Thursday, 27 August 2020

ಯಕ್ಷಗಂಧರ್ವ ರಾಣಿ

 



ಶೀರ್ಷಿಕೆ:-ದೇವಲೋಕದ ಗಂಧರ್ವಯಕ್ಷರಾಣಿ Vs ಭೂಲೋಕದ ಯಕ್ಷಸುಂದರಿ.


ಭೂಲೋಕದ ಮಾಯಾನಗರಿಯಲ್ಲಿ ವಾಸಿಸುತ್ತಿರುವ ಯಕ್ಷಸುಂದರಿ ತನ್ನ ಅನುಯಾಯಿ ಯಕ್ಷಿಣಿ,ಯಕ್ಷಕಿನ್ನರರ ಸಭೆಯನ್ನು ಕರೆದಿದ್ದಳು.  ಎಲ್ಲರೂ ಆಗಮಿಸುತ್ತಿದ್ದರೂ ಯಕ್ಷ ಸುಂದರಿ ಯಾವುದೋ ಚಿಂತೆಯ ಸುಳಿಯಲ್ಲಿ ಸಿಲುಕಿದಂತೆ ಅತ್ತಿಂದಿತ್ತ ಶತಪಥ ತಿರುಗುತ್ತಿದ್ದಳು .. ಆಕೆಯ ಸಹಾಯಕ ಮುಖ್ಯ ಕಿನ್ನರ ಯಕ್ಷ ಸುಂದರಿಯ ಬಳಿ ಬಂದು
"ಯಕ್ಷ ಸುಂದರಿ.. ಎಲ್ಲರೂ ಆಗಮಿಸಿದ್ದಾರೆ ನೀವು ವೇದಿಕೆಯೇರುವುದನ್ನು ಕಾಯುತ್ತಿದ್ದಾರೆ"
"ಮುಖ್ಯ ಕಿನ್ನರ ..ಭ್ರೂಂ ಭ್ರಾಂ ಭ್ರೌಂ... ನನ್ನ ತಲೆ ಹೋಳಾಗುತ್ತಿದೆ.ಸಮಸ್ಯೆಗೊಂದು ಪರಿಹಾರ ದೊರೆತರೆ ಮಾತ್ರ ಅಪಾಯದಿಂದ ಪಾರಾಗಬಹುದು .."
ಮುಖ್ಯ ಕಿನ್ನರ ಮಾತು ಮುಂದುವರಿಸುತ್ತಾ "ಯಕ್ಷಸುಂದರಿ ನಾಡಿನಾದ್ಯಂತ ಇರುವ ನಿಮ್ಮ ಅನುಯಾಯಿಗಳು ಆಗಮಿಸಿದ್ದಾರೆ .. ಏನಾದರೂ ಸಲಹೆ ಸಿಗಬಹುದು ಬನ್ನಿ.. ಮಾತೆ"ಎನ್ನುತ್ತಾ ಯಕ್ಷ ಸುಂದರಿಯನ್ನು ಗೌರವದಿಂದ ವೇದಿಕೆಯ ಬಳಿ ಕರೆದುಕೊಂಡು ಹೋದನು.

ಸುತ್ತಲೂ ಮುಳ್ಳು ಗಿಡಗಂಟಿಗಳು ಬೆಳೆದ ದೊಡ್ಡ ಬಂಡೆಯೇ ವೇದಿಕೆ. ಕೆಳಗಡೆ ಹರಡಿಕೊಂಡಿರುವ ಪುಟ್ಟ ಪುಟ್ಟ ಬಂಡೆಕಲ್ಲುಗಳ ಮೇಲೆ ಅನುಯಾಯಿಗಳು ಆಸೀನರಾಗಿದ್ದಾರೆ.ಎಲ್ಲರ ಮುಖದಲ್ಲೂ ಭಯ ಎದ್ದು ತೋರುತ್ತಿದೆ . ಮಡಕೆಯಲ್ಲಿ ಯಕ್ಷರಸ ಪಾನೀಯವನ್ನು ಅಲ್ಲಲ್ಲಿ ಇರಿಸಲಾಗಿತ್ತು.ಅದನ್ನು ಕುಡಿದು  ..ಭ್ರೂಂ ಭ್ರಾಂ ಭ್ರೌಂ..ಎಂದಾಗ ವಿಶೇಷ ಶಕ್ತಿಯೊಂದು ಮೈಮೇಲೆ ಹರಿದಾಡಿದಂತಾಗಿ ಹೊಸ ಲೋಕಕ್ಕೆ ಕಾಲಿಟ್ಟಂತಾಗುತ್ತಿತ್ತು.

ಯಕ್ಷ ಸುಂದರಿಯನ್ನು ಕಂಡಾಗ ಎಲ್ಲರೂ ಎದ್ದು ನಿಂತು .."ಭ್ರೂಂ ಭ್ರಾಂ ಭ್ರೌಂ.."
ಎಂದು ಉದ್ಗರಿಸಿದರು. ಪ್ರತಿಯೊಬ್ಬರ ಕಣ್ಣಮುಂದೆಯೂ ಯಕ್ಷಸುಂದರಿ ಬಂದು ನಿಂತು ಕಣ್ಣಿನಲ್ಲಿ ಒಂದು ಕಾಂತಿ ಝಳಪಿಸಿ ತಮ್ಮೆಡೆಗೆ ಹರಿಸಿದಂತೆ ಭಾಸವಾಗುತ್ತಿತ್ತು."ನನ್ನ ಪ್ರೀತಿಯ ಯಕ್ಷ ಕಿನ್ನರರೇ,ಅನುಯಾಯಿಗಳೇ ದೇವಲೋಕದ ಗಂಧರ್ವಯಕ್ಷರಾಣಿ ನಮ್ಮ ಲೋಕಕ್ಕೆ ಪಾದಾರ್ಪಣೆ ಮಾಡುವ ಸೂಚನೆ ನನ್ನ ವಿಶೇಷ ಶಕ್ತಿಯಿಂದ ತಿಳಿದುಬಂದಿದೆ. ಈ ಹಿಂದೆ ನಾಲ್ಕು ಬಾರಿ ತಡೆದಿದ್ದೆ. ಇದು 5ನೇ ಬಾರಿ. ಈ ಬಾರಿ ತಡೆಯಲು ಹೊಸ ಉಪಾಯ ಕಂಡು ಹಿಡಿಯುವುದು ಅಗತ್ಯವಾಗಿದೆ. ಒಂದು ಸಾರಿ ಪ್ರಯೋಗಿಸಿದ ತಂತ್ರ ಮತ್ತೊಮ್ಮೆ ಫಲಿಸದು. ಈಗ ನಿಮ್ಮ ಸಹಕಾರ,ಹೊಸ ಉಪಾಯ ನನಗೆ ಬೇಕು..ನೀವು ಏನು ಉಪಾಯ ಸೂಚಿಸುತ್ತೀರಿ..?"

"..ಭ್ರೂಂ ಭ್ರಾಂ ಭ್ರೌಂ.." ಎಂಬ ಉದ್ಗಾರ ಸಭೆಯಿಂದ ಬಂತು. ಯಾರೂ ಎದ್ದು ನಿಲ್ಲುವ ಲಕ್ಷಣ ಕಾಣಲಿಲ್ಲ. "ಯಾರೂ ಇಲ್ಲವೇ..? ನನ್ನ ಅನುಯಾಯಿಗಳಲ್ಲಿ ಬುದ್ಧಿವಂತರು..!!" ಎಂದು ಕೇಳುತ್ತಿದ್ದಂತೆ ಕೊನೆಯ ಸಾಲಿನಲ್ಲಿ ಕುಳಿತಿದ್ದ ಮುದಿ ಯಕ್ಷಿಣಿ ಮೆಲ್ಲನೆ ಎದ್ದು ನಿಂತಳು. "ಹ್ಹ..ಹ್ಹ..ಹ್ಹ.. ಇವಳೇನು ಮಹಾ?" ಎಂಬಂತಹ ತಾತ್ಸಾರದ ನೋಟ ಯಕ್ಷ ಸುಂದರಿಯ ಕಡೆಯಿಂದ ಬಂತು.

"ಯಕ್ಷ ಸುಂದರಿಗೆ ಪ್ರಣಾಮಗಳು. ನಾನು ಅಮರಾಪಟ್ಟಣದ ಯಕ್ಷಿಣಿ .ದೇವಲೋಕದ ಗಂಧರ್ವಯಕ್ಷರಾಣಿ ಬಂದಾಗ ಸತ್ಕಾರಕ್ಕೆ ಸುಗಂಧಭರಿತ ,ವಿಷಪೂರಿತ 'ಮೃತ್ಯುಫಲ'ವನ್ನು ನೀಡೋಣ .ನಮ್ಮ ಪಟ್ಟಣದಲ್ಲಿ ಬೆಟ್ಟವೊಂದರ ತುದಿಯಲ್ಲಿ 'ಮೃತ್ಯುಫಲ'ದ ಮರವಿದೆ .ಆ ಬೆಟ್ಟದ ಬುಡದಲ್ಲಿನ ಗುಹೆಯಲ್ಲಿ ಧ್ಯಾನ ಮಾಡುತ್ತಿರುವ ಗುಹಾಬಾಬಾ ಕೇಳುವ ಪ್ರಶ್ನೆಗಳಿಗೆ ಉತ್ತರಿಸಿ ಅವರನ್ನು ಸಂತೃಪ್ತಿ ಪಡಿಸಿದವರು ಮಾತ್ರ ಫಲಗಳನ್ನು ಕೊಯ್ದು ತರಬಹುದು."
"ಹೌದೇ ..? ಹಾಗಾದರೆ ಇನ್ನೇಕೆ ತಡ.. ಈ ಕಾರ್ಯಕ್ಕೆ ಯಾರೆಲ್ಲ ಸಿದ್ಧವಿದ್ದೀರಿ..?"

ಎಲ್ಲರೂ ಮುಖ ಮುಖ ನೋಡಿಕೊಂಡರು. ಎಲ್ಲಿಯಾದರೂ ಗುಹಾಬಾಬಾನ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಸೋತರೆ ,ಯಕ್ಷಸುಂದರಿಯು ನಮ್ಮನ್ನು ಶಿಕ್ಷಿಸದೆ ಬಿಡಲಾರಳು ಎಂಬ ಭಯ ಎಲ್ಲರಿಗೂ ಕಾಡಿತು. ಯಕ್ಷ ಸುಂದರಿ ತನ್ನ ಮುಖ್ಯ ಕಿನ್ನರನನ್ನು ಕರೆದು"ಯಾರೂ ಮುಂದೆ ಬರುತ್ತಿಲ್ಲ.. ನಾನೇ ಈ ಕೆಲಸ ಮಾಡುತ್ತೇನೆ. ಮುಖ್ಯ ಕಿನ್ನರ... ನೀನು ಹಾಗೂ ನಿನ್ನ ಸಹಾಯಕ ಕಿನ್ನರ ..ಇಬ್ಬರೂ ನನ್ನ ಜೊತೆಗೆ ಬನ್ನಿ."

"ಅಪ್ಪಣೆಯಾಗಲಿ..ಯಕ್ಷಸುಂದರಿ"ಎನ್ನುತ್ತಾ ಬಾಗಿದ.

ಮುದಿ ಯಕ್ಷಿಣಿ ದಾರಿ ತೋರಿಸಿದಲ್ಲಿ ಸಾಗಿ ಅಮರಾಪಟ್ಟಣಕ್ಕೆ ತಲುಪಿದರು.ಬೆಟ್ಟದ ಬುಡದಲ್ಲಿರುವ ಗುಹೆಯ ಜಾಗಕ್ಕೆ ಎಲ್ಲರೂ  ಬಂದರು . ಹೊರಗೆ ನಿಂತಿದ್ದ ಗುಹಾ ಬಾಬಾನ ಬಂಟರು "ಬಾಬಾ ಧ್ಯಾನದಲ್ಲಿದ್ದಾರೆ.ಒಬ್ಬರು ಒಳಗಡೆ ಹೋಗಿ ಸ್ವಲ್ಪ ಹೊತ್ತು ಧ್ಯಾನ ಮಾಡಿ. ಆಗ ಮಾತನಾಡುತ್ತಾರೆ "ಎಂದರು. ಯಕ್ಷ ಸುಂದರಿ ಒಳಗಡೆ ತೆರಳಿದಳು.ಯಕ್ಷ ಕಿಂಕರರು ಹೊರಗಡೆ ಕಾದರು.

**********

ದೇವಲೋಕದ ಗಂಧರ್ವಯಕ್ಷರಾಣಿಗೆ ಭೂಲೋಕದಿಂದ ದೂರುಗಳು ಬರುತ್ತಿದ್ದವು. ಜನರು ಭೂಲೋಕದ ಯಕ್ಷಸುಂದರಿಯ ಕಿರುಕುಳದಿಂದ ಬೇಸತ್ತಿದ್ದರು. ಸಾಮಾನ್ಯ ಜನರಿಗೂ ತೊಂದರೆ ನೀಡಿ ತನಗೆ ಬೇಕಾದಂತೆ ನಡೆಸಿಕೊಳ್ಳುತ್ತಿದ್ದಳು ಭೂಲೋಕದ ಯಕ್ಷಸುಂದರಿ.ಅಷ್ಟೇ ಅಲ್ಲ ಗಂಧರ್ವಯಕ್ಷರಾಣಿಯ ಭೂಲೋಕದ ಅನುಯಾಯಿಗಳನ್ನು ಕೂಡ ಬಲಾತ್ಕಾರದಿಂದ ತನ್ನ ಮುಷ್ಟಿಯೊಳಗೆ ಇಟ್ಟುಕೊಂಡಿದ್ದಳು. ತನ್ನ ಅನುಯಾಯಿಗಳನ್ನು ಮತ್ತು ಸಾಮಾನ್ಯ ಜನರನ್ನು ರಕ್ಷಿಸುವ ಸಲುವಾಗಿ ಗಂಧರ್ವಯಕ್ಷರಾಣಿ ಭೂಲೋಕದತ್ತ ಸಂಚಾರ ಹೊರಟರು. ಜೊತೆಗೆ ಆಕೆಯ ಸಹಚರರ ದಂಡೂ ಇದ್ದಿತು. "ಕಿಂ...ಕಿಣಿ...ಕಿಣಿ .....'ಪಂಚಮಂ ಕಾರ್ಯಸಿದ್ಧಿ'ಎಂಬ ಮಾತಿದೆ . ಮೊದಲು ನಾಲ್ಕು ಬಾರಿ ಭೂಲೋಕ ತಲುಪಲು ಸಾಧ್ಯವಾಗದೆ ಹಿಂದಿರುಗಬೇಕಾಯಿತು. ಈ ಬಾರಿ ತಪೋನಿರತಳಾಗಿ ಶಕ್ತಿ ಪಡೆದುಕೊಂಡು ಹೊರಟಿದ್ದೇನೆ.. ನೋಡೋಣ."ಎಂದರು ಗಂಧರ್ವಯಕ್ಷರಾಣಿ.

"ಯಕ್ಷರಾಣಿ ..ಈ ಮೊದಲು ಏನೇನು ಅಡೆತಡೆ ಬಂದಿತ್ತು..?" ಎಂದು ಅನುಯಾಯಿಯೊಬ್ಬ ಕೇಳಿದ.

"ನಮ್ಮ ಬರುವಿಕೆಯು ಭೂಲೋಕದ ಯಕ್ಷಸುಂದರಿಗೆ ತಿಳಿದುಬಿಡುತ್ತಿತ್ತು.ಪ್ರತಿತಂತ್ರ ಪ್ರಯೋಗಿಸುತ್ತಿದ್ದಳು. ಒಮ್ಮೆ ಬೃಹತ್ತಾದ ಜೇನುಹಿಂಡು ಅಟ್ಟಾಡಿಸಿಕೊಂಡು ಬಂದಿದ್ದವು, ಮತ್ತೊಮ್ಮೆ ಕಾರ್ಮೋಡಗಳು ನಮ್ಮ ದಾರಿಗೆ ಅಡ್ಡವಾಗಿದ್ದವು, ಇನ್ನೊಮ್ಮೆ ರಣಹದ್ದುಗಳು ನಮ್ಮನ್ನು ಕುಕ್ಕುವಂತೆ ಅಟ್ಟಿಸಿಕೊಂಡು ಬಂದಿದ್ದವು. ನಾಲ್ಕನೇ ಬಾರಿ ಕಣ್ಣುಕೋರೈಸುವ ವಿದ್ಯುದ್ದೀಪಗಳಿಂದ ನಮ್ಮ ಕಣ್ಣುಗಳು ಮಂಜಾಗಿ ಮುಂದಿನ ದಾರಿ ಕಾಣದೆ ಹಿಂದಿರುಗಬೇಕಾಯಿತು. ಈ ಬಾರಿ ಗೆಲ್ಲಲೇಬೇಕು .ಭೂಲೋಕದಲ್ಲಿ ಯಕ್ಷಸುಂದರಿಯಿಂದ ನನ್ನ ಅನುಯಾಯಿಗಳನ್ನು ಮತ್ತು ಮುಗ್ಧಜನರನ್ನು ರಕ್ಷಿಸಬೇಕು."

"ಸರಿ ಗಂಧರ್ವಯಕ್ಷರಾಣಿ ..ನಿಮಗೆ ಜಯವಾಗಲಿ"
ಕಿಂ...ಕಿಣಿ...ಕಿಣಿ..ಎನ್ನುತ್ತಾ ಭೂಲೋಕದತ್ತ ಹೊರಟರು.

*********

"ಯಕ್ಷ ಸುಂದರಿ... ಯಕ್ಷ ಸುಂದರಿ.. " ಗುಹೆಯ ಹೊರಗಿನಿಂದ ಕೂಗುತ್ತಿದ್ದಾನೆ ಮುಖ್ಯ ಕಿನ್ನರ. ಗುಹಾ ಬಾಬಾ ಧ್ಯಾನದಿಂದೆದ್ದು ಯಕ್ಷಸುಂದರಿಯತ್ತ ಒಂದು ತೀಕ್ಷ್ಣ ನೋಟ ಹರಿಸಿದ.ಅಷ್ಟರಲ್ಲಿ ಹೊರಗಿನಿಂದ ಕರೆಯುವುದು ಕೇಳಿ ಕಿರಿಕಿರಿ ಅನುಭವಿಸುತ್ತಾ "ಯಾರದು ..?" ಎಂದು ಗಡುಸಾಗಿ ಕೇಳಿದ..

"ಅದು ನನ್ನ ಸಹಚರನ ದನಿ.."
"ಇಲ್ಲಿ ದನಿಯೆತ್ತಿ ಕೂಗುವಂತಿಲ್ಲ..ಇಲ್ಲಿ ನಿದ್ರಿಸಿದ ಆತ್ಮಗಳಿಗೆ ತೊಂದರೆಯಾಗುತ್ತದೆ. ನಿಯಮ ಪಾಲಿಸದವರಿಗೆ ಇಲ್ಲಿ ಜಾಗವಿಲ್ಲ ..ನಡೆಯಿರಿ.."

"ಇಲ್ಲ ಬಾಬಾ ..ಮುಂದೆ ಹೀಗಾಗಲ್ಲ.. ನಾನು ಇಲ್ಲಿಂದಲೇ ಅವನಿಗೆ ವಿಶೇಷ ಶಕ್ತಿಯ ಮೂಲಕ ತಿಳಿ ಹೇಳುತ್ತೇನೆ ..ದಯಮಾಡಿ.. ನೀವು ಪ್ರಶ್ನೆಗಳನ್ನು ಕೇಳಿ..ಉತ್ತರಿಸಲು ಸಿದ್ಧಳಿದ್ದೇನೆ.."

"ಆ ಸ್ವರದಿಂದ ಇಲ್ಲಿನ ಶಕ್ತಿ ಸಂಚಯನ ಏರುಪೇರಾಗಿದೆ ..ಹೊರಡಿ ಇಲ್ಲಿಂದ.." ಕ್ರುದ್ಧನಾದ..ಬಾಬಾ.. ಬೇರೆ ದಾರಿಯಿಲ್ಲದೆ ಹೊರಬಂದಳು ಯಕ್ಷಸುಂದರಿ..

"ಯಕ್ಷ ಸುಂದರಿ..ಯಕ್ಷಸುಂದರಿ... ಗಂಧರ್ವಯಕ್ಷರಾಣಿ ಭೂಲೋಕದತ್ತ ಹೊರಟಿದ್ದಾರಂತೆ...ಬೇಗ 'ಮೃತ್ಯುಫಲ' ಕೊಯ್ಯೋಣ ..ಬನ್ನಿ ಹೊರಡೋಣ .."ಎಂದ ಮುಖ್ಯ ಕಿನ್ನರ..

"ನನ್ನಲ್ಲಿ ಇನ್ನೊಮ್ಮೆ ಮಾತನಾಡಬೇಡ.. ನಿನ್ನ ಈ ಆತುರ ಗುಣದಿಂದ ಎಲ್ಲವೂ ಹಾಳಾಯಿತು.. ಬಾಬಾ ಪ್ರಶ್ನೆ ಕೇಳಲಿಲ್ಲ.."

"ಪ್ರಶ್ನೆ ಕೇಳದಿದ್ದರೆ ಏನಂತೆ ..ನಾವು ಬೆಟ್ಟವೇರಿ ಮೃತ್ಯುಫಲವನ್ನು ಕೊಯ್ದುಕೊಳ್ಳೋಣ.."
ಎನ್ನುತ್ತಿದ್ದಂತೆ ಗುಹೆಯೊಳಗಿನಿಂದ ಬೆಂಕಿಯುಂಡೆ ಒಂದು ಹೊರಬಂದು ಮುಖ್ಯ ಕಿನ್ನರನ ಮೇಲೆ ಬಿದ್ದಿತ್ತು. ಆತ ಬೊಬ್ಬಿಡುತ್ತಾ ಪ್ರಾಣತೆತ್ತ.
ಮುದಿ ಯಕ್ಷಿಣೆ "ಇಲ್ಲಿ ನಿಯಮವನ್ನು ಪಾಲಿಸದವರಿಗೆ ಉಳಿಗಾಲವಿಲ್ಲ. ಯಕ್ಷಸುಂದರಿ.. ನಾವು ಗುಹಾಬಾಬಾನ ಒಪ್ಪಿಗೆಯಿಲ್ಲದೆ 'ಮೃತ್ಯುಫಲ'ವನ್ನು ಕೊಯ್ಯುವುದು ಸಾಧ್ಯವಿಲ್ಲ.. ನೀವು ನಿಮ್ಮ ಮಾಯಾನಗರಿಗೆ ಹಿಂದಿರುಗಿ.."ಎಂದರು.
ನಿರಾಶಾಭಾವದಿಂದ ಇನ್ನೇನಾದರೂ ಉಪಾಯ ಹೊಳೆಯುತ್ತದೆಯೇ ಎಂದು ಚಿಂತಿಸುತ್ತಾ ಯಕ್ಷಸುಂದರಿ ಉಳಿದ ಒಬ್ಬ ಸಹಚರರೊಂದಿಗೆ ಮಾಯಾನಗರಿಗೆ ಹಿಂತಿರುಗಿದಳು.

***********

ಗಂಧರ್ವಯಕ್ಷರಾಣಿ ತನ್ನ ಸಹಚರರೊಂದಿಗೆ ಭೂಲೋಕಕ್ಕೆ ಪಾದಾರ್ಪಣೆ ಮಾಡಿದ್ದಾಯಿತು. "ಓಹೋ.. ಈ ದಿನ ನನ್ನ ಪಾಲಿಗೆ ಸೂರ್ಯ ಪಶ್ಚಿಮದಲ್ಲಿ ಉದಯಿಸಿದ್ದಾನೆ" ಎನ್ನುತ್ತಾ ಪ್ರಕೃತಿ ಸಿರಿಯನ್ನು ನೋಡಿ ಬೆರಗುಗಣ್ಣಿನಿಂದ ಆಸ್ವಾದಿಸುತ್ತಾ ವಿಹಾರ ಹೊರಟಳು.ಎಲ್ಲೆಲ್ಲೂ ಹಸಿರಿನಿಂದ ಕಂಗೊಳಿಸುತ್ತಿದ್ದ ಧರಣಿದೇವಿ ಚಿಲಿಪಿಲಿಗುಟ್ಟುತ್ತಿರುವ ಪಕ್ಷಿಸಂಕುಲ, ಅಂಬಾಕಾರಗೈಯುತ್ತಿರುವ ಗೋವುಗಳು, ರಸಭರಿತ ಫಲಗಳನ್ನು ತುಂಬಿ ಬಾಗಿರುವಂತಹ ವೃಕ್ಷಗಳು, ಸುಗಂಧಭರಿತ ಹೂಗಳನ್ನು ಆಘ್ರಾಣಿಸುತ್ತಾ ಉಲ್ಲಸಿತಳಾದಳು. ಗಂಧರ್ವಯಕ್ಷರಾಣಿ ಬಂದಿರುವ ಸುದ್ದಿ ಭೂಲೋಕದಲ್ಲೆಡೆ ಮಿಂಚಿನಂತೆ ಪಸರಿಸಿತು. ಸುದ್ದಿ ತಿಳಿದ ಆಕೆಯ ಅನುಯಾಯಿಗಳು ಆಕೆಯ ಭೇಟಿಗೆಂದು ಆಗಮಿಸಿದರು. ಮಾಯಾನಗರಿಯ ಯಕ್ಷಸುಂದರಿ  ಕೊಡುತ್ತಿರುವ ಕಾಟಗಳನ್ನು ಹೇಳಿ ಕಣ್ಣೀರು ಸುರಿಸಿದರು." ನಮ್ಮನ್ನು ಅವಳಿಂದ ಪಾರುಮಾಡಿ" ಎಂದು ಗೋಳಿಟ್ಟರು. "ಕಿಂ...ಕಿಣಿ...ಕಿಣಿ..ಇನ್ನು ಮುಂದೆ ಅವಳ ಆಟ ನಡೆಯದು" ಎಂದು  ಗಂಧರ್ವಯಕ್ಷರಾಣಿ ಅಭಯವಿತ್ತರು.

ಇದನ್ನರಿತ ಭೂಲೋಕದ ಮಾಯಾನಗರಿಯ ಯಕ್ಷಸುಂದರಿ ಮೋಸದ ಸಂಚು ರೂಪಿಸಿ ಗಂಧರ್ವಯಕ್ಷರಾಣಿಯನ್ನು ಮಾಯಾನಗರಿಗೆ ಕರೆಸಿಕೊಂಡರು.ಗಂಧರ್ವಯಕ್ಷರಾಣಿ ಬರುತ್ತಿದ್ದಂತೆಯೇ ಮಾಯಾನಗರಿಯ ತುಂಬಾ ಹೊಗೆ ಹಾಕಿ ಉಸಿರುಗಟ್ಟಿಸುವ ತಂತ್ರ ನಡೆಸಿದ್ದರು. ಗಂಧರ್ವಯಕ್ಷರಾಣಿ ತನ್ನ ತಪೋಶಕ್ತಿಯಿಂದ ಅದನ್ನು ಭೇದಿಸಿ ಆತಿಥ್ಯ ಸ್ವೀಕರಿಸಿ ತೆರಳಿದಾಗ.. ತನ್ನಿಂತಾನೇ ಮಾಯಾನಗರಿಗೆ ಹೊಗೆ ಮುತ್ತಿಕೊಂಡಿತು. ಭೂಲೋಕದ ಯಕ್ಷಸುಂದರಿ ಮತ್ತು ಆಕೆಯ ಅನುಯಾಯಿಗಳಾದ ಕಿಂಕರರು ಹೊಗೆಯಿಂದ ಹೊರಬರಲಾಗದೆ ಉಸಿರುಗಟ್ಟಿ ಚಡಪಡಿಸಿದರು. ಸಹಾಯಕ್ಕಾಗಿ ಗಂಧರ್ವಯಕ್ಷರಾಣಿಯನ್ನು ಕೋರಿಕೊಂಡರು. "ಯಕ್ಷ ವಿದ್ಯೆಯನ್ನು ಬಳಸಿ ಯಾರಿಗೂ ತೊಂದರೆ ಕೊಡುವುದಿಲ್ಲ ಎಂಬ ಮಾತಿಗೆ ಒಪ್ಪಿದರೆ ಮಾತ್ರ ಪಾರುಮಾಡುವೆ "ಎಂದು ಗಂಧರ್ವಯಕ್ಷರಾಣಿ ಷರತ್ತು ವಿಧಿಸಿದಳು.
ಬೇರೆ ದಾರಿಯಿಲ್ಲದೆ ತನ್ನ ತಪ್ಪನ್ನು ಒಪ್ಪಿಕೊಂಡು, ಮುಂದೆ ತಿದ್ದಿಕೊಳ್ಳುತ್ತೇನೆ ಎಂದಳು ಭೂಲೋಕದ ಮಾಯಾನಗರಿಯ ಯಕ್ಷಸುಂದರಿ...ಗಂಧರ್ವಯಕ್ಷರಾಣಿ ಕಿಂ ಕಿಣಿ ಕಿಣಿ ಎನ್ನುತ್ತಾ ತನ್ನ ತಪೋಶಕ್ತಿಯನ್ನು ಬಳಸಿ ಹೊಗೆಯಿಂದ ಭೂಲೋಕದ ಯಕ್ಷಸುಂದರಿ ಮತ್ತು ಆಕೆಯ ಅನುಯಾಯಿಗಳನ್ನು ಕಾಪಾಡಿದಳು. "ನಿಜವಾಗಿಯೂ ಇಂದು  ನನ್ನ ಪಾಲಿಗೆ ಸೂರ್ಯ ಪಶ್ಚಿಮದಲ್ಲಿ ಹುಟ್ಟಿ ಪೂರ್ವದಲ್ಲಿ ಮುಳುಗಿದ್ದಾನೆ ..ಬಹಳ ದಿನಗಳಿಂದ ಸಾಧ್ಯವಾಗದ ಕಾರ್ಯವಿಂದು ನೆರವೇರಿದೆ.." ಎನ್ನುತ್ತಾ ಗಂಧರ್ವಲೋಕಕ್ಕೆ ವಾಪಾಸಾದರು.

✍️...ಅನಿತಾ ಜಿ.ಕೆ.ಭಟ್.
26-08-2020.

Momspresso Kannada_ವಾರದ ಬ್ಲಾಗಿಂಗ್ ಸ್ಪರ್ಧೆ-fantasy story-ಆ ದಿನ ಸೂರ್ಯ ಪಶ್ಚಿಮದಲ್ಲಿ ಹುಟ್ಟಿ ಪೂರ್ವದಲ್ಲಿ ಮುಳುಗಿದ್ದಾನೆ.

2 comments: