ಜೀವನ ಮೈತ್ರಿ ಭಾಗ ೮೩
ಕಿಶನ್ ಮೈತ್ರಿ ಜೊತೆಜೊತೆಗೆ ದಿನವಿಡೀ ಕಳೆದರು.ಮನೆಯ ತುಂಬಾ ಮುದ್ದಾದ ಜೋಡಿಯ ಕಿಲಕಿಲ ನಗು ತುಂಬಿತ್ತು.ತುಂಟಾಟ ಹಿರಿಯ ಜೀವಗಳಿಗೂ ಹಿತವಾಗುವಂತಿತ್ತು . ಅತ್ತೆ ಮೈತ್ರಿಯ ಮೇಲೆ ಯಾವುದೇ ಕೆಲಸದ ಹೊರೆಯನ್ನು ಹೊರಿಸಲಿಲ್ಲ.ಮದುವೆಯಾಗಿ ಕೆಲವು ದಿನವಾದರೂ ಹಾಯಾಗಿರಲಿ.ಆಮೇಲೆ ಕೆಲಸ ಕಾರ್ಯಗಳು ಮಾಡುವುದು ಹೇಗೂ ಹೆಣ್ಣುಮಕ್ಕಳ ಪಾಲಿಗೆ ತಪ್ಪುವುದಿಲ್ಲ..ಎಂಬ ಭಾವನೆ ಅವರದಾಗಿತ್ತು.
ಸೂರ್ಯನ ಬಿಸಿಲು ತಗ್ಗುತ್ತಲೇ ಅಂಗಳದಲ್ಲಿ ಒಣಹಾಕಿದ್ದ ಬಟ್ಟೆಗಳನ್ನು ತಂದಳು ಮೈತ್ರಿ.ಕಿಶನ್ ಮಡಚಿಡಲು ತಾನೂ ಸಹಕರಿಸಿದ.ನಂತರ ಇಬ್ಬರೂ ತೋಟ ಗುಡ್ಡ ಸುತ್ತಲು ತೆರಳಿದರು.ಸ್ವಲ್ಪ ಹೊತ್ತಿನಲ್ಲಿ ನೆರೆಮನೆಗಳಿಗೆ ಕೆಲಸಕ್ಕೆ ಹೋಗುತ್ತಿದ್ದ ಲಚ್ಚಿಮಿ "ಅಕ್ಕಾ... " ಎಂದು ಕರೆಯುತ್ತಾ ಅಂಗಳದ ತುದಿಯಲ್ಲಿ ನಿಂತಳು.ಮಮತಾ ಹೊರಬಂದದ್ದು ಕಂಡು ಹಿಂದಿನ ಬಾಗಿಲ ಬಳಿ ಬಂದಳು.
"ಅಕ್ಕಾ..ಆರಾಮವಾ..?"
"ಹೂಂ.."
"ನಿಮಗೇನು ಆರಾಮವಿಲ್ಲದೇ ಅಲ್ವಾ.. ಒಳ್ಳೆ ಶ್ರೀಮಂತರ ಮನೆ ಸೊಸೆ ಬಂದಿದ್ದಾಳೆ.."
ಮಮತಾ ಮಾತನಾಡಲಿಲ್ಲ.
"ಇವತ್ತು ಅಡಿಕೆ ಹೆಕ್ಕುವ ಕೆಲಸ ಇತ್ತು.ಹೆಕ್ಕಿ ಹೆಕ್ಕಿ ಸೊಂಟ ನೋವಾಯಿತು.. ಅಬ್ಬಾ.." ಎಂದು ಜಗಲಿಯಲ್ಲಿ ಕೂಳಿತುಕೊಂಡು "ಅಕ್ಕಾ.. ಚಹಾ ಇದ್ದರೆ ಸ್ವಲ್ಪ ಕೊಡಿ.. " ಎಂದು ಕೇಳಿದಳು.
ಮಾಡಿದ ಚಹಾವಿತ್ತು.ಮಮತಮ್ಮ ನೀಡಿದರು.
ಚಹಾ ಕುಡಿಯುತ್ತಾ
"ಆಚೆ ಮನೆ ರತ್ನಕ್ಕಾ ನಾಳೆ ನಿಮ್ಮಲ್ಲಿಂದ ಮದುವೆಗೆ ಹೋಗುವುದಿದ್ದರೆ ತಾನೂ ಬರುತ್ತೇನೆಂದು ಹೇಳಲು ನನ್ನಲ್ಲಿ ಹೇಳಿದ್ದರು."
ಮಮತಾಗೆ ಸ್ವಲ್ಪ ಸಂಶಯ ಬಂತು.ಇದುವರೆಗೆ ಹೀಗೇನಾದರೂ ಹೇಳುವುದಿದ್ದರೆ ರತ್ನಕ್ಕಾ ಫೋನ್ ಮಾಡುತ್ತಿದ್ದರು.ಇವತ್ತೇನು ಹೀಗೆ..?
ಮಮತಕ್ಕ ಏನೂ ಹೇಳದೆ ಇದ್ದಾಗ
"ನಿಮ್ಮ ಸೊಸೆ ಇವತ್ತೇನು ಕೆಲಸ ಮಾಡಿದಳು..ಕೆಲಸ ಬರುತ್ತದಾ.. ಬೆಳಿಗ್ಗೆಯೇ ಬಟ್ಟೆ ಬಡಿಯುವುದು ಕೇಳುತ್ತಿತ್ತು.."
ಎಂದು ರಾಗ ಎಳೆದಾಗ ಮಮತಾಗೆ ಇವಳ ಚಾಡಿಬುದ್ಧಿಯ ಅರಿವಾಯಿತು.ಇಲ್ಲಿಂದ ನವವಧುವಿನ ಸುದ್ದಿ ಸಂಗ್ರಹಿಸಿ ತಾನು ಹೋಗುವ ಮನೆಗಳಿಗೆಲ್ಲಾ ಬಿತ್ತುವ ಲಚ್ಚಿಮಿಯ ಬುದ್ಧಿ,ಅತಿ ಕುತೂಹಲಿ ರತ್ನಕ್ಕನ ಬುದ್ಧಿ ಎರಡೂ ಅರ್ಥವಾಗಿ ಸೀದಾ ಒಳಗೆ ಹೋಗಿ ಮದುವೆಯ ಹಣಕಾಸಿನ ಲೆಕ್ಕಾಚಾರವನ್ನು ನೋಡುತ್ತಿದ್ದ ಪತಿಯಲ್ಲಿ ಸಣ್ಣದನಿಯಲ್ಲಿ ಹೇಳಿದರು.ಮಾಡುತ್ತಿದ್ದ ಕೆಲಸವನ್ನು ಅರ್ಧದಲ್ಲಿಯೇ ಬಿಟ್ಟು ಹೊರಬಂದ ಗಣೇಶ ಶರ್ಮ
"ನೋಡು ಲಚ್ಚಿಮಿ... ಮದುವೆಗೆ ಹೋಗಲು ಇದೆಯೇ ಇಲ್ಲವೇ ಎಂದು ತಿಳಿಯಲು ಫೋನ್ ಮಾಡಿ ವಿಚಾರಿಸಬಹುದು.ನೀನು ಬಂದು ಕೇಳಿ ಅವರಿಗೆ ಸುದ್ದಿ ತಿಳಿಸಬೇಕಾದ್ದಿಲ್ಲ.ಈ ನೆಪದಲ್ಲಿ ಮನೆಬಾಗಿಲಿಗೆ ಬಂದು ಮನೆ ಸೊಸೆಯ ವಿಚಾರಗಳನ್ನು ಕೆದಕುವುದು ,ಆ ವಿಚಾರಗಳಿಗೆ ರಂಗು ತುಂಬಿ ಊರಿಡೀ ಹಬ್ಬಿಸುವುದು ಬೇಡ.ಇದೇ ಮೊದಲು ಇದೇ ಕೊನೆ.. ಇನ್ನು ಇಂತಹಾ ಕೆಲಸಕ್ಕೆ ಕೈ ಹಾಕಬೇಡ.."ಎಂದು ನೇರವಾಗಿ ಎಚ್ಚರಿಸಿದರು.
ಲಚ್ಚಿಮಿಯ ಮುಖ ಚಿಕ್ಕದಾಯಿತು."ಇಲ್ಲಪ್ಪಾ ನಾನು ಅಂತಹ ಕೆಲಸ ಯಾಕೆ ಮಾಡುತ್ತೇನೆ.. ಅವರು ಕೇಳಲು ಹೇಳಿದ್ದಕ್ಕೆ ಬಂದದ್ದಷ್ಟೇ.." ಎಂದು ಹೇಳಿ ಚಹಾ ಕುಡಿದ ಲೋಟ ತೊಳೆದಿಟ್ಟು ಹೊರಟಳು.ದಾರಿಯಲ್ಲಿ 'ಛೇ..ನನ್ನ ಕೆಲಸ ಕೈಗೂಡಲೇ ಇಲ್ಲ.ಹೊಸ ಮದುಮಗಳ ಬಗ್ಗೆ ಎಲ್ಲಾ ತಿಳಿದುಕೊಂಡು ನಾನು ಕೆಲಸಕ್ಕೆ ಹೋಗುವ ಮನೆಗಳಿಗೆಲ್ಲ ಮೊದಲು ನಾನೇ ಸುದ್ದಿ ವರದಿ ಮಾಡಬೇಕೆಂದಿದ್ದೆ.. ಎಲ್ಲಾ ಹಾಳಾಯಿತು..ಛೇ... ' ಎಂದು ಕೈ ಕೈ ಹಿಸುಕಿಕೊಂಡಳು ದಾರಿ ನಡೆಯುತ್ತಿದ್ದಾಗ ಎದುರಿನಿಂದ ಬರುತ್ತಿದ್ದವರನ್ನು ಕಂಡು ಸರಿದು ನಿಂತಳು.ಕಣ್ಣು ಅವಳ ಮೇಲೆಯೇ ನೆಟ್ಟು ಅಳೆಯುತ್ತಿತ್ತು.
ಹತ್ತಿರ ಬಂದಾಗ ಕಿಲಕಿಲ ನಕ್ಕು" ಕಿಶನಣ್ಣಾ ಆರಾಮವಾ.. ಎಷ್ಟು ಸಮಯವಾಯಿತು ಕಂಡು" ಎಂದು ನಯವಾಗಿ ರಾಗ ಎಳೆದಳು.
"ಹೋ..ಲಚ್ಚಿಮಿ "
"ಹೌದು.. ಅಣ್ಣಾ.. ಮತ್ತೆ ಹೇಗಿದ್ದೀರಿ..ನಿಮ್ಮ ಮದುಮಗಳನ್ನು ನನಗೆ ಪರಿಚಯ ಮಾಡಲೇಯಿಲ್ಲ.."
ಮೈತ್ರಿಯ ಬಳಿ ಈಕೆ ನೆರೆಮನೆಯ ಕೆಲಸದಾಕೆ ಎಂದು ಪರಿಚಯಿಸಿದ ಕಿಶನ್.ಮೈತ್ರಿ ನಕ್ಕಳು.
"ಎಲ್ಲಿ ಅಮ್ಮ ನಿಮ್ಮ ತವರು ಮನೆ ..?"ಎಂದು ಮೈತ್ರಿಯನ್ನು ಮಾತಿಗೆಳೆದಳು.ಮೈತ್ರಿ ಉತ್ತರ ಹೇಳಿದಂತೆ ಹತ್ತಾರು ಪ್ರಶ್ನೆಗಳನ್ನು ಎಸೆದು ಉತ್ತರ ಪಡೆದುಕೊಂಡಳು.ಹಿರಿಹಿರಿ ಹಿಗ್ಗಿ ಇಂದಿಗೆ ಇಷ್ಟು ನ್ಯೂಸ್ ಸಾಕು ಎಂದುಕೊಂಡು "ನಾನಿನ್ನು ಬರುತ್ತೇನೆ" ಎಂದು ಹೊರಟಳು.ಕಿಶನ್ ಮೈತ್ರಿ ಮನೆಯತ್ತ ಸಾಗಿದರು.
ಲಚ್ಚಿಮಿ ತಾನು ಸಂಗ್ರಹಿಸಿದ ಸುದ್ದಿಗಳಿಗೆ ಹೇಗೆ ಮಸಾಲೆ ಬೆರೆಸುವುದು ಎಂದು ಯೋಚಿಸುತ್ತಾ ದಾರಿ ನಡೆದು ಮನೆ ಸೇರಿದಳು.ಲಚ್ಚಿಮಿ ಎಂದರೆ ಊರಿಗೇ ಒಂಥರಾ ಬಿಬಿಸಿ ನ್ಯೂಸ್ ಇದ್ದಂತೆ.ಆಚೆಮನೆ ಹೊಸ ಸೊಸೆಯ ವಿಷಯ ಈಚೆ ಮನೆಗೆ..ಈಚೆ ಮನೆಯ ಸೊಸೆಯ ಸುದ್ದಿ ಆಚೆಮನೆಗೆ ... ನಡುನಡುವೆ ಹೊಸ ಸೀರೆ ತಂದದ್ದು ,ಆಚೆ ಮನೆ ಮಾಣಿಗೆ ಯಾರದೋ ದೂರದೂರಿನ ಕೂಸಿನ ಜಾತಕ ಬಂದದ್ದು..ಇನ್ಯಾರೋ ಓಡಿ ಹೋದದ್ದು...ಇಂತಹ ಸುದ್ದಿಗಳನ್ನೆಲ್ಲ ರವಾನಿಸುವುದು ಕೆಲಸದೊಂದಿಗೆ ಅವಳಿಗೆ ಉಮೇದಿನ ಸಹಕೆಲಸ.ಶಾಲೆಗಳಲ್ಲಿ ಪಠ್ಯದೊಂದಿಗೆ ಸಹಪಠ್ಯ ಚಟುವಟಿಕೆ ಇದ್ದಹಾಗೇ.. ಮೈತ್ರಿ ತನಗರಿವಿಲ್ಲದೇ ಇವಳ ನಾಲಿಗೆಯ ಸುಳಿಗೆ ಸಿಲುಕಿದಳು.
ಮನೆಗೆ ಬಂದಾಗ ಮಮತಮ್ಮ ಬಿಸಿ ಬಿಸಿ ಕಾಫಿ ಮಾಡಿ ಕೊಟ್ಟರು."ನಾನೇ ಮಾಡ್ತಿದ್ದೆ ಅತ್ತೆ" ಎಂದಳು ಮೈತ್ರಿ..
"ಸ್ವಲ್ಪ ದಿನ ನನ್ನ ಕೈರುಚಿ ನೋಡಮ್ಮ.. ಆಮೇಲೆ ಅಡಿಗೆ ಮಾಡುವದು ಹೇಗೂ ಇದ್ದೇ ಇದೆ..ಕಲಿತುಕೊಂಡರಾಯಿತು."ಎಂದರು ಅತ್ತೆ.
ಕಿಶನ್ ಮೈತ್ರಿ ಇಬ್ಬರೂ ಕಾಫಿ ಕುಡಿದು ಚಾವಡಿಗೆ ತೆರಳಿ ಹರಟುತ್ತಿದ್ದರು.ಅಪ್ಪ ಒಳಗೆ ಬಂದು "ಮಗ ಸ್ನಾನಕ್ಕೆ ನೀರು ಬಿಸಿಯಾಗಿದೆ" ಎಂದಾಗ ಮಡದಿಯತ್ತ ತಿರುಗಿದ ಕಿಶನ್ "ನೀನು ಹೋಗು" ಎಂದ.ಮೈತ್ರಿ ಸ್ನಾನಕ್ಕೆ ತೆರಳಿದಳು.ಕಿಶನ್ ಅಡುಗೆ ಮನೆಗೆ ತೆರಳಿ ಅಮ್ಮನಲ್ಲಿ ಲಚ್ಚಿಮಿ ಸಿಕ್ಕಿದ್ದು, ಮಾತಾಡಿದ್ದು ಎಲ್ಲ ಹೇಳಿದ.ಮಮತಮ್ಮ ಕೇಳಿ ನಿಟ್ಟುಸಿರು ಬಿಟ್ಟು ಮನೆಗೆ ಅವಳು ಬಂದದ್ದು ಅಪ್ಪ ಎಚ್ಚರಿಸಿದ್ದು ಎಲ್ಲವನ್ನೂ ಅರುಹಿ ಇಂತಹಾ ಮನೆಹಾಳಿಗಳ ಬಗ್ಗೆ ಆರಂಭದಲ್ಲೇ ಎಚ್ಚೆತ್ತುಕೊಳ್ಳಬೇಕು.ಮೈತ್ರಿಗೂ ಹೇಳು ಎಂದರು ಮಮತಮ್ಮ.
ಕಿಶನ್ ರೂಮಿನತ್ತ ಸಾಗಿದ.. ಯೋಚನೆಗಳು ಅವನನ್ನು ಕಾಡತೊಡಗಿದವು.ಮದುವೆಯಾಗಿದ್ದು ಆಯಿತು ಇನ್ನು ಅವಳನ್ನು ಜೋಪಾನವಾಗಿ ಇಂತಹ ಎಲುಬಿಲ್ಲದ ನಾಲಿಗೆಯವರಿಗೆ ಆಡಲು ಸಿಗದಂತೆ ಕಾಪಾಡಿಕೊಂಡು ಬರುವುದೇ ಸವಾಲು ಎಂದು ಯೋಚಿಸುತ್ತಿದ್ದವ ಹಿಂದಿನಿಂದ ಮೈತ್ರಿ ಬಂದು ಬಳಸಿದಾಗ ವಾಸ್ತವಕ್ಕೆ ಬಂದ.
"ಏನು..ರಾಯರು ಯೋಚನೆಯಲ್ಲಿ ಸಿಲುಕಿರುವಂತಿದೆ.."
"ಏನಿಲ್ಲ.."
"ನನ್ನಿಂದ ಮುಚ್ಚಿಡಲು ಸಾಧ್ಯವಿಲ್ಲ.. "ಎನ್ನುತ್ತಾ ಕಚಗುಳಿಯಿಟ್ಟಳು ಮೈತ್ರಿ.
"ಯಾವಾಗ ಬೆಂಗಳೂರಿಗೆ ಹೋಗೋದೂಂತ ಯೋಚನೆ ಮಾಡ್ತಾ ಇದ್ದೆ.ಇನ್ನು ಒಂದು ವಾರಕ್ಕೆ ರಜೆ ಮುಗಿಯುತ್ತೆ."
"ನೀವು ಯಾವಾಗ ಹೇಳ್ತೀರೋ ಆವಾಗ ಬರಲು ನಾನು ರೆಡಿ "ಎಂದಳು ತನ್ನ ಕಣ್ಣುಗಳನ್ನು ಅಗಲಿಸುತ್ತಾ...
ಆಕೆಯ ಹೆಗಲಮೇಲೆ ಕೈಯಿಟ್ಟು ತನ್ನತ್ತ ಸೆಳೆದು ಆದಷ್ಟು ಬೇಗ ಹೋಗೋಣ.. ಎನ್ನುತ್ತಾ ಕಣ್ಣುಮಿಟುಕಿಸಿದ...
ಮರುದಿನ ಐದನೇ ದಿನದ ಸ್ನಾನ ಮುಗಿಸಿ ಮನೆಗೆ ತೆರಳುವ ತವಕದಲ್ಲಿದ್ದಳು ಮೈತ್ರಿ.ಮೊತ್ತ ಮೊದಲ ಬಾರಿಗೆ ಲಚ್ಚಿಮಿಯ ಬಾಯಲ್ಲಿ ತವರುಮನೆ ಎಂಬ ಪದವನ್ನು ಕೇಳಿ ಅವಳ ಮನ ಚೂರು ಭಾರವಾಗಿತ್ತು.ಅದಿನ್ನೂ ನನ್ನ ಮನೆಯೇ ಎಂದು ಸಾರಿ ಹೇಳಿತ್ತು ಹೃದಯ.ತವರೆಂದು ಒಪ್ಪಿಕೊಳ್ಳಲೇ ಇಲ್ಲ ಅವಳ ಮನಸು..
ಅಮ್ಮನ ಫೋನ್ ಯಾವಾಗ ಬರುತ್ತದೋ ಎಂಬ ಕಾತರ ಅವಳಲ್ಲಿತ್ತು.ಅವಳು ಯೋಚಿಸುತ್ತಿದ್ದಂತೆಯೇ ಅಮ್ಮನ ಕರೆ ಬಂದಿತು."ನಾಳೆ ನವವಧೂವರರ ಸಮ್ಮಾನಕ್ಕೆ ಏರ್ಪಾಡು ನಡೆಯುತ್ತಿದೆ..ಮಗಳೇ..ಅಳಿಯಂದಿರನ್ನು, ಅತ್ತೆ ಮಾವನನ್ನು ಕರೆದುಕೊಂಡು ಬೇಗ ಬಾ."
ಎಂದರು ಅಮ್ಮ..ಉತ್ಸಾಹದಿಂದ ಹೂಂಗುಟ್ಟಿದಳು ಮೈತ್ರಿ..
"ಮತ್ತೆ ನಾಲ್ಕು ದಿನ ಅಲ್ಲಿಯೇ ನಿಲ್ಲುವೆ ಎನ್ನಬೇಡ ಮುದ್ಗೊಂಬೆ ಪ್ಲೀಸ್...ಮೊನ್ನೆಯೇ ನನ್ನ ಹೃದಯ ಪೀಸ್ ಪೀಸ್ ಆಗಿತ್ತು.. ಇನ್ನು ಪುನಃ ನನ್ನಿಂದ ತಡೆದುಕೊಳ್ಳಲು ಸಾಧ್ಯವಿಲ್ಲ."
ಎಂದು ಗೋಗರೆದ ಕಿಶನ್.
"ಇಲ್ಲ.. ನಾಲ್ಕು ದಿನ ಇದ್ದೇ ಬರುವುದು" ಎಂದು ತಾನೂ ಅಣಕಿಸಿದಳು ಮೈತ್ರಿ..
"ಅಮ್ಮಾವ್ರ ಮನದೊಳಗೇನಿದೆ ಎಂದು ನಂಗೆ ತಿಳಿಯುತ್ತದೆ.. " ಎಂದಾಗ ಪತಿಯ ಪ್ರೀತಿಗೆ ಸೋತು ಶರಣಾಗಿದ್ದಳು ಮುದ್ಗೊಂಬೆ.
ಮರುದಿನ ಬೇಗ ಎದ್ದು ಸ್ನಾನ ಮುಗಿಸಿ ಬಂದ ಮೈತ್ರಿ....ದೇವರಿಗೆ ದೀಪ ಹಚ್ಚಿ ಬಾವಿಯಿಂದ ನೀರು ಸೇದಿ ತಂದು ಹೊಸ್ತಿಲ ಗಂಗೆಗೆ ಹೂವಿಟ್ಟು,ಗಿಂಡಿಯಲ್ಲಿ ನೀರಿಟ್ಟು, ದೇವರಮುಂದೆ ಊದಿನ ಕಡ್ಡಿ ಹಚ್ಚಿ ಭಕ್ತಿಯಿಂದ ಪ್ರಾರ್ಥಿಸಿದಳು ಮೈತ್ರಿ.ಮನೆಯಿಡೀ ಉದುಬತ್ತಿ ಪರಿಮಳ ಹರಡುತ್ತಿದ್ದಂತೆಯೇ ನಿದ್ರೆಯಿಂದ. ಎಚ್ಚರಗೊಂಡಿದ್ದ ಕಿಶನ್.. ಅವನ ತುಂಟ ಕಣ್ಣುಗಳಿಗೆ ಮೈತ್ರಿಯು ಬಲು ಸುಂದರವಾಗಿ ಕಾಣುತ್ತಿದ್ದಳು. ರೂಮಿಗೆ ಬಂದ ಮೈತ್ರಿಯನ್ನು ಕಣ್ಸನ್ನೆಯಲ್ಲೇ ಹತ್ತಿರ ಬರುವಂತೆ ಸೂಚಿಸಿದ. "ಇಲ್ಲ ...ಇವತ್ತು ಬರಲ್ಲ.. ನೀವು ಬೇಗ ಎದ್ದು ಹೊರಡಿ...ಇವತ್ತು ಮನೆಗೆ ಹೋಗಬೇಕು.." ಎನ್ನುತ್ತಾ ಆತುರಾತುರವಾಗಿ ನಡೆದಳು ಮೈತ್ರಿ. ಅವಳ ತವರಿನ ಕಾತರಕ್ಕೆ ನಿರಾಸೆಗೊಳಿಸದೆ ಕಿಶನ್ ಬೇಗನೆ ಫ್ರೆಶ್ ಆಗಿ ಬಂದ. ಅಮ್ಮ ಮಾಡಿದ ತಿಂಡಿಯನ್ನು ಎಲ್ಲರೂ ಸವಿದು ಶಾಸ್ತ್ರೀ ನಿವಾಸಕ್ಕೆ ಹೊರಟರು.
ಮುಂದುವರಿಯುವುದು...
✍️...ಅನಿತಾ ಜಿ.ಕೆ.ಭಟ್ಟ.
29-05-2020.
ಹೆಚ್ಚಿನ ಓದಿಗಾಗಿ..
ಬರಹದ ಕೆಳಗಡೆ ಇರುವ Home,view web version,> .... ಇವುಗಳನ್ನು ಬಳಸಿಕೊಳ್ಳಬಹುದು...
No comments:
Post a Comment