ಜೀವನ ಮೈತ್ರಿ ಭಾಗ ೭೧
ಶಾಸ್ತ್ರಿ ಮಾಷ್ಟ್ರ ಮನೆಗೆ ಖಾಯಮ್ಮಾಗಿ ತೆಂಗಿನ ಕಾಯಿ ಸುಲಿಯಲು ಬರುತ್ತಿದ್ದ ಹಾಜಿಯಬ್ಬ ತಾನೇ ಮುಂದಾಗಿ ಬಂದು ಶಾಸ್ತ್ರಿಗಳ ಅಂಗಳದಲ್ಲಿ ತುರುಗಾಲಿನಲ್ಲಿ ಕುಳಿತಿದ್ದ. ಜೋರಾಗಿ ನಾಯಿ ಬೊಗಳುತ್ತಿದೆ ಯಾರು ಬಂದವರು ಎಂದು ಹೊರಗೆ ಇಣುಕಿದಾಗ "ಓಹೋ...ಹಾಜಿ " ಎಂಬ ಉದ್ಗಾರ ಭಾಸ್ಕರ ಶಾಸ್ತ್ರಿಗಳಿಂದ ಕೇಳಿಬಂತು.
"ತೆಂಗಿನಕಾಯಿ ಸುಲಿಯುವುದು ಯಾವಾಗ..?" ಎಂದು ಕೇಳಿದ ಹಾಜಿ.
"ಸುಲಿಯಬೇಕಿತ್ತು ..ಬಂದದ್ದು ಒಳ್ಳೆಯದೇ ಆಯ್ತು. "ಎಂದ ಶಾಸ್ತ್ರಿಗಳು ತೆಂಗಿನಕಾಯಿ ಸುಲಿಯುವ ವಿಷಯವನ್ನು ಅವನಲ್ಲಿ ಚರ್ಚಿಸಿದರು. ಹಾಜಿ ತೆಂಗಿನಕಾಯಿ ಸುಲಿಯಲು ಮೊದಲಿನಿಂದಲೇ ಶಾಸ್ತ್ರಿಗಳ ಮನೆಗೆ ಬರುತ್ತಿದ್ದ .ಆತನ ಮಗ ಫರೀದ್ ಶಾಸ್ತ್ರಿಗಳ ಶಾಲೆಗೆ ಹೋಗುತ್ತಿದ್ದನು.. ಮಧ್ಯೆ ಒಮ್ಮೆ ಶಾಲೆಗೆ ಹೋಗುವುದಿಲ್ಲ ಎಂದು ಹಠ ಹಿಡಿದಾಗ ಆ ದಾರಿಯಾಗಿ ನಡೆದುಕೊಂಡು ಹೋಗುತ್ತಿದ್ದ ಶಾಸ್ತ್ರಿ ಮೇಷ್ಟ್ರ ಬಳಿ ತನ್ನ ಅಳಲನ್ನು ತೋಡಿಕೊಂಡ. ಶಾಸ್ತ್ರೀ ಅಲ್ಲೇ ಹತ್ತಿರದಲ್ಲಿದ್ದ ಹುಳಿಯ ಅಡರನ್ನು (ಪುಳಿತ್ತಡರ್) ತೆಗೆದುಕೊಂಡು ನಾಲ್ಕು ಬಾರಿಸಿದ್ದರಲ್ಲಿ ಮತ್ತೆ ಶಾಲೆಗೆ ಹೋಗಲು ಆರಂಭಿಸಿದ್ದ ಫರೀದ್. ಈ ಘಟನೆ ನಡೆದಿದ್ದು ಇಪ್ಪತ್ತು ವರ್ಷಗಳ ಹಿಂದೆಯಾದರೂ ಹಾಜಿ ಇಂದಿಗೂ ಮರೆತಿಲ್ಲ. ತನ್ನ ಮಗ ಈಗ ಕಲಿತು ಗಲ್ಫ್ ನಲ್ಲಿ ಕೆಲಸದಲ್ಲಿದ್ದು ಕೈತುಂಬಾ ದುಡ್ಡು ಸಂಪಾದಿಸಬೇಕಾದರೆ ಶಾಸ್ತ್ರಿ ಮೇಷ್ಟ್ರು ಕಾರಣ ಎಂದು ಅಭಿಮಾನ ಅವನಿಗೆ.ಮಗ ದುಡ್ಡು ಕಳುಹಿಸುತ್ತಿದ್ದರೂ ಅವನ ದುಡ್ಡಿಗೆ ಕೈಚಾಚದೆ ಈಗಲೂ ತೆಂಗಿನಕಾಯಿ ಸುಲಿಯುವ ಕಾಯಕವನ್ನೇ ನೆಚ್ಚಿದವರು ಹಾಜಿ. ಹಾಗಾಗಿ ಮೇಷ್ಟ್ರ ಮನೆಯಲ್ಲಿ ತೆಂಗಿನಕಾಯಿ ಸುಲಿಯುವ ಕೆಲಸ ಇರಬಹುದು ಎಂದು ಕೇಳಿಕೊಂಡು ಬಂದಿದ್ದ. ಶಾಸ್ತ್ರಿಗಳು ತೆಂಗಿನಕಾಯಿ ಸುಲಿಯುವ ಜವಾಬ್ದಾರಿಯನ್ನು ಅವರಿಗೆ ವಹಿಸಿದರು.
ಮದುವೆಗೆ ಕರೆಯೋಲೆ ಕೊಡಲು ನೆರೆಯ ದಿವಾಕರ ಭಟ್ಟರ ಮನೆಗೆ ಹೋದಾಗ "ಶಾಸ್ತ್ರಿಯಣ್ಣೋ ದೀಗುಜ್ಜೆ (ದೀವಿಹಲಸು) ಬೇಕಾದರೆ ನಮ್ಮಲ್ಲಿದ್ದು. ಕೊಯ್ಯುವುದು ಮಾತ್ರ ಕೆಲಸ "ಎಂದಿದ್ದರು. ನಡು ತೋಟದ ಶಿವರಾಯರು ಡೈರಿಗೆ ದಿನವೂ 50 ಲೀಟರ್ ಹಾಲು ಕೊಡುವವರು.ಶಾಸ್ತ್ರಿಗಳು ಮನೆಗೆ ಬಂದಾಗ "ಹಾಲು ,ಮಜ್ಜಿಗೆ, ತುಪ್ಪ ಯಾವುದು ಬೇಕಾದರೂ ನಮ್ಮಲ್ಲಿ ಕೇಳಿ.. ಧಾರಾಳವಾಗಿ ಕೊಡೋಣ" ಎಂದು ಹೇಳಿದರು.
ಮಹಾಲಕ್ಷ್ಮಿ ಅಮ್ಮ ಜಿನ್ನಪ್ಪನಲ್ಲಿ ಹೇಳಿ ಬಾಳೆದಿಂಡನ್ನು ತೋಟದಿಂದ ತರಿಸಿದರು. ದಿಂಡಿನ ಹೊರ ಕವಚವನ್ನು ತೆಗೆದು ಬಿಸಿಲಿಗೆ ಹಾಕಲು ಹೇಳಿದರು. ಅದರಿಂದ ಬಳ್ಳಿ ಮಾಡಿ ಅದರಲ್ಲಿ ಹೂವಿನ ಮಾಲೆ ನೀಡುವುದು ರೂಢಿ.ಮದುವೆಯ ಸಮಾರಂಭದಲ್ಲಿ ಬಾಸಿಂಗ ಕಟ್ಟಲು ,ಹೂಮಾಲೆ ವಧೂವರರಿಗೆ ಸಿಂಗಾರದಲ್ಲಿ ನೇಯಲು ಉದ್ದವಾದ ಬಾಳೆ ನಾರಿನ ಬಳ್ಳಿ ಬೇಕಾಗುವುದು .ಅದಕ್ಕೆಂದೇ ಮಹಾಲಕ್ಷ್ಮಿ ಅಮ್ಮ ಈ ತಯಾರಿ ಮಾಡಿಕೊಂಡರು.
ಮಂಗಳಮ್ಮ ಮೈತ್ರಿಯ ಮದುವೆಗೆಂದೇ ಉಪ್ಪಿನಕಾಯಿ ಹಾಕಲು ತಂದಿದ್ದ ಮಾವಿನ ಮಿಡಿಯನ್ನು ಮುರಿದು ತಯಾರಿಸಿಟ್ಟಿದ್ದ ಉಪ್ಪಿನಕಾಯಿಯ ರಸದಲ್ಲಿ ಅದ್ದಿದರು. ಈ ರೀತಿಯ ಉಪ್ಪಿನಕಾಯಿಯು ಭಾರಿ ವಿಶೇಷ. ಸೊನೆ ಮಿಡಿ ಎಂದು ಕರೆಸಿಕೊಳ್ಳುವ ಈ ಮಿಡಿ ಒಂದು ಸಣ್ಣ ತುಂಡಿದ್ದರೂ ಮಜ್ಜಿಗೆ ಅನ್ನಕ್ಕೆ ಭಾರಿ ರುಚಿ. ಅದಕ್ಕೆ ತಕ್ಕಂತೆ ಬಹಳ ಎಳೆಯಮಿಡಿ ಗಳು ಕೂಡ ಶಾಸ್ತ್ರಿಗಳ ತೋಟದಲ್ಲಿ ದೊರೆತವು. ಚೋಮ ಮರಹತ್ತಿ ಕೊಯ್ದುಕೊಟ್ಟಿದ್ದ.ಅಕ್ಕ ಸೊನೆ ಮಿಡಿ ಹಾಕುತ್ತಿರುವ ಸುದ್ದಿ ಕೇಳಿದ ಗಾಯತ್ರಿಗೆ ಬೆಂಗಳೂರಿನಲ್ಲಿ ನಾಲಿಗೆಯಲ್ಲಿ ನೀರೂರಿತು. 'ಮದುವೆಯ ಉಪ್ಪಿನಕಾಯಿ ಉಳಿದರೆ ಒಂದು ಬಾಟಲಿ ತರಬೇಕು. ಸೊನೆಮಿಡಿ ತಿನ್ನದೇ ಬಹಳ ಸಮಯವಾಯಿತು. ಕುಚ್ಚಲಕ್ಕಿ ಗಂಜಿ ,ಮೊಸರಿನ ಜೊತೆ ಗಂಡನಿಗೆ, ನನಗೆ, ಮಕ್ಕಳಿಗೆ ಎಲ್ಲರಿಗೂ ಭಾರಿ ಪ್ರೀತಿ' ಎಂದು ತನ್ನಲ್ಲೇ ಆಡಿಕೊಂಡಳು.
ಮೈತ್ರಿಯ ಮುಖದಲ್ಲಿ ಆಗಾಗ ಏಳುತ್ತಿದ್ದ ಮೊಡವೆಗಳಿಗಾಗಿ ಮಂಗಳಮ್ಮ ಅಂಗಳದಲ್ಲಿದ್ದ ಅರಿಶಿನದ ಕೊಂಬನ್ನು ಒಕ್ಕಿ ತಂದಿದ್ದಾರೆ ."ಇನ್ನು ಮದುವೆಯವರೆಗೆ ಅದನ್ನು ಅರೆದು ಮುಖಕ್ಕೆ ಹಚ್ಚಿಕೊಂಡಿರು "ಎಂದರು.ಮೈತ್ರಿ ಸ್ವಲ್ಪ ಕೊಬ್ಬಿನಂಶದ್ದೆಲ್ಲ ತಿನ್ನುವುದು ಕಡಿಮೆ ಮಾಡಿ ಮುಖಕ್ಕೆ ಅರಸಿನ ತೇದು ಹಚ್ಚಿಕೊಳ್ಳುವ ಯೋಚನೆಯಲ್ಲಿದ್ದಳು.ಕರಿದ ತಿಂಡಿಗಳು, ತುಪ್ಪ ಹೆಚ್ಚು ಬಳಸಿದರೆ ಮೊಡವೆ ಬರುವುದು ಎಂದು ಗೂಗಲಲ್ಲಿ ತಿಳಿದುಕೊಂಡಳು . ಊಟದ ಮೇಲೆ ಒಂದು ಸಕ್ಕಣ ತುಪ್ಪ ಬಡಿಸುವುದು ಶಾಸ್ತ್ರಿ ಮನೆತನದ ಅಭ್ಯಾಸ. ಇತ್ತೀಚೆಗೆ ಅಂತಹ ಮೈತ್ರಿ ತುಪ್ಪ ಬೇಡವೇ ಬೇಡ ಎಂದಾಗ ಅಜ್ಜಿ "ತುಪ್ಪದಿಂದ ಮೊಡವೆ ಮೂಡುವುದಿಲ್ಲ.. ನೀನು ತುಪ್ಪ ತಿನ್ನುವುದನ್ನು ಮಾತ್ರ ಬಿಡಬೇಡ " ಎಂದು ತನ್ನ ಉಪದೇಶವನ್ನು ಮಾಡಿದರು.
*********
ಕಿಶನ್ 15 ದಿನ ರಜೆ ಹಾಕಿ ಊರಿಗೆ ಬಂದಿದ್ದಾನೆ .ಮದುವೆಯ ಸಂಭ್ರಮ.. ಮನೆಯಲ್ಲಿ ಇಬ್ಬರು ತಂಗಿಯರು ಬೀಡುಬಿಟ್ಟಿದ್ದಾರೆ.. ತಂಗಿಯರಿದ್ದಾರೆ ಎಂದರೆ ಕಾಲೆಳೆತ ಕೇಳುವುದೇ ಬೇಡ. ತಂಗಿಯರ ಛೇಡಿಸುವಿಕೆ ಯನ್ನೆಲ್ಲ ನಗುನಗುತ್ತಾ ಸ್ವೀಕರಿಸುತ್ತಿದ್ದ ಕಿಶನ್.
ಮದುವೆಯ ಸೀರೆ ರವಕೆ ಹೊಲಿಯಲು ಕೊಟ್ಟದ್ದನ್ನು ತೆಗೆದುಕೊಂಡುಬಂದ. ಕರಿಮಣಿ ರೆಡಿಯಾಗಿದೆ ಅಂದಾಗ ತಾನೇ ಖುದ್ದಾಗಿ ಹೋಗಿ ಹಣ ಪಾವತಿಸಿ ಮನೆಗೆ ತಂದ.ಮನೆಯಲ್ಲಿ ಒಮ್ಮೆ ಅದನ್ನು ತನ್ನ ಕೈಯಲ್ಲಿ ಹಿಡಿದು ಮೈತ್ರಿಗೆ ಹೇಗೆ ಕಟ್ಟುವುದು ಎಂದು ಸುಮ್ಮನೆ ಪ್ರಯತ್ನ ಮಾಡುತ್ತಿದ್ದ ತನ್ನ ರೂಮಿನಲ್ಲಿ. ಅದೇ ಸಮಯಕ್ಕೆ ಚಾಂದಿನಿ ಬರಬೇಕಾ.." ಅಣ್ಣ ರಿಹರ್ಸಲ್ ಮಾಡ್ತಾ ಇದ್ದೀಯಾ " ಎಂದು ಜೋರಾಗಿ ನಕ್ಕಳು.
ಅವಳ ಬೊಬ್ಬೆ ಕೇಳಿ ಹಾಜರಾದ ಮೇದಿನಿ.. "ತಾಳಿ ಕಟ್ಟುವುದಕ್ಕೂ ರಿಹರ್ಸಲ್ ಮಾಡಬೇಕೇನು..? ಪಕ್ಕಾ ಪ್ಲಾನ್ಡ್ ಮನುಷ್ಯ ನೀನು.. ಇನ್ ಯಾವುದಕ್ಕೆಲ್ಲ ಹೀಗೆ ರಿಹರ್ಸಲ್ ಮಾಡ್ತೀಯಾ.. ? "ಎಂದು ಕಾಲೆಳೆದಾಗ
"ನಾನು ರಿಹರ್ಸಲ್ ಮಾಡಿದ್ದಲ್ಲ.. ಕರಿಮಣಿ ಸರ ಸರಿಯಾಗಿದೆಯಾ ಎಂದು ನೋಡಬೇಕಲ್ಲವೇ.. ಕಣ್ಣಲ್ಲಿ ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದೆ.. "ಎಂದು ಹೇಳಿ ಜಾರಿಕೊಂಡ.
"ಸೀರೆ ರವಕೆ ಹೊಲಿದದ್ದು ಸರಿಯಾಗಿದೆಯಾ.. ಎಂದು ಪರಿಶೀಲನೆ ಮಾಡಬಹುದು " ಎಂದು ನಗುತಿದ್ದಳು ಚಾಂದಿನಿ.
'ಇನ್ನು ನಾನಿಲ್ಲಿದ್ದರೆ ಇವರು ಕಾಲೆಳೆಯೋದು ಜಾಸ್ತಿ ಆಗುತ್ತದೆ ' ಎಂದು ಮೆಲ್ಲನೆ ಅಲ್ಲಿಂದ ಕಾಲ್ಕಿತ್ತ.
ಅಪ್ಪನೊಡನೆ ಕೆಲಸದಾಳುಗಳ ಜೊತೆಯಲ್ಲಿ ತಾನು ಸ್ವಲ್ಪ ಕೆಲಸಕ್ಕೆ ಕೈಜೋಡಿಸಿದ. ತಾನು ಇನ್ಫೋಸಿಸ್ನ ಇಂಜಿನಿಯರ್ ಎಂದು ಯಾವುದೇ ಹಮ್ಮು-ಬಿಮ್ಮು ಇಲ್ಲದೆ ಸಹಕರಿಸಿದ. ಹೀಗೆ ಅಪ್ಪ-ಮಗ ಕೆಲಸದವರು ತೋಟದ ಪಕ್ಕದ ಗುಡ್ಡಕ್ಕೆ ಒಣಗಿದ ಮರವನ್ನು ಕಡಿಯಲು ತೆರಳಿದರು. ಗಣೇಶ ಶರ್ಮ" ಈ ಮರವನ್ನು ಕಡಿದು ಸೌದೆ ಮಾಡಬೇಕು " ಎಂದು ಕೆಲಸದಾಳುಗಳಲ್ಲಿ ಹೇಳಿ ಮಗನೊಂದಿಗೆ ವಾಪಸಾಗಬೇಕು ಎನ್ನುವಷ್ಟರಲ್ಲಿ ಸರ್ರ್... ಎಂದು ಸದ್ದು ಕೇಳಿ ಗರಬಡಿದವರಂತೆ ನಿಂತರು. ಅವರೆದುರು ಹೆಡೆಯೆತ್ತಿ ಬುಸುಗುಡುತ್ತಾ ನಾಗರ ಹಾವೊಂದು ಪ್ರತ್ಯಕ್ಷವಾಯಿತು..
ಮುಂದುವರೆಯುವುದು
✍️...ಅನಿತಾ ಜಿ .ಕೆ. ಭಟ್.
03-05-2020.
ಮದುವೆ ಸಂಭ್ರಮ ,😊
ReplyDeleteಹೌದು.. ಇನ್ನು ಗೌಜಿ.. ಥ್ಯಾಂಕ್ಯೂ 💐🙏
ReplyDelete