ಬೇಸಿಗೆ ಬಂದರೆ ಸಾಕು ಹಲಸಿನ ಕಾಯಿಯು ನಮ್ಮ ಅಡುಗೆಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಳ್ಳುತ್ತದೆ.ಎಳೆ ಹಲಸಿನ ಕಾಯಿಯಿಂದ ಹಿಡಿದು ಹಣ್ಣಿನವರೆಗೂ ನಾನಾ ಪಾಕ ವೈವಿಧ್ಯಗಳನ್ನು ತಯಾರು ಮಾಡಬಹುದು.ಬಲಿತ ಹಲಸಿನ ಕಾಯಿ ಮತ್ತು ಹಣ್ಣಿಗಿಂತ ಎಳೆಯ ಹಲಸಿನ ಕಾಯಿ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು ಎನ್ನುತ್ತಾರೆ ಹಿರಿಯರು.ಕಾರಣ ಇದರಲ್ಲಿ ವಾಯುವಿನ ಅಂಶ ಕಡಿಮೆಯಿದ್ದು ಕನರು/ಒಗರು ರುಚಿಯನ್ನು ಹೊಂದಿರುತ್ತದೆ.ಗುಜ್ಜೆಯಿಂದ ಮಾಡುವ ನಾಲ್ಕು ಸವಿಪಾಕಗಳನ್ನು ತಿಳಿಯೋಣ.
ಗುಜ್ಜೆ/ಎಳೆಹಲಸಿನ ಕಾಯಿ ಪಲ್ಯ
ಗುಜ್ಜೆಯಿಂದ ತಯಾರಿಸಬಹುದಾದ ರುಚಿಕರವಾದ ಪಲ್ಯವನ್ನು ಹೇಗೆ ಮಾಡುವುದು ಎಂದು ನೋಡೋಣ..
ಬೇಕಾದ ಸಾಮಗ್ರಿಗಳು:-
ಎರಡು ಕಪ್ ಹಲಸಿನ ಹೋಳುಗಳು
ನೆನೆಸಿದ ಕಡಲೆಕಾಳು
ಕಾಲು ಕಪ್ ತೆಂಗಿನ ತುರಿ
ಮೆಣಸಿನ ಪುಡಿ -2 ಚಮಚ
ಅರಿಶಿನ ಪುಡಿ-1ಚಮಚ
ಉಪ್ಪು-2 ಚಮಚ
ಬೆಲ್ಲ-2 ಚಮಚ
ನೀರು
ಒಗ್ಗರಣೆಯ ಸಾಮಗ್ರಿಗಳು
ಮಾಡುವ ವಿಧಾನ:-
ಕಡಲೆ ಕಾಳನ್ನು ಏಳೆಂಟು ಗಂಟೆಗಳ ಕಾಲ ನೆನೆಸಿಟ್ಟುಕೊಳ್ಳಬೇಕು.ಕುಕ್ಕರಿನಲ್ಲಿ ಮೂರು ಸೀಟಿ ಕೂಗಿಸಿ.ಗುಜ್ಜೆಯನ್ನು ತುಂಡುಗಳಾಗಿ ಮಾಡಿ ನೀರಿನಲ್ಲಿ ಹಾಕಿಡಿ.ಸ್ವಲ್ಪ ಹೊತ್ತಿನ ಬಳಿಕ ಕುಕ್ಕರಿನಲ್ಲಿ ಸ್ವಲ್ಪ ನೀರು ಹಾಕಿ ಮೂರು ಸೀಟಿ ಕೂಗಿಸಿ.ಪ್ರೆಶರ್ ಹೋದ ಬಳಿಕ ಗುಜ್ಜೆಯ ತುಂಡುಗಳನ್ನು ಪುಡಿಮಾಡಿಕೊಳ್ಳಿ.
ಬಾಣಲೆಗೆ ತೆಂಗಿನೆಣ್ಣೆ ಹಾಕಿ ಅದರಲ್ಲಿ ಹುಡಿ ಮಾಡಿದ ಗುಜ್ಜೆ,ಬೇಯಿಸಿದ ಕಡಲೆಕಾಳು, ಮೆಣಸಿನ ಪುಡಿ,ಅರಶಿನ ಪುಡಿ, ಉಪ್ಪು,ಬೆಲ್ಲ, ಸ್ವಲ್ಪ ನೀರು ಹಾಕಿ ಬೇಯಿಸಿ.ಕೊನೆಯಲ್ಲಿ ತೆಂಗಿನಕಾಯಿ ತುರಿ ಹಾಕಿ ಮಗುಚಿ ಕೆಳಗಿಳಿಸಿ.
ನಂತರ ಒಗ್ಗರಣೆಗೆ ಎಣ್ಣೆ ಧಾರಾಳವಾಗಿ ಬಳಸಿ.ಉಳಿದ ಪಲ್ಯಗಳಿಗಿಂತ ಇದಕ್ಕೆ ಎಣ್ಣೆ ಜಾಸ್ತಿ ಇದ್ದರೇ ರುಚಿ.ಸಾಸಿವೆ, ಉದ್ದಿನಬೇಳೆ,ಕೆಂಪುಮೆಣಸಿನ ಕಾಯಿ ಹಾಕಿ ಒಗ್ಗರಣೆ ಚಟಪಟ ಸಿಡಿಸಿ ,ಬಾಣಲೆಯಲ್ಲಿರುವ ಪಲ್ಯದ ಮಧ್ಯದಲ್ಲಿ ಸ್ವಲ್ಪ ಗುಂಡಿಮಾಡಿ ಕರಿಬೇವಿನ ಸೊಪ್ಪು ಹಾಕಿ.. ಒಗ್ಗರಣೆಯನ್ನು ಹಾಕಿರಿ.ಅದರ ಮೇಲೆ ಪಲ್ಯವನ್ನು ಮುಚ್ಚಿ.ಬಾಣಲೆಗೆ ಮುಚ್ಚಳ ಮುಚ್ಚಿ ಹತ್ತು ನಿಮಿಷ ಹಾಗೇ ಬಿಡಿ.ನಂತರ ಎಲ್ಲವನ್ನೂ ಮಿಶ್ರಮಾಡಿ ..ಬಿಸಿ ಬಿಸಿ ಅನ್ನದ ಜೊತೆ ಸೇವಿಸಿ...ಸೂಪರಾಗಿರುತ್ತೆ..👌👌👌👌😋😋😋😋

ಗುಜ್ಜೆ/ಎಳೆಯ ಹಲಸಿನ ಕಾಯಿ ಮಂಚೂರಿ
ಹೋಟೇಲಿನ ವೈವಿಧ್ಯಮಯ ತಿಂಡಿಗಳಿಗೆ ಬಾಯಲ್ಲಿ ನೀರೂರಿಸದವರಿಲ್ಲ.ಗರಂ ಗರಂ ಆಗಿರುವ ತಿನಿಸುಗಳು ಮತ್ತೆ ಮತ್ತೆ ತಿನ್ನಬೇಕೆಂಬ ಆಸೆಯನ್ನು ಹುಟ್ಟಿಸುತ್ತವೆ.ಅಂತಹದೇ ರುಚಿಯನ್ನು ಮನೆಯಲ್ಲಿ ಮಾಡಬಹುದಾ..? ಮನೆಯ ಸ್ವಚ್ಛ,ಶುದ್ಧವಾದ , ರಾಸಾಯನಿಕ ರಹಿತ ತರಕಾರಿಗಳಿಂದ ಮಾಡಿದರೆ ರುಚಿ ಮತ್ತು ಗುಣಮಟ್ಟದಲ್ಲಿ ಹೋಟೇಲ್ ಗಿಂತ ಒಂದು ಸ್ತರ ಮೇಲೆಯೇ ನಿಲ್ಲುತ್ತದೆ.
ಖಾರಖಾರವಾದ ಗೋಬಿ ಮಂಚೂರಿ ನೆನಪಾದರೆ ಆಹಾ..!! ಅದರ ರುಚಿ.. ಇನ್ನೊಮ್ಮೆ ಸವಿಯೋಣ ಎನ್ನುತ್ತದೆ.ಗೋಬಿ ಇಲ್ಲವೆಂದು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಗುಜ್ಜೆ/ಎಳೆಯ ಹಲಸಿನ ಕಾಯಿಯಿಂದಲೇ ತಯಾರು ಮಾಡಿ ತಿನ್ನಬಹುದು.ಬನ್ನಿ..ಹಾಗಾದರೆ ಸರಳವಾಗಿ ಗುಜ್ಜೆ ಮಂಚೂರಿ ಹೇಗೆ ಮಾಡುವುದು ನೋಡೋಣ..
ಬೇಕಾಗುವ ಸಾಮಗ್ರಿಗಳು..
1.ಎಳೆಯ ಗುಜ್ಜೆಯ ತುಂಡುಗಳು ಎರಡು ಕಪ್
2.ಕಡಲೆ ಹಿಟ್ಟು 4 ಚಮಚ
3.ಕಾರ್ನ್ ಫ್ಲೋರ್-3 ಚಮಚ
4.ಮೈದಾ-3 ಚಮಚ
5.ಮೆಣಸಿನ ಪುಡಿ-1ಚಮಚ
6.ಉಪ್ಪು-1ಚಮಚ
7.ಶುಂಠಿಯ ಚಿಕ್ಕ ತುಂಡುಗಳು-1ಚಮಚ
8.ಬೆಳ್ಳುಳ್ಳಿ ಎಸಳು-5
9.ಟೊಮೆಟೊ -ಎರಡು
10.ನೀರುಳ್ಳಿ -ಎರಡು
11.ಕೊತ್ತಂಬರಿ ಸೊಪ್ಪು
12.ನಿಂಬೆಹುಳಿ ರಸ
13.ಬೆಲ್ಲದ ಪುಡಿ-1ಚಮಚ
14.ಜೀರಿಗೆ
15.ಎಣ್ಣೆ
16.ಹಸಿಮೆಣಸು 4
ಮಾಡುವ ವಿಧಾನ...
ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮಾಡಿಟ್ಟುಕೊಳ್ಳಿ.ಟೊಮೊಟೊ, ನೀರುಳ್ಳಿ, ಹಸಿಮೆಣಸು, ಕೊತ್ತಂಬರಿ ಸೊಪ್ಪನ್ನು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ.
ಹಲಸಿನ ಕಾಯಿಯ ತುಂಡುಗಳನ್ನು ಹದವಾಗಿ ಬೇಯಿಸಿಕೊಳ್ಳಿ(ಕುಕ್ಕರಿನಲ್ಲಿ ಹಬೆಯಲ್ಲಿ ನೀರು ಹಾಕದೆಯೂ ಬೇಯಿಸಿಕೊಳ್ಳಬಹುದು).ಅದಕ್ಕೆ ಕಡ್ಲೆ ಹಿಟ್ಟು, ಮೈದಾ, ಕಾರ್ನ್ ಫ್ಲೋರ್, ಉಪ್ಪು,ಮೆಣಸಿನ ಹುಡಿ ,ಶುಂಠಿ ಬೆಳ್ಳುಳ್ಳಿ ಪೇಸ್ಟ್ ( ಅರ್ಧಾಂಶ)ಹಾಕಿ ನೀರು ಸ್ವಲ್ಪ ಹಾಕಿ ಕಲಸಿಕೊಳ್ಳಿ.ಹಿಟ್ಟು ಗಟ್ಟಿಯಾಗಿರಲಿ.
ಎಣ್ಣೆ ಕಾಯಲು ಇಟ್ಟು ಕಾದಾಗ ಹಿಟ್ಟನ್ನು ಸ್ವಲ್ಪವೇ ಎಣ್ಣೆಗೆ ಬಿಡಿ.ಆದಾಗ ತೆಗೆದಿಡಿ.ನಂತರ ಇನ್ನೊಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ನಂತರ ಜೀರಿಗೆ,ಕತ್ತರಿಸಿದ ಹಸಿಮೆಣಸು,ಉಳಿದ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಟೊಮೆಟೊ, ನೀರುಳ್ಳಿ,ಬೆಲ್ಲ , ಉಪ್ಪು ಒಂದೊಂದಾಗಿ ಹುರಿಯುತ್ತಾ ಹಾಕಿಕೊಳ್ಳಿ.ನಂತರ ಎಣ್ಣೆಯಲ್ಲಿ ಬೇಯಿಸಿ ತೆಗೆದಿಟ್ಟ ಗುಜ್ಜೆಯನ್ನು ಹಾಕಿ ತಿರುವಿ.ಸ್ಟವ್ ಆರಿಸಿ ನಿಂಬೆರಸ ಸೇರಿಸಿ.ಮೇಲಿನಿಂದ ಕೊತ್ತಂಬರಿ ಸೊಪ್ಪು ಉದುರಿಸಿ ಬಿಸಿ ಬಿಸಿಯಾಗಿ ಸರ್ವ್ ಮಾಡಿ..
ಬಹಳ ಸುಲಭ ಸರಳವಾಗಿ ಮಾಡಬಹುದಾದ ಗುಜ್ಜೆ ಮಂಚೂರಿ ನೀವೂ ಕೂಡ ಮಾಡಲು ಪ್ರಯತ್ನಿಸಿ..ಹೇಗೆ ಬಂತು ಎಂದು ತಪ್ಪದೆ ತಿಳಿಸಿ..

ಎಳೆಹಲಸಿನ ಕಾಯಿ/ಗುಜ್ಜೆ ಪಕೋಡ
ಸಂಜೆ ಹೊತ್ತು ಏನಾದರೂ ಬಿಸಿ ಬಿಸಿಯಾಗಿ ಎಣ್ಣೆತಿಂಡಿ ಮಾಡಿಕೊಟ್ಟರೆ ... ಆಹಾ..ಮನೆಮಂದಿಯೆಲ್ಲ ಬಹಳ ಇಷ್ಟಪಟ್ಟು ಬಾಯಿಚಪ್ಪರಿಸಿಕೊಳ್ಳುತ್ತಾರೆ.ಒಂದೇ ತೆರನಾದ ತಿಂಡಿಗಳು ಬೋರ್ ಹೊಡೆಸುತ್ತವೆ.ಅದಕ್ಕಾಗಿ ವಿಶೇಷವಾಗಿ ಏನಾದರೂ ಪ್ರಯತ್ನ ಮಾಡ್ತಾನೇ ಇರಬೇಕಾಗುತ್ತದೆ.ಗುಜ್ಜೆ ಪಕೋಡ ಮಾಡಲು ಪ್ರಯತ್ನಿಸಿದೆ.ಚೆನ್ನಾಗಿ ಬಂದಿದೆ.ಮಾಡುವ ವಿಧಾನವನ್ನು ನೀವೂ ನೋಡಿ ..ಮನೆಯಲ್ಲೇ ಗರಿಗರಿಯಾದ ಪಕೋಡ ತಯಾರಿಸಿ.
ಬೇಕಾಗುವ ಸಾಮಗ್ರಿಗಳು:-
ಗುಜ್ಜೆ ಎಳೆಹಲಸಿನ ಕಾಯಿ ಎರಡು ಕಪ್
ಈರುಳ್ಳಿ ಒಂದು ಕಪ್
ಕಡ್ಲೆ ಹಿಟ್ಟು ಒಂದು ಕಪ್
ಅಕ್ಕಿಹಿಟ್ಟು ಅರ್ಧ ಕಪ್
ಸಣ್ಣಗೆ ಹೆಚ್ಚಿದ ಕರಿಬೇವು
ಅರಿಶಿನ ಪುಡಿ
ಮೆಣಸಿನ ಪುಡಿ
ಉಪ್ಪು
ಎಣ್ಣೆ
ಮಾಡುವ ವಿಧಾನ:-
ಗುಜ್ಜೆಯನ್ನು ಬೇಯಿಸಿ ಪುಡಿಮಾಡಿಟ್ಟುಕೊಳ್ಳಿ.ಅದಕ್ಕೆ ಈರುಳ್ಳಿ, ಕಡ್ಲೆಹಿಟ್ಟು, ಅಕ್ಕಿಹಿಟ್ಟು,ಕರಿಬೇವು,ಅರಿಶಿನ ಪುಡಿ, ಮೆಣಸಿನ ಪುಡಿ, ಉಪ್ಪು ಹಾಕಿ ಬೆರೆಸಿ.ಸ್ವಲ್ಪ ನೀರು ಸೇರಿಸಿ.ಹಿಟ್ಟು ಗಟ್ಟಿಯಾಗಿ ಕಲಸಿಕೊಳ್ಳಿ.ಬಾಣಲೆಯಲ್ಲಿ ಎಣ್ಣೆ ಕಾಯಲಿಟ್ಟು,ಕಾದ ಎಣ್ಣೆಯಲ್ಲಿ ಸಣ್ಣ ಸಣ್ಣದಾಗಿ ಹಿಟ್ಟನ್ನು ಬಿಡಿ.ಕಾದಾಗ ತೆಗೆದರೆ ಬಿಸಿ ಬಿಸಿಯಾದ ಪಕೋಡ ಸವಿಯಲು ಸಿದ್ಧ.ಗುಜ್ಜೆ ಬಳಸಿದ್ದೇವೆ ಎಂದು ಹೇಳಿದರೆ ಮಾತ್ರ ತಿಳಿದೀತಷ್ಟೇ...ಟೇಸ್ಟೀ.. ಆಗಿರುತ್ತೆ..

ಗುಜ್ಜೆ ಸಾಂಬಾರ್/ಕೊದಿಲು
ಬೇಕಾಗುವ ಸಾಮಗ್ರಿಗಳು:-
ಒಂದು ದೊಡ್ಡ ಕಪ್ ಗುಜ್ಜೆ ಯು ಹೋಳು,ಅರ್ಧ ಕಪ್ ಕಡಲೆಕಾಳು,ಎರಡು ಕಪ್ ತೆಂಗಿನಕಾಯಿ ತುರಿ, ಎರಡು ಚಮಚ ಕೊತ್ತಂಬರಿ, ಒಂದೂವರೆ ಚಮಚ ಉದ್ದಿನ ಬೇಳೆ,ಕಾಲು ಚಮಚ ಮೆಂತೆ, ಸ್ವಲ್ಪ ಇಂಗು ಎಂಟು ಕೆಂಪು ಮೆಣಸು,ಅರಶಿನ ಪುಡಿ,ರುಚಿಗೆ ತಕ್ಕಷ್ಟು ಉಪ್ಪು ,ಬೆಲ್ಲ ,ಒಗ್ಗರಣೆಯ ಸಾಮಗ್ರಿಗಳು.
ಮಾಡುವ ವಿಧಾನ:-
ಕಡಲೆಕಾಳುಗಳನ್ನು ಎಂಟು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಕುಕ್ಕರಿನಲ್ಲಿ ಗುಜ್ಜೆಯ ತುಂಡುಗಳೊಂದಿಗೆ ಮೂರು ಕೂಗು ಬರಿಸಿ.ಮಸಾಲೆಗೆ ಒಂದು ಬಾಣಲೆಯಲ್ಲಿ ಕೊತ್ತಂಬರಿ, ಉದ್ದಿನಬೇಳೆ, ಮೆಂತೆ, ಇಂಗು,ಕೆಂಪು ಮೆಣಸು ಹಾಕಿ ಚೆನ್ನಾಗಿ ಪರಿಮಳ ಬರುವಷ್ಟು ಹುರಿದುಕೊಂಡು ತೆಂಗಿನಕಾಯಿ ತುರಿ ಯೊಂದಿಗೆ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ.ಬೇಯಿಸಿದ ಹೋಳುಗಳಿಗೆ ರುಚಿಗೆ ತಕ್ಕಷ್ಟು ಉಪ್ಪು,ಬೆಲ್ಲ,ಅರಶಿನ ಪುಡಿ ಸೇರಿಸಿ ಚೆನ್ನಾಗಿ ಕುದಿಸಿ.ನಂತರ ರುಬ್ಬಿದ ಮಸಾಲೆ ಮಿಶ್ರಣವನ್ನು ಸೇರಿಸಿ.ಸಾಂಬಾರಿಗೆ ಬೇಕಾದಷ್ಟು ನೀರು ಸೇರಿಸಿ, ಕುದಿಸಿ,ಒಗ್ಗರಣೆ ಕೊಡಿ.ಬಿಸಿ ಬಿಸಿ ಅನ್ನದ ಜೊತೆ ಮನೆಮಂದಿಗೆ ಬಡಿಸಿ.ದೋಸೆ, ಚಪಾತಿ, ಇಡ್ಲಿಯ ಜೊತೆಗೂ ಸವಿಯಬಹುದು..

ಆಯಾಯಾ ಕಾಲಕ್ಕೆ ಪ್ರಕೃತಿಯ ಮಡಿಲಲ್ಲಿ ಬೆಳೆಯುವ ಫಲವನ್ನು ಸೇವಿಸಿ ಹಿರಿಯರು ಆರೋಗ್ಯವಂತರಾಗಿ ಜೀವಿಸಿದ್ದರು.ಅದರಂತೆ ಇಂದೂ ಕೂಡ ಸ್ಥಳೀಯವಾಗಿ ದೊರಕುವ ಆಹಾರ ವೈವಿಧ್ಯಗಳನ್ನು ಸವಿಯುವ ಆಸಕ್ತಿ ತೋರಬೇಕು.ಕಲಬೆರಕೆ,ವಿಷಾಂಶಗಳನ್ನು ಹೊಂದಿಲ್ಲದ ಹಲಸಿನಕಾಯಿ ಪೌಷ್ಟಿಕಾಂಶಗಳ ಆಗರ.ಹಿತಮಿತವಾಗಿ ಬಳಸಿದಲ್ಲಿ ದೇಹಾರೋಗ್ಯದ ದೃಷ್ಟಿಯಿಂದ ಹಿತಕರ.
✍️... ಅನಿತಾ ಜಿ.ಕೆ.ಭಟ್.
23-05-2020.
No comments:
Post a Comment