ಮಕ್ಕಳ ಹೊಟ್ಟೆ ತುಂಬಿಸುವ ಕೆಲಸ ಇಂದಿನ ಅಮ್ಮಂದಿರಿಗೆ ಸ್ವಲ್ಪ ಸವಾಲಿನದು . ಮೊದಲಿನ ಕಾಲದ ಮಕ್ಕಳಂತೆ ಅಮ್ಮ "ಊಟಕ್ಕೆ ಬಾ, ತಿಂಡಿಗೆ ಬಾ" ಎಂದಾಗ ಬಂದು ತಟ್ಟೆ ಮುಂದೆ ಕುಳಿತುಕೊಳ್ಳುವ ಸ್ವಭಾವ ಇಂದಿನವರಲ್ಲಿ ಕಾಣಸಿಗುವುದು ಅಪರೂಪ. ಅದಕ್ಕೆ ಕಾರಣವೂ ಹಲವು. ಕೈಗೆಟುಕುವಂತೆ ಇರುವ ಜಂಕ್ ಫುಡ್'ಗಳು, ಕಡಿಮೆ ವ್ಯಾಯಾಮ, ಇಲೆಕ್ಟ್ರಾನಿಕ್ ಗ್ಯಾಡ್ಜೆಟ್'ಗಳ ಅತಿಯಾದ ಬಳಕೆ..ಇತ್ಯಾದಿ..
ದಿನಕ್ಕೆ ಮೂರು ಬಾರಿ "ದೋಸೆಯ ಮಾಡಮ್ಮ... ಬಿಸಿಬಿಸಿ ದೋಸೆ ಮಾಡಮ್ಮ" ಎಂಬ ಹಾಡನ್ನು ಹಾಡುವ ಮಕ್ಕಳು.. "ಇವತ್ತು ಮಧ್ಯಾಹ್ನ ಊಟ ಮಾಡಿ..ಊಟದ ಜೊತೆಗೆ ತುಪ್ಪ, ಪಲ್ಯ ,ಸಾಂಬಾರು,ಮೊಸರು.. ಹೊಟ್ಟೆಗೆ ಸೇರಿದರೆ ಆರೋಗ್ಯಕ್ಕೆ ಹಿತಕರ" ಎಂದೆಲ್ಲಾ ರಮಿಸುವ ಅಮ್ಮ. ರಮಿಸುವಿಕೆಗೆ ಬಗ್ಗದಿದ್ದರೆ ಅಮ್ಮನದು ಚೂರು ಹಠ. ಹಾಗಾದರೆ "ನನಗೆ ಬಿಳಿ ಅನ್ನ /ಬೆಳ್ತಿಗೆ ಅನ್ನ ಮಾಡಿ"ಎನ್ನುವ ಅಣ್ಣ. "ಬೇಡ ಕೆಂಪನ್ನವೇ /ಕುಚ್ಚಿಲನ್ನವೇ ಮಾಡಿ ..ತುಪ್ಪದೊಂದಿಗೆ ಎಷ್ಟು ರುಚಿಯಾಗಿರುತ್ತದೆ..!! "ಎನ್ನುವ ತಮ್ಮ."ಊಟ ಮಾಡುವಿರಾದರೆ ಎರಡು ಬಗೆ ತಯಾರು ಮಾಡುವುದು ಕಷ್ಟವಲ್ಲ" ಎಂದು ಅಡುಗೆ ಮಾಡಿ ಊಟಕ್ಕೆ ಕರೆದರೆ.. "ಬಿಳಿ ಅನ್ನದೊಂದಿಗೆ ಟೊಮೆಟೊ ಉಪ್ಪಿನಕಾಯಿ ಇದ್ದರೆ ರುಚಿ" ಎನ್ನುವ ಅಣ್ಣ. ಸರಿ.. ಚಕಚಕ ಅಂತ ಟೊಮೆಟೊ ಕತ್ತರಿಸಿ ಉಪ್ಪಿನಕಾಯಿ ರಸ ಸೇರಿಸಿ ಟೊಮೆಟೋ ಉಪ್ಪಿನಕಾಯಿ ತಯಾರು ಮಾಡಿದ್ದಾಯ್ತು.ಅಷ್ಟರಲ್ಲಿ "ಕೆಂಪನ್ನದ ಜೊತೆಗೆ ಮುರಿದು ತಿನ್ನುವುದಕ್ಕೆ ಅಜ್ಜಿ ಕೊಟ್ಟ ಹಪ್ಪಳ ಅಥವಾ ಅಮ್ಮ ಮಾಡಿದ ಸೆಂಡಿಗೆ ಕರುಂ ಕುರುಂ ಇದ್ದರೆ ರುಚಿ" ಎಂದು ಕಣ್ಣರಳಿಸುವ ತಮ್ಮ.. ಅದನ್ನು ಕರಿದದ್ದೂ ಆಯ್ತು. ಊಟ ಬಡಿಸುವಾಗ "ಒಂದು ಸೌಟು ಸಾಕು ಸಾಕು.. ಇವತ್ತು ಹಸಿವೆ ಕಡಿಮೆ " ಎನ್ನುವ ರಾಗ.ಊಟ ಸಾಗುವ ಮೊದಲೇ ಹಪ್ಪಳ-ಸೆಂಡಿಗೆ ಖಾಲಿಯಾಗುತ್ತ ಬರುವ ಲಕ್ಷಣ ಕಂಡಾಗ ಈ ಅಮ್ಮನ ಬಾಯಿ ಸುಮ್ಮನಿದ್ದೀತೇ..? "ಊಟ ಮಾಡಿ ಮೊದಲು ಎಂಬ ಎಚ್ಚರಿಕೆ..!!" . ಊಟ ಮಾಡುತ್ತಿದ್ದಾಗ "ಇನ್ನು ಚೂರು ಬಡಿಸಲಾ..?" ಎಂದರೆ "ಇಲ್ಲಮ್ಮ ಇನ್ನು ಹೊಟ್ಟೆಯಲ್ಲಿ ಜಾಗವೇ ಇಲ್ಲ.. ಹೊಟ್ಟೆ ತುಂಬಿತು" ಎಂದು ತುಂಟ ನಗು ಬೀರುವ ಮಕ್ಕಳು.
ಮಧ್ಯಾಹ್ನ ಅಮ್ಮ ಉಂಡು ಸ್ವಲ್ಪ ಕಣ್ಣಡ್ಡ ಮಾಡಿದಾಗ ಮಕ್ಕಳ ಸೈನ್ಯ ಸ್ಟೋರ್ ರೂಮಿಗೆ ನುಗ್ಗಿ ಸದ್ದು ಮಾಡುತ್ತಿತ್ತು. "ಸುಮ್ನಿರು ತಮ್ಮ.. ಏನು ಸದ್ದು ಮಾಡೋದು.. ಅಮ್ಮ ಏಳ್ತಾರೆ.. ಅಷ್ಟು ಗೊತ್ತಾಗಲ್ವಾ...?".. ಮೆಲ್ಲ ಬಂದು ಅಮ್ಮ ಎದ್ದರೇ.. ಅಂತಹ ಗೂಢಾಚಾರಿಕೆ... ಅಬ್ಬಾ..!! ಎದ್ದಿಲ್ಲ ..ಅಂತ ಸಮಾಧಾನಪಟ್ಟುಕೊಂಡು ಹೊರಟು ಹೊಟ್ಟೆ ತುಂಬಾ ಬಿಸ್ಕೆಟ್, ಮಸಾಲೆ ಕಡಲೆ, ನೆಲ ಕಡಲೆ,ಕರಿದ ತಿಂಡಿ ತಿಂದು ತೆರಳುವ ಮಕ್ಕಳು.ಇದನ್ನು ಕಂಡು " ಅರ್ಧಂಬರ್ಧ ಊಟ ಮಾಡಿ ಹೀಗೆ ಜಂಕ್ ಫುಡ್ ಉದರ ಸೇರಿಸಿದರೆ.. ಅನಾರೋಗ್ಯ, ಅಪೌಷ್ಟಿಕತೆ ಕಾಡೀತು. ನಿಮಗೆ ಮೂರು ಹೊತ್ತು ದೋಸೆ, ಚಪಾತಿ, ಪುಲಾವ್ ..ಹೀಗೇ ಮಾಡಿಕೊಡುವ" ಎಂದೊಪ್ಪುವ ಅಮ್ಮ. "ಹ್ಹ ಹ್ಹ ಹ್ಹಾ..ಅಮ್ಮ ಸೋತರು... ಇನ್ನು ಒಂದು ಹೊತ್ತಾದರೂ ಅನ್ನ ಉಣ್ಣಿ ಅಂತ ಹೇಳಲ್ಲ" ಎಂದು ತಾವೇ ಗೆದ್ದಂತೆ ಬೀಗುವ ಮಕ್ಕಳು. ಮಕ್ಕಳೆದುರು ಸೋತಂತೆ ನಟಿಸಿ... ಮಕ್ಕಳು ಹೊಟ್ಟೆತುಂಬಿ ತೇಗಿದಾಗ ಅಮ್ಮನ ಮುಖದಲ್ಲಿ ಸಂತೃಪ್ತಿಯ ನಗೆ.
ಮಗದೊಮ್ಮೆ "ಇವತ್ತು ದೋಸೆ ಹಿಟ್ಟು ಮುಗಿಯಿತು.. ಊಟ ಮಾಡಿ " ಎಂದ ತಕ್ಷಣ "ನನಗೆ ಹಸಿವೆ ಇಲ್ಲ.." ಎಂದುತ್ತರಿಸಿದ ಅಣ್ಣ. "ಅಣ್ಣಾ ...ಇವತ್ತು ಅಪ್ಪ ಮಸಾಲೆ ಕಡಲೆ ತಂದಿದ್ದಾರೆ... ಬೇಕಾ..." ಎಂದು ಕೇಳಿದ ತಮ್ಮ. "ಎಲ್ಲಿದೆ ..ಆಹಾ..!!"ಕಣ್ಣರಳಿಸಿ ಕೇಳಿದ ಅಣ್ಣ. ತಮ್ಮನೀಗ ಅಪ್ಪ-ಅಮ್ಮನ ಕಡೆ ತಿರುಗಿ '' ಹೇಗಿದೆ..? ನಾನು ಅಣ್ಣನಿಗೆ ಹಸಿವೆ ಇದೆಯಾ ಇಲ್ಲವಾ ಎಂದು ಪರೀಕ್ಷಿಸಿದ್ದು ..ಎರಡು ಸೌಟು ಅನ್ನ ಉಣ್ಣಲಿ... ಹೊಟ್ಟೆಯಲ್ಲಿ ಜಾಗವಿದೆ.." ಎಂದು ನಗುತ್ತಿದ್ದರೆ ಅಣ್ಣ ಪೆಚ್ಚಾದ...ತುಂಟ ತಮ್ಮನ ಆಲೋಚನೆಗೆ ಅಪ್ಪ-ಅಮ್ಮ ಮೂಗಿನ ಮೇಲೆ ಬೆರಳಿಟ್ಟುಕೊಂಡು ನಗುತ್ತಿದ್ದಾರೆ.
ಹೀಗೆ ಮಕ್ಕಳಿದ್ದ ಮನೆಯಲ್ಲಿ ಊಟದ ಹಾಸ್ಯ,ತಂಟೆ,ತಕರಾರು,ಅಮ್ಮಂದಿರ ರಮಿಸುವಿಕೆ,ಮಕ್ಕಳ ರಂಪಾಟ ತಪ್ಪಿದ್ದಲ್ಲ..ಮಕ್ಕಳಿಗೆ ಊಟಮಾಡಿಸಲು ,ಹೊಟ್ಟೆ ತುಂಬಿಸಲು ಕಷ್ಟಪಡುವ ತಾಯಂದಿರು ಕೆಲವು ವಿಷಯಗಳನ್ನು ಗಮನದಲ್ಲಿರಿಸಿಕೊಳ್ಳಬೇಕು.
1. ಮಕ್ಕಳಿಗೆ ಅತಿಯಾಗಿ ಜಂಕ್ ಫುಡ್ ನೀಡುವುದು ಒಳ್ಳೆಯದಲ್ಲ.ಕರಿದ ತಿಂಡಿ ಆಸೆಪಟ್ಟರೆ ಮನೆಯಲ್ಲೇ ಮಾಡುವುದು ಉತ್ತಮ.
2.ಆಗಾಗ ಬಿಸಿ ನೀರು ಕುಡಿಸುತ್ತಿರಿ.
3.ಮಕ್ಕಳಿಗೆ ಸ್ವಲ್ಪ ಶಾರೀರಿಕ ವ್ಯಾಯಾಮ ದೊರೆಯುವಂತೆ ಮಾಡಿ.
ಅವರಿಗಿಷ್ಟವಾಗುವ ಮನೆಯಡಿಗೆ ಊಟ, ದೋಸೆ, ಪುಲಾವ್..ಯಾವುದಾದರೂ ಜಂಕ್ ಫುಡ್ ಗಿಂತ ಉತ್ತಮ.
4.ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ನಿಂಬೆರಸ, ಉಪ್ಪು/ಸಕ್ಕರೆ ಸೇರಿಸಿ ದಿನಕ್ಕೊಮ್ಮೆ ಕುಡಿಯಲು ನೀಡಿ.ಹಸಿವೆ ಹೆಚ್ಚುತ್ತದೆ.
5.ಟಿವಿ ಮುಂದೆ, ಮೊಬೈಲ್ ನೋಡುತ್ತಾ ಊಟಮಾಡುವ ಅಭ್ಯಾಸವನ್ನು ರೂಢಿಮಾಡದಿರಿ.ಆರೋಗ್ಯಕ್ಕೆ ಹಿತವಲ್ಲ.
6.ಮಕ್ಕಳ ಆಹಾರದಲ್ಲಿರುವ ಪೋಷಕಾಂಶಗಳನ್ನು,ಅವರ ದೇಹಕ್ಕೆ ಬೇಕಾಗಿರುವ ಅಂಶಗಳನ್ನು ಆಗಾಗ ಹೇಳುತ್ತಿರಿ.
7.ತರಕಾರಿ ತಿನ್ನಲು ಹಠ ಹಿಡಿವ ಮಕ್ಕಳಿಗೆ ಸಣ್ಣಸಣ್ಣದಾಗಿ ತರಕಾರಿ ಕತ್ತರಿಸಿ ಪುಲಾವ್ ಗೆ ಹಾಕಿ, ಬೇಯಿಸಿ ಚಪಾತಿ ಹಿಟ್ಟಿನಲ್ಲಿ ಸೇರಿಸಿ ನಾದಿ, ದೋಸೆಯಲ್ಲಿ ಟೊಮೆಟೊ,ನೀರುಳ್ಳಿ ಸೇರಿಸಿ ಅಲಂಕಾರಿಕವಾಗಿ ಮಾಡಿಕೊಡಿ.
8.ಅಡುಗೆ ಮಾಡುವಷ್ಟೇ ಪ್ರಾಮುಖ್ಯತೆ ಅದನ್ನು ಮಕ್ಕಳ ಮುಂದೆ ಸುಂದರವಾಗಿ ಕಾಣುವಂತೆ ಜೋಡಿಸಿಡುವುದರಲ್ಲೂ ಇರಲಿ.
9.ಮಕ್ಕಳ ಊಟದಲ್ಲಿ ಮೊಸರು ಇರಲಿ.ಇದು ಹಸಿವೆಯನ್ನು ಹೆಚ್ಚಿಸುತ್ತದೆ.ನೀರು ಮಜ್ಜಿಗೆಗೆ ಉಪ್ಪು ಹಾಕಿ ಕುಡಿಯಲು ಕೊಡಬಹುದು.
10.ರಾತ್ರಿಯೂಟ,ರಜಾ ದಿನಗಳಲ್ಲಿ ಮೂರೂ ಹೊತ್ತು ಕುಟುಂಬದ ಸದಸ್ಯರು ಎಲ್ಲರೂ ಒಟ್ಟಿಗೆ ಕುಳಿತು ಊಟಮಾಡುವ ಅಭ್ಯಾಸ ರೂಢಿಸಿಕೊಳ್ಳಿ.ಹಿರಿಯರು ಊಟಮಾಡುವ ಶೈಲಿಯನ್ನು ಮಕಳು ಅನುಸರಿಸಲು ಪ್ರಯತ್ನಿಸುತ್ತಾರೆ.
11.ಸಂದರ್ಭ ದೊರೆತಾಗ ನೆಲದ ಮೇಲೆ ಪಂಕ್ತಿ ಹಾಕಿ ಬಾಳೆಲೆಯಲ್ಲಿ ಊಟ ಮಾಡುವುದನ್ನು ಕಲಿಸಿ.ಬಾಳೆಲೆಯಲ್ಲಿ ಉಂಡರೆ ಜೀರ್ಣಕ್ರಿಯೆಗೆ ಅನುಕೂಲ ಮತ್ತು ದೇಹಾರೋಗ್ಯದ ದೃಷ್ಟಿಯಿಂದ ಹಿತಕರ.
12.ಮಕ್ಕಳಿಗೆ ಹಸಿವೆಯಿಲ್ಲದಿದ್ದರೂ ಒತ್ತಾಯದಿಂದ ತಿನಿಸುವುದು ಒಳ್ಳೆಯದಲ್ಲ.ಹಸಿವೆಯಾದಾಗ ಸತ್ವಭರಿತ ಆಹಾರ ನೀಡಿ.
13.ಮಕ್ಕಳಿಗೆ ಕೇಳಿಸುವಂತೆ ಮನೆಯವರೆದುರು,ನೆಂಟರಿಷ್ಟರೆದುರು ಮಗು ಊಟಮಾಡಲ್ಲ,ಹಠ ಮಾಡುತ್ತಾನೆ, ಜಂಕ್ ಫುಡ್ ಜಾಸ್ತಿ ತಿನ್ನುವುದು, ತರಕಾರಿ ತುಂಡುಗಳನ್ನು ತಿನ್ನಲ್ಲ, ಎತ್ತಿ ಪಕ್ಕದಲ್ಲಿಡುತ್ತಾನೆ..ಎಂದೆಲ್ಲ ಋಣಾತ್ಮಕ ಮಾತುಗಳನ್ನು ಆಡದಿರಿ.ಬದಲಾಗಿ ಉಣ್ಣಲು ಪ್ರೇರೇಪಿಸುವಂತಹ ಧನಾತ್ಮಕ ಮಾತುಗಳಿರಲಿ.ಅವನು ಜಾಣಮರಿ , ಚೆನ್ನಾಗಿ ಉಣ್ಣುತ್ತಾನೆ,ಶಕ್ತಿವಂತನಾಗುತ್ತಾನೆ ..ಈ ರೀತಿಯಾಗಿ
ಪ್ರೋತ್ಸಾಹದ ನುಡಿಗಳಿರಲಿ.
ಹೀಗೆ ಹಲವಾರು ತಂತ್ರಗಳನ್ನು ಮನಸಿನಲ್ಲಿಟ್ಟುಕೊಂಡು ತಾಯಿ ಮಕ್ಕಳಿಗೆ ಆಹಾರ ನೀಡುತ್ತಿದ್ದರೆ ಹೊಟ್ಟೆತುಂಬಿಸಲು ಹರಸಾಹಸ ಪಡಬೇಕಾಗಿಲ್ಲ.
✍️..ಅನಿತಾ ಜಿ.ಕೆ.ಭಟ್.
29-08-2020.
No comments:
Post a Comment