ್ನು ಕಂಡ ಗಣೇಶ್ ಶರ್ಮ ಅವಳಿಗೆ ಕಥೆ ಕಾದಂಬರಿ ಪುಸ್ತಕಗಳನ್ನು ಕಪಾಟಿನಿಂದ ತೆಗೆದು ಕೊಟ್ಟರು.ಸ್ವಲ್ಪಹೊತ್ತು ಓದಿ ನಂತರ ಅದೂ ಬೆಡವೆನಿಸುತ್ತಿತ್ತು.ಅಕ್ಕನಿಗೆ ಬಾಡಿಗಾರ್ಡ್ ನಂತೆ ಭಾವ ಇದ್ದಾರೆ.ಮತ್ತೆ ನಾನು ಯಾಕಿಲ್ಲಿ ..ಎಂಬ ಪ್ರಶ್ನೆ ಅವಳ ಮನಸಿನಲ್ಲಿ ಮೂಡಿತು.ತನಗೂ ಅಪ್ಪ ,ಅಮ್ಮ ,ತಂಗಿಯನ್ನು ಬಿಟ್ಟು ಐದು ದಿನ ಇಲ್ಲಿರುವುದು ಕಷ್ಟ ಎಂದು ದುಃಖ ಉಮ್ಮಳಿಸಿ ಬಂತು.ಅಮ್ಮನಿಗೆ ಕರೆಮಾಡಿ ಎಲ್ಲವನ್ನೂ ಹೇಳಿದಳು.


     ಅಮ್ಮ ಗಾಯತ್ರಿ ಸಮಾಧಾನ ಹೇಳಿದರು."ಒಂದು ದಿನ ಇರು.ಮತ್ತೆ ನೋಡೋಣ ಕರೆದುಕೊಂಡು ಬರುವ ವ್ಯವಸ್ಥೆ ಮಾಡೋಣ" ಎಂದು ಹೇಳಿ ಸಮಾಧಾನಪಡಿಸಿದರು.ಕಿಶನ್ ನ ತಂಗಿಯಂದಿರು ಅಣ್ಣನ ಫಜೀತಿಯನ್ನು ನೋಡಿ ಛೇಡಿಸುತ್ತಿದ್ದರು..

"ಮೂರು ದಿನವಾದ್ರೂ ನಿನ್ನ ಕಾಟವಿಲ್ಲದೆ ಹಾಯಾಗಿರಲಿ "ಅತ್ತಿಗೆ ಎಂದು ಮೇದಿನಿ..

"ನೀನೆಲ್ಲಿಯಾದರೂ ರಾತ್ರಿ ಬಂದು ಅತ್ತಿಗೆಯನ್ನು ಮುಟ್ಟಿದಿಯೋ... ಮತ್ತೆ ನಿನಗೂ ಮೂರು ದಿನ ಕ್ವಾರೆಂಟೈನ್..." ಎಂದು ಚಾಂದಿನಿ..

"ಮೈತ್ರಿಯ ರೂಮಿಗೆ ಭಾವ ನುಗ್ಗದಂತೆ..ಭದ್ರತೆಗೆ ಸಂಜನಾ ಅವರನ್ನು ನಿಯೋಜಿಸಲಾಗಿದೆ."ಎಂದರು ಮೇದಿನಿಯ ಪತಿ..

"ಅಕಸ್ಮಾತ್ ಭಾವ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ರೆ ಮತ್ತೆ ಸೆಗಣಿನೀರಿನ ಸ್ನಾನ ಮಾಡಿಯೇ ಒಳಗೆ ಬರಬೇಕು.. ಅಲ್ಲಿವರೆಗೆ ಗೃಹಪ್ರವೇಶ ನಿಷಿದ್ಧ.".ಎಂದ ಚಾಂದಿನಿಯ ಪತಿ..ಇವರೆಲ್ಲರ ಮಾತುಗಳನ್ನು ಕೇಳಿ ಸಂಜನಾಗೆ ಒಮ್ಮೆ ಅಲ್ಲಿಂದ ತನಗೆ ಬಿಡುಗಡೆ ದೊರಕಿದರೆ ಸಾಕು ಎಂದೆನಿಸಿತು.


       ಸಂಜೆ ಮೇದಿನಿ ಚಾಂದಿನಿ ಇಬ್ಬರೂ ಅವರವರ ಮನೆಗೆ ತೆರಳಿದರು.ಈಗ ಸ್ವಲ್ಪ ಸಂಜನಾ ಚೇತರಿಸಿದಳು.ರಾತ್ರಿ ಮಲಗುವ ಹೊತ್ತಿಗೆ ಇನ್ನು ಇವತ್ತು ತಾನೆಲ್ಲಿ ಚಾಪೆ ಹಾಸಿ ಮಲಗಬೇಕು ಎಂದು ಯೋಚಿಸುತ್ತಿದ್ದಳು.ಮಮತಾ ಅತ್ತೆ "ಮೈತ್ರಿ ಗೆ ಒಬ್ಬಳಿಗೆ ಬೇಸರವಾಗುವುದಕ್ಕೆ ಅವಳ ರೂಮಿನಲ್ಲೇ ನೀನು ಮಲಗು.ಅವಳು ಆ ಕಡೆ ಮಲಗಲಿ.ನೀನು ಈ ಕಡೆ ಮಲಗು" ಎಂದರು.ಒಪ್ಪಿಕೊಂಡು ಹಾಗೆಯೇ ಮಲಗಿದರು.


ಮಲಗಿ ನಿದ್ರಿಸಲು ಕಣ್ಣು ಮುಚ್ಚಿ ಹೊದಿಕೆಯೆಳೆದುಕೊಂಡಿದ್ದಳು ಸಂಜನಾ.ಆಗಲೇ ಅಕ್ಕನ ಫೋನ್ ಪದೇ ಪದೇ ಮೆಸೇಜ್ ಬಂದ ಸದ್ದು ಮಾಡತೊಡಗಿತು.ಮೆಲ್ಲಗೆ ಹೊದಿಕೆಯೆಡೆಯಿಂದ ಇಣುಕಿದಳು.ಅಕ್ಕ ಚಾಟ್ ಮಾಡುತ್ತಿದ್ದಾಳೆ.. ಅಂದರೆ ಇದು ಭಾವನ ಕೆಲಸವೇ...!!! ಎಷ್ಟು ಹೊತ್ತಾದರೂ ಅವರ ಚಾಟಿಂಗ್ ನಿಲ್ಲುವಂತೆ ಕಾಣಲಿಲ್ಲ..ಸಂಜನಾಗೆ ನಿದ್ರೆಯಾವರಿಸಿತು.. ಬೆಳಿಗ್ಗೆ ಎದ್ದು ನೋಡುವಾಗ ಅಕ್ಕ ಮೊದಲೇ ಎದ್ದಿದ್ದಳು.ಬಾತ್ ರೂಮ್ ಗೆ ಹೋಗಲೆಂದು ಹೊರಟಾಗ ಅಕ್ಕ ಜಗಲಿಯ ಆ ಬದಿ ಭಾವ ಈ ಬದಿ ನಿಂತು ನಗುನಗುತ್ತಾ ಹರಟುತ್ತಿದ್ದರು... ರಾತ್ರಿ ಚಾಟ್ ಮಾಡಿದ್ದು ಸಾಕಾಗಿಲ್ವಾ ಇಬ್ಬರಿಗೂ..!! ಮದುವೆಯಾದ ಮೇಲೆ ಹೀಗೆಲ್ಲ ಆಗೋದುಂಟಾ ..!! ಎಂದು ಹುಬ್ಬೇರಿಸಿದಳು ಸಂಜನಾ... ಅಮ್ಮನಿಗೆ ಕರೆ ಮಾಡಿ "ಇವತ್ತು ನಾನು ಬರುತ್ತೇನೆ " ಎಂದು ಹಠ ಹಿಡಿದಳು.


      ಗಾಯತ್ರಿ ಪತಿಯಲ್ಲಿ ನಿನ್ನೆಯೇ ವಿಷಯ ತಿಳಿಸಿದ್ದಳು.ಮಗಳನ್ನು ಕರೆದುಕೊಂಡು ಬರೋಣವೆಂದು."ಮನೆಯವರು ಹೇಗೆ ಹೇಳುತ್ತಾರೋ ಹಾಗೆ" ಎಂದಿದ್ದರು ಶಂಕರರಾಯರು.ಇವತ್ತು ಪುನಃ ಪತಿಯಲ್ಲಿ ಮಾತನಾಡಿ ಪ್ರಯೋಜನವಿಲ್ಲ.ನಾನೇ ಮನೆಯವರಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಎಲ್ಲರೂ ಚಾವಡಿಯಲ್ಲಿರುವಾಗ  ಪ್ರಸ್ತಾಪಿಸಿದಳು.

"ಸಂಜನಾಗೆ ಅಲ್ಲಿ ಕಷ್ಟವಾಗುತ್ತಿದೆ.. ಉದಾಸಿನವಾಗುತ್ತಿದೆ.ಪೇಟೆಯಲ್ಲಿ ಬೆಳೆದವಳಿಗೆ ಹಳ್ಳಿಯ ಮನೆಯಲ್ಲಿ ಐದು ದಿನ ಇರುವುದು ಬಹಳ ಕಷ್ಟ.ಅಲ್ಲದೆ ಅವಳು ಬೇಕಾದ ಡ್ರೆಸ್ ಕೂಡಾ ಒಯ್ದಿಲ್ಲ.ಸಂಜನಾಳನ್ನು ಕರೆದುಕೊಂಡು ಬರೋಣ..ಆಗದೇ.."

ಭಾಸ್ಕರ ಶಾಸ್ತ್ರಿಗಳು ಗಂಭೀರವಾಗಿ..
"ಅದು ಹೇಗಾಗುತ್ತದೆ.. ಇನ್ನು ಐದು ದಿನದಲ್ಲಿ ಇಲ್ಲಿ ನವವಧೂವರರಿಗೆ ಸಮ್ಮಾನ ಕಾರ್ಯಕ್ರಮ ಇದೆ.ಕೂತವರು ವಧೂವರರ ಜೊತೇಗೇ ಬರುವುದು ಕ್ರಮ..."

"ಹೌದು.. ಗಾಯತ್ರಿ.. ನಾವು ಹಾಗೆಲ್ಲ ಮಧ್ಯದಲ್ಲಿ ಕರೆದುಕೊಂಡು ಬರಬಾರದು "ಎಂದರು ಅತ್ತೆ.


"ಅಲ್ಲಿ ಅಕ್ಕ ಕೂತಿದ್ರೆ ಆ ಮಾತನ್ನು ಒಪ್ಪಬಹುದಿತ್ತು.ಆದರೆ ಅಕ್ಕನನ್ನು ಮಗಳ ಜೊತೆ ಕುಳಿತುಕೊಳ್ಳಲು ನೀವೆಲ್ಲಿ ಬಿಟ್ರಿ..?ನನ್ನ ಮಗಳು ವಯಸ್ಸಿಗೆ ಬಂದವಳು.ಒಂದು ದಿನವಾದರೆ ಹೇಗೋ ಆಗುತ್ತದೆ ಎಂದು ಒಪ್ಪಿಸಿದ್ದೆ.. ಆದರೆ ಮೈತ್ರಿ ಮುಟ್ಟಾಗಿ ಇನ್ನು ಐದನೇ ದಿನದ ಸ್ನಾನವಾಗದೆ ಬರುವಂತಿಲ್ಲ.. ಅಲ್ಲಿವರೆಗೆ ನನ್ನ ಮಗಳು ಯಾಕಲ್ಲಿ...?ಅಕ್ಕ ಭಾವನ ತುಂಟಾಟ ಹಾವಭಾವ ಗಮನಿಸುವುದಕ್ಕಾ..?"

"ಹೀಗಾಗುತ್ತದೆ ಎಂದು ಗೊತ್ತಿರಲಿಲ್ಲವಲ್ಲಾ.."ಎಂದರು ಭಾವ ಭಾಸ್ಕರ ಶಾಸ್ತ್ರಿಗಳು.

"ಗೊತ್ತಾದ ಮೇಲೂ ಸಮ್ಮನಿರಬೇಕಾ..ನವದಂಪತಿಯ ಜೊತೆಗೆ ತಾಯಿಯನ್ನು ಅಥವಾ ಯಾರಾದರೂ ಹಿರಿಯ ಹೆಂಗಸರನ್ನು ನಿಲ್ಲಿಸಿದರೆ ಅರ್ಥವಿದೆ.ಅದು ಬಿಟ್ಟು ವಯಸ್ಸಿಗೆ ಬಂದ ತಂಗಿಯನ್ನು ಇನ್ನೂ ಐದು ದಿನ ಇರಲು ಹೇಳುವುದು ನನ್ನ ಶಿಸ್ತಿಗೆ ಸರಿಕಾಣುವುದಿಲ್ಲ.."ಎಂದು ಗಾಯತ್ರಿ..



"ಅಲ್ಲಿಯೂ ಮೈತ್ರಿಯ ಅತ್ತೆ ,ಮಾವ ಇರುತ್ತಾರಲ್ಲ ಗಾಯತ್ರಿ.. ಸಂಜನಾ ಒಬ್ಬಳೇ ಅಲ್ಲವಲ್ಲ.. " ಎಂದು ಅತ್ತೆ ಹೇಳಿದಾಗ..


ಗಾಯತ್ರಿ"ಒಳ್ಳೆಯ ಅತ್ತೆ ಮಾವ ಇದ್ದಾರೆ. ಅರ್ಥಮಾಡಿಕೊಳ್ಳುವ ಗಂಡನಿದ್ದಾನೆ. ಅಂದಮೇಲೆ ಸಾಲದೇ..ನಮ್ಮ ಮಗಳನ್ನು ನಾವು ಕರೆದುಕೊಂಡು ಬರುತ್ತೇವೆ.."ಎಂದರು.


"ಹಾಗೆಲ್ಲ ಮಾಡಿದರೆ ಸರಿಯಲ್ಲ.ಎಲ್ಲದಕ್ಕೂ ಒಂದು ಸಂಪ್ರದಾಯದ ಚೌಕಟ್ಟಿದೆ.."ಎಂದರು ಭಾಸ್ಕರ ಶಾಸ್ತ್ರಿಗಳು.

"ಮಾತೆತ್ತಿದರೆ ಸಂಪ್ರದಾಯ ಸಂಪ್ರದಾಯ ಸಂಪ್ರದಾಯ.. ವಯಸ್ಸಿಗೆ ಬಂದ ತಂಗಿಯನ್ನು ಅಕ್ಕಭಾವನ ಚಕ್ಕಂದ ನೋಡಿಕೊಂಡು ಕುಳಿತುಕೊಳ್ಳಲು ಯಾವ ಸಂಪ್ರದಾಯ ಶಾಸ್ತ್ರ ಹೇಳುತ್ತದೆ..ನೀವೇನೇ ಹೇಳಿ.. ನಾನು ಮಗಳನ್ನು ಕರೆದುಕೊಂಡು ಬರುವುದೇ...ನನಗೂ ಸಮಯ ಸಂದರ್ಭಕ್ಕೆ ತಕ್ಕಂತೆ ಶಿಸ್ತು ಅನ್ನುವುದು ಇದೆ.."
ಎಂದು ಮನೆಯವರಿಗೆ ಎದುರುತ್ತರ ನೀಡಿ ರೂಮಿಗೆ ತೆರಳಿದಳು ಗಾಯತ್ರಿ...




ಮುಂದುವರಿಯುವುದು...

✍️... ಅನಿತಾ ಜಿ.ಕೆ.ಭಟ್.
21-05-2020.







Tuesday, 19 May 2020

ಮಾವಿನಹಣ್ಣಿನ ಪುಡ್ಡಿಂಗ್/ ಕೇಸರಿಬಾತ್






ಮಾವಿನ ಹಣ್ಣಿನ ಪುಡ್ಡಿಂಗ್/ಕೇಸರಿಬಾತ್
        ಪೈನಾಪಲ್ ಪುಡ್ಡಿಂಗ್ ಮಾಡಿದ ರೀತಿಯಲ್ಲಿಯೇ ಮಾವಿನ ಹಣ್ಣಿನ ಪುಡ್ಡಿಂಗ್/ ಕೇಸರಿಬಾತ್ ಮಾಡಿದರೆ ಹೇಗಿರಬಹುದು ಅಂತ ಒಂದು ಯೋಚನೆ ಬಂದಿದ್ದೇ ತಡ ಕಾರ್ಯರೂಪಕ್ಕೆ ತಂದೆ.
ಬೇಕಾಗುವ ಸಾಮಗ್ರಿಗಳು:-
ಅರ್ಧ ಕಪ್ ಮಾವಿನಹಣ್ಣಿನ ತುಂಡುಗಳು/ಮಾವಿನಹಣ್ಣಿನ ರಸ, ಒಂದು ಕಪ್ ಬನ್ಸಿ ರವೆ/ಸಜ್ಜಿಗೆ, ಒಂದು ಕಪ್ ಸಕ್ಕರೆ, ಅರ್ಧ ಕಪ್ ತುಪ್ಪ,ಏಲಕ್ಕಿ ಪುಡಿ, ಗೋಡಂಬಿ ದ್ರಾಕ್ಷಿ,
ಮಾಡುವ ವಿಧಾನ:-
        ಮಾವಿನಹಣ್ಣಿನ ತುಂಡುಗಳನ್ನು ಮಿಕ್ಸಿಯಲ್ಲಿ ಒಮ್ಮೆ ಗರ್ರ್ ಮಾಡಿಕೊಳ್ಳಬೇಕು.ಬಾಣಲೆಗೆ ತುಪ್ಪ ಎರಡು ಚಮಚ ಹಾಕಿ ಸಜ್ಜಿಗೆಯನ್ನು ಕೆಂಪಗಾಗುವಷ್ಟು ಹುರಿಯಿರಿ.ಒಂದು ಕಪ್ ಸಜ್ಜಿಗೆಗೆ ಎರಡೂವರೆ ಕಪ್ ನೀರು ಸೇರಿಸಿ.ರುಬ್ಬಿದ ಮಾವಿನಹಣ್ಣನ್ನು ಸೇರಿಸಿ.ಬೆಂದ ನಂತರ ತುಪ್ಪ, ಸಕ್ಕರೆ ಹಾಕಿ ಕಾಯಿಸಿ,ಬಣ್ಣಕ್ಕೆ ಬೇಕಾದಲ್ಲಿ ಕೇಸರಿದಳಗಳನ್ನು ಒಂದು ಗಂಟೆ ಮೊದಲು ಬಿಸಿ ಹಾಲಿನಲ್ಲಿ ನೆನೆಸಿ ಸೇರಿಸಬಹುದು.ನಾನು ಬಣ್ಣಕ್ಕೆ ಚಿಟಿಕೆ ಅರಶಿನ ಪುಡಿ ಸೇರಿಸಿದೆ.ಪಾಕ ಪುಡ್ಡಿಂಗ್ ನ ಹದಕ್ಕೆ ಬಂದಾಗ ಸ್ಟವ್ ಆರಿಸಿ,ಏಲಕ್ಕಿ ಪುಡಿ ಬೆರೆಸಿ , ಗೋಡಂಬಿ ದ್ರಾಕ್ಷಿ ಯೊಂದಿಗೆ ಅಲಂಕರಿಸಿ ಸರ್ವ್ ಮಾಡಿ.
      ನಾನು ಬಳಸಿದ್ದು ಹುಳಿ ಸಿಹಿ ಮಿಶ್ರಿತ ಕಾಟು ಮಾವಿನ ಹಣ್ಣು.ಮನೆಮಂದಿಗೆಲ್ಲ ಇಷ್ಟವಾಯಿತು ಹೊಸ ಪ್ರಯೋಗ.ನೀವೂ ಮಾಡಿ ನೋಡಿ...
✍️... ಅನಿತಾ ಜಿ.ಕೆ.ಭಟ್.
19-05-2020.


ಜೀವನ ಮೈತ್ರಿ ಭಾಗ ೭೯(79)



ಜೀವನ ಮೈತ್ರಿ ಭಾಗ ೭೯



       ಶಂಕರ ಶಾ‌ಸ್ತ್ರಿಗಳು ಮತ್ತು ಗಾಯತ್ರಿ ಹಣದ ಚೆಕ್ ಅನ್ನು ನೀಡಿದರು.ಸಂಜನಾ ಅಕ್ಕನಿಗೆ ಚಿನ್ನಾಭರಣಗಳನ್ನು ಇಡುವ ಸುಂದರ ಖಜಾನಾವನ್ನು ಉಡುಗೊರೆಯಾಗಿ ನೀಡಿದಳು.ವಂದನಾ ಅಕ್ಕನಿಗೆ ಪುಟ್ಟದೊಂದು ಪೆಂಡೆಂಟ್ ನೀಡಿದಳು.ಸೋದರತ್ತೆಯರಾದ ಗೀತಾ, ಸೀತಾ ತಮ್ಮ ಪತಿ ಮಕ್ಕಳೊಂದಿಗೆ ಮಂಟಪಕ್ಕೆ ತೆರಳಿ ಸೀರೆ, ಶರ್ಟ್ ಪೀಸ್ ,ಬಣ್ಣದ ಕಾಗದದಲ್ಲಿ ಸುತ್ತಿದ ಉಡುಗೊರೆಗಳನ್ನು ಕೊಟ್ಟರು.ಎಲ್ಲರೂ ಕೊಡುವುದನ್ನೇ ಮೂಲೆಯಲ್ಲಿ ಕುಳಿತು ಕಣ್ತುಂಬಾ ನೋಡಿದ ಸಾವಿತ್ರಿ ತನ್ನ ಗಂಡ ಉಡುಗೊರೆಗೆಂದು ಕೊಟ್ಟಿದ್ದ ನೂರು ರೂಪಾಯಿಗಳನ್ನು ಮೈತ್ರಿಗೆ ನೀಡಿ ಶುಭವಾಗಲಿ ಎಂದು ಹರಸಿದಳು.ಎಲ್ಲರಂತೆ ಬಣ್ಣಬಣ್ಣದ ಬೆಲೆಬಾಳುವ ಉಡುಗೊರೆಗಳನ್ನು ಕೊಡುವ ಮನಸ್ಸಿದ್ದರೂ ತನ್ನ ಗಂಡ ಸಮ್ಮತಿಸಲಾರ ಎಂದು ಗೊತ್ತಿದ್ದು ಅವಳ ಮನವು ಮೂಕವಾಗಿ ರೋದಿಸುತ್ತಿತ್ತು.ಗಂಡನ ಜೊತೆಗೆ ಹೋಗಿ ಉಡುಗೊರೆ ಮಾಡುವ ಇವರಷ್ಟು ಭಾಗ್ಯವಂತೆ ನಾನಲ್ಲವೆಂದು ಕೊರಗುತ್ತಿದ್ದಳು ..ಆದರೆ ಪ್ರೀತಿಯಿಂದ ನೂರು ರುಪಾಯಿ ಕೊಟ್ಟರೂ ಅತ್ತೆಯ ಉಡುಗೊರೆಯನ್ನು ಗೌರವದಿಂದಲೇ ಸ್ವೀಕರಿಸಿದಳು ಮೈತ್ರಿ.ಶಾಸ್ತ್ರಿ ಕುಟುಂಬದವರೂ ಆಕೆಯ ಉಡುಗೊರೆಯನ್ನು ಅಸಡ್ಡೆಮಾಡಲಿಲ್ಲ.ಅಷ್ಟರಲ್ಲಿ ಅನಿರೀಕ್ಷಿತವಾಗಿ ಬೆಲೆಬಾಳುವ ಆಭರಣ ತೊಟ್ಟು ಝರಿಸೀರೆಯುಟ್ಟು ಕೈಯಲ್ಲಿ ಝಗಮಗಿಸುವ ಪ್ಯಾಕ್ ಮಾಡಿದ ಉಡುಗೊರೆಯನ್ನು ಮಂಟಪಕ್ಕೆ ಆಗಮಿಸಿದಳು ಶಶಿ.ಎಲ್ಲರಿಗೂ ಆಶ್ಚರ್ಯ..!! ದೊಡ್ಡದಾದ ಉಡುಗೊರೆಯ ಕಟ್ಟನ್ನು ಮೈತ್ರಿಯ ಕೈಗಿತ್ತು ಮಂತ್ರಾಕ್ಷತೆ ಹಾಕಿ ಮಂಟಪದ ಪಕ್ಕದಲ್ಲಿ ನಿಂತಳು.ಅವಳ ಗತ್ತಿಗೆ ಯಾರೂ ಸೊಪ್ಪು ಹಾಕಲಿಲ್ಲ.


      ಉಡುಗೊರೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಕನ್ಯಾ ಸಮರ್ಪಣೆ ಕಾರ್ಯಕ್ರಮ ನೆರವೇರಿತು.ಮಗಳನ್ನು ಪತಿಯ ಮನೆಯವರಿಗೊಪ್ಪಿಸುವ ಭಾವಪೂರ್ಣ ಸನ್ನಿವೇಶ. ಪುರೋಹಿತರ ಮಂತ್ರಘೋಷವೂ ಸ್ಪಷ್ಟವಾಗಿತ್ತು.ಜೊತೆಗೆ ವಿವರಣೆಯನ್ನು ನೀಡುವ ಶೈಲಿಯೂ ನೆರೆದವರನ್ನು ಆರ್ದ್ರರನ್ನಾಗಿ ಮಾಡಿತು.ಭಾಸ್ಕರ ಶಾಸ್ತ್ರಿಗಳ ಕಣ್ಣಿನಿಂದ ನೀರು ಜಿನುಗುತ್ತಿತ್ತು. ಮಂಗಳಮ್ಮನ ಮುಖವಂತೂ ನೋಡುವಂತೆ ಇರಲಿಲ್ಲ. ಅಜ್ಜ ಕನ್ನಡಕದ ಅಂಚಿನಿಂದ ಗುಟ್ಟನ್ನು ಬಿಟ್ಟುಕೊಡಲಿಲ್ಲ. ಅಜ್ಜಿಯ ಮುಖವೂ  ಪೇಲವವಾಗಿತ್ತು. ಮಹೇಶ ತಾನು ಅಳಬಾರದು ಎಂದು ಆ ಹೊತ್ತಿಗೆ ಅಲ್ಲಿಂದ ಎದ್ದು ಹೊರ ನಡೆದಿದ್ದ. ಅವನ ವೇದನೆ ಏನೆಂದು ಅವನಿಗೇ ಗೊತ್ತು ...ಸದಾ ಅಕ್ಕನಿಗೆ ಕೀಟಲೆ ಮಾಡುತ್ತಿದ್ದರೂ.. ಅಕ್ಕನೆಂದರೆ ಬಹಳ ಪ್ರೀತಿ ಅವನಿಗೆ...ಅಕ್ಕನ ಎದೆಬಡಿತವನ್ನೂ ಮನದಮಿಡಿತವನ್ನೂ ಬಹಳ ಚೆನ್ನಾಗಿ ಅರಿತವನು ಅವನು...ಅಕ್ಕ ಪ್ರೀತಿಯಲ್ಲಿ ಸಿಲುಕಿದ್ದನ್ನು ಮೊದಲು ಖಚಿತಪಡಿಸಿದವನು,ಅಕ್ಕನ ಪ್ರೀತಿಯನ್ನು  ಒಂದಾಗಿಸಲು ಶ್ರಮಿಸಿದವನು ಅವನು..ಇನ್ನು ಅಕ್ಕನ ಜೊತೆ ಕೀಟಲೆ ಮಾಡಲು ಸಾಧ್ಯವಿಲ್ಲ ಎಂಬ ನೋವು ಕಣ್ಣೀರಾಗಿ ಯಾರಿಗೂ ತಿಳಿಯದಂತೆ ಹರಿದುಹೋಯಿತು.

        ಇದನ್ನೆಲ್ಲ ನೋಡಿ ತನಗೂ ಕಣ್ಣು ತುಂಬಿ ಬರುತ್ತದೆ ಎಂದರಿತಾಗ ಪತಿಯ ಮುಖವನ್ನು ನೋಡಿದಳು ಮೈತ್ರಿ. ಅವನ ತುಂಟ ಕಣ್ಣುಗಳನ್ನು ನೋಡಿದ ಕೂಡಲೇ ಏನೋ ಒಂದು ಉತ್ಸಾಹ , ಭರವಸೆ ಅವಳ ಮುಖದಲ್ಲಿ ಮೂಡಿತು.. ಕಣ್ಣಲ್ಲಿ ಹೊಳಪು ಹೆಚ್ಚಿತು.. ಅದು ಅಗಾಧವಾದ ಭರವಸೆಯ ಬೆಳಕು. ಹೊಸ ಬದುಕಿನ ನವಜ್ಯೋತಿ.. 'ನಿನ್ನನ್ನು ನನ್ನುಸಿರಿನಷ್ಟೇ ಪ್ರೀತಿಸುತ್ತೇನೆ 'ಎಂದ ಪತಿಯ ಮೇಲಿನ ವಿಶ್ವಾಸ.


    ನಂತರ ಊಟಕ್ಕೆ ಸಿದ್ಧತೆ ನಡೆಯಿತು.ಎಲ್ಲವೂ ಬಹಳ ಅಚ್ಚುಕಟ್ಟಾಗಿ ಏರ್ಪಾಡಾಗಿತ್ತು. ನೆರೆಹೊರೆಯ ಬಂಧುಗಳ ಸಹಕಾರ ಗಣೇಶ ಶರ್ಮರಿಗೆ ಮೆಚ್ಚುಗೆಯಾಯಿತು.ಬಫೆಗೆ ಬಡಿಸಲು ಕಿಶನ್ ನ ಗೆಳೆಯರ ಗುಂಪೂ ಕೈಜೋಡಿಸಿತು.ವಧೂವರರನ್ನು ಪಂಕ್ತಿಯಲ್ಲಿ ಊಟಕ್ಕೆ ಕುಳ್ಳಿರಿಸಲಾಯಿತು.ಇಬ್ಬರೂ ನಗುನಗುತ್ತಾ ಹರಟುತ್ತಿದ್ದರು.ಕಾಟು ಮಾವಿನ ಹಣ್ಣಿನ ಸಾಸಿವೆ ಬಡಿಸುತ್ತಾ ಬಂದಾಗ ಕಿಶನ್ ಗೆ ಎರಡು ಗೊರಟು ಬಿದ್ದಿತು.ಮೈತ್ರಿಗೆ ಒಂದು ಬಡಿಸಿದರು.ಯಾರೋ ಅಂದರು

 "ಮದುಮಗನಿಗೆ ಚೀಪಲು ಸರಿಯಾಗಿ ಅಭ್ಯಾಸವಾಗಲಿ ಎಂದು ಎರಡು ಬಡಿಸಿದ್ದು"ಎಂದು.ಇನ್ನೊಬ್ಬರು

" ಎಷ್ಟು ಬೇಗ ರಸ ಹೀರ್ತಾನೆ ನೋಡೋಣ"ಎಂದರು.ಆದ್ರೆ ಮದುಮಗ ಕಿಶನ್ ಮಾತ್ರ ಇವರ ಮಾತಿನಿಂದ ಸಂಕೋಚಗೊಂಡಿದ್ದ. ತಮಾಷೆಯಿಂದಾಗಿ ಗೊರಟು ಚೀಪದೇ ಬದಿಯಲ್ಲಿಟ್ಟುಬಿಟ್ಟ.

       ಪಾಯಸ ಬಂದಾಗ ಗೊತ್ತಾಗದಿದ್ದ ಕಿಶನ್ ಗೆ ಎರಡು ಸೌಟು ಪಾಯಸ ಬಡಿಸಿಯೇ ಬಿಟ್ಟರು ನೆರೆಮನೆಯ ಕುಮಾರಣ್ಣ.ಮೈತ್ರಿ ತನಗೆ ಬೇಡವೆಂದು ಕೈ ಅಡ್ಡ ಹಿಡಿದರೂ ಕೇಳದೆ  .."ಸ್ತ್ರೀ ಸಮಾನತೆಗೆ ಸರಿಬರುವುದಿಲ್ಲ ..ಪತಿಯಷ್ಟೇ ಪತ್ನಿಯೂ ತಿನ್ನಬೇಕು" ಎಂದು ಬಡಿಸಿಯೇ ಮುಂದೆ ಸಾಗಿದರು.ಹೋಳಿಗೆ ಬರುವಾಗ ಇಬ್ಬರೂ ಮೊದಲೇ ಎಚ್ಚರಿಕೆಯಿಂದಿದ್ದರು.ನಮಗೆ ಬೇಡವೆಂದರು.ನಿನ್ನೆ ಸಿಹಿ ತಿಂದೇ ಸಾಕಾಗಿತ್ತು.ಕೇಳದ ಈಶ್ವರ ಭಾವ ಇಬ್ಬರಿಗೂ ಒಂದೊಂದು ಚೆನ್ನಾಗಿ ಪುಲ್ಲಿ ಪುಲ್ಲಿ ಬಿದ್ದ ಕಾಯಿ ಹೋಳಿಗೆ ಬಡಿಸಿದರು. ಹೋಳಿಗೆ ಬಿಟ್ಟೆದ್ದರೆ ಶಾಸ್ತ್ರಿ ಮಾಷ್ಟ್ರ ಬಳಿ ಹೇಳಿ ಪನಿಶ್ಮೆಂಟ್ ಕೊಡಿಸುವುದಾಗಿ ಈಶ್ವರ ಭಾವ ಹೇಳಿದಾಗ ನಗುವಿನ ಅಲೆಯೇ ಎದ್ದಿತು.ಶಾಸ್ತ್ರಿಗಳು  ಅಲ್ಲಿ ಹತ್ತಿರವಿರಲಿಲ್ಲ.ಹಾಗಾಗಿಯೇ ಈಶ್ವರ ಭಾವನಿಗೆ ಇಷ್ಟು ಧೈರ್ಯ ಬಂದದ್ದು ಅಂತ ಇನ್ನೊಬ್ಬರು ಹೇಳಿ ನಗೆಗಡಲಲ್ಲಿ ತೇಲಿಸಿದರು.

     ವಿಧಿಯಿಲ್ಲದೇ ಹೋಳಿಗೆ ತಿಂದರು.. ಎರಡನೇ ಸಲ ಹೋಳಿಗೆ ವಿಚಾರಣೆಗೆ ಬಂದಿತ್ತು.ಈಗ ಬೇಡ ಭಾವಯ್ಯ ಎಂದು ಕಿಶನ್ ಮುಂದೆ ಕಳಿಸಿದರೂ ಕೇಳದ ಭಾವ "..ಇದು ಎನರ್ಜಿ ಬೂಸ್ಟರ್... " ಅಂದಾಗ ಮೈತ್ರಿಯ ಮುಖ ರಂಗೇರಿತ್ತು.ಒಂದು ಹೋಳಿಗೆಯನ್ನು ಅರ್ಧ ಮಾಡಿ ಕಿಶನ್ ಗೆ ಬಡಿಸಿ .."ಉಳಿದ ಅರ್ಧವನ್ನು ನಿನ್ನ ಅರ್ಧಾಂಗಿಗೇ ಬಡಿಸುತ್ತೇನೆ "ಎಂದು ಬಡಿಸಿದರು.ಮೈತ್ರಿಗೆ ಉಸಿರು ಬಿಡಲೂ ಕಷ್ಟಪಡುವಷ್ಟಾಯಿತು.ಮತ್ತೇನನ್ನೂ ಹಾಕಿಸಿಕೊಳ್ಳದೇ ಸುಮ್ಮನಿದ್ದ ಮೈತ್ರಿಯಲ್ಲಿ ಹಾಡುವಂತೆ ಒತ್ತಾಯಿಸಿದರು.ಈಶ್ವರ ಭಾವ ಬಂದು "ಏ..ಮದಿಮ್ಮಾಳೇ.. ಭಕ್ತಿಗೀತೆ ಬೇಡ..
ಚಿತ್ರಗೀತೆ ಹಾಡು.."ಅನ್ನಬೇಕೇ...

ಅಷ್ಟರಲ್ಲಿ ಕುಮಾರಣ್ಣ "ಒಂದು ರೊಮ್ಯಾಂಟಿಕ್ ಡ್ಯುಯೆಟ್ ಸಾಂಗ್.. ಹಾಡಿದರೆ ಚಂದ.."ಎಂದು ಮೈಕ್ ನಂತೆ ಹಳೇ ಟಾರ್ಚ್ ಹಿಡಿದು ಬಂದರು.ಮೈತ್ರಿ ನಗುತಡೆಯದೆ "ನಿಮ್ಮ ಕಡೆಯವರು ಎಷ್ಟು ರೇಗಿಸ್ತಾರಪ್ಪಾ.."ಎಂದು ಕಿಶನ್ ನ ಬಳಿ ಹೇಳಿದಳು.
"ಹೂಂ.. ಹೀಗೇನೇ..ಹೊಸ ಜೋಡಿ ಹಳೆಜೋಡಿಯಾಗುವ ತನಕವೂ "
ಎಂದ ಕಿಶನ್.

"ಓಹೋ..ಯಾವ ಹಾಡು ಹಾಡೋದೂಂತ ಚರ್ಚಿಸುತ್ತಾ ಇದ್ದಾರೆ.."

"ನಾಲ್ಕು ವರ್ಷದಿಂದ ಚ್ಯಾಟ್ ಮಾಡುವಾಗ ಬಂದ ಪ್ರೇಮಗೀತೆಗಳೂ ಆದೀತು.."

"ಫಸ್ಟ್ ಪ್ರೊಪೋಸ್ ಮಾಡುವಾಗ ಕಿಶನ್ ನೀನು ಯಾವ ಸಾಲು ಹೇಳಿದ್ದೆ...ಅದನ್ನೇ ಹೇಳಿ.."

ಹೀಗೆ ಒಬ್ಬೊಬ್ಬರೂ ಸಿಕ್ಕಿದ್ದೇ ಛಾನ್ಸ್ ಅಂತ  ರೇಗಿಸಿದ್ದೇ..

ಕೊನೆಗೆ ಇಬ್ಬರೂ ಸೇರಿ ಹಾಡಿದ್ದು ಮಾತ್ರ ವಿಘ್ನವಿನಾಶಕನ ಹಾಡು..


ಮಹಾಗಣಪತಿಂ.....
ಮಹಾಗಣಪತಿಂ ಮನಸಾಸ್ಮರಾಮಿ
ವಶಿಷ್ಠ ವಾಮದೇವಾದಿ ವಂದಿತ
ಮಹಾಗಣಪತಿಂ ಮನಸಾಸ್ಮರಾಮಿ
ವಶಿಷ್ಠ ವಾಮದೇವಾದಿ ವಂದಿತ
ಮಹಾಗಣಪತಿಂ.....ಆ....ಆ....


ವಧೂವರರ ಹಾಡಿಗೆ ಬಂದವರೆಲ್ಲರೂ ತಲೆದೂಗಿದರು.ಮೇದಿನಿ ಚಾಂದಿನಿ ಇಬ್ಬರೂ ಜೊತೆಯಲ್ಲಿ ಹಾಡೊಂದನ್ನು ಹಾಡಿದರು.ಸಂಜನಾ ವಂದನಾ ಕೂಡಾ ಸುಶ್ರಾವ್ಯವಾಗಿ ಹಾಡಿ ಎಲ್ಲರ ಮನಗೆದ್ದರು. ಗೋವಿಂದ ನಾಮ ಸ್ಮರಣೆಯನ್ನು ಭಾಸ್ಕರ ಶಾಸ್ತ್ರಿಗಳು ಯಕ್ಷಗಾನದ ಪದದ ಮೂಲಕ ಮಾಡಿದರು. ಗೋವಿಂದಾ.. ಎನ್ನುತ್ತಾ ಊಟಮುಗಿಸಿ ಎಲ್ಲರೂ ಎದ್ದರು.


       ಶಾಸ್ತ್ರಿಗಳ ಕುಟುಂಬದವರು ಹೊರಡುವ ಸಮಯವಾಗುತ್ತಾ ಬಂತು.ಮೈತ್ರಿಯ ಜೊತೆ ಯಾರು ಕುಳಿತುಕೊಳ್ಳುವುದು ಎಂದು ಚರ್ಚೆಯಾಯಿತು.ಗಾಯತ್ರಿ "ಅಕ್ಕಾ.. ನೀನೇ ಕುಳಿತುಕೋ..ಮನೆಯ ಬಗ್ಗೆ ಚಿಂತೆ ಬೇಡ..ನಾನೂ ಅತ್ತೆಯೂ ನಿಭಾಯಿಸುತ್ತೇವೆ" ಎಂದರು.
ಮಹಾಲಕ್ಷ್ಮಿ ಅಮ್ಮನಿಗೆ ಸೊಸೆ ಅಲ್ಲಿ ಕುಳಿತರೆ ಮನೆಯಲ್ಲಿ ರಾಶಿ ಬಿದ್ದಿದ್ದ ಕೆಲಸಗಳನ್ನೆಲ್ಲ ಯಾರು ಮಾಡುವುದು ಎಂಬ ಚಿಂತೆ..

ಮಗನ ಬಳಿ ಹೋಗಿ "ಸಂಜನಾ ವಂದನಾರನ್ನು ನಿಲ್ಲಿಸೋಣ..ಅವರಿಗೆ ಮನೆಯಲ್ಲಿ ಮಾಡಲೇನೂ ಕೆಲಸವೂ ಇಲ್ಲ.. " ಎಂದರು.
ಭಾಸ್ಕರ ಶಾಸ್ತ್ರಿಗಳಿಗೂ ಅದೇ ಬೇಕಿತ್ತು.ಸಂಜಾನಾ ವಂದನಾರನ್ನು ಕರೆದು ಕೇಳಿದಾಗ ವಂದನಾ ಒಪ್ಪಲೇಯಿಲ್ಲ.. ಸಂಜನಾ ಅಳುಕುತ್ತಲೇ ಒಪ್ಪಿಕೊಂಡಳು.


         ಸಂಜನಾಳನ್ನು ಬಿಟ್ಟು ಉಳಿದವರೆಲ್ಲರೂ ವಾಹನವೇರುತ್ತಿದ್ದಂತೆ ಮೈತ್ರಿಯ ಕಣ್ಣುಗಳಲ್ಲಿ ತನ್ನಿಂತಾನೇ ಜಲಪ್ರಳಯವಾಗುವುದನ್ನರಿತ ಕಿಶನ್ ಕಣ್ಣಲ್ಲೇ ಆಕೆಯನ್ನು "ಅಳಬೇಡ.. ನಾನಿರುವೆ ನಿನ್ನ ಜತೆ "ಎಂದು ಮುದ್ದಿಸಿದ.. ಸನಿಹಕ್ಕೆ ಬಂದು ಕೈಯನ್ನು ಅದುಮಿದ..ಅಷ್ಟೇ...ಪತಿ ಕಣ್ಣಲ್ಲಿ ನೋಡಿದ್ದೇ ತಡ ಮದುಮಗಳು ಒಳ್ಳೆಯ ಮೂಡ್ ಗೆ ಬಂದುಬಿಟ್ಟಳು.. ಕಣ್ಣೀರು ಮಾಯ.. ತವರು ಮನೆಯವರಿಗೆ ನಗುನಗುತ್ತಲೇ ಬಾಯ್ ಮಾಡಿದಳು.


   ಸಂಜನಾಗೆ  ಮಾತ್ರ ಏನು ಮಾಡಬೇಕೆಂದೇ ತೋಚಲಿಲ್ಲ.ಪೇಟೆಯಲ್ಲಿ ಬೆಳೆದ ಅವಳಿಗೆ ಇನ್ನೊಬ್ಬರ ಮನೆಯಲ್ಲಿ ನಿಂತು ಅಭ್ಯಾಸವೂ ಇರಲಿಲ್ಲ.ಅಕ್ಕನ ಜೊತೆಗೆ ಇರೋಣವೆಂದರೆ ಭಾವ ಅಕ್ಕನ ಹಿಂದೆಯೇ ಸುತ್ತುತ್ತಿದ್ದಾರೆ. ಒಂಟಿಯಾಗಿಬಿಟ್ಟೆ ಎಂದೆನಿಸಿತು ಅವಳಿಗೆ.ಅವಳ ಮುಖಭಾವವನ್ನರಿತ ಮೇದಿನಿ, ಚಾಂದಿನಿ ಅವಳ ಜೊತೆ ಮಾತನಾಡುತ್ತಾ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿದರು.ತಾನೂ ಸಹಾಯ ಮಾಡಲು ಹೊರಟ ಸಂಜನಾಳನ್ನು ಬೇಡ ನಾವೇ ಮಾಡುತ್ತೇವೆ ಎಂದರು.


      ರಾತ್ರಿ ಊಟವಾಗುತ್ತಿದ್ದಂತೆ ನಾನೆಲ್ಲಿ ಮಲಗಲಿ ಎಂಬ ಚಿಂತೆ ಸಂಜನಾಳಿಗೆ..ಅಲ್ಲಿದ್ದಿದ್ದೇ ಎರಡು ರೂಮು..ಮಮತಾ ಮಗಸೊಸೆಗೆ ಒಂದು ರೂಮಿನಲ್ಲಿ ಮಲಗಲು ವ್ಯವಸ್ಥೆ ಮಾಡಿಕೊಟ್ಟರು.ಚಾಂದಿನಿ ಅವಳ ಗಂಡ ಇನ್ನೊಂದು ರೂಮಿನಲ್ಲಿ ಮಲಗುವ ಸೂಚನೆಯಿತ್ತು.ಮೇದಿನಿ...?? ಮೇದಿನಿಗೂ ಅವಳ ಗಂಡನಿಗೂ ಅಟ್ಟದಲ್ಲಿ ಮಲಗಲು ವ್ಯವಸ್ಥೆ...!!! ಸಂಜನಾಗೆ ಇದೆಲ್ಲ ವಿಶೇಷವಾಗಿತ್ತು.. ಕೊನೆಗೆ ಗಣೇಶ್ ಶರ್ಮ ಚಾವಡಿಯಲ್ಲಿ ಮಲಗಿ ..ತಾನೂ ಮಮತಾ ಅತ್ತೆಯೂ ಊಟದ ಪಡಸಾಲೆಯಲ್ಲಿ ಮಲಗುವುದೆಂದು ತಿಳಿದಾಗ ನಿಟ್ಟುಸಿರು ಬಿಟ್ಟಳು.



    ಕಿಶನ್ ಗೆ ನಿದ್ದೆ ತೂಗುತ್ತಿತ್ತು.ಮೈತ್ರಿಯ ಕೈಹಿಡಿದು "ಬಾ .."ಎಂದ.."ಈಗ ಬರುತ್ತೇನೆ" ಎಂದು ಹೋದಳು.. ಆಕೆ ಬರುತ್ತಾಳೆ ಎಂದು ಆತ ರೂಮು ಸೇರಿದ ..ಮುದ್ಗೊಂಬೆಯ ನಿರೀಕ್ಷೆಯಲ್ಲಿದ್ದ ಅವನು ಕೈಬಳೆಯ ಸಣ್ಣ ಸದ್ದಿಗೂ ತನ್ನವಳು ಬಂದಳೇ ಎಂದು ನೋಡುತ್ತಿದ್ದ.ಕಾಲ್ಗೆಜ್ಜೆ ಸಪ್ಪಳಕ್ಕೆ ತನ್ನವಳದೇ ಎಂದು ಮನದಲ್ಲೇ ಮಂಡಿಗೆ ಸವಿದವನಿಗೆ ಅದು ತಂಗಿ ಮೇದಿನಿಯದು ಎಂದು ಗೊತ್ತಾದಾಗ ನಿರಾಸೆ.ನಿನ್ನೆಯ ಶೃಂಗಾರಮಯ ನೆನಪುಗಳ ಪುರವಣಿಯಲ್ಲಿ ಇಂದಿನ ಸಂತಸದ ಮೆರವಣಿಗೆಗಾಗಿ ಕಾಯುತ್ತಿದ್ದ.ಕ್ಷಣವೂ ಯುಗವಾದಂತೆ ಭಾಸವಾಯಿತು.

       ಮುದ್ಗೊಂಬೆಯ ಸವಿನೆನಪಿನಲ್ಲಿ ಛೇ.. ನಾನು ನೋವು ಮಾಡಿದೆನೇ...ಎಂದುಕೊಂಡು..ಇಲ್ಲ ...ಅವಳೂ ಸಮ್ಮತಿಸಿದ್ದಳು.ನೋವಿನಲ್ಲೂ ನಕ್ಕು ನನ್ನನ್ನು ಬಾಚಿತಬ್ಬಿದ್ದನ್ನು ನೆನಪಿಸಿಕೊಂಡು ಮೈಯೆಲ್ಲಾ ರೋಮಾಂಚನವಾಯಿತು... ಇವತ್ತು .. ಊಹೂಂ...ನಿನ್ನೆಯಷ್ಟಲ್ಲ.. ಅವಳನ್ನು ಸ್ವಲ್ಪ ಜಾಸ್ತಿಯೇ ಖುಷಿಪಡಿಸ್ಬೇಕು.
ಆದರೆ ಮುದ್ಗೊಂಬೆ ಈಗ ಬರ್ತೇನೆ ಅಂದವಳು ಬಂದೇ ಇಲ್ವೇ... ಎನ್ನುತ್ತಾ ತಾನೇ ಹುಡುಕಿಕೊಂಡು ಹೊರಟ.


    ಅಡುಗೆ ಕೋಣೆಯಲ್ಲಿ ಅಮ್ಮನ ಜೊತೆಗೆ ಇದ್ದಳು ಮುದ್ಗೊಂಬೆ ಮುಖ ಕಿವುಚಿಕೊಂಡು..ಅಮ್ಮ ಏನೋ ಬಿಸಿಮಾಡುತ್ತಿದ್ದರು. ಅಮ್ಮನೆದುರು "ಮುದ್ಗೊಂಬೆ ಏನಾಯ್ತು" ಎಂದು ಕೇಳುವಷ್ಟು ಸಲುಗೆಯಿಲ್ಲ..ಏನು ಮಾಡಲಿ..ಎಂದು ಯೋಚಿಸುತ್ತಾ ನಿಂತ.ಮಗನನ್ನು ಕಂಡು ಅಮ್ಮನೇ ಕರೆದರು."ಮೈತ್ರಿಗೆ ಹೊಟ್ಟೆನೋವಂತೆ .. ಕಷಾಯ ಮಾಡಿ ಕೊಡ್ತಿದೀನಿ.." ಅಂದಾಗ  ಅವಳ ಕಿವುಚಿದಂತಿರುವ ಮುಖದ ಹಿಂದಿನ ವೇದನೆ ಅರಿವಾಯಿತು.. ಕಷಾಯ ಕುಡಿದು ಮುಗಿಸುತ್ತಿದ್ದಂತೆ ಮಗನಲ್ಲಿ "ಮಗನೇ ಜೋಪಾನ.. ಅವಳ ಆರೋಗ್ಯದ ಕಡೆಯೂ ಗಮನವಿರಲಿ.. "
"ಅಮ್ಮಾ..ನಾನೇನೂ ಮಾಡಿಲ್ಲ.." ಅಂದಿದ್ದ ಮುಗ್ಧ ಹುಡುಗನಂತೆ.

"ಆಹಾ..ನಾಟಕ.. ಬಾಯಿಗೆ ಬೆರಳಿಟ್ಟರೆ ಕಚ್ಚೋಕೂ ಬರದವರಂತೆ ಆಡುವುದು ಬೇಡ..ನಂಗೆಲ್ಲಾ ಗೊತ್ತು.."
ಅಂದಾಗ..' ಹಾಗಾದರೆ ಮುದ್ಗೊಂಬೆ ಎಲ್ಲವನ್ನೂ ಅಮ್ಮನಿಗೆ  ವರದಿ ಮಾಡಿದ್ದಾಳಾ... ಕೈಗೆ ಸಿಗ್ಲಿ..ಅವಳನ್ನೇ ಕೇಳ್ತೀನಿ..' ಎಂದುಕೊಂಡು ಮಡದಿಯೊಂದಿಗೆ ಹೊರಟ.ಊಟದ ಪಡಸಾಲೆಯಲ್ಲಿ ಆಗಷ್ಟೇ ಹೊದಿಕೆ ಹೊದೆದು ಮಲಗಿದ್ದ ಸಂಜನಾ ಅವರ ಮಾತುಕತೆಯನ್ನೆಲ್ಲ ಕೇಳಿ ಹೊದಿಕೆಯೆಡೆಯಿಂದ ಇಣುಕಿದ್ದಳು.ಅಕ್ಕ ಭಾವನ ಜೊತೆ ವಯ್ಯಾರದಿಂದ ಹೆಜ್ಜೆ ಹಾಕುವುದನ್ನು,ಭಾವ ಕಟಿಯನ್ನು ತೋಳಲ್ಲಿ ಬಳಸುವುದನ್ನು ಕಂಡಳು.ಇನ್ನೆರಡು ಮೂರು ವರ್ಷದಲ್ಲಿ ನನಗೂ ಇದೇ ಪರಿಸ್ಥಿತಿ ಬಂದೀತು ಎಂದು ನೆನೆದು ನಿದ್ದೆಗೆ ಜಾರಿದಳು.

 
        ಮುದ್ಗೊಂಬೆಯನ್ನು ಕರೆದೊಯ್ದ ಕಿಶನ್ ಬಾಗಿಲನ್ನು ಭದ್ರಪಡಿಸಿ ಮೊದಲು ಅಮ್ಮನಲ್ಲಿ ಏನೆಲ್ಲ ಹೇಳಿದ್ದೀಯೆಂದು ಕೇಳಿತಿಳಿದುಕೊಂಡು ಸಮಾಧಾನಪಟ್ಟುಕೊಂಡ.  ಮಧುವನ್ನರಸಿ ಬಸಿದು ಹೀರಿ ಸುಖವಾಗಿ ಸಂಸಾರದಲ್ಲಿ ತೇಲಿತು ಮುದ್ದುಜೋಡಿ.ಹೊರಗಡೆ ಮಲಗಿದ್ದ ಅಪ್ಪ ಮಗನ ಸಂಸಾರ ಆರಂಭವಾಗಿದೆ ಎಂದು ಒಳಗಿನಿಂದ ಬರುತ್ತಿದ್ದ ಶಬ್ದದಿಂದಲೇ ತಿಳಿದು ಸಂತಸಪಟ್ಟರು.ಮಮತಾ ಅಗತ್ಯದ ಸ್ವಚ್ಛತೆಯ ಕೆಲಸಗಳನ್ನು ಮಾಡಿ ಮುಗಿಸಿ ನಂತರ ಸಂಜನಾಳ ಪಕ್ಕದಲ್ಲಿ ತನ್ನ ನಿತ್ಯದ ಹಾಸಿಗೆ ಬಿಡಿಸಿ ನಿದ್ರೆಗೆ ಜಾರಿದರು.


ಮುಂದುವರಿಯುವುದು..

✍️... ಅನಿತಾ ಜಿ.ಕೆ.ಭಟ್.
19-05-2020.



Sunday, 17 May 2020

ಜೀವನ ಮೈತ್ರಿ ಭಾಗ ೭೮(78)



ಜೀವನ ಮೈತ್ರಿ ಭಾಗ ೭೮


          ಸಂಜೆಯ ಹೊತ್ತಿನಲ್ಲಿ ಕಿಶನ್ ಮೈತ್ರಿ ಇಬ್ಬರೂ ತಂಪಾದ ಅಡಿಕೆ ತೋಟದಲ್ಲಿ ವಿಹರಿಸಿದರು. ನಾಲ್ಕು ವರ್ಷದ ವಿರಹವು ತಣಿಯುವ ಹಂತದಲ್ಲಿತ್ತು. ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳುತ್ತಾ, ಕೀಟಲೆ ಮಾಡುತ್ತಾ ಸಮಯ ಹೋದದ್ದೇ ತಿಳಿಯಲಿಲ್ಲ.  ಮನೆಗೆ ಬಂದಾಗ ಮಂಗಳಮ್ಮ ಮಗಳು ಅಳಿಯನಿಗೆ ಸ್ನಾನ ಮಾಡಿ ಬರಲು ಹೇಳಿದರು. ಮಂಗಳಮ್ಮ ದೇವರ ದೀಪ ಹಚ್ಚಿದರು.ದೀಪದ ಮುಂದೆ ಕುಳಿತು  ಭಕ್ತಿಗೀತೆಗಳನ್ನು ಹೇಳಲು ಮಗಳಲ್ಲಿ ಹೇಳಿದರು. ಮೈತ್ರಿ ದೇವರ ನಾಮಗಳನ್ನು  ಹಾಡುತ್ತಿದ್ದಂತೆ  ಆಕೆಯ ಸುಶ್ರಾವ್ಯ ಕಂಠಕ್ಕೆ ಮನೆಯಲ್ಲಿ ಉಳಿದುಕೊಂಡಿದ್ದ ನೆಂಟರೆಲ್ಲರೂ ಕಿವಿಯಾದರು...ತಲೆದೂಗಿದರು... ಕಿಶನ್ ತಾನೇನು ಕಮ್ಮಿಯಿಲ್ಲ ಎಂಬಂತೆ ಒಂದೆರಡು ದೇವರನಾಮದ ತುಣುಕುಗಳನ್ನು ಹಾಡಿದ. ಅದು ಮುಗಿಯುತ್ತಿದ್ದಂತೆ ಶ್ಯಾಮಶಾಸ್ತ್ರಿಗಳು ಅವನಿಗೆ ಸಂಧ್ಯಾವಂದನೆಗೆ ಏರ್ಪಾಡು ಮಾಡಿದರು.ಅಜ್ಜ ಹೇಳಿದ ಮೇಲೆ ಮಾಡಲೇಬೇಕಲ್ಲ ..  ಸಂಧ್ಯಾವಂದನೆ ಮುಗಿಸಿ ಹೊರಬಂದ.


       ಭಾಸ್ಕರ ಶಾಸ್ತ್ರಿಗಳು ಒಂದಷ್ಟು ಹೊತ್ತು ಅಳಿಯನಲ್ಲಿ ಮದುವೆಯ ಕಾರ್ಯಕ್ರಮದ ಬಗ್ಗೆ ಮಾತುಕತೆ ನಡೆಸಿದರು.ಹೆಣ್ಣುಮಕ್ಕಳೆಲ್ಲ  ಕೆಲಸ ಕಾರ್ಯಗಳಲ್ಲಿ ನಿರತರಾಗಿದ್ದರು.ಸಂಜನಾ ವಂದನಾಗೆ ಇವತ್ತು ಅಕ್ಕನ ಜೊತೆಯಿಲ್ಲದೆ ಬೋರ್ ಆಗುತ್ತಿತ್ತು.ಅಕ್ಕ ಭಾವನಿಗಂಟಿಕೊಂಡಿದ್ದುದರಿಂದ ತಮ್ಮ ಮಹೇಶನೇ ಇಂದು ಫ್ರೆಂಡ್ ಆಗಿದ್ದ.ಗಾಯತ್ರಿ ಮನೆಯ ಕೆಲಸಕಾರ್ಯಗಳಲ್ಲಿ ಅಕ್ಕನೊಂದಿಗೆ ಕೈಜೋಡಿಸಿದರು.


       ಮಹಾಲಕ್ಷ್ಮಿ ಅಮ್ಮ ಎಲ್ಲರನ್ನೂ ಊಟಕ್ಕೆ ಕರೆದರು.ಗಾಯತ್ರಿ ,ಮಂಗಳಮ್ಮ ,ಸಂಜನಾ ವಂದನಾ ಬಡಿಸಿದರು.ಊಟಕ್ಕೆ ಕುಳಿತಿದ್ದ ಕಿಶನ್ ಮೈತ್ರಿಗೆ  ಒತ್ತಾಯ ಮಾಡಿ ಹೆಸರು ಪಾಯಸ, ಹೋಳಿಗೆ ಬಡಿಸಿದರು ಅಜ್ಜಿ.."ನನಗೆ ಇಷ್ಟೆಲ್ಲಾ ತಿನ್ನಲಾಗುವುದಿಲ್ಲ" ಎಂದು ಮೂತಿ ಊದಿಸಿದಳು ಮೈತ್ರಿ."ಇವತ್ತು ತಿನ್ನದಿದ್ದರೆ ಹೇಗೆ..ಪುಳ್ಳಿ.." ಎಂದು ಅತ್ತೆ ಛೇಡಿಸುತ್ತಿದ್ದರೆ ಮಂಗಳಮ್ಮ .. "ಅತ್ತೆ .. ಹಾಗೆ ಒತ್ತಾಯ ಮಾಡಿ ಬಡಿಸಬೇಡಿ .ಬೇಕಾದಷ್ಟೇ ತಿಂದರೆ ಸಾಕು.." ಎಂದರು.ಕಿಶನ್ಗೆ ಅತ್ತೆಯಾದರೂ ನಮ್ಮ ಪರವಾಗಿ ಇದ್ದಾರಲ್ಲ ಎಂದು ಖುಷಿಯಾಯಿತು.ಕಷ್ಟಪಟ್ಟು ಉಂಡೆದ್ದರು ಮೈತ್ರಿ ಮತ್ತು ಕಿಶನ್.


          ಮಂಗಳಮ್ಮ ಮಗಳನ್ನು ಕರೆದರು.  ಹಾಲಿನ ಲೋಟವನ್ನು ಕೈಗಿತ್ತು "ಕಿಶನ್ ರೂಮಿನಲ್ಲಿದ್ದಾನೆ.. ಹೋಗು" ಅಂದರು..ಆಕೆ ತಲೆತಗ್ಗಿಸಿ ತನ್ನ ರೂಮಿನತ್ತ ಸಾಗುತ್ತಿದ್ದರೆ ಅಲ್ಲಿ ಕುಳಿತಿದ್ದ ಮಹೇಶ್ ,ಸಂಜನಾ, ವಂದನಾಗೆ ನಗು ತಡೆಯಲಾಗಲಿಲ್ಲ... ಮುಖಭಂಗವಾದಂತಾದ ಮೈತ್ರಿ ವಾಪಾಸಾಗುತ್ತಿರುವಾಗ "ನೀನು ಅಲ್ಲಿಗೇಕೆ ಹೋದೆ.ನಾನಿಲ್ಲಿದ್ದೇನೆ...."ಅನ್ನುವ ಮುಖಭಾವ ಹೊತ್ತು ನಸುನಗುತ್ತಾ ನಿಂತಿದ್ದ ಕಿಶನ್.ಚಾವಡಿಯ ಇನ್ನೊಂದು ಮಗ್ಗುಲಲ್ಲಿ ಇದ್ದ ಅಪ್ಪ ಅಮ್ಮ ಮಲಗುತ್ತಿದ್ದ ಕೋಣೆಯನ್ನು ಮಗಳು ಅಳಿಯನಿಗಾಗಿ ಸಿದ್ಧಪಡಿಸಿದ್ದರು.


        ಕ್ಷೀರಕನ್ನಿಕೆ ಈಗ ತನ್ನ ನಡೆಯಿಂದ ನಾಚಿ ಕೆಂಪಾಗಿದ್ದಳು.ಇನಿಯನ ಸನಿಹ ಮತ್ತಷ್ಟು ರಂಗೇರುವಂತೆ ಮಾಡಿತ್ತು.ಹಾಲನ್ನು ಪಡೆದ ಕಿಶನ್ ಮೊದಲು ತನ್ನವಳ ತುಟಿಗಿರಿಸಿ ನಂತರ ತಾನು ಸ್ವೀಕರಿಸಿದ..ಅವಳ ಕಣ್ಣುಗಳಲ್ಲಿದ್ದ ಮಾಧುರ್ಯ ಅವನ ಹೃದಯದಲ್ಲಿ ಹೊಸ ಕಂಪನವನ್ನುಂಟು ಮಾಡಿತು.ಪತಿಯ ಪ್ರೇಮದಝರಿಯಲ್ಲಿ ಕೊಚ್ಚಿಹೋದಳು.ಅಧರವು ಸಿಹಿಯ ಹಂಚಿಕೊಂಡು ಮೈಮರೆಯಿತು.ಚುಕ್ಕಿತಾರೆಗಳ ಮಂದ ಬೆಳಕಿನಲ್ಲಿ  ಬಾಹುಬಂಧನದ ತಂಪು ಮುದಗೊಳಿಸಿತು. ಅವನೊಲವಿನ ಶರಧಿಯಲಿ ಬಳುಕುವ ಮೀನಾದಳು ಅವಳು.ಸದಾ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುವೆನೆಂಬ ಭರವಸೆಯ ನುಡಿಗಳಿಗೆ ಉತ್ತರವಾಗಿ ಅವನ ಪ್ರೇಮ ಪಲ್ಲಕ್ಕಿಯಲ್ಲಿ ಮೆರೆಯುವ ಯುವರಾಣಿಯಾದಳು.ಇಬ್ಬರ ನಡುವೆ ಪಿಸುಮಾತಿಗೂ ಮೌನದ ಬೇಲಿಭದ್ರವಾಗಿತ್ತು.ಮೌನವು ಮಾತುಗಳನ್ನು ಮೀರಿದ ಭಾವಾಭಿವ್ಯಕ್ತಿಯ ಪ್ರಬಲ ಸೇತುವಾಯಿತು.ಮಾತಿಗೆ ಮಾತು ಬೆಳೆಸಿದ ಪ್ರೀತಿಗೆ ಸೋತು ಮೌನಕ್ಕೆ ಮನವು ಶರಣಾಯಿತು.ಸೋಲುವುದರಲ್ಲೂ ಗೆಲುವಿದೆ..ಆ ಗೆಲುವಿನಲ್ಲಿ ಬದುಕಿನ ಪಯಣದ ನಂಟಿದೆ.ಜೊತೆಯಾಗಿ ಸಾಗುವ ಬಾಳಿನ ತೆಪ್ಪದಲ್ಲಿ ಒಪ್ಪಿತವಾದ ಮೊದಲ ಶುಭಮಿಲನದ ಸುಮಧುರ ಘಳಿಗೆಗೆ ಜೋಡಿ ಪ್ರೇಮಹಕ್ಕಿಗಳು ರುಜುಹಾಕಿದವು.


      ಬೆಳ್ಳಂಬೆಳಗ್ಗೆ ಏಳಬೇಕಾಗಿದ್ದರಿಂದ ರಾತ್ರಿಯೇ ಅಲಾರಾಂ ಇಟ್ಟಿದ್ದರು.ಅಲರಾಂ ಬೊಬ್ಬಿರಿದಾಗ ಇಷ್ಟು ಬೇಗ ಬೆಳಗಾಯಿತಾ .. ಎಂಬಂತೆ ಭಾಸವಾಯಿತು..ಪತಿಯ ಕಚಗುಳಿಯ ಸಹಿಸಿ ..ತಾನೇನು ಸುಮ್ಮನಿರಲಾರೆ ಎನ್ನುತ್ತಾ ಅವನ ಗಲ್ಲಹಿಂಡಿ ಎದ್ದಳು.ಪತ್ನಿಯನ್ನು ಹಿಂಬಾಲಿಸಿದ ಪತಿ.

      ಹೊರಬರುತ್ತಿದ್ದಂತೇ ಎದುರಾದದ್ದು ಭಾಸ್ಕರ ಶಾಸ್ತ್ರಿಗಳು.."ನಿದ್ದೆ ಬಂತಾ ಅಳಿಯಂದಿರೇ..?" ಅಂದಾಗ ಏನು ಹೇಳಬೇಕೆಂದೇ ತೋಚದೆ ಅಡ್ಡಡ್ಡ ಉದ್ದುದ್ದ ತಲೆಯಾಡಿಸಿದ್ದ ಕಿಶನ್.. ಪ್ರಶ್ನೆ ಅನಿರೀಕ್ಷಿತವಾಗಿತ್ತು..ಅದೂ ಶಿಸ್ತಿನ ಸಿಪಾಯಿ ಮಾವನಿಂದ..!!

      ಬಚ್ಚಲು ಮನೆಯ ಕಡೆಗೆ ಹೋಗುತ್ತಿದ್ದಂತೆ ಮಂಗಳಮ್ಮ "ಆರಾಮ ತಾನೇ..?" ಎಂದರು ಮಗಳನ್ನು ನೋಡಿ..ಹಿಂದಿದ್ದ ಕಿಶನ್ ಏನೂ ಅರಿಯದವನಂತೆ ಮುಗ್ಧತೆಯ ಮುಖವಾಡ ಹೊತ್ತು ನಿಂತಿದ್ದ.

      ಕಿಶನ್ ಸ್ನಾನ ಮಾಡಿ ಬಂದಾಗ ಮಂಗಳಮ್ಮ ಮಗಳು ಅಳಿಯನಿಗೆ ಬಿಸಿ ಬಿಸಿ ಕಾಫಿ ಮಾಡಿ ತಂದಿದ್ದರು.ಮೈತ್ರಿಯಲ್ಲಿ ಕೊಟ್ಟು "ಅಳಿಯಂದಿರಿಗೆ ನೀನೇ ಕೈಯಾರೆ ಕೊಡು.ಪತ್ನಿ ಕೊಟ್ಟರೆ ಸ್ವಾದ ಹೆಚ್ಚು" ಅಂದಾಗ ಇಬ್ಬರ ಕೆನ್ನೆಯೂ ರಂಗೇರಿ ಕಣ್ಣಿನ ನಡುವಿನ ತುಂಟಾಟದಲ್ಲಿ ಮಂಗಳಮ್ಮ 'ದಾಂಪತ್ಯದ ಸವಿಯುಂಡ ಜೋಡಿಯಿದು' ಎಂದು ಸಂತೃಪ್ತರಾದರು.


      ಶ್ಯಾಮ ಶಾಸ್ತ್ರಿಗಳು ಆಗಲೇ ಹೊರಟು ಸಿದ್ಧವಾಗಿದ್ದರು.ಅಡಿಗೆ ಕಿಟ್ಟಣ್ಣ ಎಲ್ಲರಿಗೂ ತಿಂಡಿ ಕಾಫಿ ತಯಾರಾಗಿದೆ ಎಂದರು.ತಿಂಡಿ ಸವಿದು ಎಲ್ಲರೂ ಹೊರಟಾಗ ಮನೆಯಂಗಳದಲ್ಲಿ ಬಸ್, ಕಾರು,ಜೀಪು ಬಂದು ನಿಂತಿತು...ನಂತರ ವಧೂವರರ ದಿಬ್ಬಣ  ಕಿಶನ್ ನ ಮನೆಯತ್ತ ಸಾಗಿತು.ಮಗಳಂದಿರಲ್ಲಿ ಶಶಿಯನ್ನು ಬಿಟ್ಟು ಮತ್ತೆಲ್ಲರೂ ಇದ್ದರು.ಮಂಗಳಮ್ಮನ ತವರು ಮನೆಯವರೂ ಇದ್ದರು.ಪ್ರತಿಬಾರಿ ದಾರಿ ಮಧ್ಯೆ ಶಶಿ ಸಿಗುತ್ತಾಳೋ ಎಂದು ಕತ್ತು ಉದ್ದ ಮಾಡುತ್ತಿದ್ದ ಮಹಾಲಕ್ಷ್ಮಿ ಅಮ್ಮ ಇಂದು ಮಾತ್ರ ಅವಳ ಉಸಾಬರಿಗೇ ಹೋಗಲಿಲ್ಲ.ತನ್ನ ಪ್ರೀತಿಯ ಮಗಳ ನಡತೆ ಅವರಿಗೆ ಬಹಳ ನೋವು ತಂದಿತ್ತು.


        ಏಳು ಗಂಟೆಯ ಹೊತ್ತಿಗೆ ಗಣೇಶ ಶರ್ಮನ ಮನೆ ತಲುಪಿತು ವಧೂವರರ ದಿಬ್ಬಣ. ಬರಮಾಡಿಕೊಳ್ಳಲು ನೆಂಟರ ಗಡಣವೇ ನೆರೆದಿತ್ತು.ಕೈಕಾಲು ತೊಳೆದುಕೊಳ್ಳಲು ನೀರು ಕೊಡಲು ಬಂದಿದ್ದ ಮೇದಿನಿ ಅಣ್ಣ ಅತ್ತಿಗೆಯ ಪಕ್ಕ ಬಂದು ನೀರಿನ ಚೊಂಬು ಕೊಟ್ಟು " ಇಬ್ಬರ ಕಣ್ಣೂ ನಿದ್ದೆಮಾಡಿಲ್ಲ ಎಂದು ಸಾರುತ್ತಿದೆ.."ಎಂದಾಗ ಪರಸ್ಪರ ಮುಖ ನೋಡಿ ನಕ್ಕರು ವಧೂವರರು.

"ಭಾವ...ಇಷ್ಟು ದಿನ ಬಾರದ ನಿದ್ದೆಯೆಲ್ಲಾ ನಿನ್ನೆ ಬಂತಾ ಹೇಗೆ.. ದಿಬ್ಬಣ ಬರುವಾಗ ಲೇಟಾಯ್ತು.."ಎಂದರು ಮೇದಿನಿಯ ಗಂಡ..


     ಚಾಂದಿನಿ ಅತ್ತಿಗೆಯ ಕಿವಿಯಲ್ಲಿ "ಅತ್ತಿಗೆ ..ನಿಮ್ಮ ತುಟಿಗಳು ಕೆಂಪಗಾಗಿವೆ ನೋಡಿ.."ಅಂದಾಗ ಮಡದಿಯ ಫಜೀತಿಯನ್ನು ನೋಡಿ 'ಏನೂ ಆಗಿಲ್ಲ.. ಸುಮ್ಮನೆ.. ' ಎಂದು ಕಣ್ಣಲ್ಲೇ ಹೇಳಿದ್ದ ಕಿಶನ್.

"ಭಾವ... ನಿನ್ನೆ ಜೋರು ಮಳೆ ಬಂದು ತಂಪಾಗಿರಬೇಕಲ್ಲ"ಅಂದಾಗ "ಇಲ್ಲಪ್ಪಾ...ಮಳೆಯೇ ಬಂದಿಲ್ಲ.."ಎಂದ ಕಿಶನ್ ಮಾತು ಕೇಳಿ ತಂಗಿಯಂದಿರು ಭಾವಂದಿರು ನಗುತ್ತಿದ್ದಾಗಲೇ ಕಿಶನ್ ಗೆ  ಅರಿವಾಗಿದ್ದು ಅದು ಪ್ರೀತಿಯ ಸುರಿಮಳೆಯನ್ನು ಹೇಳಿದ್ದು ಎಂದು..


     ಸಾಕಷ್ಟು ಛೇಡಿಸಿ ಕೆನ್ನೆ ಕೆಂಪಗಾಗಿಸಿ ವಧೂವರರನ್ನು ಬರಮಾಡಿಕೊಂಡರು. ಉಪಾಹಾರದ ನಂತರ ಮೈತ್ರಿಯನ್ನು ಅಲಂಕಾರ ಮಾಡಲು ರೂಮಿಗೆ ಕರೆದೊಯ್ದರು.ಗಾಯತ್ರಿ ಮೈತ್ರಿ ಸೀರೆಯುಟ್ಟದ್ದನ್ನು ಸರಿಪಡಿಸುತ್ತಿದ್ದರು.ಅವರಿಬ್ಬರ ಸರಸದ ಕುರುಹು ಕಂಡ ಗಾಯತ್ರಿ ನಸುನಕ್ಕು ಸುಮ್ಮನಿದ್ದರು.ಸಂಜನಾ .. "ಅಕ್ಕಾ.. ಇದೇನು?" ಎಂದು ಕಣ್ಣರಳಿಸಿದರೆ ಫಕ್ಕನೆ ಸೀರೆಯಲ್ಲಿ ಇನಿಯನ ಪ್ರೇಯಮುದ್ರೆಯ ಸಂಕೇತವನ್ನು ಬಚ್ಚಿಟ್ಟಳು.. !! "ಬಿಡಿ..ಚಿಕ್ಕಮ್ಮಾ..ನಾನೇ ಸೀರೆಯುಡುತ್ತೇನೆ" ಎಂದು ರೂಮಿನ ಬದಿಗೆ ತೆರಳಿ ಮರೆಯಲ್ಲಿ ತಾನೇ ಸೀರೆಯುಟ್ಟು ಬಂದಳು.


       ನಿನ್ನೆಯಂತೆಯೇ ಇಂದೂ ಕೂಡ ಮಲ್ಲಿಗೆಯ ಚಂದದ ಜಡೆಯನ್ನು ಹಾಕಬೇಕು.ಅದಕ್ಕೆಂದೇ ಮಲ್ಲಿಗೆಯ ಅಟ್ಟೆ ಸಿದ್ಧವಾಗಿತ್ತು.ಸುಂದರವಾಗಿ ಗಾಯತ್ರಿ ,ಮಂಗಳಮ್ಮ ಹಿಂದಲೆಗೆ ಮಲ್ಲಿಗೆಯನ್ನು ವೃತ್ತಾಕಾರವಾಗಿ ಮುಡಿಸಿ ಜಡೆಗೂ ಸುತ್ತಿದರು.ಸಂಜನಾ ,ವಂದನಾ ನೆರವಾದರು..ನಿನ್ನೆಗಿಂತ ಇಂದು ಪತಿಯ ಪ್ರೀತಿಯಲ್ಲಿ ಮಿಂದೆದ್ದ ಮದುಮಗಳ ಮುಖಕ್ಕೆ ವಿಶೇಷ ಕಳೆ ಬಂದಿತ್ತು.ಅಲಂಕಾರ ಮುಗಿಸಿ ಹೊರಬಂದಾಗ ಪತಿ ಅವಳಿಗಾಗಿ ತಾನು ಕಚ್ಚೆಯುಟ್ಟು ಮುಂಡಾಸು ತೊಟ್ಟು ಕಾಯುತ್ತಿದ್ದರು. ಮೈತ್ರಿಯನ್ನು ಕಂಡಾಗ  ರೋಮಾಂಚನಗೊಂಡ ಕಿಶನ್ ಗೆ ಗಾಯತ್ರಿ ಅತ್ತೆ "ನಿನ್ನ ಮದುಮಗಳು ಹೇಗೆ ಕಾಣಿಸುತ್ತಿದ್ದಾಳೆ ಈಗ"ಎಂದು ಕೇಳಿದಾಗ
ಅಲ್ಲೇ ಜೊತೆಯಲ್ಲಿದ್ದ ಮಂಗಳಮ್ಮ " ರೂಮಿಗೆ ಕಳಿಸಿದರೆ ಹೇಳಬಹುದು.. ಅಲ್ವಾ..ಅಳಿಯಂದಿರೇ.."ಎಂದರು..

"ಅತ್ತೇ ನೀವೂ..."

"ಹೌದು ನಂಗೂ ತಮಾಷೆ ಮಾಡಲು ಬರುತ್ತೆ.."

ನಸುನಕ್ಕ ಕಿಶನ್ "ಪುರೋಹಿತರು ಕರೆಯುತ್ತಿದ್ದಾರೆ " ಎಂದು ಹೊರಡಲನುವಾದ..
ಮಗಳ ಕೈಹಿಡಿದು ಹೋಗಲು ಅವಸರಪಡುತ್ತಿದ್ದ ಅಳಿಯನನ್ನು ಕಂಡು "ತುಂಟ ಹುಡುಗ.. ಮೈತ್ರಿ ಇನ್ನು ಯಾವತ್ತೂ ನಿನ್ನ ಜೊತೆಗೆ ಇರ್ತಾಳೆ ಕಣೋ.." ಎಂದರು ಮೆಲ್ಲನೆ.


      ವಧು-ವರರು ಮಂಟಪಕ್ಕೆ ತೆರಳಿದರು. ವೈದಿಕ ಕಾರ್ಯಕ್ರಮಗಳು ಒಂದರಮೇಲೊಂದು ಜರುಗಿದವು. ನಂತರ ಮನೆಯ ಮುಖ್ಯ ಹೊಸ್ತಿಲಿನ ಮುಂದೆ ಹೊಸ್ತಿಲ ಪೂಜೆ ನೆರವೇರಿತು. ಮುದ್ದಾದ ಜೋಡಿ ಮಗ ಸೊಸೆಯನ್ನು ನೋಡಿ ಮಮತಾ ಕಣ್ತುಂಬಿಕೊಂಡರು. ತನ್ನ ಮಗಳಂತೆಯೇ ಇವಳನ್ನು ನೋಡಿಕೊಳ್ಳಬೇಕು. ಎಂದು ನಿರ್ಧರಿಸಿದರು. ಬಂದವರನ್ನೆಲ್ಲಾ ಪ್ರೀತಿಯಿಂದ ಉಪಚರಿಸುತ್ತಾ..ಕಾರ್ಯಕ್ರಮದ ಮೇಲ್ವಿಚಾರಣೆ ಮಾಡುತ್ತಿದ್ದರು ಮಮತಾ ಮತ್ತು ಗಣೇಶ ಶರ್ಮ.ಶಾಸ್ತ್ರಿ ನಿವಾಸದಿಂದ ಬಂದವರೆಲ್ಲರೂ ಕಿಶನ್ ಮನೆಯನ್ನು ಇಂಚಿಂಚು ಬಿಡದೇ ನೋಡಿದರು.ಮೈತ್ರಿಯ ಸೋದರತ್ತೆ ಸಾವಿತ್ರಿ  ತನ್ನ ಇಬ್ಬರು ಅಕ್ಕಂದಿರಿಗೆ ಮನೆ ತೋರಿಸಿದರು. ಅವರ ನಡುವೆ ಗುಸುಗುಸು ಮಾತುಕತೆ ನಡೆಯುತ್ತಿತ್ತು.

ಗೀತಾ :-ಶಶಿಯ ಮನೆ ಇದಕ್ಕಿಂತ ಚಂದವಿತ್ತು. ಮುರಳಿ  ಗುಣದಲ್ಲಿ ಒಳ್ಳೆಯವನೇ.

ಸಾವಿತ್ರಿ :- ಇಬ್ಬರೂ ಇಷ್ಟಪಟ್ಟ ಮೇಲೆ ಯಾರು ಏನು ಹೇಳಲು ಸಾಧ್ಯ.. ಒಟ್ಟಿನಲ್ಲಿ ಮುಂದೆ ಚೆನ್ನಾಗಿ ಬದುಕಿದರೆ ಸಾಕು.

ಸೀತಾ :- ಹೌದು ..ನಿನ್ನೆ ಶಶಿಯಕ್ಕ ಬರುವುದು ಬಹಳ ತಡವಾಗಿದ್ದೇಕೆ..ಇದೇ ಕಾರಣಕ್ಕೆ ಅಸಮಾಧಾನವಿತ್ತಾ..

ಗೀತಾ :- ಅವಳಿಗೆ ಸಮಾಧಾನ ಇದ್ದಂತೆ ತೋರಲಿಲ್ಲ.ಮುಖಗಂಟು ಹಾಕಿಕೊಂಡಿದ್ದಳು.ಆದರೆ ಮುರಲಿ ಮಾತ್ರ ಎಂದಿನಂತೆಯೇ ಇದ್ದ.

 ಸಾವಿತ್ರಿ :- ಆಕೆ ಯಾವಾಗಲೂ ಹಾಗೆ. ಏನಾದರೊಂದು ನೆಪ ಹಿಡಿದು  ಕೊಂಕು ಮಾಡುತ್ತಲೇ ಇರಬೇಕು.

ಎಂದು ಸಹೋದರಿಯರು ಮಾತನಾಡಿಕೊಂಡರು.

      ಅಲ್ಲಿಗೆ ಬಂದ ಮಹಾಲಕ್ಷ್ಮಿ ಅಮ್ಮ ಅದನ್ನು ಕೇಳಿ ಮಗಳ ನಡತೆಯನ್ನು ದೂರಿದರು. ಅವರ ಮನದಾಳದ ನೋವನ್ನು ಉಳಿದ ಮಗಳಂದಿರಲ್ಲಿ ಹಂಚಿಕೊಂಡರು..
"ಆಯ್ತು ಬಿಡಿ... ಈ ಪ್ರಾಯದಲ್ಲಿ ಅದನ್ನೆಲ್ಲ ಮನಸ್ಸಿಗೆ ಹಚ್ಚಿಕೊಂಡು ಕೂರುವುದು ಬೇಡ"ಎಂದು ಮಗಳಂದಿರು ಅಮ್ಮನನ್ನು ಸಮಾಧಾನ ಪಡಿಸಿದರು.






      ಅಷ್ಟರಲ್ಲಿ ಮಂಟಪದಲ್ಲಿ ಒಸಗೆ ಕಾರ್ಯಕ್ರಮ ನಡೆಯುತ್ತಿತ್ತು ಎಲ್ಲರೂ ಅಲ್ಲಿಗೆ  ತೆರಳಿದರು.ಮಹಾಲಕ್ಷ್ಮಿ ಅಮ್ಮ ತಾನು ಕೊಡಬೇಕಾಗಿದ್ದುದನ್ನು ತೆಗೆದುಕೊಂಡು ಹೋಗಿ ಪತಿಯ ಜೊತೆ ನಿಂತರು.ಮೊದಲಿಗೆ ಭಾಸ್ಕರ ಶಾಸ್ತ್ರಿಗಳು ಮತ್ತು ಮಂಗಳಮ್ಮ  ತವರಿನ ಉಡುಗೊರೆ ನೀಡಿದರು. ಮಗಳಿಗೆಂದು ತೆಗೆದ ಝರಿ ಸೀರೆಯನ್ನು ತಂದೆ ಮಗಳ ಹೆಗಲ ಮೇಲಿರಿಸಿ ಮಂತ್ರಾಕ್ಷತೆ ಹಾಕಿ ಆಶೀರ್ವದಿಸಿದರು. ತಾಯಿ ಮಗಳಿಗೆ  ಸುಂದರವಾದ ಚೂಡಿದಾರ್ ಒಂದನ್ನು ಉಡುಗೊರೆಯಾಗಿ ನೀಡಿದರು. ಅಳಿಯನಿಗೆ ಮಾವ ಪಂಚೆ-ಶಲ್ಯವನ್ನು ಮಾವನ ಮನೆಯ ಗೌರವದ ಉಡುಗೊರೆಯಾಗಿ ನೀಡಿದರು. ಮಂಗಳಮ್ಮ ಪ್ಯಾಂಟ್ ಮತ್ತು ಶರ್ಟ್ ಪೀಸ್ ಅನ್ನು ನೀಡಿದರು. ಮಂಗಳಮ್ಮನ ಅಣ್ಣ ಸೋದರಮಾವನ ಉಡುಗೊರೆಯಾಗಿ ಉಂಗುರವನ್ನು ಮೈತ್ರಿಗೆ ತೊಡಿಸಿದರು.ಕಿಶನ್ ಗೆ ಪಂಚೆ ಶಲ್ಯದ ಸಾಂಪ್ರದಾಯಿಕ ಉಡುಗೊರೆಯಿತ್ತು ಹರಸಿದರು.
ಅಜ್ಜ ಮೊಮ್ಮಗಳಿಗೆ ಗಣೇಶನ ಸುಂದರವಾದ ವಿಗ್ರಹವೊಂದನ್ನು ನೀಡಿದರು. ಅಜ್ಜಿ ತುಂಟ ಕೃಷ್ಣನ ಸುಂದರ ಪಟವಿರುವ ಫ್ರೇಮ್ ಅನ್ನು ನೀಡಿದರು. ಮಹೇಶ ತನ್ನ ಅಕ್ಕನಿಗೆ ಏನು ಕೊಡುತ್ತೇನೆಂದು ಸರ್ಪ್ರೈಸ್ ಆಗಿ ಇಟ್ಟಿದ್ದ.  ಅದನ್ನು ಹಾಗೆಯೇ ಒಂದು ಬಾಕ್ಸ್ನಲ್ಲಿ ಕವರ್ ಮಾಡಿ ಅಕ್ಕನ ಕೈಗೆ ಕೊಟ್ಟು ನಮಸ್ಕರಿಸಿದ.
ಅದರೊಳಗೊಂದು ಪುಟಾಣಿ ಹುಡುಗನ ಬೊಂಬೆ . ಬಟನ್ ಪ್ರೆಸ್ ಮಾಡಿದಾಗ ಮಹೇಶನದೇ ಧ್ವನಿ. ವಿಶೇಷವಾದ ಗಿಫ್ಟ್ ಅನ್ನು ಅಕ್ಕನಿಗಾಗಿ ರೆಡಿ ಮಾಡಿ ತಂದಿದ್ದನು.





ಮುಂದುವರಿಯುವುದು..

✍️... ಅನಿತಾ ಜಿ.ಕೆ.ಭಟ್.
17-05-2020.