Saturday, 15 August 2020

ಅವಳ ಸ್ವಗತ

 

        ಅವಳ ಸ್ವಗತ

ನೂರು ಹಿರಿಯರ ಹಾರೈಕೆಗಳಲಿ
ಸೇರಿ ನಡೆದ ಒಲವಿದು
ಆರ ನಯನವು ಸೋಕಿತೇನೋ
ಕರವ ಸಡಿಲಿಸಿ ಸಾಗಲಿಂದು||೧||

ನಗುವ ಮಂಟಪ ಕಟ್ಟಿ ಒಲವ
ತೂಗುಮಂಚದಿ ನೀ ತೂಗಿಹೆ
ಭಗವಂತ ಬರೆದ ವಿಧಿಯ ಬರಹವ
ತಿದ್ದಲಾರದೆ ನಾ ಕೊರಗಿಹೆ||೨||

ಮಿಡಿದ ಕಂಬನಿ ಎದೆಗೆ ಇಳಿದಿದೆ
ಸ್ತಬ್ಧವಾಗಿಸಿ ಪ್ರತಿಕ್ಷಣ
ನುಡಿದ ಮಾತಿನ ಮೆಲುಕು ಹಾಕುತ
ನನ್ನ ಮನವಿದು ತಲ್ಲಣ||೩||

ಬಾಳ ಶರಧಿಯ ಸುಳಿಯ ನಡುವೆ
ಒಂಟಿಯಾಗಿಸಿ ನಡೆದೆಯಾ
ಹೇಳತೀರದ ಮನದ ವೇದನೆ
ಅರಿಯುವವನೇ ಸರಿದೆಯಾ||೪||

ಬರಡು ಹೃದಯ ಕುರುಡು ಮನವು
ಕೊರಡಿನಂದದಿ ತನುವಿದು
ಕರುಳ ಕುಡಿಯ ಬೆರಳು ಸೋಕಲು
ಕರುಣೆ ಕಿರಣವು ಮೂಡಿದೆ||೫||

ಭಾವಸುರಭಿಯ ಬಂಧಿಯಾಗಿಸಿ
ಬದುಕೊ ದಾರಿಯ ಅರಸುವೆ
ದಿನಗಳುರುಳುತ ಶೋಕಮರೆತು
ಬಾಳಪಯಣಕೆ ಹೆಗಲ ನೀಡುವೆ||೬||

ನೀಲ ಮೇಘದ ಕಾಣದಂಚಲಿ
ನೀನಿರುವೆಯೆಂಬ ಕಲ್ಪನೆ
ಕಾಲ ಸಾಗುತ ಲೆಕ್ಕ ಮುಗಿಯುತ
ಬಂದು ಸೇರುವೆ ನಿನ್ನನೆ||೭||

✍️... ಅನಿತಾ ಜಿ.ಕೆ.ಭಟ್.
05-08-2020.

No comments:

Post a Comment