Saturday, 16 May 2020

ಅತ್ತೆ ಮಾವನನ್ನು ವೃದ್ಧಾಶ್ರಮಕ್ಕೆ ಕಳುಹಿಸಲು ಸೊಸೆಯೇ ಕಾರಣವೇ?



ಅತ್ತೆಮಾವನನ್ನು ವೃದ್ಧಾಶ್ರಮಕ್ಕೆ ಕಳುಹಿಸಲು ಸೊಸೆಯೇ ಕಾರಣವೇ..?


(ಸಾಹಿತ್ಯ ವೇದಿಕೆಯೊಂದರಲ್ಲಿ ಕೊಟ್ಟ ವಿಷಯದ ಸ್ಪರ್ಧಾಲೇಖನ)


            ಎಂದಿನಂತೆ ಇಂದೂ ಕೂಡ ಬೆಳಗ್ಗೆ ವಾಟ್ಸಪ್, ಫೇಸ್ಬುಕ್ ಮೇಲೆ ಕಣ್ಣಾಡಿಸಿದೆ.ವಿಡಿಯೋವೊಂದು ಮನಕಲುಕಿತ್ತು.ಸಮಾಜದಲ್ಲಿ ನೂರಕ್ಕೊಂದು ಕುಟುಂಬದಲ್ಲಿ ನಡೆವ ವಿಚಾರವನ್ನು  ಸರ್ವೇ ಸಾಮಾನ್ಯ ಎಂಬಂತೆ ಬಿಂಬಿಸಲಾಗಿತ್ತು.ಒಂದು ಕುಟುಂಬದ ಚಿತ್ರಣ.ಮುಂಗೋಪಿ, ಕಟು ಹೃದಯಿ ಸೊಸೆ.ತನ್ನ ವೃದ್ಧ ಅತ್ತೆ ಮಾವನನ್ನು ಪೀಡಿಸಿ ಕಿರುಕುಳ ನೀಡಿ ವೃದ್ಧಾಶ್ರಮಕ್ಕೆ ಸೇರಿಸಲು ಕಾರಣಳಾದವಳು.ಇದು ವಿಡಿಯೋದ ಸಾರಾಂಶ.


                ಇದನ್ನು ಕಂಡು ನನಗೆ ಸ್ವಲ್ಪ ವಿಚಿತ್ರ ಅನಿಸಿತು.ಅದೆಷ್ಟು ಸೊಸೆಯಂದಿರು ತಮ್ಮ ಅತ್ತೆ ಮಾವನ ಕಿರುಕುಳ ತಾಳಲಾರದೇ ಉರುಳಿಗೆ ಕೊರಳೊಡ್ಡಿದ್ದಾರೋ ಏನೋ... ಎಷ್ಟು ಜನ ಮೌನಗೌರಿಯಾಗಿ ಎಲ್ಲವನ್ನೂ ಸಹಿಸಿಕೊಂಡು ಬರುತ್ತಿದ್ದಾರೋ ಏನೋ...ಅಂತಹ ವಿಷಯಗಳು ಸುದ್ದಿಯಾಗುವುದಿಲ್ಲ.


              ಹೆಣ್ಣೊಬ್ಬಳು ತಾಯ್ತಂದೆಯರ ಪ್ರೀತಿಯಲ್ಲಿ ಬೆಳೆಯುತ್ತಾಳೆ.ಮದುವೆಯೆಂಬ ಮೂರಕ್ಷರದ ಬಂಧನದೊಂದಿಗೆ ಗಂಡನ ಮನೆಗೆ ಸೇರುತ್ತಾಳೆ.ಕೆಲವರಿಗೆ ಇದು ಅನುರಾಗ ಬಂಧನವಾದರೆ ಇನ್ನು ಕೆಲವರಿಗೆ ಸಹಿಸಲೂ ಆಗದ ಬಿಡಿಸಿಕೊಳ್ಳಲೂ ಆಗದ ಬಂಧನ.


             ಸೊಸೆಯಾಗಿ ಮನೆಗೆ ಬಂದ ಮಹಾಲಕ್ಷ್ಮಿಯನ್ನು ಪ್ರೀತಿಯಿಂದ ಕಾಣಬೇಕು.ತಪ್ಪಾಗುತ್ತಿದ್ದರೆ ಪ್ರೀತಿಯಿಂದ ತಿಳಿಹೇಳಬೇಕು.ಆಗಾಗ ತವರುಮನೆಗೆ ತೆರಳುವ ಅವಕಾಶ ನೀಡಬೇಕು.ಆಕೆಯ ತವರ ಬಂಧುಗಳು ಬಂದಾಗ ಮನೆಗೆ ಬರುವ ಇತರ ಬಂಧುಗಳಿಗೆ ಹೇಗೆ ಉಪಚರಿಸುತ್ತೇವೆಯೋ ಹಾಗೇ ಉಪಚರಿಸಬೇಕು. ಈ ರೀತಿ ಪ್ರೀತಿಯ ವಾತಾವರಣದಲ್ಲಿ ಬದುಕಿದ ಸೊಸೆ ತನ್ನ ಅತ್ತೆ ಮಾವನನ್ನು ವೃದ್ಧಾಪ್ಯದಲ್ಲಿ ಚೆನ್ನಾಗಿ ನೋಡಿಕೊಳ್ಳುವಳು ಎಂಬುದರಲ್ಲಿ ಎರಡು ಮಾತಿಲ್ಲ.


           ಆದರೆ ಎಲ್ಲ ಸೊಸೆಯಂದಿರಿಗೂ ಈ ತರಹದ ಅತ್ತೆ ಮಾವ ದೊರೆಯುವುದಿಲ್ಲ.ಸೊಸೆಯ ಪ್ರತಿಯೊಂದು ಕೆಲಸದಲ್ಲೂ ತಪ್ಪನ್ನೇ ಹುಡುಕುವುದು, ತವರುಮನೆಯನ್ನು ಹಳಿಯುವುದು,ರೂಪದ ವಿಷಯದಲ್ಲಿ ಕೊಂಕು ನುಡಿಯುವುದು, ಎಷ್ಟು ಕೆಲಸಮಾಡಿದರೂ ಸಮಾಧಾನವಾಗದಿರುವುದು ,ಸಿಕ್ಕಸಿಕ್ಕವರಲ್ಲಿ ದೂರುವುದು.... ಇತ್ಯಾದಿಗಳು ಹಲವು ಸೊಸೆಯಂದಿರ ಬಾಳನ್ನು ಹೈರಾಣವಾಗಿಸುತ್ತದೆ.



            ಅತ್ತ ತವರುಮನೆಯಲ್ಲೂ ಇದನ್ನು ಹೇಳಿಕೊಳ್ಳಲಾಗದೇ ಇತ್ತ ಸಹಿಸಲೂ ಆಗದೆ ಹೆಣ್ಣುಮಗಳು ಮೌನಗೌರಿಯಾಗಿ ಬಿಡುತ್ತಾಳೆ.ಗಾಣದೆತ್ತಿನಂತೆ ಹಗಲಿರುಳು ದುಡಿದರೂ ಬೆಲೆಯಿಲ್ಲವಲ್ಲಾ ಎಂದು ಕೊರಗುತ್ತಾಳೆ.ಇದೇ ಕೊರಗು ಮುಂದೆ ಹಠಕ್ಕೆ, ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳಲು ಕಾರಣವಾಗಬಹುದು.ಅದನ್ನೇ ಬಲ್ಲವರು ಹೇಳಿದ್ದು "ಅತ್ತೆಗೊಂದು ಕಾಲ ಸೊಸೆಗೊಂದು ಕಾಲ" ಎಂದು.





               ನಮ್ಮ ನೆರೆಹೊರೆಯಲ್ಲಿ ಒಬ್ಬಾಕೆ ಆಶಾ.ಸುಸಂಸ್ಕೃತ ಮನೆತನದ ಕುವರಿ.ಹಿರಿಯರಿಗೆ ಎದುರು   ಮಾತನಾಡಬಾರದು ಎಂಬುದನ್ನು ಅರೆದು ಕುಡಿಸಿ ಬೆಳೆಸಿದ್ದಾರೆ ಆಕೆಯ ಹೆತ್ತವರು. ಎಲ್ಲರೊಂದಿಗೆ ನಗುನಗುತ್ತಲೇ ಬೆರೆತು ಚುರುಕಾಗಿ ಕಾಲೊನಿ ತುಂಬಾ ಓಡಾಡುತ್ತಿದ್ದಳು ಮದುವೆಯಾಗಿ ಬಂದ ಹೊಸದರಲ್ಲಿ.
ಆಕೆಯ ಅತ್ತೆ ಎಪ್ಪತ್ತೈದರ ಆಆಸುಪಾಸಿನವರು.ಮೊದಲೆಲ್ಲ ತನ್ನ ಮಗನಿಗೆ ಹುಡುಗಿ ಸಿಗಲಿಲ್ಲ ಎಂದು
ಕೊರಗುತ್ತಿದ್ದ ;  ಒಮ್ಮೆಮಗನಿಗೆ ಹೆಣ್ಣು ಸಿಕ್ಕರೆ ಸಾಕು ಅನ್ನುತ್ತಿದ್ದ ಆಕೆ ಸೊಸೆ ಮನೆಗೆ ಕಾಲಿಡುತ್ತಿದ್ದಂತೆ ಬದಲಾಗಿಬಿಟ್ಟಳು.ಆರಂಭದಿಂದಲೇ ಸೊಸೆಗೆ ಹಾಗೆ ಮಾಡು ,ಹೀಗೆ ಮಾಡಿದ್ದು ಸರಿಯಿಲ್ಲ ಎಂದು ಬೀದಿಗೂ ಕೇಳುವಂತೆ ಗದರುತ್ತಿದ್ದಳು.ತಾನು ಒಂದು ಕುರ್ಚಿಯಲ್ಲಿ ಕುಳಿತು ಆದೇಶವನ್ನು ಮಾಡುತ್ತಿದ್ದಳೇ ಹೊರತು ಒಂದು ಕೆಲಸಕ್ಕೂ ಸೊಸೆಗೆ ಕೈ ಜೋಡಿಸಿದವಳಲ್ಲ.ಆಶಾ ಮನೆಗೆಲಸ ಪೂರೈಸಿ ಹೊರಗೆ ಉದ್ಯೋಗಕ್ಕೂ ತೆರಳುತ್ತಿದ್ದಳು.ಇದೇ ವಾಡಿಕೆ ಆಕೆ ಗರ್ಭಿಣಿಯಾದ ಎಂಟೂವರೆ ತಿಂಗಳವರೆಗೆ ನಡೆಯಿತು.ನಂತರ ಉದ್ಯೋಗಕ್ಕೆ ರಜೆ ಹಾಕಿದ ಮೇಲೆ ತುಸು ವಿಶ್ರಾಂತಿ ದೊರೆಯಿತೋ ಏನೋ ಪಾಪ.


            ಗಂಡು ಮಗುವಿನ ತಾಯಿಯಾದಳು ಆಶಾ.ಬಾಣಂತನದ ನಲುವತ್ತನೇ ದಿನವೇ ವಾಪಸ್ ಕರೆಸಿಕೊಂಡಿದ್ದಳು ಅತ್ತೆ, ಮನೆಗೆಲಸ ಮಾಡಲು ಜನವಿಲ್ಲವೆಂದು.ಮನೆಗೆಲಸ, ಪುಟ್ಟಮಗುವಿನ ಆರೈಕೆ ,ಕಟು ಮಾತುಗಳಿಂದ ಸೊರಗಿದ್ದಾಳೆ ಆಶಾ.ಕೃಶವಾದ ಆಶಾಳನ್ನು ನೋಡಿದರೆ ಅಪೌಷ್ಟಿಕತೆ ಎದ್ದು ಕಾಣುತ್ತದೆ.ಅಪರೂಪಕ್ಕೊಮ್ಮೆ ನನ್ನನ್ನು ಕಂಡಾಗ ಬಲವಂತವಾಗಿ ಮುಖದ ಮೇಲೊಂದು ಹೂ ನಗೆ ಚಿಮ್ಮಿಸುತ್ತಾಳೆ.ತನ್ನೆಲ್ಲಾ ಆಸೆ ಆಕಾಂಕ್ಷೆಗಳನ್ನು ಮೂಟೆ ಕಟ್ಟಿ ಬಿಸಾಕಿದ್ದಾಳೆ.ವಯೋಸಹಜ ದೌರ್ಬಲ್ಯವೋ ಏನೋ    ಒಮ್ಮೊಮ್ಮೆ ಆಕೆಯ ಅತ್ತೆಯ ಏರುದನಿ ಕಾಲೊನಿ ದಾಟಿ ಮುಖ್ಯ ರಸ್ತೆಯವರೆಗೆ ಕೇಳಿಸುತ್ತದೆ.



           ಆಶಾಳ ಗಂಡನೂ ಈ ವಿಷಯದಲ್ಲಿ ಮೌನಿ.ಹಾಗೆಂದು ಆಶಾಳ ಅತ್ತೆ ನೆರೆಹೊರೆಯವರ ಪಾಲಿಗೆ ಕೆಟ್ಟವಳಲ್ಲ.ನಗುಮೊಗದಿಂದಲೇ ಮಾತಾಡಿಸುವವಳು ಸೊಸೆಗೆ ಮಾತ್ರ ಬಿಗಿ.ಆದರೂ ಅತ್ತೆಯನ್ನು ವೃದ್ಧಾಶ್ರಮಕ್ಕೆ ಸೇರಿಸುವಂತೆ ಕುಮ್ಮಕ್ಕು ನೀಡಿಲ್ಲ ಆಶಾ.ಅತ್ತೆಸೊಸೆ ಜಗಳವಂತೂ ನಡೆದೇ ಇಲ್ಲ.ಏಕೆಂದರೆ ಇತ್ತೀಚೆಗೆ ತನ್ನ ಬಾಯಿಗೆ ಹಾಕಿದ ಬೀಗವನ್ನು ಆಶಾ ತೆಗೆದೇ ಇಲ್ಲ.ಅತ್ತೆಯ ಬಗ್ಗೆ ಗಂಡನಲ್ಲಿ ಚಾಡಿ ಹೇಳಿ ತಾಯಿ ಮಗನ ಮಧ್ಯೆ ಬಿರುಕು ಮೂಡಿಸಿಲ್ಲ ಆಶಾ..

ಗೆಳತಿ ಆಶಾ..... ಮೌನಗೌರಿಯಾಗಿಬಿಟ್ಟಿದ್ದಾಳೆ.....ಮೂಕಪ್ರಾಣಿಯಾಗಿಬಿಟ್ಟಿದ್ದಾಳೆ.... ಇಪ್ಪತ್ತೈದರ ಹರೆಯದ ಈಕೆಯ ಮೂಕರೋದನ ಯಾರಿಗೂ ಕೇಳಿಸುತ್ತಿಲ್ಲ...



         ಇದು ಗೆಳತಿ ಆಶಾಳ ಕಥೆ.ಇಂತಹ ನೂರಾರು ಆಶಂದಿರು ನಮ್ಮ ಸಮಾಜದಲ್ಲಿ ಇದ್ದಾರೆ.ಅಂತಹವರ ನೋವಿನ ವಿಡಿಯೋಗಳು ಪ್ರಸಾರವಾಗುತ್ತಿಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿಲ್ಲ.


         ಎಷ್ಟೋ ಒಳ್ಳೆಯ ಅತ್ತೆಯಂದಿರೂ ಇದ್ದಾರೆ.ಮದುವೆಯ ಸಂದರ್ಭದಲ್ಲಿ ಅರ್ಧಕ್ಕೆ ನಿಂತಿದ್ದ ಸೊಸೆಯ ಓದಿಗೆ ಬೆಂಬಲವಾಗಿ ನಿಂತು, ಉದ್ಯೋಗಕ್ಕೆ ತೆರಳುವ ಸೊಸೆಯಂದಿರಿಗೆ ಮನೆಗೆಲಸ ಹೊರೆಯಾಗದಂತೆ ನೋಡಿಕೊಳ್ಳುವ ಸಹೃದಯಿ ಅತ್ತೆಯಂದಿರು ಇದ್ದಾರೆ.ಸೊಸೆಯ ಬಸಿರು ಬಾಣಂತನ ಸಂದರ್ಭದಲ್ಲಿ ತಾಯಂದಿರ ಸ್ಥಾನ ತುಂಬಿದವರಿದ್ದಾರೆ.ಸೊಸೆ ಉದ್ಯೋಗಕ್ಕೆ ತೆರಳಿದಾಗ ಮೊಮ್ಮಕ್ಕಳ ಲಾಲನೆಪಾಲನೆಯ ಜವಾಬ್ದಾರಿಯನ್ನು ಹೊತ್ತವರಿದ್ದಾರೆ.ದೂರದೂರಿಗೆ ಪ್ರಮೋಷನ್ ಆದಾಗ ಮೊಮ್ಮಕ್ಕಳ ಪಾಲಿಗೆ ತಾವೇ ಅಮ್ಮನ ಪ್ರೀತಿಯನ್ನುಣಿಸಿದವರಿದ್ದಾರೆ.


           ಸಮಾಜದಲ್ಲಿ ಒಳ್ಳೆಯ ರೀತಿಯಲ್ಲಿ ಮನೆ ನಿಭಾಯಿಸಿಕೊಂಡು ಹೋಗುವ ಸೊಸೆಯಂದಿರಿದ್ದರೂ, ಸೊಸೆಯಂದಿರು ಹಿರಿಯರನ್ನು ವೃದ್ಧಾಶ್ರಮಕ್ಕೆ ಕಳುಹಿಸುವ ರೂವಾರಿಗಳು ಎಂದು ಬಿಂಬಿತವಾಗುತ್ತಿರುವುದು ಬೇಸರದ ಸಂಗತಿ.
ಅಂತಹ ವಿಷಯಗಳನ್ನು like, share, forward ಮಾಡುವ ಮುನ್ನ ತುಸು ಯೋಚಿಸಬೇಕು..ವೃದ್ಧಾಶ್ರಮಕ್ಕೆ ಹಿರಿಯರನ್ನು ಸೇರಿಸಲು ಹಲವಾರು ಕಾರಣಗಳಿರಬಹುದು.ಮನೆಯ ಎಲ್ಲ ವಿಷಯಗಳೂ ಸೊಸೆಯ ಹಿಡಿತದಲ್ಲಿ ಇರುತ್ತದೆಯೆಂಬುದು ತಪ್ಪು ಕಲ್ಪನೆ.ತೀವ್ರ ಅನಾರೋಗ್ಯ,ಉದ್ಯೋಗದಿಂದಾಗಿ ಆರೈಕೆಮಾಡಲು ಸಮಯ ಸಿಗದಿರುವುದು,ಸೊಸೆಯೂ ವಯೋಸಹಜ ಖಾಯಿಲೆಗಳಿಂದ ಹೈರಾಣವಾಗಿರುವುದು , ರಾತ್ರಿ ಹಿರಿಯರ ಆರೈಕೆಯ ಸಲುವಾಗಿ ನಿದ್ದೆಗೆಟ್ಟು ಹಗಲು ಮನೆಕೆಲಸ ನಿಭಾಯಿಸಲು ಸಾಧ್ಯವಾಗದಿದ್ದಾಗ ಸಹಾಯಕಿಯೂ ಸಿಗದಿರುವುದು..... ಇತ್ಯಾದಿ ಕಾರಣಗಳಿರಬಹುದು.



     ಇತ್ತೀಚೆಗೆ ಒಂದು ಕುಟುಂಬದಲ್ಲಿ ವಯೋವೃದ್ಧ ಅತ್ತೆಯನ್ನು  ಏಳೆಂಟು ವರುಷಗಳ ಕಾಲ ರಾತ್ರಿ ನಿದ್ದೆಗೆಟ್ಟು ಸೇವೆಗೈದು ಮಗಸೊಸೆ ಇಬ್ಬರೂ ಅನಾರೋಗ್ಯಕ್ಕೆ ಒಳಗಾಗಿದ್ದರು.ಸೊಸೆಯ ಆರೋಗ್ಯ ಏರುಪೇರಾಗಿ ಬದುಕುವ ಭರವಸೆಯೇ ಇಲ್ಲದಿದ್ದಾಗಲೂ, ವಯೋವೃದ್ಧರ ಇತರ ಆರು ಮಕ್ಕಳಲ್ಲಿ ಒಬ್ಬರೂ ನೋಡಿಕೊಳ್ಳಲು ಬರದೇಯಿದ್ದಾಗ ಅನಿವಾರ್ಯವಾಗಿ ವೃದ್ಧಾಶ್ರಮಕ್ಕೆ ಸೇರಿಸಬೇಕಾಯಿತು..



              ವಿಡಿಯೋ ಮಾಡಿ ಬಿತ್ತರಿಸುವಲ್ಲಿ ವೃದ್ಧಾಶ್ರಮ ಎಂಬ ವಾಣಿಜ್ಯ ವಹಿವಾಟನ್ನು ಭಾರತದ ಕುಟುಂಬ ವ್ಯವಸ್ಥೆಯ ಒಳಗೆ ತೂರುವ ಹುನ್ನಾರವೂ ಇರಬಹುದು.ಕುಟುಂಬವನ್ನು ಒಡೆದು ತಮ್ಮ ಜೇಬು ತುಂಬಿಸುವ ಕುತಂತ್ರ ಇರಲೂಬಹುದು.
ಈ ಬಗ್ಗೆಯೂ ಎಚ್ಚರಿಕೆ ಅತ್ಯಗತ್ಯ.


              ಇದು ಯಾರನ್ನೂ ದೂಷಿಸುವ ಉದ್ದೇಶದಿಂದ ಬರೆದ ಬರಹವಲ್ಲ.ನನ್ನ ಅನಿಸಿಕೆ ವ್ಯಕ್ತಪಡಿಸಿದ್ದೇನೆ ಅಷ್ಟೇ.ಇದರ ಮೇಲೆ ಕಟು ಟೀಕೆ, ಚರ್ಚೆ ಬೇಡ.ಭಾರತೀಯ ಸಂಸ್ಕಾರವನ್ನು ಪಾಲಿಸುವ ಎಲ್ಲಾ ಅತ್ತೆಸೊಸೆಯಂದಿರಿಗೂ ಅವರ ಕುಟುಂಬಕ್ಕೂ ನನ್ನ ಗೌರವದ ಪ್ರಣಾಮಗಳು.


                    
✍️... ಅನಿತಾ ಜಿ.ಕೆ.ಭಟ್.
16-05-2020.


No comments:

Post a Comment