Wednesday, 19 August 2020

ನ್ಯಾನೋ ಕಥೆಗಳು/nano stories/ಪುಟ್ಟ ಕಥೆಗಳು

 

ನ್ಯಾನೋ ಕಥೆಗಳು

1.ಸಹಪಠ್ಯಚಟುವಟಿಕೆ

ತನ್ನ ಮಗಳು ಪಠ್ಯ ಸಹಪಠ್ಯಚಟುವಟಿಕೆಗಳಲ್ಲಿ
ಮೊದಲಿಗಳಾಗಬೇಕು ಎಂದು ಬಯಸಿದ್ದರು ಶಿಕ್ಷಕಿ ತಾಯಿ.ಓದು ಮುಗಿಯುತ್ತಿದ್ದಂತೆ ಹೆತ್ತವರಿಗೆ ತಿಳಿಸದೆ ಪ್ರೇಮವಿವಾಹವಾಗಿ ವಿದೇಶಕ್ಕೆ ಹಾರಿದ್ದಳು.

ಸಹಪಠ್ಯಚಟುವಟಿಕೆಯಲ್ಲಿ ಮುಂಚೂಣಿಯಲ್ಲಿದ್ದಳು ಮಗಳು !!!

              ******

2.ಸ್ವಚ್ಛತಾಪಾಠ

ನಾನು ನಡೆಯುತ್ತಿದ್ದಾಗ ಆಕೆ ಮಾರ್ಗಕ್ಕೆ ಪಿಚಕ್ಕೆಂದು ಕಸವನ್ನೆಸೆದು ದಢಾರನೆ ಬಾಗಿಲೆಳೆದುಕೊಂಡಳು. ಹೆಜ್ಜೆ ಹಿಂದಿಟ್ಟೆ.ಕಸದ ಲಾರಿ "ಸಾರ್ವಜನಿಕ ಸ್ಥಳಗಳಲ್ಲಿ ಕಸವನ್ನೆಸೆಯುವುದು ಶಿಕ್ಷಾರ್ಹ ಅಪರಾಧ" ಎಂದರಚುತ್ತಾ ನನ್ನ ಹಿಂದೆಯೇ ಬಂದಿತ್ತು.

                  *****

3.ದುಡ್ಡು

ಸದಾ ದುಡ್ಡು ಕೂಡಿಡುತ್ತಾ ' ದುಡ್ಡೇ ಮುಖ್ಯ' ಎನ್ನುತ್ತಿದ್ದ.ರೌಡಿಗಳು ಅವನನ್ನು ಒತ್ತೆಯಾಳಾಗಿಟ್ಟು ಹಣದ ಬೇಡಿಕೆಯಿಟ್ಟರು.ಈಗ ಮನೆಯವರಲ್ಲಿ  "ಬೇಗ ಹಣ ಕೊಡಿ ನನ್ನ 'ಪ್ರಾಣ ಮುಖ್ಯ' .."ಎನ್ನುತ್ತಿದ್ದಾನೆ.

           .   *****
4.ತೃಪ್ತಿ

"ಮಮ್ಮೀ..ಈ ಡ್ರೆಸ್ ಹಳತಾಗಿದೆ"ಎಂದು ಸಿಡುಕಿನಿಂದೆಸೆದ ಬೆಲೆಬಾಳುವ ಮೆದು ಅಂಗಿಯನ್ನೊಮ್ಮೆ ಸವರಿದಳು ಮನೆಕೆಲಸದಾಕೆ.ಮನೆಗೆ ತೆರಳಿದಾಗ ಹರಿದ, ಬಣ್ಣಮಾಸಿದ ಅಂಗಿಯತೊಟ್ಟು ನಗುನಗುತ್ತಾ ಅಮ್ಮನನ್ನು ಎದುರುಗೊಂಡಳು ಮಗಳು.(ಇದು ಪ್ರತಿಲಿಪಿಯ ನನ್ನದೇ ಹನಿಕಥೆಯ ಸಣ್ಣರೂಪ)

                *****

5.ರಾಜಿ

''ರಾಜೀ..'' ಎನ್ನುತ್ತಾ ಹಿಂದೆ ಸುತ್ತುತ್ತಿದ್ದವನೊಡನೆ  ಓದುಮೊಟಕುಗೊಳಿಸಿ ಹೆತ್ತವರನ್ನು ತ್ಯಜಿಸಿ ವಿವಾಹವಾದಳು.ತನ್ನ ಹಠ ಸ್ವಭಾವದೊಂದಿಗೆ 'ರಾಜಿ'ಯಾಗದಾತ ಕೈಗೆರಡು ಮಕ್ಕಳನ್ನು,ವಿಚ್ಛೇದನ ಪತ್ರವನ್ನೂ ನೀಡಿದ.ಅವಳಿಗೀಗ ತವರಿನೊಂದಿಗೆ 'ರಾಜಿ'ಯಾಗಲೇಬೇಕಾದ ಅನಿವಾರ್ಯತೆ .

             ******

6.ಅಂತರಂಗ-ಬಹಿರಂಗ

ಸುಂದರವಾಗಿ ಅಲಂಕರಿಸಿಕೊಂಡು ತನ್ನ ಹನ್ನೆರಡರ ಆಸುಪಾಸಿನ ಮಗನೊಂದಿಗೆ ಲೇಡೀಸ್ ಸೀಟಿನಲ್ಲಿ ಕುಳಿತಿದ್ದಳಾಕೆ.ಮಗುವನ್ನೆತ್ತಿಕೊಂಡು ಬಸ್ಸೇರಿದ ಮಹಿಳೆಯತ್ತ ಮುಖಸಿಂಡರಿಸಿ ನೋಡಿದಾಗ, ಅರುವತ್ತರ ಹರಕಲಂಗಿಯವನೆದ್ದು ಆಸನವ ನೀಡಿದ.

           ******

7.ಬೆಲೆ

ಸಿರಿವಂತ ,ಮಕ್ಕಳು ಕೇಳಿದ್ದೆಲ್ಲವನ್ನೂ ಕೊಡಿಸುತ್ತಿದ್ದ.ಬಡವ ,ಮಕ್ಕಳಿಗೆ ಅಗತ್ಯವಾದದ್ದನ್ನು ಕೊಡಿಸಲೂ ಹರಸಾಹಸಪಡುತ್ತಿದ್ದ.ಶ್ರೀಮಂತನೀಗ ವೃದ್ಧಾಶ್ರಮದಲ್ಲಿದ್ದಾನೆ.ಬಡವ ತನ್ನ ವಿದ್ಯಾವಂತ, ಸಂಸ್ಕಾರವಂತ ಮಕ್ಕಳೊಡನೆ ಸುಖವಾಗಿ ಬಾಳುತ್ತಿದ್ದಾನೆ.

           *****

8.ಕೀಳರಿಮೆ

ಸಮಾರಂಭಗಳಲ್ಲಿ ಕಂಡ ಎಲ್ಲರ ರೂಪದಲ್ಲೂ ಓರೆಕೋರೆಗಳನ್ನು ಹುಡುಕಿ ಆಡುತ್ತಿದ್ದಳಾಕೆ.ತನ್ನ ಮಗನ ಗೃಹಪ್ರವೇಶದ ದಿನ ರೂಮಿನೊಳಗೆ ಅಳುಕುತ್ತಾ ಕುಳಿತಿದ್ದಳು,ತಾನು ಕುರೂಪಿಯೆಂದು..!!

                 ******

9.ಚುರುಕು

ಆತ ತನ್ನ ಆಫೀಸಿನ ಸಹಾಯಕಿಯ ಚುರುಕುತನವನ್ನು ಹೊಗಳುತ್ತಿದ್ದ.ಚುಟುಕು ಕಾರ್ಯಾಚರಣೆ ನಡೆಸಿದ ಮಡದಿ, ಇಬ್ಬರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಾಗಲೇ ಮಡದಿಯ ಚುರುಕುತನ ಅರಿವಾದದ್ದು ಆತನಿಗೆ ..!!

                 ******
10.ಮುಟ್ಟು

ನವವಧು ಅಳುಕುತ್ತಾ ನಾಚುತ್ತಾ '' ನಾ ಮುಟ್ಟು'' ಅಂದಾಗ ...
ಮುಟ್ಟಲಾಗದೆ ಪರಿತಪಿಸುತ್ತಾ ಮಾರು ದೂರ ನಿಂತು ಮಡದಿಯನ್ನು ನೋಡಿದ ಪತಿರಾಯ..😥
(ಜೀವನ ಮೈತ್ರಿ ಧಾರಾವಾಹಿಯ ಒಂದು ಸನ್ನಿವೇಶ)

           *****
11.ದಪ್ಪ

ಆ ಹುಡುಗಿ ದಪ್ಪ ,ನನಗೆ ಬೇಡವೆಂದವ ಬಳುಕುವ ಬಳ್ಳಿಯಂತಹವಳನ್ನು ಮದುವೆಯಾದ.ಅವಳ ಪ್ರೀತಿಯಡುಗೆಯುಂಡು ಆತ ದಪ್ಪವಾಗುತ್ತಲೇ ಹೋದ..

         ****

12.ಅವಕಾಶ

ಮಕ್ಕಳಿಬ್ಬರಿಗೂ ಹಣ್ಣನ್ನು ಸಮಪಾಲು ಮಾಡಿ ಕೊಟ್ಟಿದ್ದಳು ಅಮ್ಮ.ಅಣ್ಣ ನೆಪ ಹಿಡಿದು ಹಠ ಮಾಡುತ್ತಲೇ ಕುಳಿತ.ತಮ್ಮ ತನ್ನದನ್ನು ತಿಂದು,ಅಣ್ಣನತ್ತ ಬಾಗಿ ಅವನದನ್ನೂ ತಿಂದು ಮುಗಿಸಿ ಆಡತೊಡಗಿದ.

          ****

13.ನಂಬಿಕೆ

ಗುಡುಗು ಮಿಂಚಿನ ಮಳೆಯಾಗುತ್ತದೆ ಎಂದಿತು ಹವಾಮಾನ ವರದಿ.ಗದ್ದೆ ಹಸನುಮಾಡಿದ ರೈತ ಕಾಯುತ್ತಲೇ ಇದ್ದ.

             *****

14.ಮಾನ-ಸ್ಥಾನಮಾನ

ಸಿಡುಕುವಾಗಲೆಲ್ಲ ನಿನಗೆ 'ಮಾನ' ಮರ್ಯಾದೆ ಇಲ್ಲ ಎಂದು ಹಂಗಿಸುತ್ತಿದ್ದ ಉಂಡಾಡಿ ಗಂಡ.ನೊಂದ ಆಕೆ ಉದ್ಯೋಗ ಆರಂಭಿಸಿ ,ಹಣ ಸಂಪಾದನೆ ಮಾಡಿ ಮನೆತನಕ್ಕೆ 'ಸ್ಥಾನಮಾನ' ತಂದುಕೊಟ್ಟಳು.

                  *****

15.ತೆಗಳು-ಹೊಗಳು

ಹೆಣ್ಣು ಮಗು ಎಂದು ಮೂದಲಿಸುತ್ತಿದ್ದ ಅತ್ತೆ.ಜತನದಿಂದ ಸೊಸೆ ಮಗಳನ್ನು ಸಾಕಿದಳು.ಅವಳು ಸಾಧನೆಗೈದಾಗ ನನ್ನ ಮೊಮ್ಮಗಳು ಎನ್ನುತ್ತಾ ಎದೆತಟ್ಟಿಕೊಂಡರು ಅದೇ ಅತ್ತೆ.

              ******

16.ಭಾಷೆಯ ಅವಾಂತರ

ಹೂ ಕಟ್ಟು ಎಂದಿದ್ದಳು ಅಮ್ಮ ಆಂಗ್ಲಮಾಧ್ಯಮ ದಲ್ಲಿ ಓದುತ್ತಿರುವ ಮಗಳಲ್ಲಿ.ಕತ್ತರಿ ತಂದು ಹೂ ಕಟ್ ಮಾಡಿದಳು ಅಮ್ಮನ ಆಜ್ಞಾಪಾಲಕಿ ಮಗಳು.

          *****

✍️... ಅನಿತಾ ಜಿ.ಕೆ.ಭಟ್.
19-08-2020.

ಚಿತ್ರ ಕೃಪೆ : ಅಂತರ್ಜಾಲ

ಪುಟ್ಟ ಪುಟ್ಟ ಕಥೆ ಬರೆಯುವ ಸ್ಪರ್ಧೆಯೊಂದಕ್ಕಾಗಿ ಬರೆದ ಕಥೆಗಳು.

4 comments: