Tuesday, 5 May 2020

ಜೀವನ ಮೈತ್ರಿ ಭಾಗ ೭೨(72)




ಜೀವನ ಮೈತ್ರಿ ಭಾಗ ೭೨




            ಗಣೇಶ ಶರ್ಮ ಮಗನೊಂದಿಗೆ ವಾಪಸಾಗಬೇಕು ಎನ್ನುವಷ್ಟರಲ್ಲಿ ಸರ್ರ್... ಎಂದು ಸದ್ದು ಕೇಳಿ ಗರಬಡಿದವರಂತೆ ನಿಂತರು. ಅವರೆದುರು ಹೆಡೆಯೆತ್ತಿ ಬುಸುಗುಡುತ್ತಾ ನಾಗರ ಹಾವೊಂದು ಪ್ರತ್ಯಕ್ಷವಾಯಿತು.. ಕಿಶನ್ ಎರಡು ಹೆಜ್ಜೆ ಹಿಂದೆಯಿಟ್ಟ.ಗಣೇಶ ಶರ್ಮ...
" ನಾಗಪ್ಪಾ... ನಿನಗೆ ಆಗಬೇಕಾದದ್ದು ಮಾಡುತ್ತೇವೆ...ಮಗನ ಮದುವೆ ಆಗಲಿ.ನಂತರ ಶಿಥಿಲವಾದ ನಿನ್ನ ಕಟ್ಟೆಯನ್ನು ಪುನರ್ನಿರ್ಮಾಣ ಮಾಡುತ್ತೇವೆ..ಅಲ್ಲಿವರೆಗೆ ಈ ರೀತಿ ಅಲ್ಲಲ್ಲಿ ಕಾಣಿಸಿಕೊಳ್ಳದೆ ಶಾಂತವಾಗಿರು... " ಎಂದಾಗ ಹೆಡೆಯೆತ್ತಿದ ನಾಗರ ಹೆಡೆ ಕೆಳಗೆ ಹಾಕಿ ಸರ್ರನೆ ಹರಿದು ಮಾಯವಾಯಿತು..


ಶರ್ಮ ಮಗನಲ್ಲಿ "ನಾವು ಹೇಳಿದ್ದು ನಾಗನಿಗೆ ಕೇಳುತ್ತದೆಯೇ ... ಅರ್ಥವಾಗುತ್ತದೆಯೇ ಎಂದು ಕೇಳಿದರೆ ತೊಂದರೆ ಕೊಡದೆ ಸೀದಾ ಸಾಗುತ್ತದೆ ಎಂಬುದಷ್ಟು ಮಾತ್ರ ಸತ್ಯ...ತನಗೆ ಏನಾದರೂ ಆಶೌಚವಾದರೆ,ಕಟ್ಟೆ ಶಿಥಿಲವಾಗಿ ತಂಬಿಲಾದಿಗಳು ಸರಿಯಾಗಿ ನಡೆಯದಿದ್ದರೆ ಕಣ್ಣೆದುರು ಪ್ರತ್ಯಕ್ಷವಾಗಿ ಎಚ್ಚರಿಸುತ್ತದೆ ಎಂಬ ನಂಬಿಕೆ ಕರಾವಳಿಯ ಜನರಲ್ಲಿ.ಮದುವೆಯ ನಂತರ ದೈವದಕಟ್ಟೆ,ನಾಗನಕಟ್ಟೆ ಎಲ್ಲವನ್ನೂ ಪುನರ್ನಿರ್ಮಾಣ ಮಾಡಬೇಕು"ಎಂದು ಹೇಳುತ್ತಾ ಮನೆಯ ಕಡೆಗೆ ಸಾಗಿದರು.


    ಕಿಶನ್ ಮನೆಗೆ ಬಂದು ಅಮ್ಮನಲ್ಲಿ ಹೇಳಿದಾಗ  ಮಮತಾ ಭಯಗೊಂಡು "ನಾಳೆಯೇ ನಾಲ್ಕು ಬೊಂಡ ಕೊಯ್ದು ನಾಗನಕಟ್ಟೆಗೆ ಅಭಿಷೇಕ ಮಾಡಿ ಬನ್ನಿ"ಎಂದು ಗಂಡನಲ್ಲಿ ಹೇಳಿದರು.ಮಡದಿಯ ಮಾತಿಗೆ ಹೂಂ ಗುಟ್ಟಿದರು ಶರ್ಮ.ಕಿಶನ್ ಇದಕ್ಕೂ ಮೊದಲು ನಾಗರ ಹಾವನ್ನು ತನ್ನ ತೋಟದ ಆಸುಪಾಸಿನಲ್ಲಿ ಕಂಡಿದ್ದರೂ ಇಷ್ಟೊಂದು ಉದ್ದವಾದ ನಾಗರಹಾವನ್ನು ಇದೇ ಮೊದಲು ನೋಡಿದ್ದು...ನೋಡಿ ಭಯಗೊಂಡಿದ್ದ.. ಶರ್ಮರಿಗೆ ಮಾತ್ರ ಇದು ಹೊಸದಾಗಿರಲಿಲ್ಲ.
ಮರುದಿನ ಅಪ್ಪ ಮಗ ಇಬ್ಬರೂ ಬೊಂಡಾಭಿಷೇಕ ಮಾಡಿದರು.ಆದರೂ ಕಿಶನ್ ನ ಮನಸಿನಲ್ಲಿ ಮೂಡಿದ ಅಂಜಿಕೆ ಮಾತ್ರ ಕಡಿಮೆಯಾಗಲಿಲ್ಲ.


          *********


         ಶಾಸ್ತ್ರಿ ನಿವಾಸದಲ್ಲಿ ಮದುಮಗಳು ಮೈತ್ರಿ ಗೆ ನಾಂದಿ ಸಮಾರಂಭಕ್ಕೆ ಸಿದ್ಧತೆ ನಡೆಯುತ್ತಿತ್ತು.ನಾಂದಿ ,ಋತುಶಾಂತಿ ಹೋಮ, ಸಂಧಿಶಾಂತಿ ಎಲ್ಲವನ್ನೂ ಜೊತೆಯಾಗಿ ಮಾಡಲು ನಿರ್ಧರಿಸಿದ್ದರು ಶಾಸ್ತ್ರಿಗಳು.ಹತ್ತಾರು ಋತ್ವಿಜರನ್ನು ಆಮಂತ್ರಿಸಲಾಗಿತ್ತು.ಹೋಮಕ್ಕೆ ಬೇಕಾದ ಸಾಮಗ್ರಿಗಳನ್ನು ಹುಡುಕಿ ತಂದು ರೂಢಿಮಾಡಿದರು.ಪರಿಕರ್ಮಿ ಸತ್ಯಣ್ಣ ಮುನ್ನಾ ದಿನವೇ ಆಗಮಿಸಿ ಮರುದಿನದ ಹೋಮಕ್ಕೆ ಬೇಕಾದ ಅಂತಿಮ ಸಿದ್ಧತೆಯನ್ನು ಮಾಡಿದರು.ಅಡಿಗೆ ಕಿಟ್ಟಣ್ಣ ನಾಂದಿ ದಿನ ಬೆಳ್ಳಂಬೆಳಗ್ಗೆ ಬಂದು ಒಲೆಯಲ್ಲಿ ನೀರಿಟ್ಟು  'ಶಾಸ್ತ್ರಿಗಳ ಮಗಳ ಮದುವೆಯ ಹಿಂದೆ ಮುಂದಿನ ಎಲ್ಲಾ ಕಾರ್ಯಕ್ರಮಗಳ ಅಡುಗೆಯೂ ನನ್ನ ಕೈಯಲ್ಲಿ ಶುಚಿರುಚಿಯಾಗಿ ಬಂದವರನ್ನು ಸಂತೃಪ್ತಿ ಯಿಂದ ಉಣಿಸುವಂತಾಗಲಿ' ಎಂದುಕೊಂಡು "ಜೈ ಗಣೇಶ " ಎಂದು ಒಂದು ಉದ್ಗಾರವನ್ನು ಹೊರಡಿಸಿದರು.



   ಮಂಗಳಮ್ಮ ಕಿಟ್ಟಣ್ಣನಿಗೂ ಸತ್ಯಣ್ಣನಿಗೂ ಬಿಸಿಬಿಸಿ ಸ್ಟ್ರಾಂಗ್ ಕಾಫಿ ಮಾಡಿಕೊಟ್ಟರು.‌ಕಾಫಿ ಕುಡಿದ ಸತ್ಯಣ್ಣ ನಾಂದಿಗೆ ಕಲಶಸ್ನಾನಕ್ಕೆ ಕಲಶತಯಾರು ಮಾಡತೊಡಗಿದರು.ದೊಡ್ಡ ಹಂಡೆಯೊಂದರಲ್ಲಿ ಅತ್ತಿ ಇತ್ತಿ ಪಾಲಾಶಾದಿ ಸಮಿತ್ತುಗಳನ್ನು ಹಾಕಿ ನೀರು ತುಂಬಿಸಿ ಒಲೆಯ ಮೇಲಿಟ್ಟು  ಕಟ್ಟಿಗೆಗೆ ಬೆಂಕಿ ಹಾಕಿದರು."ಕಿಟ್ಟಣ್ಣ ಅಡುಗೆಯ ಜತೆ ಇದನ್ನೂ ನೋಡಿಕೋ ಸ್ವಲ್ಪ ಬೆಂಕಿಯಾರದಂತೆ" ಎಂದು ಹೇಳಿ ದೇವರ ಕೋಣೆಯಲ್ಲಿ ಮಾಡಬೇಕಾದ ತಯಾರಿಯಲ್ಲಿ ನಿರತರಾಗಿದ್ದರು.ಮೈತ್ರಿ ನಿದ್ದೆಯಿಂದೆದ್ದು ಬಂದಳು.."ಮದಿಮ್ಮಾಳು...ಎಂತಕಿಷ್ಟು ಲೇಟು..ಬೇಗ ತಯಾರೆಯೆಕ್ಕು..ಭಟ್ರು ಬಪ್ಪಲಾತು.. ಒಂದು ಮಂಡಗೆ ಬಿಸಿಬಿಸಿ ಕಲಶ ತಯಾರಾತು..ನಿಧಾನ ಮಾಡಿದರೆ ಹೇಂಗೆ..?"ಎಂದು ಕೇಳಿಯೇ ಬಿಟ್ಟರು ಸತ್ಯಣ್ಣ.

ಹಲ್ಲುಜ್ಜಿ ಬರುತ್ತಿದ್ದಂತೆ ನಿರೀಕ್ಷಿಸಿಯೇ ಇದ್ದ ಕಿಟ್ಟಣ್ಣನ ಪ್ರಶ್ನೆ ತೂರಿ ಬಂತು "ಎಂತ..ಮದಿಮ್ಮಾಳು..ಭಾರೀ ಬೇಗ ಆತು ಎದ್ದದು..."ಎಂದು ..

ಸುಮ್ಮನೆ ನಕ್ಕು ತೆರಳಿದಳು ಮೈತ್ರಿ.ಅಮ್ಮ ಮೈತ್ರಿ ಯನ್ನು ಕರೆದು ದೇವರ ಮುಂದೆ ಮಣೆಯಲ್ಲಿ ಕುಳ್ಳಿರಿಸಿದರು.ಅರಿಶಿನ ಎಣ್ಣೆಯಲ್ಲಿ ತಲೆಯಿಂದ ಕಾಲವರೆಗೆ ಮೂರು ಸಲ ನೀವಾಳಿಸಿದರು.ನಂತರ ಮಂಗಳಮ್ಮನ ತಂಗಿ ಗಂಗಾಳೂ ಹಾಗೆಯೇ ಮಾಡಿದರು.ನಂತರ ಮಂಗಳಮ್ಮ ಮಗಳ ಕೊರಳಿಗೊಂದು ಚಿನ್ನದ ಸರವನ್ನು ಕಟ್ಟಿದರು."ಮದುವೆಯವರೆಗೆ ಇದು ನಿನ್ನ ಕೊರಳಲ್ಲಿರಬೇಕು.ಮೂಹೂರ್ತದ ಸರ ಇದು.."ಎಂದರು.

 ಮೈತ್ರಿ ಸ್ನಾನ ಮಾಡಿ ತಯಾರಾಗುವ ಹೊತ್ತಿಗೆ ಕುಲಪುರೋಹಿತರು ಆಗಮಿಸಿದರು...".ಹೋಮಕ್ಕೆ ತುಂಬಾ ಹೊತ್ತು ಬೇಕು.ಈಗಲೇ ಶುರುಮಾಡುವುದೇ..ಸತ್ಯಣ್ಣ ಎಲ್ಲಾ ತಯಾರಿ ಆಗಿದೆಯಾ" ಎನ್ನುತ್ತಲೇ ಬಂದರು.
"ಹೂಂ.ಭಟ್ಟ ಮಾವ.. ಎಲ್ಲಾ ತಯಾರಾಗಿದೆ"  ಎನ್ನತ್ತಲೇ ಬಿರುಸು ನಡಿಗೆಯಲ್ಲಿ ಬಿಸಿಬಿಸಿ ತುಪ್ಪ ಹೋಮಕ್ಕಿರುವುದನ್ನು ಹೋಮದ ಕುಂಡದೆದುರು ತಂದಿಟ್ಟರು.

ಮನೆಯವರಿಗೆ ಕಾಫಿ ತಿಂಡಿ ಆಗುವಷ್ಟು ಹೊತ್ತು ಪುರೋಹಿತರು ದರ್ಭೆ ಬಿಡಿಸಿ ಜೋಡಿಸಿಟ್ಟರು.ಎಲ್ಲಾ ಸರಿಯಾಗಿದೆಯಾ ಎಂದು ಕೈಯಲ್ಲೊಂದು ಕಾಫಿ ಲೋಟ ಹಿಡಿದು ಕುಡಿಯುತ್ತಾ ಪರಿಶೀಲಿಸಿದರು.
"ಸತ್ಯಣ್ಣ ಬಂದರೆ ನಮಗೆ ಅರ್ಧಕ್ಕರ್ಧ ಜವಾಬ್ದಾರಿ ಕಡಿಮೆ " ಎಂದು ಪರಿಕರ್ಮಿ ಸತ್ಯಣ್ಣನನ್ನು ಹೊಗಳಿ ಅಟ್ಟಕ್ಕೇರಿಸಿ ಕೆಲಸಕ್ಕೆ ಇನ್ನಷ್ಟು ಹುರುಪು ತುಂಬಿದರು.


ಭಾಸ್ಕರ ಶಾಸ್ತ್ರಿಗಳು ಪಂಚೆ ಉಟ್ಟು ಹೆಗಲಿಗೆ ಶಲ್ಯ ಹಾಕಿ ತಯಾರಾದರು.ಮಂಗಳಮ್ಮ , ಮೈತ್ರಿ ಯೂ ಸೀರೆಯುಟ್ಟು ತಯಾರಾದರು.ಭಟ್ರು ಕರೆಯುತ್ತಿದ್ದಂತೆ ಮೂವರು ಹೋಮದ ಕುಂಡದ ಬಳಿ ಕುಳಿತರು. ಹೋಮ ಆರಂಭವಾಯಿತು..


      ದೊಡ್ಡದಾದ ಹೋಮಕುಂಡ.ಅಡಿಯಲ್ಲಿ ಮರಳು ಹಾಕಲಾಗಿತ್ತು.ಅದರ ಮೇಲೆ ಪುರೋಹಿತರು ಮಂತ್ರೋಚ್ಛಾರಣೆ ಮಾಡುತ್ತಾ ಒಂದೊಂದೇ ಸಮಿತ್ತುಗಳನ್ನು ಇರಿಸಿ ಅಗ್ನಿ ಸ್ಪರ್ಶ ಮಾಡಿದರು.ಹೋಮಕುಂಡದ ನವದಿಕ್ಕುಗಳಲ್ಲಿ ಒಂಭತ್ತು ಜನ ಋತ್ವಿಜರು ಕುಳಿತು ಏರು ಧ್ವನಿಯಲ್ಲಿ ಮಂತ್ರಘೋಷಗೈಯುತ್ತಿದ್ದರು. ಹವಿಸ್ಸನ್ನು ಅರ್ಪಿಸುತ್ತಿದ್ದರು. ಹೋಮಕುಂಡದಿಂದೆದ್ದ ಪವಿತ್ರ ಧೂಮ ಇಡೀ ಶಾಸ್ತ್ರೀ ನಿವಾಸದ ಪರಿಸರದಲ್ಲಿ ತುಂಬಿಕೊಂಡಿತು.


ಸುಮಾರು ಎರಡು ಗಂಟೆಗಳ ಕಾಲ ಹೋಮದ ಬುಡದಲ್ಲಿ ಕುಳಿತು ಎಲ್ಲರ ಶರೀರವೂ ಬಿಸಿಯೇರಿದಂತಾಗಿತ್ತು.ಬೆಳ್ಳಗಿನ ಮೈತ್ರಿಯ ಮುಖ ಕೆಂಪಗಾಗಿತ್ತು.ಸತ್ಯಣ್ಣ" ಕಲಶ ಸ್ನಾನಕ್ಕಾಯಿತು..ಎಲ್ಲಿ ಸೋದರತ್ತೆ.. ತಯಾರಾಗಿ ಅಂಗಳಕ್ಕೆ ಬರಲಿ.." ಎಂದು ಮನೆಯೊಳಗೆ ಹೋಗಿ ಹೇಳಿದರು..

"ಸೋದರತ್ತೆ ಎಲ್ಲಿ...ಶಶಿ ಬಂದಿಲ್ಲ.. " ಎಂದರು ಮಹಾಲಕ್ಷ್ಮಿ ಅಮ್ಮ..

"ಸೋದರತ್ತೆ ಯಾರೂ ಬಾರದಿದ್ದರೆ ನೀವೇ ಆದೀತು..ಮದುಮಗಳ ಚಿಕ್ಕಮ್ಮ.." ಎಂದು ಮಂಗಳಮ್ಮನ ತಂಗಿ ಗಂಗಾಳ ಕಡೆಗೆ ನೋಡಿ ಹೇಳಿದರು..ಸತ್ಯಣ್ಣ.

"ಅವಳು ಹೇಗಾಗುತ್ತದೆ..ಮಂಗಳಾಳ ತವರ ಸಂಬಂಧದವರು...ಮನೆಯ ಸಂಬಂಧದವರೇ ಆಗಬೇಕು.. " ಎಂದರು ಮಹಾಲಕ್ಷ್ಮಿ ಅಮ್ಮ ..

"ಹಾಗಾದರೆ ಯಾಕೆ ಬರಲಿಲ್ಲ ..ನಿಮ್ಮ ನಾಲ್ವರು ಹೆಣ್ಣುಮಕ್ಕಳು.. ಒಬ್ಬರಾದರೂ ಬರಬಹುದಿತ್ತು.."

"ಏನೋ..ಅವರವರ ಮನಸ್ಸು.. "ಎಂದು ಹೇಳಿ ನಿಲ್ಲಿಸಿದರು.. ಮಹಾಲಕ್ಷ್ಮಿ ಅಮ್ಮ.

ಗಂಗಾಳಿಗೆ ಇವರ ನಡುವೆ ಏನೋ ಇರಿಸುಮುರುಸಾಗಿದೆ ಎಂದು ಮಾತಿನ ಧಾಟಿಯಲ್ಲಿ ತಿಳಿಯಿತು..

ಅಂಗಳದಲ್ಲಿ ಮಣೆಯಿಟ್ಟು ಕಲಶದ ಸಣ್ಣ ಬಿಂದಿಗೆ, ದೊಡ್ಡ ಕೊಡಪಾನ ಎಲ್ಲಾ ಇಟ್ಟು ತಯಾರು ಮಾಡಿದ್ದರು ಸತ್ಯಣ್ಣ.ಹೋಮದ ಬುಡದಿಂದ ಎದ್ದು ಪುರೋಹಿತರು, ಮೈತ್ರಿ ,ಮಂಗಳಮ್ಮ ಹೊರಗೆ ಅಂಗಳಕ್ಕೆ ತೆರಳಿದರು.

"ಎಲ್ಲಿ.. ಸೋದರತ್ತೆ.. " ಎಂದರು ಭಟ್ಟಮಾವ.

"ಸೋದರತ್ತೆ ನಾಪತ್ತೆ .. " ಎಂದರು ನಗುತ್ತಾ ಸತ್ಯಣ್ಣ.

ಮಹಾಲಕ್ಷ್ಮಿ ಅಮ್ಮ ಸೊಸೆಯನ್ನು ನೋಡಿ ಎಲ್ಲಾ ನಿಮ್ಮಿಂದಲೇ ಆದದ್ದು ನಿಷ್ಠುರ..ಎಂಬಂತೆ ಹಿಂಡಿದರು ಮುಖ.

ಅಷ್ಟರಲ್ಲಿ ಅಂಗಳದ ತುದಿಯಲ್ಲಿ ಒಬ್ಬ ಹೆಂಗಸು ಹಾಗೂ ಕೂಸು ಬರುವುದನ್ನು ಕಂಡು ಸಮಾಧಾನದ ನಿಟ್ಟುಸಿರು ಬಿಟ್ಟರು ಮಂಗಳಮ್ಮ.

ವೇಗವಾಗಿ ಕಾಲಿಡುತ್ತಾ ಅಂಗಳಕ್ಕೆ ಬಂದಳು ಸಾವಿತ್ರಿ ಮಗಳೊಂದಿಗೆ.ಅಂಗಳದ ತುದಿಯಲ್ಲಿ  ತುಂಬಿಸಿಟ್ಟಿದ್ದ ನೀರಿನಲ್ಲಿ ಕೈ ಕಾಲು ತೊಳೆದು ಬಂದವರು ಬೆವರಿ ಒದ್ದೆಯಾಗಿದ್ದರು."ಅಬ್ಬಾ .. ಏನು ಸೆಖೆ" ಎನ್ನುತ್ತಾ ಮುಖ ಒರೆಸಿಕೊಂಡಳು ಸಾವಿತ್ರಿ.


"ಹ್ಞಾಂ.. ಸೋದರತ್ತೆ ಎಲ್ಲಿ ಎಂದು ಹುಡುಕುವಾಗಲೇ ಬಂದಿರಿ ನೀವು.ನೂರು ವರ್ಷ ಆಯಸ್ಸು ನಿಮಗೆ " ಎಂದರು ಸತ್ಯಣ್ಣ ನಗುನಗುತ್ತಾ.

ಮಂಗಳಮ್ಮ "ಅತ್ತಿಗೆ ಬಾಯಾರಿಕೆ ಸೇವಿಸಿ  ಇಲ್ಲಿಗೆ ಬನ್ನಿ".ಎಂದರು.
ಅತ್ತೆ ಹಾಗೂ ಅತ್ತೆಯ ಮಗಳನ್ನು ಒಳಗೆ ಕರೆದು ಬಾಯಾರಿಕೆ ಕೊಟ್ಟ..ಮಹೇಶ್..
ಬಾಯಾರಿಕೆ ಕುಡಿದು ಹೊರ ಬಂದವಳ ಕೈಗೆ ಸತ್ಯಣ್ಣ ಕಲಶದ ಚೆಂಬನ್ನು ಕೊಟ್ಟು  "ಮಣೆಯಲ್ಲಿ ಕುಳಿತಿದ್ದ ಮೈತ್ರಿ ಗೆ
ಮೂರು ಸುತ್ತು ಚೆಂಬನ್ನು ಮಾತ್ರ ಪ್ರದಕ್ಷಿಣೆ ತನ್ನಿ..ಅದರಲ್ಲಿದ್ದ ನೀರೂ ಮೂರು ಬಾರಿಯೂ ಸ್ವಲ್ಪ ಸ್ವಲ್ಪ ಬೀಳಬೇಕು ಹಾಗೆ ಮಾಡಿ.." ಎಂದರು..ಸತ್ಯಣ್ಣ.

ಸಾವಿತ್ರಿ ಚೆಂಬನ್ನು ಓರೆ ಮಾಡುತ್ತಾ ಸ್ವಲ್ಪ ಸ್ವಲ್ಪವೇ ನೀರು ಬೀಳುವಂತೆ ಮೂರು ಪ್ರದಕ್ಷಿಣೆ ತಂದಾಗ ಮಹೇಶ್ "ಅಕ್ಕಾ..ದೊಡ್ಡ ಕೊಡಪಾನದಲ್ಲಿ ಒಮ್ಮೆಲೇ ಸುರಿದಾಗ ಹೆರದಬಾರದೆಂದು ಈಗ ಸ್ವಲ್ಪ ಹಾಕುತ್ತಿದ್ದಾರೆ.
ಟೆಸ್ಟ್ ಸ್ಯಾಂಪಲ್ .."ಎನ್ನುತ್ತಾ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿ ವಿಡಿಯೋ ಮಾಡುತ್ತಿದ್ದ.


ಸಾವಿತ್ರಿ ಯದ್ದಾದಾಗ "ಇನ್ನು ಯಾರು..." ಎಂದರು ಭಟ್ಟಮಾವ..

"ಅವರ ಮಗಳಲ್ಲೇ ಹೇಳೋಣ "ಎಂದರು ಸತ್ಯಣ್ಣ.

ಅಮ್ಮನಂತೆಯೇ ಮಗಳೂ ಮಾಡಿದಳು. ಮಹೇಶ ಬಹಳ ಹತ್ತಿರದಿಂದ ಅತ್ತೆ ಮಗಳ ಮುಖ ಸರಿಯಾಗಿ ಕಾಣುವಂತೆ ವಿಡಿಯೋ ಮಾಡುತ್ತಿದ್ದ.ಸತ್ಯಣ್ಣ "ಏ...
 ಭಾವಯ್ಯ...ಮದಿಮ್ಮಾಳ ಮುಖ ಕಾಣುವಂತೆ ವಿಡಿಯೋ ಮಾಡು.. " ಎಂದಾಗ ಮಹೇಶ್ ಬೆಪ್ಪಾದ..

ಕೊನೆಗೆ ಸತ್ಯಣ್ಣ ದೊಡ್ಡ ಕೊಡಪಾನವನ್ನೆತ್ತಿ ಮೈತ್ರಿ ಯ ತಲೆಗೆ ಕಲಶಸ್ನಾನ ಮಾಡಿದರು.ಮೈತ್ರಿಗೆ ಒಮ್ಮೆ ಉಸಿರುಗಟ್ಟಿದಂತಾಯಿತು.  ಮದುಮಗಳಿಗೆ "ಈ ಕೊಡಪಾನದ ಒಳಗೆ ನೋಡು " ಎಂದಾಗ ಒಳಗಿಣುಕಿದಳು..
"ಇನ್ನು ಬಟ್ಟೆ ಬದಲಾಯಿಸಿ ಬರಲಿ " ಎಂದರು ಭಟ್ಟಮಾವ.

"ಅಕ್ಕಾ..ಕೊಡಪಾನದ ಒಳಗೇನಿತ್ತು ..."ಮಹೇಶ್ ಅಂದಾಗ

"ಚಿನ್ನದ ನಾಣ್ಯ "ಎಂದಳು ತಮ್ಮನಿಗೆ..

"ಚಿನ್ನದ ನಾಣ್ಯ ಇಟ್ಟರೆ ನಾನು ಬಿಡಲಾರೆ ." ಎಂದರು ಸತ್ಯಣ್ಣ..

"ಅದಕ್ಕೆ ಐದು ರೂಪಾಯಿ ಯ ಚಲಾವಣೆಯಲ್ಲಿರುವ ನಾಣ್ಯವನ್ನೇ ಹಾಕಿದ್ದು" ಎಂದರು ಭಟ್ಟಮಾವ..

ಮಂಗಳಮ್ಮನಿಗೆ ಸರಿಯಾದ ಸಮಯಕ್ಕೆ ಸಾವಿತ್ರಿ ಅತ್ತಿಗೆ ಬಂದುದು ಬಹಳ ಖುಷಿಯಾಯಿತು.ನಾವು ಸರಿಯಾದ ಕ್ರಮದಲ್ಲಿ ನಡೆದರೆ ಒಬ್ಬರಲ್ಲದಿದ್ದರೆ ಒಬ್ಬರು ನಮಗೆ ಒದಗುತ್ತಾರೆ ಎಂಬ ಅವರ ಭಾವನೆ ಇನ್ನಷ್ಟು ಗಟ್ಟಿಯಾಯಿತು.

ಮೈತ್ರಿ ತಯಾರಾಗಿ ಬಂದಾಗ  ಕೈಗೆ ಅರಿಶಿನ ಕೊಂಬನ್ನು ಪಟ್ಟೆನೂಲಿನಲ್ಲಿ ಕಟ್ಟಿ ಮುಂಗೈಗೆ ಕಂಕಣ ಬಿಗಿದರು."ನೋಡು ..ಮದುಮಗಳೇ.. ಇದು ಮದುವೆಯ ವರೆಗೆ ಮದುಮಗಳಿಗೆ ಶ್ರೀರಕ್ಷೆ.. ಇದು ಕೈಯಿಂದ ಬೀಳುವುದಾಗಲೀ ..ಜಾರುವುದಾಗಲೀ.. ಆಗಬಾರದು.. ಎಚ್ಚರವಿರಲಿ.."ಎಂದರು.
ಆಗಲಿ ಎಂದು ತಲೆಯಾಡಿಸಿದಳು ಮೈತ್ರಿ.


     ಮಂತ್ರಾಕ್ಷತೆ ಕಾರ್ಯಕ್ರಮ ನಡೆಯಿತು.ಋತ್ವಿಜರನ್ನು ಎದುರು ಬದುರಾಗಿ ಚಾಪೆ ಹಾಸಿ ಕುಳ್ಳಿರಿಸಿ ದಕ್ಷಿಣೆ ಕೊಟ್ಟು ನಮಸ್ಕರಿಸಿದರು ಶಾಸ್ತ್ರಿಗಳು..ಶ್ಯಾಮ ಶಾಸ್ತ್ರಿಗಳು ಕುರ್ಚಿ ಯಲ್ಲಿ ಕುಳಿತು ಕಾರ್ಯಕ್ರಮ ನೋಡುತ್ತ ಬಂದವರ ಯೋಗಕ್ಷೇಮ ವಿಚಾರಿಸಿಕೊಂಡರು..


ರುಚಿಕಟ್ಟಾದ ಸಾಂಪ್ರದಾಯಿಕ ಅಡುಗೆ ಬಂದವರ ಉದರ ತಣಿಸಿತ್ತು.ಎಲ್ಲರನ್ನೂ ಪ್ರೀತಿಯಿಂದ ಸತ್ಕರಿಸಿ ಮದುವೆಗೆ ಪ್ರತಿಯೊಬ್ಬರನ್ನೂ ಆಹ್ವಾನಿಸಿದರು ಶಾಸ್ತ್ರಿ ದಂಪತಿ.

ಮುಂದುವರಿಯುವುದು...

✍️... ಅನಿತಾ ಜಿ.ಕೆ.ಭಟ್.
5-05--2020.

2 comments: