Sunday, 30 August 2020

ಪಾಪಪ್ರಜ್ಞೆ


 ಪಾಪಪ್ರಜ್ಞೆ


         "ಗಂಗಾ..ಯಾರು ಬಂದಿದ್ದಾರೆ ನೋಡಮ್ಮ..." ಆಟೋರಿಕ್ಷಾ ಮನೆಯ ಅಂಗಳದ ಬದಿಯಲ್ಲಿ ನಿಂತಾಗ ಮಗಳನ್ನು ಕೂಗಿ ಕರೆದರು ನರಸಿಂಹ ರಾಯರು.ಗಂಗಾ ಬೆಳಗ್ಗಿನ ಉಪಾಹಾರ ಮುಗಿಸಿ ಪಾತ್ರೆ ಉಜ್ಜಿ ಸ್ವಚ್ಛಗೊಳಿಸಿ ಮಧ್ಯಾಹ್ನ ಊಟಕ್ಕೆಂದು ಕುಚ್ಚಿಲಕ್ಕಿ ಗಂಜಿಯಿಡಲು ಒಲೆ ಉರಿಸಲು ಆರಂಭಿಸಿದ್ದಳು.ಚಿಮಣಿ ದೀಪ ಉರಿಸಿಟ್ಟು ತೆಂಗಿನ ಗರಿಯನ್ನು ಚಿಮಣಿ ದೀಪಕ್ಕೊಡ್ಡಿ ಬೆಂಕಿ ಹಿಡಿಸಿ ಒಲೆಯೊಳಗಿನ ಸೌದೆಯ ತುಂಡುಗಳ ಅಡಿಗೆ ಇರಿಸಿ, ಸೌದೆಯ ತುಂಡಿಗೆ ಬೆಂಕಿ ಹಿಡಿಯಲು ಆರಂಭವಾಗಿತ್ತಷ್ಟೇ.."ಈ ಅಪ್ಪ ಮಲಗಿದಲ್ಲಿಂದಲೇ ಹೀಗೆ ಹತ್ತಾರು ಸಲ ಕೂಗಿದರೆ ಕೆಲಸ ಆಗುವುದು ಹೇಗೆ..?" ಎಂದು ತನ್ನಲ್ಲೇ ಬೈಯುತ್ತಾ ದೀಪವನ್ನು ಆರಿಸಿ ಒಳಗಿನ ಕತ್ತಲೆಯ ಅಡುಗೆ ಕೋಣೆಯಿಂದ ಹೊರಗಿನ ಚಾವಡಿಗೆ ಬಂದಳು.

"ಅರೆ.. ಯಮುನಾ.. ನೀನು.. ಏನೂ ಸೂಚನೆಯೇ ನೀಡದೆ ಮಕ್ಕಳ ಜೊತೆ ಒಬ್ಬಳೇ ಬಂದೆಯಾ..ಹೇಳಿದ್ದಿದ್ದರೆ ತಮ್ಮ ಪ್ರಕಾಶನಲ್ಲಿ ಹೇಳುತ್ತಿದ್ದೆವು..ಮಕ್ಕಳೇ.. ಪ್ರೀತಿ ಸ್ವಾತಿ ಹೇಗಿದ್ದೀರಾ.."


       ಗಂಗಾ ಕೇಳುತ್ತಲೇ ಇದ್ದಳು.ಯಮುನಾ ಮೌನಿಯಾಗಿದ್ದಳು.ಒಳಬಂದ ಮಗಳನ್ನು ತಾನು ಮಲಗಿದ್ದಲ್ಲಿಂದಲೇ ಮಾತನಾಡಿಸಲೆತ್ನಿಸಿದ ನರಸಿಂಹ ರಾಯರು,ಮಡದಿ ಸಾವಿತ್ರಿಯಮ್ಮನಿಗೆ ಅವಳ ಮುಖಭಾವವೇ ಸಂಕಟವನ್ನು ಹೇಳುತ್ತಿತ್ತು.ಯೌವ್ವನದಲ್ಲಿ ಎಷ್ಟು ಗಟ್ಟಿಮುಟ್ಟಾಗಿ ಇದ್ದವಳು ಯಮುನಾ.ಖಾಯಿಲೆ ಕಸಾಲೆ ಎಂದು ಔಷಧಿ ಸೇವಿಸಿದವಳಲ್ಲ.ಅಗಲವಾದ ಶರೀರ,ದಪ್ಪ ಕಪ್ಪನೆಯ ಕೂದಲು ಬೆನ್ನಿನ ಕೆಳಭಾಗದವರೆಗೆ ಹರಡಿ ನಡೆಯುವಾಗ ತಾನೂ ಅತ್ತಿತ್ತ ಸರಿಯುತ್ತಿತ್ತು.ಯಾವ ಕೆಲಸವೇ ಇರಲಿ ಅಡುಗೆಯಿಂದ ಹಿಡಿದು ಕಟ್ಟಿಗೆ ತುಂಡರಿಸುವುದರವರೆಗೆ ಎಲ್ಲದಕ್ಕೂ ಇವಳು ಸೈ.ಮನೆಯ ಹಿರಿಯಕ್ಕನಾಗಿ ಎಲ್ಲರ ಮೇಲೂ ನಿಗಾಯಿಟ್ಟು ಎಲ್ಲರಿಗೂ ಮಾರ್ಗದರ್ಶನ ಮಾಡುತ್ತಿದ್ದವಳು.ಅಡಿಕೆ ವ್ಯಾಪಾರಿ ಮೊಯ್ದು ಬಂದು ಅಡಿಕೆ ತೂಕದಲ್ಲಿ ಏರುಪೇರು ಮಾಡಿದರೆ ಎಂದು ಮೊದಲೇ ತೂಕ ಮಾಡಿಡುತ್ತಿದ್ದ ಚತುರೆ.ಆದರೆ ಈಗ ಸೋತು ಸುಣ್ಣವಾದ ಮುಖಚಹರೆ,ಕೃಶಕಾಯ,ಉದುರಿ ಬೋಳಾದ ನೆತ್ತಿ ,ಸೀರೆ ರವಿಕೆ ಸಡಿಲವಾಗಿ ಜಾರುವಂತಾಗಿದ್ದನ್ನು ಕಂಡಾಗ ಎಲ್ಲವೂ ಅರ್ಥವಾಗಿತ್ತು,ಆಘಾತವಾಗಿತ್ತು."ಯಾವುದಕ್ಕೂ ಪ್ರಕಾಶ ಬರಲಿ .ಅವನಲ್ಲಿ ಒಂದು ಮಾತು ಕೇಳಿ ಮುಂದುವರಿಯೋಣ " ಎಂದರು ನರಸಿಂಹ ರಾಯರು.


      ಮರುದಿನ ಅಪ್ಪನ ಮಾತಿನಂತೆ ಪ್ರಕಾಶ ಅಕ್ಕನ ಮನೆಗೆ ತೆರಳಿ ಭಾವನೊಂದಿಗೆ ಮಾತನಾಡಲು ಹೊರಟಿದ್ದ.ಅಂಗಳ ದಾಟಿ ಮನೆಯ ಜಗಲಿಗೆ ಬಂದವನಿಗೆ ಒಳಗೊಬ್ಬಳು ಹೆಣ್ಣುಮಗಳ ಇರುವಿಕೆ ತಿಳಿಯಲು ಹೆಚ್ಚು ಹೊತ್ತು ಬೇಕಾಗಲಿಲ್ಲ..ಹೊರಬಂದ ಭಾವ "ಏನು..ಏನು ಬಂದಿದ್ದೀಯಾ..ನಿಮ್ಮ ಜೊತೆಗೆ ಸಂಬಂಧವೇ ಮುಗಿದುಹೋಯಿತು.ಅವಳನ್ನೂ ಮಕ್ಕಳನ್ನೂ  ನಿಮ್ಮ ಮನೆಯಂಗಳದವರೆಗೆ ಬಿಟ್ಟು ಹೋಗಿದ್ದೇನೆ.ಇನ್ನು ನೀವುಂಟು.. ಅವರುಂಟು.." ಎಂದು ಹೇಳಿ ದಢಾರನೆ ಬಾಗಿಲೆಳೆದುಕೊಂಡರು.ಪ್ರಕಾಶನಿಗೆ ಮಾತು ಬಾಯಿಯಿಂದ ಹೊರಬೀಳಲೆತ್ನಿಸಿದ್ದೂ ಹೊರಬಾರದೆ ಹೋಯಿತು.ಇಂತಹವರೊಂದಿಗೆ ಎಂತಹ ಮಾತು .. ಆದರೂ ..ತಗ್ಗಿ ಬಗ್ಗಿ ನಡೆದರೆ ಏನಾದರೂ ಸಾಧಿಸಬಹುದೇನೋ ಎಂದು ಮಾತನಾಡಿದರೆ ಅದು ಕೇಳಿತೋ ಇಲ್ಲವೋ ..ಉತ್ತರವಿಲ್ಲ..ಮುಚ್ಚಿದ ಬಾಗಿಲಿನೊಳಗಿನಿಂದ..


                   ******


      ಯಮುನಾ ಏದುಸಿರು ಬಿಡುತ್ತಾ ಮನೆಕೆಲಸಕ್ಕೆ ಕೈಜೋಡಿಸುತ್ತಿದ್ದಳು.ಗಂಗಾಳಿಗೆ ಸ್ವಲ್ಪ ಸಹಕಾರವೇನೋ ಆಗುತ್ತಿತ್ತು.ಆದರೆ 'ನನ್ನ ಬದುಕು ಹೇಗೋ ಆಗುತ್ತದೆ.ಆದರೆ ಇವಳ ಬದುಕು ಹೀಗಾಯಿತಲ್ಲ ..ಇಬ್ಬರು ಮಗಳಂದಿರನ್ನು ಮಡಿಲಲ್ಲಿಟ್ಟುಕೊಂಡು' ಎಂಬ ಕೊರಗು ಗಂಗಾಳದು..ವಯಸ್ಸಾದ ಸಾವಿತ್ರಮ್ಮನಿಗೆ ಮಗಳ ಚಿಂತೆಯಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತಿರಲಿಲ್ಲ.ನರಸಿಂಹ ರಾಯರು ಅಲ್ಪ ಸ್ವಲ್ಪ ಅಡ್ಡಾಡುತ್ತಿದ್ದವರು ಹಾಸಿಗೆ ಹಿಡಿಯುವಂತಾದರು.. ಪ್ರಕಾಶ ಹೆಚ್ಚೇನೂ ತಲೆಕೆಡಿಸಿಕೊಳ್ಳದೆ ಎಂದಿನಂತೆ ತನ್ನದೇ ಲೋಕದಲ್ಲಿ ಮುಳುಗಿದ್ದ.ಯಮುನಾಳನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುತ್ತಿದ್ದ .ಹೆಚ್ಚಿನ ಪರೀಕ್ಷೆಗಾಗಿ ಬೇರೆ ಕಡೆ ಹೋಗಬೇಕೆಂದರೆ ಇರುವ ಖರ್ಚು ವೆಚ್ಚಗಳನ್ನು ಅಂದಾಜಿಸಿ ಉದಾಸೀನ ತೋರುತ್ತಿದ.


     ಆ ದಿನ ಯಮುನಾ ಎದೆ ಹಿಡಿದು ಏದುಸಿರು ಬಿಡುವುದನ್ನು ಕಂಡು ಮಕ್ಕಳಿಬ್ಬರು ಅಳುತ್ತಾ ಕುಳಿತಿದ್ದರು.ಸಾವಿತ್ರಮ್ಮ ಮಗನಲ್ಲಿ "ಆ ಪುಟ್ಟ ಮಕ್ಕಳ ಮುಖ ನೋಡಿಯಾದರೂ  ಒಮ್ಮೆ ವೈದ್ಯರಲ್ಲಿ ಕರೆದೊಯ್ಯೋ ಮಗ" ಎಂದು ಗೋಗರೆದರು.. "ಅಮ್ಮಾ ಹೋದ ಸಲವೇ ವೈದ್ಯರು ಪುನಃ ಜೋರಾದರೆ ದೊಡ್ಡಾಸ್ಪತ್ರೆಗೆ ಕರೆದೊಯ್ಯಬೇಕು.ಆಪರೇಷನ್ ಆಗಬೇಕು..ಇಲ್ಲಿ ಸಾಧ್ಯವಿಲ್ಲ ಎಂದಿದ್ದಾರೆ.." ಎಂದಾಗ ಸಾವಿತ್ರಮ್ಮ ಕೈಯಲ್ಲಿ ಕಾಸಿಲ್ಲದೆ ಹೇಗೆ ಚಿಕಿತ್ಸೆ ಕೊಡಿಸುವುದು ಎಂದು ಸುಮ್ಮನಾದರು.ಗಂಗಾ ಇಬ್ಬರು ಮಕ್ಕಳನ್ನು ತನ್ನ ಎದೆಗವಚಿ ಹಿಡಿದು ಸಂತೈಸಲು ಪ್ರಯತ್ನಿಸಿದಳು.ನರಸಿಂಹ ರಾಯರು ಮಗನಲ್ಲಿ "ಆ ಭಾವನಿಂದಲೇ ದುಡ್ಡು ಪಡೆದು ಚಿಕಿತ್ಸೆ ಕೋಡಿಸಬೇಕು.ಅವನಿಗೂ ಬುದ್ಧಿ ಕಲಿಸಬೇಕು..ಮಗಾ ಈಗಲೇ ಹೋಗಿ ವಕೀಲರನ್ನು ಕಂಡು ಮಾತನಾಡಿ ಬಾ.."ಎಂದರು.

"ಅವನಿಗೆ ಬುದ್ಧಿ ಕಲಿಸ ಹೊರಟವರು ನೀವು ಮಾಡಿದ್ದೇನು..?"ಎಂದು ಮಗಳ ಬಾಳಿನ ಗೋಳು ನೋಡಲಾರದೆ ಚುಚ್ಚಿದರು ಸಾವಿತ್ರಿ..

"ನಾನು..ನಾನೇನು ಮಾಡಬಾರದ್ದು ಮಾಡಿರುವೆ..ಎಲ್ಲಾ ಯಮುನಾಳ ದುರಾದೃಷ್ಟ..ಮತ್ತಿನ್ನೇನು..?"

"ತಂದೆತಾಯಿ ಮಾಡಿದ ಪುಣ್ಯದಲ್ಲಿ ಮಾತ್ರವಲ್ಲ ಮಕ್ಕಳಿಗೆ ಪಾಲು..ಪಾಪದಲ್ಲೂ ಇರುತ್ತೆ ರೀ..ಅದೇ ಆಗಿರೋದು ಈಗ.."

"ಏನಂದೇ.. ನಾನು ಪಾಪ ಮಾಡಿದ್ದೇನಾ..ಅವಳ ದೆಸೆ ಹಾಳದ್ದಕ್ಕೆ ನನ್ನನ್ನು ಆಡುತ್ತಿದ್ದೀಯಾ ..ಸುಮ್ನಿದ್ರೆ ಸರಿ.."ಎಂದು ಗದರಿಸಿ ಮಡದಿಯ ಬಾಯಿ ಮುಚ್ಚಿಸಿ ತೆರಳಿದರು.. ಆದರೆ ತನ್ನೊಳಗಿನ ಗತಕಾಲದ ನೆನಪಿನ ಬುತ್ತಿ ತೆರೆದುಕೊಂಡದ್ದನ್ನು ಮುಚ್ಚಲು ಸಾಧ್ಯವಾಗಲಿಲ್ಲ.


                    ******


          ಹಿರಿಯರ ಆಶೀರ್ವಾದದಿಂದ ರೂಪವತಿ ,ಹದಿನಾರರ ಕನ್ಯೆ ಮಧುಮಾಲಾ ನರಸಿಂಹ ರಾಯರ ಜೊತೆ ಸಪ್ತಪದಿ ತುಳಿದಿದ್ದಳು.ಮನೆಯವರು  ಮದುಮಗಳನ್ನು ಗಂಡನ ಮನೆಗೆ ಕಳುಹಿಸಿದರು.ಹೊಸಬಾಳು ಆರಂಭವಾಯಿತು .ಆರಂಭದಲ್ಲೇ ನರಸಿಂಹ ರಾಯರಿಗೆ ಮಧುಮಾಲಾಳೊಂದಿಗೆ ದಾಂಪತ್ಯದ ಅತೃಪ್ತಿ ಕಾಡಿತ್ತು.ಆಕೆಗೋ ಎಳೆಯ ವಯಸ್ಸು.ತನ್ನ ದೇಹಾರೋಗ್ಯ, ಸ್ವಚ್ಛತೆಯ ಅರಿವಿಲ್ಲ.ದೊಡ್ಡ ಕುಟುಂಬ ,ಮನೆಯ ತುಂಬಾ ಜನರು.ಬಹಳ ಸಂಕೋಚ ಸ್ವಭಾವದ ಮಧು ದಾಂಪತ್ಯದ ಕಿರಿಕಿರಿಯಿಂದ ಚಡಪಡಿಸುತ್ತಿದ್ದಳು. ಹಂಚಿಕೊಳ್ಳಲೂ ಸಾಧ್ಯವಿಲ್ಲ ,ಹೇಳದಿರಲೂ ಆಗದು ಎಂಬ ಕಷ್ಟ.ಅಂತೂ ತಾಯಿಗೆ ತಿಳಿದಾಗ ಮಗಳಿಗೆ ಸಲಹೆ ನೀಡಿ ,ಮನೆಯವರಲ್ಲೂ ಅವಳ ಪರವಾಗಿ ಮಾತನಾಡಿದರು .ಮಧುವಿನ ಅತ್ತೆ ಮಾತ್ರ ತಲೆಗೆ ಹಾಕಿಕೊಳ್ಳಲಿಲ್ಲ.ಎಲ್ಲರಿಗೂ  ಪ್ರಿಯವೆಂದು ಎಂದಿನಂತೆ ಅತಿ ಖಾರದಡುಗೆ,ಆಗಾಗ ಸ್ಟ್ರಾಂಗ್ ಕಾಫಿ,ಹಾಲು,ಮೊಸರು, ಮಜ್ಜಿಗೆ ಅಲ್ಲಿಂದಿಲ್ಲಿಗೆ ಎಲ್ಲರಿಗೂ ಬರುವಂತೆ ನೀರೆರೆದು ಸರಿದೂಗಿಸುತ್ತಿದ್ದರು..ಮಧುಮಾಲಾಳಿಗೆ ಉರಿಮೂತ್ರ,ಗುಪ್ತಾಂಗದ ಉರಿಯೂತದ ಸಮಸ್ಯೆ ..ತಾಳ್ಮೆಯಿಲ್ಲದ ಪತಿ.ಅವಳ ಆರೋಗ್ಯದ ಕಾಳಜಿ ವಹಿಸಬೇಕಾದವನು ನಾನು ಎಂಬ ಜವಾಬ್ದಾರಿಯನ್ನು  ಹೊರುವ ಮನಸ್ಥಿತಿ ಇಲ್ಲದ ನರಸಿಂಹ.ಅವಳ ಯಾತನೆ,ನೋವು, ಅಸಹಕಾರದ ನಡುವೆ ಬಲವಂತವಾಗಿ ತನ್ನ ಕಾಮ ವಾಂಛೆಯನ್ನು ತೀರಿಸಿಕೊಳ್ಳುತ್ತಿದ್ದ. ಗರ್ಭಿಣಿಯಾಗಿ ಮಗುವಿಗೆ ಜನ್ಮವಿತ್ತಳು ಮಧು. ಬಾಣಂತನ ಮುಗಿದರೂ ಅಳಿಯ ನರಸಿಂಹ ಮಗಳನ್ನು ಕರೆದೊಯ್ಯಲು ಬಾರದಿದ್ದಾಗ ಮಧುಮಾಲಾಳ ತಂದೆ ತಾಯಿ ತಾವೇ ಮಗಳು ಹಾಗೂ ಮೊಮ್ಮಗನನ್ನು ಕರೆದುಕೊಂಡು ಮಗಳ ಮನೆಗೆ ಬಂದರೆ ನರಸಿಂಹ ಅವಳನ್ನು ಮನೆಯೊಳಗೆ ಸೇರಿಸಲು ಸಿದ್ಧನಿರಲಿಲ್ಲ.ಕಣ್ಣೀರುಗರೆದು ಅತ್ತೆ ಮಾವನ ಕಾಲಿಗೆರಗಿ ಬೇಡಿಕೊಂಡಳು ಮಧು."ನಮಗೇನೂ ಅಭ್ಯಂತರವಿಲ್ಲ.ಮಗ ಹೇಗೆ ಹೇಳಿದನೋ ಹಾಗೆ" ಎಂದರು ಅತ್ತೆಮಾವ.ಕುಟುಂಬದ ಸದಸ್ಯರು ನರಸಿಂಹನಿಗೆ ಬುದ್ಧಿವಾದ ಹೇಳಿದರೂ ಮೊಂಡು ಹಠ ಸಡಿಲಿಸದೆ ಇದ್ದಾಗ ನೊಂದುಕೊಂಡು ಹಿಂದಿರುಗಿದರು.ಮಧುಮಾಲಾಳ ತಂದೆ ಎರಡೂ ಕುಟುಂಬದ ಹಿರಿಯರನ್ನು ಕರೆಸಿ ಪಂಚಾಯತಿಕೆ ನಡೆಸುವ ತಯಾರಿಯಲ್ಲಿದ್ದಾಗಲೇ ಅವರಿಗೆ ಬಂದ ಸುದ್ದಿಯಿಂದ ಸಿಡಿಲೆರಗಿದಂತೆ ಕುಸಿದರು.ಅಳಿಯ ನರಸಿಂಹ ಬಡಹೆಣ್ಣುಮಗಳನ್ನು ಬಾಳ ಸಂಗಾತಿಯನ್ನಾಗಿ ಸ್ವೀಕರಿಸಿದ್ದ.ಇನ್ನು ಏನು ಮಾತನಾಡಿದರೂ ವ್ಯರ್ಥ..ಆದರೂ ಕಡೆಯ ಪ್ರಯತ್ನವೆಂಬಂತೆ ಎಲ್ಲರನ್ನೂ ಸೇರಿಸಿ ಮಾತನಾಡಿ "ಬಾಳುಕೊಡುವುದು ಸಾಧ್ಯವಿಲ್ಲದಿದರೆ ಪರಿಹಾರವಾದರೂ ಕೊಡಲಿ " ಎಂದರೆ ..ನರಸಿಂಹನೂ ಅವನ ಕುಟುಂಬದವರೂ ಏನೂ ಕೊಡುವ  ಯೋಚನೆ ಮಾಡಲಿಲ್ಲ .


      ಮಧು ಎಳೆಯ ಪ್ರಾಯದಲ್ಲೇ ಬಾಳಿನಲ್ಲಿ ಎದುರಾದ ಸಂಕಟದಿಂದ ಕುಗ್ಗಿದಳು. ದಿನಗಳುರುಳಿದವು .ತಂಗಿಯರಿಗೆ ಮದುವೆ ತಯಾರಿ ನಡೆಯುತ್ತಿತ್ತು.ಸಂಬಂಧ ಬರಲು ಇವಳೇ ಅಡ್ಡಿಯಾಗುತ್ತಿದ್ದಾಳೆಂದು ತೋರಿತು ಅಮ್ಮ ಮಹೇಶ್ವರಿಗೆ."ಇವತ್ತು ತಂಗಿಯನ್ನು ನೋಡಲು ಗಂಡಿನ ಕಡೆಯವರು ಬರುತ್ತಿದ್ದಾರೆ. ಅವರು ಬಂದು ಹೋಗುವವರೆಗೂ ಇತ್ತ ಕಡೆ ತಲೆಹಾಕಬೇಡ.ನಡಿ ತೋಟದ ಕಡೆಗೆ ಮಗುವಿನೊಂದಿಗೆ" ಎಂದಾಗ ಮುನ್ನುಗ್ಗಿ ಬಂದ ಅಳುವನ್ನು ನುಂಗಿಕೊಂಡು ತೋಟದ ಕಡೆಗೆ ಭಾರವಾದ ಹೆಜ್ಜೆಯಿರಿಸಿದಳು.ಗಂಡನಿಂದ ದೂರವಾದ ನನಗೆ ವಿಧವೆಯಂತಹ ಬಾಳು ಎಂದು ತನಗೆ ತಾನೇ ಹಣೆಬರಹವನ್ನು ಹಳಿದುಕೊಂಡಳು.ತೋಟದ ಕೆಲಸ ಮಾಡುತ್ತಾ "ಅಮ್ಮಾ..ಹಸಿವೆ.ಮನೆಕಡೆ ಹೋಗೋಣ" ಎನ್ನುವ ಮಗನನ್ನು ಸಮಾಧಾನಿಸಿ ತೋಟದಲ್ಲಿದ್ದ ಸೀಬೆಹಣ್ಣುಗಳನ್ನು ಕಿತ್ತು ಕೈಗಿತ್ತಳು.ಬಾಯಾರಿಕೆಯಾದಾಗ ತೋಟದ ಕೆರೆಯಲ್ಲಿದ್ದ ನೀರು ಕೊಟ್ಟಳು.ಎಷ್ಟೋ ಹೊತ್ತಿನ ನಂತರ ಮನೆಯಿಂದ ಕೂ... ಎಂದು ಕರೆಯುವ ದನಿ ಕೇಳಿದಾಗ ನಿಧಾನವಾಗಿ ಮನೆಯತ್ತ ನಡೆದಳು.ತನಗೆ ಇನ್ನೊಮ್ಮೆ ಈ ರೀತಿ ಹೇಳುವ ಪ್ರಸಂಗ ಬರದಂತೆ ತಾನು ತಂಗಿ ತಮ್ಮಂದಿರ ವಿವಾಹ ಕಾರ್ಯಕ್ರಮಗಳಲ್ಲಿ ದೂರವೇ ಉಳಿದಳು.ಆದರೂ ಕೆಲಸಕಾರ್ಯಗಳಲ್ಲಿ ಮೊದಲು ಕೂಗುತ್ತಿದ್ದುದೇ ಮಧು.. ಇದು ಮಾಡು, ಮಧು ..ಅದು ಮಾಡು ಎಂದು..ಯಾವುದನ್ನೂ ಒಂದಿನಿತೂ ಬೇಸರಿಸದೆ ಮಾಡಿ ಮನೆಯ ಮೂಲೆಯಲ್ಲಿ ಕುಳಿತುಬಿಡುತ್ತಿದ್ದಳು.ಎಲ್ಲರೂ ಅವರವರ ಜೀವನದಲ್ಲಿ ಸುಖ ಸಂತೋಷ ಅನುಭವಿಸುತ್ತಿದ್ದರೆ ಮಧು ತನ್ನ ಹರೆಯದ ಆಸೆಗಳನ್ನೆಲ್ಲ ಬದಿಗಿಟ್ಟು ಮಗನ ಮುಂದಿನ ಭವಿಷ್ಯದ ದೃಷ್ಟಿಯಿಂದ ಯೋಚಿಸುತ್ತಿದ್ದಳು.ಆಗಾಗ ಮಗನಲ್ಲಿ " ಮಗಾ.. ಚೆನ್ನಾಗಿ ಓದು..ನೀನು ಓದಿ ಜಾಣನಾದರೆ ಮಾತ್ರ ಬದುಕು ಹಸನಾದೀತು" ಎಂದು ಹೇಳುತ್ತಿದ್ದರೆ..ಮಗ  ಮುಗ್ಧವಾಗಿ ಹೂಂಗುಟ್ಟುತ್ತಿದ್ದ.


        ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದ ಮಗನಿಗೆ ಮುಂದೆ ಓದಿಸಲು ಹಣವಿಲ್ಲದೆ ಕಂಗಾಲಾದಳು ಮಧು.ಒಡಹುಟ್ಟಿದವರಾರೂ ಸಹಕರಿಸುವ ಮನಸ್ಥಿತಿಯಲ್ಲೂ ಇರಲಿಲ್ಲ.ಅಲ್ಲಿ ಇಲ್ಲಿ ಸಣ್ಣ-ಪುಟ್ಟ ಕೆಲಸ ಮಾಡಿ ಮಗ ಹರ್ಷ ಸ್ವಲ್ಪ ಸಂಪಾದನೆ ಮಾಡುತ್ತಿದ್ದ.ಅವನ ಓದು ಕನಸಾಗಿಯೇ ಉಳಿದುಹೋದರೆ ಎಂಬ ಚಿಂತೆ ಕಾಡಿತು ಮಧುಗೆ.ಆ ದಿನ "ಅಮ್ಮಾ.. " ಎನ್ನುತ್ತಾ ಓಡೋಡಿ ಬಂದಿದ್ದ ಹರ್ಷ...ಅಮ್ಮ ಮನೆಯಲ್ಲಿರಲಿಲ್ಲ..ದನದ ಕೊಟ್ಟಿಗೆಯಲ್ಲಿ ಹುಡುಕಿದ.ಗೋಪಮ್ಮನ ಹಾಲು ಹಿಂಡುತ್ತಿದ್ದಳು.ಸಗಣಿಯ ಮೇಲೆಯೇ ಓಡೋಡಿ ಬಂದು ಅಮ್ಮನನ್ನು ಬಿಗಿದಪ್ಪಿ ಸಿಹಿಸುದ್ದಿಯನರುಹಿದ.ಮಧು ಹಾಲು ಹಿಂಡುವುದನ್ನು ನಿಲ್ಲಿಸಿ ಆನಂದಭಾಷ್ಪ ಸುರಿಸುತ್ತಿದ್ದರೆ ಕೊಟ್ಟಿಗೆಯಲ್ಲಿದ್ದ ದನಕರುಗಳೆಲ್ಲ ಅಂಬಾಕಾರಗೈಯುತ್ತಿದ್ದವು.ಹರ್ಷ ತನ್ನ ಗುರುಗಳು ಹೇಳಿದಂತೆ ಬ್ಯಾಂಕ್ ಕ್ಲರ್ಕ್ ಪರೀಕ್ಷೆಗೆ ಬರೆದಿದ್ದ.ಅದರಲ್ಲಿ ತೇರ್ಗಡೆಯಾಗಿ ಸಂದರ್ಶನಕ್ಕೆ ಆಯ್ಕೆಯಾಗಿದ್ದ.ಅಮ್ಮನ ಆಶೀರ್ವಾದ ಪಡೆದು ಹೊರಟ ಹರ್ಷನಿಗೆ ತಾನು ಉದ್ಯೋಗ ಗಿಟ್ಟಿಸಿಕೊಳ್ಳಲೇಬೇಕೆಂಬ ಛಲ.ಸಂದರ್ಶನಕ್ಕೆಂದು ಮೈಸೂರಿಗೆ ತೆರಳಿದವನು ಸಂದರ್ಶನ ಮುಗಿಸಿದ ನಂತರ ಅಲ್ಲಿಯೇ ಪುಟ್ಟ ಕೆಲಸವೊಂದನ್ನು ಹಿಡಿದ.ಕೆಲವು ತಿಂಗಳಲ್ಲಿ ಬ್ಯಾಂಕ್ ಗೆ ಆಯ್ಕೆಯಾದ ಸುದ್ದಿ ಬಂದಾಗ ಊರಿಗೆ ಮರಳಿ ಅಮ್ಮನ ಆಶೀರ್ವಾದ ಪಡೆದು ತರಬೇತಿಗೆ ಹೊರಟ.ಮಗ ಹೊರಡುತ್ತಿದ್ದರೆ ಅಮ್ಮನ ಸಂಭ್ರಮವೇನು...!! ತಾನೇ ಕೈಯಾರೆ ಮಗನಿಗೆ ಬೇಕಾದ್ದನ್ನೆಲ್ಲಾ ಜೋಡಿಸಿ ಚೀಲಗಳನ್ನು ಕೈಗಳಲ್ಲಿ ನೇತಾಡಿಸಿಕೊಂಡು ಮಾರ್ಗದ ಬದಿಗೆ ಬಂದು ಮಗನನ್ನು ಬಸ್ಸಿಗೆ ಹತ್ತಿಸಿ ಟಾಟಾ ಮಾಡಿ ಕಣ್ತುಂಬಿಕೊಂಡಿದಳು .ಇದು ನೋವಿನ ಕಣ್ಣೀರೋ, ಕಂಡ  ಕಷ್ಟದ ಬೇಗೆಯೋ ಅವಳಿಗೂ ತಿಳಿಯದು.


      ಒಂದೆರಡು ವರ್ಷದಲ್ಲಿಯೇ ಹರ್ಷ ಅಮ್ಮನನ್ನೂ ಕರೆದೊಯ್ದ.ತಾನೂ ಖಾಸಗಿಯಾಗಿ ಓದುತ್ತಾ..ಮೇಲಿನ ಹುದ್ದೆಗಳಿಗೆ ಪರೀಕ್ಷೆ ಬರೆದೂ ಉನ್ನತ ಹುದ್ದೆ ಗಿಟ್ಟಿಸಿಕೊಂಡ.ತನ್ನದೇ ಆಫೀಸಿನಲ್ಲಿದ್ದ ಬಡ ಕನ್ಯೆಯನ್ನು ವರಿಸಿ ಅವಳ ದಾರಿಗೂ ಬೆಳಕಾದ.ಮಧುಮಾಲಾಳ ಮುಂದಿನ ಜೀವನ ಸುಖಮಯವಾಗಿತ್ತು.ಒಳ್ಳೆಯ ಮಗ ಸೊಸೆ ,ಮುದ್ದಾದ ಇಬ್ಬರು ಮೊಮ್ಮಕ್ಕಳನ್ನು ಆಡಿಸುತ್ತಾ ದಿನಹೋದದ್ದೇ ತಿಳಿಯುತ್ತಿರಲಿಲ್ಲ.ಇಪ್ಪತ್ತು ವರ್ಷಗಳು  ಮಗನೊಂದಿಗೆ ಸುಖವಾಗಿ ಕಳೆದ ಆಕೆಗೆ ಸ್ವಲ್ಪವೂ ನೋವಾಗದಂತೆ ಯಮರಾಜ ಕರೆದೊಯ್ದ.ಹರ್ಷನ ಕುಟುಂಬ ಆಕೆಯ ಅನುಪಸ್ಥಿತಿಯಲ್ಲಿ ಮರುಗಿತು.ಆದರೂ ಜೀವನದಲ್ಲಿ ನೊಂದು ಬೆಂದ ಅಮ್ಮನನ್ನು ತಾನು ಚೆನ್ನಾಗಿ ನೋಡಿಕೊಂಡಿದ್ದೇನೆ ಎಂಬ ಸಮಾಧಾನ ಹರ್ಷನದು.



       ನರಸಿಂಹ ರಾಯರು ಮಧುಮಾಲಾಳಿಂದ ದೂರವಾದರೂ ಅವಳ ಎಲ್ಲಾ ಸುದ್ದಿಗಳನ್ನು ಗೆಳೆಯರಿಂದ ಸಂಗ್ರಹಿಸಲು ಸಂಕೋಚಪಡುತ್ತಿರಲಿಲ್ಲ.ಆಕೆಯ ಕಣ್ಣೀರಿನ ದಿನಗಳನ್ನು ನೋಡಿ "ನನ್ನೊಂದಿಗೆ ದಾಂಪತ್ಯದಲ್ಲಿ ಅಸಹಕಾರ ತೋರುತ್ತಿದ್ದವಳ ಅಹಂಕಾರ ಈಗ ಮುರಿಯಿತು" ಅನ್ನುತ್ತಿದ್ದವರು, ಮಗನಿಗೊಂದು ಉದ್ಯೋಗ ದೊರೆತು ಚಂದದ ಬದುಕು ಸಿಕ್ಕಾಗ ಹೊಟ್ಟೆಯುರಿದುಕೊಂಡಿದ್ದರು.


       ನರಸಿಂಹ ರಾಯರಿಗೆ ಮದುವೆಯಾಗಿ ನಾಲ್ವರು ಮಕ್ಕಳಾಗಿದ್ದರೂ ಒಬ್ಬರಿಗೂ ಓದು ತಲೆಗೆ ಹತ್ತಿರಲಿಲ್ಲ.ಮಗಳಂದಿರಿಗೆ ಮದುವೆಯೂ ಆಗುತ್ತಿರಲಿಲ್ಲ.ವರದಕ್ಷಿಣೆ ಕೊಡುವಷ್ಟು ಅನುಕೂಲವೂ ಈಗ ಆವರಲ್ಲಿರಲಿಲ್ಲ.ಹೇಗೋ ಸಾಲಸೋಲ ಮಾಡಿ ಗಂಗಾ,ಕಾವೇರಿಯ ಮದುವೆ ಮಾಡಿದರೂ ದೊಡ್ಡವಳಾದ ಯಮುನಾ ವಯಸ್ಸು ಮೀರಿ ಮದುವೆಯಾಗದೆ ಉಳಿದಿದ್ದಳು.ಕೊನೆಗೆ ಎದಡನೇ ಸಂಬಂಧ ಮೂರು ಮಕ್ಕಳ ತಂದೆಯ ಜೊತೆ ವಿವಾಹ ಮಾಡಿ ಕಳುಹಿಸಿದರು.ಎಲ್ಲವೂ ಸುಸೂತ್ರವಾಗಿ ನೆರವೇರಿ , ಇನ್ನು ಪ್ರಕಾಶನಿಗೊಂದು ಮದುವೆ ಮಾಡಿದರೆ ಜವಾಬ್ದಾರಿ ಕಳೆಯಿತು..ಎಂದುಕೊಳ್ಳುತ್ತಿರುವಾಗಲೇ..

ಕಾವೇರಿಯ ಗಂಡ ಅಕಾಲಿಕ ನಿಧನ ಹೊಂದಿದ ವಾರ್ತೆ ಬಂದಿತು.ಕಾವೇರಿಯ ಗಂಡ ಶಾಲೆಯೊಂದರಲ್ಲಿ ಕ್ಲರ್ಕ್ ಆಗಿದ್ದ.ಅವನ ಕೆಲಸ ಕಾವೇರಿಗೆ ದೊರೆತು ಜೀವನ ಸಾಗುತ್ತಿತ್ತು.

ಆ ನೋವು ಕಡಿಮೆಯಾಗುವ ಮುನ್ನವೇ ಇನ್ನೊಂದು ಆಘಾತ ಕಾದಿತ್ತು.ಗಂಗಾ ಗರ್ಭಿಣಿಯಾದ ಮೇಲೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಳು.ಚಿಕಿತ್ಸೆ ಕೊಡಿಸಿದರೂ ಸರಿಯಾಗದಿದ್ದಾಗ ತವರಿಗೆ ಕಳುಹಿಸಿದ್ದರು.ಅವಳ ಅನಾರೋಗ್ಯದಿಂದ ಅಬಾರ್ಷನ್ ಆಯಿತು.ಗಂಗಾಳ ಗಂಡನ ಮನೆಯವರು ತಿರುಗಿಯೂ ಇತ್ತ ನೋಡಲಿಲ್ಲ.ಗಂಗಾಳಿಗೆ ತವರ ವಾಸವೇ ಗಟ್ಟಿಯಾಯಿತು.ಮಗ ಪ್ರಕಾಶ ಉಂಡಾಡಿಯಂತೆ ಊರೆಲ್ಲ ಸುತ್ತುತ್ತಿದ್ದರೆ ಗಂಗಾ ಮನೆಯ ಕೆಲಸಕಾರ್ಯಗಳಲ್ಲಿ ತೊಡಗಿ ತೋಟಕ್ಕೂ ಹೋಗಿ ಮುತುವರ್ಜಿಯಿಂದ ದುಡಿಯುತ್ತಿದ್ದಳು.ಇದನ್ನೆಲ್ಲ ನೋಡುತ್ತಿದ್ದಾಗ ಸಾವಿತ್ರಿ ಅದೆಷ್ಟೋ ಬಾರಿ ಹೇಳಿದ್ದಳು "ರೀ..ನೀವು ಒಂದು ಹೆಣ್ಣಿಗೆ ಮಾಡಿದ ಅನ್ಯಾಯ, ಅವಳ ನೋವಿನ ಕಣ್ಣೀರಿನ ಶಾಪ ನಮಗೆ ತಟ್ಟಿದೆ.ನಮ್ಮ ಮಕ್ಕಳ ಬಾಳು ನರಕವಾಗುತ್ತಿದೆ" ಎಂದು..ಅವಳು ಹೇಳಿದಾಗ ಗದರಿದರೂ ಅಂತಃಕರಣ ಮಾತ್ರ ಅವಳ ಮಾತನ್ನು ಸತ್ಯವೆಂದೇ ಹೇಳುತ್ತಿದೆ.ಈಗ ಯಮುನಾಳೂ ಹೃದಯದ ಖಾಯಿಲೆಯಿಂದ ಬಳಲುತ್ತಿದ್ದು ಗಂಡ ಇಬ್ಬರು ಹೆಣ್ಣುಮಕ್ಕಳ ಸಹಿತ ತವರಿಗಟ್ಟಿದ್ದಾನೆ.ಮನೆಯಲ್ಲಿ ಅವಳ ಚಾಕರಿಮಾಡಲು ತನ್ನಿಂದ ಸಾಧ್ಯವಿಲ್ಲ .ತನ್ನ ಅವಶ್ಯಕತೆಗೆ ಬೇರೆಯವಳನ್ನೇ ಆಶ್ರಯಿಸುವೆ.ಅನಾರೋಗ್ಯ ಪೀಡಿತೆ ನನಗೆ ಬೇಡವೆಂದು ದೂರತಳ್ಳಿದಾಗ .. ಮಡದಿಯೆದುರು ಅಳಿಯನ ತಪ್ಪನ್ನು ಆಡುವ ಧೈರ್ಯ,ತನ್ನ ತಪ್ಪನ್ನು ಒಪ್ಪಿಕೊಳ್ಳುವ ಪ್ರಾಮಾಣಿಕತೆ..ಎರಡೂ ನರಸಿಂಹ ರಾಯರಿಗಿರಲಿಲ್ಲ.ತಾನು ಯೌವ್ವನದಲ್ಲಿ ಮಾಡಿದ್ದೇನು..ಇದನ್ನೇ ಅಲ್ಲವೇ..ಆದರೂ ಸಾವಿತ್ರಿಯೆದುರು ಕುಬ್ಜನಾಗಲಾರೆ...ಮಧು ಮಗನೊಂದಿಗೆ ಸುಖವಾಗಿ ಬಾಳಿ ಸ್ವರ್ಗಸ್ಥಳಾದಳು.. ನಾನು ಯೌವನದಲ್ಲಿ ಸಾವಿತ್ರಿಯೊಂದಿಗೆ ಮಜವಾಗಿ ಕಳೆದು ಈಗ  ನೋವುಣ್ಣುತ್ತಿದ್ದೇನೆ...ಕಾಲಚಕ್ರ ಉರುಳುತ್ತಿದೆ .. ಎಂದು ಯೋಚಿಸುತ್ತಾ..

"ನಿನ್ನ ಮಾತು ನಿಜ ಸಾವಿತ್ರಿ ...ಯಾವ ತಪ್ಪೂ ಮಾಡದ ಮಧುಮಾಲಾ ಮೊದಲು ನೋವುಂಡು ಜೀವನದಲ್ಲಿ ನೆಮ್ಮದಿ ಕಂಡಳು.ನಾನು ಮಾಡಿದ್ದು ತಪ್ಪೆಂದು ಗೊತ್ತಿದ್ದೂ ಅದೇ ಸರಿಯೆಂಬ ಹಠಕ್ಕೆ ಬಿದ್ದು ಮೆರೆದ.ಇಂದು ನನ್ನ ಗರ್ವವನ್ನು ಮುರಿಯಲೆಂದೇ ಈ ಕಷ್ಟಗಳ ಸರಮಾಲೆಯನ್ನು ಭಗವಂತ ನನ್ನ ಮುಂದಿರಿಸಿದ್ದಾನೆ ..ನಾನು ತಪ್ಪು ಮಾಡಿದೆ ಸಾವಿತ್ರಿ...ನಾನು ತಪ್ಪು ಮಾಡಿದೆ.." ಎನ್ನುತ್ತಾ ಕುಸಿದರು.


✍️... ಅನಿತಾ ಜಿ.ಕೆ.ಭಟ್.

27-08-2020.




           

No comments:

Post a Comment