#ಮಾತೆ_ಚೇತನ
ಒಡಲ ಕುಡಿಗಳಿಗೆಲ್ಲ ಚೇತನ
ಮಾತೆ ತುಂಬುತ ಸಂತತ
ಸೋಲನರಿಯದ ಅಶ್ವವಾಗಿಹೆ
ವಿಶ್ವಗುರು ನೀ ಭಾರತ..||೧||
ಕಲೆಯ ಸೆಲೆಯು ಕಡಲ ಅಲೆಯು
ಚಿಮ್ಮುತಿಹುದು ನಿತ್ಯವೂ
ವೀರಮಣಿಗಳ ಜ್ಞಾನಗಣಿಗಳ
ಮಡಿಲು ನಿನ್ನದು ಸತ್ಯವು..||೨||
ಸಮಸ್ತ ಲೋಕದ ಹಿತವ ಬಯಸುವ
ಶ್ರೇಷ್ಠ ನಿನ್ನ ಚಿಂತನೆ
ಕೇಡು ಕಲಿಗಳ ಸೇಡಿನುಲಿಗಳ
ಮಟ್ಟಗೈಯ್ಯುವೆ ಕುಲವನೇ..||೩||
ಸಂತ ಮಹಿಮರು ಸಿರಿಯ ತುಹಿನವು
ವೇದಶಾಸ್ತ್ರ ಪುರಾಣವು
ಕ್ಷಿಪಣಿ ಶೋಧನೆ ನವೀನ ಸಾಧನೆ
ತಂತ್ರಜ್ಞಾನ ನಾಗಾಲೋಟವು...||೪||
ವಸುದೈವಕುಟುಂಬಂ ವಂದೇಗೋಮಾತರಂ
ನಿನ್ನ ನಿತ್ಯ ತತ್ವವು
ಪೂಜ್ಯ ಆತಿಥ್ಯತೆ ಮಾತೆ ದೇವತೆ
ಐಕ್ಯತೆಯೆ ಮಣ್ಣಕಣದ ಸತ್ವವು...||೫||
ಮಾನವೀಯತೆ ಪರಹಿತ ಸ್ನೇಹದಿ
ಬರೆದೆ ಜಯದ ಭಾಷ್ಯವ
ಕಾರ್ಯತಂತ್ರ ಶಾಂತಿಮಂತ್ರ
ಜ್ಞಾನಸೂತ್ರದಿ ಸೆಳೆದ ನೀ ವಿಶ್ವವ..||೬||
✍️...ಅನಿತಾ ಜಿಕೆ ಭಟ್
27-08-2020.
No comments:
Post a Comment