Thursday, 27 August 2020

ಮಳೆಹನಿಯ ಕಹಾನಿ

 



ಮಳೆಹನಿಯ ಕಹಾನಿ


   ಬಾಲ್ಯದ ನೆನಪಿನ ಪುಟ ತೆರೆದು ಮಳೆಯ ಸಿಹಿಕಹಿ ಅನುಭವಗಳ ಬಗ್ಗೆ ಬರೆಯಲು ಹೊರಟರೆ ತುಂತುರು ಹನಿಯಿಂದ ಆರಂಭಿಸಿ ಹನಿಕಡಿಯದ ವರ್ಷಧಾರೆಯೇ ಆಗಬಹುದು.ಮಳೆಯೆಂದರೆ ಹಾಗೆನೇ ಭಾವಗಳ ಮಳೆ, ಪ್ರೀತಿ ಕಾರಂಜಿ ಸುರಿಸಿದ ಮಳೆ,ನೀರಾಟವಾಡಿ ಅಮ್ಮನ ಬೈಗುಳದ ಸುರಿಮಳೆ, ಅನಾರೋಗ್ಯದ ಹೈರಾಣಗಳು..


     ನಮ್ಮ ಕರಾವಳಿಯಲ್ಲಿ ಮಳೆಯ ಅಬ್ಬರ ಜೋರು. ಮೇ ತಿಂಗಳಲ್ಲೇ ಗುಡುಗು ಸಿಡಿಲು ಮಿಂಚಿನ ಆರ್ಭಟ ಆರಂಭವಾಗುತ್ತದೆ.ಮಳೆ ಸುರಿಯುವ ಲಕ್ಷಣಗಳು ಕಂಡಾಗ ಅಂಗಳದಲ್ಲಿ ಹರವಿದ್ದ ಹಲಸಿನ ಹಪ್ಪಳ,ಗೇರುಬೀಜ,ಅಲ್ಪ ಸ್ವಲ್ಪ ಅಡಿಕೆ, ಪುನರ್ಪುಳಿ/ಕೋಕಂ ಸಿಪ್ಪೆ... ಎಲ್ಲವನ್ನೂ ಗಡಿಬಿಡಿಯಿಂದ ಒಳಗೊಯ್ಯುವುದೂ ಒಂದು ಸವಾಲಿನ ಕೆಲಸ.ಅತಿಕಡಿಮೆ ಅವಧಿಯಲ್ಲಿ ನಡೆಯಬೇಕಾದ ಈ ಕೆಲಸಗಳಿಗೆ ಹಿರಿಕಿರಿಯರೆನ್ನದೆ ಎಲ್ಲರೂ ಕೈಜೋಡಿಸುವುದರಲ್ಲೂ ಆನಂದವಿದೆ. ಒಳಗೊಯ್ಯುವ ಮೊದಲೇ ಧೋ..ಎಂದು ಮಳೆ ಸುರಿದರೆ ಮನದೊಳಗೆ ಒಂಥರಾ ನಿರಾಸೆಯ ಭಾವ..ಮೊದಲ ಮಳೆ ಹನಿ ಕಾದ ಇಳೆಯ ಮಡಿಲಿಗೆ ಬಿದ್ದಾಗ ಹೊರಸೂಸುವ ಪರಿಮಳ ಆಘ್ರಾಣಿಸಲು ಮೈಯ ಕಣಕಣವೆಲ್ಲಾ ಪುಳಕ..ಮಳೆ ಬಿದ್ದು ಒಂದೆರಡು ದಿನ ಕಳೆಯುತ್ತಿದ್ದಂತೆ ಚಿಗುರುವ ಹುಲ್ಲುಗಳು ಕಣ್ಣಿಗೆ ಸೊಬಗನುಣಿಸುತ್ತವೆ.ಸೆಕೆ ವಿಪರೀತವಿದ್ದು ಮಳೆ ಬರುವ ಸೂಚನೆಯೆಂದು ಹೇಳಲಾಗುವ ಪುಟ್ಟ ಮಿಡತೆಗಳ ಹಾರಾಟ..ಅಬ್ಬಾ ..!! ಮಣ್ಣಿನೆಡೆಯ ಸಣ್ಣ ತೂತಿನೊಳಗಿಂದ ಹೊರಬರುವ ಅವುಗಳ ದಂಡು ನೋಡಿದರೆ ಆಶ್ಚರ್ಯವಾಗುತ್ತದೆ.ಸಣ್ಣ ಜಾಗದಲ್ಲಿ ಹೊಂದಾಣಿಕೆಯಿಂದ ಬದುಕುವ ಅವುಗಳನ್ನು ನೋಡಿ ನಾವು ಕಲಿಯುವುದು ಸಾಕಷ್ಟಿದೆ. ಹೊರಗಡೆ ವಿದ್ಯುದ್ದೀಪಗಳಿಂದ ಆಕರ್ಷಿಸಲ್ಪಟ್ಟು ರಾಶಿ  ರಾಶಿ ಹುಳಗಳು ಕೆಳಗುರುಳುವಾಗ ಮನಸಿಗೆ ಸಂಕಟ.



      ವರ್ಷದ ನಾಲ್ಕು ತಿಂಗಳು ಮಳೆಯಾಗಿ ಮತ್ತೂ ಎರಡು ತಿಂಗಳು ಆಗಾಗ ಮಳೆ ಕಾಣಿಸಿಕೊಳ್ಳುತ್ತದೆ.ಭೂದೇವಿ ಹಸಿರುಟ್ಟು ಕಂಗೊಳಿಸುವ ದೃಶ್ಯ ಆಹ್ಲಾದಕರ.ಹಳ್ಳ ಕೊಳ್ಳಗಳು,ತೋಡು, ನದಿಗಳು ಕೆನ್ನೀರಿನಿಂದ ಉಕ್ಕಿ ಹರಿಯುತ್ತವೆ.ಅಂಗಳದ ಪಕ್ಕದಲ್ಲಿ ಮಾಡಿದ ಪುಟ್ಟ ಕಣಿಯಲ್ಲಿ ತುಂಬ ಶುಭ್ರನೀರು.ಸಂಭ್ರಮದಿಂದ ಓಡುವ ಪುಟ್ಟ ಮೀನುಗಳು.ಇಂತಹ ಕಣಿಗಳಲ್ಲಿ ಅನ್ನದ ಪಾತ್ರೆ,ಇಡ್ಲಿತಟ್ಟೆ,ಸೇಮಿಗೆ ಗೊಣೆ ಎಲ್ಲವನ್ನು ನೆನೆಯಲು ಹಾಕಿದರೆ ನೆನೆದಂತೆಯೂ ಆಯಿತು,ಮೀನಿಗೆ ಆಹಾರವೂ ಆಯಿತು ಎಂಬ ಉದಾರ ಬುದ್ಧಿ ಮನೆಯ ಹೆಣ್ಣುಮಕ್ಕಳದು.


      ಕರಾವಳಿ ಬೆಟ್ಟ ಗುಡ್ಡಗಳ ಪ್ರದೇಶ.ಮನೆಗಳು ಗುಡ್ಡದ ಭಾಗದಲ್ಲಿದ್ದು ಕೆಳಗಿನ ಭಾಗದಲ್ಲಿ ಅಡಿಕೆ ತೋಟ, ತೆಂಗಿನ ತೋಟ,ಸಮತಟ್ಟಾದ ಜಾಗದಲ್ಲಿ ಭತ್ತದ ಗದ್ದೆಗಳು ಇರುವುದು ಸಾಮಾನ್ಯವಾಗಿ ಕಂಡುಬರುವ ಸಂಗತಿ.ನಮ್ಮ ಮನೆ ಕೂಡ ಇದೇ ರೀತಿ ಇತ್ತು,ಇದೆ.ಮಳೆಗಾಲದ ದಿನಗಳಲ್ಲಿ ನಾವು ಶಾಲೆಯಿಂದ ಬಂದ ಕೂಡಲೇ ಕಾಗದದ ದೋಣಿ ನೀರಲ್ಲಿ ಬಿಡುವುದು ಸಾಮಾನ್ಯವಾಗಿತ್ತು. ಶನಿವಾರದಂದು ಶಾಲೆ ಅರ್ಧ ದಿನ.ಮಧ್ಯಾಹ್ನ ಮನೆಗೆ ಬಂದು ಊಟ ಮಾಡಿ ಮನೆಯಿಂದ ಕೆಳಗಿಳಿದು ತೋಟ ಗದ್ದೆಗಳಿಗೆ ತೆರಳಿದರೆ ಬರುತ್ತಿದ್ದುದು ಹಿರಿಯರ ಕೂ...ಎಂಬ ಕರೆ ಕೇಳಿದ ಮೇಲೆ.ಗುಡ್ಡ ಪ್ರದೇಶದಲ್ಲಿ ಮರಗಳ ನಡುವೆ ಇಂಗಿದ ಮಳೆಯ ನೀರು ತೋಟ ಗದ್ದೆಗಳಲ್ಲಿ ಒಸರಾಗಿ ಝುಳು ಝುಳು ನಿನಾದದೊಂದಿಗೆ ಹರಿಯುತ್ತಿತ್ತು.ಶುಭ್ರನೀರಿನ ಪುಟ್ಟ ಪುಟ್ಟ ಝರಿಗಳು ನಮ್ಮ ಆಟಕೆ ಸಾಕ್ಷಿಯಾಗಿ ಕೆಂಪೇರುತ್ತಿದ್ದವು.


        ನೀರ ಝರಿಗಳಲ್ಲಿ ಪುಟ್ಟ ಪುಟ್ಟ ಮೀನುಗಳು... ಅವುಗಳಿಗೆ ಬಟ್ಟೆಹಾರಿಸುವುದು ..ಏನೋ ತಿನ್ನಲು ಸಿಗಬಹುದೆಂದು ಅವು ಆಸೆಪಟ್ಟು ಬಂದಾಗ ಬಟ್ಟೆಯ ಬದಿ ಹಿಡಿದು ಮೇಲೆತ್ತುವುದು ... ಹೀಗೆ ಮೀನಿನ ಮರಿಗಳಿಗೆ ಕಾಟ ಕೊಡುತ್ತಿದ್ದೆವು..ಮತ್ತೆ ನೀರಿಗೆ ಬಿಡುವಾಗ ಅವುಗಳು ನೀರಿಗೆ ಧುಮುಕುವುದು ನೋಡಿ ಖುಷಿ ಪಡುತ್ತಿದ್ದೆವು.

ಕಪ್ಪೆ ಮರಿಗಳು, ದೊಡ್ಡ ಕಪ್ಪೆಗಳು ವಟಗುಟ್ಟಿದರೆ ಕೇಳಲು ಏನೋ ಆನಂದ.ಆಗಾಗ ಆಮೆಗಳು ಕಾಣಸಿಗುತ್ತಿದ್ದವು.ಏಡಿಗಳು (ಡೆಂಜಿಗಳು) ಕಂಡರೆ ಅದೇನೋ ಭಯವಾಗುತ್ತಿತ್ತು. ನೀರೊಳ್ಳೆಗಳು ನಮ್ಮನ್ನು ಕಂಡು ಹೆದರಿ ಓಡುತ್ತಿದ್ದವು.


        ಮಳೆಗಾಲದಲ್ಲಿ ಅಪ್ಪ ಹಲಸಿನ ಹಣ್ಣು ಕೊಯಿದು ತಂದು ಜಗುಲಿಯ ಬದಿಯಲ್ಲಿ ಸಾಲಾಗಿ ಇರಿಸಿದರೆ ನೋಡುವುದೇ ಚೆಂದ.ಅಡುಗೆಯಲ್ಲಿ ಹಲಸಿನದ್ದೇ ಅಬ್ಬರ.ಹಲಸಿನ ಕಾಯಿ ಪಲ್ಯ, ದೋಸೆ,ಸೋಂಟೆ/ಚಿಪ್ಸ್ (ಹಲಸಿನ ಸೊಳೆಯನ್ನು ತೆಳ್ಳಗೆ ಸಿಗಿದು ಎಣ್ಣೆಯಲ್ಲಿ ಕರಿದ ತಿಂಡಿ),ಹಲಸಿನ ಹಣ್ಣಿನ ಕಡುಬು,ಗೆಣಸಲೆ, ಸುಟ್ಟವು, ಗುಳಿ ಅಪ್ಪ... ಹೀಗೆ ಹಲಸಿನ ಹಣ್ಣಿನ ಗತ್ತೇ ಬೇರೆ.ಕೆಸುವಿನ ಎಲೆಯಿಂದ ತಯಾರಿಸಿದ ಪತ್ರೊಡೆ ಆಟಿ ತಿಂಗಳ ವಿಶೇಷ ತಿಂಡಿ.



    ವಿಪರೀತ ಮಳೆಗೆ ಬಟ್ಟೆಗಳು ಒಣಗುವುದೇ ಇಲ್ಲ.ಆಗ ಮನೆಯ ಒಳಗಿನ ಬೆಚ್ಚನೆಯ ಗೂಡಿನಂತಹ ಅಡುಗೆಕೋಣೆಯಲ್ಲಿ ಬಟ್ಟೆಳನ್ನೆಲ್ಲಾ ಹಾಕಿ ಒಲೆಯಲ್ಲಿ ಹಲಸಿನ ಹಣ್ಣಿನ ಕಡುಬು ಮಾಡಿಟ್ಟು  ಬೆಂಕಿ ಹಾಕುತ್ತಿದ್ದುದು ಸಾಮಾನ್ಯ.ಬೆಳಗಿನ ತಿಂಡಿಯೂ ಆಯ್ತು..ಬಟ್ಟೆಯೂ ಒಣಗಿತು..ಎರಡೂ ಕೆಲಸ ಒಟ್ಟಿಗೆ ಆಗುತ್ತಿತ್ತು.ಈಗ ವಾಷಿಂಗ್ ಮೆಷಿನ್ ಬಂದಿರುವುದರಿಂದ ಸ್ವಲ್ಪ ಮಟ್ಟಿಗೆ ಅನುಕೂಲ ವಾಗಿದೆ.ಮಳೆಗೆ ಕರೆಂಟ್ ಕೈಕೊಡುವುದು ಸಾಮಾನ್ಯ ಸಂಗತಿ.ಒಮ್ಮೆ ಕರೆಂಟ್ ಹೋದರೆ ಮತ್ತೆ ಬರಲು ಎರಡು ಮೂರು ದಿನಗಳು ಬೇಕು.ಅಮ್ಮನಿಗೆ  ಹಿಟ್ಟುಕಡೆಯಲು ರುಬ್ಬುವ ಕಲ್ಲೇ  ಸಂಗಾತಿ ಆಗಿಬಿಡುತ್ತಿತ್ತು.


      ನಮ್ಮ ಕಡೆ ತೋಡುಗಳಿಗೆ (ಚಿಕ್ಕ ನದಿಗಳು) ಮಳೆಗಾಲದಲ್ಲಿ ಕಾಲು ಸಂಕ ಹಾಕುತ್ತಾರೆ.ಇಂತಹ ಉದ್ದವಾದ ಕಾಲುಸಂಕದಲ್ಲಿ ದಾಟುವುದೆಂದರೆ ನನಗೆ ಎಲ್ಲಿಲ್ಲದ ಭಯ.ತಲೆತಿರುಗಿದಂತೆ ಆಗುತ್ತದೆ..

ಸಂಕದಲ್ಲಿ ಅರ್ಧಕ್ಕೆ ಮುಟ್ಟಿದಾಗ ಅದು ಆಚೆಈಚೆ ತೊಯ್ದಾಡಿದಂತಾಗ ಏನೇನೋ ಕೆಟ್ಟ ಆಲೋಚನೆಗಳು.. ಹಿರಿಯರ ಕೈ ಹಿಡಿದ ಇನ್ನೊಂದು ದಡ ಮುಟ್ಟಿದಾಗ ಅಬ್ಬಾ..!! ಎಂಬ ನಿಟ್ಟುಸಿರು..ಸಂಕ ಸಣ್ಣದಾದರೆ ಖುಷಿಯಿಂದ ದಾಟುತ್ತಿದ್ದೆ.


      ಅಡಿಕೆ ಕೃಷಿಕರಿಗೆ ಮಳೆಗಾಲದಲ್ಲಿ ಕೊಳೆರೋಗದ ಚಿಂತೆ.ಔಷಧ ಸಿಂಡಿಸುವ ತರಾತುರಿ,ತಾಪತ್ರಯ.ಔಷಧವನ್ನು ಮಳೆ ಕಡಿಮೆ ಇರುವ ಸಾಧ್ಯತೆ ಕಂಡರೆ ತಯಾರಿಸಬೇಕು.ಸಿಂಪಡಿಸುವ ಕೂಲಿಯಾಳುಗಳೂ ಆ ಸಂದರ್ಭದಲ್ಲಿ ಒದಗಬೇಕು.ಔಷಧ ಸಿಂಪಡನೆಗೆ ತಯಾರಾದಾಗ ಮಳೆ ಸುರಿದರೆ,ಸಿಂಪಡಿಸಿದ ಔಷಧಿ ಕಾಲು ಗಂಟೆಯಾದರೂ ಒಣಗುವ ಮುನ್ನ ಮಳೆ ಬಂದರೆ ಅವರ ಪ್ರಯತ್ನ ಎಲ್ಲವೂ ವ್ಯರ್ಥ..ನೀರಮೇಲೆ ಹೋಮ ಮಾಡಿದಂತೆ..

ಔಷಧ ತಯಾರಿಸಿದಾಗ ಮಳೆಯಿಂದಾಗಿ ಸಿಂಪಡಿಸಲು ಸಾಧ್ಯವಾಗದಿದ್ದರೆ ಔಷಧವನ್ನು ಚೆಲ್ಲಬೇಕಷ್ಟೆ..ಮರುದಿನ ಬಳಸುವಂತಿಲ್ಲ.ಔಷಧ ತಯಾರಿಸುವಾಗ ಸಣ್ಣಕ್ಕೆ ಬಿಸಿನೀರು ಸುರಿವಾಗ ಹೊರಬರುವ ಕಟು ಘಾಟಿಗೆ ಉಸಿರುಗಟ್ಟಿದಂತಾಗುತ್ತಿತ್ತು.ಆದರೂ ಹತ್ತಿರ ನಿಂತು ಸುಣ್ಣದಿಂದ ಮೇಲೇಳುವ ಗುಳ್ಳೆಗಳನ್ನು ನೋಡುವ ತವಕವಿತ್ತು.


       ಹೋರಿಗಳನ್ನು ಕಟ್ಟಿ ಗದ್ದೆ ಉಳುಮೆ ಮಾಡುತ್ತಿದ್ದ ನೆನಪು ಹಸಿರಾಗಿದೆ. ಓಬೇಲೇ..ಎನ್ನುತ್ತಾ ನೇಜಿ ನೆಡುತ್ತಿದ್ದ ಕೊರಪೋಳು,ತಿಮ್ಮಕ್ಕ ,ಪಾರೋತಿ ,ಕಮಲಿ,ಚಂದ್ರಿ ಈಗ ನೆನಪಿನ ಪುಟಗಳಲ್ಲಿ ಅಚ್ಚೊತ್ತಿ ನಿಂತಿದ್ದಾರೆ.ಈಗ ಎತ್ತಿನ ಜಾಗಕ್ಕೆ ಯಂತ್ರವು ಬಂದಿದೆ..ಹೆಂಗಸರ ಪಾಡ್ದನ ಮಾಯವಾಗಿದೆ.


     ಈಗ ಸಂಪೂರ್ಣ ಚಿತ್ರಣವೇ ಬದಲಾಗಿದೆ..ಹಳ್ಳಿಯಿಂದ ಪಟ್ಟಣದಂಚಿಗೆ ಪಯಣ ಸಾಗಿದೆ.ಸುತ್ತಲೂ ಕಣ್ಮನ ಸೆಳೆಯುವ ಹಸಿರ ಸಿರಿಯಿದೆ ಎಂಬ ಸಮಾಧಾನವಿದೆ.

ಒಮ್ಮೊಮ್ಮೆ ಸುರಿವ ಮಳೆಯಲ್ಲಿ  ಮನೆಯಂಗಳದಲ್ಲಿ  ಆಡಲು ನನ್ನ ಮಕ್ಕಳಿಗೂ ಸಮ್ಮತಿಸುತ್ತೇನೆ.. ನಾವು ಸಂಭ್ರಮಿಸಿದಂತೆ ಮಕ್ಕಳೂ ಮಳೆಗೆ ನೆನೆದು ಖುಷಿಯಿಂದ ಕೇಕೆ ಹಾಕುತ್ತಾರೆ.ಶೀತ ,ನೆಗಡಿ ಬಂದರೆ ಎಂಬ ಭಯವಿದ್ದರೂ ..ಅವರ ನೆನಪಿನ ಬುಟ್ಟಿಯೊಳಗೆ ಮಳೆಯ ನೆನಪುಗಳು ಹಸಿರಾಗಿರಲಿ ಎಂಬ ಆಶಯದೊಂದಿಗೆ ಈ ಅಮ್ಮ ಮಕ್ಕಳಾಟವನ್ನು ನೋಡುತ್ತಾ ಸಂಭ್ರಮಿಸುತ್ತಾಳೆ.



✍️... ಅನಿತಾ ಜಿ.ಕೆ.ಭಟ್.

27-08-2020.


No comments:

Post a Comment