Monday, 10 August 2020

ಶ್ರೀ ಕೃಷ್ಣನಿಗೆ ಪ್ರಿಯವಾದ ಬೆಣ್ಣೆ ಚಕ್ಕುಲಿ

 

ಶ್ರೀಕೃಷ್ಣನಿಗೆ ಪ್ರಿಯವಾದ ಬೆಣ್ಣೆ ಚಕ್ಕುಲಿ

     ಹಬ್ಬಗಳು ಬಂತೆಂದರೆ ಎಲ್ಲ ಮನೆಗಳಲ್ಲೂ ಸಂಭ್ರಮ ಮನೆಮಾಡುತ್ತದೆ .ಇತ್ತೀಚಿನ   ದಿನಗಳಲ್ಲಿ ಹಬ್ಬಕ್ಕೆಂದು ಹೂಹಣ್ಣು ,ಬಟ್ಟೆ ಬರೆ,ಖರೀದಿ ಭರಾಟೆ ಜೋರಾಗಿಯೇ ಸಾಗುತ್ತಿದೆ.ವಿಧವಿಧದ ತಿನಿಸುಗಳನ್ನು ನೈವೇದ್ಯಕ್ಕೆಂದು ಮನೆಯಲ್ಲಿಯೇ ತಯಾರಿಸುವ ಸಂಪ್ರದಾಯ.ಅದಕ್ಕೆ ಬೇಕಾಗುವಂತಹ  ವಸ್ತುಗಳನ್ನು ಆರಿಸಿ ಕೊಂಡುತರುವುದು ಕ್ರಮ.ಈಗೀಗ ರೆಡಿ ಮಿಕ್ಸ್ ಗಳ ಅಬ್ಬರ.ಇದರ ನಡುವೆ ತಿಂಡಿತಿನಿಸುಗಳ ನೈಜ ರುಚಿ ಕಳೆದುಕೊಳ್ಳುತ್ತೇವೆಯೋ ಎನಿಸುವುದು ಸಹಜ.ಕೆಲವಂತೂ ಮನೆಯಲ್ಲಿಯೇ ತಾಜಾ ಮಾಡಿಕೊಂಡಷ್ಟು ಸ್ವಾದ ಹೊರಗಿನಿಂದ ಖರೀದಿಸಿದಾಗ ಇರುವುದಿಲ್ಲ.

   ಶ್ರೀ ಕೃಷ್ಣನ ಹಬ್ಬ ಬಂತೆಂದರೆ ಉಂಡೆಗಳು,ಚಕ್ಕುಲಿಗಳು,ಅವಲಕ್ಕಿಯಿಂದ ತಯಾರಿಸುವ ಹಲವು ಸಿಹಿತಿನಿಸುಗಳು ನೈವೇದ್ಯಕ್ಕಾಗಿ ತಯಾರಿಸುತ್ತಾರೆ.ಚಕ್ಕುಲಿಗಳಲ್ಲಿ ನಾನಾ ತರಹಗಳು ಇವೆ.ನಾನಾ ಶೈಲಿಗಳಲ್ಲಿ ತಯಾರಿಸುತ್ತಾರೆ.

ಬೆಣ್ಣೆ ಚಕ್ಕುಲಿ

ಬೇಕಾಗುವ ಸಾಮಗ್ರಿಗಳು:-
ದೋಸೆ ಅಕ್ಕಿ ಎರಡು ಕಪ್
ಉದ್ದಿನಬೇಳೆ ಒಂದು ಕಪ್
ಬೆಣ್ಣೆ ನಿಂಬೆಹಣ್ಣಿನ ಗಾತ್ರದಷ್ಟು
ಉಪ್ಪು ರುಚಿಗೆ ತಕ್ಕಷ್ಟು
ಜೀರಿಗೆ
ಮೆಣಸಿನ ಪುಡಿ (ಬೇಕಾದಲ್ಲಿ)

ಮಾಡುವ ವಿಧಾನ:-
ದೋಸೆ ಅಕ್ಕಿಯನ್ನು ತೊಳೆದು ನೀರಲ್ಲಿ ಎರಡು ಗಂಟೆಗಳ ಕಾಲ ನೆನೆಸಿ.ಉದ್ದಿನ ಬೇಳೆಯನ್ನು ಸಣ್ಣ ಉರಿಯಲ್ಲಿ ಕೆಂಪಗಾಗುವಷ್ಟು ಹುರಿಯಿರಿ.ಮಿಕ್ಸಿಯಲ್ಲಿ ಪುಡಿ ಮಾಡಿಕೊಂಡು ಜರಡಿ ಹಿಡಿದು  ಉಳಿದ ಪುಟ್ಟ ಪುಟ್ಟ ಚೂರುಗಳನ್ನು ಪುನಃ ಪುಡಿಮಾಡಿಕೊಳ್ಳಿ.ಜರಡಿಮಾಡಿ ತೆಗೆದಿರಿಸಿ.ಉಳಿದ ತರಿಯನ್ನು ಮಿಕ್ಸಿಯಲ್ಲಿ ಹಾಕಿ.ನೆನೆಸಿದ ಅಕ್ಕಿಯನ್ನು ಪುನಃ ತೊಳೆದು ನೀರು ಬಸಿದು ಅದೇ ಮಿಕ್ಸಿ ಜಾರಿನಲ್ಲಿ ಗಟ್ಟಿಯಾಗಿ ರುಬ್ಬಿ.ಉಪ್ಪು ಸೇರಿಸಿ.ಒಂದುಗಂಟೆಯ ಕಾಲ ಫ್ರಿಡ್ಜ್ ನಲ್ಲಿ ಇಡಿ.ಮೇಲೆ ಶೇಖರಣೆಯಾದ ನೀರನ್ನು ಪಾತ್ರೆಗೆ ಬಸಿದುಕೊಳ್ಳಿ.ನಂತರ ಮೊದಲು ಪುಡಿಮಾಡಿಟ್ಟ ಉದ್ದಿನಬೇಳೆ ಪುಡಿ , ಜೀರಿಗೆ ಸೇರಿಸಿ.ಮೆಣಸಿನ ಪುಡಿ,ಇಂಗು ಬೇಕಾದರೆ ಸೇರಿಸಿಕೊಳ್ಳಿ.ನಮ್ಮಲ್ಲಿ ನೈವೇದ್ಯಕ್ಕೆ ಮಾಡುವಾಗ ಇದನ್ನೆಲ್ಲ ಬಳಸುವ ಪದ್ಧತಿಯಿಲ್ಲ.ಆದ್ದರಿಂದ ನಾನು ಹಾಕಿಲ್ಲ.ಬೆಣ್ಣೆ ಸೇರಿಸಿ.

ಈ ಹಿಟ್ಟನ್ನು ಸ್ವಲ್ಪ ಬಿಸಿ ಎಣ್ಣೆ ಸೇರಿಸಿ ಚೆನ್ನಾಗಿ ಹೊಂದಿಕೊಳ್ಳುವಂತೆ ಮಿಶ್ರ ಮಾಡಿ.ಬೇಕಾದಲ್ಲಿ ನೀರು ಸೇರಿಸಿ.ಹಿಟ್ಟು ಚಪಾತಿ ಹಿಟ್ಟಿನ ಹದಕ್ಕೆ ಇರಬೇಕು.ನಂತರ ಕಾಲುಗಂಟೆ ಮುಚ್ಚಿಡಿ.ಎಣ್ಣೆ ಕಾಯಲು ಇಟ್ಟು ,ಬಾಳೆಲೆ ಅಥವಾ ಪ್ಲಾಸ್ಟಿಕ್ ಶೀಟ್ ಗೆ ಎಣ್ಣೆ ಸವರಿ.ಚಕ್ಕುಲಿ ಮುಟ್ಟು/ಚಕ್ಕುಲಿ ಒರಳಿನಲ್ಲಿ ಹಿಟ್ಟು ಹಾಕಿ ಬಾಳೆಲೆಯ ಮೇಲೆ ಒತ್ತಿ ವೃತ್ತಾಕಾರವಾಗಿ ಸುತ್ತಿ.ಕಾದ ಎಣ್ಣೆಗೆ ಒಂದೊಂದಾಗಿ ಬಿಡಿ.ಸ್ವಲ್ಪ ಹೊತ್ತಿನಲ್ಲಿ ತಿರುವಿ ಬೇಯಿಸಿ.ಕುದಿಯುವ ಶಬ್ದ ನಿಂತಾಗ ತೆಗೆಯಿರಿ.ಬಿಸಿಬಿಸಿಯಾದ ಗರಿಗರಿ ಬೆಣ್ಣೆ ಚಕ್ಕುಲಿ ಸಿದ್ಧ.

ಇದನ್ನು ಸ್ವಲ್ಪ ಜಾಸ್ತಿ ಬೆಣ್ಣೆ ಹಾಕಿ, ನೇರವಾಗಿ ಎಣ್ಣೆಗೇ ಒತ್ತಬಹುದು .ಆಗ ಬೆಣ್ಣೆಮುರುಕು ಚಕ್ಕುಲಿ ಸಿದ್ಧ.

ಹೆಸರು ಬೇಳೆ ಚಕ್ಕುಲಿ:-

ಬೇಕಾಗುವ ಸಾಮಗ್ರಿಗಳು:
ಹೆಸರು ಬೇಳೆ ಒಂದುಕಪ್
ಅಕ್ಕಿಪುಡಿ ಮೂರು ಕಪ್
ಉಪ್ಪು ಜೀರಿಗೆ

ಮಾಡುವ ವಿಧಾನ:
ಸ್ವಲ್ಪ ನೀರು ಹಾಕಿ ಹೆಸರುಬೇಳೆಯನ್ನು ಬೇಯಿಸಿಕೊಳ್ಳಿ.ಮೂರುಕಪ್ ಅಕ್ಕಿ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಉಪ್ಪು, ಜೀರಿಗೆ ಸೇರಿಸಿ.ನಂತರ ಬೇಯಿಸಿದ ಹೆಸರುಬೇಳೆಯನ್ನು ನೀರು ಪಾತ್ರೆಗೆ ಬಸಿದುಕೊಂಡು ಚೆನ್ನಾಗಿ ಕಿವುಚಿಕೊಳ್ಳಿ.ಇದನ್ನು ಅಕ್ಕಿಹಿಟ್ಟಿನ ಮಿಶ್ರಣದೊಂದಿಗೆ ಬೆರೆಸಿ.ಚೆನ್ನಾಗಿ ನಾದಿಕೊಳ್ಳಿ.ಚಪಾತಿ  ಹಿಟ್ಟಿನ ಹದಕ್ಕಿರಲಿ. ನಿಮಿಷ ಮುಚ್ಚಿಡಿ.
ಎಣ್ಣೆ ಕಾಯಲು ಬಿಡಿ.ಚಕ್ಕುಲಿ ಒರಳಿನಲ್ಲಿ ಹಿಟ್ಟು ಹಾಕಿ ಎಣ್ಣೆಸವರಿದ ಬಾಳೆಲೆಯಲ್ಲಿ ಚಕ್ಕುಲಿ ಒತ್ತಿ.ಕಾದ ಎಣ್ಣೆಗೆ ಬಿಡಿ.ಹೊಂಬಣ್ಣ ಬಂದಾಗ ತೆಗೆಯಿರಿ.ರುಚಿಕರವಾದ ಹೆಸರುಬೇಳೆ ಚಕ್ಕುಲಿ ನೈವೇದ್ಯಕ್ಕೆ ಸಿದ್ಧ.

ಗೋಧಿ ಲಡ್ಡು:-

ಬೇಕಾಗುವ ಸಾಮಗ್ರಿಗಳು:
ಗೋಧಿಹುಡಿ ಎರಡು ಕಪ್
,ಸಕ್ಕರೆ  ಎರಡು ಕಪ್
ತುಪ್ಪ ಅರ್ಧ ಕಪ್
ಹಾಲು ಸ್ವಲ್ಪ
ಏಲಕ್ಕಿ, ಗೋಡಂಬಿ ,ದ್ರಾಕ್ಷಿ

ಮಾಡುವ ವಿಧಾನ:-

ಗೋಧಿ ಹುಡಿಯನ್ನು ಚೆನ್ನಾಗಿ ತುಪ್ಪದಲ್ಲಿ ಹುರಿದಿಟ್ಟುಕೊಳ್ಳಿ.ಸಕ್ಕರೆಯನ್ನು ಪುಡಿ ಮಾಡಿ.ಗೋಧಿಹಿಟ್ಟು ,ಸಕ್ಕರೆಪುಡಿ, ತುಪ್ಪ, ಏಲಕ್ಕಿಪುಡಿ ಹಾಕಿ ಮಿಶ್ರಮಾಡಿ.ಸ್ವಲ್ಪ ಹಾಲು ಸೇರಿಸಿ. ನಂತರ ಕೈಗೆ ತುಪ್ಪ ಸವರಿಕೊಂಡು ಗೋಡಂಬಿ ದ್ರಾಕ್ಷಿ ಸೇರಿಸಿ ಉಂಡೆಕಟ್ಟಿ.ರುಚಿಕರವಾದ ಗೋಧಿ ಲಡ್ಡು ತಯಾರು.ಶ್ರೀಕೃಷ್ಣನಿಗೆ ನೈವೇದ್ಯವ ನೀಡಿ.

ಜಗದೋದ್ಧಾರಕ ಶ್ರೀ ಕೃಷ್ಣನನ್ನು ಭಕ್ತಿಯಿಂದ ಪೂಜಿಸಿ,ನೈವೇದ್ಯವನರ್ಪಿಸಿ ಸಕಲರ ಒಳಿತನ್ನು ಬೇಡೋಣ.ಸರ್ವೇ ಜನಾಃ ಸುಖಿನೋ ಭವಂತು ,ಲೋಕಾ ಸಮಸ್ತಾ ಸುಖಿನೋ ಭವಂತು ಎಂಬುದು ನಮ್ಮ ಪ್ರಾರ್ಥನೆ..🙏

✍️..ಅನಿತಾ ಜಿ.ಕೆ.ಭಟ್.
11-08-2020.
  

   ಪ್ರತಿಲಿಪಿ ಕನ್ನಡ ಮತ್ತು ಮಾಮ್ಸ್ಪ್ರೆಸೊ ಕನ್ನಡದಲ್ಲಿ ಪ್ರಕಟಿತ ಲೇಖನ.

No comments:

Post a Comment