ಜೀವನ ಮೈತ್ರಿ ಭಾಗ ೮೨
ಶಾಸ್ತ್ರೀ ನಿವಾಸದಲ್ಲಿ ಮೈತ್ರಿ ಇಲ್ಲದೆ ಕಳೆಯೇ ಇರಲಿಲ್ಲ. ಮಹೇಶನಿಗೆ ಅಕ್ಕನಿಲ್ಲದೆ ಹೊತ್ತು ಹೋಗುತ್ತಿರಲಿಲ್ಲ. ಸದಾ ಅಕ್ಕನ ನೆನಪೇ ಸುಳಿಯುತ್ತಿತ್ತು.ಮಂಗಳಮ್ಮನಿಗೆ ಬೆಳ್ಳಂಬೆಳಗ್ಗೆ ತಿಂಡಿ ಮಾಡುತ್ತಿರುವಾಗ ಮಗಳನ್ನು "ತಿಂಡಿ ತಿನ್ನಲು ಬಾ " ಎಂದು ಕರೆದು ಹೋಗುತ್ತಿತ್ತು. ಅಜ್ಜ ಏನೂ ತೋರಿಸಿಕೊಳ್ಳಲು ಹೋಗದೇ ಇದ್ದರೂ ಒಂದು ವಿಧದ ಶೂನ್ಯ ಅವರನ್ನು ಆವರಿಸಿತ್ತು. ಅಜ್ಜಿ ಮಹಾಲಕ್ಷ್ಮಿ ಅಮ್ಮನಿಗೆ ಶಶಿಯದೇ ಯೋಚನೆಯಾಗಿತ್ತು 'ಯಾಕೆ ಹೀಗೆ ಮಾಡಿದಳು ?'ಎಂದು.
ಮೈತ್ರಿ ದಿನಕ್ಕೆ ಮೂರು ಬಾರಿ ಅಮ್ಮನಿಗೆ ಫೋನ್ ಮಾಡುತ್ತಿದ್ದಳು. ಮಾತನಾಡಲು ವಿಷಯವಿಲ್ಲದೆಯಿದ್ದರೂ ಅಮ್ಮನ ದನಿ ಕೇಳಿದರೆ ಸಮಾಧಾನ ಅವಳಿಗೆ.. ಮಹೇಶನೂ ಅಷ್ಟೇ.. ಆಗಾಗ ಅಕ್ಕನಿಗೆ ಕರೆ ಮಾಡುತ್ತಿದ್ದ.
********
ಮೈತ್ರಿಯ ಮೂರು ದಿನದ ಕ್ವಾರೈಂಟೈನ್ ಮುಕ್ತಾಯದ ಹಂತದಲ್ಲಿತ್ತು. ಬೆಳಗ್ಗೆ 4:00 ಗಂಟೆಯ ಸಮಯಕ್ಕೆ ಗಣೇಶ ಶರ್ಮನಿಗೆ ಎಚ್ಚರವಾಯಿತು. ಇನ್ನು ಸುಮ್ಮನೆ ಮಲಗುವುದಕ್ಕೆ ನಾನು ಎದ್ದು ಬಚ್ಚಲ ಒಲೆಗೆ ಬೆಂಕಿ ಹಾಕುತ್ತೇನೆ ಎಂದು ಹೊರಟರು. ಸೊಸೆ ಇವತ್ತು ಸ್ನಾನ ಮಾಡುವುದು.. ಬೇಗ ಸ್ನಾನಮಾಡಿ ಬರಲಿ . ಮಗ ಸೊಸೆಯ ವಿರಹವನ್ನು ನೋಡಲಾಗುವುದಿಲ್ಲ. ಎಂದುಕೊಂಡು ಬಚ್ಚಲುಮನೆಯ ಕಡೆಗೆ ಚಿಮಣಿಯ ದೀಪವೊಂದನ್ನು ಹಿಡಿದುಕೊಂಡು ಹೊರಟರು.
ಮಮತಾಗೆ ಎಚ್ಚರವಾಯಿತು. ನಾನು ಇನ್ನು ಸಮ್ಮನೆ ಮಲಗಿಕೊಂಡು ಕಣ್ಣುಮುಚ್ಚುವುದಕ್ಕೆ ಎದ್ದು ಮೈತ್ರಿಗೆ ಸ್ನಾನಕ್ಕೆ ಬೇಕಾದ್ದನ್ನು ರೆಡಿ ಮಾಡುತ್ತೇನೆ ಎಂದು ಹೊರಟರು. ಮೈತ್ರಿಗೆ ಬಾತ್ ಟವಲ್ ,ಹಾಕುವ ಡ್ರೆಸ್ ಎಲ್ಲವನ್ನು ಸಂಗ್ರಹಿಸಿ ಬಚ್ಚಲು ಮನೆಯಲ್ಲಿ ಮರದ ರೀಪಿನಲ್ಲಿ ನೇತು ಹಾಕಿದರು.ಹಿಂದಿನ ದಿನ ಒಕ್ಕಿ ತಂದಿದ್ದ ಅರಶಿನದ ಗಡ್ಡೆಯ ತುಂಡೊಂದನ್ನು ಬಚ್ಚಲು ಮನೆಯ ಹಂಡೆಗೆ ಬದಿಯಲ್ಲಿ ಇಟ್ಟು ಬಂದರು..
ತಂದೆ ತಾಯಿ ಇಬ್ಬರೂ ಎದ್ದು ಇಷ್ಟೆಲ್ಲ ಮಾಡುತ್ತಿದ್ದಾಗ ಕಿಶನ್ ಗೂ ಎಚ್ಚರವಾಯಿತು. ರಾತ್ರಿ ನಿದ್ದೆ ಹಿಡಿಯುವುದಕ್ಕೆ ಬಹಳ ತಡವಾಗಿತ್ತು. ಹೀಗೆ ಎಚ್ಚರವಾದಾಗ ಮುದ್ಗೊಂಬೆ ಇಂದು ಸ್ನಾನ ಮಾಡಿ ಬರುವ ದಿನ ಎಂದು ಪಕ್ಕನೆ ಹೊಳೆಯಿತು. ಸೀದಾ ಮುದ್ಗೊಂಬೆಗೆ ಸಂದೇಶ ರವಾನಿಸಿದ. ಮೇಲಿಂದ ಮೇಲೆ ಸಂದೇಶ ಬಂದಾಗ ಆಕೆಗೆ ಎಚ್ಚರವಾಯಿತು. ಐದೂವರೆಗೆ ಎದ್ದು ಮೆಲ್ಲನೆ ಸ್ನಾನಕ್ಕೆ ಹೊರಟರು. ಹಾಸಿದ ಬಟ್ಟೆಯನ್ನೆಲ್ಲ ತೆಗೆದು ಮಡಚಿ ತನ್ನ ಜೊತೆಗೆ ಒಯ್ದಳು.ಕೋಣೆಯನ್ನು ಸೆಗಣಿನೀರಿನಿಂದ ಒರೆಸಿದಳು.ತಾನು ಬಳಸಿದ ತಟ್ಟೆ ಲೋಟಗಳನ್ನು ತೊಳೆದು ಕವಚಿಟ್ಟಳು.ಅತ್ತೆ ತೆಗೆದಿರಿಸಿದ್ದ ದೊಡ್ಡ ಬಕೆಟ್ ನಲ್ಲಿ ಬಟ್ಟೆಯನ್ನು ನೀರಿನಲ್ಲಿ ಅದ್ದಿದಳು. ಇದನ್ನೆಲ್ಲಾ ತಾನಿನ್ನು ಒಗೆಯಬೇಕಲ್ಲ ಎಂದು ಒಗೆಯಲು ಸನ್ನದ್ಧಳಾದಳು.
ಅಂಗಳದ ಬದಿಯಲ್ಲಿ ಶೀಟ್ ಹಾಕಿ ಹಾಸು ಕಲ್ಲೊಂದನ್ನು ನೆಟ್ಟಿದ್ದಾರೆ .ಅದರಲ್ಲಿ ಬಟ್ಟೆ ಒಗೆಯಬೇಕಿತ್ತು. ತವರಲ್ಲಾದರೆ ವಾಷಿಂಗ್ ಮೆಷಿನ್ ಇತ್ತು. ಅದಕ್ಕೆ ಹಾಕಿಬಿಟ್ಟರೆ ನಡೆಯುತ್ತಿತ್ತು.ಅಲ್ಲದೆ ಕೆಲಸದಾಕೆ ಸರಸು ಕೂಡ ಚೆನ್ನಾಗಿ ಒಗೆದು ಕೊಡುತ್ತಿದ್ದಳು. ಈಗ ತನ್ನ ಕೆಲಸವನ್ನು ತಾನೇ ಮಾಡಬೇಕಾದ ಅನಿವಾರ್ಯತೆ ಮೈತ್ರಿಗೆ. ಬೆಡ್ ಶೀಟ್ ಎತ್ತಿ ಒಗೆಯಲು ಹೊರಟಳು. ತಲೆಯಲ್ಲಿ ನಾನಾತರಹದ ಆಲೋಚನೆ. ಹದಾಮಟ್ಟಿಗೆ ಒಗೆದರೆ ಸಾಕೇ.. ಅಲ್ಲ ಸರಸು ಒಗೆಯುವಂತೆ ಕಲ್ಲಿಗೆ ಪಟಪಟ ಬಡೀಬೇಕೇ...ಬಡಿದಿಲ್ಲವಾದರೆ ಒಗೆದದ್ದು ಸರಿಯಾಗಿಲ್ಲ ಎಂದು ಹೇಳಿದರೆ ಕಷ್ಟ. ಎಂದು ಒಂದೊಂದೇ ಬೆಡ್ಶೀಟ್ ತೆಗೆದು ಕಲ್ಲಿಗೆ ಹೊಡೆಯಲಾರಂಬಿಸಿದರು.
ಇತ್ತ ಮಲಗಿದ್ದ ಕಿಶನ್ ಗೆ ನಿದ್ದೆಯೂ ಬರದೆ ಏಳುವ ಮನಸ್ಸು ಇಲ್ಲದೆ ಚಡಪಡಿಸುತ್ತಿದ್ದ.. ಒಮ್ಮೆ ಎದ್ದರೆ ಮತ್ತೆ ಮೈತ್ರಿ ಸಿಗುವುದು ರಾತ್ರಿ. ಇದರಿಂದ ಪುನಃ ಕಣ್ಮುಚ್ಚಿದ ನಾಟಕವಾಡುತಿದ್ದ. ಅತ್ತ ಅವಳು ಬಟ್ಟೆಯೊಗೆಯುವುದು ಜೋರಾಗಿ ಕೇಳಿದರೆ ಇಲ್ಲಿ ಇವನ ಹೃದಯ ಅವಳಿಗಾಗಿ ಬಡಿದುಕೊಳ್ಳುತ್ತಿತ್ತು.'ಸಾಕಮ್ಮ ತಾಯಿ ಬಟ್ಟೆ ಬಡಿದದ್ದು 'ಎಂದು ಗೋಗರೆದು ಕೊಳ್ಳೋಣ ಎಂದೆನಿಸಿತ್ತು... ಫೋನ್ ರೂಮಿನಲ್ಲಿ ಬಿಟ್ಟು ಹೋಗಿದ್ದಾಳೆ.. ಏನು ಮಾಡೋಣ ದೇವರು ಬೇಗಬರುವಂತೆ ಬುದ್ದಿ ಕೊಡಲಿ ಎಂದು ಆ ದೇವರಿಗೆ ಕೈಮುಗಿದ..
ಮೈತ್ರಿ ತಾನು ಅಮ್ಮ ಹೇಳಿದ ಮಾತನ್ನು ನೆನಪಿಸಿಕೊಂಡಳು. ಗಂಡನ ಮನೆಯಲ್ಲಿ ಯಾವುದೇ ಕೆಲಸವಾದರೂ ಅಚ್ಚುಕಟ್ಟಾಗಿ ಮಾಡಬೇಕು. ಅರ್ಧಂಬರ್ಧ ಮಾಡುವುದಲ್ಲ.ಹಾಗೆಯೇ ಬಟ್ಟೆಯೊಗೆಯುವ ಕಾರ್ಯವನ್ನು ಅಚ್ಚುಕಟ್ಟಾಗಿ ಮುಗಿಸಿ ಹೇಗೋ ಕಷ್ಟಪಟ್ಟು ಬಟ್ಟೆಯನ್ನು ಅಂಗಳದಲ್ಲಿ ಒಂದು ತೆಂಗಿನ ಮರದಿಂದ ಇನ್ನೊಂದು ಮರಕ್ಕೆ ಕಟ್ಟಿಹಾಕಿದ್ದ ಸರಿಗೆಯಲ್ಲಿ ನೇತು ಹಾಕಿ ಬಚ್ಚಲು ಮನೆಗೆ ನಡೆದಳು.ಬಟ್ಟೆ ಒಣಗಲು ಹಾಕಿದ್ದನ್ನು ಕಂಡು ಅತ್ತೆ ಬಚ್ಚಲು ಮನೆಗೆ ಬಂದು ಹಂಡೆಯಿಂದ ಒಂದು ಬಕೆಟ್ ನೀರು ಮೈತ್ರಿಯ ತಲೆಗೆ ಸುರಿದರು. ಅಲ್ಲಿಗೆ ಅವಳು ಅರ್ಧ ಶುದ್ಧವಾದಂತೆ.ಹಂಡೆಯ ನೀರು ಮುಟ್ಟಬಹುದು ಎಂದರ್ಥ.ಅರಸಿನ ತುಂಡನ್ನು ತೋರಿಸಿ ಇದನ್ನು ಚೆನ್ನಾಗಿ ಅರೆದು ನೀರಿಗೆ ಹಾಕಿ ಸ್ನಾನ ಮಾಡು ಎಂದರು.
ಕಿಶನ್ ಕಾದು ಕಾದು ಸುಸ್ತಾಗಿ ಕಣ್ಣೀರು ತುಂಬಿಕೊಂಡಿದ್ದ. ಮುದ್ಗೊಂಬೆ ಇನ್ನೂ ಬಂದಿಲ್ಲವೇ ... ನನ್ನ ಕಷ್ಟ ಅವಳಿಗೆ ಅರ್ಥ ಆಗಲ್ಲ.. ಎಂದೆಲ್ಲಾ ಯೋಚಿಸುತ್ತಾ ಮೊಬೈಲಲ್ಲಿ ಇದ್ದ ಅವಳ ಫೋಟೋಗಳನ್ನು ನೋಡಿ ..
ಕಣ್ಣು ಮುಚ್ಚಿಕೊಂಡ ಮಲಗಿದ.
ಮೈತ್ರಿ ತಲೆಗೆ ಸ್ನಾನ ಮುಗಿಸಿ ಬಂದು ಅತ್ತೆ ಹೇಳಿದ ಶಾಸ್ತ್ರದಂತೆ ಬಾವಿಯಿಂದ ಒಂದು ಕೊಡಪಾನ ನೀರು ಎಳೆದು ..ಅದರಿಂದ ಒಂದು ಗಿಂಡಿ ನೀರು ತಂದು ಹೊಸ್ತಿಲ ಮೇಲೆ ಇಟ್ಟಳು.ಬರುವ ಹಾದಿಯಲ್ಲೇ ಇನ್ನೂ ಮೊಗ್ಗಾಗಿದ್ದು ಹಾಲು ಬಿಳಿ ಬಣ್ಣದ ದಾಸವಾಳವನ್ನು ಕೊಯ್ದು ತಂದಿದ್ದಳು.ಅದನ್ನು ಹೊಸ್ತಿಲ ದೇವಿಗಿಟ್ಟು ಭಕ್ತಿಯಿಂದ ಅತ್ತೆ ಹೇಳಿಕೊಟ್ಟಂತೆ ನಮಸ್ಕರಿಸಿದಳು.
ಏನೋ ಮೈ ಮೇಲೆ ಹರಿದಂತಾಗ ಕಣ್ಣು ತೆರೆದು ನೋಡಿದರೆ ತನ್ನರಸಿ ಸ್ನಾನ ಮಾಡಿ ಬಂದು ತನ್ನ ಬಳಿಯಲ್ಲಿ ಕುಳಿತು ಮುಖವನ್ನೇ ದಿಟ್ಟಿಸಿ ಕೀಟಲೆ ಮಾಡುತ್ತಿದ್ದಾಳೆ.ಕಿಶನ್ ನ ಸಂತೋಷಕ್ಕೆ ಪಾರವೇ ಇರಲಿಲ್ಲ... ತಲೆಗೆ ಸ್ನಾನ ಮಾಡಿ ನೀರಿಳಿಯುತ್ತಿದ್ದ ಒದ್ದೆ ತಲೆಕೂದಲು, ಪರಿಮಳ ಸೂಸುತ್ತಿದ್ದ ಅವಳ ಮೈ , ಕಡೆದು ಮಾಡಿದಂತಿದ್ದ ಮುಖದಲ್ಲಿ ರಾರಾಜಿಸುತ್ತಿದ್ದ ಸಿಂಧೂರ,ಸಂಭ್ರಮ ತುಂಬಿದ್ದ ಅವಳ ನಯನಗಳು, ಕಚಗುಳಿಯನ್ನು ಬಯಸುವಂತಿದ್ದ ಗುಳಿಬಿದ್ದ ಕೆನ್ನೆ ಅವನನ್ನು ಹುರಿದುಂಬಿಸಿತ್ತು. ಮೂರು ದಿನದ ತನ್ನ ವಿರಹ ..ನಾಲ್ಕು ವರ್ಷದ ವಿರಹಕ್ಕಿಂತಲೂ ಜೋರಾಗಿತ್ತು ಎನ್ನುತ್ತಾ ಮನಸಾರೆ ಮಡದಿಯನ್ನು ತಬ್ಬಿ ಪ್ರೀತಿಯ ಸಿಹಿಯನುಣಿಸಿದ..
ದಾಂಪತ್ಯವೆಂಬುದು ಒಂದು ಸುಂದರ ಅನುಬಂಧ.ಎಲ್ಲೋ ಹುಟ್ಟಿ ಬೆಳೆದ ಎರಡು ಜೀವಗಳು ನಾವು ಒಂದೇ ಎಂದು ಬೆರೆತು ಬದುಕುವ , ಮೌನದಲ್ಲೇ ಎಲ್ಲವನ್ನೂ ಅರಿತುಕೊಳ್ಳುವ ಶೃಂಗಾರ ಕಾವ್ಯ.ನನಗೆ ನೀನು ಸ್ಫೂರ್ತಿ.. ನಿನಗೆ ನನ್ನ ಹೆಗಲಿನಾಸರೆ ಎನ್ನುತ್ತಾ ಬದುಕಿನ ಏಳುಬೀಳುಗಳಲ್ಲಿ ಕೊಂಡಿಕಳಚದೆ ಮುಂದೆ ಸಾಗುವುದೇ ಸರಸಮಯ ಜೀವನಬಂಡಿ . ಇಲ್ಲಿ ಯಾರೂ ಹೆಚ್ಚಲ್ಲ..ಕಡಿಮೆಯೂ ಅಲ್ಲ.ಸರಿಸಮಾನವಾದ ಜವಾಬ್ದಾರಿಯನ್ನು ಹಂಚಿಕೊಳ್ಳುತ್ತಾ ಮುಂದೆ ಸಾಗಿದರೆ ದಾಂಪತ್ಯವೆಂಬುದು ಬಂಧನವಲ್ಲ.ಜೀವನದ ಮುನ್ನಡೆಗೆ ಸಾಧನ.
ಮಮತಾ ಗಣೇಶ ಶರ್ಮ ಇಬ್ಬರೂ ತಮ್ಮ ತಿಂಡಿ ಕಾಫಿ ಮುಗಿಸಿದರು.ಮಗ ಸೊಸೆ ಇನ್ನೂ ಎದ್ದಿಲ್ಲದಿದ್ದರೂ ಆ ಮುದ್ದು ಜೋಡಿಯನ್ನು ಕರೆಯುವ ಪ್ರಯತ್ನ ಮಾಡಲಿಲ್ಲ.ಅವರ ಖುಷಿಗೆ ಅತಿಯಾದ ಶಿಸ್ತಿನ ಬೇಲಿಹಾಕದೆ ತಮ್ಮ ಪಾಡಿಗೆ ತಾವು ಇರಬೇಕೆಂದು ಬಯಸಿದರು.
*******
ಶಾಸ್ತ್ರಿ ನಿವಾಸದಲ್ಲಿದ್ದ ಶಂಕರ ಶಾಸ್ತ್ರಿಗಳ ಕುಟುಂಬ ಬೆಂಗಳೂರಿಗೆ ಪ್ರಯಾಣ ಬೆಳೆಸಿತು.ಮಂಗಳಮ್ಮ ಉಪ್ಪಿನಕಾಯಿ,ಸೆಂಡಿಗೆ,ಮಾಂಬಳ , ತರಕಾರಿ ಗಳನ್ನು ತುಂಬಿಸಿಕೊಟ್ಟರು. ಅವರಿಗೆ ಕೊಂಡೊಯ್ಯಲೆಂದೇ ಹಲಸಿನ ಕಾಯಿಯ ಚಿಪ್ಸ್ ತಯಾರಿಸಿದ್ದರು..,ನೀರು ಮಾವಿನ ಕಾಯಿ ಹಾಕಿದ್ದರು.ಎಲ್ಲವನ್ನೂ ಕಾರಿನಲ್ಲಿ ತುಂಬಿಸಿದಾಗ ಕಾರು ತುಂಬು ಗರ್ಭಿಣಿಯಂತಾಗಿತ್ತು.
ಮನೆಯವರಿಗೆಲ್ಲ ಕೈಬೀಸಿ ಹೊರಡುತ್ತಿದ್ದಂತೆ ಮೈತ್ರಿಯಿದ್ದಿದ್ದರೆ ಈಗ ಬಾಯ್ತುಂಬಾ ಹರಟಿ ಬಾಯ್ ಬಾಯ್ ಮಾಡುತ್ತಿದ್ದಳು ಎಂದು ನೆನಪು ಮಾಡಿಕೊಂಡು ಕಣ್ತುಂಬಿಕೊಂಡರು ಗಾಯತ್ರಿ.ನನಗೂ ಇನ್ನು ಸ್ವಲ್ಪ ಸಮಯದಲ್ಲಿ ಹೀಗೆ ಮಗಳನ್ನು ಗಂಡನ ಮನೆಗೆ ಕಳುಹಿಸಬೇಕಾಗುತ್ತದೆ ಎಂದು ಸಣ್ಣ ಸಂಕಟವನ್ನು ಅನುಭವಿಸಿದರು.
ದಾರಿ ಮಧ್ಯದಲ್ಲಿ ಮದುವೆಯ ಸಡಗರ ಸಂಪ್ರದಾಯಗಳದ್ದೇ ಮಾತುಕತೆ ನಡೆಯುತ್ತಿತ್ತು.ಸಂಜನಾ ವಂದನಾ ಹಲವಾರು ವೈದಿಕ ಕಾರ್ಯಕ್ರಮಗಳು ,ಆಚರಣೆಗಳ ಮಹತ್ವವನ್ನು ತಂದೆತಾಯಿಯಿಂದ ತಿಳಿದುಕೊಂಡರು.ಮುಟ್ಟಿನ ಸಮಯದಲ್ಲಿ ಮುಟ್ಟಬಾರದು ಏಕೆ ಎನ್ನುವುದು ಸಂಜನಾಳನ್ನು ಬಹಳ ಕಾಡಿದ ಪ್ರಶ್ನೆಯಾಗಿತ್ತು.ಅಮ್ಮ ಅಪ್ಪನ ಮುಂದಿಟ್ಟಳು.
ಮುಟ್ಟಿನ ಸಮಯದಲ್ಲಿ ಹೆಣ್ಣಿನ ಶರೀರದಲ್ಲಿ ಹಾರ್ಮೋನುಗಳ ವ್ಯತ್ಯಾಸವಾಗುತ್ತದೆ.ಶುಚಿತ್ವದ ಕಡೆಗೂ ಆಕೆ ಗಮನಕೊಡಬೇಕಾಗುವುದು.
ದಣಿವೂ ಇರುವುದರಿಂದ ಆಕೆಗೆ ವಿಶ್ರಾಂತಿಯ ಅಗತ್ಯವಿದೆ.ಸುಮ್ಮನೆ ಹೆಣ್ಣುಮಕ್ಕಳಿಗೆ ವಿಶ್ರಾಂತಿ ಸಿಗಲು ಸಾಧ್ಯವೇ... ಅದಕ್ಕೋಸ್ಕರ ಏನೂ ಮುಟ್ಟಬಾರದು, ಮಾಡಬಾರದು ಎಂದು ಶಾಸ್ತ್ರವನ್ನಿಟ್ಟಿದ್ದಾರೆ ಹಿರಿಯರು. ಆದರೆ ಇಂದು ಮಾತ್ರ ಆ ಉದ್ದೇಶ ಎಷ್ಟರಮಟ್ಟಿಗೆ ಸಮರ್ಪಕವಾಗಿ ಪಾಲನೆಯಾಗುತ್ತಿದೆ ಎಂದು ಹೇಳಲು ಸಾಧ್ಯವಿಲ್ಲ.ಕೆಲವು ಮನೆಗಳಲ್ಲಿ ಮನೆಯ ಒಳಗಿನ ಕೆಲಸಗಳಿಗೆ ನಿವೃತ್ತಿ ನೀಡಿ ಗಂಡ ಅಡುಗೆಯ ಜವಾಬ್ದಾರಿ ಹೊತ್ತು ...ತೋಟದ ಕೆಲಸ ನೀನು ಮಾಡು , ಅಡಿಕೆ ಹೆಕ್ಕು, ದನಗಳಿಗೆ ಹುಲ್ಲು ಸೊಪ್ಪು ಮಾಡು ಎಂದು ಹೇಳುವುದಿದೆ.ಹೀಗಾದಾಗ ಮೂಲ ಉದ್ದೇಶ ಪಾಲನೆಯಾಗದೆ ಬರೀ ಮೂಢನಂಬಿಕೆ ಎಂದು ಕರೆಸಿಕೊಳ್ಳುತ್ತದೆ.ಇನ್ನು ಕೆಲವೆಡೆಗಳಲ್ಲಿ ಅಡುಗೆ ಮನೆಯಲ್ಲಿ ಆಹಾರ ತಯಾರಿಸುವವರಿಲ್ಲದೆ ಪೌಷ್ಟಿಕಾಂಶದ ಕೊರತೆಯನ್ನೂ ಹೆಣ್ಣು ಮಕ್ಕಳು ಅನುಭವಿಸುತ್ತಾರೆ.ಏಕೆಂದರೆ ಇಂತಹಾ ಸಂದರ್ಭದಲ್ಲಿ ಆಕೆಗೆ ಪುಷ್ಟಿದಾಯಕ ಆಹಾರ ಬೇಕು.ಒಟ್ಟಿನಲ್ಲಿ ಹೆಣ್ಣುಮಕ್ಕಳ ಅನುಕೂಲ ಕ್ಕಾಗಿ ಮಾಡಿದ ಕಟ್ಟುಪಾಡು ಇಂದು ಮೂಲ ತತ್ವವನ್ನು ಮರೆತು ,ಮಾನವೀಯತೆಯ ಒರತೆಯಿಲ್ಲದೆ ಬರೀ ಶಾಸ್ತ್ರವಾಗಿ ಉಳಿದಿರುವುದು ವಿಪರ್ಯಾಸವೇ ಸರಿ.
ಮುಂದುವರಿಯುವುದು..
✍️... ಅನಿತಾ ಜಿ.ಕೆ.ಭಟ್.
27-05-2020.
ಹೆಚ್ಚಿನ ಓದಿಗಾಗಿ...
ಬರಹದ ಕೆಳಗಡೆ ಇರುವ Home, view web version,> ಸಂಕೇತಗಳನ್ನು ಬಳಸಿಕೊಳ್ಳಬಹುದು....
No comments:
Post a Comment