ಜೀವನ ಮೈತ್ರಿ ಭಾಗ ೮೧
ಗಾಯತ್ರಿ ರೂಮ್ ಗೆ ತೆರಳಿದವಳು ಚೂಡಿದಾರ್ ಧರಿಸಿ ಹೊರ ಬಂದಳು. ಶಂಕರ ಶಾಸ್ತ್ರಿಗಳು ಕಣ್ಣಲ್ಲಿ ಮಡದಿಗೆ" ಇಂತಹ ಕೆಲಸ ಬೇಡ " ಎಂದು ಸೂಚಿಸಿದರು. ಆದರೆ ಅವಳು ಸಾಕಷ್ಟು ಯೋಚನೆ ಮಾಡಿ ಈ ನಿರ್ಧಾರಕ್ಕೆ ಬಂದ ಕಾರಣ ಹಿಂದೆ ಮುಂದೆ ನೋಡಲಿಲ್ಲ. ಗಂಡನಲ್ಲಿ ಕಾರಿನ ಕೀ ಕೇಳಿದಳು. ಏನೂ ಮಾತನಾಡಲಿಲ್ಲ ಶಂಕರ ಶಾಸ್ತ್ರಿಗಳು. ಗಂಡನ ಅಸಡ್ಡೆಗೆ ಸೊಪ್ಪುಹಾಕದೇ ತಾನೇ ಕೀ ತೆಗೆದುಕೊಂಡು ವ್ಯಾನಿಟಿ ಬ್ಯಾಗ್ ಹಾಕಿಕೊಂಡು ಮನೆಯಿಂದ ಹೊರಗೆ ಅಡಿಯಿಟ್ಟಳು.
ಅಷ್ಟರಲ್ಲಿ ತಾಯಿ ಅತ್ತಿಗೆಯಂದಿರು ಒತ್ತಾಯ ಮಾಡಿದ್ದಕ್ಕಾಗಿ ತವರಿನಲ್ಲಿ ಒಂದು ದಿನ ಕುಳಿತಿದ್ದ ಸಾವಿತ್ರಿ "ನಾನು ಕೂಡ ನಿಮ್ಮ ಜೊತೆ ಬರುತ್ತೇನೆ. ನೀವು ಹೋಗುವ ದಾರಿಯಲ್ಲಿ ನನ್ನನ್ನು ಇಳಿಸಿ ಬಿಡಿ,ಅಲ್ಲಿಂದ ಬಸ್ಸಿನಲ್ಲಿ ತೆರಳುತ್ತೇನೆ" ಎಂದರು.. ಗಾಯತ್ರಿ ಸ್ವಲ್ಪ ಕಾದು ನಿಂದಳು. ಮಹಾಲಕ್ಷ್ಮಿ ಅಮ್ಮ "ನೀನು ಯಾಕೆ ಅವಳ ಜೊತೆ ಹೋಗುವುದು .?"ಎಂದು ಸಾವಿತ್ರಿಯಲ್ಲಿ ಖಾರವಾಗಿ ಗಾಯತ್ರಿಗೆ ಕೇಳದಂತೆ ನುಡಿದರು. ಆದರೆ ಸಾವಿತ್ರಿಗೆ ಅನಿವಾರ್ಯವಾಗಿತ್ತು ..ಆಗಲೇ ಗಂಡನ ಕರೆ ಬಂದಾಗಿತ್ತು... "ಯಾಕೆ ತವರಿನಿಂದ ಬಂದಿಲ್ಲ..? " ಎಂದು.
ಹೊರಗೆ ಕಾರು ಮೇಲಿಂದ ಮೇಲೆ ಒರೆಸುತ್ತಾ ನಿಂತಿದ್ದ ಗಾಯತ್ರಿ ಭಾವನಲ್ಲಿ... "ನಾನು ಹೋಗಿ ಸಂಜನಾಳನ್ನು ಕರೆದುಕೊಂಡು ಬರುತ್ತೇನೆ.. "ಎಂದು ಹೇಳಿದಳು. ಭಾಸ್ಕರ ಶಾಸ್ತ್ರಿಗಳು ಮಾತನಾಡಲಿಲ್ಲ.ಸುಮ್ಮನಿದ್ದು ಆಕೆಯ ಮಾತುಗಳನ್ನು ಕೇಳಿಸಿಕೊಂಡು ತಮ್ಮ ಕೆಲಸದತ್ತ ಹೊರಳಿದರು.
ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯ ಹೆಚ್ಚು ಕೊಟ್ಟರೆ ಹೀಗೆ ಆಗುವುದು. ಸಮಯ ಸಂದರ್ಭಕ್ಕೆ ತಕ್ಕಂತೆ ವಿವೇಚನೆ ಅವರಿಗಿಲ್ಲ. ಈ ರೀತಿಯ ನಡೆಯಿಂದ ಬೀಗರ ಮುಂದೆ ನಮಗೆ ಮುಜುಗರವಾಗುವುದು. ಅದನ್ನೆಲ್ಲಾ ಆಕೆಗೆ ಹೇಳಿದರೆ ಅರ್ಥವಾಗದು. ಹೇಳಬೇಕಾಗಿದ್ದ ತಮ್ಮನೂ ಬಾಯಿ ಮುಚ್ಚಿ ಕುಳಿತಿದ್ದಾನೆ. ಇನ್ನು ನಾನು ಒಂದು ಮಾತು ಹೆಚ್ಚು ಹೇಳಿದರೆ ಭಾವ ಜಗಳ ಮಾಡಿದರು ಎಂದಾಗುತ್ತದೆ... ಪಟ್ಟಣದ ಪದ್ಧತಿಯೇ ಬೇರೆ .ಹಳ್ಳಿಯ ಸಂಸ್ಕಾರ ಅವರಿಗೆ ಹೇಗೆ ಅರ್ಥವಾಗುವುದು...?.. ಎಂದು ಭಾಸ್ಕರ ಶಾಸ್ತ್ರಿಗಳು ಯೋಚನಾಲಹರಿಯಲ್ಲಿ ಮುಳುಗಿದರು..
ಮಡದಿ ಅಂಗಳದಿಂದ ಹೊರಡುತ್ತಿದ್ದಂತೆಯೇ ಚಾವಡಿಯಲ್ಲಿ ನಿಂತು ನೋಡಿದರು ಶಂಕರ ಶಾಸ್ತ್ರಿಗಳು..
ನನಗೆ ಅಮ್ಮ, ಅಣ್ಣನ ಮುಂದೆ ಎದುರು ಮಾತನಾಡುವ ಧೈರ್ಯವಿಲ್ಲ. ಬೇಕಾಗಿಯೂ ಇಲ್ಲ. ಆದರೆ ಗಾಯತ್ರಿ ಮಾತ್ರ ಹಾಗಲ್ಲ.. ಅವಳಿಗೆ ಸರಿ ಎಂದು ಕಂಡದ್ದನ್ನು ಸರಿಯೆಂದೇ ಒಪ್ಪಿಕೊಳ್ಳುತ್ತಾಳೆ.. ಸರಿಯಲ್ಲ ಎಂದಾದರೆ ಯಾವ ವಾದ-ವಿವಾದಕ್ಕೆ ಬೇಕಾದರೂ ಸಿದ್ಧ.ಅವಳಿಗೆ ನಾನು ಕೊಡಿಸಿದ ವಿದ್ಯಾಭ್ಯಾಸ, ಸ್ವಾತಂತ್ರ್ಯ, ವಾಹನ ಚಾಲನಾ ತರಬೇತಿ ಇಂದು ಅವಳನ್ನು ಮಗಳ ಪರವಾಗಿ ನಿಂತು ಅವಳನ್ನು ವಾಪಾಸು ಕರೆಸುವಂತೆ ಮಾಡಿದೆ.. ಭೇಷ್ ಗಾಯತ್ರಿ.. ನಿನ್ನಂತಹ ಮಡದಿಯನ್ನು ಪಡೆದ ನಾನೇ ಧನ್ಯ...!! ನಾನು ಕೊಟ್ಟ ಸ್ವಾತಂತ್ರ್ಯವನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸುತ್ತಿರುವೆ... ಎಂದು ತನ್ನ ಮಡದಿಯನ್ನು ನೋಡಿ ಹೆಮ್ಮೆ ಪಟ್ಟುಕೊಂಡರು ಶಂಕರ ಶಾಸ್ತ್ರಿಗಳು.
ಶಂಕರ ಶಾಸ್ತ್ರಿ ಮತ್ತು ಭಾಸ್ಕರ ಶಾಸ್ತ್ರಿ ಇಬ್ಬರೂ ಒಡಹುಟ್ಟಿದವರಾದರೂ ಅವರ ಆಲೋಚನಾ ಶೈಲಿ ವಿಭಿನ್ನ. ಅದಕ್ಕೆ ಅವರು ಈಗ ವಾಸಿಸುತ್ತಿರುವ ವಾತಾವರಣವು ಕಾರಣವಾಗಿರಬಹುದು. ಏನೇ ಆಗಿದ್ದರೂ ಕೂಡ ಶಂಕರ ಶಾಸ್ತ್ರಿಯ ಗುಣದಿಂದಾಗಿ ಅವರ ಕುಟುಂಬಕ್ಕೆ ಈ ಸನ್ನಿವೇಶದಲ್ಲಿ ಅನುಕೂಲವಾಗಿದ್ದಂತೂ ಸತ್ಯ. ಭಾಸ್ಕರ ಶಾಸ್ತ್ರಿಗಳ ನಡೆಯಿಂದಾಗಿ ಮಂಗಳಮ್ಮ ಮಗಳ ಜೊತೆ ಅವಳ ಗಂಡನ ಮನೆಯಲ್ಲಿ ಮೊದಲ ದಿನ ಕೂಡ ನಿಲ್ಲಲಾಗಲಿಲ್ಲ ಎಂಬುದು ಕೂಡಾ ಅಷ್ಟೇ ಕಟು ಸತ್ಯ.
ದಾರಿಯ ಮಧ್ಯದಲ್ಲಿ ಸಾವಿತ್ರಿಯನ್ನು ಇಳಿಸಿ ಮುಂದೆ ಹೋದರು ಗಾಯತ್ರಿ. ಮೈತ್ರಿಯ ಮನೆಯಂಗಳದಲ್ಲಿ ಕಾರ್ ನಿಲ್ಲುತ್ತಿದ್ದಂತೆಯೇ ಸಂಜನಾ ಓಡಿಬಂದಳು.. ಅಮ್ಮ ಯಾವುದೇ ಫೋನ್ ಕರೆಮಾಡದೆ ಬಂದದ್ದು ಅವಳಿಗೆ ವಿಶೇಷ ಅನ್ನಿಸಿತು.ಊರಿಗೆ ಬಂದಾಗ ಅಮ್ಮ ಡ್ರೈವಿಂಗ್ ಮಾಡುವುದು ಬಹಳ ಕಡಿಮೆ.ಏಕೆಂದರೆ ಶಾಸ್ತ್ರೀ ನಿವಾಸದಲ್ಲಿ ಅಜ್ಜ-ಅಜ್ಜಿ ,ದೊಡ್ಡಪ್ಪ ಏನಾದರೂ ಹೇಳಬಹುದು ಎಂದು ಅಪ್ಪನಿಗೆ ಆತಂಕ. ಆದ್ದರಿಂದಲೇ ಇಲ್ಲಿ ಡ್ರೈವಿಂಗ್ ಮಾಡುವುದು ಬೇಡ , ಬೆಂಗಳೂರಲ್ಲಿ ಮಾತ್ರ ಸಾಕು ಎಂದು ಅಮ್ಮನಿಗೆ ಸದಾ ಹೇಳುತ್ತಿದ್ದರು ಅಪ್ಪ. ಆದರೆ ಇಂದು ಮಾತ್ರ ಅಮ್ಮನೇ ಬಂದದ್ದು ಅವಳಿಗೆ ಬಹಳ ಖುಷಿಯಾಗಿತ್ತು.
ಚಿಕ್ಕಮ್ಮನನ್ನು ಕಾಣುತ್ತಲೇ ಮೈತ್ರಿಯ ಮುಖ ಸಂತೋಷದಿಂದ ಅರಳಿತು. ಮಮತಾ ನಗುನಗುತ್ತಲೇ ಚಾವಡಿಗೆ ಬಂದು ಬಾಯಾರಿಕೆ ಕೊಟ್ಟು ಉಪಚರಿಸಿದರು. ಮಾತನಾಡುತ್ತಾ ಗಾಯತ್ರಿಯಲ್ಲಿ ... "ಇಲ್ಲಿ ಮುಟ್ಟಾದರೆ ಪ್ರತ್ಯೇಕವಾಗಿ ಕೂಡುವ ಸಂಪ್ರದಾಯ ನಾವು ಪಾಲಿಸುತ್ತಿಲ್ಲ..ಆದರೆ ಮೈತ್ರಿಗೆ ಇದು ಮೊದಲ ಸಲವಾಗಿದ್ದರಿಂದ ..ಇನ್ನೂ ದಿಂಡಿನ ಹೋಮದ ಕಾರ್ಯಕ್ರಮವಾಗಿಲ್ಲವಾದ್ದರಿಂದ ಮಾತ್ರ ಈ ಬಾರಿ ಆಚರಣೆ ಮಾಡುವಂತೆ ಹೇಳಿದೆ .. ಆದರೂ ಅವಳಿಗೆ ಒಬ್ಬಳಿಗೆ ಉದಾಸಿನವಾಗುವುದು ಬೇಡ ಎಂದು ಸಂಜನಾ ಳನ್ನು ಕೂಡ ಅದೇ ರೂಮಿನಲ್ಲಿ ಮಲಗುವಂತೆ ಹೇಳಿದೆ.."ಎಂದಾಗ ಗಾಯತ್ರಿಗೆ ಅವರ ಸಹೃದಯತೆ ಮೆಚ್ಚುಗೆಯಾಯಿತು. ಇವರಾದರೂ ನಮ್ಮ ಮನೆಯವರಂತೆ ಸಂಪ್ರದಾಯ ಸಂಪ್ರದಾಯ ಎಂದು ಬೊಬ್ಬಿಡುವವರಲ್ಲ. ಸಂದರ್ಭವನ್ನು ಅರ್ಥೈಸಿಕೊಳ್ಳುತ್ತಾರೆ. ಮೈತ್ರಿಗೆ ಒಳ್ಳೆಯ ಅತ್ತೆಯೇ ಸಿಕ್ಕಿದ್ದಾರೆ.. ನನ್ನತ್ತೆಯಂತಲ್ಲ..!!! ಎಂದು ಸಮಾಧಾನದ ನಿಟ್ಟುಸಿರುಬಿಟ್ಟರು ಗಾಯತ್ರಿ.
ಚಿಕ್ಕಮ್ಮ ತಂಗಿಯನ್ನು ಕರೆದುಕೊಂಡು ಹೊರಡುತ್ತಿದ್ದಂತೆಯೇ ಮೈತ್ರಿಯ ಮುಖ ಬಾಡಿತು." ನಾವೆಲ್ಲ ಇದ್ದೇವೆ ನಿನಗೆ "ಎಂದು ಮಮತಾ ಸೊಸೆಗೆ ಹೇಳಿದರು.. ಗಾಯತ್ರಿ ಅಳಿಯನಲ್ಲಿ "ಅವಳಿಗೆ ಬೇಜಾರು ಆಗದಂತೆ ನೋಡಿಕೋ.." ಎಂದು ಹೇಳಿ ನಸುನಕ್ಕರು..ಅವನು ನಗುನಗುತ್ತಲೇ "ಆಯ್ತು ಅತ್ತೆ.. ಹಾಗೆ ಮಾಡುತ್ತೇನೆ ..ಅವಳಿಗೆ ಒಂದು ಚೂರೂ ನೋವಾಗದಂತೆ ನೋಡಿಕೊಳ್ಳುತ್ತೇನೆ" ಎಂದು ಹೇಳಿದ ಕಿಶನ್.ಅವನಿಗೆ ಬೇಕಾಗಿದ್ದು ಕೂಡ ಅದುವೇ.. ಸಂಜನಾ ಜೊತೆಯಲ್ಲಿದ್ದರೆ ಮುದ್ಗೊಂಬೆಯಲ್ಲಿ ಮಾತನಾಡಲು ಇರಿಸುಮುರಿಸು ಆಗುತ್ತಿತ್ತು.. ಇನ್ನು ಭಯವಿಲ್ಲ ಎಂದು .. ಖುಷಿಯಾದ.
ಸಂಜನಾಳನ್ನು ಕರೆದುಕೊಂಡರು ಗಾಯತ್ರಿ ಶಾಸ್ತ್ರಿ ನಿವಾಸಕ್ಕೆ ಬಂದರು. ಮಾವ ಶ್ಯಾಮಶಾಸ್ತ್ರಿಗಳ ಮುಖ ಊದಿಕೊಂಡಿತ್ತು. ಅತ್ತೆ,ಭಾವ ಮುಖ ಗಂಟಿಕ್ಕಿಕೊಂಡಿದ್ದರು.. ಸಂಜನಾಗೆ ಅಜ್ಜ ಅಜ್ಜಿಯ ಮುಖದಲ್ಲಿ ಆದ ಬದಲಾವಣೆ ಸೂಕ್ಷ್ಮವಾಗಿ ಅರಿವಿಗೆ ಬಂತು.ಅಮ್ಮ ಅವಳಿಗೆ ಮೊದಲೇ ಸೂಚಿಸಿದ್ದರು "ನಿನ್ನನ್ನು ವಾಪಸು ಕರೆತರುವುದು ಅವರಿಗೆ ಇಷ್ಟವಿರಲಿಲ್ಲ .ಅದರಿಂದಾಗಿ ಪರಿಸ್ಥಿತಿ, ಪ್ರತಿಕ್ರಿಯೆ ಹೇಗಿರುವುದೋ ಗೊತ್ತಿಲ್ಲ. ಸ್ವಲ್ಪ ಜಾಗ್ರತೆಯಿಂದ ಇರು " ಎಂದು.ಅಮ್ಮನ ಎಚ್ಚರಿಕೆಯಿಂದ ಸಂಜನಾ ರೂಮಿನಲ್ಲಿ ತಂಗಿಯೊಂದಿಗೆ ಹೆಚ್ಚು ಕಾಲಕಳೆದಳು.
ಗಾಯತ್ರಿ ಅಡಿಗೆ ಮನೆಗೆ ತೆರಳಿ ಅಕ್ಕನಿಗೆ ಅಡುಗೆಯಲ್ಲಿ ಸಹಾಯ ಮಾಡುತ್ತಾ ಮೈತ್ರಿಯ ಮನೆ ವಿಷಯಗಳನ್ನೆಲ್ಲ ಹೇಳುತ್ತಿದ್ದಳು .."ನಿನ್ನ ಮಗಳಿಗೆ ಒಳ್ಳೆಯ ಅತ್ತೆ ಸಿಕ್ಕಿದ್ದಾರೆ "ಎಂದು ಹೇಳಿದಾಗ ಮಂಗಳಮ್ಮನಿಗೆ ಸಂತೃಪ್ತಿಯಿಂದ ಗಂಟಲುಬ್ಬಿ ಬಂತು.."ಏನೇ ಹೇಳು ಗಾಯತ್ರಿ... ನೀನು ಮಾತ್ರ ಧೈರ್ಯವಂತೆ ..ನಿನ್ನಷ್ಟು ಧೈರ್ಯ ನನಗೆ ಇದ್ದಿದ್ದರೆ ಕಥೆಯೇ ಬೇರೆಯಾಗುತ್ತಿತ್ತು.." ಎಂದು ತನ್ನ ಮನದೊಳಗಿನ ಸಂಕಟವನ್ನು ತಂಗಿಯೊಡನೆ ಹಂಚಿಕೊಂಡರು.
**********
ಸಾವಿತ್ರಿ ಮನೆಗೆ ಬರುತ್ತಿದ್ದಂತೆ ಆಕೆಯ ಗಂಡ ಕ್ರೋಧದಿಂದ ಉರಿಯುತ್ತಿದ್ದರು.
"ಎರಡು ದಿನ ಕಾರ್ಯಕ್ರಮಕ್ಕೆ ಹೋಗಿ ಬರುತ್ತೇನೆ ಎಂದು ಹೋದವಳು ಮೂರನೇ ದಿನವೂ ಅಲ್ಲಿ ಕುಳಿತದ್ದು ಏಕೆ ..?"ಎಂದು ಅಬ್ಬರಿಸಿದರು.
ಸಾವಿತ್ರಿ ನಾಲಿಗೆ ಹೊರಳಲಿಲ್ಲ..
ತನ್ನ ಚಾಳಿಯನ್ನು ಮುಂದುವರಿಸುತ್ತಾ.. ಅತ್ತೆಯನ್ನು ಮಾವನನ್ನು ..ಎಲ್ಲರನ್ನು ನಿಂದಿಸತೊಡಗಿದರು.
ಸಾವಿತ್ರಿಗೆ ಅಳುವೇ ಬಂದಿತ್ತು. ಯಾವತ್ತೋ ಒಮ್ಮೆ ತವರಿಗೆ ಹೋಗುವುದು.. ಪ್ರತಿಸಾರಿಯೂ ಅಮ್ಮ ಅಸಡ್ಡೆಯನ್ನು ಮಾಡುತ್ತಿದ್ದರು... ಈ ಸಾರಿ ಮಾತ್ರ ಸ್ವಲ್ಪ ಬದಲಾಗಿದ್ದರು.. ಸಾವಿತ್ರಿ ಸಾವಿತ್ರಿ ಎನ್ನುತ್ತಾ ಪ್ರೀತಿಯಿಂದ ಮಾತನಾಡಿ ಸುವಂತೆ ತೋರಿತ್ತು. ಇನ್ನೊಂದು ದಿನ ಇದ್ದು ಹೋಗು.. ಎಂದ ಅಮ್ಮ ,ಅತ್ತಿಗೆಯರ ಮಾತನ್ನು ಕೇಳಿದ್ದು ತಪ್ಪೇ ..? ಎಂದು ಯೋಚಿಸುತ್ತಾ ಇಂತಹ ಸಂಕಟ ಯಾವತ್ತು ಕೊನೆಯಾಗುತ್ತೋ..? ಎಂದು ಕಣ್ಣೀರೊರೆಸಿಕೊಂಡು ತನ್ನ ಕೆಲಸದತ್ತ ಸಾಗಿದಳು.
****
ಮೈತ್ರಿಯ ಮನೆಯಲ್ಲಿ ಈಗ ಮೌನ ಆವರಿಸಿದಂತೆ ಆಗಿತ್ತು. ಅವಳಿಗೆ ತಂಗಿ ಸಂಜನಾ ಬಿಟ್ಟುಹೋದಾಗ ಖಾಲಿತನ ಬಂದಿತ್ತು. ಆ ಜಾಗವನ್ನು ತುಂಬಿಸಲು ಕಿಶನ್ ನಿಂದ ಸಾಧ್ಯವಾಗಲಿಲ್ಲ. ಆಗಾಗ ಬಂದು ಕಿಶನ್ ಮಾತನಾಡುತ್ತಿದ್ದರೂ ಮೈತ್ರಿ ಮಾತ್ರ ಮೌನಕ್ಕೆ ಜಾರಿದಂತೆ ತೋರುತ್ತಿತ್ತು. ಅತ್ತೆ ಮಮತಾ ಸೊಸೆಗೆ ಬೇಕಾದ ಎಲ್ಲವನ್ನೂ ತಂದು ಕೋಣೆಯ ಬಳಿ ನೀಡುತ್ತಿದ್ದರು.. ಮಾವ ಉದಾಸಿನವಾಗದಂತೆ ಒಂದಷ್ಟು ಕಾದಂಬರಿ ಹಳೆಯ ದಿನಗಳನ್ನು ತಂದುಕೊಟ್ಟರು...
ರಾತ್ರಿ ಮಲಗಿದ ಮೇಲಂತೂ ಕಿಶನ್ ಗೆ ಮದುವೆಯ ಮೊದಲಿನದೇ ಪರಿಸ್ಥಿತಿ.ಮುದ್ಗೊಂಬೆಯನ್ನು ನೆನೆಯುತ್ತಾ ಸಂದೇಶವನ್ನು ರವಾನಿಸುವುದು, ಹಾಯ್ಕು ಚುಟುಕುಗಳನ್ನು ಬರೆದು ಖುಷಿ ಪಡುವುದು.. ಇರ್ಲಿ..ಇನ್ನೆರಡೇ ದಿನ.. ಆಮೇಲೆ ನಮ್ಮಿಬ್ಬರ ಪ್ರೀತಿಗೆ ಬ್ರೇಕೇ ಇಲ್ಲ.. ಎಂದು ಮನದಲ್ಲೇ ಕನಸುಕಾಣುತ್ತಿದ್ದ..
ಮುಂದುವರಿಯುವುದು..
✍️...ಅನಿತಾ ಜಿ.ಕೆ. ಭಟ್.
25-05-2020.
ಹೆಚ್ಚಿನ ಓದಿಗಾಗಿ...
ಬರಹದ ಕೆಳಗಡೆ ಇರುವHome,view web version,>ಸೌಲಭ್ಯಗಳನ್ನು ಬಳಸಿಕೊಳ್ಳಬಹುದು...
No comments:
Post a Comment