#ಕೊರೋನಾ ಗೆಲ್ಲೋಣ
ಕಾಂತಿಯುಕ್ತ ಜಗದ ಜೀವನ
ದೂರದೇಶದಲ್ಲಿ ರೋಗ
ಮಾರಿ ಹಬ್ಬಿದಂತೆ ಸುತ್ತಿ
ಹಾರಿಬಂತು ವಿಮಾನದಲ್ಲಿ ನಮ್ಮನಡುವಿಗೆ
ಪಾರುಮಾಡಲೆಂದು ಪ್ರಧಾನಿ
ಪೌರರಲ್ಲಿ ಮನವಿಯಿತ್ತರು
ಇರಲಿ ಅಂತರ ,ಕವಚ ಮುಖದಲಿ..||೧||
ದೇಶದೆಲ್ಲೆಡೆ ಸೋಂಕುಹಬ್ಬಿ
ವಿಷಮಸ್ಥಿತಿಗೆ ತಲುಪದಂತೆ
ಹುಷಾರಾಗಿ ಜಡಿದು ದೇಶಕೆ ಬೀಗಮುದ್ರೆಯ
ಲೇಸು ಬದುಕು ಮನೆಯಲ್ಲಿದ್ದು
ಕಷಾಯಕುಡಿದು ಜತನದಿಂದ
ದೀಕ್ಷಾಬದ್ಧರಾದ ಜನ ಸೋಂಕನಳಿಸಲು..||೨||
ಎಲ್ಲಿ ಮಾರಿ ಕಂಡರಲ್ಲಿ
ಎಲ್ಲರನ್ನು ನಿಗಾದಲಿರಿಸಿ
ಕೊಳ್ಳಲಾದರೂ ವೈರಸ್ ದಾಂಗುಡಿಯಿಟ್ಟಿತು
ಕೇಳದಿದ್ದ ಜನರಿಗೆಲ್ಲ
ಪೋಲೀಸರಿಂದ ಲಾಠಿ,ದಂಡ ಹಾಕಲಾಗಿ
ಕಲಿತರಾಗ ವಿಧಿಸಲಾದ ಕಠಿಣ ನಿಯಮವ||೩||
ಹಸಿ,ತಂಪು ಆಹಾರ ತ್ಯಜಿಸಿ
ಬಿಸಿ , ಪೌಷ್ಟಿಕ ಆಹಾರ ಸೇವಿಸಿ
ಐಶಾರಾಮ ಬಿಟ್ಟು ದೇಹ ದಂಡಿಸಿ
ಕ್ಲೇಷಕಳೆಯಲು ಧ್ಯಾನ ಓದು
ಪಾಶಪ್ರೀತಿ ಬಲದಿ ಬೆಸೆದು
ನಾಶಮಾಡಬೇಕು ಕೇಡಿ ವೈರಾಣುವ..||೪||
ಸೇವೆಗೈದ ಹಲವರಿಂದು
ಶಿವನ ಪಾದ ಸೇರಿದರು
ಕೋವಿಡನ ಕ್ರೂರಬಲೆಗೆ ಸಿಲುಕುತ
ಆವ ಬಡವ ಧನಿಕನೆಂದು ಬೇಧ
ಭಾವ ಇರದೆ ತರಿವ ಸರಪಳಿಯ ತುಂಡರಿಸಬೇಕು
ನಾವು ಅಂತರ ಕಾಯ್ದುಕೊಳ್ಳುತ||೫||
ಸ್ವಂತ ದೇಹ ಅಸ್ತಿತ್ವ ವಿರದ
ಜಂತುವಿನಟ್ಟಹಾಸ ಮಟ್ಟಗೈದು
ಚಿಂತೆನೀಗಬೇಕು ಸರ್ವ ಕ್ಷೇತ್ರದಿ
ಭ್ರಾಂತಿಗೊಳದೆ ದೃಢದಿ ಶಪಥಗೈದು
ಶಾಂತಿಯಿಂದ ಕೋವಿಡನ ಗೆದ್ದು
ಕಾಂತಿಯಿಂದ ಬೆಳಗಬೇಕು ಮತ್ತೆ ಜಗದಜೀವನ..||೬||
✍️... ಅನಿತಾ ಜಿ.ಕೆ.ಭಟ್.
15-08-2020.
No comments:
Post a Comment