Sunday, 10 May 2020

ಉಪಯೋಗೀ ಸಸ್ಯಗಳು-ನೆಕ್ಕಿ,ಕಾಡುಕಿಸ್ಕಾರ, ದಾಲ್ಚಿನ್ನಿ,ಹಾಡೇಸೊಪ್ಪು, ಹುಳಿ ಕರ್ಕ



         ಉಪಯೋಗೀ ಸಸ್ಯಗಳು


         ನಮ್ಮ ಸುತ್ತಮುತ್ತ ಹಲವಾರು ಔಷಧೀಯ ಸಸ್ಯಗಳಿವೆ.ಕೆಲವುದರ ಪರಿಚಯ ನಮಗಿದ್ದರೆ ಇನ್ನು ಹಲವು ಗುರುತು ಇರುವುದೂ ಇಲ್ಲ, ತಿಳಿದುಕೊಳ್ಳುವ ಗೋಜಿಗೂ ನಾವು ಹೋಗುವುದಿಲ್ಲ.ಅಂತಹ ಕೆಲವು ಗಿಡಗಳನ್ನು  ಪರಿಚಯಿಸುವ ಕಿರುಪ್ರಯತ್ನ ನನ್ನದು.



ನೆಕ್ಕಿಗಿಡ/ಲಕ್ಕಿಗಿಡ:-



         ನೆಕ್ಕಿ ಗಿಡ ಅಥವಾ ಲಕ್ಕಿ ಗಿಡ  ಪೊದೆಯ ರೀತಿಯಲ್ಲಿ 8 ರಿಂದ 10 ಅಡಿಗಳಷ್ಟು ಎತ್ತರ ಬೆಳೆಯಬಹುದಾದ ಸಸ್ಯ.ನೀರಿನಾಶ್ರಯವಿದ್ದಲ್ಲಿ ಹೆಚ್ಚಾಗಿ ಕಂಡುಬರುತ್ತದೆ.ಎಲೆಗಳು ಹತ್ತರಿಂದ ಹನ್ನೆರಡು ಸೆಂಟಿಮೀಟರ್ ಉದ್ದವಿದ್ದು  ಮೂರು ಭಾಗಗಳಂತೆ ಕಾಣುತ್ತವೆ.ಹಸಿರಾದ ಎಲೆಗಳ ಅಡಿಭಾಗ ಬೂದುಬಣ್ಣವಿರುತ್ತದೆ.ನೇರಳೆ ಬಣ್ಣದ ಗೊಂಚಲು ಗೊಂಚಲಾದ ಹೂಗಳನ್ನು ಬಿಡುತ್ತದೆ.ನಾಲ್ಕು ಬೀಜಗಳಿರುವ ದುಂಡಗಿನ ಕಾಯಿಗಳನ್ನು ಕಾಣಬಹುದು.




         ಇದರಲ್ಲಿ ಎರಡು ವಿಧಗಳಿವೆ.ಕರಿನೆಕ್ಕಿ ಮತ್ತು ಬಿಳಿನೆಕ್ಕಿ ಎಂದು.
ಇದರ ವೈಜ್ಞಾನಿಕ ಹೆಸರು Vitex Negundo. ಇಂಗ್ಲಿಷ್ ನಲ್ಲಿ Five  leaved chaste, ಸಂಸ್ಕೃತದಲ್ಲಿ ಸಿಂಧುವಾರ,ನೀಲನಿರ್ಗುಂಡಿ.... ಹಿಂದಿಯಲ್ಲಿ ನಿರ್ಗುಂಡಿ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ.
        ಈ ಸಸ್ಯವನ್ನು ಆಯುರ್ವೇದ, ಹೋಮಿಯೋಪತಿ ಮತ್ತು ಯುನಾನಿ ಗಳಲ್ಲಿ ಔಷಧ ತಯಾರಿಕೆಯಲ್ಲಿ ಬಳಸಲಾಗುತ್ತದೆ.ಉಪಯೋಗಗಳನ್ನು ತಿಳಿದುಕೊಳ್ಳೋಣ.



ಉಪಯೋಗಗಳು:-


** ವಿಪರೀತ ಶೀತ, ಕೆಮ್ಮು, ಅಸ್ತಮಾ ಇದ್ದರೆ ಇದರ ಎಲೆಗಳನ್ನು ನೀರಿನಲ್ಲಿ ಕುದಿಸಿ ಹಬೆ ತೆಗೆದುಕೊಂಡರೆ ಶೀಘ್ರ ಉಪಶಮನ.


** ಎಲೆಗಳನ್ನು ಬಿಸಿ ಮಾಡಿ ಕಟ್ಟಿದರೆ ಅಥವಾ ಶಾಖ ಕೊಟ್ಟರೆ ಉಳುಕು, ನೋವು,ಬಾವು ಗಳು ಕಡಿಮೆಯಾಗುತ್ತವೆ.


**ಎಲೆಗಳನ್ನು ಹಾಕಿ ಕಾಯಿಸಿದ ಎಣ್ಣೆ ವಾತದ ನೋವಿಗೆ, ಮಕ್ಕಳ ಬಾಲಗ್ರಹಕ್ಕೆ ಉತ್ತಮ ಪರಿಹಾರ.


**ಎಲೆಗಳ ರಸವನ್ನು ಹಿಂಡಿ ಮಕ್ಕಳಿಗೆ ಚಿಹ್ನೆ ಮಾತ್ರೆಯೊಂದಿಗೆ ಕೊಡುವುದು ನಮ್ಮೂರಲ್ಲಿ ರೂಢಿ. ಇದು ಹೊಟ್ಟೆ ಹುಳ ನಾಶಕ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.


**ನೀರಿಗೆ ಎಲೆಗಳನ್ನು ಹಾಕಿ ಕುದಿಸಿ ಸ್ನಾನ ಮಾಡಿದರೆ ಹುಣ್ಣುಗಳು,ಬಾವುಗಳು ಕಡಿಮೆಯಾಗುತ್ತವೆ.


**ದನದ ಕೊಟ್ಟಿಗೆಯಲ್ಲಿ ವಿಪರೀತ ಸೊಳ್ಳೆ,ನೊಣಗಳ ಕಾಟವಿದ್ದರೆ,ಕೆಂಡದ ಮೇಲೆ ನೆಕ್ಕಿ ಸೊಪ್ಪು ಹಾಕಿ ಕೊಟ್ಟಿಗೆಯಲ್ಲಿ ಇರಿಸುವರು. ಈ ಹೊಗೆಯಿಂದ ಸೊಳ್ಳೆ ನೊಣಗಳ ಕಾಟ ನಿಯಂತ್ರಣಕ್ಕೆ ಬರುತ್ತದೆ.


         ಇತ್ತೀಚೆಗೆ ಇದನ್ನು ನಗರಗಳಲ್ಲಿ ಮನೆಯಂಗಳದಲ್ಲಿ ಸೊಳ್ಳೆ ಕಾಟ ನಿಯಂತ್ರಣಕ್ಕೆ ನೆಡುತ್ತಿದ್ದಾರೆ. ಈ ಸೊಪ್ಪು ಮನೆಯಲ್ಲಿ, ಜೇಬಿನಲ್ಲಿ ಇಟ್ಟುಕೊಂಡರೆ ಲಕ್ಕೀ ಎಂಬ ನಂಬಿಕೆಯಿದೆಯಂತೆ.ಸರ್ವೇಸಾಮಾನ್ಯವಾಗಿ ಕಾಣುವಂತಹ ನೆಕ್ಕಿ/ಲಕ್ಕಿ ಗಿಡ ಗುಣವಿಶೇಷಗಳ ಆಗರ.





ಕಾಟ್ ಕಿಸ್ಕಾರ /ಕಾಡು ಕಿಸ್ಕಾರ/ಗುಡ್ಡದ ಕೇಪುಳ:-



        ಗುಡ್ಡಗಾಡುಗಳಲ್ಲಿ ತಮ್ಮಷ್ಟಕ್ಕೆ ಹೂವರಳಿಸಿ ಕಂಗೊಳಿಸುತ್ತಿರುವ ಗಿಡಗಂಟಿಗಳು ಹಲವಾರು.ಅವುಗಳಲ್ಲಿ ಒಂದು ಕಾಟ್ ಕಿಸ್ಕಾರ /ಗುಡ್ಡದ ಕೇಪುಳ/ಗುಡ್ಡೆ ಕಿಸ್ಕಾರ.
ಇಂಗ್ಲಿಷಿನಲ್ಲಿ Ixora , Jungle geranium ಎಂದು ಕರೆಯಲ್ಪಡುವ ಇದರ ಸಸ್ಯಶಾಸ್ತ್ರೀಯ ಹೆಸರು Ixora coccinea. 


         ವರ್ಷವಿಡೀ ಹೂ ಕೊಡುವ ಈ ಗಿಡವು ಅಲ್ಲಲ್ಲಿ ಪೊದೆಗಳಾಗಿ ಕಂಡುಬರುತ್ತದೆ.ಸುಂದರ ಕೆಂಪು ಹೂ ಗೊಂಚಲು ಆಕರ್ಷಕವಾಗಿದೆ.ಹೂವಿನ ನಂತರ ಪುಟ್ಟನೆ ಕೆಂಪಗಿನ ದುಂಡನೆ ಹಣ್ಣುಗಳು ಆಗುವುವು.ಚಿಕ್ಕ ಮಕ್ಕಳಂತೂ ಇದನ್ನು ಹುಡುಕಿ ತಿಂದು ಖುಷಿ ಪಟ್ಟುಕೊಳ್ಳುತ್ತಾರೆ.ಸಿಹಿ ಮತ್ತು ಒಗರಿನ ಮಿಶ್ರ ಸ್ವಾದದ ಹಣ್ಣು ತಿನ್ನಲು ಬಲು ರುಚಿ.



       ಕಿಸ್ಕಾರ ಹೂವಿನಲ್ಲಿ ಹಲವಾರು ತಳಿಗಳಿವೆ.ಆದರೂ ದುರ್ಗಾ ಪೂಜೆ, ತ್ರಿಕಾಲ ಪೂಜೆ, ನವರಾತ್ರಿಯ ಸಮಯದಲ್ಲಿ ದೇವಿಯ ಪುಷ್ಪಾಂಜಲಿಗೆ (ನಮ್ಮ ಕರಾವಳಿಯಲ್ಲಿ)ಗುಡ್ಡದ ಕೇಪುಳ ಹೂವಿಗೇ ಅಗ್ರ ಮನ್ನಣೆ.ಆಗ ಗುಡ್ಡ ಗುಡ್ಡ ತಿರುಗಿ ಇದನ್ನು ಸಂಗ್ರಹಿಸುವುದು ರೂಢಿ.ಹಳ್ಳಿಯಲ್ಲಿ ಶಾಲೆಗೆ ಹೋಗುವ ಮಕ್ಕಳು ಇದರ ಹಣ್ಣುಗಳನ್ನು ಪೊದೆಗಳಲ್ಲಿ ಅರಸಿ ತಿನ್ನುತ್ತಾರೆ.ಅದು ಮಕ್ಕಳಿಗೆ ಮಜಾ.ಮನೆಗೆ ತಡವಾಗಿ ಬಂದರೆ ಹಿರಿಯರಿಂದ ಸಜಾ..!!




       ಚಿಗುರು, ಮೊಗ್ಗು ಮತ್ತು ಹೂಗಳನ್ನು ಚಟ್ನಿ, ತಂಬುಳಿ ಮಾಡಲು ಬಳಸುವರು.ಬೇಸಿಗೆಕಾಲಕ್ಕೆ ಸೂಕ್ತ.ಎಲೆಗಳ ಕಾಷಾಯ ಮಧುಮೇಹ ನಿಯಂತ್ರಣಕ್ಕೆ ಸಹಕಾರಿ.ಬೇರನ್ನು ಜಜ್ಜಿ ತೆಂಗಿನೆಣ್ಣೆಯಲ್ಲಿ ಹಾಕಿ ತಯಾರಿಸಿದ ತೈಲ ಕೆಂಪು ಬಣ್ಣ ಹೊಂದಿರುತ್ತದೆ.ಇದನ್ನು ಮಕ್ಕಳ ಮೈಗೆ ಹಚ್ಚಲು ,ನೋವುಗಳಿಗೆ ಹಚ್ಚಲು ಬಳಸುವರು.ಬೇಸಿಗೆಯಲ್ಲಿ ಬೇರಿನ ತುಂಡುಗಳನ್ನು ಹಾಕಿದ ನೀರನ್ನು ಕುಡಿಯಲು ಬಳಸಿದರೆ ದೇಹಕ್ಕೆ ತಂಪು.
ಕಾಟು ಕಿಸ್ಕಾರದ ಬೇರಿನಿಂದ ಹಿಡಿದು ಹಣ್ಣಿನವರೆಗೆ ಎಲ್ಲ ಭಾಗವೂ ಉಪಯುಕ್ತವೇ ..... ಆದರೆ ಈಗ ನಗರೀಕರಣದಿಂದಾಗಿ ಕಾಣಸಿಗುವುದು ಸ್ವಲ್ಪ ಅಪರೂಪವೇ....



ದಾಲ್ಚಿನ್ನಿ/ಚೆಕ್ಕೆ:-



        ಅಡುಗೆ ಮನೆಯಲ್ಲಿ ನಿತ್ಯ ಬಳಸುವ ಸಾಂಬಾರ ಪದಾರ್ಥಗಳು ಹಲವಾರು.ಅವುಗಳಲ್ಲಿ ಒಂದು ದಾಲ್ಚಿನ್ನಿ.ನಮ್ಮ ಕರಾವಳಿಯಲ್ಲಿ ಗುಡ್ಡಗಾಡುಗಳಲ್ಲಿ ತಾನಾಗಿಯೇ ಹುಟ್ಟಿ ಮರವಾಗಿ ಬೆಳೆಯುತ್ತದೆ.ಗದ್ದೆ ತೋಟಗಳಿಗೆ ಗೊಬ್ಬರವಾಗಿ ಇದರ ತರಗೆಲೆಗಳನ್ನು,ಹಸಿಸೊಪ್ಪನ್ನು ಬಳಸುತ್ತಾರೆ.ಇದರ ಚಕ್ಕೆ, ಮೊಗ್ಗು ಹಾಗೂ ಎಲೆಗಳನ್ನು ಪ್ರತಿದಿನ ಎಂಬಂತೆ ಅಡುಗೆಯಲ್ಲಿ ಬಳಸುತ್ತೇವೆ.


        ದಾಲ್ಚಿನ್ನಿಯು'ಲಾರೇಸಿಯೆ 'ಕುಟುಂಬಕ್ಕೆ ಸೇರಿದ ಮರ.ವೈಜ್ಞಾನಿಕ ಹೆಸರು 'ಸಿನ್ನಮೋಮ್ ವೆರಮ್ '.ಕನ್ನಡದಲ್ಲಿ ಸಾಂಬಾರಚಕ್ಕೆ, ಕಾಡು ದಾಲ್ಚಿನ್ನಿ ಮರ,ಪಲಾವ್ ಎಲೆ,ಬೆಲ್ಲಂತೊಟ್ಟು...ತುಳು ವಿನಲ್ಲಿ ಇಜಿನ್ ಎಂಬುದಾಗಿ.


       ದಾಲ್ಚಿನ್ನಿಯು ಮರವಾಗಿ ಬೆಳೆಯುತ್ತದೆ. ಇದು ಸಿಹಿ ಗುಣ ಮತ್ತು ಘಾಟಿನ ಪರಿಮಳ ಹೊಂದಿದೆ.ಹಸಿಎಲೆಗಳನ್ನು ಮಸಾಲೆಗಾಗಿ ಬಳಸಬಹುದು ಅಥವಾ ಎಲೆಗಳನ್ನು ಕೊಯ್ದು ನೆರಳಿನಲ್ಲಿ ಒಣಗಿಸಿ ಶೇಖರಿಸಿಟ್ಟುಕೊಳ್ಳಬಹುದು . ಗಿಡದಲ್ಲಿ ಮೊಗ್ಗಿನಂತಿರುವ ಕಾಯಿಯಾಗುತ್ತದೆ. ಇದಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ.ಗೆಲ್ಲಿನ ತೊಗಟೆಯನ್ನು ಸಂಗ್ರಹಿಸಿ ನೆರಳಲ್ಲಿ ಒಣಗಿಸಿ ಮಸಾಲೆಗೆ ಬಳಸುತ್ತಾರೆ.



      ಇದರ ಎಲೆಗಳನ್ನು ಕೊಯ್ದು ತೊಟ್ಟನ್ನು ಹಾಗೇ ತಿನ್ನಬಹುದು.ಸ್ವಲ್ಪ ಸಿಹಿ ಖಾರ ಮಿಶ್ರಿತ ರುಚಿ.ಆದ್ದರಿಂದಲೇ ಇರಬೇಕು ನಮ್ಮಲ್ಲಿ ಬೆಲ್ಲಂತೊಟ್ಟು ಎನ್ನುವುದು.ಚಿಕ್ಕ ಮಕ್ಕಳಿಗೆ ಇದು ಇಷ್ಟ ಮತ್ತು ತುಂಟಾಟ.(ಬಾಲ್ಯದಲ್ಲಿ ನಾವು ಕೂಡ).
ದಾಲ್ಚಿನ್ನಿಯ ಔಷಧೀಯ ಗುಣಗಳು ಅಪಾರ.


ಉಪಯೋಗಗಳು:-



*ತಲೆನೋವು ವಿಪರೀತ ಇದ್ದರೆ ಚಕ್ಕೆಯನ್ನು ಅರೆದು ಹಚ್ಚಬಹುದು.


*ಕಾಳುಮೆಣಸು ಮತ್ತು ದಾಲ್ಚಿನ್ನಿ ಯನ್ನು ಪುಡಿ ಮಾಡಿ, ಕಷಾಯ ಮಾಡಿ ಜೇನು ತುಪ್ಪ ಸೇರಿಸಿ ಸೇವಿಸಿದರೆ ಶೀತ, ಕೆಮ್ಮು, ಕಫ ಕಡಿಮೆಯಾಗುತ್ತದೆ.


*ಚಕ್ಕೆ ಪುಡಿ ಯನ್ನು ಜೇನು ತುಪ್ಪ ಸೇರಿಸಿ ಸೇವಿಸುವುದರಿಂದ ರಕ್ತನಾಳಗಳು ಶುದ್ಧಿಯಾಗಿ,ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.


*ಹಲ್ಲುನೋವಿಗೆ ಚಕ್ಕೆಪುಡಿಯನ್ನು ಜೇನುತುಪ್ಪ ಸೇರಿಸಿ ಹಚ್ಚಿದರೆ ಉಪಶಮನ.


     ಚಿತ್ರದಲ್ಲಿರುವುದು ನಮ್ಮ ಮನೆಯ ಪಕ್ಕದಲ್ಲಿ ಇರುವ ದಾಲ್ಚಿನ್ನಿ ಗಿಡದ ಎಳೆಯ ಎಲೆಗಳು... ಚಳಿಗಾಲದ ಮುಂಜಾನೆಯ ಮಂಜಿನಲ್ಲಿ ತೊಯ್ದು...ಎಳೆಬಿಸಿಲಿಗೆ...ಸೊಂಪಾದ ಗಾಳಿಗೆ... ಹಿತವಾಗಿ ತೂಗುತ್ತಾ ನಿಂತಾಗ...ನನ್ನ ಮೊಬೈಲ್ ಕ್ಯಾಮರಾದ ಕಣ್ಣಿಗೆ ಕಾಣಿಸಿದ್ದು ಹೀಗೆ....



ಹಾಡೇ ಸೊಪ್ಪು:-



     ಇದು ಹೃದಯದಾಕಾರದಲ್ಲಿ ಕೆಳಗಡೆ ಸ್ವಲ್ಪ ಚೂಪಾಗಿ ಉದ್ದವಾಗಿರುವ ಎಲೆಗಳನ್ನು ಹೊಂದಿರುವ ಬಳ್ಳಿ.ಯಾವುದಾದರೂ ಪೊದೆ,ಗಿಡದ ಆಧಾರವನ್ನು ಪಡೆದುಕೊಂಡು ಹಬ್ಬುತ್ತದೆ.ಪುಟ್ಟ ಕಾಯಿಗಳ ಗೊಂಚಲು ನೋಡಲು ಮಿನಿ ದ್ರಾಕ್ಷಿ ಗೊಂಚಲಂತೆ ಕಾಣುತ್ತವೆ.ಕಾಯಿಗಳು ಹಸಿರು ಬಣ್ಣದಲ್ಲಿದ್ದು ಬೆಳೆದಂತೆ ಸಾಧಾರಣವಾದ ಬಿಳಿ ಬಣ್ಣಕ್ಕೆ ತಿರುಗುತ್ತವೆ.ಗಿಡವು ಬಹಳ ತಂಪು ಗುಣವನ್ನು ಹೊಂದಿದೆ.
ಇದರ ವೈಜ್ಞಾನಿಕ ಹೆಸರು Cyclea peltata, ಸಂಸ್ಕೃತದಲ್ಲಿ ಪಾಠಾ,ಹಿಂದಿಯಲ್ಲಿ ಪಾಡ,ಮಲೆಯಾಳದಲ್ಲಿ ಕಟ್ಟುವಲ್ಲಿ,
ಕನ್ನಡದಲ್ಲಿ ಹಾಡೇ ಬಳ್ಳಿ,ತುಳುವಿನಲ್ಲಿ ಪಾದ್ರಂಡೆ.





ಉಪಯೋಗಗಳು:-



      ಇದನ್ನು ಕರಾವಳಿಯ ಗ್ರಾಮೀಣ ಪ್ರದೇಶದ ಜನರು ಹಲವಾರು ರೀತಿಯಲ್ಲಿ ಬಳಸುತ್ತಾರೆ.


*ಎಲೆಗಳನ್ನು ಪೇಸ್ಟ್ ಮಾಡಿ ತಲೆಗೆ ಹಚ್ಚಿ ಸ್ನಾನ ಮಾಡಿದರೆ ಕಣ್ಣುರಿ, ತಲೆಹೊಟ್ಟು, ತಲೆನೋವು ಕಡಿಮೆಯಾಗುತ್ತದೆ.


*ಒಂದು ಲೋಟ ನೀರಿನಲ್ಲಿ ಐದಾರು ಎಲೆಗಳನ್ನು ಹಾಕಿ ಕಿವುಚಿ.ಆಗ ದಪ್ಪ ಲೋಳೆ ಬಿಡುಗಡೆ ಆಗುತ್ತದೆ.ಇದನ್ನು ತಲೆಗೆ ಹಾಕಿಕೊಳ್ಳಬಹುದು, ಸ್ತ್ರೀ ಯರ ಮುಟ್ಟಿನ ಸಮಸ್ಯೆಗಳಿಗೆ ಜ್ಯೂಸ್ ಮಾಡಿ ಕುಡಿದರೆ ಉತ್ತಮ.

ಮರದ ಮಣೆಯ ಮೇಲೆ ಒಂದು ಸೌಟಿನಷ್ಟು ಈ ರಸವನ್ನು ಅಲ್ಲಲ್ಲಿ ಹಾಕಿ (ಸಣ್ಣಬಿಲ್ಲೆಗಳ ತರ) ಕಾಲು ಗಂಟೆ ಬಿಟ್ಟರೆ ಅದು ಗಟ್ಟಿಯಾಗಿ... ಕೈಯಿಂದ ತೆಗೆಯಲು ಬರುತ್ತದೆ.ಇದನ್ನು ಕಣ್ಣಿನ ಮೇಲೆ ಇಟ್ಟು ಸ್ವಲ್ಪ ವಿರಮಿಸಿದರೆ ಕಣ್ಣುರಿ ಮಾಯ.

ಎಲೆಯನ್ನು ಕಿವುಚಿದ ರಸವನ್ನು ತೆಂಗಿನಕಾಯಿ ಗೆರಟೆಯಲ್ಲಿ ಹಾಕಿ ಗಟ್ಟಿಯಾದಾಗ ಕಣ್ಣಿನ ಮೇಲೆ ಇಡುವ ಪದ್ಧತಿಯೂ ಇದೆ.ಕಣ್ಣಿನ ಸುತ್ತ ಇರುವ ಕಪ್ಪು ವರ್ತುಲವನ್ನು ನಿವಾರಿಸುತ್ತದೆ.


*ಆರೋಗ್ಯಕ್ಕೆ ತುಂಬಾ ತಂಪು.ಎಳೆಯ ಎಲೆಗಳನ್ನು ತಂಬುಳಿ, ಚಟ್ನಿ ಮಾಡುವರು.


*ಕನ್ನಡಿ ಹಾವು ಕಚ್ಚಿದರೆ ಎಲೆಗಳನ್ನು ಅರೆದು ಹಚ್ಚುತ್ತಾರೆ.



   ಬೇಸಗೆಯ ಉರಿಬಿಸಿಲಿಗೆ ಹಾಡೆ ಸೊಪ್ಪಿನ ಜ್ಯೂಸ್ ಹಿತಕರ.ತಲೆಗೆ ಹಚ್ಚಿದರೆ ಸುಖ ನಿದ್ರೆ ಆವರಿಸುತ್ತದೆ.ಪುಟ್ಟ ಎಲೆಗಳುಳ್ಳ ಬಳ್ಳಿಯಾದರೂ ಪ್ರಯೋಜನಗಳು ಹಲವಾರು.




ಹುಳಿಕರ್ಕ/ಕೈರಂಪುಳಿ:-




   ಮುಳ್ಳಿನ ಪೊದೆಯಂತೆ ಹಬ್ಬುವ ಸಸ್ಯವೇ ಹುಳಿಕರ್ಕ/ಹುಳಿಗರುಕ/ಕೈರಂಪುಳಿ.ಕರಾವಳಿಯಲ್ಲಿ ತೋಟದಲ್ಲಿ,ಗದ್ದೆಬದಿಗಳಲ್ಲಿ,ಗುಡ್ಡದಲ್ಲಿ ಕಾಣಸಿಗುತ್ತದೆ.ಇದರಲ್ಲಿ ಬೆಂಡೆಕಾಯಿಯ ಹೂವನ್ನು ಹೋಲುವ ಹೂವು ಅರಳುತ್ತದೆ.ನೋಡಲು ಆಕರ್ಷಕವಾದ ಹೂವು ಆದರೂ ಬುಡ ಮುಳ್ಳಿನಂತಿದೆ.ಇದರ ಬೇರಿನಿಂದ ಹೂವಿನವರೆಗೆ ಎಲ್ಲವೂ ಉಪಯುಕ್ತ.ಎಲೆಗಳು ಕತ್ತರಿಸಿದಂತಿವೆ.ಪಿತ್ತಶಮನಕಾರಿ ಗುಣವನ್ನು ಹೊಂದಿದ್ದು, ದೇಹಕ್ಕೆ ತಂಪು.





ಉಪಯೋಗಗಳು:-



*ಗೋವಿನ ಕೆಚ್ಚಲು ಬಾವಿಗೆ ಇದರ ಬೇರನ್ನು ಅರೆದು ಲೇಪಿಸಿದರೆ ಶಮನವಾಗುತ್ತದೆ.


*ಗೋವಿಗೆ ಉಷ್ಣದಿಂದಾಗಿ ರಕ್ತಸ್ರಾವವಾಗುತ್ತಿದ್ದರೆ ಈ ಗಿಡವನ್ನು ಕತ್ತರಿಸಿ ಮೇವಾಗಿ ಬಳಸಿದರೆ ಹತೋಟಿಗೆ ಬರುತ್ತದೆ.

*ಬೇರನ್ನು ಜೀರಿಗೆಯ ಜೊತೆ ಜಜ್ಜಿ ಕಷಾಯ ತಯಾರಿಸಿ ಕುಡಿದರೆ ಬೆನ್ನು ನೋವು,ಗಂಟು ನೋವು ನಿವಾರಣೆಯಾಗುತ್ತದೆ.


*ಕುರ ಮೂಡಿದಾಗ ಇದರ ಬೇರನ್ನು ಅಕ್ಕಚ್ಚಿನ ಜೊತೆ ಅರೆದು ಹಚ್ಚಿದರೆ ವಾಸಿಯಾಗುತ್ತದೆ.


*ಎಳೆಯ ಕುಡಿಗಳಿಂದ ಚಟ್ನಿ ,ತುಂಬುಳಿ ತಯಾರಿಸುತ್ತಾರೆ.


*ಹೂವನ್ನು ಗೊಜ್ಜು ತಯಾರಿಸುತ್ತಾರೆ.ಪಿತ್ತಶಮನ ಮಾಡುತ್ತದೆ.

        ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಇರುವ ಹಲವಾರು ಸಸ್ಯಗಳಲ್ಲಿ ವಿಶೇಷವಾದ ಔಷಧೀಯ ಗುಣಗಳು ಇರುತ್ತವೆ.ಅವುಗಳು ಮರೆತು ತೆರೆಮರೆಗೆ ಸರಿಯುವ ಮುನ್ನವೇ ದಾಖಲೀಕರಣ ಮಾಡಬೇಕಾದುದು ಅತ್ಯಗತ್ಯ.ಸಣ್ಣಪುಟ್ಟ ಸಮಸ್ಯೆಗಳನ್ನು ಯಾವುದೇ ಅಡ್ಡಪರಿಣಾಮ ಇಲ್ಲದೆ ನಿವಾರಿಸಲು ಇಂತಹ ಸಸ್ಯಸಂಪತ್ತುಗಳಿಂದ ಸಾಧ್ಯ.

✍️... ಅನಿತಾ ಜಿ.ಕೆ.ಭಟ್.
10-05-2020.

ನಮ್ಮ ಮನೆ ಕೈ ತೋಟ ಫೇಸ್ಬುಕ್ ಗ್ರೂಪ್ ನಲ್ಲಿ ಪ್ರಕಟಿಸಿದ ಫೊಟೋ ಹಾಗೂ ಬರಹ ಗಳ ಸಂಗ್ರಹ.

No comments:

Post a Comment