ಬೆವರುಸಾಲೆಗೆ ಕೆಲವು ಪರಿಹಾರೋಪಾಯಗಳು
ಬೇಸಗೆ ಬಂತೆಂದರೆ 'ತಡೆಯಲಾಗದಷ್ಟು ಮೈ ಬೆವರುವುದು , ಅಬ್ಬಾ..ಸೆಖೆ, ಈ ವರ್ಷ ಎಂತಹಾ ಉರಿ ' ಎಂದು ಹೇಳುವವರ ಸಂಖ್ಯೆಯೇ ಹೆಚ್ಚು.ಬೇಸಿಗೆಯಲ್ಲಿ ಅತಿಯಾಗಿ ಬೆವರುವುದರಿಂದ ಬೆವರು ಸಾಲೆಯ ತೊಂದರೆ ಕಾಣಿಸಿಕೊಳ್ಳುತ್ತದೆ.ಆರಂಭದಲ್ಲಿ ಚರ್ಮದಲ್ಲಿ ಉಂಟಾಗಿ ಚಿಕ್ಕ ಚಿಕ್ಕ ಗುಳ್ಳೆಗಳಂತೆ ಕಂಡು ನಂತರ ದಪ್ಪವಾಗಿ ಉರಿ ಕಾಣಿಸಿಕೊಳ್ಳುತ್ತದೆ.. ಕೆಲವೊಮ್ಮೆ ತುರಿಕೆಯು ಕಾಣಿಸಿಕೊಳ್ಳುತ್ತದೆ. ಇದು ಬಹಳಷ್ಟು ಕಿರಿಕಿರಿಯನ್ನು ಉಂಟು ಮಾಡುತ್ತಿದ್ದು ಕೆಲವರಿಗೆ ನೋವು ಕೊಡಬಹುದು.
ದಿನಕ್ಕೆರಡು ಬಾರಿ ತಣ್ಣೀರಿನಲ್ಲಿ ಅಥವಾ ಉಗುರುಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು ಬೇಸಿಗೆ ಆಹ್ಲಾದಕರ. ಸಡಿಲವಾದ ಹತ್ತಿಯ ಶುದ್ಧವಾದ ಬಟ್ಟೆಗಳನ್ನು ಧರಿಸಬೇಕು.ಚರ್ಮಕ್ಕೆ ಅತಿಯಾಗಿ ಒತ್ತುವಂತಹ ಅಥವಾ ಬಿಗಿಯಾಗಿ ಇರುವಂತಹ ಬಟ್ಟೆಗಳನ್ನು ಧರಿಸುವುದರಿಂದ ಚರ್ಮದಲ್ಲಿರುವ ಸೂಕ್ಷ್ಮ ರಂಧ್ರಗಳಿಗೆ ಹಾನಿಯಾಗಿರುತ್ತದೆ.. ಕೊಳಕಾದ ಬಟ್ಟೆ ಗಳು ,ಬೆವರು ಅಂಟಿ ಅಲ್ಲಿಯೇ ಒಣಗಿದ ಬಟ್ಟೆಗಳನ್ನು ಧರಿಸಿದರೆ ತುರಿಕೆ ನವೆ ಮತ್ತಷ್ಟು ಹೆಚ್ಚಾಗಬಹುದು.ಶುಭ್ರವಾದ ಬಟ್ಟೆಗಳನ್ನು ಧರಿಸಬೇಕು.ಹೊರಗಡೆ ಬಿಸಿಲಿಗೆ ಹೋಗಿ ಬಂದ ನಂತರ ಸ್ನಾನ ಮಾಡುವುದು ಉತ್ತಮ ಅಭ್ಯಾಸ. ಸಾಧ್ಯವಾದಷ್ಟು ಆಗಾಗ ನೀರನ್ನು ಕುಡಿಯುತ್ತಿರಬೇಕು. ಜೀರಿಗೆ ಹಾಕಿ ಕುದಿಸಿದ ನೀರು ಅತಿಯಾದ ಬೆವರುವಿಕೆಯನ್ನು ತಡೆಯುತ್ತದೆ. ಅತಿಯಾದ ಮಸಾಲೆ ಪದಾರ್ಥಗಳನ್ನು ಬೇಸಿಗೆಯಲ್ಲಿ ಸ್ವಲ್ಪ ದೂರವಿಟ್ಟರೆ ಬೆವರುಸಾಲೆ ಸ್ವಲ್ಪಮಟ್ಟಿಗೆ ಹತೋಟಿಗೆ ಬರುತ್ತದೆ.
ಬೆವರುಸಾಲೆಯ ಹತೋಟಿಗೆ ಅನುಸರಿಸಬಹುದಾದ ಕ್ರಮಗಳು:-
*ಸಾಬೂನಿನ ಬಳಕೆಯನ್ನು ಮಿತಗೊಳಿಸಿ.ಕಡಲೆಹಿಟ್ಟಿನಿಂದ ಸ್ನಾನ ಮಾಡಬಹುದು.ಜಿಡ್ಡಿನಂಶ ಕಡಿಮೆಯಾಗಿ ಚರ್ಮ ಸಹಜವಾಗಿ ಕಾಂತಿಯುಕ್ತವಾಗುತ್ತದೆ.
*ಶ್ರೀಗಂಧದ ಪುಡಿ ಮತ್ತು ರೋಸ್ ವಾಟರ್ ಬೆರೆಸಿ ಚೆನ್ನಾಗಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಬೆವರುಸಾಲೆ ಮೇಲೆ ಹಚ್ಚಿ ಅರ್ಧಗಂಟೆ ಬಿಟ್ಟು ತೊಳೆದರೆ ಉಪಶಮನವಾಗುತ್ತದೆ.
*ರಕ್ತಚಂದನವನ್ನು ತಣ್ಣೀರಿನಲ್ಲಿ ಅರೆದು ಲೇಪಿಸಿಕೊಂಡರೆ ಒಂದು ವಾರದಲ್ಲಿ ತುರಿಕೆ ಕಡಿಮೆಯಾಗುತ್ತದೆ.
*ನೆಲ್ಲಿ ಕಾಯಿಯ ರಸವನ್ನು ಬೆವರುಸಾಲೆ ಇದ್ದ ಭಾಗದಲ್ಲಿ ಹಚ್ಚಿಕೊಳ್ಳುವುದರಿಂದ ಬೆವರುಸಾಲೆ ಸಂಪೂರ್ಣ ಕರಟಿ ಹೋಗುತ್ತದೆ ಮತ್ತು ಬರದಂತೆ ತಡೆಯುತ್ತದೆ.
*ಬದನೆಕಾಯಿ ನೆನೆಸಿದ ಕನರು ನೀರಿನಿಂದ ಬೆವರುಸಾಲೆ ಇರುವ ಭಾಗವನ್ನು ತೊಳೆದುಕೊಳ್ಳುವುದು.
*ಹಸಿಹಾಲು /ತಂಬಾಲಿಗೆ ಅರಶಿನ ಪುಡಿ ಮಿಕ್ಸ್ ಮಾಡಿ ಹಚ್ಚಿಕೊಂಡು ಅರ್ಧ ಗಂಟೆ ಬಿಟ್ಟು ತಣ್ಣೀರಿನಲ್ಲಿ ತೊಳೆಯುವುದು.
*ಕಹಿ ಬೇವಿನ ಎಲೆ ಮತ್ತು ಅರಿಶಿನವನ್ನು ಮಿಶ್ರಣಮಾಡಿ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆದರೆ ಬಹಳ ಬೇಗ ಚರ್ಮದ ಮೇಲಿನ ದದ್ದುಗಳು ಗುಣಮುಖವಾಗುತ್ತವೆ.
*ಜೀರಿಗೆ ಪುಡಿಯನ್ನು ತೆಂಗಿನ ಎಣ್ಣೆಯಲ್ಲಿ ಮಿಶ್ರಣ ಮಾಡಿ ಸ್ವಲ್ಪ ಬೆಚ್ಚಗೆ ಮಾಡಿ. ಬಿಸಿ ಆರಿದ ನಂತರ ಲೇಪಿಸುವುದು. ಹೀಗೆ ದಿನಕ್ಕೆ ಒಮ್ಮೆ ಒಂದು ವಾರಗಳನ್ನು ಮಾಡುವುದರಿಂದ ಗುಣಮುಖವಾಗುವುದು.
*ಅಕ್ಕಿ ತೊಳೆದ ನೀರನ್ನು ಬೆವರುಸಾಲೆ ಮೇಲೆ ಹಚ್ಚಿಕೊಂಡರೆ ಗುಣಮುಖವಾಗುತ್ತದೆ. ಮೊದಲಸಲ ಅಕ್ಕಿ ತೊಳೆದ ನೀರನ್ನು ಚೆಲ್ಲಿ ಎರಡನೇ ಸಲ ತೊಳೆದ ನೀರನ್ನು ಬಳಸುವುದು ಸೂಕ್ತ.
*ಜೋಳದ ಗಂಜಿಗೆ ರೋಸ್ ವಾಟರ್ ಮಿಶ್ರಮಾಡಿ ಲೇಪಿಸಬೇಕು. ನಂತರ ಅರ್ಧ ಗಂಟೆ ಬಿಟ್ಟು ತಣ್ಣೀರಿನಲ್ಲಿ ತೊಳೆಯುವುದು.
*ಕುದಿಯುವ ನೀರಿಗೆ ಕಹಿಬೇವಿನ ಎಲೆಗಳನ್ನು ಹಾಕಿ ..ಅದೇ ನೀರಿನಿಂದ ಸ್ನಾನ ಮಾಡುವುದು..
*ಕುತ್ತಿಗೆ ,ಬೆನ್ನಿನ ಭಾಗದಲ್ಲಿ ಕೂದಲುಗಳು ಹರಡಿಕೊಂಡಿದ್ದರೆ ಆ ಭಾಗದಲ್ಲಿ ಗಾಳಿ ಆಡದೆ ಬೆವರುಸಾಲೆ ಮೂಡುವುದು ಹೆಚ್ಚು. ಆದ್ದರಿಂದ ಕೂದಲನ್ನು ಬಿಟ್ಟುಕೊಳ್ಳದೆ ಸಾಧ್ಯವಾದಷ್ಟು ಮೇಲೆ ಕಟ್ಟಿಕೊಳ್ಳುವುದು .
*ನಿಂಬೆರಸ ಮತ್ತು ಅರಿಶಿನ ಪುಡಿಯನ್ನು ಚೆನ್ನಾಗಿ ಮಿಶ್ರಮಾಡಿ ತುರಿಕೆ ಕಜ್ಜಿ ಇರುವ ಜಾಗದಲ್ಲಿ ಹಚ್ಚಿ ಕೆಲವು ದಿನಗಳಲ್ಲಿ ಮಾಯವಾಗುತ್ತದೆ.
*ಸ್ನಾನದ ನೀರಿಗೆ ಎರಡು ಚಮಚ ಬೇಕಿಂಗ್ ಸೋಡಾ ಬೆರೆಸಿ. ಇದರಿಂದ ಚರ್ಮದ ಮೇಲೆ ಕೆಂಪಾದದ್ದು, ಉರಿ ಕಡಿಮೆಯಾಗುತ್ತದೆ.
*ಮೊಡವೆಗೆ ಬಳಸುವ ಕ್ರೀಮ್ ಅನ್ನು ಹಚ್ಚುವುದರಿಂದ ಕೂಡ ಬೆವರುಸಾಲೆಯನ್ನು ಹತೋಟಿಗೆ ತರಬಹುದು.
*ಒಂದು ಕಪ್ ತಣ್ಣೀರಿಗೆ ಒಂದು ಚಮಚ ಬೇಕಿಂಗ್ ಸೋಡಾ ಮಿಶ್ರಣ ಮಾಡಿ.ಅದರಲ್ಲಿ ಶುದ್ಧವಾದ ಹತ್ತಿಯ ಬಟ್ಟೆಯನ್ನು ಅದ್ದಿ ಮೆದುವಾಗಿ ಬೆವರು ಸಾಲೆಯ ಮೇಲೆ ಹತ್ತು ನಿಮಿಷಗಳ ಕಾಲ ಇಡಿ. ಹೇಗೆ ಮಾಡುತ್ತಾ ಹೋದರೆ ಬಾತು ಕೊಂಡದ್ದು ಕಡಿಮೆಯಾಗಿ ನೋವು ಕಡಿಮೆಯಾಗುತ್ತದೆ.
*ಅತಿಯಾಗಿ ಉರಿಯುತ್ತಿದ್ದರೆ ಐಸ್ ಕ್ಯೂಬ್ ಗಳನ್ನು ಇಟ್ಟು ಉರಿಯಿಂದ ರಕ್ಷಿಸಿಕೊಳ್ಳಬಹುದು.ಲೋಳೆಸರ/ಅಲೋವೇರಾ ಜೆಲ್ ನ ಐಸ್ ಕ್ಯೂಬ್ ಮಾಡಿ ಅದನ್ನು ಬೆವರುಸಾಲೆಯ ಭಾಗದಲ್ಲಿ ಉಜ್ಜಿಕೊಳ್ಳುವುದು.
ಮಕ್ಕಳಲ್ಲಿ ಬೆವರುಸಾಲೆಯ ಹತೋಟಿ:-
ಚಿಕ್ಕ ಮಕ್ಕಳ ಚರ್ಮ ಬಹಳ ನುಣುಪಾಗಿತ್ತು ಕೋಮಲವಾಗಿರುತ್ತದೆ. ಅವರ ಚರ್ಮದ ಮೇಲೆ ಬೇಸಿಗೆಯಲ್ಲಿ ಬೆವರುಸಾಲೆ ಬಿದ್ದರೆ ಮಕ್ಕಳ ಹಠ ಅತ್ಯಧಿಕ , ರಾತ್ರಿ ಸರಿ ನಿದ್ದೆ ಮಾಡಲಾರರು..ಇದರಿಂದ ತಾಯಂದಿರು ನಿದ್ರೆಯಿಲ್ಲದೆ ಕಳೆಯಬೇಕಾಗುವುದು. ಎಳೆಯ ಮಕ್ಕಳಿಗೆ ಮೂಡುವಂತಹ ಬೆವರು ಸಾಲೆಗೆ ಕೆಲವು ಪರಿಹಾರೋಪಾಯಗಳು ಇಲ್ಲಿವೆ..
*ಮಕ್ಕಳನ್ನು ದಿನಕ್ಕೆರಡು ಬಾರಿ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿಸಬೇಕು. ಬೇಬಿ ಸೋಪ್ ಮಿತವಾಗಿ ಬಳಸಿ ..ಮೃದುವಾಗಿ.. ನಿಧಾನವಾಗಿ ಮೈಗೆ ಉಜ್ಜಿ. ಕುತ್ತಿಗೆಯ ಅಡಿಭಾಗ ಸ್ವಲ್ಪವೂ ತೇವಾಂಶ ನಿಲ್ಲದಂತೆ ಮೆದುವಾದ ಹತ್ತಿಯ ಬಟ್ಟೆಗಳಿಂದ ಒರೆಸಿ ಬೇಬಿ ಪೌಡರ್ ಬಳಸುವುದು.
*ಸ್ನಾನಕ್ಕೆ ಬೇಬಿ ಸೋಪ್ ನ ಬದಲು ಕಡ್ಲೆಹಿಟ್ಟು ಬಳಸಬಹುದು.ಇದು ಸಾಬೂನಿಗಿಂತ ಉತ್ತಮ ಶುಚಿಕಾರಕ.
*ಮಕ್ಕಳಿಗೆ ಅತಿಯಾದ ಬಟ್ಟೆ,ಬಿಗಿಯಾದ ಬಟ್ಟೆ ಬೇಡ ..ಸಡಿಲವಾದ ಹತ್ತಿಯ ಬಟ್ಟೆಗಳನ್ನು ಧರಿಸುವುದು. ಮಕ್ಕಳ ಚರ್ಮಕ್ಕೆ ಗಾಳಿ ಆಡುವಂತಿರಬೇಕು.
*ಉರಿಯಿರುವ ಭಾಗದಲ್ಲಿ ತಣ್ಣೀರಿನ ಪಟ್ಟಿ ಇಡಬಹುದು.
*ತೆಂಗಿನ ಎಣ್ಣೆ ಸೋಂಕು ನಿವಾರಕವಾಗಿರುವುದರಿಂದ ಬೆವರುಸಾಲೆ ಮೇಲೆ ತೆಂಗಿನ ಎಣ್ಣೆ ಹಚ್ಚಬಹುದು.
*ಸ್ನಾನದ ನೀರಿಗೆ ಒಂದೆರಡು ಚಮಚ ಬೇಕಿಂಗ್ ಸೋಡಾ ಬಳಸಿ.
*ಅಕ್ಕಿ ತೊಳೆದ ನೀರಿನಿಂದ ( ಎರಡನೇ ಸಲ ತೊಳೆದ)ಮಕ್ಕಳನ್ನು ಸ್ನಾನ ಮಾಡಿಸುವುದು. ಇದು ಬಹಳ ಹಿಂದಿನಿಂದಲೇ ನಡೆದುಕೊಂಡು ಬಂದಂತಹ ಕ್ರಮ.
*ಸ್ನಾನದ ನೀರಿಗೆ ಎರಡರಿಂದ ನಾಲ್ಕು ಚಮಚ ಓಟ್ಸ್ ಸೇರಿಸಿ.
*ಮಕ್ಕಳಿಗೆ ಹಾಲು ಕುಡಿಸಿ,ಆಹಾರ ತಿನಿಸಿದ ನಂತರ ಕುತ್ತಿಗೆಯ ಅಡಿ ಭಾಗ, ಕುತ್ತಿಗೆ ಹಿಂದೆ ಬೆನ್ನಿನ ಭಾಗದಲ್ಲಿ ಚೆನ್ನಾಗಿ ಶುಚಿಗೊಳಿಸಬೇಕು.
ಬೆವರುಸಾಲೆ ಬಂದಮೇಲೆ ಆರೈಕೆ ಮಾಡುವುದಕ್ಕಿಂತ ಹೇಳುವ ಮೊದಲೇ ಎಚ್ಚೆತ್ತುಕೊಳ್ಳುವುದು ಒಳ್ಳೆಯದು.ಶರೀರಕ್ಕೆ ತಂಪನ್ನುಂಟು ಮಾಡುವಂತಹ ಆಹಾರ ಪದಾರ್ಥಕ್ಕೆ ಹೆಚ್ಚಿನ ಆದ್ಯತೆ ಕೊಟ್ಟು ಅತ್ಯಂತ ಖಾರವಾದ ಮಸಾಲೆಯುಕ್ತ ಪದಾರ್ಥಗಳನ್ನು ಕೆಲವು ದಿನಗಳವರೆಗೆ ದೂರವಿರುಡುವುದು ಒಳಿತು. ಮನೆಯೊಳಗೆ ಅತಿಯಾದ ಬಿಸಿಲು ಬಡಿಯುತ್ತಿದ್ದರೆ ಕಿಟಕಿಗಳಿಗೆ ಗಾಢವರ್ಣದ ಪರದೆಗಳನ್ನು ಬಳಸುವುದು ಸೂಕ್ತ. ಇದರಿಂದ ಮನೆಯೊಳಗೆ ತಂಪಿನ ವಾತಾವರಣವಿದ್ದು ಚರ್ಮದ ಸಮಸ್ಯೆಗಳು ಕಡಿಮೆ.
(ಸಂಗ್ರಹ)
✍️...ಅನಿತಾ ಜಿ.ಕೆ .ಭಟ್
04-05 -2020.
Pratilipi Kannada ಹಾಗೂ momspresso Kannada ಗಳಲ್ಲಿ ಪ್ರಕಟಿತ ಬರಹ.
ಬೇಸಿಗೆ ಕಾಲಕ್ಕೆ ಉಪಯುಕ್ತ ಟಿಪ್ಸ್...
ReplyDeleteಹೌದು.. ಅವರವರಿಗೆ ಅನುಕೂಲ ಇರುವುದನ್ನು ಮಾಡಿ ನೋಡಬಹುದು..
ReplyDeleteಧನ್ಯವಾದಗಳು 💐🙏