Thursday, 6 August 2020

ಮಗಳು ಕೊರೋನಾ ಪಾಸಿಟಿವ್

ಮಗಳು ಕೊರೋನಾ ಪಾಸಿಟಿವ್

        ಫೋನ್ ಕರೆ ಎತ್ತಿಕೊಂಡ ಭಾವನಾಳ ಮುಖದಲ್ಲಿ ಏನೋ ಆತಂಕ. ಆ ಕಡೆಯಿಂದ ಮಾತನಾಡುತ್ತಿದ್ದಂತೆ "ಹೌದಾ.." ಎಂದು ಹೇಳುತ್ತಾ ಕುಸಿದು ಬಿದ್ದಳು. ಕಣ್ಣೊಡೆದು ನೋಡುವಾಗ ಹತ್ತಿರವಿದ್ದು  ಸಂತೈಸುತ್ತಿದ್ದರು ಶೇಖರ್. "ಏನೂ  ಆಗಲ್ಲ.. ಎಲ್ಲವೂ ಸರಿಹೋಗುತ್ತೆ.ಕೆಲವು ದಿನವಷ್ಟೇ. ನಾವು ತಾಳ್ಮೆಯಿಂದ ಇದ್ದು ನಮ್ಮ ಮಗಳಿಗೆ ಧೈರ್ಯ ತುಂಬಬೇಕು. ನಾವೇ ದಿಕ್ಕೆಟ್ಟು ಕುಳಿತರೆ ಆ ಪುಟ್ಟ ಮಗು ಹೇಗೆ ತಾನೇ ಎದುರಿಸೀತು...?" ಎಂದು ಶೇಖರ್ ಅವಳನ್ನು ಸಮಾಧಾನಿಸಲು..."ಅಮ್ಮ ಕೆಲವೇ ದಿನ... ನೀನು ಅಳಬೇಡ .. ನಾನು ಗುಣಮುಖಳಾಗಿ  ಬರುವೆ " ಎಂದು ದೂರದಿಂದ ಮುಖಕವಚ ತೊಟ್ಟು ಶಮಿತಾ ಹೇಳುತ್ತಿದ್ದರೆ  ಗಟ್ಟಿಯಾಗಿ ತಬ್ಬಿ.. ಮುತ್ತು ಕೊಡಬೇಕು ಎನಿಸಿತು ಭಾವನಾಳಿಗೆ..ಆದರೆ.. ಈ ಹೊತ್ತು ಎಲ್ಲದಕ್ಕೂ ಅಡ್ಡಗಾಲು ಹಾಕಿದ್ದು ಮಹಾಮಾರಿ ಕೊರೋನಾ..

     ಶೇಖರ್ ಮುಖಕವಚ ಧರಿಸಿ ,ಆಗಾಗ ಕೈಗೆ ಸ್ಯಾನಿಟೈಸರ್ ಬಳಸುತ್ತಾ  ಮಗಳ ಬಟ್ಟೆಗಳು,ಆಗತ್ಯ ವಸ್ತುಗಳನ್ನು ತುಂಬಿಸುತ್ತಿದ್ದಾರೆ."ಪುಟ್ಟಾ ...ನಿನಗೆ ಉದಾಸೀನವಾದಾಗ ಓದಲು ಕಥೆ ಪುಸ್ತಕ, ಚಿತ್ರ ಬಿಡಿಸಲು ಕಲರ್ಸ್, ಡ್ರಾಯಿಂಗ್ ಬುಕ್ ಎಲ್ಲವನ್ನೂ ಈ ಝಿಪ್ ನಲ್ಲಿ ಹಾಕಿದ್ದೇನೆ ನೋಡು "ಎಂದು ತೋರಿಸುತ್ತಿದ್ದಾರೆ. ಬಿಸಿಯೇರಿದ ಮೈ,ಬಾಡಿದ ಕಂಗಳಿಂದ ಎತ್ತಲೋ ನೋಡುತ್ತಿದ್ದ ಮಗಳಿಗೆ ಬಿಸಿ ಬಿಸಿ ನೀರನ್ನಾದರೂ ಕುಡಿಸೋಣವೆಂದರೆ ಅಬ್ಬಾ..ಏಳಲಾಗುತ್ತಿಲ್ಲ...ಭಾವನಾಗೆ.

ನೋಡನೋಡುತ್ತಿದ್ದಂತೆ ಮನೆಯ ಮುಂದೆ ಆಂಬುಲೆನ್ಸ್ ಬಂದು ನಿಂತಿತು.ಪಿಪಿಇ ಕಿಟ್ ಧರಿಸಿದ ನಾಲ್ವರು ಇಳಿದರು.. ಗೇಟು ತೆರೆದು ಮನೆಯತ್ತಲೇ ಬರುತ್ತಿದ್ದಾರೆ.. ಹ್ಞಾಂ..ನಾನೇಕೆ ಸುಮ್ಮನಿದ್ದೇನೆ..ನಾನೂ ಹೊರಡಬೇಕು.ಮಗಳನ್ನೊಬ್ಬಳನ್ನೇ ಹೇಗೆ ಕಳುಹಿಸಲಿ..ಚಿಕ್ಕ ಮಗು ಅವಳು..

   ಕಳೆದ ವರ್ಷ ಬೇಸಿಗೆಯಲ್ಲಿ ನಾನೂ ಶೇಖರ್ ಶಮಿತಾಳೊಂದಿಗೆ ತವರಿಗೆ ಹೋದಾಗ ಅಲ್ಲಿ ಚಿಕ್ಕಮ್ಮ ,ದೊಡ್ಡಮ್ಮ ,ಮಾವನ ಮಕ್ಕಳೊಂದಿಗೆ ಆಡಲು ನಿಲ್ಲುವೆನೆಂದು ಹಠ ಹಿಡಿದಿದಳು.ಶೇಖರ್ ಗೆ ಆಫೀಸ್ ಇದ್ದುದರಿಂದ ನನಗೂ ಅಲ್ಲಿರಲು ಸಾಧ್ಯವಿಲ್ಲ.ಅವಳನ್ನೊಬ್ಬಳನ್ನೇ ಬಿಟ್ಟಿರಲು ಮನಸ್ಸು ಇಲ್ಲದೆ ಒದ್ದಾಡಿದ್ದೆ..ಆಗ ಅಮ್ಮ "ಏನೇ ಭಾವನಾ.. ಅವಳೇನು ಚಿಕ್ಕ ಮಗುವೇ..? ಈ ಶ್ರಾವಣಕ್ಕೆ ಅವಳಿಗೆ ಒಂಭತ್ತು ವರ್ಷ.. ಅವಳು ಹೊಂದಿಕೊಳ್ಳುತ್ತಾಳೆ ಬಿಡು..ನಾನಿಲ್ಲವೇ ನೋಡಿಕೊಳ್ಳಲು.."ಎಂದಿದ್ದರು.

"ಅಲ್ಲ ಅಮ್ಮಾ..ಅದು ಹಾಗಲ್ಲ.. ಅವಳಿಗೆ ಸ್ನಾನ ಮಾಡಲು ನೀರು ಹದಾ ಮಾಡೋಕೂ ಬರಲ್ಲ.ತಲೆ ಬಾಚಿ ಜುಟ್ಟು ಹೆಣೆಯೋದಕ್ಕೂ ಬರಲ್ಲ..ಮತ್ತೆ .."

"ಮತ್ತೆನೂ ಇಲ್ಲ ಮೊದಲೂ ಅಲ್ಲ..ಅಲ್ಲ ಭಾವನಾ ನೀನೊಬ್ಬಳೇ ಮಗಳನ್ನು ಹೆಡೆದಿರೋ ಥರಾ ಆಡ್ತೀಯಲ್ಲಾ.. ನಾನು ನಿಮ್ಮನ್ನು ನಾಲ್ವರನ್ನು ಹೊತ್ತು ಹೆತ್ತು ಸಾಕಿಲ್ವಾ..ಎಲ್ಲ ಕಲ್ತುಕೊಳ್ತಾಳೆ..ನನ್ನ ಜಾಣ ಮೊಮ್ಮಗಳು" ಎಂದು ಅವಳ ಪರವಾಗಿಯೇ ಮಾತನಾಡಿದ್ದರು.
ಮನೆಗೆ ಬಂದ ನಾನು ಎಷ್ಟು ಒಂಟಿತನ ಅನುಭವಿಸಿದ್ದೆ.ದಿನಕ್ಕೆ ನಾಲ್ಕು ಬಾರಿ ಕರೆಮಾಡುತ್ತಿದ್ದೆ..ಐದೇ ದಿನದಲ್ಲಿ ಹೋಗಿ ವಾಪಾಸು ಕರೆತಂದಿದ್ದೆ.

ಈಗ ಎಷ್ಟು ದಿನ ಬಿಟ್ಟಿರಬೇಕಾಗುವುದೋ ಏನೋ..ಬೇಗ ಗುಣವಾಗಲಿ ದೇವರೇ.. ಅವಳನ್ನು ಕಾಣದೆ ನನಗೆ ಇರುವುದೂ ಅಸಾಧ್ಯ.. ಹೀಗೆ ಭಾವನಾಳ ಯೋಚನಾ ಲಹರಿ ಸಾಗುತ್ತಲೇ ಇತ್ತು.

ನೋಡನೋಡುತ್ತಿದ್ದಂತೆ ಮಗಳು ಹೊರಟೇ ಬಿಟ್ಟಾಗ ಭಾವನಾಳೂ ಮುಂದಡಿಯಿಟ್ಟು ಅವಳೊಡನೆ ಸಾಗುವ ಪ್ರಯತ್ನದಲಿದ್ದಾಗ "ನೀವ್ಯಾರೂ ಬರಕೂಡದು " ಎಂದು ಹೇಳಿ ಮುಂಬಾಗಿಲಿಗೆ ಸೀಲ್ ಒತ್ತಿ, ಸ್ಟಿಕ್ಕರ್ ಅಂಟಿಸಿ ಹೊರಟಿದ್ದರು.."ಶಮಿ..ಶಮೀ.." ಕಿರುಚುತ್ತಿದ್ದ ನನ್ನ ದನಿ ಅವರಿಗೆ ಕೇಳಿಸಿತೋ ಇಲ್ಲವೋ .. ಶಮಿ ಮಾತ್ರ ಹಿಂದಿರುಗಿ ನೋಡಿ ಕೈ ಬೀಸಿ ಬಾಯ್ ಮಾಡಿ ಫ್ಲೈಯಿಂಗ್ ಕಿಸ್ ಕೊಟ್ಟು ವಾಹನವೇರಿದಳು..

  ಭಾವನಾಗೆ ಕಣ್ಣೀರು ಬತ್ತಿಹೋಗಿತ್ತು.. ಶೇಖರ್ ಅವಳನ್ನು ಸಂತೈಸಲು ಸೋತಿದ್ದ..ಅವನಾದರೂ ಎಷ್ಟು ಸಮಾಧಾನಪಡಿಸಬಲ್ಲ..ಅವನ ಹೃದಯವೂ ತಲ್ಲಣಗೊಂಡಿದೆ.. ಮದುವೆಯಾಗಿ ವರುಷಗಳು ಉರುಳುತ್ತಿದ್ದರೂ ಮಡಿಲು ತುಂಬದಿದ್ದಾಗ ಕಂಡ ಕಂಡ ದೇವರಿಗೆಲ್ಲ ಕೈಮುಗಿದು,ಹೆಸರು ಕೇಳಿದ ತಜ್ಞ ವೈದ್ಯರನೆಲ್ಲ ಭೇಟಿಮಾಡಿ ..ಕೊನೆಗೆ ಒಂದು ದಿನ ಬೆಳ್ಳಂಬೆಳಗ್ಗೆ ಭಾವನಾ " ಪಾಸಿಟಿವ್ " ಎಂದು ಕಿರುಚಿ ನಲಿಯುತ್ತಾ ಪ್ರೆಗ್ನೆನ್ಸಿ ಟೆಸ್ಟಿಂಗ್ ಕಿಟ್'ನಲ್ಲಿ ಎರಡು ಗೆರೆಗಳನ್ನು ತೋರಿಸಿದಾಗ ಮಡದಿ ಗರ್ಭಿಣಿಯೆಂದು  ಅದೆಷ್ಟು ಸಂಭ್ರಮಪಟ್ಟಿದ್ದ.ಮಡದಿಯನ್ನು ಒಂದು ಚೂರೂ ಕೆಲಸ ಮಾಡಲು ಬಿಡದೆ ತಾನೇ ನಿಭಾಯಿಸುತ್ತಿದ್ದ.ಭಾವನಾಳ ಅಮ್ಮ "ನಾನು  ಬರಬೇಕಾ ..?" ಎಂದರೆ "ನಿಮಗೇಕೆ ತೊಂದರೆ ಅತ್ತೆ.ನಾನೇ ನೋಡಿಕೊಳ್ಳುವೆ "ಎಂದ ಸಹೃದಯಿ ಶೇಖರ್..ಮುದ್ದಾದ ಮಗಳು ಭುವಿಗಿಳಿದಾಗ ತಾನು ಆಕೆಯನೆತ್ತಿ ಎದೆಗಾನಿಸಿಕೊಂಡು ಪುಟ್ಟ ಮುಖ,ಸಣ್ಣ ಕಣ್ಣುಗಳು,ಕೆಂಪನೆಯ ಪಾದಗಳನ್ನು ಮೆದುವಾಗಿ ಸವರಿ " ನೀ ದೇವರ ಪ್ರತಿರೂಪ" ಎಂದಿದ್ದ..ಅಪ್ಪನದು ಕೊಂಡಾಟವೇನು..ಮುದ್ದಾಟವೇನು..ಚೂರೂ ಊಂಂ ...ಎಂದರೂ ಸಾಕು ಓಡಿಬಂದು ಎತ್ತಿಕೊಳ್ಳುತ್ತಿದ್ದ.. ಮಗಳು ಮತ್ತೆ ಮತ್ತೆ ಅತ್ತು ಅಪ್ಪನ ಸನಿಹ ಬಯಸುತ್ತಿದ್ದಳು.ಎರಡು ವರುಷವಾದಾಗ ಅವನಮ್ಮ "ಏನೋ ಶೇಖರ..ಮಗಳು ಹುಟ್ಟಿದ್ದಾಯಿತು.. ದೊಡ್ಡವಳಾಗುತ್ತಿದ್ದಾಳೆ.ದೇವರಿಗೆ ಹೇಳಿದ ಹರಕೆ ತೀರಿಸುತ್ತೀರೋ ಇಲ್ಲವೋ..?"ಎಂದಾಗಲೇ ಅವರಿಗೆ ಹಿಂದಿನದೆಲ್ಲ ನೆನಪಾಗಿದ್ದು.. ಅಷ್ಟರಮಟ್ಟಿಗೆ ಮಗಳ ಮಮಕಾರ,ತುಂಟಾಟದಲ್ಲಿ ಮೈಮರೆತಿದ್ದರು.

      ಈಗ ಹತ್ತು ವರ್ಷದ ಮಗಳನ್ನು ಜ್ವರ ಬಂತೆಂದು ಚಿಕಿತ್ಸೆಗೆ ಕರೆದೊಯ್ದಿದ್ದರು.ವೈದ್ಯರು "ಈ ಔಷಧದಿಂದ ಗುಣವಾಗದಿದ್ದರೆ ಕೋವಿಡ್ ಟೆಸ್ಟ್ ಮಾಡಿಸಬೇಕು"ಎಂದಾಗ ಹೆತ್ತವರ ಎದೆಯೊಳಗೆ ಭಯದ ಸೂಜಿ ಚುಚ್ಚಿದಂತಾಗಿತ್ತು..

     "ಶಮೀ.. ಶಮೀ.. " ಎಂದು ಕೂಗುತ್ತಿದ್ದ ಮಡದಿಯ ದನಿಯಿಂದ ಎಚ್ಚೆತ್ತ ಶೇಖರ..
"ಭಾವನಾ.. ಏನಾಯ್ತು.. ಯಾಕೆ ಒಂಥರಾ ಮಗಳನ್ನು ಕರೆಯುತ್ತಿದ್ದೀಯಾ..?"ಎಂದು ಕೇಳಿ ಕೈಯನ್ನು ಅದುಮಿದಾಗ ಪಕ್ಕನೆ ಎಚ್ಚರಗೊಂಡ ಭಾವನಾ.. "ಹ್ಞಾಂ..ನಾನು ಕರೆದೆನಾ..?" ಎಂದು ಕಣ್ಣುಜ್ಜಿಕೊಂಡಳು..ಮನದೊಳಗಿನ ಭಯಾನಕ ಅನುಭವ ಮಾಸಿರಲಿಲ್ಲ.."ಮಗಳೆಲ್ಲಿ.. ಶೇಖರ್..?"
"ನೋಡು ಅಲ್ಲೇ.. ನಿನ್ನ ಮಗ್ಗುಲಲ್ಲೇ.."
ಎಂದಾಗ ಅವಳೆಡೆಗೆ ತಿರುಗಿ  ನೋಡಿದಳು.ಮಗಳು ... ಹೊದೆಸಿದ್ದ ಹೊದಿಕೆಯನ್ನು ಕಾಲಡಿಗೆ ಸರಿಸಿಕೊಂಡು ಮುದುಡಿ ಮಲಗಿದ್ದಳು.ಹಣೆಮುಟ್ಟಿ ನೋಡಿದಳು.."ಬಿಸಿ ಕಡಿಮೆಯಾಗಿದೆ"... ಎನ್ನುತ್ತಾ ತನ್ನ ಕೆಟ್ಟ ಕನಸು ನಿಜವಾಗದಿರಲಿ ಎಂದುಕೊಂಡು ಮಗಳಿಗೆ ಹೊದಿಕೆ ಹೊದೆಸಿದಾಗ ಎಚ್ಚೆತ್ತ ಶಮಿತಾ
"ಅಮ್ಮಾ...ನನ್ನ ಜ್ವರ  ಕಡಿಮೆಯಾಗಿದೆ... ಇವತ್ತು ಹುಷಾರಾಗಿದ್ದೇನೆ.." ಎಂದಾಗ .. ದಿನವಿಡೀ ಕೊರೋನಾ ಸುದ್ದಿಯನ್ನೇ ಕೇಳಿದರೆ ಹೀಗೇ ಆಗೋದು ಎಂದುಕೊಂಡ ಭಾವನಾ ನಿರಾಳಳಾದಳು..

✍️...ಅನಿತಾ ಜಿ.ಕೆ.ಭಟ್.
29-07-2020.

*ಕನ್ನಡ ಪ್ರತಿಲಿಪಿ ದೈನಂದಿನ ವಿಷಯ : ನೀ ದೇವರ ಪ್ರತಿರೂಪ.

ಕನ್ನಡ ಪ್ರತಿಲಿಪಿ ,ಮಾಮ್ಸ್ಪ್ರೆಸೊ ಕನ್ನಡ ದಲ್ಲಿ ಪ್ರಕಟಿತ ಬರಹ.

No comments:

Post a Comment