ಶಿಶುಗೀತೆಗಳು ಮಕ್ಕಳ ಮನಸ್ಸನ್ನು ಮುದಗೊಳಿಸಿ ಅವರ ಕಲ್ಪನಾಶಕ್ತಿಯನ್ನು ಚುರುಕುಗೊಳಿಸುತ್ತದೆ.ಮಕ್ಕಳ ಶಬ್ದಭಂಡಾರದಲ್ಲಿ ಹೊಸ ಶಬ್ದಗಳ ಸೇರುವಿಕೆಗೆ ಕಾರಣವಾಗುತ್ತದೆ.ಸರಳ ಪದಗಳನ್ನು ಪ್ರಾಸಬದ್ಧವಾಗಿ ಪೋಣಿಸಿದಾಗ ಮೂಡುವ ಶಿಶುಗೀತೆಯು ಮಕ್ಕಳ ನಾಲಿಗೆಯನ್ನು ಸರಿಯಾಗಿ ತಿರುಚುವಂತೆ ಮಾಡಿ ಮಾತನ್ನು ಸುಲಲಿತಗೊಳಿಸುತ್ತದೆ.ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲಾ ಹಂತದಲ್ಲಿ ಮಕ್ಕಳಿಗೆ ಶಿಶುಗೀತೆಗಳನ್ನು ಕಲಿಸಲೇಬೇಕು.ಅದಕ್ಕೆ ತಕ್ಕಂತೆ ಭಾವಾಭಿನಯವನ್ನೂ ಮೈಗೂಡಿಸಿಕೊಳ್ಳುವಂತೆ ಪ್ರೇರೇಪಿಸಬೇಕು.
ನನ್ನ ಮಕ್ಕಳಿಗೆ ನಾನು ಬಹಳಷ್ಟು ಕನ್ನಡದ ಹಳೆಯ ಶಿಶುಗೀತೆಗಳನ್ನು ಕಲಿಸಿದ್ದೆ. ಅಭಿನಯಿಸುವುದರ ಜೊತೆಗೆ ಹೇಳಿಕೊಟ್ಟ ಗೀತೆಗಳು ಮಕ್ಕಳ ನೆನಪಿನ ಕಣಜದಲ್ಲಿ ಅಚ್ಚೊತ್ತಿ ನಿಂತಿವೆ,ನಿಲ್ಲುತ್ತವೆ.ನಾನು ಬೇರೆ ಬೇರೆ ಸಾಹಿತ್ಯ ಸಂಬಂಧಿ ಫೇಸ್ಬುಕ್ ವೇದಿಕೆಗಳಲ್ಲಿ ಬರೆದಂತಹ ಕೆಲವು ಶಿಶುಗೀತೆಗಳನ್ನು ಆಯ್ದು ಇಲ್ಲಿ ನೀಡುತ್ತಿದ್ದೇವೆ.ನಿಮ್ಮ ಮಕ್ಕಳಿಗೂ ಶಿಶುಗೀತೆಗಳನ್ನು ಕಲಿಸಿ,ಹಾಡಿಸಿ, ಅಭಿನಯಿಸಿ ತೋರಿಸಿ..ಮುದ್ದು ಮುದ್ದಾಗಿ ಮೂಡಿಬಂದರೆ ವಿಡಿಯೋ ಮಾಡಿ ಮಾಮ್ಸ್ಪ್ರೆಸೊಗೂ ಕಳುಹಿಸಿ.
*****
1.ನಾಯಿ ಮರಿ
ನನ್ನ ಹೆಸರು ಸುಮಾ
ಗೆಳತಿಯಿವಳು ರಮಾ
ಅವಳ ನಾಯಿ ಮಿಟ್ಟು
ಅವನು ಬಹಳ ತುಂಟ||೧||
ಶಾಲೆಯಿಂದ ರಮಾ ಬರಲು
ಹಾರಿ ನೆಗೆವುದು
ಅವಳ ಅತ್ತ ಇತ್ತ
ಪಕ್ಕದಲ್ಲಿ ಸುಳಿವುದು||೨||
ಮನೆಯ ಒಳಗೆ ತೆರಳಿದಾಗ
ಕುಂಯ್ ಕುಂಯ್ ಎನುವುದು
ಬಿಸ್ಕಿಟ್ ತಂದು ಹಾಕಿದರೆ
ಬೇಗ ತಿನುವುದು||೩||
ಪಕ್ಕದ ಮನೆಯ ಬೆಕ್ಕು
ಕಂಡರೆ ಅಟ್ಟಿ ಬಿಡುವುದು
ಹಾವು ಓತಿ ಮುಂಗುಸಿ
ಹೆದರಿ ಓಟಗೈವುದು||೪||
ಹೊಸಬರನ್ನು ಕಂಡಾಗ
ಭಾರೀ ಬೊಗಳಿಕೆ
ನಾನು ಸುಮಾ ಗೆಳತಿಯೆಂದು
ಸ್ವಲ್ಪ ಸಡಿಲಿಕೆ||೫||
ನಾಯಿ ಮರಿ ನನಗೂ
ಬೇಕೆಂಬ ಬೇಡಿಕೆ
ಇಟ್ಟಿರುವೆ ಅಪ್ಪನಲ್ಲಿ
ನನ್ನ ಜೊತೆಗೆ ಆಟಕೆ||೬||
✍️... ಅನಿತಾ ಜಿ.ಕೆ.ಭಟ್.
20-08-2020.
*****
2.ಪಕ್ಕದ್ಮನೆ ತುಂಟ ಪುಟಾಣಿ
ಪಕ್ಕದ್ಮನೆ ತುಂಟ ಪುಟಾಣಿಗೆ
ಕೋಳಿಯ ಜೊತೆಗೆ ಸರಸ
ಬುಟ್ಟಿಯ ಕೆಳಗಡೆ ಕಾಳನು ಚೆಲ್ಲಿ
ಸನಿಹದಿ ಕಾಯುವ ಕೆಲಸ||೧||
ಕೋಳಿಯು ಕೂಗಿ ಜಗವನ್ನೆಬ್ಬಿಸಿ
ಹುಳುಹುಪ್ಪಟೆಯ ಅರಸುತ್ತಾ
ಕೊಕ್ಕಲಿ ಕುಕ್ಕಿ ಕಸವನು ಸರಿಸಿ
ಹಸಿವೆಯು ನೀಗಿ ಕೊಕ್ಕೊಕ್ಕೋ ಎನ್ನುತ್ತಾ||೨||
ಊರುಕೇರಿ ಸುತ್ತುವ ಕೋಳಿಯ
ನಾನು ಹಿಡಿದಿಡಬೇಕು
ಉದರಕೆ ತುಂಬುವ ಭಕ್ಷಕರಿಂದ
ನಾನು ರಕ್ಷಿಸಬೇಕು||
ಬುಟ್ಟಿಯ ಕೋಲಲಿ ಆನಿಸುತ
ಕೋಲಿಗೆ ದಾರವ ಕಟ್ಟಿ
ಸದ್ದನು ಮಾಡದೆ ಶ್ಶ್ ಎನುತಾ
ಬಾಗಿಹ ಬೂಟನು ಮೆಟ್ಟಿ||೪||
ಸಂಚನ್ನರಿಯದ ಕೋಳಿಯು ತಾನು
ಬಂದಿತು ಬುಟ್ಟಿಯ ಅಡಿಗೆ
ತುಂಟ ಪುಟಾಣಿ ಹಗ್ಗವನೆಳೆದನು
ಕೋಳಿಯು ಬಂಧಿ ಒಳಗೆ||೫||
ಕೋಳಿಯು ಬಂಧಿ ಒಳಗೆ||
✍️... ಅನಿತಾ ಜಿ.ಕೆ.ಭಟ್.
23-11-2019.
ಈ ಶಿಶುಗೀತೆಯು ಹವಿಸವಿ ಎಂಬ ಫೇಸ್ಬುಕ್ ಬಳಗದಲ್ಲಿ ನೀಡಿದ ಚಿತ್ರಕ್ಕೆ ತಕ್ಕಂತೆ ರಚಿಸಿರುವುದು..ಪಕ್ಕದ್ಮನೆ ಪದುಮಮ್ಮನಿಗೆ ಏಕಾದಶಿ ಉಪವಾಸ..ಎಂಬ ಹಾಡಿನ ಧಾಟಿಯಲ್ಲೇ ಹಾಡಬಹುದು..
******
🌹 ಬಿಳುಪಿನ ಹಲ್ಲು 🌹
"""""""""""""""""""""""""""""""
ವಾಣಿಯು ದಿನವೂ
ತರುವಳು ದುಡ್ಡು
ಅಪ್ಪನು ಕೊಡುವ
ಹತ್ತರ ಗರಿಗರಿ ನೋಟು... ಗರಿಗರಿ ನೋಟು||
ಶಾಲೆಯ ಪಕ್ಕದ
ಅಂಗಡಿ ಮುಂದೆ
ಗುಂಪಲಿ ನುಗ್ಗಿ
ಬಿಸ್ಕತ್ ಮಿಠಾಯಿ ತರುವಳು ಹಿಗ್ಗಿ...ತರುವಳು ಹಿಗ್ಗಿ||
ವೀಣಾಳು ವಾಣಿಯು
ಜೊತೆಯಲಿ ನಡೆಯೆ
ವೀಣಾಳ ಬಾಯಲಿ ನೀರು
ವಾಣಿಯು ಕೊಡಳು ಚೂರೂ...ಕೊಡಳು ಚೂರೂ||
ಅಮ್ಮನ ಬಳಿಯಲಿ
ವೀಣಾಳು ಅಳಲು
ಅಮ್ಮನು ಕಣ್ಣಲೆ ಗದರಿ
ವೀಣಾ ಹೋದಳು ಹೆದರಿ... ಹೋದಳು ಹೆದರಿ||
ಒಂದಿನ ಶಾಲೆಗೆ
ಬಂದರು ವೈದ್ಯರು
ವೀಣಾಳ ಬಾಯೊಳ ನೋಡಿದರು
ಚಂದದ ಹಲ್ಲನು ಹೊಗಳಿದರು...ಹಲ್ಲನು ಹೊಗಳಿದರು||
ಬಂದಿತು ವಾಣಿಯ ಸರದಿ
ಬಾಯಿಯ ಒಡೆದಳು ಆತುರದಿ
ಬಿಳುಪಿನ ಹಲ್ಲು ಇಲ್ಲವೇ ಇಲ್ಲ
ಕಪ್ಪಿನ ಹಲ್ಲು ಹುಳುಕೇ ಎಲ್ಲ...ಹುಳುಕೇ ಎಲ್ಲ||
ವೀಣಾಗೆ ದೊರಕಿತು ಚಪ್ಪಾಳೆ
ಬಿಳುಪಿನ ಹಲ್ಲಿಗೆ ಬಹುಮಾನ
ವಾಣಿಯ ಮೊಗದಲಿ ಇಲ್ಲ ಕಳೆ
ಕೆಡುಕಿನ ಹಲ್ಲೆಂದು ಅವಮಾನ... ಕೆಡುಕಿನ ಹಲ್ಲೆಂದು ಅವಮಾನ||
✍️... ಅನಿತಾ ಜಿ.ಕೆ.ಭಟ್.
01-08-2019.
ಈ ಶಿಶುಗೀತೆ ಕನ್ನಡ ಕಥಾಗುಚ್ಛದಲ್ಲಿ 'ಪಾಕೆಟ್ ಮನಿ' ಎಂಬ ವಿಷಯದಲ್ಲಿ ಲೇಖನ ಅಥವಾ ಮಕ್ಕಳ ಸಾಹಿತ್ಯ ಬರೆಯುವ ಥೀಂ ಕೊಟ್ಟಾಗ ಬರೆದಿರುವಂತಹದು.. ಅನಗತ್ಯವಾಗಿದ್ದೂ ಕೊಡುವ ಪಾಕೆಟ್ ಮನಿಯಿಂದ ಕೆಡುಕೂ ಇದೆ.ಅಗತ್ಯವಿದ್ದರೆ ಮಾತ್ರ ಪಾಕೆಟ್ ಮನಿ ನೀಡಿ ಎಂಬ ಸಂದೇಶದೊಂದಿಗೆ ಬರೆದ ಗೀತೆ.
*******
ನಾನು ಬರೆದಂತಹ ಈ ಶಿಶುಗೀತೆಗಳು ಹಲವು ಮಕ್ಕಳಿಗೆ ತಲುಪಲಿ.ಮಕ್ಕಳಲ್ಲಿ ಕನ್ನಡದ ಕಂಪು ಪಸರಿಸಿ ಇಂಪಾದ ದನಿಯಲ್ಲಿ ಮೂಡಿಬರಲಿ.ಇನ್ನಷ್ಟು ಶಿಶುಗೀತೆಗಳನ್ನು ಇನ್ನೊಮ್ಮೆ ನಿಮ್ಮ ಮುಂದಿರಿಸುತ್ತೇನೆ.
✍️... ಅನಿತಾ ಜಿ.ಕೆ.ಭಟ್.
21-08-2020.
Abhinaya geethe sangraha 👌👌👌👌
ReplyDeleteಧನ್ಯವಾದಗಳು 💐🙏
Delete