Tuesday, 11 August 2020

ಎಂಥಾ ಚೆಲುವ ನನ್ನ ಕೃಷ್ಣ

 

ಎಂಥಾ ಚೆಲುವ ನನ್ನ ಕೃಷ್ಣ

ಎಂಥಾ ಚೆಲುವ ಮುದ್ದು ಕೃಷ್ಣ
ಶಿರದಿ ಗರಿಯ ಮುಡಿವನು
ಗೆಲುವು ನಾನು  ಒಲವು ಅವನು
ಬಲದಿ ದಿನವು ಕಾಯ್ವನು ||

ಎಂಥಾ ಚೆಲುವ ಬಾಲಕೃಷ್ಣ
ನೀಲ ಮೇಘ ಶ್ಯಾಮನು
ಬಣ್ಣ ನಾನು ಕಣ್ಣು ಅವನು
ಉಣಿಸುತಿಹನು ನಲಿವನು||

ಎಂಥಾ ಚೆಲುವ ತುಂಟ ಕೃಷ್ಣ
ದಧಿಯ ಗಡಿಗೆ ಒಡೆವನು
ಉದಯ ನಾನು ಹೃದಯ ಅವನು
ಅಮೃತ ಸುಧೆಯ ಸುರಿವನು||

ಎಂಥಾ ಚೆಲುವ ಕಂದ ಕೃಷ್ಣ
ಹಾಲ ವಿಷವ ಗೆದ್ದನು
ಕಲೆಯು ನಾನು ಸೆಲೆಯು ಅವನು
ಸೋಲಸರಿಸಿ ಜಯವನು||

ಎಂಥಾ ಚೆಲುವ ಕೊಳಲ ಕೃಷ್ಣ
ಕಾಂತಿಯಿಂದ ಹೊಳೆವನು
ಸ್ಥಿತಿಯು ನಾನು ಮತಿಯು ಅವನು
ಗತಿಗೆ ನೀಡಿ ಬೆಳಕನು||

ಎಂಥಾ ಚೆಲುವ ನಂದ ಕೃಷ್ಣ
ಆನಂದ ಚೆಲ್ಲುತಿರುವನು
ತೇರು ನಾನು  ಸೂತ್ರ ಅವನು
ಕರವ ಬಿಡದೆ ಪಿಡಿವನು||

ಎಂಥಾ ಚೆಲುವ ನನ್ನ ಕೃಷ್ಣ
ಪ್ರೀತಿ ರಾಗ ನುಡಿಸ್ವನು
ರಾಧೆ ನಾನು ಮೋದ ಅವನು
ವಿನೋದದಿಂದ ನಡೆವನು||

✍️... ಅನಿತಾ ಜಿ.ಕೆ.ಭಟ್.
11-08-2020.


No comments:

Post a Comment