ಜೀವನ ಮೈತ್ರಿ ಭಾಗ ೭೩
ಇಂದು ಗಣೇಶ ಶರ್ಮರ ಮನೆಯಲ್ಲಿ ಮಗನಿಗೆ ನಾಂದಿ ಕಾರ್ಯಕ್ರಮ. ಮಗಳಂದಿರು ಮೊದಲೇ ಆಗಮಿಸಿದ್ದರೆ ಅಳಿಯಂದಿರು ಹಿಂದಿನ ದಿನವಷ್ಟೇ ಆಗಮಿಸಿದ್ದರು. ಕಿಶನ್ ಸೋದರಮಾವ ಬೆಳ್ಳಂಬೆಳಗ್ಗೆ ಆಗಮಿಸಿದರು. ಮನೆಯ ಮುಂದೆ ಸಣ್ಣ ಚಪ್ಪರ ಹಾಕಲಾಗಿತ್ತು. . ಕಿಶನ್ ಗೆ ಬೆಳ್ಳಂಬೆಳಗ್ಗೆ ಅರಿಶಿನ ಎಣ್ಣೆ ಸ್ನಾನ ನೆರವೇರಿತು. ಮನೆಯ ಕೆಲಸಗಳಲ್ಲಿ ಕಿಶನ್ ತಂದೆ ತಾಯಿಗೆ ನೆರವಾಗುತ್ತಿದ್ದ. ಅಷ್ಟರಲ್ಲಿ ಪುರೋಹಿತರು ಆಗಮಿಸಿದರು. ಜೊತೆಗೆ ಪರಿಕರ್ಮಿ ಬಾಲಣ್ಣನ ಇದ್ದ.
ನೋಡನೋಡುತ್ತಿದ್ದಂತೆಯೇ ಬಾಲಣ್ಣ ಬಾಳೆದಿಂಡನ್ನು ಸಮನಾಗಿ ತುಂಡರಿಸಿ ಅದನ್ನು ನಾಲ್ಕು ಬದಿಗೆ ಜೋಡಿಸಿ ಹೋಮ ಕುಂಡವನ್ನು ತಯಾರಿಸಿದರು. ಅಡಿಗೆ ಶಾಮಣ್ಣ ಶಾಲು ಹೆಗಲಿಗೇರಿಸಿ ನಿಂತಿದ್ದರು. ಬಾಲಣ್ಣ.." ತರಾತುರಿಯಿಂದ ಮದುಮಗ ಎಲ್ಲಿ ..ಬೇಗ ತಯಾರಾಗಿ ಹೋಮಕ್ಕೆ ಬರಲಿ " ಎಂದು ಕರೆದರು. ಕಿಶನ್ ಸದಾ ಪಂಚೆ ಉಟ್ಟು ಹೆಗಲ ಮೇಲೆ ಶಾಲು ಹೊದೆದು ಹೋಮ ಕುಂಡದ ಮುಂದೆ ಕುಳಿತ. ಪುರೋಹಿತರು ಯಾಗವನ್ನು ಆರಂಭಿಸಿದರು.
ಪುರೋಹಿತರು ಹೇಳುತ್ತಿದ್ದುದನ್ನು ಬಹಳ ಚೆನ್ನಾಗಿ ಅರ್ಥೈಸಿಕೊಂಡು ಬೇಗ ಬೇಗ ಕೈಂಕರ್ಯಗಳನ್ನು ಮಾಡುತ್ತಿದ್ದ ಕಿಶನ್ ನ ಮೇಲೆ ಪುರೋಹಿತರಿಗೆ ಗೌರವ ಬೆಳೆಯಿತು. ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರೂ ಕಾಲದ ಸಂಪ್ರದಾಯ ಮರೆತಿಲ್ಲ. ಎಲ್ಲವನ್ನೂ ಅಚ್ಚುಕಟ್ಟಾಗಿ ವೇಗವಾಗಿ ನಿರ್ವಹಿಸುತ್ತಿದ್ದಾನೆ ಹುಡುಗ. ಎಂದು ಮನದಲ್ಲೇ ಅಂದುಕೊಂಡರು.ಪುರೋಹಿತರಿಗೆ ತಡೆದುಕೊಳ್ಳಲಾಗದಷ್ಟು ಗಾಳಿಗೆ ಅವರತ್ತವೇ ಹೋಮದ ಹೊಗೆ ಬೀಸತೊಡಗಿತು. "ಹೋಮದ ಬುಡದಿಂದ ಏಳಬಹುದು .. ಬೇಕಾದರೆ" ಎಂದು ಕಿಶನ್ ಗೆ ಪುರೋಹಿತರು ಅಂದಾಗ ಮೊದಲು ಎದ್ದು ಗಾಳಿ ಬೀಸಿ ಪುರೋಹಿತರಿಗೆ ಬರುತ್ತಿದ್ದ ಹೊಗೆಯನ್ನು ತಡೆಯಲು ಗಾಳಿ ಬೀಸದಂತೆ ಹೋಮದ ಮುಂದೆ ಎರಡು ಬೆಂಚನ್ನು ಇಟ್ಟು ಅದಕ್ಕೆ ತಗಡಿನ ಶೀಟನ್ನು ವಾರೆಯಾಗಿ ನಿಲ್ಲಿಸಿದ. ಈಗ ಹೋಮದ ಕಡೆ ಗಾಳಿ ಬೀಸುವುದು ನಿಂತಿತು.ಹೋಮದ ಮುಂದೆಯೇ ಇದ್ದರೂ ಕುಳಿತಿದ್ದ ಪುರೋಹಿತರಿಗೆ ಅತಿಯಾದ ಹೊಗೆಯಿಂದ ಹಿಂದೆಯಿಂದ ಮುಕ್ತಿ ದೊರಕಿತ್ತು.. ಪುರೋಹಿತರು ಕಿಶನ್ ಗೆ ಕಣ್ಣಲ್ಲೇ ಧನ್ಯವಾದ ಸಮರ್ಪಿಸಿದರು.ಹೋಮ ಮುಂದುವರಿಸಿದರು.
ಮೇದಿನಿ ಚಾಂದಿನಿ ಇಬ್ಬರೂ ಕೂಡ ಬಂದ ಅತಿಥಿಗಳನ್ನು ಉಪಚರಿಸುತ್ತಿದ್ದರು. ಗಣೇಶ ಶರ್ಮ ಅಡಿಕೆ ಹಾಳೆಯನ್ನು ಕೊರೆದು ಕಿಶನ್ ನ ಪಾದದ ಅಳತೆಯ ಚಪ್ಪಲಿಯನ್ನು ಮಾಡಿ ಸಿದ್ಧಪಡಿಸಿದರು.ಬಾಲಣ್ಣ ದೊಡ್ಡ ಕೊಡಪಾನ ಕಲಶವನ್ನು ಸಿದ್ಧಪಡಿಸಿ ಹೊರಗೆ ತಂದಿಟ್ಟರು.ಕಿಶನ್ ಮಣೆಯ ಮೇಲೆ ಕುಳಿತ.ಮೇದಿನಿ ಮತ್ತು ಚಾಂದಿನಿ ಸಣ್ಣ ಬಿಂದಿಗೆಯಲ್ಲಿದ್ದ ಕಲಶವನ್ನು ಅಣ್ಣನಿಗೆ ಮೂರು ಸುತ್ತು ಪ್ರದಕ್ಷಿಣೆ ಸ್ವಲ್ಪ ಸ್ವಲ್ಪವೇ ಕಲಶನೀರು ಸುತ್ತ ಈ ಬೀಳುವಂತೆ ತಂದು ನಂತರ ಕಾಲಿಗೆರೆದರು..
"ಭಾವಯ್ಯ..ಇದು ಚಳಿ ಬಿಡಲು ಮಾತ್ರ..ಇನ್ನೂ ದೊಡ್ಡ ಕೊಡಪಾನದಲ್ಲಿದೆ.."ಎಂದರು ಮೇದಿನಿಯ ಪತಿ.
ಕಿಶನ್ ನಗುತ್ತಾ ಕುಳಿತಿದ್ದ.
"ಮದುಮಗಳನ್ನು ನೆನಪಿಸಿ ನಗುತ್ತಾ ಕೂರಬೇಡ..ಈಗ ಕಾಶೀಯಾತ್ರೆಗೆ ಹೊರಡಬೇಕು..ಮರೀಬೇಡ.."ಎಂದರು ಚಾಂದಿನಿಯ ಪತಿ..
ಬಾಲಣ್ಣ..."ಹೊಗೆಯೇಳುತ್ತಿದೆ ಈ ಕಲಶನೀರಲ್ಲಿ" ಎಂದು ಹೇಳುತ್ತಾ ಇದ್ದರೆ ಕಿಶನ್ ನೀರು ಸುಡುಸುಡು ಇರಬಹುದೆಂದು ಲೆಕ್ಕಾಚಾರ ಹಾಕುತ್ತಿದ್ದ.ಆಗಲೇ ಶಿರದ ಮೇಲೆ ಒಮ್ಮೆಲೇ ಧುಮ್ಮಿಕ್ಕುವ ಜಲಧಾರೆ ಆಯಿತು..ಚಳಿಯಾದಂತೆ ಮುದುಡಿದ ಕಿಶನ್..
"ಭಾವಯ್ಯ ಬಿಸಿ ಜಾಸ್ತಿ ಆಯ್ತಾ..."ಎಂದು ಭಾವಂದಿರು ಛೇಡಿಸಿದರೆ ...ತಣಿದು ಹೋದ ನೀರಲ್ಲಿ ಕಲಶಸ್ನಾನಗೈದ ಕಿಶನ್ ಪಾಪ..!!ಮಾತನಾಡದೆ ಬಾಲಣ್ಣ ಕೊಡಪಾನ ತೋರಿಸಿದಾಗ ಅದರೊಳಗಿನ ನಾಣ್ಯ ನೋಡಿ ಸೀದಾ ಬಟ್ಟೆ ಬದಲಾಯಿಸಲು ತೆರಳಿದ.
ಕಚ್ಚೆ ಮುಂಡಾಸು ತೊಟ್ಟು ಮದುಮಗ ಕಾರ್ಯಕ್ರಮ ದಲ್ಲಿ ಭಾಗಿಯಾದ.ಪುರೋಹಿತರ ಬಳಿ ತಾನು ಕಾಶೀಯಾತ್ರೆ ಹೊರಡುವೆನೆಂದ.
ಕಾಲಿಗೆ ಅಡಿಕೆ ಹಾಳೆಯ ಪಾದರಕ್ಷೆ, ಕೈಯಲ್ಲಿ ಕಮಂಡಲ, ಹೆಗಲಲ್ಲಿ ಅಕ್ಕಿ ತೆಂಗಿನಕಾಯಿ ತುಂಬಿದ ಜೋಳಿಗೆ ,ಉದ್ದ ಕಾಲಿನ ಛತ್ರಿ ಹಿಡಿದು ಕೊಂಡು."ನಾನು ಕಾಶಿಯಾತ್ರೆಗೆ ಹೋಗುತ್ತೇನೆ" ಎಂದು ಹೊರಟ.
ಹೋಗುತ್ತಿದ್ದವನನ್ನು ಸ್ವಲ್ಪ ದೂರದಲ್ಲೇ ತಡೆಯಬೇಕಿತ್ತು ಸೋದರಮಾವ. ಆದರೆ 'ಸೋದರಮಾವ ಏನು ಕಾಣುತ್ತಿಲ್ಲ' ಎಂದು ನೋಡುತ್ತಲೇ ಇದ್ದ ಕಿಶನ್. ಆಗಲೇ ತಿಳಿಯಿತು ಇದು ತಂಗಿಯರ ಕುತಂತ್ರ ಎಂದು. "ಮೈತ್ರಿಯನ್ನು ಮರೆತು ಹೋಗುತ್ತಾನಾ.. ನೋಡೋಣ.." ಎಂದು ನಗುತ್ತಿದ್ದರು ತಂಗಿಯರಿಬ್ಬರೂ..
ಸೋದರ ಮಾವನನ್ನು ಹೋಗದಂತೆ ತಡೆಯುತ್ತಿದ್ದರು. ಸುಮಾರು ದೂರ ಸಾಗಿದರೂ ಸೋದರ ಮಾವನ ಪತ್ತೆ ಇಲ್ಲ. 'ಈ ನಾಟಕೀಯವಾದ ಕಾಶಿಯಾತ್ರೆ ಮುಗಿಯುವುದು ಹೇಗಪ್ಪಾ?' ಎಂದು ಕಿಶನ್ ನ ಯೋಚನೆ.
ಅಷ್ಟರಲ್ಲಿ ಬಾಲಣ್ಣ ಕೂಗಿಕೊಂಡದ್ದು ಕೇಳಿಸಿತು . "ಏ..ಸೋದರಮಾವ ಹೋಗಿ ಬೇಗ ತಡಿರಿ. ಇಲ್ಲದಿದ್ದರೆ ಕಾಶಿಯಾತ್ರೆಗೆ ಹೋದಾನು. ಈ ಮದುವೆ ತಯಾರಿ...ನಾಂದಿ.. ಮತ್ತೆ ಯಾರಿಗೆ...?"
ಎಂದಾಗ ಮೇದಿನಿ "ಕಾಶಿಯಾತ್ರೆಗೆ ಹೋಗುತ್ತಾನೋ ಶಾಸ್ತ್ರೀ ನಿವಾಸದ ಕಡೆ ಹೋಗುತ್ತಾನೋ ಯಾರಿಗೆ ಗೊತ್ತು..?"
"ಶಾಸ್ತ್ರಿ ನಿವಾಸದಲ್ಲಿ ಈಗಂತೂ ಅಳಿಯನನ್ನು ಒಳಬಿಡಲಾರರು... ಶಿಸ್ತು, ಸಂಪ್ರದಾಯವನ್ನು ಪಾಲಿಸುವವರು.."ಎಂದ ಬಾಲಣ್ಣ.
"ಕಾಶಿಯಾತ್ರೆ ಮಾಡಿದರೆ ಪುಣ್ಯ ಬರುತ್ತದಂತೆ." ಎಂದ ಚಾಂದಿನಿ..
"ಸೋದರಮಾವ ಒಮ್ಮೆ .. ತಡೆದು ನಿಲ್ಲಿಸಿ. .ಮದುಮಗನನ್ನು.. ಇವನು ಕಾಶಿಯಾತ್ರೆ ಹೊರಟರೆ ಮತ್ತೆ ನಮಗೆ ಕ್ರಿಯಾ ದಕ್ಷಿಣೆ ಸಿಗಲಾರದು.. "ಎಂದು ಬಾಲಣ್ಣ ಅಂದಾಗ ಎಲ್ಲರೂ ಗೊಳ್ಳೆಂದು ನಕ್ಕರು. ಸೋದರಮಾವ ಹೊರಟರು. ಕೈಯಲ್ಲಿ ಕೊಡೆ,ಕಮಂಡಲ ಹಿಡಿದ ಅಳಿಯನನ್ನು ಮನವೊಲಿಸಿ "ಕಾಶಿಯಾತ್ರೆ ಈಗ ಬೇಡ. ಮೊದಲು ಒಳ್ಳೆಯ ಹುಡುಗಿ ಹುಡುಕಿ ಮದುವೆ ಮಾಡೋಣ ..ಸಂಸಾರಿಯಾಗು.
. ಎಂದು ಕೈಹಿಡಿದು ಕರೆದುಕೊಂಡು ಬಂದರು.
ಎಲ್ಲಾ ದೃಶ್ಯ ಗಳನ್ನು ಸೆರೆಹಿಡಿದು ಆಗಲೇ ಮೈತ್ರಿ ಗೆ , ಮಹೇಶನಿಗೆ ರವಾನಿಸಿದ್ದರು..
ನಾಂದೀ ಕಾರ್ಯಕ್ರಮ ಮುಂದುವರಿದು ಮದುಮಗನ ಕೈಗೆ ಅರಿಶಿನ ಕೊಂಬಿನ ಕಂಕಣ ಕಟ್ಟಲಾಯಿತು. ಪೂರ್ಣಾಹುತಿ ನೆರವೇರಿತು.ನಂತರ ವೈದಿಕರಿಗೆ ಕ್ರಿಯಾದಕ್ಷಿಣೆ ನೀಡಿ ನಮಸ್ಕರಿಸಿದ ಮದುಮಗ.
ಭೋಜನಕ್ಕೆ ಪಂಕ್ತಿ ಹಾಕಿದರು.ಮಾವಿನ ಹಣ್ಣಿನ ಸಾಸಿವೆ,ಎಳೆಹಲಸಿನಕಾಯಿ ಪಲ್ಯ,ಮಾವಿನ ಕಾಯಿ ಮೆಣಸ್ಕಾಯಿ, ಸಾರು, ಸಾಂಬಾರು,ಕಾಯಿಹುಳಿ,ನೇಂದ್ರ ಬಾಳೆಹಣ್ಣಿನ ಪಾಯಸ, ಜಿಲೇಬಿ, ಮಜ್ಜಿಗೆ, ಮಿಡಿ ಉಪ್ಪಿನಕಾಯಿ.. ಎಲ್ಲವೂ ಬಾಯಲ್ಲಿ ನೀರೂರುವಂತಿತ್ತು.ಶ್ಯಾಮಣ್ಣನ ಕೈ ಅಡುಗೆಯನ್ನು ಎಲ್ಲರೂ ಮೆಚ್ಚಿದರು.
ಹೊರಡುವಾಗ ಪುರೋಹಿತರು ಮದುಮಗನನ್ನು ಹತ್ತಿರ ಕರೆದು "ನಾನು ಮೊನ್ನೆ ಶಶಿಯ ಮಾತನ್ನು ನಂಬಿ ನಿಮ್ಮನ್ನು ಅನುಮಾನಿಸಿ ಅವಮಾನಿಸಿದ್ದಕ್ಕೆ ಕ್ಷಮೆಯಿರಲಿ.. ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು ಅನ್ನುವ ಮಾತಿದ್ದರೂ .. "ಎಂದು ಹೇಳುತ್ತಿದ್ದವರ ಮಾತಿನ ಮಧ್ಯೆ ಕಿಶನ್ .."ಪುರೋಹಿತರೇ... ತಾವು ಹಿರಿಯರು..ನಿಮ್ಮಲ್ಲಿ ನನಗೇನು ಸಿಟ್ಟಿಲ್ಲ.ಅಪಪ್ರಚಾರ ಮಾಡಿದವರ ವಿರುದ್ಧ ಸಿಡಿದೆದ್ದಿತ್ತು ನನ್ನ ಮನಸ್ಸು.ಕೊನೆಗೂ ತಪ್ಪೊಪ್ಪಿಕೊಂಡರು "ಎಂದಾಗ ಪುರೋಹಿತರು ಕಿಶನ್ ಗೆ ಕರ ಜೋಡಿಸಿದ್ದರು.."ನನ್ನನ್ನೂ ಕ್ಷಮಿಸಿಬಿಡು"ಎನ್ನುವಂತೆ..
"ಅದನ್ನೆಲ್ಲ ಮರೆತುಬಿಡೋಣ.. ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿ ನಡೆಸಿಕೊಡಬೇಕು" ಎಂದು ಕೋರಿದ.. ಕಿಶನ್.
ಒಪ್ಪಿದ ಪುರೋಹಿತರು ಹೊರಟರು.
ಗಣೇಶ ಶರ್ಮ ಮತ್ತೊಮ್ಮೆ ಪುರೋಹಿತರಲ್ಲಿ ಹೇಳುವುದನ್ನು ಮರೆಯಲಿಲ್ಲ.ಬಾಲಣ್ಣ ಮತ್ತು ಪುರೋಹಿತರು ಮನೆಕಡೆಗೆ ಸಾಗುತ್ತಿದ್ದಾಗ ಇಬ್ಬರೂ ಕಿಶನ್ ನನ್ನು ಕೊಂಡಾಡುತ್ತಿದ್ದರು .
"ಇಂಜಿನಿಯರಿಂಗ್ ಓದುವ ನಮ್ಮ ಯುವಕರು ಸಂಪ್ರದಾಯವನ್ನು ಮರೆಯುವುದೇ ಹೆಚ್ಚು.ಆದರೆ ಈ ಮದುಮಗ ಮಾತ್ರ ಭಿನ್ನವಾಗಿ ತೋರುತ್ತಿದ್ದಾನೆ.."ಎಂದು ಪುರೋಹಿತರು ಹೇಳಿದಾಗ...
"ಎಲ್ಲಾ ಬಾಲ್ಯದಲ್ಲಿ ಹೆತ್ತವರು ಕಲಿಸಿದ ಸಂಸ್ಕಾರ.."ಎಂದರು ಬಾಲಣ್ಣ.
"ಅಲ್ಲ..ಉಚ್ಛ ಕಂಠದಲ್ಲಿ ಮಂತ್ರೋಚ್ಛಾರಣೆಯನ್ನು ಮಾಡಿದ್ದು ಭಾರೀ ವಿಶೇಷ.."
"ಆತನ ತಂದೆ ಎಳವೆಯಲ್ಲೇ ವೇದಾಭ್ಯಾಸವನ್ನು ಮಾಡಿಸಿದ್ದಾರೆ.ಎಳವೆಯಲ್ಲಿ ಕಲಿತ ವಿದ್ಯೆ ಮರೆತುಹೋಗುವುದಿಲ್ಲ.. ಆತನಿಗೆ ಅದರಲ್ಲಿ ಆಸಕ್ತಿಯೂ ಇದೆ..
ಒಳ್ಳೆಯ ಮಾಣಿ ..ಶಾಸ್ತ್ರಿಗಳಿಗೆ ತಕ್ಕ ಅಳಿಯ.."
ಎಂದು ಬಾಲಣ್ಣ ಹೇಳಿದರು..ಮದುವೆ,ವಧೂಗೃಹ ಪ್ರವೇಶ ಕಾರ್ಯಕ್ರಮ ಕ್ಕೆ ಬರುವುದರ ಬಗ್ಗೆ ಚರ್ಚಿಸುತ್ತಾ ಸಾಗಿದರು.
********
ಶಾಸ್ತ್ರೀ ನಿವಾಸದಲ್ಲಿ ಕಿಶನ್ ನ ಕಾಶೀಯಾತ್ರೆಯ ವಿಡಿಯೋ ನಗುವಿನ ಅಲೆಯನ್ನು ಸೃಷ್ಟಿಸಿತು.
ಮಹೇಶ ಅಕ್ಕನಿಗೆ ತೋರಿಸುತ್ತಾ ..."ಅಕ್ಕಾ ಭಾವೀ ಭಾವ... ಸೋದರಮಾವ ಯಾಕೆ ಬರಲಿಲ್ಲ ಎಂದು ಹಿಂದಿರುಗಿ ನೋಡುತ್ತಿದ್ದಾರೆ...."
"ಹೋಗು.. ತರ್ಲೆ..ಓದ್ಕೋ.. ಅವರು ಯಾಕೆ ತಿರುಗಿನೋಡಿದ್ದು ಅಂತ ನಿನಗೇನು ಗೊತ್ತು.."
"ನಿನ್ನನ್ನು ಮದುವೆಯಾಗುವ ಕನಸು ಕಣ್ಣಲ್ಲಿ ಹೊತ್ತು ನಡೆಯುತ್ತಿದ್ದರು..ಕಾಶೀ ವಿಶ್ವನಾಥ ನನ್ನು ನೆನೆಯುವ ಬದಲು.."ಅಂದಾಗ ಮೈತ್ರಿ ಗೂ ನಗು ತಡೆಯಲಾಗಲಿಲ್ಲ..
ಇಬ್ಬರೂ ನಗುತ್ತಿದ್ದಾಗ ಮಂಗಳಮ್ಮ ಏನೆಂದು ವಿಚಾರಿಸಿಕೊಂಡು ಬಂದರು.ಹಾಗೇ ಅಜ್ಜಿ ಅಜ್ಜ ಎಲ್ಲರೂ ನೋಡಿ" ಪಾಪ..!! ಮಾಣಿ..!! "ಎಂದರು ನಗುತ್ತಾ...ಬಹಳ ಅಪರೂಪಕ್ಕೆ ಭಾಸ್ಕರ ಶಾಸ್ತ್ರಿಗಳು ಕೂಡಾ ಇವರೆಲ್ಲ ಏನು ನೋಡಿ ನಗುತ್ತಿದ್ದಾರೆ ಎಂದು ಇಣುಕಿದರು..ಭಾವೀ ಅಳಿಯನ ಫಜೀತಿಯನ್ನು ಕಂಡು ಅವರಿಗೂ ನಗೆ ತಡೆಯಲಾಗಲಿಲ್ಲ..
ಮುಂದುವರಿಯುವುದು..
✍️... ಅನಿತಾ ಜಿ.ಕೆ.ಭಟ್.
06-05-2020.
ಪಾಪ.. ಕಿಶನ್ 😀😀
ReplyDeleteಅಲ್ವಾ ಮತ್ತೇ...😍😍💐🙏
ReplyDelete