Wednesday, 5 August 2020

ಶ್ರಾವಣ ಸಂಭ್ರಮ



              ಶ್ರಾವಣ ಸಂಭ್ರಮ
             
ಶ್ರಾವಣ ಮಾಸದಲಿ ನವವಧುವಿನ ಸಂಭ್ರಮ, ಸಡಗರ 
                       💐💐

ಧರೆಯಲಿ ಶ್ರಾವಣ|ಹಸಿರಿನ ತೋರಣ|
ಹಬ್ಬದ ಹೂರಣ ಸಾಲಾಗಿ||
ತವರಿಲಿ ನವವಧು|ಸಖನನು ಕಾಣಲು
ನಾಚುತ ಕೆನ್ನೆಯು ಕೆಂಪಾಗಿ||೧||

ವಿರಹವು ಕಳೆದು|ಹರುಷವು ತಳೆದು|
ಪಂಚಮಿ ಹಬ್ಬದ ಸಂಭ್ರಮದಿ||
ತನಿಯನು ಎರೆದು|ಭ್ರಾತೃ ಪ್ರೇಮವ ಮೆರೆದು
ಸವಿಭೋಜನಗೈದರು ಸಂತಸದಿ||೨||

ಮಂಗಳಗೌರಿ ವರ|ಮಹಾಲಕುಮಿ ಶಿವನ
ವ್ರತದಲಿ ಶ್ರದ್ಧಾಭಕ್ತಿ ಸಡಗರವು||
ಕೈಬಳೆ ಕಿಣಿಕಿಣಿ|ಇನಿಯನ ಕಣ್ಮಣಿ
ಕಣಕಣದಲಿ ನವಚೇತನವು||೩||

ಅರಳುವ ಸುಮಗಳು|ಮೇಳೈಸಿದೆ ವನಸಿರಿ|
ಮೋಡದ ತುಂತುರು ಕಂಪಿನಲಿ||
ಬಗೆ ಬಗೆ ಉಂಡೆ|ನೈವೇದ್ಯವ ನೀಡಿ|
ತೂಗುತ ಶ್ರೀ ಕೃಷ್ಣನ ತೊಟ್ಟಿಲಲಿ||೪||

ಅಣ್ಣತಂಗಿಯ ಬಂಧ|ಸವಿನೆನಪನು ಬೆಸೆಯಿತು|
ಬಂದಿಹ ರಕ್ಷಾಬಂಧನವು||
ತಾಂಬೂಲವ ಮೆಲ್ಲುತ|ಕೃಷಿ ಖುಷಿ ಬಯಸುತ|
ಅರಳಿದೆ ಗರತಿಯ ಮೈಮನವು||೫||


✍️ ಅನಿತಾ ಜಿ.ಕೆ.ಭಟ್.
06-08-2020.


         

2 comments: