Monday, 11 May 2020

ಹಿತ್ತಲ ಗಿಡಗಳು-ರಾಮಫಲ ಮತ್ತು ದೊಡ್ಡ ಪತ್ರೆ



ಹಿತ್ತಲ ಗಿಡಗಳು-ರಾಮಫಲ, ದೊಡ್ಡ ಪತ್ರೆ


     ಅಂಗಳದ ಅಂಚಿನಲ್ಲಿ ಬೆಳೆಸಿದ ಸಸ್ಯಗಳು ವಾತಾವರಣವನ್ನು ಶುದ್ಧಗೊಳಿಸುವುದಲ್ಲದೆ ಹಲವು ವಿಶೇಷ ಔಷಧೀಯ ಗುಣಗಳನ್ನು ಹೊಂದಿವೆ.ಅವುಗಳನ್ನು ಹುಡುಕುತ್ತಾ ಸಾಗಿದರೆ ನಾವು ಬೆರಗಾಗುವುದು ನಿಶ್ಚಿತ.



ರಾಮಫಲ:-

        ರಾಮಫಲವು ಒಂದು ಪೌರಾಣಿಕ ಹಿನ್ನೆಲೆ ಇರುವ ಹಣ್ಣು.ರಾಮಫಲ ವೃಕ್ಷವು ಸಾಮಾನ್ಯವಾಗಿ ಮೇ,ಜೂನ್ ತಿಂಗಳಲ್ಲಿ ಹೂ ಬಿಡಲು ಆರಂಭವಾಗುತ್ತದೆ.ನವೆಂಬರ್ ನಿಂದ ಫೆಬ್ರವರಿ, ಮಾರ್ಚ್ ತನಕ ಹಣ್ಣುಗಳನ್ನು ಕೊಡುತ್ತದೆ.ವೈಜ್ಞಾನಿಕ ಹೆಸರು..Annona reticulata.



         ಹಣ್ಣಿನ ಮೈಲ್ಮೈ ನುಣುಪಾಗಿದ್ದು ಬಲಿತಾಗ ಬಣ್ಣದಲ್ಲೇ ತಿಳಿಯುವುದು.ಕೊಯ್ದಿಟ್ಟು ಎರಡು ಮೂರು ದಿನದಲ್ಲಿ ಹಣ್ಣಾದರೆ ಬಹಳ ರುಚಿಯಾಗಿರುತ್ತದೆ.ಹಣ್ಣಾದ ಮೇಲೆಯೇ ಮರದಿಂದ ಕೀಳಲು ಹೊರಟರೆ ಹಣ್ಣು ಮುದ್ದೆಯಾಗಿಬಿಡುವಷ್ಟು ಮೆದುವಾಗಿರುವುದು.ಒಳಗೆ ಐಸ್ಕ್ರೀಮ್ ನಂತಹ ಸಿಹಿರುಚಿಯ ತಿರುಳಿದ್ದು ಅಲ್ಲಲ್ಲಿ ಕಪ್ಪು ಬೀಜಗಳು ಎದ್ದು ಕಾಣುತ್ತವೆ.ಬೀಜದಿಂದ ಸಸಿಗಳು ಹುಟ್ಟುತ್ತವೆ.




       ಹಣ್ಣಿನಲ್ಲಿ ಯಥೇಚ್ಛವಾಗಿ ವಿಟಮಿನ್ ಸಿ ಮತ್ತು ವಿಟಮಿನ್ ಬಿ6 ಇದೆ.ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಶರೀರದಲ್ಲಿರುವ ಅನವಶ್ಯಕ ಕೊಬ್ಬನ್ನು ನಿಯಂತ್ರಿಸುತ್ತದೆ ಮತ್ತು ರಕ್ತದೊತ್ತಡ ವನ್ನು ಹತೋಟಿಯಲ್ಲಿಡಲು ಸಹಕಾರಿ.


       ಕ್ಯಾಲ್ಸಿಯಂ, ಫಾಸ್ಪರಸ್ ಮತ್ತು ಐರನ್ ಅಂಶಗಳಿವೆ.ಇವು ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುವುದಲ್ಲದೆ ನೋವು ನಿವಾರಕವಾಗಿ ಕೆಲಸ ಮಾಡುತ್ತವೆ.ಹಣ್ಣು ಚರ್ಮದ ಆರೋಗ್ಯ ಕಾಪಾಡಲು ಸಹಕಾರಿ .ಸೌಂದರ್ಯವರ್ಧಕವಾಗಿ ಬಳಸುತ್ತಾರೆ.ಮೊಡವೆಗಳ ಮೇಲೆ ಹಚ್ಚಿಕೊಂಡರೆ ಮೊಡವೆಗಳು ವಾಸಿಯಾಗುತ್ತವಂತೆ.ಫೇಸ್ ಪ್ಯಾಕ್ ಆಗಿ ಕೂಡ ಬಳಸುತ್ತಾರೆ.ಮೂತ್ರಪಿಂಡದ ಕಲ್ಲನ್ನು ನಿವಾರಿಸುವ,ಜಂತುನಾಶಕ ಗುಣವನ್ನು ಹಣ್ಣು ಹೊಂದಿದೆ.


         ತಲೆಕೂದಲಿನ ಸಮಸ್ಯೆಗಳಿಗೆ ಇದರ ತಿರುಳನ್ನು ಬಳಸಿ ಪರಿಹಾರ ಕಂಡುಕೊಳ್ಳುತ್ತಾರೆ.ಎಳೆಯವಯಸ್ಸಿನ ಹೆಣ್ಣುಮಕ್ಕಳಲ್ಲಿ ತಲೆಯಲ್ಲಿ ಹೇನಿದ್ದರೆ ಇದರ ಎಲೆಗಳ ಪೇಸ್ಟ್ ತಯಾರಿಸಿ ಹಚ್ಚಿ ಅರ್ಧಗಂಟೆ ತಲೆಗೆ ಟವೆಲ್ ಸುತ್ತಿ,ನಂತರ ಸ್ನಾನ ಮಾಡಿದರೆ ಹೇನು ಸಾಯುತ್ತದೆ ಎಂದು ಹೇಳುತ್ತಾರೆ.
ಬೀಜದ ಎಣ್ಣೆಯನ್ನು ಕ್ರಿಮಿನಾಶಕವಾಗಿ ಬಳಸುತ್ತಾರೆ.ಇತ್ತೀಚಿನ ಸಂಶೋಧನೆಗಳಿಂದ ರಾಮಫಲವು ಕ್ಯಾನ್ಸರ್ ಬರದಂತೆ ತಡೆಯುತ್ತದೆ ಎಂದು ತಿಳಿದುಬಂದಿದೆ.
ಚಿತ್ರದಲ್ಲಿರುವುದು ಸುಮಾರು ಹನ್ನೆರಡು ವರ್ಷದ ಮರ.... ನವೆಂಬರ್ ನಿಂದ ಫೆಬ್ರವರಿ ತನಕ ಹಣ್ಣುಗಳ ಮಹಾಪೂರ....ಹಣ್ಣಂತೂ ಪೌಷ್ಟಿಕಾಂಶ, ಸವಿರುಚಿಯ ಆಗರ.....

ದೊಡ್ಡ ಪತ್ರೆ /ಸಾಂಬ್ರಾಣಿ:-



         ಸಾಮಾನ್ಯವಾಗಿ ಎಲ್ಲರ ಮನೆಯಂಗಳದಲ್ಲಿ ಇರುವ ಸಸ್ಯ ಸಾಂಬ್ರಾಣಿ/ ದೊಡ್ಡ ಪತ್ರೆ.ಹಸಿರುಬಣ್ಣದ ದಪ್ಪ ಎಲೆಗಳಿರುವ ಪೊದೆಯಾಗಿ ಬೆಳೆಯುವ ಸಸ್ಯವಿದು.ನೀರು ಬಿಸಿಲು ಯಥೇಚ್ಛವಾಗಿ ಸಿಕ್ಕರೆ ಬೇಗನೆ ಬೆಳೆಯುತ್ತದೆ.ಇದರ ವೈಜ್ಞಾನಿಕ ಹೆಸರು plectranthus amboinicus.ಗಿಡದ ಒಂದು ಪುಟ್ಟ ತುಂಡನ್ನು ಮಣ್ಣಿನಲ್ಲಿ ಊರಿದರೂ ಬೆಳೆಯುವ ಸಸ್ಯ.ಸಣ್ಣ ಮಕ್ಕಳಿದ್ದ ಮನೆಯಲ್ಲಿ ಈ ಗಿಡವಿದ್ದರೆ ಒಳ್ಳೆಯದು.ಶೀತ, ಜ್ವರ, ಕೆಮ್ಮು, ಕಫಕ್ಕೆ ರಾಮಬಾಣ.




ಉಪಯೋಗಗಳು:-

*ಶೀತವಿದ್ದಾಗ ಇದರ ನಾಲ್ಕು ಎಲೆಗಳನ್ನು ಬೆಂಕಿಗೊಡ್ಡಿ ಬಾಡಿಸಿ ರಸಹಿಂಡಿ ಒಂದು ಚಮಚ ಜೇನುತುಪ್ಪ ಬೆರೆಸಿ ಸೇವಿಸಿದರೆ ಉಪಶಮನ.


*ಬೆವರುಸಾಲೆ, ತುರಿಕೆ ಕಜ್ಜಿ,ಕಂಬಳಿಹುಳ ಮುಟ್ಟಿದ ತುರಿಕೆ..ಇವುಗಳಿಗೆಲ್ಲ ಈ ಎಲೆಯನ್ನು ಹಾಕಿ ಉಜ್ಜಿದರೆ ಕಡಿಮೆಯಾಗುತ್ತದೆ.


*ಹಳದಿರೋಗವಿರುವವರಿಗೆ ಎರಡು ಚಮಚ ರಸ ಒಂದು ವಾರ ಸೇವಿಸಿದರೆ ಒಳ್ಳೆಯದು.

*ಚೇಳುಕಡಿದರೆ ಇದರ ರಸ ಹಚ್ಚುವ ಕ್ರಮವಿದೆ.

*ಹಸಿ ಎಲೆಯನ್ನು ಉಪ್ಪು ಸೇರಿಸಿ ತಿಂದರೆ ಜೀರ್ಣಶಕ್ತಿ ವೃದ್ಧಿಸುತ್ತದೆ.

*ಎಲೆಯ ರಸವನ್ನು ಮೊಸರಿನೊಂದಿಗೆ ಕಲಸಿ ಮುಖ ಕೈಕಾಲು ಗಳಿಗೆ ಹಚ್ಚಿದರೆ ಕಾಂತಿವರ್ಧಕ.

*ನಾರು, ಜೀವಸತ್ವ ಗಳು,ಕಬ್ಬಿಣಾಂಶವನ್ನು ಹೊಂದಿರುವ ಎಲೆಗಳನ್ನು ಜಗಿದು ತಿನ್ನಬಹುದು, ಸಾಂಬಾರು ಮಾಡಬಹುದು.

*ಎಲೆಗಳಿಂದ ತಂಬುಳಿ ,ಚಟ್ನಿ ತಯಾರಿಸುತ್ತಾರೆ.

*ಎಲೆಯನ್ನು ಕಡಲೆಹಿಟ್ಟಿನಲ್ಲಿ ಅದ್ದಿ ಪೋಡಿ ತಯಾರಿಸುತ್ತಾರೆ.

*ಎಲೆಗಳ ಕಷಾಯಮಾಡಿ ಕುಡಿದರೆ ಕೆಮ್ಮು,ಉಬ್ಬಸ ವಾಸಿಯಾಗುತ್ತದೆ.

*ಎಲೆಗಳನ್ನು ತುಂಡುಮಾಡಿ ಮೊಸರಿನಲ್ಲಿ ಹಾಕಿ.ಟೊಮೆಟೋ, ನೀರುಳ್ಳಿ, ಹಸಿಮೆಣಸು ಹೆಚ್ಚಿ ಹಾಕಿದರೆ ರುಚಿಕರವಾದ ಸಾಂಬ್ರಾಣಿ ಸಲಾಡ್ ತಯಾರಿಸಬಹುದು.




       ಪುಟ್ಟ ಗಿಡವಾದರೂ ಉಪಯೋಗ ಹಲವಾರು.ಫ್ಲ್ಯಾಟಿನಲ್ಲಿ ಇರುವವರೂ ಸಹ ಪಾಟ್ ಗಳಲ್ಲಿ ಬೆಳೆಸಬಹುದು.ನಮ್ಮ ಹಿತ್ತಲಲ್ಲಿ ಇರುವ ಗಿಡಗಳ ಔಷಧೀಯ ಗುಣಗಳು ಅಪಾರ.ಸಸ್ಯಗಳನ್ನು ಬೆಳೆಸಿ ಬಳಸಿ ಆರೋಗ್ಯ ಕಾಪಾಡೋಣ.


✍️... ಅನಿತಾ ಜಿ.ಕೆ.ಭಟ್.
11-05-2020.

2 comments: