Saturday, 9 May 2020

ಹಿತ್ತಲ ಗಿಡಗಳು-ಕಾಮಕಸ್ತೂರಿ ಮತ್ತು ವೀಳ್ಯದೆಲೆ



          ಹಿತ್ತಲ ಗಿಡಗಳು-ಕಾಮಕಸ್ತೂರಿ ಮತ್ತು ವೀಳ್ಯದೆಲೆ


            ಮನೆಯಂಗಳದ ಸುತ್ತಮುತ್ತ ಕಂಗೊಳಿಸುವ ಗಿಡಗಂಟಿಗಳು ಹಲವಾರು.ಹೂಬಿಡುವ ಸಸ್ಯಗಳು, ಅಲಂಕಾರಿಕ ಸಸ್ಯಗಳು, ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯಗಳು,ಫಲಕೊಡುವ ಸಸ್ಯಗಳು ಇತ್ಯಾದಿ ಗಿಡಮರಗಳನ್ನು ಕಾಣಬಹುದು.ಹಿತ್ತಲ ಗಿಡಗಳನ್ನು ಬಳಸಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು., ಇವು ಹಲವು ಬಗೆಯಲ್ಲಿ ನಮಗೆ ಸಹಕಾರಿಯಾಗಿವೆ.



ಕಾಮಕಸ್ತೂರಿ ಗಿಡ:-



         ಸುಮಾರು ಎರಡು ವರ್ಷಗಳ ಹಿಂದೆ ನನ್ನ ನೆರೆಯಾಕೆ ಮೂರ್ನಾಲ್ಕು ಕಾಮಕಸ್ತೂರಿಯ ಪುಟ್ಟ ಗಿಡಗಳನ್ನು ಕೊಟ್ಟಿದ್ದಳು.ಅವುಗಳನ್ನು ಮಣ್ಣು ಮರಳು ಮಿಶ್ರಮಾಡಿ ತುಂಬಿದ ಅನುಪಯುಕ್ತ ಪ್ಲಾಸ್ಟಿಕ್ ಕವರ್ ಒಂದರಲ್ಲಿ ನೆಟ್ಟೆವು.ಕೆಲವೇ ದಿನಗಳಲ್ಲಿ ಚಿಗುರಿ ಚೆನ್ನಾಗಿ ಬೆಳೆಯಿತು.ನಂತರ ಅದನ್ನು ನೆಲದಲ್ಲಿ ಹೊಂಡ ಮಾಡಿ ನೆಟ್ಟು ನೀರುಣಿಸಲು ಆರಂಭಿಸಿದೆವು.ಅತ್ತ ಇತ್ತ ಸುಳಿದಾಡುವಾಗ ಸ್ವಲ್ಪ ಮೈ ಸೋಕಿದರೂ ಸಾಕು...ಆಹಾ!!!! ಎಂತಹ ಸುವಾಸನೆ!!!.... ನೀರುಣಿಸುವಾಗಲಂತೂ ಪರಿಮಳವನ್ನು ಆಘ್ರಾಣಿಸುವುದೇ ಒಂದು ರೋಮಾಂಚಕ ಅನುಭವ.



          ಕಾಮಕಸ್ತೂರಿಯ ವೈಜ್ಞಾನಿಕ ಹೆಸರು Ocimum basilicum.ಸಾಮಾನ್ಯವಾಗಿ Basil ಎಂದು ಇಂಗ್ಲಿಷ್ ನಲ್ಲಿ ಹೇಳುವರು.ಹಿಂದಿಯಲ್ಲಿ ಸಬ್ಜಾ,ತುಕ್ ಮಾರಿಯಾ.. ಸಂಸ್ಕೃತದಲ್ಲಿ ಕಠಿಂಜರ.ಕನ್ನಡದಲ್ಲಿ ಕಾಮಕಸ್ತೂರಿ, ಸಿಹಿ ತುಳಸಿ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ.


           ಗಿಡವು ವಾತಾವರಣವನ್ನು ಶುದ್ಧೀಕರಿಸುತ್ತದೆ.ಕಾಮಕಸ್ತೂರಿ ಗಿಡವು ಮನೆಯ ಸುತ್ತಮುತ್ತ ಇದ್ದರೆ ಸೊಳ್ಳೆ, ನೊಣಗಳ ಬಾಧೆ ಕಡಿಮೆಯಾಗುತ್ತದೆ.ಎರಡುದಳಗಳನ್ನು ಕೊಯ್ದು ಕೈಯಲ್ಲಿ ಹಿಡಿದು ನಾಸಿಕಕ್ಕೆ ಆಗಾಗ ಕೊಂಡೊಯ್ದರೆ ಸುಗಂಧಿತ ಗಾಳಿಯಿಂದ ಆಲಸಿತ ಮನವು ಉಲ್ಲಸಿತವಾಗುವುದು;
ನರನಾಡಿಯಲ್ಲಿ ಹೊಸ ಚೈತನ್ಯ ಉಕ್ಕುವುದು.


         ಇದರಲ್ಲಿ ಹೂ ಬಿಡುತ್ತದೆ.ನೇರಳೆಬಣ್ಣದ ಗುಚ್ಛದಲ್ಲಿ ತುಸು ನೇರಳೆ ಮಿಶ್ರಿತ ಬಿಳಿ ಬಣ್ಣದ ಸಣ್ಣ ಹೂಗಳನ್ನು ಕಾಣಬಹುದು.ಅವುಗಳನ್ನು ಕೀಳದೆ ಹಾಗೆಯೇ ನಾವು ಬೆಳೆಯಲು ಬಿಡುತ್ತಿದ್ದೇವೆ.ಪೂರ್ತಿ ಒಣಗಿದ ನಂತರ ಕೊಯ್ದು ಅದರಿಂದ ಬೀಜಗಳನ್ನು ಸಂಗ್ರಹಿಸಿಡುತ್ತೇವೆ.


          ಕಾಮಕಸ್ತೂರಿ ಬೀಜದಲ್ಲಿ ಫೋಲಿಕ್ ಆ್ಯಸಿಡ್, ವಿಟಮಿನ್ , ಫೈಬರ್ ಗಳು ಹೇರಳವಾಗಿವೆ.ಫ್ಲೇವನಾಯ್ಡ್ ಅಂಶಗಳೂ ಇವೆಯಂತೆ.ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.ದಳಗಳನ್ನು ಕುದಿಸಿ ತಯಾರಿಸಿದ ಕಷಾಯವನ್ನು ಸೇವಿಸಿದರೆ ಶೀತ ,ಕೆಮ್ಮು, ಕಫ, ಜ್ವರ ಶಮನವಾಗುತ್ತದೆ.ರಸಕ್ಕೆ ಜೇನುತುಪ್ಪ ಸೇರಿಸಿ ಸೇವಿಸಿದರೆ ಗಂಟಲು ನೋವು, ಕಿರಿಕಿರಿ,ಕೆರೆತ ಎಲ್ಲ ಮಾಯ.




ಉಪಯೋಗಗಳು:-


*ಟೈಪ್-2 ಮಧುಮೇಹಿಗಳಿಗೆ ಇದರ ಬೀಜದ ಬಳಕೆಯಿಂದ ರಕ್ತದಲ್ಲಿನ ಸಕ್ಕರೆ ಅಂಶವನ್ನು ಹತೋಟಿಯಲ್ಲಿಡಬಹುದು.ಇದು ಪಚನಕ್ರಿಯೆ ಯನ್ನು ಉತ್ತೇಜಿಸುತ್ತದೆ.ಒಂದರಿಂದ ಎರಡು ಚಮಚದಷ್ಟು ಕಾಮಕಸ್ತೂರಿ ಬೀಜಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಕುಡಿಯುವುದು.ಬೀಜ ನೆನೆದು ಲೋಳೆಯಂತೆ ಆಗಿರುತ್ತದೆ.ಬೆಳಗಿನ ಉಪಾಹಾರಕ್ಕಿಂತ ಒಂದು ಗಂಟೆ ಮುಂಚಿತವಾಗಿ ಸೇವಿಸಬೇಕು.


*ಇದಕ್ಕೆ ಎರಡು ಚಮಚ ನಿಂಬೆರಸ ಸೇರಿಸಿ ಸೇವಿಸುವುದರಿಂದ ಹೊಟ್ಟೆಯ ಸುತ್ತ ಇರುವ ಬೊಜ್ಜು ಕರಗುತ್ತದಂತೆ.
*ನೆನೆಸಿದ ಮಿಶ್ರಣಕ್ಕೆ ಕಲ್ಲುಸಕ್ಕರೆ ಬೆರೆಸಿ ಸೇವಿಸಿದರೆ ಬೇಸಿಗೆಯಲ್ಲಿ ಶರೀರ ತಂಪಾಗಿಡಲು ಸಹಕಾರಿ.


*ಎರಡು ಲೋಟ ನೀರನ್ನು ಕುದಿಸಿ ಉರಿ ನಂದಿಸಿ.ಅದಕ್ಕೆ ಕಾಮಕಸ್ತೂರಿಯ ಎಲೆಗಳನ್ನು ಹಾಕಿ..ಕಾಲುಗಂಟೆಯ ನಂತರ ಸೋಸಿ ಕಾಳುಮೆಣಸಿನ ಪುಡಿ, ನಿಂಬೆರಸ ಚಿಟಿಕೆ ಉಪ್ಪು, ಒಂದು ಚಮಚ ಸಕ್ಕರೆ/ಬೆಲ್ಲದಿಂದ ಪಾನಕ ತಯಾರಿಸಿ ಕುಡಿಯಬಹುದು.. ಅಥವಾ ಸೋಸಿದ್ದನ್ನು ಜ್ಯೂಸ್ ಮಾಡಿ ಐಸ್ ನೊಂದಿಗೆ ಕೂಡಾ ಕುಡಿಯಬಹುದು.


*ಐಸ್ಕ್ರೀಂ ತಯಾರಿಸುವಾಗ ಬೀಜಗಳನ್ನು ಬಳಸಬಹುದು.

*ಕೊಲೆಸ್ಟ್ರಾಲ್ ನ್ನು ಕರಗಿಸುವ ಗುಣವನ್ನು ಹೊಂದಿದ್ದು ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಾಯಕ.

*ಹಾರ್ಮೋನ್ ಉತ್ಪಾದನೆಯನ್ನು ನಿಯಂತ್ರಣಕ್ಕೆ ತರುವುದರಿಂದ ಥೈರಾಯ್ಡ್ ಗ್ರಂಥಿ ಸಮಸ್ಯೆಯಿದ್ದವರಿಗೆ ಉಪಯುಕ್ತ.



          ಔಷಧೀಯ ಗುಣವುಳ್ಳ ಈ ಗಿಡಮೂಲಿಕೆ ಸುಲಭವಾಗಿ ಬೆಳೆಯಬಹುದು.ವಿಶೇಷವಾದ ಆರೈಕೆ ಏನೂ ಬೇಡ.ಹಾಗೆಯೇ ಅಂಗಡಿಗಳಲ್ಲೂ ಇದರ ಬೀಜಗಳು ದೊರೆಯುತ್ತವೆ.




ವೀಳ್ಯದೆಲೆ:-



         ಶುಭ ಸಮಾರಂಭವು ಮನೆಯಲ್ಲಿ ಇದೆಯೆಂದಾದರೆ ಹಲವಾರು ವಸ್ತುಗಳನ್ನು ಸಂಗ್ರಹಿಸಬೇಕಾಗುತ್ತದೆ.ಅದರಲ್ಲಿ ವೀಳ್ಯದೆಲೆ ಅತೀ ಮುಖ್ಯವಾದುದು.ವೈದಿಕ ಕ್ರಿಯೆಗಳಿಗೆ ಇದು ಅನಿವಾರ್ಯ ಹಾಗೂ ತಾಂಬೂಲ ಮೆಲ್ಲಲಂತೂ ಬೇಕೇಬೇಕು.ಔಷಧೀಯ ಗುಣಗಳು ಅಪಾರ.
ವೀಳ್ಯದೆಲೆಯು Piperaceae ಕುಟುಂಬಕ್ಕೆ ಸೇರಿದ್ದು, ಸಸ್ಯಶಾಸ್ತ್ರೀಯ ಹೆಸರು Piper betle.ತುಳುವಿನಲ್ಲಿ ಬಚ್ಚಿರೆ.


        ಬಳ್ಳಿಯ ಸಸ್ಯವಿದು.ಗಾಢಹಸಿರು ಬಣ್ಣದ ಹೃದಯದಾಕಾರದ ಎಲೆಗಳು ಆಕರ್ಷಕ.ನಾನಾ ತಳಿಗಳು ಇವೆ.ಪುಟ್ಟ ಕೈತೋಟದಲ್ಲು ಬೆಳೆಸಬಹುದು.ಬಳ್ಳಿ ಹಬ್ಬಲು ಕಂಬ/ಗಿಡ/ಮರದ ಅವಶ್ಯಕತೆ ಇದೆ.ಕೆಲವರು ನೆಲದಲ್ಲಿ ನೆಟ್ಟು ಅಲ್ಯುಮಿನಿಯಂ ಸರಿಗೆಯ ಸಹಾಯದಿಂದ ಮಾಳಿಗೆಗೆ ಹಬ್ಬಿಸುತ್ತಾರೆ.


           ಇದನ್ನು ವಾಣಿಜ್ಯ ಉದ್ದೇಶಗಳಿಗೆ ಬೆಳೆಯುವವರು ಇದ್ದಾರೆ.ವೀಳ್ಯದೆಲೆಯನ್ನು ಕವಚಿ ಒಂದರ ಮೇಲೊಂದು ಇಟ್ಟರೆ ನೋಡಲು ಚಂದ. ಈ ಅಟ್ಟಿಗೂ ಒಂದು ಲೆಕ್ಕವಿದೆ,'ಸೂಡಿ' ಎಂಬುದಾಗಿ. ಮೊದಲು...
25 ಎಲೆಗಳು=1 ಕವಳ
1 ಸೂಡಿ =4 ಕವಳಗಳು=100ಎಲೆಗಳು.
ಈಗ...
18 ಎಲೆಗಳು=1 ಕವಳ
1ಸೂಡಿ=3ಕವಳಗಳು =54 ಎಲೆಗಳು.
ಇದು ವೀಳ್ಯದೆಲೆ ಮಾರುವಾಗ, ಕೊಳ್ಳುವಾಗ ಬಳಸುವ ಲೆಕ್ಕಾಚಾರ ..ಪರಿಚಯಸ್ಥರಿಂದ ಕೇಳಿ ತಿಳಿದುಕೊಂಡಿರುವುದು.
         ಕಾರ್ಯಕ್ರಮಗಳಲ್ಲಿ ಸ್ವಸ್ತಿಕ ಇಡಲು,ಫಲತಾಂಬೂಲ ಸಮರ್ಪಿಸಲು ನೋಟು, ತೆಂಗಿನಕಾಯಿ, ಅಡಿಕೆಯೊಂದಿಗೆ ವೀಳ್ಯದೆಲೆ ಅಗತ್ಯ.ನಮ್ಮಲ್ಲಿ ವಿವಾಹ ನಿಶ್ಚಿತಾರ್ಥದ ಸಂದರ್ಭದಲ್ಲಿ'ವೀಳ್ಯದೆಲೆ ಅಡಿಕೆ ಪರಸ್ಪರ ಬದಲಾವಣೆ'ಎಂಬ ಮುಖ್ಯ ಶಾಸ್ತ್ರ ಇದೆ .
ತಾಂಬೂಲ ಮೆಲ್ಲುವವರಿಗಂತೂ ವೀಳ್ಯದೆಲೆ,ಸುಣ್ಣ, ಅಡಿಕೆ ಜೊತೆಯಲ್ಲೇ ಬೇಕು.ಊಟದ ನಂತರ ತಾಂಬೂಲ ತಿಂದರೆ ಲಾಲಾರಸ ಉತ್ಪತ್ತಿಯಾಗಿ ಜೀರ್ಣಶಕ್ತಿ ಹೆಚ್ಚುವುದು.ಹಲ್ಲಿನ,ವಸಡಿನ, ಸಮಸ್ಯೆ,ಬಾಯಿಯ ದುರ್ವಾಸನೆ ದೂರವಾಗುವುದು.ಔಷಧೀಯವಾಗಿಯೂ ವೀಳ್ಯದೆಲೆ ಬಳಕೆಯಾಗುತ್ತದೆ.





ಉಪಯೋಗಗಳು:-



**ಗಂಟಲಿನ ಕಿರಿ ಕಿರಿ,ಶೀತವಿದ್ದವರು ಉಪ್ಪು, ವೀಳ್ಯದೆಲೆ, ಸಾಂಬ್ರಾಣಿ (ದೊಡ್ಡ ಪತ್ರೆ) ಎಲೆಗಳನ್ನು ಜೊತೆಯಲ್ಲಿ ಜಗಿದು ರಸ ನುಂಗುತ್ತಿದ್ದರೆ ಉಪಶಮನ.

**ತೀವ್ರತರ ಅಸ್ತಮಾ,ಕಫದ ಸಮಸ್ಯೆ ಇದ್ದರೆ ವೀಳ್ಯದೆಲೆ, ಸಾಂಬ್ರಾಣಿ, ಕಾಳುಮೆಣಸು, ಶುಂಠಿ, ತುಳಸಿ ಜೊತೆ ಮಡಚಿ ಬಾಯಲ್ಲಿರಿಸಿ ನಿಧಾನವಾಗಿ ರಸವನ್ನು ನುಂಗಬೇಕು.ದಿನಕ್ಕೆ ಒಂದೆರಡು ಬಾರಿ ಮಾಡಿದರೆ ಜೀರ್ಣಶಕ್ತಿ ಹೆಚ್ಚಿ ಕಫದ ಸಮಸ್ಯೆ ದೂರ.


**ವೀಳ್ಯದೆಲೆ ಕಷಾಯ ದಿಂದ ಕಣ್ಣುತೊಳೆದರೆ ಕಣ್ಣುರಿ, ತುರಿಕೆ ನಿವಾರಣೆ.


**ಕೂದಲು ಉದುರುವುದು, ತಲೆಹೊಟ್ಟು ಸಮಸ್ಯೆಗಳಿಗೆ ದಾಸವಾಳದ ಎಲೆಗಳ ಜೊತೆ ಪೇಸ್ಟ್ ಮಾಡಿ ಹಚ್ಚುವುದು.ಇದರಿಂದ ಕೇಶ ತೈಲ ಮಾಡಿ ಹಚ್ಚುವುದು.
ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾದಾಗ ಎಲೆಯನ್ನು ಕೈಯಲ್ಲಿ ಜಜ್ಜಿ ಆ ಭಾಗಕ್ಕೆ ಇಟ್ಟರೆ ಬೇಗ ಗುಣವಾಗುತ್ತದೆ.


**ಇತ್ತೀಚೆಗೆ ವಿಳ್ಯದೆಲೆ ತಂಬುಳಿ,ಪತ್ರೊಡೆಯನ್ನು ಕೂಡಾ ಮಾಡಿ ಅದಕ್ಕೂ ಬಳಸಬಹುದು ಎನ್ನುತ್ತಿದ್ದಾರೆ ಹಲವರು.


       ಹೀಗೆ ವೀಳ್ಯದೆಲೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ.ಮನೆಯಂಗಳದಲ್ಲಿ ಇದ್ದರೆ ಲಕ್ಷ್ಮೀ ಕಟಾಕ್ಷ ಇದ್ದಂತೆ ಎಂಬ ನಂಬಿಕೆಯಿದೆ.ಮನೆಯ ಹಿತ್ತಲಲ್ಲಿ ಒಂದು ವೀಳ್ಯದೆಲೆ ಬಳ್ಳಿ ಇದ್ದರೆ ಚೆನ್ನ..


    ನಮ್ಮ ಹಿತ್ತಲಿನಲ್ಲಿ ಬೆಳೆಯುವ ಸಸ್ಯಗಳು ಹಲವಾರು ಔಷಧೀಯ ಗುಣಗಳನ್ನು ಹೊಂದಿರುತ್ತವೆ.ಅವುಗಳ ವಿವರವನ್ನು ತಿಳಿದುಕೊಂಡು ಉಪಯೋಗಿಸಿಕೊಳ್ಳುವುದು ಜಾಣತನ.




✍️... ಅನಿತಾ ಜಿ.ಕೆ.ಭಟ್.
09-05-2020.



2 comments: