Saturday, 15 August 2020

ಎಲ್ಲರೊಳಗೊಂದಾಗಿ ಬಾಳು ಮನುಜ

 

ಎಲ್ಲರೊಳಗೊಂದಾಗಿ ಬಾಳು ಮನುಜ

ಎಲ್ಲರೊಳಗೊಂದಾಗಿ ಬಾಳು ಮನುಜ
ನೀ ಸರ್ವರೊಳು ಒಮ್ಮತದಿ ನಗುತ ಬಾಳು||ಪ||

ಬೆಂಬಲವಾಗು ಸಂತಸದ ಹೊನಲಿನಲಿ
ಮೂಕನಾಗು ದಹಿಸುವ ಕಲಹದಲಿ
ಕಿವುಡನೇ ಆಗಿ ಬಿಡು ಕಟುಶ್ರವಣಕೆ
ಸರ್ವ ಹೃದಯವ ಜಯಿಸು ಪ್ರೇಮದಲಿ||೧||

ಮುಗುಳುನಗುವಾಗು ದುಃಖದುಮ್ಮಾನದಲಿ
ಹಾಯಿದೋಣಿಯೆ ನೀನು ಹಣದೇರುಪೇರಿನಲಿ
ಭಾವರಹಿತನೆ ಆಗು ಲೋಕ ಡಾಂಭಿಕತನಕೆ
ಪರಹಿತವು ನಿಜಮತವು ಪ್ರತಿನಡೆಯಲಿ||೨||

ಹಸಿದುಂಬ ಅನ್ನ,ತಾಯಿ ಋಣಕೆ ಬಾಗು
ಕೇಡು ಬಯಸುವಗೆ ಹಿತವನೇ ಬಯಸು
ಚಿಗುರಾಗು ನೀ ಕೊಡಲಿಯೇಟನು ಸಹಿಸಿ
ಬೆನ್ನುತಟ್ಟುವನಾಗು ಪರರೇಳ್ಗೆಗೆ||೩||

ಮರೆಗುಳಿಯೆ ಆಗು ಹಿಂಡಿದ ವಿಕೃತಿಗೆ
ಕಹಿಯುಂಡು ಸಿಹಿನೀಡೋ ಬೇವುಬೆಲ್ಲ
ನೂರಾರು ಚಿಂತೆಯೊಳು ಸಂತನೇ ಆಗು
ಶುದ್ಧಾಂತರಂಗಿಯಾಗು ಮಸಿಕೊಳಕಲಿ||೪||

✍️... ಅನಿತಾ ಜಿ.ಕೆ.ಭಟ್.
16-08-2020.



2 comments:

  1. ಒಂದಾಗಿ ಬಾಳು... 👌🏻👌🏻

    ReplyDelete