(Momspresso Kannada ವಿಶ್ವ ತಾಯಂದಿರ ದಿನದ ಸಲುವಾಗಿ ಕೊಟ್ಟ ಥೀಂ.ನನ್ನ ಕುಟುಂಬಕ್ಕೆ,ಪತಿ ಮಕ್ಕಳಿಗೆ-ನಾನೇ ಸಾಕು.ಈ ಥೀಂ ಗೆ ಬರೆದ ಲೇಖನ.)
ನಾವೇ ಅರಸು,ನಾವೇ ಆಳು,ಇಂತಾದೊಡನೆಯೇ ಮುಗಿವುದು ಗೋಳು-ಎಂಬುದು ಸಾಹಿತಿ ಪುತಿನ ಅವರ ಮಾತು.ಈ ಮಾತು ಒಬ್ಬ ಸ್ತ್ರೀ,ತಾಯಿಯ ಸ್ಥಾನವನ್ನು ಸರಳವಾಗಿ ಹಿಡಿದಿಟ್ಟಿದೆ.ಜೀವನದ ಜವಾಬ್ದಾರಿಯೆಂಬುದು ಸರಿಯಾಗಿ ಅವಳ ಹೆಗಲ ಮೇಲೇರುವುದು ಮದುವೆಯೆಂಬ ಮೂರಕ್ಷರದ ನಂಟಾದ ಮೇಲೆ.ವೈವಾಹಿಕ ಬದುಕೆಂದರೆ ಹೂವಿನ ದಾರಿಯಲ್ಲ ,ಮಕಮಲ್ಲಿನ ಹಾಸಿಗೆಯಲ್ಲ.ನೂರಾರು ಏಳುಬೀಳುಗಳು,ಉಳಿಪೆಟ್ಟುಗಳು ಆಕೆಯ ವ್ಯಕ್ತಿತ್ವವನ್ನು ಗಟ್ಟಿಗೊಳಿಸುತ್ತವೆ.
ನೋವೆಂದು ಅಳುತ್ತಾ ಕೂರುವಂತಿಲ್ಲ, ಕಷ್ಟವೆಂದು ಕೈಕಟ್ಟಿ ನಿಲ್ಲಲಾರದ ಸ್ಥಿತಿ.ಪರಿಸ್ಥಿತಿಯನ್ನು ಎದುರು ಹಾಕಿಕೊಂಡು ಬದುಕುವ ಆತ್ಮವಿಶ್ವಾಸವೇ ಅವಳ ಆಸ್ತಿ.ಸವಾಲುಗಳು ಆಕೆಯ ಆತ್ಮವಿಶ್ವಾಸವನ್ನು ಕಂಡು ಸೋಲಬಹುದು ಅಥವಾ ನಿಧಾನವಾಗಿ ದೂರಸರಿದು ಹೊಸಬೆಳಕು ಗೋಚರಿಸಬಹುದು.ಧೃತಿಗೆಡದೆ ನಡೆವ ಆತ್ಮವಿಶ್ವಾಸ ಗೃಹಿಣಿಯ ಬಾಳಿಗೆ ಮೊದಲನೆಯ ಬೀಜಮಂತ್ರ.
ಆಕೆಯ ಕೆಲಸ ಕಾರ್ಯಗಳಲ್ಲಿ ಆದ ಸಾಸಿವೆಯಷ್ಟು ಪುಟ್ಟ ಲೋಪ,ರೂಪಲಾವಣ್ಯ, ಬುದ್ಧಿಮತ್ತೆ,ಕರಕುಶಲತೆ ಇವುಗಳಲ್ಲಿನ ವಿಭಿನ್ನತೆ ಕುಟುಂಬಕ್ಕೆ,ಸಮಾಜಕ್ಕೆ ದೊಡ್ಡದಾಗಿ ಕಾಣುತ್ತದೆ.ಮಾತಿನ ಬಾಣಗಳು ಆಕೆಯನ್ನು ಇರಿಯಬಹುದು. ಘಾಸಿಗೊಳಿಸಬಹುದು.ಆದರೆ ಏನೇ ಬಾಹ್ಯ ಒತ್ತಡಗಳು ಬರಲಿ, ನನ್ನ ಗಂಡ ಮತ್ತು ಮಕ್ಕಳಿಗೆ ನಾನೇ ಸಾಕು ಎಂಬ ಭಾವ ಅವಳಲ್ಲಿ ಮೂಡುವುದು- ನಿರಂತರವಾಗಿ ತನ್ನವರಿಗಾಗಿ ಹೃದಯದಾಳದಿಂದ ಉದ್ಭವಿಸುವ ಒಲವೆಂಬ ಅಮೃತವಾಹಿನಿಯಿಂದ.ಸಂಕೀರ್ಣ ಸಂದರ್ಭದಲ್ಲೂ ಬಾಂಧವ್ಯ ಭದ್ರಗೊಳಿಸುವಷ್ಟು ಬಲವಾಗಿ ಒಲವೂ, ಛಲವೂ ಇದ್ದರೆ ಚುಚ್ಚುಮಾತಿನ ವಾಲ್ಯೂಮ್ ಇಳಿಮುಖವಾಗುತ್ತದೆ , ಮ್ಯೂಟ್ ಆಗಲೂಬಹುದು.ಈ ಒಲವಿನ ಒರತೆಯು ಬತ್ತದಂತೆ ಜೋಪಾನವಾಗಿ ನೋಡಿಕೊಳ್ಳುವುದು ಅವಳ ಕೈಯಲ್ಲಿದೆ.ಅವಳ ಬದುಕಿಗೆ ಒಲವು ಎರಡನೆಯ ಬೀಜಮಂತ್ರವಿದ್ದಂತೆ.
ಸ್ತ್ರೀ ಯನ್ನು ಹೀಗೆ ವಿವರಿಸುತ್ತಾರೆ ಕಾರ್ಯೇಷು ದಾಸಿ,ಕರಣೇಷು ಮಂತ್ರಿ,ಭೋಜನೇಷು ಮಾತಾ,ಶಯನೇಷು ರಂಭಾ,ರೂಪೇಷು ಲಕ್ಷ್ಮೀ,ಕ್ಷಮಯೇಷು ಧರಿತ್ರಿ,ಸತ್ಕರ್ಮಯುಕ್ತ ಕುಲಧರ್ಮ ಪತ್ನಿ....
ಇವೆಲ್ಲವೂ ಗೃಹಿಣಿಯಲ್ಲಿ ಇರಬೇಕಾದ ಗುಣಗಳು.ನಿತ್ಯಸತ್ಯದ ದಾರಿಯಲ್ಲಿ ಮುನ್ನಡೆಯಲು ಮಾರ್ಗದರ್ಶನ ನೀಡುತ್ತವೆ.ಹೀಗಿದ್ದರೂ ಒಮ್ಮೊಮ್ಮೆ ನಾನು ಯೋಗ್ಯಳೇ,ನನ್ನಿಂದ ಸಮಾಜವನ್ನು ಎದುರಿಸಿ ಬದುಕಿ ಬಾಳಲು ಸಾಧ್ಯವೇ ಎಂಬ ಪ್ರಶ್ನೆ ಕಾಡುವುದು ಸಹಜ.ಆಗ ಆಕೆಯ ನೆರವಿಗೆ ಬರುವುದು ಸಂದರ್ಭೋಚಿತವಾಗಿ ಆಲೋಚನಾ ಗುಣವನ್ನು ಬೆಳೆಸಿದಂತಹ ವಿದ್ಯೆ, ಬುದ್ಧಿ ಎಂಬ ಎರಡಕ್ಷರದ ಜ್ಞಾನದೀಪಗಳು.
ನಾನೇ ಸಾಕು ಎಂಬುದು ಗೃಹಿಣಿಯ ಅಹಮಿಕೆಯಲ್ಲ ,ಬದಲಾಗಿ ಅದು ಅವಳ ಅಂತರಂಗ.ತನ್ನ ಕರ್ತವ್ಯವನ್ನು ಪ್ರೀತಿ ಶ್ರದ್ಧೆಯಿಂದ ನಿಭಾಯಿಸುತ್ತಾ, ಮಕ್ಕಳಿಗಾಗಿ ತನ್ನ ಹಲವು ರಾತ್ರಿಗಳ ನಿದ್ದೆಯನ್ನು ಕಳೆದುಕೊಂಡು,ತನ್ನ ಪ್ರೀತಿಯ ಹವ್ಯಾಸ,ಉದ್ಯೋಗ ಎಲ್ಲವನ್ನೂ ದೂರವಿಡುವ ಅವಳು ಸದಾ ಕುಟುಂಬದ ಶ್ರೇಯಸ್ಸನ್ನು ಬಯಸುವವಳು.ನಿಷ್ಕಲ್ಮಷ ಮನಸ್ಸಿನಿಂದ ಪತಿ ಸುತರ ಸಲಹುವ ಅವಳಿಗೆ ಅವರು ಉನ್ನತ ಸಾಧನೆಗೈದಾಗ ಆಗುವ ಆನಂದವೇ ಪರಮಾನಂದ .ನಾನೇ ಸಾಕು, ನಾನೇ ಸಾಕಿದ್ದು, ನಾನೇ ಗುರಿಯ ಕಡೆಗೆ ಮುನ್ನಡೆಸಿದ್ದು ಎಂಬ ಮೋಹ ತೀರದ ಮಮಕಾರ.
ಗೃಹಿಣಿಯಾಗಿ ಸ್ತ್ರೀ ಯೌವ್ವನದಲ್ಲಿ ನಡೆಯುವ ಹಾದಿಯೇ ಬೇರೆ,ವಯಸ್ಸಾಗುತ್ತಾ ಮಾಗಿದಾಗ ಮೂಡುವ ಸಂಕುಚಿತತೆಯೇ ಬೇರೆ.ಯೌವ್ವನದಲ್ಲಿ ಎಲ್ಲವನ್ನೂ ಹೊಂದಾಣಿಕೆ ಮಾಡಿಕೊಂಡು ಮುಂದೆ ಸಾಗಿದರೂ ವಯಸ್ಸಾದಾಗ ತನ್ನ ಬಗ್ಗೆ ಕೀಳರಿಮೆ ಮೂಡಬಹುದು ,ಆ ಕೀಳರಿಮೆಯೇ ಇತರರನ್ನು ಘಾಸಿಗೊಳಿಸಲು,ತನ್ನದೇ ಮಾತು ನಡೆಯಬೇಕೆಂಬ ಹಠ ಬೆಳೆಯಲು, ತಾನು ಇತರರಂತಿಲ್ಲ -ತನನ್ನು ಯಾರೂ ಗಮನಿಸುತ್ತಿಲ್ಲ ಎಂದು ಕೊರಗಲು ಕಾರಣವಾಗುತ್ತದೆ.ಇಂತಹ ಸಂದರ್ಭದಲ್ಲಿ ಆಕೆಯ ಪತಿ ಮಕ್ಕಳು ಜೊತೆಗಿದ್ದು ನಿನಗೆ ನಾವೇ ಸಾಕು ಎನ್ನುತ್ತಾ ಆಕೆಯನ್ನು ಹುರಿದುಂಬಿಸಿದರೆ ಅದೊಂದು ಸುಂದರವಾದ ಪರಿವಾರವಾಗಲು ಬೇರೇನೂ ತಂತ್ರ-ಮಂತ್ರ ,ನೇಮ-ನಿಷ್ಠೆಗಳು ಬೇಕಿಲ್ಲ.
ನಾನು ಪರಿಪೂರ್ಣಳಲ್ಲದಿದ್ದರೂ, ಕುಟುಂಬದ ಆಗುಹೋಗುಗಳನ್ನು ಗಮನಿಸುತ್ತಾ ,ಬೇಕಾದ ಸಲಹೆ ಸೂಚನೆಗಳನ್ನು ಪತಿ ಮಕ್ಕಳಿಗೆ ನೀಡುತ್ತಾ,ಗಂಡನ ಔದ್ಯೋಗಿಕ ಒತ್ತಡಗಳಿಗೆ ಕಿವಿಯಾಗುತ್ತಾ,ಸಂತಸದ ಹೊನಲನ್ನು ಹರಿಸುತ್ತಾ, ಸುಂದರ ನಾಳೆಗಳಿಗೆ ಇಂದೇ ಮುನ್ನುಡಿ ಬರೆದು , ಸೋಲು ಗೆಲುವಿನಲ್ಲೂ ಜೊತೆನಡೆದು, ಜೀವನವೆಂಬ ಬಂಡಿಯನ್ನು ಪತಿಯೊಂದಿಗೆ ಹೆಗಲು ನೀಡಿ ಎಳೆಯಲು ನಾನೇ ಸಾಕು.ನನ್ನ ಕುಟುಂಬಕ್ಕೆ ನಾನೇ ಬೇಕು.
✍️... ಅನಿತಾ ಜಿ.ಕೆ.ಭಟ್.
13-05-2020.
No comments:
Post a Comment