Sunday, 9 August 2020

ನೀ ಬರೆದ ಸಾಲುಗಳು

 

     ನೀ ಬರೆದ ಸಾಲುಗಳು

      ನಿನ್ನೊಂದಿಗಿನ ನನ್ನ ಒಡನಾಟ ಹಾಲುಜೇನಿನಂತೆ ಸವಿ , ಮಧುರ, ಮನೋಹರ. ಒಂದು ದಿನವೂ ನಾನು ನಿನ್ನನ್ನು ಬಿಟ್ಟು ಮಲಗಿದ ನೆನಪು ನನಗಿಲ್ಲ.ಅಮ್ಮ ಸ್ನಾನ ಮಾಡಲು  "ಬಾ ..ಬಾ.." ಎಂದಾಗ ಬಾರದಿದ್ದ ನನ್ನನ್ನು ರಮಿಸಿ... ನೀನೇ ನನನ್ನು ಸ್ನಾನ ಮಾಡಿಸಿದಾಗಲೇ ನನಗೆ ತೃಪ್ತಿ.ಹ್ಞಾಂ..ನಾನು ಅಮ್ಮನ ಕೈಯಲ್ಲಿ ರಚ್ಚೆ ಹಿಡಿಯುತ್ತಿದ್ದುದು ನೀನು ನನ್ನೆಲ್ಲಾ ಕೆಲಸಗಳಲ್ಲೂ ಜೊತೆಯಿರಬೇಕೆಂದೇ..ನಾನೂ ಊಂಂಂ ಎಂದು ಅಳಲು ಆರಂಭಿಸಿದರೆ ಸಾಕು ವಾತ್ಸಲ್ಯದ ಹೊಳೆಯನು ಹರಿಸುತ್ತಾ ಬರುವವಳು ನೀನು.

      ನನ್ನ ಪಾಲಿಗೆ ನೀನು ಅಂದೂ ಇಂದೂ ಮುಂದೂ ಪದ್ದು..ಎಲ್ಲರ ಬಾಯಲ್ಲಿ ಪದ್ಮ, ಪದ್ಮಪ್ರಿಯಾ ಎಂದೆಲ್ಲ ಕರೆಸಿಕೊಂಡರೂ ನನಗೆ ಮಾತ್ರ ಪದ್ದೂ...... ಎಂದು ಕೂಗಿದರೇ ಸಮಾಧಾನ.ನಿನ್ನ ಪಾಲಿಗೆ ನಾನು ಸವಿ..ಹೆಸರಿನಂತೆ ನಾನು ಸವಿಯುಣಿಸಿದ್ದೇನೋ ಇಲ್ಲವೋ ಆದರೆ ಸಾಕಷ್ಟು ಗೋಳು ಹೊಯ್ದುಕೊಳ್ಳುತ್ತಿದ್ದೆ.ನನ್ನ ತುಂಟಾಟದಿಂದ ನೀನೆಷ್ಟು ಬಾರಿ ಬೈಗುಳ ತಿಂದಿದ್ದೆಯೋ .. ಪಾಪ..ಈಗ ನೆನಪಾಗಿ ಮನವು ಭಾರವಾಗುತ್ತಿದೆ.

     ನಿನಗಿಬ್ಬರು ಅಕ್ಕಂದಿರಿದ್ದರೂ ನನಗವರ ಬಾಂಧವ್ಯ ಕಡಿಮೆ. ನಾನು ಹುಟ್ಟುವಾಗಲೇ ಗಂಡನ ಮನೆಗೆ ಸೇರಿಕೊಂಡಿದ್ದರು ಅವರು.ಆದರೆ ನೀನು ಮಾತ್ರ ಉದ್ದನೆಯ ಲಂಗ, ತುಂಬು ತೋಳಿನ ರವಿಕೆ,ಮಂಡಿಯವರೆಗೆ ಬರುವಂತಹ ನಿನ್ನ ಕಪ್ಪನೆಯ ದಪ್ಪನೆಯ ಮಿರಮಿರ ಮಿಂಚುವ ಕೇಶರಾಶಿಯಿಂದ ಮನೆಯಿಡೀ ಓಡಾಡುತ್ತಿದ್ದೆ.ನನಗೆ ನೀನು ಹಾಡುತ್ತಿದ್ದ "ಜೋ ಜೋ ಲಾಲಿ ನಾ ಹಾಡುವೆ..." ಹಾಡು ಕೇಳುತ್ತಾ ಮಲಗುವುದೆಂದರೆ ಬಲು ಆನಂದ.ಸಂಜೆ ನಿನ್ನ ಜೊತೆ "ಜೈ ಜೈ ವಿಠಲ ಪಾಂಡುರಂಗ ಜಯ ಹರಿ ವಿಠ್ಠಲ ಪಾಂಡುರಂಗ "ಅನ್ನುತಾ ತಾಳವ ಬಡಿದು ಅದೆಷ್ಟು ನರ್ತಿಸಿದ್ದೆನೋ.. ನಿನ್ನ ಹಾಡು ..ನನ್ನ ನರ್ತನ..ಆಗ ಬಂದವರೆದುರು ಅಮ್ಮ ಕಣ್ಣರಳಿಸಿ ಹೇಳುತ್ತಿದ್ದರೆ ನನ್ನ ಮನವರಳುತ್ತಿತ್ತು.

     ನನ್ನನ್ನು ಮೊದಲ ದಿನ ಶಾಲೆಗೆ ಬಿಟ್ಟು ಬಂದಾಗ ನೀನು ಅತ್ತಿದ್ದೆಯಂತೆ ನಾನು ಅಳುವುದನ್ನು ಕಂಡು..ಸಂಜೆ ಮನೆಗೆ ಬಂದಾಗ ನೀನು ಬರೆಯಿಸುತ್ತಿದ್ದ ಅಆಇಈ..ಅಕ್ಷರಗಳೇ ಇಂದು ನನ್ನ ಭಾವಲಹರಿಯ ಹರಿವಿಗೆ ಹಾದಿಯಾಗಿವೆ.ಒಂದು ದಿನ ಶಾಲೆಯಿಂದ ಮನೆಗೆ ಬಂದಾಗ ಅಮ್ಮ ಹೇಳಿದ ಮಾತು ಕೇಳಿ ನಾನೆಷ್ಟು ಬೇಸರಗೊಂಡಿದ್ದೆ ಗೊತ್ತಾ..ಪದ್ದು..ಯಾಕಾದರೂ ಆ ಮಾವ ನಿನ್ನನ್ನು ಮದುವೆಯಾಗುತ್ತಾನೋ ಅಂತ..ಅಪ್ಪ, ಅಮ್ಮ, ಅಜ್ಜ ,ಅಜ್ಜಿ ಎಲ್ಲರಲ್ಲೂ ಹಠ ಮಾಡಿದ್ದೆ.."ಪದ್ದು ಇಲ್ಲೇ ಇರಲಿ..ಮಾವನಿಗೆ ಬೇರೆಯಾರಾದರೂ ಜೊತೆಯಾಗಲಿ" ಆಂತ..ಕೆಲವೇ ದಿನಗಳಲ್ಲಿ ಪದ್ದು ನೀ ಮಾವನೊಂದಿಗೆ ತೆರಳಿದರೆ ನನ್ನ ಚೈತನ್ಯ ಅರ್ಧಾಂಶ ಕುಂದಿತ್ತು..

    ಆಗ ನಾನು ನಿನ್ನ ನೆನಪಾದೊಡನೆ ಸೇರುತ್ತಿದ್ದುದು ಮನೆಯ ಉಪ್ಪರಿಗೆಯನ್ನು. ಅಲ್ಲಿ ದೊಡ್ಡ ಮರದ ಕಪಾಟಿನಲ್ಲಿ ಇಟ್ಟಿದ್ದ ಪುಸ್ತಕದಲ್ಲಿ  ನೀನು ಬರೆದ ಸಾಲುಗಳು ನನಗೆ ನಿನ್ನ ಸನಿಹದಷ್ಟೇ ಆಪ್ತವಾಗುತ್ತಿದ್ದವು."ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದಿರಿ "ಎಂಬ ಹಾಡನ್ನು ಸ್ಪರ್ಧೆಯೊಂದರಲ್ಲಿ ಹಾಡಿ ಬಹುಮಾನ ಪಡೆದಿದ್ದೆ.ನಂತರ ಹಾಡಿನ ಸ್ಪರ್ಧೆ ಬಂದರೆ ನೀ ಬರೆದ ಸಾಲುಗಳಿಗಾಗಿ ನನ್ನ ಮೊದಲ ಹುಡುಕಾಟ.ರಜೆಯಲ್ಲಿ ಹಾಡಿನ ಸಾಲುಗಳೆಲ್ಲ ಬಾಯಿಪಾಠ.. ಅದೆಷ್ಟು ವೈವಿಧ್ಯಮಯ ಗೀತೆಗಳ ಸಂಗ್ರಹ ನಿನ್ನಲಿತ್ತು ಪದ್ದು... ಓಹ್.. ಇನ್ನು ಪದ್ದು ಅನ್ನಬಾರದು ಎಂದು ಅಮ್ಮ ಆಗಲೆ ಗದರಿಸಿ ಬುದ್ಧಿ ಹೇಳಿದ್ದರು..ಈಗ ಎಲ್ಲರೆದುರು ಪದ್ಮತ್ತೆ.. ನಾನು ನೀನೂ ಇಬ್ಬರೇ ಇದ್ದಾಗ ನೀನು ಪದ್ದು.. ನಾನು ಸವಿ..

ಅಪಾರ ಕೀರ್ತಿ ಗಳಿಸಿ ಮೆರೆದ ಭವ್ಯ ನಾಡಿದು ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು,

ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲಿ ...

ಅಂಬಿಗ ನಾ ನಿನ್ನ ನಂಬಿದೆ ಜಗದಂಬಾರಮಣ ನಾ ನಂಬಿದೆ.. ತುಂಬಿದ ಹರಿಗೋಲಂಬಿಗ..

ಲೋಕ ಭರೀತನೋ ರಂಗಾ ಅನೇಕ ಚರಿತನೋ..

ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ

ಪೂಜಿಸಲೆಂದೇ ಹೂಗಳ ತಂದೇ.. ದರುಶನ ಕೋರಿ ನಾ ನಿಂದೇ.ದೇವಾ ತೆರೆಯೋ ಬಾಗಿಲನು..

ಹೂವು ಚೆಲುವೆಲ್ಲ ನಂದೆಂದಿತೂ..ಹೂವ ಮುಡಿದೂ..

ಈ ಸಾಲುಗಳು ಅಂದು ನನ್ನ ಮನದೊಳಗೆ ಅಚ್ಚೊತ್ತಿ ನಿಂತವುಗಳು ಇಂದಿಗೂ ಹಸಿರಾಗಿವೆ.ನಿನ್ನ ಚೂಪಾದ ನೀಳ ಅಕ್ಷರಗಳು ಇಂದಿಗೂ ಕಣ್ಣಿಗೆ ಕಟ್ಟುತ್ತಿವೆ.ಆ ಅಕ್ಷರಗಳಲ್ಲಿ ನಿನ್ನ ಪ್ರೀತಿಯೇ ತುಂಬಿತ್ತು ಅನಿಸುತ್ತಿದೆ.ಈ ಎಲ್ಲ ಕವನಗಳನ್ನೂ ಭಾವದುಂಬಿ ಹಾಡಿ ಮೈಮರೆಯುತ್ತಿದ್ದೆ.ಮತ್ತೆ ಆ ಪುಸ್ತಕವನ್ನು ಜೋಪಾನವಾಗಿ ಎತ್ತಿಡಲು ಒಂದು ಸಲವೂ ಮರೆತಿರಲಾರೆ.

ಸಂಪಿಗೆ ಮರದಾ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು..ಚಿಕ್ಕವ್ವಾ ಚಿಕ್ಕವ್ವಾ...ಎನ್ನುತ ತನ್ನಯ ಬಳಗವ ಕರೆದಿತ್ತು..
ಇದನ್ನು ಎಷ್ಟು ಚೆನ್ನಾಗಿ ಕಣ್ಣರಳಿ ಹೇಳಿಕೊಡುತ್ತಿದ್ದೆ ನೀನು.ನಿನ್ನ ಮದುವೆಯಾದ ಮೇಲೆ ಆ ಹಾಡನ್ನು ಮನೆಯ ಅಂಗಳದ ಮುಂದಿನ ಕೆಂಡಸಂಪಿಗೆ ಮರವನ್ನೇ ನೋಡುತ್ತಾ ಹೇಳುತ್ತಿದ್ದರೆ..ಹಿಂದಿನಿಂದ ನೀನು ಬಂದು ಸಂಪಿಗೆ ಹೂವನ್ನು ನನ್ನ ಮುಡಿಗೆ ಮುಡಿಸಿ ತಬ್ಬಿ ಹಿಡಿದೆಯೇನೋ ಎಂಬಂತೆ ಭಾಸವಾಗುತ್ತಿತ್ತು.

ಚೆಲ್ಲಿದರು ಮಲ್ಲಿಗೆಯಾ..ಬಾಣಾಸುರಾಲೆ ಮೇಲೆ..
ಎಂದು ನೀನು ಜಾಜಿಯ ಗೂಟ ತುಂಬಾ ಹೂಬಿರಿದಾಗ, ಮಂಗಳೂರು ಮಲ್ಲಿಗೆ ಘಮಘಮಿಸುತ್ತಿದ್ದಾಗ ತಪ್ಪದೇ ಗುನುಗುನಿಸುತ್ತಿದ್ದುದನ್ನು ಕೇಳಿ ನನಗೆ ಕಂಠಪಾಠ ವಾಗಿತ್ತು.ನೀ ಮುಡಿವ ಉದ್ದದ ಮಾಲೆ ನೋಡಿ ನನಗೂ ಬೇಕೆಂದು ಹಠ ಹಿಡಿದಾಗ ನನ್ನ ಪುಟಾಣಿ ಜುಟ್ಟಿಗೆ ಒಂದಂಗುಲ ಉದ್ದದ ಮಾಲೆಯನ್ನು ಸುಜಾತಾ ಕ್ಲಿಪ್ ಹಾಕಿ ಮುಡಿಸಿ,.. ನೀನು ನನ್ನಷ್ಟು ದೊಡ್ಡವಳಾದಾಗ ನಿನಗೂ ಮಂಡಿವರೆಗೆ ಕೂದಲು ಬೆಳೆಯುತ್ತದೆ.ಆಗ ಉದ್ದದ ಮಾಲೆ ಮುಡಿಯುವಿಯಂತೆ ಎಂದು ಸಮಾಧಾನಿಸುತ್ತಿದ್ದೆ.ನನ್ನೊಳಗೆ ಕನಸನ್ನು ಬಿತ್ತಿ ರಮಿಸುತ್ತಿದ್ದ ನಿನ್ನ ಚಾಕಚಕ್ಯತೆ ನನಗೆ ಈಗ ಅದ್ಭುತ ಎಂಬಂತೆ ತೋರುತ್ತಿದೆ.ಆದರೆ ನನ್ನ ಜಡೆ ಮಾತ್ರ ಮಂಡಿವರೆಗೆ ಬರುವುದು ಬಿಡು..ಎರಡು ಅಡಿಯೂ ಬೆಳೆಯಲಿಲ್ಲ..ನಿನ್ನ ಮಾತು ಮಾತಾಗಿಯೇ ಉಳಿಯಿತು.. ಆದರೆ ಈಗ ನಾನು ಜಾಜಿ ಮಲ್ಲಿಗೆ ಮೊಗ್ಗು ಕೊಯ್ಯುವಾಗ,ಮಾಲೆ ಹೆಣೆಯುವಾಗ ನಿನ್ನನ್ನೊಮ್ಮೆ ನೆನಪಿಸಿಕೊಳ್ಳುವಂತೆ ಮಾಡಿದ್ದು ನೀ ಬಿತ್ತಿದ ಮುದವಾದ ಕನಸು..

    ನೀ ಬರೆದು ಸಂಗ್ರಹಿಸಿದ ಕವನದ ಸಾಲುಗಳು ಇಂದಿಗೂ ಹೊಸದಾಗಿಯೇ ಇವೆ..ಆಗಾಗ ಹೊರಗಿಣುಕುತ್ತಾ ,ನಿನ್ನ ಒಡನಾಟದ ಸವಿ ನೆನಪನ್ನು ಮೆಲುಕು ಹಾಕುವಂತೆ ಮಾಡುತ್ತಿವೆ..

   ನೀನು ತವರು ಮನೆ ತೊರೆದಂದಿನಿಂದ ದೂರವಾಗುತ್ತಲೇ ಹೋದೆ ..ಈಗ ಮರಳಿ ಬಾರದಷ್ಟು ದೂರ ಸರಿದಿದ್ದೀಯಾ..ಮುಂದಿನ ಜನುಮದಲ್ಲಿ ನೀನು ಪದ್ದುವಾಗಿ ಈ ನಿನ್ನ ಸವಿಗೆ ಸೋದರತ್ತೆಯ ಮಮತೆಯನ್ನು ಉಣಿಸಬಲ್ಲೆಯಾ...

ನಿನ್ನ ಅಗಲಿಕೆಯಿಂದ ಈ ಹೃದಯ ಭಾರವಾಗಿದೆ ಪದ್ದು...

ಇಂತಿ ನಿನ್ನ
ಸವಿ..

✍️... ಅನಿತಾ ಜಿ.ಕೆ.ಭಟ್.
09-08-2020.

ಚಿತ್ರ ಕೃಪೆ ಅಂತರ್ಜಾಲ..

ಕನ್ನಡ ಪ್ರತಿಲಿಪಿ.. ದೈನಿಕ ಶೀರ್ಷಿಕೆ..ನೀ ಬರೆದ ಸಾಲುಗಳು..

ಪ್ರತಿಲಿಪಿ ಕನ್ನಡದಲ್ಲಿ ಪ್ರಕಟಿತ..ಬರಹ.

2 comments: