ಕೂಡಿ ಬಾಳುವ ಖುಷಿ
"ಅಪ್ಪಾ... ಈ ಸಾರಿ ಮಕ್ಕಳನ್ನು ರಜೆಯಲ್ಲಿ ಕಳಿಸಲೇ.. ?ಪ್ಲೀಸಪ್ಪಾ.. ಇದೊಂದು ವರ್ಷ ಮಾತ್ರ.. ಮುಂದಿನ ವರ್ಷ ನಾನೇ ಉದ್ಯೋಗ ಬಿಟ್ಟು ಮನೆಯಲ್ಲಿರುತ್ತೇನೆ" ಎಂದ ಮಗಳ ಮಾತನು ಕೇಳಿ ಪಶುಪತಿ ರಾಯರು ಮೌನವಾದರು .ಮಗಳಿಗೆ 'ನಿನ್ನ ಮಕ್ಕಳನ್ನು ಕಳುಹಿಸಿಕೊಡು ' ಎಂದು ಹೇಳುವ ಮನಸ್ಸು. ಆದರೆ ಪರಿಸ್ಥಿತಿ ಕಟ್ಟಿಹಾಕಿತ್ತು.
"ಅಪ್ಪ ಅವರು ಈಗ ಬೆಳೆದಿದ್ದಾರೆ. ಮೊದಲಿನಂತೆ ಗಲಾಟೆ ಮಾಡಲ್ಲ. ಅವರವರ ಕೆಲಸಗಳನ್ನು ಅವರೇ ಮಾಡಿಕೊಳ್ಳಲು ಕಲಿತಿದ್ದಾರೆ .ಆದರೂ ನಾನು ಉದ್ಯೋಗಕ್ಕೆ ತೆರಳುವಾಗ ಅವರಿಬ್ಬರನ್ನೇ ಮನೆಯಲ್ಲಿ ಬಿಟ್ಟು ಹೋಗುವುದು ನನಗೆ ಕಷ್ಟ..ಡೇ ಕೇರ್ ಸೆಂಟರ್ ಗಳು ಕೂಡ ಬಾಗಿಲು ಮುಚ್ಚಿಕೊಂಡಿದೆ ಪ್ಲೀಸ್ ಒಂದು ಸಲ ...ಆಗಲ್ಲ ಎನ್ನಬೇಡಿ ಅಪ್ಪ"
"ಆಯ್ತು ಮಗಳೇ ಕಳುಹಿಸಿಕೊಡು ನಮ್ಮಿಂದ ಸಾಧ್ಯವಾದಷ್ಟು ಮಟ್ಟಿಗೆ ನೋಡಿಕೊಳ್ಳುತ್ತೇವೆ."
"ಥ್ಯಾಂಕ್ಸ್ ಅಪ್ಪ .". ಧಾರಿಣಿಯ ಮನಸ್ಸು ಹಗುರವಾಗಿತ್ತು. ಮತ್ತೆ ತನ್ನ ಕಾರ್ಯದಲ್ಲಿ ತೊಡಗಿಸಿಕೊಂಡು ತಲೆಯಲ್ಲಿ ಏನು ಯೋಚಿಸುತ್ತಿದ್ದರೆ "ಸಿಸ್ಟರ್ ... ಡ್ರಿಪ್ ಸರಿ ಹೋಗ್ತಾ ಇಲ್ಲ "ಎಂದು ವಯಸ್ಸಾದ ಮಹಿಳೆಯೊಬ್ಬಳು ಕರೆದಾಗ 101 ನಂಬರ್ನ ರೂಮ್ಗೆ ತೆರಳಿದಳು.
ಸುಮಾರು 65 ವರ್ಷದ ಮಹಿಳಾರೋಗಿ ಜ್ವರವೆಂದು ದಾಖಲಾಗಿದ್ದರೂ, ಅಶಕ್ತತೆ ಬಲವಾಗಿತ್ತು .ವೈದ್ಯರು ಗ್ಲೂಕೋಸ್ ಹಾಕಿದ್ದರು . ಆದರೆ ಆಕೆ ಪದೇ ಪದೇ ಕೈ ಅಲುಗಾಡಿಸುತ್ತಾ ಇದ್ದುದರಿಂದ ಗ್ಲೂಕೋಸ್ ಸರಿಯಾಗಿ ಇಳಿಯುತ್ತಲೇ ಇರಲಿಲ್ಲ. ಪದೇ ಪದೇ ಕರೆದಾಗ ಧಾರಿಣಿ ಸರಿಮಾಡಿ ತೆರಳುತ್ತಿದ್ದಳು .ಒಮ್ಮೆ "ಎಷ್ಟು ಸಾರಿ ಹೀಗೆ ಮಾಡಿಕೊಳ್ಳುತ್ತಿದ್ದೀರಿ.. ಸ್ವಲ್ಪವಾದರೂ ಪ್ರಜ್ಞೆ ಬೇಡ್ವಾ"ಎಂದು ಗದರಿದ್ದಳು.ಮರುಕ್ಷಣ ಆಕೆಯ ಮುಖವನ್ನು ನೋಡಿ ' ಅಯ್ಯೋ ಪಾಪ ನನ್ನ ಅಮ್ಮನ ವಯಸ್ಸಿನವರು . ಸುಮ್ಮನೆ ಬೈದುಬಿಟ್ಟೆ 'ಎಂದು ನೊಂದುಕೊಂಡಳು.
ಏನೇ ಕಾಯಿಲೆ ಬಂದರೂ ಒಂದು ದಿನವೂ ತಪ್ಪಿಸದೆ ತನ್ನ ಕಾರ್ಯವನ್ನು ಮಾಡುತ್ತಿದ್ದ ಅಮ್ಮನ ನೆನಪು ಬಂದು ಕಂಗಳು ತುಂಬಿದವು.
******
ಪಶುಪತಿ ರಾಯರು ಮಗಳ ಮಾತುಗಳನ್ನೇ ಮತ್ತು ಮತ್ತೆ ನೆನಪಿಸಿಕೊಂಡರು. ಅವಳ ತೋರಿಕೆಯಲ್ಲಿ ಅದೆಷ್ಟು ಆರ್ದ್ರತೆ ಇತ್ತು. 'ಆಗಲ್ಲ 'ಎನ್ನುವ ಮಾತೇ ನನ್ನ ನಾಲಿಗೆಯಿಂದ ಹೊರಡಲಿಲ್ಲ ..ಹೊರಡುವುದೂ ಇಲ್ಲ . ತಾವು ಅನುಭವಿಸಿದ ಕಷ್ಟವನ್ನು ನೆನೆದು ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡಿಸಬೇಕೆಂದು ನಿರ್ಧರಿಸಿದ್ದರು.ಅದಕ್ಕಾಗಿ ಬಹಳ ಶ್ರಮ ಪಟ್ಟಿದ್ದರು...ಮಕ್ಕಳು ಕೂಡ ಕಲಿಕೆಯಲ್ಲಿ ಮುಂದಿದ್ದರು... ಮಗಳನ್ನು ನರ್ಸಿಂಗ್ ಓದಿಸಿ ಮಗನನ್ನು ಫಾರ್ಮಸಿ ಕೋರ್ಸಿಗೆ ಸೇರಿಸಿದರು .. ಇಂದು ಇಬ್ಬರು ಉದ್ಯೋಗದಲ್ಲಿದ್ದು ,ತಮ್ಮ ಕುಟುಂಬವನ್ನು ಮುನ್ನಡೆಸುತ್ತಿದ್ದಾರೆ. . ಆತ್ಮವಿಶ್ವಾಸ ಅವರಲ್ಲಿದೆ . ನಾವು ಅನುಭವಿಸಿದಂತಹ ಕಷ್ಟ ಅವರಿಗಿಲ್ಲ...ಆದರೆ ಅವರ ಕೌಟುಂಬಿಕ ಜವಾಬ್ದಾರಿಗಳಲ್ಲಿ ಪೂರ್ತಿಯಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ .ಇಂತಹ ಸಂದರ್ಭದಲ್ಲಿ ಅವರಿಗೆ ಸಹಾಯಬೇಕು. ಆಗಲ್ಲ ಎಂದು ಹೇಳಿದರೆ ಹೇಗೆ..? ಅವರ ಜವಾಬ್ದಾರಿಗಳನ್ನು ನಾವು ಹಂಚಿಕೊಳ್ಳುತ್ತಾ ಅವರಿಗೆ ನೆರವಾಗಬೇಕು .ಆದರೆ ಪರಿಸ್ಥಿತಿ ಇದಕ್ಕೆ ಸಹಕರಿಸುತ್ತಿದೆಯಾ ..? ಎಂದು ಯೋಚಿಸುತ್ತಾ.. ಹಣೆಯ ಮೇಲಿನ ನೆರಿಗೆಯಲ್ಲಿ ಮುತ್ತಿನಂತೆ ಜಿನುಗುತ್ತಿದ್ದ ಬೆವರ ಹನಿಗಳನ್ನು ಹೆಗಲ ಮೇಲಿನ ಬೈರಾಸಿನಲ್ಲಿ ಒರೆಸಿಕೊಂಡರು.
ಒಳಗೆ ತೆರಳಿದರು.. ಚಾವಡಿಯಲ್ಲಿ ಮಂಚದ ಮೇಲೆ ಬಾಳಸಂಗಾತಿ ಶಾಂತ ಚಲನೆಯಿಲ್ಲದೆ ಮಲಗಿದ್ದರು. ಕಣ್ಣುಗಳಲ್ಲಿ ಮಾತ್ರ ಹೊಸ ಹೊಳಪಿತ್ತು ."ರೀ ಏನಂತೆ ..? ಧಾರಿಣಿ ಮತ್ತು ಮಕ್ಕಳು ಬರುತ್ತಾರಂತಾ..?"
ಅವಳ ಮನಸ್ಸು ಕುಣಿಯುತ್ತಿತ್ತು ಮೊಮ್ಮೊಕ್ಕಳನ್ನು ನೋಡಲು ..ಎಷ್ಟಾದರೂ ಮಾತೃ ಹೃದಯವಲ್ಲವೇ. ತಾನು ಕೈ ಕಾಲು ಆಡದೆ ಮಲಗಿದ್ದರು ಮೊಮ್ಮಕ್ಕಳನ್ನು ನೋಡುವ ತವಕ. ಕಣ್ಣಂಚಲ್ಲೇ ಮಿಂಚಿನ ಸಂಚಾರವಾಯಿತು. ತುಂಬಾ ದಿನವಾಯಿತು ಇಂತಹ ಆನಂದವನ್ನು ಅವಳ ಮುಖದಲ್ಲಿ ಕಾಣದೇ. .."ರೀ.. ಮಕ್ಕಳು ಬಂದಾಗ ತಿನ್ನಲು ಏನಾದರೂ ತಂದಿಡಿ..ಹಾಗೇ ಕಪಾಟಿನಲ್ಲಿದ್ದ ಅವರ ಹಳೆಯ ಚಡ್ಡಿಗಳು, ಟೀಶರ್ಟುಗಳು, ಬೈರಾಸು , ಹೊದಿಕೆ ಎಲ್ಲವನ್ನೂ ಒಮ್ಮೆ ತೆಗೆದು ಸರ್ಫ್ ನೀರಿನಲ್ಲಿ ಹಾಕಿ ಬಿಸಿಲಿನಲ್ಲಿ ಒಣಗಿಸಿ. ವಾಸನೆ ಬರುತ್ತಿದ್ದರೆ ಮಕ್ಕಳಿಗೆ ಹಿಡಿಸದು."
ಶಾಂತಾಳ ಕಳಕಳಿಯನ್ನು ಅರ್ಥಮಾಡಿಕೊಂಡ ರಾಯರ ಕಣ್ಣು ತೇವವಾಯಿತು.. ತನ್ನ ಬಗ್ಗೆ ಯೋಚಿಸದಿದ್ದರೂ ತನ್ನವರದೇ ಚಿಂತೆ... ಎಂದು ಮಡದಿಯ ಮುಖವನ್ನೇ ದಿಟ್ಟಿಸಿ ಕಪಾಟಿನತ್ತ ತೆರಳಿದರು.ಮೊಮ್ಮಕ್ಕಳ ಬಟ್ಟೆಯನ್ನೆಲ್ಲಾ ಹೊರತೆಗೆದು ಸರ್ಫ್ ನೀರಿನಲ್ಲಿ ಅದ್ದಿ ಸ್ವಚ್ಛಗೊಳಿಸಿ ಅಂಗಳದ ತುದಿಯಲ್ಲಿದ್ದ ಬಳ್ಳಿಯಲ್ಲಿ ನೇತುಹಾಕಿದರು. ಆಗಾಗ ಕಣ್ಣು ಆ ಕಡೆಗೆ ಹೋಗುತ್ತಿದ್ದು ಬಟ್ಟೆಗಳು ಗಾಳಿಗೆ ಕೆಳಗೆ ಬಿದ್ದಾಗ ಹೆಕ್ಕಿಡುವುದು ,ಒಣಗಿದ್ದನ್ನ ಒಳಗೆ ತಂದು ಮಡಚಿಡುವುದು... ಮಾಡುತ್ತಿದ್ದರು. ಕಳೆದ ವರ್ಷ ಹಾಕಿದ ಅಂಗಿಚಡ್ಡಿಗಳು ಈ ವರ್ಷ ಮಕ್ಕಳಿಗೆ ಆಗಬಹುದೇ..? ದೊಡ್ಡವರಾಗಿರುತ್ತಾರೆ.. ಮಕ್ಕಳು ನನ್ನ ಹೆಗಲಿನೆತ್ತರಕ್ಕೆ ಬೆಳೆದಿರಬಹುದಾ..?ಹೇಗಿರಬಹುದು ..?ಎಂಬೆಲ್ಲಾ ಕುತೂಹಲ ಅವರಿಗೆ.
ಸಂಜೆ 5 ಗಂಟೆ ಆಯ್ತು. ಮಗ ಸೊಸೆ ಮಕ್ಕಳು ಮನೆಗೆ ಬರುವ ಸಮಯ.. ಪಶುಪತಿ ರಾಯರು ಅಡುಗೆ ಕೋಣೆಗೆ ತೆರಳಿ ತಯಾರಿ ನಡೆಸಿದರು. ಅಷ್ಟರಲ್ಲೇ ಬೈಕ್ ಬಂದಿತ್ತು. ಸಿಟ್ಟಿನಿಂದ ಬೈಕಿನಿಂದ ಇಳಿದ ಸೊಸೆ ಅಪರ್ಣ "ಮಾವ .."ಎಂದು ಜೋರಾಗಿ ಕರೆಯುತ್ತಲೇ ಒಳಗೆ ಬಂದಳು.
"ಮಾವ...ಧಾರಿಣಿ ಅತ್ತಿಗೆಯ ಮಕ್ಕಳು ಬರುತ್ತಿದ್ದಾರೆಯೇ.. ? ಬಟ್ಟೆಗಳೆಲ್ಲ ಒಣಗಲು ಹಾಕಿದ್ದು ಕಾಣುತ್ತದೆ.."
ತಣ್ಣಗಿನ ದನಿಯಲ್ಲಿ "ಹೌದು" ಎಂದರು.
"ನಿಮ್ಮಲ್ಲಿ ಮೊದಲೇ ಹೇಳಿದ್ದೇನೆ.. ಈ ಸಾರಿ ಅತ್ತಿಗೆಯ ಮಕ್ಕಳನ್ನು ಕರೆಸಿಕೊಳ್ಳುವುದು ಬೇಡ ಎಂದು.ಕೊರೊನಾ ಸಾಂಕ್ರಾಮಿಕ ರೋಗವೂ ಹಬ್ಬುತ್ತಿದೆ.ಇಲ್ಲಿ ಅತ್ತೆಯು ಹಾಸಿಗೆ ಹಿಡಿದಿದ್ದಾರೆ.. ನನ್ನ ಇಬ್ಬರು ಮಕ್ಕಳನ್ನು ನೋಡಿಕೊಂಡು ಉದ್ಯೋಗ ಮನೆ ಎರಡನ್ನೂ ನಿಭಾಯಿಸುವುದರಲ್ಲಿ ನಾನು ಹೈರಾಣವಾಗುತ್ತಿದ್ದೇನೆ. ಇನ್ನು ಇಬ್ಬರು ಮಕ್ಕಳು ಮನೆಯ ಬಂದರಂತೂ ಕೇಳುವುದೇ ಬೇಡ. ನನ್ನ ಕಷ್ಟ ಸ್ವಲ್ಪವಾದರೂ ಅರ್ಥಮಾಡಿಕೊಳ್ಳಿ.."ಎಂದು ವಟವಟ ಅನ್ನುತ್ತಲೇ ಒಳಬಂದಳು.
ಮೌನವಾಗಿದ್ದ ರಾಯರ ಮುಖವನ್ನೊಮ್ಮೆ ನೋಡಿ "ಆ ಮಕ್ಕಳನ್ನು ನೀವು ನೋಡಿಕೊಳ್ಳುತ್ತೀರಾ...? ಪಟ್ಟಣದಲ್ಲಿ ಬೆಳೆದು ವಿಪರೀತ ಸೊಕ್ಕಿವೆ.. ತಂಟೆ ಮಾಡುವುದೇ ಕೆಲಸ . ಆ ತಿಂಡಿ ಮೆಚ್ಚುವುದಿಲ್ಲ.. ಈ ಪದಾರ್ಥ ನಮಗೆ ಬೇಡ ..ಯಾವ ತಿನಿಸೂ ಸರಿಹೋಗದು. ಮನೆಯಿಡೀ ಹಾರಾಡುತ್ತಾ ಅಸ್ತವ್ಯಸ್ತ ಮಾಡಿದರೆ ಮತ್ತೆ ಸರಿ ಮಾಡಲು ನನಗೆ ವೇಳೆಯಿಲ್ಲ..
ಬೆಳಗ್ಗೆ ಐದಕ್ಕೆ ಎದ್ದು ಮನೆಗೆಲಸಗಳನ್ನೆಲ್ಲ ಮಾಡಿ ನನ್ನ ಮಕ್ಕಳಿಗೆ ತಿಂಡಿತಿನಿಸಿ ಉದ್ಯೋಗಕ್ಕೆ ಹೊರಟಾಗ ನನಗೆ ಸಾಕು ಬೇಕಾಗುತ್ತದೆ .. .."
ರಾಯರು ಮರುಮಾತನಾಡದೆ ಹೊರ ಹೊರಟರು ಸೊಸೆಯ ಮಾತಿನಲ್ಲಿ ಅರ್ಥವಿದೆ. ಹಾಸಿಗೆ ಹಿಡಿದು ಮಲಗಿದ ಅತ್ತೆಯನ್ನು ಚಾಕರಿ ಮಾಡಿ, ಮನೆಯ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಉದ್ಯೋಗಕ್ಕೆ ತೆರಳುವ ಅವಳಿಗೂ ಒತ್ತಡ ಹೆಚ್ಚುತ್ತದೆ.ಆದರೇನು ಮಾಡುವುದು..? ಮಗಳಲ್ಲಿ ನಿನ್ನ ಮಕ್ಕಳನ್ನು ನೀನೆ ನೋಡಿಕೋ.. ಎಂದು ಹೇಳಲು ಮನಸ್ಸಾದರೂ ಹೇಗೆ ಬರುತ್ತದೆ. ಮಗಳು ಉದ್ಯೋಗದಲ್ಲಿರಲಿ ಎಂದು ಬಯಸಿದ್ದು ನಾವೇ ತಾನೇ..?. ಆಕೆಗೆ ಉದ್ಯೋಗ ದೊರೆತಾಗ ತಮ್ಮನ ವಿದ್ಯಾಭ್ಯಾಸಕ್ಕೆ ಸಹಕಾರ ನೀಡಿದವಳು ಅವಳಲ್ಲವೇ..? ಸ್ವಂತ ಕಾಲ ಮೇಲೆ ನಿಂತ ಮಗಳು ಗಂಡನ ಮನೆಗೂ ಹೆಗಲು ನೀಡಿದ್ದಳು. ಡೇ ಕೇರ್ ಸೆಂಟರ್ ಗಳ ಸಹಾಯದಿಂದ ಮಕ್ಕಳನ್ನು ಬೆಳೆಸಿದ್ದಾಳೆ .ಆದರೆ ಈಗ ಅವು ಕೊರೋನಾ ಭಯದಿಂದ ಬಾಗಿಲು ಮುಚ್ಚಿವೆ. ಆಕೆಯ ನರ್ಸ್ ವೃತ್ತಿಯಲ್ಲಿ ಈಗ ಒತ್ತಡ ಹೆಚ್ಚು .ಇಂತಹ ಸಂದರ್ಭದಲ್ಲಿ
ಜವಾಬ್ದಾರಿ ನಮಗೆ ಬೇಡ ಎಂದರೆ ಸರಿಯಾ..? ಎಂಬ ರಾಯರ ಮನಸ್ಸು ಇಬ್ಬಂದಿತನ ಅನುಭವಿಸಿತು.
******
ಭಾನುವಾರ ಬಂದೇಬಿಟ್ಟಿತು. ಧಾರಿಣಿ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ತವರಿಗೆ ಬಂದಳು. ತಾನು ಒಂದು ದಿನ ನಿಂತು ಮಕ್ಕಳಿಗೆ ಅವರವರ ಕೆಲಸಗಳನ್ನು ಅವರೇ ಮಾಡಿಕೊಳ್ಳಲು ಮಾರ್ಗದರ್ಶನ ಮಾಡಿ ತೆರಳಿದಳು. ಹಾಸಿಗೆ ಹಿಡಿದಿದ್ದ ಶಾಂತಮ್ಮನವರಿಗೂ ಲವಲವಿಕೆ ಉಂಟಾಯಿತು. ಪಶುಪತಿ ರಾಯರು ಬೆಳಿಗ್ಗೆ ಬೇಗನೆದ್ದು ಸೊಸೆಗೆ ಮನೆಕೆಲಸಕ್ಕೆ ಸಹಕರಿಸುತ್ತಿದ್ದರು.ಮಗ ಧ್ರುವ ಕೂಡಾ ಎಂದಿನಿಂದ ಬೇಗನೆ ಎದ್ದು ಮನೆಯನ್ನು ಗುಡಿಸಿ ,ಒರೆಸಿ ,ವಾಷಿಂಗ್ ಮೆಷಿನ್ನ ಬಟ್ಟೆ ಒಣಗಲು ಹಾಕಿ, ಮಕ್ಕಳನ್ನು ಹಲ್ಲುಜ್ಜಿಸಿ ಸ್ನಾನ ಮಾಡಿಸಿ ,ತಿಂಡಿ ತಿನ್ನಲು ಕರೆದುಕೊಂಡು ಬರುತ್ತಿದ್ದ.
ಅಷ್ಟರಲ್ಲಿ ಧಾರಣಿಯ ಮಕ್ಕಳಾದ ಭುವನ್ ಮತ್ತು ಪವನ್ ಪ್ರಾತಃ ವಿಧಿ ವಿಧಾನಗಳನ್ನು ಮುಗಿಸಿ ತಯಾರಾಗುತ್ತಿದ್ದರು. ಅತ್ತೆ ಮಾಡಿಟ್ಟ ತಿನಿಸನ್ನು , ಪದಾರ್ಥಗಳನ್ನು ತಂದಿಟ್ಟು ಎಲ್ಲರಿಗೂ ಪಂಕ್ತಿ ಹಾಕುತ್ತಿದ್ದರು.ಅಪರ್ಣ ತನ್ನ ಮಕ್ಕಳನ್ನು ತಿಂಡಿ ತಿನ್ನಲು ಬನ್ನಿ ಎಂದು ಹತ್ತು ಸಲ ಕೂಗಬೇಕಾಗುತ್ತಿದ್ದುದು ಈಗ ಕರೆಯುವ ಅವಶ್ಯಕತೆಯೇ ಇರಲಿಲ್ಲ.ಭಾವಂದಿರ ಜೊತೆಗೆ ಅವರೇ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದರು.ಭಾವಂದಿರ ಬಟ್ಟಲನ್ನು ನೋಡಿ ತಮಗೂ ಅಷ್ಟೇ ತಿಂಡಿಬೇಕೆಂದು ಹಠಮಾಡಿ ಬಡಿಸಿಕೊಂಡು ಅವರ ಜೊತೆ ಬೇಗನೆತಿಂದು ಹೊಟ್ಟೆ ತುಂಬಿಸಿಕೊಳ್ಳಲು ಆರಂಭಿಸಿದರು.ಅಪರ್ಣಾ ಮೂಗಿನ ಮೇಲೆ ಬೆರಳಿಟ್ಟುಕೊಂಡಳು.ನಿತ್ಯವೂ ಆಕೆಗೆ ಮಕ್ಕಳಿಗೆ ಈಗಿನ ಅರ್ಧದಷ್ಟು ಆಹಾರ ಉಣಿಸಲು ಕನಿಷ್ಠ ಅರ್ಧಗಂಟೆ ಬೇಕಾಗುತ್ತಿತ್ತು.
ಅಪರ್ಣಾ ದಿನವೂ ಮಕ್ಕಳನ್ನು ಆಫೀಸಿಗೆ ಕರೆದೊಯ್ಯುತ್ತಿದ್ದವಳು ಅತ್ತಿಗೆಯ ಮಕ್ಕಳೊಡನೆ ಮನೆಯಲ್ಲೇ ಬಿಟ್ಟು ಹೋಗಲಾರಂಭಿಸಿದಳು.ಎಲ್ಲ ಮಕ್ಕಳನ್ನು ಪಶುಪತಿರಾಯರು ಅಡಿಕೆ ಸೋಗೆಯ ಗಾಡಿಯಲ್ಲಿ ಎಳೆಯುವುದು, ಹಳೆ ಟಯರಿನ ಗಾಡಿ ಮಾಡಿ ಎಳೆಯುವುದು ,ಮಾವಿನಹಣ್ಣು ಹೆಕ್ಕಲು,ಗೇರುಬೀಜ ಹೆಕ್ಕಲು ಕರೆದೊಯ್ಯುತ್ತಿದ್ದುದು ನಾಲ್ವರಿಗೂ ಜೊತೆಯಾಗಿ ಬೆರೆಯಲು ಅವಕಾಶವಾಯಿತು.. ಮೊಮ್ಮಕ್ಕಳೊಂದಿಗೆ ಅಜ್ಜನೂ ಮಗುವಾದನು.. ಧಾರಿಣಿ ತಾನು ಉದ್ಯೋಗದಲ್ಲಿರುವುದರಿಂದ ಮಕ್ಕಳಿಗೆ ಅವರ ಬಟ್ಟೆಗಳನ್ನು ಒಗೆಯಲು ಒಣಗಿದ ಬಟ್ಟೆಯನ್ನು ಮಡಚಿಡಲು ಕಲಿಸಿದ್ದಳು.ಅವರಂತೆ ತನ್ನ ಮಕ್ಕಳೂ ಕಲ್ಲಿಗೆ ವಸ್ತ್ರ ಬಡಿಯುವುದನ್ನು ಕಂಡು ಅಪರ್ಣಾಳ ಮುಖದಲ್ಲೊಂದು ನಗುಮೂಡಿತು..
ಮಾತನಾಡಲು ತೊದಲುತ್ತಿದ್ದ ತರುಣ್ ಚೆನ್ನಾಗಿ ಮಾತನಾಡಲು ಕಲಿತ.ಸಣ್ಣ ವಿಷಯಕ್ಕೂ ಆಳುತ್ತಿದ್ದ ಸಾನ್ವಿ ಅಳು ಮರೆತಳು.. ಭುವನ್ ಪವನ್ ಗುನುಗುತ್ತಿದ್ದ ಪದ್ಯ ,ಶ್ಲೋಕಗಳು ತರುಣ್ ,ಸಾನ್ವಿಯ ಬಾಯಿಂದ ಹೊರಬಂದವು. ಶಾಂತಮ್ಮನವರ ಮಂಚದ ಸಮೀಪದಲ್ಲಿ ಭುವನ್ ಪವನ್ ಕುಣಿಯುತ್ತಿದ್ದರೆ ತರುಣ್ ಸಾನ್ವಿಯೂ ಅದನ್ನೇ ಅನುಕರಿಸಿದರು..ಶಾಂತಮ್ಮ ಇವರನ್ನೆಲ್ಲ ನೋಡಿಕೊಳ್ಳಲು ನನ್ನ ಕೈಕಾಲುಗಳಲ್ಲಿ ಶಕ್ತಿ ಇಲ್ಲವೇ ..?ಎಂದು ಕೊರಗಿದರು. .
ಅಜ್ಜಿ ನಾವು ನಿನ್ನ ಕಾಲು ಒತ್ತಬೇಕಾ.. ನಿನಗೆ ಔಷಧಿ ಕೊಡಬೇಕಾ..ಬಿಸಿನೀರು ಬೇಕಾ..ಎನ್ನುತ್ತಾ ಭುವನ್ ಪವನ್ ಅಜ್ಜಿಯ ಮಂಚದ ಸುತ್ತ ಸುತ್ತುತ್ತಿದ್ದರು..ಅಜ್ಜಿ ಮೊಮ್ಮಕ್ಕಳಿಂದ ಬಯಸುವುದು ಇದನ್ನೇ ತಾನೆ.. ಅಜ್ಜಿಯ ಕಾಲಿಗೆ ಹೆಚ್ಚು ಬಲವಿಲ್ಲದಿದ್ದರೂ ಅಜ್ಜಿಯನ್ನು ವಾಕರ್ ನಲ್ಲಿ ನಡೆಸುತ್ತ ವಾಶ್ ರೂಮಿಗೆ ಕರೆದೊಯ್ಯುಯುತ್ತಿದ್ದರು. ಮೊಮ್ಮಕ್ಕಳ ಆಟ ,ಆರೈಕೆ ಅವರಿಗೆ ಸಂತೋಷ ತಂದುಕೊಟ್ಟಿತು.
ಹೀಗೆ ದಿನ ಕಳೆದದ್ದೇ ಗೊತ್ತಾಗಲಿಲ್ಲ. ಅಪರ್ಣಳಿಗೆ ಎಂದಿಗಿಂತ ಬೇಗನೆ ಆಫೀಸಿಗೆ ಹೊರಟಾಗುತ್ತಿತ್ತು .ಆಫೀಸಿನ ಕೆಲಸ ಮುಗಿಸಿ ಬಂದವಳಿಗೆ ಮನೆಯಲ್ಲಿ ಸಣ್ಣಪುಟ್ಟ ಕೆಲಸಗಳಿಗೆ ಅತ್ತಿಗೆಯ ಮಕ್ಕಳು ನೆರವಾಗುತ್ತಿದ್ದುದು ಸಮಾಧಾನದ ವಿಚಾರವಾಗಿತ್ತು.ಅಲ್ಲದೆ ಮಕ್ಕಳಿಗೆ ಉಣಿಸುವ ಕಾರ್ಯ ಬಹಳ ಸುಲಭದಲ್ಲಿ ನಡೆಯುತ್ತಿದ್ದುದರಿಂದ ಅವಳ ಅರ್ಧ ತಲೆನೋವು ಕಮ್ಮಿಯಾಗಿತ್ತು . ಪತಿರಾಯನೂ ಸ್ವಲ್ಪ ಸಹಾಯ ಮಾಡುವುದನ್ನು ಕಲಿತಿದ್ದ.. ಮನೆಯ ವಾತಾವರಣದಲ್ಲಿ ಇಷ್ಟೆಲ್ಲಾ ಆಗಲೇಬೇಕಾದ ಬದಲಾವಣೆಗಳು ಆದದ್ದನ್ನು ಕಂಡಾಗ ಅವಳ ಮನಸ್ಸು ಖುಷಿಯಿಂದ ಹಾರಾಡಿತು.
ಭುವನ್ ಮತ್ತು ಪವನ್ ತಮ್ಮ ತಾಯಿಯ ಜೊತೆಗೆ ತೆರಳುವ ಮುನ್ನ ಅಪರ್ಣಾ ಮಾವನವರಲ್ಲಿ "ಕ್ಷಮಿಸಿ ಮಾವ .. ನಾನು ಅತ್ತಿಗೆಯ ಮಕ್ಕಳು ಬಂದರೆ ತೊಂದರೆ ಎಂದುಕೊಂಡರೆ ಅವರಿಂದ ಎಷ್ಟು ಉಪಕಾರವಾಯಿತು..." ಎನ್ನುತ್ತಾ ಕಣ್ತುಂಬಿಕೊಂಡಳು.
"ಪರ್ವಾಗಿಲ್ಲ ಮಗಳೇ...ಮನೆಯ ಒಳಗೂ ಹೊರಗೂ ದುಡಿಯುವ ನೀನು.. ಒತ್ತಡವನ್ನು ತಾಳಲಾರದೆ ನಿನ್ನ ಕಷ್ಟದ ಬಗ್ಗೆ ಒಂದೆರಡು ಮಾತುಗಳನ್ನು ಹೇಳಿದರೆ ಅದರಲ್ಲಿ ತಪ್ಪಿಲ್ಲಮ್ಮಾ ... ದೊಡ್ಡ ಮಕ್ಕಳನ್ನು ನೋಡಿ ಸಣ್ಣ ಮಕ್ಕಳು ಕಲಿಯುತ್ತಾರೆ ಎಂಬುದು ಸತ್ಯ.ಮನೆಯ ಮಕ್ಕಳೆಲ್ಲಾ ಜೊತೆ ಸೇರಿದರೆ ಹಿರಿಯರಿಗೂ ಆನಂದ.."ಎನ್ನುತ್ತಾ ತಾವೂ ಹನಿಗಣ್ಣಾದರು.
"ಇನ್ನು ಪ್ರತೀ ವರ್ಷವೂ ಅಕ್ಕನ ಮಕ್ಕಳು ರಜೆಯಲ್ಲಿ ಊರಿಗೆ ಬರಲಿ.ಅಪರ್ಣಾ..ನಿನಗೆ ಮನೆಕೆಲಸಕ್ಕೆ ನಾನೂ ನೆರವಾಗುತ್ತೇನೆ .."ಎಂದ ಪತಿ ಧ್ರುವ..
ಎಲ್ಲರ ಮಾತುಗಳನ್ನು ಕೇಳುತ್ತಿದ್ದ ಶಾಂತಾ " ಹೀಗೇ ಒಬ್ಬರಿಗೊಬ್ಬರು ಸಹಕರಿಸುತ್ತಾ ಖೂಷಿಯಾಗಿರಲಿ ನನ್ನ ಕುಟುಂಬ"ಎಂದು ಮಲಗಿದಲ್ಲಿಂದಲೇ ಮನದುಂಬಿ ಹಾರೈಸಿದರು.
✍️... ಅನಿತಾ ಜಿ.ಕೆ.ಭಟ್.
30-08-2020.
ಆತ್ಮೀಯ ಓದುಗರೇ...
ಹೆಚ್ಚಿನ ಓದಿಗಾಗಿ ಬರಹದ ಕೆಳಗಡೆ ಇರುವ Home,> ಸಂಕೇತಗಳನ್ನು ಬಳಸಿಕೊಳ್ಳಬಹುದು..